ಒಟ್ಟು 10607 ಕಡೆಗಳಲ್ಲಿ , 130 ದಾಸರು , 5708 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗಧಾಮ ಭುಜಂಗ ಶಯನ ಮಂಗಳಾತ್ಮಕನೆ ಶ್ರೀಶನೆ ಪ ಗಂಗಾಜನಕ ಉತ್ತುಂಗ ಮಹಿಮನೆ ಸಂಗರಹಿತನೆ ಭಂಗಹರಿಪನೆ ಅ.ಪ ಶ್ರೀಶ ನಿನ್ನನು ಪ್ರಾರ್ಥಿಪರಘ ಶೋಧಿಸೆನುತ ಶ್ರೀ ಸಮೇತರಾಗಿ ಭಕ್ತರ ಪೋಷಿಸೆನ್ನುತ ವಾಸುದೇವ ಅನಂತಮಹಿಮ ಶ್ರೀಶನೆನ್ನುತ ದಾಸರೆಲ್ಲರು ಘೋಷಿಸುವರು ಶೇಷಶಯನ ರಕ್ಷಿಸೆನುತ 1 ಸಾಧುಜನ ಹೃದಯವಾಸನೆನ್ನುತ ಪೇಳ್ವರೊ ಸಾಧನ ಜೀವರಿಗೆ ಪರಮಪ್ರಿಯನೆಂಬರೊ ಮೋದತೀರ್ಥ ಸುಧಾರಸ ಸೇವಿಸಿರೆಂಬರೋ ಆದಿ ಪುರುಷ ಅನಾದಿ ಅನಂತ ಮಹಿಮನೆಂಬರೊ2 ಅಕ್ಷಯಗುಣ ಪೂರ್ಣಸರ್ವರ ರಕ್ಷಿಸೆನ್ನುತಲಿ ಲಕ್ಷ್ಮಿಪತಿಯೆ ಪ್ರಾರ್ಥಿಸುವೆನು ಈಕ್ಷಿಸೆನುತಲಿ ಪಕ್ಷಿವಾಹನವೇರಿ ಮೆರೆವ ಅದೋಕ್ಷಜನೆನುತಲಿ ನಿತ್ಯ ನಿತ್ಯದಲಿ 3 ಶೋಭಿಪ ನಿನ್ನ ರೂಪ ಹೃದಯದಲಿ ಕಾಣಲು ಶೋಭಕೃತು ಸಂವತ್ಸರದಲಿ ನಿನ್ನ ಪಾಡಲು ಶೋಭನಂಗಳನ್ನೆ ಕೊಡುವ ಸ್ವಾಮಿ ಎನ್ನಲು 4 ಕಡಲಶಯನ ಮೃಡನ ಸಖನೆ ಬಿಡದೆ ರಕ್ಷಿಸು ತಡೆಯದೆ ನಿನ್ನ ಚರಣ ಸ್ಮರಣೆ ಬಿಡದೆ ಕರುಣಿಸು ಬಿಡದಲೇ ಬಹಮನದ ತಾಪವೆಲ್ಲ ನೀಗಿಸುಕಡಲೊಡೆಯನೆ ಕಮಲನಾಭ ವಿಠ್ಠಲ ಪಾಲಿಸು 5
--------------
ನಿಡಗುರುಕಿ ಜೀವೂಬಾಯಿ
ರಂಗಧ್ಯಾನ ಶ್ರೀರಂಗನ ಧ್ಯಾನ ಮುಕ್ತಿಗೆ ಸಾಧನ ಮಂಗಲಮೆನಿಪ ಅಂಗಕೆ ಶೋಭೆ ಪ ಮನುಮುನಿ ಸುರಗಣ ಮನಮಂದಿರನ ನೆನವನುದಿನದಲಿ ಮನಕಚಲಾನಂದನ 1 ಉರಗಶಯನ ಗಿರಿಧರ ಮುರಾರಿ ಚರಣಸ್ಮರಣ ಸ್ಥಿರ ಪರಲೋಕಕರವಶ 2 ಆ ಮಹಾಮಹಿಮ ಸ್ವಾಮಿ ಶ್ರೀರಾಮ ನಾಮಭಜನ ಸದಾ ಕ್ಷೇಮಸಂಪದ ಸುಖ 3
--------------
ರಾಮದಾಸರು
ರಂಗನ ನೋಡಿರೈ ಕರುಣಾಪಾಂಗನ ಪಾಡಿರೈ ಪ ಜಗದಂತರಂಗ ಹೋ ಹೋಅಪ ಶೀಕರೆ ಪುಟ್ಟಿದೆ ಮೇದಿನಿಪಾಲಗೆ ಮೆಚ್ಚಿ-ಬಂದನೊ ಹೆಚ್ಚಿ ಲೀಲಾ ವಿನೋದ ಸುತ್ತಿ ಪರಿಗೊಲಿದ ಭೂತಳದೊಳು ಜಾನಕಿಗೆ ನಾಥನಾಗಿ ಮೆರೆದ- ಕಾಮಿತಗರೆದ ಹೋ ಹೋ 1 ಜಲಜಸಂಭವಭವ ಮಿಕ್ಕಾದವರನು ಗರ್ಭ-ದೊಳಿಟ್ಟ ಸರ್ಬ ಅಂದು ಪಡೆದ-ಮಗನಿಗೆ ನುಡಿದ ಪ್ರಳಯಕಾಲದಿ ವಟ ಪತ್ರದ ಮೇಲ್ ಮಲ-ಗಿದ್ದ ಸುಪ್ರಸಿದ್ಧ ಬಂದ ಪರಮಾ-ನಂದ ಹೋ ಹೋ 2 ಬರುತ ವಿಭೀಷಣ ಕಾವೇರಿ ತೀರಕೆ ಬಂದ, ಉತ್ಸಾಹದಿಂದ ಪರಮ ಪುರುಷ ಲಂಕೆಗೆ ಪೋಗದೆ ನಿಂತ-ಬಲು ಜಯವಂತ ಧರಣಿಪತಿ ಧರ್ಮವರ್ಮನ ಮಾತಿಗೆ ನಕ್ಕ-ಕೇಳಾವಾಕ್ಯ ಪೂಜೆಗೊಂಬ ಸರ್ವರ-ಬಿಂಬ ಹೋ ಹೋ 3 ಕಂಟಕ ದಶಕಂಠನ ವಂಶವ ಕೊಂದ -ಈತ ಮುಕುಂದ ಮಾಡಿಸಿಕೊಂಡ -ಬಲು ಪ್ರಚಂಡ ಜಯವೆನುತಿರಲಯೋಧ್ಯಾ-ಆಳ್ದ ಅನಾದ್ಯ ಕರುಣಾ-ಸಿಂಧು ಹೋ ಹೋ 4 ಮೂಜಗದ್ದಪ್ಪ ನಕ್ಷತ್ರೇಶ ಸರೋವರತಟ ಪುನ್ನಾಗ-ವೃಕ್ಷದಲ್ಲಿಹ ದಕ್ಷ ಅಪ್ರಾಕೃತ ಶರೀರ-ಧೃತ ಮಂದಾರ ವಾಹನ ರಾಜಾಧಿರಾಜ ಹೋ ಹೋ 5
--------------
ವಿಜಯದಾಸ
ರಂಗನ ಮೇಲೆ ಚಲುವೆಯರು ಬುಕ್ಕಿಟ್ಟು ಪ. ಸುಂದರೆಯರು ಇಂದಿರೇಶಗೆ ಎರಗಿ ಬಂದು ಪ್ರಾರ್ಥನೆಮಾಡಿ ಆನಂದವ ಸೂಸುತ 1 ಒಪ್ಪ ಹೇಳಿ ಪ್ರಾರ್ಥನೆಮಾಡಿ ಬಹಳ ಉತ್ಸುಕದಿಂದ 2 ಹಸ್ತಗಳ ಮುಗಿದು ಮಾತುಗಳನ್ನಾಡಿದರು3 ಹರದಿ ರುಕ್ಮಿಣಿ ಭಾವೆಗೆ ಎರಗಿ ದ್ರೌಪತಿ ಭದ್ರಾ ಆದರದಿ ಮಾಡಿದರು ಪ್ರಾರ್ಥನೆ ಕರಗಳ ಮುಗಿದು 4 ಚಲುವ ರಾಮೇಶನ ವಲ್ಲಭೆಯರಿಗೆ ಭದ್ರಾಅಲ್ಲೆ ಪ್ರಾರ್ಥನೆ ಮಾಡಿ ಎಲ್ಲರ ಕರೆಯಲು 5
--------------
ಗಲಗಲಿಅವ್ವನವರು
ರಂಗನಂಗದ ಸಂಗ ಸುಖ ನೋಡ ಅಂಗನೆಲಕುಮಿಯ ಸಂಗದುರ್ಲಭವೆಈಅಂಗನೆಯರು ಮಾಡಿದ ಸುಕೃತವಂತೆ ಪ. ಗುಂಗುರಗೂದಲ ಮ್ಯಾಲೆ ಭೃಂಗದ ಮರಿಗಳು ರಂಗನ ಮುಖದ ರಸವನೆರಂಗನ ಮುಖದ ರಸವನೆ ಸÀವಿದುತಮ್ಮಂಗವ ಮರೆತು ಕುಳಿತಾರೆ ಬ್ರಹ್ಮಾದಿ ವಂದ್ಯ1 ಪಂಕಜನಾಭಗೆ ವಂಕಿ ಬಾಪುರಿ ಇಟ್ಟುಕಂಕಣ ಕಡಗ ಮೊದಲಾಗಿಕಂಕಣ ಕಡಗ ಮೊದಲಾಗಿ ರಂಗಗೆಅಲಂಕಾರ ಮಾಡಿ ಕೆಲದೆಯರು2 ಪಂಚಬೆರಳಿಗೆ ತಕ್ಕ ಮಿಂಚು ಮುದ್ರೆಗಳಿಟ್ಟುಪಂಚರತ್ನದಲಿ ರಚಿಸಿದಪಂಚರತ್ನದಲಿ ರಚಿಸಿದ ವಡ್ಯಾಣಕೆಂಚೆಯರು ಇಟ್ಟು ನಡುವಿಗೆ 3 ಶ್ರೀದೇವಿ ಅರಸಗೆ ಕ್ಯಾದಿಗೆ ಮುಡಿಸುತಊದಿನ ಕಡ್ಡಿಪರಿಮಳಊದಿನ ಕಡ್ಡಿಪರಿಮಳ ಮೂಸುತಮೋದ ಬಡುವವರು ಕಡೆಯಿಲ್ಲ4 ನೀಲವರ್ಣನ ಮುಂದೆ ಸಾಲು ದೀವಿಗೆಯಿಟ್ಟುಮ್ಯಾಲೆ ಚಾಮರವ ಸುಳಿಸುತಮ್ಯಾಲೆ ಚಾಮರವ ಸುಳಿಸುತಶಿರಮ್ಯಾಲೆ ಪೂಮಳೆಯ ಗರೆದಾರು 5 ಚಲ್ವ ರಂಗನ ಮುಂದೆ ಜಲಪಾತ್ರೆಯನ್ನಿಟ್ಟುಎಲೆಅಡಕಿ ತಬಕ ಫಲಗಳು ಎಲೆಅಡಕಿ ತಬಕ ಫಲಗಳ ತಂದಿಟ್ಟುಕೆಲದೆಯರು ಕೈಯ ಮುಗಿದಾರು 6 ಅಪಾರ ಮಹಿಮಗೆ ಧೂಪಾರತಿಯನೆತ್ತಿಭೂಪರಾಮೇಶ ಸಲುಹೆಂದುಭೂಪರಾಮೇಶ ಸಲುಹೆಂದುಗೋಪಾಲಕೃಷ್ಣಯ್ಯನ ಎದುರಲಿ ನಿಂತಾರು 7
--------------
ಗಲಗಲಿಅವ್ವನವರು
ರಂಗನಾಥ ಪಾಲಿಸೆನ್ನ ಮಂಗಳಾಂಗ ಶ್ರೀಶ ಬೇಗ ಪ ನಿನ್ನ ಭಜನೆಯನ್ನು ಗೈವೆ ಪನ್ನಗಾರಿವಾಹ ಹರೆ ಸ್ವರ್ಣವಸನ ಭೂಷಿತಾಂಗ ಸನ್ನುತಾಂಗ ಧೀರಶೂರ 1 ದುಷ್ಟರನ್ನು ಶಿಕ್ಷಿಸುತ್ತ ಸೃಷ್ಟಿಗೊಡೆಯನೆನಿಸಿ ನೀನು ಇಷ್ಟ ವರಗಳನ್ನು ಕೊಟ್ಟು ಶ್ರೇಷ್ಟನೆನಿಸು ನಂಬಿದೆನು 2 ಕಾಮಿತಾರ್ಥ ಫಲಗಳೀವ ಕಾಮ ಜನಕ ದೇವನೆ ಧೇನುನಗರದಲ್ಲಿ ನೆಲಸಿ ನೇಮದಿಂದ ಪೂಜೆಗೊಂಬೆ 3
--------------
ಬೇಟೆರಾಯ ದೀಕ್ಷಿತರು
ರಂಗನಾಥ ಮಾಂ ಗಂಗಾಜನಕ ತುಂಗ ಮಹಿಮ ಮಂಗಳಾಂಗ ಪಾಹಿ ಪ ತಿಂಗಳ ತೇಜದಲಿ ಪೊಳೆಯುತ ಕಂಗೊಳಿಸುವ ಮುಕುಟ ಮಂಡಿತ ಬಂಗಾರದಾಭರಣ ಭೂಷಿತ ಶೃಂಗಾರದಿ ರಥವನೇರುತ ಮಂಗಳ ವಾದ್ಯಂಗಳುಲಿಯೆ ರಂಗನಾಥ ಪ್ರತಿವರ್ಷದಿ ತುಂಗಛತ್ರ ಚಾಮರ ವ್ಯಜ- ನಂಗಳ ವಿಭವದಿ ಬರುತಿರೆ ಕಂಗಳಿಂದ ನೋಳ್ಪ ಭಕ್ತ ಜಂಗುಳಿ ಪಾಲಿಸಲೋಸುಗ ಮಂಗಳಸಿರಿ ಜಾಲಹಳ್ಳಿ ಪುರನಿಲಯ ಪೊರೆ ಎನ್ನ1 ಹಿಂದಕೆ ಮುದಗಲ್ಲು ಪುರದಿ ಬಂದಿಹ ಉಪ್ಪಾರ ಜನದಿ ಬಂದು ಗೋಣಿಯೊಳಗೆ ಮುದದಿ ನಿಂದಿಯೊ ಪದಮೆಟ್ಟೆ ಬೆಟ್ಟದಿ ಅಂದಿನ ರಾತಿಯ ಸ್ವಪ್ನದಿ ಸಂದರ್ಶನವಿತ್ತು ಪುರದಿ ಮಂದಿರಕಾರ್ಯವ ಸೂಚಿಸ- ಲಂದು ರಾಯಗೌಡನಿಂದ ಬಂಧುರದಲಿ ನಿರ್ಮಿತ ಆ- ನಂದನಿಲಯ ಮಂದಿರ ಮು ಕುಂದನಂದ ಕಂದನೆ ಮದ್ ಹೃದಯದಲಿ ಸದಾತೋರೋ2 ವಾರಿಚರ ಮಂದರಧರ ಭೂ ಚೋರಮಥನ ಘೋರರೂಪನೆ ಚಾರು ಬ್ರಹ್ಮಚಾರಿ ವಾಮನ ಶೂರ ಪರಶುರಾಮನೆ ನಮೊ ಧಾರುಣಿ ಜಾವಲ್ಲಭ ಕಂ- ಸಾರಿ ವಸನದೂರನೆ ಹಯ ವೇರಿ ದುಷ್ಟ ದಿತಿಜರ ಭಯ ದೂರ ಮಾಡಿ ಕಾವದೇವ ಧಾರುಣಿಸುರ ಪರಿಪಾಲಕ ವಾರಿಜಭವ ನುತ ಕಾರ್ಪರಾ- ಗಾರವೀರ ನಾರಸಿಂಹ ನಮಿಸುವೆನು ರಮಾರಮಣ3
--------------
ಕಾರ್ಪರ ನರಹರಿದಾಸರು
ರಂಗನಾಥನ ನೋಡುವ ಬನ್ನಿ ಶ್ರೀ- ಪ ರಂಗನ ದಿವ್ಯ ವಿಮಾನದಲ್ಲಿಹನಅ.ಪ. ಕಮನೀಯಗಾತ್ರನ ಕರುಣಾಂತರಂಗನಕಾಮಿತಾರ್ಥವೀವ ಕಲ್ಪವೃಕ್ಷನಕಮಲದಳನೇತ್ರನ ಕಸ್ತೂರಿ ರಂಗನಕಾಮಧೇನು ಕಾವೇರಿ ರಂಗನ1 ವಾಸುಕಿಶಯನನ ವಾರಿಧಿನಿಲಯನವಾಸುದೇವ ವಾರಿಜನಾಭನವಾಸವಾದಿ ಭಕ್ತ ಹೃದಯಾಂಬುಜದಲ್ಲಿವಾಸವಾಗಿರುತಿಹ ವಸುದೇವಸುತನ2 ಮಂಗಳಗಾತ್ರನ ಮಂಜುಳಭಾಷನಗಂಗಾಜನಕ ಅಜಜನಕನಸಂಗೀತಲೋಲನ ಸಾಧುಸಮ್ಮತನರಂಗವಿಠಲ ರಾಜೀವನೇತ್ರನ 3
--------------
ಶ್ರೀಪಾದರಾಜರು
ರಂಗನಾಥನೆ ನೀಲಘನಂಗ ದೇವರದೇವ ಗು-ಣಂಗಳ ಖಣಿಯೆ ನಿನ್ನ ಪದಂಗಳು ಗತಿಯೆಮಗೆ ಪ. ಉಭಯಕಾವೇರಿ ಮಧ್ಯದಲಭಯನೀವುತ ಪವಡಿಸಿದಬುಜಲೋಚನನೆ ನಿನ್ನ ವಿಭವಕ್ಕೆ ನಮೋಯೆಂಬೆ 1 ದೋಷದೂರನೆ ಭೂಮಿಗೆ ಭೂಮೋಹನನೆ ರಂಗಶ್ರೀಶ ನಿನ್ನ ನಂಬಿದೆ ಶೇಷÀಶಯನ ಕಾಯೊ 2 ಚೆಲುವ ನಿನ್ನನು ಪೋಲುವರಿಲ್ಲ ಮೂಜಗದೊಳು ಲಕುಮಿಯನಲ್ಲ ನಿನ್ನನು ಬಣ್ಣಿಸಲಳವಲ್ಲವೋ ಹಯವದನ 3
--------------
ವಾದಿರಾಜ
ರಂಗನಾಥನ್ನ ಈ ಕಂಗಳಿಂದಲಿ ಕಂಡು ಹಿಂಡು ಪ. ಮಂಗಳಾತ್ಮಕ ದೇವ ಮಮ ಸ್ವಾಮಿ ಸಲಹೆಂದು ಅಂಘ್ರಿಗಳಿಗೆರಗಿ ನುತಿಪೇ ಸ್ತುತಿಪೇ ಅ. ಮಾಂಡವ್ಯರಿಗೆ ವಲಿದು ಶ್ರೀನಿಕೇತನ ದೇವ ಗಂಡಕೀಶಿಲೆ ರೂಪದಲ್ಲಿ ಅಂಡಜವಾಹನನು ಉದ್ಭವಿಸಿ ಸ್ವರ್ಣಾದ್ರಿ ಎಂಬ ಸುಕ್ಷೇತ್ರದಲ್ಲೀ ಹಿಂಡುಭಕ್ತರ ಸೇವೆ ಕೈಯಕೊಳುತ ಬದಿಯಲ್ಲಿ ನಿಂದು ವಿಗ್ರಹ ರೂಪದಲ್ಲೀ ಕಂಡು ಪುಳಕಾಂಕಿತದಿ ಕರುಣ ಮೂರ್ತಿಯ ನುತಿಸಿ ಕೊಂಡಾಡಿ ದಣಿದೆ ನಿಂದೂ ಇಂದೂ 1 ಶಂಖಚಕ್ರಾಂಕಿತದ ಚತುರ್ಭಜವು ಶ್ರೀವತ್ಸ ಪಂಕಜಾಕ್ಷಿಯರುಭಯದಿ ಶಂಕೆಯಿಲ್ಲದ ಭಕ್ತರಿಗೆ ವಲಿವ ಸೌಂದರ್ಯಾ ಲಂಕಾರ ಉಡಿಗೆ ಮುದದಿ ಪಂಕಜಾಸನ ಮುಖ್ಯದಿವಿಜಗಣ ಸೇವಿತನು ಕಿಂಕರರಿಗೊಲಿವ ದಯದೀ ವಂಖಿ ಬಾಪುರಿ ತೋಳು ಕಡಗ ಕಾಲ್ಗೆಜ್ಜೆಗಳು ಕಂಕಣ ಕಿರೀಟ ನಿಟ್ಟಾ ದಿಟ್ಟಾ 2 ಆಗಮವ ಅಜಗಿತ್ತು ಸುರರಿಗಮೃತವಿತ್ತು ಭೂದೇವಿ ಭಯ ಬಿಡಿಸಿದಾ ಬೇಗ ಕಂಬದಿ ಬಂದು ಮಗುವ ರಕ್ಷಿಸಿ ಬಲಿಯ ಯಾಗದಲ್ಲಿ ಭೂ ಬೇಡಿದಾ ನೀಗಿ ಕ್ಷತ್ರಿಯ ಕುಲ ದಶಶಿರಿನ ಸಂಹರಿಸಿ ಮಾಗಧನ ಬಲವ ಮುರಿದಾ ಅಂಬರ ಕಲ್ಕಿ ಗೋಪಾಲಕೃಷ್ಣವಿಠಲಾ ಮಾಗಡಿ ತಿರುಮಲೇಶಾ ಶ್ರೀಶಾ 3
--------------
ಅಂಬಾಬಾಯಿ
ರಂಗನಾಯಕಿಗಾರತೀ ಅಂಗನೆಯರು ಬೆಳಗಿರೆ ಅಂಗಜನಜನನಿಗೆ ಮಂಗಳಗಾತ್ರೆಗೆ ಮಂಗಳವೆನ್ನಿರೆ ಪ. ಪ್ರೇಮಮಯ ಸ್ವರೂಪೆಗೆ ರಾಮಣೀಯಕ ಮೂರ್ತಿಗೆ ಪ್ರೇಮತಳೆದಾಮೋದದಿಂ ಕಾಮಿತವೀಯೆನುತಾ ನಮಿಸುತ 1 ಮಾತೆಯೇ ಪರದೈವವು ನೀತಿತಾನಿದು ಸತ್ಯವು ವಾತಾತ್ಮಜ ಸಂಸೇವಿತೆ ಸೀತೆಯ ಜಗನ್ಮಾತೆಯೆನ್ನುತ 2 ಕಾಂತ ಶೇಷಗಿರೀಶನ ಅಂತರಂಗದ ದಯೆಯೆನೆ ಇಂತೆಮ್ಮ ಸುಸ್ವಾಂತರ್ಕಳೆಂದಂತೆಸಗುವಂತ ಶ್ರೀಕಾಂತೆಯೆ ತಾನೆನೆ3
--------------
ನಂಜನಗೂಡು ತಿರುಮಲಾಂಬಾ
ರಂಗನೆ ಬಾ ಮನಮಂದಿರಕೆ ಶೃಂಗಾರದ ಶ್ರೀ ಹರಿ ಶೌರೇ ಪ ನಗುತ ನಗುತ ಬಾ ಖಗವಾಹನ ಹರಿ ಬಗೆ ಬಗೆ ಕ್ರೀಡೆಗಳ ತೋರುತಲಿ ಝಗ ಝಗಿಸುವ ಪೀತಾಂಬರಧಾರಿಯೆ ಅಗಣಿತ ಗುಣನಿಧಿ ಬಾ ಹರಿಯೆ 1 ಪಕ್ಷಿವಾಹನ ಪುರುಷೋತ್ತಮ ಶ್ರೀಹರಿ ರಕ್ಷಿಸಿ ಕಾಪಾಡುವ ಜಗವ ಕುಕ್ಷಿಯೊಳಡಗಿಸಿ ಸಲಹುವ ಸುಜನರ ರಕ್ಷಿಸಿ ಪೊರೆಯಲು ಬಾ ಹರಿಯೆ 2 ಪೊಂಗೊಳಲೂದುತ ಮಂಗಳ ಚರಿತ ಹೃ- ದಂಗಳದೊಳು ನಲಿದಾಡುತಲಿ ಅಂಗಜಜನಕ ಗೋಪಾಂಗನೆ ಲೋಲ ಶ್ರೀ- ಮಂಗಳ ಮೂರುತಿ ಬಾ ಹರಿಯೆ 3 ಗಂಗಾಜನಕಗೆ ಭೃಂಗಕುಂತಳೆಯರು ರಂಗು ಮಾಣಿಕದಾರತಿ ಬೆಳಗೆ ಪೈಂಗಳನಾಮ ಸಂವತ್ಸರದಲಿ ಭವ ಭಂಗವ ಮಾಡಲು ಬಾ ಹರಿಯೆ 4 ಭ್ರಮರ ಕುಂತಳೆಯರು ಘಮಘಮಿಸುವ ಸುಮಮಾಲೆಗಳ ಕಮಲನಾಭ ವಿಠ್ಠಲಗರ್ಪಿಸುವರು ಶ್ರಮ ಪರಿಹರಿಸಲು ಬಾ ಹರಿಯೆ 5
--------------
ನಿಡಗುರುಕಿ ಜೀವೂಬಾಯಿ
ರಂಗನ್ಯಾಕೆ ಬಾರ ತಂಗಿ ಮಂಗಳ ಮಹಿಮನ ದಿವ್ಯಾಂಗವ ಕಾಣದೆ ಎನ್ನಕಂಗಳು ಕಂಗೆಡುತಿವೆಪ. ರಂಗುಮಾಣಿಕದುಂಗುರದಂಗುಲಿಯ ಸನ್ನೆಯಿಂದಪೊಂಗೊಳಲೂದುವನ ತೋರೆ ರಮಣಿ ಅ.ಪ. ತಿಂಗಳು ಮೂಡಿತು ಪಿಕ ಸಂಗೀತವ ತೊಡಗಿತುಭೃಂಗ ತನ್ನಂಗನೆಯರ ಸಂಗಡ ನಲಿದು ಬಂದಶೃಂಗಾರವನದ ಮೃದು ತಂಗಾಳಿ ಬೀಸಿತು ನೋಡಾ-ನಂಗ ನೆಚ್ಚ ಬಾಣಗಳೆಂತೊ ಅಂತರಂಗವ ತಾಕಿದರೆನ್ನ ಇಂಗಿತವರಿತು ದೇವೋ-ತ್ತುಂಗ ಕಾಯದಿರೆ ಉಳಿವಂಗನ ನಾಕಾಣೆ ನಮ್ಮಪೆಂಗಳಿಗೆ ಬಂದ ಬಲುಭಂಗ ತನ್ನದಲ್ಲವೆ ಸಾ-ರಂಗಾಕ್ಷಿ ಬೇಗವನ ತೋರೆ ರಮಣಿ 1 ಕೌಸ್ತುಭ ರತ್ನಕರ್ಣಕುಂಡಲಸರಸಿಜಮುಖದಿ ಕಸ್ತೂರಿ ತಿಲಕವೆಸೆಯೆಪರಿಮಳಿಸುವ ಪೂಮಾಲೆಮೆರೆಯೆ ಪೊಳೆವ ಪೀತಾಂಬರದ ಸುತ್ತಲೊಲೆವಕಿರುಗೆಜ್ಜೆ ಮಣಿಮಯಕಾಂತಿ ಮಿಂಚುತಿರಲುಚರಣನೂಪುರ ಘಲುಘಲುಕೆನೆ ಕುಣಿವÀ ಶ್ರೀಹರಿಯನು ಕರೆದುತಾರೆ ರಮಣಿ 2 ಮಂದಜಾಸನನ ತಂದೆಯೆಂದೆನಿಪ ಗೋವಿಂದನಕಂದರ್ಪ ವೃಂದಾದಿಗಳ ಕಂದಿಸುವ ಕುಂದಿಲ್ಲದಸೌಂದರ್ಯಸಂದೋಹದೊಳಗೊಂದೊಂದನಾರು ಬಲ್ಲರುಎಂದೆಂದಿವನನು ಪೊಂದಿಪ್ಪಇಂದಿರೆ ಇವನ ಗುಣಸಾಂದ್ರ ಕಿರುಬೆರಳಿನಂದವನೋಡುತ್ತ ಆನಂದಸಿಂಧುವಿನೊಳ್ಮುಣುಗಿದಳಿಂದು ಹಯವದನ ಮುಕುಂದನ ತಂದೆನ್ನ ಮುಂದೆಇಂದುಮುಖಿ ಕರೆದುತಾರೆ ರಮಣಿ3
--------------
ವಾದಿರಾಜ
ರಂಗಪ್ಪ ಬಂದವ್ನೆ ಬಾಗ್ಲಲ್ಲಿ ನಿಂತವ್ನೆ ಸಿಂಗಾರದಿಂದವ್ನೇ ತೆಂಗಿನಕಾಯ್ಬಾಳೆಹಣ್ತಂದು ನೋಡಿರೋ ಹೊಂಗೂಳನೊತ್ತವ್ನೇ ಪ ನಾಕ್ಮಳ ನಿಂತವ್ನೆ ನೀರಲ್ಲಿ ನಿಂತವ್ನೆ ನಾಕೈಯಾ ಪಡೆದವ್ನೇ ಇಕ್ಕೆಲದಲಿ ಸಂಕುಚಕ್ರವ ಹಿಡಿದವ್ನೆ ರಾಕ್ಷಸನ್ನ ಮೆಟ್ಟವ್ನೆ1 ಗಟ್ಟಿ ಬೆನ್ನಿನ ಮ್ಯಾಗೆ ಬೆಟ್ಟವ ಹೊತ್ತವ್ನೆ ಗಟ್ಟಿ ಗದೇ ಹಿಡಿದವ್ನೇ ಮಟ್ಟಸವಾದ ನಾಕ್ಕಾಲಲ್ಲಿ ನಿಂತವ್ನೆ ಸಿಟ್ಟಿಲ್ಲ ನಗತವ್ನೇ 2 ಮೊಳದುದ್ದ ಮೂಗ್ಯ್ಮಾಲೆ ಭೂಮಿಯ ಹೊತ್ತವ್ನೇ ಬೆಳಸವ್ನೇ ಕೋರೆಹಲ್ಲಾ ತೊಳಲಿಬಳಲವನಪ್ಪ ನಮ್ಮಪ್ಪ ರಂಗಪ್ಪ ಯೆಳನಗೆ ನಗ್ತಾನೇ 3 ಮೂಡ್ತವ್ನೆ ಕಂಬ್ದಲ್ಲಿ ನರಸಿಮ್ಮನಾಗವ್ನೆ ಹಿಡಿದವ್ನೆ ದೊಡ್ರಾಕ್ಷಸ್ನಾ ದೊಡ್ದುಗ್ರಲೊಟ್ಟೆಯ ಬಗಿತವ್ನೆ ಸಿಗಿತವ್ನೆ ಕೊಡುತೀನ್ವರವನೆಂತಾನೇ 4 ಗಿಡ್ಡ ಹಾರುವನಂತೆ ಮೂರೆಜ್ಜೆ ಭೂಮಿಯನಡ್ಡಡ್ಡ ಅಳೆದವ್ನೆ ಪಾಡ್ಯದ ಹಬ್ದಲ್ಲಿ ಬಲಿಯ ಕರೆತರುತಾನೆ ಬೇಡಿದ್ದ ಕೊಡುತಾನೇ 5 ಜಯ ಜಯ ಜಯವೆಂತಾನೇ ಕೈಯಲ್ಲಿ ಹಿಡಿದವ್ನೆ ಗಂಡುಗೊಲ್ಲಿಯ ನೋಡೋ ಭಯವಿಲ್ಲ ಕೈಮುಗಿಯೋ 6 ಶಿವನ ಬಿಲ್ಮುರಿದವ್ನೆ ರಾವಣನ ತರಿದವ್ನೆ ಭೂಮಿಯೆಲ್ಲವಾಳ್ತವ್ನೆ ತವಕದಿ ನೋಡಿರೆಲ್ಲಾ 7 ಮಡುವಿಗೆ ಧುಮುಕಿ ಕಾಳಿಂಗನ ತುಳಿದವ್ನೆ ಹಿಡಿದವ್ನೆ ಹೊಂಗೊಳಲಾ ಮಾನವ ಕಡುರೂಪವಂತ ನಮ್ಮ 8 ಮತ್ತರ ಮಡದೀರ ವ್ರತವನು ಕೆಡಿಸಲು ಬೆತ್ತಲೆ ನಿಂತವ್ನೇ ಕೃತ್ತಿವಾಸನ ಕೈಯ್ಯೊಳಿಂಬಾಗಿ ನಿಂದವ್ನೆ ಉತ್ತಮ ದೇವನಮ್ಮ 9 ದುರುಳರನೊದೆಯಾಕೆ ಹೊಂಟವ್ನೇ ಪದಕಮಲಕೆ ಯೆರಗೋ 10 ಮುದ್ದು ರಂಗಪ್ಪನಿಗೆ ಪೊಂಗಲು ನೇವೇದ್ಯ ಸಿದ್ಧ ಮಾಡಿರಯ್ಯಾ ಬದ್ಧವು ಅವ ನಮ್ಮ ಕಾಯೋದು ಸಟೆಯಲ್ಲ ಎದ್ದೆದ್ದು ತಲೆಬಾಗಿರೊ 11 ರಾಮನು ಅವನೇ ಕಾಮನಪ್ಪನು ನಿಸ್ಸೀಮ ನಮ್ಮ ರಂಗನೇ ರಾಮದಾಸನ ಮನದೊಳು ಮನೆ ಮಾಡ್ಯವ್ನೇ ಪಾಮರ ವರದನೆಂಬ ಮಾಂಗಿರಿ 12
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಂಗರುಕ್ಮಿಣಿ ಸತ್ಯಭಾಮೆಗೆ ಬಂಗಾರದ ಪ ಮಂಟಪದೊಳು ಸತಿಯರೆಂಟುಮಂದಿಯು ಕೂಡಿ ಒಂಟಿಮುತ್ತೊ ್ಹಳೆವೊ ವೈಕುಂಠಪತಿಗೆ ಬ್ಯಾಗ 1 ವಾರಿಜಾಕ್ಷಿಯರ್ಹದಿನಾರುಸಾವಿರ ಮಂದಿ ಮಾರನಯ್ಯನ ಮುದ್ದು ಮಕ್ಕಳ ಸಹಿತಾಗಿ 2 ಎಡಬಲ ತೊಡೆಯಲ್ಲಿ ಮಡದಿ ರುಕ್ಮಿಣಿ ಭಾಮೆ ನಡುವೆ ಭೀಮೇಶಕೃಷ್ಣ ನಗುತ ಕುಳಿತನಾಗ 3
--------------
ಹರಪನಹಳ್ಳಿಭೀಮವ್ವ