ಒಟ್ಟು 1888 ಕಡೆಗಳಲ್ಲಿ , 110 ದಾಸರು , 1462 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣವ ಮಾಡಿ ಶರಣು ಹೋ | ಶರಣು ಹೋಗುವೆ ನಿಮ್ಮ ಚರಣ ಕಮಲಕೆ | ಎರವು ಮಾಡಿದೆ ನಿರುತಾ ಪ ನಗರ ದಹನಾ | ತಾರಕ್ಷ ವಾಹನಾ | ತರುಣ ಚರ್ಮಾಂಬರ ಪೀತಾಂಬರಧರ ಶ್ರೀ ಸತಿರಮಣಾ | ಶೌರಿ ಕೌಸ್ತುಭಮಾಲಾ | ಮಾರಜನಕ ಕು | ಮಾರನಪಿತ ಗಂಗಾಧರ ಧರ ಧರ1 ಶೂಲ ಡಮರುಗ ಹಸ್ತ | ಮೂಲೋಕ ಮೀರಿದವಸ್ತಾ | ಕಾಲ ನಿಯಾಮಕ | ನಿತ್ಯ | ಪಾಲಸಾಗರಶಾಯಿ ನಂದಿಗಮನ ಕಾ | ಪಾಲಿ ಅಭಯ ಪಾಣಿ 2 ವಿಷಧರ ಭೂಷಣ ಕಸ್ತೂರಿ ತಿಲಕ ರಂ | ಪಶುಪತಿ ಪಿನಾಕಿ ಅಸುರಾರಾತಿ ವಿವೇಕಿ | ಅಸಮ ಸುದರುಶನ ರುಂಡಮಾಲಾಧೀಶ ಪಾಲ ಗೋಪಾಲ 3 ಭೂತ ಪ್ರಮಥರೊಡೆಯಾ | ಭೂತೇಶಾದಿಗಳೊಡೆಯಾ | ನೀಲ | ಗಾತುರ ಸದ್ಯೋಜಾತಾ ಜಾತರಹಿತಾ | ಶೂನ್ಯ ಪ್ರತಾಪಾ | ಶ ತಾಮಸ ಖ್ಯಾತಿ ಮಂಗಳಕೀರ್ತಿ 4 ತಂತ್ರ ಮಂತ್ರಕ್ಕೆ ಸಿಲುಕಾ | ಅಂತರಂಗ ನಿಯಾಮಕಾ | ಎಂತೆಂತು ತಿಳಿದರೆ | ಅಂಥಂಥ ಗತಿಯನ್ನು | ಸಂತತ ಕೊಡುವನೆ ಚಿಂತಿಪೆ ವರಹನ್ನ | ದಂತಜ ತೀರದಲ್ಲಿ | ಕಾಂತಾರ ನಿವಾಸಾ 5
--------------
ವಿಜಯದಾಸ
ಕರುಣಸಾಗರನಹುದೊ ಶರಣ ಜನರ ಪ್ರಿಯ ಧ್ರುವ ಕರಿರಾಜ ಮೊರೆ ಇಡಲು ಭರದಿಂದೊದಗಿ ಬಂದ್ಯೊ ದುರಿತ ಬಂದಡರಿದಾವಸರದೊಳು ನೀ ಪರಿಹರಿಸಿದ್ಯೊ ಶ್ರಮ ಪರಮ ದಯಾಳು 1 ದುರಿತ ನಿರ್ಮಿಸಿದವನ ಬೆರಳಲಿ ಸೀಳಿದ್ಯೊ ಪೂರ್ಣ ಹರಿಯಂದಾ ಮಾತಿಗೆ ಕರುಣದಿಂದೊದಗಿ ನೀ ಪರಪರಗಾಯಿದ್ಯೊ ತರಳ ಪ್ರಹ್ಲಾದನ 2 ಧರ್ಮಪತ್ನಿಯ ಸೆರಗೆ ಭರದಿಂದೆಳೆಯುವ ಸಮಯ ಸ್ಮರಣಿ ಒದಗಿ ಬಂದೊ ಪರಿಪರಿ ವಸ್ತುವ ಪೂರಿಸಿದ್ಯೊ ಶ್ರೀ ಹರಿ ಕೃಷ್ಣ ಕೃಪಾಳು 3 ಅರಗಿನ ಮನೆಯೊಳು ಮರೆ ಮೋಸ ಮಾಡಿರಲು ಶರಣಾಗತವತ್ಸಲ ಪಾಂಡವಪ್ರಿಯ 4 ಹಲವು ಪರಿಯಲೆನ್ನ ಸಲಹುವ ಸದ್ಗುರುಪೂರ್ಣ ಬಾಲಕ ಮಹಿಪತಿಯ ಪಾಲಕ ನೀನಹುದೊ ಮೂಲೋಕದೊಡೆಯ ಶ್ರೀ ಹರಿ ದಯಾಳ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಾ ತೋರದದೇನೊ ನರಹರಿಯೆ ನಿನ್ನ ಕರುಣೆ ತೋರದೆ ಇರುವ ಪರಿಯೆನ್ಹರಿಯೇ ನಿನ್ನಯ ಕಮಲ ಸ್ಮರಣೆಯ ಇಹಪರಕೆ ಗತಿಯಂ ದಿರುವ ಮನಜರಿಗ್ಹರುಷದಿಂದಲಿ ಪ ಸುಸಾಮಗಾನಪ್ರಿಯ ನರಸಿಂಗ ದೈತ್ಯಾರಿ ಭಕ್ತಾಧೀನ ಗರುಡತುಂಗ ಕರುಣಾಂತರಂಗ ಶೌರಿ ಪುರಾಣಪುರುಷ ದಾನವಾಂತಕ ಶ್ರೀನಿವಾಸನೆ ಶರಪಾಣೆ ವಿಷ್ಟಕ್ಸೇನವರ ಗೀರ್ವಾಣವಂದಿತ ಜಾನಕೀಧರ ನೀನೇ ಸಲಹೆನೇ 1 ಸಂಯಮಿ ವೃಂದನುತ ಮುಚ- ಪಾಲನ ಕೃಪಾಸಿಂಧು ಶ್ರೀ ಗೋವಿಂದ ಇಂದಿರಾನಂದ ನಂದ ಗೋಪಿಯಾನಂದ ನಾಚ್ಯುತ ಮಂದರಧರ ಮಾಪತೆ ಕಂಬುಕಂಧರ ಇಂದು ಮುಖ ಶ್ರೀ ಸುಂದರಾಂಗನೆ ರೂಪದಿ ಬಂದು ಸ್ತಂಭದಿ ರಕ್ಷಿಸೆಂದೆನಲು ಹರಿ 2 ತ್ರಿಜಗದ್ಭರಿತ ಕೌಸ್ತುಭಹಾರ ನರಮೃಗಾಕಾರ ಮಂಗಳಕರ ಮಹಿಮಾ ಶರಣು ಭಾಸುರ ಕಿರೀಟನೆ ನಿರತದಲಿ `ಹೆನ್ನೆಪುರ ನಿಲಯ' ಸಿರಿಯರಸ ನಿನ್ನಯ ಮೊರೆಯ ಹೊಕ್ಕರೆ ತ್ವರದಲಿ ನೀ 3
--------------
ಹೆನ್ನೆರಂಗದಾಸರು
ಕರುಣಾದಿ ಪಿಡಿ ಕರವಾ ದೇವರ ದೇವ ಪ ಕರುಣಾದಿ ಪಿಡಿಕರ ಸರಸಿಜಾಂಬಕ ಎನ್ನ ಗುರು ರಘುಪತಿ ಪಾಲಾ ಮರುತಾಂತರಿಯಾಮಿ ಅ.ಪ ಗತಶೋಕ ಜಿತಮಾಯ ಪತಿತ ಪಾವನವೇದ್ಯ ಪ್ರತಿಪಾದ್ಯ ಕ್ಷಿತಿಪ ಭಾರತಿ ಕಾಂತ ವಂದ್ಯಾ ಆ ನತರ ಪಾಲಕ ದುಷ್ಟದಿತಿಜಾರಿ ತವಪಾದ ಶತಪತ್ರ ಬಿಡದೆ ಸಂತತ ಭಕುತಿಯಲಿಂದ ಸ್ತುತಿಪಾರ ಮಿತ ಅಘವಾ ಕಳೆದು ಮತ್ತೆ ಹಿತದಿ ಸದ್ಗತಿ ಕೊಡುವಾ ನಿನ್ನಯ ದಿವ್ಯಾಚ್ಯುತವಾದ ಘನದಯವಾ ಪೊಗಳು ವಂಥ ಮತಿವಂತರನು ಕಾಣೆ ಶತಮುಖಜಜ ಮಾವಾ 1 ಅನಿಮಿತ್ಯ ಬಂಧುವೆ ವನಚಾರಿ ಕೂರ್ಮನೆ ಕನಕ ನೇತ್ರಾರಿ ಪಾವನತರ ನರ ಪಂಚ ನಾನಾ ರೂಪದಿಂದ ಬಾಲನಾ ಕಾಯ್ದೊನರ ಹರಿಬಲಿ ನಿತ್ಯ ಅನಘಾತ್ಮ ಜನನೀಯ ಕೊಂದಾನೆ ಜನಕ ಜಾಪತಿಯ ರು ಕ್ಮಿಣಿ ಮನೋಹರನೆ ವಸನದೂರ ಹಯರೂಢ ಜನನ ರಹಿತ ವಿಖ್ಯಾತಾ ನಮಿಸುವೆ ಅನಿಮಿಷಪಜನ ಸುತಾ ಬೇಡಿಕೊಂಬೆ ಅನುದಿನದಲಿ ಮಮತಾ ಕನಕೋದರನ ತಾತಾ 2 ಸರಿವೀರ ಹಿತ ಬಲಿಸರಸಿ ಜಾಂಬಕ ಮುರ ಹರ ಹರ ವಂದಿತ ಹರಿಮುಖ ಹರಿನುತ ಪಾದ್ಯ ಹರಸು ಎನ್ನಯ ಅಘ ನಿರುತ ನಿನ್ನ ಡಿಂಗರರ ನೀಕರದಿತ್ತು ಗುರುವಿನ ಚರಣಾದಿ ಸ್ಥಿರ ಭಕುತಿಯ ಕೊಟ್ಟು ವರ ಶಿರಿಗೋವಿಂದ ವಿಠಲನೆ ನೀ ಯನ್ನ ಮರಿಯದೆ ಮಮತೆಯಿಂದಾ ನಿತ್ಯ ಗರಿಯುತಲಿರು ಆನಂದಾ ನಿನ್ನಯ ಪಾದಾದಿರಲಿ ಮನಸು ಮುಕುಂದಾ ದುರುಳ ಭವದ ಬಂಧ 3
--------------
ಅಸ್ಕಿಹಾಳ ಗೋವಿಂದ
ಕರುಣಾನಿಧಿ ನೀ ಶ್ರೀರಾಮ ನಿನ್ನ ಚರಣ ಸೇವಿಪರಾನತ ಪ್ರೇಮ ಪ. ಕರುಣ ತೋರುತ್ತೆನ್ನ ಪೊರೆ ರಾಮ ನಿನ್ನ ಸ್ಮರಣೆ ನಿರುತ ನೀಡೆಲೊ ಶ್ರೀರಾಮ ಅ.ಪ. ಆಶ್ರಿತ ಜನರಿಗೆ ನೀನಲ್ಲದೆ ನಿ ನ್ನಾಶ್ರಯಗೊಡದಿರೆ ಗತಿ ಕಾಣೆ ಸ್ತೋತ್ರದಿ ಸ್ತುತಿಸುವೆ ನಿನ್ನಾಣೆ ಜಗತ್ರಯ ಸಲಹೊ ಕೋದಂಡಪಾಣಿ 1 ಭವಭಯಭಂಜನ ಶ್ರೀರಾಮ ಎನ್ನ ಭಯವ ಬಿಡಿಸೊ ಜಾನಕಿ ರಾಮ ಕವಿಗೇಯ ನೀನೆ ಜಗದಭಿರಾಮ ಎನಗೆ ಜವನ ಬಾಧೆಯ ಬಿಡಿಸೊ ರಘುರಾಮ 2 ತಂದೆ ಶ್ರೀ ಶ್ರೀನಿವಾಸ ನೀನೆ ಎನಗೆ ಬಂದ ಕಷ್ಟದಿ ಸಲಹುವ ನೀನೆ ಮುಂದೋರಿ ಸಲಹೋ ತಾಯಿ ಗುರು ನೀನೆ ಇನ್ನೂ ಸಂದೇಹವಿಲ್ಲ ಕೇಳೆಲೊ ರಾಮ 3
--------------
ಸರಸ್ವತಿ ಬಾಯಿ
ಕರುಣಾಮೃತವ ಸಿರದಿ ಸುರಿಯೊ ವರದ ಧನ್ವಂತರಿಯೆ ಚರಣಯುಗಳ ಕಮಲವನ್ನು ಕರುಣಿಸೆನಗೆ ದೊರೆಯೆ ಪ. ಶ್ರವಣ ನಯನ ಚಿತ್ತ ಜಿಹ್ವೆಗನುಕೂಲವಾಗಿರುವ ಲೀಲಾ ಪ್ರವರ ಕಾಂತಿ ಸ್ಮರಣ ನಾಮಗಳನು ಪಾಲಿಸಿ ಭವಜನೀತ ಭ್ರಮಣ ನಿಲಿಸಿ ಕುವರನಂತೆ ರಕ್ಷಿಸೆನ್ನ ಕವಿಭಿರೀಡ್ಯ ಕಂಜಜಾತಶಿವರ ಸೌಖ್ಯಗೊಳಿಸದವನೆ 1 ಕಲಿಕೃತ ಕಲ್ಮಶಗಳಿಂದ ಬಳಲುವಂಥ ಬಾಧೆಯನ್ನು ನಿಲಿಸಿಕೊಳ್ಳಲು ಅನ್ಯಮಾರ್ಗಂಗಳನು ಕಾಣೆನು ನಳಿನನಾಭ ನಿನ್ನ ಪಾದಗಳನೆ ನಂಬಿಕೊಂಡಿರುವೆನು ಬಲಿಯ ಕಾಯ್ವ ಭೂಮಿಜೇಶ ಘಳಿರನೆ ಬಂದೊದಗಿ ಬೇಗ 2 ನಿಖಿಳ ಭೋಗಗಳನನುಭವಿಸುತ ಶ್ರೀಗುರು ಮಧ್ವಾಂತರಾತ್ಮ ನಾಗಗಿರಿನಾಥ ರಾಗ ರೋಗ ದೋಷಗಳನು ನೀಗಿ ನಿನ್ನ ನಂಬಿ ಸ್ತುತಿಪ ಭಾಗವತರ ಭಕ್ತನೆನಿಪ ಭಾಗ್ಯವಿರಿಸೋ ಭೀಮವರದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಾಸಾಗರ ದೀನೋದ್ಧಾರಣ ಎನ್ನನು ಕಾಯ್ವ ಪರಿಯ ಚಿಂತಿಸಿ ರಕ್ಷಿಸೊ ಪರಮ ಪಾವನ ನಾಮಸ್ಮರಣೆಯಲ್ಲದೆ ಕರ್ಮ ಚರಣರಹಿತ ಪಾಪಕರನಾಬ್ಧಿಪತಿತನ ಪ. ವರ್ಣಾಶ್ರಮಾಚಾರ ಕರ್ಮಕೃತ್ಯವ ನೀಗಿ ನಿರ್ಮಲಚಿತ್ತದಿ ನಿನ್ನ ಪೂಜಿಸದೆ ವರ್ಮವಿಡಿದು ವರ ದ್ರೋಹ ಚಿಂತೆಗಳಿಂದ ಧರ್ಮಮಾರ್ಗವ ದೂರದಲಿ ತ್ಯಜಿಸಿ ನಿರ್ಮಲಾಂತ:ಕರಣ ನಿಜಕುಲ ಧರ್ಮರತ ಸಜ್ಜನರ ದೂಷಿಸಿ ದುರ್ಮದಾಂಧರ ಸೇರಿ ಕೂಪದ ಕೂರ್ಮನಂದದಿ ಬರಿದೆ ಗರ್ವಿಪೆ 1 ನೇತ್ರ ದರ್ಶನಕೆ ಸಂಸ್ಮರಕೆ ಜಿಹ್ವೆಯ ಗಾತ್ರ ಸೇವೆಗೆ ನೈರ್ಮಲ್ಯಕೆ ಶಿರವ ಶ್ರೋತ್ರವ ಮಾಹಾತ್ಮ ಶ್ರವಣಕೆ ಪಾದಗಳ ಕ್ಷೇತ್ರಯಾತ್ರೆಗೆ ಕರಗಳ ಪೂಜಾವಿಧಿಗೆ ಇತ್ತ ದೊರೆಯನು ಮರೆತು ಇಂದ್ರಿಯ ವೃತ್ತಿಗಳ ಸ್ವೈರಿಣಿಯ ದರುಶನ ಭುಕ್ತಿ ಚುಂಬನ ಧ್ಯಾನ ದುಷ್ಟ ಕಥಾ ಶ್ರವಣಸಲ್ಲಾಪಕಿತ್ತೆನು 2 ಪತಿತ ಪಾವನ ನೀನು ಪತಿತಾಗ್ರೇಸರ ನಾನು ಅತಿಶಯಿತನು ನೀನು ಅತಿನೀಚನು ನಾನು ಗತಿಹೀನ ಜನಕ ಸದ್ಗತಿಯೆಂಬ ಬಿರುದುಳ್ಳ ಮಿತಚಿತ್ರ ಚರಿತಾತ್ಯದ್ಘುತರೂಪ ಗುಣಪೂರ್ಣ ಪಶುಪತಿ ಸುರೇಶ ಪ್ರ- ಭೃತಿ ದಿವಿಜಗಣ ಸುತ ಪದಾಂಬುಜ ಕ್ಷಿತಿಜಲಾಗ್ನಿ ಮರುನ್ನಭೋಹಂ ಕೃತಿ ಮಹ ಸುಖತತಿನಿಯಮಕ 3 ಕರಿರಾಜ ಧ್ರುವಾಕ್ರೂರನರ ವಿಭೀಷಣ ನಾರದರು ಮೊದಲಾಗಿ ನಿನ್ನನುದಿನವು ಸ್ಮರಿಸಿ ಪೂಜಿಸಿ ಮನವೊಲಿಸಿದವರನ್ನು ಪರಿಪಾಲಿಸಿದನೆಂಬೊ ಗರುವದಿಂದ ನಿರುಪಮಾನಂದೈಕ ಸದ್ಗುಣ ಭರಿತರೆಂಬುದ ಹೆಮ್ಮೆಯಿಂದಲಿ ಮರೆತರೆನ್ನನು ಪರಮಕರುಣಾ ಶರಧಿಯೆಂದ್ಹೆಸರಿರುವುದೇತಕೆ 4 ನಾ ನಿನ್ನ ಮರೆತರು ನೀ ಎನ್ನ ಮರೆದರೆ ಹಾನಿಯಾಗದೆ ನಿನ್ನ ಭಕ್ತ ವತ್ಸಲಕೆ ದಾನವಾಂತಕ ಅಕಿಂಚನಾರೆ ಎಂಬ ಪ್ರಮಾಣ ಉನ್ನತ ವಚನವಾಗದೆ ಮಾನನಿಧಿ ಪವಮಾನ ತತ್ವಮತ ಮಾನಿಜನ ಸಂಸ್ತುತ ಪದಾಂಬುಜ ಶ್ರೀನಿವಾಸ ಕೃಪಾನಿಧೆ ಕಮಲಾ ನಿಲಯ ವೆಂಕಟನಿಜಾಲಯ 5 ವೇದವನು ತಂದು ಭೂಧರನ ಬೆನ್ನಲಿ ನೆಗಹಿ ಈ ಧರೆಯ ಸಲಹೆ ಪ್ರಹ್ಲಾದನನು ಕಾಯ್ದೆ ಮೇದಿನಿಯನಳೆದಿ ಕಾರ್ತದಶಾಸ್ಯ ಕಂ ಸಾದಿಗಳ ತರಿದ ಬೌದ್ಧಾದಿ ಕಲ್ಕಿ ಧಾರಣನೆ ಪತಿತ ಪಾವನನೆಂಬ ಪರಮ ಬಿರುದನು ವಹಿಸಿ ಜತನ ಮಾಡುವಿ ಭಕ್ತತತಿಗಳನು ಬಿಡದೆ ಪತಿತ ಶೇಖರನನ್ಯಗತಿಯಾಗಿರುವ ಎನಗೆ ಗತಿಯ ಪಾಲಿಸು ರಮಾಪತಿಯೆನ್ನುಪೇಕ್ಷಿಸದೆ 6 ನಾರದಕ್ರೂರ ನರ ಹೈರಣ್ಯಕಾದಿಗಳು ಪಾದ ನೀರರುಹಗಳನು ಘೋರತರ ಸಂಸಾರಪಾರವಾರವ ದಾಟಿ ಧೀರರೆನಿಸಿದರೆಲ್ಲಪಾರಸನ್ಮಹಿಮ ತರಣಿ ಉದಿಸಿದ ಮೇಲೆ ತಿಮಿರದೊಂದಿರವ್ಯಾಕೆ ಗರಳ ಭಯವ್ಯಾಕೆ ಸಿರಿಸಹಿತ ಶೇಷಾದ್ರಿ ವರ ನಿನ್ನಪಾದ ಸಂ- ದರುಶನವು ದೊರೆತಮ್ಯಾಲರಿಬಾಧೆಯಾಕೆ ಎನಗೆ 7
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಾಳುವೈ ನಿಂನ ಭಜನೆಯೊಂದೇ ಸಾಕು ಭರದಲಿ ಪಾಪಿಯ ಶುದ್ಧ ಮಾಡಲಿಲೇ ಪ ಅಜಮಿಳ ಜನ್ಮದಿ ಘೋರ ಪಾಪವ ಗೈದು ಭಜನೆ ಮಾಡಲು ತನುನೀಗು ಕಾಲದಲೀ ಭಜಕರ ಲೋಲನೆ ಹೀನನಿಗೊಲಿದು ನೀ ಕುಜನನ ಪರೆದು ಮೋಕ್ಷವನಿತ್ತೆ ಹರಿಯೇ1 ದುರುಳ ವಾಲ್ಮೀಕನು ಹೀನ ಕೃತ್ಯವಗೈದು ಸುರಮುನಿಯಾಜÉ್ಞಯಿಂ ನಾಮವಭಜಿಸೇ ದುರಳನ ಸರಸದ ಭಕ್ತಿಗೆ ವಲಿಯುತ ಪರಮ ಙÁ್ಞನವನು ನೀ ನಿತ್ತೆ ಶ್ರೀಹರಿಯೆ 2 ತರಳ ದಾಸರುಕೂಡಿ ಹರಿ ನಿಂನ ಸ್ತುತಿಸಲು ನಿರುತ ಭಕ್ತರಿಗೆ ನೀನೊಲಿದೆ ಶ್ರೀಕಾಂತಾ ಪರಮ ಆದರದಿಂದ ಹರಿಯಂನ ಮನವನ್ನು ಪರಿ ಶುದ್ಧಮಾಡಿ ದೀನನ ಸೇರೋ ಹರಿಯೇ 3 ರಂಗನ ಮಹಿಮೆಯ ನುಡಿಯಲಾರೆನು ನಾನು ಅಂಗಜ ಪಿತನಾದ ದಶರೂಪಧರನ ನಿತ್ಯ ದೂರ್ವಾಪುರದಿನಿತ್ತುಮಂಗಳ ಪದವೀವ ಚೆನ್ನಕೇಶವನೆ 4
--------------
ಕರ್ಕಿ ಕೇಶವದಾಸ
ಕರುಣಿಸಬಾರದೇನು ಶರಣೆಂಬೆ ನಾನು ಕರುಣಿಸ ಬಾರದೆ ಮೊರೆಯ ಹೊಕ್ಕವನ ಶರಣಾಗತ ಪಂಜರನೆಂಬೊ ಬಿರುದಿರೆ ಪ ಸ್ತಂಭದಿ ನೀ ಬಂದು ದೈತ್ಯನ ಬೇಗ ಶೀಳಿಕೋಪದಿಂದ ಇರಲು ಆಗ ಬ್ರಹ್ಮೇಂದ್ರ ರುದ್ರ ವೃಂದ ಬೆದರಿ ಪೋಗೆ ಪ್ರಹ್ಲಾದನಾಗ ಇಂದಿರಾವರ ಗೋವಿಂದ ಕೃಪೆಯ ಮಾಡೆಂದು ಸ್ತುತಿಸೆ ಆನಂದದಿ ಕಾಯ್ದತಿ ಸುಂದರಮೂರ್ತಿ ಮುಕುಂದ ಧರಣಿಧರ ಸಿಂಧುಶಯನ ಅರವಿಂದನಯನ ಹರಿ 1 ದಶರಥ ಸುತನೆನಸಿ ಮುನಿಯಧ್ವರ ಕುಶಲದಿನ್ನುದ್ಧರಿಸಿ ಪಶುಪತಿ ಧನು ಭಂಜಿಸಿ ಸೀತೆಯ ಕೋರಿ ದಶರಥನಾಜ್ಞೆ ವಹಿಸಿ ಕಾನನದಿ ಚರಿಸಿ ಕುಶನಿಧಿಯನು ಬಂಧಿಸಿ ರಾವಣನ ದಶ ಶಿರಗಳ ಭರದಿಂದಲಿ ಖಂಡಿಸಿ ಅವನನುಜಗ ನಿಶದೊಳ್ ಶಿರಿಲಾಲಿಸಿ ಪೊರೆದ ಶ್ರೀಶಶಿಧರನÀು ಹರಿ 2 ನಕ್ರ ಭಂಗಬಡಿಸೆ ಗಜಗಳರಸ ರಂಗ ಮುರಾರಿ ದೇವೋತ್ತುಂಗ ಶ್ರೀ ಶ್ಯಾಮಲಾಂಗ ಭಕ್ತಾಭಿಮಾನಿ ಮಂಗಳಾರಸತ್ಸಂಗ ಜಗದಂತರಂಗ ವಿಹಂಗ ಸಿರಿ ನರಸಿಂಹ ಬಂದು ಶಾಪಂಗಳ ತರಿದೆ ಭುಜಂಗತಲ್ಪ ಕಾನಂಗಪಿತ 'ಹೆನ್ನೆರಂಗ' ಶರಣು ರಣರಂಗ ಭೀಮ ಹರಿ 3
--------------
ಹೆನ್ನೆರಂಗದಾಸರು
ಕರುಣಿಸು ಕಮಲೇಶ ಸರ್ವೇಶ ಕರುಣಿಸು ಕಮಲೇಶ ಪ. ಶರಣಾಗತ ರಕ್ಷಕ ವೆಂಕಟೇಶ ನಿರುತದಿ ಪ್ರಾರ್ಥಿಪೆ ಲಕ್ಷ್ಮೀಶ ಅ.ಪ. ವೇದ ಶಾಸ್ತ್ರ ಪುರಾಣವನರಿಯೆ ಆದಿ ಮೂರುತಿ ಪ್ರಹ್ಲಾದವರದನೆ ಆದರದಲಿ ನಿನ್ನ ಸ್ತುತಿಸುವೆ ದೇವ ಮೋದದಿಂದಲಿ ಕಾಯೋ ಪಾದಸೇವಕರಾ 1 ಜಪವ ನಾನರಿಯೆ ತಪವ ನಾನರಿಯೆ ಉಪವಾಸ ವ್ರತಮೊದಲರಿಯೆ ದೇವಾ ಅಪರಿಮಿತ ಪಾಪ ಗಳಿಶಿಹೆನೋ ಸುಪವಿತ್ರನನು ಮಾಡೊ ಅಪಾರ ಮಹಿಮಾ 2 ನಿನ್ನ ನಂಬಿಹೆನೊ ಅನ್ಯರನರಿಯೆನೊ ಎನ್ನಪರಾಧವ ಮನ್ನಿಸೊ ದೊರೆಯೆ ಚೆನ್ನಿಗ ಶ್ರೀ ಶ್ರೀನಿವಾಸನ ಸ್ತುತಿಪೆನೊ ಇನ್ನು ಸಂಶಯವ್ಯಾಕೊ ಪನ್ನಗಾದ್ರಿವಾಸ 3
--------------
ಸರಸ್ವತಿ ಬಾಯಿ
ಕರುಣಿಸು ಬೇಗ ಸಿರಿವರ ಕರುಣಿಸು ಬೇಗ ಪ. ಲಕ್ಷ್ಮಾಶ್ರಯ ವಕ್ಷಸ್ಥಳ ಪಕ್ಷೇಂದ್ರ ವಿಹಾರಿ ಅಕ್ಷಾರಿ ಪ್ರಿಯ ಪೂರ್ಣ ಕಟಾಕ್ಷದಿ ನೋಡುತಲಿ 1 ಕಂಠೇಧೃತ ಕೌಸ್ತುಭ, ವೈಕುಂಠಾಲಯವಾಸಿ ಶುಂಠಾಶಯ ಧೂವನ ನರ ಕಂಠೀರವ ಕಮಠಾ 2 ದೂರೀಕೃತ ಘೋರಾಮಯ ಧೀರಾಖಳ ಸಾರಾ ನಾರಾಯಣ ನರಕಾರ್ಣವ ತಾರಣ ರಘುವೀರ 3 ಭಕ್ತಾವನಶಕ್ತಾಮೃತ ರಕ್ತಾಧರ ಶ್ರೀದ ಪಾದ 4 ವಾಗೀಶ ವೃತಾನುಗ ಸಕಲಾಗಮನುತ ಚರಣ ಭೋಗೀಶ ಧರಾಲಯ ದಯವಾಗು ಸದಾಶರಣ 5
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಿಸೊ ಗುರುವೆ ಚರಣ ಸ್ಮರಣೆಯು ನಿಮ್ಮ ಧ್ರುವ ಸ್ಮರಿಸಲಿಕ್ಕೆ ನಾ ನಿಮ್ಮ ತರಳ ಪ್ರಹ್ಲಾದನಲ್ಲ ಅರಿತು ಮಾಡುವದು ದಯ ತರಣೋಪಾಯದ 1 ಒಲಿಸಿಕೊಳ್ಳಲು ನಿಮ್ಮ ಫÀಲ್ಗುಣನಂಥವನಲ್ಲ ಗೆಲಿಸುವದೊ ನೀ ಸುಪಥ ನೆಲೆನಿಭದೋರಿ 2 ಮೊರೆ ಇಡಲು ನಾ ನಿಮ್ಮ ಕರಿರಾಜನÀಂಥವನಲ್ಲ ಕರುಣಿಸುವದೊ ಎನಗೆ ಕರವಿಡಿತು ಪೂರ್ಣ 3 ಶರಣ ಹೋಗಲು ನಿಮ್ಮ ಧೀರ ವಿಭೀಷಣನಲ್ಲ ಪಾರ ಗೆಲಿಸುವದೊ ನಿಮ್ಮ ವರಕೃಪೆಯಿಂದ 4 ಭಕ್ತಿ ಮಾಡಲು ನಿಮ್ಮ ಶಕ್ತಸಮಥನಲ್ಲ ಯುಕ್ತಿದೋರುವದೊ ನಿಮ್ಮ ಮುಕ್ತಿಮಾರ್ಗದ 5 ಸ್ತುತಿಯ ಮಾಡಲು ನಿಮ್ಮ ಅತಿಶಯ ಭಕ್ತ ನಾನಲ್ಲ ಗತಿಸುಖದೋರುದೆನಗೆ ಪತಿತಪಾವನ 6 ದಾಸರ ದಾಸನೆಂದು ಲೇಸಾಗಿ ಮಹಿಪತಿಗೆ ವಾಸನೆ ಪೂರಿಸೊ ಪೂರ್ಣ ದೇಸಿಗರ ದೇವ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಿಸೋ ಸ್ವಾಮಿ ನೀಪೂರ್ಣ ಸಾರಸದ್ಗತಿ ಭೂಷಣಾ ತಾರಿಸೋ ಯನ್ನ ನೀ ಪ್ರಾಣಾ ಶ್ರೀ ಹರಿ ಕಂಜಲೋಚನಾ 1 ಸ್ವಾಮಿ ನೀ ಸರ್ವ ಸಾಕ್ಷಾತಾ ಬ್ರಹ್ಮಾದಿದೇವ ವಂದಿತಾ ಮನೋಹರ ಪ್ರಖ್ಯಾತಾ ನೇಮ ನೀ ಕಾಮ ಪೂರಿತಾ 2 ಹಸ್ತಿಗೊಲಿದ ಸುದಾತಾ ವಸ್ತು ಶ್ರೀದೇವ ನಿಶ್ಚಿತಾ ನಿಸ್ತರಿಸುವಾ ಶ್ರೀನಾಥಾ ಕಸ್ತೂರಿರೇಖಾ ಶೋಭಿತಾ 3 ನೀನೆ ನಮಸ್ತ ಕಾಧಾರಾ ಶ್ರೀನಿಧಿ ಜ್ಞಾನ ಸಾಗರಾ ದೀನ ಜನರ ಮಂದಾರಾ ಪೂರ್ಣಾನಂದದಾಗರಾ 4 ಮಹಿಪತಿ ಸ್ವಾಮಿ ಶ್ರೀಪತಿ ಕಾಯೋ ನೀ ಲಕ್ಷ್ಮೀಪತಿ ಶ್ರೀ ಹರಿ ದಿವ್ಯಸುಮೂರ್ತಿ ದೋರೋ ನೀ ದಿವ್ಯಸಂಗತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣೆ ತೋರಿಸೊ ದೇವಾ ಕರಿವರದನೆ ಪ. ಕರುಣ ತೋರಿಸೊ ದೇವ ಗರುಡಗಮನ ನಿನ್ನ ಕಮಲ ಧ್ಯಾನ ನಿರುತ ನೆನೆವ ಹರಿಅ.ಪ. ವೇದಾಂತ ವೇದ್ಯ ನೀನೆ ಆದಿನಾರಾಯಣ ಸಾಧುವಂದಿತನು ನೀನೆ ದೇವೇಶನೆ ವೇದವ್ಯಾಸನು ನೀನೆ ಬಾದರಾಯಣ ನೀನೆ ಭವ ಭಯಹರ ನೀನೆ 1 ಚಿಂತೆ ಕೊಡುವ ನೀನೆ ಚಿಂತಿತಾರ್ಥನು ನೀನೆ ಅಂತಕ ದೂತರಿಂದೆಳೆಸುವ ನೀನೆ ಸರ್ವ ಅಂತರ್ಯಾಮಿ ಅಂತÀರಂಗದಿ ನಿಂತು ಪ್ರೇರಿಸಿ ನಿನ ಪಾದ ಪಂಥದಿ ಸ್ತುತಿಗೊಂಡು ಸಂತಸ ಪಡುವವ ನೀನೆ2 ಮಾನುನಿ ದ್ರೌಪದಿಯಾ ಮೊರೆಯ ಕೇಳಕ್ಷಯ ನೀನೆ ಪಾಲಿಸಲಿಲ್ಲವೆ ಶ್ರೀ ಕೃಷ್ಣ ನೀನಿತ್ತು ಸಲಹಿದ ಶ್ರೀ ಶ್ರೀನಿವಾಸ ದೊರೆ ಗಾನಲೋಲನೆ ಭಕ್ತರ ಸಲಹುವೆನೆಂಬುವ ಆಭಯ ಹಸ್ತವ ನೀನಿತ್ತು ಸಲಹೆನ್ನದೇವಾಧಿದೇವ 3
--------------
ಸರಸ್ವತಿ ಬಾಯಿ
ಕರೆ ಕರೆ ಭವದೊಳು ಮುಳುಗಿರುವೆ ದುರಿತದೂರನೆ ದು:ಖ ತರ ತರ ವ್ಯಥೆಯಲಿ ಪ ಅಗಣಿತ ಮಹಿಮನೆ ಸುಗುಣಗಳನುದಿನ ಬಗೆ ಬಗೆ ಸ್ಮರಿಸುವ ಬಗೆ ಮರೆದು ಹಗಲಿರುಳೆನ್ನದೆ ನಿಗಮವೇದ್ಯನ ನಾಮ ಬಗೆ ಬಗೆ ಪೊಗಳಿ ಕೊಂಡಾಡಿ ಸ್ತುತಿಸದಲೆ 1 ಜನುಮ ಜನುಮದಲಿ ಜನಿಸಿ ಬರುವ ದು:ಖ ಕೊನೆಗಾಣದಾಗಿದೆ ಕರುಣಾನಿಧೆ ಅನಿಮಿಷರೊಡೆಯ ಶ್ರೀ ಘನ ಮಹಿಮನ ನಾಮ ಮನದಣಿ ಪೊಗಳಿ ಕೊಂಡಾಡಿ ಸ್ತುತಿಸದಲೆ2 ನಾನು ನನ್ನದು ಎಂಬ ಹೀನವೃತ್ತಿಗಳಿಂದ ಹಾನಿಯಾಯಿತು ಆಯು ಶ್ರೀನಿಧಿಯೆ ಜ್ಞಾನಿಗಳೊಡನಾಡಿ ಮೌನದಿಂದಿರದಲೆ ಶ್ವಾನಸೂಕರನಂತೆ ತಿರುಗಿ ಬಾಯ್ಬಿಡುತಲಿ 3 ರಂಗನ ಮೂರ್ತಿಯ ಕಂಗಳಿಂದಲಿ ನೋಡಿ ಭಂಗಗಳಳಿಯುವ ಹರಿದಾಸರ ಸಂಗದೊಳಿರಿಸು ಉತ್ತುಂಗ ಮಹಿಮಪಾಂಡು- ಭವ ಭಂಗ ಬಿಡಿಸೆನ್ನದೆ4 ಪಾದ ಪೊಂದಿ ಭವದಘ ವೃಂದವ ಕಳೆಯುವನೆಂದೆನ್ನುತ ಬಂಧಕ ಮೋಚಕನೆಂದರಿಯದೆ ಭವ ಬಂಧನದೊಳು ಸಿಕ್ಕಿ ಬಳಲಿ ಬಾಯ್ಬಿಡುತಲಿ5 ಪರಿ ಮೋಹ ಮಾತುಳಾಂತಕ ಕೃಷ್ಣ ಮಾತು ಮಾತಿಗೆ ಹರಿ ಹರಿ ಎನ್ನದೆ ಸೋತು ಬಂದೆನೊ ದೇವ ಮಾತರಿಶ್ವನಪ್ರಿಯ ಕೋತಿ ಬುದ್ಧಿಯ ಬಿಡಿಸೆಂದು ತುತಿಸದಲೆ 6 ಕಮಲ ಪತ್ರಾಕ್ಷ ಶ್ರೀ ಕಮಲಜಾತೆಯ ಪ್ರಿಯ ಕಮಲನಾಭ ವಿಠ್ಠಲ ವಿಠ್ಠಲ ಹರೇ ಸುಮನಸರೊಡೆಯ ಶ್ರೀ ಭ್ರಮರಕುಂತಳೆ ಪ್ರಿಯಶ್ರಮ ಪರಿಹರಿಸೆಂದು ನಮಿಸಿ ಸ್ತುತಿಸುವೆನು 7
--------------
ನಿಡಗುರುಕಿ ಜೀವೂಬಾಯಿ