ಮನದಧಿಪ ಮರೆಹೊಕ್ಕೆ ಮಹದೇವ ಪಾಹಿ ಪ
ತೃಣ ಮೊದಲು ಘನದಲ್ಲಿ ಬಿಡದೆ ಹರಿಯನು ಭಜಿಪ ಅ.ಪ.
ಕರುಣಾಬ್ಧಿ ನೀಡೆನಗೆ ವೈರಾಗ್ಯ ಮಹಭಾಗ್ಯ
ಭಾಗವತ ಪದ ನಿನ್ನದಯ್ಯ
ಕಮಲ ಮಧು ಮತ್ತ ಷಟ್ಪದ ದೊರೆಯೇ
ಸರ್ವತ್ರ ನಿನ್ನಲ್ಲಿ ಹರಿಯ ತೋರಿಸಿ ಸಲಹೊ 1
ಆಪ್ತತಮ ನಿನ್ನಂಘ್ರಿ ಧ್ಯಾನದಲಿ ಇಡು ಎನ್ನ
ತೃಪ್ತಿ ಅನ್ಯದಿ ಬ್ಯಾಡ ಸುಪ್ತಿರಹಿತ
ಸಪ್ತೆರಡು ಭಕ್ತಿಯಲಿ ಬೆಳೆಸೆನ್ನ ಉದ್ಧರಿಸು
ಮೂರ್ತಿ ದರುಶನ ಭೋಗ 2
ಮೂರುತಿಯ ಕೈಗಿತ್ತುದಾರ ಸಾಗರ ಶಂಭು
ಘೋರ ಭವಹರ ಹರಿಯ ದಾಸವರ್ಯ
ಮಾರಮಣ ಜಯೇಶವಿಠಲನ ಭಜನೆಯಲಿ
ಸಾರ ಸುಖ ನೀಡೆನಗೆ 3