ಒಟ್ಟು 455 ಕಡೆಗಳಲ್ಲಿ , 67 ದಾಸರು , 412 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾರಿದ ಡಂಗುರ ಯಮನು ಪ ಅಘ ನಾರೇರ ಎಳತಂದು ನರಕದಲ್ಲಿಡಿರೆಂದು ಅ.ಪ. ಹೊತ್ತಾರೆ ಎದ್ದು ಪತಿಗೆ ಎರಗದವಳ ಮೃತ್ತಿಕೆ ಶೌಚ ಮಾಡದೆ ಇಪ್ಪಳಾ ಬೆತ್ತಲೆ ಕುಳಿತು ಮೈದೊಳೆವಳ ನಾದಿನಿ ಅತ್ತೆ ಮಾವನ ಬೈವವಳೆಳೆದು ತನ್ನೀರೆಂದು 1 ತಿಲಕಾಯುಧವ ಬಿಟ್ಟು ಕುಂಕುಮವಿಡುವಳ ಬೆಳಗಾದ ಕಾಲಕ್ಕೂ ಮಲಗಿಪ್ಪಳ ಮಲಿನ ವಸ್ತ್ರದಲಿ ಪತಿಯ ಬಳಿಗೆ ಪೋಗುವಳ ಕಲಹಕಾರಿಯ ಹಿಡಿದೆಳೆದು ತನ್ನಿರಿಯೆಂದು 2 ಉತ್ತಮ ಗುರುಹಿರಿಯರನು ನಿಂದಿಸುವಳ ಪೆತ್ತ ಮಕ್ಕಳ ಮಾರಿ ಬದುಕುವಳ ಪ್ರತ್ಯೇಕ ಶಯ್ಯದಿ ಮಲಗಿ ಇಪ್ಪಳ ಪಿಡಿ ದೆತ್ತ ಎಳೆದು ತಂದು ನರಕದಲ್ಲಿಡಿರೆಂದು 3 ಜಲ ಜಕ್ಕಿ ಸಾಳಿ ಕಂಬಳಿ ಬೋಳಿ ಬಕ್ಕಿ ಗೊಂ ಡಳಿ ಮೊದಲಾದವು ದೈವವೆಂದು ತಿಳಿದು ಪಿಶಾಚಿ ಎಂಜಲ ಉಂಡು ಹಿಗ್ಗುವ ಲಲನೇರಾ ಸೆಳೆದು ತನ್ನಿರೋ ಎಂದು 4 ನಾಗೇಂದ್ರ ಶಯನನ ದಿನದುಪವಾಸದ ಜಾಗರ ಮಾಡದೆ ಮಲಗಿಪ್ಪಳಾ ಭಾಗವತ ಸಚ್ಛಾಸ್ತ್ರ ಕೇಳದೆ ಉನ್ಮತ್ತ ಳಾಗಿರುವಳ ಎಳೆದು ತನ್ನಿರೆಂದು 5 ಗಂಡ ನಿರ್ಧನಿಕನೆಂದಪಮಾನ ಮಾಳ್ಪಳ ಉಂಡ ಶೇಷಾನ್ನುವನುಣಿಸುವಳಾ ಕೊಂಡೆ ಮಾತುಗಳಾಡಿ ಕಳವಳಗೊಳಿಪಳ ಮಂಡೆಗೊದಲು ಹಿಡಿದು ಎಳೆದು ತನ್ನಿರಿ ಎಂದು6 ಉಡಲಿಲ್ಲ ಉಣಲಿಲ್ಲ ಇಡಲಿಲ್ಲ ತೊಡಲಿಲ್ಲ ಸುಡಲಿಗಂಡನ ಒಗೆತನವೆನ್ನುತಾ ಹಡೆದವರನು ನುಡಿನುಡಿಗೆ ಬಯ್ಯುತಿಪ್ಪಂಥ ಕಡು ಪಾಪಿಗಳ ಹೆಡ ಮುಡಿಗಟ್ಟಿ ತನ್ನಿರಿ ಎಂದು7 ಸಾಲೆಡೆಯಲಿ ಭೇದ ಮಾಡಿ ಬಡಿಸುವಳ ನೀಲಾಂಬರವನುಟ್ಟು ಮಡಿಯೆಂಬಳ ಬಾಲಕರ ಬಡಿದಳಿಸುತಿಪ್ಪಳ ಹಿಂ ಗಾಲ ತೊಳೆಯದವಳ ಎಳೆದು ತನ್ನಿರೋ ಎಂದು8 ಪತಿಗೆ ಬೇಕಾದವರ ಅಪಮಾನ ಮಾಳ್ಪಳ ಮೃತವತ್ಸ ಗೋವಿನ ಪಾಲುಂಬಳಾ ಹುತವಾದ ಅಗ್ನಿ ತೊಳೆದು ನಂದಿಸುವಳ ಮತಿಗೇಡಿಯ ಬಿಡದೆಳೆದು ತನ್ನಿರೋ ಎಂದು 9 ಒಲಿವ ಔಷಧ ಮಾಡಿ ಪತಿಯ ಬಳಲಿಸುವಳ ಮಲಮಕ್ಕಳೊಳು ಮತ್ಸರಿಸುತಿಪ್ಪಳಾ ಕಳವಿಲಿ ಕಾಂತನ ಧನವ ವಂಚಿಸುವಳ ಗಳಕೆ ಪಾಶವ ಕಟ್ಟ ಎಳೆದು ತನ್ನಿರೋ ಎಂದು 10 ಮಿಥ್ಯಾವಾದಿಯ ಕೂಡ ಸ್ನೇಹ ಮಾಳ್ಪಳಾ ವೃತ್ತಿಲಿ ಬದುಕುವಳೆಳೆದು ತನ್ನಿರೋ ಎಂದು 11 ಲಶನು ವೃಂತಕಾದಿಗಳನು ಭಕ್ಷಿಸುವಳಾ ಸೊಸೆಯರೊಡನೆ ಮತ್ಸರಿಸುತಿಪ್ಪಳಾ ಹಸಿದು ಬಂದವರಿಗೆ ಅಶನವಿಲ್ಲೆಂಬಳಾ ಉಸಿರು ಬಿಡದಂತೆ ಎಳೆದು ತನ್ನಿರೊ ಎಂದು 12 ತುಲಸಿ ವೃಂದಾವನಕಭಿನಮಿಸದವಳ ಜಲವ ಸೋಸದೆ ಪಾನವ ಮಾಳ್ಪಳಾ ಫಲ ಧಾನ್ಯಾದಿಗಳ ನೋಡದೆ ಪಾಕ ಮಾಳ್ಪಳ ಮಳೆ ಗಾಳಿ ನಿಂದಿಪಳ ಎಳೆದು ತನ್ನಿರೋ ಎಂದ 13 ಮೀಸಲು ಮಡಿ ಎನ್ನದೆ ಭಕ್ಷಿಸುವಳ ಕೇಶಿಯೊಡನೆ ಗೆಳೆತನ ಮಾಳ್ಪಳ ದಾಸೆರಿಂದಲಿ ಪಾಕ ಪಾತ್ರೆ ಮುಟ್ಟಿಸುವಳ ನಾಸಿಕ ಬಂಧಿಸಿ ಎಳೆ ತನ್ನಿರೋ 14 ಬಾಲಕರನು ತೊಟ್ಟ್ಟಿಲೊಳಿಟ್ಟು ತೂಗುತ ಪಾಲೆರೆವುತ ಬೀಸುತ ಕಟ್ಟುತಾ ಆಲಯದೊಳು ಕೆಲಸಗಳ ಮಾಡುತ ಲಕ್ಷ್ಮೀ ಲೋಲನ ಗುಣವ ಪಾಡುವರ ಮುಟ್ಟದಿರೆಂದು15 ಅರಿಷಣ ಕುಂಕುಮ ಪುಷ್ಟಾಂಜನ ವಸ್ತ್ರಾ ಸರಸವಾಡುತ ಸುಖ ಹರಿಗೆ ಅರ್ಪಿತವೆಂಬ ಹರಿದ್ದೇರಿದೆಡೆಗೆ ಕೈಮುಗಿದು ಬನ್ನಿರಿ ಎಂದು16 ಅಗಣಿತ ಮಹಿಮ ಶ್ರೀ ಜಗನ್ನಾಥ ವಿಠಲನ್ನ ಬಗೆಬಗೆಯಿಂದ ಪಾಡುತಲೀ ಹೊಗಳುವ ದಾಸರ ಬಗೆಯ ನೇಮಿಸಿ ಕಾಯ್ವ ಸುಗುಣೇರಿದ್ದೆಡೆಗೆ ಕೈಮುಗಿದು ಬನ್ನಿರೆಂದು 17
--------------
ಜಗನ್ನಾಥದಾಸರು
ಸಿರಿಯ ಮದವೆ ಮುಕುಂದ - ನಿನ್ನಚರಣ ಸೇವಕನ ಬಿನ್ನಹ ಪರಾಕೆಲೊ ದೇವ ಪ ಅಷ್ಟದಿಕ್ಪಾಲಕರ ಮಧ್ಯದಲಿ ವೈಕುಂಠಪಟ್ಟಣವು, ಸಿರಿಯೋಲಗವ ನಿತ್ಯದಿಕಟ್ಟಿ ಓಲೈಸುತಿಹ ದಾಸರನಿಮಿಷರು, ಮನಮುಟ್ಟಿ ಪಾಡುವ ನಾರದರ ಗೀತ ಸಂಭ್ರಮದ 1 ಸಕಲ ಐಸಿರಿಯ ಅಧಿದೇವಿಯೆ ಪಿರಿಯರಸಿಯುಕುತಿಯೊಳು ಲೋಕಗಳ ಸೃಜಿಸುವಂಥಶಕುತ ನಿನ್ನಯ ಹಿರಿಯ ಮಗನು, ಜೀವಿಗಳ ಮೋ-ಹಕದಿ ಮರುಳು ಮಾಳ್ಪಾತ ಕಿರಿಮಗನೆಂಬ 2 ಅರಿ ಹೃದಯದಲ್ಲಣನೆಂಬ ಬಿರುದು ಸಾಹಸಇಲ್ಲ ನಿನಗಾರು ಇದಿರೆಂಬ ಗರ್ವದಿ ಎನ್ನಸೊಲ್ಲು ಕಿವಿ ಕೇಳದಂತಾಯಿತೆ ಹರಿಯೆ ? 3 ಶೇಷ ಹಾಸು ಮಂಚವು, ಗರುಡ ತುರುಗವು, ಪೀತವಾಸದುಡುಗೆಯು, ಕೊರಳಲಿ ವೈಜಯಂತಿಮೀಸಲಳಿಯದ ಪುಷ್ಪಮಾಲೆಗಳ ಧರಿಸಿ ಜಗದೀಶನೆಂಬುವ ಬಿರುದು ಹೊಗಳಿಸಿಕೊಳ್ಳುವ 4 ಭಕ್ತವತ್ಸಲನೆಂಬ ಬಿರುದು ಬಿಡು, ಅಲ್ಲದೊಡೆಶಕ್ತ ಎನ್ನನು ಕಾಯೋ ಸುಲಭದಿಂದಮುಕ್ತಿಯನ್ನು ಪ್ರಕಟಿಸಲು ಲೋಕದೊಳು ಭಜಕರ್ಗೆಯುಕ್ತ ಕರ್ತ ಕಾಗಿನೆಲೆಯಾದಿಕೇಶವರಾಯ5
--------------
ಕನಕದಾಸ
ಸೀತಾಪತಿವಿಠಲ ದಾಸಳ ನಿರ್ಯಾಣ ಪದ ಮಾಧವನಾ ಪುರ ಸೇರಲು ಬೇಗ ಪ. ಪುಟ್ಟಿದಾರಭ್ಯದಿ ನಿಷ್ಟೆನೇಮದೊಳಿದ್ದು ಕಷ್ಟಪರಂಪರೆ ಸಹಿಸುತ ಜಗದಿ ಹರಿಯ ಕರುಣದಿ ಗುರುಕೃಪೆ ಪಡೆದಿ 1 ಹಿರಿಯೂರೆನ್ನುವ ಪುರ ವರ ವೇದಾವತಿ ತೀರ ಪರಮ ಸಾತ್ವಿಕರಲ್ಲಿ ಜನುಮ ತಳೆದಿ ತುಳಸಿಯ ವರದಿ ಮುದ್ದಿನಿಂ ಬೆಳೆದಿ 2 ಶಿಷ್ಟ ಸಂಪ್ರದಾಯ ಕಟ್ಟಿನೊಳಗೆ ನಿನ ಗಷ್ಟಮ ವರುಷದಿ ಮದುವೆಯ ಮಾಡಿ ಹರುಷವಗೂಡಿ ಹರಿಯ ಕೊಂಡಾಡಿ3 ಸತಿ ರುಕ್ಮಿಣೀಬಾಯಿ ಹೆಸರಿನಿಂ ಬಾಳ್ವೆಯ ಬಹು ಅಲ್ಪಕಾಲ ಕೊಟ್ಟನೆ ಸಿರಿಲೋಲ ಮುಸುಕಿತು ಮಾಯಜಾಲ 4 ಸಂಸಾರ ಕೈಕೊಂಡು ವಂಶಕೊಬ್ಬನ ಪಡೆದು ಕಂಸಾರಿ ಕರುಣದಿ ಇರುತಿರೆ ನೀನು ವಿಧಿ ತಂದೊಡ್ಡಿದನು 5 ಎರಡು ವರ್ಷದ ಮಗುವ ಕರದಲ್ಲಿ ಕೈಕೊಂಡು ಪರಿಪರಿ ಕಷ್ಟದಿ ಶಿಶುವ ಬೆಳೆಸಿದೆ ವಿದ್ಯೆ ಕಲಿಸಿದೆ ಪುತ್ರಗ್ಹರಸಿದೆ 6 ಒಬ್ಬ ಆ ಮಗನರ್ಥಿ ಸಂಸಾರವನೆ ಕಂಡು ಉಬ್ಬಿ ಹರುಷಾದಲ್ಲಿ ಇರುತಿರೆ ನೀನು ಮೊಮ್ಮಕ್ಕಳನು ಪಡೆದೆ ನಾಲ್ವರನು 7 ಘಟಿಸುತ ಸ್ವಪ್ನದಿ ಸೇವೆಗೈಯ್ಯೆಂದು ಅಭಯವನಂದು ಕೊಡಲು ದಯಸಿಂಧು 8 ಮರುದಿನ ಮನೆಯಲ್ಲೆ ಭರದಿ ಸೇವೆಯ ಕೊಂಡು ಹರಿವಾಯುಗಳನಿಟ್ಟು ಸುತ್ತುವರಿಯುತ್ತ ಎಡವಿ ಬೀಳುತ್ತ ಪ್ರದಕ್ಷಿಣೆ ಬರುತಾ 9 ಒಲಿದು ಆ ಭಕ್ತಿಗೆ ವರನೇತ್ರವಿತ್ತನು ನಳಿನನಾಭನ ಭಕ್ತ ಘಟಿಕಾಚಲನಿಲಯ ಭಾರತಿಪ್ರೀಯ ದಿವಿಜರ ಒಡೆಯ 10 ಭಕ್ತಿ ವಿರಕ್ತಿ ಜ್ಞಾನವು ಚಿತ್ತದಿ ಮೂಡಿ ಸೋತ್ತಮರಾದ ಶ್ರೀ ವಿಬುಧರ ದಯದಿ ಮೋಕ್ಷಸಾಧನದಿ ದಿನಗಳ ಕಳೆದಿ 11 ಶ್ರವಣ ಕೀರ್ತನ ಸ್ಮರಣೆ ಮನನಾದಿಗಳನೆಲ್ಲ ತವಕದಿ ಕೈಕೊಂಡು ಮೋದದಿ ಮೆರೆದಿ ಕಷ್ಟವ ಮೆರೆದಿ ಹರಿಗುರು ದಯದಿ 12 ಪ್ರಥಮ ಯಾಮದಲೆದ್ದು ಜಿತಮನದಿಂದ ಶ್ರೀ ಪತಿಯ ಸ್ತೋತ್ರಗಳನ್ನು ವದನದಿ ಸತತ ಪರಿಯಂತ 13 ಉಚ್ಛಸ್ವರದಿ ನೀನು ಪಾಡಿದ್ಹಾಡುಗಳಿಂದು ಅಚ್ಚಳಿಯದೆ ನಮ್ಮ ಸ್ಮರಣೆಯೊಳ್ನಿಂತು ಹರುಷವನಾಂತು ಮರೆಯುವುದೆಂತು 14 ವೃದ್ಧಾಪ್ಯ ತಲೆದೋರೆ ಇದ್ದೊಬ್ಬ ಪುತ್ರನು ಪದ್ಮನಾಭನ ಪುರ ಸೇರಿ ನಿನ್ನಗಲಿ ದುಃಖದಿ ಬಳಲಿ ತೊಳಲಿದೆ ಬಳಲಿ 15 ಪೌತ್ರರಿಬ್ಬರು ನಿನ್ನ ಹೆತ್ತಮ್ಮನಂದದಿ ಚಿತ್ತದಿ ತಿಳಿದಿನ್ನು ಸಲಹುತ್ತಿರಲು ಹರಿದಯ ಬರಲು ದುಃಖ ಮರೆಯಲು 16 ಕಲ್ಯಾಣನಗರದಿ ಕಿರಿಯ ಮೊಮ್ಮಗನಿರೆ ಆಹ್ಲಾದದಿಂದ ನೀನವನಲ್ಲಿ ಇರಲು ಸದ್ಗುರು ಬರಲು ಜ್ಞಾನವೆರೆಯಲು 17 ಹರಿದಾಸಕೂಟದ ವರ ಅಂಕಿತವ ಕೊಂಡು ಗುರುಕರುಣವ ಪೊಂದಿ ನೀ ನಮಗೆಲ್ಲ ಸನ್ಮಾರ್ಗಕ್ಕೆಲ್ಲ ಮೊದಲಾದೆಯಲ್ಲ 18 ಶ್ರೀ ತಂದೆ ಮುದ್ದುಮೋಹನದಾಸರ ದಯದಿ ಸೀತಾಪತಿವಿಠ್ಠಲನ್ನ ಒಲಿಸಿದೆ ಧ್ಯಾನದೋಳ್ತಂದೆ ಆನಂದಪಡೆದೆ 19 ಕಂಚಿ ಕಾಳಹಸ್ತಿ ಶ್ರೀ ರಂಗಯಾತ್ರೆಯ ಸಂಚಿಂತನೇಯಿಂದ ಗೈದೆಯೆ ನೀನು ಗಳಿಸಿದೆ ಇನ್ನು ಭಕುತಿಯ ಪೊನ್ನು 20 ಉಡುಪಿ ಮಂತ್ರಾಲಯ ಸೇತು ರಾಮೇಶ್ವರ ಕಡು ಭಕ್ತಿಯಲಿ ತಿರುಪತಿ ಕ್ಷೇತ್ರ ಚರಿಸಿ ಕಷ್ಟವ ಸಹಿಸಿ ಶ್ರೀ ಹರಿಗೆ ಅರ್ಪಿಸಿ 21 ಕಡುಕೃಪೆಯಿಂದಂದು ಕಣ್ಣನ್ನೆ ಕೊಟ್ಟಂತ ಮೃಡಪಿತ ಘಟಿಕಾಚಲೇಶನ್ನ ಕೂಡಿ ಕಣ್ತುಂಬ ನೋಡಿ ತನುವನೀಡಾಡಿ22 ಅಂತರಂಗದ ಬಿಂಬ ಸರ್ವಾಂತರ್ಯಾಮಿ ಎಂ ತೆಂಬಂಥ ಚಿಂತನೆ ಸಂತತಗೈದೆ ಅಭಿಮಾನ ತೊರೆದೆ ದ್ವಂದ್ವ ಸಹಿಸಿದೆ 23 ವ್ರತನೇಮ ಜಪತಪ ಸತತದಿಗೈಯ್ಯುತ್ತ ಕ್ಷಿತಿವಾರ್ತೆಗೆಳಸಾದೆ ಮನವನ್ನೆ ಸೆಳೆದು ಹರಿಪಾದಕ್ಕೆರದು ಹಿತವನ್ನೆ ಮರೆದು 24 ಭಾಗವತಾದಿ ಸಚ್ಛಾಶ್ತ್ರ ಶ್ರವಣಗೈದು ಜಾಗ್ರತಳಾದಿ ಭೂಸುರರ ಸೇವೆಯಲಿ ಸೂಕ್ಷ್ಮಧರ್ಮದಲಿ ಪುಣ್ಯಗಳಿಸುತಲಿ 25 ಸತತಬಿಂಬಕ್ರಿಯ ವ್ರತವಂದೆ ಕೈಕೊಂಡು ಜತನದಿ ಮರೆಯದೆ ಪ್ರತಿಕಾರ್ಯದಲ್ಲಿ ಅರ್ಪಿಸಿ ಹರಿಯಲ್ಲಿ ಇದ್ದೆ ಮೋದದಲಿ 26 ಮುಖ್ಯಪ್ರಾಣನ ದಯ ಮುಖ್ಯಮಾಡುತ ಇನ್ನು ಅಕ್ಕರೆ ಭಕ್ತಿಯ ತೋರಿದೆ ನೀನು ಬೆನ್ನು ಬಿಡದವನು ನಿನ್ನ ಸಲಹಿದನು 27 ಭಾರತಿಪತಿ ಮುಖ್ಯಪ್ರಾಣಾಂತರ್ಗತನೆಂಬ ವಾರುತಿ ಇಲ್ಲದ ವಚನವೆ ಇಲ್ಲಾ ನಿನ್ನ ಈ ಸೊಲ್ಲ ಮರೆಯಲೊಶವಲ್ಲ 28 ಶ್ರೀ ರಾಮಚಂದ್ರನ ಆರಾಧನೆಯಗೈದು ಸಾರತತ್ವವ ತಿಳಿದು ಸಾಧಿಸಿ ಪಥವ ಸಹಸ್ರಾರು ಜಪವ ಗೈದೆ ತಪವ 29 ನೀ ಹಾಡಿದ ಸ್ತೋತ್ರ ನಿನ್ನ ಸನ್ಮಾರ್ಗವ ನನ್ನೆಯಿಂದಲಿ ಎರೆದೆ ಹೆಣ್ಣು ಮಕ್ಕಳಿಗೆ ಸ್ಮರಿಸುವರೀಗೆ ಸತ್ಕೀರ್ತಿಯದಾಗೆ 30 ಹರಿ ಗುರು ವರತತ್ವ ದಿವಿಜರಭಿಮಾನಿಗಳ ನಿರುತದಿ ಚಿಂತಿಸಿ ಸಾಧನಗೈದೆ ಕಾಲವ ಕಳೆದೆ ಹರಿಪಾದಕ್ಕೆರೆದೆÀ 31 ಬಿಂಬಾನು ಸಂಧಾನ ಚತುರಳಾಗಿ ನೀನು ಸಂಭ್ರಮದಿಂದ ಶ್ರೀ ಮಧ್ವಶಾಸ್ತ್ರದಲಿ ಮನಸ ನೀಡುತಲಿ ಸುಖ ಸುರಿಯಲಿ 32 ಒದ್ದು ತಾಪತ್ರಯ ಸದ್ಗುರು ಕೃಪೆ ಪೊಂದಿ ಗೆದ್ದೆ ನೀ ಸುಲಭದಿ ಭವದ ಬಂಧನವ ಪಡೆದೆ ಹರಿ ದಯವ ಕೊಟ್ಟಿತೆ ಮುದವ 33 ಪೇಳಲೋಶವೆ ಹೇ ದಯಾಳು ನಿನ್ನಯ ಗುಣ ಬಾಳಿದೆ ಧರೆಯೊಳು ತೊಂಬತ್ತೈದೊರುಷ ವೃದ್ಧಾಪ್ಯದೋಷ ನಿನಗಿಲ್ಲ ಲೇಶ 34 ಇಂದ್ರಿಯಂಗಳು ಎಲ್ಲ ಒಂದು ಕುಗ್ಗದೆ ಒಬ್ಬ ರಿಂದಲು ಸೇವೆಯ ಕೊಳದೆ ಲವಲವಿಕೆ ಯಿಂದಿರುವ ಬಯಕೆ ಸಲಿಸೀತೆ ಮನಕೆ 35 ಕಿರಿಯ ಮೊಮ್ಮೊಗ ರಮಾಕಾಂತನಲ್ಲಿರುತಿರೆ ಕರೆಹೇಳಿ ಕಳುಹಿದ ಹರಿ ತನ್ನ ಪುರಕೆ ಕ್ಲಿಪ್ತಕಾಲಕ್ಕೆ ಆಗೆ ಮನವರಿಕೆ 36 ತೊರೆದೈದು ದಿನ ಅನ್ನ ಹರಿಧ್ಯಾನಂಗತಳಾಗಿ ವರ ಗಂಗೆ ವದನದಿ ಪ್ರಾಶನಗೈದು ಅಭಿಮಾನ ತೊರೆದು ಭ್ರಾಂತಿಯ ಮೆರೆದು 37 ವರಹಜೆ ತುಂಗ ತೀರದಿ ಪ್ರಾಣನಾಥನ ಚರಣಮೂಲದಿ ಶಿವಮೊಗ್ಗ ಕ್ಷೇತ್ರದಲಿ ಹರಿಸ್ಮರಣೆಯಲಿ ಪ್ರಾಣ ಸಲಿಸುತಲಿ 38 ಸ್ವಭಾನುವತ್ಸರ ಭಾದ್ರಪದ ಬಹುಳ ಇದ್ದ ದಶಮಿ ದಿನ ಗುರುವಾರದಲ್ಲಿ ಮಧ್ಯರಾತ್ರಿಯಲಿ ತನು ತೊರೆದಿಲ್ಲಿ 39 ಕೇಶವದೂತರು ಮೀಸಲಿಂದಲಿ ನಿನ್ನ ಘಾಸಿಗೊಳಿಸದೆ ಕರೆದೊಯ್ದರೇನಮ್ಮ ಪೇಳೆ ಎನ್ನಮ್ಮ ಎಲ್ಲಿ ಪೋದ್ಯಮ್ಮ 40 ಹೆತ್ತಮ್ಮಗಿಂತಲೂ ಹೆಚ್ಚಾಗಿ ನಮ್ಮನ್ನು ಅರ್ಥಿಯಿಂ ಬೆಳೆಸಿದೆ ಅಭಿಮಾನದಿಂದ ಅನುರಾಗದಿಂದ ಬಹುಮಾನದಿಂದ 41 ಮೊಮಕ್ಕಳೆಂದರೆ ಬಹು ಪ್ರೀತಿ ನಿನಗಲ್ಲೆ ಒಮ್ಮೆ ನಾಲ್ವರು ಬಂದು ಇರುವೆವು ನಾವು ಆಲ್ಪರಿಯುವೆವು ಅಗಲಿ ಸೈರಿಸೆವು 42 ಅರ್ಥಿಲಿ ರಮಾಕಾಂತ ವಿಠಲಾಂಕಿತ ಕೃಷ್ಣ ಮೂರ್ತಿಯು ಪುತ್ರಗಿಂತಧಿಕದಿ ನಿನ್ನ ಅಂತ್ಯಕ್ರಿಯವನ್ನ ಮಾಡಿದ ಧನ್ಯ 43 ಶ್ರದ್ಧೆಯಿಂದಗ್ರಜನಿಂದ ಕೂಡುತ ನಿನ್ನ ಶುದ್ಧಭಾವದಿಗೈದ ಅಂತ್ಯಸೇವೆಯನು ಸ್ವೀಕರಿಸಿ ನೀನು ಹರಸಿ ಹಿತವನ್ನು 44 ತಿಳಿದು ತಿಳಿಯದೆ ನಾನು ಗೈದಪರಾಧವ ನಲವಿಂದ ಕ್ಷಮಿಸಿ ನಮ್ಮನು ಮನ್ನಿಸಿದೆ ಸಹನವ ತಳದೆ ಬಹು ಪ್ರೀತಿಗೈದೆ 45 ಎಲ್ಲ ಪರಿಯಲಿ ನಮ್ಮ ಕ್ಷಮಿಸಿ ಕಾಪಾಡಮ್ಮ ಬಲ್ಲಿದಳು ನೀನು ಆಶೀರ್ವದಿಸುವುದು ಸುಖವ ತೋರುವುದು ಕೃಪೆಯ ಮಾಡುವುದು 46 ಅಂಜನೆಕಂದ ನಿನ್ನವನೆಂಬ ಅಭಿಮಾನ ರಂಜಿಸೆ ಸಹಜದಿ ನಿನ್ನೊಳು ಮಾತೆ ಜಗದಿ ವಿಖ್ಯಾತೆ ಹರಿಗತಿಪ್ರೀತೆ 47 ಪತಿಗುರು ಪವನ ಹೃದ್ಗತಮೂರ್ತಿ ಚಿಂತನ ರತಳೆ ನಿನ್ನಯ ಚರಿತೆ ಪೇಳ್ದೆ ತಿಳಿದನಿತು ತಪ್ಪನು ಮರೆತು ಲಾಲಿಸು ಮಾತು 48 ಗೋಪಾಲಕೃಷ್ಣವಿಠಲನ ಸದ್ಭಕ್ತಳೆ ಶ್ರೀ ಪಾದಕ್ಕೆರಗಿ ನಾ ಜಯವ ಪಾಡುವೆನು ಧನ್ಯಳೇ ನೀನು ಮಾನ್ಯಳೆ ನೀನು 49
--------------
ಅಂಬಾಬಾಯಿ
ಸುಗುಣಿಯರಿಬ್ಬರು ಬಂದು ಹಗರಣವ ಮಾಡಿದರವ್ವ ಹಗರಣವ ಮಾಡಿದರವ್ವನಗÀಧರನ ಮುಂದೆ ನಾಚಿಕೆ ಇಲ್ಲವ್ವ ಪ. ಸಿಟ್ಟಿಲೆ ತನ್ನೆದೆಯ ಗಟ್ಟಸಿದಳವ್ವತಾ ಗಟ್ಟಿಸಿದಳವ್ವಕಷ್ಟದಿ ಭೀಷ್ಮಿಯುನಿಟ್ಟುಸಿರು ಹಾಕಿದಳವ್ವ1 ಇತ್ತ ದೂತೆಯು ತಾಥಟ್ಟನೆ ಬಂದಳವ್ವತಾ ಥಟ್ಟನೆ ಬಂದಳವ್ವಇಷ್ಟ ಏನೆಂದು ನೆಟ್ಟನೆ ಕೇಳಿದಳವ್ವ2 ಎಷ್ಟು ಹೇಳಲಿ ಈಕೆಎದೆಗಿಚ್ಚಿನವಳವ್ವಭಾವೆ ಎದೆಗಿಚ್ಚಿನವಳವ್ವÀ ಕೃಷ್ಣಗೆ ಕರೆದು ಕೊಟ್ಟಳು ವೀಳ್ಯವವ್ವ 3 ಕೆಟ್ಟ ರುಕ್ಮಿಣಿಯು ಕಲಹಗಾರುತಿಯವ್ವಬಲು ಕಲಹಗಾರುತಿಯವ್ವಅಗ್ಗಿಷ್ಟಿಗೆ ಆದಳು ಅತಿ ಸಿಟ್ಟಿನ ಹುಲಿಯವ್ವ4 ಚಿಕ್ಕ ಚೇಳೆಂದು ಬಲು ಅಕ್ಕರೆ ತೋರಿದೆನವ್ವ ಬಲು ಅಕ್ಕರೆ ತೋರಿದೆನವ್ವಭಾವೆಯ ಉಕ್ಕುಹೇಳಲು ಎನಗೆ ಶಕ್ಯ ಇಲ್ಲವ್ವ5 ಉರಗ ಹಿರಿಯದೆಂದು ಎರಗೊದೇನವ್ವಅದಕೆ ಎರಗೋದೆನವ್ವ ಉರವಣಿಗೆ ರುಕ್ಮಿಣಿಯಮುರಿಯಲಿಲ್ಲವ್ವ 6 ಕೆಂಜಿಗ ಕಚ್ಚಲು ಅಂಜೋರೇನವ್ವಅದಕಂಜುವರೇನವ್ವಭಾವೆಯ ಮಂಜುಳವಾಣಿ ಮೂಲೆಗೆ ಬೀಳಲೆವ್ವ 7 ಹದ್ದುಕುಕ್ಕಿದರೆ ಗದ್ದರಿಸೋರೇನವ್ವಅಂಜಿ ಗದ್ದರಿಸುವರೇನವ್ವರುಕ್ಮಿಣಿಯ ಮುದ್ದು ಮಾತುಗಳಸದ್ದಡಗಲಿಲ್ಲವ್ವ 8 ಒಳ್ಳೆಯವಳಲ್ಲ ಭಾವೆಮುಳ್ಳಿನಂಥವಳವ್ವಬಲುಮುಳ್ಳಿನಂಥವಳವ್ವಇವಳ ತಳ್ಳಿ ಮಾತುಗಳ ತಾಳಲಾರೆನವ್ವ9 ಸುಳ್ಳಿ ರುಕ್ಮಿಣಿ ಶೂಲದಂಥವಳವ್ವಬಲು ಶೂಲದಂಥವಳವ್ವಕಳ್ಳ ಮಾತುಗಳೆಷ್ಟುಕಲಿತಾಡುವಳವ್ವ10 ಮಸೆದ ಕತ್ತಿಯಂತೆ ಎಸೆವಳು ಭಾವೆಯವ್ವಬಲು ಎಸೆವಳು ಭಾವೆಯವ್ವಇವಳ ಹೆಸರು ಅಡಗÀಲಿಎನ್ನ ಉಸಿರು ಮುಟ್ಟಿಲಿಯವ್ವ11 ಬಾಲೆ ರುಕ್ಮಿಯು ಶೂಲದಂಥವಳವ್ವಬಲು ಶೂಲದಂಥವಳವ್ವಕಾಲು ಕೆದರಿಎನ ಮ್ಯಾಲೆ ಬಂದಿಹಳವ್ವ 12 ವೈರಿ ಸವತಿಯುಎನ್ನ ಸರಿಯಳೇನವ್ವ 13 ಶ್ರೇಷ್ಠಳಾದರೆ ನೀಉಚಿತವ ಇಟ್ಟುಕೊಳ್ಳವ್ವನೀ ತೊಟ್ಟುಕೊಳ್ಳವ್ವಇಷ್ಟೊಂದು ಸೊಕ್ಕುಕಟ್ಟಿಡಿಸುವೆನವ್ವ 14 ಸೊಕ್ಕು ಸೊಕ್ಕೆನಲಿಕ್ಕೆ ತಕ್ಕವಳೇನೆ ಭಾವೆಇವಳು ತಕ್ಕವಳೇನೆ ಭಾವೆಇವಳ ಚಕ್ಕಂದಕ್ಕೆ ಹರಿಯುಅಕ್ಕರ ಬಡುವನವ್ವ15 ಅಕ್ಕಸದ ಮಾತು ಕೇಳಲಾರೆನವ್ವನಾ ಕೇಳಲಾರೆನವ್ವಇವಳ ಉಕ್ಕಸಕೆ ಕೃಷ್ಣಧಕ್ಕನೆ ನಾಚಿದನವ್ವ16 ಮುಂಜೆರಗು ಹಿಡಿದು ಗುಂಜಿಸಿ ಎಳೆವೆನವ್ವನಾ ಎಳೆವೆನೆವ್ವಪಂಜರದ ಗಿಳಿಯಂತೆಅಂಜಲಿ ಇವಳವ್ವ17 ಕೈ ಹಿಡಿದು ಕೆಳಗೆ ಎಳೆವೆನವ್ವನಾ ಕೆಳಗೆ ಎಳೆವೆನವ್ವಭಯವೇನವ್ವ ರುಕ್ಮಿಣಿಯ ಭಯವೇನವ್ವಅಯ್ಯೊ ಅಂಜಲ್ಯಾತಕೆ ಸೈ ಸೈಯವ್ವ18 ಎಷ್ಟು ಫಾತುಕಳೆ ನಷ್ಟಳು ಭಾವೆಯವ್ವಬಲು ನಷ್ಟಳು ಭಾವೆಯವ್ವಕೃಷ್ಣನ ತೊಡೆಬಿಟ್ಟು ಇಳಿಸುವೆನವ್ವ19 ಭಾಳೆ ಘಾತುಕಳು ರುಕ್ಮಿಣಿಯವ್ವನೀ ಕೇಳೆ ರುಕ್ಮಿಣಿಯವ್ವಗೈಯ್ಯಾಳಿಯ ತೊಡೆಬಿಟ್ಟು ಇಳಿಸುವೆನವ್ವ20 ಚಂದ್ರನಿಲ್ಲದ ಚಿಕೆÀ್ಕ ಚಂದವೇನವ್ವಅದು ಚಂದವೇನವ್ವನಿಜಳೆ ಎನ್ನಮ್ಯಾಲೆಬಂದಿಹಳ್ಯಾತಕವ್ವ21 ದಾರ ಮಲ್ಲಿಗೆ ನಡುವೆ ತೋರಿದಂತವ್ವಅದು ತೋರಿದಂತವ್ವಇವಳ ಹಿರಿತನವೆಲ್ಲವಅರಿಯೆನವ್ವ22 ಸಿರಿರಮಿ ಅರಸಗೆ ಸರಿಯಿಬ್ಬರು ನೀವÀವ್ವನೀವು ಸರಿಯಿಬ್ಬರವ್ವಬರಿಯೆ ಕರಕರೆಯಹಿರಿಯರಲ್ಲವ್ವ 23
--------------
ಗಲಗಲಿಅವ್ವನವರು
ಸುಲಿದ ಬಾಳೆ ಹಣ್ಣು ಸುಟ್ಟು ತಿನ್ನಬೇಡಿರೊ ಹಳೆಯ ಜನರ ಅನುಭವಗಳ ಹಳಿಯಬೇಡಿರೊ ಬಿಳಿಯ ವಸ್ತುವೆಲ್ಲ ಕ್ಷೀರವಲ್ಲ ಕಾಣಿರೊ ಥಳಥಳಿಸುವುದೆಲ್ಲ ರಜತವಲ್ಲ ಕಾಣಿರೊ ಸಿರಿಯು ಬಂದ ಕಾಲದಲ್ಲಿ ಮೆರೆಯಬೇಡವೋ ಶಿರವು ಗಟ್ಟಿಯೆಂದು ಕಂಬ ಗುದ್ದಬೇಡವೊ ಮನಕೆ ತುಷ್ಟಿಕೊಡದ ಕಾರ್ಯಗಣನೆ ಬೇಡವೊ ಅನುವಿನಲ್ಲಿ ಪಿಡಿದ ಕಾರ್ಯ ಕೊನೆಯಗಾಣಿಸೊ ಹಾವು ಕೊಂದು ಹದ್ದುಗಳಿಗೆ ಹಾಕಬೇಡವೊ ಗೋವು ಕೊಂದು ಪಾದರಕ್ಷೆ ದಾನಬೇಡವೊ 10 ಅರಿಯದ ಜನರಲ್ಲಿ ಅಂತರಂಗಬೇಡವೊ ಪರರ ಗೋಪ್ಯ ತಿಳಿದರೆ ಬಹಿರಂಗಬೇಡವೊ ಜಂಭ ಕೊಚ್ಚಬೇಡವೊ ರಗಳೆ ರಂಪದಿಂದ ಪರರ ಒಲಿಸಬೇಡವೊ ಗೆದ್ದರಾ ಎತ್ತು ಬಾಲವನ್ನು ಹಿಡಿಯಬೇಡವೊ ಒದ್ದರೆ ಅದು ಹಲ್ಲುಗಳನು ಕಿರಿಯಬೇಡವೊ ಮೂರ್ಖ ಜನಗಳಲ್ಲಿ ವಾದ ಮಾಡಬೇಡವೊ ಮಕ್ಕಳೆದುರಿನಲ್ಲಿ ಗ್ರಾಮ್ಯವಚನ ಬೇಡವೊ ಬಳಿಕ ಮಾತನಾಡುವನು ಗೆಳೆಯನಲ್ಲಯ್ಯ ಕುಳಿತು ತಿನ್ನುವವನು ಸಾಹುಕಾರನಲ್ಲಯ್ಯ 20 ಗಂಟು ಜಗಳ ಕದನಗಳಲಿ ತಂಟೆಬೇಡಯ್ಯ ನಂಟರಿಷ್ಟರಲ್ಲಿ ಭಂಟನಾಗಬೇಡಯ್ಯ ನಾಕು ಜನರ ಮಾತ ಮೀರಿ ನಡೆಯಬೇಡÀಯ್ಯ ಪೋಕರಿ ಜನಗಳಲಿ ಮೂಕ ಬದಿರನಂತಿರೊ ಕಾಲದಲ್ಲಿ ಕೆಲಸಮಾಡಿ ಮುಗಿಸೆಲೊ ನಾಳೆ ನಾಳೆಯೆಂಬ ಕೆಲಸ ಹಾಳು ಕಾಣಿರೊ ಬಿಂಕದಿಂದ ಹರಿಗುರುಗಳ ಮರೆಯಬೇಡಯ್ಯ ಸಂಕಟ ಬಂದಾಗ ವೆಂಕಟೇಶ ಬರುವನೆ ಸಾಲ ಸೋಲ ಮಾಡಿ ದಾನ ಧರ್ಮ ಬೇಡಯ್ಯ ಕೇಳದಿರಲು ನೀತಿ ಹೇಳ ಹೋಗಬೇಡಯ್ಯ 31 ಪರರು ನೋಯುವಂಥ ಮಾತನಾಡಬೇಡಯ್ಯ ಉರಿವ ಒಲೆಗೆ ಉಪ್ಪುಕಾಳನೆರಚಬೇಡಯ್ಯ ನೆರೆಯು ಬಾಳುತಿರಲು ನೋಡಿ ಕರಗಬೇಡಯ್ಯ ಬರಿದೆ ಅಯ್ಯೊ ಪಾಪವೆನಲು ಮರುಕವಲ್ಲವೊ ದುರುಳ ಜನಗಳಲ್ಲಿ ಸರಳನಾಗಬೇಡಯ್ಯ ಹರಿಯ ಭಜನೆಯಲ್ಲಿ ಮನದಿ ನಾಚಬೇಡವೊ ತಿರುಕನಂತೆ ಜ್ಞಾನದ ಭಿಕ್ಷೆಯನು ಬೇಡೆಲೊ ತುರುಕನಂತೆ ಕಾಮದ ತಲೆ ಬಡಿದು ಜೀವಿಸೊ ಸಜ್ಜನಗಳು ಸಮ್ಮತಿಸುವ ಮಾರ್ಗದಲಿ ನಡಿ ದುರ್ಜನಗಳು ಪೇಳಿ ತೋರಿದೆಲ್ಲವನು ಬಿಡಿ40 ಫಲದ ಚಿಂತೆಯಿಲ್ಲದಂತೆ ಧರ್ಮಗಳಿಸಿರೊ ಫಲವು ಹರಿಯಧೀನ ಕೆಲಸ ಮಾತ್ರ ನಿನ್ನದೊ ಧ್ಯಾನ ಮಾಡದಿರಲೊ ಮನದಿ ದುಷ್ಟ ವಿಷಯದ ಧ್ಯಾನದಿಂದ ವಿಷಯದಲ್ಲಿ ಸಂಗ ಬರುವುದೊ ಸಂಗದಿಂದ ದುಷ್ಟಭೋಗ ಕಾಮ ಬರುವುದೊ ಭಂಗವಾದ ಕಾಮದಿಂದ ಕೋಪ ಬರುವುದೊ ಕೋಪದಿಂದ ಮನದಲಿ ವ್ಯಾಮೋಹ ಬರುವುದೊ ಈ ಪರಿಮೋಹದಲಿ ಸ್ಮರಣೆ ನಾಶಪಡುವುದು ಸ್ಮøತಿಯು ತಪ್ಪಿದವನ ಬುದ್ಧಿಮೃತಿಯು ಪೊಂದಲು ಕ್ಷಿತಿಯೊಳವಗೆ ಸರ್ವನಾಶವೆಂದು ನುಡಿಯಿದೆ 50 ಜ್ಞಾನಕೆ ಸಮ ಸಂಪತ್ತಿಲ್ಲ ಜನಕೆ ಲೋಕದಿ ಮೌನಕೆ ಸಮ ಗುಹ್ಯಕೆ ಪಾಲಕರಿಲ್ಲವೊ ಜ್ಞಾನ ಸರ್ವಕರ್ಮಗಳನು ದಹಿಸಿಬಿಡುವುದೊ ಜ್ಞಾನದಿಂದ ಪರಮಶಾಂತಿ ಪಡೆಯುಬಹುದೆಲೊ ಚಿರತನ ವರ್ಣಾಶ್ರಮಗಳ ಧರ್ಮ ಬಿಡದಿರೊ ಮಿತಿಯ ಮೀರಿ ಭೋಜನವನು ಮಾಡಬೇಡವೊ ಕಾಲ ಕಳೆಯಬೇಡವೊ ಲೋಕವ ಭಯಪಡಿಸಬೇಡ ನಡೆನುಡಿಗಳಲಿ ಲೋಕಕೆ ಭಯಪಡಲಿಬೇಡ ಧರ್ಮ ಪಥದಲಿ 60 ಶತುಮಿತ್ರರಲ್ಲಿ ಒಂದೆ ಭಾವ ಪಡೆಯೆಲೊ ಸ್ತೋತ್ರ ನಿಂದೆಗಳಿಗೆ ಹಿಗ್ಗಿ ಕುಂದಬೇಡವೊ ಭಕ್ತಜನರ ನಡೆನುಡಿಗಳ ನಿಂದಿಸದಿರೆಲೊ ಯುಕ್ತರವರು ಹಿರಿಯ ದಯಕೆ ಪಾತ್ರರಿವರೊ ಜಗವು ಸತ್ಯ ಬಗೆ ಬಗೆಯಲಿ ಸೊಗಸ ನೋಡೆಲೊ ಜಗಕೆ ಕರ್ತನೋರ್ವಗೆ ಕೈ ಮುಗಿದು ಬೇಡೆಲೊ ದೇಶಕಾಲ ಪಾತ್ರವರಿತು ದಾನ ಮಾಡೆಲೊ ಆಸೆ ಮೋಸಗಳಿಗೆ ಮನವ ಲೇಸು ಕೊಡದಿರೊ ಪರರ ಮನವು ಕೆದರದಂತೆ ನಿಜಹಿತ ನುಡಿಯು ಗುರುತರ ವಾಚನಿಕ ತಪವ ಮರೆಯಬೇಡವೊ 70 ಸರ್ವಕರ್ಮ ಫಲಗಳನ್ನು ಬಿಡುವನೆ ಯತಿಯು ಗರ್ವಮತ್ಸರಾದಿಗಳನು ಬಿಡುವುದೆ ಮತಿಯು ಶರಣು ಹೊಡೆಯೊ ಕರುಣಮಯನ ಚರಣಯುಗಳದಿ ಕರಗತವಾಗುವುದು ನಿನಗೆ ಇಹಪರ ಸುಖವು ಮಮತೆ ಬಿಟ್ಟು ಜಗದಿ ತಗಲಿ ತಗಲದೆ ಇರೆಲೊ ಕಮಲಪತ್ರಗಳಲಿ ಜಲದ ಕಣಗಳ ತೆರದಿ ಶುದ್ಧ ಧರ್ಮಲೇಶವು ತಲೆ ಕಾಯಬಲ್ಲದೊ ಪದ್ಮನಾಭ ಜನರ ಚಿತ್ತಶುದ್ಧಿ ನೋಡುವ ನಾನೆ ಬ್ರಹ್ಮನೆಂಬ ವಾದ ಬಾಳಬಲ್ಲದೆ ತಾನೆ ಬೀಳಲಿರುವ ಮರಕೆ ಕೊಡಲಿ ಏತಕೆ 80 ಜ್ಞಾನತೀರ್ಥಗಳಲಿ ಮುಳುಗಿ ಸ್ನಾನ ಮಾಡೆಲೊ ಜ್ಞಾನಕೆ ಜ್ಯೋತಿಗಳ ಬೆಳಕು ಕಾಣುತಿರುವುದೊ ದಾರುಣ ಸಂಸಾರ ಜಲದಿ ಪಾರುಗಾಣಲು ಧೀರನಾಗಿ ಈಜುವವಗೆ ತಾರಣ ಸುಲಭ ತಲೆಯ ಮೇಲೆ ಕೈಯನಿಟ್ಟು ಕೂಡ ಬೇಡವೊ ಬೆಳಸಿದಂತೆ ತರುಲತೆಗಳು ಫಲಕೊಡುವುದೊ ಮುಂದೆ ಇಟ್ಟ ಹೆಜ್ಜೆಗಳನು ಹಿಂದೆಗೆಯದಿರೊ ಮಂದಿಗಳಿಗೆ ಫಲದಲಿ ಸಂದೇಹ ಬೇಡವೊ ಹುಳಿಯ ರಕ್ತವಿರುವತನಕ ತಲೆಯು ಬಾಗದು ಕಾಲ ಸಾಲದೊ 90 ಪರರ ನುಡಿಗಳನ್ನು ಕದ್ದು ಕೇಳಬೇಡವೊ ಅರಿತು ನಿನ್ನ ಹರಿಯು ಗುದ್ದಿ ಬುದ್ಧಿ ಕಲಿಸುವ ಚಾಡಿಯಾಡ ಬೇಡ ಚಾಡಿ ಕೇಳಬೇಡವೊ ಸೇಡನು ತೀರಿಸುವ ಹೇಡಿಯಾಗಬೇಡವೊ ನಿನ್ನ ಮಾನದಂತೆ ಪರರ ಮಾನವೆಂದರಿಯೆಲೊ ಅನ್ನ ಹಾಕುವವರ ಹರಿಸಿ ಘನ್ನವೆನಿಸೆಲೊ ಕುಲವ ಶೋಧಿಸುತಲಿ ಕನ್ಯೆದಾನ ಮಾಡೆಲೊ ತಲೆಯ ಕ್ರಾಪು ಯೋಗ್ಯತೆಗೆ ಪ್ರಮಾಣವಲ್ಲವೊ ಕರವ ಪಿಡಿಯೆಲೊ ಥಳಕು ಬೆಳಕು ನೋಡಿ ಬಲೆಗೆ ಬೀಳ ಬೇಡವೊ 100 ಗಾಳಿಯು ಬಂದಾಗ ಬೇಗ ತೂರಿ ಕೊಳ್ಳಲೊ ಕಾಲದ ಸ್ಥಿತಿಯರಿತು ತಗ್ಗಿ ಬಗ್ಗಿ ನಡೆಯೆಲೊ ಮೇಲಿನ ದರ್ಜೆಯಲಿ ನಡೆದು ಕೇಳಬೇಡವೊ ನಾಲಗೆ ಚೆನ್ನಿರುವ ನರಗೆ ಜಗಳವಿಲ್ಲವೊ ಇರುಳು ಕಂಡ ಬಾವಿಗೆ ನೀ ಉರುಳಬೇಡವೊ ಶಕ್ತಿ ಇರುವ ಕಾಲದಲ್ಲಿ ಉತ್ತಮನೆನಿಸೊ ಶಕ್ತಿಯಲ್ಲಿದಾಗ ಇದ್ದು ಸತ್ತ ಪ್ರಾಯವೊ ಸ್ವೊತ್ತಮ ಜನರಲ್ಲಿ ನಿಯತ ಭಕ್ತಿ ಮಾಡೆಲೊ ಭಕ್ತಿಯಿಲ್ಲದವಗೆ ಮುಕ್ತಿಯಿಲ್ಲ ಕಾಣಿರೊ 110 ಪಾಪಿಯಾಗಬೇಡ ಇತರ ಜನರ ವಂಚಿಸಿ ಕೋಪ ಮಾಡಬೇಡ ಕೊಟ್ಟ ಋಣವ ಕೇಳಲು ಕೂಪ ಕೂರ್ಮದಂತೆ ಜಗವ ನೋಡಬೇಡವೊ ರೂಪುರಂಗುಗಳಿಗೆ ಮನವ ಸೋಲಬೇಡವೊ ಹಡೆದ ಮಕ್ಕಳುಗಳ ಕಾಲದಲ್ಲಿ ತಿದ್ದೆಲೊ ಗಿಡದಲಿ ಬಗ್ಗಿಸದ ಮರವು ಬಗ್ಗಲಾರದೊ ಕೊಡಲಿಯನ್ನು ಸೇರಿ ಮರದ ಕಾವಿನಂದದಿ ನಡತೆ ಕಲಿಸದಿದ್ದರವರು ಬುಡಕೆ ತರುವರೊ ಗಳಿಸಿದವನ ಧನವು ಬಳಸಿದವನಿಗೆಂದರಿಯೆಲೊ ಬಳಸಲು ನೀತಿಯಲಿ ಧನವ ಗಳಿಸಿ ಸುಖಿಸೆಲೊ 120 ತಿಳಿದು ಮರ್ಮ ಕಲಿ ಪುರುಷನ ನೆಲಕೆ ತುಳಿಯಿರಿ ಗುಹ್ಯ ತತ್ವ ಪೇಳಬೇಡವೊ ನಾಯಿಗಳಿಗೆ ಹವ್ಯದಾನ ಮಾಡಬೇಡವೊ ಕಾಯುವ ಗುರುಚರಣವೆ ಬಲುಶ್ರೇಯವೆನ್ನದೆ ಕರ್ಮ ಸುಡುವುದೆ ಉಣಲು ಬದುಕಬೇಡ ಜಗದಿ ಬದುಕಲು ಉಣೆಲೊ ಜನನ ಮರಣ ನಿಯತ ಕಾಲಗಳಲಿ ಬರುವವೊ ಕೊನೆ ಮೊದಲುಗಳಿಲ್ಲವು ಈ ಜಗಪ್ರವಾಹಕೆ ತನಗೆ ತಾನೆ ಬೀಳದು ಜಗದಾಖ್ಯ ವೃಕ್ಷವು 130 ತಾಳಿದವನು ಬಾಳುವನೆಂದರಿತು ನಡೆಯೆಲೊ ಗಾಳಿಗುದ್ದಿ ಕರಗಳನ್ನು ನೋಯಿಸದಿರೆಲೊ ಬಾಲನೆಂದು ಅರಿತು ಸತತ ಜ್ಞಾನವ ಗಳಿಸೆಲೊ ನಾಳೆಯ ದಿನ ನಂಬದಂತೆ ಧರ್ಮಗಳಿಸೆಲೊ ಹರಿಯುಕೊಟ್ಟ ಕಾಲದಲ್ಲಿ ಪರರ ರಕ್ಷಿಸೊ ಹರಿಯು ಕೊಡದ ಕಾಲದಲ್ಲಿ ಹರುಷ ಬಿಡದಿರೊ ದೂಷಕರನು ಎಂದಿಗು ನೀ ದ್ವೇಷಿಸದಿರೆಲೊ ಹೇಸಿಗೆಯನು ನಾಲಿಗೆಯಲಿ ತೆಗೆದುಬಿಡುವರೊ ಹಳ್ಳಕೆ ಬಿದ್ದವನಮೇಲೆ ಕಲ್ಲೆಸೆಯದಿರೊ ಟೊಳ್ಳು ಹರಟೆಗಾರನೆದರು ನಿಲ್ಲ ಬೇಡವೊ 140 ಒಳ್ಳೆಯ ಫಲಕೊಡುವ ಕಾರ್ಯಗಳು ಚಿಂತಿಸೊ ಜಳ್ಳು ಹುಲ್ಲಿಗಾಗಿ ಬೆವರು ಸುರಿಸಬೇಡವೊ ಬಿಂದು ಬಿಂದು ಸೇರಿ ಸಿಂಧುವಾಯಿತೊ ಹಿಂದಿನ ಮೊಳೆಯಿಂದ ದೊಡ್ಡ ವೃಕ್ಷವಾಯಿತೊ ಒಂದನು ಇನ್ನೊಂದು ಸೇರಿ ಕೋಟಿಯಾಯಿತೊ ಮಂದಿಗಳಿದನರಿತು ಪುಣ್ಯರಾಶಿ ಗಳಿಸಿರೊ ನೆರಳು ನೀರು ಕೊಟ್ಟ ಜನರ ಮರೆಯ ಬೇಡವೊ ಸರಿಯುತಿರುವ ಮಾರಿ ಮಸಣಿ ಕರೆಯಬೇಡವೊ ಅರಿಯದ ಅಜ್ಞಾನಿಯೊಡನೆ ಸರಸಬೇಡವೊ ತರುಗು ತಿನ್ನುವವನ ಕೇಳಬೇಡ ಹಪ್ಪಳ 150 ದೇಹಿಯೆಂದು ಬಂದವನಿಗೆ ನಾಸ್ತಿಯೆನದಿರೊ ಸಾಹಸವನು ಮಾಡದಿರೊ ಪ್ರಬಲ ಜನರಲಿ ಮೋಹಕೆ ತುತ್ತಾಗದಿರೆಲೊ ಪರಸತಿಯರಲಿ ದೇಹಕೆ ಬಲ ಶುದ್ಧಿ ಕೊಡುವ ನಿಯಮ ಬಿಡದಿರೊ ಭಾಗ್ಯಹೀನ ಬಡವನೆಂದು ಜರಿಯಬೇಡವೊ ಯೋಗ್ಯತೆಯನು ತಿಳಿಯಲು ಬಲು ಸುಲಭವಲ್ಲವೊ ಶ್ಲಾಘ್ಯವಾದ ಮೂಲಿಕೆಗಳನರಿಯೆ ಸುಲಭವೆ ಯೋಗ್ಯತೆಯನುಸರಿಸಿ ಬರುವ ಭಾಗ್ಯ ಬೇರಿದೆ ಖ್ಯಾತಿಗಾಗಿ ಆತ್ಮಸ್ತುತಿಯ ಮಾಡಬೇಡವೊ ಕೋತಿಯಂತೆ ಕುಣಿಯಬೇಡ ಸರಿಸಮರೊಳಗೆ 160 ಮೂತಿ ತಿರುಗಬೇಡ ಪರರ ಹಿತನುಡಿಗಳಿಗೆ ಸೋತ ಹಾಸ್ಯ ಮಾಡಬೇಡ ರಸಿಕ ಜನರಲಿ ಹಿರಿಯರು ಸಂದೇಹಪಡುವ ಮಾರ್ಗ ತ್ಯಜಿಸೆಲೊ ಬರಿಯ ಮಾತನಾಡಿ ಬೆನ್ನು ತಟ್ಟ ಬೇಡವೊ ಪರರ ಹಳ್ಳಕ್ಕಿಳಿಸಿ ಆಳ ನೋಡಬೇಡವೊ ಕರಕೆ ಸಿಕ್ಕಿದಾಗ ಹಲ್ಲು ಕಿರಿಯಬೇಡವೊ ಅರಳು ಹುಡುಕಬೇಡವೊ ಎದೆಯು ಒಡೆಯುವಂತೆ ಸುದ್ದಿ ಪೇಳಬೇಡವೊ ಬೀದಿಯಲಿರುವ ಜನಗಳ ಬೇಸರಿಸಬೇಡವೊ ಬೆದೆಯಲಿರುವ ದುರುಳನನ್ನು ಕೆಣಕಬೇಡವೊ 170 ಊರು ಕುರಿಯ ಕಾದು ಗೌಡನೆನಿಸಬೇಡವೊ ದೂರು ತರುವ ಜನರ ಕ್ಷಣದಿ ನಂಬಬೇಡವೊ ನಾರಿಯ ಸಾಹಸವ ನಂಬಿ ದುಡುಕಬೇಡವೊ ಎರಡು ಕರವು ಸೇರದೆ ಚಪ್ಪಾಳೆಯಾಗದು ಕುರುಡನು ತೋರಿಸುವುದೆಲ್ಲ ಮಾರ್ಗವಾಗದು ಕರಡಿಯು ಮೈಯಪರಚಲದು ಸೌಖ್ಯವಾಗದು ಗುರುಗಳ ಬಿಟ್ಟೋದಲು ಉಪದೇಶವಾಗದು ಹರಿಯಭಕುತಿ ಹರಿಯದಿರಲು ಗಾನವಾಗದು ಬರಿಯ ಸ್ವರಗಳುರುಳಿಸೆ ಕೀರ್ತನೆಯದಾಗದು 180 ಕರದಿ ತಟ್ಟೆ ಹೊಳೆಯುಂತಿರೆ ಪುರಾಣವಾಗದು ಕಿರಿಯ ಜನರ ಗುಣಗಾನವು ಭಜನೆಯಾಗದು ಅಕ್ಕಿಗಾಗಿ ಅಲೆವರೆಲ್ಲ ದಾಸರಾಗರು ಬೆಕ್ಕಿನಂತೆ ಕಣ್ಣು ಮುಚ್ಚಿ ಯತಿಗಳಾಗರು ಚಿಕ್ಕ ಜಿರಳೆ ಮೀಸೆಯಿರಲು ರಾಯರಾಗದು ಚಿಕ್ಕ ಕೊಳೆಯ ಚೌಕ ಧರಿಸೆ ಮಡಿಯದಾಗದು ಕದ್ದು ಅವಿತುಕೊಂಬರೆಲ್ಲ ಗರತಿಯಾಗರು ಮದ್ದು ಮಾಟ ಮಾಡುವವರು ಸುದತಿಯಾಗರು ಶುದ್ಧ ಧೈರ್ಯ ನಡತೆಯಿಂದ ನಿಂದ್ಯರಾಗರು ಬುದ್ಧಿ ಬದುಕು ಹೇಳುವವರು ದ್ವೇಷಿಯಾಗರು 190 ರೀತಿ ನೀತಿಗಳನು ಪರಗೆ ಹೇಳಲು ಸುಲಭ ಮಾತನಾಡಿದಂತೆ ಮಾಡಿ ತೋರುವರಿಹರೇ ತಾತನ ಕಾಲದಲ್ಲಿ ನುಡಿದ ಮಾತಿದಲ್ಲವು ಹೋತನ ಗಳಸ್ತನವಿದಲ್ಲ ಕೂತು ಕೇಳರಿ ಗಾದೆಗಳನು ವೇದವೆಂದು ಪೇಳಲುಚಿತವು ಮಾದರಿ ಅಣುಶಕ್ತಿಯಿಂದೆ ಗಾದೆ ಗಾದೆಗು ಪರಮ ಭಾಗವತರ ಚರಿತೆಯೋದಿ ನೋಡಿರಿ ಅರಿಯಬಹುದು ನುಡಿದ ನೀತಿಸಾರವೆಲ್ಲವ ನಾಡುನುಡಿಗಳೆಂದು ಮರೆಯಬೇಡವೆಂದಿಗು ಪಾಡಿದರೆ ಪ್ರಸನ್ನ ಹರಿಯು ನೀಡುವ ಫಲವ 200
--------------
ವಿದ್ಯಾಪ್ರಸನ್ನತೀರ್ಥರು
ಸುವ್ವಿ ಶ್ರೀ ಗುರುನಾಥ ಸುವ್ವಿ ಸದೋದಿತ ಸುವ್ವಿ ಸಾಯೋಜ್ಯದೊಡೆಯನೆ ಸಾಯೋಜ್ಯದೊಡಿಯ ಸದ್ಗುರು ನಮ್ಮಯ್ಯ ಸುವ್ವೆಂದು ಪಾಡಿ ಸಜ್ಜನರೆಲ್ಲ ಧ್ರುವ ಮನವ ಕಣಕವ ಮಾಡಿ ಗಣಪತಿಯ ಬಲಗೊಂಡು ಅನುಮಾನೆಂಬೆಳ್ಳ ಚಿಗಳಿಯ ಅನುಮಾನೆಳ್ಳ ಚಿಗಳಿ ನೆನವು ನೆನಗಡಲಿಯ ಗಣನಾಥಗಿಟ್ಟು ಬಲಗೊಂಡು 1 ಮನವೆಂಬ ಕಣಕವ ಘನವಾಗಿ ಕುಟ್ಟುತ ಜ್ಞಾನ ವೈರಾಗ್ಯದೊಡಗೂಡಿ ಒಡಗೂಡಿ ಕುಟ್ಟುತ ಪ್ರಾಣದ ಸಖಿಯರು ಅನಂದ ಘನವ ಬಲಗೊಂಡು 2 ನಿರ್ಗುಣಾನಂದನು ಸುಗುಣವ ತಾಳಿದ ಅಗಣಿತಗುಣ ಪರಿಪೂರ್ಣ ಪರಿಪೂರ್ಣವಾಗಿಹ ಅಗಮ್ಯನುಪಮ ನಿಗಮ ಗೋಚರನ ಬಲಗೊಳ್ಳಿ 3 ಉತ್ಪತ್ತಿ ಸ್ಥಿತಿ ಲಯ ವಿಸ್ತಾರದೋರಲು ಮತ್ತೆ ತ್ರಿಗುಣವ ತಾಳಿದ ತಾಳಿದ ಸತ್ವ ರಜ ತಮವು ತ್ರಿಮೂತ್ರ್ಯದ ನಿತ್ಯ ನಿರ್ಗುಣನ ಬಲಗೊಳ್ಳಿ 4 ಭಕ್ತರ ಹೊರಿಯಲು ಪೃಥ್ವಿಯೊಳಗಿನ್ನು ಹತ್ತವತಾರ ಧರಿಸಿದ ಭರಿಸಿ ಪೃಥ್ವಿಯೊಳು ಮುಕ್ತಿ ಸಾಧನವಿತ್ತು ಪತಿತಪಾವನನ ಬಲಗೊಳ್ಳಿ 5 ಅನಾಥಜನರ ದೈನ್ಯ ಹರಿಸಲಾಗಿ ಆನಂದದಿಂದ ಪುಟ್ಟಿಹ್ಯ ಪುಟ್ಟಹ್ಯಾನಂದದಿ ಘನ ಗುರುಮೂರ್ತಿಯ ಜ್ಞಾನದಲೊಮ್ಮೆ ಬಲಗೊಳ್ಳಿ 6 ಕುಸುವ ನಿಶ್ಚಯ ಒನಕಿಯ ಕುಸುವ ನಿಶ್ಚಯದ ಒನಕಿ ಹಸ್ತದಿ ಪಿಡಿದು ಹಸನಾಗಿ ಕಣಕ ಕುಟ್ಟುತ 7 ಹಸನದಿಂದ ಕುಟ್ಟಿ ನಾದಿ ಉರಳಿ ಮಾಡಿ ಮದನ ಮೋಹನಗ ಮದುವೀಗ ಮದುವಿಯ ಮನೆಯಲ್ಲಿ ಮುದದಿ ಮೂವತ್ತಾರು ಮೊದಲಾದ ಗುರಿಯ ಮುತ್ತೈದೇರು 8 ಚದುರತನದಲಿ ಒದಗಿ ಮುತ್ತೈದೇರು ಯದುಕುಲೋತ್ತಮನ ನೆನವುತ ನೆನವುತ ಹದನದಿಂದಲಿ ಮನವಿಡುತ ಆದಿ ತ್ರಿಮೂರ್ತಿ ಬಲಗೊಂಡು 9 ಅಸಿಯ ಕಲ್ಲಿ ಒನಕೆ ಉಸಲಾರಗೊಡದೆ ಹಸನಾಗಿ ಕಣಕ ಕುಟ್ಟುತ ಕುಟ್ಟುತ ಮನವೆಂಬ ಕಣಕ ಹಸನವು ಮಾಡಿ ವಿಶ್ವ ವ್ಯಾಪಕನ ಮದುವಿಗೆ 10 ಕುಟ್ಟಿದ ಕಣಕವು ಘಟ್ಟಿಸಿಹ ಮಾಡಿ ಒಟ್ಟಿ ಉನ್ಮನೆಯ ಮುದ್ರಿಯಲಿ ಮುದ್ರಿಲೆ ಒಟ್ಟಲು ದಿಟ್ಟ ಮುತ್ತೈದೇರು ಕೊಟ್ಟ ಸದ್ಗುರು ಹರುಷವ 11 ಜ್ಞಾನ ವೈರಾಗ್ಯವೆಂಬ ಅನಾದಿ ಶಕ್ತ್ಯರು ಕಣಕವ ಕುಟ್ಟಿ ದಣಿದರು ಮನವೆಂಬ ಕಣಕದ ಉರಳೆ ಉನ್ಮನಿಲಿಟ್ಟು ಮೌನ್ಯ ಮೋನದಲಿ ಮುಸುಕಿರೆ 12 ಹಸನಾದ ಕಣಕಲಿ ಹೊಸಪರಿ ಭಕ್ಷ್ಯವು ಹೆಸರಿಟ್ಟು ಏಸು ಪರಿಯಿಂದ ಪರಿಯಿಂದ ಮಾಡುತ ಬೀಸೋರಿಗಿಗಳು ವಾಸುದೇವನ ಮದುವಿಗೆ 13 ಅಡಿಗಿಯ ಮಾಡಿದ ಸಡಗರ ಪೇಳಲಿ ಪೊಡವಿಯೊಳಿನ್ನು ಅಳವಲ್ಲ ಅಳವಲ್ಲದಡಗಿಯ ಕೂಡಿ ಮುತ್ತೈದೇರು ಎಡಿಯು ಮಾಡಿದರು ತಡೆಯದೆ 14 ಒಂದೆ ಸಾಲದಲಿ ಕುಳಿತರು ಕುಳಿತು ಸಾಧು ಜನರ ಮುಂದೆ ಎಡಿ ಮಾಡಿ ಒಂದೊಂದು ಪರಿಯ ಬಡಿಸುತ 15 ಹಪ್ಪಳ ಸೊಂಡಿಗಿ ಉಪ್ಪು ಮೆಣಸುಗಳು ಒಪ್ಪದಿಂದ ಬಡಿಸುತ ಬಡಿಸುತ ತಪ್ಪದೆ ಉಪ್ಪಿನೆಸರಗಳು ಶ್ರೀಪತಿ ಪ್ರಸ್ತದೆಡಿಯಲಿ 16 ಪ್ರಸ್ತದ ಎಡಿಯಲಿ ಪತ್ರ ಶಾಖೆಗಳು ಮತ್ತೆ ಅನೇಕ ಪರಿಯಾದ ಪರಿಯಾದ ಶಾಖವು ಸುತ್ತ ಪಂಕ್ತಿಯಲಿ ಆತ್ಮದಿಂದ ಬಡಿಸುತ 17 ಪರಮಾನ್ನಗಳ ತಂದು ಹಿರಿಯ ಮುತ್ತೈದೇರು ಸರಿಯಾಗಿ ಎಡಿಯ ಬಡಿಸುತ್ತ ಬಡಿಸುತ ಅನ್ನ ಪರಮಾನ್ನ ಅನುಭವದ ಅನಂದದಿಂದ ಬಡಿಸಿದೆ 18 ಮನೋ ಅನುಮಿಷದ ಎಣ್ಣೋರಿಗಿಗಳು ಎಣಕಿಲ್ಲದಿಹ ಭಕ್ಷ್ಯವು ಭಕ್ಷ್ಯದ ಜಿನಸ ಅನೇಕ ಪರಿಯಲಿ ಘನದೊಲುವಿಂದ ಬಡಿಸುತ 1 9 ಸಖರಿ ತುಪ್ಪವು ಭಕ್ತಿಭಾವದಲಾದ ಬಡಿಸುತ ನಡೆದರು ಅಖರದಿಂದಲಿ ಏಕಶಾಂತನ ಮದುವಿಗೆ 20 ಮೊಸರು ಮಜ್ಜಿಗಿಯು ಸುವಾಸದಿಂದಾದ ಲೇಸಾಗಿ ದಣಿಯಬಡಿಸಿರೆ ಬಡಿಸಿದ ಷಡುರಸಾನ್ನವನುಂಡಿನ್ನು ಕಡುಬೇಗ ಪ್ರೇಮ ಉಕ್ಕಿತು 21 ಉಂಡುವೀಳೆಯುವ ಕೊಂಡು ಸಾಧುಸಭೆ ಮಂಡಲದೊಳು ಪೊಗಳಿತು ಪೊಗಳಿತಾ ಮಂಡಲದೊಳು ಪ್ರಚಂಡನ ಮದುವಿ ಅಖಂಡ ಹರುಷದಿ 22 ಗಂಧ ಕಸ್ತುರಿಯ ತಂದೆ ಗುರುಕೃಪೆಯ ಚಂದವಾಗಿಟ್ಟು ಮೆರೆದರು ಮೆರೆದು ಮೇದಿನಿಯೊಳು ಗುರುದಯ ಕರುಣಾದಿ ಪರಮ ಸುಪಥವ ಪಡೆದರು 23 ಮದುವಿ ಮುತ್ತೈದೇರು ಮುಕ್ತಿಸಾಧನ ಕಂಡು ಸುಖಸೂರೆಕೊಂಡಿನ್ನು ಶ್ರೀಮಂತಕರದೊಳು ಬೆರೆದು ಹರುಷವ ಪಡೆದರು24 ಸರಿ ಇಲ್ಲದ ಪ್ರಸ್ತ ಧರೆಯೊಳಗಾಯಿತು ಪರಮಾನಂದದ ಹರುಷಲಿ ಹರುಷವ ಕಂಡಿನ್ನು ಕರುಮುಗಿದು ಮಹಿಪತಿ ಹೃತ್ಕಮಲದಲ್ಲಿ ಸ್ತುತಿಸಿದ 25 ಶ್ರೀಪತಿ ಮದುವಿಯ ಸ್ತುತಿ ಪಾಡಿದವರಿಗೆ ಪಾತಕವಿಲ್ಲ ಭಯವಿಲ್ಲ ಭಯವಿಲ್ಲ ಕ್ಷಿತಿಯೊಳು ಗುರುಭಕ್ತಜನರಿಗೆ ಸಂತತ ಸುಖವ ಪಡೆವರು 26
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಳಾದಿ ಕೌಸ್ತುಭ ಫಾಲ ಸಿಂಗಾಡಿಯಂತಿಪ್ಪ ಪುರ್ಬುಕೂರ್ಮನಂದದಿಗಲ್ಲ ಚುಬುಕ ಚುಬುಕಾಗ್ರದಿಂಸಿರಿಯರಸ ಹಯವದನ ಶೇಷಗಿರಿ ಅರಸನ ಕಿರೀಟದÀಪರಿಪರಿಯ ಸೊಬಗ ನಾ ಕಂಡು ಕೃತಾರ್ಥನಾದೆ ನಾ 1 ಮಠ್ಯತಾಳ ಇಂದಿನದಿನ ಸುದಿನ ಗೋವಿಂದನ ಕಂಡ ಕಾರಣಹಿಂದಿನ ಪಾಪವೃಂದವು ಬೆಂದುಹೋಯಿತು ಎನಗೆಮುಂದಿನ ಮುಕುತಿ ದೊರಕಿತುತಂದೆ ಹಯವದನನೊಲವಿಂದ 2 ತ್ರಿಪುಟತಾಳ ಪಾದ ಪದುಮದ ನೆನಹೊಂದಿದ್ದರೆ ಸಾಕು 3 ರೂಪಕತಾಳ ಗುರು ಭಕುತಿಯಿರಬೇಕು ಹಿರಿಯರ ಕರುಣವು ಬೇಕುಹರಿಕಥೆಗಳ ನಿತ್ಯದಲಿ ಕೇಳುತಿರಬೇಕುವಿರಕುತಿ ಬೇಕು ವಿಷ್ಣುವಿನಾರಾಧನೆ ಬೇಕುವರಮಂತ್ರ ಜಪಬೇಕು ತಪಬೇಕು ಪರಗತಿಗೆಪರಿಪರಿಯ ವ್ರತಬೇಕು ಸಿರಿಪತಿ ಹಯವದನನಪರಮಾನುಗ್ರಹ ಬೇಕು ವಿಷಯನಿಗ್ರಹಬೇಕು 4 ಝಂಪೆತಾಳ ಹರಿಸಗುಣ ಸಾಕಾರ ಸಕಲಸುರರೊಡೆಯ ನಿ-ರ್ಜರರೆಲ್ಲ ಹರಿಯ ಕಿಂಕರರೆಂದರಿಯಬೇಕುಮರಣಜನನ ದೋಷಗಳಿಗತಿ ದೂರತರನೆನಿಪಸ್ಮರಣೆ ಸಂತತಬೇಕು ದುರಾಚಾರ ಬಿಡಬೇಕುಸಿರಿ ಹಯವದನ ಶೇಷಗಿರಿ ಅರಸನಸ್ಮರಣೆಯಿದ್ದವನು ಸಂಸಾರ ಭಯವನುತ್ತರಿಸುವ 5 ಆದಿತಾಳ ಶ್ರೀನಾಥ ಪ್ರಭುವೆತ್ತ ಹೀನಯೋನಿಗಳೊಳುನಾನಾದುಃಖಗಳುಂಬ ಹೀನ ಮಾನವನೆತ್ತಭಾನುಮಂಡಲವೆತ್ತ ಶ್ವಾನನುಬ್ಬರವೆತ್ತಮಾನವ ಹರಿ ನಾನೆಂಬುದ ನೆನೆಯದಿರುದಾನವಕುಲವೈರಿ ಹಯವದನ ವೆಂಕಟಶ್ರೀನಿವಾಸನ ದಾಸರ ದಾಸನೆನಿಸಿಕೊ 6 ಏಕತಾಳ ಕೈವಲ್ಯವನೀವ ನಮ್ಮಶ್ರೀವಲ್ಲಭನ ಕೈಯಿಂದನೀವೆಲ್ಲ ಕ್ಷುದ್ರವ ಬೇಡಿಗಾವಿಲನ ಪೋಲದಿರಿಸಾವಿಲ್ಲದ ಮುಕುತಿಪಥವಬೇಡಿಕೊಳ್ಳಿರೊನೋವಿಲ್ಲದಂತೆ ಸುಖಿಸಬಲ್ಲಕೋವಿದರೆಲ್ಲರುಪೂವಿಲ್ಲನಯ್ಯ ವೆಂಕಟಪತಿ ಹ-ಯವದನನ್ನ ಪ-ದವಲ್ಲದನ್ಯತ್ರ ದಾವಲ್ಲಿ ಭಯ ತಪ್ಪದು 7 ಅಟ್ಟತಾಳ ಗಾತ್ರವ ಬಳಲಿಸಿ ಸ್ತೋತ್ರವ ಪಾಡುತ್ತಯಾತ್ರೆಯ ಮಾಡಿ ವೆಂಕಟೇಶನ ಮೂರ್ತಿಯನೇತ್ರದಿ ನೋಡಿ ತಮ್ಮಿಷ್ಟವ ಪಡೆವ ಸ-ದ್ಭಕ್ತರ ಕಂಡುನಿನ್ನ ಮನದ ಭ್ರಮೆಯ ಬಿಡುದೈತ್ಯ ಪೌಂಡ್ರಕಮತವ ನೆಚ್ಚಿ ಕೆಡಬೇಡಚಿತ್ರಚರಿತ್ರ ಹಯವದನನೊಲಿಸಿಕೊ 8 ದಿಲ್ಲಿಯರಾಯನ ಕಂಡು ಪುಲ್ಲಿಗೆಯ ಬೇಡುವರೆತಲ್ಲೆಯೂರಿ ತಪಸು ಇದ್ದಲ್ಲಿ ಸಾಧಿಸಿಕೊಳ್ಳಿರೊಕ್ಷುಲ್ಲಕರೆಂಜಲನುಂಡು ಬಾಳ್ವರ ನೋಡು ಲಕ್ಷುಮಿವಲ್ಲಭನಲ್ಲದೆ ಹೀನಫಲದಾಸೆ ಸಲ್ಲದಯ್ಯಚೆಲ್ವ ಹಯವದನ ತಿಮ್ಮನಲ್ಲದೆ ಕೈವಲ್ಯಕೆಹಲ್ಲು ಹಂಚಿಗೆ ಬಾಯಿತೆರೆದಂತೆ ಅಲ್ಲಲ್ಲಿಗೆ ಪೋಗದಿರಿ 9 ರೂಪಕತಾಳ ಹನುಮಂತನ ನೋಡು ತನುಮನಧನಂಗಳಶ್ರೀನರಸಿಂಹಗರ್ಪಿಸಿದಪ್ರಹ್ಲಾದನ ನೋಡುಅನುದಿನ ವನದಲ್ಲಿ ತಪವ ಮಾಡುವಮುನಿಜನರ ಕಂಡು ನಿನ್ನ ಮನದ ಭ್ರಮೆಯ ಬಿಡುಘನಮಹಿಮ ವೆಂಕಟಪತಿ ಹಯವದನನ ಭೃತ್ಯರ ಪರಿಚಾರಕರ ಭೃತ್ಯನೆನಿಸಿಕೊ 10 ಜತೆÀ ತಿರುಮಲೆರಾಯ ತ್ರಿವಿಕ್ರಮಮೂರುತಿಸಿರಿ ಹಯವದನನ [ಚರಣವೆ ಗತಿಯೆನ್ನು]
--------------
ವಾದಿರಾಜ
ಸುಳ್ಳುಗಳ ಬೋಧಿಸಿ ನೀ ಪೊಳ್ಳಾಗದಿರಲೊ ಪ ನೀರ್ಗುಳ್ಳೆಯಂಥ ದೇಹ ನಂಬಿ ನಿಜಭಕ್ತ ನಾನೆಂದೂ ಅ.ಪ ಎಳ್ಳುಕಾಳಿನಷ್ಟಾದರೂ ಈಶನಲ್ಲಿ ಭಕ್ತಿಕಾಣೆ ಡೊಳ್ಳತುಂಬುವದಕೆ ನಾಲ್ಕಲ್ಲಿ ಇಲ್ಲಿ ಕಲಿತುಕೊಂಡು 1 ಪರರಿಗೆ ಹೇಳುವಂತೆ ನೀ ನಡೆಯುವೆಯೇನೊ ಪರಗತಿಯಾಗದು ನಿಜ ನಿಜ ನಿಜ ಕಾಣೊ 2 ನಿನ್ನಯೋಗ್ಯತಾನುಸಾರ ನೀನರಿಯಲೊ ಬನ್ನಬಡುವದೆ ಸಾಕ್ಷಿ ಪುಣ್ಯವೇನಿದರೊಳು 3 ಹಿಡಿ ಹಿಡಿ ಹಿಡಿ ಹಿಡಿ ಹಿರಿಯರ ಪಾದವ 4 ಶರಣ ಜನರ ನೋಡಿ ಶಾಂತನಾಗುತ ಗುರುರಾಮವಿಠಲನ ಗುರುತರಿಯದೇ ನೀ 5
--------------
ಗುರುರಾಮವಿಠಲ
ಸೂಳೆವೆಂಗಳ ನಂಬಬೇಡಅವರ ಖೇಳಮೇಳವ ಬಿಡೋ ಮೂಢಬಲು ಜಾಲಗಾತಿಯರ ಬಲೆಗೆ ಸಿಕ್ಕದಿರುಯಮನಾಳೆ ಮುಡಿಸುವನೆ ಬಿಡುಬಿಡುಗಾಡ ಪ ಸುರತಸುಖವ ತೋರಿಸುವರುಮನೆಯೊಳಿರುವ ಧನವ ತರಿಸುವರುಪರಪುರುಷನಿದಿರು ಮಾಡುವರುಧನ ಬರಿದಾಗೆ ತಪ್ಪು ಹೊರಿಸುವರುಕಡೆಗೆ ತಿರಿದು ತಾರಂದು ಕೈಯಲಿ ತೂತುಗರಟವಕರೆದು ಕೊಡುವರು ಬೈವರು ದೂರುವರು1 ಗುರುಹಿರಿಯರ ತೊರೆಸುವರುಮನೆಯೊಳಿರುವ ಮಕ್ಕಳ ಮರಸುವರುಧನ ಬರುವತನಕ ನೋಡುವರುಬಾರದಿರೆ ಛಿ ಹೋಗೆಂದು ದೂಡುವರು ಗಂಧಪರಿಮಳ ತಿಲಕ ತಾಂಬೂಲ ಕ್ರಮುಕದೊಳುಮರುಳು ಮದ್ದಿಕ್ಕಿ ಕೈವಶವ ಮಾಡುವರು2 ಹೆಂಡತಿಯನು ತೊರಸುವರುಕಂಡ ಕಂಡ ಪುರುಷರ ಕೂಡುವರುಮಂಡೆಗೆ ಮದ್ದನೂಡುವರು ಕಡೆಗೆಭಂಡಾಟವ ಮಾಡುವರು...........(ಅಸಮಗ್ರ)
--------------
ಕೆಳದಿ ವೆಂಕಣ್ಣ ಕವಿ
ಸೆರೆಯೊಳಗೆ ಹರಿಸೆರೆಯೆ ಮುಖ್ಯಾ ಭಾವದೊಳಗೆ ಗುರುಭಾವನÉಯೆ ಮುಖ್ಯಾ ಪ ----ದೊಳಗೆ ಪ್ರಥಮ -----ರಾರÉೀ ಮುಖ್ಯಾ ಸೇವನೆಯೊಳಗೆ ಪುಣ್ಯ ಸೇವನೆ ಮುಖ್ಯಾ ದೇವರೊಳಗೆ ವಿಷ್ಣು ದೇವಾರೆ ಮುಖ್ಯಾವು ಯಾವ ಶಾಸ್ತ್ರಗಳಿಗೂ ವೇದವೇ ಮುಖ್ಯಾ 1 ವನದೊಳು ಫಲವುಳ್ಳಾ -----ಮುಖ್ಯಾ ದೀನದಾನವರೊಳಗೆ -----ದೀನನೆಂಬುವದೇ ಮುಖ್ಯ ಜನರೊಳು ಸಾಧು ಸಜ್ಜನರಾದವರೇ ಮುಖ್ಯಾ ಮನೆಗೆ ಹಿರಿಯನಾದ ಯಜಮಾನನೇ ಮುಖ್ಯಾ 2 ಮಾಸಗಳೊಳು ಚೈತ್ರಮಾಸವೆ ಮುಖ್ಯವು ವಾಸನೆಯೊಳು ಲಕ್ಷ್ಮೀವಾಸನೆ ಮುಖ್ಯ ಭೂಸುರರೊಳಗೆಲ್ಲ ಪೂರ್ಣ ಪಂಡಿತರೆ ಮುಖ್ಯ ವಾಸು ದೇವರಿಗೆ ----ದಾಸನೆ ಮುಖ್ಯ 3 ಸ್ಥಾನದೊಳಗೆ ಗಂಗಾಸ್ಥಾನವೇ ಮುಖ್ಯವು ಧೇನುಗಳೊಳು ಕಾಮಧೇನುವೇ ಮುಖ್ಯ ಜ್ಞಾನದಲ್ಲಿ ಹರಿಸರ್ವೋತ್ತಮ ಜ್ಞಾನವೆ ಮುಖ್ಯ ಗಾನದೊಳಗೆ ಸಾಮಗಾನವೇ ಮುಖ್ಯ 4 ವೃಕ್ಷಗಳೊಳು ತುಲಸೀ ವೃಕ್ಷವೇ ಮುಖ್ಯವು ಭಿಕ್ಷಗಳೊಳು ಯತಿ ಭಿಕ್ಷವೇ ಮುಖ್ಯವು ಪಕ್ಷಿಗಳೊಳು ಗರುಡ ¥ಕ್ಷಿಯೇ ಮುಖ್ಯ ಲಕ್ಷಾಧಿಕಾರರಿಗೆ ಲಕ್ಷ್ಮೀಯೆ ಮುಖ್ಯ 5 ಪರ್ವತಗಳೊಳು ಮೇರು ಪರ್ವತವೆ ಮುಖ್ಯ ಉರೆಗೆ ಮಳೆ ಬೆಳೆ ಉರುವೆ (ಬರುವೆ?) ಮುಖ್ಯ ಮರ್ಯಾದೆ ನ್ಯಾಯಗಳಿಗೆ ಹಿರಿಯರಾದವರೇ ಮುಖ್ಯ ಸರ್ವಾಧಿಕಾರರಿಗೆ ಸರ್ವಸಮತವೆ ಮುಖ್ಯ 6 ಕ್ಷೇತ್ರಗಳೊಳು ಕುರುಕ್ಷೇತ್ರವೆ ಮುಖ್ಯ ಯಾತ್ರಿಗಳೊಳು ಗಂಗಾಯಾತ್ರಿಯೆ ಮುಖ್ಯ ಸೂತ್ರಗಳೊಳು---------ಮುಖ್ಯವು ಸ್ತೋತ್ರಗಳೊಳು ಹರಿಸ್ತೋತ್ರವೇ ಮುಖ್ಯ 7 ಗ್ರಾಮಗಳೊಳು ಸಾಲಿಗ್ರಾಮವೇ ಮುಖ್ಯ ಭೂಮಿಗಳೊಳು ಪುಣ್ಯ ಭೂಮಿಯೇ ಮುಖ್ಯ ಆರು-------ಳಿಗೆಲ್ಲ ಆರೋಗ್ಯವೆ ಮುಖ್ಯ ಕಾಮುಕ ಸ್ತ್ರೀಯರಿಗೆಲ್ಲ ಕಾಮಪುರುಷನೇ ಮುಖ್ಯ 8 ಸನ್ಮಾರ್ಗಗಳೊಳಗೆ ಸನ್ಯಾಸಿ ಮಾರ್ಗವೆ ಮುಖ್ಯ ಅನಿಮೇಷಾ ಜಾಗರದೊಳಗೆ ಅನಿಮೇಷರೆ ಮುಖ್ಯ ಧನ್ಯ `ಹೆನ್ನೆ ವಿಠ್ಠಲನ ' ದಯವು ಇದ್ದರೆ ಮುಖ್ಯ 9
--------------
ಹೆನ್ನೆರಂಗದಾಸರು
ಸೇರಿದರೇನು ಫಲ ಪ ಅಕ್ಕರೆಯಿಲ್ಲದ ರಕ್ಕಸಿ ಯುದರದಿ ಮಕ್ಕಳು ಜನಿಸಿದರೇನು ಫಲ ದುಃಖಿಪಜನರನು ಲೆಕ್ಕಿಸದಾತನ ಒಕ್ಕಲುತನದಿಂದೇನು ಫಲ 1 ಜನಿಸಿದ ಮಕ್ಕಳುಜೀವಿಸದಿದ್ದರೆ ಜನನೀಜನಕರಿಗೇನು ಫಲ ಕನಸಿಲಿ ಕಾಣುವ ಧನಕನಕಂಗಳ ನಂಬಿದ ಜನರಿಗೇನು ಫಲ 2 ಅರಿಯದೆಕೊಂಡವಗೇನು ಫಲ ಹಿರಿಯವನಾಗಿರಲೇನು ಫಲ 3 ಗಂಡನ ದೂರುತ ಮಿಂಡನ ಸೇರುವ ಹೆಂಡತಿಯಿರಲೇನು ಫಲ ಹೆಂಡಿರ ಮಕ್ಕಳ ದಂಡಿಸದಾತನ ಗಂಡಸುತನದಿಂದೇನು ಫಲ 4 ಸಿಂಗರಿಸಿದರೇನು ಫಲ ಪುಣ್ಯದಿಂದೇನು ಫಲ5
--------------
ಸರಗೂರು ವೆಂಕಟವರದಾರ್ಯರು
ಸ್ಮರಿಸೊ ಮನವೇ ಹರಿಯ ನರಹರಿಯ ಅರಸಾಗ್ಯಾಳುವ ಸಿರಿಯ ಧ್ರುವ ಕರಿಯ ಕೇಳಿದ ಮೊರಿಯ ನೀನರಿಯ ಸುರರ ಬಿಡಿಸಿದ ಸರಿಯ ಧರೆಯೊಳಗಿದು ಖರಿಯ ಯುಗಮೊರಿಯ ಹೊರೆವನು ತಾ ಪರೋಪರಿಯ 1 ಸರ್ವದೈವಕೆ ಹಿರಿಯ ಮುರ ಅರಿಯ ಹರ ಹೃದಯದಲಿ ಪರಿಯ ಸ್ಮರಿಸುವದೀ ಪರಿಯ ದುರಿತ ಕರುಣಕಿಲ್ಲೀತನ ಸರಿಯ 2 ಸೆರಗವಿಡಿದು ಹರಿಯ ಪರಿಪರಿಯ ಅರಿಯೋ ನವವಿಧ ಪರಿಯ ಶರಣಾಗತರ ಸಿರಿಯ ಸುರವರ್ಯಾ ತರಳಮಹಿಪತಿ ದೊರೆಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹದ್ದೇಹಿ ಭಟರಿಂದ ಯಮನಾಜ್ಞೆಯಂತೆ ಪ ಶರಣಜನನಿಂದಕಗೆ ಪರಮಕುಂಭೀಪಾಕ ಪರಮಭೀಕರಜ್ವಾಲೆ ಕರುಣಶೂನ್ಯರಿಗೆ ಪರನಾರಿಗಳುಕುವಗೆ ಮೂತ್ರ ರಕ್ತಾಮೇಧ್ಯ ಉರುಬಾಧೆ ಕರ್ಮದುರ್ಗಾ ಪರಮ ನೀಚರಿಗೆ 1 ಮಾತಾಪಿತದೂಷಕಗೆ ಪ್ರೇತಕ್ರಿಮಿಕುಂತ ಭಯ ಪಾತಕಗೆ ರಾಕ್ಷಸರ ಭೂತಕ್ರಮಿದೀರ್ಘ ಘಾತಕಗೆ ಉಗ್ರತರ ವ್ಯಾಘ್ರಮುಖ ಭಟ ಶಿಕ್ಷೆ ರೋತು ಮಲತ ಮಜ್ಜ ನೀತಿಬಾಹಿರಗೆ 2 ಕಂಚಿನ್ವಾಯಸ ನರಕ ಕೇಳಾ ಕಪಟರಿಗೆ ಪಂಚಮಹಾಪಾತಕರಿಗುಳಿವಿನ ಉರುನರಕ ಕೂಪ 3 ಕಾದ ಉಕ್ಕಿನ ಪ್ರತಿಮೆ ಕಾಮಾಂಧ ಮೂಢರಿಗೆ ಕಾದು ಉರಿವರಗಿನೂಟ ಕಡುಲೋಭಿಗಳಿಗೆ ಕಾದ ಸೀಸದ ಮಡುವು ಮನೆಮುರುಕ ತುಂಟರಿಗೆ ಕಾದೆಣ್ಣೆಕೊಪ್ಪರಿಗೆ ಕುಟಿಲ ಕುಹಕರಿಗೆ 4 ಪರದ್ರವ್ಯಪಹಾರಿಗೆ ಭೇದಿ ಭೈರವಕೂಪ ನೆರೆನಂಬಿ ಕೊಲ್ಲವಗೆ ಮಸೆದಲಗುಕೊಡಲಿ ಪರರೊಗತನರಿದಗೆ ನರಕ ಚಂದ್ರಾರ್ಕಪರಿ ಗುರು ಹಿರಿಯರ್ಹಳಿದರಿಗೆ ಉರಿಸರಳ ಮಂಚ 5 ಕಾಲಯಮಪಾಶವು ತುಳಸಿದಳ ತುಳಿದವರಿಗೆ ಕಾಲಭೈರವ ಮೃತ್ಯು ಮಾಯಮೋಹಿಗಳಿಗೆ ಕಾಲಕರ ಶೂಲ ಕೊಂಡಿ ಚಾಂಡಾಲಗೆ ಸೂಳೆಯರ ಸೇವಕಗೆ ಕಾಲಯಮದಂಡ 6 ಸಂತ ಸಜ್ಜದಾನಸಂಗರಿಯದಧಮರಿಗೆ ಇಂತು ಎಂಬತ್ತು ಕೋಟಿ ನರಕಯಾತನವು ಅಂತಕಾರಿ ನಿನ್ನಾಜ್ಞೆಯಂತೆ ನಡೆಯುತಿವೆ ಎನ್ನ ಅಂತರದಿ ನಿಂತಿದನು ಗೆಲಿಸು ಶ್ರೀರಾಮ7
--------------
ರಾಮದಾಸರು
ಹರಿ ಪುಟ್ಟಿಸಿದಾ ವೃಕ್ಷದಿ ಪುಟ್ಟಿದ ಎಳೆಸಸಿಯೆ ಬಾಳೆನ್ನ ಕುಲದಾ ಬೆಳದಿಂಗಳೆ ಪ. ತಂದೆ ತಾಯಿಯ ಮಾತು ಮರೆಯದಿರು ಎಲೆಸಸಿಯೆ ಇಂದಿರಾಪತಿ ಕರುಣಕ್ಕೆ ಪಾತ್ರನೆಂದೆನಿಸಿ ಇಂದು ನೀನಖಿಳಜನ ಸಂದಣಿಯೊಳು ಬೆಳಗು ಚಂದ್ರ ಬಾನೊಳಗೆಸೆವ ತೆರನಂತೆ ಪೊಳೆದು1 ಬಾ ಹಿರಿಮೆ ಬೇಡವು ನಿನಗೆ ಹಿರಿಯರಾಜ್ಞೆಲಿರಿರಲು ಕರೆಕರೆಯುಬಾರದೊ ತರಳ ಶಿಶುವೆ ಹಿರಿಮೆಗೆ ಕೊರತೆಯುಂಟೆ ಗುರುಹಿರಿಯರಾಜ್ಞೆಯಲಿರಲು ದುರುಳರನು ಸರಸದೊಳು ಕೆಣಕದಿರು ಎಲೆಸಸಿಯೆ 2 ದಧಿ ಮಧುರಾಕಿಂತ ಅಧಿಕದ ಚೊಕ್ಕ ಮಾತುಗಳಾಡು ನಿನ್ನ ದಿಟ್ಟ ಬಾಯೊಳಗೆ ಚಿಕ್ಕವನಲ್ಲವೇ ಭಕ್ತಪ್ರಲ್ಹಾದ ಧ್ರುವ ಕೇಳೊ ಅವರಂತೆ ಚಿಕ್ಕ ಶ್ರೀ ಶ್ರೀನಿವಾಸನ ಹರಕೆಯಲಿ ಬಾಳೊ 3
--------------
ಸರಸ್ವತಿ ಬಾಯಿ
ಹರಿಕಥಾಮೃತಸಾರ ಫಲಸ್ತುತಿ (33ನೆಯ ಸಂಧಿ) ಹರಿಕಥಾಮೃತಸಾರ ಶ್ರೀಮ- ದ್ಗುರುವರ ಜಗನ್ನಾಥದಾಸರ ಕರತಳಾಮಲಕವೆನೆ ಪೇಳಿದ ಸಕಲ ಸಂಧಿಗಳ ಪರಮಪಂಡಿತಾಭಿಮಾನಿಗಳು ಮ- ತ್ಸರಿಸಲೆದೆಗಿಚ್ಚಾಗಿ ತೋರುವು- ದರಸಿಕರಿಗಿದು ತೋರಿ ಪೇಳುವುದಲ್ಲ ಧರೆಯೊಳಗೆ 1 ಭಾಮಿನಿಯ ಷಟ್ಪದಿಯ ರೂಪದ- ಲೀ ಮಹಾದ್ಭುತ ಕಾವ್ಯದಾದಿಯೊ- ಳಾ ಮನೋಹರ ತರತಮಾತ್ಮಕ ನಾಂದಿಪದ್ಯಗಳ ಯಾಮಯಾಮಕೆ ಪಠಿಸುವರ ಸು- ಧಾಮಸಖ ಕೈಪಿಡಿಯಲೋಸುಗ ಪ್ರೇಮದಿಂದಲಿ ಪೇಳ್ದ ಗುರುಕಾರುಣ್ಯಕೇನೆಂಬೆ 2 ಸಾರವೆಂದರೆ ಹರಿಕಥಾಮೃತ ಸಾರವೆಂಬುವುದೆಮ್ಮ ಗುರುವರ ಸಾರಿದಲ್ಲದೆ ತಿಳಿಯೆಂದೆನುತ ಮಹೇಂದ್ರನಂದನನ ಸಾರಥಿಯ ಬಲಗೊಂಡು ಸಾರಾ- ಸಾರಗಳ ನಿರ್ಣೈಸಿ ಪೇಳ್ದನು ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೊ 3 ದಾಸವರ್ಯರ ಮುಖದಿ ನಿಂದು ರ- ಮೇಶನನು ಕೀರ್ತಿಸುವ ಮನದಭಿ- ಲಾಶೆಯಲಿ ವರ್ಣಾಭಿಮಾನಿಗಳೊಲಿದು ಪೇಳಿಸಿದ ಈ ಸುಲಕ್ಷಣ ಕಾವ್ಯದೋಳ್ ಯತಿ ಪ್ರಾಸಗಳಿಗೆ ಪ್ರಯತ್ನವಿಲ್ಲದೆ ಲೇಸುಲೇಸೆನೆ ಶ್ರಾವ್ಯಮಾದುದೆ ಕುರುಹು ಕವಿಗಳಿಗೆ 4 ಪ್ರಾಕೃತೋಕ್ತಿಗಳೆಂದು ಬರಿದೆ ಮ- ಹಾಕೃತಘ್ನರು ಜರಿವರಲ್ಲದೆ ಸ್ವೀಕೃತವ ಮಾಡದಲೆ ಬಿಡುವರೆ ಸುಜನರಾದವರು ಶ್ರೀಕೃತೀಪತಿಯಮಲಗುಣಗಳು ಈ ಕೃತಿಯೊಳುಂಟಾದ ಬಳಿಕ ಪ್ರಾಕೃತವೆ ಸಂಸ್ಕøತದ ಸಡಗರವೇನು ಸುಗುಣರಿಗೆ 5 ಶ್ರುತಿಗೆ ಶೋಭನವಾಗದೊಡೆ ಜಡ ಮತಿಗೆ ಮಂಗಳವೀಯದೊಡೆ ಶ್ರುತಿ ಸ್ಮøತಿಗೆ ಸಮ್ಮತವಲದಿದ್ದೊಡೆ ನಮ್ಮ ಗುರುರಾಯ ಮಥಿಸಿ ಮಧ್ವಾಗಮಪಯೋಬ್ಧಿಯ ಕ್ಷಿತಿಗೆ ತೋರಿಸಿ ಬ್ರಹ್ಮವಿದ್ಯಾ ರತರಿಗೀಪ್ಸಿತ ಹರಿಕಥಾಮೃತಸಾರ ಸೊಗಸುವುದು 6 ಸಕ್ತಿ ಸಲ್ಲದು ಕಾವ್ಯದೊಳು ಪುನ- ರುಕ್ತಿ ಶುಷ್ಕ ಸಮಾಸ ಪದವ್ಯತ್ಯಾಸ ಮೊದಲಾದ ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ ವಿ- ಭಕ್ತಿ ವಿಷಮಗಳಿರಲು ಜೀವ- ನ್ಮುಕ್ತಿಯೋಗ್ಯವಿದೆಂದು ಸಿರಿಮದನಂತ ಮೆಚ್ಚುವನೆ 7 ಆಶುಕವಿಕುಲಕಲ್ಪತರು ದಿ- ಗ್ದೇಶವರಿಯಲು ರಂಗನೊಲುಮೆಯ ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬುವೆನು ಈ ಸುಲಕ್ಷಣ ಹರಿಕಥಾಮೃತ ಸಾರ ದೀರ್ಘ ದ್ವೇಷಿಗಳಿಗೆರೆಯದಲೆ ಸಲಿಸುವುದೆನ್ನ ಬಿನ್ನಪವ 8 ಪ್ರಾಸಗಳ ಪೊಂದಿಸದೆ ಶಬ್ದ ಶ್ಲೇಷಗಳ ಶೋಧಿಸದೆ ದೀರ್ಘ ಹ್ರಸ್ವಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ ದೂಷಕರು ದಿನದಿನದಿ ಮಾಡುವ ದೂಷಣವೇ ಭೂಷಣವು ಎಂದುಪ- ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ 9 ಅಶ್ರುತಾಗಮಭಾವ ಇದರ ಪ- ರಿಶ್ರಮವು ಬಲ್ಲವರಿಗಾನಂ- ದಾಶ್ರುಗಳ ಮಳೆಗರಿಸಿ ಮೈಮರೆಸುವ ಚಮತ್ಕøತಿಯ ಮಿಶ್ರರಿಗೆ ಮರೆಮಾಡಿ ದಿತಿಜರ ಶಸ್ತ್ರದಲಿ ಕಾಯದಿಪ್ಪರಿದರೊಳು- ಪಶ್ರುತಿಗಳು ತಪ್ಪುವುವೇ ನಿಜ ಭಕ್ತಿಯುಳ್ಳರಿಗೆ 10 ನಿಚ್ಚ ನಿಜಜನ ಮೆಚ್ಚ ಗೋಧನ ಅಚ್ಚ ಭಾಗ್ಯವು ಪೆಚ್ಚೆ ಪೇರ್ಮೆಯು ಕೆಚ್ಚ ಕೇಳ್ವನು ಮೆಚ್ಚ ಮಲಮನ ಮುಚ್ಚಲೆಂದೆನುತ ಉಚ್ಚವಿಗಳಿಗೆ ಪೊಚ್ಚ ಪೊಸದೆನ- ಲುಚ್ಚರಿಸಿದೀ ಸಚ್ಚರಿತ್ರೆಯ ನುಚ್ಚರಿಸೆ ಸಿರಿವತ್ಸಲಾಂಛನ ಮೆಚ್ಚಲೇನರಿದು 11 ಸಾಧು ಸಭೆಯೊಳು ಮೆರೆಯೆ ತತ್ವಸು- ಬೋಧವೃಷ್ಟಿಯ ಗರೆಯೆ ಕಾಮ ಕ್ರೋಧ ಬೀಜವ ಹುರಿಯೆ ಖಳರೆದೆ ಬಿರಿಯೆ ಕರಕರಿಯ ವಾದಿಗಳ ಪಲ್ಮುರಿಯೆ ಪರಮವಿ- ನೋದಿಗಳ ಮೈ ಮರೆಯಲೋಸುಗ ಹಾದಿ ತೋರಿದ ಹಿರಿಯ ಬಹು ಚಾತುರಿಯ ಹೊಸ ಪರಿಯ 12 ವ್ಯಾಸತೀರ್ಥರ ಒಲವೊ ವಿಠಲೋ- ಪಾಸಕ ಪ್ರಭುವರ್ಯ ಪುರಂದರ ದಾಸರಾಯರ ದಯವೊ ತಿಳಿಯದು ಓದಿ ಕೇಳದಲೆ ಕೇಶವನ ಗುಣಮಣಿಗಳನು ಪ್ರಾ- ಣೇಶಗರ್ಪಿಸಿ ವಾದಿರಾಜರ ಕೋಶಕೊಪ್ಪುವ ಹರಿಕಥಾಮೃತಸಾರ ಕೇಳಿದರು 13 ಹರಿಕಥಾಮೃತಸಾರ ನವರಸ ಭರಿತ ಬಹುಗಂಭೀರ ರತ್ನಾ- ಕರ ರುಚಿರ ಶೃಂಗಾರ ಸಾಲಂಕಾರ ವಿಸ್ತಾರ ಸರಸ ನರಕಂಠೀರವಾಚಾ- ಜನಿತ ಸುಕುಮಾರ ಸಾತ್ವೀ- ಕರಿಗೆ ಪರಮೋದಾರ ಮಾಡಿದ ಮರೆಯದುಪಕಾರ 14 ಅವನಿಯೊಳು ಜ್ಯೋತಿಷ್ಮತಿಯ ತೈ- ಲವನು ಪಾಮರನುಂಡು ಜೀರ್ಣಿಸ- ಲವನೆ ಪಂಡಿತನೋಕರಿಪವಿವೇಕಿಯಪ್ಪಂತೆ ಶ್ರವಣಮಂಗಳ ಹರಿಕಥಾಮೃತ ಸವಿದು ನಿರ್ಗುಣಸಾರಮಕ್ಕಿಸ- ಲವ ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು 15 ಅಕ್ಕರದೊಳೀ ಕಾವ್ಯದೊಳು ಒಂ- ದಕ್ಕರವ ಬರೆದೋದಿದವ ದೇ- ವರ್ಕಳಿಂ ದುಸ್ತ್ಯಜ್ಯನೆನಿಸಿ ಧರ್ಮಾರ್ಥಕಾಮಗಳ ಲೆಕ್ಕಿಸದೆ ಲೋಕೈಕನಾಥನ ಭಕ್ತಿಭಾಗ್ಯವ ಪಡೆದ ಜೀವ ನ್ಮುಕ್ತಗಲ್ಲದೆ ಹರಿಕತಾಮೃತಸಾರ ಸೊಗಸುವದೆ16 ಒತ್ತಿ ಬಹ ವಿಘ್ನಗಳ ತಡೆದಪ ಮೃತ್ಯುವಿಗೆ ಮರೆಮಾಡಿ ಕಾಲನ ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲಸಿದ್ಧಿಗಳ ಒತ್ತಿಗೊಳಿಸಿ ವನರುಹೇಕ್ಷಣ ನೃತ್ಯಮಾಡುವನವನ ಮನೆಯೊಳು ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ 17 ಆಯುರಾರೋಗ್ಯೈಶ್ವರ್ಯ ಯಶ ಧೈರ್ಯ ಬಲ ಸಮಸಹಾಯ ಶೌರ್ಯೋ ದಾರ್ಯ ಗುಣಗಾಂಭೀರ್ಯ ಮೊದಲಾದ ಆಯತಗಳುಂಟಾಗಲೊಂದ- ಧ್ಯಾಯ ಪಠಿಸಿದ ಮಾತ್ರದಿಂ ಶ್ರವ- ಣೀಯವಲ್ಲದೆ ಹರಿಕಥಾಮೃತಸಾರ ಸುಜನರಿಗೆ 18 ಕುರುಡ ಕಂಗಳ ಪಡೆವ ಬಧಿರನಿ- ಗೆರಡುಕಿವಿ ಕೇಳ್ವಹವು ಬೆಳೆಯದ ಮುರುಡ ಮದನಾಕೃತಿಯ ತಾಳ್ವನು ಕೇಳ್ದಮಾತ್ರದಲಿ ಬರಡು ಹೈನಾಗುವುದು ಕೇಳ್ದರೆ ಕೊರಡು ಪಲ್ಲವಿಸುವುದು ಪ್ರತಿದಿನ ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ 19 ನಿರ್ಜರತರಂಗಿಣಿಯೊಳನುದಿನ ಮಜ್ಜನಾದಿ ಸಮಸ್ತ ಕರ್ಮವಿ- ವರ್ಜಿತಾಶಾಪಾಶದಿಂದಲಿ ಮಾಡಿದಧಿಕಫಲ ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ ಸಜ್ಜನರು ಶಿರತೂಗುವಂದದಿ ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ 20 ಸತಿಯರಿಗೆ ಪತಿಭಕುತಿ ಪತ್ನಿ ವ್ರತ ಪುರುಷರಿಗೆ ಹರಿಷ ನೆಲೆಗೊಂ- ಡತಿಮನೋಹರರಾಗಿ ಗುರುಹಿರಿಯರಿಗೆ ಜಗದೊಳಗೆ ಸತತ ಮಂಗಳವೀವ ಬಹು ಸು- ಕೃತಿಗಳೆನಿಸುತ ಸುಲಭದಿಂ ಸ ದ್ಗತಿಯು ಪಡೆವರು ಹರಿಕಥಾಶಮೃತಸಾರವನು ಪಠಿಸೆ 21 ಎಂತು ವರ್ಣಿಸಲೆನ್ನಳವೆ ಭಗ- ವಂತನಮಲ ಗುಣಾನುವಾದಗ- ಳೆಂತು ಪರಿಯಲಿ ಪೂರ್ಣಭೋಧರ ಮತವ ಹೊಂದಿದರ ಚಿಂತನೆಗೆ ಬಪ್ಪಂತೆ ಬಹು ದೃ- ಷ್ಟಾಂತಪೂರ್ವಕವಾಗಿ ಪೇಳ್ದ ಮ- ಹಂತರಿಗೆ ನರರೆಂದು ಬಗೆವರೆ ನಿರಯಭಾಗಿಗಳು 22 ಮಣಿಖಚಿತ ಹರಿವಾಣದಲಿ ವಾ ರಣಸುಭೋಜ್ಯ ಪದಾರ್ಥ ಕೃಷ್ಣಾ ರ್ಪಣವೆನುತರ್ಪಿಸಿದವರಿಗೋಸುಗ ನೀಡುವಂದದಲಿ ಪ್ರಣತರಿಗೆ ಪೊಂಗನಡ ವರವಾ ಙ್ಮಣಿಗಳಿಂ ವಿರಚಿಸಿದ ಶ್ರುತಿಯೊ ಳುಣಿಸಿ ನೋಡುವ ಹರಿಕಥಾಮೃತಸಾರವನುದಾರ 23 ದುಷ್ಟರೆನ್ನದೆ ದುರ್ವಿಷಯದಿಂ ಪುಷ್ಟರೆನ್ನದೆ ಪೂತಕರ್ಮ ಭ್ರಷ್ಟರೆನ್ನದೆ ಶ್ರೀದವಿಠ್ಠಲ ವೇಣುಗೋಪಾಲ ಕೃಷ್ಣ ಕೈಪಿಡಿಯುವನು ಸತ್ಯ ವಿ- ಶಿಷ್ಟ ದಾಸತ್ವವನು ಪಾಲಿಸಿ ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ 24
--------------
ಶ್ರೀದವಿಠಲರು