ಒಟ್ಟು 1016 ಕಡೆಗಳಲ್ಲಿ , 95 ದಾಸರು , 881 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ ಹೆಮ್ಮೆಯೆಂಬ ಹಲ್ಲು ಮುರಿದೆ ಪೂರ್ಣ ಸುಮ್ಮನಿರುವೆ ಕಂಡು ಸಂತತ ಚರಣ ಒಮ್ಮನದಿಂದೆ ತೃಪ್ತ್ಯಾಯಿತು ಜೀವನ 1 ಸದ್ಭೋಧದನ್ನ ನೀಡಲು ಓಡಿಬಂದೆ ಸದ್ಗುರುವೆ ಒಡೆಯ ನೀನಹುದೆಂದೆ ಬಿದ್ದುಕೊಂಡಿಹೆ ನಾ ನಿಮ್ಮ ಮನೆಯ ಮುಂದೆ ಬುದ್ಧಿವಂತರು ಬೆನ್ನಟ್ಟಿ ಹೋಗೆ ಹಿಂದೆ 2 ಹಳಿಯೆಂದರೆ ನಾ ಹೋಗೆ ಎಂದೆಂದಿಗೂ ಬಿಟ್ಟು ಗುಹ್ಯ ವಾಕ್ಯದ ಹೆಜ್ಜೆ ಮೆಟ್ಟು ಸುಳವುದೋರಲು ನಿಮ್ಮ ಸದ್ಗತಿ ಮುಕ್ತಿಯುಂಟು ತಿಳದ್ಹಾಕಿಹನಾ ನಿಮ್ಮ ಪಾದರಕ್ಷಕೆ ಗಂಟು 3 ಬಾಗಿಲಕಾಯಿಕೊಂಡು ಬಿದ್ದಿಹ್ಯ ನಿಮ್ಮ ಶ್ವಾನ ಹಗಲಿರುಳು ನಾ ನಿಮ್ಮ ಬೊಗುಳವೆ ನಿಜಗುಣ ಜಾಗಿಸುವದೆನ್ನೊಳು ನಮ್ಮಯ್ಯ ನಿಮ್ಮ ಖೂನ ಸುಗುಮದಿಂದ ದೊರೆಯಿತು ನಿಜ ಸ್ಥಾನ 4 ಹಿಡಿದು ಕಚ್ಚಿಹೆ ನಿಮ್ಮ ಪಾದರಕ್ಷ ಸಂಪೂರ್ಣ ಬಿಡೆ ಎಂದೆಂದು ನಾ ಹೋದರೆ ಜೀವ ಪ್ರಾಣ ಪಿಡಿದು ಮಾಡುವೆ ನಾ ಜತನ ಮೂಢ ಮಹಿಪತಿಗಿದೆ ಸುಖಸಾಧನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನರಸಿಂಗಪುರ ವಾಸ | ಕಯಾಧು ಶಿಶುಪೋಷಕರುಣಾಮಯ ಸುವಪುಷ | ಪರಿಪಾಲಿಸು ಮೇಶ ಪ ಶರಧಿಜೆ ಲಕುಮೀಶ ಮೃತ್ಯುಂಜಯಗೆ ಬಿಂಬಶರಣ ಜನಾಬ್ದಿ ಭೇಶ | ಸರಸಿಜ ಭವಾದೀಶ ಅ.ಪ. ಕೃಷ್ಣಾತೀರ ವಾಸ | ಕೃಷ್ಣೆಯ ಮಾನ ಪೋಷಜಿಷ್ಣು ಸಾಹಸ ಭಾಸ | ವೃಷ್ಣಿ ಕುಲಕೆ ಭೂಷ 1 ಕೋಳ ನೃಹರಿ ಕಾಯಿ 2 ಶುಭ ಕಾಯ ಹೇಮ ಕಶಿಪು ಕಾಯನೇಮದೊಳಗೆ ಶೀಳ್ದ | ಕಾಮಿತ ಫಲಪ್ರದ 3 ಕಾಡುವ ರಕ್ಕಸನ | ಒಡಲ ಶೀಳಲು ಬಾಹುಷೋಡಶ ಧರಿಸಿದ | ಗಾಢ ಕಾರಣವೇನೊ 4 ದರ್ಶದಿನದೊಳಾ | ದರ್ಶ ದಾಸರ ದಿನ ದರ್ಶನ ನೀನಿತ್ತು | ಸ್ಪರ್ಶ ಪೂಜೆಯ ಕೊಂಡೆ5 ಜ್ವಾಲಾ ನೃಕೇಸರಿ | ಹಾಲಾಹಲವು ಭವಜಾಲ ದೊಳ್ಹಾಕದಿರು | ಕೇಳುವೆ ವರ ನಿನ್ನ 6 ಗೋವರ್ಧನೋದ್ದರ | ಗೋವ್ಗಳ ಪಾಲ ಗುರುಗೋವಿಂದ ವಿಠಲನೆ | ಭಾವದೊಳಗೆ ತೋರೊ 7
--------------
ಗುರುಗೋವಿಂದವಿಠಲರು
ನರಹರಿ ಬಂದು ಮೂಡಿದಾ ಶರಣಗದಯವಾ ಮಾಡಿದಾ ಪ ಛಟ ಛಟ ಶಬ್ಧವ ತೋರುತಾ ಪಟ ಪಟ ತಾರೆಗಳಾರಲು ತಾ 1 ಗುಡ ಗುಡ ಗುಟ್ಟಿಬಾಯಾಳಗಗ್ನಿಯ ಧಡ ಧಡ ಕಿಡಿಗಳನುಗುಳುತಾ ಗಡ ಬಡಿಸಲು ಸಮುದ್ರಗಳೆಲ್ಲವು ಬುಡು ಬುಡು ಗುಳ್ಳೆಗಳೇಳಲು ತಾ2 ಫಳ ಫಳ ಭೂಮಿಯು ಬಿಚ್ಚಿತು ಗಿರಿಗಳು ಹಳ ಹಳ ಕಲ್ಲುಗಳುದುರಿದವು ಭಳ ಭಳ ಭಾಸಮ ಗಡಿಶತ ತೇಜನ ಥಳ ಥಳ ಮಿಂಚುಗಳಾಡಿದವು 3 ಮಾಗ್ಗಿತು ಧನಿಯನು ಕೇಳುತ ಕೇಳವು ಮುಗ್ಗಿತು ಕಂಗಾಣದೆ ಹಲವು ಅಗ್ಗಳ ದೈತ್ಯರು ದೂರದಿ ಬಿಸುಟರು ನುಗ್ಗಾದವು ಅವರಾಯುಧವು 4 ಭವ ಭವ ಸುರಮುನಿ ಇಂದ್ರರು ಇರದೆವೆ ಮುರಿಯನು ಸಾರಿದಿರು ಗುರುವರ ಮಹಿಪತಿ ನಂದನಸಾರಥಿ ಶರಣಿಂದೆನುತಲಿ ಹೊಗಳಿದನು5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಲಿದಾಡಿದಳ್ ನಳಿನಾಂಬಕಿ ಒಲಿದೆಮ್ಮನು ಸಲಹಲೋಸುಗ ಪ. ಸುಲಲಿತ ವೀಣಾಪಾಣಿ ಮಣಿ ಸುಗುಣಿ ಅ.ಪ. ಕೃತೀಶಸುತೆ ಕೃಪಾನ್ವಿತೆ ಶ್ರುತಿಸಮ್ಮತಗೀತೆ ಪ್ರತಿರಹಿತೆ ಸತಿಪೂಜಿತೆ ರತಿಯಾಮಿತ ಶೋಭಿತಳೆ ಧೃತಿ ಸಂಭೃತೆ ಮತಿದಾಯಕಿ 1 ಇಭೇಂದ್ರಗಮೆ ವಿಧುಮಂಡಲ- ನಿಭಮುಖಿ ಶಿಖಿಯಾನೆ ಅಭಯಪ್ರದೆ ಅಖಿಳೇಶ್ವರಿ ಸುಭಜೆ ಶುಭದೆ ವಿಬುಧೆ ಅಭವೆ ಸದ್‍ವಿಭವಾಸ್ಪದೆ 2 ಪರಾಂಬರಿಸು ಪದಾಶ್ರಿತನ ಪ್ರಭಾಕರಶತಾಭೆ ಹರಿ ಲಕ್ಷ್ಮೀನಾರಾಯಣ- ಶರಣೆ ರತುನಾಭರಣೆ ಕರುಣಾರಸವರುಣಾಲಯೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಲಿನಲಿದರು ದ್ವಾರಕಾಪುರದಿ ನಳಿನನಾಭ ಶ್ರೀ ರುಕ್ಮಿಣಿ ಕಲ್ಯಾಣದಿ ಪ. ಜಲರುಹಲೋಚನೆ ಚೆಲುವೆ ಶ್ರೀ ರುಕ್ಮಿಣಿ ಸಲಲಿತಾಂಗನ ನೋಡಿ ವಲುವಿನಲಿ ಕುಳಿತಿರೆ ಅ.ಪ. ಅಂಬರದಲಿ ಭೇರಿ ವಾದ್ಯಗಳೆಸಗೆ ತುಂಬುರು ನಾರದರು ಗಾನವ ಪಾಡೆ ಸಂಭ್ರಮದೊಳು ಮಾಂಗಲ್ಯ ಬಂಧನ ಮಾಡೆ ಅಂಬುಜೋದ್ಭವ ರುಕ್ಮಿಣಿ ಕಂಠದೊಳು 1 ವಿಪ್ರರು ವೇದ ಮಂತ್ರವ ಪಠಿಸೆ ಸ್ವ ಪ್ರಕಾಶ ರುಕ್ಮಿಣಿ ಕರಪಿಡಿಯೆ ಕೃಷ್ಣಾ ಅಪ್ರಮೇಯನೆಂದು ಸ್ತುತಿ ಪಾಠಕರು ಪೊಗಳೆ ಕ್ಷಿಪ್ರದಿ ವಿಪ್ರರಿಗೆ ದಕ್ಷಿಣೆ ತಾಂಬೂಲವೀಯೆ 2 ದೇವಕಿ ವಸುದೇವನಿಗ್ಹರುಷವನಿತ್ತು ದೇವ ಶ್ರೀ ಶ್ರೀನಿವಾಸ ಭಕ್ತ ಜನಾಶ್ರಿತ ಕಾವ ಸಕಲ ಜೀವರ ಹೃದಯನಿವಾಸ ದೇವ ಯಶೋದೆ ನಂದ ಕಂದನ ನೋಡಿ 3
--------------
ಸರಸ್ವತಿ ಬಾಯಿ
ನವವಿಧ ಭಕುತಿ ಶ್ರವಣದಿಂದಲಿ ಪಾಪಹರಣವಾಗುವುದೆಂದು ಕವಿಗಳೆಲ್ಲರು ಕೂಗಿ ಒದರುತಿಹರು ಕಿವಿಗಳಿಗಾನಂದದಾಭರಣದಂತಿಹುದು ಶ್ರೀ- ಹರಿಯ ದಿವ್ಯನಾಮಾಮೃತದರಸವು ಮಾಧವನ ಮೂರ್ತಿಯನು ನೋಡದಿಹ ಕಂಗಳು ನವಿಲು ಕಣ್ಣುಗಳೆಂದು ಪೇಳುತಿಹರು ಕಮಲನಾಭ ವಿಠ್ಠಲನ ಮಹಿಮೆ ಪೊಗಳೆ ಫಣಿರಾಜನಿಗೆ ವಶವಲ್ಲ ದೇವಾ 1 ಕೀರ್ತನವು ಮಾಡಲು ಪಾತಕವು ಪರಿಹರವು ಮಾತುಳಾಂತಕನ ಮಹಿಮೆ ಘನವು ಶ್ರೀಶನನು ಮನದಣಿಯ ಸ್ತೋತ್ರವನು ಮಾಡಲು ನಾಶಗೈವನು ದುರಿತರಾಶಿಗಳನು ಮಾಡಿದಪರಾಧಗಳ ಮಾಧವನು ಮನ್ನಿಸುವ ಶ್ರೀಧರನ ಸ್ತುತಿಸಿ ಕೊಂಡಾಡುತಿಹರ ಕರುಣಾಕರ ಕಮಲನಾಭವಿಠ್ಠಲ ದುರಿತದೂರನು ಕಾಯ್ವ ಶರಣಜನರ 2 ಸ್ಮರಣೆಯನು ಮಾಡುತಿಹ ಮನುಜರಿಗೆ ಇಹಪರದಿ ಪರಮ ಮಂಗಳನೀವ ಪರಮಾತ್ಮನು ದುರಿತ ದೂರನ ಪಾದಸ್ಮರಣೆ ಮಾಡುವರಿಗೆ ಪರಿಪರಿಯ ಸೌಖ್ಯಗಳ ಕೊಡುವ ದೇವ ಮಧುವೈರಿಯನು ಸ್ಮರಿಸೆ ಮುದದಿ ಸಂಪದವೀವ ಮೂರ್ತಿ ಶ್ರೀಮಾಧವ ಕನಕಗರ್ಭನ ಪಿತನು ಕರುಣಾನಿಧಿಯು ಕಮಲನಾಭ ವಿಠ್ಠಲ ಕಾಯ್ವ ಸುಜನರ3 ಶಿಲೆಯಾದ ಅಹಲ್ಯೆಯ ಪರಿಪಾಲಿಸಿದ ಪಾದ ಧರಣಿ ಈರಡಿಗೈದ ದಿವ್ಯಪಾದ ಫಣಿ ಹೆಡೆಯ ತುಳಿದ ಪಾದ ವರ ಋಷಿಗಳೆಲ್ಲ ವಂದಿಸುವ ಪಾದ ಇಂದಿರಾದೇವಿ ಬಹುಚಂದದಿಂದೊತ್ತುತ ಕಂದರ್ಪನಯ್ಯನಿಗೆ ಪಾದಸೇವ ಚಂದದಿಂದಲಿ ಮಾಡಿ ಮಾಧವನಿಗೆ ನಂದಗೋಪಿಯ ಕಂದ ಸಲಹುಎನಲು ಸುಂದರ ಶ್ರೀ ಕಮಲನಾಭ ವಿಠ್ಠಲನು ಒಲಿವ 4 ಅರ್ಚಿಸುತ ಮೆಚ್ಚಿಸುತ ಸಚ್ಚಿದಾನಂದನನು ಸ್ವಚ್ಛ ಭಕುತಿಲಿ ಸ್ತೋತ್ರ ಮಾಡುತಿಹರ ಅಷ್ಟ ಐಶ್ವರ್ಯಪ್ರದನು ನಿತ್ಯಮುಕ್ತಳ ಕೂಡಿ ಭಕ್ತರ ಹೃದಯದಲಿ ಪೊಳೆವ ದೇವ ಸತ್ಯ ಸಂಕಲ್ಪನಿಗೆ ಕಸ್ತೂರಿ ತಿಲಕವು ಮತ್ತೆ ಪಾವಡಿ ಥಳಥಳನೆ ಹೊಳೆಯೆ ಸುತ್ತ ಬ್ರಹ್ಮಾದಿಗಳ ಸ್ತುತಿಗೆ ದೇವ ಚಿತ್ತವಿಟ್ಟು ಕೇಳ್ವ ಮಾಧವನು ಮುದದಿ ಕರ್ತೃ ಕಮಲನಾಭ ವಿಠ್ಠಲನು ಕಾಯ್ವ 5 ವಂದನೆಯನು ಮಾಡೆ ಮುಕುಂದನು ಒಲಿವನು ಮುದದಿ ಕಂದರ್ಪನಯ್ಯ ಕಮಲಾಕ್ಷ ಹರಿಯೂ ಸುಂದರಾಂಗ ಶ್ರೀಹರಿಗೆ ಗಂಧ ಪೂಸಿದಳಾಗ ಇಂದೀವರಾಕ್ಷಿ ನಸುನಗುತ ಬೇಗ ಇಂದ್ರಾದಿ ಸುರರೆಲ್ಲ ಕೊಂಡಾಡೆ ಮಾಧವನ ವಂದಿಸುತ ಸಿರಬಾಗಿ ಚಂದದಿಂದ ಮಂದಾರ ಪಾರಿಜಾತಗಳ ತಂದು ತಂದೆ ಕಮಲನಾಭ ವಿಠ್ಠಲನ ಮುಡಿಗೆ ಸಂಭ್ರಮದಿ ಮಳೆಗರೆಯೆ ಚಂದದಿಂದ 6 ದಾಸ್ಯವನು ಕೈಕೊಂಬ ದಾಸ್ಯಜನರನು ಪೊರೆವ ಮೀಸಲಾಗಿಹನು ಹರಿದಾಸ ಜನಕೆ ಪೋಷಿಸೆಂದೆನುವವರ ದೋಷಗಳನೀಡಾಡಿ ದೋಷರಹಿತನು ಪೊರೆವ ಸರ್ವಜನರ ಪೂಸಿ ಪರಿಮಳ ದ್ರವ್ಯ ಶ್ರೀಸಹಿತ ಮೆರೆವ ವಾಸುಕೀಶಯನ ಸಜ್ಜನರ ಪೊರೆವ ಮುರಳೀಧರ ಮಾಧವನು ಕರುಣದಿಂದ ಶರಣ ಜನರನು ಪೊರೆವ ಮರೆಯದೀಗ ಕಮಲನಾಭವಿಠ್ಠಲನು ಕಾಯ್ವದೇವ 7 ಸಖ್ಯ ಸ್ನೇಹಗಳಿಂದ ಮುತ್ತಿನ್ಹಾರಗಳನು ಕೃಷ್ಣನ ಕೊರಳಿಗ್ಹಾಕುತಲಿಬೇಗ ಅರ್ಥಿಯಿಂದಲಿ ರತ್ನ ಮುತ್ತಿನ ಚಂಡುಗಳ ವಿಚಿತ್ರದಿಂದಾಡುತಿರೆ ನೋಡಿ ಸುರರು ಮುತ್ತಿನಕ್ಷತೆಗಳನು ಮಾಧವನ ಸಿರಿಮುಡಿಗೆ ಅರ್ಥಿಯಿಂದ ಸುರಿಸುತಿರೆ ಹರುಷದಿಂದ ಅಪ್ರಮೇಯನು ಶ್ರೀಶ ಶ್ರೀನಿವಾಸ ಸರ್ಪಶಯನನು ಕಮಲನಾಭ ವಿಠ್ಠಲ ನಿತ್ಯ ತೃಪ್ತನು ಪೊಳೆವ ಭಕ್ತರ ಹೃದಯದಲಿ 8 ನಿತ್ಯ ತೃಪ್ತಗೆ ಮಾಡಿ ಅರ್ಥಿಯಲಿ ಅಪ್ರಮೇಯನನು ಸ್ತುತಿಸಿ ಮುತ್ತು ಮಾಣಿಕ್ಯ ಬಿಗಿದ ತಟ್ಟೆಯಲಿ ತಾಂಬೂಲ ಅಚ್ಚುತಾನಂತನಿಗೆ ಅರ್ಪಿಸುತಲಿ ಭಕ್ತಿಯಲಿ ವಂದನೆಯ ಭಕ್ತವತ್ಸಲನಿಗೆ ನಿತ್ಯ ಮುಕ್ತಳು ಮಾಡಿ ಹರುಷದಿಂದ ಸತ್ಯ ಸಂಕಲ್ಪ ಶ್ರೀ ಮಾಧವನಿಗೆ ಮುತ್ತಿನಾರತಿ ಬೆಳಗಿ ಅರ್ಥಿಯಿಂದ ಕರ್ತೃ ಶ್ರೀ ಕಮಲನಾಭ ವಿಠ್ಠಲನ ಕೊಂಡಾಡಿ9
--------------
ನಿಡಗುರುಕಿ ಜೀವೂಬಾಯಿ
ನವವಿಧ ಭಕ್ತಿ ಶ್ರವಣ ಪಾವನವಾದ ಹರಿಕಥೆ ಪುರಾಣ ಮೊದ ಲಾದುದನು ಕೇಳುತ್ತಿ ಪರಮಾತ್ಮನನ್ನು ಹೃದಯ ಪೀಠದಲಿರಿಸಿ ಪೂಜಿಸುವ ಭಕ್ತನೇ ಶ್ರವಣ ಫಲ ಹೊಂದಿದವ ಶ್ರವಣಭಕ್ತಿಯಿದು 64 ದಾಸಕೂಟದ ಭಕ್ತರಿಂ ರಚಿತವಾದ ಸು ಶ್ರಾವ್ಯ ಹಾಡುಗಳನ್ನು ಪಾಡಿ ಕುಣಿಯುತ್ತ ದೇವರನು ನೆನೆನೆನೆದು ಧ್ಯಾನಿಸುವ ಭಕ್ತರೇ ಕೀರ್ತನದ ಭಕ್ತರೆಂದರಿ ಮನುಜ ನೀನು 65 ವ್ಯಾಸ ದಾಸರ ಕೂಟದಿಂದರಿತ ದೇವರನು ಮಾನಸದ ಮಂಟಪದಲ್ಲಿರಿಸಿ ಪೂಜಿಸುತ ಅದನೆ ಪೌನಃಪುನ್ಯದಿಂದ ಮೆಲುಕಾಡುವದು ಸ್ಮರಣಭಕ್ತಿಯಿದೆಂದು ತಿಳಿ ಮನುಜ ನೀನು 66 ಅವತಾರ ರೂಪಗಳ ಮೂರ್ತಿಗಳ ರಚಿಸುತಲಿ ನಿನ್ನ ಚಿತ್ತದ ದೇವರನ್ನಲ್ಲಿಯಿರಿಸಿ ಅವನ ಗುಣಗಳ ನೆನೆದು ಪಾದಸೇವೆಯ ಮಾಡೆ ಪಾದಸೇವನಭಕ್ತಿಯೆಂದು ತಿಳಿ ಮನುಜ 67 ಹೂ ತುಳಸಿ ಮೊದಲಾದ ವಸ್ತುಗಳ ಶೇಖರಿಸಿ ದೇವ ಮೂರ್ತಿಗಳನ್ನು ಇದಿರಲ್ಲಿಯಿರಿಸಿ ಷೋಡಶದ ಉಪಚಾರ ಪೂಜೆಗಳ ನಿತ್ಯದಲಿ ಮಾಡುವುದೆ ಅರ್ಚನದ ಭಕ್ತಿಯಿದು ತಿಳಿಯೈ 68 ಎದೆ ಶಿರಸು ಕಣ್ಣು ಮನ ಕೈಕಾಲು ಮೊಣಕಾಲು ವಾಗೆಂಬುದೆಂಟಂಗಗಳನು ಪಾದದೆಡೆಯೀಡಾಡಿ ನಮಿಸುವುದೇ ವಂದನವು ಸಾಷ್ಟಾಂಗನಮನವಿದು ತಿಳಿಯೈ 69 ದಾಸೋಹವೆಂಬುದನು ತಿಳಿದು ನೀನನವರತ ಫಲದ ಬಯಕೆಯ ತೊರೆದು ಸೇವೆಯನು ಮಾಡೆ ಸೇವಕನ ನಿನ್ನನ್ನು ತನ್ನ ಬಳಿಗೊಯ್ಯುವನು ಭವಬಂಧ ತೊರೆಯಿಸುತ ಪಾಲಿಸುವನವನು 70 ಸಚ್ಚಿದಾನಂದ ಸ್ವರೂಪದವ ಪರಮಾತ್ಮ ತನ್ನ ಗುಣಗಳನ್ನೆಲ್ಲ ಭಕ್ತರಿಗೆ ಕೊಡುವ ನೀರು ಹಾಲನು ನಂಬಿದಂತೆ ನಂಬುವನನ್ನು ಭಕ್ತರಕ್ಷಕನವನು ಮುಕ್ತಿದಾಯಕನು 71 ಕೃಷ್ಣನು ಪರಬ್ರಹ್ಮ ಕೃಷ್ಣನನು ವಂದಿಸುವೆ ಕೃಷ್ಣನಿಂದಲೆ ಸಕಲ ವಿಶ್ವಗಳ ಸೃಷ್ಟಿ ಸುಕೃತ ದುಷ್ಕøತವೆಲ್ಲ ಕೃಷ್ಣನಡಿಯಲಿ ಮುಡಿಯು ಕೃಷ್ಣನಲಿ ಮನವು 72 ಕಾಮಹತಕನು ರುದ್ರದೇವನಿಲ್ಲಿಯೆ ಇದ್ದು ಅಷ್ಟಯತಿಗಳ ಶುದ್ಧಮಾನಸರ ಮಾಡಿ ಬಾಲಯತಿಗಳ ಮೂಲಕವೆ ಪೂಜೆಯನು ಪಡೆದು ರಾರಾಜಿಸುವೆ ದೇವ ಕೃಷ್ಣರೂಪದಲಿ 73 ಭಾರ್ಗವೀಪತಿಯಾದ ಸಿರಿವರನು ಮಾಧವನು ಭಾರ್ಗವೀರೂಪವನು ಶುಕ್ರವಾರದಲಿ ತಾಳ್ದು ಭಕುತರ ಹೃದಯವನ್ನರಳಿಸುವೆ ನೀನು ಮೋಹಿನೀರೂಪವದು ಮೋಹಕವದಲ್ತೆ 74 ಬಲ್ಲಾಳ ವಂಶಜರು ಉಡುಪ ಕುಲದವರೆಂದು ಭಕುತ ಗುರುವಾದಿರಾಜರ ಹಸ್ತದಿಂದ ಮೂರು ಅವತಾರ ಚಿಹ್ನೆಯ ತಾಳ್ದ ಮಾರುತಿಯ ಆರಾಧ್ಯ ಭೂವರಾಹರ ಕೊಡಿಸಿ ಪೊರೆದೆ 75 ದುಷ್ಟ ಜನಮರ್ದನ ಜನಾರ್ದನನು ನೀನಿರುವೆ ನಿನ್ನ ರೂಪವೆ ಪಕ್ಷನಾಥ ಸೇವಿತವು ಚಕ್ರ ಶಂಖಾಸಿ ಪಾನದ ಪಾತ್ರೆಗಳ ಧರಿಸಿ ದುಷ್ಟ ಶಿಕ್ಷಣಕಾಗಿ ಕಾಳಿ ಸೇವಿಪಳು 76 ಜಮದಗ್ನಿಪುತ್ರನಾಗವತರಿಸಿ ನೀನೊಮ್ಮೆ ಕೊಡಲಿಯಿಂ ಕಡಿಕಡಿದು ದುಷ್ಟರಾಜರನು ನಕ್ಷತ್ರ ಮಂಡಲವ ಭೂ ಮಂಡಲವ ಮಾಡಿ ಪರಶುರಾಮನು ಎಂಬ ಪೆಸರನ್ನು ಪಡೆದೆ 77 ಪರಶುರಾಮನು ರಾಮ ಪರಶುರಾಮನು ಕೃಷ್ಣ ಒಬ್ಬನೇ ಹಲವಾರು ರೂಪಗಳ ತಾಳಿ ಸಾಸಿರದ ನಾಮದಿಂ ಸ್ತುತಿಸಿಕೊಳ್ಳುವೆ ಹರಿಯೆ ನಿನ್ನ ಮಾಯಾರೂಪ ತಿಳಿದವರು ಯಾರು? 78 ಮೇಘದೆಡೆಯಿರುವ ಮಿಂಚಿನ ಹಾಗೆ ನೀನೆಂದು ತಿಳಿಸಲ್ಕೆ ನೀನು ಮೇಘದ ವರ್ಣದವನು ನೀಲತೋಯದ ಮಧ್ಯದಲ್ಲಿರುವ ವಿದ್ಯುತ್ತಿನಂತಿರುವಿ ಯೆಂದು ಶ್ರುತಿ ಹೇಳುವುದು ತಿಳಿಯೈ79 ಪುರುಷೋತ್ತಮನೆ ನಿನ್ನ ಪುರವೆಯೆನ್ನಯ ದೇಹ ಉತ್ತಮನು ನೀನಿರುವೆ ಅಧಮ ನಾನಿರುವೆ ಅಜ್ಞಾನದಾಚ್ಛಾದಿಕೆಯನೆನಗೆ ಹಾಕುತಲಿ ಬಿಂಬರೂಪದಲಿದ್ದು ಬೆಳಗಿಸುವೆ ನನ್ನ 80 ಶ್ರವಣಮನನಾದಿ ಸಾಧನದ ಬಲದಿಂದ ನಾ ನನ್ನ ಮುಸುಕನು ತೆಗೆದರೂ ನೀನು ಎನ್ನ ಬಳಿಯಲ್ಲಿದ್ದು ಕಾಣದಿಹೆ ಪರಮಾತ್ಮ ನಿನ್ನ ಪರಮಾಚ್ಛಾದಿಕೆಯ ತೆಗೆದು ತೋರು 81 ಗೋವರ್ಧನೋದ್ಧಾರಿ ಸಿರಿವರನೆ ನೀನೊಮ್ಮೆ ನಾಭಿರಾಜನ ಪುತ್ರನಾಗಿಯವತರಿಸಿ ಅಜನಾಭವೆಂಬ ಮೋಡವನು ಸೃಷ್ಟಿಸಿ ನೀನು ಲೋಕದ ಕ್ಷಾಮವನು ಹೋಗಲಾಡಿಸಿದೆ 82 ನೀನೊಮ್ಮೆ ದಕ್ಷಿಣದ ಕರ್ಣಾಟಕಕೆ ಬಂದು ಅಜಗರದ ವೃತ್ತಿಯಲಿ ದೇಹವನು ತೊರೆದು ನಿರ್ವಾಣ ಬೌದ್ಧಮತ ಜೈನಾದಿ ಮತಗಳಿಗೆ ಮೂಲಪುರುಷನದಾಗಿ ಮೆರೆದೆ ಪರಮಾತ್ಮ 83 ಸತ್ವ ರಜ ತಮವೆಂಬ ಮೂರು ಗುಣ ಪ್ರಕೃತಿಯದು ಪ್ರಾಕೃತದ ದೇಹವನು ಹೊಂದಿದಾ ಜನರು ಹುಟ್ಟುಗುಣ ಮೂರರಿಂ ಕರ್ಮವನು ಮಾಡುತ್ತ ಸುಖ ದುಃಖವನು ಹೊಂದಿ ಜೀವಿಸುವರವರು 84 ಸತ್ಯಾತ್ಮಕನು ನೀನು ಚ್ಯುತಿಯಿಲ್ಲ ಸತ್ಯಕ್ಕೆ ಅಚ್ಯುತನ ನಾಮದಿಂ ಪಾಪ ಪರಿಹರಿಪೆ ಅಂತವಿಲ್ಲದುದಾತ್ಮ ಆತ್ಮರಕ್ಷಕನಾಗಿ ನಾಮದಲನಂತನೆನಿಸಿರುವೆ ಶ್ರೀಹರಿಯೇ 85 ವೇದರಕ್ಷಕನಾಗಿ ಗೋವುಗಳ ರಕ್ಷಿಸುತ ಗೋವಿಂದನಾಮವನು ಧರಿಸುತಲಿ ನೀನು ನಾಮತ್ರಯಗಳಿವನು ಕರ್ಮಾಂತದಲಿ ಪಠಿಸೆ ಕರ್ಮದೋಷದ ಪಾಪ ಪರಿಹಾರವಹುದು 86 ಸಚ್ಚಿದಾನಂದಸ್ವರೂಪ ಹರಿ ನೀನಿರುವೆ ನಿನ್ನ ರೂಪಗಳೆಲ್ಲ ಪೂರ್ಣವಾಗಿಹವು ಜ್ಞಾನವಾನೆಂದವನು ಹೆರವರ್ಗೆ ತಿಳಿಸುತಿರೆ ನಮ್ಮಲ್ಲಿ ಹೆಚ್ಚುವವು ಅದರಿಂದ ಪೂರ್ಣ 87 ಹರದಾರಿ ಸಾವಿರಾರಿದ್ದರೂ ನಾದವನು ಚಣದೊಳಗೆಯಾಕಾಶವಾಣಿ ಕೇಳಿಸುವದು ಕಾಣದಿಹ ವಿದ್ಯುತ್ತುರೂಪವನು ತಾಳಿದವ ದೇವನಲ್ಲದೆ ಬೇರೆ ಯಾರ ಮಾಯೆಯಿದು 88
--------------
ನಿಡಂಬೂರು ರಾಮದಾಸ
ನಾ ಧನ್ಯ ನಾ ಧನ್ಯ ನಾ ಧನ್ಯನಿಂದು ಪ ಹೇ ದಯಾನಿಧೇ ನಿನ್ನ ಪಾದಾನುಗ್ರಹದಿಂದ ಅ.ಪ. ಏತರವ ನಾನೆಂದುದಾಸೀನ ಮಾಡದೆಲೆ ಲೇಸು ಮಮತೆಯ ಕೋರಿ ಈ ಸ್ಥಳಕೆ ಬಂದಿ ಆಸುರೀ ಭಾವವನು ನಾಶಗೊಳಿಸಿ ಎನ್ನ ನೀ ಸಲಹಿದೆಯೋ ಜಗದೀಶ ನಿರುಪಮ ಕರುಣಿ 1 ಸತ್ವಗುಣ ಪ್ರಚುರರಲಿ ನೀ ತೋರುವುದಕ್ಕಿಂತ ಅತ್ಯಧಿಕ ವಾತ್ಸಲ್ಯವೆನ್ನೊಳಗೆ ತೋರ್ಪೆ ಕರ್ತೃ ನೀನೆಂಬ ತತ್ವ ಮನಸಿಗೆ ತಂದೆ ಭಕ್ತವಾತ್ಸಲ್ಯಕ್ಕಿದು ಕುರುಹಲ್ಲವೇ ದೇವ 2 ಸುರಲೋಕಕ್ಕಿಂತಧಿಕ ಪದವಿ ಎನಗಿತ್ತೆ ನಿರುತಲೆನ್ನಯ ಬೆನ್ನು ಕಾಯುತಲಿರುವೆ ಕರುಣಿಗೆಣೆಗಾಣೆ ಕರಿಗಿರೀಶನೇ ನಿನ್ನ ಸ್ಮರಣೆಯನನವರತ ಇರುವಂತೆ ಕೃಪೆಮಾಡೋ 3
--------------
ವರಾವಾಣಿರಾಮರಾಯದಾಸರು
ನಾಟಕ ರಂಗದಲಿ ನಟಶಿರೋಮಣಿಯೊಬ್ಬ ಪಟುತನದಿ ವಿಧವಿಧನ ನಟನೆಗಳ ತೋರುವನು ಪ ಅಘಟನಾಘಟನ ಶಕ್ತನ ಕಪಟನಾಟಕವು ಘಟಕರಲ್ಲದ ಜನಕೆ ಎಟುಕದಾನೋಟ ಅ.ಪ ಮುಖ್ಯಪಾತ್ರವು ನಮ್ಮ ರುಕ್ಮಿಣಿ ರಮಣನದು ಮುಖ್ಯತಾರೆಯು ಲೋಕ ಜನನಿ ಲಕುಮಿ ಇಕ್ಕಿದನು ಗೋರೂಪ ಚತುರಾನನನು ಮುದದಿ ಮುಖ್ಯಪ್ರಾಣನೆ ತುರಗ ಮುಕ್ಕಣ್ಣ ಕರುವಾದ 1 ಸುಖಸಾರನನು ಪಡೆದು ಧನ್ಯಳಾದ ಯಶೋದೆ ಬಕುಳೆಯೆ ತಾನಾದಳೀ ನಾಟಕದಲಿ ಅಕಳಂಕ ಮಹಿಮನನು ಅಗಲದಿದ್ದ ಸತಿಯು ಮುಖನೋಡಿ ಕೋಪದಲಿ ಕಲ್ಲುಗಳನೆಸೆದಳು 2 ಸರ್ವತ್ರ ವ್ಯಾಪ್ತನಿಗೆ ಇರಲು ಜಗವು ಸಿಗದೆ ಕಿರಿದ ತಾ ಹಲ್ಲುಗಳ ವರಹನಲ್ಲಿ ಹರನ ತಾತನು ತಾನು ಸ್ಮರನ ಬಾಣದಿ ನೊಂದ ಸುರಮೋಹಿನಿಯು ಇಂಥ ಕೊರವಂಜಿಯಾದಳು3 ಹುಟ್ಟಿಸುವ ಬೊಮ್ಮನನು ಪುಟ್ಟಶಿಶುವನೆ ಮಾಡಿ ಹೊಟ್ಟೆಗಿಲ್ಲದೆ ಬಹಳ ಬಾಡಿ ಇರಲು ಮೃಷ್ಟಾನ್ನವನು ಚಿನ್ನ ತಟ್ಟೆಯಲಿ ತಂದಿಡಲು ಶ್ರೇಷ್ಠವಿದು ಜನನಿಗೆನ್ನುತ ತಿಂದು ತೇಗಿದಳು 4 ಬಡುಕನೆದೆಗೊದೆಯಲವನಡಿಗಳಿಗೆ ಶರಣೆಂದ ಕಡು ಕೋಪಿ ಗೋವಳನ ಕೊಡಲಿಗೊಡ್ಡಿದ ಶಿರವ ಹಿಡಿ ಮಣ್ಣು ಪಿಂಡಗಳನಿತ್ತ ಚಂಡಾಲನಿಗೆ ಸಡಗರದಿ ಲಕುಮಿಯನೇ ಕರದಲಿತ್ತ ಪ್ರಸನ್ನ 5
--------------
ವಿದ್ಯಾಪ್ರಸನ್ನತೀರ್ಥರು
ನಾಟ್ಯವಾಡಿದ ನಮ್ಮ ನಾರಸಿಂಹನ ಭಕ್ತ ಶಿಷ್ಟೇಷ್ಟ ಜನಪ್ರಿಯ ಶ್ರೀ ಪಾರ್ವತೀಶ ಪ. ಪರಮ ಸಂತೋಷದಲಿ ಉದಯಸ್ತ ಪರಿಯಂತ ಸಿರಿವರ ರಾಮನ ಪರಮ ನಾಮಾಮೃತವ ತರುಣಿ ಗಿರಿಜೆಗೆ ಅರುಹಿ ಮರೆದು ತನುಮನವನ್ನು ಉರುತರದ ಭಕ್ತಿಯಿಂ ಪರಮ ವೈರಾಗ್ಯನಿಧಿ 1 ತರತಮ್ಯ ಜಗಸತ್ಯ ಹರಿಯು ಸರ್ವೋತ್ತಮನು ಸಿರಿಯು ಅನಂತರದಿ ವಾಯು ಜೀವೋತ್ತಮನು ಪರಮ ವೈರಾಗ್ಯ ಹರ ವೈಷ್ಣವೊತ್ತಮನೆನುತ ಉರವಣಿಸಿ ನುಡಿಯುವರ ನುಡಿ ಕೇಳಿ ಹರುಷದಿ 2 ಗೋಪಾಲಕೃಷ್ಣವಿಠಲ ತಾ ಪ್ರೀತಿಯಿಂದಲಿ ಗೋಪತನಯರನೆಲ್ಲ ಸಲಹಲೋಸುಗದಿ ಪಾಪಿ ಕಾಳಿಂಗನ ಫಣೆಯಲ್ಲಿ ಕುಣಿದುದು ಪರಿ ಎಂದೆನುತ ತಾ ಪ್ರೀತಿಯಿಂ ತೋರಿ 3
--------------
ಅಂಬಾಬಾಯಿ
ನಾನಿನ್ನ ತೆಗಳಿದೆನೇ ರಂಗಯ್ಯ ನಾನಿನ್ನ ಮಹಿಮೆಯ ಹೊಗಳಿದೆನಲ್ಲವೆ ಪ ನೀನೇತಕೆನ್ನೊಳು ದಯತೋರದಿರುವೆ ನಾನಿನ್ನ ಚರಣವ ದೃಢದಿ ನಂಬಿರುವೆ ಅ.ಪ ಮೀನಾಗಿ ನಾಲ್ಕುಮಕ್ಕಳ ಹೊತ್ತು ತಂದೆ ನೀನೇ ಕಮಠನಾಗಿ ನಗವೆತ್ತಿ ನಿಂದೆ ದಾನವ ಸಂಹಾರಕಾಗಿ ಸೂಕರನಾದೆ ನೀನೇ ನರಹರಿಯೆಂದು ನುತಿಸಿದೆನಲ್ಲದೆ 1 ಭೂಮಿಯನಳೆದವನೆಂದೆ ನೀನೇ ಭೂಮಿಪರನು ಕೊಂದೆ ಎಂದೆ ಭೂಮಿಜೆಯರಸ ರಾವಣವೈರಿಯೆಂದೆ ಕಾಮಪಾಲನು ಹಲಧರನೆಂದೆನಲ್ಲದೆ 2 ತರುಣಿದ್ರೌಪದಿಗಾಗಿ ಕುರುಕುಲವಿರಿದೆ ತುರಗವನೇರಿ ದುಷ್ಟರನೆಲ್ಲ ತರಿದೆ ಶರಣ ಜನರಿಗಾಗಿ ಹರಿಹರ ನೀನಾದೆ ವರದ ಮಾಂಗಿರಿರಂಗ ನೀನೆಂದೆನಲ್ಲದೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾನೇನು ನಿನ್ನಯ ಚರಣವ ಮಾಣೆನು ಪ ಮಾನವ ಕಾಯ್ವರನನ್ಯರ ಕಾಣೆನು ಅ.ಪ. ಕಣ್ಣನು ಬಿಡುತಲಿ ಬಿರಿಬಿರಿ ನೋಡುತಿಣ್ಣನೆ ಬೆಟ್ಟದ ಮೇಲೆ ಬಿಸಾಡುಮಣ್ಣನುಗ್ಗಲು ಹಲ್ಲಲ್ಲಿ ತೋಡುಸಣ್ಣನ ಉಗುರಿಲಿ ಹರಿಕೊಂಡು ನೋಡು 1 ಕಾಲಲಿ ತಲೆಯನು ತುಳಿಯುತೋಡಾಡುಮೇಲಾಗಿ ಕೊಡಲಿಯನೊಗೆದು ಈಡಾಡುಬಾಲದ ಮಂಗನ ಕರಡಿಯ ಛೂಬಿಡುಸೋಲಿಸಲಾವುದೆ ತಂತ್ರವ ಹೂಡು 2 ಮೃದು ನುಡಿಯಲಿ ಅವಮಾನಿಸಿ ನೂಕುಕುದುರೆಯ ತಂದೆನ್ನ ಮೈಮೇಲೆ ಹಾಕುಗದುಗಿನ ವೀರನಾರಾಯಣ ಸಾಕುಪದಗಳ ಸೇವೆಯು ನಿತ್ಯದಿ ಬೇಕು 3
--------------
ವೀರನಾರಾಯಣ
ನಾನೊಂದು ಮಾಡಲು ತಾನೊಂದಾದಮೇಲಿನ್ನೇನಿನ್ನೇನು ದೇವರೆಂದು ನಮಿಸಲು ದೆವ್ವಾಗಿ ಬಡಿದ ಮೇಲಿನ್ನೇನಿನ್ನೇನು ಜೀವದಾಪ್ತರೆ ತನ್ನ ಕೊಲ್ಲಲೆತ್ನಿಸಿದರಿನ್ನೇನಿನ್ನೇನು 1 ತಾಯ್ತಂದೆಗಳೆ ಸುತರಿಗ್ವಿಷವನೆರೆದ ಮೇಲಿನ್ನೇನಿನ್ನೇನು ಕೈಯೊಳು ಪಿಡಿದ ಬೆತ್ತ ಹಾವಾಗಿ ಕಚ್ಚಲು ಇನ್ನೇನಿನ್ನೇನು 2 ಕಣ್ಣಿಲ್ಲದವನಿಗೆ ಮಾರ್ಗ ತಪ್ಪಿದ ಮೇಲೆನ್ನೇನಿನ್ನೇನು 3 ಹಾಲೆಂದು ಸವಿದರೆ ಹಲ್ಲು ಮುರಿದಮೇಲಿನ್ನೇನಿನ್ನೇನು ಮಾಲ್ಯೆಂದು ಧರಿಸಲು ಉರುಲು ಬಿದ್ದ ಮೇಲಿನ್ನೇನಿನ್ನೇನು 4 ಬೇಲ್ಯೆದ್ದು ಹೊಲದ ಬೆಳೆಯ ತಾ ಮೇಯಲಿನ್ನೇನಿನ್ನೇನು ಮಾಳಿಗೆ ಮನೆಯೆ ತಾ ಗಾಳಿಗೆ ಸಡಲಿದರರಿನ್ನೇನಿನ್ನೇನು 5 ಭೂಪತಿಗಳತಿನೀತಿತಪ್ಪಿದ ಮೇಲಿನ್ನೇನಿನ್ನೇನು ಪಾಪಿಗಳತಿಶಯಯಕೋಪ ತಾಳಿದ ಮೇಲಿನ್ನೇನಿನ್ನೇನು 6 ನೋಪಿದ ಗೌರಿಯೆ ಶಾಪವಿತ್ತ ಮೇಲಿನ್ನೇನಿನ್ನೇನು ದೀಪವೆ ಕಾಲಾಗ್ನಿಯಾಗಿ ಉರಿದಮೇಲಿನ್ನೇನಿನ್ನೇನು 7 ಹೂಳಿಟ್ಟ ಹಣವೆಲ್ಲ ಚೇಳಾಗ್ಹರಿದ ಮೇಲಿನ್ನೇನಿನ್ನೇನು ಅಳಿದ ಗೋವುಗಳು ಹುಲಿಯಾಗ್ಹಾರಿದ ಮೇಲಿನ್ನೇನಿನ್ನೇನು 8 ಆಳುವ ಒಡೆಯರೆ ಅಹಿತರಾದ ಮೇಲಿನ್ನೇನಿನ್ನೇನು ಬಾಳುವುದೆಂತಯ್ಯ ಶ್ರೀರಾಮ ನೀಮುನಿದರಿನ್ನೇನಿನ್ನೇನು 9
--------------
ರಾಮದಾಸರು
ನಾರದ ಕೊರವಂಜಿ ಜಯ ಜಯ ದಯಾಕರನೆ ಹಯವದನ ಭಯಹರನೆ ಜಯ ಶೀಲಸಾಧ್ವರನೆ ಜಯ ದೀನೋದ್ಧರನೆ ಪ್ರಿಯಜನ ಮನೋಹರನೆÀ ಸುಯತಿ ಸಾಕಾರನೆ 1 ಹರಿಯೇ ಪತಿಯಾಗಬೇಕೆಂದು ರುಕುಮಿಣಿ ಪರದೇವತೆಯ ನೆನವುತಿರಲು ಕೊರವಂಜಿ ವೇಷದಿ ರುಕುಮಿಣಿದೇವಿಗೆ ಪರಮ ಹರುಷವೀವೆನೆಂದು ನಾರದ ಬಂದ 2 ಧರಣಿ ಮಂಡಲದಲ್ಲಿ ನಾರದ ಧರಿಸಿ ಕೊರವಂಜಿ ವೇಷವ ಸುರನರಾದಿಗಳೆಲ್ಲರಿಗೆ ತಾ ಪರಮ ಆಶ್ಚರ್ಯ ತೋರುತ್ತ 3 ಬಂದಳು ಕೊರವಂಜಿ ಚಂದದಿಂದಲಿ ಮಂದಹಾಸವು ತೋರುತ್ತ ಪಾದ ಧಿಂಧಿಮಿ ಧಿಮಿ- ಕೆಂದು ನಿಂದಭೀಷ್ಟವ ಪೇಳುತ 4 ಗಗನದಂತಿಹ ಮಧ್ಯವು ಸ್ತ- ನಘನ್ನ ಭಾರಕೆ ಬಗ್ಗುತ ಜಗವನೆಲ್ಲವ ಮೋಹಿಸಿ ಮೃಗ ಚಂಚಲಾಕ್ಷದಿ ನೋಡುತ 5 ಕನಕಕುಂಡಲ ಕಾಂತಿಯಿಂದಲಿ ಗಂಡಭಾಗವು ಹೊಳೆವುತ್ತ ಕನಕಕಂಕಣ ನಾದದಿಂದಲಿ ಕಯ್ಯ ತೋರಿ ಕರೆಯುತ್ತ 6 ಕುಂಕುಮಗಂಧದಿ ಮಿಂಚುವೈಯಾರಿ ಚುಂಗು ಜಾರಲು ಒಲವುತ್ತ ಕಿಂಕಿಣಿ ಸರಘಂಟೆ ಉಡಿಯೊಳು ಘಲ್ಲು ಘಲ್ಲೆಂದು ಬಂದಳು ಘಲ ಘಲ ಘಲ್ಲು ಘಲ್ಲೆಂದು ಬಂದಳು 7 ಕರೆದಾಳೆ ಸುಪಲ್ಲವ ಸುಪಾಣಿ ಕೀರವಾಣಿ ಪರಿಮಳಿಸುವ ಫಣಿವೇಣಿ 8 ಪರಿಪರಿ ಬೀದಿಯಲ್ಲಿ ನಿಂದು ಹಿಂದೂ ಮುಂದೂ ಸರಸವಾಡುತ್ತ ತಾನೆ ಬಂದು 9 ಕೊರವಂಜಿ ಯಾರೊಳಗೆ ನೋಡಿ ಕೂಡಿಯಾಡಿ ಸರಿಯಿಲ್ಲವೆಂದು ತನ್ನ ಪಾಡಿ 10 ಮನೆಮನೆಯಿಂದ ಬಂದಳು ಕೊರವಂಜಿ ತಾನು ಮನೆಮನೆಯಿಂದ ಬಂದಳು ರನ್ನವ ತೆತ್ತಿಸಿದ ಚಿನ್ನದ ದಿವ್ಯ ಬುಟ್ಟಿ ತನ್ನ ನೆತ್ತಿಯಲ್ಲಿಟ್ಟು ಬೆನ್ನಿಲಿ ಸಿಂಗಾನ ಕಟ್ಟಿ 11 ಗದ್ಯ : ಸುಗುಣಾಂಗಿಯರು ಪೇಳಲು ಮುದದಿಂದ ರುಕುಮಿಣಿದೇವಿ ತಾನೂ ಮುಗುಳು ನಗೆಯಂ ನಗುತ ಕೊರವಂಜಿಯನೆ ಅತಿಬೇಗ ಜಗವರಿಯೆ ಕರೆಯೆಂದಳು. ಶ್ರೀ ರುಗ್ಮಿಣಿ ತಾ ಬಂದಳು ಸ್ತ್ರೀಯರ ಕೂಡಿ ಚಾರುಹಾಸದಿಂದೊಪ್ಪುತ ಚೆಲ್ವ ದಿವ್ಯ ನೋಟಂಗಳಿಂದ ರಾಜಿಪ ಕಂಕಣದಿಂದ ರಮ್ಯ ನೂಪುರಗಳಿಂದ ರಾಜಚಿಹ್ನೆಗಳಿಂದ ರಾಜೀವನೇತ್ರೆ ಒಲವುತ್ತ12 ರಾಜಾಧಿರಾಜ[ರು]ಗಳಿಂದ ರಾಜಸಭೆಯಲ್ಲಿ ಪೂಜಿತಳಾದ ರಾಜಹಂಸಗ-ಮನೆಯು ಬರಲು ರಂಜಿತಳಾಗಿ ಒಲೆವುತ್ತ ಗದ್ಯ : ಆಗಲಾ ದೂತಿಕೆಯರು ಕೊರವಂಜಿಯನೆ ಅತಿ ಬೇಗ ಕರೆಯಲು ಬೇಕಾದ ವಜ್ರವೈಢೂರ್ಯ ರಾಗವಿಲಸಿತವಾದ ದ್ವಾರ ಭೂಭಾರದಿಂದೆಸೆವ ಭಾಗಧೇಯದಿಂ ರಾಜ ಸತ್ಕುಲವಾದ ದಿವ್ಯ ಮಂದಿರಕೆ ತ್ಯಾಗಿ ರುಕುಮಿದೇವಿ ನೋಡಲಾ ಶ್ರೀ- ರಾಗದಿಂ ಗಾನವಂ ಪಾಡುತ್ತ ಕೊರವಂಜಿಯು ಬಂದ ಚೆಂದ13 ಬಂದಾಳಂದದಲಿ ಬಾಗಿಲೊಳಗೆ ದಿಂಧಿಮಿಕೆನ್ನುತ 14 ಚೆಲುವ ತುರುಬಿನಿಂದಲಿ ಜಗುಳುವ ಚಲಿಸುವ ಪುಷ್ಪದಂದದಿ ನಲಿನಲಿ ನಲಿದಾಡುತ್ತ ಮಲ್ಲಿಗೆ ಝಲಝಲಝಲ ಝಲ್ಲೆಂದು ಉದುರುತ್ತ ಕಿಲಿಕಿಲಿ ಕಿಲಿ ಕಿಲಿ ಕಿಲಿಯೆಂದು ನಗುತ್ತ 15 ಗದ್ಯ :ಥಳಥಳನೆ ಹೊಳೆವುತ್ತ ನಿಗಿನಿಗೀ ಮಿಂಚುತ್ತ ರನ್ನದ ಬುಟ್ಟಿಯ ಕೊಂಕಳಲಿಟ್ಟು ಧಿಗಿಧಿಗಿಯೆಂದು ನೃತ್ಯವನ್ನಾಡುತ್ತ ಎತ್ತರದಲಿ ಪ್ರತಿಫಲಿಸುವ ಮುತ್ತಿನಹಾರ ಉರದೊಳಲ್ಲಾಡುತ ನಿಜಭಾಜ ಮಾರ್ತಾಂಡ ಮಂಡಲ ಮಂಡಿತಾ ಪ್ರಭು ಪ್ರತಿಮ ದಿಶದಿಶ ವಿಲಸಿತವಾದ ಭುಜಕೀರ್ತಿಯಿಂದೊಪ್ಪುವ ಆಕರ್ಣಾಂತ ಸುಂದರ ಇಂದೀವರದಳಾಯತ ನಯನ ನೋಟಗಳಿಂದ ಚಂಚಲಿಸುವÀ ಮಿಂಚಿನಂತೆ ಮಿಂಚುವ ಕಾಂತೀ ಸಂಚಯಾಂಚಿತ ಕಾಂಚನೋದ್ದಾಮ ಕಾಂಚೀ ಪೀತಾಂಬರಾವಲಂಬನಾಲಂಬಿತಾ ನಿತಂಬದಿಂದೊಪ್ಪುವ ಝೇಂಕರಿಸುವ ಭೃಂಗಾಂಗನಾಸ್ವಾದಿತ ಜಗುಳುವ ಜುಗುಳಿಸುವ ಪರಿಮಳಿಸುವ ಜಘನ ಪ್ರದೇಶಗಳಲ್ಲಿ ವಿವಿಧ ಪುಷ್ಪಗಳಿಂದ ಅಲಂಕೃತ ನಿತಾಂತಕಾಂತಿಕಾಂತಾ ಸುಧಾಕುಂತಳ ಸಂತತಭರದಿಂದೊಪ್ಪುವ ಪುಂಜೀಕೃತ ಮಂಜುಭಾಷಣ ಅಪರಂಜಿ ಬಳ್ಳಿಯಂತೆ ಮನೋರಂಜಿತಳಾದ ಕೊರವಂಜಿಯು ನಿಶ್ಶಂಕೆಯಿಂದ ಕಂಕಣಕ್ಷಣತೆಯಿಂದ ಕೊಂಕಳ ಬುಟ್ಟಿಯ ಪೊಂಕವಾಗಿ ತನ್ನಂಕದಲ್ಲಿಟ್ಟುಕೊಂಡು ಬೆನ್ನಸಿಂಗನ ಮುಂದಿಟ್ಟು ಚೆಂದವಾಗಿ ರುಕುಮಿಣಿ ದೇವಿಯ ಕೊಂಡಾಡಿದಳು. ಗದ್ಯ :ಅವ್ವವ್ವ ಏಯವ್ವ ಕೈಯ್ಯ ತಾರೆ ಕೈಯ್ಯ ತೋರೆ ನೀ ಉಂಡ ಊಟಗಳೆಲ್ಲ ಕಂಡ ಕನಸುಗಳೆಲ್ಲ ಭೂಮಂಡಲದೊಳಗೆ ಕಂಡ್ಹಾಗೆ ಪೇಳುವೆನವ್ವಾ. ಶಿಖಾಮಣಿ ಏನೇ ರುಕುಮಿಣಿ ನಿನ್ನ ಚೆಲುವಿಕೆಯನೇನೆಂತು ಬಣ್ಣಿಪೆ. ಮದನ ಶುಭ ಅಮಿತ ರಸಶೃಂಗಾರದಿಂದೊಪ್ಪುವ ನಿನ್ನ ಕೀರ್ತಿಯ ಕೇಳಿ ಬಂದೆನಮ್ಮಾ ಅಂಗ ವಂಗ ಕಳಿಂಗ ಕಾಶ್ಮೀರ ಕಾಂಭೋಜ ಸಿಂಧೂ ದೇಶವನೆಲ್ಲ ತಿರುಗಿ ಬಂದೆನಮ್ಮಾ 16 ಮಾಳವ ಸೌರಾಷ್ಟ್ರ ಮಗಧ ಬಾಹ್ಲೀಕಾದಿ ಚೋಳ ಮಂಡಲವನೆಲ್ಲ ಚರಿಸಿ ಬಂದೆನಮ್ಮಾ17 ಲಾಟ ಮರಾಟ ಕರ್ಣಾಟ ಸೌಮೀರಾದಿ ಅಶೇಷ ಭೂಮಿಯ ನಾನು ನೋಡಿ ಬಂದೆನಮ್ಮಾ 18 ಮಾಯಾ ಕಾಶೀ ಕಾಂಚಿ ಅವಂತಿಕಾಪುರೀ ದ್ವಾರಾವತೀ ಚೇದಿ|| ಮೆಚ್ಚಿ ಬಂದ ಕೊರವಿ ನಾನಮ್ಮ ಪುರಗಳಿಗೆ ಹೋಗಿ ನರಪತಿಗಳಿಗೆ ಸಾರಿ ಬರÀ ಹೇಳಿ ನಾ ಕಪ್ಪವ ತಂದೆ 19 ಸತ್ಯಮುಗಾ ಚೆಪ್ಪುತಾನಮ್ಮಾ ಸಂತೋಷಮುಗಾ ವಿನುವಮ್ಮ ಸತ್ಯ ಹರುಶ್ಚಂದ್ರನಿಕಿ ಚಾಲ ಚೆಪ್ಪಿತಿ 20 ಕನ್ನೆ ವಿನವೆ ನಾ ಮಾಟ ನಿನ್ನ ಕಾಲಂನೆ ನೇನಿಕ್ಕು(?) ಚಿನ್ನ ಸಿಂಗಾನೀ ತೋಡೂನೆ ಚೆಪ್ಪ್ಪೆಗಮ್ಮಾನೇ 21 ಗದ್ಯ :ಆಗ ರುಕುಮಿಣಿದೇವಿಯು ಚಿತ್ರವಿಚಿತ್ರ ಚಿತ್ತಾರ ಪ್ರತಿಮೋಲ್ಲಸಿತ ತಪ್ತ ರಜತರಂಜಿತಸ್ಫಟಿಕ ಮಣಿಗಣ ಪ್ರಚುರ ತಟಿಕ್ಕೋಟಿ ಜ್ವಾಲಾವಿಲಸಿತವಾದ ವಜ್ರಪೀಠದಲಿ ಕುಳಿತು ಚಿನ್ನದ ಮೊರಗಳಲ್ಲಿ ರನ್ನಗಳ ತಂದಿಟ್ಟುಕೊಂಡು ಕೊರವಂಜಿಯನೆ ಕುರಿತು ಒಂದು ಮಾತನಾಡಿದಳು. ವೊಲಿಸೀನ ಸೊಲ್ಮೂಲೆಲ್ಲ ವನಿತೆನೆ ನಿಂತೂ(?) 22 ಗದ್ಯ : ಆಗ ರುಕುಮಿಣಿದೇವಿಯಾಡಿದ ಮಾತ ಕೇಳಿ ಕೊರವಂಜಿಯುಯೇ-ನೆಂತೆಂದಳು. ನೆನೆಸಿಕೊ ನಿನ್ನಭೀಷ್ಟವ ಎಲೆ ದುಂಡೀ ನೆನೆಸಿಕೊ ವನಿತೆ ಶಿರೋಮಣಿಯೆ ಘನಮುದದಿಂದ ನೆನೆಸಿಕೊ 23 ರನ್ನೆ ಗುಣಸಂಪನ್ನೆ ಮೋಹನ್ನೆ ಚೆನ್ನಾಗಿ ಮುರುಹಿಯ ಮಾಡಿ ನೆನೆಸಿಕೊ 24 ಮಾಧವ ಸೇತುಮಾಧವ ವೀರರಾಘವ ಚಿದಂಬರೇಶ್ವರ ಅರುಣಾಚÀಲೇಶ್ವರ ಪಂಚನದೇಶ್ವರ ಶ್ರೀಮುಷ್ಣೇಶ್ವÀÀರ ಉಡುಪಿನ ಕೃಷ್ಣ ಮನ್ನಾರು ಕೃಷ್ಣ ಸೋದೆ ತ್ರಿವಿಕ್ರಮ ಬೇಲೂರು ಚೆನ್ನಪ್ರಸನ್ನ ವೆಂಕಟೇಶ್ವರ ಸೂರ್ಯನಾರಾಯಣ ಇವು ಮೊದಲಾದ ದೇವತೆಗಳೆಲ್ಲ ಎನ್ನ ವಾಕ್ಯದಲಿದ್ದು ಚೆನ್ನಾಗಿ ಸಹಕಾರಿಗಳಾಗಿ ಬಂದು ಪೇಳಿರಯ್ಯಾ ಮಂಗಳದ ಕೈಯ್ಯ ತೋರೇ ಎಲೆದುಂಡೀ ಕೈಯ ತೋರೆ ಕೈಯ ತೋರೆ 25 ಕೇಳೆ ರನ್ನಳೆ ಎನ್ನ ಮಾತ ಬೇಗ ಇಳೆಯರಸನಾದನು ಪ್ರಿಯ26 ಕಳಸಕುಚಯುಗಳೆ ಚಿಂತೆ ಬೇಡ ನಿನ್ನ ಕರೆದಿಂದು ಕೂಡ್ಯಾನು ರಂಗ 27 ನಾಡಿನೊಳಧಿಕನಾದ ನಾರಾಯಣನ ಪತಿ ನೀನು ಮಾಡಿ ಕೊಂಡೆನೆಂದು ಮನದಲ್ಲಿ ನೆನಸಿದೆ ಕಂಡ್ಯಾ ನಮ್ಮ ಕೃಷ್ಣ ಕುತೂಹಲದಿ 28 ಸುಂದರಶ್ಯಾಮ ಅಲ್ಲಿ ನÀಂದಾ ನಂದಾನಾಡುವಾನಂದಮುಗಾವಚ್ಚಿ ಕೂಡೇನಮ್ಮಾ 29 ಶಂಖಚಕ್ರಯುಗಲ ಪಂಕಜನಾಭುಂಡು ಪಂಕಜಮುಖೀ ನೀವು ಪ್ರಾಣಿಗ್ರಹಣಮು ಚೇಸಿ ಕೂಡೆನಮ್ಮಾ 30 ಚೆಲುವಾ ನಾ ಮಾಟಾ ನೀಕು ಪುಚ್ಚಾ ಚೆಲುವಾ ನಾ ಮಾಟ ಕಲ್ಲಗಾದು ನಾ ಕಣ್ಣೂಲಾನೂ ಪಿಲ್ಲ ವಿನುವಮ್ಮ ಪಲ್ಲವಪಾಣೀ ಚೆಲುವಾ ನಾ ಮಾಟ31 ದಮಯಂತೀಕೀನೇ ಚೆಪ್ಪಿತಿ ನಮ್ಮವೆ ಮಾಟ ಅಮರುಲಕೆಲ್ಲಾ ಅನುಮೈನವಾಡು ಚೆಪ್ಪೀ ಅಮಿತ ಬಹುಮಾನಾಮಂದೀತೀನಮ್ಮಾ ಚೆಲುವ ನಾ ಮಾಟ ಚೆಲುವ 32 ಬಂತೆ ಮನಸಿಗೆ ನಾ ಹೇಳಿದ್ದು ಚಿಂತೆ ಸಂತೋಷದಿ ನಾನಾಡಿದ ಶಾಂತ ಮಾತೆಲ್ಲ ಇದು ಪುಸಿಗಳಲ್ಲ ಬೇಗ ಬಂದಾನೋ ನಲ್ಲಾ ಆಹಾ ಆಹಾ ಬಂತೇ ಮನಸ್ಸಿಗೆ
--------------
ವಾದಿರಾಜ
ನಾರಾಯಣ ಉದಿಸುವನೆಂದು ಆ ಪೂರ್ವಾಂತರ್ಯಾಮಿ ಅವರ ಸಲಹಲು ಸರ್ವದಾ ಅಪೂರ್ವ ತೇಜೋವಂತನಾಗಿ ಅವರ ಹೃದಯದಿ ಸೂರ್ಯತೇಜದಿ ಮೆರೆಯುತಿರುವ ಸರ್ವದಾ ಎಂದು ಅಪೂರ್ವ ಜ್ಞಾನದಿ ನೆನಯುತಿರಿ ಹರಿಭಕ್ತರು 1 ಎದ್ದು ಮುಖ ತೊಳೆದು ನಿಮ್ಮಲ್ಲಿದ್ದ ಕಲ್ಮಷ ತೊಳೆದು ನಿಮ್ಮ ಶುದ್ಧ ಮನದಲಿ ನೆನೆದು ನಿಲಿಸಿ ಹರಿ ಧ್ಯಾನದಿ ಸ್ನಾನಾನ್ಹೀಕಬದ್ಧಕಂಕಣರಾಗಿ ಬ್ರಾಹ್ಮೀಮುಹೂರ್ತದಲಿ ಗೈಯೆ ನಿಮ್ಮಲ್ಲಿದ್ದ ಕಲ್ಮಶವೆಲ್ಲ ಕಳೆದತಿ ಹರ್ಷವೀವ ನಿಮ್ಮ ಶುದ್ಧಾಚರಣೆಗೆ ಮೆಚ್ಚಿ ನಿಮ್ಮ ಭಕ್ತಿಗೆ ನಿತ್ಯ ಬದ್ಧ ಕಂಕಣರಾಗಿ ಸ್ತುತಿಸೆ ನಿತ್ಯ ಹರಿ ಭಕ್ತರು 2 ಮಾಧ್ಯಾನ್ಹಿಕಾದಿಗಳಾಚರಿಸುತ ಹರಿಯ ಮಧ್ಯವರ್ತಿಯನೆನಿಸಿ ಆ ಸೂರ್ಯನಂತರ್ಯಾಮಿ ನಾರಾಯಣನಿ- - ಗಘ್ರ್ಯಪಾದ್ಯವನಿತ್ತು ಸುಭೋಜನವ ಮಾಡಿ ನಿಮ್ಮ ಪೂರ್ವಜರನುಗ್ರಹದಿ ಮಜ್ಜನ್ಮಸಾರ್ಥಕವೆಂದಾವನರಿವನೋ ಅವನ ಹೃದಯ ಮಧ್ಯವರ್ತಿಯಾಗಿದ್ದು ಕಾವ ಸದ್ಗುಣೋಪೇತ ಭಕ್ತರ ಕೈ ಬಿಡ ಮಧ್ವಾಂತರ್ಗತ ಶ್ರೀ ಶ್ರೀನಿವಾಸ ಅವನ ಮನದಿ ನೆನೆಯಿರಿ ಹರಿ ಭಕ್ತರು 3 ಜವÀನ ಬಾಧೆಯು ಇಲ್ಲ ಹರಿ ಭಕ್ತರಿಗೆ ಯವನ ರೂಪದ ಕಲ್ಕಿ ಹರಿಯ ನೆನೆವರಿಗೆ ಜವದಿ ಯಮನಾಳ್ಗಳು ಮುಟ್ಟಲಂಜುವರು ಹರಿಭಕ್ತರನು ಕವಿ ನಾರಾಯಣನ ಧ್ಯಾನಿಪರಿಗೆ ಅವನಿಯೊಳು ಭಯವಿಲ್ಲ ಅವರಿಗೆ ಸಮನಿಲ್ಲ ಅವರಲ್ಲಿ ಹರಿಯಿದ್ದ ಕಾರಣದಿ ಜವದಿ ಹರಿ ದಾಸರೆಲ್ಲ ಶ್ರೀ ಶ್ರೀನಿವಾಸನ ಭಕ್ತರ ಸಂಗದೊಳಿರಿ ಹರಿಭಕ್ತರು 4 ಯಾರ ಭಯವಿಲ್ಲ ಹರಿ ನಾಮಕೆ ದಾರಿ ಹೋಕರು ಬಾರರಿದಕೆ ಭಾರವಿಲ್ಲವು ಮನಕೆ ಸಂಸಾರಭಯವಿಲ್ಲವರಿಗೆ ಹರಿ ಎಂಬುದನೆ ಸಕಲ ಕಾರ್ಯವ ನಿರ್ವಹಿಸುವನೆಂದರಿತವರಿಗೆ ಯುಕುತಿ ಬುದ್ಧಿಯು ಯಾತಕೆ ಯಾರ ಭಯವೇಕೆ ಹರಿಸಖರಾಗಿರಲವರಿಗೆ ಅಂಜಿಕೆಯಾಕೆ ಯಾರನಾಶ್ರಯಿಸುವ ಶ್ರಮವಿಲ್ಲ ಇದನರಿತು ಹರಿಭಕ್ತರು ಶಕುನ ಅಪಶಕುನವೆನ್ನರು ಮನದಿ ಯುಕುತಿಯ ಮಾಡರು ಪರರ ಬೇಡೆ ಶ್ರೀ ಶ್ರೀನಿವಾಸ ಭಕ್ತರು ಅವರ ಮತ ಹಿಡಿದು ಬದುಕಿ ಹರಿಭಕ್ತರು 5 ಜತೆ ಕರುಣಾಕರ ಹರಿಭಕ್ತರಭಿಮಾನಿ ವರದಭಯ ಹಸ್ತವ ಕೊಡುವ ಶ್ರೀ ಶ್ರೀನಿವಾಸ
--------------
ಸರಸ್ವತಿ ಬಾಯಿ