ಒಟ್ಟು 1542 ಕಡೆಗಳಲ್ಲಿ , 109 ದಾಸರು , 1259 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣೇಶ ಸ್ತುತಿ ಮಂಗಲಂ ಜಯ ಮಂಗಲಂ ಪ ಗಜಮುಖದೆಸೆವೆ ಲಂಬೋದರಗೆ ತ್ರಿಜಗವಂದಿತ ಮೋದಕ ಕರಗೆ ರಜತಾದ್ರಿವಾಸನ ರಮಣಿಯಸುತನಿಗೆ ಭಜಕರ ಪಾಲಿಪ ವಿಜಯನಿಗೆ 1 ಮೂಷಿಕ ತೇಜಿಯನೇರಿದಗೆ ದೇಶದಿ ಕೀರ್ತಿಯ ಬೀರಿದಗೆ ಶೇಷಾಭರಣವೆತ್ತ ಶೂರ್ಪಕರ್ಣನಿಗೆ ವಾಸೆಯಿಂದ ಭಕ್ತರ ಪೋಷಿಪಗೆ ಮಂಗಲಂ 2 ಕಡುಕರುಣದಿ ಜಗವನು ಕಾಯ್ವಾ ಯೆ ನ್ಹೊಡೆಯ ಶ್ರೀ ವಿಘ್ನೇಶ್ವರ ದೇವಾ ಇಡಗುಂಜಿಯೊಳಗಿದು ದೃಢದಿ ಲಕ್ಷ್ಮಣನಿಗೆ ಗಡಣವಿದ್ಯವನಿತ್ತು ನುಡಿಸುವಗೆ ಮಂಗಲಂ 3
--------------
ಭಟಕಳ ಅಪ್ಪಯ್ಯ
ಗಾಡಿಯೆತ್ತಲಿಂದ ಬಂದುದೆ ಮಾತ ನಾಡಲರಿಯದಿಪ್ಪ ಹೊಚ್ಚ ಹೊಸ ಹರೆಯದ ಮುಗುದೆಗೀ ಪ ಬಳುಕೆ ಸಿಂಹಮಧ್ಯ ಬಟ್ಟಮೊಲೆಗಳು ಮರೆ ತೋರವಾದ ಬಳವಿ ಮುಡಿಯೊಳಲರು ಹೊಯ್ಯನಿಳೆಯಲುದುರಲು ಜಲಜಮುಖದಿ ಬೆಮರುದೋರೆ ವಲಯಹಾರ ಉರದಿ ಘಲಿರು ಘಲಿರೆನೆ ಆವಕಡೆಯು ಕುಲುಕಿ ಕುಲುಕಿ ನಡೆವ ಈ 1 ಮಿಸುಪ ಮಂದಹಾಸ ಮುಖದಿ ಮಸಗಿದಂತ ಕಾಂತಲಜ್ಜೆ ಮುಸುಕೆ ಮಿಸುಪ ಕದಪಿನಲ್ಲಿ ಎಸೆವ ಓಲೆ ಢಾಳಿಸಿ ಸಸಿನೆ ತಿದ್ದಿ ಉರದಿ ಜರಿಯ ವಸನವನ್ನು ಸಂತವಿಸುತ ಕುಸುರಿಲಂಗ ದಂದವನ್ನು ಎಸಸಿ ಬಿಡುವ ನಡೆವ 2 ಕರವನೊಯ್ಯಗೊಲಿದು ಉರಗಗಿರಿಯ ಮೇಲೆ ಬಾಲಚಂದ್ರ ನಿರಲು ಸೆರಗ ಮರೆಯಮಾಡಿ ಮರಳಿ ಮರಳಿ ನೋಡುತಾ ಸ್ಮರನತಾತ ಸುರನಗರದೆರೆಯ ವೈಕುಂಠಲಕ್ಷ್ಮಿಯರಸನೊಡನೆ ನೆರೆದ ಪರಿಯ ಸಿರಿಯ ಗರುವ ಗಮನದಾ 3
--------------
ಬೇಲೂರು ವೈಕುಂಠದಾಸರು
ಗಾನಕೆ ಅತಿ ಸುಲಭ ಪ ದೀನಜನಕೆ ಬಲು ಸಾನುರಾಗನಾದ ಜಾನಕಿನಾಥನ ದಿವ್ಯನಾಮವು ಅ.ಪ ತಾಳ ತಂಬೂರಿ ಮೃದಂಗಗಳಿಂದಲಿ ಪೇಳುವವರಿಗೆ ರಫುಮೌಳಿಯ ನಾಮವು 1 ಘೋರ ಕಲುಷಗಳ ಪಾರಗಾಣಿಸಿ ಮನ ಕೋರಿಕೆಗಳನೀವ ತಾರಕ ನಾಮವು 2 ತಾಪಸ ಸತಿಯಳ ಶಾಪವ ಬಿಡಿಸಿದ ಭೂಪ ದಾಶರಥಿ ದಿವ್ಯನಾಮವು 3 ಲಂಕೆಯ ಪೊಕ್ಕು ನಿಶಾಚರನೆ ಕೊಂದು ಪಂಕಜಾಕ್ಷಿ ಆತಂಕ ಕಳೆದ ನಾಮ 4 ಎನ್ನವರೆಲ್ಲರು ಬನ್ನಿರಿ ಎನ್ನುತ ತನ್ನೊಡನೊಯ್ದು ಪ್ರಸನ್ನರಾಮನ ನಾಮ 5
--------------
ವಿದ್ಯಾಪ್ರಸನ್ನತೀರ್ಥರು
ಗುಡುಗುಡಿ ಭಾರಿ ಗುಡುಗುಡಿಗುಡುಗುಡಿ ಪಡೆಯಿರಿ ಗುರುಪುತ್ರರಾದವರು ಪ ಕಾಯ ಮಾಡಿಭಾಸುರ ಭಕ್ತಿ ಎಂದೆಂಬ ನೀರನೆ ಹೊಯ್ದುಸುಷುಮ್ನವೆಂಬ ಸೂಲಂಗಿಯನೆ ಹಾಕಿ 1 ತ್ರಿವಿಧ ಮೂಲೆಯ ಚೊಂಗೆಭೂತಲದ ಹಮ್ಮೆಂಬ ತೊಪ್ಪಲುಸಾಕಾರ ಗುರುವೆಂಬ ಬೆಂಕಿಯನೆ ಹಾಕಿಏಕಚಿತ್ತವೆಂಬ ಮುಚ್ಚಳವನೆ ಮುಚ್ಚಿ 2 ಸೋಹಂ ಎಂದೆಂಬ ಕೊಳವೆಯನೆ ಹಚ್ಚಿಬಹ ಪೂರಕ ಸೂರಿಯನೆ ಸೇದುತಆಹ ರೇಚಕವೆಂಬ ಹೊಗೆಯನೆ ಬಿಡುತಮಹಾ ಕುಂಭಕವೆಂಬ ಉಸುರನೆ ಹಿಡಿಯುತ 3 ಘುಡು ಘುಡು ಎಂದೆಂಬ ಮೇಘದ ನಾದವನು ನುಡಿಸೆಸುಡು ಮಾಯೆಯೆಂದು ಥೂ ಎಂದು ಉಗುಳುತಬಿಡಬಾರದು ಇದು ನಿತ್ಯವೆಂದೆನುತಅಡಿಗಡಿಗೆ ಊದುತ್ತ ಉರಿಯ ಎಬ್ಬಿಸುತ 4 ಹಾರಿತು ಬ್ರಹ್ಮಾನಂದವೆಂದೆಂಬ ಹರಳುಏರಿತು ಪೂರ್ಣಾನಂದದ ಲಹರಿಜಾರಿತು ತನುಮನವೆಲ್ಲ ಮರೆತು ಚಿತ್ತಸೇರಿತು ಚಿದಾನಂದನೊಳಗೆ ಲಯಿಸಿ ಕೂಡಿ5
--------------
ಚಿದಾನಂದ ಅವಧೂತರು
ಗುಣವಾರಿಧಿಯೆ ಪ ದಾರಾ ಕೃತಿಯನೀ ತೊರಿಸೆನೆಗೆ 1 ದೃಷ್ಟಿಸುವೆನೊ ಶ್ರೀಕೃಷ್ಣನಿನ್ನನು 2 ಚೆನ್ನಾಗಿ ತೊಳೆಯುವೆ ನಿನ್ನಡಿಗಳ 3 ದಿಂದಾಲಂಕರಿಸುವೆ ಸುಂದರಾಂಗನೆ 4 ಮೂಜಗದೊಡೆಯನನು ಪೂಜಿಸುವೆನೊ5 ದೀಪಂಗಳನು ಬಹುದೀಪಿಸುವೆನು 6 ಘೃತ ಮೇಳೈಸುವೆನು ಶ್ರೀಲೋಲನಿಗೆ 7 ಕರ್ಪೂರದಾರತಿಗಳರ್ಪಿಸುವೆನು 8 ಮನದಣಿಯುವಂದದಿನಾ ಕುಣಿದಾಡುವೆ 9 ಸದನದೊಳಿಂಬಿಟ್ಟು ಮುದಹೊಂದುವೆ 10 ಪುಲಿ-ಗಿರಿ ಧಾಮನೆ 11
--------------
ಸರಗೂರು ವೆಂಕಟವರದಾರ್ಯರು
ಗುರು ಚರಣವನು ಸಂಸ್ಮರಿಸಿರೋ ಪಗುರು ಲಕ್ಷ್ಮಿ ವರಜಾತ | ಗುರು ಲಕ್ಷ್ಮಿಪ್ರಿಯ ತೀರ್ಥ ಚರಣ ಸರಸಿಜ ಭಜಿಸೆ | ಕರಣದಂತರ ಬಾಹ್ಯ ಪರಿಶುದ್ಧಿಯನೆ ಗೈದು | ಜ್ಞಾನ ಭಕ್ತಿಯನಿತ್ತು ಹರಿ ಪೊರೆವ ಸಂತತದಲಿ ಅ.ಪ. ಪೂರ್ವಾಶ್ರಮಾ ನಾಮ | ಭೂವಿಬುಧ ಕೃಷ್ಣಾಖ್ಯ ದೇವರಾಯನ ದುರ್ಗ | ದಾವ ನರಸೀಪುರದಿಆವಾಸಿಸುತ್ತಿರಲು | ಓರ್ವ ಸಖನಿವರ ಜ್ಞಾನಾನುಸಂಧಾನದಾ |ಭಾವ ತಿಳಿಯುತ ಮನದ | ಯಾವ ದೊಂದಭಿಲಾಷೆನೀವು ಸಲಿಸುವುದೆನ್ನೆ | ಆವುದೆನುತಲಿ ಕೇಳೆಯಾವ ಪನಸದ ಫಲವ | ಆಸ್ವಾದು ಮಧು ಒಡನೆಓವಿ ಕರಡಿಯು ಕಲಸಿದ 1 ಅದರ ಪ್ರಾಪುತಿಗಾಗಿ | ಬದಿವನನೊಂದಿನವುಬೆದರದಲೆ ಪೊಗುತಿರಲು | ಎದುರೊಂದು ಶಿಲೆ ಮೇಲೆವದಗಿ ಕಲಸಿದ ಕಂಡು | ಅದರೊಡನೆ ಮರನೇರೆ ಬಂದಿತದು ಮರಿಗಳೊಡನೆ |ಅದಕು ಇವರಿಂಗಾಯ್ತು | ಕದನವೂ ಕೆಲಕಾಲ ಒದಗೆ ಜಯ ವಿಬುಧರಿಗೆ | ಹದುಳದಲಿ ಗೃಹಸೇರಿಮುದದಿಂದ ಶ್ರೀಹರಿಯ | ಪದ ಸ್ಮರಣೆಯಲ್ಲವರು ದಿನಗಳನೆ ಕಳೆಯುತಿಹರು 2 ಯತಿ ಲಕ್ಷ್ಮಿ ವರರಿಂದ | ಯತಿಗಳಾಶ್ರಮ ಪೊಂದಿಹಿತದಿಂದಲಾ ಬೂದಿ | ನೆತ್ಯಾಖ್ಯ ಗ್ರಾಮದಲಿಸ್ಥಿತರಾಗಿ ಶಿಷ್ಯರಿಗೆ | ಹಿತದ ಉಪದೇಶವ ಪ್ರೀತಿಯಲಿ ಮಾಡುತಿರಲು |ಯತಿಗಳಾಶ್ರಮದಲ್ಲಿ | ಮತಿ ವಂತ ವಿಪ್ರೋರ್ವಕ್ಷಿತಿಯೊಳಾ ನಾಕನಿಭ | ಮಂತ್ರ ಮಂದಿರ ಸೇವೆ ಅತಿಹಿತದಲೆಸಗುತಿರೆ | ಯತಿಗಳಾಶೀರ್ವದಿಸೆ ಪಥವಾಯ್ತು ಪ್ರಿಯರಲ್ಲಿಗೇ 3 ಪತಿ ಸೇವೆ | ಯುಕುತನಾಗಿರಲ್ವೊರೆದು ನಾಲ್ವತ್ತು ದಿನ ಮಿತಿಯಲಿ |ಕಕುಲಾತಿ ತೊರೆದು ನಿಜ | ಭಕುತಿಯಿಂ ಗೈವುತಿರೆಲಕುಮಿ ಪ್ರಿಯರಾಚಾರ | ಉಕುತಿಯಲಿ ದುರ್ಭಾವಪ್ರಕಟವಾಗಲು ಮನದಿ | ಬಂಕಪುರ ಮಾರ್ಗವನೆ ತೆರಳಲನುವಾದನೂ 4 ಮತ್ತೆ ನರಹರಿ ತಾನು | ವ್ಯಕ್ತಯಿಂತೈಜಸನುಒತ್ತಿಪೇಳಲು ಬುಧನು | ಮತ್ತೆ ಗುರುಪದಕೆರಗಿಬಿತ್ತರಿಸೆ ತನ್ನಸ್ವಪ್ನ | ವಾರ್ತೆಗಳ ವಿಶ್ವಮಿತ್ರನ ಭಾವವನೆ ತೋರುತ |ಇತ್ತಲಿಂದೆರಡೊರ್ಷ | ಕಿತ್ತಪೆವು ಆಶ್ರಮವಆರ್ಥಿಯಿಂದಿರುತಿರ್ದು | ಹಸ್ತಿವರದನ ಸೇವೆಉತ್ಸಹದಲೆಸಗುವುದೆ | ನುತ್ತಲಾಶೀರ್ವದಿಸಿ ಚಿಂತಿಸುತ್ತಿರೆ ಹರಿಯನು 5 ಗ್ರಾಮದೊಳಗುಳ್ಳ ಖಲ | ಸ್ತೋಮ ಬಂದಡರುತ್ತಭೂಮಿ ಗೋಸುಗ ಕಲಹ | ಸೀಮೆ ಮೀರುತ ಗೈಯ್ಯೆಅ ಮಹಾಯತಿವರ್ಯ | ಭೂಮಿ ಕೃಷ್ಣಾಂಕಿತವುಕಾಮನೆಯ ಬಿಡಿರೆನುತಲಿ | ನೇಮದಲಿ ಘರ್ಜಿಸಲು |ಆ ಮಹಾ ದುಷ್ಟಜನ ಈ ಮರದ ಸಂಪದವ ಕಾಮಿಸುತ ಮನದಲ್ಲಿನೇಮದಿಂ ಪತ್ರೋರ್ವ | ಪಾಮರನ ಒಡನವರು ಯಾಮ ಸಂಜೆಲಿ ಕಳುಹಲು 6 ಪರಿವಾರ ಜನಕೆಲ್ಲ | ಇರುವ ನೆಲೆ ಬಿತ್ತರಿಸಿಸರಿಯುತಲಿ ಸುಕ್ಷೇಮ | ನೆರೆಯ ಸಾರುವುದೆನುತಒರೆಯಲೂ ಕೆಲವರು | ಮರೆಮಾಡಿ ತೃಣ ಬಣವಿ ನೆರೆ ಬಿಡದೆ ಸಾರುತಿರಲು |ವರನಿಶೀ ಸಮಯದಲಿ | ದುರುಳರೆಲ್ಲರು ಮಠಕೆಬರಬರುತ ಕವಣೆಕಲ್ | ನೆರೆಬೀರ್ವ ಜನಗಳೂಉರಿವ ತೃಣ ಬಣವಿಯಂ | ದುರೆ ಜ್ವಾಲೆ ಪರಿಕ್ರಮಣ ಭಯ ಭ್ರಾಂತಿಯಿಂದಿರುತಿರೆ 7 ಸಿರಿ ಹರಿಯ ನಮಿಸುತಿರಲು 8 ಪರಿ | ಚರರಿಘರಸುತ್ತ ಬಲುಪರಿಯ ಹರಿ ಮಹಿಮೆಗಳ | ಒರೆಯುತಾನಂದಾಶ್ರೂ ಸುರಿಸುತವ ಶೇಷನಿಶಿ | ಹರಿಕರುಣ ಸ್ಮರಣೆಯಲಿ ಸರಿಸಿದರು ಶಿಷ್ಯರೊಡನೇ 9 ಗರ ಮಿಶ್ರ | ಯತಿಗೆ ಬಡಿಸೇ ಜೀರ್ಣಿಸುತ ಪಾಪಿ ವಿಪ್ರರ್ಗೆ | ಗತಿಸಿದವು ಅಕ್ಷಿಗಳು ಮೃತ್ಯಂತಲಂದರಾಗಿ 10 ಗರ ಮಿಶ್ರ | ಸತ್ಯವಾದುದ ಕಂಡು ಪ್ರೋಕ್ಷಿಸಲು ಶಂಖದುದಕ |ವ್ಯಕ್ತವಾಯಿತು ಇವರ | ಉತ್ತುಂಗ ಮಹಿಮೆಗಳುಹಸ್ತಿವರದನು ಭೋಜ್ಯ | ವಸ್ತುಗಳ ಸ್ವೀಕರಿಸಿದತ್ತ ಮಾಡಲು ಪುನಃ | ಮತ್ತೆ ಜೀರ್ಣಿಸಿಕೊಂಡು ಹರಿಯನ್ನೆ ಚಿಂತಿಸುತಲಿ 11 ನೆಲೆಸಿರಲ್ಲಬ್ಬುರೊಳು | ಗಳ ಗ್ರಾಹಕರು ಮತ್ತೆಮಿಳಿತರಾಗುತ ರಾತ್ರಿ | ಛಲವ ಸಾಧಿಸೆ ನಿಶಿತಅಲಗು ಕತ್ತಿಯ ಪಿಡಿದು | ನೆಲಕೆ ಯತಿ ಶಿರವನ್ನು ಇಳಹುವ ಮತಿ ಮಾಡಲೂ |ಒಲವಿನಿಂ ಯತಿಯಕುಲ | ತಿಲಕ ವೃಂದಾವನವ ಬಳಸಿ ನಮಿಸಲು ಸಂಜೆ | ಯಲಿ ಪೇಳ್ದ ಬ್ರಹ್ಮಣ್ಯಒಳ ಪೊಗುತಲಾರಾಮ | ನೆಲೆಸೇರಿ ಮಠಸಾರಿ ಎಂದೆನುತ ಎಚ್ಚರಿಸಿದರ್12 ಮತ್ಸರಿಗಳಿನ್ನೊಮ್ಮೆ | ಕುತ್ಸಿತದ ಬುದ್ಧಿ ಮಹಉತ್ಸವದ ಸಮಯದಲಿ | ಹೆಚ್ಚು ಜನ ಸಂಧಿಸಿರೆನೆಚ್ಚಿದ್ದ ಪಾಚಕರು | ಉಚ್ಚಳಿಸಿ ಕೆಲಸಾರೆ ಕೆಚ್ಚಿದೆಯನೇ ತೋರುತ |ಮುಚ್ಚಿಮಠದ್ವಾರಗಳ | ಹೆಚ್ಚುತಲಿ ಪಲ್ಯಗಳ ಮತ್ಸಕೇತನ ಪಿತನು | ಮೆಚ್ಚುವಂದದಿ ಪಾಕಪೆಚ್ಚಿಸುತಲಿ ಹರಿಯ | ಅರ್ಚನೆಯ ಕೈಕೊಂಡು ಮೆಚ್ಚಸಿದರು ಸುಜನರ 13 ಜ್ವರತಾಪದಿಂದೊಮ್ಮೆ | ನೆರೆ ಬಳಲು ವಂತಿರ್ಪಗುರುವರರ ಕಂಡೋರ್ವ | ವರ ಶಿಷ್ಯ ಪ್ರಶ್ನಿಸಲುನೆರೆ ಬದುಕ ಬೇಕೆಂಬ | ಶರಿರವನೆ ತೊರೆವೆ ನೆಂಬೆರಡುಕ್ತಿ ಸಲ್ಲದಿದಕೊ |ನರರಾಡಿ ಕೊಳದಂತೆ | ವರ ಭಿಷಜ ತಾಕೊಟ್ಟವರಗುಳಿಗೆ ನುಂಗುವೆವು | ಹರಿ ಪೂಜೆ ವಿರುದ್ಧಜ್ವರ ಕುಂಟಿ ಧನ್ವಣತ್ರಿ | ವರಮಂತ್ರ ಕೈ ಸೇರಿ ಪರಿಪರಿ ಮೆರೆಯುತಿರಲು 14 ಯತಿವರರ ಮಹಿಮೆಗಳ | ತುತಿಸಲೆನ್ನಳವಲ್ಲಯುಕ್ತಿಯಲಿ ಅಪವಾದ | ಹೊತ್ತು ಕೊಳದಲೆ ಅವರು ಜಿತ ಇಂದ್ರಿಯತ್ವವನು | ಮತಿಮತಾಂ ಸುಜನಕ್ಕೆ ಪ್ರತಿರಹಿತದಿಂ ತೋರುತ |ಹಿತದಿಂದ ಲಾರಾಮ | ಸೇತು ಯಾತ್ರೆಯ ಗೈದುಕ್ಷಿತಿ ಚರಿಸಿ ಬರಬರುತ | ಹಿತಶಿಷ್ಯ ವ್ಯಾಜದಿಂಸತ್ಯ ಧೀರ್ರನು ಚರರ | ಕೃತ ಬಹಿಷ್ಕರ ಗೆಲ್ದು ಶಾಂತತೆಯನೇ ತೋರ್ದರು 15 ವರಲಕ್ಷ್ಮಿ ಪ್ರಿಯ ತೀರ್ಥ | ಕರಗಳಿಂದರ್ಚಿತವುಪರಿಸರಾರ್ಚಿತ ಯೋಗ | ನರಹರಿಯು ವ್ಯಾಸಮುನಿವರದ ಗೋಪತಿ ಕೃಷ್ಣ | ಸಿರಿವ್ಯಾಸಯತಿ ರಚಿತ ಎರಡೇಳು ರಜತ ಪ್ರತಿಮೆ |ಗುರುವರ ಬ್ರಹ್ಮಣ್ಯ | ವರದ ವಿಠ್ಠಲದೇವಸರ್ವಜ್ಞರರ್ಚಿಸಿದ | ವರ ಶರಣ್ಯ ವಿಠಲನುನಿರುತ ಪೂಜಿತವಾಗಿ | ಶರಿರ ಭೌತಿಕ ಬಿಡುವ ವರ ಸಮಯ ತಾನುಸುರಿರೆ16 ಸಂತೈಸಿ ಇತ್ತರಾಶಿಷವ 17 ನೀಲ ಕಾಲ | ವರುಷವನು ಪೈಂಗಳವು | ಎರಡೊಂದನೇ ಮಾಸವರಶುಕ್ಲ ಹರಿದಿನದಿ | ಸರಿತು ವರ ಕಣ್ವತಟಪರಮ ಸುಕ್ಷೇತ್ರದಲಿ | ವರಯೋಗ ಮಾರ್ಗದಲಿ ದೇಹ ಹರಿಗರ್ಪಿಸಿದರು 18 ಜಯ ಜಯತು ಶುಭಕಾಯ | ಜಯಜಯತು ತಪಶೀಲಜಯ ಶಮೋದಮವಂತ | ಜಯ ಶಾಪನುಗ್ರಹನೆಜಯಲಕ್ಷ್ಮಿ ವರಜಾತ ಜಯಲಕ್ಷ್ಮಿ ಪ್ರಿಯ ತೀರ್ಥ ಜಯ ಜಯತು ವಿಶ್ವಮಿತ್ರ |ಪ್ರಿಯ ಗುರುಗಳಾಂತರ್ಯ | ಜಯ ದೇವ ನೋಳ್ಪರಮಪ್ರಿಯನಾದ ತಂದೆ ಮುದ್ದು | ಮೋಹನ್ನ ವಿಠಲಾತ್ಮಜಯ ಗುರೂ ಗೋವಿಂದ | ವಿಠ್ಠಲನ ಭಜಿಸಿದರೆ ನಯಸುವನು ಪರಮಗತಿಗೆ 19
--------------
ಗುರುಗೋವಿಂದವಿಠಲರು
ಗುರು ಮುಖ್ಯಪ್ರಾಣದರಸನೆ ನೀ ಎನ್ನ ಕರುಣಿಸು ಕೃಪೆಯಿರಿಸು ಪ. ನಿತ್ಯ ಪರಿಪೂರ್ಣನಾಗುತ ಪರಮಾತ್ಮನ ಮತಕನುಸರಿಸಿ ಧರೆಗೆ ಭಾರವಾದ ದುರುಳರ ವಧೆಗೈದ ಮರುತಾತ್ಮಜ ಮನೋಹರ ಮೂರುತಿಯಾದ 1 ರಾಮನಪ್ಪಣೆಯಿಂದ ಆ ಮಹಾಂಬೋಧಿಯ ಭೀಮ ವಿಕ್ರಮನುರೆ ದಾಂಟಿ ಬಂದು ರಾಮಣೀಯಕರವಾದ ರಾಮಮುದ್ರಿಕೆಯನ್ನು ತಾ ಮಣಿಯುತ ಸೀತಾ ಮಾನಿನಿಗಿತ್ತ 2 ಆ ಮಹಾಲಕ್ಷ್ಮಿಯ ನೇಮವ ಕೈಗೊಂಡು ತಾಮಸಿಚರರ ನಿರ್ನಾಮಗೈದು ಹೇಮಲಂಕೆಯನುರೆ ಹೋಮವಗೈಯುತ ಚೂಡಾಮಣಿ ತಂದಿತ್ತ 3 ಕ್ರೂರ ಕೌರವಕುಲ ಘೋರ ಕಾನನಕೆ ಕು- ಠಾರನಾಗುತಲಿ ಸಂಹಾರಗೈದು ವಾರಿಜಾಕ್ಷನ ಕೃಪೆಯಿಂದ ಮಾಗಧನನ್ನು ಚೀರಿದ ಕುಂತಿಕುಮಾರ ಮೂರ್ಲೋಕದ 4 ಹರಿ ಸರ್ವೋತ್ತಮನೆಂದು ಧರೆಗೆ ಸಾರುತ ಬಂದು ವರ ವೈಷ್ಣವಮತ ಸ್ಥಿರವ ಮಾಡಿ ಧರಣಿಯೊಳಗೆ ತಾತ್ವರ್ಯನಿರ್ಣಯವೆಂಬ ಪರಮ ಗ್ರಂಥವಗೈದ ಗುರು ಮಧ್ವಾಚಾರ್ಯನೆ 5 ಇಂತೀ ಮೂರವತಾರವಾಂತು ದಾನವರಿಂಗೆ ಸಂತಾಪಗೈದ ಮಹಾತುಮನೆ ಚಿಂತಿತಾರ್ಥವನೀವ ಚಿಂತಾಮಣಿ ಎಂದು ಸಂತತ ಭಜಿಪೆನು ಶಾಂತ ಹುನುಮಂತನೆ 6 ಶ್ರೀ ರಾಘವ ಲಕ್ಷ್ಮೀನಾರಾಯಣನ ಪಾದ- ಚಾರಕನಾದ ಗಂಭೀರನಿಗೆ ನೀರಜಾಂಡದೊಳಾರು ಸಮಾನರು ಕ್ಷಿರಸಾಗರಶಯನ ನೀನೊಬ್ಬನಲ್ಲದೆ 7
--------------
ತುಪಾಕಿ ವೆಂಕಟರಮಣಾಚಾರ್ಯ
ಗುರು ಮುಖ್ಯಪ್ರಾಣದರಸನೆ ನೀ ಎನ್ನ ಕರುಣಿಸು ಕೃಪೆಯಿರಿಸು ಪ. ನಿತ್ಯ ಪರಿಪೂರ್ಣನಾಗುತ ಪರಮಾತ್ಮನ ಮತಕನುಸರಿಸಿ ಧರೆಗೆ ಭಾರವಾದ ದುರುಳರ ವಧೆಗೈದ ಮರುತಾತ್ಮಜ ಮನೋಹರ ಮೂರುತಿಯಾದ 1 ರಾಮನಪ್ಪಣೆಯಿಂದ ಆ ಮಹಾಂಬೋಧಿಯ ಭೀಮ ವಿಕ್ರಮನುರೆ ದಾಂಟಿ ಬಂದು ರಾಮಣೀಯಕರವಾದ ರಾಮಮುದ್ರಿಕೆಯನ್ನು ತಾ ಮಣಿಯುತ ಸೀತಾ ಮಾನಿನಿಗಿತ್ತ 2 ಆ ಮಹಾಲಕ್ಷ್ಮಿಯ ನೇಮವ ಕೈಗೊಂಡು ತಾಮಸಿಚರರ ನಿರ್ನಾಮಗೈದು ಹೇಮಲಂಕೆಯನುರೆ ಹೋಮವಗೈಯುತ ಚೂಡಾಮಣಿ ತಂದಿತ್ತ 3 ಕ್ರೂರ ಕೌರವಕುಲ ಘೋರ ಕಾನನಕೆ ಕು- ಠಾರನಾಗುತಲಿ ಸಂಹಾರಗೈದು ವಾರಿಜಾಕ್ಷನ ಕೃಪೆಯಿಂದ ಮಾಗಧನನ್ನು ಚೀರಿದ ಕುಂತಿಕುಮಾರ ಮೂರ್ಲೋಕದ 4 ಹರಿ ಸರ್ವೋತ್ತಮನೆಂದು ಧರೆಗೆ ಸಾರುತ ಬಂದು ವರ ವೈಷ್ಣವಮತ ಸ್ಥಿರವ ಮಾಡಿ ಧರಣಿಯೊಳಗೆ ತಾತ್ವರ್ಯನಿರ್ಣಯವೆಂಬ ಪರಮ ಗ್ರಂಥವಗೈದ ಗುರು ಮಧ್ವಾಚಾರ್ಯನೆ 5 ಇಂತೀ ಮೂರವತಾರವಾಂತು ದಾನವರಿಂಗೆ ಸಂತಾಪಗೈದ ಮಹಾತುಮನೆ ಚಿಂತಿತಾರ್ಥವನೀವ ಚಿಂತಾಮಣಿ ಎಂದು ಸಂತತ ಭಜಿಪೆನು ಶಾಂತ ಹುನುಮಂತನೆ 6 ಶ್ರೀ ರಾಘವ ಲಕ್ಷ್ಮೀನಾರಾಯಣನ ಪಾದ- ಚಾರಕನಾದ ಗಂಭೀರನಿಗೆ ನೀರಜಾಂಡದೊಳಾರು ಸಮಾನರು ಕ್ಷಿರಸಾಗರಶಯನ ನೀನೊಬ್ಬನಲ್ಲದೆ 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಗುರುವರÀ ತುಲಸೀರಾಮಯ್ಯಾ ಪೂರ್ವದ್ವಾರಗುರುಸ್ತುತಿ ಮಂಪಾಲಯಾ 'ಜಿತೇಂದ್ರಿಯಾ ಪಪುರಪುರವರ ತವ ತಿರುತಾರೊತ್ಸವನಿರತಸೇವಕೃತನುತ ಜನವೈಭವ 1ಪತಿತಜನಾವನ ಪದ್ಮಸುಲೊಚನಪ್ರಥಮಾಶ್ರಮ ಘನಕೃತಮುಖರಂಜನ 2ವೆಂಕಟಲಕ್ಷಾಂಬ ಸುಗರ್ಭೊದ್ಭವ ಪಂಕಜಭ' ಸಂಪದಯುತಪ್ರಭಾವ 3ಕೇಶವಪದನಿಜ ದಾಸಸ್ವರೂಪಾಆಶಯೇಶಯ ಜಿತವರಪ್ರತಿಭಾ 4ಶುಕಮುನಿ ವಾಗ್ಭರಿಸೂನೃತಚರಿತಸಕಲಪಂಡಿತೊತ್ತಮಜನ'ನುತ 5ಮ'ಸೂರ್ಪುರವರ ಮ'ಪತಿಸಮುಖಅ'ಪತಿರೀತ್ಯಾ ಹರಿಗುಣಕಥಕಾ 6ಚಾಮನೃಪಾಲ ಸುಜ್ಞಾನಬೊಧಿನೀಸಮಾಜಶೇಖರ ಸಾತ್ವಿಕಧೀಮಣಿ 7ಶ್ರೀರಾಮೋತ್ಸವ ಸೇವಾಬ್ದಪ್ರತಿಸಾರ್ಥಶತಂ ನಿಷ್ಕನ್ನಾ ರ್ಕತ 8ಭಗವದಾಂಶ ಸಂಭೂತ ಕೃಪಾಕರಅಗಣಿತ ಸುಗುಣಾಲಂಕೃತಧೀವರ 9ಮಂಗಳಕರ ಗುರುತುಲಸೀರಾಮಾರಂಗಸ್ವಾ'ುದಾಸ ಹೃದಯಸುಧಾಮಾ 10
--------------
ಮಳಿಗೆ ರಂಗಸ್ವಾಮಿದಾಸರು
ಗುರುವಿನರಿಯದಾರಂಭ ತೋರುವುದ್ಯಾತಕೆ ಡಂಭ ಸುರಮುನಿಗಳಿಗಿದು ಗುಂಭ ಗುರುಮಾರ್ಗವಾಗಿರಾಲಂಬ 1 ಹೃದಯದೊಳಿರಲಙÁ್ಞನ ತುದಿನಾಲಗಿಲ್ಯಾತಕ ಙÁ್ಞನ ಇದು ನಿಜ ಮೋಹಿಸು ಖೂನ ಸಾಧಿಸುದಲ್ಲ ನಿಧಾನ 2 ಅಳಿಯದೆ ಕಾಮಕ್ರೋಧ ಹೊಳುವದ್ಯಾತಕೆ ಬೋಧ ತಿಳಿಯದೆ ಶ್ರೀಗುರುಪಾದ ಬೆಳಿಸುವದ್ಯಾತಕೆ ವಿವಾದ 3 ತತ್ವನರಿಯದ ಕವಿತ್ವ ಯಾತಕಿದು ಅಹಮತ್ವ ಸತ್ವದೊಳಾಗದೆ ಕವಿತ್ವ ಮಿಥ್ಯವಿದ್ಯಾತಕೆ ಮಹತ್ವ 4 ಆಶಿಯನಳಿದರೆ ಸಾಕು ವೇಷದೋರುದ್ಯಾತಕೆ ಬೇಕು ಹಸನಾದರ ರಸಬೇಕು ಭಾಸುದು ಮಹಿಪತಿ ಘನಥೋಕು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುವಿನಾ ಯಾಕೆ ಮರೆಯುವಿರಣ್ಣಾ | ಈ ಲೋಕದೊಳಗ | ಶುಭ ಧರೆಯೊಳು ದೀನರುದ್ಧರಿಸುತ ಮೆರೆವಾ ಪ ಮನಸಿನ ಜಾಡ್ಯ ತನವನು ಬಿಡಿಸಿ | ಶ್ರವಣಾದಿಗಳಿಂದ | ಅನುವಾಗಿ ಬೋಧಾಮೃತವನೆ ಕುಡಿಸಿ | ಭಕ್ತಿಯ ಕಳೆಯಂಬಾ | ಘನವಾದಲಂಕಾರವನೆ ತೊಡಿಸೀ | ಯೋಗದ ಸಿರಿಯಿಂದಾ | ಚಿನುಮಯ ಮಂದಿರವನು ತೋರಿಸುವಾ 1 ನೀರಿನಾ ಬೊಬ್ಬುಳಿಯಂತೀ ತನುವು | ಮಿಂಚಿನಾ ತೆರನಂತೆ | ಮೃಗ | ನೀರಂತೆ ಕಾಣದೆ ಮೋಹಿಪ ಮನವು | ಇದನೆಚ್ಚದೆ ಬ್ಯಾಗ | ಜಾರಿ ಶುಭೇಚ್ಛೆ ವಿಚಾರಕ ತಂದು 2 ವೇದಾಂತದ ನುಡಿಯಾ | ಲೋಹ ಪರಸವ ನೆಶಿದಾ | ಸ್ವಾನುಭವ ಸುಖದಾ | ಗತಿ ಮತಿ ಕೂಡಿಸಿ ಗತಿಯನೆ ಕೊಡುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವೇ ಗುರುವೇ ಗುರು ಗುರುವೇ ಮಹಾಗುರು ಗುರುವೇ ಶ್ರೀ ಗುರುವೇ ಪ ನಿರಂಜನ ನಿಷ್ಕಲಂಕ ಗುರುವೇಪ್ರತ್ಯಾಗಾತ್ಮ ಪರಾತ್ಪರಾತ್ಪರ ಪ್ರತ್ಯಯರಹಿತ ಗುರುವೇ 1 ನಿರ್ವಿಕಲ್ಪ ನಿರಾಕಾರ ನಿರ್ಗುಣ ನಿರ್ಮಾಯನೇ ಗುರುವೇನಿರ್ವಿಕಾರ ನಿದ್ರ್ವಂದ್ವ ನಿಜಾಕಾರ ನಿರುಪಮಾತ್ಮ ಗುರುವೇ 2 ಪೂಜ್ಯಮಾನ ಸುರಾಸುರ ಸಿದ್ಧಾಯಿಂ ಪೂಜಾರ್ಪಿತ ಗುರುವೇಈ ಜಗದೇಕ ನಾಥನೆ ಚಿದಾನಂದ ತೇಜಃಪುಂಜ ಗುರುವೇ 3
--------------
ಚಿದಾನಂದ ಅವಧೂತರು
ಗೋಕುಲ ಆನಂದ ಲೀಲಾ | ಘನ ಸುಂದರ ರುಕ್ಮಿಣಿಲೋಲ ಶ್ರೀಕರ ಶುಭದಾಯಕ ವರ | ಗೋಪಾಲ ಬಾಲ ಪ ಮಣಿರಂಜಿತ ಭೋಗರಾಗವಿಮಲ ಶೃಂಗಾರಶೀಲ ಸುರಪಾಲ ಸಂಸೇವ್ಯ ಗಾನಲೋಲ ಅ.ಪ ಪದ್ಮಲೋಚನ ಪರಿವೃತ ಶರಣವತ್ಸಲ ಸರ್ವಜ್ಞ ಸುಭಾಷಿತ ಸದ್ಭಾವ ವಿನಯಾದಿ ಭೂಷಿತ ಚಿತ್ರ ವಿಚಿತ್ರ ಕರ್ಷಿತ ಸೂತ್ರಾ ಮನಸಿಜ ಗಾತ್ರಾ | ಸುವಿನೀತ ಗೋಪೀನಂದನ 1 ಮಣಿಪೀಠ ಮಂಡಿತಾ | ಕಿರೀಟ ಮಣಿಮಯ ರಾರಾಜಿತ | ಗೋಪಿಕಾನತ ಪಾಂಡವಪಕ್ಷ ದನುಜವಿಪಕ್ಷ |ಕಮಲದಳಾಕ್ಷ ದಾನವಶಿಕ್ಷ ಶ್ರೀವನಮಾಲಿಕಾವಕ್ಷ | ಮಾಂಗಿರಿನಾಥಾ ದೀನರಕ್ಷ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೋಪಗೋವಿಂದ ವಿಠಲ | ನೀ ಪಾಲಿಸಿವಳಾ |ಸ್ವಾಪಜಾಗ್ರತ್ಸುಪ್ತಿ ಸರ್ವ ಕಾಲದಲೀ ಪ ಪತಿಸುತರು ಭಾಂದವರು | ಹಿತದಿಂದ ಸೇವಿಸುತಕೃತಿಸರ್ವ ನಿನಸೇವೆ | ಮತಿ ನೀಡೊ ಹರಿಯೇ |ಅತುಳ ವೈಭವ ತೋರಿ | ಕೃತಕಾರ್ಯಳೆಂದೆನಿಸುಕ್ಷಿತಿರಮಣ ನಿನಗಿದುವೆ ಪ್ರಾರ್ಥಿಸುವೆ ದೊರೆಯೇ 1 ಮೋದಮುನಿ ಮತ ದೀಕ್ಷೆ | ಸಾದರದಿ ಕೊಟ್ಟೈದುಭೇದಗಳ ತಿಳಿಸುತ್ತ | ಕಾದುಕೊ ಇವಳಾನೀದಯದಲಂಕಿತವ | ಓದಿಸಿಹೆ ತೈಜಸನೆಸಾದಿಸುವೆ ಅದನೀಗ | ಹೇ ದಯಾವರನೇ 2 ಸಂಚಿತ ಕಳೆವ | ಧರ್ಮ ನಿನ್ನದೊ ಸ್ವಾಮಿಭರ್ಮ ಗರ್ಭನ ಪಿತನೆ | ಕರ್ಮನಾಮಕನೇ ನಿರ್ಮಮತೆ ಮನದಿ ನಿ | ಷ್ಕಾಮ ಕರ್ಮದಲಿವಳಪೇರ್ಮೆಯಲ್ಲಿರಿಸೆಂದು | ಸ್ವಾಮಿ ಪ್ರಾರ್ಥಿಸುವೇ 3 ಸರ್ವಜ್ಞ ಸರ್ವೇಶ | ಸರ್ವದಾ ತವನಾಮಸರ್ವತ್ರ ಸ್ಮøತಿಯಿತ್ತು | ಸರ್ವಾಂತರಾತ್ಮದುರ್ವಿಭಾವ್ಯನೆ ದೇವ | ದರ್ವಿ ಜೀವಿಯ ಕಾವಸರ್ವ ಕರ್ತೃವು ನೀನೆ | ಶರ್ವ ಸನ್ನುತನೇ 4 ಸೃಷ್ಟಿಕರ್ತನೆ ದೇವ | ಕಷ್ಟಗಳ ಪರಿಹರಿಸಿಶಿಷ್ಟಳ್ಹøತ್ಕಂಜದಲಿ | ಇಷ್ಟ ಪ್ರದನಾಗೀಇಷ್ಟ ಮೂರ್ತಿಯ ಕೋರಿ | ಹೃಷ್ಟಳನ ಮಾಡೆಂದುಕೃಷ್ಣ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು
ಗೋಪಾಲ ಪಾಲಿಸೊ ನಿನ್ನ ಪಾದಸೇವಕನಿವನೆಂದು ನೀ ಭಾವಿಸಿ ಗೋಪಾಲ ಪಾಲಿಸೊ ಪ ನಾರಿಜನರುಟ್ಟ ಸೀರೆ ಸೆಳೆದು ತಾ ಭಾರಿ ಮರವನ್ನೇರಿ ವಿನೋದವ ತೋರಿದ ಸುರರಿಪು ವೈರಿಯೇ ಎನ್ನಯ ಕೋರಿಕೆ ನಡಸಲಿನ್ಯಾರಿಗೆ ಬೇಡಲೊ 1 ತುಂಗಫಣಿಫಣ ಶೃಂಗದೊಳು ಚರ ಣಂಗಳ ಕುಣಿಸು ಭುಜಂಗಮವರನಿಗೆ ಭಂಗಪಡಿಸಿ ಕೃಪಾಪಾಂಗದಿ ಸಲಹಿದ ಮಂಗಳಮಹಿಮ ರಥಾಂಗಧರ ಬಾಲ 2 ಬಂಧು ಬಳಗ ನೀನೆಂದು ತಿಳಿದು ಮ ತ್ತೊಂದನೆಣಿಸದೆ ಇಂದಿರಾರಮಣನೆ ಎಂದೆಂದಿಗೂ ಸಲಹೆಂದು ನಾ ಬೇಡುವೆ ಸಿರಿ 3 ಖಿನ್ನ ನಿಜ ಜನರನ್ನು ಸಲಹುವ ಪನ್ನಗಶಯನ ಪ್ರಸನ್ನ ಹೃದಯನಾಗಿ ಎನ್ನ ಮನೋರಥವ ಪೂರೈಸುವ ರನ್ಯರು ಯಾರಯ್ಯ ಚಿನ್ಮಯ ಮೂರುತಿ 4 ಕಾಮಜನಕನೆ ನಾಮಗಿರಿ ಸಿರಿ ಸ್ವಾಮಿ ನೃಸಿಂಹನೆ ಕಾಮಿತ ಕೊಡುವಂಥ ಕಾಮಧೇನು ಚಿಂತಾಮಣಿ ಎನ್ನಯೋಗ ಕ್ಷೇಮವು ನಿನ್ನದಯ್ಯ ಸೋಮಕುಲಾಧಿಪ 5
--------------
ವಿದ್ಯಾರತ್ನಾಕರತೀರ್ಥರು