ಎಷ್ಟು ದಿವಸ ಹೀಗೆ ಕಳೆಯಲೊ ಗೋಪಾಲಕೃಷ್ಣ ಎಷ್ಟು ದಿವಸ ಹೀಗೆ ಕಳೆಯಲೊ ಪ. ಎಷ್ಟು ದಿವಸ ಹೀಗೆ ಎನ್ನ ಸೃಷ್ಟಿಗೊಡೆಯ ಬಳಲಿಸುವೆಯೊ ಕಷ್ಟಪಡಲಾರೆ ಭವದಿ ದೃಷ್ಟಿಯಿಂದ ನೋಡಿ ಸಲಹೋ ಅ.ಪ. ನಾನಾ ಜನ್ಮದಿ ತೊಳಲಿಸಿ ಎನ್ನನು ನೀನೆ ತಂದೆಯೊ ಮಾನವತ್ವದಿ ನಾನು ಎಂಬುದು ಬಿಡಿಸಿ ಈಗ ನೀನೆ ಕರ್ತನೆನಿಸಿ ಕಾಯೋ1 ದೇಹಸ್ಥನೆಂದೆನಿಸಿ ಎನ್ನ ದೇಹ ಮಧ್ಯದಿ ಕಾಣದಿಹರೆ ದೇಹಗಳನು ಧರಿಸಲಾರೆ ದೇಹ ಮೋಹ ಬಿಡಿಸದಿಪ್ಪರೆ 2 ಭೃತ್ಯವತ್ಸಲನೆಂದು ನಿನ್ನ ಭಕ್ತರೆಲ್ಲರು ಕರೆಯುತಿಹರೊ ಪೊತ್ತ ಬಿರುದು ಬಿಡುವರೇನೊ ಭೃತ್ಯಳೆಂದು ಎನ್ನ ಸಲಹೊ3 ಪೋಗುತಿದÉ ದಿವಸ ನೋಡು ಬೇಗ ಬೇಗನೆ ದಯವ ಮಾಡು ಭೋಗದಲಿ ವೈರಾಗ್ಯ ನೀಡು ಭಾಗವತರ ಸಂಗ ಕೊಡು 4 ಕರ್ಮದಲ್ಲಿ ಶ್ರದ್ಧೆಯಿಲ್ಲ ಧರ್ಮದಲ್ಲಿ ಬುದ್ಧಿಯಿಲ್ಲ ನಿರ್ಮಲದ ಜ್ಞಾನವಿಲ್ಲ ನಿರ್ಮಲಾತ್ಮ ಬಲ್ಲೆಯಲ್ಲ 5 ಅಂಧಕಾರದಿ ಎನ್ನನಿರಿಸಿ ಚಂದವೇನೋ ಹೀಗೆ ಮಾಳ್ಪದು ಕರ್ಮ ಸ್ವೀಕರಿಸಿ ಮುಂದೆ ಕರ್ಮವಿಡದೆ ಸಲಹೋ 6 ಅಪಾರ ಜನುಮದಲ್ಲಿನ ಪಾಪ ಸಮೂಹಗಳ ತರಿದು ಶ್ರೀಪಾದ ಸ್ಮರಣೆ ನೀಡೋ ಗೋಪಾಲಕೃಷ್ಣವಿಠಲ 7
ಎಸೆವ ಸಮುದ್ರವ ಮಥನ ಮಾಡಿತಯ್ಯಾ ನಿನ್ನ ನಾಮ ಹರಿ ಶಶಿಧರ ಶಿವನಿಗೆ ಶಾಂತಿಮಂತ್ರಾಯ್ತಯ್ಯಾ ನಿನ್ನ ನಾಮ ಪ ಚೋರನೆನಿಸಿವನ ಸೇರಿಕೊಂಡವನಿಗೆ ನಿನ್ನ ನಾಮಾ ಪಾರ ಜ್ಞಾನವಿತ್ತು ಮುಂದಕ್ಹಾಕಿತಯ್ಯಾ ನಿನ್ನ ನಾಮ1 ಮೀರಿದ ನಿನ್ನ ಮಾಯೆಗೆ ಸಿಲ್ಕಿದ್ಯೆತಿವರಗೆ ನಿನ್ನ ನಾಮ ಭೂರಿಕರುಣದಿನೆರಗಿ ರಕ್ಷಿಸಿತಯ್ಯಾ ನಿನ್ನ ನಾಮ 2 ಅಮೃತ ಮಾಡುಣಿಸಿ ಪಾಲಿಸಿತಯ್ಯಾ ನಿನ್ನ ನಾಮ 3 ಕಡುರೋಷದೆಸೆದ ವಜ್ರಾಯುಧದೆಚ್ಚೆ ನಿನ್ನ ನಾಮ ಸಿಡಿ ಮುಳ್ಳಿಗಿಂತ ಕಡೆಮಾಡಿಬಿಟ್ಟಿತಯ್ಯಾ ನಿನ್ನ ನಾಮ 4 ನೂರುಯೋಜನದ ವಿಸ್ತೀರ್ಣದ್ವಾರಿಧಿಯ ನಿನ್ನ ನಾಮ ತೋರಿಸಿತೊಂದು ಕಿರಿ ಸರೋವರ ಸಮಮಾಡಿ ನಿನ್ನ ನಾಮ 5 ಮೀರಿದ ದೈತ್ಯರಪಾರಂಗರುವಮಂ ನಿನ್ನ ನಾಮ ಹೀರಿ ಕ್ಷಣದಿ ಸುರಲೋಕ ಸೇರಿಸಿತಯ್ಯಾ ನಿನ್ನ ನಾಮ 6 ತ್ರಿಣಯರ್ಹೊಗಳಲು ಶಕ್ತಿ ಸಾಲದ ಪಟ್ಟಣ ನಿನ್ನ ನಾಮ ಅಣುಗಿಂತ ಅಣುಮಾಡಿ ತೋರಿಸಿತ್ಹನುಮಂಗೆ ನಿನ್ನ ನಾಮ 7 ಅಸಮಪರಾಕ್ರಮ ಅಸುರಕುಲಾಳಿಯಂ ನಿನ್ನ ನಾಮ ನಶಿಸೆ ಶಿವಪುರ ಭಸ್ಮಮಾಡಿತಯ್ಯಾ ನಿನ್ನ ನಾಮ 8 ಪಕ್ಷಿಗಮನ ಪಾಂಡುಪಕ್ಷನೆನಿಸಿತಯ್ಯಾ ನಿನ್ನ ನಾಮ ಅಕ್ಷಯಾಂಬರವಿತ್ತು ಸತಿಯ ರಕ್ಷಿಸಿತಯ್ಯಾ ನಿನ್ನ ನಾಮ 9 ಕಾದು ದಳ್ಳುರಿಹತ್ತಿದೆಣ್ಣೆ ಕೊಪ್ಪರಿಗೆಯ ನಿನ್ನ ನಾಮ ಸುಧನ್ವಂಗನುಪಮ ಶೀತಲವೆನಿಸಿತು ನಿನ್ನ ನಾಮ 10 ಅರಿತು ಭಜಿಪರ ಭವರೋಗಕ್ವೈದ್ಯೆನಿಸಿತು ನಿನ್ನ ನಾಮ ಅರಿದು ಭಜಿಪೆ ನಿನ್ನವರ ಮುಕ್ತಿ ಕರುಣಿಸೋ ಸಿರಿರಾಮ 11
ಏನಬೇಡಲೊ ಕೃಷ್ಣ ನಾಚಿಕಿಲ್ಲದೆ ಪ ಜ್ಞಾನಶೂನ್ಯನಾಗಿ ಬಹಳ ಹೀನ ಕಾರ್ಯ ಮಾಡಿ ನಾನು ಅ.ಪ. ಪರರ ವನಿತೆ ಧನಗಳಿಂಗೆ ಅರಿತು ಅರಿತು ಆಶೆಪಡುತ ದುರಿತಕೋಟಿಗಳನು ಮಾಡಿ ಪರಮ ನೀಚನೆನಿಸಿದವನು 1 ವನಗಳನು ಕಡಿಸಿ ಹಿರಿದು ಮನೆಗಳನ್ನು ರಚಿಸಿಕೊಂಡು ವನಿತೆ ಮಾತು ಕೇಳಿ ಜನನಿ ಜನಕರನ್ನು ತೊರೆದ ಪಾಪಿ 2 ಸತ್ಯ ಮತವನು ತುಚ್ಛಗೈದು ನಿತ್ಯಕರ್ಮಗಳನು ಬಿಟ್ಟು ಮತ್ತನಾಗಿ ತಿಂದು ಮಲಗಿ ಕತ್ತೆಯಂತೆ ಹೊರಳುವವನು 3 ಆರ್ತರಾದ ಜನರ ಸಲಹಿ ಕೀರ್ತಿಯನ್ನು ಹೊಂದಿ ದೇಹ ಸಾರ್ಥಕವನು ಮಾಡಿಕೊಳದೆ ಧೂರ್ತನೆನಿಸಿಕೊಳುವ ನರನು 4 ವಾಸುದೇವ ಸಕಲ ದೋಷ ರಾಸಿಗಳನು ದಹಿಸುವ ರಂ- ಗೇಶವಿಠಲರೇಯ ನಿನ್ನ ದಾಸನೆಂದು ಪೇಳದವನು 5