ಒಟ್ಟು 347 ಕಡೆಗಳಲ್ಲಿ , 41 ದಾಸರು , 339 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಮಜಾದ್ರಿ ನಿವಾಸ | ಮಮ ಹೃದಯ | ಸದ್ದಾಮದಲಿ ಆವಾಸ |ಸೌಮನಸ್ಯವ ಕಾಮಿಸುವೆ ಮನಕೀಶ | ನಾ ನಿಮ್ಮ ದಾಸಾ ಪ ಶ್ರೀ ಮನೋಹರನಂಘ್ರಿ ಕಮಲವ | ಯಾಮ ಯಾಮಕೆ ಭಜಿಸಿ ಹಿಗ್ಗುವ ಆಮಹಾತ್ಮರ ಚರಣ ರಜವನು | ಕಾಮಿಸುವೆ ಕರುಣಾಳು ಗುರುವರ ಅ.ಪ. ಘಾಸಿ ಪಡುತಲಿ ಬಂದ | ಪಾಪಾತ್ಮಯೆನ್ನಯಕ್ಲೇಶ ಹರಿಸಲು ಛಂದ | ಅಂಕಿತವನುಪದೇಷಿಸಿದೆ ನೀ ನಲವಿಂದ | ಕರುಣಾಳು ನಿನ್ನಯದಾಸ ಜನಗಳ ವೃಂದ | ಸೇವೆ ಕೊಡು ಆನಂದ || ವಿಷಯ ದಾಸೆಯ ಹರಿಸೊ ಗುರುವರ | ಬಿಸುರುಹಾಂಬಕನಂಘ್ರಿ ಕಮಲವ ಒಸೆದು ಸ್ಮರಿಸುವ ಮತಿಯನಿತ್ತು | ಎಸೆವ ಹರಿಯಪರೋಕ್ಷ ಪಾಲಿಸೊ 1 ವತ್ಸರ ಸುವಿಕ್ರಮವರ ನವಮಿ ಮಧ್ಯದಿನಂದೂ | ನಿಶ್ಚಯಿಸಿ ಮನದಲಿನರನಟನೆ ಉಪರಮಿಪೆನೆಂದೂ | ತನುವ ತ್ಯಜಿಸಿದೆ ಅಂದೂ ||ಸಾರ ಭಕುತರು ಸೇವೆ ಗೈಯಲು | ಕರಿಗಿರೀಯಲಿ ಒಂದು ಅಂಶದಿವರವ ಪಾಲಿಪುದಕ್ಕೆ ನೆಲೆಸಿದೆ | ಧೀರ ಕರುಣಾಪಾರ ಗುರುವೇ 2 ಚಾರು ಚರಣವ ತೋರು ಗುರುವೇ 3
--------------
ಗುರುಗೋವಿಂದವಿಠಲರು
ಸಾರತರದ ಮುರಳಿದನಿಯ ಕೇಳಿದೆ ಏನೆ ಪ ನಾರಿಮಣಿಯರುಲಿವದನಿಯ ಕೇಳಿದೆ ಏನೆ ಅ.ಪ ನಲಿದು ಕುಣಿವ ಲಲನೆಯರನು ನೋಡಿದೆ ಏನೆ ಝಣ ಝಣ ಝಣ ಕಿಣಿ ಕಿಣಿ [ಭರ್ತಾ] ರವವು ಕೇಳ್ವುದೇನೆ1 ಬಡನಡುವಿನ ಮಡದಿಯವನ ಅಡಿಯ ಪಿಡಿವೆ ಏನೆ ಕಡುಬೆಡಗಿನ ಹುಡುಗಿಯವನ ಅಡಿಯ ಪಿಡಿವೆ ಏನೆ ಸಡಗರದಲಿ ನಡೆದು ಮನವ ರಂಗಗೀವೆ ಏನೆ 2 ಮನದ ಕಲುಷವಳಿದು ಮುದವ ತಳೆದಿಹೆಯೇನೆ ಇನಿದುವಚನ ಕನಸು ನೆನಸ ತಳೆದಿಹೆಯೇನೆ ತನುಮನಧನ ಮಾಂಗಿರೀಶಗೊಪ್ಪಿಪೆಯೇನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಾರಸ ನಯನ ಶ್ರೀರಾಮಚಂದ್ರನ ಚರಿತೆ ಸಾರ ಹೃದಯ ಶ್ರೀ ಪ ಭವ ಮುಖರರ ಮೊರೆಯ ಕೇಳಿ ಧಾರುಣಿಯೊಳಗವತಾರ ಮಾಡಿದನಮ್ಮಾ ಅ.ಪ. ದಶರಥ ಸುತನೆನಿಸಿ ವಸುಧೆಯೊಳವತರಿಸಿ ಕುಶಿಕಸುತನ ಯಜ್ಞವ ನೆರೆಪಾಲಿಸಿ ಅಶಮವಾಗಿದ್ದ ಅಹಲ್ಯೆಯ ಶಾಪ ಪರಿಹರಿಸಿ ವಸುಧೀಶ ಜನಕನಾಸ್ಥಾನ ಪ್ರವೇಶಿಸಿ ಪಶುಪತಿಯ ಕೋದಂಡ ಖಂಡಿಸಿ ಶಶಿವದನೆ ಜಾನಕಿಯನೊಲಿಸಿ ಅಸಮ ಭಾರ್ಗವನೊಡನೆ ಸರಸವ ನೆಸಗಿ ಜಗದೊಳು ಲೀಲೆ ತೋರಿದ 1 ಜನಕನಾಜ್ಞೆಯ ತಾಳಿ ಜನಕ ಸುತೆಯ ಸಹಿತ ಅನುಜನೊಡನೆ ಹೊರಟು ವನವಾಸಕೆ ಘನಭಕ್ತಿ ಭರಿತ ಶ್ರೀ ಭರತಗೆ ಪಾದುಕೆ ನೀನು ಕರುಣಿಸಿ ಮುಂದೆ ವನದಂಡಕವ ಪೊಕ್ಕು ದುರುಳ ವಿರಾಧಮುಖರನು ಹನನಗೈದಾ ಬಳಿಕ ಶರಭಂಗ ಮುನಿಗೆ ಸದ್ಗತಿಯಿತ್ತಗಸ್ತ್ಯನ ವಿನುತ ಅಸ್ತ್ರಗಳನು ಪಡೆದನಾ 2 ಪಂಚವಟಿಯೊಳಗೆ ಸಂಚುಗೈಯುತ ಬಂದ ಕಾಂಚನಮೃಗವನು ಪಂಚಕಗೊಳಿಸಿ ಕುಂಚಿತ ಮತಿಯ ದ್ವಿಪಂಚಶಿರನು ಬರಲು ವಂಚನೆಯಿಂದಪರಿಹರಿಸಲು ಸೀತೆಯ ಸಂಚುಕಾಣದೆ ವನವನದೊಳು ಸಂಚರಿಸುತಲಿ ಶೋಕ ತೋರುತ ಪಂಚಶರಹತನಂತೆ ಬಳಲುತ ಪಂಚಶರ ಪಿತ ಬಂದ ಪಂಪೆಗೆ 3 ಮಾರುತಸುತನ ವಿನಯಭರಿತ ವಾಕ್ಯಕೆ ಮೆಚ್ಚಿ ತರಣಿಸುತನ ಕೂಡೆ ಸಖ್ಯವ ಬೆಳೆಸಿ ದುರಿತವಗೈದ ವಾಲಿಯ ನಿಗ್ರಹಿಸಿ ಕಪಿ ವರ ಸುಗ್ರೀವಗೆ ರಾಜ್ಯಕರುಣಿಸಿದಾ ಬಳಿಕ ಪರಮ ವಜ್ರಶರೀರಿ ಪವನಜ ಶರಧಿಯ ಲಂಘಿಸಿ ಧರಣಿತನಯಳಿ ಗರುಹಿ ಕುಶಲವ ಮುದ್ರಿಕೆಯನಿತ್ತು ಉರುಹಿ ಲಂಕೆಯ ಬರಲು ಒಲಿದನು 4 ಭಕ್ತ ವಿಭೀಷಣನಿಗೆ ಇತ್ತು ಅಭಯವನು ಶರಧಿ ಬಂಧಿಸಿ ದಾಟಿ ಹತ್ತು ತಲೆಯವನ ಪುರವ ಪ್ರವೇಶಿಸಿ ದೈತ್ಯಶೂರರನ್ನೆಲ್ಲ ಮೃತ್ಯು ವಶವ ಮಾಡಿ ಮತ್ತೆ ಕುಂಭಕರ್ಣೇಂದ್ರಜಿತ್ ಮುಖ ದೈತ್ಯರನು ಸಂಹರಿಸಿ ರಣದೊಳು ಶತ್ರು ಭಯಂಕರನಾಗಿ ಮೆರೆದನು ಸ್ತುತ್ಯ ಮಹಿಮ ಶ್ರೀ ಕರಿಗಿರೀಶನು 5
--------------
ವರಾವಾಣಿರಾಮರಾಯದಾಸರು
ಸಾರಸನಯನ ನಮೋ ನಮೋ ಪ ನಾರಾಯಣ ಗೋವಿಂದ ನಮೋ ಅ.ಪ. ದೀನ ಜನಾವನ ದಾನವ ಮಥನ ಶ್ರೀ ನಿಕೇತನ ಕೌಸ್ತುಭಾಭರಣ 1 ದಾಮೋದರ ದುರಿತಾರಿ ಪರಾತ್ಪರ ಹೇಮಾಂಬರಧರ ವನಮಾಲಾಧರ 2 ಸಾರಸಾಪ್ತನು ಸಾರುತಿಹನು ತವ ಸಾರಸಪಾದದ ಚಾರುದರುಶನಕೆ 3 ಮಾರ್ತಾಂಡನ ಬಲು ಚಂಡಕಿರಣವೆಮ್ಮ ನೇತ್ರಪಟುತ್ವ ಕುಂದಿಸುವುದು ಕೇಳ್ 4 ತರಣಿ ಪ್ರಕಾಶದಿ ತಪಿಸುತಿಹೆವು ನಾವ್ ಪೊರೆವುದೆಮ್ಮನು ಕರಿಗಿರೀಶನೆ 5
--------------
ವರಾವಾಣಿರಾಮರಾಯದಾಸರು
ಸಾರಿದ ಸಿರಿವರ ಸಡಗರದಿಂದಲಿ ಕೌರವಪುರಕೆ ಪ ಧೀರ ಪಾಂಡವರ ಕೋರಿಕೆ ಸಲ್ಲಿಸಲು ಸಾರಸ ನಯನನು ಅ.ಪ. ಪ್ರಾತರಾಹ್ನೀಕವ ತಾ ತೀರಿಸಿ ವರ ಪೀತ ವಸನ ಧರಿಸಿ ವೀತರಾಗ ಸಂಪ್ರೀತಿಯಲಿ ಫಾಲದಿ ತಾ ತಿಲಕವ ಧರಿಸಿ ಹೇಮ ಮಕುಟೋತ್ತಮಾಂಗದಿ ಧರಿಸಿ ಜ್ಯೋತಿರ್ಮಯಗತಿ ಪ್ರೀತಿಯಿಲಿ ತರುಣಿರಾ ರುತಿ ಬೆಳಗಲು ತಾ ಸುಮುಹೂರ್ತದಿ 1 ಅಂಡಜಾಧಿಪನು ಪ್ರಕಾಂಡ ಪೀಠನುದ್ದಂಡರಥವ ತರಿಸಿ ಚಂಡಗದಾ ಕೋದಂಡಾದ್ಯಾಯುಧ ಬಂಡಿಗೆಯೊಳಗಿರಿಸಿ ಮಾರ್ತಾಂಡನಂತೆ ಮೆರೆಸಿ ಹಿಂಡುಬಳಗಗಳ ಕಂಡಾದರಿಸುತ ಪಾಂಡುಸುತರ ಬೀಳ್ಕೊಂಡು ಭರದಲಿ 2 ಸುಖದಿ ಪ್ರಯಾಣ ಬೆಳಸಿ ಪ್ರಕಟ ಪಥದಿ ಮುನಿನಿಕರಂಗಳ ಮನವಿಕಸಿತಗೊಳಿಸಿ ಶುಕಪಿಕಾದಿ ಖಗಪಿಕರಂಗಳರವ ಸುಖವ ಮನದಿ ನಿಲಿಸಿ ಸಕಲಾಂತರ್ಗತ ಕರಿಗಿರೀಶ ತಾ ಯುಕುತಿಯಿಂದ ಸಂಧಾನವ ನಡೆಸಲು 3
--------------
ವರಾವಾಣಿರಾಮರಾಯದಾಸರು
ಸಿತಗಿರೀಶ ಶ್ರೀಪತಿಯೆ ಕಾಯೋ ಯನ್ನಾ | ಕರುಣಾರಸ ಪೂರ್ಣ ಪ ಭವ ಭಂಗಾ ಅ.ಪ. ವರುಷಾ | ಕಾಣಲಿಲ್ಲ ಹರುಷಾ ||ಇಂದಿರೇಶ ತವ ಚರಣ ಸನ್ನಿಕರ್ಷಾ | ಎಂದಾಗುದೊ ಶ್ರೀಶಾ ||ವಂದಿಸೂವೆನೊ ನಾನು ನಿನ್ನ ಅನಿಶಾ | ಶ್ವೇತಾದ್ರಿ ವಾಸಾ 1 ಕಮಲ ಕಾಂಬುವಂಥ ಹದನಾ | ತೋರಿಸೊ ಜಿತ ಮದನಾ 2 ಸುರುಚಿರಾಂಗ ಶ್ರೀ ಬಿಳಿಗಿರಿಯ ರಂಗಾ | ಎನ್ನಂತರಂಗಾ ||ಮುರ ವಿರೋಧಿ ಸುರ ಸಾರ್ವಭೌಮ ಹರಿಯೇ | ಕರಿರಾಜನು ಕರಿಯೇ ||ತ್ವರದೊಳುದಿಸ್ಯವನ ಕಾಯ್ದ ದೊರೆಯೇ | ಹೀಗೆನ್ನ ಪೊರೆಯೆ ||ಗುರು ಗೋವಿಂದ ವಿಠಲ ಶ್ರೀಹರಿಯೇ | ನಿನ್ನುಪಕೃತಿ ತಾ ಮರೆಯೆ 3
--------------
ಗುರುಗೋವಿಂದವಿಠಲರು
ಸಿರಿದೇವಿ ವರಬೇಗ ಕರುಣಿಸೊ ದಯದಿಂದ ಶರಣಾಗತ ಪರಿಪಾಲನೆಂಬಿ ಘನ ಬಿರುದಿಹದೊರೆ ನರಹರಿಕರುಣಾಕರ ಪ. ಕರಿರಾಜ ಮೊರೆಯಿಡುವ ಸ್ವರವ ಕೇಳುತಲಂದು ಸಿರಿಯೊಳಗುಸುರದೆ ಗರುಡನ ಪೆಗಲೇರಿ ಸರಸಿ ತಡಿಗೆ ಬಂದು ಕರಿಯನುದ್ಧರಿಸಿದಿ 1 ಘೋರ ಕಿಂಕರರಿದಿರು ಸಾರೆಜಾಮಿಳ ಭಯದಿ ನಾರಾಯಣನೆಂದು ಬೇಡಿದ ಮಾತ್ರದಿ ವಾರಿಜಭವಪಿತ ಪಾರಗಾಣಿಸಿದಿ 2 ತರಳ ಪ್ರಹ್ಲಾದನನು ಹಿರಣ್ಯಕನು ಬಾಧಿಸಲು ಹರಿ ನೀನೆ ಗತಿಯೆನುತಿರೆ ಕಂಭದಿ ಇರವ ತೋರಿ ಬಹು ಪರಿಯಲಿ ಸಲಹಿದಿ 3 ದುರುಳ ಸೀರೆಯ ಸೆಳೆಯೆ ಹರಿಕೃಷ್ಣ ಸಲಹೆನೆ ಸೀರೆಯ ಮಳೆ ಗರದಂದದಲಿತ್ತು ಪರಿಪಾಲಿಸಿದೆ 4 ಎನ್ನ ದುಷ್ಕøತದಿಂದ ನಿನ್ನ ನಾಮದ ಮಹಿಮೆ ಭಿನ್ನವಾಗುವದೆ ನಿನ್ನ ಪದಾಂಬುಜ ವನ್ನು ನಂಬಿದ ಮೇಲಿನ್ನುದಾಸೀನವೆ 5 ಪಾಕಶಾಸನನಘವ ನೀಕರಿಸಿ ಸಲಹಿದನೆ ಭೀಕರವಾಗದೆ ಸಾಕು ಸಾನುಭವ ಕೃಪಣ ದಯಾಕರ ಮೂರುತಿ 6 ಒಳಗೆ ನೀ ತಳಿಸುತಲಿ ಗಳಿಸಿ ಪಾಪಗಳೆನಗೆ ತಳಮಳಗೊಳಿಸುತ ಬಳಲಿಪದುಚಿತವೆ ಉಳುಹಿನ್ನಾದರು ನಳಿನನಾಭ ಹರಿ 7 ಬಡವ ಮಾನವನೊಬ್ಬ ಪಡೆಯ ತನ್ನವರನ್ನು ಕೆಡಲು ಬಿಡನು ಜಗದೊಡೆಯ ನೀ ಎನಗಿರೆ ತಡವ ಮಾಡಿ ಕಂಡ ಕಡೆಯಲಿ ಬಿಡುವುದೆ 8 ನಿನ್ನ ಕಥಾಮೃತಸಾರವನ್ನೆ ಶಿರದಿ ಧರಿಸಿ ಇನ್ನು ಬಳಲಿದರೆ ನಿನ್ನ ಘನತೆಗಿದು ಚೆನ್ನಾಗುವುದೆ ಪ್ರಸನ್ನ ಮುಖಾಂಬುಜ 9 ಮಾನಾಮಾನವ ತೊರೆದು ನಾನಾ ದೇಶದಿ ತಿರಿದು ಶ್ರೀನಿವಾಸ ನಿನ್ನಾನನ ದರುಶನ- ವನು ಮಾಡಿದ ಮೇಲೇನಿದು ತಾತ್ಸಾರ 10 ಆಶಾಪಾಶವ ಬಿಡಿಸಿ ಮನದಾಸೆಗಳ ಪೂರೈಸಿ ದಾಸದಾಸನೆಂಬೀ ಸೌಖ್ಯವನಿತ್ತು ಪೋಷಿಸು ಶೇಷಗಿರೀಶನೆ ತವಕದಿ 11
--------------
ತುಪಾಕಿ ವೆಂಕಟರಮಣಾಚಾರ್ಯ
ಸಿರಿನರಸಿಂಹನೆ ಕರಿಗಿರಿ ನಿಲಯನೆ ಶಿರಬಾಗಿ ನಮಿಸುವೆ ಭಕ್ತಿಯಲಿ ಪ ಕರುಣಾಸಾಗರ ನಿನ್ನ ಚರಣ ಕಮಲದಲಿ ಸ್ಥಿರ ಸ್ಮರಣೆಯ ಕೊಟ್ಟು ಸಲಹೆನ್ನನು ಅ.ಪ. ನೆಲೆಗೆ ನಿಲ್ಲದು ಮನ ಹಲವಕ್ಕೆ ಹರಿವುದು ಸುಲಲಿತವಲ್ಲವು ಸಾಧನವು ನಳಿನನಾಭನೆ ಎನ್ನ ಕುಲದೈವ ನಾರಸಿಂಹ ಒಲಿದು ನೀನಾಗಿಯೆ ಸಲಹುವುದು 1 ಅತ್ತಿತ್ತ ಓಡುವ ಚಿತ್ತವ ನಿಲಿಸುವ ಶಕ್ತಿಯು ಎನಗಿಲ್ಲ ಲವಲೇಶವು | ಚಿತ್ತಜಪಿತ ಎನ್ನ ಚಿತ್ತದೊಳಗೆ ನಿಂತು ಭಕ್ತಿಯ ಕರುಣಿಸೋ ತವ ಪಾದದಿ 2 ನೆಲದ ಮೇಲಲೆವಾಗಯಲರುಣಿ ಗಮನವು ಹಲವು ರೀತಿಯಲಿ ವಕ್ರವಲೆ ಘಳಿಲನೆ ತನ್ನಯ ಬಿಲದೊಳು ಪೋಪಾಗ ಸಲೆ ನೇರವಲ್ಲವೆ ಸಿರಿವರನೇ 3 ವನ ವಿಷಯಗಳಲದಲಿ ಬರಲಾರವು ಘನಭಕ್ತಿರಸದಿಂದ ತೊಳೆದು ನಿರ್ಮಲಗೈದು ಮನವ ನೀ ಮಡಿ ಮಾಡು ಘನಮಹಿಮ 4 ಕಳೆಗಳೆ ಬೆಳೆದಿವೆ ಮನಕ್ಷೇತ್ರದೊಳಗೆಲ್ಲಾ ಫಲ ಸಸ್ಯಗಳಲ್ಲಿ ಸ್ಥಳವಿಲ್ಲವು | ಕಳೆಗಳ ಕಳೆದು ಉತ್ತಮ ಫಲ ಕೊಡುವಂಥ ಬೆಳೆಯ ನೀನು ಬೆಳಸಯ್ಯಾ ಕರಿಗಿರೀಶ 5
--------------
ವರಾವಾಣಿರಾಮರಾಯದಾಸರು
ಸೀಸಪದ್ಯ ಧರಣಿ ಮೊರೆಯನು ಕೇಳಿ ಸರಸಿಜಾಸನ ಸಕಲ ಸುರರ ಸಹಿತದಿ ಶರಧಿಶಯನಗÀರುಹೆ ವಸುದೇವ ದೇವಕಿ ಸುತನೆನಸಿ ಅಜನಯ್ಯ ವಸುಮತಿಯಲವತರಿಸಿ ಲೀಲೆಯಿಂದ ದುರುಳ ದೈತ್ಯರ ಸದೆದು ಪರಿಪಾಲಿಸಿದ ಸಾಧು ಸುಜನರನ್ನು ನಿಜಭಕ್ತ ಪಾಂಡವರ ನೆಂಟನೆಂದೆನಿಸಿ ಭೂ ಭುಜ ಸುಯೋಧನ ಮುಖ್ಯ ದುರುಳರನ್ನು ಸದೆಬಡಿಸಿದಾ ಬಳಿಕ ಮದದಿ ಕೊಬ್ಬಿದ ಯದು ಬಳಗವನು ವಿಪ್ರಶಾಪದಿಂದ ಕೊಲಿಸಿ ಪದುಮಸಂಭವಜನಕ ಕರಿಗಿರೀಶನು ತನ್ನ ಸದನಕ್ಕೈದಿದ ಸರ್ವವ್ಯಾಪ್ತ ಸರ್ವೇಶ
--------------
ವರಾವಾಣಿರಾಮರಾಯದಾಸರು
ಸೀಸಪದ್ಯ ಪ್ರಳಯ ರುದ್ರನ ಕೋಪಕ್ಕೆಮ್ಮಡಿಯ ಕೋಪದಿಂ ದ ಲಘು ಶಾಪವ ಮುನಿಯು ಕೊಟ್ಟರಂಜೆ ಕಡುಕಷ್ಟ ಕೋಟಲೆಯು ದುಃಖ ದಾರಿದ್ರಗಳು ಒಡನೊಡನೆ ಬಂದೊದಗೆ ನಡುಗೆ ನಾನು ಶರಭ ವೃಶ್ಚಿಕ ಸರ್ಪ ಮೊದಲಾದ ಬಲು ಕ್ರೂರ ಪ್ರಾಣಿಗಳ ಬಾಧೆಗಂಜೆ ಅಸಿಧಾರೆಗಂಜೆ ಇನ್ನಸು ಪೋಗುವುದಕಂಜೆ ವಸುಧೀಶರಾಗ್ರಹಕೆ ಲವಲೇಶವಂಜೆ ಉರಿಗಂಜೆ ಸೆರೆಗಂಜೆ ಹರಣದ ಭಯಕಂಜೆ ಕರಿಗಿರೀಶನ ಕರುಣವೊಂದಿರಲು ಎನಗೆ ಒರೆದ ವಚನಕೆ ಅನೃತ ಸಂಘಟಿಸಲದಕೆ ನೆರೆ ಅಂಜುವೆನು ನಾನು ಇನ್ನೊಂದಕಂಜೆ
--------------
ವರಾವಾಣಿರಾಮರಾಯದಾಸರು
ಸೀಸಪದ್ಯ ಮಕರ ಭಾದೆಗೆ ಸಿಲುಕಿ ಕರಿರಾಜ ತಾ ಕರೆಯೆ ಭರದಿ ನೀ ಬಂದೆ ತಂದೆ ಭಾಧಿಸುತಿರಲು ಕಂದ ಪ್ರಹ್ಲಾದನನು ಸಂದೇಹವಿಲ್ಲದೆಲೆ ಬಂದು ಕಾಯ್ದೆ ವಿಪಿನದಲಿ ಧ್ರುವರಾಯ ತಪವಗೈಯುತಲಿರಲು ಕೃಪೆಯಿಂದ ಮೈದೊರ್ದೆ ಕೃಪಣವತ್ಸಲನೇ ಮರಣ ಕಾಲದಿ ಮಗನ ಕರೆದಜಾಮಿಳನಂದು ಕರುಣದಿಂದಲಿ ಪೊರೆದೆ ಕರುಣ ಶರಧೆ ದುರುಳ ಸೆರಗ ಸೆಳೆಯುತಿರೆ ನೊಂದು ಚೀರಿಡಲಕ್ಷಯಾಂಬರವನಿತ್ತೆ ಇಂದು ನೀನಲ್ಲದೆಲೆ ಕಾಯ್ವರಿನ್ನಾರಿಹರು ತಂದೆ ನೀ ಮೈದೋರು ಶ್ರೀ ಕರಿಗಿರೀಶ
--------------
ವರಾವಾಣಿರಾಮರಾಯದಾಸರು
ಸುಗುಣಾಬ್ಧಿಯತಿ ರಾಯಾ ನಿನ್ನಯ ಪಾದಯುಗಳ ನಂಬಿಹರಯ್ಯ ಪ. ನೀನೆಲ್ಲಿಯಿರುವೆಯೊ ತಾನಲ್ಲಿ ಬರುವನು ಶ್ರೀನಿವಾಸನು ದಯದಿ ಯೀ ನುಡಿ ನಿಜವೆಂದು ಧ್ಯಾನಿಸುವದಕನುಮಾನವಿಲ್ಲವು ಜಗದಿ ಭಾನುತನುಜನ ತ್ರೇತೆಯೊಳು ಪರಮಾನುರಾಗದಿ ಪೊರೆದವನು ಕ ರ್ಣಾನುಜನ ದ್ವಾಪರದಿ ಸೇರಲಿಕೇನುಫಲ ಪವಮಾನ ಪೇಳೆಲೊ 1 ಇದರಿಂದ ನಿನ್ನಯ ಪದ ಕಮಲವ ಸೇರಿ ಬದುಕುವೆನೆಂಬಾಸೆಯಾ ಹೃದಯದಿ ದೃಢವಾಗಿ ವಹಿಸಿರುವೆನು ಬೇಗ ಒದಗಿ ರಕ್ಷಿಸು ಭಾಷೆಯ ಹರಿಯು ಕೃಪೆ ಮಾಡುವಂದದಿ ಜಲನಿಧಿ ಸೇರುವಂದದಿ 2 ಮಂದಮತಿಯ ಮತದಿಂದ ಸಂಗರದೊಳಗಿಂದ್ರಾರಿತವಕ- ದಿಂದಾ ಮಹಾಸ್ತ್ರವ ಬಂಧಿಸೆ ಬೇಗದಿಂದಾ ಆ ಲಂಕೆಯಿಂದಾ ಒಂದೇ ಹಾರಿಕೆಯಿಂದಾಲೌಷಧಿ ತಂದು ಹರಿಗಳ ಕಾಯ್ದ ಪೂರ್ಣ- ನಂದ ರಾಮಾವತಾರಿ ಶೇಷಗಿರೀಂದ್ರ ಕರುಣವ ಸೂರೆಗೊಂಡಿಹ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸುಬ್ರಹ್ಮಣ್ಯನೆ ಶುಭ್ರವದನನೆ | ನಿರ್ಭಯವನುರೆ ಮಾಳ್ವನೆ | ಶರಣು ಶರಣು 1 ಕರುಣಿ ನಿತ್ಯಾನಂದನೆ | ಶರಣು 2 ರಾಮನ ತೋಷನೆ | ಶರಣು 3 ಶೋಕ ನಾಶ ಉಮಾ ಕುಮಾರಕ | ಶ್ರೀ ಕುಮಾರ ಗಿರೀಶನೆ | ಶರಣು 4 ದಾಸರಾ ಮನ ತೋಷನೆ 5
--------------
ಬೆಳ್ಳೆ ದಾಸಪ್ಪಯ್ಯ
ಸ್ಥಾಣುಂಕರ ವಿರಾಜಿತ ರಮಾಸದನ ಮೋಹನ ಪ ವಾಣೀಶ ಸಂಭಾವಿತ ಗೋಪೀಜನ ಸೇವಿತಾ ಅ.ಪ ಮಣಿಭೂಷಣ ರಂಜಿತ ಮುಕ್ತಜನಾನಂದಿತಾ 1 ಫಣಿಮಣಿಗಣ ಸಂಭೂಷಿತ ವನಿತಾಜನ ತೋಷಿತ 2 ಅಣುರೇಣು ತೃಣಪೂರಿತ ಗುಣಸಾಗರ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸ್ಥಿರವೆಂದು ನಂಬಿ ಕೆಡಬೇಡ ಮನುಜಾ ಧರಣಿ [ಬಾಳು] ಕರುಣೆಯಿಹುದು ಮಾ[ಂಗಿರೀಶನ] [ನಂಬಿದರೆ] ಪ ಕ್ಷೀರಾಬ್ಧಿಗೈದು ಮುದದಿ ಪೊರೆವನು ಸ್ತನ್ಯದಿಂ ಹೀರಿ ತೇಲುತ ಬೆಳೆದು ತೋರಮುತ್ತುಗಳಾ ಹಾರ ಪದಕಗಳಿಂದ ಚಾರುಭೂಷಣದಿಂದ ಮಾರಸುಂದರನೆನಿಪ | ಮೂರು ದಿನದ ಬಾಲ 1 ಬಾಲತನ ಪೋಗಲು ಮೇಲೆ ಯೌವನವೊದಗಿ ಬಾಲೆಯೋರ್ವಳಕರವ ಘಳಿಲದೊಳು ಹಿಡಿದು ಮೇಲಾದ ಸೌಭಾಗ್ಯವಲ್ಪಕಾಲವಿರುವಾಗ ಕಾಲದೂತರು ಪಿಡಿಯಲೊಡನೆ ಬ[ರುವ]ವರಿಲ್ಲ 2 ಉಕ್ಕುವ ಯೌವನದ ಸೊಕ್ಕಿಲ್ಲ ಮರುದಿನ ಉಕ್ಕುಕ್ಕಿ ಬಸವಳಿದು ಶಕ್ತಿಗುಂದಿ ಸುಕ್ಕು ಸುಕ್ಕಿನ ದೇಹ[ಭಾ]ವವಿಲ್ಲದ ಬಾಳ ಭಕ್ತಿಗೆ ಮನಮರೆಯೆ ಭಕ್ತಗತಿಯದರಿಂದ 3 ಧನವ ದಾಯಾದಿಗಳು ಮನವ ಕಾಮಾದಿಗಳು ಸನುಮತ ಜ್ಞಾನವನ್ನು ದುರಿತಕಾರ್ಯ ತನುಜ ತನುಜೆಯರೆಲ್ಲರವರವರ ಸೌಖ್ಯವನು ಸನಿಹದಿಂ ಸೂರೆಗೈವರಿನ್ನೇತರಾಸೆ 4 ಕುಂಟು ಜೀವವಿರುವನಕ ನೆಂಟರಿಷ್ಟರು ಹಣವ ಗಂಟನುಂಗಲು ಬರುತಲೆಂಟೆಂಟುದಿನವಿಹರು ಗಂಟು ತೀರಿದ ಬಳಿಕ ಪಾಪಪುಣ್ಯಗಳ ಹೊರತು [ಏ ನುಂಟು ಈಭವದ ನಂಟಿನಲಿ ಯದರಿಂದ 5 ಜೀವ ತಾ ಜನಿಪಂದು ರವೆಯಷ್ಟು ತರಲಿಲ್ಲ ಅವನಿಯಾ ಬಿಡುವಂದು ಜವೆಯಷ್ಟ ಹೊರಲಿಲ್ಲ ಭಾವಶುದ್ಧಿ ಬೇಕನಿಶ ಮಾವಿನಾಕೆರೆರಂಗನ ಸೇವಿಸಿದೊಡಾ ರಂಗ ಭವವೆಲ್ಲ ಕಳೆವಾ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್