ಒಟ್ಟು 857 ಕಡೆಗಳಲ್ಲಿ , 90 ದಾಸರು , 751 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪದವ ಕಲಿಸೆನಗೆ ಶ್ರೀಹರಿ ಪದವ ಕಲಿಸೆನಗೆ ಪ ಪದವ ಕಲಿಸಯ್ಯ ಪದುಮನಾಭ ಪದದ ಮಹಿಮೆಯೆಂಬ ಸುಧೆಯು ಭರಿತವಾದ ಅ.ಪ ನಾಗಶಾಯಿಯ ವಿಮಲನಾಮವೆಂಬ ರಾಗಕಲಿಸು ಮಿಗಿಲು ಭೋಗ ಭಾಗ್ಯದಾಸೆ ನೀಗಿಸಿ ಈ ಭವ ರೋಗ ಗೆಲಿದು ತಲೆದೂಗಿ ನಲಿಯುವಂಥ 1 ದೋಷದೂರನ ಚರಿತರಸದಿಂ ಸೂಸಿ ಹರಿವ ಕವಿತ ಶ್ಲೇಷ ನೀಗಿಸಿ ಪ್ರಪಂಚ್ವಾಸನದುಳಕಿಸಿ ಸಾಸಿರನಾಮ ಹುಸಿ ತಾಳದಿ ಪಾಡುವಂಥ 2 ಯತಿತತಿಗಳು ಪೊಗಳ್ವ ಬಿಡದತಿ ಮತಿಮಾನ್ಯರು ಪಾಡ್ವ ರತಿಪತಿಪಿತ ಶ್ರೀರಾಮ ನಿನ್ನಡಿಭ ಕ್ತ್ಯತಿಗಣಕೂಡಿದ ಅತಿಶಯಾನಂದಕರ 3
--------------
ರಾಮದಾಸರು
ಪದ್ಯ ಅಥಃ ಪ್ರಥÀಮೋಧ್ಯಾಯ ಪಾದ ವಾರಿಜಕೆರಗುತ ನೀರಜ ಮುಖಿ ಸರಸ್ವತಿಯಾ || ಸಾರ ಭಕ್ತಿಲಿ ಸ್ತುತಿಸಿ ಪೇಳುವೆ ಸತ್ಯ ಚಾರು ಕಥೆಯಾ ಪ ಸುರಮುಖಿವಂದಿತ ಸರಸಿಜ ಭವಪಿತ ಶರಧಿ ಕರಿವರದಾ | ಹರುಷದಿಂದಲಿ ನಿನ್ನ ಚರಿತೆ ಕೊಂಡಾಡಲು ವರವ ಪಾಲಿಸು ದಯದಿಂದ 1 ಶರನಿಧಿ ಸಂಭೂತೆ ಸುರಜೇಷ್ಟ ಸ್ಮರಮಾತೆ ಪುರಹರ ವಂದಿತೆ ಖ್ಯಾತೆ || ಸ್ಮರಿಸಿ ಬೇಡುವೆ ನಿನ್ನ ಧೊರಿಯ ವರ್ಣಿಸಲೀಗ ಗರಿಯೆ ವರವ ಸುಖದಾತೆ 2 ಹರಿಕುಲೋತ್ತುಮ ನಿನ್ನ ಸರಸಿಜ ಪದಯುಗ ನೆರೆನಂಬಿದೆನು ಮುದಿಂದ || ಹರಿಸುಚರಿತ್ರವು ಅರುಹಲು ಎನ್ನಗೆ ಸ್ಥಿರ ಬುದ್ಧಿಕೊಡು ವಾಯುಕಂದ 3 ಗಿರಿಜೇಶ ಶಚಿಪತಿ ಸುರತತಿಗೆರಗುವೆ ಪರಮ ಸುಭಕ್ತಿ ಪೂರ್ವಕದಿ || ಹರಿದಾಸ ವರ್ಗಕೆ ಶುಭನೀಡಲೆನಗೆಂದು ಶಿರಬಾಗಿ ಬೇಡುವೆ ಮನದಿ 4 ಘನತರ ನೈಮಿಷವನದೊಳು ವಾಸಿಪ ಮುನಿ ಸೂತನಲ್ಲಿಗೆ ಬಂದು | ವಿನಯದಲಿ ವಿಜ್ಞಾಪನ ಮಾಡಿಕೊಂಡರು ಶೌನಕಾದಿಗಳೆಲ್ಲ ನಿಂದು 5 ಕ್ಷಿತಿಯೊಳು ಮನದಾಸೆ ಹಿತದಿಂದ ನೀಡುವ | ವ್ರತದಾವದ್ಹೇಳಿರೆನುತ || ಅತಿ ಭಕ್ತಿಯಿಂದ ಕೇಳುವ ಮುನಿಗಳ ಕಂಡು ಕಥಿಸಿದನಾಗೆತಿ ಸೂತಾ 6 ಛಂದದಿ ಕೇಳಿರಿ ಒಂದೆ ಮನದಿ ಈಗಾ | ನಂದದಿ ನಾರದ ತಾನೂ || ಹಿಂದಕ್ಕೆ ಈತೆರ ನಂದನ ಗೋ ವಿಂದನ ಪ್ರಶ್ನೆ ಮಾಡಿದನೂ 7 ಕಾರುಣ್ಯದಿಂದಲಿ ಸಾರಸೋದ್ಭವಕು | ಮಾರ ನಾರದ ಮುನಿವರಗೆ || ಶೌರಿ ಪೇಳಿದ ಕಥೆ ಸಾಧುವೆ ಮೋದದಿ ನಿಮಗೆ 8 ವರಸುರ ಲೋಕಾದಿ ಚರಿಸುತ್ತನಾರದ | ಹರುಷದಿ ಭೂಮಿಗೆ ಬರಲು || ನರರತಿ ಕಷ್ಟದಿ ಮರುಗುವದಂ ನೋಡಿ | ಪೊರೆಟರು ಹರಿಗ್ಹೇಳಿ ಕೊಳಲು 9 ಪದುಮಜ ಸುತ ನಾರದ ಮುನಿ ವೇಗದಿ | ವಿದುಧರ ವಂದಿತನಾದ || ಯದುಪನಲ್ಲಿಗೆ ಬಂದು ಮುದಮನದಿಂದಲಿ | ವಿಧ ವಿಧದಲಿ ಸ್ತುತಿಗೈದಾ 10 ಅಗಣಿತ ಮಹಿಮನೆ ತ್ರಿಗೂಣ ವರ್ಜಿತ ತ್ರಿವಿಕ್ರಮನೆ || ಪೊಗಳುವ ತವ ಪದಯುಗಕೆರಗುತ ನಾನು ಜಗದುತ್ವತ್ತಿ ಕಾರಣನೆ 11 ಮಗಳಲ್ಲಿ ಪುಟ್ಟದಿ ಮಗನನ್ನು ಕುಟ್ಟದಿ | ಮಗನ ಮಗಳ ಮದುವ್ಯಾದಿ || ಮಗನ ಮಗನ ವರಪಡೆದಾತನ ಜೈಸಿ ಮಗನ ಮಗನ ನೀನು ತಂದಿ 12 ಸಿಂಧುಜರಿಪ್ರಸಖ ನಂದನ ಕೊಂದನ | ತಂದೆಯ ತಂದೆಯಾ ಸುತೆಯಾ || ನಂದಿನಿಯಳಿಗಾಗಿ ನೊಂದಿದಿ ನೀ ನರ ರಂದದಿ ಕವಿಗಣಗೇಯಾ 13 ಘನ್ನ ಮಹಿಮ ನಿನ್ನ ಅನಂತ ಚರಿಯವ ಬಣ್ಣಿಸ ಬಲ್ಲೆನೆ ದೇವಾ || ಪನ್ನಗರಾಜಗಾಗಣ್ಯವಾಗಿಪ್ಪುದು ಮನ್ನಿಸು ಎನ್ನ ಬಿನ್ನಪವಾ 14 ಬಾ ಮುದ್ದು ನಾರದನೆ ಬಾ ಮುನಿವರ್ಯನೆ ಬಾ ಮೂರು ಭುವನ ಸಂಚಾರಿ ನೇಮದಿಂದಲಿ ನಿನ್ನ ಕಾಮಿತ ಪೇಳೀಗ ಪ್ರೇಂದಿಂದಲಿ ವೀಣಾಧಾರಿ 15 ಮುರಹರ ನಿನ್ನಗೆ ಅರಿಯದ ವಾರ್ತೆಯು | ಧರಣಿ ತ್ರಯದಿ ಉಂಟೇನೋ || ನರರತಿ ಕಷ್ಟದಿ ಮರುಗುತಲಿಪ್ಪರು ಹರಿಪೇಳಿದಕುಪಾಯವನು 16 ಸತ್ಯಲೋಕೇಶನ ಪುತ್ರನೆ ನಿನ್ನಯ | ಉತ್ತಮ ಪ್ರಶ್ನೆಗೆ ನಾನು || ಚಿತ್ತೈಸು ಮುನಿವರ ನೀನು 17 ನಾರದ ಶ್ರೀ ಸತ್ಯನಾರಾಯಣ ವ್ರತ ಧಾರುಣಿಯೊಳಗಿನ ಜನರು ಆರು ತಮ್ಮ ಪರಿವಾರದಿಂದಲಿ ಗೈಯ್ಯೆ ಭೂರಿ ಸೌಖ್ಯದಿ ಮೆರೆವರೋ 18 ದೇವನೆ ಈ ನಿನ್ನ ಸೇವಕನಿಗೆ ಸತ್ಯ || ದೇವನೆ ವ್ರತದ ವಿಧಾನ || ಸಾವಧಾನದಿ ಪೇಳು ಭಾವ ಜಪಿತ ಏಕೋ ಭಾವದಿ ಕೇಳುವೆ ಮುನ್ನ 19 ಬುಧನುತ ನಾರದ ಘೃತಕ್ಷೀರ ಶರ್ಕರ | ಕದಳಿ ಗೋಧೂ ಮಾದಿಗಳನು || ಪದುಳದಿಂದಲಿ ಸುಪಾಕಗೈದು ಮೇಣ್ ವಿಧ ವಿಧ ಪಕ್ವಾದಿಗಳನು 20 ಪರಮ ಭಕ್ತಿಯಲಿಂದ ಪರಿವಾರ ಸಹಿತದಿ ಧರುಣಿಸುರನ ಪರಿಮುಖದಿ ತುರಧೂಳಿಕಾಲದಿ ಪರಿಪರಿ ಪೂಜಿಸಿ ಹರಿಗರ್ಪಿಸಲಿ ಬೇಕು ಮುದದಿ 21 ಈರೀತಿಗೈವರ ಕೋರಿಕೆಯನು ದಯ | ವಾರಿಧಿ ಶಾಮಸುಂದರನೂ || ನಿತ್ಯ ವಾರಿಜಸಹಿತದಿ ಸೇರಿ ತಾ ನಲಿದಾಡುತಿಹನೂ 22 ಇತಿ ಪ್ರಥಮೋಧ್ಯಾಯ ಸಂಪೂರ್ಣಂ ಅಥಃ ದ್ವಿತೀಯೋಧ್ಯಾಯಃ ಅತಿ ಮೋದದಿಂದಲಿ ಮತಿಯುತರೆ ಈಗ ಪೃಥವಿಯೊಳಗೆ | ಪೂರ್ವದಲಿ || ವ್ರತಗೈದ ಸುಗುಣರ ಇತಿಹಾಸ ನಿಮ್ಮಗೆ ಕಥಿಸುವೆ ಹಿತದಿಂದ ಕೇಳಿ 1 ಕಾಶಿಯೊಳಗೆ ಒಬ್ಬ ಭೂಸುರ ಬಡತನ ಕ್ಲೇಶದಿ ವಾಸಿಸುವದನು || ಶ್ರೀಶ ಅವನ ನೋಡಿ ಪೋಷಿಸಲು ವೃದ್ಧ ವೇಷದಿ ಮಾತನಾಡಿಸಿದನು 2 ಭೂತವಕದಿ ವಿಪ್ರನಾಥನೆ ತವ ಮುಖ ಪಾಥೋಜ ಬಾಡಿದ ಬಗೆಯಾ ಈ ತೆರ ದುಃಖದಿ ನೀ ತಿರಗುವಂಥ ಮಾತು ಪ್ರೀತಿಲಿ ಪೇಳಯ್ಯಾ 3 ಕಥಿಸುವೆ ಹೇವಿಪ್ರ ಹಿತದಿಂದ ನೀಯನ್ನ | ಸ್ಥಿತಿಯಾ ಲಾಲಿಸು ಮನದಿಂದಾ || ಗತಿಗೆಟ್ಟು ಚರಿಸುವೆ ಪೃಥಿವಿಯೊಳಗೆ ಈಗ ಅತಿ ಬಡತನ ದೆಶೆಯಿಂದಾ 4 ಶ್ರೇಷ್ಟನೆ ದಾರಿದ್ರ್ಯ ಕಷ್ಟ ತೊಲಗುವಂಥ | ಥಟ್ಟನೆ ನೀ ಪೇಳುಪಾಯಾ || ಘಟ್ಪ್ಯಾಗಿ ನಿನ್ನ ಉತ್ಕøಷ್ಟ ಪಾದಾಂಬುಜ ಮುಟ್ಟಿ ಸೇವಿಪೆ ಮಹರಾಯಾ 5 ಮಿಡುಕುತ್ತ ವಿಪ್ರನು ನುಡಿದ ಮಾತನುಕೇಳಿ | ಕಡಲಜಪತಿ ಕವಿಗೇಯಾ || ಕಡುದಯದಲಿ ಪೇಳ್ದ ಬಡತನ ಕಳೆಯುವ ಪೊಡೆವಿಯೊಳಿದ್ದ ಉಪಾಯಾ 6 ಸಾರುವೆ ಕೇಳಯ್ಯ ಮಾರಜನಕ ನಿಜ | ನಾರಾಯಣನ ಸು ವ್ರತವಾ ಆರು ಜಗದಿ ಭಕ್ತಿ ಪೂರ್ವಕ ಮಾಳ್ವರು ದಾರಿದ್ರ್ಯ ಹರಿ ದೂರಗೈವಾ 7 ಮುದುಕನ ನುಡಿಕೇಳಿ ಮುದಮನದಿಂದಲಿ ಸದನಕ್ಕೆ ದ್ವಿಜ ಬಂದು ತಾನೂ ಸುದತಿ ಸಹಿತನಾಗಿ ಸತ್ಯನಾಥಾನ ಪೂಜೆ ವಿಧ ವಿಧದಲಿ ಮಾಡಿದನೂ 8 ಹರುಷದಿ ಈ ರೀತಿ ಧರಣಿ ದೇವನು ಮಾಡೆ | ಶಿರಿಸತಿ ಸುತರಿಂದ ತಾನೂ || ಧರೆಯೊಳು ಸುಖಬಿಟ್ಟು ಪರಮ ದುರ್ಲಭವಾದ ಪಥ ಹಿಡಿದನೂ 9 ಸೂತರೆ ಅತ್ಯಂತ ಕೌತುಕವಾಗಿಹ ಧಾತ ಪಿತನ ಈ ವ್ರತವು ಭೂತಳದೊಳಗೆಂತು ಖ್ಯಾತಿಯ ಪೊಂದಿತು ಪ್ರೀತಿಲಿ ಪೇಳಿರಿ ನೀವು 10 ಸತಿಸುತ ಪರಿವಾರ ಸಹಿತಾ ಅತಿ ಹಿತದಲಿ ಮನೋರಥ ಪೂರೈಸುವ ಈ ವ್ರತ ಮಾಡುತಿರಲಾಗತ್ವರಿತಾ 11 ಚರಣನೋರ್ವನು ಶಿರದಿ ಕಾಷ್ಟಭಾರವ ಧರಿಸಿ ಮಾರಲು ಬೀದಿಗಳಲಿ ಬರುತಿರೆ ಮಾರ್ಗದಿ ಧರಣಿದೇವನೆ ಮಂ ದಿರ ಕಂಡ ಪರಮ ಮೋದದಲಿ 12 ಶ್ರೀನಿವಾಸನ ಘನಧ್ಯಾನದಿಂರ್ಚಿಪ ಕ್ಷೋಣಿ ಸುರನ ನೋಡಿ ಜವದಿ ಮಾನವ ಕೇಳಿದ ಏನಿದೆಂದೆನು ತಲಾಕ್ಷಣದಿ 13 ಶೂದ್ರನ ನುಡಿ ಕೇಳಿ ಆ ದ್ವಿಜ ಪೇಳ್ದನು ಶುದ್ಧ ಮನದಿ ಚರಣೋಧ್ಭವ ಗೈದನಿ ಶುದ್ಧನ ಪಾದಾರ್ಚನವಾ 14 ಹರುಷದಿಂದಲಿ ಸತ್ಯ ಹರಿ ಪೂಜಿಸಿದ ಶೂದ್ರ ಪರಮ ಸೌಜನ್ಯದಿ ಇದ್ದು ಕೊನೆಗೆ ಪರಿವಾರಯುತನಾಗಿ ತೆರಳಿದ ಸ್ಥಿರ ಉಳ್ಳ ಶಿರಿಶಾಮಸುಂದರನ ಪುರಿಗೆ 15 ಇತಿ ದ್ವಿತೀಯೋಧ್ಯಾಯ ಸಂಪೂರ್ಣಂ ಅಥಾಃತೃತೀಯೋಧ್ಯಾಯ ಋಷಿ ಜನಗಳೆ ಕೇಳಿ ವಸುಧಿ ತ್ರಯದಿ ಘನ ಪೆಸರಾದ ಇನ್ನೊಂದು ಕಥೆಯಾ ಉಸುರುವೆ ಕೇಳ್ವರ ವ್ಯಸನವು ಪರಿಹಾರ ಪುಸಿಯಲ್ಲಿ ಈ ನುಡಿ ಖರಿಯಾ 1 ವರ ಉಲ್ಕಮುಖನೆಂಬ ಧರಣೀಶನೋರ್ವನು ಹರುಚದಿಂದಲಿ ತನ್ನ ಹಿತದಾ ಶರಧಿ ತೀರದಿ ನಿಜ ಹರಿಯನ್ನು ಪೂಜಿಸುತಿರ್ದ 2 ಕ್ಷೋಣಿಪಾಲಕನಿದ್ದ ಆ ನದಿತೀರದಿ | ವಾಣಿಜ್ಯ ಮಧುನಾಯಕನೂ || ಸಾನುರಾಗದಿ ಬಂದು ಶ್ರೀನಿಧಿ ವ್ರತದ ವಿ ಧಾನವೇನೆಂದು ಕೇಳಿದ 3 ಭೂಮಿಪಾಲಕ ಮಧುನಾಮಕ ವೈಶ್ಯನ ಆ ಮೃದು ನುಡಿಕೇಳಿ ಜವದಿ ಕಾಮಿತದ ಸತ್ಯ ಸ್ವಾಮಿಯ ವ್ರತ್ತದಾ ನೇಮವ ಪೇಳ್ವ ಸಮ್ಮುದದಿ 4 ರಕ್ಕಸಾರಿಯ ಕಥಾ ಭಕ್ತಿಲಿ ಕೇಳುತ ಲಕ್ಕುಮಿಯುತ ಮುದದಿಂದ ಮಕ್ಕಳೆನಗಾಗಲು ಚಕ್ರಿಯ ಸುವೃತ ಅಕ್ಕರದಲಿ ಮಾಳ್ಪೆನೆಂದ 5 ಈ ರೀತಿ ಧೃಡ ಬ್ಯಾಪಾರಿಯು ತಾಗೈದು ಶೌರಿ ಪ್ರಸಾದ ಸ್ವೀಕರಿಸಿ || ಸಾರಿ ಪೇಳಿದ ತನ್ನಾಗಾರಕ್ಕೆ ಬಂದು ತಾ ನಾರಿಯ ಮುಂದೆ ವಿಸ್ತರಿಸಿ 6 ಸತಿ ಶಿರೋಮಣಿ ಲೀಲಾ ವತಿಯು ತನ್ನ ಮಂದಿರದಿ || ಪತಿ ಕರುಣದಿ ಗರ್ಭ ವತಿ ತಾನಾದಳಾಕ್ಷಣದಿ 7 ಹತ್ತನೆ ಮಾಸದ ಉತ್ತಮ ಪುತ್ರಿಯ ಪೆತ್ತಳು ಆ ನಾರಿ ತಾನೂ || ಅತ್ಯಂತ ಸನ್ಮುದ ಚಿತ್ತನಾಗಿ ಸಾಧು ಮರ್ತನು ಹರಿವ್ರತವನ್ನು 8 ಸತಿ ಲೀಲಾವತಿ ತನ್ನ ಪತಿಗಭಿವಂದಿಸಿ ನಿಂದು || ಅತಿ ಭಕ್ತಿಯಿಂದಲಿ ಕಥಿಸಿಕೊಂಡಳಲ ಯದು ಪತಿ ವ್ರತ ಮಾಡಬೇಕೆಂದು 9 ಸುದತಿಯ ನುಡಿಕೇಳಿ ಮಧುನಾಮಕ ಸಾಧು ವಿಧಿಸಿದ ಸುತೆ ಕಲಾವತಿಯಾ || ಮದುವೆಯ ಕಾಲದಿ ಉದುಪನರ್ಚಿಪೆನೆಂದು ಮುದದಿಂದ ಪೇಳ್ದನುಪಾಯಾ 10 ಪರಿಪರಿ ಸೌಖ್ಯದಿಂದಿರುತಿರೆ ವೈಶನ ತರುಳೆಗೆ ಪೂರ್ಣಯೌವನವು | ಬರಲು ಮಾಡಿದ ತಕ್ಕವರ ತಂದು ಲಗ್ನವ ಮರೆತು ಬಿಟ್ಟನು ಹರಿವ್ರತವಾ 11 ಶ್ರೀಮಂತವೈಶ್ಯನು ಪ್ರೇಮದಿಂದಲಿ ತನ್ನ ಜಾಮಾತನೊಡನೆ ವ್ಯಾಪಾರಾ ನೇಮದಿ ಗೈಯಲು ಗ್ರಾಮ ತ್ಯಜಿಸಿ ಪೋದಾ ಆ ಮಹಾಪುರ ರತ್ನಸಾರಾ&ಟಿbs
--------------
ಶಾಮಸುಂದರ ವಿಠಲ
ಪರಮ ಕಾರುಣ್ಯ ಗುರು ಕರುಣಿಸೆನಗ್ಹರಿ ಪದವ ಶರಣೆಂದು ನಮಿಪೆ ನಿಮಗೆ ಪ. ಹರಿಯ ದಾಸತ್ವದಲಿ ವರದೀಕ್ಷೆಯನೆ ಕೊಟ್ಟು ಕರುಣಿಸಿ ಕೃಪೆಗೈದಿರಿ ಗುರುವೆ ಅ.ಪ. ಅಂಕಿತವ ಮೊದಲಿತ್ತು ಹೃದಯಾಂಕದಲಿ ನಿಲಸಿ ಮಂಕುಬುದ್ಧಿಯ ತೊಲಗಿಸಿ ಶಂಖ ಚಕ್ರಾಂಕಿತನ ಪದಕಮಲವನು ಮನ ಪಂಕಜದೊಳಗೆ ತೋರಿ ಶಂಕರಾರ್ಚಿತನ ಕೃಪೆ ಎನ್ನೊಳಾಗಲಿ ಎಂದು ಶಂಕಿಸದೆ ವರವಿತ್ತಿರಿ ಗುರುವೆ 1 ಶ್ರೀನಿವಾಸನು ನಿಮ್ಮೊಳ್ ಸಾನುರಾಗದಿ ನೆಲಸಿ ತಾನಿತ್ತ ದಾಸತ್ವವ ಏನೆಂಬೆ ಈಗಭಿಮಾನವ ತೊರೆ ಎನುತ ತಾ ನುಡಿಸುತಿಹನು ನಿಮ್ಮೊಳ್ ಮಾನಾಭಿಮಾನ ಹರಿ ಗುರುವಶವಾಗಿರಲು ನಾನಳುಕಲಿದಕೇತಕೆ ಗುರುವೆ 2 ಸ್ವಪ್ನದಲಿ ದಾಸತ್ವ ಸಿದ್ಧಿಸಲಿ ಎಂದೆನುವ ಅಪ್ರತಿಮ ನುಡಿ ಕೇಳಿದೆ ಕ್ಷಿಪ್ರದಿಂದಲಿ ಕರುಣಿಸಿದಿರೆನಗಾಗಿದನಿನ್ನು ತಪ್ತವಾಯಿತು ಭವದ ದುರಿತ ಆಪ್ತಗುರು ನಿಮ್ಮಂಥ ಮಹಿಮರನು ನಾ ಕಾಣೆ ಗುಪ್ತದಲಿ ಜಗದಿ ಮೆರೆವ ಗುರುವೆ 3 ಇತ್ತಿರೆನಗೊಂದೊಂದೆ ದಾಸತ್ವ ಸಾಮಗ್ರಿ ಅತ್ಯಧಿಕ ಕರುಣೆಯಿಂದ ನಿತ್ಯವಾಗಿರಲಿ ಹರಿದಾಸತ್ವ ಇಹ ಪರದಿ ಸತ್ಯವಂತರ ಕೃಪೆಯಲಿ ನಿತ್ಯದಲಿ ನೀತ ಗುರು ನಿಮ್ಮಿಂದ ನಿಜ ರೂಪ ವ್ಯಕ್ತವಾಗಲಿ ಜ್ಞಾನದೀ ಗುರುವೆ 4 ಸಿರಿ ತಂದೆ ಮುದ್ದುಮೋಹನದಾಸರಾಯ ಗುರುವೆ ನಿಮ್ಮ ಕರುಣದಿ ಪರಿ ಪರಿ ಭವಪಾಶ ದುರಿತಗಳು ದೂರಾದವು ಪರಮ ಸಾತ್ವಿಕರೆ ಸಿರಿವರನ ಪದ ಭಜಿಪಂಥ ವರದೇವತಾಂಶರೆನಿಪ ಗುರುವೆ 5 ಮಂದರಿಗೆ ಬಹು ಮಲಿನರಂದದಲಿ ತೋರುತ ಕಂದರ್ಪಪಿತನ ಸ್ಮರಿಪ ಒಂದೊಂದು ವ್ಯಾಪಾರ ಅರಿಯಲಳವಲ್ಲಿನ್ನು ಮಂದಮತಿಯಾದ ಎನಗೆ ಬಂದು ಭೂಲೋಕದಲಿ ಸಜ್ಜನರನುದ್ಧರಿಪ ತಂದೆ ನಿಮ್ಮರಿವರ್ಯಾರೊ ಗುರುವೆ 6 ಅರಿಯೆ ಅನ್ಯರನಿನ್ನು ಶ್ರೀ ಗುರುವೆ ಕರುಣಿಸಿರಿ ವರಜ್ಞಾನ ಸುಧೆಯನಿತ್ತು ವರಶೇಷಶಯನನ ನಿರುತ ಸೇವಿಸುವಂಥ ಪರಮಭಾಗ್ಯವ ಕರುಣಿಸಿ ಸಿರಿವರ ಗೋಪಾಲಕೃಷ್ಣವಿಠ್ಠಲನ ರೂಪ ತ್ವರಿತದಿಂ ತೋರಿ ಪೊರೆಯೊ ಗುರುವೆ 7
--------------
ಅಂಬಾಬಾಯಿ
ಪರಮ ಪುರುಷ ಹರಿ ಗೋವಿಂದ - ಸಿರಿವರ ನಾರಾಯಣ ಗೋವಿಂದ ಪ ನಿಶೆವೆಸರಸುರನ ಉಸಿರ ತೊಲಗಿಸಿದೆಕುಸುಮ ಶರನ ಪಿತ ಗೋವಿಂದವಸು ಪೂರಿತ ಶ್ರುತಿ ಮಸುಳಿಸದೆ ತಂದೆಬಿಸಜ ಸಂಭವನಯ್ಯ ಗೋವಿಂದ 1 ಮಂದರ ಸಿರಿ ಗತವಾಗದ ಮುನ್ನಕ್ಷಿತಿ ಪೆತ್ತನಯ್ಯ ಗೋವಿಂದ 2 ಭೂತಳವೆರಸಿ ರಸಾತಳಕಿಳಿದಿಹಪಾತಕನ ಕಂಡೆ ಗೋವಿಂದಆತನೊಡನೆ ಕಾದಾತನ ಗೆಲಿದು ಮ-ಹೀತಳವನು ತಂದೆ ಗೋವಿಂದ 3 ದುರುಳಾಸುರನ ನಡುಗರುಳ ಮಾಲೆ ಮುಂ-ಗೊರಳೊಳು ಧರಿಸಿದೆ ಗೋವಿಂದಗರಳ ಕೊರಳನು ಬೆರಳೆತ್ತಿ ಪೊಗಳಲುತರಳಗೊಲಿದೆ ನೀ ಗೋವಿಂದ4 ವಾಮನನಾಗಿ ನಿಸ್ಸೀಮ ಬಲಿಯ ಕೈಯಭೂಮಿಯನಳೆಕೊಂಡೆ ಗೋವಿಂದತಾಮರಸ ಪದದಿ ಕನಕ ಗರ್ಭಯೋಗವ್ಯೋಮ ಗಂಗೆಯ ತಂದೆ ಗೋವಿಂದ 5 ಸುರ ಪಶುವಿಗೆ ಋಷಿಯನು ಕೊಂದನ ಬಹುಕರ ಬಲ ಮುರಿದೆಯೊ ಗೋವಿಂದತರ ಹರಿಸದೆ ವಸುಧೆಯ ಒಡೆತನ ಭೂಸುರರಿಗೆ ನೀಡಿದೆ ಗೋವಿಂದ 6 ತ್ರಿಣಯನ ತಾತ್ಪರ್ಯ ರಾವಣನ ಶಿರರಣದೊಳುರುಳಿಸಿದೆ ಗೋವಿಂದಕ್ಷಣಮೆಣಿಸದೆ ಸದ್ಗುಣವಂತ ವಿಭೀ-ಷಣಗಭಯವಿತ್ತೆ ಗೋವಿಂದ 7 ಕ್ರತು ಸಿರಿ ಭೂಭಾರೋತ್ತಾರಣ ಬಲಯುತ ಗೋವಿಂದ 8 ಕಥೆಯನು ನಿರ್ಮಿಸಿ ಪತಿವ್ರತೆಯರ ಘನವ್ರತಗಳ ಕೆಡಿಸಿದೆ ಗೋವಿಂದಜತೆಯಗಲದ ಪುರ ತ್ರಿತಯ ಗೆಲಿದು ದೇ-ವತೆಗಳ ಸಲಹಿದೆ ಗೋವಿಂದ 9 ಜಾಜಿಯ ಮರಕತ ತೇಜಿಯನೇರಿ ವಿ-ರಾಜಿಪ ರಾವುತ ಗೋವಿಂದಸೂಜಿಯ ಬೆನ್ನೊಳು ರಾಜಿಪ ತೆರದಿ ಸ-ಹಜರೊಳಡಗಿರ್ಪ ಗೋವಿಂದ 10 ಮೇದಿನಿಗೋಸುಗ ಕಾದಿ ಕಲಹದಿ ವಿ-ರೋಧಿಗಳ ಕೊಂದೆ ಗೋವಿಂದಸಾಧುಗಳಿಗೆ ಸುಖವೀಯುವ ಬಾಡದಶ್ರೀಧರ ಕೇಶವ ಗೋವಿಂದ 11
--------------
ಕನಕದಾಸ
ಪರಮ ಪುರುಷನ ಮೊದಲು ನಮಿಸುತಚರವವೈದಿದ ದೈವತಂಗಳಿಗೆರಗುವೆನು ಕ್ರಮದಿಂದ ಕೂಡುತಧರಣಿ ತಳದಲ್ಲಿ 1 ದರ್ಭ ಮುಖ ವಿಸ್ತರದಿ ಹಾಕುತಪದ್ಮ ಮೊದಲಾಸನದಿ ಪ್ರಾಂಗ್ಮುಖಇದ್ದರಗ್ರ್ಯಾಳ ಸಮ್ಮುಖ ಶ್ರದ್ಧೆ ಮಾಡುವುದು 2 ಕೂರ್ಮ ಆಸನಈಸು ಚಿಂತಿಸಬೇಕು ಎಂಬೋಭಾಷೆ ರಾಜಿಪುದು 3 ಧಾರುಣಿ ಮಂತ್ರದಲಿ ಕೂಡುತನಾರಸಿಂಹ ಸುದರ್ಶನಾಸ್ತ್ರದಿಆರು ದಿಕ್ ದಿಗ್ಬಂಧನಾಡಿಯಸೂರಿ ಮಾಡುವುದು 4 ನಾಗಭೂಷಾಜ್ಞೆಯಲಿ ಭೂತಗಳ್‍ಹೋಗಲೆಂಬುವ ಮಂತ್ರ ಪಠಿಸುತಯೋಗಿಗಳ ಪ್ರಾರ್ಥಿಸುತ ಸಂತತಯಾಗ ಮಾಡುವದು 5 ಹರಿಯ ಗುರುಗಳ ನಮನಗೋಸುಗಕರವ ಮನವನು ಶೋಧಿಸೂವುದುಎರಡು ಬೀಜಾಕ್ಷರದಿ ನಾಂಕುಎರಡು ಸ್ಥಾನದಲಿ 6 ಬ್ರಹ್ಮಹತ್ಯಾ ಮಂತ್ರದಿಂದಲಿತಮ್ಮ ವಾಮಾಂಗವನೆ ಮುಟ್ಟುತಅಧರ್ಮ ಪುರುಷನ ಚಿಂತಿಸುವುದುಕರ್ಮ ಕರ್ತೃಕನು 7 ಶೋಕ್ಷ ನಾಭಿಲಿ ಪಾಪ ಪುರುಷನನಾಶ ಹೃದಯದಿ ಭಸ್ಮ ತ್ಯಜಿಸುತಲೇಸು ವರುಣದಿ ಸುಧೆಯ ವೃಷ್ಟಿಲಿಸೂಸುವುದು ತನುವ 8 ಹೀಗೆ ನಿತ್ಯದಿ ಕಾಮಿನೀಯರುಬಾಗಿ ಪತಿಯಲೆ ಕಾರ್ಯ ಮಾಡುತನಾಗಶಯನ ನಕ್ಷರದ ತತ್ಸುಖಭೋಗ ಬಯಸುವುದು9 ನಾರಿಯರು ಗುರು ಮಂತ್ರದೀಪರಿಪೂರ್ವದಲೆ ಮಾಡುತ ಕೃಷ್ಣನಆರು ವರ್ಣವ ಪಠಿಸುತಲೆ ಗೃಹಕಾರ್ಯ ಮಾಡುವುದು 10 ರಾಮ ಮೊದಲಾದನ್ಯ ಮಂತ್ರಗಳ್‍ಕಾಮಿನೀಯರು ಜಪಿಸುತಲೆ ನಿಜಕಾಮದಿಂದಲೆ ಯೋಗ್ಯತಾವನುನೇಮದಿಂದಿರಲು 11 ತಾರತಮ್ಯವು ಪಂಚಭೇದವುಭೂರಿ ಭಕುತಿಲಿ ಭಜಿಸಿ ಕೃಷ್ಣನಆರು ವರ್ಣವು ಪಠಿಸುತಲೆ ತನ್ನು -ದ್ಧಾರ ಮಾಡುವನು12 ವಾಸು ಮಾಡುತಲೆನ್ನ ಮನದೊಳುಆಶು ಭೇದಕ ಸ್ತ್ರೀಜನಂಗಳಿಗೀಶ ಮಾಡಿದ ಇದನ ಇಂದಿ-ರೇಶಗರ್ಪಿಸುವೆ 13
--------------
ಇಂದಿರೇಶರು
ಪರಮ ಸಂಜೀವನವು ಗುರು ನಿಮ್ಮನಾಮ ಸರುಮುನಿಯು ಸೇವಿಸುವ ದಿವ್ಯನಾಮ ಧ್ರುವ ದುರಿತ ಹರಿಸಿದ ನಾಮ ಮೊರೆಯ ಹೊಕ್ಕವರ ಸ್ಥಿರ ಹೊರೆವ ನಾಮ ತರಳ ಪ್ರಲ್ಹಾದನವಸರಕೆ ಒಲಿದಿಹ ನಾಮ ಸ್ಮರಿಸುವರ ವಜ್ರಪಂಜರ ನಿಮ್ಮ ನಾಮ 1 ಧರೆಯೊಳಗೆ ದ್ರೌಪದಿಯ ಸ್ಮರಣಿಗೊದಗಿದ ನಾಮ ಕರುಣದಿಂದಭಿಮಾನಗಾಯ್ದ ನಾಮ ದಾರಿದ್ರ್ಯವನು ಸುಧಾಮನಿಗಿಂಗಿಸಿದ ನಾಮ ಸಿರಿ ಸಂಪತ್ತವು ಅಯಿತೀ ನಾಮ 2 ಹರುಷಕರವಿತ್ತು ಉಪಮನ್ಯಗೊಲಿದ ನಾಮ ಕ್ಷೀರಸಾಗರದ ನಾಮ ಶರಣುಹೊಕ್ಕವರ ಪರಿಪರಿ ಕಾಯ್ದ ನಾಮ ಧೀರ ಧ್ರುವಗಚಳ ಪದವಿತ್ತ ನಾಮ3 ಕರೆದು ನಾರಗ ನೆಂದವನ ತಾರಿಸಿದ ನಾಮ ಪರಮಪಾತಕ ಪರಿಹರಿಸಿದ ನಾಮ ವರ ಮುನಿಜನರ ತೃಪ್ತಿಗೈಸುವ ನಾಮ ಪರಮ ಭಕ್ತರ ಪ್ರಾಣಪ್ರಿಯ ನಾಮ 4 ದುರಿತ ದಾರಿದ್ರ್ಯ ವಿಧ್ವಂಸಗೈಸುವ ನಾಮ ಕರುಣಸಾಗರ ಪರಿಪೂರ್ಣ ನಾಮ ನರಕೀಟಕ ಮಹಿಪತಿಯ ತಾರಕ ನಾಮ ಪರಮ ಸಾಯೋಜ್ಯ ಗುರು ದಿವ್ಯ ನಾಮ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪರಮ ಸುಗುಣಸಾಂದ್ರ ಗುರುರಾಘವೇಂದ್ರ ಪ ಕರುಣಾಳೋ ಮುನಿ | ವಂಶಸುಧಾಕರ | ಗುರುರಾಜ ಪ್ರಭೋ | ಶ್ರೀ ರಾಘವೇಂದ್ರ ಅ.ಪ ಮುರುಕುಮಂಟಪದೊಳು | ಹರಕುಚಿಂದಿಯನ್ಹೊದ್ದು | ಉರಿಯ ಬೆಳಕಿನಲ್ಲಿ | ಪರಿಮಳ ರಚಿಸಿದೆ || ಗುರುಗಳಾಕ್ಷಣ ಕಂಡು | ಪರಮಸಂಭ್ರಮದಿಂದ | ಪರಿಮಳಾಚಾರ್ಯನೆಂಬ | ಬಿರುದಿತ್ತು ಕರೆದರೊ 1 ಜಡಮತಿ ಬ್ರಾಹ್ಮಣ | ಮಿಡುಕಿ ನಿರೂಪಿಸೆ | ವಡನೆ ಗಂಧವ ತೇದೆ | ಅನಲನ ಜಪಿಸುತೆ || ಒಡಲ ಬೇಗೆಯಿಂ ಜನರು | ಬಡಬಡಿಸಿದ ಕಂಡು | ಕಡಲರಸನ ದಯದಿ | ಕಡುಶಾಂತಿ ಇತ್ತೆಯೊ2 ಬಾದರಾಯಣಮುನಿ | ಭೇದಮತವ ಬಿತ್ತೆ | ಮೋದತೀರ್ಥರು ತರುವ | ಸಾದರಗೈದರೊ || ಸ್ವಾದಫಲಂಗಳು | ನಿನ್ನಿಂದ ತೋರ್ದವು | ಸಾಧುಜನಾರ್ಚಿತ | ಶ್ರೀಶಕೇಶವಪ್ರಿಯ 3
--------------
ಶ್ರೀಶ ಕೇಶವದಾಸರು
ಪರಮಪರುಷನೆ ಕೃಷ್ಣ ಕಣ್ತೆರದು ನೋಡೊ ಪ ಶಿರಿ ಅರಸ ದಯಸಿಂಧು ಶ್ರಾವ್ಯಮಂಗಳ ಕೀರ್ತಿ ಅ.ಪ. ದ್ವಿಜಗಮನ ವೃಜಿನಹರ ಭುಜಗತಲ್ಪನೆ ದೇವ ಅಜತಾತ ಗಜವರದ ಕುಜ ನಿವಾರಣನೆ ಭಜನೆ ಪಾಲಿಸು ಎನ್ನ ವಿಮಲ ಮನದಲಿ ನಿಂತು ಋಜು ಪುಂಗವರ ದೈವ ನಿರ್ಜರರ ಬಾಂಧವನೆ 1 ಒದ್ದವಗೆ ಶಿಕ್ಷಿಸದೆ ಬೈದವಗೆ ಗತಿ ಇತ್ತೆ ನಿರ್ದೋಷ ಗುಣಪೂರ್ಣನೆಂದು ಶ್ರುತಿ ಸಾರುತಿದೆ ನಿದ್ದೆ ಮಾಡುವಗೊಲಿದಿ ಮುಕ್ತಿಯನಿತ್ತೆ ಯುದ್ಧದಲಿ ಶರದಿಂದ ಹೊಡೆದವಗೆ ನೀನೊಲಿದೆ 2 ಶುದ್ಧ ಆನಂದಾಬ್ಧಿ ಜಯೇಶವಿಠಲನೆ ಮಧ್ವ ಮುನಿದೈವ ಸಿದ್ಧರೊಡೆಯ ಉದ್ಧವನ ಗುರು ಸುಧಾಮ ಮಿತ್ರನೆ ಮನ ತಿದ್ದಯ್ಯ ಜ್ಞಾನ ನಿನ್ನಲ್ಲಿ ನಿಲುವಂತೆ 3
--------------
ಜಯೇಶವಿಠಲ
ಪರಮಾತ್ಮನೆ ನೀ ಸರಿ ಎಂದು ಕರಗದ ತಮದಲ್ಲಿ ಸೇರುವದೆ ಪ ಜೀವ ಪರಮಾತ್ಮಗೆ ಭೇದವ ಆವಾವ ಕಾಲಕ್ಕೆಯಿಲ್ಲವೆಂದು ದೇವನ ಬಳಿಗೆ ನೀ ದೂರಾಗಿ ಈ ವಸುಧೆಯೊಳು ಬದುಕುವರೆ 1 ಭೇದ ಜೀವಕೆ ಜೀವ ಎಂದಿ ಗಾದರು ಇಲ್ಲವೆಂದು ನುಡಿದು ಈ ದುರಾಚಾರದಲ್ಲಿ ನಡೆದು ಮಾದಿಗನಂತೀಗ ಮಾರ್ಮಲಿದು2 ಜಡ ಪರಮಾತ್ಮ ಜಡ ಜಡಕೆ ಜಡ ಜೀವಕೆ ಅಭೇದವೆಂದು ಕಡುಗರ್ವದಿಂದಲಿ ಉಚ್ಚರಿಸಿ ಮಡಿದು ನರಕಕ್ಕೆ ಉರುಳುವರೆ 3 ಅರಸಿನ ಬಳಿಗೆ ತೋಟಿಗ ಬಂದು ಅರಸೆ ನೀನೆ ನಾನೆಂದಡೆ ಉರವಣಿಸಿ ಕೊಲ್ಲಿಸಿ ಅವನ ಶೆರಿಯ ಹಾಕದೆ ಮನ್ನಿಸುವನೆ 4 ದಾಸನ ದಾಸನು ಎಂದು ಏಸು ಜನ್ಮಕೆ ಅಹುದೆಂದು ದ್ವೇಷವು ತೊರೆದು ನೆನಿಸಿದರೆ ಮೀಸಲಾಗಿಡುವ ವಿಜಯವಿಠ್ಠಲಾ 5
--------------
ವಿಜಯದಾಸ
ಪರಾಕು ಸಜ್ಜನಪ್ರೇಮಿ ಪ. ಕರುಣಾಕರ ಕೋಟಿದಿವಾಕರ ಪೂರ್ಣ ಸುಧಾ- ಕರ ಮಕುಟಲಲಾಮ ಅ.ಪ. ಭೋಗೀಂದ್ರ ಫಣಾಮಣಿಮಂಡನ ಸ- ದ್ಯೋಗೀಂದ್ರ ಮನೋವಿಶ್ರಾಮಿ ಭಾಗೀರಥಿ ಸುತರಂಗೊತ್ತುಂಗ ಮಹಾ ಸಾಗರ ತೇ ನೌಮಿ 1 ಕೇವಲ ಪಾಪಿ ಸದಾವ್ರತಹೀನನ ಕಾವುದು ಗೋಪತಿಗಾಮಿ ನೀನೊಲಿದರೆ ಮತ್ತಾವುದು ಭಯ ಮಹಾ- ದೇವ ವಶೀಕೃತಕಾಮಿ 2 ಲಕ್ಷ್ಮೀನಾರಾಯಣದಾಸಾರ್ಯ ಮ- ಹೋಕ್ಷಧ್ವಜ ಸುರಸುಕ್ಷೇಮಿ ದಕ್ಷಾಧ್ವರಹರ ವರಪರಮೇಶ ಮು- ಮುಕ್ಷುಜನಾಂತರ್ಯಾಮಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪವಮಾನವರದ ವಿಠಲ | ಇವನ ನೀಸಲಹೋ ಪ ಭವದೊಳಗೆ ಸಂತಪ್ತ | ತವಪಾದ ಶರಣನ ಅ.ಪ. ರಾಶಿಪುಣ್ಯವು ಫಲಿಸೆ | ದಾಸದೀಕ್ಷೆಗೆ ಒಲಿದುಆಶಿಸಲು ತೈಜಸನು | ಭಾಸುರಾಂಕಿತಕೇಸೂಸಿ ತನ್ನನುಗ್ರಹದ | ಭಾಷೆ ಅಸ್ತ್ವೆಂದೆನುತಲೇಸಾಗಿ ಪೇಳಲುಪ | ದೇಶಿಸಿಹೆ ಹರಿಯೇ 1 ಕರ್ಮ | ಸಂಚಿತಾದಿಗಳು 2 ತತ್ವರೊಲಿಮೆಯ ಕೊಡಿಸು | ತತ್ವಾರ್ಥಸ್ಪುರಿಸಿವಗೆಮೃತ್ಯುವೆನೆ ಗೆಲುವಂಥ | ಪಥವನ್ನೆ ತೋರಿಕರ್ತತಾನಲ್ಲೆಂಬ | ಉತ್ಕøಷ್ಟ ಮತಿಯಿತ್ತುಎತ್ತು ಭವದಿಂ ಹರಿಯೇ | ಉತ್ತಮೋತ್ತಮನೆ 3 ಸರ್ವತ್ರ ಸರ್ವದಾ | ಶರ್ವನೊಡೆಯನೆದೇವಸರ್ವಮಂಗಳ ನಿನ್ನ | ನಾಮಸುಧೆಯನ್ನುದರ್ವಿಜೀವಿಗೆ ಉಣಿಸಿ | ಭವಕಡಲ ಪ್ಲವನೆನಿಸೊಸರ್ವಾಂತರಾತ್ಮಕನೆ | ಉದ್ದರಿಸೊ ಇವನಾ 4 ಜೀವ ಅಸ್ವಾತಂತ್ರ | ದೇವ ನಿಜಸ್ವಾತಂತ್ರಜೀವ ಜಡರುಗಳೆಲ್ಲ | ದೇವರಾಧಿನಾಈ ವಿಧದ ಸುಜ್ಞಾನ | ಆವಾಗಲೂ ಕೊಟ್ಟುದೇವಗುರು ಗೋವಿಂದ | ವಿಠಲ ಪೊರೆ ಇವನಾ 5
--------------
ಗುರುಗೋವಿಂದವಿಠಲರು
ಪಾಂಡು ರಂಗ ವಿಠಲ | ಪೊರೆಯ ಬೇಕಿವಳ ಪ ಕುಂಡಲಿಯ ಶಯ್ಯ ಬ್ರ | ಹ್ಮಾಂಡದೊಡಿಯಾ ಅ.ಪ. ಹಸುಳೆ ತನ ಸ್ವಾಪದಲಿ | ಎಸೆವ ನಂಜುಡೇಶದರ್ಶನಾಕಾಂಕ್ಷಿಸುತ | ನುಸುಳಿ ಗುಡಿ ಪೊಗಲೂಅಸಮ ಗುರು ಸುಧೀಂದ್ರ | ಶಿಷ್ಯರನು ತಾ ತೋರಿಎಸೆವ ಸದ್ಗತಿಗೆ ಗುರು | ದರ್ಶನವೆ ಪಥವೆಂದೇ 1 ಲೀಲೆಯೊಳ್ ತೈಜಸನು | ಮಾಲೆಧರ ದಂಪತಿಯಶೀಲ ರೂಪವ ತಾಳಿ | ಬಾಲಕಿಯ ಬಯ್ದೂ |ಏಳಲನ ಮಾಡದಲೆ | ಶೀಲ ಗುರು ಬಳಿ ಪೋಗಿಬಾಲಕಿಯು ಪರಮಾನ್ನ | ಮೆಲುವಂತೆ ಮಾಡ್ಡಾ 2 ಗುರು ಹಿರಿಯರಾ ಸೇವೆ | ಹರಿಯಲ್ಲಿ ಸದ್ಭಕುತಿವರಜ್ಞಾನ ಪಾಲಿಸುತ | ಮೆರೆಸೊ ಈ ಶಿಶುವವರ ಪ್ರದಯಕನಾಗಿ | ಸರುವ ಸದ್ಧಭಿಲಾಷೆಗರೆನು ಹರ್ಷವನೀಯೋ | ಮರುತಾಂತರಾತ್ಮಾ 3 ಕಲಿಹೆಚ್ಚದಾ ಯುಗವು | ಸತಿಮಂತ್ರ ತಂತ್ರಗಳುಫಲಿಸಲಾರವು ಹರಿಯೆ | ಜಲಜನಾಭಾಚೆಲುವ ತವನಾಮ ಸ್ಮøತಿ | ಘಳಿಗೆ ಬಿಡದಲೆ ಕೊಟ್ಟುಒಲಿಯೊ ಕಾರುಣ್ಯನಿಧಿ | ಬಾಲ ಗೋಪಾಲ4 ಪಾವನದ ಅಂಕಿತವ | ಓದಿ ಸೂಚಿಸಿದಂತೆತಾವಕಳಿಗಿತ್ತಿಹೆನು | ಶ್ರೀ ವರನೆ ಹರಿಯೇ |ದೇವ ದೇವೇಶಗುರು | ಗೋವಿಂದ ವಿಠ್ಠಲನೆನೀ ವೊಲಿದು ದಾಸತ್ವ | ಭಾವ ಸಿದ್ಧಿಪುದೋ 5
--------------
ಗುರುಗೋವಿಂದವಿಠಲರು
ಪಾಂಡುನಂದನರಂತೆ ತೋರುತಿಹರು ಪಂಡಿತೋತ್ತುಮ ಸತ್ಯಧ್ಯಾನ ತೀರ್ಥರು ಪ ನಿಜಜ್ಞಾನ ಚಿಹ್ನದಿ ವಿಜಯಾದಿ ಸುದ್ಣುಣದಿ ಸುಜನ ಗಣದಿ | ವೃಜಿನ ವರ್ಜಿತರಾಗಿ ಗಜವರದನಂಘ್ರಿಯುಗ ಭಜನ ತತ್ಪರರಾಗಿ 1 ಧರಮ ಬಲ್ಲವರಾಗಿ ಗುರುಭಕ್ತಿ ಯುತರಾಗಿ ವರ ಸುಗೀತಾರ್ಥ ತತ್ವಜ್ಞರಾಗಿ ಧರಣಿ ಮೇಲುಳ್ಳ ಸುಕ್ಷೇತ್ರ ತತ್ತೀರ್ಥ ಚರಿಸುತಲಿ ಕರಿತುರಗ ಪರಿಪಾಲಿಸುವರಾಗಿ 2 ಋಷಿ ವ್ಯಾಸರುಕ್ತಿಯಲಿ ನಿಶೆಹಗಲು ಮನವಿರಿಸಿ ವಸುಧಿ ಸುರರಿಗೆ ಸನ್ಮೋದಗೊಳಿಸಿ ವಸುದೇವಸುತ ಶಾಮಸುಂದರನ ವಶಗೊಳಿಸಿ ದಶ ದಿಶದಿ ಜಯಭೇರಿ ಅಸಮರೆಂಡೊಡೆಸುತಲಿ 3
--------------
ಶಾಮಸುಂದರ ವಿಠಲ
ಪಾದ | ಭೃಂಗನು ಎನಿಸುವಡಿಂಗರಿಗನೆ ಧನ್ಯನೊ ಪ ಧೃತ :ಅಂಗಜನಪಿತ ಕಾ | ಳಿಂಗ ಮರ್ದನತುಂಗ ಮಹಿಮನಪಾಂಗ ಕರುಣನಡಿಂಗರಿಗೆ ಅಭಯಾಂಕ ಹಸ್ತನರಂಗನಂಘ್ರಿ ಸರೋಜ ಭೃಂಗನ ಅ.ಪ. ಮೇದಿನಿ | ಮೌನಿವರ ವರದೇಂದ್ರ ಯತಿಯಲಿ |ಸಾನು ರಾಗದಿ ಜ್ಞಾನವಾರ್ಜಸಿ | ಜ್ಞಾನ ನಿಧಿ ಎಂದೆನಿಸಿ ಮೆರೆದ 1 ವಿಜಯರ ನಿಂದೆಯಿಂದ | ಸಂದಿತು ರೋಗವುನಿಜತನು ತ್ಯಜಿಸುವಂತೇ ||ಅಜನ ನಿಜಪದ ಯೋಗ್ಯ ಪ್ರಾಣನು | ಬಿಜಯಗೆಯ್ಯುತನಿಜ ಸುಸ್ವಪ್ನದಿ |ವಿಜಯದಾಸರ ಪೂಜಿಸೆನ್ನಲು | ಭಜಿಸುತಲಿ ವರವನ್ನೆ ಪಡೆದ 2 ತ್ಯಾಗೀ ಭೋಗೀ ಶೀಲ | ವಿಜಯರ ಸೇವಕಭಾಗಣ್ಣಾರ್ಯರ ಸೇವಿಸೀ ||ಆಗಮಜ್ಞನ ನಾಲ್ದಶಾಯು | ಭಾಗ್ಯವನೆ ತಾಪಡೆದು ಚಂದ್ರಭಾಗದಲಿ ಮೀಯುತಿರೆ ಶಿರಿ | ಜಗದೀಶ ವಿಠಲಾಂಕ ಪಡೆದ 3 ಸ್ವಾದಿ ಸ್ಥಳಕೆ ಪೋಗಿ | ರಾಜರ ಆಜ್ಞೆಯ ಆದರದಲಿ ಕೊಳ್ಳುತಾ ||ಮೋದ ತೀರ್ಥರ ಮತವ ಸಾರುತ | ವೇದ ಶಾಸ್ತ್ರ ಸುಧಾದಿ ಗ್ರಂಥದಸ್ವಾದುರಸ ಪ್ರಾಕೃತದಿ ಬೋಧಿಸಿ | ಶ್ರೀ ಹರಿಕಥೆ ಸುಧೆಯ ಗರೆದ 4 ಲಕ್ಷ್ಯವಿಡುತ ಶುಕ್ಲ | ವರ್ಷವು ಸಿತವೆನ್ನಪಕ್ಷ ಭಾದ್ರ ಪದದೀ ||ದಕ್ಷಿಣಾಯನ ಶುದ್ಧನವಮಿಲಿ | ದೀಕ್ಷೆ ಪಿಡಿಯುತ ಆದಿವಾರದಿಪಕ್ಷಿವಹ ಗುರು ಗೋವಿಂದ ವಿಠಲನ | ಈಕ್ಷಿಸುತ ಭುವಿಯನ್ನೆ ತೊರೆದ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾದ | ಲೇಸಾಗಿ ಭಜಿಸಲುಕೇಶವ ನೊಲುಮೆಗೆ ಅವಕಾಶವೊ ಪ ಆಸದಾಶಿವ ವಂದ್ಯ ಶ್ರೀಶನ ಪದ ಪದುಮಸೂಸಿ ಸೇವಿಸುವಂಥ ದೈಶಿಕರೊಡೆಯರ ಅ.ಪ. ಯತಿವರ ಬ್ರಹ್ಮಣ್ಯ ವರದಿಂದುದ್ಭವ ವಸುಮತಿಯ ಸ್ಪರ್ಶದ ಮುನ್ನ ಕನಕಪಾತ್ರ ಧೃತನೆ |ಮತಿವಂತನೆನಿಸುತಬ್ಬೂರೊಳು ನೆಲೆಸುತ್ತಯತಿಯಾಗಿ ಮೆರೆದೆ ಬ್ರಹ್ಮಣ್ಯರ ಕರಜನೆ 1 ಶ್ರೀಪಾದರಾಯರಲ್ಲೋದಿ ಸುಧಾದಿಯಆ ಪಂಪಾ ಕ್ಷೇತ್ರವ ಪ್ರಾಪಿಸಿ ನೆಲಿಸೀ |ತಾಪಸೀಗಳು ವಿಜಯೀಂದ್ರ ವಾದಿರಾಜಗಾಪಾರ ಮಹಿಮನ ತತ್ವಗಳೊರೆದಂಥ 2 ವಿದ್ಯಾನಗರಿಯ ಭವ್ಯ ಗದ್ದುಗೆಯನೆ ಯೇರ್ದತಿದ್ದೀದ ಪೃಥುವೀಪ ಕುಹುಯೋಗವಾ |ಮಧ್ವ ಸಮಯ ವರ ದುಗ್ದಾಭ್ಧಿ ಪೂರ್ಣೇಂದುಅದ್ವೈತ ತಮಸೂರ್ಯ ವರ ಚಂದ್ರಿಕಾಚಾರ್ಯ 3 ಮಾಯಾ ಸಮಯ ಮದಕರಿಗೆ ಕಂಠೀರವನ್ಯಾಯಾಮೃತವು ತರ್ಕ ತಾಂಡವ ರಚಿಸೀ |ಮಾಯಾ ಮತಂಗಳ ಛೇದಿಸಿ ಬಹುವಿಧರಾಯ ಕೃಷ್ಣನೆ ಪರಾತ್ಪರನೆಂದು ಪೇಳಿದ 4 ಮಾಸ ಫಾಲ್ಗುಣ ವದ್ಯಎರಡೆರಡನೆ ದಿನವು ಶನಿವಾರದೋಳ್ ವರ ಗುರು ಗೋವಿಂದ ವಿಠಲ ಧ್ಯಾನಾನಂದ ಪರನಾಗಿ ತನು ಕಳೆದ ನವ ವೃಂದಾವನದೊಳು 5
--------------
ಗುರುಗೋವಿಂದವಿಠಲರು