ಒಟ್ಟು 33 ಕಡೆಗಳಲ್ಲಿ , 4 ದಾಸರು , 33 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮೋ ನಮೋ ನಮೋ ಎಂಬೆ ನಿನಗೆ ಸ್ವಾಮಿ ರಘುರಾಮಾ| ಶಮಲ ಹಾರಿಸಿ ವಿಮಲ ಮತಿಯ ಕೊಡುವ ಪುಣ್ಯ ನಾಮ ಪ ಮುನ್ನ ಮಾಡಿದ ಕೋಟಿ ಜನುಮದ ಪುಣ್ಯ ಒದಗಿತೆಂದು| ಕಮಲ ಕಂಡೆ ಧನ್ಯನಾದೆನಿಂದು 1 ಪರಮ ಪುರುಷನೆಂಬುದರಿಯ ಮಾಡಿದಪರಾಧವ ಕರುಣದಿಂದ ಕ್ಷಮಿಸಿ ಹೊರಿಯಬೇಕು ಪೂರ್ಣಬೋಧಾ 2 ಇಂದು ಮೊರೆಯಹೊಕ್ಕೆ ಸಲಹು ನಿಮ್ಮ ಸೇವೆಯಿಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನನೇ ನಂಬಿದೆನಯ್ಯಾ ಪ ನಿನ್ನನೇ ನಂಬಿದೆನಯ್ಯಾ | ಎನ್ನ ಬಿಡದಿರು ಕೈಯ್ಯಾ | ಬೀರೆಲೋದಯಾ 1 ತರಳ ತಾಯಿಯಲ್ಲದೆ | ನೆರೆಹೊರೆಯ ಬಲ್ಲದೇ | ಮರಳು ಮಂದನೆನ್ನದೆ | ಅರಹು ಕೂಡಿಸೋ ತಂದೆ 2 ಹೋದೆಣಿಕೆಯ ಬಿಟ್ಟು | ಪಾದಸ್ಮರಣೆ ಕೊಟ್ಟು | ಸಾಧುಸಂಗದಲಿಟ್ಟು | ಬೋಧಾಮೃತವನಿಟ್ಟು 3 ಜ್ಞಾನ ಭಕುತಿ ಇಲ್ಲಾ ಮೌನ ಸಾಧನವಿಲ್ಲಾ | ಏನೇನು ಸಾಧನವಿಲ್ಲಾ | ನೀನು ಪೇಕ್ಷಿಸುದಲ್ಲಾ4 ಗುರು ಮಹಿಪತಿ ಸ್ವಾಮೀ | ಶರಣರ ರಕ್ಷಕ ನೇಮಿ | ಸುರಮುನಿಜನ ಪ್ರೇಮಿ | ಹೊರಿಯೋ ಸಾಸಿರ ನಾಮಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಿಸೊ ದೇವ ಮೂಲೋಕ ಕಾವ ಎಲ್ಲರೊಳ ಗೀವ ಶ್ರೀ ಲಕ್ಷುಮಿಯ ಜೀವ ಧ್ರುವ ಮುನಿಜನ ಪಾಲ ಘನಸುಖಲೋಲ ಅನಾಥರನುಕೂಲ ದೀನದಯಾಳ 1 ಕರುಣಾಸಾಗರ ಪರಮ ಉದಾರ ದುರಿತ ಸಂಹಾರ 2 ಸಿರಿಲೋಲ ಭೂಷಣ ಹರಿನಾರಾಯಣ ತರಳ ಮಹಿಪತಿ ಪ್ರಾಣ ಹೊರಿಯೋ ನೀ ಪೂರ್ಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರಯ್ಯ ಗುರುದೇವರಾಯ ಶ್ರೀ ಹರಿಯೆ ನಮ್ಮಯ್ಯ ಗುರು ಭಕ್ತಜನ ಪ್ರಿಯ ಧ್ರುವ ನೀರೊಳು ಪೂಕ್ಕು ನಿಗಮನ ತಂದಿ ಬಾರಯ್ಯ ಧರಿಯ ಬೆನ್ನಿಲಿ ಪೊತ್ತು ನಿಂದಿ ನೀ ಬಾರಯ್ಯ ಧಾರುಣಿಯ ಗೆದ್ದು ಹಿರಣ್ಯಕನ ಕೊಂದಿ ಬಾರಯ್ಯ ಎಂದೆನಯ್ಯ ಗುರುತಂದೆಬಾರಯ್ಯ 1 ಮೂರು ಪಾದವನಳಿದುಕೊಂಡಿ ನೀ ಬಾರಯ್ಯ ಶಿರಗಳನೆ ಚೆಂಡಾಡಿ ಸಿರಿ ತಂದಿ ಬಾರಯ್ಯ ಗಿರಿಯೆನೆತ್ತಿ ನಿಂದಿ ಬಾರಯ್ಯ ಶ್ರೀ ಹರಿ ಮುಕುಂದಯ್ಯ ಗೋವಿಂದ ಬಾರಯ್ಯ 2 ಬರಿಯ ಬೆತ್ತಲೆ ಆಗಿ ವ್ರತವಳಿದಿ ಬಾರಯ್ಯ ಏರಿ ಕುದುರಿಯನೆ ರಾವುತನಾದಿ ಬಾರಯ್ಯ ಪರಮಭಕ್ತರನು ಹೊರಿಯಲಿ ಬಂದಿ ಬಾರಯ್ಯ ಪರಿಪರಿ ರೂಪವಾದಯ್ಯ ತರಳ ಮಹಿಪತಿ ಪ್ರಾಣದೊಡೆಯ ಬಾರಯ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಕ್ತಿನೋಡಿ ಜನ ಮಾಡುವ ಪರಿಯ ಮುಕ್ತಿಯ ಮಾರ್ಗವ ಯುಕ್ತಿಯನರಿಯದೆ ಭಕ್ತ ನಾನೆಂದಾಡುವರ್ಹೊರಿಯ ಧ್ರುವ ಚಕ್ಕಮಲಕು ಭಕ್ತಿಯ ನೋಡಿ ಉಕ್ಕಿ ದೋರುತಲ್ಯದ ಬಲಗೂಡಿ ಮಿಕ್ಕ ಮಾನವರಿಗೆ ದಯಮಾಡಿ 1 ಡಂಭದೋರು ವನೇಕಚಂದ ಗುಂಭಹೇಳನು ಸರಕ್ಕನೆ ಬಂದು ಕೊಂಬುಕೊಡುವ ಮಾತಿಗೆ ಬಂದರೆ ನಂಬದೆ ಹೋಗುವರತ್ತತ್ತ ಹಿಂದ 2 ಹೊಟ್ಟಿನಮ್ಯಾಲೆ ಸಾರಿಸಿದಂತೆ ನಿಷ್ಠೆನೋಡಿ ಜನ ಮೋಹಿಸುವಂತೆ ಘಟ್ಟಿಸುತ ತಮ್ಮ ಹೊಟ್ಟೆಯ ಹೊರೆದರು ಮುಟ್ಟ ಭಜಿಸುವ ಗುಟ್ಟುದೋರಿದಂತೆ3 ರಚ್ಚಿಗೆ ಬಂತು ಭಕ್ತಿ ಇದೇ ಬಹಳ ಹೆಚ್ಚು ನಮ್ಮದೆಂದು ಮಾಡುರು ಮ್ಯಾಳಿ ಮತ್ಸರದೊಳಗಿದ್ದು ಸಚಲಸ್ನಾನ ಮಾಡಿದೆವೆಂದು ಹೇಳುರು ನಿರ್ಮಲ4 ನಗೆ ಬರುತ್ತದೆ ಭಕ್ತಿಯ ಕಂಡು ಜಗದೊಳಗೆಲ್ಲ ಇದೇವೆ ಭಂಡು ಸುಗಮ ಸುಪಥ ಬ್ಯಾರದೆ ಎಂದು ಮಹಿಪತಿ ಘನಬೆರೆದು ಸದ್ಗುರು ಬಲಗೊಂಡು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಯ ನಿಜ ನೋಡೊ ಧ್ರುವ ನೋಡದೆ ನೀ ಗುಣದೋಷ ಮಾಡೊ ಸದ್ಗುರು ಉಪದೇಶ ಕಡಿವದು ಭವಭಯಪಾಶ ಕೊಡುವದಾನಂದದ ಹರುಷ 1 ಉಪಾಯದ ಗುಣವರಿಯ ಸುಪಥದೋರು ಶ್ರೀಹರಿಯೆ ಉಪಕಾರವು ನಾ ಮರೆಯೆ ಕೃಪೆಯುಳ್ಳ ನೀ ಧೊರಿಯೆ 2 ತರಣೋಪಾಯದ ಸುಖಬೆರಿಯೊ ಮಹಿಪತಿಯ ನೀ ಹೊರಿಯೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮರೆಯದಿರುವರೋ ನಿನ್ನ ಸ್ಮರಣೆಯಾ ನೀನು ಪ ಗರಿಯಾ ಚರಿಯಾ ಮರಿಯಾ ನೆರಿಯಾ | ಸೇರಿ ಕ್ರೂರ ಮಾರಿದಾರಿ ಜಾರಿ ದೂರಸಾರದೇ ಅ.ಪ ಕಡಲಶಯನೆಚ್ಚರಾ ಕಳೆದು ಹೊರಿಯಲುದರಾ | ಬಿಡದೋಲೈಸಿ ಘನಮದರಾ | ಕಡಿಯಾ ಕಿಡಿಯಾ ನುಡಿಯಾ ಪಡಿಯಾ | ಬೇಡಿ ಕಾಡಿ ಓಡಿ ಆಡ ಬ್ಯಾಡ ಗಾಢ ಮೂಢನೇ 1 ತರಳ ಪ್ರಾಯ ಮುಪ್ಪಿಂದೆ ತೀರಲಾಯುಷ್ಯ ಬರುದೇ | ಯರಗುವಾಯಮ ತಾ ನಿಲದೇ | ತ್ವರಿಯಾ ಧರಿಯಾ ಕುರಯಾ ಮರಿಯಾ | ವೈರಿ ಮೀರಿ ಹಾರಿ ತೂರಿ ಹೊರುವಂದದಿ 2 ಮಿನಗು ಬೆಳಗ ಘನ ಮಹಿಪತಿ ಸುತ ಪ್ರಿಯನಾ | ಅನುಭದಿಸದಿಹುದೇನಾ | ಅನುವೇ ಮನವೇ ಗುಣವೇ ದನವೇ | ಜ್ಞಾನ ಹೀನ ಮಾನ ದೀನ ಆನನದಲೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಚ್ಚತ್ತು ನಡಿ ಕಂಡ್ಯ ಮನವೇ ನಮ್ಮ ಅಚ್ಯುತನಂಘ್ರಿಗಳನು ನೆನೆ ಮನವೇ ನೀ ನೆನೆ ಕಂಡ್ಯ ಮನವೇ ಪ ಆಡದಿರಪವಾದಗಳನು ನೀನು ಕೊಂಡಾಡದಿರು ಚಿಲ್ಲರೆ ದೈವಗಳನು ಬೇಡಾಡದಿರುಭಯ ಸೌಖ್ಯಗಳನು ನೀ ಮಾಡಿ ಕಂಡ್ಯ ದುರ್ಜನರ ಸ್ನೇಹವನ್ನು ಸಜ್ಜನರ ದ್ವೇಷವನು 1 ಹಾಳು ಹರಟಿಗ್ಹೋಗ ಬ್ಯಾಡ ಕಂಡ ಕೂಳುಗಳನು ತಿಂದು ವಡಲ್ಹೊರಿಯ ಬೇಡ ಕಾಲ ವೃಥಾ ಕಳಿಯ ಬ್ಯಾಡ ನಮ್ಮ | ಶ್ರೀ ಹರಿ ದಯಮಾಡಾ 2 ನಾನು ಯೆಂಬುದು ಬಿಡು ಕಂಡ್ಯಾ ಎನ್ನ ಮಾನಾಭಿಮಾನದ ಹರಿಯನ್ನು ಕಂಡ್ಯಾ ಜ್ಞಾನಿಗಳೊಡನಾಡು ಕಂಡ್ಯಾ ವಿಷಯ ಬೀಳುವಿ ಯಮಕೊಂಡಾ 3 ಅನ್ಯಸ್ತ್ರೀಯರ ನೋಡಬ್ಯಾಡಾ ಹಿಂದೆ ಮಣ್ಣು ಕೂಡಿರುವರೆಗೊ ಕೇಳೊ ಮೂಢಾ ಅನ್ಯಶಾಸ್ತ್ರವನೋದ ಬ್ಯಾಡಾ ನಮ್ಮ ಮೈಮರೆದಿರ ಬ್ಯಾಡಾ4 ನರಜನ್ಮ ಬರುವೋದು ಕಷ್ಟ ಅಮ್ಮ ಹಿರಿದು ನೋಡೆಲೋ ವಿಪ್ರತ್ವವು ಶ್ರೇಷ್ಠ ಮರಳಿ ಬಾರದು ಉತ್ಕøಷ್ಟ ನಮ್ಮ ಕೇಳೆಲವೋ ಮರ್ಕಟ 5 ಗೋವಿಪ್ರರ ಸೇವೆ ಮಾಡೋ ಸೋಹಂ ಭಾವಗಳನು ಬಿಟ್ಟು ದಾಸತ್ವ ಕೂಡೋ ಕೇವಲ ವೈರಾಗ್ಯ ಮಾಡೋ ಎಂಟು ಲಜ್ಜೆಯನೀಡ್ಯಾಡೋ6 ಕಷ್ಟ ಪಡದೆ ಸುಖ ಬರದು ಕಂ ಗೆಟ್ಟ ಮ್ಯಾಲಲ್ಲದೆ ಕಷ್ಟ ತಿಳಿಯದು ದುಷ್ಟ ವಿಷಯದಾಶೆ ಜರಿದು ವಿಜಯ ವಿಠಲನೆನ್ನದೆ ಮುಕ್ತಿಯು ಬರದೂ, ಕೂಗೆಲವೊ ಬ್ಯಾದೆರದು 7
--------------
ವಿಜಯದಾಸ
ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ ಏಕಾಕಾರದಲೆನ್ನ ಹೊರಿಯಲಾರೇನಯ್ಯ ಧ್ರುವ ನೀರ ಥೆರಿಯ ಕಡಿದು ಹೃದಯದಕರ ಚರಣದಿ ಭರದಿ ಮುಣಗಿ ನೀರ ನಡಿಗಿ ದಣದೇನಯ್ಯ 1 ವಾರಿಧಿಮಥನದಿ ಮೇರುಪರ್ವತವನ್ನು ಭಾರ ಬೆನ್ನಲಿ ಪೊತ್ತು ಬೆವರಿ ದಣಿದೇನಯ್ಯ2 ಧರಿಯ ಕದ್ದಸುರನ ಕೋರೆದಾಡಿಂದ ಸೀಳಿ ಭರದಿಂದ ಹೊಯಿದಾಡಿ ಹೋರಿ ದಣಿದೇನಯ್ಯ 3 ತರಳಗೊಲಿದು ಪ್ರಕಟಿಸಿ ದೈತ್ಯನ ಸೀಳಿ ಕರಳೊನಮಾಲಿಯ ಧರಿಸಿ ದಣಿದೇನಯ್ಯ 4 ಧರಿಯು ಮೂರಡಿ ಮಾಡಿ ಎರೆದು ದಾನವ ಬೇಡಿ ನರನ ಪಾತಾಳಕೊತ್ತಿ ಬಳೆದು ದಣಿದೇಯನಯ್ಯ 5 ಹಿರಿಯಳ ಶಿರವನು ಹರಿದು ಕತ್ತರಿಸಿನ್ನು ಕರದಲ್ಲಿ ಪರಶುವ ಪಿಡದು ದಣಿದೇನಯ್ಯ 6 ಶಿರಗಳ ಚೆಂಡಾಡಿ ರಾವಣೀಂದ್ರ ಜಿತನ ಶರದಿ ಕುಂಭಕರ್ಣನ ಎಚ್ಚದು ದಣಿದೇನಯ್ಯ 7 ಷತುರುಗಳ ಕಾಯಿದು ಉರುಗನ ತುಳದಿನ್ನು ಗಿರಿಯ ಬೆರಳಲೆತ್ತಿ ತೋರಿ ದಣಿದೇನಯ್ಯ 8 ಬರಿಯ ಬತ್ತಲೆ ಅಗಿ ಅರಿಯದೆ ತ್ರಿಪುರವ ಸೇರಿ ನಾರೇರ ವ್ರತವಳಿದು ದಣಿದೇನಯ್ಯ 9 ಏರಿ ಕುದುರಿಯ ತಿರುಹು ರಾಹುತನಾಗಿ ಪರಿ ರೂಪವ ತಾಳಿ ದಣಿದೇನಯ್ಯ 10 ಸರ್ವಾಪರಧವು ಕ್ಷಮೆಯಿಂದ ಮಹಿಪತಿಯ ಮನದೊಳು ಬಂದು ನಿಂದು ಹೊರೆದು ರಕ್ಷಿಸಯ್ಯ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಯಾಕೆ ರಂಗ ನಿನಗೆ ಮಾಕಾಂತೆಯೊಳು ಗರ್ವ | ಲೋಕದೊಳು ಅಬಲೆಯೇನೋ ಕೇಳಯ್ಯಾ ನೀನು ಪ ಮೀನಾವತಾರವ ನೀನಂದು ವಿಡಿದರೆ | ಮೀನಾಂಬಕಿ ತಾನಾದಳೋ1 ಬೆಟ್ಟವ ಬೆನ್ನಿಲಿ ಕಷ್ಟದಿ ನೆಗೆದರೆ | ಬಟ್ಟ ಕುಚಗಳ ಹೊತ್ತಳೋ 2 ಧರೆಯ ಭಾರವ ತಾಳಿದರ ನಿನ್ನಾಭಾರವನು | ಧರಿಸಿದಳಂದಗಲದಲೆ 3 ಸಿಂಹಾನನನಾಗಿ ಮಹಿಮೆ ದೋರಿಸಿದರೆ | ಸಿಂಹದಂತೆ ನಡು ನಡುವಾದಳೋ 4 ಬಲಿ ಬಾಗಿಲಕಾಯಿದರೆ ನೆಲೆಸಿಹಳವಳಲ್ಲಿ | ಬಲಿಯಾ ಭಾಗ್ಯ ರೂಪವಾಗಿ5 ಸುರರ ಹೊರಿಯಲಿಕ್ಕೆ ಪರಶವ ಪಿಡಿದರೆ | ಪರಸಗೈಯ್ಯ ತಾನಾದಳೋ 6 ಹರನಾ ಚಾಪವನೆಗೆದರೆ ಅದನೆವೆ ಮುನ್ನೆ | ಕರೆದಲೆ ತ್ಯಾಡಿದಳೊ 7 ಸೆರೆಹರಿದು ಸ್ತ್ರೀಯರಾ ತಂದರೆ ನಾರದರಿಂದ | ಸೆರೆವಿಡಿಸೆ ಕೊಂಡಳೋ 8 ಮುಪ್ಪರ ಹೊಕ್ಕರೆ ನೀವಪ್ಪುತಲಿ ಹನಿನ್ನಾ | ಮುಪ್ಪುರದಲಿ ಮೆರೆದಳೋ 9 ತುರುಗವ ಏರಿಕೊಂಡು ತಿರುಗಲು ನಿನ್ನಾಕೂಡ | ತುರಗಮನಿ ತಾನಾದಳೋ 10 ಕಡೆಯಕಾಲಕ ನೀರೊಳೊಡಗೂಡಿ ಮಲಗಲು | ಒಡನೆ ವಟದೆಲೆ ಯಾದಳೋ11 ಗುರು ಮಹಿಪತಿ ಪ್ರಭು ಚರಿತೆಯಾ ನಿಮ್ಮೀರ್ವರ | ಭರದಿ ಹೇಳಲೆನ್ನಳವೇ 12
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ ಮುಕ್ತಿಯೋಗ್ಯ ಮಾಡೊ ಭಾವಭೋಕ್ತ ಕೃಪಾನಿಧೆ ಧ್ರುವ ಧ್ಯಾನ ಮೌನ ಸ್ನಾನ ಸಂಧ್ಯಾಖೂನ ಗುರುತು ಅರಿಯೆ ನಾ ನ್ಯೂನ ಪೂರ್ಣ ನೋಡದೆನ್ನ ರಕ್ಷಿಸೋ ದಯಾನಿಧೆ 1 ಹೀನ ದೀನ ಜ್ಞಾನಶೂನ್ಯ ದಾನ ಧರ್ಮ ಅರಿಯೆ ನಾ ನೀನೆ ಕಾಯಬೇಕು ಎನ್ನ ಕರುಣಾ ಕೃಪಾನಿಧೆ 2 ದುರುಳ ದುರ್ವಾಸನೆಯ ದುರಾಚಾರಿ ದುರಾತ್ಮ ನಾ ತರಣೋಪಾಯ ದೋರಿಸೆನ್ನ ಹೊರಿಯೊ ದಯಾನಿಧೆ 3 ಅರುಹು ಕುರುಹು ನರಿಯ ದೀಹ್ಯ ಮರುಳಮಂಕ ತರಳನಾ ಕರವ ಪಿಡಿಯ ಧರೆಯೊಳಿನ್ನು ತಾರಿಸೊ ದಯಾನಿಧೆ 4 ಆಶಾಪಾಶದೊಳು ವಾಸವಾದ ದೋಷ ರಾಶಿ ನಾ ಭಾಸಿ ಪಾಲಿಸು ಪುಣ್ಯ ಪ್ರಕಾಶಿಸೊ ದಯಾನಿಧೆ 5 ಏಸು ಜನ್ಮ ಮೋಸಹೋಗಿ ಘಾಸಿಯಾದ ಜೀವ ನಾ ದಾಸರೊಡನೆ ಕೂಡಿಸೊ ಭಾಸ್ಕರ ದಯಾನಿಧೆ 6
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸತ್ಯಾದ ನಡಿ ಹಿಡಿರೋ ಮನಜರು ಸತ್ಯದಾ ನಡಿಗಿನ್ನು ಮತ್ತೊಂದು ಭಯವಿಲ್ಲ ಧ್ರುವ ಸತ್ಯದಾನಡಿಗಿನ್ನು ಸತ್ಯ ನುಡಿಯಲು ಬೇಕು ಸತ್ಯಂ ಸತ್ಯ ಶರಣರೆಲ್ಲಾ ಎತ್ಯಾಡಿಸುವಂತೆ ಮೈಯೊಳಗಿಹ ಕಾವನೈಯನ ಮರಿಯಬ್ಯಾಡಿ 1 ಹುಸಿಯಾಡಿ ನೀವಿನ್ನು ಘಾಸಿಗೆ ಬೀಳಲಿ ಬ್ಯಾಡಿ ವ್ಯಸನಕಾಗಿ ಬಿದ್ದು ದೆಶೆಗೆಟ್ಟು ಹೋಗಬ್ಯಾಡಿ 2 ಅಶೆಯಕೊಟ್ಟು ನಿರಾಶಯೆ ಮಾಡಲಿಬ್ಯಾಡಿ ಘಾಸಿ ಮಾಡಲಬ್ಯಾಡಿ 3 ಘಟ್ಟಿಸಿ ಒಬ್ಬರ ಹೊಟ್ಟೆಹೊರಿಯಬ್ಯಾಡಿ ಸಿಟ್ಟಿಲಿ ನೆಂಟರು ತುಟ್ಟಿಸಿ ಬಿಡಬ್ಯಾಡಿ4 ಗುಟ್ಟಿನೊಳಿಹ ಮಾತು ತುಟ್ಟಿಗೆ ತರಬ್ಯಾಡಿ ಹೊಟ್ಟೆಲೆ ಹಡೆದವರ ಕಟ್ಟಿಗೆ ತರಬ್ಯಾಡಿ 5 ಲೆತ್ತಪಗಡಿ ಅಡಿ ಹೊತ್ತುಗಳಿಯಬ್ಯಾಡಿ ತುತ್ತುಕುಡಿಯೊಳಿದ್ದಾ ಪತ್ತಬಡಲಿಬ್ಯಾಡಿ 6 ಹರಿಹರ ಭಕ್ತಿಗೆ ಬ್ಯಾರೆ ನೋಡಲಿಬ್ಯಾಡಿ ಗುರುಕೃಪೆ ಪಡೆದಿನ್ನು ಗುರುತಿಟ್ಟು ನೋಡಿರೋ 7 ಅನ್ನಬೇಡಿದವ ಗಿಲ್ಲೆನ ಬ್ಯಾಡಿ ಹೊನ್ನು ಹೆಣ್ಣಿನ ಮ್ಯಾಲೆ ಕಣ್ಣಿಟ್ಟು ಕೆಡಬ್ಯಾಡಿ 8 ಅಂತರಾತ್ಮದ ಪರಮಾತ್ಮನ ತಿಳಕೊಳ್ಳಿ ಸ್ವಾತ್ಮ ಸುಖದ ಸವಿ ಸೂರ್ಯಾಡಿಕೊಳಲಿಕ್ಕೆ 9 ಸ್ವಹಿತ ಸುಖದ ಮಾತು ಸಾಧಿಸಿಕೊಳಲಿಕ್ಕೆ ಮಹಿಪತಿ ಹೇಳಿದ ಮಾತು ಮನ್ನಿಸಿ ತಿಳಿಕೊಳ್ಳಿ 10
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಲಹು ಸಲಹು ಸಲಿಲಜನಯನಾ|ಎನ್ನಾ| ಇಳೆಯೊಳು ಮೊರೆಯ ಹೊಕ್ಕಿಹೆ ನಿನ್ನಾ ಪ ಕರುಣ ನೋಟಗಳಿಂದಲಿ ನೋಡಿ|ಸರ್ವ| ಭಾರ ಒಪ್ಪಿಸಿಕೊಂಡು ನಿಜ ನೀಡಿ| ದಾರಿದೋರುವ ಸುಮತಿಯ ನಿಲಿಸಿ|ಅತಿ| ತರಳನೆನುತ ಭಯವನೆ ಹರಿಸಿ 1 ಹರಿದುರಿತದ ಬಂಧನ ಬಲಿಯಾ|ತವ| ಚರಣದ ಭಕುತಿ ಕೊಡಲಿ ದೊರಿಯಾ| ಹರಿಗುಡದರಸನ ದಶಮುಖದಾ ಸಂಗ| ಲಿರಿಸು ದಾಸರ ಸಗಟವನೊದೆದಾ2 ತ್ರಿಪುಟಿಯ ಸಂಗ ಬಿಡಿಸು ಮನದಿ|ಎನ್ನ| ವಿಪುಳ ವಾಜಿಯೊಳಿರಿಸು ಧೃಡದಿ ಕೃಪೆಯಲಿ ಮಹಿಪತಿ ಸುತ ಪ್ರಾಣಾ|ಎನ್ನ| ಅಪರಾಧ ಕ್ಷಮಿಸಿ ಹೊರಿಯೊ ಪೂರ್ಣಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುವ್ವಿ ಶ್ರೀ ಗುರುನಾಥ ಸುವ್ವಿ ಸದೋದಿತ ಸುವ್ವಿ ಸಾಯೋಜ್ಯದೊಡೆಯನೆ ಸಾಯೋಜ್ಯದೊಡಿಯ ಸದ್ಗುರು ನಮ್ಮಯ್ಯ ಸುವ್ವೆಂದು ಪಾಡಿ ಸಜ್ಜನರೆಲ್ಲ ಧ್ರುವ ಮನವ ಕಣಕವ ಮಾಡಿ ಗಣಪತಿಯ ಬಲಗೊಂಡು ಅನುಮಾನೆಂಬೆಳ್ಳ ಚಿಗಳಿಯ ಅನುಮಾನೆಳ್ಳ ಚಿಗಳಿ ನೆನವು ನೆನಗಡಲಿಯ ಗಣನಾಥಗಿಟ್ಟು ಬಲಗೊಂಡು 1 ಮನವೆಂಬ ಕಣಕವ ಘನವಾಗಿ ಕುಟ್ಟುತ ಜ್ಞಾನ ವೈರಾಗ್ಯದೊಡಗೂಡಿ ಒಡಗೂಡಿ ಕುಟ್ಟುತ ಪ್ರಾಣದ ಸಖಿಯರು ಅನಂದ ಘನವ ಬಲಗೊಂಡು 2 ನಿರ್ಗುಣಾನಂದನು ಸುಗುಣವ ತಾಳಿದ ಅಗಣಿತಗುಣ ಪರಿಪೂರ್ಣ ಪರಿಪೂರ್ಣವಾಗಿಹ ಅಗಮ್ಯನುಪಮ ನಿಗಮ ಗೋಚರನ ಬಲಗೊಳ್ಳಿ 3 ಉತ್ಪತ್ತಿ ಸ್ಥಿತಿ ಲಯ ವಿಸ್ತಾರದೋರಲು ಮತ್ತೆ ತ್ರಿಗುಣವ ತಾಳಿದ ತಾಳಿದ ಸತ್ವ ರಜ ತಮವು ತ್ರಿಮೂತ್ರ್ಯದ ನಿತ್ಯ ನಿರ್ಗುಣನ ಬಲಗೊಳ್ಳಿ 4 ಭಕ್ತರ ಹೊರಿಯಲು ಪೃಥ್ವಿಯೊಳಗಿನ್ನು ಹತ್ತವತಾರ ಧರಿಸಿದ ಭರಿಸಿ ಪೃಥ್ವಿಯೊಳು ಮುಕ್ತಿ ಸಾಧನವಿತ್ತು ಪತಿತಪಾವನನ ಬಲಗೊಳ್ಳಿ 5 ಅನಾಥಜನರ ದೈನ್ಯ ಹರಿಸಲಾಗಿ ಆನಂದದಿಂದ ಪುಟ್ಟಿಹ್ಯ ಪುಟ್ಟಹ್ಯಾನಂದದಿ ಘನ ಗುರುಮೂರ್ತಿಯ ಜ್ಞಾನದಲೊಮ್ಮೆ ಬಲಗೊಳ್ಳಿ 6 ಕುಸುವ ನಿಶ್ಚಯ ಒನಕಿಯ ಕುಸುವ ನಿಶ್ಚಯದ ಒನಕಿ ಹಸ್ತದಿ ಪಿಡಿದು ಹಸನಾಗಿ ಕಣಕ ಕುಟ್ಟುತ 7 ಹಸನದಿಂದ ಕುಟ್ಟಿ ನಾದಿ ಉರಳಿ ಮಾಡಿ ಮದನ ಮೋಹನಗ ಮದುವೀಗ ಮದುವಿಯ ಮನೆಯಲ್ಲಿ ಮುದದಿ ಮೂವತ್ತಾರು ಮೊದಲಾದ ಗುರಿಯ ಮುತ್ತೈದೇರು 8 ಚದುರತನದಲಿ ಒದಗಿ ಮುತ್ತೈದೇರು ಯದುಕುಲೋತ್ತಮನ ನೆನವುತ ನೆನವುತ ಹದನದಿಂದಲಿ ಮನವಿಡುತ ಆದಿ ತ್ರಿಮೂರ್ತಿ ಬಲಗೊಂಡು 9 ಅಸಿಯ ಕಲ್ಲಿ ಒನಕೆ ಉಸಲಾರಗೊಡದೆ ಹಸನಾಗಿ ಕಣಕ ಕುಟ್ಟುತ ಕುಟ್ಟುತ ಮನವೆಂಬ ಕಣಕ ಹಸನವು ಮಾಡಿ ವಿಶ್ವ ವ್ಯಾಪಕನ ಮದುವಿಗೆ 10 ಕುಟ್ಟಿದ ಕಣಕವು ಘಟ್ಟಿಸಿಹ ಮಾಡಿ ಒಟ್ಟಿ ಉನ್ಮನೆಯ ಮುದ್ರಿಯಲಿ ಮುದ್ರಿಲೆ ಒಟ್ಟಲು ದಿಟ್ಟ ಮುತ್ತೈದೇರು ಕೊಟ್ಟ ಸದ್ಗುರು ಹರುಷವ 11 ಜ್ಞಾನ ವೈರಾಗ್ಯವೆಂಬ ಅನಾದಿ ಶಕ್ತ್ಯರು ಕಣಕವ ಕುಟ್ಟಿ ದಣಿದರು ಮನವೆಂಬ ಕಣಕದ ಉರಳೆ ಉನ್ಮನಿಲಿಟ್ಟು ಮೌನ್ಯ ಮೋನದಲಿ ಮುಸುಕಿರೆ 12 ಹಸನಾದ ಕಣಕಲಿ ಹೊಸಪರಿ ಭಕ್ಷ್ಯವು ಹೆಸರಿಟ್ಟು ಏಸು ಪರಿಯಿಂದ ಪರಿಯಿಂದ ಮಾಡುತ ಬೀಸೋರಿಗಿಗಳು ವಾಸುದೇವನ ಮದುವಿಗೆ 13 ಅಡಿಗಿಯ ಮಾಡಿದ ಸಡಗರ ಪೇಳಲಿ ಪೊಡವಿಯೊಳಿನ್ನು ಅಳವಲ್ಲ ಅಳವಲ್ಲದಡಗಿಯ ಕೂಡಿ ಮುತ್ತೈದೇರು ಎಡಿಯು ಮಾಡಿದರು ತಡೆಯದೆ 14 ಒಂದೆ ಸಾಲದಲಿ ಕುಳಿತರು ಕುಳಿತು ಸಾಧು ಜನರ ಮುಂದೆ ಎಡಿ ಮಾಡಿ ಒಂದೊಂದು ಪರಿಯ ಬಡಿಸುತ 15 ಹಪ್ಪಳ ಸೊಂಡಿಗಿ ಉಪ್ಪು ಮೆಣಸುಗಳು ಒಪ್ಪದಿಂದ ಬಡಿಸುತ ಬಡಿಸುತ ತಪ್ಪದೆ ಉಪ್ಪಿನೆಸರಗಳು ಶ್ರೀಪತಿ ಪ್ರಸ್ತದೆಡಿಯಲಿ 16 ಪ್ರಸ್ತದ ಎಡಿಯಲಿ ಪತ್ರ ಶಾಖೆಗಳು ಮತ್ತೆ ಅನೇಕ ಪರಿಯಾದ ಪರಿಯಾದ ಶಾಖವು ಸುತ್ತ ಪಂಕ್ತಿಯಲಿ ಆತ್ಮದಿಂದ ಬಡಿಸುತ 17 ಪರಮಾನ್ನಗಳ ತಂದು ಹಿರಿಯ ಮುತ್ತೈದೇರು ಸರಿಯಾಗಿ ಎಡಿಯ ಬಡಿಸುತ್ತ ಬಡಿಸುತ ಅನ್ನ ಪರಮಾನ್ನ ಅನುಭವದ ಅನಂದದಿಂದ ಬಡಿಸಿದೆ 18 ಮನೋ ಅನುಮಿಷದ ಎಣ್ಣೋರಿಗಿಗಳು ಎಣಕಿಲ್ಲದಿಹ ಭಕ್ಷ್ಯವು ಭಕ್ಷ್ಯದ ಜಿನಸ ಅನೇಕ ಪರಿಯಲಿ ಘನದೊಲುವಿಂದ ಬಡಿಸುತ 1 9 ಸಖರಿ ತುಪ್ಪವು ಭಕ್ತಿಭಾವದಲಾದ ಬಡಿಸುತ ನಡೆದರು ಅಖರದಿಂದಲಿ ಏಕಶಾಂತನ ಮದುವಿಗೆ 20 ಮೊಸರು ಮಜ್ಜಿಗಿಯು ಸುವಾಸದಿಂದಾದ ಲೇಸಾಗಿ ದಣಿಯಬಡಿಸಿರೆ ಬಡಿಸಿದ ಷಡುರಸಾನ್ನವನುಂಡಿನ್ನು ಕಡುಬೇಗ ಪ್ರೇಮ ಉಕ್ಕಿತು 21 ಉಂಡುವೀಳೆಯುವ ಕೊಂಡು ಸಾಧುಸಭೆ ಮಂಡಲದೊಳು ಪೊಗಳಿತು ಪೊಗಳಿತಾ ಮಂಡಲದೊಳು ಪ್ರಚಂಡನ ಮದುವಿ ಅಖಂಡ ಹರುಷದಿ 22 ಗಂಧ ಕಸ್ತುರಿಯ ತಂದೆ ಗುರುಕೃಪೆಯ ಚಂದವಾಗಿಟ್ಟು ಮೆರೆದರು ಮೆರೆದು ಮೇದಿನಿಯೊಳು ಗುರುದಯ ಕರುಣಾದಿ ಪರಮ ಸುಪಥವ ಪಡೆದರು 23 ಮದುವಿ ಮುತ್ತೈದೇರು ಮುಕ್ತಿಸಾಧನ ಕಂಡು ಸುಖಸೂರೆಕೊಂಡಿನ್ನು ಶ್ರೀಮಂತಕರದೊಳು ಬೆರೆದು ಹರುಷವ ಪಡೆದರು24 ಸರಿ ಇಲ್ಲದ ಪ್ರಸ್ತ ಧರೆಯೊಳಗಾಯಿತು ಪರಮಾನಂದದ ಹರುಷಲಿ ಹರುಷವ ಕಂಡಿನ್ನು ಕರುಮುಗಿದು ಮಹಿಪತಿ ಹೃತ್ಕಮಲದಲ್ಲಿ ಸ್ತುತಿಸಿದ 25 ಶ್ರೀಪತಿ ಮದುವಿಯ ಸ್ತುತಿ ಪಾಡಿದವರಿಗೆ ಪಾತಕವಿಲ್ಲ ಭಯವಿಲ್ಲ ಭಯವಿಲ್ಲ ಕ್ಷಿತಿಯೊಳು ಗುರುಭಕ್ತಜನರಿಗೆ ಸಂತತ ಸುಖವ ಪಡೆವರು 26
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯೇ ಎನ್ನ ಪ್ರಾಣಧೊರಿಯೆ ಹರಿಯೆ ಧ್ರುವ ಕರುಣಾನಂದ ಪೂರ್ಣ ವರಮುನಿಗಳ ಪ್ರಾಣ ಶರಣಜನರಾಭರಣ ಹರಿ ನಿಮ್ಮ ಚರಣ 1 ಭಂಜನ ದುರಿತ ವಿಧ್ವಂಸನ ಪರಮಸು ಸಾಧನ ಹರಿ ನಿಮ್ಮ ಕರುಣ 2 ಶಿರದಲಿಟ್ಟು ಆಭಯ ಹೊರಿಯೊ ಮಹಿಪತಿಯ ಕರುಣಿಸಿ ನಿಮ್ಮದಯ ಹರಿಯೊ ಭವಭಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು