ಒಟ್ಟು 118 ಕಡೆಗಳಲ್ಲಿ , 36 ದಾಸರು , 113 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಕಂಡೇ ಪ ಪಾದ ಭಜನೆ ಮಾಡುವದೊಂದೆ ಅ.ಪ. ಪುಟ್ಟಿದಾರಾಭ್ಯ ಬಹುದಿಟ್ಟನಾಗಿಯೆ ಬಾಳು ಅಟ್ಟಿಮೆರೆಯುವ ಬಯಕೆ ವಿಟ್ಟು ಮನದಲಿ ಬಹಳ ಕಷ್ಟಪಟ್ಟೆನು ಘಳಿಸೆ ವಿತ್ತರಾಶಿಯ ವಿಪ್ರ ಶ್ರೇಷ್ಟಧರ್ಮವ ಬಿಟ್ಟು ವ್ಯರ್ಥ ವಿದ್ಯೆಯ ನೋದಿನೋದಿ ಅಷ್ಟಕರ್ತನು ಬಯಕೆ ಬಟ್ಟಬಯಲನು ಗೈದು ಕೊಟ್ಟು ಜ್ಞಾನದ ಕಣ್ಣು ನೆಟ್ಟನೆ ನೊಡೆನಲು ಬಟ್ಟು ಸುಖವನೆ ಮೆಲ್ವ ಜಟ್ಟಿ ಜಗದಲಿ ಕಾಣೆ ಭವ ಸುಖಕೆ 1 ಹೆಂಡತಿಯ ಸುಖವೆಂದೆ ಕೆಂಡಬಡತನ ಸೋಕೆ ಗಂಡು ಬಯಕೆಗಳೆಲ್ಲ ಉಂಡುದಣಿಯಲಿಲ್ಲ ಮಂಡೆ ಚಚ್ಚುತ ನಿತ್ಯ ತುಂಡು ಆದಳು ಅವಳು ಬೆಂಡು ಆದೆನುನಾನು ಹಿಂಡು ಬಳಗಗಳೆಲ್ಲ ಉಂಡು ದಣಿದರು ನಗೆಯ ಹಿಂಡಿ ಪರಜನ ಪ್ರಾಣ ಉಂಡು ಬದುಕಿಹೆ ಸ್ವಾಮಿ ಮುಂಡೆ ಗಿಂತಲು ಹೀನ ಷಂಡನಾಗಿಹೆ ಸ್ವಾಮಿ ಪಾಂಡುರಂಗನೆ ನಿನ್ನ ತೊಂಡನಾದರೆ ಧನ್ಯ 2 ವಿತ್ತ ಗಂಟು ಇಲ್ಲದಮೇಲೆ ಗಂಟುಮೋರೆಯ ನೇಮ ಒಂಟಿಗನೆ ಜೀವನಿಹ ನೆಂಟ ಬಿಂಬನೆ ಒಬ್ಬ ಭಂಟನೆಂದರೆ ಪಿಡಿವ ಶುಂಠ ಬಿಟ್ಟವ ಸತ್ಯ ಕಂಟಕವು ವಿಷಯತತಿ ಕಜ್ಜಿತಿನಸಿನ ತೆರದಿ ಎಷ್ಟು ಸೇವಿಸಲಷ್ಟು ತಂಟೆನೀಡುವವೇನೆ ಕುಂಠವಾದರು ಕರುಣ ಅಂಟಿಮನಸಿಗೆ ಭಾಧೆ ಉಂಟುಮಾಡುವವು ವೈಕುಂಠ ನಾಯಕಕಾಯೊ 3 ಬಾಡಿಗೆಯ ಮನೆಯಂತೆ ಗಾತ್ರವಿದು ಜೀವನಿಗೆ ಹೂಡಿಹನು ಭವಯಾತ್ರೆ ಓಡಿಹೊಹುದು ತಾನೆ ಆಗಿ ಮುಗಿಯಲು ಆಟ ಪ್ರೌಡ ಹರಿಪುರ ದಾರಿ ನೋಡಿಕೊಂಡವ ಜಾಣ ಕೇಡು ಮತ್ತಗೆ ಸಿದ್ಧ ಮಾಡುತಲಿ ವಿಧಿಗಳನು ದೂಡುತಲಿನಿಜೀವ ಕೂಡುತಲಿ ಸಜ್ಜನರ ಹಾಡುತಲಿ ಹರಿಗಾನ ಜೋಡಿಸುತ ಹರಿಭಕ್ತಿ ಬೇಡದಲೆ ಏನೊಂದು ಬಾಡದಿರೆ ದುಃಖ ಬರೆ ನೋಡುವನು ನಿಜ ಸುಖವ 4 ಹೆಂಡತಿಯು ಸುಗುಣಿ ಇರೆ ಗಂಡನಿಹ ದುರ್ಮಾರ್ಗ ಗಂಡ ಮೃದು ತರವೆನ್ನೆ ಹೆಂಡತಿಯು ಕರ್ಕಸಿಯು ಕುಂಡಲಿಯ ಸಿರಿಯೆನ್ನೆ ಮಂಡೆಯಲಿ ಮೆದುಳಿಲ್ಲ ಹೆಂಡ ಕುಡುಕರು ಸುತರು ಉಂಡುಸುಖಿಸೆ ರೋಗ ಮುಂಡೆಯರ ಚಲುವಿಕೆಯು ಶಂಡಸಹ ಸಂಸಾರ ಭಂಡ ಮಕ್ಕಳ ಬಾಳು ಪುಂಡಜನ ಸಹವಾಸ ಕಂಡು ಸಹಿಸದ ನೆಂಟ ಉಂಡು ದೂರುವ ಬಳಗ ದಂಡವಲ್ಲವೆ ಮತ್ತೆ ಕೊಂಡು ಮಾಡುವದೇನು 5 ಭವ ನಿಜಗುಣವೆ ಕ್ಲೇಶದಾಯಕ ವಿರಲು ಲೇಸು ದೊರಕುವದುಂಟೇ ಏಸು ಕಾಲವು ಕಳಿಯೆ ಏಸು ಕಡಿಯಲು ನೀರ ಸೂಸುವುದೆ ನವನೀತ ಹೇಸಿಗೆಯ ದುರ್ಗಂಧ ನಾಶವಾಗುವುದುಂಟೇ ಕ್ಲೇಶ ತೊಲಗದು ಎಂದು ದಾಶರಥಿಯ ಮನಮುಟ್ಟಿ ದಾಸ ನಾಗದ ತನಕ ಭಾಸವಾಗದು ಜ್ಞಾನ ಶ್ರೀಶ ಕಾಣಿಸ ತನ್ನ ದೋಷಿಯಾಗದೆ ಹರಿಗೆ ಮೀಸಲೆನ್ನಿರಿ ಎಲ್ಲ 6 ನಂಬಿ ಮತಿಮತ ತತ್ವ ವಿಷಯ ಹಂಬಲವಳಿದು ಡಿಂಬಗತ ಹರಿ ಬಿಂಬ ಧ್ಯಾನ ಮಾರ್ಗವ ಕಂಡು ಅಂಬುಜಾಕ್ಷ ನಮ್ಮ “ಶ್ರೀ ಕೃಷ್ಣವಿಠಲ”ನ್ನ ತುಂಬಿ ಹೃದಯದದಿ ಸತತ ಪರಮ ಸಂಭ್ರಮದಿಂದ ತಂಬೂರಿ ಮೀಟುತ್ತ ಗೆಜ್ಜೆ ಸಹ ಕುಣಿಕುಣಿದು ಅಂಬಕದಿ ಸುಖ ಬಾಷ್ಪ ಸುರಿಸುತ್ತಹರಿನೆನೆದು ಅಂಬುಜಾಸನ ಸುರಕದಂಬ ಕರುಣವ ಗಳಿಸಿ ಅಂಬೆ ಸಿರಿಪತಿ ಚರಣದಿಂಬು ಬೇಡುವದೊಂದೇ 7
--------------
ಕೃಷ್ಣವಿಠಲದಾಸರು
ಇದ್ದಿದ್ದೊಮ್ಮೆ ಇಂಥಾ ಕಷ್ಟ ಏನು ತಂದ್ಯೋ ಹರಿಯೆ ಪೊರೆಯಬೇಕೆಂದು ನುತಿಸುವವಗೆ ಪ ಮಧ್ಯಾಹ್ನಕ್ಕೆ ಮನೆಯ ಒಳಗೆ ಮುದ್ದಿಗೆ ಗತಿಯಿಲ್ಲಾ ವಿದ್ಯಾರ್ಥಿಗಳು ಇಷ್ಟರು ಬಂದರೆ ಇಷ್ಟೂ ಅನ್ನವಿಲ್ಲಾ ಎಂದು ಹೋಗುವೆನು ಎಲ್ಲಿಗೇನೆಂದರೆ ಎಲ್ಲಿ ಏನಿಲ್ಲಾ ಬದ್ಧ ಕಂಕಣವ ಕಟ್ಟಿಕೊಂಡು ನಿನ್ನ ಪಾದವೆ ಗತಿ ಯೆಂದಿರುವೆ ಇಷ್ಟು 1 ಭಿಕ್ಷಕೆ ಬಂದವರಿಗೆ ನೀಡಲು ಹಿಡಿ ಭತ್ತಕೆ ನೆಲೆಯಿಲ್ಲಾ ಕುಕ್ಷುಂಬರರಾಗಿ ಗೃಹಕೆ ಬಂದವರಿಗೆ ಕೂಳಿಗೆ ಗತಿಯಿಲ್ಲಾ ತುಚ್ಛ ಕುಬುದ್ಧಿ ತುಂಟರ ಕೂಡ ಉಪೇಕ್ಷೆ ಮಾಡ್ವರಲ್ಲಾ ಲಕ್ಷ್ಮೀರಮಣ ಶ್ರೀ ರಘುಕುಲ ತಿಲಕ ನೀ ರಕ್ಷಕನೆಂದಾ ಪೇಕ್ಷೆಯಲಿರುವನಿಗೆ 2 ಅತಿಥಿ ಆಭ್ಯಾಗತರು ಬಂದರೆ ಪೂಜಿಸೊ ಅಧಿಕಾರವು ಇಲ್ಲ ಸುತರು ಹಿತರು ಕೂಡುಂಬುವ ಸಂತತ ಸುಖವು ಕಾಣಲಿಲ್ಲ ಹಿತವರುದಾರಿಲ್ಲ ಪತಿ 'ಹೊನ್ನೆ ವಿಠ್ಠಲ’ ಪರಮ ಪುರುಷ ಕೃಷ್ಣಾ 3
--------------
ಹೆನ್ನೆರಂಗದಾಸರು
ಇಲ್ಲಿಲ್ಲ ಸ್ವಾಮಿ ಅಲ್ಲಿಲ್ಲ ಎಲ್ಲವೂ ಸುಳ್ಳೆಂಬ ಖುಲ್ಲ ಜನರುಗಳಿಗಿಲ್ಲಿಲ್ಲ ಪ ಸತಿಸುತರುಗಳೆಲ್ಲ ಅತಿಹಿತರೆನ್ನುತ ರತಿಪತಿಪಿತನ ಮರೆತು ಇಪ್ಪ ಜನರಿಗೆ 1 ಮಿಗಿಲಾದ ಮಹಿಮೆಯ ಜಗದೊಳು ತೋರುವ ಅಗಣಿತ ಮಹಿಮಗೆ ಸೊಗಸದ ಜನರಿಗೆ 2 ಶರಧಿಶಯನನಾದ ಶ್ರೀವತ್ಸಾಂಕಿತನನ್ನು ಮರೆತು ಮರಳುಗೊಂಡು ಕರಗಿ ಕುಂದುವ ಜನರಿಗಿಲ್ಲಿಲ್ಲ 3
--------------
ಸಿರಿವತ್ಸಾಂಕಿತರು
ಈ ದೇಹ ಬಲು ಸಾಧನ ಭೂದೇವ ಜನ್ಮದಲಿ ಬಂದ ಕಾರಣ ನಮಗೆ ಪ ಶ್ವಸನ ಮತವೆ ಪೊಂದಿ | ನಸು ಚಿತ್ತದಲಿ ಯಿದ್ದು | ವಿಷಯಂಗಳೆಲ್ಲ ನಿರಾಕರಿಸಿ | ಋಷಿಮಾರ್ಗದಲಿ ನಡೆದು ವಿಹಿತಾರ್ಥದ ಸತ್ಯ | ನಿತ್ಯ ಸಜ್ಜನರ ಒಡಗೂಡು1 ಬಾಹುದ್ವಯದಲಿ ಶಂಖ ಚಕ್ರ ಧರಿಸಿ ಉ | ತ್ಸಾಹದಲಿ ದ್ವಾದಶ ಪುಂಡ್ರಗಳನಿಟ್ಟು | ಸ್ನೇಹಭಾವದಲಿ ಸತತ ಭಕುತಿಯ ಮಾಡು | ಇಹಲೋಕದಲಿ ಇಷ್ಟಾರ್ಥ ಬೇಡುತಲಿರು 2 ಅನಿಷಿದ್ದ ಕರ್ಮಗಳು ಆಚರಿಸಿ ಭೂತದಯ | ಅನುಗಾಲ ಇರಲಿ | ಬಂಧುಗಳ ಕೂಡಾ | ಮನಮೆಚ್ಚು ನಡೆದು ನೀ ಮಂದಮತಿಯನು ಕಳೆದು | ಘನಜ್ಞಾನದಲಿ ನಡೆದು ಗುಣವಂತನಾಗು 3 ಧರ್ಮೋಪದೇಶವನೆ ಮಾಡುತಲಿರು ನೀನು | ಪೇರ್ಮೆಯುಳ್ಳವನಾಗು ಪೃಥವಿಯೊಳಗೆ | ನಿರ್ಮತ್ಸರನಾಗು ವೈಷ್ಣವ ಜನರ ಕೂಡ | ದುರ್ಮತವ ಪೊಂದದಿರು ಅನಂತ ಜನ್ಮಕ್ಕೆ 4 ಕರ್ಣ ತುಲಸೀ ದಳ | ಬೆರಳಲ್ಲಿ ಪವಿತ್ರದುಂಗರವನಿಟ್ಟು | ಪರಮ ವಿರಕುತಿಯಲಿ ದೇಹವನು ದಂಡಿಸುವ | ಹಿರಿದಾಗಿ ಭಾಗವತನಾಗು ವ್ಯಾಕುಲವ ಬಿಡೋ 5 ವದನದಲಿ ಹರಿಸ್ಮರಣೆ ಮರೆಯದಿರು ಕಂಡಕಡೆ | ಉದರಕ್ಕೆ ಪೋಗಿ ಚಾಲ್ವಯದಿರು ಅಧಿಕರ ಆಪೇಕ್ಷಗಳ ಮಾಡದಿರು ಹರಿಯಿತ್ತ ದದು ಭುಂಜಿಸಿ | ಬಂದ ಕಾಲವನು ಹಿಂಗಳಿಯೊ 6 ತೀರ್ಥಯಾತ್ರೆಯ ಚರಿಸು ಕಥಾಶ್ರವಣವನು ಕೇಳು | ಅರ್ಥವನೆ ಬಯಸದಿರು ಬಾಕಿ ಬಸಿದು ವ್ಯರ್ಥ ನಿನ್ನಾಯುಷ್ಯ ಪೋಯಿತೆಂದೆನಿಸದೆ | ಪ್ರಾರ್ಥನೆಯ ಮಾಡು ಪ್ರತಿಕ್ಷಣಕೆ ಶ್ರೀ ಹರಿಚರಣ 7 ಪರಿಯಂತ | ಮಿತ ಆಹಾರ ಮಿತ ನಿದ್ರಿ ಮಿತ ಮಾತನು | ಸತತ ಮೀರದಲಿರು ಶೋಕಕ್ಕೊಳಗಾಗದಿರು | ಸತಿ ಸುತರು ಎಲ್ಲ ಶ್ರೀ ಹರಿಗೆ ಸೇವಕರೆನ್ನು 8 ಜಾಗರ ಗಾಯನ | ಮರಳೆ ಮರಳೆ ಮಂತ್ರ ಪಠನೆಯಿಂದ | ಧರೆಯೊಳಗೆ ಪುಣ್ಯವಂತನಾಗಿ ಸರ್ವದ | ಇರಬೇಕು ಇಹಪರಕೆ ಲೇಸು ಎನಿಸಿಕೊಂಡು9 ಸುಖ ದು:ಖ ಸೈರಿಸುತ ಅರಿಗಳಿಗೆ ಭಯಪಡದೆ | ನಖಶಿಖವಾಗಿ ಆನಂದ ವಿಡಿದೂ | ಮುಖದಲ್ಲಿ ಹರಿನಾಮ ಅಮೃತವೆ ಸುರಿಸುತ್ತ | ಸಖರೊಳಗೆ ಲೋಲಾಡು ಹರಿಗುಣವ ಕೊಂಡಾಡು10 ಸಕಲಾಧಿಷ್ಠಾನದಲಿ ಹರಿಯೆ ಲಕುಮಿ ತತ್ವ | ಕರ ಮುಗಿದು ತಿಳಿದು | ಮುಕುತಿ ಕರದೊಳಗಿಡು ವಿಜಯವಿಠ್ಠಲರೇಯನ | ವಿಕಸಿತ ಮನದಲ್ಲಿ ಭಜಿಸು ಬಲು ವಿಧದಿಂದ11
--------------
ವಿಜಯದಾಸ
ಉರಗಗಿರಿವಾಸ ವಿಠಲ | ಪೊರೆಯ ಬೇಕಿವಳಾ ಪ ಪರಮಕರುಣಾಮೂರ್ತಿ | ಪ್ರಾರ್ಥಿಸುವೆ ಹರಿಯೇ ಅ.ಪ. ನಿರತ ನಿನ ಸ್ಮರಿಪರಘ | ಪರಿಹರಿಪೆ ನೆಂಬನುಡಿಪರಮ ಸಾರ್ಥಕ ಗೊಳಿಸೊ | ತರಳೇ ಇವಳಲ್ಲಿಕರುಣ ಸಾಗರ ನಿನ್ನ | ಬೇರೊಂದಪೇಕ್ಷಿಸದೆ |ಸರಸದಲಿ ತವರೂಪ | ಚಿಂತೆಯಲ್ಲಿಹಳೋ 1 ಮರುತ ಮತವನೆ ಪೊಂದಿ | ತರತಮದ ಸುಜ್ಞಾನ ಪರಪಂಚಬೇಧಗಳ | ಅರಿತು ಭಜಿಸುವಳೋನೆರೆನಂಬಿ ತವಪಾದ | ಹಾರೈಸುತಿರುತಿಹಳವರ ಸುಸಾಧನವನ್ನೆ | ಅಭಿದೃದ್ಧಿಗೊಳಿಸೊ 2 ಪತಿಸುತರು ಹಿತರಲ್ಲಿ | ವ್ಯಾಪ್ತ ಶ್ರೀಹರಿಯೆಂಬಮತಿಯಿಂದ ಸೇವಿಸುತ | ದ್ರವ್ಯ ವಿಭಮನಾಹತಗೈದು ಕತೃಪ್ವ | ಅಂತಕಾರಕ ಭ್ರಮವಕ್ಷಿತಿರಮಣ ಪರಿಹರಿಸಿ | ಆರ್ತಳುದ್ಧರಿಸೋ3 ಜ್ಞಾನ ಸದ್ವೈರಾಗ್ಯ | ಅನುವಂಶಿಕವಾಗಿನೀನಾಗಿ ಕರುಣಿಸಿಹೆ | ಜ್ಞಾನಾತ್ಮಹರಿಯೆಮೌನಿಕುಲ ಸನ್ಮಾನ್ಯ | ಜ್ಞಾನಿ ಜನಸಂಗವನುನೀನಾಗಿ ಕೊಟ್ಟಿವಳ ಉದ್ಧರಿಸೋ ಹರಿಯೆ 4 ಸರ್ವಜ್ಞ ಸರ್ವೇಶ | ಸರ್ವಾಂತಾರಾತ್ಮಕನೆದರ್ವಿ ಜೀವಿಯ ಹೃದಯ | ಗಹ್ವರದಿ ನಿನ್ನಾಭವ್ಯರೂಪವ ತೋರಿ | ಉದ್ದಾರ ಗೈ ಇವಳಾಶರ್ವವಂದ್ಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಎನಗೆಲ್ಲಿಯ ಕೊರತೆ ನಿನ ನಂಬಿದ ಮೇಲೆ ಮನಸಿಜನೈಯ್ಯಾ ಶ್ರೀ ರಂಗೇಶವಿಠಲ ಪ ಕೊಡುವ ಕರ್ತನು ನೀನು ಎಡಬಿಡದಿರುವಾಗ ಬಡತನವೆನಗ್ಯಾಕೆ ರಂಗೇಶವಿಠಲ 1 ಸತಿಯು ಸುತರು ಎನಗೆ ಹಿತವ ಬಯಸಲಿಲ್ಲ ಗತಿಯು ಎನಗೆ ನೀನೆ ರಂಗೇಶವಿಠಲ 2 ಮಂದಮತಿಯು ನಾನು ಸಿಂಧುಶಯನ ನಿನ್ನ ಕಂದನೆಂದು ತಿಳಿಯೊ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ಎಷ್ಟು ಭಾಗ್ಯ ಎಷ್ಟು ಭಾಗ್ಯಕೃಷ್ಣನ ಮುಖವ ದಿಟ್ಟಿಸಿ ನೋಡಿ ಸುಖಿಸುವ ಸಭೆಯ ಜನರು ಪ. ಕಡಗ ಸರಪಳಿಯು ದಿವ್ಯ ಬೆಡಗಿನಾಭರಣಮುಕುಟ ಕಡಿಗಂಟೆ ಮುತ್ತುಗಳ ಜಡವುತಕಡಿಗಂಟೆ ಮುತ್ತುಗಳ ಜಡವುತಲಿ ರಂಗನಾಯಕನ ಎಡಬಲದಿ ಕುಳಿತ ಅರಸಿಯರು ಸಖಿಯೆ 1 ಕೆತ್ತಿಗೆ ಕುಸುರಾದ ಉತ್ತಮ ಆಭರಣಗಳುಮುತ್ತಿನ ಮಾಲೆಗಳು ಅಲಗುತಮುತ್ತಿನ ಮಾಲೆಗಳು ಅಲಗುತ ರಂಗಯ್ಯನ ಹತ್ತಿರ ಕುಳಿತ ದೊರೆಗಳು ಸಖಿಯೆ2 ಕುಂಡಲ ಮಂಡಿತ ಪಂಡಿತರೆಲ್ಲರುಭೂಮಂಡಲ ಪತಿಯ ಸ್ತುತಿಸುತ ಭೂಮಂಡಲ ಪತಿಯ ಸ್ತುತಿಸುತ ಸಭೆಯಲಿತಂಡ ತಂಡದಿ ಕುಳಿತಾರೆ ಸಖಿಯೆ 3 ಋಗ್ವೇದಾದಿಗಳೆಲ್ಲರು ಶಬ್ದವಾದದಿಂದಲಿರುಕ್ಮಿಣಿ ಪತಿಯ ಸ್ತುತಿಸುತರುಕ್ಮಿಣಿ ಪತಿಯನೆ ಸ್ತುತಿಸುತ ಸಭೆಯಲಿಹಿಗ್ಗಿ ಹರುಷದಲಿ ಕುಳಿತಾರೆ ಸಖಿಯೆ 4 ಮಿಂಚು ಮಡಿಯುಟ್ಟು ಪಂಚ ಮುದ್ರೆಯನೆ ಧರಿಸಿ ಚಂಚಲಾಕ್ಷನ ಸಭೆಯೊಳು ಚಂಚಲಾಕ್ಷನ ಸಭೆಯೊಳು ಜೋಯಿಸರುಪಂಚಾಂಗ ಹೇಳುತ ಕುಳಿತಾರೆ ಸಖಿಯೆ 5 ತಾಳ ಮದ್ದಳೆ ದಿವ್ಯ ಮೇಲೆ ತಂಬೂರಿಯವರು ಮೇಲು ಸ್ವರದಿಂದ ಸಭೆಯೊಳುಮೇಲು ಸ್ವರದಿಂದ ನುಡಿಸುತ ಕುಳಿತಾರೆ ಕಾಳಿ ಮರ್ದನನ ಸಭೆಯೊಳು ಸಖಿಯೆ 6 ಚಲುವ ರಾಮೇಶನ ಆದರದಿ ಸ್ತುತಿಸುತಲೆವೇದಗೋಚರನ ಸಭೆಯೊಳು ವೇದಗೋಚರನ ಸಭೆಯೊಳಗೆ ಹರುಷದಿಯಾದವರೆಲ್ಲ ಕುಳಿತಾರೆ ಸಖಿಯೆ 7
--------------
ಗಲಗಲಿಅವ್ವನವರು
ಏಕೆ ಕೆಡುವಿರಿ ಸಂಸಾರವು ಸ್ವಪ್ನವೆಂದು ತಿಳಿಯಬಾರದೇಏಕ ಬ್ರಹ್ಮಾಸ್ತ್ರ ದೇವತೆಯ ಹೊಂದಿ ಜನ್ಮ ಕಳೆಯಬಾರದೆ ಪ ಬಿಸಿಲೊಳು ಬಳಲುವರ ಕಂಡು ನೆರಳಿಗೆ ಕರೆಯಬಾರದೆತೃಷೆಯಿಂದ ನಾಲಗೆ ಒಣಗುತಲಿರೆ ನೀರನೆರೆಯಬಾರದೆಹಸಿದು ಬಂದವರಿಗೆ ಇದ್ದದ್ದರೊಳಗೆ ಅನ್ನವ ನೀಡಬಾರದೆಹುಸಿನುಡಿಯ ಬಿಟ್ಟು ಸತ್ಯವಾಕ್ಯವನೀಗ ಆಡಬಾರದೆ1 ಸತಿ ಸುತರು ಸ್ವಾರ್ಥ ಮರೆತು ಮುಕ್ತ ಮನದಿ ಧರ್ಮ ಮಾಡಬಾರದೆಹಿತದವರು ಒಬ್ಬರಾದರೂ ಹಿಂದೆ ಬರುವರೇ ನೀನೇ ನೋಡಬಾರದೆಮತ ಅಭಿಮಾನ ಮರೆತು ಆತ್ಮಾಭಿಮಾನವ ಮರೆಯಬಾರದೆ 2 ನಂಟರ ಮೇಲೆ ಚಿಂತೆಯಿದ್ದಂತೆ ಗುರುವಿನ ಮೇಲೆ ಇರಬಾರದೆಕುಂಠಿಣಿ ಮನೆಗೆ ಹೋಗುವಂತೆ ಮಠಕೆ ಹೋಗಬಾರದೆಒಂಟೆಯಂದದ ಮೋರೆಯನೀಗ ಹಿರಿಯರ ಕಂಡು ತಗ್ಗಿಸಬಾರದೆ 3 ಸಾಧುಗಳು ಕಾಣೆ ಭಕ್ತಿಯಲೆದ್ದು ಚರಣಕೆ ಎರಗಬಾರದೇವ್ಯರ್ಥವಾದದ ಮಾತನು ಬಿಟ್ಟು ಸುಮ್ಮನೆ ತಾನಿರಬಾರದೆಕ್ರೋಧದ ಬೇರನು ಮೊಳಕೆಯಸಹಿತ ಕೀಳಬಾರದೆಮಾರ್ಗದಿ ಕಲ್ಲುಮುಳ್ಳುಗಳಿರೆ ಕಡೆಗೆ ತೆಗೆದೆಸೆಯಬಾರದೆ4 ನಾನಾರು ಎಂದು ವೇದಾಂತ ವಾಕ್ಯದಲಿ ನಿನ್ನ ಅರಿಯಬಾರದೆವಾದವ ಬಿಟ್ಟು ಚಿದಾನಂದನ ಚರಣದಿ ಹೊರಳಬಾರದೆಮೇದಿನಿ ಪೂರ್ಣ ಸರ್ವಬ್ರಹ್ಮವೆಂದು ತಾನು ಅರಿಯಬಾರದೆಭೇದಾ ಭೇದಕೆ ಹೊರಗಾದ ಬಗಳೆಯ ಕೂಡಬಾರದೆ 5
--------------
ಚಿದಾನಂದ ಅವಧೂತರು
ಏನು ಭಯ ನನಗೆ ಏನು ಭಯತಾನೆಯಾದ ಪರಬ್ರಹ್ಮ ತಾನೆಯಾಗಿ ತಾನಿಹಗೆ ಪ ಕಾಮಿಸಿ ಸುತರು ಸೊಸೆಯು ಕೊನೆಯಿಲ್ಲದ ಬಯಕೆಯಾಗೆಕಾಮನನ್ನು ಕಾಲಲೊದ್ದು ಕಸಕೆ ಮಾಡಿದವಗೆ 1 ಇಹಪರ ವಾಸನೆಯನೆಲ್ಲ ಲೋಕ ವಾಸನೆಯದಹಿಸಿ ಬೂದಿಯನ್ನೆ ಮಾಡಿ ಧೂಳಿಪಟ ಮಾಡಿದವಗೆ 2 ಬಣ್ಣ ಬಣ್ಣದ ಕ್ರೋಧಮದಗಳ ಬಳಿದು ಶೋಕ ಮೋಹವನುಣ್ಣಗೆ ಮಾಡಿ ಎಲ್ಲವ ನುಂಗಿ ನೀರು ಕುಡಿದವಗೆ 3 ಕ್ಲೇಶ ದುಷ್ಟಗುಣ ವೆಂಬುದೆಲ್ಲವಹೊಟ್ಟು ಮಾಡಿ ಹಾರಲೊದ್ದಿಹ ದಿಟ್ಟ ಮಾನವಗೆ4 ಕಪಟ ಮೋಹ ಮೊಳೆಯ ಕಿತ್ತುಬಯಲು ಚಿದಾನಂದ ಸದ್ಗುರು ಬ್ರಹ್ಮವಾಗಿ ತೂಗುವಗೆ 5
--------------
ಚಿದಾನಂದ ಅವಧೂತರು
ಏನು ವೈಭವವೊ ಶ್ರೀನಿವಾಸ ಧೊರೆಯೆನಿನ್ನದೇನು ವೈಭವವೊ ಪ ಸಿರಿಯು ತಾನೆ ನಿಂತು ನಿನ್ನನಿರುತ ಸೇವೆ ಗೈಯ್ಯುತಿಹಳೊಸರಸಿಜಾಸನಾದಿ ಸುರರುಕರವ ಮುಗಿದು ತುತಿಸುತಿಹರೂ 1 ನಾಗರಾಯ ದಿವ್ಯಾಸನನಾಗಿ ಹೆಡೆಯ ಛತ್ರ ಪಿಡಿವಯೋಗಿ ನಾರದ ತುಂಬುರಾರುರಾಗ ಮಾಡಿ ಹಾಡುತಿಹರೊ 2 ಗರುಡ ವಾಯು ಸುತರು ನಿನ್ನಪರಮ ವಾಹನರಾಗಿ ಬಹರುಸುರಮುನಿಗಳು ಸಕಲ ನರರುನಿರುತನಾಮ ಜಪಿಸುತಿಹರು 3 ಮಂಗಳ ವಾದ್ಯಗಳು ಮೊಳಗಿಮಂಗಳಾರುತಿಯಾಗಿ ಬೆಳಗಿತಿಂಗಳು ನೇಸರರು ದಿವ್ಯಮಂಗಳ ದೀವಟಿಗರಾಗಿ 4 ಅಮೃತ ನಿನ್ನ ಪಾನತೋರ ಭಕುತರಾಳೆ ಗದಗುವೀರನಾರಾಯಣನೆ ನಿನ್ನದೇನು ವೈಭವವೊ 5
--------------
ವೀರನಾರಾಯಣ
ಒಂದು ಕೊಟ್ಟರೆ ಶಿವ ಮತ್ತೊಂದು ಕೊಡನಯ್ಯ ಆನಂದ ವಸ್ತುವಿಗೊಂದು ಲೀಲೆ ಇದಯ್ಯ ಪ ರೊಕ್ಕವಿದ್ದವರಿಗೆ ಮಕ್ಕಳೆಂಬವರಿಲ್ಲ ಮಕ್ಕಳಿದ್ದರೆ ತಕ್ಕವನಿತೆಯಿಲ್ಲ ಚೊಕ್ಕಸತಿಯು ಸಿಕ್ಕಿತಾನುರೂಪದೊಳಿರೆ ಪಕ್ಕನೆ ಅಗಲಿ ಪೋಗುವರಯ್ಯ 1 ಚೆಲುವ ಹೆಣ್ಣೆಗೆ ತಕ್ಕ ಚೆಲುವ ಪುರುಷನಿಲ್ಲ ಚೆಲುವ ನಾದವ ಗೊಳ್ಳೆಲಲನೆಯಿಲ್ಲ ಹಲವು ಜನ್ಮದ ಪುಣ್ಯ ಫಲದಿಂದ ಸೇರಲು ಹೊಳೆದು ಹೋಗುವರಿದರೊಳಗೊಬ್ಬರಯ್ಯ 2 ಸತಿ ಸುತರು ಇರುತಿರಲು ದಾರಿದ್ರ ತಿಂಬುವುದಕಿಲ್ಲ ಗತಿಯಿಲ್ಲದವನಿಗೆ ನರಕವಿಲ್ಲ ಅತಿಶಯವಾಗಿ ತಿಂಬುದಕ್ಕಿದ್ದ ನರರಿಗೆ ಸತತ ಶಾರೀರ ಸುಖವಿಲ್ಲವಯ್ಯ 3 ಉಂಬಲೂಡಲು ಸರ್ವಸಕಲ ಸಂಪತ್ತೆಲ್ಲ ತುಂಬಿರಲು ತನ್ನ ಗೃಹದೊಳೆಲ್ಲ ಬೆಂಬಿಡದೆ ರೋಗವು ಪುಟ್ಟಿತನುವಿನೊಳ್ ತಿಂಬುದಕವಗೆ ಬಾಯಿಗಳಿಲ್ಲವಯ್ಯ 4 ಸಕಲ ಜೀವರಿಗು ಚಿಂತೆಗಳಿಲ್ಲದವರಿಲ್ಲ ಸುಖವು ಸ್ವಪ್ನದೊಳು ಕಾಣುವುದಿಲ್ಲವಯ್ಯ ಬಕನ ವೈರಿಯ ಕೋಣೆಯ ಲಕ್ಷ್ಮೀಪತಿ ಪ್ರಿಯ ಮಕರ ಕೇತನ ವೈರಿಯಾಟವಿದಯ್ಯ 5
--------------
ಕವಿ ಪರಮದೇವದಾಸರು
ಕಮಲಾಲಯ ವಿಠಲ | ಕಾಪಾಡೊ ಇವಳಾ ಪ ಅಮಿತ ಮಹಿಮಾತ್ಮಾ ಅ.ಪ. ಪಾದ | ವಂದನೆಯ ಬಯಸೀಬಂದಿಹಳು ಎನ್ನಲ್ಲಿ | ಕಂದರ್ಪಪಿತ ನಿನ್ನ |ಅಂದ ದಾಸ್ಯವ ಬಯಸಿ | ಪ್ರಾರ್ಥಿಸುತ್ತಿಹಳೋ 1 ಮನ್ನಿಸುತ ಮನ್ಮನದ | ಬಿನ್ನಪವ ಸಲಿಸುತ್ತನನ್ನೆಯಿಂ ತೈಜಸನು | ನೀನೇವೆ ಆಗೀಚೆನ್ನಮುತ್ತೈದುಳ್ಳ |ಹೆಣ್ಣೆನ್ಯ ರೂಪದಲಿಸನ್ನಿಹಿತ ದಂಕಿತವೆ ಸೂಚಿಸಿದೆ ಹರಿಯೇ 2 ವಜ್ರ ಕವಚವ ತೊಡಿಸಿಶ್ರೇಷ್ಠಭಕುತಳ ಗೈಯ್ಯೊ | ವಿಷ್ಠರ ಶ್ರವನೇ 3 ಎಲ್ಲೆಲ್ಲೂ ನೀನಿದ್ದು | ಬೆಲ್ಲದಚ್ಚಿನ ಪರಿಯಮಲ್ಲ ಮರ್ಧನ ಕೃಷ್ಣ | ಕೈಪಿಡಿದು ಇವಳಾಬಲ್ಲವರ ಸಂಗದಲಿ | ಚೆಲ್ವತವ ಮಹಿಮೆಗಳಸಲ್ಲಲಿತ ಮನದಲ್ಲಿ ಕೇಳುವಂತೆಸಗೋ 4 ಪತಿಸುತರುಹಿತರಲ್ಲಿ | ವಿತತ ನಿನ್ನಯಮೂರ್ತಿಅತಿಶಯಂಗಳ ಕಂಡು | ಮರುತಮಾರ್ಗದಲೀಹಿತ ಗುರು ಗೋವಿಂದ | ವಿಠಲನ್ನ ಸೇವಿಸುವಮತಿಯನೇ ಕೊಡು | ಪ್ರಾರ್ಥಿಸುವೆ ಹರಿಯೇ 5
--------------
ಗುರುಗೋವಿಂದವಿಠಲರು
ಕರದಿಂದ ಅಲುಗಿಸುತರುಹುವಳೂ ಪ ನರರು ತವ ದ್ವಾರದಲಿ ತಮ್ಮಯ | ಭರದಿ ನಿದ್ದೆಯ ತ್ಯಜಿಸುತೇಳೆಂದು ಅ ನೇಕೆ ಮಲಗಿಹೆ ಏಳು ಎನ್ನುತ 1 ಸಡಗರ ನೀ ನೋಡು ಎನ್ನುತ2 ಬಾತುರದಿ ಚಿಲಿಪಿಲಿಯ ಗುಟ್ಟುತ್ತಾ ತಿನಿಸನ್ನು ತಹೆವೆಂದು | ಪ್ರೀತಿಯಿಂದಲಿ ಅರುಹಿ ಪಕ್ಕವ ರ್ಭೀತ ಪಾವಂಜೇಶ ಎನ್ನುತ 3
--------------
ಬೆಳ್ಳೆ ದಾಸಪ್ಪಯ್ಯ
ಕರಿಮುಖದ ಗಣಪತಿಯ ಚರಣಕ್ವಂದನೆ ಮಾಡಿ ಶಾರದೆಗೆ ಶಿರಬಾಗಿ ಬೇಡಿಕೊಂಬುವೆ ನಾನು ಒಲಿದೆನಗೆ ವರವ ಕೊಡುಯೆಂದು 1 ಭವ ನಾರಂದ ಸುಜನರ್ವಂದಿತ ವಾಯು ಮುದದಿಂದ ಮುದ್ದು ಮಾಲಕ್ಷ್ಮಿ ನಾರಾಯಣರ ಅಂಬುಜ ಪಾದಕ್ಕೆರಗಿ ನಮೋಯೆಂಬೆ 2 ಪದುಮನಾಭ ಹರಿಗೆ ನಿಜ ಭಕ್ತರಾದಂಥ ಬುಧ ಬೃಹಸ್ಪತಿಗಳ ಕಥೆಯ ಪೇಳುವೆ ನಾನು ಮುದದಿಂದ ಕೇಳಿ ಜನರೆಲ್ಲ3 ಇರುತಿದ್ದ ಬಡವ ಬ್ರಾಹ್ಮಣ ಒಂದು ಪಟ್ಟಣದಿ ಮಡದಿ ಮಕ್ಕಳು ನಾಲ್ಕು ಮಂದಿ ಸುತರು ಸೊಸೆಯರೊಡಗೂಡಿಕೊಂಡು ಸುಖದಿಂದ 4 ಒಬ್ಬೊಬ್ಬ ಸುತಗಿಬ್ಬಿಬ್ಬರು ಗಂಡಸು ಮಕ್ಕಳು ವಿಧ್ಯುಕ್ತದಿಂದ ಜಾವಳ ಜುಟ್ಟು ಉಪನಯನ ಶುದ್ಧಾತ್ಮರಾಗಿ ಇರುತಿಹರು 5 ಪ್ರಾತಃಕಾಲದೊಳೆದ್ದು ನಾಲ್ಕು ಮಂದಿ ಸುತರು ಗೋಪಾಳ ಜೋಳ ನಾಲ್ಕು ಸೇರು ಕಾಳು ತಂದ್ಹಾಕೋರು ಅರ್ಧಗ್ರಾಸವನು 6 ಮೂರು ಪಾವು ಹಿಟ್ಟು ಮುಂಜಾನೆಗೆ ಇಟ್ಟು ಗ್ರಾಸ ಮುದ್ದೆ ಅಂಬಲಿ ಕಾಲ ಕಳೆವೋರು 7 ಒಂದಾನೊಂದಿನದಲ್ಲಿ ಬಂದರಿಬ್ಬರು ದ್ವಿಜರು ಮಂದಿರದ ದ್ವಾರದಲಿ ನಿಂತು ಕೂಗುತಿರೆ ಬಂದಳೊಬ್ಬಿ ್ಹರಿಯ ಸೊಸೆ ತಾನು 8 ದಾರು ಬಂದವರು ನಿಮ್ಮ ನಾಮವೇನೆಂದೆನುತ ಬಾಗಿ ಶಿರಗಳನೆ ಚರಣಕ್ವಂದನೆ ಮಾಡಿ ಭಾಳ ಭಕ್ತಿಂದ ಕರೆದಳು 9 ದಾರಾದರೇನಮ್ಮ ಬಾಯಾರಿ ಬಳಲುತಲಿ ಮೂರು ನಿರಾಹಾರ ಮಾಡಿ ಬಂದೆವು ನಾವು ಆಹಾರ ನೀಡಿ ಕಳಿಸೆಂದ್ರು 10 ಭಿಕ್ಷಕೆ ಹೋದವರು ಈ ಕ್ಷಣದಿ ಬರುವೋರು ಅರೆಕ್ಷಣ ನೀವು ತಡೆದರೆ ಜೋಳದ ಭಕ್ಷ್ಯವನೆ ಮಾಡಿ ಬಡಿಸುವೆನು 11 ಹೊತ್ತು ಭಾಳಾಯಿತು ಹಸ್ತವು ನಮ್ಮೊ ್ಹಟ್ಟೆ ತುತ್ತನ್ನ ಹಾಕಿದರೆ ಈಗ ನಾವದನುಂಡು ತೃಪ್ತರಾಗ್ಹರಸಿ ನಡೆದೇವು 12 ಮಡಿವುಟ್ಟು ಮಾಡಿದೆನು ಮುಂಜಿಮನೆಗಳಿಗಡಿಗೆ ತಡೆಯದೆ ಸ್ನಾನಮಾಡಿ ಬನ್ನಿರೆಂದು ನುಡಿದಳು ಬ್ಯಾಗ ಪತಿವ್ರತೆ 13 ನಾಲ್ಕು ಭಕ್ಕರಿಯೊಳಗೆ ಎಂಟರ್ಧವನು ಮಾಡಿ ಎಂಟುಮಕ್ಕಳಿಗೆ ಬಡಿಸೋ ಗ್ರಾಸವನು ಸಂತೋಷದಿಂದ ಬಡಿಸುವೆನು 14 ಸ್ನಾನ ಸಂಧ್ಯಾನವ ಮಾಡಿ ಬಂದೇವೆನಲು ತಾನು ಎಡೆಮಾಡಿ ಎರಡೆರಡು ಭಕ್ಕರಿಯ ನೀಡಿದಳು ಭಾಳ ಭಕ್ತಿಂದೆ 15 ಬೆಣ್ಣೆ ಬೆಲ್ಲ ತುಪ್ಪ ಕರಣೆ ಕರಣೆ ಕೆನೆಮೊಸರು ನುಣ್ಣನೆ ತವ್ವೆ ಅರೆದಕೊಬ್ಬರಿ ಖಾರ ಉಣ್ಣಿರೆಂದ್ಹಾಕುತಿರಲಾಗ 16 ಸಡಗರದಲದನುಂಡು ಕುಡಿದು ಮ್ಯಾಲ್ ಮಜ್ಜಿಗೆಯ ಒಡೆದಡಿಕೆಯೆಲೆ ಕೊಟ್ಟು ಕೇಳುತ ನಿಮ್ಮ ನಡೆವೊ ನಾಮೇನು ಹೇಳೆಂದ್ಲು 17 ಇಂದುಸುತ ಸುರರ ಗುರುವೆಂದು ಪೇಳುವರ್ ನಮಗೆ ಬಂದೆವು ನಾವು ಬುಧ ಬೃಹಸ್ಪತಿಗಳು ಆ- ನಂದವಾಯಿತು ನಮಗೆಂದ್ರು 18 ಅನ್ನ ಬೇಕಾದರೆ ಅಡಿಗೆ ಒಲೆಗೋಡೆಯಲಿ ನ- ಮ್ಮನ್ನ ಬರೆದು ಪೂಜೆ ಮಾಡಿದರೀಗ ಅನ್ನವನು ನಾವು ಕೊಡುವೆವು 19 ಭಾಗ್ಯ ಬೇಕಾದರೆ ಬರೆದು ಪೆಟ್ಟಿಗೆಮ್ಯಾಲೆ ಭಾಳ ಭಕ್ತಿಂದ ಪೂಜೆ ಮಾಡಿದರೆ ಭಾಗ್ಯ ಕೊಡುವೆವೆಂದ್ಹೇಳಿ ನಡೆದರು 20 ಸುಣ್ಣಸಾರಣೆಮಾಡಿ ಬಣ್ಣ ಚಿತ್ರವ ಬರೆದು ಚೆನ್ನಾಗಿ ಬರೆದು ಬುಧ ಬೃಹಸ್ಪತಿಗಳನೆ ಮನ್ನಿಸಿ ಪೂಜಿಸಿದಳಾಗ 21 ಹಚ್ಚಿಟ್ಟು ಗಂಧಾಕ್ಷತೆ ಪುಷ್ಪಗಳ ಉತ್ರಾಣಿ ಅಕ್ಕಿ ಮಂತ್ರಾಕ್ಷತೆ ಮಾಡಿ ಭಕ್ತಿಂದೆ ಪೂಜಿಸಿದಳಾಗ 22 ಗೋಪಾಳಕ್ಕ್ಹೋದಲ್ಲಿ ಗೋಧಿ ಅಕ್ಕಿ ಬ್ಯಾಳೆ ಹಾಕುವರು ನಾಲ್ಕು ಬೀದಿಯಲಿ ಅದು ಗಂಟು ತಾವ್‍ಕಟ್ಟಿ ಹೊತ್ತರ್ಹೆಗಲಲ್ಲಿ 23 ಹಿಡಿಜೋಳ ಬೇಡಿದರೆ ಪಡಿಜೋಳ ಹಾಕುವರು ಬಡವರು ನೀವು ಬನ್ನಿರೆಂದು ಕರೆದು ಹಿಡಿಹಿಡಿ ರೊಕ್ಕ ಕೊಡುವೋರು 24 ಭರದಿಂದ ಬಂದಾಗ ಸುರುವಿದರು ಧಾನ್ಯವನು ಬರೆದಂಥ ಗೊಂಬೆ ನೋಡಿ ಕೇಳುತ ಅದರ ವಿವರವನು ಹೇಳಬೇಕೆನುತ 25 ಇವರು ಬುಧ ಬೃಹಸ್ಪತಿಗಳೆಂಬೊ ದೇವತೆಗಳು ಇವರು ಬಂದೆನ್ನ ಮನೆಯಲ್ಲೂಟವನುಂಡು ಒಲಿದ್ವರವ ಕೊಟ್ಟು ನಡೆದರು26 ಇಂಥÀವರ ಪುಣ್ಯದಿಂದೀ ಧಾನ್ಯ ದೊರಕಿದವು ನಿ ರಂತರದಿ ನಮ್ಮ ಮನೆಯಲ್ಲಿಟ್ಟವರನು ಸಂತೋಷದಲಿ ಪೂಜಿಸುವಣೆಂದ್ರು 27 ಭಾಳ ಅನ್ನವ ಮಾಡು ಜೋಳ ಭಕ್ಕರಿ ಮಾಡು ಬ್ಯಾಳೆಯ ತವ್ವೆ ಬೆಲ್ಲ ಪಲ್ಯವು ಬೆಣ್ಣೆ ಮಾಡಿ ನೈವೇದ್ಯಕ್ಕಿಡುಯೆಂದ್ರು&ಟಿbs
--------------
ಹರಪನಹಳ್ಳಿಭೀಮವ್ವ
ಕಾಯ ಬಲು ಹೇಯವೊ | ಸಾಕು ಸಾಕು ಸಂಸಾರ ನೆಚ್ಚದಿರು ಎಚ್ಚರಿಕೆ ಪ ಊಧ್ರ್ವಾಧೋ ಭಾಗದಿಂದ ಕೂಡಿದಾ ರಕ್ತಶುಕ್ಲ | ಅರ್ಧರ್ಧ ಪ್ರವೇಸಿಯಾಗಿ | ವರ್ಧನಾಗಿ ಮಾಂಸ ಪಿಂಡಿಕೆಯಲಿ ಬೆಳೆದು | ಅರ್ಧವದೊಳಗೆ ಬಳುಲುವುದೇನೊ ಮಹಾ ಕಠೀಣಾ 1 ಸನ್ನಿರೋಧವಾದ ಪ್ರಾದೇಶದಲಿ ನೀನು | ಬನ್ನ ಬಡುವದು ಜನಕೆ ಅರಿಯನಲ್ಲಾ | ಮುನ್ನೆ ಇಂದ್ರನಿಗಾಗಿ ವರವಿತ್ತ ಸಂಪತ್ತು | ಇನ್ನು ನಿನ್ನ ಸುತ್ತ ಬಂದದೆ ತಿಳಿದುಕೋ 2 ವಾತ ಶೈತ್ಯಜ್ವರ ಕೆಮ್ಮು | ಸಪುತ ಧಾತುಗಳಿಂದ ಬರುವ ರೋಗ | ಕ್ಲೇಶ ಮೋಹಗಳೊಡನೆ | ಮಾಯಾ 3 ಕಾಮ ಮದ ಗರ್ವದಲಿ ಪುಂಜನಾಗಿ ದುರಳ ನಿ | ಜ ಮಗಳ ಕೂಡ ಬೆರದಾಡಿ ಬೆರೆದು | ರೋಮರೋಮ ವಿಷಯ ಪೂರ್ತಿಯಾಗಿ ಚರಿಸಿ | ಪಾಮರನಾಗಿ ಬಳಲದಿರು ಬಹು ಜೋಕೆ 4 ಸತಿ ಸುತರು ಮಿಕ್ಕಾದ ಬಂಧುಗಳು ನೆರೆನೆರೆದು | ಪ್ರತಿದಿವಸದಲಿ ಅಟ್ಟುವುದು ನೋಡು| ಮತಿ ಚಂಚಲವಾಗಿ ಸತ್ಕರ್ಮ ವೃತ್ತಿಗೆ | ಪ್ರತಿಕೂಲವಾಗುವದು ಪ್ರೀತಿಯಾಗದು ಮುಂದೆ 5 ಎಂತು ನೋಡಲು ವಿಷಯ ಅನುಭವಿಸಿದರು ಅದರ | ಅಂತು ಕಂಡವರಾರು ವಲ್ಲೆನೆಂದು | ಭ್ರಾಂತಿಯಿಂದಲಿ ತಿರುಗಿ ಬಯಲಾಗೋದಲ್ಲದೆ | ಚಿಂತೆ ಇಷ್ಟಷ್ಟು ಏನೆಂದು ಪೇಳಲಿ 6 ಯಲೋ ಮನವೆ ಸಾರಿ ಪೇಳಿದೆನು ಚನ್ನಾಗಿ ನೀ | ನೆಲೆ ಮಾಡಿಕೋ ಜ್ಞಾನ ಭಕುತಿ ವಿತ್ತಾ | ಸುಲಭ ದೇವರ ದೇವ ವಿಜಯವಿಠ್ಠಲರೇಯ | ಕೆಲಕಾಲ ನೆನೆದು ಸುಖಿಯಾಗು ಸುಜನರಾ ಕೇಳು 7
--------------
ವಿಜಯದಾಸ