ಒಟ್ಟು 130 ಕಡೆಗಳಲ್ಲಿ , 48 ದಾಸರು , 123 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಮೋಹನ ತುಪಾಕಿಯನು ಪಿಡಿದು ಹಸ್ತದಲಿ ಚೆನ್ನಾಗಿ ಶೃಂಗರಿಸುವೆ ಪ ಭಿನ್ನಭಾವನೆಯ ಕಳಿದುಳಿದು ಕೋವಿಗೆ ಮತ್ತೆ ಇನ್ನು ಜೋಡಿಲ್ಲವೆಂದು ಇಂದುಅ.ಪ. ಪ್ರೇಮರಸವೆಂಬ ಜಲದಲಿ ತೊಳೆದು ಶುಚಿಮಾಡಿ ನೇಮವೆಂದೆಂಬ ನಿರ್ಮಲವಾಗಿಹ ಆಮಹಾಕನಕ ರಜತದ ಭೂಷಣವ ತೊಡಿಸಿ ಕಾಮವನು ಸುಟ್ಟು ಮಸಿಮಾಡಿ ತುಂಬುವೆನದಕೆ ಎನ್ನೆ 1 ಹಮ್ಮಮತೆಯೆಂಬ ಗುಂಡನು ಅದರಮೇಲಿರಿಸಿ ಒಮ್ಮನಸು ಎಂಬ ಗಜದಿಂದ ಜಡಿದು ಒಮ್ಮೆ ಗುರುವಾಕ್ಯರಂಜಿಕೆಯ ಕಿವಿಯೊಳಗರದು ಬಿಮ್ಮನೇ ಬಿಗಿದು ಈಕ್ಷಿಸಿ ನೋಡುವೆ ಎನ್ನ 2 ಮೆರೆವ ಸುಜ್ಞಾನ ಜ್ಯೋತಿಯ ಬತ್ತಿಯನು ಕೊಳಿಸಿ ಭರದಿ ಬರುತಿಹ ಅಷ್ಟಮದ ಕರಿಗಳಾ ತರಿದಾರು ವೈರಿವರ್ಗಕೆ ಕೆಡಹಿ ಗುರಿಯಿಂದ ಗುರುವಿಮಲಾನಂದ ರಸಭರಿತನಾಗಿರುವಂಥ 3
--------------
ಭಟಕಳ ಅಪ್ಪಯ್ಯ
ಎಲೆ ಎಲೆ ಎಲೆ ಮುದಿಮೂಳಿ ನಿನ್ನ ಕಲ್ಮಷ ಇನ್ನು ತೊಳಿವಲ್ಲಿ ಪ ತಿಳಿಯದೆ ಸುಮ್ಮನೆ ಕಳಕೊಂಡಿ ವಯವೆಲ್ಲ ಸುಳ್ಳೆ ಸುಳ್ಳಿಗಾಗಿ ಹೋಗಿ ಮೃತ್ಯುಕೈಲಿ ಅ.ಪ ಹಿಡಿದಿದ್ದಿ ಸುಡುಗಾಡ ಪಥವ ಇನ್ನು ಬಿಡವಲ್ಲಿ ಮಾಯಮತವ ಹೆಡತಲೆಮೃತ್ಯು ನಾಳೆ ಅಡರಿ ಪಿಡಿದು ನಿನ್ನ ಕೆಡ ಕೆಡವಿ ಒದೆವಾಗ ಬಿಡಿಸೊರಾರವ್ವ 1 ಇನತು ನಾಚಿಕಿಲ್ಲ ರೋಗಿ ನೀನು ತಿಣಿತಿಣಿಕಾದಿ ಮುದಿಗೂಗಿ ಕನಿಕರಿಲ್ಲದೆ ಯಮನ ಠೊಣಪರ್ಹಿಡಿದು ನಿನ್ನ ಹೊಗೆರ್ಹೊಣಿಕಿಲ್ಹೇರುವಾಗ ನಿನಗ್ಯಾರೆ ಕಾಗಿ 2 ಹಣವೆಷ್ಟಿರಲು ನಿನ್ನದಲ್ಲ ನಾಳೆ ಮನೆಮಾರು ಬರದು ಹಿಂಬಲ ಮಣಿಕಟ್ಟೆಲವು ಮುರಿದ್ಹಣಿಯುವಾಗ ನಿನ್ನ ತನುಜನುಜರು ಯಾರು ಹಣಿಕ್ಹಾಕುವರಿಲ್ಲ 3 ಎಷ್ಟು ನಿನ್ನಗೆ ಬಡೆದಿದಮ್ಮಾ ನಿನ್ನ ಖೊಟ್ಟಿ ಕಡೆಯಿಲ್ಲಮ್ಮ ಉಟ್ಟ ಸೀರೆಯ ಬಿಡಿಸಿ ಕೊಂಡೊಯ್ದು ನಿನ್ನ ಸುಟ್ಟು ಸುರೆಹೊಯ್ವಾಗ ಆಟ ನೋಡಮ್ಮ 4 ಭಿನ್ನ ಭೇದಗಳನ್ನು ಕಡಿ ನಿನ್ನ ಒಡಲೊಳು ತಿಳಕೊಂಡುನೋಡಿ ಧನ್ಯ ಶ್ರೀರಾಮನ ಉನ್ನತ ಚರಣ ಇನ್ನಾದರು ಮನಮುಟ್ಟಿ ನೆನೆಕಂಡ್ಯ ಖೋಡಿ 5
--------------
ರಾಮದಾಸರು
ಎಲ್ಲಿರುವೆಯೊ ಎಂದು | ತಲ್ಲಣಗೊಳುತ್ತಿದ್ದೆ ಇಲ್ಲೆ ಬಂದೆಯೊ ದೇವನೆ ಪ. ಪುಲ್ಲಲೋಚನ ಎನ್ನ ಉಲ್ಲಾಸಗೊಳಿಸುತ ನಿಲ್ಲೊ ಹೃತ್ಕಮಲದಿ ನೀ ಬಹು ಮುದದಿ ಅ.ಪ. ಕಪಟನಾಟಕ ದೇವ | ಅಪರಿಮಿತ ಮಹಿಮ ಗುಪಿತರೂಪನೆ ನಿನ್ನನು ವಿಪುಲಮತಿಯಿಂದ ವರ್ಣಿಸಲಾಪೆನೆ ಸಪುತ ಸಪುತ ಭುವನೇಶ ಕೃಪೆಮಾಡೊ ಕೃಪಣವತ್ಸಲ ನಿನ್ನ ಕಾಣದೆ ಅಪರಿಮಿತವಾಗಿ ನೊಂದೆನಯ್ಯ ತಪಿಸುವುದು ನಿನಗುಚಿತವೆ ಹರಿ ಕೃಪೆ ಮಾಡೊ ಬೇಗ ಶ್ರೀನಿವಾಸ 1 ಹರಿ ನಿನ್ನ ಪಾದವ | ನಿರುತದಿ ಧ್ಯಾನಿಪ ವರಮತಿ ಎನಗೆ ನೀಡೊ ಗರುವಿಕೆಯನೆ ಬಿಡಿಸು ಶರಣಳ ಪೋಷಿಸು ಸುರವರ ನಿನ್ನಂಘ್ರಿಗೆರಗಿ ಬಿನ್ನೈಸುವೆ ಕರೆಕರೆಗೊಳಿಸುವುದುಚಿತವೆ ತೊರೆದರೆ ಎನ್ನ ಪೊರೆವರ್ಯಾರೊ ಥರವಲ್ಲ ನಿನಗಿನ್ನು ಕೇಳಿದು ಪೊರೆಯದಿದ್ದರೆ ನಗರೆ ಭಕ್ತರು 2 ಮಂದಮತಿಯಿವಳೆಂದು | ಹಿಂದು ಮಾಡಿದರÉನ್ನ ಕುಂದು ನಿನಗೆ ತಪ್ಪದೊ ಬಂಧನ ಬಿಡಿಸು ನೀ ಬಂಧನದೊಳಗಿಡು ಮಂದಿರ ಹೃದಯದಿ ಎಂದೆಂದಿಗಗಲದೆ ಮಂದಭಾಗ್ಯೆಯ ಮಾತು ಕಿವಿಗೆ ಮಂದಗಮನೆಯ ಮಧ್ಯೆ ಇರುವಗೆ ಮಂದಹಾಸ ಮುಖೇಂದು ವದನನೆ 3 ಅಜಸುರ ವಂದ್ಯನೆ | ಭಜಿಸಲಾಪೆನೆ ನಿನ್ನ ತ್ರಿಜಗದೊಡೆಯ ಹರಿಯೆ ವಿಜಯಸಾರಥಿ ಎನ್ನ ರಜತಮವನೆ ಕಳೆದು ಕುಜನರೊಳಿಡದಲೆ ನಿಜಗತಿ ಪಾಲಿಸೊ ಗಜವರದ ಗಂಭೀರ ದೇವನೆ ಧ್ವಜವಜ್ರೌಕುಶ ಪಾದಕಮಲನೆ ಭಜಿಸಿದವರಿಗೊಲಿವ ದೇವನೆ ಭುಜಗಭೂಷಣನಿಂದ ವಂದ್ಯನೆ 4 ಸೃಷ್ಟ್ಯಾದಿ ಕರ್ತನೆ | ಎಷ್ಟು ಬೇಡಲೊ ನಾನು ಇಷ್ಟ ದೈವÀವೆ ಕೇಳಲೊ ಭ್ರಷ್ಟತನವನೆಣಿಸದೆ ದೃಷ್ಟಿಯಿಂದಲಿ ನೋಡಿ ಕಷ್ಟಬಿಡಿಸಿದರೆ ಮುಟ್ಟಿಪೂಜಿಸುವೆನೊ ದಿಟ್ಟ ಗೋಪಾಲಕೃಷ್ಣವಿಠ್ಠಲ ಇಷ್ಟು ಬಿನ್ನಪ ನಷ್ಟ ಮಾಡದೆ ಕೊಟ್ಟು ಧೈರ್ಯವ ಮೆಟ್ಟಿ ಪಾಪವ ಸುಟ್ಟು ಕರ್ಮವ ಕೃಷ್ಣ ಸಲಹೊ 5
--------------
ಅಂಬಾಬಾಯಿ
ಎಷ್ಟು ಸಾಹಸವಂತ ನೀನೆ ಬಲವಂತದಿಟ್ಟಮೂರುತಿ ಭಳಭಳಿರೆ ಹನುಮಂತ ಪ. ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆಗಳಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೊ ಅ.ಪ. ರಾಮರಪ್ಪಣೆಯಿಂದ ಶರಧಿಯ ದಾಟಿಆ ಮಹಾ ಲಂಕೆಯ ಕಂಡೆ ಕಿರೀಟಸ್ವಾಮಿಕಾರ್ಯವನು ಪ್ರೇಮದಿ ನಡೆಸಿದಿಈ ಮಹಿಯೊಳು ನಿನಗಾರೈ ಸಾಟಿ1 ದೂರದಿಂದಸುರನ ಪುರವ[ನ್ನು] ನೋಡಿಭರದಿ ಶ್ರೀರಾಮರ ಸ್ಮರಣೆಯನು ಮಾಡಿಹಾರಿದೆ ಹರುಷದಿ ಸಂಹರಿಸಿ ಲಂಕಿಣಿಯನುವಾರಿಜಮುಖಿಯನು ಕಂಡು ಮಾತಾಡಿ 2 ರಾಮರ ಕ್ಷೇಮವ ರಮಣಿಗೆ ಪೇಳಿತಾಮಸ ಮಾಡದೆ ಮುದ್ರೆನೊಪ್ಪಿಸಿಪ್ರೇಮದಿಂ ಜಾನಕಿ ಕುರುಹನು ಕೊಡಲಾಗಆ ಮಹಾ ವನದೊಳು ಫಲವನು ಬೇಡಿ 3 ಕಣ್ಣ್ಣಿಗೆ ಪ್ರಿಯವಾದ ಹಣ್ಣ[ನು] ಕೊಯ್ದುಹಣ್ಣಿನ ನೆವದಲಿ ಅಸುರರ ಹೊಯ್ದುಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತಬಣ್ಣಿಸಿ ಅಸುರರ ಬಲವನು ಮುರಿದು4 ಶೃಂಗಾರವನದೊಳಗಿದ್ದ ರಾಕ್ಷಸರಅಂಗವನಳಿಸಿದೆ ಅತಿರಣಶೂರನುಂಗಿ ಅಸ್ತ್ರಗಳ ಅಕ್ಷಯಕುವರನಭಂಗಿಸಿ ಬಿಸುಟಿಯೊ ಬಂದ ರಕ್ಕಸರ 5 ದೂರ ಪೇಳಿದರೆಲ್ಲ ರಾವಣನೊಡನೆಚೀರುತ್ತ ಕರೆಸಿದ ಇಂದ್ರಜಿತುವನೆಚೋರಕಪಿಯನು ನೀ ಹಿಡಿತಹುದೆನ್ನುತಶೂರರ ಕಳುಹಿದ ನಿಜಸುತನೊಡನೆ 6 ಪಿಡಿದನು ಇಂದ್ರಜಿತು ಕಡುಕೋಪದಿಂದಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದಗುಡುಗುಡುಗುಟ್ಟುತ ಕಿಡಿಕಿಡಿಯಾಗುತನಡೆದನು ಲಂಕೆಯ ಒಡೆಯನಿದ್ದೆಡೆಗೆ 7 ಕಂಡನು ರಾವಣನುದ್ದಂಡ ಕಪಿಯನುಮಂಡೆಯ ತೂಗುತ್ತ ಮಾತಾಡಿಸಿದನುಭಂಡುಮಾಡದೆ ಬಿಡೆನೋಡು ಕಪಿಯೆನೆಗಂಡುಗಲಿಯು ದುರಿದುರಿಸಿ ನೋಡಿದನು 8 ಬಂಟ ಬಂದಿಹೆನೊಹಲವು ಮಾತ್ಯಾಕೊ ಹನುಮನು ನಾನೆ 9 ಖುಲ್ಲ ರಕ್ಕಸನೆತೊಡೆವೆನೊ ನಿನ್ನ ಪಣೆಯ ಅಕ್ಷರವ 10 ನಿನ್ನಂಥ ದೂತರು ರಾಮನ ಬಳಿಯೊಳುಇನ್ನೆಷ್ಟು ಮಂದಿ ಉಂಟು ಹೇಳೊ ನೀ ತ್ವರಿಯಾನನ್ನಂಥ ದೂತರು ನಿನ್ನಂಥ ಪ್ರೇತರುಇನ್ನೂರು ಮುನ್ನೂರು ಕೋಟಿ ಕೇಳರಿಯಾ11 ಕಡುಕೋಪದಿಂದಲಿ ಖೂಳರಾವಣನು ಸುಡಿರೆಂದ ಬಾಲವ ಸುತ್ತಿ ವಸನವನುಒಡೆಯನ ಮಾತಿಗೆ ತಡೆಬಡೆಯಿಲ್ಲದೆಒಡನೆಮುತ್ತಿದರು ಗಡಿಮನೆಯವರು 12 ತÀಂದರು ವಸನವ ತಂಡತÀಂಡದಲಿಒಂದೊಂದು ಮೂಟೆ ಎಂಬತ್ತು ಕೋಟಿಯಲಿಚಂದದಿ ಹರಳಿನ ತೈಲದೊಳದ್ದಿಸೆನಿಂದ ಹನುಮನು ಬಾಲವ ಬೆಳೆಸುತ 13 ಶಾಲು ಸಕಲಾತ್ಯಾಯಿತು ಸಾಲದೆಯಿರಲುಬಾಲೆರ ವಸ್ತ್ರವ ಸೆಳೆದುತಾರೆನಲುಬಾಲವ ನಿಲ್ಲಿಸೆ ಬೆಂಕಿಯನಿಡುತಲಿಕಾಲಮೃತ್ಯುವ ಕೆಣಕಿದರಲ್ಲಿ14 ಕುಣಿಕುಣಿದಾಡುತ ಕೂಗಿ ಬೊಬ್ಬಿಡುತಇಣಿಕಿನೋಡುತ ಅಸುರರನಣಕಿಸುತಝಣಝಣಝಣರೆನೆ ಬಾಲದಗಂಟೆಯುಮನದಿ ಶ್ರೀರಾಮರ ಪಾದವ ನೆನೆಯುತ 15 ಮಂಗಳಂ ಶ್ರೀರಾಮಚಂದ್ರ ಮೂರುತಿಗೆಮಂಗಳಂ ಸೀತಾದೇವಿ ಚರಣಂಗಳಿಗೆಮಂಗಳವೆನುತ ಲಂಕೆಯ ಸುಟ್ಟುಲಂಘಿಸಿ ಅಸುರನ ಗಡ್ಡಕೆ ಹಿಡಿದ 16 ಹತ್ತಿತು ಅಸುರನ ಗಡ್ಡಮೀಸೆಗಳುಸುತ್ತಿತು ಹೊಗೆ ಬ್ರಹ್ಮಾಂಡಕೋಟಿಯೊಳುಚಿತ್ತದಿ ರಾಮರು ಕೋಪಿಸುವರು ಎಂದುಚಿತ್ರದಿ ನಡೆದನು ಅರಸನಿದ್ದೆಡೆಗೆ 17 ಸೀತೆಯಕ್ಷೇಮವ ರಾಮರಿಗ್ಹೇಳಿಪ್ರೀತಿಯಿಂ ಕೊಟ್ಟಕುರುಹ ಕರದಲ್ಲಿಸೇತುವೆ ಕಟ್ಟಿ ಚತುರಂಗ ಬಲಸಹಮುತ್ತಿತು ಲಂಕೆಯ ಸೂರೆಗೈಯುತಲಿ 18 ವೆಗ್ಗಳವಾಯಿತು ರಾಮರ ದಂಡುಮುತ್ತಿತು ಲಂಕೆಯ ಕೋಟೆಯ ಕಂಡುಹೆಗ್ಗದ ಕಾಯ್ವರ ನುಗ್ಗುಮಾಡುತಿರೆಝಗ್ಗನೆ ಪೇಳ್ದರು ರಾವಣಗಂದು 19 ರಾವಣಮೊದಲಾದ ರಾಕ್ಷಸರ ಕೊಂದುಭಾವಶುದ್ಧದಲಿ ವಿಭೀಷಣ ಬಾಳೆಂದುದೇವಿ ಸೀತೆಯನೊಡಗೊಂಡಯೋಧ್ಯದಿದೇವ ಶ್ರೀರಾಮರು ರಾಜ್ಯವಾಳಿದರು 20 ಶಂಖದೈತ್ಯನ ಕೊಂದೆ ಶರಣು ಶರಣಯ್ಯಶಂಖಗಿರಿಯಲಿ ನಿಂದೆ ಹನಮಂತರಾಯಪಂಕಜಾಕ್ಷ ಹಯವದನನ ಕಟಾಕ್ಷದಿಬಿಂಕದಿ ಪಡೆದೆಯೊ ಅಜನಪದವಿಯ21
--------------
ವಾದಿರಾಜ
ಏನು ಮಹಿಮರೊ ನಮ್ಮ ಶ್ರೀ ಗುರುಗಳು ಶ್ರೀನಿಧಿಗೆ ಪರಮ ಪ್ರಿಯರೆನಿಸಿ ಮೆರೆಯುವರು ಪ. ಶಾಂತತ್ವವೆಂತೆಂಬ ಕವಚವನೆ ತೊಟ್ಟಿಹರು ದಾಂತತ್ವದಾ ನಡುಕಟ್ಟು ಕಟ್ಟಿಹರು ಸಂತೋಷ ಸುಖದಲಿ ಅಂತರಂಗದಿ ಹರಿಯ ಚಿಂತನೆಯ ಮಾಡುತಲಿ ಮುಕ್ತಿಪೊಂದಿಹರು 1 ವೈರಾಗ್ಯವೆಂತೆಂಬ ಆಯುಧವ ಧರಿಸಿಹರು ಸೇರಿದವರನು ಪೊರೆವ ಕಂಕಣವ ಕಟ್ಟಿ ನಾರಸಿಂಹನ ನಾಮ ಕರ್ಣಭೂಷಣ ಧರಿಸಿ ನಾರಾಯಣನ ಗುಣದ ಹಾರ ಧರಿಸಿಹರು 2 ಪರರಿಗುಪಕಾರವನೆಸಗುವ ಭುಜದ ಕೀರುತಿಯು ವರತತ್ವ ಅರುಹುವ ವನಮಾಲಿಕೆಯು ಸಿರಿ ಭಕ್ತಿಗುಣಗಳೆಂತೆಂಬೊ ವಸನಗಳು ಧರಿಸಿರುವ ಮಹಿಮರ ಸರಿಗಾಣೆ ಜಗದಿ 3 ಕುಂದದೆ ಭಕ್ತರನು ಪೊರೆಯುವ ಭಾರದ ಅಂದದಾ ಮುಕುಟ ಶಿರದಲ್ಲಿ ಧರಿಸಿ ತಂದೆ ಮುದ್ದುಮೋಹನದಾಸರೆಂದೆನಿಸುತ ಮಂದಜ್ಞ ಮನ ಪಾಪ ಪಾದುಕೆಯ ಮೆಟ್ಟಿಹರು 4 ಎಷ್ಟು ಹೇಳಲು ಸಾಧ್ಯ ಶ್ರೇಷ್ಠ ಗುರುಗಳ ಚರಿತೆ ಪಟ್ಟವಾಳ್ವರು ಜ್ಞಾನ ಸಾಮ್ರಾಜ್ಯವ ಕೆಟ್ಟ ಭವರೋಗವನು ಸುಟ್ಟು ಭಸ್ಮವ ಮಾಡಿ ಶ್ರೇಷ್ಠ ಗೋಪಾಲಕೃಷ್ಣವಿಠ್ಠಲನ ತೋರ್ವರು5
--------------
ಅಂಬಾಬಾಯಿ
ಏನೆಂದು ಕೊಂಡಾಡಲಿ ಮಾರುತಿರಾಯ ಪಹುಟ್ಟಿದಾಕ್ಷಣ ಕೆಂಪು ಕಿತ್ತಳೆ ಹಣ್ಣೆಂದುಸೂರ್ಯಮಂಡಲಿಕೆ ನೀ ಹಾರಿ 'ಡಿದ 'ೀರಾ 1ಶರಧಿಯ ಜಿಗಿದು ಸೀತೆಗೆ ಮುದ್ರಿಕೆ ಕೊಟ್ಟುಲಂಕಾ ಪಟ್ಟಣ ಸುಟ್ಟು ಜೀವೋತ್ತಮನು ನೀನು 2ಕಪಿವೇಷದಿಂದ ಮೆರೆದ ಗದೆಪಿಡಿದ ಸನ್ಯಾಸಿಭೂಪತಿ'ಠ್ಠಲನ ದಾಸಾಗ್ರೇಸರನು ನೀನು 3ಗಲಗಲಿಯ ಪ್ರಾಣದೇವರು
--------------
ಭೂಪತಿ ವಿಠಲರು
ಒಡಿಯಾ ನಿನ್ನಡಿಗಳಿಗೆ ಬಿಡದೆ ನಾ ನಮೋ ಎಂಬೆ ಕೊಡು ಎನಗೆ ದೃಢ ಪದವಿ ಕಡಲಶಯನಾ ಪ ಪಿತನ ತೊಡಿಯ ಮೇಲೆ ಕುಳಿತಿರಲು ಮಲತಾಯಿ ಅತಿ ರೋಷದಿಂದವನ ಹೊಯಿದೆಬ್ಬಿಸೆ ಖತಿಯಿಂದ ವನಕೆ ಪೋಗಿ ನಿನ್ನ ಪೂಜಿಸಲು ಮತಿವಂತನ ಮಾಡಿ ಧ್ರುವಪದವಿ ಕೊಡಲಿಲ್ಲವೆ 1 ತಂದೆ ಬಾಧಿಸೆ ಧೃತಿಗೆಡದೆ ನರಹರಿ ಗೋ ವಿಂದ ನಾರಾಯಣ ಕೃಷ್ಣ ವಿಷ್ಣು ಇಂದಿರಾರಮಣ ಇನಕುಲತಿಲಕ ಎಂದೆನಲು ಕಂದನಿಗೆ ಕೈವಲ್ಯಪದವಿ ಕೊಡಲಿಲ್ಲವೇ2 ಜಾತಿಧರ್ಮವ ಬಿಟ್ಟು ಅಜಮಿಳನು ಚಂಡಾಲ ಜಾತಿ ವಧುವಿಗೆ ಸೋತು ಕೆಟ್ಟು ಯಮನ ದೂತರನ ನೋಡಿ ಕಂಗೆಟ್ಟು ಮಗನನು ಕರಿಯೆ ಪ್ರೀತಿಯಲಿ ವೈಕುಂಠ ಪದವಿ ಕೊಡಲಿಲ್ಲವೇ 3 ವನಿತೆ ಪತಿವ್ರತವಾನಂತನನುಚರಿಸಿ ಬಂದಿರಲು ಮನದ ಖೇದವ ತಾಳಿ ಹರಿದು ಬಿಸುಟೆ ಮುನಿಪುಂಗ ಅಡವಿಯನು ತೊಳಲಿ ನೆಂದು ಬಿದ್ದಿರಲು ಪುನರ್ವಸು ಸ್ಥಾನವು ಕೊಡಲಿಲ್ಲವೆ4 ಶೌರ್ಯದಲಿ ಅಬ್ಧಿಯನು ಹಾರಿ ಲಂಕೆಯ ಸುಟ್ಟು ಧೂರ್ಯದಲಿ ರಕ್ಕಸರನೊರಿಸಿ ಬಿಸುಟೂ ಕಾರ್ಯದಲಿ ಹನುಮಂತ ನಿನ್ನ ಮೆಟ್ಟಿಸೆ ಒಲಿದು ಸೂರ್ಯಭಾಂದವಗೆ ಜನಪದವಿ ಕೊಡಲಿಲ್ಲವೆ 5 ಸೋದರಗೆ ಬುದ್ದಿಯನು ಪೇಳೆ ಕೇಳದೆಯಿರಲು ಪಾಧಾರಿ ದಾಟಿ ನಿಮ್ಮ ಸೇವಿಸಿ ಕಾದಿ ರಾವಣನ ಛೇದಿಸಿ ಲಂಕಾಪುರ ಪದವಿ ಪರಿಯಂತ ಕೊಡಲಿಲ್ಲವೆ 6 ಚಿತ್ತದೊಳು ಆವಾಗ ನಿನ್ನ ಧ್ಯಾನವ ಮಾಡಿ ವಿತ್ತಾದಿ ದಾನಗಳು ಮಿತಿಯಿಲ್ಲದೇ ಅತ್ಯಂತ ಕೊಡುವವನ ಮೂರು ಪಾದವ ಬೇಡಿ ಭಕ್ತಗೆ ನಲಿದು ಸುರಪದವಿ ಕೊಡಲಿಲ್ಲವೆ 7 ಮಾನಿನಿಯ ಸೀರಿಯನು ಸಭೆಯೊಳಗೆ ದುರುಳರು ಅಭಿ ಮಾನ ಭಂಗವ ಮಾಡಿ ಸುಲಿವುತಿರಲು ಶ್ರೀನಾಥ ಕೇಶವ ಮುಕುಂದನೆಂದು ಮೊರೆ ಇಡೆ ನೀನರಿತು ಅಕ್ಷಯಾಂಬರ ಕೊಡಲಿಲ್ಲವೆ8 ಬಡತನ ಉಳ್ಳವನಾಗಿ ಕ್ಲೇಶದಲಿ ಸುಧಾಮ ನಡುಗುತಲಿ ನಿನ್ನ ಪಟ್ಟಣಕೆ ಬರಲು ಹಿಡಿತುಂಬಿ ಅವಲಕ್ಕಿಗೆ ಸಂತೃಪ್ತನಾಗಿ ಕಡೆಯಿಲ್ಲದೈಶ್ವರ್ಯ ಪದವಿ ಕೊಡಲಿಲ್ಲವೆ 9 ಸರಸಿಯೊಳು ಬಾಲಕನ ನೆಗಳಿ ಪಿಡಿದು ನುಂಗೆ ಗುರುದಕ್ಷಿಣವ ಬೇಡೆ ಸಾಂದೀಪನು ಭರದಿಂದ ಪೋಗಿ ಕೃತಾಂತನೊಳು ಭೂ ಸುರಗೆ ಸುಪುತ್ರ ಪದವಿ ಕೊಡಲಿಲ್ಲವೆ 10 ಭುಜಕರೆಲ್ಲರು ನಿನಗೆ ಭಾಗ್ಯವನು ಕೊಡಲಿಲ್ಲ ಭಜಿಸಿದರವರು ತಮ್ಮ ತಕ್ಕ ತೆರದಿ ಭಜಿಸುವೆನು ನಿನ್ನ ತಕ್ಕಂತೆ ದೃಢ ಪದವಿಕೊಡು ಸಿರಿ ವಿಜಯವಿಠ್ಠಲನೆ11
--------------
ವಿಜಯದಾಸ
ಕಣ್ಣಿನಾಕರಿರಟ್ಟ ಸುಟ್ಟುಬೂದಿಯ ಮಾಡಿ ನಿನ್ನ ಈಕ್ಷಿಪ ಶುಭ್ರ ದೃಷ್ಟಿಯ ನೀಡೊ ಪ ಪುಣ್ಯಪುರುಷನೆ ಬಿಂಬಪೂರ್ಣ ಮಂಗಳ ಶೌರಿ ಧನ್ಯ ಮಾಡೆನ್ನ ಮುನ್ನ ನಿಲ್ಲಲಿ ಸÉಳಿಯೊ ಅ.ಪ ವಿಷಯಸುಖ ದುರ್ಗುಣದ ಪಂಕದಲಿ ಮನನೆನೆದು ವಿಷಕ್ರಿಮಿಯಂತಿಹದೊ ಇದಕೆ ಮದ್ದು ಸನ್ನುತ ಹರಿಯೆ ವಿರಜ ಮಾಡೊ ಮನವ 1 ಭಾವಸೂತ್ರಗಳಿಂದ ವಿಧಿಭವರೆ ಮೊದಲಾದ ಜೀವರನು ಆಡಿಸುವ ಶ್ರೀಶ ಎನ್ನ ಪಾವನ್ನ ಗುಣನಿಧಿಯೆ ಶ್ರೀ ವೇಣುಗೋಪಾಲ ದೇವ ಅಜಮಿಳಪಾಲ ಪೂತ ಭಾವದಿ ನಿಲಿಸೊ 2 ಕಾತುರವಪಡುತಿಹೆನೊ ಅಸುರಕರ್ಮದಿ ಸಿಕ್ಕಿ ಪಾತಕಿಗಳ ಸಹವಾಸ ಬಿಡಿಸಿ ಕಾಯೊ ಆತುಮಕೆ ಅತಿಮಿತ್ರ ಜಯೇಶವಿಠಲ ನಿನ್ನೊಲುಮೆಪಾತ್ರರಲಿ ಇಟ್ಟೆನ್ನ ಕಾಪಾಡು 3
--------------
ಜಯೇಶವಿಠಲ
ಕೆಟ್ಟೆ ಕೆಟ್ಟೆ ಕೆಟ್ಟೆ ಕೃಷ್ಣ ದೃಷ್ಟಿಕೊಟ್ಟು ಕೈಯ ಪಿಡಿಯೋ ಪ ಮೂರ್ತಿ ಬಿಟ್ಟರೆನ್ನ ಕಷ್ಟಬಿಡಿಸೆಯಾರ ಬೇಡಲೋ ಅ.ಪ ಕಟ್ಟಿತಾಳಿ ತೊರೆಯೆ ಗಂಡ ಕಷ್ಟವಲ್ಲೆ ಸತಿಗೆ ಪೇಳು ಶಿಷ್ಠ ದೊರೆಯೆ ದಾಸನೆಂಬಿ ಶ್ರೇಷ್ಠತಾಳಿ ಕಂಠದಲ್ಲಿದೆ ಬಿಟ್ಟಿ ಏನೋ ಬಿರದು ಎಲ್ಲ ಕಟ್ಟಿಕೊಂಡು ಮೆರೆಯುತಿಹುದು ಕೆಟ್ಟದೂರು ತಟ್ಟದಿರದು ಭ್ರಷ್ಠನೆನಿಸಬೇಡೊ ಎನ್ನ 1 ಎಡವಿ ಬೀಳೆ ಮಗುವು ತಾಯಿ ಕಡಿವಳೇನು ಪೊಡವಿಗೊಡೆಯ ಅಡಿಯ ಪಿಡಿದ ದಾಸನಾನು ಬಡವನಾದರೇನೂ ನುಡಿಯೋ ಭಾರ ನಿನಗೆ ತಡವು ಯಾಕೋ ಬರಿದೆ ಬಿಂಕ ಸಡಲಿ ಸುತ್ತ ಮಾಯಪಾಶ ದೃಢವ ಮಾಡು ಭಕ್ತಿ ವಿರಕ್ತಿ 2 ದೋಷಿಯಾದರೇನು ನಾನು ದೋಷದೂರನಲ್ಲೆ ನೀನು ನಾಶಮಾಡು ಬೀಸಿದೃಷ್ಠಿ ಮೀಸಲಲ್ಲೆ ನಿನಗೆ ಸ್ವಾಮಿ ಈಶ ಕರುಣಕುಂಟೆ ಮೇರೆ ಓಸು ಜಗದ ಭಾಸವೆಲ್ಲ ಶ್ರೀಶ ನೀನು ಕೊಟ್ಟರುಂಟು ದಾಸಪೋಷ ಶ್ವಾಸನಾಣೆ 3 ಗಂಟು ಕಳ್ಳ ನೀನೆ ಸತ್ಯ ಭಂಟನೆನ್ನ ಸ್ವತ್ತು ನೀನೆ ನೆಂಟ ಬೇರೆ ಇಲ್ಲದಿರಲು ಅಂಟಿಸಿರುವೆ ವಿಷಯ ಕಂಟಕ ತಂಟಿ ಬಿಟ್ಟು ಈಗಲೇನೆ ಅಂಟಿಕೊಳ್ಳೊ ಮನದಿ ಗಟ್ಟಿ ಕುಂಟು ಕಲೆಯ ಸುಟ್ಟುಬಿಟ್ಟು ಉಂಟು ಮಾಡು ಎಲ್ಲ ನನಗೆ 4 ಬೆಟ್ಟದೊಡೆಯ ಶ್ರೀನಿವಾಸ ಎಷ್ಟರವನೊ ನಾನು ಭೃತ್ಯ ಪಾದ ಪಿಡಿದಿಹೆ ಸುಟ್ಟು ಸುಟ್ಟು ಭವದಿ ಬೆಂದು ಇಷ್ಟು ನುಡಿದೆ ಜಯಮುನೀಂದ್ರ ಶ್ರೇಷ್ಟಹೃಸ್ಥಮಧ್ವ ಶ್ರೀ ಪ್ರೇಷ್ಟದೈವ ಕೃಷ್ಣವಿಠಲ5
--------------
ಕೃಷ್ಣವಿಠಲದಾಸರು
ಕೊಡು ಕೊಡು ವರವ ಕಿಂಕರ ನಾನಲ್ಲೆ ಪಿಡಿಕೈ ಹೂವಿನ್ಹಡಗಲಿ ಹನುಮಂತರಾಯ ಪ ನೂರುಗಾವುದ ಶರಧಿಯ ದಾಟಿ ಲಂಕೆ ಊರು ಸುಟ್ಟು ಬಂದ ಧೀರ ನೀನಲ್ಲೆ 1 ಕ್ರೂರ ಕೌರವರ ಮಡುಹಿ ಕರಿಪತಿ ರಾಜ್ಯ ರಾಯ ಧರ್ಮಗೆ ಪಟ್ಟ ಕಟ್ಟಿದೆಯಲ್ಲ 2 ಮಾಯಾವಾದಿಗಳ ಮರ್ದಿಸಿ ಮಧ್ವಮುನಿಯೆ ಭೀಮೇಶಕೃಷ್ಣಧಿಕೆಂಬೊ ಬಿರುದೆತ್ತಿದ್ಯಲ್ಲ 3
--------------
ಹರಪನಹಳ್ಳಿಭೀಮವ್ವ
ಕೊರವಂಜಿ ಪದ ಬಾರೆ ಸತ್ಯಭಾಮೆ ತೋರೆ ನಿಮ್ಮ ಸುಹಸ್ತದ ಠೇವೆ ಧ್ರುವ ಸರ್ಕನೆ ಬಾರವ್ವಾ ಅರಿಕ್ಯುಳ್ಳ ಗರತಿ ಕರವ ಕೊರವತಿ ತಾರ್ಕಣ್ಯ ಬರುತಾದ ಪರಮ ಸುವಾರ್ತಿ ತರ್ಕರಹಿತ ವಸ್ತು ಕರಕೊ ಸುಮೂರ್ತಿ 1 ಓಯವ್ವ ಅವ್ವ ಬಾರೆ ನಮ್ಮವ್ವ ದೈವುಳ್ಳ ಗರತಿ ನೀನವ್ವ ದೈವ ಬರುದೆ ನಿನ್ನೊಳಗವ್ವ ಕೈದೋರೆ ಕೈದೋರೆ ಕೈದೋರೆ ನಿಮ್ಮ 2 ಕೈದೋರೆ ಕೈದೋರೆ ಕೈದೋರೆ ನಿಮ್ಮ ಕೈಯ ಲಕ್ಷಣ ನೋಡಿ ಹೇಳುವೆನಮ್ಮ ಅಯ್ಯ ಬರುತಾನೆ ಆಶೇಲಿ ನಿಮ್ಮ ಕೈಗೊಟ್ಟು ಕೇಳೆ ನಿಜ ಗುಹ್ಯವರ್ಮ 3 ಸುಳ್ಳು ಮಾತನಾಡಿ ಒಡಲ ಹೊರಳವಲ್ಲ ಬಲ್ಲಷ್ಟು ಬೊಗಳುವೆ ವಿಷಯ ದಾಸ್ಯವಳಲ್ಲ ಉಳ್ಳಷ್ಟು ಹೇಳುವೆ ಕೇಳೆ ಶಿವ ಸೊಲ್ಲ ಹೇಳುವ ಮಾತಿದು ಘನ ಗುರು ತಾ ಬಲ್ಲ 4 ಕೊರವಂಜಿ ಮಾತಿದು ಕಿವಿಗೊಟ್ಟು ಕೇಳಮ್ಮ ಬರುತಾನ ಉದರಲಿ ಹುಟ್ಟಿ ಸಗುಣ ನಿಮ್ಮ ತಾರಿಸುವ ಸ್ವಾಮಿ ಪತಿತ ಪಾವನ ನಿಮ್ಮ ಹರಷದೋರುವ ನಿತ್ಯಾನಂದೋ ಬ್ರಹ್ಮ 5 ಎಂದ ಮಾತನೆ ಕೇಳಿ ಬಂದಳು ಭಾವೆಮ್ಮ ಚೆಂದ ಉಳ್ಳ ಸುರಸ ವಾಕ್ಯ ಕೇಳಿದಳೊಮ್ಮೆ ಬಂದು ಹರುಷದಿ ಪೂರ್ಣ ಸಂದಿಸಿಟ್ಟಳು ಪ್ರೇಮ ಒಂದೆ ನಿಜಸುಮಾತ್ಹೇಳ್ಯೆಂದಳು ನೇಮ 6 ಎಲ್ಲಿಂದ ಬಂದೆವ್ವ ಸೊಲ್ಲ ಬೀರುತ ಶಿವ ಬಲ್ಲ ಮಹಿಮಳೆಂದು ನಾನರಿಯೆನವ್ವ ಇಲ್ಲೆವೆ ಕಂಡೆ ನಾ ಸೊಲ್ಲಿನ ಮಹಿಮರು ಎಲ್ಲ ನೆಲೆನಿಭೇಳೌವ್ವ 7 ಸರಿಯ ಬಂದರ ನಿನ್ನ ಮರಿಯೆನವ್ವ ಎಂದು ಖರೆ ಉಳ್ಳ ಮಾತನೆ ಹೇಳೆ ನಿಜ ಒಂದು ಹಿರಿಯರಗೀ ಮಾತು ಸರಿಯ ಬಾವ್ಹಾಂಗಿಂದು ಬೀರವ್ವ ನಿಜಸಾರವಿಂದು 8 ಲಕ್ಷ ಎಂಬತ್ತುನಾಲ್ಕು ಗ್ರಾಮವ ನೋಡಿ ಲಕ್ಷಿಸುತ ಬಂದ ಲಕ್ಷಣ ನಿಜಗೂಡಿ ಲಕ್ಷುಮಿ ಕರದೋರುತದ ನಿಮ್ಮೊಳೊಡಮೂಡಿ ಅಕ್ಷಯಾನಂದ ಬರುತಾನೆ ಇದರಿಡಿ 9 ಕರ ಕೊಟ್ಟಳು ಸುಶೀಲೆ ವರ ಕೃಪೆಯಲಿ ಕೊರವಂಜಿ ಮಾತಲಿ ಅರಿತಳು ತಾ ತನ್ನಲಿ ಪರಮಾನಂದ ಲೀಲೆ ಬೆರದಳು ಕೇಳಿ 10 ನುಡಿಯುವ್ವ ಸಲಲಿತವಾದ ನಿಜವಾಕ್ಯ ಬಡುವಂತೆ ಹರುಷವು ನೋಡಿ ತ್ರಯಲೋಕ್ಯ ಬಡಸವ್ವ ನನಗಿಂದು ಇದೆ ನಿಜ ಮುಖ್ಯ ಕುಡಲಿಕ್ಕೆ ನಿನಗಿದು ಶಕ್ಯ 11 ಮನದಂತೆಯಾದರ ನೆನದೇನವ್ವ ನಿಮ್ಮ ಅನುಕೂಲಾಗುವ ಪುಣ್ಯ ಪೂರ್ವಾರ್ಜಿತ ನಮ್ಮ ಸಾನುಕೂಲಾಗುವಂತೆ ಬೇಡಿಕೊಳ್ಳಮ್ಮ ನೆನಿ ಎಕನಾತಿ ಎಲ್ಲಮ್ಮ 12 ಒಡಮೂಡಿ ಬಂದರ ಉಡಿಯ ತುಂಬೇನವ್ವ ಜಡಿತಾಭರಣದುಡಿಗಟ್ಟೆ ನಿನಗವ್ವ ಹಿಡಿಯದೆ ಅನುಮಾನ ನುಡಿ ನಿಜ ಸಾರವ್ವ ಕುಡಲಿಕ್ಕೆ ನಿಧಾನದವ್ವ 13 ಕೈಯ ಲಕ್ಷಣದಲಿ ಶ್ರೇಯ ತೋರುತಲ್ಯದ ದಯ ಉಳ್ಳ ಮಹಿಮದ ಸೋಹ್ಯ ಬೀರುತಲ್ಯದ ಭಯವಿಲ್ಲದ ಭಾಗ್ಯ ಅಚಲ ತಾನಾಗ್ಯದ ಜಯಜಯಕಾರ ಭಾಸುತದ 14 ಪುಣ್ಯ ಪ್ರಭೆಯ ಚೆನ್ನಾಗಿ ಭಾಸುತಲ್ಯದೆ ಕಣ್ಣಿಗೆ ಸುಚಿನ್ಹ ಹೊಳವುತದೆ ಚಿನ್ನುಮಯದ ಸುಪುತ್ಥಳಿ ಬರುತದೆ ಬಣ್ಣ ಬಣ್ಣದ ಸುಖ ಬೀರುತದೆ 15 ಅಂಗದೊಳಗ ನಿಮ್ಮ ರಂಗ ಬರುತಾನಮ್ಮ ಕಂಗಳಿಗಿದರಿಡುತದೆ ಹರುಷವು ನಿಮ್ಮ ಭವ ಬಂಧದ ದುಷ್ಕರ್ಮ ಮಂಗಳಕರಾನಂದೊ ಬ್ರಹ್ಮ 16 ನಿನ್ನ ಭಾಗ್ಯಕ ಸರಿ ಇಲ್ಲೆ ಸಂಜೀವನಿ ಚೆನ್ನಾಗಿ ಕೇಳೆ ನೀ ಭಾವೆಗುಣಮಣಿ ಧನ್ಯವಾಯಿತು ನಿನ್ನಂದೆವೆ ಯತಿಮುನಿ ನಿನ್ನೊಳಗುಂಟು ದೇವಶಿಖಾಮಣಿ 17 ಭಾವೆ ನಿನ್ನಿಂದ ಪಾವನ್ನವಾಯಿತು ಜಗ ದೇವಾಧಿದೇವ ಮೂಡುವ ನಿನ್ನೊಳಗೀಗ ಕಾವಕರುಣ ಪ್ರತ್ಯಕ್ಷವಾಗುವ ಯೋಗ ಸುವಿದ್ಯ ಭಾಸುವ ದಿವ್ಯಭೋಗ 18 ಉಂಡ ಊಟ ಕಂಡ ಕನಸು ಪಿಂಡಲಕ್ಷಣ್ಹೇಳುವೆ ಮಂಡಲೊಳಗ ಮಂಡಿಸಿಹ್ಯ ಮಹಿಮೆ ನೀನಗ್ಹೇಳುವೆ ಹಿಂಡದೈವದೊಡಿಯ ನಿನ್ನೊಡಲೊಳಗ ತಾಳುವೆ ಪಂಡಿತರಿಗೆ ಪ್ರಿಯವಾದಾಗ್ಯ ಖಂಡನೀನೆ ಬಾಳುವೆ 19 ನೀನೆ ಜಗಕ ತಾರಿಸುವ ದೈವದೋರಿಕುಡುವೆ ನೀನೆ ಭಕ್ತಜನರ ಜನ್ಮಸಾರ್ಥಕವು ಮಾಡುವೆ ಜ್ಞಾನಗಮ್ಯವಾದ ವಸ್ತುಹಿಡದು ನೀನೆ ಕುಡುವೆ ನಿತ್ಯ ಆಡುವೆ 20 ಅಮ್ಮ ನಿಮ್ಮೊಳು ಘಮ್ಮನ್ಹೊಳುವ ತಮ್ಮ ಬರುತಾನ ಸುಮ್ಮಾನಿಹ್ಹಾ ಸಮೀಪಲೆ ಧಿಮ್ಮ ಹಿಡಿದ ಹಮ್ಮಿನೊಳು ಘುಮ್ಮವಾದರು ಬ್ರಹ್ಮಾದಿಗಳೆ ನಮ್ಮ ನಿಮ್ಮದೆಂಬು ಭ್ರಮೆ ಸುಮ್ಮನ್ಯಾಕಿದೊ ಅಮ್ಮಕೇಳೆ 21 ಬಯಕಿ ಲಕ್ಷಣ ನಿನ್ನ ಹೇಳ್ಹೆನವ್ವಾ ತಾಯಿ ಮಾಯಿಕ ಗುಣ ಸುಟ್ಟು ತಿಂದೇನೆಂಬುದು ಬಾಯಿ ಕೈಕಚ್ಚಿಲೆ ಶುದ್ದಿಲ್ಲಾದವರ ತಾಳದು ಸೋವಿ ಐರಾವತ ಬರುತಾನ ನಿನ್ನೊಳು ಪನ್ನಂಗಶಾಯಿ 22 ಬಾಹ್ಯನಿಷ್ಟರ ಕಂಡು ಬದಿಗೆ ಬರಗುಡಿ ನೀನು ಅಹಂಭಾವಕ ಹೇಸಿ ವಾಕರಿಸುವೆ ನೀನು ಗುಹ್ಯ ಹೇಳುವೆ ನಾನು ಸಾಹ್ಯ ಮಾಡುವ ಶ್ರೀಗುರು ತಾನು 23 ಕಾಮಕ್ರೋಧ ಕರದು ತಿಂದೇನೆಂಬುದು ಬಯಕಿ ನೇಮದಿಂದಲಿ ಮದ ಮತ್ಸರನೆ ನೂಕಿ ಪ್ರೇಮವಿಲ್ಲದವರ ಎಂದಿಗಾದರ ಸೋಕಿ ವರ್ಮಿಕರಿಗೆ ನೀ ಕೈಯಗುಡುವಾಕಿ 24 ಆಸಿ ಎಂಬುದು ಅಟ್ಟುಅರದೇನೆಂಬುದು ಬ್ಯಾಗ ಹುಸಿನುಡಿವೆಂಬದು ಹುರವಾದೀಗ ಹಸನಾದ ಬಯಕೀದು ಋಷಿ ಮುನಿಗಳ ಯೋಗ ಲೇಸು ಲೇಸು ನಿನ್ನ ಅಂತರಂಗ 25 ಧನ್ಯವಾದ ರಾಜಯೋಗವ ಬಯಸುದು ಉನ್ಮನವಾಗಿ ಊರ್ಜಿತವಾದೇನೆಂಬುದು ಸ್ವಾನುಭವದ ಸುಖ ಸೂರ್ಯಾಡೇನೆಂಬುದು ಭಿನ್ನ ಭೇದಕ ಕಣ್ಣ ತ್ಯರಿಯದಿದು 26 ವಾಸುದೇವನ ಭಕ್ತಿ ಆಶ್ರೈಸೇನೆಂಬುದು ಶ್ವಾಸೋಚ್ಛ್ವಾಸಕ ಒಮ್ಮೆ ಬಯಸುವುದು ವಿಷಯ ಪ್ರಪಂಚಕ ಹೇಸಿ ತಾ ಜರೆವುದು ಕುಸುಮನಾಭನ ಸೇವೆ ಇಚ್ಛಿಸುವದು 27 ಒಮ್ಮೆ ಸರಸ್ವತಿ ಕೂಡ ಸರಸಾಡೇನೆಂಬುದು ಒಮ್ಮೆ ಲಕ್ಷುಮಿ ಕೂಡ ಲೋಲಾಡೇನೆಂಬುದು ಒಮ್ಮೆ ಪಾರ್ವತಿ ಕೂಡ ಪವಡೀಸೆನೆಂಬುದು ಒಮ್ಮೆ ಏನುನೊಲ್ಲ್ಯೆನೆಂಬುದು 28 ಹೇಳೇನೆಂದರೆ ನಿನ್ನ ಬಯಕಿಯ ಉಲ್ಹಾಸ ತಿಳಿಯದಿನ್ನೊಬ್ಬರಿಗ ಗರ್ಭದ ಸುವಾಸ ಉಲವುತದೆ ನಿನ್ನೊಳು ಸುಪ್ರಕಾಶ ಥಳಥಳಗುಡುತಿಹ್ಯ ಬಾಲವೇಷ 29 ಧನ್ಯ ಧನ್ಯ ನಿನ್ನ ಗರ್ಭಹೊಳುವ ಹೊಂಬಣ್ಣವು ಒಡಲು ನಿನ್ನ ಪುಣ್ಯ ಪಾವನ್ನವು ಧನ್ಯ ಧನ್ಯ ನಿನ್ನ ದರುಷಣದ ಜೀವನವು ಧನ್ಯ ಧನ್ಯ ನಿನ್ನ ಕಂಡ ಜನರ ಜೀವಪ್ರಾಣವು 30 ಭಾವೆ ನಿನ್ನಿಂದ ಖ್ಯಾತಿಪಡೆದ ಪ್ರಹ್ಲಾದನು ದೇವ ದೇವ ಬಂದು ಸ್ತಂಭದೊಳು ಮೂಡಿದನು ಆವಾವ ಠಾವಿನೊಳು ಬಂದು ರಕ್ಷಿಸಿದನು ಜೀವ ಜೀವ ತಾನೆ ಅಗಿ ಪ್ರಾಣನುಳಹಿದನು 31 ನಿನ್ನ ಬಲಗೊಂಡು ದ್ರೌಪದಿಯ ಖ್ಯಾತಿಪಡೆದಳು ಪುಣ್ಯ ಉಳ್ಳ ಮಹಿಮನಂಘ್ರಿ ಕಣ್ಣಾರ ಕಂಡಳು ಚೆನ್ನಾಗಿ ಬಂದು ಸ್ವಾಮಿ ಲಜ್ಜೆಗಾಯ್ದು ಸಭೆಯೊಳು ಬಣ್ಣ ಬಣ್ಣ ವಸ್ತ್ರ ಪೂರಿಸಿದಾನೇಕಗಳು 32 ಸ್ತುತಿಯು ಮಾಡಲು ನಿನ್ನ ಯತಿಮುನಿಗಳವಲ್ಲ ಗತಿಯ ಪಡೆದರು ಸಕಲ ಮುನಿಜನರೆಲ್ಲ ಅತಿ ಹರುಷವು ಕೂಡಿದರು ಜಗದೊಳಗ್ಯಲ್ಲ ಹಿತದೋರುತಿದೆ ವಸ್ತು ಮಯವೆಲ್ಲ 33 ಹೊಳೆವ ಸುಳಿವ ಚೆಲುವ ನಿನ್ನೊಳಗ ನಲುವನೆ ಕಳವಿಲೊಯಿದ ವೇದನುಳುಹಿದವನು ಬೆಳೆವನೆ ಭಾರ ತಾಳಿದವನು ಉಲುವನೆ ನೆಲವ ಗೆದ್ದ ಬಲಿಯು ನಿನ್ನೊಳಗೆ ಒಲುವನೆ 34 ಸೀಳಿ ದೈತ್ಯನ ಕೊಂದ ಶೂರ ಘಮಗುಡತಾನೆ ಅಳದು ಭೂಮಿಯ ಕೊಂಡು ಬೆಳದವ ಬರುತಾನೆ ತಿಳಿದು ಪಿತರ ಸೂಡುಕೊಂಡವ ಬರುತಾನೆ ಬಲುಪರಾಕ್ರಮದವ ತೋಳುತಾನೆ 35 ತಾಂ ಸಂಚರಿಸ್ಹ್ಯಾನ ನಿನ್ನೊಳಗ ಮೂಡಿ ಬರುತಾನೆ ಬ್ಯಾಗೆ ನಗುತ ಬರುತಾನೆ ಈಗ ಕೈಯಗೊಟ್ಟು ಬರುತಾನೆ ನಿನಗೆ 36 ಸಾಧೀಸಿ ಕೇಳೆ ಕಿವಿಗೊಟ್ಟು ಒದುಗುವ ತಾಂ ಇದರಿಟ್ಟು ಉದಿಯವಾಗುವ ದಯವಿಟ್ಟು ಸದ್ಬಕ್ತರಿಗೆ ಕೈಯಗೊಟ್ಟು 37 ಹುಟ್ಟುವ ಶಿಶುವಿನ ಘಟಣಿಯ ಬಹಳ ಗುಟ್ಟೊಡಿಯಲು ತಾಂ ಮುಟ್ಟನು ತಾಳ ಕಟ್ಟುವ ದೈತ್ಯರ ದಿಟ್ಟ ಮಾ ಸಾಳ ದೃಷ್ಟಿಸಿ ನೋಡುವ ನಿಷ್ಠರ ಮೇಳ 38 ಶಿಶುವಿನ ಲಕ್ಷಣ ಬಲು ಅಗಾಧ ಪರಿ ಮಾಟವು ಋಷಿಗಳ ಬೋಧ ಹಸು ನೀರಡಿಸರವುದು ಶ್ರೀಪಾದ ಬಸುರಿನ ಬಯಕಿದು ಬಲುಸುಸ್ವಾದ 39 ಘಮಗುಡುತದೆ ಅನಾಹತದ ಧ್ವನಿಯು ಕ್ರಮ ತಿಳಿವದು ಸುಯೋಗದ ಮನಿಯು ಧಿಮಿಗುಡುತದ ಆನಂದದ ಖಣಿಯು ಭ್ರಮ ಬಿಡಿಸುವ ಘನ ಚಿಂತಾಮಣಿಯು 40 ಹುಟ್ಟಿ ಬರುತಾನಿವ ಶಿಷ್ಟರ ಮನಿಲಿವ ದುಷ್ಟ ಮರ್ದನ ದೇವ ನಿಷ್ಠರಿಗೆ ಕಾವ ಎಷ್ಟೆಂದ್ಹೇಳಲವ್ವ ಸೃಷ್ಟಿಗಧಿಕನಿವ ಮುಟ್ಟಿ ಮುದ್ರಿಸುವ ದಿಟ್ಟೆದೆ ಕೂಸವ್ವ 41 ವರ್ಣಿಸಲಾಗದು ಶಿಶುವಿನ ವಿವರಣ ದಣಿಯಿತು ಕೊಂಡಾಡಿ ವೇದಸುಪುರಾಣ ಖೂನ ತಿಳಿಯದು ತಾನು ಶಾಸ್ತ್ರಕ ಸಂಪೂರ್ಣ ದ್ಯಾನ ಮೋನಕ ದೂರಗಮ್ಯ ಸ್ಥಾನ 42 ಗುಟ್ಟು ತಿಳಿಯದ ವಸ್ತು ಹುಟ್ಟಿಬಾಹುದು ಕೇಳಿ ಉಂಟಾಗುವದು ನಿನ್ನೊಳು ನೆನದಾಗಳೆ ಘಟ್ಯಾಗಿ ಅನುಭವಿಸುತ ನೀನೆ ಬಾಳೆ ದೃಷ್ಟಿಯೊಳೀಗುಟ್ಟು ಆರೀಗ್ಹೇಳೆ 43 ಬಸುರು ಬಯಕೆಂಬುದು ಹೆಸರಿಸಲಳವಲ್ಲ ಹಸನಾಗಿ ಅನುಭವಿಸುವ ಪುರುಷನೆ ಬಲ್ಲ ವಾಸುದೇವನ ಕಾಣದಿಹ್ಯದೆ ಕಣ್ಣಲ್ಲ ಆಸಿ ಅಳಿದವರೆ ತಾಂ ತಿಳಿದರೆಲ್ಲ 44 ಹುಟ್ಟುವ ಲಕ್ಷಣ ಕೇಳೆ ನೀ ಕಿವಿಗೊಟ್ಟು ಮುಟ್ಟಿ ಮುದ್ರಿಸಿಹ್ಯ ಗುರು ಕಟಾಕ್ಷವ ಕೊಟ್ಟು ಇಟ್ಟುಕೊ ಈ ಮಾತು ಆರಿಗ್ಹೇಳೆ ಬಿಟ್ಟು ಗಂಟು ಕಟ್ಟಿದ ಮಾತು ಹೇಳೆಬಿಟ್ಟು 45 ಆಲಕ್ಷವೆಂಬ ಸುನಕ್ಷತ್ರದಲಿ ಪುಟ್ಟಿ ಸುಲಕ್ಷಣದಲಿ ಬರುತಾನೆ ಜಗಜಟ್ಟಿ ನೆಲಯುಗೊಂಡಾಡಿಸಿ ಮನಮುಟ್ಟಿ 46 ಜನ್ಮನಾಮೆಂಬುದು ಕೂಸಿನ ನಿರ್ಗುಣ ಸಮಸ್ತರಿಗೆ ನಡವ ನಾಮವೆ ಸಗುಣ ಬ್ರಹ್ಮಾನಂದದಿ ಲೋಲ್ಯಾಡುವ ಪರಿಪೂರ್ಣ ಕಮಲನಯನ ಸ್ವಾಮಿ ರಮಾರಮಣ 47 ಕೂಸು ಎಂದರ ತಾನು ಕೂಸು ಎನಲಾಗದು ವಾಸವಾಗ್ಯಾಡುದು ವಿಶ್ವಲಿದು ಹೆಸರನೇಕಪರಿಯಲಿ ಕರಿಸಿಕೊಂಡು ಲೇಸು ಲೇಸಾಗಿ ತಾ ಆಡುವುದು 48 ಹಿಂದ ಅಡಿದ ಆಟ ಮಂದದೆ ಆಡುದು ಎಂದಿಗ್ಯದರ ಗುಟ್ಟು ತಿಳಿಯಗುಡುದು ಒಂದಿಸಿದವರ ತನ್ನೊಳು ಕೂಡಿಕೊಂಬುದು ಒಂದೆ ವಸ್ತುವಾಗಿ ತೋರುವುದು 49 ಹೇಳುವೆ ಕೇಳೆ ಶಿಶುವಿನ ಆಟ ತಿಳಿಯಲು ಜಗದೊಳು ಬಲು ಅವ್ಹಾಟ ನೆಲಿ ತಿಳಿದವರಿಗೆ ತೋರುದದು ನೀಟ ನಲಿನಲಿದಾಡುವ ಸಲಲಿತದಾಟ 50 ಒಮ್ಮೆ ನೀರನೆ ಚಲಿಪಿಲಿ ಮಾಡುವ ಒಮ್ಮೆ ಬಾಗಿ ಜಗನೆಗುವ ಒಮ್ಮೆ ಹಲ್ಲಿಲೆ ಬೇರನೆ ಅಗಳುವ ಒಮ್ಮೆ ಬರುತಲಿ ಗುರುಗುಡುವ 51 ಒಮ್ಮೆ ಬಲು ಗಿಡ್ಡಾಗಿ ತೋರುವ ಒಮ್ಮೆ ಪರಾಕ್ರಮ ಹಿಡುವ ಒಮ್ಮೆ ವನದೊಳಗಾಡುತ ಹೋಗುವ ಒಮ್ಮೆ ಕಡವ ಬೆಣ್ಣೆಯ ಮೆಲುವ 52 ಒಮ್ಮೆ ಬತ್ತಲೆ ತ್ರಿಪುರದಲಿ ಸುಳಿವ ಒಮ್ಮೆ ಏರುವ ತಾ ಹಯವ ಒಮ್ಮೊಮ್ಮಾಗುವ ತಾನೆವೆ ಸಗುಣವ ಒಮ್ಮೊಮ್ಮಾಗುವ ನಿರ್ಗುಣವ 53
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೋಲು ಕೋಲು ಕೋಲು ಕೋಲೇಕೋಲೇ ಕೋಲನ್ನ ಪ ಆಧಾರವನೆ ಮೆಟ್ಟಿ ಚಕ್ರಾರ ಭೇದಿಸಿನಾದದ ನಾದ ಸುನಾದವ ಕೇಳಿಶೋಧಿಸಿ ಸುಷುಮ್ನ ಮಾರ್ಗ ಮನೆಯ ಪೊಕ್ಕುಮೋದಿ ಬೆಳಗಿನೊಳ ಬೆಳಕು ತಾನಹುದೆ ಹಟ1 ಪ್ರಾಣಾಪಾನವು ಕೂಡಿ ಸರ್ಪವನೆಬ್ಬಿಸಿಜಾಣತನದ ನಾಗ ಸ್ವರವನೂದಿಮಾಣದೆ ಮುತ್ತುಗಳುದುರುವ ಬಯಲಲಿಕೇಣವಿಲ್ಲದೆ ಆಡಿಪುದೆ ಕುಂಡಲಿಯೋಗ 2 ಪೀಕುತ ನಾಲಗೆ ಕ್ಷೀರಾಹಾರದೊಳಿದ್ದುನೂಕುತಂಗಲದೊಳು ರಸನವನುತೇಕ ನಿಲ್ಲಿಸಿ ನಾಲಗೆಯಲಮೃತವನ್ನುಂಡುಮೂಕ ಸಕ್ಕರೆ ತಿಂದ ತೆರದಲಂಬಿಕ ಯೋಗ 3 ಷಣ್ಮುದ್ರೆ ಹಿಡಿದು ಷಡಂಗುಲದಲಿ ಒತ್ತಿಕಣ್ಣ ಅಂತರ್ಯದಿ ದೃಷ್ಟಿಯಿಟ್ಟುಹುಣ್ಣಿಮೆ ಚಂದ್ರನ ಕಳೆಯ ಬೆಳಗಿನೊಳುಥಣ್ಣಗೆ ಥಳ ಥಳಿಸುವುದದು ಹಟ ರಾಜ4 ವಾಯುವ ಸಮನಿಸಿ ರೇಚಕ ಪೂರಕದಿಂದಸಾಯಾಸದಲಿ ಕುಂಭಕವ ನಿಲ್ಲಿಸಿಬಾಯಿ ಮಾಡುವ ಸುನಾದವ ಲಕ್ಷಿಸಿಹಾಯಿ ಎಂದೆನಿಪ ಸುಖಹೊಂದೆ ಲಯಯೋಗ 5 ದೃಷ್ಟಿಯರ್ಧವನೀಗ ಮುಚ್ಚಿ ಸದ್ಗುರುವಾಗಿದೃಷ್ಟಿಸಿ ತನ್ನನೆ ನೋಡುತಿರೆಸುಟ್ಟು ಜೀವತ್ವವ ದೇಹಭಾವವ ಮರೆತುಮುಟ್ಟಿ ಬ್ರಹ್ಮಾದುದೆ ಅದುವೆ ಸದ್ಗುರು ಮಾರ್ಗ6 ಹೊರಗೊಂದು ಆಗದೆ ಒಳಗೊಂದು ಆಗದೆಹೊರಗೆ ಒಳಗೆ ತಾನೆ ತಾನೆಯಾಗಿಗುರು ಚಿದಾನಂದನು ಸಹಜ ತೋರುತ ಸರ್ವಪರಮ ಮಂಗಳ ಸಾಕ್ಷಿಯದು ರಾಜಯೋಗ7
--------------
ಚಿದಾನಂದ ಅವಧೂತರು
ಕೋಲು ಕೋಲೆನ್ನ ಕೋಲೆ ಪ ಅಂಜಾನೆ ಗಿರಿಯಲ್ಲಿ | ಸಂಜೀವರಾಯ ಸಹ ಕಂಜನಾಭನಿರುವ | ಅಂಜಿಕ್ಯಾತಕಮ್ಮ 1 ಮೂಡಲು ಗಿರಿವಾಸ | ನಾಡಿಗೊಡೆಯನೆಂದು ಪಾಡುವವರ ದೋಷ | ಓಡಿಸುವನಮ್ಮ 2 ವೆಂಕಟರಮಣನು | ಕಿಂಕರ ಜನಗಳ ಸಂಕಟಗಳ ಕಳೆವ | ಶಂಕೆ ಇಲ್ಲವಮ್ಮ 3 ಈಶ ಶ್ರೀನಿವಾಸ | ದಾಸ ಜನರ ಪೋಷ ರಾಶಿ ದೋಷ ಸುಟ್ಟು | ಲೇಸುಗೈವನಮ್ಮ 4 ಮತ್ಸ್ಯ ಮೂರುತಿ ತ | ನ್ನಿಚ್ಛೆಯಿಂದಲಿ ಬಲು ತುಚ್ಛ ದೈತ್ಯನನು | ಕೊಚ್ಚಿ ಬಿಸುಟನಮ್ಮ 5 ಅಮಿತ ಭಾರ ಪೊತ್ತು ಸುಮನಸರಿಗಮೃತ | ಮಮತೆಲಿತ್ತನಮ್ಮ 6 ಕ್ರೋಡಾಕಾರನಾಗಿ | ರೂಢಿಚೋರನಾದ ಹೇಡಿ ರಕ್ಕಸನ | ತೀಡಿ ಕೊಂದನಮ್ಮ 7 ಘೋರ ರೂಪ ಕೊಂಡು | ಕ್ರೂರ ರಕ್ಕಸನ ದೋರೆ ಕರುಳಕಿತ್ತು | ಪೋರನ ಪೊರೆದನಮ್ಮ 8 ಪುಟ್ಟ ಪೋರನಾಗಿ | ಬೆಟ್ಟದಂತೆ ಬೆಳೆದು ದಿಟ್ಟ ಬಲಿಯ ಶಿರವ | ಮೆಟ್ಟಿ ತುಳಿದನಮ್ಮ 9 ತಾತನ ನುಡಿ ಕೇಳಿ | ಕಾತರನಾಗದೆ ಮಾತೆಯ ಶಿರವನ್ನು | ತಾ ತರಿದಿಟ್ಟನಮ್ಮ 10 ಸೀತೆಯ ಬಿಡಿಸಲು | ಸೇತುವೆಯನು ಕಟ್ಟಿ ಭೂತನನ್ನು ಕೊಂದು | ಖ್ಯಾತಿಗೊಂಡನಮ್ಮ 11 ದ್ವಾರಕಪತಿ ತಾನು | ನಾರಿ ಪಾಂಚಾಲೆಯು ಕೋರಿದ ಕ್ಷಣದಲ್ಲಿ | ಸೀರೆಯ ನೇದನಮ್ಮ 12 ಚಿತ್ತಜನಯ್ಯನು | ಅತ್ತಿತ್ತ ಅಲೆಯುತ ಬೆತ್ತಲೆ ನಾರಿಯರ | ಮುತ್ತುಗೊಂಡನಮ್ಮ 13 ಜಲಜನಾಭನು ತಾ | ಕಲಿಗಾಲ ಕಡೆಯಲ್ಲಿ ಹಲವು ಪಾಪಿಗಳನು | ಫಲದಿ ಕೊಂದನಮ್ಮ 14 ಮುಟ್ಟಿ ಭಜಿಸುವರಿಗೆ | ಇಷ್ಟವಾದ ವರವಕೊಟ್ಟನು ರಂಗೇಶ | ವಿಠಲ ಕೇಳಮ್ಮ 15
--------------
ರಂಗೇಶವಿಠಲದಾಸರು
ಗಳಿಸಿಕೊಳ್ಳಿರೊ ಸಾಧು ಸಜ್ಜನರ ಸಂಗವ ಗಳಿಗಿಯೊಳು ದೋರಿಕೊಡುವರು ಅಂತರಂಗವ ಧ್ರುವ ಹೊಟ್ಟಿಗೆ ಮೊಟ್ಟಿಗೆ ಕಟ್ಟು ಹೋಗಬ್ಯಾಡಿರೊ ಹುಟ್ಟಿಬಂದ ಮ್ಯಾಲೆ ಹರಿನಾಮ ಘಟ್ಟಗೊಳ್ಳಿರೊ ಗುಟ್ಟಲಿದ್ದ ವಸ್ತು ನೀವು ಮುಟ್ಟಿ ಮನಗಾಣಿರೊ ಕೆಟ್ಟ ಗುಣಕಾಗಿ ಬಿದ್ದು ಸಿಟ್ಟು ಹಿಡಿಯಬ್ಯಾಡಿರೊ 1 ಹೊನ್ನಿಗೆ ಹೆಣ್ಣಿಗೆ ಬಾಯಿ ತೆರಿಯಬ್ಯಾಡಿರೊ ಕಣ್ಣಗೆಟ್ಟು ಹೋಗಿ ನೀವು ದಣ್ಣನೆ ದಣಿಯಬ್ಯಾಡಿರೊ ಹೆಣ್ಣಿಗಾಗಿ ರಾವಣೇನು ಪಡೆದುಕೊಂಡ ಕಾಣಿರೊ ಹೊನ್ನಿಗಾಗಿ ವಾಲಿ ಏನು ಸುಖವ ಪಡೆದ ನೋಡಿರೊ 2 ಉರ್ವಿಯೊಳು ಬಂದು ನೀವು ಗರ್ವಹಿಡಿಯ ಬ್ಯಾಡಿರೊ ಕೌರವೇಶ ಮಣ್ಣಿಗೆ ಗರ್ವಹಿಡಿದು ಕೆಟ್ಟ ನೋಡಿರೊ ಅರ್ವಪಥವ ಬಿಟ್ಟು ಮರ್ವಿಗ್ಹೋಗಬ್ಯಾಡಿರೊ ಸರ್ವಸಾರಾಯ ಸುಖ ಹರಿಯ ಭಕ್ತಿ ಮಾಡಿರೊ 3 ಕಾಮ ಕಳವಳಿಗಿನ್ನು ಕುಣಿದು ಕೆಡಬ್ಯಾಡಿರೊ ನೇಮದಿಂದ ಸ್ವಾಮಿ ಶ್ರೀಪಾದ ಬೆರೆದು ಕೂಡಿರೊ ನಾಮರೂಪಕವಗಿ ಬಿದ್ದು ಹಮ್ಮು ಹಿಡಿಯಬ್ಯಾಡಿರೊ ತಾಮಸೆಂಬ ದೈತ್ಯನ ಸುಟ್ಟು ಹೋಮಮಾಡಿರೊ 4 ಭವ ಬಂಧವಾದ ದುಸ್ತರ ಹೋಳಿಯಾಡಬೇಕು ಒಂದೆ ಸೀಳಿ ಮದಮತ್ಸರ ಹೇಳಿಕೊಟ್ಟ ಗುರುವಿನ ಕೊಂಡಾಡಬೇಕು ಎಚ್ಚರ ಬೋಧ ಶ್ಯಾಸ್ತರ 5 ಲೋಕವೆಲ್ಲ ಬಂದು ಹೊನ್ನ ಹೆಣ್ಣು ಮಣ್ಣಿಗಾಯಿತು ಬೇಕಾದ ವಸ್ತು ಬಿಟ್ಟು ಪೋಕುಬುದ್ಧಿಗ್ಹೋಯಿತು ಸುಖ ಸೂರೆಗೊಳ್ಳದೆ ತೇಕಿ ದಣಿದುಹೋಯಿತು ಏಕವಾಗಿ ನೋಡಲು ದೈಥಯ್ಯಗೊಟ್ಟಿತು 6 ಮಹಿಪತಿಯ ಸ್ವಾಮಿಯ ನೆನೆದು ಒಮ್ಮೆ ನೋಡಿರೊ ಇಹಪರಸುಖ ಸೂರ್ಯಾಡಿ ನಲಿದಾಡಿರೊ ಮಹಾಮಹಿಮೆದೋರುತದೆ ಮಯ್ಯ ಮರಿಯಬ್ಯಾಡಿರೊತ್ರಾಹಿತ್ರಾಹಿ ಎಂದು ಮನಗಂಡು ಕುಣಿದಾಡಿರೊ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುಡಿಗುಡಿಯನು ಸೇದಿ ನೋಡೋ ನಿನ್ನ ಒಡಲೋಳಗಿರುವ ರೋಗಗಳನೀಗಾಡೋ ಪ ಬುರುಡೆ ಎಂಬುದು ಈ ಶರೀರಪಡೆ ದಿರುವ ಸುಕೃತವೆ ಕೊಳವೆಯಾಕಾರಾ ಹರಿನಾರಾಯಣನೆಂಬ ನೀರಾ ಇದ ನರಿತು ನೀ ಸೇದಿಕೊ ಬಲು ಮೋಜುಗಾರಾ ಗುಡುಗುಡಿ1 ಮನವೆಂಬ ಸಂಚಿಯ ಬಚ್ಚಿ ದಿನ ದಿನದಿ ಪತಾಕವೆಂಬ ಭಂಗಿಯ ಕೊಚ್ಚಿ ತನುವಿನ ಚಿಲುಮೆಯೊಳ್ಬೆಚ್ಚಿ ಗುರು ಧ್ಯಾನದ ಕೆಂಡದುರಿಯ ತಂದ್ಹಚ್ಚಿ ಗುಡುಗುಡಿ2 ಸದ್ಯದಿ ಅಮಲೇರುವುದು ದಾರ್ರಿದ್ರ್ಯ ದುಃಖವ ಸುಟ್ಟು ಹೊಗೆ ಏಳುವುದು ತೋರುವುದು ಗುರು ಬುದ್ಧಿಗೆ ಮಾರ್ಗ ಸಿದ್ಧ ವಿಮಲಾನಂದ ಪದಕೆ ಕೊಡುವುದು ಗುಡುಗುಡಿ 3
--------------
ಭಟಕಳ ಅಪ್ಪಯ್ಯ