ಒಟ್ಟು 829 ಕಡೆಗಳಲ್ಲಿ , 93 ದಾಸರು , 682 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

--------ಹರಿಯೆನ್ನ ಕೂಡಿಸೊ ಬಿಡದಿನ್ನು ಕೂಡಿಸು ಕೃಪಾನಿಧಿಯೆ ಕೂಡಿಸೆನ್ನ ಧೊರಿಯೆ ಪ ಉದಯದಲಿ ಏಳುತಲಿ ಊರ್ವೀಶ ನಿಮ್ಮಸ್ಮರಣೆ ಹೃದಯದಲಿ ಅನುಗಾಲ ಉಚಿತನಾಗಿ ಪದುಮನಾಭ ನಿಮ್ಮ ಪಾದವನೆ ಪೂಜಿಸುವ ಸದಮಲ ಜ್ಞಾನಿಗಳ ಸಂಗದೊಳಗೆ ಎನ್ನ 1 ನಿತ್ಯನೇಮ ವ್ರತದಲ್ಲಿ ಬೇಕಾಗಿ ಇರುತಲಿ ಅತ್ಯಂತ ಪುರುಷ ಆನಂದದಲ್ಲಿ ಕರ್ತೃ ನೀನಲ್ಲದೆ ಸರ್ವೋತ್ತಮರು ದಾರೆಂದು ನಿತ್ಯ ನೀನೆಂದು ತಿಳಿಯುವ (ತಿಳಿಸುವ ) ಆತ್ಮಕರಸಂಗ 2 ಅನುದಿನವು ನಿಮ್ಮ ಧ್ಯಾನ ಮನದಲ್ಲಿ ಮರೆಯದೆ ದಿನಗಳನು ಕಳೆವಂಥಾ ದ್ವಿಜೋತ್ತಮರಾ ಅನುಸರಿಸಿ ಅವರನನು ಅತಿಮೋದದಿಂದ ಬೆರೆದು ವನಜನಾಭನೆ ನಿಮ್ಮ ಭಜನೆ ಮಾಡುವರ ಸಂಗ 3 ವೇದಶಾಸ್ತ್ರಾದಿಗಳ ಭೇದಗಳನರಿತು ಸತ್ಯ ಬೋಧಗುರು ಕರುಣದಲಿ ಪೂರ್ಣರಾಗಿ ಸಾಧು ಸಜ್ಜನರಾದಂಥ ಸತ್ಪುರುಷರಾ ಸಂಗ 4 ಉಪವಾಸವನೆ ಮಾಡಿ ಉಚಿತ ಕರ್ಮಗಳಿಂದ ತಪಗಳನೆ ಮಾಡುವಂಥ ಧನ್ಯಜನರಾ ಸುಫಲಂಗಳನೆ ಪಡೆದು ಸೂತುತಲಿ ಇರುವರಾ ಅಪರಿಮಿತ ಮಹಿಮ ನಿನ್ನ ಹಾಡಿ ಪಾಡುವರಸಂಗ 5 ಪರಮಾತ್ಮ ನಿನ್ನ ಮಹಿಮೆ ಭಾವದಲಿ ಶೋಧಿಸಿ ಪರಿಪರಿಯಲಿರುವಂಥ ಭಾವಜ್ಞರಾ- ಚರಣೆಯನು ಮಾಡಿ ನಿಮ್ಮ ಸೇವೆಯನು ಮಾಡುವಂಥ ಪರಮ ಭಕ್ತರಾದ ಪುಣ್ಯವಂತರ ಸಂಗ 6 ಗಂಗಾದಿ ಸಕಲ ತೀರ್ಥಂಗಳನು ಆಚರಿಸಿ ಅಂಗಾದಿ ದೋಷವ ಕಳೆದ ಅಧಿಕ ಜನರಾ ಸಂಗಸುಖ ಅಬ್ಧಿಯೊಳು ಸಂತತವು ಬೆರೆವಂಥರಂಗ ' ಹೊನ್ನ ವಿಠ್ಠಲ’ ರಾಯ ಗೋವಿಂದ 7
--------------
ಹೆನ್ನೆರಂಗದಾಸರು
(2) ತುಳಸಿರಾಮದಾಸರ ಅಂತಿಮ ಯಾತ್ರೆ ಬೆಂಗಳೂರಿಗೆ ಹೋಗಿ ಬಂದರೂ ಮೈಸೂರಿಂದಾ ಪ ಬೆಂಗಳೂರಿಗೆ ಹೋಗಿಬಂದ ಜಂಗಮನು ತಾನಾಗಿ ನಿಂದಾ ಕಂಗಳೆರಡರ ಮಧ್ಯ ತಾ ನಿಜ ಲಿಂಗನಾಗಿ ಕಾಣಬಂದಾ ಅ.ಪ ಬಿದಿಗೆ ಪಾಡ್ಯವ ಮಾಡಿ ನೋಡೆಂದಾ ಬಂದಾಗ ಬರದಾ ವಿಧಿಯ ಬರಹವ ತೊಡೆದುಕೊಂಡೆಂದ ಕದಿವ ಕಳ್ಳರ ಕಂಡುಹಿಡಿದು ಮದನಪಿತನಾ ಯುಧದಿ ಹೊಡೆದೂ ನದಿಯ ಸ್ನಾನವ ಮಾಡಿ ನಿಜ ಪದವಿ ತೋರಿದ ನಮ್ಮ ದೇಶಿಕ 1 ಸೃಷ್ಟಿ ತದಿಗೆಯೊಳಿರಲು ಬೇಡೆಂದಾ ಅಲ್ಲಾಗ ತನ್ನ ಇಷ್ಟದೈವದ ಪೂಜೆ ಮಾಡೆಂದಾ ದೃಷ್ಟಿಗೋಚರಮಾದ ಗುರುವು ಸೃಷ್ಟಿಗಧಿಕಾ ತುಲಶಿರಾಮನ ಇಷ್ಟದಿಂದಲಿ ಭಜಿಸಿನೋಡಲು ಸ್ಪಷ್ಟನಾಗಿ ಕಾಣುತೈತೆ 2
--------------
ಚನ್ನಪಟ್ಟಣದ ಅಹೋಬಲದಾಸರು
(ಅಃ) ಕಾಮದೇವ ಕರುಣದಿಂದಲಿ ಒಲಿದು ಕಂಡನಾತುರದಲಿ ಪ ಇಂದ್ರಸಮಾನ ದೇವತೆಯೆ ರತಿಪತಿಯೇ | ಮಾರ || ಬಂದು ಕಲ್ಪದಲಿ ಸುಂದರನೆನಿಸಿಕೊಂಡಿರ್ದ | ಬಂಧುವೇ ಅಹಂಕಾರ ಪ್ರಾಣನಿಂದಧಿಕನೆ 1 ವನಜ ಸಂಭವನು ಸೃಷ್ಟಿ ಸೃಜಿಪಗೋಸುಗ | ಮನದಲ್ಲಿ ಪುಟ್ಟಿಸೆ ಚತುರ ಜನರ || ಮುನಿಗಳೊಳಗೆ ನೀ ಸನತ್ಕುಮಾರನಾಗಿ ಜನಿಸಿ | ಯೋಗ ಮಾರ್ಗದಲ್ಲಿ ಚಲಿಸಿದ ಕಾಮಾ 2 ತಾರಕಾಸುರನೆಂಬ ಬಹು ದುರುಳತನದಲ್ಲಿ | ಗಾರುಮಾಡುತಲಿರಲು ಸುರಗಣವನು || ಗೌರಿಮಹೇಶ್ವರರಿಗೆ ಪುತ್ರನಾಗಿ ಪುಟ್ಟಿ | ಧಾರುಣಿಯೊಳಗೆ ಸ್ಕಂದನೆನಿಸಿದೆ 3 ಮತ್ಸ್ಯ ಉದರದಲಿ | ಪೊಕ್ಕು ಶಿಶುವಾಗಿ ಸತಿಯಿಂದ ಬೆಳೆದು || ರಕ್ಕಸ ಶಂಬರನೊಡನೆ ಕಾದಿ ಗೆದ್ದು ಮರಳಿ | ಚಕ್ಕನೆ ಸಾಂಬನೆನಿಸಿದೆ ಜಾಂಬವತಿಯಲ್ಲ 4 ಜನಪ ದಶರಥನಲ್ಲಿ ಭರತನಾಗಿ ಪುಟ್ಟಿದೆ | ಮನೋ ವೈರಾಗ್ಯ ಚಕ್ರಾಭಿಮಾನಿ || ಎನಗೊಲಿದ ವಿಜಯವಿಠ್ಠಲರೇಯನಂಘ್ರಿ | ಅರ್ಚನೆ ಮಾಡುವ ಸುಬ್ರಮಣ್ಯ ಬಲು ಧನ್ಯ 5
--------------
ವಿಜಯದಾಸ
(ಅಂ) ಪಾರ್ವತೀದೇವಿ ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ | ಹಿಮವಂತ ಗಿರಿಯ ಕುಮಾರಿ ಪ ನಿತ್ಯ | ಅಮರವಂದಿತೆ ಗಜಗಮನೆ ಭವಾನಿ ಅ. ಪ. ಪನ್ನಗಧರನ ರಾಣಿ ಪರಮಪಾವನಿ | ಪುಣ್ಯಫಲ ಪ್ರದಾಯಿನಿ || ಪನ್ನಗವೇಣಿ ಶರ್ವಾಣಿ ಕೋಕಿಲವಾಣಿ | ಉನ್ನತ ಗುಣಗಣ ಶ್ರೇಣಿ | ಎನ್ನ ಮನದ ಅಭಿಮಾನ ದೇವತೆಯೆ | ಸ್ವರ್ಣಗಿರಿ ಸಂಪನ್ನೆ ಭಾಗ್ಯ ನಿಧಿ || ನಿನ್ನ ಮಹಿಮೆಯನು ಬಿನ್ನಾಣದಲಿ ನಾ | ಬಣ್ಣಿಸಲಳವೆ ಪ್ರಸನ್ನ ವದನಳೆ 1 ಮುತ್ತಿನ ಪದಕ ಹಾರ ಮೋಹನ ಸರ | ಉತ್ತಮಾಂಗದಲಂಕಾರ || ಜೊತ್ಯಾಗಿ ಇಟ್ಟ ಪಂಜರದೋಲೆ ವಯ್ಯಾರ | ರತ್ನಕಂಕಣದುಂಗುರ || ತೆತ್ತೀಸ ಕೋಟಿ ದೇವತೆಗಳ್ ಪೊಗಳುತ | ಸತ್ತಿಗೆ ಚಾಮರವೆತ್ತಿ ಪಿಡಿಯುತಿರೆ || ಸುತ್ತಲು ಆಡುವ ನರ್ತನ ಸಂದಣಿ | ಎತ್ತ ನೋಡಿದರತ್ತ ಕಥ್ಥೈ ವಾದ್ಯ2 ಕಂಚುಕ ತಿಲಕ | ನಾಸಿಕ || ಕಳಿತ ಮಲ್ಲಿಗೆ ಗಂಧಿಕ ಮುಡಿದ ಸೂಸುಕ | ಸಲೆ ಭುಜ ಕೀರ್ತಿಪಾಠಿಕ || ಇಳೆಯೊಳು ಮಧುರಾ ಪೊಳಲೊಳು ವಾಸಳೆ | ಅಳಿಗಿರಿ ವಿಜಯವಿಠ್ಠಲ ಕೊಂಡಾಡುವ || ಸುಲಭ ಜನರಿಗೆಲ್ಲ ಒಲಿದು ಮತಿಯನೀವ | ಗಳಿಕರ ಶೋಭಿತೆ ಪರಮಮಂಗಳ ಹೇ 3
--------------
ವಿಜಯದಾಸ
(ಅ) ಶ್ರೀಹರಿ ಸ್ತುತಿಗಳು ನಾರಿಯರೂಪನು ತಾಳ್ದನೇದೇವಾ ಪ ನಗೆ ಮುಖ ಮಾಗಿಹ ನಾರಾಯಣದೇವಾ 1 ಸತ್ವಗುಣಾಧಿಕನೆಂದೆನಿಸೆನ್ನಾ 2 ಅಂತಕ ದಾಸಜನಾರ್ಚಿತ ದೇವಸುಶೀಲಾ ದಾಸರು ವಂದಿಪೆ ದಾಹವ ನಿಂಗಿಸೋ ದೇಶಿಕ ತುಲಶೀರಾಮದಾಸನೆ ದೇವಾ 3
--------------
ಚನ್ನಪಟ್ಟಣದ ಅಹೋಬಲದಾಸರು
(ಈ) ಅವತಾರತ್ರಯ ಆರು ನಿನಗಿದಿರಧಿಕ ಧಾರುಣಿಯೊಳಗೆ ಪ ಸಾರ ಶಾಸ್ತ್ರವನೊರೆದ ಸರ್ವಜ್ಞ ಮುನಿರಾಯ ಅ.ಪ. ಆರೊಂದು ವೈರಿಗಳ ತರಿದು ವೈಷ್ಣವರಿಗೆಆರೆರಡು ಊಧ್ರ್ವ ಪುಂಡ್ರಗಳ ಇಡಿಸಿಆರು ಮೂರರಮೇಲೆ ಮೂರಧಿಕ ಕುಮತಗಳಬೇರೊರಸಿ ಕಿತ್ತೊಮ್ಮೆ ಬಿಸುಟಂಥ ಧೀರ 1 ಆರು ನಾಲ್ಕು ತತ್ವದಭಿಮಾನಿಗಳಿಗೊಡೆಯಮಾರುತನ ಮೂರನೆಯ ಅವತಾರನೆಆರೈದು ಮೇಲೆರಡು ಅಧಿಕ ಲಕ್ಷಣವುಳ್ಳಮೂರುತಿಯೊಳೊಪ್ಪುತಿಹ ಮುನಿವರೇಣ್ಯ 2 ಆರಾರು ಮೇಲೊಂದು ಅಧಿಕ ಲೆಖ್ಖದ ಗ್ರಂಥಸಾರವನು ರಚಿಸಿ ಸಜ್ಜನರಿಗಿತ್ತುಪಾರಮಾರ್ಥಿಕ ಭೇದ ಪಂಚಕ ಸ್ಥಾಪಿಸಿದೆ ಉ-ದಾರ ಶ್ರೀಕೃಷ್ಣನ ದಾಸರೊಳು ದೊರೆಯೆ 3
--------------
ವ್ಯಾಸರಾಯರು
(ಈ) ಲೋಕನೀತಿಯನ್ನು ಕುರಿತ ಕೃತಿಗಳು ಏನಯ್ಯ ದೊರೆಯೆ ನಿನಗಾನಂದವೆ ದೊರೆಯೆ ಪ ಮಾನಿತ ಜನರವಮಾನವ ನೋಡದೆ ಹೀನ ಜನರ ನುಡಿ ನೀನಿಲಿದಾಲಿಪುದು ಅ.ಪ ಜಾತಿಧರ್ಮವಿಲ್ಲಾ ಶಾಸ್ತ್ರದ ರೀತಿ ನಡತೆಯಿಲ್ಲ ಮಾತಿದು ಪುಸಿಯಲ್ಲಾ ಮಾನದ ಭೀತಿಯು ಮೊದಲಿಲ್ಲಾ ನೀತಿಯನರಿಯದ ಕೋತಿಗಳಂದದ ಜಾತಿಯ ಜನರೊಳು ಮಾತಿನವಾಶಿಯಿಲ್ಲ 1 ದುರ್ಜನರು ಬೆರೆದು ದೋಷ ವಿವರ್ಜಿತರನ್ನು ಜರಿದು ಲಜ್ಜೆಯ ನೆರೆತೊರೆದು ಗರ್ವದಿ ಗರ್ಜಿಸಿ ಮೊರೆದು ಈ ಜಗದೊಳಗಿಹ ಸಜ್ಜನರಗಿಎ ಕುಲ ಕಜ್ಜಳರವಮತಿಗುಜ್ಜುಗಿಸುತ್ತಿಹ 2 ಗಂಡಬಿಟ್ಟಿಹರು ಗರತಿಯ ಕಂಡು ನಗುತಿಹರು ಮಿಂಡರ ಬೆರೆದಿಹರು ಮೇಲತಿ ದಿಂಡೆಯರಾಗಿಹರು ಭಂಡತನದಿ ಪರಗಂಡಸರೊಳು ಸಮ- ದಂಡೆಯೆನಿಸಿ ಬಲು ಚಂಡಿಸುತಿರ್ಪರೋ 3 ಕೇಳು ಹಂದೆಯಾಳು ಕ್ಲೇಶವ ಪೇಳಲು ಮತಿತಾಳು ಕೀಳುಜನರ ಬಾಳು ಕಿವಿಯಲ್ಲಿ ಕೇಳಬಹುದೆ ಪೇಳು ಕಾಳಮೂಳಿಯರ ಮೇಳದಿ ಹಿಗ್ಗುವ ಬಾಳುಗೇಡಿ ಜನರೊಳಿಗ ಬಲುಘನ 4 ಧರೆಯೊಳಧಿಕವಾದ ಶ್ರೀಪುಲಿಗಿರಿಯೊಳು ನೆಲೆಯಾದ ಸಿರಿವರ ನಿಜಪಾದ ಸೇವೆಯ ಕರುಣಿಸು ಬಹುಮೋದ ಶರಣಾಭರಣ ನಿಜಕರುಣವ ತೋರಿಸು ವರದವಿಠಲ ದೊರೆ ವರದದಯಾನಿಧೆ 5
--------------
ವೆಂಕಟವರದಾರ್ಯರು
(ಕಾಣೂರು ಮಠದ ನರಸಿಂಹ) ನೋಡಿರಯ್ಯ ನರಸಿಂಹ ಮೂರ್ತಿಯ ಪಾಡಿರೋ ಕೀರ್ತಿಯನು ಪ. ಚಿಕ್ಕವನ ಗೋಳಿಕ್ಕಿಸುತಲತಿ ಸೊಕ್ಕಿದಸುರನನು ಧಿಕ್ಕರಿಸುತಿಹ ಕಕ್ಕುಲತೆಯಿಂದುಕ್ಕಿ ರೋಷವನು ಮಿಕ್ಕ ದೇವರ ಲೆಕ್ಕಿಸದವನ ತಿಕ್ಕಿ ತೊಡೆಯೊಳಗಿಕ್ಕಿ ನಖಗಳನಿಕ್ಕರಿಸಿ ಸಾಲಿಕ್ಕಿ ತರುವ ಕರುಳಕ್ಕರದಿ ತೆಗೆದ್ಹಕ್ಕಿಗಮನನ 1 ವೇದಮುಖ ಸುರರೆಲ್ಲ ದೂರದಿ ಕಾದುಕೊಂಡಿರಲು ಸಿರಿನಡು ಹಾದಿಯಲಿ ಚಿನ್ಮೋದನಿರಕಾಲ್ಹಾದ ಬಡುತಿರಲು ಪಾದಪದ್ಮಗಳನ್ನು ಭಕ್ತಿರಸಾರದರದಿ ಶಿರಕಿಕ್ಕಿರುವ ಪ್ರ- ಲ್ಹಾದನನು ಪಿಡಿದೆತ್ತಿ ಪರಮವಿನೋದಗೊಂಡ ಪರಾಪರೇಶನ 2 ಅರ್ಥಿಯಿಂದಲಿ ಬಂದಿರುವರು ಪೂರ್ಣಾರ್ಥದಾಯಕನಾ ವ್ಯರ್ಥವೈರದ ದ್ವ್ಯರ್ಧಿದೈತ್ಯರ ಮೂರ್ತಿದಹಿಸುವನಾ ಅರ್ತಿಹರ ಶೇಷಾದ್ರಿವರ ಪುರುಷಾರ್ಥ ಪಾಲಿಪೆನೆಂದು ವಾಮನ ತೀರ್ಥ ಕೃತ ಪೂಜಾರ್ಥವಿಲ್ಲಿಗೆ ಕೀರ್ತಿಕರ ನಿಲಯಾರ್ಥದಾತನ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಕಾರ್ಕಳದ ವೆಂಕಟೇಶನನ್ನು ನೆನೆದು) ಶ್ರೀನಿವಾಸ ನಮೋ ನಮೋ ಶ್ರುತಿಗಾನಲೋಲ ಪಾಹಿ ಪ. ವಿಪಿನ ನ- ವೀನದವಾನಲ ದೀನೋದ್ಧಾರ ದಯಾನಿಧೆ ಸುಂದರ ಅ.ಪ. ಶೇಷಗಿರಿಯಿಂದ ಸುಜನಗಳ ಘೋಷದಿ ನಂಬಿದ ದಾಸಜನರಭಿಲಾಷೆಯನು ಸಂತೋಷದಿ ಕೊಡಲು- ಲ್ಲಾಸದಿಂದ ಪರೇಶ ನಾನಾ ವಿಲಾಸದಿ ನೆಲಸುತ ಕಾಸುವೀಸದ ಭಾಷೆಯನು ದಿಗ್ದೇಶದಿಂದ ಮಹಾಸುಕೀರ್ತಿಯ ರಾಸಿಗಳಿಸಿ ಜಗದೀಶ ಪರೇಶ ಮ- ಹೇಶವಿನುತ ನಿರ್ದೋಷ ಜಗನ್ಮಯ 1 ಉತ್ತಮಾಂಗಸುರತ್ನಖಚಿತಕಿರೀಟದ ನಿಜಪದ- ಭಕ್ತಜನಮನವೃತ್ತಿ ಒಲಿಸುವ ಕೂಟದ ಕರುಣೋ- ತ್ಪತ್ತಿ ಸರಸಿಜನೇತ್ರಯುಗ್ಮದ ನೋಟದ ಭೂಷಣ- ಮೊತ್ತದಿಂದಾದಿತ್ಯಕೋಟಿಯನ್ನೆತ್ತಿಂದತೆಸೆವುತ್ತ ಮಂಗಲ- ಮೂರ್ತಿಧರಿಸಿ ಜನರರ್ತಿಯ ಸಲಿಸುವ ಚಿತ್ತಜಜನಕ ಸರ್ವೋತ್ತಮ ನಿರುಪಮ 2 ಪಂಕಜಾಂಬಕ ಶಂಕರಾಪ್ತ ಶುಭಾಕರ ಶ್ರೀವ- ತ್ಸಾಂಕ ಮುಕ್ತಾಲಂಕೃತ ಕರುಣಾಕರ ಭಕ್ತಾ- ತಂಕರಹಿತ ನಿಶ್ಯಂಕ ನಿತ್ಯನಿರಾಕರ ಪ್ರಭು ವೆಂಕಟೇಶ ನಿರಾಮಯಾಮರಸಂಕುಲಾರ್ಚಿತ ಶಂಖಚಕ್ರಗ- ದಾಂಕಿತ ದನುಜಭಯಂಕರ ವರ ನಿರ- ಹಂಕರ ನಿಜದ ನಿಷ್ಕಳಂಕಚರಿತ್ರ 3 ಮಂದರಾಧರ ಮಾಪತೇ ಮುಖಚಂದಿರ ಮೌನಿ ವೃಂದವಂದ್ಯ ಸುರೇಂದ್ರಪೂಜ್ಯ ಧುರಂಧರ ಮಹಾ- ಕಂಬುಕಂಧರ ಶೋಭಿಪ ಕುಂದರದನ ಕುಚೇಲಪಾಲಾರವಿಂದನಾಭ ಪುರಂದರಾರ್ಚಿತ ಮಂದಹಾಸ ಮುಚುಕುಂದವರದ ಗೋ- ವಿಂದ ಸಚ್ಚಿದಾನಂದ ಉಪೇಂದ್ರ 4 ಮೂರು ಲೋಕೋದ್ಧಾರಿ ಘನಗಂಭೀರನೆ ವೆಂಕಟ ಧೀರಕಾರ್ಕಳಸಾರನಗರಾಧಿಕಾರನೆ ಭೂಸುರ- ಭೂರಿವೇದಪುರಾಣಘೋಷಾದಿಹಾರನೆ ಸಂತತ ಚಾರು ಗೌಡಸಾರಸ್ವತಶೃಂಗಾರಋಗ್ವೇದಾಖ್ಯ ಉತ್ತಮ ದಾರುಣೀಸುರರಿಂದನವರತ ಮಂಗ- ಲಾರತಿಗೊಂಬ ಲಕ್ಷ್ಮೀನಾರಾಯಣ ಹರಿ 5
--------------
ತುಪಾಕಿ ವೆಂಕಟರಮಣಾಚಾರ್ಯ
(ಕೇಶವಾಯ ನಮಃ ದಿಂದ ಆರಂಭವಾಗುವ ಆಚಮನ ಸ್ತುತಿ) ಶ್ರೀನಿವಾಸಾಯ ನಮೋ ಪ. ಶ್ರೀನಿವಾಸಾಯ ಶತಭಾನುಪ್ರಕಾಶಾಯ ಶ್ರೀನಿವಾಸಾಯ ನಿಜ ಭಕ್ತಜನಪೋಷಾಯ ಶ್ರೀನಿವಾಸಾಯ ಪರಮಾನಂದಘೋಷಾಯ ಅ.ಪ. ದೋಷಗಂಧವಿದೂರ ಕೇಶಿಮುಖದಾನವ ವಿ- ನಾಶವಿಧಿಭವಸುಖನಿವಾಸ ವಾಸುಕಿಶಯನ ವಾಸವಾದ್ಯಮರಗಣಪೋಷ ಪಾವನವೇಷ ಶ್ರೀಶ ನಿರ್ಗತವಿಶೇಷ ದಾಸಜನಹೃದಯಾಬ್ಧಿಭೇಶ ಕೌಸ್ತುಭಮಣಿವಿ- ಭೂಷ ಭೂತಾತ್ಮ ಭವಪಾಶಹರ ಪರತರ ದ- ಕೇಶವಾಯ ನಮೋನಮಃ 1 ಕ್ಷೀರಸಾಗರವಾಸ ಶ್ರೀರಮಾಪ್ರಾಣೇಶ ಸಾರಭೋಕ್ತøಸ್ವತಂತ್ರ ಚಾರುಷಡ್ಗುಣಭರಿತ ಸನ್ನುತ ಪಾದನೀರರುಹದ್ವಂದ್ವನೆ ಸುರರು ತಿಳಿಯರು ನಿನ್ನ ಭೂರಿಮಹಿಮೆಗಳ ಸಾಕಾರವನು ಬಣ್ಣಿಸುವ ನಾರಾಯಣಾಯ ನಮೋ 2 ವೇದವೇದ್ಯನೆ ದುರಿತಶೋಧನೆ ದೈತ್ಯಗಣ- ಛೇದಕನೆ ಸುರಸುಪ್ರಸಾದಕನೆ ಭಕ್ತಜನ- ಸಮಾನಾಧಿಕ್ಯರಹಿತ ಸತತ ಆದಿತ್ಯ ಶತಕೋಟಿತೇಜೋವಿರಾಜ ಮಹ- ದಾದಿಕಾರಣ ಮಧುವಿರೋಧಿ ಮಂಗಲಸುಖಾಂ- ಮಾಧವಾಯ ನಮೋನಮಃ 3 ಇಂದಿರಾಹೃದಯಾಬ್ಧಿ ಚಂದ್ರ ಚಾರ್ವಂಗ ಮುಚು- ಕುಂದಾಪ್ತ ಸರ್ವಶ್ರುತಿವೃಂದಪ್ರತಿಪಾದ್ಯ ಸಾ- ಸನ್ನುತ ಮಹೇಂದ್ರ ವಂದಾರುಜನತ್ರಿದಶಮಂದಾರ ಕೋಮಲಿತ ವೃಂದಾವನವಿಹಾರ ಕಂದರ್ಪಜನಕ ಬಾ- ತುಭ್ಯಂ ನಮಃ 4 ಜಿಷ್ಣುರಥಸಾರಥಿ ತ್ರಿವಿಷ್ಟಪಸಭಾಧ್ಯಕ್ಷ ಮುಷ್ಟಿಕಾಸುರವೈರಿ ಮುನಿಜನಮನೋಹಾರಿ ಮುಟ್ಟಿ ಭಜಿಪರ ಮನೋಭೀಷ್ಟವ ಸಲ್ಲಿಸುವ ಶ್ರೇಷ್ಠ ಪೂರ್ಣಬ್ರಹ್ಮನೇ ಭ್ರಷ್ಟಸಂಸಾರದೊಳು ನಷ್ಟ ಬುದ್ಧಿಗಳಿಂಗೆ ತುಷ್ಟಿಯನು ನೀನಿತ್ತು ಸಲಹೊ ಸಾಮಜವರದ ತುಭ್ಯಂ ನಮೋ 5 ವಿಧಿಭವಾದಿ ಸಮಸ್ತ ತ್ರಿದಶಜನಸುಖದಾತ ಬುಧಜನಪ್ರಿಯ ಭೂತಭಾವನ ಜಗನ್ನಾಥ ಮದನಕೋಟಿಸ್ವರೂಪ ವಿದುರನಾಲಯದಲ್ಲಿ ಪಾಲುಂಡ ಬ್ರಹ್ಮಾಂಡ- ಕಧಿಪತಿ ಕಲಿಮಲನಾಶ ಕವಿಜನಮನೋಲ್ಲಾಸ ಮಧುಸೂದನಾಯ ನಮೋ 6 ಅಕ್ರೂರವರದ ಸದತಿಕ್ರಮರ ಗೆಲಿದ ಹಯ- ವಕ್ತ್ರ ವೈಕುಂಠಾಖ್ಯ ಪುರವಾಸ ಜಗದೀಶ ಶುಕ್ರ ಶಿಷ್ಯರನೆಲ್ಲ ಪರಿಹರಿಸಿ ಪಾಲಿಸಿದೆ ಶಕ್ರಾದಿಸುರಗಣವನು ಚಕ್ರ ಶಂಖ ಗದಾಬ್ಜಧರ ಚತುರ್ಭುಜ ದೇವ- ಚಕ್ರವರ್ತಿಯನಂತಕೀರ್ತಿ ಪಾವನಮೂರ್ತಿ ತ್ರಿವಿಕ್ರಮಾಯ ನಮೋನಮಃ 7 ರಾಮಣೀಯಕ ವಪು ನಿರಾಮಯ ನಿರಾಶ್ರಯ ಸು- ದಾಮಸಖ ಪರಿಪೂರ್ಣಕಾಮ ಕೈರವದಳ- ಸುಜನಸ್ತೋಮಸುರಕಾಮಧೇನು ಗೋಮಿನೀಪತಿ ಗೋಗಣಾನ್ವಿತನೆ ಗೋಪೀಲ- ಲಾಮ ಗೋವರ್ಧನೋದ್ಧಾರ ಗೋವಿದಾಂಪತಿ ವಿ- ಪ್ರಾಜ್ಞ ವಾಮನಾಯ ನಮೋನಮಃ 8 ಆದಿಮಧ್ಯಾಂತವಿರಹಿತ ನಿಖಿಲಸಾರ್ಚಿತ ವಿ- ರಾಧಭಂಜನ ಭವಾಂಬೋಧಿಕುಂಭಜ ಭಜಕ- ಚತುಷ್ಟಾದ ಪಾವನಚರಿತನೆ ಗಾಧಿಜಾಧ್ವರಪಾಲ ಗರುಡಧ್ವಜ ದಯಾಳು ನಾದಬಿಂದು ಕಲಾತೀತ ರುಕ್ಮಿಣಿನಾಥ ಶ್ರೀಧರಾಯ ನಮೋನಮಃ 9 ಪಾಶಧರನುತ ವೆಂಕಟೇಶ ಸರ್ವೇಂದ್ರಿಯಪ್ರ- ಕಾಶ ಪಾಲಿತನಿಖಿಳಭೂಸುರವ್ರಜ ಮಂದ- ದೂಷಣಾದ್ಯ ಸುರಹರನೆ ಈಶಪತಿಸೇವ್ಯಾಂಬರೀಶನೃಪವರದ ಪರ- ಮೇಶ ಕೋವಳಪೀತವಾಸ ಕರ್ದಮಶುಕಪ- ಹೃಷೀಕೇಶಾಯ ತುಭ್ಯಂ ನಮೋ 10 ಶುದ್ಧ ತ್ರಿಗುಣಾತೀತ ತ್ರಿವ್ರತ ತ್ರಿಜಗತ್ಪಾಲ ಪ್ರದ್ಯುಮ್ನ ಪ್ರಥಮಾಂಗದೊಡೆಯ ಪರಮಾತ್ಮ ಸುರ- ಬುದ್ಧ ಬುಧಜನಸುಲಭ ಮಧ್ವವಲ್ಲಭ ಮಂತ್ರಮೂರ್ತಿ ಕ್ಷೀರಾಬ್ಧಿ ಶ್ವೇ ತದ್ವೀಪವೈಕುಂಠಮಂದಿರತ್ರಯ ಸಾಧು- ಹೃದ್ಯ ಭಕ್ತದ್ವೇಷಭಿದ್ಯ ನಿತ್ಯಾತ್ಮ ಶ್ರೀಪದ್ಮನಾಭಾಯ ನಮಃ11 ಸಾಮಗಾನವಿನೋದ ಸಾಧುಜನಸುಖಬೋಧ ಕಾಮಿತಾರ್ಥಪ್ರದಾತ ಕಪಿಲಋಷಿ ಪ್ರಖ್ಯಾತ ಸಮರಂಗ ಭೀಮ ನಾಮಧಾರಕರ ಪರಿಣಾಮರೂಪಕ ಸುಜನ- ಕ್ಷೇಮಪ್ರಾಪಕ ನೀಲಜೀಮೂತನಿಭವರ್ಣ ದಾಮೋದರಾಯ ನಮೋ 12 ಶಂಕರಾಂತರ್ಯಾಮಿ ಶಾಙ್ರ್ಗಪಾಣಿ ಶರಣ್ಯ ವೆಂಕಟಾಚಲಸದಾಲಂಕಾರ ಶೇಷಪರಿ- ಯಂಕ ಪ್ರವಿತತನಿಷ್ಕಳಂಕಚಾರಿತ್ರ ಸುಸಂಕುಲಾರ್ಚಿತ ಪದಯುಗ ಲಂಕಾಧಿಪತ್ಯವ ವಿಭೀಷಣನಿಗೊಲಿದಿತ್ತ ಓಂಕಾರನಿಧನ ಸಾಮಕಭಕ್ತರಾನೇಕ ಸಂಕಟವ ಪರಿಹರಿಪ ಸತ್ಯ ಸಂಕಲ್ಪ ಶ್ರೀಸಂಕರ್ಷಣಾಯ ನಮೋ 13 ಈ ಸಮಸ್ತ ಜಗತ್ತು ನಿನ್ನುದರದೊಳಗಿಹುದು ಈ ಸಕಲಜೀವರೊಳಗಿಹ ನಿತ್ಯನಿರ್ಮುಖ್ಯ ನೀ ಸಲಹೊ ದೇವದೇವ ಭೂ ಸಲಿಲ ಪಾವಕಾಕಾಶಾದಿ ಭೂತಾಧಿ- ವಾಸ ರಾಕ್ಷಸವನಹುತಾಶ ನಾನಾ ರೂಪ- ವಾಸುದೇವಾಯ ನಮೋ 14 ಅದ್ವಿತೀಯನೆಯಮಿತವಿಕ್ರಮನೆ ಗುಣಕಾಲ ವಿದ್ಯಾಪ್ರವರ್ತಕನೆ ವಿಶ್ವಾದಿ ಸಾಹಸ್ರ ಸಿದ್ಧನಾಮ ನರನಾರಾಯಣಪರಾಯಣನೆ ಬುದ್ಧಿಪ್ರೇರಕಪ್ರೇರ್ಯನ ರುದ್ರರೂಪಪ್ರತಾಪ ಋಗ್ಯಜುಸ್ಸಾಮಶ್ರುತಿ- ವೇದ್ಯ ಬ್ರಹ್ಮಾಂಡಕೋಟಿಗಳ ಸಲೆ- ಪ್ರದ್ಯುಮ್ನಾಯ ತುಭ್ಯಂ ನಮಃ 15 ಉದ್ಧವಾದಿ ಸಮಸ್ತ ಭಾಗವತಜನಕಮಲ- ಮಧ್ಯಚರರಾಜಹಂಸಾಯ ಮಾನಸದ ಶ್ರೀಹರಿಯೆ ವೈದ್ಯನಾಥವಿಧಾತನೆ ಬದ್ಧನಾದೆನು ಕರ್ಮಪಾಶದಿಂದ ದೊರೆ ಸಿಕ್ಕಿ- ಬಿದ್ದೆ ಕೈಪಿಡಿದೆಬ್ಬಿಸೆನ್ನನೆಲೆದೇವ ಮರೆ ಅನಿರುದ್ಧಾಯ ತುಭ್ಯಂ ನಮಃ 16 ಕ್ಷರ ಪುರುಷರೆಲ್ಲ ಬ್ರಹ್ಮಾದಿ ಜೀವರು ರಮಾ ಕ್ಷರಪುರುಷಳೆನಿಸುವಳು ನೀನೆ ಉತ್ತಮ ಪರುಷ ಮಂಗಲರಿತ ಗುರುತಮ ಗುಣಧ್ಯಕ್ಷನೆ ಶರಧಿಸೇತುನಿಬದ್ಧ ಶಬರಿ ಹಣ್ಣನು ಮೆದ್ದ ಶರಭಂಗ ಮುನಿಪಾಲ ಶಮಿತದಾನವಜಾಲ ಪುರುಷೋತ್ತಮಾಯನ್ನಮೋ 17 ಅಕ್ಷಯಾತ್ಮನೆ ವಿಶ್ವರಕ್ಷಕನೆ ವಿಶ್ವಭುಗ್- ವಿಶ್ವತೋಮುಖ ವಿಶ್ವತೋಬಾಹು ಕರುಣಾಕ- ದಯಮಾಡು ಶ್ರೀವಕ್ಷಸ್ಥಲನಿವಾಸನೆ ಲಕ್ಷ್ಮಣಾಗ್ರಜನೆ ಸುವಿಲಕ್ಷಣನೆ ಸುಜ್ಞಾನ- ಮೋಕ್ಷದಾಯಕ ಯಜ್ಞಮೂರ್ತಿ ರೂಪತ್ರಯ ಮ- ಅಧೋಕ್ಷಜಾಯ ನಮೋನಮಃ 18 ಕ್ರೂರಕರ್ಮಿ ಹಿರಣ್ಯಕಶಿಪುವಂ ಕೊಂದ ದು- ರ್ವಾರದುರಿತಾಬ್ಧಿಬಾಡಬ ಭಕ್ತವತ್ಸಲ ಮ- ಶಿರಪ್ರಕರಧೀರ ಪ್ರಹ್ಲಾದಾಭಿವರದ ಭೂರೀಕರರೂಪ ಭೂಮಕೀರ್ತಿಕಲಾಪ ಸಾರವಜ್ರಸ್ತಂಭದಿಂ ಬಂದ ನಂದ ಸುಕು- ನಾರಸಿಂಹಾಯ ನಮೋ 19 ನಿಶ್ಚಲಾತ್ಮ ನಿರೀಹ ನಿರ್ವಿಕಾರಾನಂತ ಪ್ರೋಚ್ಛ ಸರ್ವಗ ಸದಾನಂದ ಪರಿಪೂರ್ಣ ತ- ನಿರ್ಮಿಸುವ ಆಶ್ಚರ್ಯಕೃತ ಸಲೀಲ ಮುಚ್ಚುಮರೆ ಯಾಕಿನ್ನು ಮುಗಿದು ಬೇಡುವೆ ಕೈಯ ಸ್ವಚ್ಛತರ ಭಕ್ತಿಭಾಗ್ಯವನಿತ್ತು ಸಲಹೊ ಮಹ- ಶ್ರೀಮದಚ್ಯುತಾಯ ನಮೋನಮಃ 20 ಚೈದ್ಯಮಥನ ಮನೋಜ್ಞಶುದ್ಧಾತ್ಮ ಸರ್ವಜ್ಞ ಹೊದ್ದಿಸಿದ ಪಾರ್ಥನಿಂಗೆ ಇದ್ದು ನೀ ಹೃದಯದೊಳು ತಿದ್ದೆನ್ನ ಮತಿಯ ಸ್ಮರ- ವಿದ್ದ ಮಾನಸವ ಪಾದದ್ವಯದೊಳಿರಿಸೈ ದ- ಜನಾರ್ದನಾಯ ನಮೋನಮಃ 21 ಮಂದಾಕಿನಿಯ ಪಡೆದ ಮಾತೆಯ ಶಿರವ ಕಡಿದ ನಂದಗೋಪನ ಕಂದನೆನಿಸಿ ಬಾಲಕತನದ ಸುಂದರೀರಮಣ ಜಯತು ತಂದೆತಾಯಿಯು ಸರ್ವ ಜೀವರ್ಗೆ ನೀನೆ ನಿಜ- ವೆಂದು ತಿಳಿಯದೆ ಮಾಯೆಯಿಂದ ಮಮಕರಿಸಿ ಪರ- ಉಪೇಂದ್ರಾಯ ತುಭ್ಯಂ ನಮಃ 22 ಸ್ಥಿರಚರಾತ್ಮಕ ಧೇನುಚರ ದೇವಕೀಜಠರ- ಶರಧಿಗುರುರಾಜ ಭಾಸ್ಕರಮಂಡಲಾಂತಸ್ಥ ದುರಿತದೂರ ಗಭೀರನೆ ನಿರತಿಶಯ ನಿಜನಿರ್ವಿಕಲ್ಪ ಕಲ್ಪಾಂತಸಾ- ಗರದಿ ವಟಪತ್ರಪುಟಶಯನ ಪುಣ್ಯಶ್ರವಣ ಹರಯೇ ನಮೋನಮಸ್ತೇ 23 ವೃಷ್ಟಿಕುಲತಿಲಕ ಸರ್ವೇಷ್ಟದಾಯಕ ನಿಮಿತ- ಶಿಷ್ಟಜನಪರಿಪಾಲ ಶಿವಗೌರೀ ಗಣಪಗುಹ- ಸೃಷ್ಟಿಶಕ್ತಿಯನೀವ ಗೋವರ್ಧನಾಚಲವ ಬೆಟ್ಟಿನಿಂದೆತ್ತಿದ ಮಹಾ ದುಷ್ಟ ನರಕಾದಿದಾನವರ ಮರ್ದಿಸಿದ ಜಗ- ಜಟ್ಟಿ ಜನಿಮೃತಿಭಯವಿದೂರ ವಿಷಮಯಸರ್ಪ- ಹರೇ ಕೃಷ್ಣಾಯ ತುಭ್ಯಂ ನಮಃ 24 ಅಕ್ಷೀಣ ಬಲಶಾಲಿಯಾಂಜನೇಯನಿಗಿತ್ತೆ ಅಕ್ಷಯದ ಬ್ರಹ್ಮಪದವಿಯ ಲೋಕದೊಳಗ್ಯಾವ- ದಕ್ಷಮರ್ದನ ನಿನಗೆ ಸರ್ವತಂತ್ರಸ್ವತಂತ್ರ ಪಕ್ಷೀಂದ್ರಭುಜವಿರಾಜ ಸಾಕ್ಷಿಚೈತನ್ಯರೂಪನೆ ಕಮಲನಾಭನೆ ಮು- ಮುಕ್ಷುಜನಧ್ಯಾನಗಮ್ಯನೆ ಗದಾಧರ ದನುಜ- ಲಕ್ಷ್ಮೀನಾರಾಯಣಾಯ ನಮೋ 25
--------------
ತುಪಾಕಿ ವೆಂಕಟರಮಣಾಚಾರ್ಯ
(ತುಳಸೀ ದೇವಿ ಪ್ರಾರ್ಥನೆ)* ಮದ್ದಾನಿಕ್ಕಿದೇನೆ ಹರಿಗೆ ಮುದ್ದು ತುಳಸಾ ದೇವಿ ಶುದ್ಧಾಮನದಿ ಪೂಜಿಸುವರಾ ಸಿದ್ಧವಾಗಿ ಕಾಯುವಿ ಪ. ಕಮಲ ಮಲ್ಲಿಕಾದಿ ನಾನಾ ಸುಮನ ತತಿಗಳಿಂದಾ ನಿತ್ಯ ನಮಿಸೆ ಭಕ್ತಿಯಿಂದಾ ಅಮಿತ ಮಹಿಮ ನಿನ್ನ ಹೊರತು ಕ್ಷಮಿಸನು ಮುಕುಂದಾ ಭ್ರಮಿತನಾದ ನಿನ್ನ ಮೇಲೆ ಕಮಲೇಶ ಗೋವಿಂದ 1 ಆದಿ ಲಕ್ಷ್ಮಿದೇವಿಯನ್ನು ಉರದೊಳಿಟ್ಟು ನಿನ್ನ ಪಾದದಲ್ಲಿ ಧರಿಸಿದನೆಂದಾದಿಪುರಷನನ್ನ ಬೋಧಿಸಿ ಕರ್ಣದಲ್ಲಿ ಮಸ್ತಕಾಧಿರೋಹವನ್ನ ಸಾಧಿಸಿ ತದ್ಭಕ್ತಜನರಿಗಾದಿ ಬಹು ಪಾವನ್ನ 2 ಸಂತತ ಹನ್ನೆರಡು ಕೋಟಿ ಸ್ವರ್ಣಪುಷ್ಪದಿಂದಾ- ನಂತಾಭವದಿ ಪೂಜಿಸುವುದಕ್ಕಿಂತಲಧಿಕಾನಂದಾ ಕಂತುಜನಕಗಹುದು ಕೋಮಲಾಂಶದಳಗಳಿಂದಾ ಇಂತು ಶೇಷಗಿರೀಶಗಾದಿ ಕಾಂತೆ ಮೋಹದಿಂದಾ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಧರ್ಮಸ್ಥಳ ಮಂಜುನಾಥನನ್ನು ನೆನೆದು) ಯಾಕೆನ್ನ ಮೇಲೆ ನಿರ್ದಯ ಶ್ರೀಮಂಜುನಾಥ ಲೋಕೇಶ ಮಾಡು ನಿರ್ಭಯ ಪ. ಪಾಕಹಪ್ರಮುಖದಿವೌಕಸಮುನಿಜನಾ- ನೀಕವಂದಿತಪದಕೋಕನದ ಕೋವಿದ ಅ.ಪ. ಪಾಪಾತ್ಮಪಾಪಸಂಭವ ನಾನೆಂಬುವದಕಾ- ಕ್ಷೇಪವೇನಿಲ್ಲೋ ಮಾಧವ ಶ್ರೀಪರಮೇಶ್ವರ ಕೋಪಕಲುಷಹರ ತಾಪತ್ರಯಶಮನಾಪದ್ಭಾಂಧವ ಗೋಪತುರಂಗ ಮಹಾಪುರುಷ ಗಿರೀಶ 1 ಸೋಮಸುರ್ಯಾಗ್ನಿಲೋಚನ ಸದ್ಗುಣಪುಣ್ಯ- ನಾಮ ಪಾಪವಿಮೋಚನ ವ್ಯೋಮಕೇಶಾಚ್ಯುತಪ್ರೇಮ ಮಹಾಮಹಿಮ ಕಾಮಾರಿ ನಿನ್ನ ನಾ ಮರೆಹೊಕ್ಕೆನು ಹೇ ವiಹಾದೇವ ಸೋಮಚೂಡಾಮಣಿ 2 ಧರ್ಮಮಾರ್ಗನಿಯಾಮಕ ಸತ್ಯಾತ್ಮ ಪರ- ಬ್ರಹ್ಮ ಸುಜ್ಞಾನದಾಯಕ ನಿತ್ಯ ಸತ್ಕರ್ಮಪ್ರೇರಕ ಗಜ- ಚರ್ಮಾಂಬರಧರ ದುರ್ಮತಿಪ್ರಹರ ಭರ್ಮಗರ್ಭಜ ಭವಾರ್ಣವತಾರಕ 3 ಕಪ್ಪ ಕಾಣಿಕೆಗಳನು ತರಿಸುವರ- ಣ್ಣಪ್ಪದೈವವೆ ದೂತನು ತಪ್ಪದೆ ಚಂದಯ ಹೆಗ್ಗಡೆಯರ ಮನದೊ ಳಿಪ್ಪ ದಧಿಮಥನ ತುಪ್ಪದಂತೆಸೆವ ಕರ್ಪೂರಗೌರ ಸರ್ಪವಿಭೂಷಣ 4 ಪೊಡವಿಗಧಿಕವಾಗಿಹ ಕುಡುಮಪುರ- ಕ್ಕೊಡೆಯ ಭಕ್ತಭಯಾಪಹ ಕಡಲಶಯನ ಲಕ್ಷ್ಮೀನಾರಾಯಣಗತಿ- ಬಿಡೆಯದವನು ನಿನ್ನಡಿಗೆರಗುವೆ ವರ ಮೃಡಶಂಕರ ಕೊಡು ಕೊಡು ಮನದಷ್ಟವ 5
--------------
ತುಪಾಕಿ ವೆಂಕಟರಮಣಾಚಾರ್ಯ
(ನಾಟಿ ಅಗ್ರಹಾರದ ಶ್ರೀರಾಮ) ಕಂಡಿರೆ ನಾಟಿ ಕೋದಂಡ ರಾಮನ ಪದ್ಮ- ಜಾಂಡದಿ ನಾಯಕನಾ ಕಟಕ ಕಿರೀಟಧಾರಿ ಮಾ- ರ್ತಾಂಡ ಕೋಟಿಪ್ರಭನಾ ಪ. ಭೂತಳದೊಳಗೆ ವಿಖ್ಯಾತರಾಗಿಹ ರಘು- ನಾಥ ಒಡೆಯರ ಮೇಲೆ ಪ್ರೀತಿಯಿಂದಲಿ ಬಂದ ಪವಮಾನವಂದಿತ- ನೀತನು ನಿಜ ಜನರ ಬೀತಿಯ ಬಿಡಿಸುವೆನೆಂದು ಬಿಲ್ಲಂಬುಗ- ಳಾಂತು ಕರಾಬ್ಜದಲಿ ಪಾತಕಗಳ ಪರಿಹಾರಗೈದರಿಗಳ ಘಾತಿಸುವನು ಜವದಿ 1 ಕಡು ಪರಾಕ್ರಮಿ ವಾಯಿನು ಧಿಕ್ಕರಿಸಿ ಕೈ ಪಿಡಿದಂತೆ ರವಿಜನಸು ಬಡವರ ಭಕ್ತಿಯ ದೃಢಕೆ ಮೆಚ್ಚುತ ಜಗ- ದೊಡೆಯನು ಸಂತಸದಿ ಒಡೆಯ ನೀ ಸಲಹೆಂದು ವಂದಿಸಿ ತುಲಸಿಯ ಕೊಡುವನು ಕರುಣ ಕಟಾಕ್ಷದಿ ಪುರುಷಾರ್ಥ ತಡೆಯದೆ ತವಕದಲಿ 2 ಎರಡು ಭಾಗದಿ ಭಕ್ತ ಗರುಡ ಮಾರುತಿಯರ- ನಿರಿಸಿ ಕೊಂಡವನುದಿನದಿ ನಿರವಧಿ ಸೇವೆಯ ಕೈಕೊಂಡು ಜಾನಕಿ- ವರನಿಹನೀಪುರದಿ ಸಿರಿವರ ವೆಂಕಟಗಿರಿ ರಾಜನಿವನೆಂದು ನೆರೆ ನಂಬಿ ಸೇವಿಪರಾ ಪರಿಕಿಸಿ ತನ್ನಯ ಚರಣ ಸೇವೆಯನಿತ್ತು ಪೊರೆವನು ಕರುಣಾಕರ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಪಡುಬಿದ್ರೆಯ ಗಣೇಶ) ಮಾಡೆನ್ನೊಳು ಕರುಣ ಗಜಾನನ ಪ. ಮೂರ್ಖನೆನ್ನುತಲೆನ್ನ ಧಿಕ್ಕರಿಸದಿರು ಶಕ್ರವಿನುತ ಚರಣ ಗಜಾನನ 1 ಹರಿನಾಭೀ ಕಮಲಾಕಾಶಾತ್ಮನೆ ಗಿರಿಜಾಂಕಾಭರಣ ಗಜಾನನ 2 ಭಾರತಾರ್ಥ ತತ್ವಾರ್ಥ ಪ್ರಬೋಧನೆ ಸೂರಿಜನೋದ್ಧರಣ ಗಜಾನನ 3 ಕಡಲಶಯನ ಲಕ್ಷ್ಮೀನಾರಾಯಣ ಸಖ ಪಡುಬಿದ್ರೆನಿಕೇತನ ಗಜಾನನ 4
--------------
ತುಪಾಕಿ ವೆಂಕಟರಮಣಾಚಾರ್ಯ
(ಬಪ್ಪನಾಡಿನ ದೇವಿಯನ್ನು ಕುರಿತು) ದಯಮಾಡೆ ಬಾಗೆ ಶ್ರೀಪಂಚದುರ್ಗೆ ದಯಮಾಡೆ ಬಾಗೆಪ. ದಯಮಾಡೆ ಕೇವಲ ಭಯವಿಹ್ವಲನಲ್ಲಿ ದಯಸಾಗರೆ ಸೌಭಾಗ್ಯಸಂಪದವನ್ನುಅ.ಪ. ವೇದಾಂತವೇದ್ಯೆ ನಿಖಿಳಜಗದಾದಿವಿನೋದೆ ಮಧುರಬಿಂಬಾಧರೆ ನಿನ್ನಯ ಪರಿಹರಿಸಿ ಸರ್ವಾಪ- ರಾಧಗಳ ಕ್ಷಮಿಸಮ್ಮ ಕೈಟಭಸೂದನನ ಸೋದರಿ ಮಹೇಶ್ವರಿ 1 ಅಂಬುಜಚರಣೆ ಮಾಧುರ್ಯೋರುರಂಭಾಸಮಾನೆ ಲಂಬೋದರಪರಿರಂಭಕರಾಂಬುಜೆ ಮುಖೇಂದುಪದ್ಮ ದ- ರೋಲಂಬಕುಂತಳೆ ಶುಂಭ ಮರ್ದಿನಿ 2 ಸಿಂಧೂರನಯನೆ ನಿಖಿಲಾಮರವಂದಿತಚರಣೆ ನಿತ್ಯಾನಂದಪ್ರಕಾಶಿನಿ ಅಂಧಕಾಸುರವೈರಿಹೃದಯಾನಂದ ಪಾರಾವಾರ ಪೂರ್ಣಮಿ- ಸುರಥನರೇಂದ್ರವರದೆ ಮೃಗೇಂದ್ರವಾಹಿನಿ3 ರಜತಾದ್ರಿವಾಸೆ ಚಂಪಕನಾಸೆ ಸುಜದನೌಘಪೋಷೆ ಮಹಾಗಜಗೌರಿ ಶಂಕರಿ ತ್ರಿಜಗಜ್ಜನನಿ ಭಾವನಿ ಪಾರ್ವತಿ ಭುಜಗಭೂಷಣರಾಣಿ ಕಲುಷ- ದಿವಾಕರೆ ಮಾನಿತೋದ್ಧರೆ4 ತಪ್ಪು ಸಹಸ್ರವಿದ್ದರು ಮನದೊಳಿಪ್ಪುದಜಸ್ರ ಜಗದಾದಿಮಾಯೆ ಕಪ್ಪುಕಂಠನ ರಾಣಿ ವರಕಂದರ್ಪಧಿಕತರೂಪೆ ಸಾಧು ಪ- ದ ಪ್ರಸಾದವ ಪಾಲಿಸೆನ್ನಲಿ ಬಪ್ಪನಾಡಿನ ಭದ್ರದಾಯಕಿ5
--------------
ತುಪಾಕಿ ವೆಂಕಟರಮಣಾಚಾರ್ಯ