ಒಟ್ಟು 32 ಕಡೆಗಳಲ್ಲಿ , 15 ದಾಸರು , 26 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಯತೋರೋ ರಂಗ ಬಾಯತೋರೋ ಮುದ್ದು ಬಾಯಲಿ ತುತ್ತು ಅನ್ನವನಿಡುವೆ ಬಾಯತೋರೋ ಪ ಕತ್ತಲಿನಂತಿರುವ ತುಟಿಗಳ ತೆರೆಯುತ ಬಾಯತೋರೋ ಜ- ಗತ್ತಿನ ಬೆಳಕನು ನೋಡುವೆ ಒಮ್ಮೆ ಬಾಯತೋರೋ ಒತ್ತೊತ್ತಿನ ತುತ್ತನಿಡಲು ಬಂದಿರುವೆ ಬಾಯತೋರೋ ತುತ್ತೇ ತುತ್ತನು ತಿನ್ನುವೆ ಜಾಣ ಬಾಯತೋರೋ 1 ಭಂಜಿಸಿ ಬಲಿಯ ದಾನವ ಬೇಡಿದ ಬಾಯತೋರೋ ಅಂಜಿದ ನರನಿಗೆ ಗೀತೆ ಬೋಧಿಸಿದ ಬಾಯತೋರೋ ಗಂಜಿಯಕುಚೇಲಗವಲಕ್ಕಿ ಬೇಡಿದ ಬಾಯತೋರೋ ಅಂಜದ ಕರ್ಣಗೆ ಗುಟ್ಟು ಹೇಳಂಜಿಸಿದ ಬಾಯತೋರೋ2 ಅಮ್ಮ ಯಶೋದೆಯ ಮೊಲೆಹಾಲನುಂಡ ಬಾಯತೋರೋ ಗುಮ್ಮ ಪೂತನಿಯ ಅಸುಮೊಲೆ ಜಗಿದ ಬಾಯತೋರೋ ಸುಮ್ಮಸುಮ್ಮನೆ ಅಂಗನೆಗೆ ಮುತ್ತನಿಟ್ಟ ಬಾಯತೋರೋ ಗಮ್ಮನೆ ಅಪ್ಪಿ ಗೋಪಿಯರ ಪೀಡಿಸಿದ ಬಾಯತೋರೋ3 ಮೋಹನಮುರಳಿಯಮೋದದಿನುಡಿಸಿದಬಾಯತೋರೋ ಮೋಹನಾಂಗನೆಯರ ಮಾಟದಿ ಮಿಡಿಸಿದ ಬಾಯತೋರೋ ಮೋಹನ ರಾಗದಿ ಗೋವುಗಳ ಕರೆದ ಬಾಯತೋರೋ ಮೋಹಿಪ ರಾಧೆಯ ಮೈಯುಲಿಯೆ ಪಾಡಿದ ಬಾಯತೋರೋ 4 ಬಳಕುವ ಗೋಪಿಯರ ಚೇಡಿಸಿದಾ ತುಂಟ ಬಾಯತೋರೋ ಬಲರಾಮನನ್ನು ಗೋಳಾಡಿಸಿದ ಆ ಬಾಯತೋರೋ ಬುಳುಬುಳು ಮಣ್ಣನೆ ಮೆಲ್ಲುವಾ ಪುಟ್ಟ ಬಾಯತೋರೋ ಭಲರೆ ಅಮ್ಮನಿಗೆ ಬ್ರಹ್ಮಾಂಡ ತೋರಿದ ಬಾಯತೋರೋ 5 ಪುರಂದರ ಬಾಯಾಗಿ ಹಾಡಿದ ಬಾಯತೋರೋ ಸೂ ಕುಮಾರ ಲಕ್ಷ್ಮೀಶರಲಿ ಬರೆದಾಡಿದ ಬಾಯತೋರೋ ಶ್ರೀಕಾಂತ ನಮ್ಮ ಜಾಜಿಪುರೀಶನೆ ಬಾಯತೋರೋ ಸಾಕಾಯಿತೋ ಭವದ ಬವಣೆನೀಗಲು ಬಾಯತೋರೋ6
--------------
ನಾರಾಯಣಶರ್ಮರು
ಬೇಕಾದವನೇ ಹರಿದಾಸ ಪ ಏಕಾದಶಿ ಉಪವಾಸ ಮಾಡಿದರೆ ನಾಕಿಗಳಿಗೆ ಆಗದು ವಿಶ್ವಾಸ ಅ.ಪ ಏಕಾದಶಿಯೆ ಯೋಗಸಿದ್ಧಿ ಏಕಾದಶಿಯೆ ಭೋಗಪ್ರಾಪ್ತಿ ಏಕಾದಶಿಯಲಿ ಎರೆಡು ಕಾರ್ಯಲ- ಕ್ಷೀಕಾಂತನ ಭಜನೆ ರಾತ್ರಿ ಜಾಗರವು 1 ಉಪವಾಸ ವ್ರತವೆ ವ್ರತವು ಜಪಶೀಲರ ತಪವೇ ಸುಖವು ಅಪರಿಮಿತವಾದ ಸತ್ಕರ್ಮಗಳೆಲ್ಲಾ ಚಪಲದಿ ಓಡುವುದುಪವಾಸದ ಹಿಂದೆ 2 ಅನ್ನಸಾರು ಕಾಯಿಪಲ್ಯ ಒಬ್ಬಟ್ಟು ತಿನ್ನುವುದೇ ಪ್ರತ್ಯಕ್ಷ ನರಕವು 3 ಘನಮೋದದಲಿ ಪವನಜನಾದ ಭೀ- ಮನೇ ಸ್ವೀಕರಿಸಿರುವನು ಪೂರ್ವದೊಳು 4 ವಿಕಳ ಬುದ್ಧಿಯಾಗದೆ ಸಮಯದಿ ತನ್ನ ಸುಕುಮಾರನ ಕಡಿಯಲೆತ್ನಿಸಿದನು 5 ನಿರಾಹಾರವು ನಡೆಯಲುತ್ತಮವು ಎರಡನೇಯದು ಮೇಲ್ಪೇಳಿದುದು ಪರಿಪರಿ ಅನ್ನೋತ್ಸವದಿ ಕೆಡುವನು 6 ಮಾನವ ಕರಾಮಲಕ ಮುಕ್ತಿಯಲಿ ಸುಖಪಡುವನು 7
--------------
ಗುರುರಾಮವಿಠಲ
ಮಡಿಮಡಿಯೆಂದು ಹಾರ್ಯಾಡಿ ಸುಳ್ಳೆ ಮಡಿಯಬೇಡಿರೋ ಭವದುರಳ್ಯಾಡಿ ಪ ಜಡಮತಿ ಕಡಿದು ಬಿಡಲಾಸೆ ತೊಡೆದು ನಡಿರೋ ಸನ್ಮಾರ್ಗದದು ನಿಜಮಡಿ ಅ.ಪ ಬದ್ಧಗುಣದೊಳಿರೆ ಅದು ಶುದ್ಧಮಡಿ ಕದ್ದು ತಿನ್ನುವ ಕ್ಷುದ್ರಬುದ್ಧಿ ನೀಗಿ ಪರಿ ಶುದ್ಧರಾಗಲದು ನಿರ್ಧಾರ ಮಾಡಿ1 ಕ್ಲೇಶಕಳೆವುದದು ಲೇಸುಮಾಡಿ ದು ರ್ವಾಸನಳಿಯೆ ಅದು ಮೀಸಲು ಮಡಿ ಮೋಸಮರವೆ ನೀಗಿ ಈಶನ ನಾಮವ ಧ್ಯಾಸದಿರಲು ಅನುಮೇಷ ಮಡಿ 2 ಬಿಟ್ಟದ್ದು ಉಟ್ಟರದು ಯಾವ ಮಡಿ ಉಟ್ಟು ಮುಟ್ಟೆಂಬುದಿದಾವಮಡಿ ಕೆಟ್ಟ ಪದ್ಧತಿಗಳ ಬಿಟ್ಟು ಸದಾಚಾರ ನಿಷ್ಠಪರರಾಗಲದು ಶಿಷ್ಟಮಡಿ 3 ಅರಿವುಗೂಡುವುದೆ ಸ್ಥಿರಮಡಿ ಬಹ ಜರ ಮರಣಳಿವುದೆ ಪರಮಮಡಿ ದುರಿತ ಗೆಲಿದು ಹರಿಶರಣರೊಳಾಡ್ವುದು ತಿರುಗಿ ಮುಟ್ಟಿಲ್ಲದ ಪರಮಮಡಿ 4 ಮಡಿಯಾದಮೇಲೆ ಮೈಲಿಗೆಲ್ಲಿ ಖೋಡಿ ಜ್ಞಾನ ವಿಡಿದುನೋಡು ನಿಜ ಹುಡುಕ್ಯಾಡಿ ಮಡಿಮುಟ್ಟಿಲ್ಲದ ನಮ್ಮೊಡೆಯ ಶ್ರೀರಾಮ ನಡಿ ದೃಢದಿ ನಂಬಲಿದೇ ಮೂಲಮಡಿ 5
--------------
ರಾಮದಾಸರು
ವಾಸುದೇವ ಸಾಮಾನ್ಯ ನೀನಲ್ಲವೊ ಪ ನವನೀತ ಇಷ್ಟು ತಿನ್ನುವಿ ಭೂತಗಳಿರುವುವೇನೊ ಉದರದೊಳು 1 ಕುದಿಯುವ ಪಾಲನು ಮುದದಿಂದ ಕುಡಿಯುವೆ ಉದಕದ ರಾಶಿ ಜಿಹ್ವೆಯೊಳಿಹುದೇನೊ 2 ರಾತ್ರಿ ವೇಳೆಯಲಿ ನೀ ಸುತ್ತುವಿ ಮನೆ ಮನೆ ನೇತ್ರದೊಳ್ ಸೂರ್ಯಚಂದ್ರರು ಇಹರೇನೊ 3 ಶಿಕ್ಷೆಮಾಡಲು ಬೆನ್ನು ಪಾಶ್ರ್ವದಲ್ಲಿಹ ನಮ್ಮ ಈಕ್ಷಿಸುವುದಕೆ ವಿಶ್ವತ ಚಕ್ಷುವೇನೊ 4 ನಿನ್ನ ಚರಿತೆ ಎಮಗೆ ಚೆನ್ನಾಗಿ ತಿಳಿಸಿ ಪ್ರ ಸನ್ನನಾಗದಿರೆ ಮನ್ನಿಸೆವೋ ನಿನ್ನ 5
--------------
ವಿದ್ಯಾಪ್ರಸನ್ನತೀರ್ಥರು
ವಿಶೇಷ ಆ ಹಣ್ಣು ಈ ಹಣ್ಣು ನೆನಸಿ ಫಲವೇನೆ ಈ ಹುಣಸೇಹಣ್ಣಿಗೆ ಸಮಬಾಹೋದೇನೆ ಪ ಹಡಗಿಂದ ಬಂದಿತು ಉತ್ತತ್ತಿ ಹಣ್ಣು ಬಡವರಿಗೆ ಬೇಕಾದ ಬಾಳೆಯ ಹಣ್ಣು ಕೂತರೆ ಏಳದು ಕುಂಬಳದ್ದಲ್ಲ ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 1 ಮಕ್ಕಳು ಬಯಸುವ ಚಕ್ಕೋತ ಹಣ್ಣು ಸಕ್ಕರೆ ಸವಿಯಾದ ಅನಾಸಿನ ಹಣ್ಣು ರುಚಿ ಹಲಸಿನ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 2 ದಾಹವಡಗಿಸುವದು ದ್ರಾಕ್ಷಿಯ ಹಣ್ಣು ದೊರೆಗಳು ತಿನ್ನುವ ದಾಳಿಂಬೆ ಹಣ್ಣು ಫರಂಗಿಯರು ತಿನ್ನುವ ಪನ್ನೇರಳೆ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 3 ಅತಿಮಧುರವಾದ ಕಿತ್ತಲೆ ಹಣ್ಣು ಯತಿಗಳಿಗಾನಂದ ಸೀತಾಫಲದ್ಹಣ್ಣು ಅತಿರುಚಿಯಾದ ಅಂಜೂರದ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 4 ಮಾನವಂತರು ತಿನ್ನುವ ಮಾವಿನ ಹಣ್ಣು ಜ್ಞಾನಿಗಳಿಗೆ ರಾಮನಾಮದ ಹಣ್ಣು ದೀನಜನರು ತಿಂಬ ಮೂಸುಂಬೆ ಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 5 ಅಪರೂಪದಲಿ ಬೆಳೆದ ಮಾದಳದ್ಹಣ್ಣು ಕಪಿಗಳು ತಿನ್ನುವ ಸೀಬೆಯ ಹಣ್ಣು ತಪಸ್ವಿಗಳಾಹಾರ ಜಂಬುನೇರಳೆಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 6 ಪರಿ ಔಪಧಕೆ ಹೆರಳೆಯ ಹಣ್ಣು ಮರ್ಯಾದೆಗೆ ಕೊಡುವ ನಿಂಬೆಯ ಹಣ್ಣು ಪರಮ ರೂಪಿಯಾದ ಕರಬೂಜದ್ಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 7 ಬಡವರಿಗೂ ಈ ಹುಣಸೇ ಹಣ್ಣಿರಬೇಕು ಬಲ್ಲಿದರಿಗೂ ಹುಣಸೇ ಹಣ್ಣಿರಬೇಕು ರುಚಿ ಎಲ್ಲ ಜನರುಗಳು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 8 ಹುಣಸೇಹಣ್ಣಿಲ್ಲದೆ ಭಾಂಡ ಶುದ್ಧಿಗಳಿಲ್ಲ ಹುಣಸೇ ಇಲ್ಲದೆ ಸ್ವಯಂಪಾಕ ರುಚಿಯು ಇಲ್ಲ ಹುಣಸೇ ಮರಕ್ಕಿಂತ ಗಟ್ಟಿ ಮರಗಳಿಲ್ಲ ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 9 ಹುಣಸೇಕಾಯಿಯ ಕುಟ್ಟಿ ರಸವ ಮಾಡುವರು ಹುಣಸೇಹಣ್ಣನು ಕುಟ್ಟಿ ಅಣಿಮಾಡಿಡುವರು ಹುಣಸೇಹಣ್ಣಿನ ಬೆಲೆ ಮುಗಿಲಿಗೇರಿರಲು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 10 ಹರಿಯ ಅಪ್ಪಣೆಯಂತೆ ಹುಣಸೆಯ ಮರಹುಟ್ಟಿ ಪರರಿಗೆ ಉಪಕÀರಿಸುವದಿದು ಹರಿಯಾಜ್ಞೆ ವರದ ಶ್ರೀ ಹರಿ ಕಮಲನಾಭ ವಿಠ್ಠಲನಿಚ್ಛೆ ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 11
--------------
ನಿಡಗುರುಕಿ ಜೀವೂಬಾಯಿ
ಶ್ರೀ ಹರಿಸ್ತುತಿ ಗೋಪಿ ನಿನ್ನ ಮಗ ಪ ಯಥೇಷ್ಟ ಮಾಡುವ ಈ ಕಳ್ಳ ಕೃಷ್ಣನು ಅ.ಪ ಅಡಗಿ ಮನೆಯೊಳಡಗಿಕೊಂಡಿರುವ ಅಲ್ಲಿದ್ದ ಭಾಂಡಗಳ್ ಬುಡಮೇಲ್ ಮಾಡಿ ಅಡಕಲೇರಿಸುವಾ ಅಡಿಗಳನು ಮೆಲ್ ನಿಡುತ ನೆಲವಿಲಿ ಇಡುವ ಪಾಲ್ ಮೊಸರನೆಲ್ಲ ಸವಿಯುವ ಗಡನೆ ಗೆಳೆಯರ ನೊಡನೆ ಬಂದು ಕಡೆವ ಗಡಗಿಯ ನೊಡೆದು ಪೋಗುವಾ 1 ಸಿಕ್ಕಮನೆ ಮನೆ ಹೊಕ್ಕು ನೋಡುವನೆ ತಾ ಸಿಕ್ಕದಿರನು ತಕ್ಕ ಕಳ್ಳಿವ ಠಕ್ಕನಾಗಿಹನು ಅಕ್ಕ ಕೇಳೆÀ ಅಕ್ಕರದಿ ಕೈಯಿಕ್ಕಿ ಕಡೆದಿಹ ಚೊಕ್ಕ ಬೆಣ್ಣೆಯ ಚಿಕ್ಕ ಬಾಲರಿಗಿಕ್ಕಿ ತಿನ್ನುವ ಮಿಕ್ಕ ಬೆಣ್ಣೆಯ ಬೆಕ್ಕಿಗ್ಹಾಕುವ 2 ಎಂಥವನಿವ ಖಳರಂತೆ ಮಾಡುವನೆ ಬೇ ಕಂತೆ ಕರುಗಳ ತಂತುಬಿಚ್ಚಿ ನಿಂತುನೋಡುವನೆ ಅಂಥ ಇಂಥವನಲ್ಲ ನಿನ್ನ ಮಗ ಸಂತ ಜನಮನ ದಂತರಂಗನು ಕಾಂತೆಯರು ಮನದಂತೆ ಬೈದರೆ ನಿಂತು ನಗವಾನಂತಾದ್ರೀಶನು 3
--------------
ಅನಂತಾದ್ರೀಶರು
ಸುಲಿದ ಬಾಳೆ ಹಣ್ಣು ಸುಟ್ಟು ತಿನ್ನಬೇಡಿರೊ ಹಳೆಯ ಜನರ ಅನುಭವಗಳ ಹಳಿಯಬೇಡಿರೊ ಬಿಳಿಯ ವಸ್ತುವೆಲ್ಲ ಕ್ಷೀರವಲ್ಲ ಕಾಣಿರೊ ಥಳಥಳಿಸುವುದೆಲ್ಲ ರಜತವಲ್ಲ ಕಾಣಿರೊ ಸಿರಿಯು ಬಂದ ಕಾಲದಲ್ಲಿ ಮೆರೆಯಬೇಡವೋ ಶಿರವು ಗಟ್ಟಿಯೆಂದು ಕಂಬ ಗುದ್ದಬೇಡವೊ ಮನಕೆ ತುಷ್ಟಿಕೊಡದ ಕಾರ್ಯಗಣನೆ ಬೇಡವೊ ಅನುವಿನಲ್ಲಿ ಪಿಡಿದ ಕಾರ್ಯ ಕೊನೆಯಗಾಣಿಸೊ ಹಾವು ಕೊಂದು ಹದ್ದುಗಳಿಗೆ ಹಾಕಬೇಡವೊ ಗೋವು ಕೊಂದು ಪಾದರಕ್ಷೆ ದಾನಬೇಡವೊ 10 ಅರಿಯದ ಜನರಲ್ಲಿ ಅಂತರಂಗಬೇಡವೊ ಪರರ ಗೋಪ್ಯ ತಿಳಿದರೆ ಬಹಿರಂಗಬೇಡವೊ ಜಂಭ ಕೊಚ್ಚಬೇಡವೊ ರಗಳೆ ರಂಪದಿಂದ ಪರರ ಒಲಿಸಬೇಡವೊ ಗೆದ್ದರಾ ಎತ್ತು ಬಾಲವನ್ನು ಹಿಡಿಯಬೇಡವೊ ಒದ್ದರೆ ಅದು ಹಲ್ಲುಗಳನು ಕಿರಿಯಬೇಡವೊ ಮೂರ್ಖ ಜನಗಳಲ್ಲಿ ವಾದ ಮಾಡಬೇಡವೊ ಮಕ್ಕಳೆದುರಿನಲ್ಲಿ ಗ್ರಾಮ್ಯವಚನ ಬೇಡವೊ ಬಳಿಕ ಮಾತನಾಡುವನು ಗೆಳೆಯನಲ್ಲಯ್ಯ ಕುಳಿತು ತಿನ್ನುವವನು ಸಾಹುಕಾರನಲ್ಲಯ್ಯ 20 ಗಂಟು ಜಗಳ ಕದನಗಳಲಿ ತಂಟೆಬೇಡಯ್ಯ ನಂಟರಿಷ್ಟರಲ್ಲಿ ಭಂಟನಾಗಬೇಡಯ್ಯ ನಾಕು ಜನರ ಮಾತ ಮೀರಿ ನಡೆಯಬೇಡÀಯ್ಯ ಪೋಕರಿ ಜನಗಳಲಿ ಮೂಕ ಬದಿರನಂತಿರೊ ಕಾಲದಲ್ಲಿ ಕೆಲಸಮಾಡಿ ಮುಗಿಸೆಲೊ ನಾಳೆ ನಾಳೆಯೆಂಬ ಕೆಲಸ ಹಾಳು ಕಾಣಿರೊ ಬಿಂಕದಿಂದ ಹರಿಗುರುಗಳ ಮರೆಯಬೇಡಯ್ಯ ಸಂಕಟ ಬಂದಾಗ ವೆಂಕಟೇಶ ಬರುವನೆ ಸಾಲ ಸೋಲ ಮಾಡಿ ದಾನ ಧರ್ಮ ಬೇಡಯ್ಯ ಕೇಳದಿರಲು ನೀತಿ ಹೇಳ ಹೋಗಬೇಡಯ್ಯ 31 ಪರರು ನೋಯುವಂಥ ಮಾತನಾಡಬೇಡಯ್ಯ ಉರಿವ ಒಲೆಗೆ ಉಪ್ಪುಕಾಳನೆರಚಬೇಡಯ್ಯ ನೆರೆಯು ಬಾಳುತಿರಲು ನೋಡಿ ಕರಗಬೇಡಯ್ಯ ಬರಿದೆ ಅಯ್ಯೊ ಪಾಪವೆನಲು ಮರುಕವಲ್ಲವೊ ದುರುಳ ಜನಗಳಲ್ಲಿ ಸರಳನಾಗಬೇಡಯ್ಯ ಹರಿಯ ಭಜನೆಯಲ್ಲಿ ಮನದಿ ನಾಚಬೇಡವೊ ತಿರುಕನಂತೆ ಜ್ಞಾನದ ಭಿಕ್ಷೆಯನು ಬೇಡೆಲೊ ತುರುಕನಂತೆ ಕಾಮದ ತಲೆ ಬಡಿದು ಜೀವಿಸೊ ಸಜ್ಜನಗಳು ಸಮ್ಮತಿಸುವ ಮಾರ್ಗದಲಿ ನಡಿ ದುರ್ಜನಗಳು ಪೇಳಿ ತೋರಿದೆಲ್ಲವನು ಬಿಡಿ40 ಫಲದ ಚಿಂತೆಯಿಲ್ಲದಂತೆ ಧರ್ಮಗಳಿಸಿರೊ ಫಲವು ಹರಿಯಧೀನ ಕೆಲಸ ಮಾತ್ರ ನಿನ್ನದೊ ಧ್ಯಾನ ಮಾಡದಿರಲೊ ಮನದಿ ದುಷ್ಟ ವಿಷಯದ ಧ್ಯಾನದಿಂದ ವಿಷಯದಲ್ಲಿ ಸಂಗ ಬರುವುದೊ ಸಂಗದಿಂದ ದುಷ್ಟಭೋಗ ಕಾಮ ಬರುವುದೊ ಭಂಗವಾದ ಕಾಮದಿಂದ ಕೋಪ ಬರುವುದೊ ಕೋಪದಿಂದ ಮನದಲಿ ವ್ಯಾಮೋಹ ಬರುವುದೊ ಈ ಪರಿಮೋಹದಲಿ ಸ್ಮರಣೆ ನಾಶಪಡುವುದು ಸ್ಮøತಿಯು ತಪ್ಪಿದವನ ಬುದ್ಧಿಮೃತಿಯು ಪೊಂದಲು ಕ್ಷಿತಿಯೊಳವಗೆ ಸರ್ವನಾಶವೆಂದು ನುಡಿಯಿದೆ 50 ಜ್ಞಾನಕೆ ಸಮ ಸಂಪತ್ತಿಲ್ಲ ಜನಕೆ ಲೋಕದಿ ಮೌನಕೆ ಸಮ ಗುಹ್ಯಕೆ ಪಾಲಕರಿಲ್ಲವೊ ಜ್ಞಾನ ಸರ್ವಕರ್ಮಗಳನು ದಹಿಸಿಬಿಡುವುದೊ ಜ್ಞಾನದಿಂದ ಪರಮಶಾಂತಿ ಪಡೆಯುಬಹುದೆಲೊ ಚಿರತನ ವರ್ಣಾಶ್ರಮಗಳ ಧರ್ಮ ಬಿಡದಿರೊ ಮಿತಿಯ ಮೀರಿ ಭೋಜನವನು ಮಾಡಬೇಡವೊ ಕಾಲ ಕಳೆಯಬೇಡವೊ ಲೋಕವ ಭಯಪಡಿಸಬೇಡ ನಡೆನುಡಿಗಳಲಿ ಲೋಕಕೆ ಭಯಪಡಲಿಬೇಡ ಧರ್ಮ ಪಥದಲಿ 60 ಶತುಮಿತ್ರರಲ್ಲಿ ಒಂದೆ ಭಾವ ಪಡೆಯೆಲೊ ಸ್ತೋತ್ರ ನಿಂದೆಗಳಿಗೆ ಹಿಗ್ಗಿ ಕುಂದಬೇಡವೊ ಭಕ್ತಜನರ ನಡೆನುಡಿಗಳ ನಿಂದಿಸದಿರೆಲೊ ಯುಕ್ತರವರು ಹಿರಿಯ ದಯಕೆ ಪಾತ್ರರಿವರೊ ಜಗವು ಸತ್ಯ ಬಗೆ ಬಗೆಯಲಿ ಸೊಗಸ ನೋಡೆಲೊ ಜಗಕೆ ಕರ್ತನೋರ್ವಗೆ ಕೈ ಮುಗಿದು ಬೇಡೆಲೊ ದೇಶಕಾಲ ಪಾತ್ರವರಿತು ದಾನ ಮಾಡೆಲೊ ಆಸೆ ಮೋಸಗಳಿಗೆ ಮನವ ಲೇಸು ಕೊಡದಿರೊ ಪರರ ಮನವು ಕೆದರದಂತೆ ನಿಜಹಿತ ನುಡಿಯು ಗುರುತರ ವಾಚನಿಕ ತಪವ ಮರೆಯಬೇಡವೊ 70 ಸರ್ವಕರ್ಮ ಫಲಗಳನ್ನು ಬಿಡುವನೆ ಯತಿಯು ಗರ್ವಮತ್ಸರಾದಿಗಳನು ಬಿಡುವುದೆ ಮತಿಯು ಶರಣು ಹೊಡೆಯೊ ಕರುಣಮಯನ ಚರಣಯುಗಳದಿ ಕರಗತವಾಗುವುದು ನಿನಗೆ ಇಹಪರ ಸುಖವು ಮಮತೆ ಬಿಟ್ಟು ಜಗದಿ ತಗಲಿ ತಗಲದೆ ಇರೆಲೊ ಕಮಲಪತ್ರಗಳಲಿ ಜಲದ ಕಣಗಳ ತೆರದಿ ಶುದ್ಧ ಧರ್ಮಲೇಶವು ತಲೆ ಕಾಯಬಲ್ಲದೊ ಪದ್ಮನಾಭ ಜನರ ಚಿತ್ತಶುದ್ಧಿ ನೋಡುವ ನಾನೆ ಬ್ರಹ್ಮನೆಂಬ ವಾದ ಬಾಳಬಲ್ಲದೆ ತಾನೆ ಬೀಳಲಿರುವ ಮರಕೆ ಕೊಡಲಿ ಏತಕೆ 80 ಜ್ಞಾನತೀರ್ಥಗಳಲಿ ಮುಳುಗಿ ಸ್ನಾನ ಮಾಡೆಲೊ ಜ್ಞಾನಕೆ ಜ್ಯೋತಿಗಳ ಬೆಳಕು ಕಾಣುತಿರುವುದೊ ದಾರುಣ ಸಂಸಾರ ಜಲದಿ ಪಾರುಗಾಣಲು ಧೀರನಾಗಿ ಈಜುವವಗೆ ತಾರಣ ಸುಲಭ ತಲೆಯ ಮೇಲೆ ಕೈಯನಿಟ್ಟು ಕೂಡ ಬೇಡವೊ ಬೆಳಸಿದಂತೆ ತರುಲತೆಗಳು ಫಲಕೊಡುವುದೊ ಮುಂದೆ ಇಟ್ಟ ಹೆಜ್ಜೆಗಳನು ಹಿಂದೆಗೆಯದಿರೊ ಮಂದಿಗಳಿಗೆ ಫಲದಲಿ ಸಂದೇಹ ಬೇಡವೊ ಹುಳಿಯ ರಕ್ತವಿರುವತನಕ ತಲೆಯು ಬಾಗದು ಕಾಲ ಸಾಲದೊ 90 ಪರರ ನುಡಿಗಳನ್ನು ಕದ್ದು ಕೇಳಬೇಡವೊ ಅರಿತು ನಿನ್ನ ಹರಿಯು ಗುದ್ದಿ ಬುದ್ಧಿ ಕಲಿಸುವ ಚಾಡಿಯಾಡ ಬೇಡ ಚಾಡಿ ಕೇಳಬೇಡವೊ ಸೇಡನು ತೀರಿಸುವ ಹೇಡಿಯಾಗಬೇಡವೊ ನಿನ್ನ ಮಾನದಂತೆ ಪರರ ಮಾನವೆಂದರಿಯೆಲೊ ಅನ್ನ ಹಾಕುವವರ ಹರಿಸಿ ಘನ್ನವೆನಿಸೆಲೊ ಕುಲವ ಶೋಧಿಸುತಲಿ ಕನ್ಯೆದಾನ ಮಾಡೆಲೊ ತಲೆಯ ಕ್ರಾಪು ಯೋಗ್ಯತೆಗೆ ಪ್ರಮಾಣವಲ್ಲವೊ ಕರವ ಪಿಡಿಯೆಲೊ ಥಳಕು ಬೆಳಕು ನೋಡಿ ಬಲೆಗೆ ಬೀಳ ಬೇಡವೊ 100 ಗಾಳಿಯು ಬಂದಾಗ ಬೇಗ ತೂರಿ ಕೊಳ್ಳಲೊ ಕಾಲದ ಸ್ಥಿತಿಯರಿತು ತಗ್ಗಿ ಬಗ್ಗಿ ನಡೆಯೆಲೊ ಮೇಲಿನ ದರ್ಜೆಯಲಿ ನಡೆದು ಕೇಳಬೇಡವೊ ನಾಲಗೆ ಚೆನ್ನಿರುವ ನರಗೆ ಜಗಳವಿಲ್ಲವೊ ಇರುಳು ಕಂಡ ಬಾವಿಗೆ ನೀ ಉರುಳಬೇಡವೊ ಶಕ್ತಿ ಇರುವ ಕಾಲದಲ್ಲಿ ಉತ್ತಮನೆನಿಸೊ ಶಕ್ತಿಯಲ್ಲಿದಾಗ ಇದ್ದು ಸತ್ತ ಪ್ರಾಯವೊ ಸ್ವೊತ್ತಮ ಜನರಲ್ಲಿ ನಿಯತ ಭಕ್ತಿ ಮಾಡೆಲೊ ಭಕ್ತಿಯಿಲ್ಲದವಗೆ ಮುಕ್ತಿಯಿಲ್ಲ ಕಾಣಿರೊ 110 ಪಾಪಿಯಾಗಬೇಡ ಇತರ ಜನರ ವಂಚಿಸಿ ಕೋಪ ಮಾಡಬೇಡ ಕೊಟ್ಟ ಋಣವ ಕೇಳಲು ಕೂಪ ಕೂರ್ಮದಂತೆ ಜಗವ ನೋಡಬೇಡವೊ ರೂಪುರಂಗುಗಳಿಗೆ ಮನವ ಸೋಲಬೇಡವೊ ಹಡೆದ ಮಕ್ಕಳುಗಳ ಕಾಲದಲ್ಲಿ ತಿದ್ದೆಲೊ ಗಿಡದಲಿ ಬಗ್ಗಿಸದ ಮರವು ಬಗ್ಗಲಾರದೊ ಕೊಡಲಿಯನ್ನು ಸೇರಿ ಮರದ ಕಾವಿನಂದದಿ ನಡತೆ ಕಲಿಸದಿದ್ದರವರು ಬುಡಕೆ ತರುವರೊ ಗಳಿಸಿದವನ ಧನವು ಬಳಸಿದವನಿಗೆಂದರಿಯೆಲೊ ಬಳಸಲು ನೀತಿಯಲಿ ಧನವ ಗಳಿಸಿ ಸುಖಿಸೆಲೊ 120 ತಿಳಿದು ಮರ್ಮ ಕಲಿ ಪುರುಷನ ನೆಲಕೆ ತುಳಿಯಿರಿ ಗುಹ್ಯ ತತ್ವ ಪೇಳಬೇಡವೊ ನಾಯಿಗಳಿಗೆ ಹವ್ಯದಾನ ಮಾಡಬೇಡವೊ ಕಾಯುವ ಗುರುಚರಣವೆ ಬಲುಶ್ರೇಯವೆನ್ನದೆ ಕರ್ಮ ಸುಡುವುದೆ ಉಣಲು ಬದುಕಬೇಡ ಜಗದಿ ಬದುಕಲು ಉಣೆಲೊ ಜನನ ಮರಣ ನಿಯತ ಕಾಲಗಳಲಿ ಬರುವವೊ ಕೊನೆ ಮೊದಲುಗಳಿಲ್ಲವು ಈ ಜಗಪ್ರವಾಹಕೆ ತನಗೆ ತಾನೆ ಬೀಳದು ಜಗದಾಖ್ಯ ವೃಕ್ಷವು 130 ತಾಳಿದವನು ಬಾಳುವನೆಂದರಿತು ನಡೆಯೆಲೊ ಗಾಳಿಗುದ್ದಿ ಕರಗಳನ್ನು ನೋಯಿಸದಿರೆಲೊ ಬಾಲನೆಂದು ಅರಿತು ಸತತ ಜ್ಞಾನವ ಗಳಿಸೆಲೊ ನಾಳೆಯ ದಿನ ನಂಬದಂತೆ ಧರ್ಮಗಳಿಸೆಲೊ ಹರಿಯುಕೊಟ್ಟ ಕಾಲದಲ್ಲಿ ಪರರ ರಕ್ಷಿಸೊ ಹರಿಯು ಕೊಡದ ಕಾಲದಲ್ಲಿ ಹರುಷ ಬಿಡದಿರೊ ದೂಷಕರನು ಎಂದಿಗು ನೀ ದ್ವೇಷಿಸದಿರೆಲೊ ಹೇಸಿಗೆಯನು ನಾಲಿಗೆಯಲಿ ತೆಗೆದುಬಿಡುವರೊ ಹಳ್ಳಕೆ ಬಿದ್ದವನಮೇಲೆ ಕಲ್ಲೆಸೆಯದಿರೊ ಟೊಳ್ಳು ಹರಟೆಗಾರನೆದರು ನಿಲ್ಲ ಬೇಡವೊ 140 ಒಳ್ಳೆಯ ಫಲಕೊಡುವ ಕಾರ್ಯಗಳು ಚಿಂತಿಸೊ ಜಳ್ಳು ಹುಲ್ಲಿಗಾಗಿ ಬೆವರು ಸುರಿಸಬೇಡವೊ ಬಿಂದು ಬಿಂದು ಸೇರಿ ಸಿಂಧುವಾಯಿತೊ ಹಿಂದಿನ ಮೊಳೆಯಿಂದ ದೊಡ್ಡ ವೃಕ್ಷವಾಯಿತೊ ಒಂದನು ಇನ್ನೊಂದು ಸೇರಿ ಕೋಟಿಯಾಯಿತೊ ಮಂದಿಗಳಿದನರಿತು ಪುಣ್ಯರಾಶಿ ಗಳಿಸಿರೊ ನೆರಳು ನೀರು ಕೊಟ್ಟ ಜನರ ಮರೆಯ ಬೇಡವೊ ಸರಿಯುತಿರುವ ಮಾರಿ ಮಸಣಿ ಕರೆಯಬೇಡವೊ ಅರಿಯದ ಅಜ್ಞಾನಿಯೊಡನೆ ಸರಸಬೇಡವೊ ತರುಗು ತಿನ್ನುವವನ ಕೇಳಬೇಡ ಹಪ್ಪಳ 150 ದೇಹಿಯೆಂದು ಬಂದವನಿಗೆ ನಾಸ್ತಿಯೆನದಿರೊ ಸಾಹಸವನು ಮಾಡದಿರೊ ಪ್ರಬಲ ಜನರಲಿ ಮೋಹಕೆ ತುತ್ತಾಗದಿರೆಲೊ ಪರಸತಿಯರಲಿ ದೇಹಕೆ ಬಲ ಶುದ್ಧಿ ಕೊಡುವ ನಿಯಮ ಬಿಡದಿರೊ ಭಾಗ್ಯಹೀನ ಬಡವನೆಂದು ಜರಿಯಬೇಡವೊ ಯೋಗ್ಯತೆಯನು ತಿಳಿಯಲು ಬಲು ಸುಲಭವಲ್ಲವೊ ಶ್ಲಾಘ್ಯವಾದ ಮೂಲಿಕೆಗಳನರಿಯೆ ಸುಲಭವೆ ಯೋಗ್ಯತೆಯನುಸರಿಸಿ ಬರುವ ಭಾಗ್ಯ ಬೇರಿದೆ ಖ್ಯಾತಿಗಾಗಿ ಆತ್ಮಸ್ತುತಿಯ ಮಾಡಬೇಡವೊ ಕೋತಿಯಂತೆ ಕುಣಿಯಬೇಡ ಸರಿಸಮರೊಳಗೆ 160 ಮೂತಿ ತಿರುಗಬೇಡ ಪರರ ಹಿತನುಡಿಗಳಿಗೆ ಸೋತ ಹಾಸ್ಯ ಮಾಡಬೇಡ ರಸಿಕ ಜನರಲಿ ಹಿರಿಯರು ಸಂದೇಹಪಡುವ ಮಾರ್ಗ ತ್ಯಜಿಸೆಲೊ ಬರಿಯ ಮಾತನಾಡಿ ಬೆನ್ನು ತಟ್ಟ ಬೇಡವೊ ಪರರ ಹಳ್ಳಕ್ಕಿಳಿಸಿ ಆಳ ನೋಡಬೇಡವೊ ಕರಕೆ ಸಿಕ್ಕಿದಾಗ ಹಲ್ಲು ಕಿರಿಯಬೇಡವೊ ಅರಳು ಹುಡುಕಬೇಡವೊ ಎದೆಯು ಒಡೆಯುವಂತೆ ಸುದ್ದಿ ಪೇಳಬೇಡವೊ ಬೀದಿಯಲಿರುವ ಜನಗಳ ಬೇಸರಿಸಬೇಡವೊ ಬೆದೆಯಲಿರುವ ದುರುಳನನ್ನು ಕೆಣಕಬೇಡವೊ 170 ಊರು ಕುರಿಯ ಕಾದು ಗೌಡನೆನಿಸಬೇಡವೊ ದೂರು ತರುವ ಜನರ ಕ್ಷಣದಿ ನಂಬಬೇಡವೊ ನಾರಿಯ ಸಾಹಸವ ನಂಬಿ ದುಡುಕಬೇಡವೊ ಎರಡು ಕರವು ಸೇರದೆ ಚಪ್ಪಾಳೆಯಾಗದು ಕುರುಡನು ತೋರಿಸುವುದೆಲ್ಲ ಮಾರ್ಗವಾಗದು ಕರಡಿಯು ಮೈಯಪರಚಲದು ಸೌಖ್ಯವಾಗದು ಗುರುಗಳ ಬಿಟ್ಟೋದಲು ಉಪದೇಶವಾಗದು ಹರಿಯಭಕುತಿ ಹರಿಯದಿರಲು ಗಾನವಾಗದು ಬರಿಯ ಸ್ವರಗಳುರುಳಿಸೆ ಕೀರ್ತನೆಯದಾಗದು 180 ಕರದಿ ತಟ್ಟೆ ಹೊಳೆಯುಂತಿರೆ ಪುರಾಣವಾಗದು ಕಿರಿಯ ಜನರ ಗುಣಗಾನವು ಭಜನೆಯಾಗದು ಅಕ್ಕಿಗಾಗಿ ಅಲೆವರೆಲ್ಲ ದಾಸರಾಗರು ಬೆಕ್ಕಿನಂತೆ ಕಣ್ಣು ಮುಚ್ಚಿ ಯತಿಗಳಾಗರು ಚಿಕ್ಕ ಜಿರಳೆ ಮೀಸೆಯಿರಲು ರಾಯರಾಗದು ಚಿಕ್ಕ ಕೊಳೆಯ ಚೌಕ ಧರಿಸೆ ಮಡಿಯದಾಗದು ಕದ್ದು ಅವಿತುಕೊಂಬರೆಲ್ಲ ಗರತಿಯಾಗರು ಮದ್ದು ಮಾಟ ಮಾಡುವವರು ಸುದತಿಯಾಗರು ಶುದ್ಧ ಧೈರ್ಯ ನಡತೆಯಿಂದ ನಿಂದ್ಯರಾಗರು ಬುದ್ಧಿ ಬದುಕು ಹೇಳುವವರು ದ್ವೇಷಿಯಾಗರು 190 ರೀತಿ ನೀತಿಗಳನು ಪರಗೆ ಹೇಳಲು ಸುಲಭ ಮಾತನಾಡಿದಂತೆ ಮಾಡಿ ತೋರುವರಿಹರೇ ತಾತನ ಕಾಲದಲ್ಲಿ ನುಡಿದ ಮಾತಿದಲ್ಲವು ಹೋತನ ಗಳಸ್ತನವಿದಲ್ಲ ಕೂತು ಕೇಳರಿ ಗಾದೆಗಳನು ವೇದವೆಂದು ಪೇಳಲುಚಿತವು ಮಾದರಿ ಅಣುಶಕ್ತಿಯಿಂದೆ ಗಾದೆ ಗಾದೆಗು ಪರಮ ಭಾಗವತರ ಚರಿತೆಯೋದಿ ನೋಡಿರಿ ಅರಿಯಬಹುದು ನುಡಿದ ನೀತಿಸಾರವೆಲ್ಲವ ನಾಡುನುಡಿಗಳೆಂದು ಮರೆಯಬೇಡವೆಂದಿಗು ಪಾಡಿದರೆ ಪ್ರಸನ್ನ ಹರಿಯು ನೀಡುವ ಫಲವ 200
--------------
ವಿದ್ಯಾಪ್ರಸನ್ನತೀರ್ಥರು
ಸ್ವಾಮಿ ನೀನೇ ತಂದೆ ನೀನೇ ಯೆನ್ನಯ ಬಂಧು ಪ್ರೇಮದಿಂದಲಿ ಯೆನ್ನ ಸಲಹಯ್ಯ ಬಂದೇ ಪ ಐದು ಹುಲಿಗಳು ಬಂದು ಗಾರುಮಾಡುತಲೆನ್ನ ಕೈದಿನಲ್ಲಿಟ್ಟಿಹವು ಬಿಡಿಸಯ್ಯ ಹರಿಯೇ ಕೈದಿನಲ್ಲಿಟ್ಟೆನ್ನ ಕೆಲಸಕ್ಕೆ ಎಳತಂದು ಬÁಧೆಯ ಕೊಡುತಿಹವು ಬಿಡಿಸಯ್ಯ ಹರಿಯೇ 1 ಭವವೆಂಬ ಮೃಗರಾಜ ಬಗೆಯುತ್ತ ದೇಹದ ಜವದಿಂದ ತಿನ್ನುವಾ ಬಿಡಿಸಯ್ಯ ಹರಿಯೇ ಅವನಿಯೊಳು ಹುಟ್ಟು ಸಾವೆಂಬ ಗಜನಕ್ರಗಳು ತಿವಿದೆನ್ನ ಹೆಳೆಯುದರು ಬಿಡಿಸಯ್ಯ ಹರಿಯೇ 2 ಆರು ವೈರಿಗಳೆÀನ್ನ ಕಾಯವನು ಪಿಡಿದೊಯ್ದು ಯೆರಿಸೀ ಸುಡುತಿಹರು ಬಿಡಿಸಯ್ಯ ಹರಿಯೇ ಮಾರಿ ವಶಮಾಡುವದು ಬಿಡಿಸಯ್ಯ ಹರಿಯೇ 3 ಅನ್ಯರನು ಕಾಣೆ ನಾದೇವ ನಿನ್ನುಳಿದೀಗ ನೀನೆನ್ನ ಅಪರಾಧ ಕ್ಷಮಿಸೋ ಮರೆಹÉೂಕ್ಕೇ ಗಮನ ಶ್ರೀ ಚನ್ನಕೇಶವನೆ ಸನ್ನುತದಾಸನನು ಬಾಲನೆಂತೆಣಿಸೋ 4
--------------
ಕರ್ಕಿ ಕೇಶವದಾಸ
ಹೆಂಡತಿ ನೋಡಣ್ಣ ಈಕಿನ ನ್ನ್ಹೆಂಡತಿ ನೋಡಣ್ಣ ಪ ಮಂಡೆಮುಸುಕು ತೆಗೆದ್ಹಿಂಡುಜನರ ಮುಂದೆ ಬಂಡುಮಾಡಿ ಎನ್ನ ಬೈಲಿಗೆ ತರುವಳು ಅ.ಪ ಕಂಡದ್ದು ಬೇಡುವಳು ತರದಿರೆ ಗಂಡನಲ್ಲೆಂಬುವಳು ತಿಂಡಿಗಾಗಿ ಎನ್ನ ಕಂಡವರ ಕಾಲ್ಹಿಡಿಸಿ ಮಿಂಡೆ ಭಂಡ 1 ಮಾತುಮಾತಿಗಿವಳು ಎನ್ನನು ಕೋತ್ಯಂತೆ ಕುಣಿಸುವಳು ಸೋತೆನೆಂದ್ಹೇಳುತ ಪಾತಕದ್ಹಾಕೆನ್ನ ನೀತಿಗೆಡಿಸುವಳು ಭೀತಿಲ್ಲದ 2 ಒಯ್ಯಾರ ಮಾಡುವಳು ಬೈದರೆ ಬಾಯಿ ತೆರೆದಳುವಳು ಬಾಯಿ ಮುಚ್ಚೆಂದರೆ ಕೈಬಿಟ್ಟೋಡ್ವಳು ದಾಯಾದಿಗಳು ಮುಂದೆ ಹೊಯ್ಮಾಲಿ 3 ತೊಡರು ಬಿಡಳು ಒಡಲಿನ ಕೆಡಕುಗುಣವ ಕಡಿಯಳು ಅಡಿಗಡಿಗೆನ್ನನು ದುಡುಕು ನುಡಿದು ಮನ ಮಿಡುಕಿಸುವಳು ಬಾಯ್ಬಡಕಿ ಬಿಡಿಕಿ 4 ಒದಗಿಸಿ ನಾಂ ತರಲು ಅದರೊಳು ಕದಿದರ್ಧ ತಿನ್ನುವಳು ಪದುಮನಾಭ ನಮ್ಮ ಸದಯ ಶ್ರೀರಾಮನ ಪಾದ ಕೃಪೆಯ ಪಡೆಯದಧಮ 5
--------------
ರಾಮದಾಸರು
ಗುಮ್ಮನ ಕರೆಯದಿರೆ-ಅಮ್ಮ ನೀನು |ಗುಮ್ಮನ ಕರೆಯದಿರೆ ಪಸುಮ್ಮನೆ ಇರುವೆನು ಅಮ್ಮಿಯ ಬೇಡೆನು |ಮಮ್ಮು ಉಣ್ಣುತ್ತೇನೆ ಅಮ್ಮ ಅಳುವುದಿಲ್ಲ ಅ.ಪಹೆಣ್ಣುಗಳಿರುವಲ್ಲಿಗೆ-ಹೋಗಿ ಅವರ-|ಕಣ್ಣ ಮುಚ್ಚುವುದಿಲ್ಲವೆ ||ಚಿಣ್ಣರ ಬಡಿಯೆನು ಅಣ್ಣನ ಬೈಯೆನು |ಬೆಣ್ಣೆಯ ಬೇಡೆನು ಮಣ್ಣ ತಿನ್ನುವುದಿಲ್ಲ 1ಬಾವಿಗೆ ಹೋಗೆ ಕಾಣೆ-ಅಮ್ಮ ನಾನು-|ಹಾವಿನ ಮೇಲಾಡೆ ಕಾಣೆ ||ಆವಿನ ಮೊಲೆಯೂಡೆ ಕರುಗಳನ್ನು ಬಿಡೆ |ದೇವರಂತೆ ಒಂದು ಠಾವಲಿ ಕೊಡುವೆ 2ಮಗನ ಮಾತನು ಕೇಳಬೇಡ-ಗೋಪಿದೇವಿ-|ಮುಗುಳುನಗೆಯ ನಗುತ ||ಜಗದ ಒಡೆಯ ಶ್ರೀಪುರಂದರವಿಠಲನ |ಬಿಗಿದಪ್ಪಿಕೊಂಡಳು ಮೋಹದಿಂದಾಗ 3
--------------
ಪುರಂದರದಾಸರು
ಹರಿ ಕೊಟ್ಟಕಾಲಕ್ಕೆ ಉಣಲಿಲ್ಲ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಹರಿಕೊಡದ ಕಾಲಕ್ಕೆ ಬಾಯಿಬಿಡುವೆಯೊ ಪ್ರಾಣಿಪ.ಉಡಲಿಲ್ಲ ಉಣಲಿಲ್ಲ ಕೊಡಲಿಲ್ಲ ಧರ್ಮವ |ಅಡಗಿಸಿ ಇಟ್ಟಿಹೆ ಮಣ್ಣೊಳಗೆ ||ಬಡತನ ಬಂದು ಕಂಬಳಿ ಹೊದೆವಾಗ |ತುಡುಗು ನಿನ್ನ ಜನ್ಮ ಸುಡು ಕಾಣೊಖೋಡಿ1ಹುಗ್ಗಿಯು ತುಪ್ಪವು ಮನೆಯೊಳಗಿರಲಿಕ್ಕೆ |ಗುಗ್ಗರಿಯನು ಮಾಡಿ ತಿನ್ನುವಿಯೊ ||ವೆಗ್ಗಳವಾದ ಯಮಧೂತರು ಎಳೆವಾಗ |ಬುಗ್ಗೆಯ ಹೊಯ್ಕೊಂಡು ಹೋದೆಯೊ ಖೋಡಿ 2ನಂಟರು - ಬಂಧುಗಳೂರೊಳಗಿರಲಿಕ್ಕೆ |ಕುಂಟು ಸುದ್ದಿಗಳನು ಆಡುವೆ ನೀ ||ಕಂಟಕರಾದ ಯಮದೂತರು ಎಳೆವಾಗ |ನಂಟ ಪುರಂದರವಿಠಲನ ದ್ರೋಹಿ 3
--------------
ಪುರಂದರದಾಸರು