ಒಟ್ಟು 35 ಕಡೆಗಳಲ್ಲಿ , 18 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧ್ಯಾನಿಸಿನ್ನು ಶ್ರೀನಿವಾಸನಾ ಶ್ರಿತಕಲ್ಪಭೂಜನ ಧ್ಯಾನಿಸಿನ್ನು ಶ್ರೀನಿವಾಸನಾ ಪ. ನಖಮಣಿಶ್ರೇಣಿವಿರಾ- ಜಿತ ನಳಿನಚರಣಯುಗಳನ ಸುಕುಮಾರ ಕಮನೀಯಾಂಗನ ಅಖಿಲ ಲೋಕಕ್ಷೇಮಧಾಮನ 1 ಪೀತಾಂಬರಧರ ವರ ಜೀ- ಮೂತನೀಲವರ್ಣನ ಶ್ರೀತರುಣೀಶುಭವಕ್ಷನ ಶ್ರೇತವಾಹನಸೂತನ ಖ್ಯಾತನ 2 ಶಂಖ ಚಕ್ರ ಗದಾ ಪುಷ್ಕ- ರಾಂಕ ಚತುರ್ಭುಜನ ಪಂಕಜನಾಭನ ಕೌಸ್ತುಭಾ- ಲಂಕೃತ ಶ್ರೀವರದೇವನ 3 ಚಂದ್ರಸಹಸ್ರಸಮಾನನ ಕುಂದಕುಟ್ಮಿಲರದನನ ಸುಂದರಾರುಣಾಧರಾರ- ವಿಂದದಳಾಯತನಯನನ 4 ಕನಕಕುಂಡಲಕರ್ಣಯುಗನ ಮಣಿಖಣಿತಕಿರೀಟನ ಗುಣನಿಧಿ ಲಕ್ಷ್ಮೀನಾರಾ- ಯಣನ ಸಂಕರ್ಷಣನ ದೃಢದಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ನಂಬಿದೆ ನಿನ್ನ ಪಾದವ ಕಾಣಬೇಕೆಂದು ಹಂಬಲಿಸಿದೆ ಮಾಧವ ಬೆಂಬಲವಾಗು ಪೀತಾಂಬರಧರ ಕುಟುಂಬಿ ಪಾಲಾ ಕಮಲಾಂಬಕ ರಂಗಾ ಪ ಚಂದಿರಹಾಸ ಸರ್ವೇಶ ಚಂಡ ಪ್ರಕಾಶಾ ಇಂದಿರಾ ಮನೋವಿಲಾಸ ವೃಂದಾರಕರ ನಿಜಕೋಶಾ ಮಂದರಧರ ವಸುಂಧರಪತಿ ಪುರಂದರ ವಂದಿತ ಸುಂದರಾಂಗ ಕಂಬು ಇಂದೀಗ ತೊಂದರೆಕಿಡದಿರು 1 ತಂದಿತಾಯಿಗಳವರಾರೊ ತಾವಳಿದು ಸತಿ ನಂದನರೊ ಬಂಧುಬಳಗ ಮತ್ತಾರೊ ಬರಿದೆ ಊರು ಪೊಂದದೆನಲೊ ಇಳಿಜಾರು ಎಂದೆಂದಿಗಿದರ ಗಂಧದೊಳಗೆ ನಾ ಬಂದು ಬಳಲಿ ಸಂ ಬಂಧದೊಳುರಳಿದೆ ಮುಂದಾದರು ದಾರಿ ಒಂದಾದರು ಕಾಣೆ ತಂದೆ ತಾಯಿ ಸರ್ವಂದವು ನೀನೆ 2 ನೊಂದೆನೊ ನಾನಾ ಜೀವಿಲಿ ನೋಡು ನೋವಿನಲಿ ಕುಂದಿದೆ ಎಲ್ಲ ಕಾವಿಲಿ ಬೆಂದೆನೋ ಬಲು ಕೋವಿಲಿ ಅಂದದರ್ಚನೆಯಿಂದ ಮಾಡಿದ ಪಾಪಗೊಂದಿಗೆಳೆದು ಎನ್ನ ಇಂದು ಚರಣರವಿಂದವ ತೋರಿಸುವ ಬಂಧು ವಿಜಯವಿಠ್ಠಲೆಂದಹುದೆಂದು 3
--------------
ವಿಜಯದಾಸ
ನಾಟ್ಯವಾಡಿದನು ರಂಗ ಮಂಗಳಾಂಗ ಪ. ನಾಟ್ಯವಾಡಿ ಶಕಟಾಂತಕ ಕೃಷ್ಣ ನೋಟಕರಿಗೆ ತನ್ನಾಟ ತೋರಿ ಭಂಗ ಜಗದಂಗ ಧಿಕಿಟದಿಂ ತದಾಗಿಣ ತೋಂ ತರನಾನಂದದಿ ಸುಂದರನಾಟ್ಯ ಅ.ಪ. ಅಪ್ರಮೇಯ ಹರಿ ತನುಭವ ಬಲರಾಮರ ಜತೆ ಸೇರಿ ಅನುನಯದಲಿ ಗೋವನು ಕಾಯುತಲಿರೆ ಪೀತಾಂಬರಧರನಾಟವ ನೋಡುವೆನೆಂದು ಸಾಟಿಯಿಲ್ಲದ ವಿಷಮಡುವಿಲಿ ಕಾಳಿಂಗ ನೀಟಿಲಿ ಕುಳ್ಳಿರೆ ಓಟದಿ ಪಶುಗಳು ನೀರಾಟದಿ ಕುಡಿಯಲು ನಾಟಿ ಗಾರಾದ ನೆಲಕುರುಳಲು ರಂಗ ಕೋಟಿಪ್ರಕಾಶ ಕಾಳಿಂಗನಾಟ ತೋರುವೆನೆಂದೂ ಧಿಕಿಟ1 ದುಷ್ಟನ ವಿಷಮಯ ನೀರನು ಕುಡಿದು ಉತ್ಕøಷ್ಟ ಗೋವು ಮೂರ್ಛೆಯ ಪೊಂದೆ ಪುಟ್ಟ ಬಾಲಕರು ಕೃಷ್ಣಗೆ ಪೇಳಲಾ ತಟ್ಟನೆ ಕಡಹದ ಮರವೇರುತ ಧುಮುಕೆ ಪುಟ್ಟ ರಂಗನೆಂದು ಬಿಟ್ಟನೆ ದುಷ್ಟನು ಸುತ್ತಿ ಬಾಲ ಕುಟ್ಟುಪ್ಪಳಿಶಿದನು ಕಷ್ಟವೆ ರಂಗಗೆ ನಿಷ್ಟುರ ಭಕ್ತರು ಶಿಷ್ಟಾಚಾರದಿ ಮೆಟ್ಟಿ ಬಾಲ ಕೈಗಿಟ್ಟು ತವಕದಿ ದಿಟ್ಟ ಶ್ರೀ ಕೃಷ್ಣ ಥಕಥೈ ತದಿಗಿಣಝಂ ಆನಂದ ನಾಟ್ಯ 2 ಅಂಬುಜೋದ್ಭವನ ನಾಟ್ಯವ ನೋಡೆ ಕುಂಭಿಣಿ ತಳದಾಕಾಶದಿ ಸುರರು ತುಂಬುರು ನಾರದ ಸಂಭ್ರಮಗಾನ ರಂಭಾದ್ಯಪ್ಸರ ಸ್ತ್ರೀರಂಭರ ನಾಟ್ಯ ಅಂಬರದಿಂ ಪೂಮಳೆ ರಂಗಗೆರೆಯೆ ಜಗಂಗಳು ನೋಡೆ ಶ್ರಿಂಗರ ಶ್ರೀ ಶ್ರೀನಿವಾಸಗೆ ಗೋಪಿ ರಂಗ ಬಾರೆನುತಲೆ ಮಂಗಳಾರುತಿ ಮೂರ್ತಿ ಕಾಳಿಂಗಭಂಗ ನಾಟ್ಯ 3
--------------
ಸರಸ್ವತಿ ಬಾಯಿ
ನಿತ್ಯ ಪಾರಾಯಣ ವರ್ಣವರ್ಣವು ಶ್ರೀಹರಿ ನಾರಾಯಣ ಪ ಸತ್ಯಪೂರ್ಣಗುಣ ಚಿತ್ಸುಖಧಾರಣ [ನಿತ್ಯಾ]ನಂದದ ನಾರಾಯಣಅ.ಪ ಪಾತಕ ಪರಿಹರ ಖ್ಯಾತ ಮನೋಹರ ಪೀತಾಂಬರಧರ ಮುರಳೀಧರ ದಿವಿಜ ಸುಖಂಕರ [ವಿನುತ] ಶ್ರೀ ಮಾಂಗಿರಿವರ ಜಗದಾಧಾರ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪೀತಾಂಬರಧರ ದಶರಥಬಾಲಾ ಸೀತಾ ಮನೋಹರ ದಶಶಿರಕಾಲಾ ಪ ಭೀತಜನಾಶ್ರಯ ಮಣಿಮಯ ಮಾಲಾ ಶೀತಕರೋಪಮ ವದನವಿಶಾಲಾ ಅ.ಪ ಗೌತಮ ಮುನಿಸಂಪೂಜಿತ ಚರಣಾ ಖ್ಯಾತ ವಿಭೀಷಣ ಪರಮಾಭರಣಾ ಪಾತಕಹರ ದಾನವ ಸಂಹರಣಾ ವಾತಾತ್ಮಜಸಂಸೇವಿತ ಚರಣಾ1 ಮಂಗಳಮೂರ್ತಿ ಗರುಡ ತುರಂಗ ಸಂಗರಭೀಮ ಶುಭಾಂಗ ಕೃಪಾಂಗ ಗಂಗಾಧರನುತ ದಿವ್ಯರಥಾಂಗ ಮಾಂಗಿರಿರಂಗ ಮೋಹನಾಂಗ ನೀಲಾಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪೀತಾಂಬರಧರ ನಮೋನಮೋ ವನ ಜಾತಾಂಬಕ ತೇ ನಮೋ ನಮೋ ಪ ಖ್ಯಾತ ಚರಿತ್ರ ವಿಧಾತೃಜನಕ ಪುರು - ಹೂತ ಸಹೋದರ ನಮೋ ನಮೋ ಅ.ಪ ಪಾರ್ಥೋನಿಧಿಶಯ ನಮೋ ನಮೋ ಶ್ರೀ ತರುಣೀಪ್ರಿಯ ನಮೋ ನಮೋ 1 ಶ್ಯಾಮಳನೀರದ ಕೋಮಳದೇಹ ನಿ ರಾಮಯ ನಿರ್ಮಲ ನಮೋ ನಮೋ ಕಾಮಜನಕ ಬಲರಾಮ ಸಹಜ ಸಂ ಗ್ರಾಮಮುಜ್ವಲ ನಮೋ ನಮೋ 2 ಸುಂದರ ನಮೋ ನಮೋ ಕುಂದರದನ ಶರದಿಂದುವದನ ಗೋ ವಿಂದ ಜನಾರ್ಧನ ನಮೋನಮೋ 3 ಶಂಸ ವಿಹಿಂಸಕ ನಮೋ ನಮೋ ಸಂಸರದಘ ವಿಧ್ವಂಸಕ ಪರಮ ಹಂಸೋತ್ತಂಸಕ ನಮೋ ನಮೋ 4 ಗರುಡಗಮನ ತೇ ನಮೋ ನಮೋ ವರದವಿಠಲ ತೇ ನಮೋ ನಮೋ 5
--------------
ವೆಂಕಟವರದಾರ್ಯರು
ಮಂಗಳಂ ಜಯ ಮಂಗಳಂ ಪ ಆದಿನಾರಾಯಣನೆನಿಸಿದಗೆ ಪಾದದಿ ಗಂಗೆಯ ಪಡೆದವಗೆ ಸಾಧುಸಜ್ಜನರನ್ನು ಸಲುಹುವ ದೇವಗೆ ವಿ ನೋದ ಮೂರುತಿಯಾದ ವೆಂಕಟಗೆ 1 ಶಂಖ ಚಕ್ರಧರಿಸಿಪ್ಪವU ಪಂಕಜ ಹಸ್ತವ ತೋರ್ಪವಗೆ ಬಿಂಕದೊಳಸುರರ ಕೆಡಹಿದ ಧೀರಗೆ ಮೀ ನಾಂಕನ ಪಿತನಾದ ವೆಂಕಟಗೆ 2 ಪೀತಾಂಬರಧರನೆನಿಸಿದಗೆ ನೂತನ ನಾಮದಿ ಮೆರೆವವಗೆ ಪಾತಕನಾಶನ ಪರಮಪಾವನಗೆ ಅ ತೀತ ಮಹಿಮನಾದ ವೆಂಕಟಗೆ 3 ಖಗವಾಹನನೆಂದೆನಿಸಿದಗೆ ನಗಧರನಾಗಿಹ ಅಘಹರಗೆ ಮೃಗಧರರೂಪಗೆ ಮುಂಚಕಲಾಪಗೆ ಜಗದಾಧಾರಕ ವೆಂಕಟಗೆ 4 ಲೋಕನಾಯಕನಾದ ಕೇಶವಗೆ ಶೋಕಭಂಜನನಾದ ಮಾಧವಗೆ ಸಾಕಾರ ರೂಪಗೆ ಸರ್ವಾತ್ಮಕನಿಗೆ ಶ್ರೀಕರನೆನಿಸುವ ವೆಂಕಟಗೆ 5 ಆಲದ ಎಲೆಯೊಳ್ವೊರಗಿದಗೆ ಆ ಕಾಲದಿ ಅಜನನು ಪೆತ್ತವಗೆ ನಿಗಮ ವಿದೂರಗೆ ಕಾಲಕಾಲಾಂತಕ ವೆಂಕಟಗೆ 6 ಸ್ವಾಮಿ ಪುಷ್ಕರಣಿಯ ವಾಸನಿಗೆ ಭೂಮಿ ವರಾಹತಿಮ್ಮಪ್ಪನಿಗೆ ಪ್ರೇಮದಿ ಜಗವನು ಸಲುಹುವ ನಾಮದ ಸೋಮ ಸನ್ನಿಭನಾದ ವೆಂಕಟಗೆ 7
--------------
ವರಹತಿಮ್ಮಪ್ಪ
ಮಾತೆ ಸರಸ್ವತಿ ಮಂಜುಳ ಮೂರುತಿ ಚೇತನಾತ್ಮಕಿ ಭಾರತಿ ಪ. ಪ್ರೀತಿಯಿಂದೀವುದು ಪೀತಾಂಬರಧರನ ಸಾತಿಶಯದ ಭಕುತಿ ಅ.ಪ. ಗುರುಹಿರಿಯರ ಕಂಡು ಬಿರುನುಡಿ ನುಡಿಸದೆ ಕರುಣಿಸೆನಗೆ ಸನ್ಮತಿ ಪರಮಪಾವನ ವೈಷ್ಣವರ ಪಾದಾಂಬುಜ ಮಧು- ಕರದಂತಿರಲಿ ಮದ್ರತಿ 1 ಮೂರ್ತಿ ತಾರೇಶನಂದದಿ ಹೃದಯಾ- ಕಾಶದೊಳು ಕಾಣುತಿ ದೂಷಣ ಕಾಮಾದಿ ಕ್ಲೇಶವ ಬಿಡಿಸುತ್ತ ಗೈಸಮ್ಮ ಹರಿಯ ಸ್ತುತಿ 2 ಮನುಜರ ರೂಪದಿ ದನುಜರು ಭೂಮಿಯೊಳ್ ಜನಿಸಿದರ್ಜಲಜನೇತ್ರಿ ಅನಘ ಲಕ್ಷುಮಿನಾರಾಯಣನ ದಾಸರಿಗೆಲ್ಲ ಜನನಿಯೆ ನೀನೆ ಗತಿ 3 ಭಾರತಿದೇವಿಯ ಸ್ತುತಿ
--------------
ತುಪಾಕಿ ವೆಂಕಟರಮಣಾಚಾರ್ಯ
ಮಾಧವ ಜಯ ಜಯ ರಾಘವ ರಾಮ ಖರಾರೇ ಪ ಜಯತು ಸೀತಾಧವ ಪಾವನ ಶೌರೇ ಅ.ಪ ಜಯತು ಪೀತಾಂಬರಧರ ಶಕಟಾರಿ ಜಯ ಕನಕಾಂಬರಧರ ವಿಕಟಾರಿ ಜಯ ಜಯ ಮುರಳೀಧರ ಕಂಸಾರಿ ಜಯ ಜಯ ಶರಧರ ದಶಶಿರವೈರಿ 1 ಜಯತು ಗೋಪೀಜನಪ್ರಿಯ ಗೋಪಾಲ ಜಯತು ತಪೋಬಲ ಮುನಿಜನಪಾಲ ಜಯತು ಜಯತು ಕೌಸ್ತುಭಮಣಿಮಾಲ ಜಯ ಜಯತು ಭೂಪಾಲ ಸುಶೀಲಾ 2 ಸನ್ನುತ ನಾಮ ಜಯ ಜಯಾನತ ಮುನಿಜನ ಪ್ರೇಮಾ ಜಯತು ಜಯತು ರಾಮ ಮಾಂಗಿರಿಧಾಮಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶಂಕರನಾರಾಯಣ ಸಲಹೊ ಎನ್ನ | ಪಂಕಜ ಪಾರ್ವತಿ ಪ್ರಿಯಾ | ಕಿಂಕರನ ಮೊರೆ ಕೇಳು ಪ ಶಂಖ ಚಕ್ರಪಾಣಿ | ಮೃಗಾಂಕ ಮೌಳಿ ಅಹಿಪರಿ-| ಯಂಕ ರುಂಡಮಾಲಾ ಶ್ರೀ | ವತ್ಸಾಂಕ ಭುಜಗಭೂಷಣ ವಿಷ್ಟು 1 ನಂದಿಗಮನ ಗರುಡಾರೂಢಾ | ಅಂದ ಭಸ್ಮಧರ ಕಸ್ತೂರಿ | ಸಿಂಧು ವೈರಿ 2 ಪೀತಾಂಬರಧರ ಕೃತ್ಯವಾಸಾ | ಜಾತರಹಿತ ಜಾಹ್ನವಿಧರ | ವಿ- ಧಾತ ಜನಕ ತ್ರಿಶೂಲಪಾಣಿ | ವಾತನೋಡಿಯ ಶಿವ ಗೋವಿಂದ 3 ಕೈಲಾಸವಾಸ ವೈಕುಂಠ | ಲೋಲ ಮಹಾಲಿಂಗ ರಂಗಾ | ಜ್ವಾಲನೇತ್ರ ಕಮಲನಯನಾ | ಕಾಲಾ ನೀಲವರ್ಣ ಕಪರ್ವಿ 4 ರಾಜನೊಬ್ಬ ಭೃತ್ಯನೊಬ್ಬ | ಪೂಜ್ಯನೊಬ್ಬ ಮಾಳ್ಪನೊಬ್ಬ | ಮೂಜ್ಜಗೇಶ ವಿಜಯವಿಠ್ಠಲ | ರಾಜ ತಾತ ಈಶ ಮೊಮ್ಮಗ 5
--------------
ವಿಜಯದಾಸ
ಶ್ರೀ ಧ್ರುವಚರಿತ್ರೆ ಪದ ಭಜ ಭಜ ಭಜ ಶ್ರೀ ಗಣರಾಜ ತ್ಯಜ ತ್ಯಜ ತ್ಯಜ ತಾಮಸ ಬೀಜ ಪ ಶಂಕರ ಪುತ್ರ ಶುಭಂಕರ ವರನಿಜ ಪಾದ ಸರೋಜ 1 ಲಂಬೋದರ ಪೀತಾಂಬರಧರ ಕರು ಣಾಂಬುಧಿ ವರ ದೇವ ಮಹೀಜ 2 ಶ್ರೀಶಾನಂತಾಜದ್ರೀಶ ವರಾನ್ವಿತ ದಾಸ ಸುವೃತ ಮಾನಸ ಪೂಜ 3 ಆರ್ಯಾ ರಾಜ ಸುಪೂಜಿತ ರಾಜ ರಾಜ ನೃಪ ರಾಜ್ಯ ಮಾಡುತಾ ಇರುತಿಹನು ದುರ್ಜನ ಪುರುಷರ ತರ್ಜನ ಮಾಡುವ ಸಜ್ಜನ ಆತ್ಮಾರಿಂಗ್ಯತಿ ಪ್ರಿಯನು 1 ದೀನ ಬಂಧು ಬಹುದಾನವಂತ ಉ ಪಾದ ಎಂಬುವ ಹೆಸರು ಮಾನಿತರೊಳಗತಿ ಮಾನಯುಕ್ತರು ಮಾನಿನಿಯರು ಇಬ್ಬರು ಇಹರು2 ಸುರಚಿ ಗಣ್ಯಳು ಪಟ್ಟದರಸಿ ಸುನೀತಿಯು ವಿರಸದಿ ಆರಸಗ ನಿಷ್ಟ್ರಿಯಳು 3 ಮುತ್ತಿನಂಥ ವರಪುತ್ರರಿಬ್ಬರು ಉತ್ತಮನೆಂಬ ಸುರುಚಿಪುತ್ರಾ ಉತ್ತಮ ಗಣ್ಯ ಗುಣೋತ್ತಮ ಧ್ರುವನು ಮತ್ತ ಸುನೀತಿಗೆ ತಾ ಪುತ್ರಾ 4 ಮಂದಿರದೊಳಗೆ ವಸುಂಧರೇಶನು ಛಂದದಿ ತಾ ಸುಖದಿಂದಿರಲು ಒಂದಿನದಲಿ ಬಹುಸುಂದರಸಭಿಯಲ್ಯಾ ನಂದದಿ ಬಂದು ತಾ ಕುಳಿತಿರಲು 5 ಶ್ಲೋಕ ಕೂಡಿಸಿತಾ ತೊಡಿಯಲ್ಲಿ| ಮುದ್ದಿಸಿದಾ ಸಭಿಯಲ್ಲಿ | 1 ಛಂದ ನೋಡಿ ಧ್ರುವನು ತಾ ಹರುಷದಿಂದಲಿ ಓಡಿ ಬಂದನು ರಾಜ ಸಭಿಯಲಿ ಕೂಡಬೇಕು ತಾ ಎಂದು ತೊಡಿಯಲಿ ಇಂದು ಮನದಲಿ 1 ನಾಥ ಭೂಮಿಪಾ ನೋಡಿ ಬಾಲನ ಪ್ರೀತಿಯಿಂದಲ್ಯೊಂದು ಮಾತನಾಡನು ತಾತ ಸುತಗೆ ಬಾಯೆಂದು ಕರೆಯನು ಆತ ಧ್ರುವನು ತಾ ಅನಾಥನಾದನು 2 ಆಗ ಸುರುಚಿ ಬಾಲನ್ನ ನೋಡುತಾ ಬ್ಯಾಗನುದರದಲ್ಲಿ ಬಹಳ ಗರ್ವಿತಾ ಯೋಗ್ಯವಲ್ಲ ಕೂಡಲಿಕ್ಕೆ ತೊಡಿಯಲಿ ಹೀಂಗ ದುಷ್ಟ ಮಾತುಗಳು ಬಾಯಲ್ಲಿ 3 ಪದ ಬಾರದೊ ಧ್ರುವಾ ನಿನಗೆ ಸಿಂಹಾಸನ ಪದವಿ ಬಾರದೊ ಧ್ರುವಾ ನಿನಗೆ ಸಾರಸಿಂಹಾಸನವು ಪ ಏರ ಬೇಕೆಂಬುವಂಥಾ ಘೋರತನವ ಬಿಡು ಅ.ಪ ಅನ್ಯಳ ಮಗನೊ ನೀ ಯನ್ನಲಿ ಜನಿಸಿಲ್ಲಾ ಚೆನ್ನಿಗ ಉತ್ತುಮಾಗಿನ್ನ ನೀ ಸರಿಯೇನೋ 1 ಇಂದಿನಾ ಮನೋರಥಾ ಎಂದಿಗಾವುದಲ್ಲಾ ಕಂದ ಸುನೀತಿಯಾ ಮುಂದ ಕೂಡಾಲಿ ಪೋಗೊ 2 ಇಚ್ಛಿ ಮಾಡಾದಿರೋ ಹೆ ಚಿನ್ನಾ ಶ್ರೀ ವತ್ಸನಾರಾಧನಿ ಮಾಡಿಲ್ಲಾ 3 ವೀರ ಸಿಂಹಾಸನ ಏರಬೇಕಾದರೆ ವಾರಿಜನಾಭ ನಾರಾಧನಿ ಮಾಡೊನೀ 4 ` ಚೆನ್ನಿಗಾನಂತಾದ್ರೀಶ್ನ ' ನೀ ಪೂಜಿಸಿ ಯೆನ್ನಲ್ಲಿ ಪುಟ್ಟಾದೆ ಉನ್ನತ ಪದವಿಯು 5 ಶ್ಲೋಕ ಅತ್ಯಂತ ಘೋರತರ ವಾಕ್ಯಗಳನ್ನು ತಾಳಿ ಸಂತಪ್ತನಾದ ಮನದಲ್ಲಿ ಸುನೀತಿ ಬಾಲಾ ಪುತ್ರನ್ನ ನೋಡಿ ಪಿತ ಸುಮ್ಮನೆ ಕೂತನಾಗಾ ತಾತನ್ನು ಬಿಟ್ಟು ನಡದಾ ಧ್ರುವ ತಾನು ಬ್ಯಾಗಾ 1 ಶ್ವಾಸೋಚ್ಛ್ವಾಸವು ಬಾಯಿಲಿಂದ ಬಿಡುತಾ ಕಣ್ಣಿಂದ ನೀರ ಹೋಗುತಾ ಸೂಸು ಬಾಹುವ ದು:ಖದಿಂದ ಮರಗಿತಾ ರೋದನಾ ಮಾಡುತಾ ಬಂದಾ ತೀವ್ರದಿ ತಾಯಿ ಸನ್ನಿಧಿಯಲ್ಲಿ ಆಳುತಾಗ ತುಟಿ ಬಿರಿಗಿಸಿ ಬಂದಾ ಕಂದನ ಮುಂದ ಕುಳ್ಳಿರಿಸಿ ಸತಿ ಕೇಳ್ಯಾಳು ವಿಚಾರಿಸಿ 2 ಪದ ಕಂದ ನೀ ಬ್ಯಾಗ ಹೇಳೊ ಎಲ್ಲೊ ನಿನಗೆ ಇಂದು ಬಡಿದವರ್ಯಾರು ನಿನಗೆ ಪ ಎಂದು ಪೋಗದಲೆ ತನಯ ನೀನು ಇಂದು ಪೋಗಿದ್ದಿಯೊ ದಾರ ಮನಿಗೆ 1 ಘೋರತರ ದು:ಖವೇನೊ ಈ ಪರಿ ನೀರ ತುಳಕುವ ಕಣ್ಣುಗಳಿಗೆ 2 ಏನಂತ ಪೇಳಲಿ ಸ್ವಲ್ಪ ಇಲ್ಲಾ `ಅನಂತಾದ್ರೀಶನ ' ದಯವು ನಮಗೆ 3 ಪದ ತನಯನ ಕೇಳಲು ಹೀಂಗೆ ಪೌರಜನರು ನುಡದರಲ್ಯಾಗೆ ಅರುಚಿನುಡಿಗಳ ಲ್ಹ್ಯಾಂಗೆ ಆ ಸುರುಚಿ ನುಡಿದಳ್ಹಾಂಗೆ 1 ಕೇಳಿದಳೀ ಪರಿವಾಣಿ ಮನ ಪನ್ನಗ ವೇಣಿ ಸಾಗರ ಬಿದ್ದಳು ತರುಣಿ ತಾ ಕೂಗುತ ಕೋಕಿಲವಾಣಿ 2 ಒಡಲೊಳು ಕಿಚ್ಚುರದಂತೆ ಬಹು ಮಿಡುಕೊಳು ತಾಮನದಂತೆ ನಡುಗುತ ಹಿಮ ಹೊಡದಂತೆ ತಾ ನುಡು(ಡಿ)ವಳು ಕರುಣಾದಂತೆ 3 ಏನು ಮಾಡಲಿ ಇನ್ನಯ್ಯೋ ಬಹು ದೀನಳಾದೆ ನಯ್ಯಯ್ಯೊ ಮಾನದ ಪತಿಯೆನ ಕಾಯೊ ಗುರು ಮಾನಸ ದು:ಖವ ತಿಳಿಯೋ4 ಶರಣು ಕೇಳು ದೇವೇಶಾಯನ್ನೊಳು ಕರುಣಾಬಾರದೆ ಲೇಶಾ ಚರಣಕೆರಗುವೆನು ಶ್ರೀಶಾ ಮರಣ ಕುಡಾ`ನಂತದ್ರೀಶ' 5 ಛಂದ ನಾರಿ ಸುರುಚಿಯಾ ಮಾತು ಮರಿಯದೆ ಘೊರ ದು:ಖದಾಪಾರ ತಿಳಿಯದೆ ನೀರ ಧಾರಿಯ ಕಣ್ಣಲ್ಯುದುರುತಾ ಧೈರ್ಯ ಭಾವ ತಾ ಬಿಟ್ಟಳು ಸರುತಾ 1 ಸುಂದರಾಂಗಿಯು ನೊಂದು ಮನದೊಳು ಕಂದಧ್ರುವನ ತಾ ಮುಂದ ನುಡದಳು ಬಂದ ತಾಪವ ಸಹಿಸಬೇಕಯ್ಯಾ ಇಂದು ಮನಸಿನಾ ಕೋಪ ತಾಳಯ್ಯಾ 2 ಕೇಳು ಬಾಲನೆ ರಾಜಯನ್ನನು ಭಾಳ ತುಚ್ಛವ ಮಾಡುತಿಹನು ಭಾಳ ಲಜ್ಜದಿ ಸುನೀತಿ ಭಾರ್ಯಳೆಂದು ಹೇಳಲಿಕ್ಕೆ ನಾಚುತಿಹನು 3 ಯನಗ ಪುತ್ರ ನೀನಾದ ಕಾರಣಾ ನಿನಗ ಮಾಡುವಾ ಅರಸು ನಿರ್ಘೃಣಾ ಕನಸಿಲಿಲ್ಲವೊ ಯನಗ ಹಿತಕರು ತನಯ ವೈಯಲಿಲ್ಲವೊ ಯನ್ನದೇವರು 4 ಮಿಥ್ಯವಲ್ಲವೊ ಸುರುಚಿ ನುಡಿಗಳು ಸತ್ಯ ವಾದ ಮಾತುಗಳು ನುಡಿದಳು ಪಥ್ಯವೆ ಸರಿ ಪರಮ ನಿನಗಿವೆ ಪೊತ್ತುಗಳಿಯದೆ ಪೋಗರಣ್ಯಕೆ 5 ಗುರ್ವನುಗ್ರಹ ಶಿರಸಿ ಗ್ರಹಿಸೈಯ್ಯಾ ಶರ್ವಸಖಗ ನೀ ಪೂಜಿಮಾಡಯ್ಯಾ ಪೂರ್ವದಲ್ಲಿ ನಿನ್ನ ಮುತ್ಯ ಮಾಡಿದಾ ಸಾರ್ವಭೌಮ ಆಧಿಪತ್ಯ ಏರಿದಾ 6 ಇಂದಿರೇಶನಾ ಬ್ರಹ್ಮ ಪೂಜಿಸಿ ಮುಂದ ಏರಿದಾ ಸತ್ಯಲೋಕ ನೇಮಿಸಿ ಕಂದ ಭಜಿಸು ನೀ ಛಂದದಿ ಧ್ರುವಾ ಮುಂದ ಕೇಶವಾನಂದ ಸುರಿಸುವಾ 7 ಶ್ಲೋಕ ಜನನಿಯಾಡಿದ ವಾಕ್ಯವು ಕೇಳಿ ಆಗಾ ಮನಿ ಆಸಿಯು ಬಿಟ್ಟು ನಡದಾನು ಬ್ಯಾಗಾ ಘನಾರಣ್ಯಕೆ ಪೋಗಲು ಶೋಕಸಿಂಧು ಸಿಂಧು 1 ಆರ್ಯಾ ಇಂದಿರೇಶನಾ ಸುಂದರ ಗುಣಗಳ ಬಂದಾಕ್ಷಣಹೀಗೇಂದು ನುಡದನು ಕಂದಗ ಮುನಿ ಆ ಸಮಯದಲಿ 1 ನಿಲ್ಲೆಲೊ ಬಾಲಕ ಬಲ್ಲಿದರಣ್ಯದಿ ನಿಲ್ಲದೆ ಪೋಗುತಿ ಎಲ್ಲಿಗೆ ನೀ ಯೆಲ್ಲಿಂದ ಬಂದಿ ನೀ ಫುಲ್ಲಲೋಚನ ಯೆಲ್ಲ ಬಳಗ ಬಿಟ್ಟಿಲ್ಲಿಗೆ ನೀ 2 ಕಂದ ಬಿಟ್ಟ ನೀ ಬಂದ ಕಾರಣಾ ಇಂದು ತಾಯಿ ತಂದೆಗಳೆಲ್ಲ ಸುಂದರಾನನಾ ಛಂದದಿ ನುಡಿನೀ ಮಂದಿರ ವೃತ್ತಾಂತಗಳೆಲ್ಲಾ 3 ಶ್ರೇಷ್ಠನಾರದ ನೀ ಅಷ್ಟುಲೋಕವಾ ದೃಷ್ಟಿಲಿ ನೋಡುವಿ ಇಷ್ಟರಿಯಾ ಕೆಟ್ಟ ಮಾತು ಆದುಷ್ಟ ಮಳಾಯಿಯು ಎಷ್ಟು ನುಡದಳೊ ಯನಗÀಯ್ಯಾ4 ಏನು ಪೇಳಲಿ ನಾನು ಮುನೀಶ್ವರ ಮಾನ ಗೇಡಿ ಮಾಡಿದಳೆನ್ನಾ ಮಾನ ಹೋಗಿ ಅಪಮಾನಿತನಾಗಿ ಕಾನನ ಶೇರಿದೆ ನಾ ಮುನ್ನ 5 ಮಾನಪಮಾನಗಳೆನಾದರೂ ಸರಿ ಧ್ಯಾನಕ ತರಬಾರದು ನೀನು ನಾನಾ ಲೀಲಿಯಾ ಮಾಡುವ ಬಾಲಕಗೇನು ಚಿಂತೆ ಕೇಳರೆ(ಳುವೆ?) ನಾನು 6 ಶಾಂತನಾಗು ಗುಣವಂತ ಬಾಲ ನಿ ನ್ನಂತರಂಗ ಚಿಂತಿಯು ಬಲ್ಲೆ ಚಿಂತಿಸಿ ಬಂದ್ಯೋ ನೀ ಸತತ ಸುಖ ಭಗವಂತನನೆ ಬ(ರ?) ಬೇಕಂತಿಲ್ಲೆ 7 ಎಂಥವರಿಗೆ ಭಗವಂತ ದೊರಕ ನಿ ನ್ನಂಥ ಬಾಲನಾ ಗತಿಯೇನು ಕಾಂತನಯನ ಶ್ರೀಕಾಂತ ದೊರಕ ಛೀ ಭ್ರಾಂತಿ ಬಿಟ್ಟು ತ್ವರ ನಡಿ ನೀನು 8 ಪದ ನಡಿನಡಿ ನಡಿ ಧ್ರುವಾನೆ ತಿರುಗಿ ಮನಿಗೆ ನಡಿ ನಡಿ ನಡಿ ದೊಡ್ಡ ಅಡವಿಯು ಸೇರಾದೆ ಹುಡುಗ ಬುದ್ಧಿಯನು ಬಿಡು ತಡಮಾಡದೆ ಪ ಅಂಬಕಗಳಿಗೆ ತಾನು ತೋರಾನು ಪೀ ತಾಂಬರಧರ ದೇವಾನು ಅಂಬುಜನಾಭನ ನಂಬಿ ಭಜಿಸುವಂಥ ಹಂಬಲ ಬಿಟ್ಟು ವಿಳಂಬನ ಮಾಡದೆ 1 ಕಾಲಾವಲ್ಲವೋ ಬ್ಯಾಡಯ್ಯ ವಿಗ(ಹಿ?)ತವಾದ ಕಾಲಕೆ ತಪ ಮಾಡಯ್ಯ ಕಾಲಕಾಲಕೆ ಸ್ತನ ಪಾಲನುಂಬುವ ಸಣ್ಣ ಬಾಲ ಈ ವಚನ ಬಿಟ್ಟು ಕಾಲಗಳಿಯದೆ 2 ದೇಶದೇಶವ ತಿರುಗಿ ಬಹಳ ಕಾಸೋಸಿ ಇಂದಲೆ ಮರುಗಿ ಕ್ಲೇಶಾದಿ `ಅನಂತಾದ್ರೀಶ' ದೊರಕ ಘಾಸಿ ನೀ ಆಗದೆ 3 ಆರ್ಯಾ ಮುನಿಯ ವಚನ ನೃಪತನಯ ಕೇಳಿ ಬಹುವಿನಯದಿಂದಲಿ ಹೀಗೆಂದಾ ಘನದು:ಖದಿ ಯನ್ನ ಮನಿಗೆ ಪೋಗಲಿಕ್ಕೆ ಮನಸುವಲ್ಲದು ವಲ್ಲೆಂದಾ 1 ಪದ ಮನಿಗೊಲ್ಲೆ ವಲ್ಲೆ ಮುನಿರಾಯಾಪ ಬಹುತಲ್ಲಣಗೊಳು ತಿಹ(ಹೆ?)ನೈಯ್ಯಾ ಅ.ಪ ಶೋಣೀತ ವಸ್ತ್ರನೆ ಪಾಣಿವಿನಾದಿತ ವೀಣಾಧರ ಕೇಳಯ್ಯ 1 ದುಷ್ಟಮಳಾಯಿಯ ಕೆಟ್ಟಮಾತು ಒಂದಿಷ್ಟು ಸಹಿಸಲಾರೈಯ್ಯ 2 ದೀನದಯಾಳುವೆ ಮಾನಗಳಿದು ಮು ನ್ನೇನು ಉಳಸಲಿಲ್ಲೈಯ್ಯ 3
--------------
ಅನಂತಾದ್ರೀಶ - ಕಥನಕಾವ್ಯಗಳು
ಸೋಜಿಗ ಸೋಜಿಗ ಗೋವಿಂದನ ಸೋಜಿಗ ಗೋಪಾಲನ ಸೋಜಿಗ ಪ ಇಂದಿರೆ ರಮಣ ಈ ಪರಬ್ರಹ್ಮ | ಮಂದರೋದ್ಧಾರ ಈ ದೇವಾ | ತಂದೆ ತಾಯಿ ತ್ರೈಲೋಕ್ಯಕ್ಕೆ ತಾನಾಗಿ ನಂದ | ಆನಂದ ಯಶೋದೆಗೆ ಮಗನಾದ ನೋಡಮ್ಮ || ಸೋಜಿಗ 1 ಸದಮಲ ಸ್ವರೂಪ ಸಚ್ಚಿದಾನಂದನು |ಮುನಿಜನ ವಂದಿಪನು ಈ ದೇವ ಮುನಿಜನ ವಂದಿಪನು |ಪದುಮನಾಭ ಪೀತಾಂಬರಧರ ದೇವ ವಿದುರನ | ಆವಿದುರನ ಮನೆಯಲ್ಲಿ ಉಂಡದ್ದು ನೋಡಮ್ಮ ಸೋಜಿಗ2 ನಾನಾ ದೇವರ ದೇವ ನಾರಾಯಣ ಹರಿ ನಿಜಸುರ ವಂದಿ-ಪನು ಈ ದೇವ | ಭಾನು ಕೋಟಿ ತೇಜ ಜ್ಞಾನ-ಬೋಧನ ಸ್ವಾಮಿ | ತಾನಾಗಿ ಭಕುತಿಗೆ ಒಲಿದದ್ದುನೋಡಮ್ಮ ಸೋಜಿಗ 3
--------------
ಜ್ಞಾನಬೋದಕರು
ಧ್ಯಾನಿಸಿನ್ನು ಶ್ರೀನಿವಾಸನಾ ಶ್ರಿತಕಲ್ಪಭೂಜನಧ್ಯಾನಿಸಿನ್ನು ಶ್ರೀನಿವಾಸನಾ ಪ.ನಖಮಣಿಶ್ರೇಣಿವಿರಾ-ಜಿತನಳಿನಚರಣಯುಗಳನಸುಕುಮಾರ ಕಮನೀಯಾಂಗನಅಖಿಲ ಲೋಕಕ್ಷೇಮಧಾಮನ 1ಪೀತಾಂಬರಧರವರಜೀ-ಮೂತನೀಲವರ್ಣನಶ್ರೀತರುಣೀಶುಭವಕ್ಷನಶ್ರೇತವಾಹನಸೂತನ ಖ್ಯಾತನ 2ಶಂಖ ಚಕ್ರ ಗದಾ ಪುಷ್ಕ-ರಾಂಕ ಚತುರ್ಭುಜನಪಂಕಜನಾಭನ ಕೌಸ್ತುಭಾ-ಲಂಕೃತ ಶ್ರೀವರದೇವನ 3ಚಂದ್ರಸಹಸ್ರಸಮಾನನಕುಂದಕುಟ್ಮಿಲರದನನಸುಂದರಾರುಣಾಧರಾರ-ವಿಂದದಳಾಯತನಯನನ 4ಕನಕಕುಂಡಲಕರ್ಣಯುಗನಮಣಿಖಣಿತಕಿರೀಟನಗುಣನಿಧಿ ಲಕ್ಷ್ಮೀನಾರಾ-ಯಣನ ಸಂಕರ್ಷಣನ ದೃಢದಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಭಕ್ತವತ್ಸಲನಹುದೊ ವೆಂಕಟರೇಯಭಕ್ತವತ್ಸಲನಹುದೊ ಪ.ಕರಿಯ ಮೊರೆಯನರಿದು ಸಿರಿಯಜರಿದುಗರುಡನ ಕರೆಯದೆ ಭರದೊಳರಿಯಿಂದರಿ ಬಾಯ ಮುರಿಗೆಯ ಹರಿದ್ಯೆಂದುನಾರದಾದ್ಯರು ನಿನ್ನ ಬಿರುದು ಸಾರುವರೊ 1ಅಂಬುಜಾಂಬಕನಂಬಿದೆನೆಂಬೆ ದಯಾಂಬುಧಿಹರಿನಿನ್ನಿಂಬುದೋರೆ ನಲವಿಲಂಬಲದಿ ಕಂಬದಿ ಬಿಂಬಿಸಿ ಡಂಬನಡಿಂಬವ ಬಿಗಿದೆ ಪೀತಾಂಬರಧರನೆ 2ಚಿನ್ನ ತನ್ನ ತಾತನ್ನ ಜರಿದವನನ್ನವನುಣ್ಣದೆ ನಿನ್ನ ಬಣ್ಣಿಸಲವನುನ್ನತ ಭಕುತಿಗೆ ಮನ್ನಿಸಿ ಪೊರೆದೆ ಪ್ರಸನ್ನವೆಂಕಟರನ್ನ ಮೋಹನ್ನ 3
--------------
ಪ್ರಸನ್ನವೆಂಕಟದಾಸರು
ಮಾತೆ ಸರಸ್ವತಿ ಮಂಜುಳ ಮೂರುತಿಚೇತನಾತ್ಮಕಿಭಾರತಿಪ.ಪ್ರೀತಿಯಿಂದೀವುದು ಪೀತಾಂಬರಧರನಸಾತಿಶಯದ ಭಕುತಿ ಅ.ಪ.ಗುರುಹಿರಿಯರ ಕಂಡು ಬಿರುನುಡಿ ನುಡಿಸದೆಕರುಣಿಸೆನಗೆಸನ್ಮತಿಪರಮಪಾವನ ವೈಷ್ಣವರ ಪಾದಾಂಬುಜ ಮಧು-ಕರದಂತಿರಲಿ ಮದ್ರತಿ 1ಶ್ರೀಶನಮೂರ್ತಿತಾರೇಶನಂದದಿ ಹೃದಯಾ-ಕಾಶದೊಳು ಕಾಣುತಿದೂಷಣ ಕಾಮಾದಿ ಕ್ಲೇಶವ ಬಿಡಿಸುತ್ತಗೈಸಮ್ಮ ಹರಿಯ ಸ್ತುತಿ 2ಮನುಜರ ರೂಪದಿ ದನುಜರು ಭೂಮಿಯೊಳ್ಜನಿಸಿದರ್ಜಲಜನೇತ್ರಿಅನಘಲಕ್ಷುಮಿನಾರಾಯಣನ ದಾಸರಿಗೆಲ್ಲಜನನಿಯೆ ನೀನೆಗತಿ3ಭಾರತಿದೇವಿಯ ಸ್ತುತಿ
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ