ಒಟ್ಟು 102 ಕಡೆಗಳಲ್ಲಿ , 2 ದಾಸರು , 94 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರೆತಾರಬಾರದೇನೇ ರಂಗಯ್ಯನ ಬರಲಾರೆನೆಂದರೂ ಕರವಮುಗಿದಾದರೂ ಪ ಸರಸಿಜನಾಭನ ಅರವಿಂದಚರಣಕೆ ಎರಗಿ ಎರಗಿ ಮತ್ತೆ ಕರುಣಿಸೆಂದಾದರೂ ಅ.ಪ ನೆನೆದು ಪೂಜಿಸುವರ ಮನೆಗೆ ಬರುವೆಯೆಂದು ಮುನಿಜನ ಪೇಳ್ದುದು ಸಟೆಯಹುದೇನೋ ಜನನಿಯು ಜನಕನ ಅನುಜನಗ್ರಜನ ಘನತರ ಬಂಧುವು ನೀನೆಂದುಸುರಿ 1 ನಂದನಕಂದ ಗೋವಿಂದನ ಪಾದಾರ ವಿಂದವ ಕಾಣದೆ ಜೀವಿಸಲರಿಯೆ ಎಂದು ಪೇಳುತ ಮುಚುಕುಂದಗೆ ವಂದಿಸು ಮಂದಹಾಸದಿ ಬರುವ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕರೆದರೆ ಓ ಓ ಎನಬಾರದೆ ಮರೆತರು ಕೂಗಿನ ದನಿಕೇಳದೆ ರಂಗ ಪ ಶರಣಜನರು ಸಾಸಿರವಿದ್ದರೇನೋ ಮೊರೆಯಿಡುವವ ಕಂಡರರಿವಾಗದೇನೋ ಅ.ಪ ಲಕ್ಷಜೀವಿಗಳನ್ನು ರಕ್ಷಿಸುವವನೆಂದು ವಕ್ಷದೊಳಿರುವ ಶ್ರೀಲಕ್ಷ್ಮಿ ಹೇಳುವಳು ಪಕ್ಷಿರಾಜನ ಫಣಿಯಕ್ಷನಂಗನೆಯರು ಅಕ್ಷರ ಲೋಕಾಧ್ಯಕ್ಷನೆನುವರು 1 ಯೋಗವನರಿಯೆನು ಯಾಗವನರಿಯೆನು ತ್ಯಾಗ ಮಾಡುವ ಬುದ್ಧಿ ಎಳ್ಳನಿತಿಲ್ಲ ರಾಗ ರಚನೆಗಳ ಅರಿವೆನಗಿಲ್ಲ ನಾಗಶಯನ ಕಾಯೋ ಮಾಂಗಿರಿರಂಗ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕರೆದಾಗ ಬಳಿಸಂದು ನಿಲ್ಲಬಾರದೆ ಶರಣಾರ್ಥಿನಾನೆಂಬುದರಿವಾಗದೆ ರಂಗ ಪ ಕರುಣಾಳು ನೀನೆಂದು ನೆರೆನಂಬಿದೆ ಅ.ಪ ಶಿಲೆಯಾದ ಪತ್ನಿಯು ಪೊರೆಯೆಂದಳೆ ಆ ಬಲುಪಾಪಿ ಅಜಮಿಳನು ಬಾರೆಂದನೆ ಖಗ ಕೇಳ್ದನೇ 1 ನೆರೆ ದಾನಧರ್ಮಗಳ ಕುಡಲಾರೆನೋ ವರ ಯಾಗಯೋಗಗಳ ಕೊಡಲಾರೆನೋ ಮಾಂ ಗಿರಿರಂಗ ಭಜನೆಯ ಬಿಡಲಾರೆನೋ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಾಣಲಿಲ್ಲವೆಂದೆನಬೇಡಿ ಪ ಜಾಣನವನು ನಿಮ್ಮ ಕೋಣೆಯೊಳಗಿರುವಾ ಗು ಡಾಣವ ತುಡುಕುವ ನೆರೆನೋಡಿ ಅ.ಪ ಸುಲಭನು ನಿಮಗವನೊಲಿವನು ನಿಮ್ಮೆಡೆ ನಿಲುವನು ನಲಿವನು ಕೈನೀಡೀ ಸಲಿಸಿರಿ ಬೆಣ್ಣೆಯ ಮೆಲುವನು ಕಿಲಕಿಲ ನುಲಿವನು ಚಲಿಸಲು ಬಿಡಬೇಡಿ 1 ಅಳುಕುತ ಬಳುಕತ ಬಳಲುತ ಸುಳಿಯುತೆ ಘಳಿಲನೆ ಪೋಪನೆಚ್ಚರವಿರಲಿ ಎಳನಗೆಯಿಂದ ಪಾಲೆರೆಯಿರಿ ಮನ ದೊಳಚ್ಚಳಿಯದ ಮೋದವು ನೆಲೆಸಿರಲಿ 2 ಮನವೆಂಬುವುದೇ ವನರುಹವಮ್ಮಾ ಕನಸುನೆನಸಿನೊಳಾ ವನಜವನರ್ಪಿಸೆ ನೀನೆಂಬುದನೇ ಮರೆಯುವಿರಮ್ಮಾ [ತನುಮನ ಅವನಡಿ ಸೇರುವುದಮ್ಮಾ] 3 ಪಡಸಾಲೆಯೊಳಿವ ನಿಲ್ಲುವನಲ್ಲಾ ಅಡಿಗೆಯ ಕೋಣೆಯ ಬಿಡುವನಲ್ಲ ಒಡೆಯ ಶ್ರೀಮಾಂಗಿರಿಪತಿಯನು ನೋಡದ ಮಡದಿಯಿಲ್ಲವೆಂಬುದು ಸಟೆಯಲ್ಲ 4 ನೀವಿರುವಾಯೆಡೆ ಪಾಲ್ಗಡಲಮ್ಮಾ ನೀವಡಿಯಿಡುವುದೇ ಕಡೆಗೋಲಮ್ಮಾ ದಧಿ ನವನೀತವು ನೀವಿರೆ ಮಾಂಗಿರಿರಂಗನುಂಟಮ್ಮಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೈತುತ್ತ ಹಾಕುವೆ ಬಾರೋ ರಂಗ ಮೈತುಂಬಾ ಒಡವೆಯ ಇಡುವೆನು ಬಾರೋ ಪ ಬೈತಲೆ ಬಾಚಿ ಹೂ ಮುಡಿಸುವೆ ಬಾರೋ ತೈ ತೈ ತೈ ಎಂದು ಕುಣಿದಾಡು ಬಾರೋ ಅ.ಪ ಬಿಸಿ ಬಿಸಿಯನ್ನವ ಮೊಸರಲಿ ಕಲಸಿ ಹಸುವಿನ ಬೆಣ್ಣೆಯ ಅದರ ಮೇಲಿರಿಸಿ ಕೇಸರಿ ಬೆರೆಸಿ ತುಸು ಏಲಕ್ಕಿಯ ಪುಡಿಮಾಡಿರಿಸಿ 1 ಬಸಿರಲ್ಲಿ ಜಗಂಗಳ ತುಂಬಿಹೆನೆಂದು ಹಸಿವಿಲ್ಲವೆನಬೇಡ ಅಸುರರಕೊಂದು ಬಿಸದ ಕಾಳಿಂಗನ ತುಳಿದೆದ್ದುನಿಂದು ಬಸವಳಿದಿರ್ಪೆನೀನಮರರ ಬಂಧು 2 ಹೊಸ ಪೀತಾಂಬರ ಕಟಿಬಂಧವಿಡುವೆ ವಿಸರವ ಪಸರಿಪ ಹೂಗಳ ಮುಡಿವೆ ರಸಸವಿನಾದದ ಕೊಳಲನು ಕುಡುವೆ ನಸುನಗೆ ತೋರೋ ಮಾಂಗಿರಿರಂಗ ನಲಿವೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೋಪಿ ಪ ತನ್ನ ಬಳಿಗೆ ಬಾರೆನ್ನುತಲೋಡಿದ ಅ.ಪ ನೊರೆ ನೊರೆ ಹಾಲನು ಸುರಿಸುರಿದು ತನ್ನ ಕಿರು ಬೆರಳಾಡಿಸಿ ಕೊರಳನು ಕೊಂಕಿಸಿ ಪರಿ ಹಾಸ್ಯ ಕುಚೋದ್ಯವ ಮಾಡುತ ಮುರಳಿಯನೂದಿ ಬಾರೆನ್ನುತ ಬಂದನೆ1 ಬೆಣ್ಣೆಯ ಕದ್ದು ಕೈ ಸುಣ್ಣವಾಯಿತು ಎಂದು ಕಣ್ಣು ಬಾಯಿಗಳಿಂದ ಸನ್ನೆಯ ಮಾಡಿ ಹಣ್ಣನು ತಿನ್ನುವೆ ಎನ್ನುತಲೋಡಿದ ಚಿಣ್ಣನು ಮಾಂಗಿರಿರಂಗನು ನೋಡೇ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಚಂದಿರವದನೆಯ ತವ ಸನ್ನಿಧಿಗೂ ವಂದಿಪೆ ನಿನ್ನ ಪಾದಾಂಬುಜಗಳಿಗೂ ಪ ಬೇಡುವೆ ಗೋವಿಂದನ ರಾಣಿ [ಕಲ್ಯಾಣಿ] ಅ.ಪ ನನ್ನ ಕರೆಗೆ ಓ ಎನ್ನುವರಿಲ್ಲ ನನ್ನಲ್ಲಿ ಕನಿಕರ ತೋರುವರಿಲ್ಲ ಪನ್ನಗಶಯನ ತಾ ಎನ್ನ ನೋಡುತೆ ಕಣ್ಣ ಸನ್ನೆಯ ಮಾಡಿ ಹೋಗೆನ್ನುವನಮ್ಮಾ 1 ಅಪ್ಪನು ನಿನ್ನ ಮಾತೊಪ್ಪುವನಮ್ಮ ತಪ್ಪನು ಮನ್ನಿಸಲೊಪ್ಪುವನಮ್ಮಾ ತಪ್ಪು ನೆಪ್ಪುಗಳ ನಾನೊ[ಪ್ಪುವೆ ಬೇ]ಗ ನೀ ನಪ್ಪಣೆಗೊಡಿಸು ರಂಗಪ್ಪನನೊಲಿಸು2 ಶೌರಿಯ ಕೃಪೆಯವತಾರೆ ನೀನೆಂಬುದ ನಾರದನೆಲ್ಲೆಡೆ ಸಾರುತಲಿಹನು ಮಾರಜನಕ ಮಾಂಗಿರಿರಂಗನು ನಿನ್ನ ಕೋರಿಕೆಗನುಮತಿ ತೋರುವನಮ್ಮಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಗಕ್ಕಿಂತ ಭಾರವೇನೊ ನಮ್ಮ ರಂಗ ನಗಕ್ಕಿಂತ ಗಾತ್ರನೇನೋ ಪ ಜಗಕ್ಕಿಂತ ಭಾರವೇನೋ | ಖಗಪೊತ್ತು ತಿರುಗಲೆ[ೀಕೆ] ನಗದ ಮೇಲೇ ಕುಳಿತಿಹ ಭಾರ ಜಗಂಗಳ ಹೊರುತಲಿ ನಲಿವವನಿವನೇ ನಗಗಳ ಬೆರಳಲಿ ಎತ್ತಿದನಿವನೇ ಖಗಮೃಗಗಳಿಗೆ ಒಲಿದವನಿವನೇ1 ತೃಣಕ್ಕಿಂತ ಹಗುರನೇನೋ ರಣದೆ ರಾವಣನ ಕೊಂದೆ ಮಣಿಗಿಂತ ಸಣ್ಣನೇನೋ ಧರಣಿಯನಳೆದೈತಂದೆ ತೃಣಕ್ಕೆಲ್ಲಾ ತೃಣರೂಪಾಗಿಹನು ಮಣಿಗೆಲ್ಲಾ ಶ್ರೀಮಣಿಯಾಗಿರುವ ಸ ದ್ಗುಣಿಗಳಿಗೆ ಕರುಣಿಯು ಇವನು 2 ಎಲ್ಲೆಲ್ಲು ಇರುವನೇನೋ ನಮ್ಮ ರಂಗ ಎಲ್ಲಿಯೂ ಇರುವನೇನೇ ಅಲ್ಲಲ್ಲಿ ಇರುವ ರಂಗ ಎಲ್ಲೆಲ್ಲು ಇಲ್ಲವೇನೇ ಅಲ್ಲಲ್ಲಿ ಅಂತರಂಗ 7 ಬಲ್ಲಿದರೆಲ್ಲ ಬಲ್ಲರು ಇವನ ಕಲ್ಲೆಂಬುವರಿಗೆ ಇವನು ಇಲ್ಲದ ತಾಣವೊಂದಿಲ್ಲವು ಭಕ್ತಿಯ ಸೊಲ್ಲಿಗೆ ಸೋಲುವ ಮಾಂಗಿರಿರಂಗ 8
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಗನ್ನಾಥ ಸಮುದ್ರ ತೀರದಿ ಜಗನ್ನಾಥ ಸಮಗ್ರ ಸೇವೆಯ ಕೊಡುವಾತ ಪ ಸಮರ್ಥ ಫಲ್ಗುಣ ರಥಸೂತ ಸಮಸ್ತಲೋಕವ ಪೊರೆವಾತ ಅ.ಪ ಬಲಭದ್ರಾನುಜೆಯರನೊಡವೆರಸಿ ಜಲನಿಧಿ ಮಧ್ಯದಿ ದ್ರೋಣದಿಂದಿಳಿಸಿ ಒಲಿದು ವೈಕುಂಠಕೆ ಅವದಿರ ಕಳಿಸಿ ಸಲೆ ನಿಂದೆಯಾ ಜಗನ್ನಾಥನೆಂದೆನಿಸಿ 1 ಪಾಂಡವರಕ್ಷಕ ನೀಲಾಂಗಾ ಪುಂಡರೀಕಾಂಬಕಾ ಮದನಾಂಗಾ ಅಂಡಜವಾಹನ ರಿಪುಮದಭಂಗ ಕಂಡೆ ನಿನ್ನನಾ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಪವ ಮಾಡಿದರೇನು ತಪವ ಮಾಡಿದರೇನು ವಿಪುಲಭಕ್ತಿಯು ಮಾತ್ರ ಇಲ್ಲದಿರುವವನು ಪ ವಿಪರೀತ ಡಂಭದಲಿ ಉಪಕರಣಗಳ ತೊಳೆದು ಕೃಪೆ ಪಡೆಯದಿರೆ ಗುರು ರಾಘವೇಂದ್ರನ ಅ.ಪ ಗುರುವಿನುಪದೇಶದ ಸ್ಮರಣೆಯನು ಮರೆತವನು ಗುರುಪಾದ ಸೇವೆಯನು ತೊರೆದು ಕಿರಿದೆನ್ನುವನು ಹರಿಯನೇ ನಾ ಕಂಡೆ ಗುರುಹಂಗು ಎನಗಿಲ್ಲ ಸರಿಯಾರು ತನಗೆಂಬ ಗರುವಯುತನು1 ಗುರುವಿನೊಲವೇ ಧರ್ಮ ಗುರುಸೇವೆಯೇ ತಪ ಗುರುನಾಮವೇ ಮಂತ್ರ ಗುರುಸಿದ್ಧಿಯೇ ತಂತ್ರ ಗುರುವೇ ಸ್ವರ್ಗಕೆ ದಾರಿ ಗುರುರೂಪ [ಕಣ್‍ಸಿರಿಯು] ಗುರುವೇ ಸರ್ವಸ್ವ ಮಾಂಗಿರಿರಂಗನುಸಿರು2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯ ಪದ್ಮಜಾರಮಣ ಜಯ ಭಕ್ತಜನಕರುಣ ಜಯ ಕೌಸ್ತುಭಾಭರಣ ಜಯ ಪದ್ಮಚರಣ ಪ ಜಯ ಭವಾಂಬುಧಿ ತರಣ ಜಯ ಪಾಪಭಯಹರಣ ಜಯತು ಸತ್ವಾವರಣ ಜಯ ದೀನಶರಣ ಅ.ಪ ಜಯತು ಗಾನವಿಲೋಲ ಜಯ ಗೋಕುಲಬಾಲ ಜಯತು ತುಳಸೀಮಾಲ ಜಯತು ಜಗಮಾಲ 1 ಜಯತು ದಾನವಕಾಲ ಜಯತು ಸತ್ವದುಕೂ¯ ಜಯತು ಸುರಮುನಿಪಾಲ ಜಯತು ಮಾಲೋಲ 2 ಜಯತು ಜಯ ರಿಪುಭಂಗ ಕಮಲಜಾ ಅಂಗ ಜಯತು ಘನನೀಲಾಂಗ ಜಯತು ಗರುಡತುರಂಗ ಜಯತು ಮಾಂಗಿರಿರಂಗ ಕರುಣಾಂತರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜೋ ಜೋ ಜೋ ಗುಂಡ ಪರಮಪ್ರಚಂಡ ಜೋ ಜೋ ಜೋ ಗುಂಡ ಸುರಚಿರದಂಡ ಪ ಜೋ ಜೋ ಜೋ ದೊಡ್ಡ ಕರಿಯಕಲ್ಗುಂಡ ಜೋ ಜೋ ಜೋ ಮದ್ದನರೆಯಚ್ಚಗುಂಡ ಅ.ಪ ದುಂಡು ಮಲ್ಲಿಗೆಗಿಂತ ಮೃದುವಾದ ಗುಂಡಾ ಕೆಂಡ ಸಂಪಿಗೆಗಿಂತ ಚೆಲುವಾದ ಗುಂಡಾ ಪುಂಡರೀಕಕ್ಕಿಂತ ಚೆಲುವಾದ ಗುಂಡಾ ಮೊಂಡ ಮೂಕರಕಯ್ಯ ಕೋದಂಡಗುಂಡಾ 1 ಒಬ್ಬಿಟ್ಟು ಹೂರಣವರೆಯುವ ಗುಂಡಾ ತಬ್ಬಿಬ್ಬಾಡುವರನು ಕಡುಗುವಾ ಗುಂಡಾ ರುಬ್ಬಿ ರುಬ್ಬಿ ದೋಸೆ ಯೀಯುವಾ ಗುಂಡಾ ಕೊಬ್ಬಿದ ಜನವನು ದಬ್ಬುವಾ ಗುಂಡಾ 2 ಪರಿಪರಿ ಬಂಧನವರಿಯದ ಗುಂಡಾ ಉರುಳಿಸಿದಲ್ಲಿಯೇ ನಿದ್ರಿಪ ಗುಂಡಾ [ವರಭಕ್ತಾವಳಿಗೆ ಸುಖವೀವಗುಂಡಾ] 3 ನೀನಿಲ್ಲದಿರುವ ಮನೆಗಳಿಲ್ಲ ಗುಂಡಾ ನೀನಿರುವಲ್ಲಿ ತಿಂಡಿಗಳುಂಟು ಗುಂಡಾ ಕಾನನದೊಳಗಿದ್ದು ಕರಗದ ಗುಂಡಾ ಮಾನವ ಗಣಕ್ಕೆಲ್ಲಾ ಬೇಕಾದ ಗುಂಡಾ4 ಒರಳುಕಲ್ಲಿನ ಮೇಲೆ ನೇಯುವಾ ಗುಂಡಾ ತರುಣಿಯ ಕರದೊಳು ನಲಿಯುವಾ ಗುಂಡಾ ವರ ದುಕೂಲಂಗಳ ಬಯಸದ ಗುಂಡಾ ವರದ ಮಾಂಗಿರಿರಂಗನೆನಿಸುವ ಗುಂಡಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತಂದೇ ಕಮಲಾಪತಿಯೇ ಕಂದನ ಬಂಧನವಳಿದ ಹರಿಯೇ ಪ ನಂದನ ಕಂದ ಗೋವಿಂದ ಮುರಾರೇ ಅ.ಪ ಜವನ ಬಾಧೆಗೆ ಪಕ್ಕಾದೆ ನಿನ್ನ ಚರಣವೆ ಗತಿಯೆಂದು ಬಂದೆ 1 ಶರಣರು ಕರೆಯಲು ಬರುವೆ ರಂಗ ತ್ವರಿತದಿ ಪಾಪವ ಕಳೆವೆ ಪರಮದಯಾಕರ ಮಣಿವೆ ಎನ್ನ ಮೊರೆಯ ಲಾಲಿಸದಿರೆ ತರವೆ 2 ಮಂಗಳದಾಯಕ ನೀನೆ | ತ್ರಿಲೋಕಂಗಳ ಸಲಹುವ ನೀನೇ ಮಾಂಗಿರಿರಂಗನು ನೀನೇ | ನಿನ್ನ ದಾಸರ ದಾಸನು ನಾನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತನುವೆಂಬ ಭವನದಲಿ ಮನವೆಂಬ ಮಂಟಪದಿ ವನರುಹಾಸನ ವಿಹುದು ನಿನಗಾಗಿ ಕೃಷ್ಣಾ ಪ ಅನವರತ ಸ್ವಾಗತವ ಇನಿದಾಗಿ ಪೇಳುತಲಿ ಸನುಮತದೊಳೀರೈದು ಮುನಿವರರು ನಿಂದಿಹರು ಅ.ಪ ಎನಗೆ ತನಗೆಂದಿಬ್ಬರನುವಾಗಿ ಕಾದಿಹರು ಘನ ಮೌನಿಯಂತೊಬ್ಬ ಮಣಿಯುತಿಹನು ವನಜ ಸಂಭವ ಜನಕ ಮುನಿಯೊಡನೆ ನೀ ಬಂದು ಕನಕಮಂಟಪವೇರು ಅವರಿಬ್ಬರೋಡುವರು 1 ಕರಿಯ ಮೈಯವನೊಬ್ಬ ದುರದುರನೆ ನೊಡುವನು ಪರಿವಾರದವರನ್ನು ತೋರುತಿಹನೊಬ್ಬ ಕರದಿ ಸನ್ನೆಯ ಮಾಡುತಿಬ್ಬರೂ ಬರುತಿಹರು ತರಿದವರ ಮಂಟಪವನೇರೊ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತಾಳಬೇಕು ಭಕ್ತಿಯೇಳಬೇಕು ಪ ತಾಳಬೇಕಾದವನು ಮೇಳದಲಿ ಬಾಳಬೇಕು ಅ.ಪ ಹಾಡಲು ತಾಳಬೇಕು ಬೇಡಲು ತಾಳಬೇಕು ಓಡಾಡಿ ಕುಳಿತು ಮಾತಾಡಲು ತಾಳಬೇಕು ನೋಡಬೇಕಾದವನು ನೋಡಲು ತಾಳಬೇಕು ಮಾಡಿ ಮುಳುಗುವ ಜನ್ಮಬೇಡೆಂದು ತಾಳಬೇಕು 1 ತಾಳರಿತಮೇಲಂತರಾಳವನು ಕಾಣಬೇಕು ತಾಳದವ ಬಾಳುವನೇ ಮೇಳದೊಳಗೇ ತಾಳ ನೋಡುವರೆಲ್ಲ ಹೂಳನೋಡಲಿಬೇಕು ತಾಳಿ ಮಾಂಗಿರಿರಂಗನೂಳಿಗಕ್ಕೆ ನುಗ್ಗಬೇಕು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್