ತಪಿಸಲಾರೆ ನಾನು ಪರಿಪರಿ ತಾಪದಲಿ
ಕೃಪೆಮಡಿ ಸಲಹಿರಿ ಶ್ರೀ ಗುರುಗಳೆ ಪ.
ಸುಪಥ ಕಾಣದೆ ನಿಮ್ಮ ಪಾದವನೆ ನಂಬಿದೆನು
ಗುಪಿತ ಮಹಿಮರೆ ಇನ್ನು ಭವಪಾಶ ಬಿಡಿಸುತ್ತ ಅ.ಪ.
ಬಂಧು ವರ್ಗಗಳನ್ನ ಬದುಕಿಸುವರು ಎಂದು
ಬಂಧನದೊಳು ಬಿದ್ದು ಬೆಂದು ನೊಂದೆ
ಮುಂದೆ ದಾರಿಯ ಕಾಣೆ ಮುಕ್ತಿ ಮಾರ್ಗವನರಿಯೆ
ಬಂಧು ಬಳಗಗಳೆಲ್ಲ ನೀವೆಂದು ನಂಬಿದೆ 1
ಅಶನವಸನಗಳಲ್ಲಿ ಆಸೆಯನು ತೊರೆಯದೆ
ವಸುಮತಿಯೊಳು ಜ್ಞಾನ ಹೀನವಾಗಿ
ಪಶುವಿನಂದದಿ ತಿರುಗಿ ಕಾಲವ್ಯರ್ಥ ಕಳೆದೆ
ಅಸಮ ಮಹಿಮರೆ ಇನ್ನು ಅಜ್ಞಾನ ಪರಿಹರಿಸಿ 2
ಮಮತೆಯನು ತೊರೆಯದೆ ಮಾಯ ಪಾಶಕೆ ಸಿಲುಕಿ
ಮಮಕಾರದಿಂದ ನಾ ಮೈಮರೆತೆನು
ನಮಿಸುವೆನು ದೈನ್ಯದಲಿ ನಾನೀಗ ನಿಮ್ಮ ಪದಕೆ
ರಮೆಯರಸನ ತೋರಿ ಎನ್ನ ಮನ ಮಧ್ಯದಿ 3
ಪಾವನರೂಪರೆ ಪಾಪರಾಹಿತ್ಯರೆ
ಪಾವಿನಶಯನಗೆ ಪರಮಪ್ರಿಯರೆ
ದೇವತೆಗಳೊಡೆಯರೆ ದೇವಾಂಶ ಸಂಭವರೆ
ಪಾವಮಾನಿಗೆ ಪ್ರಿಯರೆ ಪಾವನ್ನಗಾತ್ರರೆ 4
ಆಪತ್ತು ಕಳೆಯುವರೆ ಶ್ರೀಪತಿಯ ತೋರ್ವರೆ
ಕೋಪಿಸದೆ ಎನ್ನೊಳು ಕೃಪೆಗೈಯ್ಯರಿ
ಗೋಪಾಲಕೃಷ್ಣವಿಠ್ಠಲ ತಾನು ಹೃದಯದಲಿ
ತೋರ್ಪುತೆ ಕರುಣಿಸುತ ಈ ಪರಿಯಿಂ ಸಲಹಿರಿ5