ಒಟ್ಟು 7653 ಕಡೆಗಳಲ್ಲಿ , 132 ದಾಸರು , 4671 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಂತ್ರೋದ್ಧಾರಕ ಪ್ರಾಣರಾಯ ಎನ್ನ ಚಿಂತೆ ಹರಿಸೋ ಪ. ಅಂತರಂಗದಿ ಹರಿಯ ಧ್ಯಾನವ ಮಾಡಿಸೋ ಅ.ಪ. ನಿನ್ನ ನೋಡಿ ಧನ್ಯಳಾದೆನೊ ಹೊನ್ನು ಹನುಮನೆ ಎನ್ನ ಪಾಪ ಹರಿಸಿ ಕಾಯೊ ಘನ್ನ ಹನುಮನೆ 1 ಒಂದು ಅರಿಯದ ಮಂದಮತಿಯಳ ಬಂದು ಕಾಯೋ ಬಂಧನವ ಬಿಡಿಸಿ ಕಾಯೋ ಸುಂದರಾಂಗನೆ 2 ತುಂಗಾತೀರದಿ ನಿಂತಿರುವಿ ಮಂಗಳಾಂಗನೆ ಮಂಗಳ ರಾಮನ ಧ್ಯಾನವ ಮಾಡಿಸು ಎನಗೆ 3 ಹಂಪಿಯಲಿ ನಿಂತಿರುವಿ ಸೊಂಪಿನಿಂದಲಿ ಸಂಪಿಗೆ ನೆರಳಲಿ ನೋಡಿದಿ ರಾಮರ ಧ್ಯಾನ ಮಾಡುತ 4 ರಾಮ ದೂತನೆ ಎನ್ನ ಮೊರೆಯ ಲಾಲಿಸಿ ಪಾದ ಬೇಗ ತೋರಿಸೊ 5
--------------
ಸರಸಾಬಾಯಿ
ಯಂತ್ರೋದ್ಧಾರಕ ರಾಯರ ಸ್ಮರಣೆಯ ಮಾಡಿ ಅಂತರಾತ್ಮನ ದಾಸರ ಪ ಸಂತತ ಮನದಿ ನಿಶ್ಚಿಂತೆಯೊಳ್ ಸ್ಮರಿಸಲು ಸಂತಾಪಗಳ ಕಳೆದು ಚಿಂತಿತಾರ್ಥವನೀವ ಅ.ಪ ಶರಧಿಯ ನೆರೆದಾಟಿದ ಕಾಲುವೆಯಂತೆ ನಲಿದು ಲಂಕೆಯ ಸಾರಿದ ಬಲಶಾಲಿ ಲಂಕಿಣಿಯು ಪುರವ ಕಾಯುವ ಶ್ರಮ ಹರಿಸಿ ಸೂಕ್ಷ್ಮದ ರೂಪ ಧರಿಸಿ ಪುರವ ಪೊಕ್ಕು ಪರಿಪರಿ ಕೋಟೆಗಳಿರವನೆ ಕಾಣುತ ಕರಿ ಹಯ ರಥ ಶಾಲೆಗಳ ಪರಿಕಿಸುತ ಖಳನರಮನೆ ಪೊಕ್ಕರು ಫಲವಿಲ್ಲದೆ ಕಡೆಗೆ ಅಶೋಕ ವನದೊಳು ಚರಿಸಿದ1 ವನದ ಮಧ್ಯದೊಳಿರಲು ರಕ್ಕಸ ಬಹು ಘನತೆಯಿಂದಲಿ ಬರಲು ಬಣಗು ದೈತ್ಯನ ತೃಣಕೆಣೆಮಾಡಿ ನುಡಿಯಲು ಪವನ ತನಯ ನೋಡಿ ಮನದಿ ಸ್ತೋತ್ರವ ಮಾಡಿ ಮನದೊಳು ಶ್ರೀ ರಘುವರನನು ಧ್ಯಾನಿಸಿ ಘನ ಮುದ್ರಿಕೆ ಮುಂದಿಡಲಾ ಜಾನಕಿ ನಯನಂಗಳ ಕಂಬನಿಗರೆಯುತ ಮುಂದಿಹ ಹನುಮನೊಳಿಂತೆನೆ ಲಾಲಿಸಿದ 2 ಯಾವ ರಾಯರ ದೂತನೋ ಪೇಳಯ್ಯ ಬಲು ಸಾವಧಾನದಿ ಮಾತನು ಶ್ರೀರಾಮಚಂದ್ರ ನಿನ್ನ ಸೇರಿ ಮಿತ್ರತ್ವಮಾಡೆ ಕಾರಣವೇನುಂಟು ಸಾವಧಾನದಿ ಪೇಳು ಯಾರನುಮತಿಯಿಂದೀ ಪುರ ಪೊಕ್ಕೆಯೊ ಯಾರಿಗಾಗಿ ಈ ವಾನರ ರೂಪವು ಪೋರನಂತೆ ಕಾಣುವಿ ನಿನ್ನ ವಚನವು ಬಾರದು ಮನಕೆಂದೆನಲು ಮಾತಾಡಿದ 3 ಜನಕ ಜಾತೆಯೆ ಲಾಲಿಸು ದೈತ್ಯರ ಸದೆ ಬಡಿಯುವನೆಂದು ಭಾವಿಸು ಇನಕುಲ ತಿಲಕನ ಚರಣಸೇವೆಯು ಮಾಡೆ ಜಲಜಾಕ್ಷನಾಜ್ಞದಿಂದ ಭುವಿಯೊಳು ವಾನರ- ಕುಲದೊಳಗವತರಿಸುವ ಶತ ಸಂಖ್ಯೆಯೊಳಿರುತಿರೆ ಗಿರಿವನಚರಿಸುವ ಸಮಯದಿ ಜಲಜಾಕ್ಷಿಯನರಸುತ ರಾಘವಬರೆ ಚರಣಾಂಬುಜಗಳಿಗೆರಗಿದೆವೆಂದೆನಲು 4 ಜಲಜಾಕ್ಷಿ ನಿಮ್ಮ ಕಾಣದೆ ಮನದೊಳಗೊಂದು ಘನವಾದ ಚಿಂತೆ ತಾಳಿದೆ ಜನಕ ಜಾತೆಯ ಪಾದಾಂಬುಜವ ಕಾಣದೆ ಮರಳಿ ಪುರವ ಸಾರುವದೆಂತು ರವಿಸುತನಾಜ್ಞೆ ಮೀರ- ಲರಿಯದೆ ಈ ಉಪವನದೊಳಗರಸುವ ಸಮಯದಿ ಶ್ರೀವರನಿಯಮಿಸಿ ಪೇಳಿದ ಪರಿಯನು ತಿಳಿಯುತ ಪರಮಾನಂದದಿ ರಘುವರನ್ವಾರ್ತೆಯ ಲಗುಬಗೆ ಪೇಳಿದ 5 ಕುರುಹು ಕೊಡಮ್ಮ ಜಾನಕಿ ಮನಸಿನ ಚಿಂತೆ ಬಿಡುಬೇಗ ಭದ್ರದಾಯಕಿ ಕ್ಷಣದೊಳ್ ಶ್ರೀರಾಮನೊಳು ಇನಿತೆಲ್ಲವನು ಪೇಳಿ ಕ್ಷಣದಿ ರಕ್ಕಸರನೆಲ್ಲ ನೆಲಸಮ ಮಾಳ್ಪೆನೆಂಬೀ ಅಣುಗನಿಗಪ್ಪಣೆಯನು ಪಾಲಿಸೆನಲು ಅನುಮತಿನೀಡಿದ ಅವನಿಜೆಗೊಂದಿಸಿ ಕ್ಷಣದೊಳು ವನಭಂಗವ ಮಾಡಿದ ನುಡಿ ಕೇ- ಳಿದ ರಾವಣನ ಪುರವ ಅನಲನಿಗಾಹುತಿ ಇತ್ತ 6 ಜಯ ಜಯ ಜಯ ಹನುಮಂತ ಜಯ ಜಯ ಬಲವಂತ ಜಯ ಶ್ರೀರಾಮರ ಪ್ರಿಯದೂತ ಜಯ ಜಯ ಜಯವೆಂದು ಸನಕಾದಿಗಳು ಪೊಗಳೆ ಅನಲ ಸಖನ ಸೂನುವನು ಸ್ತೋತ್ರದಿಂದ ಪಾಡೆ ಕಮಲಜಾದಿ ಸುರಗಣ ತಲೆದೂಗೆ ಶ್ರೀ ಕಮಲನಾಭ ವಿಠ್ಠಲನನು ಪಾಡುತ ಅಮಿತ ಪರಾಕ್ರಮವಂತನ ಪೊಗಳುತ ನಮಿಸಿ ಶ್ರೀರಾಮರ ಗುಣಗಳ ಪೊಗಳುವ 7
--------------
ನಿಡಗುರುಕಿ ಜೀವೂಬಾಯಿ
ಯಥಾದೇವೊ ತಥಾ ಗುರೌ ಶ್ರುತಿ ಹೇಳಿದ ಸನ್ಮತಲಿರ್ಯೊ ಧ್ರುವ ವೃಥಾ ಅಭಾವ ನೀ ಹಿಡುವರೆ ಸ್ವತ:ಸಿದ್ಧವ ತಾಂ ಬಿಡುವರೆ ಸತ್ಸಂಗದಲಿ ನೋಡಿನ್ನಾರೆ ಚಿತ್ಸುಖ ಹೊಳೆವರು ಕಣ್ಣಾರೆ 1 ಮುಗಿಲಿಗೆ ಮತ್ತೆ ಮುಗಿಲುಂಟೆ ಹಗಲಿಗೆ ಹಗಲಾಗುದುಂಟೆ ಜಗ ಇಹುದಕೆ ಜಗಮುಂಟೆ ಹೀಗಾದ ಮ್ಯಾಲೆ ವಸ್ತು ಎರಡುಂಟೆ 2 ಅನುಭವಕಿದರಿಟ್ಟು ಬಾಹುದು ಖೂನ ಹೇಳವ್ಯಾವು ನೋಡು ವೇದ ದೀನ ಮಹಿಪತಿಗಿದೆ ಬೋಧ ಭಾನುಕೋಟಿತೇಜನೊಂದೇ ತಾನಾದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಯದು ಕುಲಾಂಬುನಿಧಿ ಪೀಯೂಷಕ್ಷಕರ ಪಂಚಸಾಯಕಾನಂತ ಕಮನೀಯ ರೂಪಾ ಕಮಲಾಯತಾಕ್ಷನೆ ಬ್ರಹ್ಮ, ವಾಯು, ಸುರಮುನಿ ಮುಖ್ಯಧ್ಯೇಯ ವಿಷ್ಣೋ ಪ ಗೋತ್ರಾರಿ ಪುತ್ರನಿಜಮಿತ್ರ ಸುಪವಿತ್ರ ಚಾ ಕಳತ್ರ ಶುಭಗಾತ್ರಗತಿ ಸತ್ರತ್ರಿನೇತ್ರನುತ ಸಕಲಜಗ ಸೂತ್ರ ನೋಟಕ ತೋತ್ರವೇತ್ರ ಪಾಣೆ 1 ಭವ ಭವ ಭಂಗ ವರಗೋಪಾಂಗನಾ ಅಂಗ ಸಂಗಲೀಲಾರತ ಭುಜಂಗ ಪರಿಯಂಕ ಸುರ ತುಂಗ ಗಂಗಾಜನಕ ಸರ್ವಾಂತರಂಗ ಹರಿ ಮಂಗಳಾತ್ಮಕ ತಿರುವೆಂಗಳೇಶಾ 2 ನಂದಕಂದ ಶ್ರೀ ಮುಕುಂದ ದುರಿತಾಂಧ ಅರ ವಿಂದಭಾಂಧವ ದಿತಿ- ಜವೃಂದ ವ್ಯಾಳಖಗೇಂದ್ರ ತಂದೆ ಮಹಿಪತಿ ನಂದನ ಪ್ರಿಯ ಗೋವಿಂದ ಆ ನಂದ ಕಂದನೆ ಸಿಂಧುಶಯನ ದೇವಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯದುಪತಿ ನಮಗಾಗಲಿ | ನಿನ್ನಲಿ ರತಿ ಪ ಅನುಭವಿಗಳ ಸಂಗತೀ 1 ಮರೆಯದೆ ಇಂಥಾ ಮತಿ2 ಸ್ವಾಂತ ಧ್ವಾಂತ ಶ್ರೀದವಿಠಲಾ | ಪ್ರಾಂತಕೆ ನೀನೇ ಗತೀ 3
--------------
ಶ್ರೀದವಿಠಲರು
ಯನಗೆ ನಾನೇ ಸರಿ-ನಿನಗೆನೀನೆ ಹರಿ ಎಣಿಗಾಣೆ ನೀರ್ವರ್ಗೆ ವನಜನಯನ ಪ ಧರೆಯನಾಳುವ ಸಿರಿಯರಸ ನೀನು ಈ ಧರೆಯೊಳು ನಿರ್ಭಾಗ್ಯರೆರೆಯ ನಾನು 1 ಪರಮೇಷ್ಠಿಯನ್ನು ಪಡೆದ ಪರಮ ನೀನು ಬಲು ದುರಿತಂಗಳಪ್ಪಿದ ದುರುಳನು ನಾನು 2 ಪುಣ್ಯವಂತರ ಹೃದಯ ಗಣ್ಯ ನೀನು ಕೃತಪುಣ್ಯ ಹೀನರಿಗಗ್ರಗಣ್ಯ ನಾನು 3 ಪತಿತಪಾವನ ನೀನು ಪತಿತ ನಾನು ಸದ್ಗತಿದಾತ ನೀನು ನಿರ್ಗತಿಕನಾನು 4 ವರವ್ಯಾಘ್ರಗಿರಿಯ ವರದ ವಿಠಲನು ನೀನು ನಿಜ ಶರಣರ ಚರಣ ಧೂಳೀಪಟಲನಾನು 5
--------------
ಸರಗೂರು ವೆಂಕಟವರದಾರ್ಯರು
ಯಮ ತನ್ನ ಪುರದಿ ಸಾರಿದನು ಎಮ್ಮ ಕಮಲನಾಭನ ದಾಸರ ಮುಟ್ಟದಿರಿಯೆಂದು ಪ. ಭುಜದಲೊತ್ತಿದ ಶಂಖಚಕ್ರಾಂಕಿತವನ್ನು ನಿಜ ದ್ವಾದಶನಾಮ ಧರಿಸಿಪ್ಪರಾ ತ್ರಿಜಗವಂದಿತ ತುಲಸಿಯ ಮಾಲೆ ಹಾಕಿದ ಸುಜನರಂಗಣವ ಪೊಗದೆ ಬನ್ನಿರೆಂದು 1 ಗೋಪಿಚಂದನ ಬಿಟ್ಟು ದೇಹಕ್ಕೆ ಭಸ್ಮವ ಲೇಪಿಸಿ ಹರಿಹರರೊಂದೆಂಬ ಪಾಪಿಗಾಳೆಳತಂದು ಕಣ್ಣು ಕಳಚಿ ಅಂಧ ತಾಮಸಿನೊಳಗ್ಹಾಕಿ ಕಲ್ಲು ದಬ್ಬಿರೊ ಎಂದು 2 ತಾಳದಂಡಿಗೆ ನೃತ್ಯಗೀತ ಸಮ್ಮೇಳದಿ ಊಳಿಗವನು ಮಾಳ್ಪ ಹರಿದಾಸರ ಕೇಳುತಲೊಮ್ಮೆ ಕರಗಳ ಮುಗಿದು ನ - ಮ್ಮಾಳುಗಳೆನುತ ಪೇಳದೆ ಬನ್ನಿರೆಂದು 3 ಗುರುಮುದ್ರೆಯವನು ತಾನೆಂದು ಪ್ರಾಣಿಗಳ ಮಂ- ದಿರಕೆ ಪೋಗಿ ಪೋಗಿ ನಿರ್ಬಂಧಿಸಿ ಬರಿದೆ ಬೈದು ಬಳಲಿಸುವ ಪಾಪಿಗಳ ಕೊರೆದು ಕುಟ್ಟಿತಂದು ಮುರಿದು ಕೊಲ್ಲಿರೊ ಎಂದು 4 ಅನ್ಯದೈವ ಅನ್ಯಮಂತ್ರ ತಂತ್ರವ ಬಿಟ್ಟು ಪನ್ನಗಶಯನನೆ ಗತಿಯೆನುತ ಉನ್ನತ ಹರಿದಿನ ವ್ರತವನಾಚರಿಪ ಪ್ರ- ಸನ್ನರ ಗುಣವ ಕೆಣಕದೆ ಬನ್ನಿರೆಂದು 5 ಚರ್ಮಕ್ಕೆ ಸಿಡಿ ಊರಿ ಬೇವಿನುಡುಗೆವುಟ್ಟು ಚಿಮ್ಮುತ ಚೀರುತ ಬೊಬ್ಬೆಗಳಿಡುತ ಕರ್ಮ ಕೂಗುರಿಯಾಗಿ ಪ್ರಾಣಹಿಂಸೆಯ ಮಾಳ್ಪ ಬ್ರಹ್ಮೇತಿಕೋರನ ಬ್ಯಾಗನೆ ಎಳತನ್ನಿ 6 ಕೇಶವ ಹರಿ ಅಚಲಾನಂದವಿಠಲನ್ನ ಶೇಷಗಿರಿಯ ತಿರುಮಲೇಶನ ದಾಸರ ದಾಸರ ದಾಸನೆಂದೆನಿಸುವ ದಾಸರ ಗುಣವ ಕೆಣಕದೆ ಬನ್ನಿರಿ ಎಂದು 7
--------------
ಅಚಲಾನಂದದಾಸ
ಯಾಕಿಷ್ಟು ದಯವಿಲ್ಲ ಎನ್ನಮೇಲೆನೀ ಕರುಣಿಸಿದರಾಗದ ಕಾರ್ಯವುಂಟೆ ಪ ಬಾಲೆಗೊಲಿದು ಹಾಲಕುಡಿದವನೆಂದೆನೆಸೂಳೆಯ ಮನೆಗೆ ನಾ ಹೋಗೆಂದೆನೆಲೋಲಾಕ್ಷಿಯ ಕುಚದೊಳೆ ಮಾತಾಡೆಂದೆನೆಚೋಳನಂತೆ ಹೊನ್ನ ಮಳೆಯ ಕರೆಯೆಂದೆನೆ1 ಊರುಗಲ್ಲೊಳು ಕನ್ನವ ಕೊಯಿದನೆಂದನೆಊರನೆ ಕೈಲಾಸಕ್ಕೊಯಿಯೆಂದೆನೆಕ್ರೂರ ಬಾಣನ ಬಾಗಿಲ ಕಾಯ್ದನೆಂದೆನೆನೀರ ಮಂಡೆಯೊಳು ಪೊತ್ತವನೆಂದು ಪೇಳ್ದೆನೆ 2 ಮಲ್ಲಗಾಳಗವನು ಮಾಡಿದನೆಂದೆನೆಬಿಲ್ಲಿನಿಂ ಬಡಿಸಿಕೊಂಡವನೆಂದೆನೆಎಲ್ಲರರಿಯೇ ತಿರಿದುಂಡವನೆಂದನೆಕಲ್ಲುಮನವೇ ಕೆಳದಿರಾಮೇಶ್ವರಲಿಂಗ 3
--------------
ಕೆಳದಿ ವೆಂಕಣ್ಣ ಕವಿ
ಯಾಕೆ ಕೆಡುವೆ ಖೋಡಿ ಮನವೆ ಪ ಲೋಕದಿರವ ನೋಡಿ ನೂಕುನುಗ್ಗಾಗಿ ಕಾಕುಗುಣದಿ ಯಮಲೋಕ ಪಡೆವುದವಲೋಕನ ಮಾಡಿ ಅ.ಪ ಭ್ರಮಿಸಬಾರದ ಭ್ರಮಿಸಿ ಮನಸೆ ಕ್ರಮಗೆಟ್ಟಾಚರಿಸಿ ಶಮೆದಮೆ ಅರಿಯದೆ ಸುಮನರ ನೋಡದೆ ಸುಮ್ಮನಳಿವೆ ಈ ಸಮಯ ಸಿಗುವುದೇ1 ತಂತು ತಿಳಿಯದ್ಹೋದಿ ಜಗತ್ತಿನ ಚಿಂತನೆಗೊಳಗಾದಿ ಸಂತಸ ವಹಿಸದೆ ಸಂತರ ತಿಳಿಯದೆ ಅಂತರವರಿಯದೆ ಅಂತ್ಯಕೀಡಾದಿ2 ಪಾಮರ ನೀನಾದಿ ನಾಶನ ತಾಮಸ ಅಳಿದ್ಹೋದಿ ಸ್ವಾಮಿಯೊಳಾಡದೆ ಕ್ಷೇಮವ ಪಡೆಯದೆ ನಾಮಭಜಿಸಿ ಶ್ರೀರಾಮನ ಕೂಡದೆ 3
--------------
ರಾಮದಾಸರು
ಯಾಕೆ ಜೀವನವೆ ನೀ ಶ್ರೀಕಾಂತನನು ಮರೆವಿ | ವಿವೇಕವೇ ನಿನಗಿದು ? ಪ ಜೋಕೆಯಿಂದಲಿ ನಿನ್ನ ಸಾಕುವ ಶ್ರೀ ಹರಿಯು | ಬೇಕಾದ ವರವೀವ ಭಕ್ತವತ್ಸಲ ದೊರೆಯಾಅ.ಪ ಲೇಸಾದರು ವಿಷಯದಾಸೆಯ ಬಿಡಲೊಲ್ಲಿ | ಏಸು ಜನ್ಮಂಗಳಾದರು ಈ ಶರೀರವು ನಿನ್ನದೆಂದು ತಿಳಿದು || ಪೋಷಿಸುವಿಯೊ ಬರಿದೆ ದೋಷರಹಿತ ಶ್ರೀನಿ- | ವಾಸನ್ನ ನೆನೆದು ನಿರ್ದೋಷವ ಕಳೆದೆನ್ನ ಪೋಷಿಸು ಎನ್ನದಲೆ 1 ಸತಿ-ಸುತರನು ನೀನು ಸಲಹುವೆನೆನುತಲಿ | ಅತಿ ಚಿಂತೆ ನಿನಗ್ಯಾತಕೊ ಗತಿ ನಿನಗಾಗುವ || ಹಿತಚಂತನೆ ಮಾಡೊ ಸದ್ಗತಿಯಾಗುವ ತನಕ | ರತಿಪತಿ ಪಿತನ ನೆನೆದು ನೀ ಪ್ರತಿಕ್ಷಣ ಹರಿಕಥೆ ಕೇಳದಲೆ2 ಪೊಟ್ಟೆಗೋಸುಗ ಭ್ರಷ್ಟರ ಸ್ತುತಿಸಿ ನೀ | ಕೆಟ್ಟು ಪೋಗುವಿ ಯಾತಕೋ ಜೀವನವೆ || ಪುಟ್ಟಿಸಿದವ ನಿನ್ನ ಪೊಟ್ಟೆಗೆ ಕೊಡನೇನೋ | ಕೆಟ್ಟುಹೋಗದೆ ವಿಜಯವಿಠ್ಠಲನ್ನ ನೆನೆದು ಸುಖಿಯಾಗು3
--------------
ವಿಜಯದಾಸ
ಯಾಕೆ ದಯವುಬಾರದು ಗೋಪಾಲಕೃಷ್ಣಾ ಪ ಕರುಣನಾದ ದೇವ ಅ.ಪ ಬಿಡದಾನಂದಾದಿ ಇನ್ನು ಇಂದಿರೆ ರಮಣ 1 ನಿನ್ನ ಧ್ಯಾನಾವೇಗತಿ ಎನ್ನುತ ನೀ ಎಂದೆಂದಿಗಾಪ್ತನು ಛಲದಾನಿ ಇರುವದು ನಿನಗೆ ಎನ್ನ ದಿವ್ಯದಾನಿಗಳರಸ 2 ತ್ರಿಜಗವಂದಿತಧೊರಿಯೆ ಸದ್ಗುಣಶೀಲ ಸುಜನರ ಭಾಗ್ಯನಿಧಿಯೆ ಜಲದೊಳು ಯಿ ----- ಸುರನುತ-----ತ ಪರಾಕ್ರಮ 3
--------------
ಹೆನ್ನೆರಂಗದಾಸರು
ಯಾಕೆ ನಿನಗೆ ಮನವೆ ವ್ಯಥೆಯು ಎಷ್ಟು ಲೋಕನಾಯಕ ಶ್ರೀಲೋಲ ಲಕ್ಷ್ಮಯ್ಯಾ ರಮಣ ಶ್ರೀಕಪರೇಯಾ ನಿನ್ನನ್ನೇ ಸ್ಮರಿಸುವುದು ಬಿಟ್ಟೂ ಪ ಹಲವು ಹಂಬಲಿಸಿದರೇನು ಫಲಾ ವ್ಯರ್ಥಾ ಬಳಲುವದೊಂದೇ ಅಲ್ಲದೆ ಬಾಧೆಯಿಂದಾ ಅಜ ಬ್ರಹ್ಮಾಂಬರದ ವರ-----ಆರಾರಿಗ್ವಶನಲ್ಲಾ ನಳಿನಾನಾಭನಾ ದಿವ್ಯನಾಮಾ ಭಜನೆಯ ತೊರೆದು 1 ಹರಿಶ್ಚಂದ್ರಾ ನಳರಾಜಾ-------ದಶರಥ ಮೊದಲು ಪುರಾಕೃತ ಕರ್ಮಾದಿ ಭಂಗಾ ಬಡಲಿಲ್ಲೇನೋ ಅರಿತೂನೀ ಹೃದಯಾದಿ ಅನ್ಯಚಿಂತನೆ ಹಿಡಿದು ಪರಮಾತ್ಮ ಪರಬ್ರಹ್ಮನ ಪಾದಧ್ಯಾನವೇ ಬಿಟ್ಟು 2 ಧರೆಯೊಳಾಧಿಕನಾದ ಧೋರಿ 'ಹೊನ್ನವಿಠಲನ’ ಚರಣವೇ ಗತಿಯೆಂದು ಚಿತ್ತಾದಲೆ ಸ್ಥಿರವಾಗಿ ಪೂಜಿಸಿ ಸೇವೆಯನೆ ಮಾಡಿ ಪರಮಹರುಷದಿಂದ ಪಡೆಯಾದೆ ಹರಿಕರುಣಾ 3
--------------
ಹೆನ್ನೆರಂಗದಾಸರು
ಯಾಕೆ ನಿರ್ದಯ ಮಾಡಿದೆ ರಂಗಯ್ಯ ನೀನ್ಯಾಕೆ ನಿರ್ದಯ ಮಾಡಿದೆ ಪ ವ್ಯಾಕುಲ ಪಡಲಾರೆ ನಿಮ್ಮ ಲೋಕವ ಸೇರಿಸು ಅ.ಪ ದುಷ್ಟರ ಮಧ್ಯದಲ್ಲಿ ನಾನಿರಲಾರೆ ಸೃಷ್ಟಿಗೀಶ್ವರನೆ ಕೇಳು ಮುಟ್ಟಿ ಭಜಸಿ ನಿಮ್ಮ ಪಾದಪದ್ಮದ ಭಕ್ತಿಯಿಟ್ಟೇನೆಂದರೆ ದುಷ್ಟ ಇಂದ್ರಿಯ ಬಿಡದೆನ್ನ 1 ಪಂಚೇಂದ್ರಿಯಗಳೆನ್ನ ಬಹುಬೇಗ ವಂಚನೆ ಮಾಡುತಿದೆ ಪಂಚಬಾಣನ ಪಿತ ಪರಮಪುರುಷ ರಂಗ ಅ ಕಿಂಚನಾದೆ ನಿನ್ನಂಘ್ರಿಯ ಸೇರಿಸು 2 ಸಂಸಾರವೆಂಬ ಸರ್ಪ ಕಚ್ಚಿ ವಿಷ ಕ್ಷಣದಲ್ಲಿ ತಲೆಗೇರಿತು ಪರಮ ಹಂಸರ ಸಂಗದೊಳಗೆಯಿರಿಸಿ ಎನಗೆ ಭರದಿಂದೇರಿದ ವಿಷ ತಿರುಗೆಸೋ ಶ್ರೀಹರಿ 3 ಸರ್ಪ ತುಂಬಿದ ಕೂಪದಿ ಬಿದ್ದಿಹೆನು ಎನ್ನಪ್ಪ ರಕ್ಷಿಸೊ ಬೇಗದಿ ಸರ್ಪಶಯನ ಶ್ರೀಅಪ್ರಮೇಯ ರಂಗ ಇನ್ನು ಕ್ಷಿಪ್ರದಿಂ ಮುಕ್ತಿಯ ಒಲಿದು ಪಾಲಿಸು ರಂಗ 4 ಅಮ್ಬುಜನಾಭನೆ ನಿಮ್ಮ ಪಾದದಧ್ಯಾನ ಒಂದು ನಿಮಿಷವಾದರು ಮಾಡಲೀಸದು 5 ಹಿಂದಿನ ಕರ್ಮಂಗಳು ಇಂದಿರೇಶ ನಿಂದಕರ ವಶವಾಯಿತು ಇಂದು ಧರ್ಮದಲಿರ್ದೆ ಬಂಧುಗಳ ವಶವಾಯ್ತು ಇನ್ನು ಬಂಧನವೇನಯ್ಯ ಮುಕ್ತ್ಯಾನಂದ ತೋರುವುದಕ್ಕೆ 6 ಎಂದಿಗಾದರೂ ಮುಕ್ತಿಯ ಕೊಡುವೆಯೆಂದಾನಂದ ಇಂದು ಈ ಸಂಸಾರ ಬಂಧನದೊಳಗೆ ನಾ ಒಂದು ನಿಮಿಷ ಜೀವಿಸಲಾರೆನು ರಂಗ 7 ಅಂದು ದ್ರೌಪದಿ ಧ್ರುವÀ ಗಜೇಂದ್ರನ ರಕ್ಷಿಸಲಿಲ್ಲವೆ ಬಂದು ಅಂಬರೀಷ ಅಜಾಮಿಳರ ಪ್ರಹ್ಲಾದನ ಕಂಬದಿಂದಲೆ ಬಂದು ಕಾಯ್ದ ಗೋವಿಂದ 8 ಭಕ್ತವತ್ಸಲನೆಂತೆಂಬೊ ಬಿರುದು ಈಗ ವ್ಯರ್ಥವಾಯಿತೆ ಶ್ರೀರಂಗ ಉತ್ತಮ ಗುರುಗಳು ಶ್ರೇಯೋನಿಧಿಗಳ ವಾಕ್ಯ ಸತ್ಯವ ಮಾಡಿ ಮುಕ್ತ್ಯಾನಂದ ಪಾಲಿಸು 9 ರಂಗನಾಥ ನೀ ಕೈ ಬಿಟ್ಟರೆ ಎನ್ನ ಲೋಕಮಾತೆ ಬಿಡುವಳೆ ಬೇಗ ಮುಕ್ತಿಪಥವ ಪಾಲಿಸುವಳು 10 ಮಾಡಬಾರದ ಮಾಡಿದೆ ಈ ಸಂಸಾರದೆ ನೋಡಬಾರದ ನೋಡಿದೆ ಆಡಬಾರದ ವಾರ್ತೆಗಳನಾಡಿದೆ ಇನ್ನು ಗಾಡನೆ ಮುಕ್ತಿಯ ನೀಡೊ ವೆಂಕಟರಮಣ 11
--------------
ಯದುಗಿರಿಯಮ್ಮ
ಯಾಕೆ ನಿರ್ದಯನಾದೆ ಲೋಕೇಶ ಪ್ರಭುವೆ ಸಾಕಲಾರದೆ ಎನ್ನ ನೂಕಿ ಭವದೊಳಗೆ ಪ ನಿನ್ನ ನಾಮಸ್ಮರಣೆ ಮಾಡದಲೆ ಹಗಲಿರುಳು ಅನ್ಯ ವಿಷಯಗಳಿಂದ ನೊಂದು ಬಳಲಿದೆನೊ ನಿನ್ನ ಧ್ಯಾನವ ಮಾಳ್ಪಚ್ಛಿನ್ನ ಭಕ್ತರೊಳಿರಿಸಿ ಚನ್ನಾಗಿ ಸಲಹೊ ಪ್ರಸನ್ನ ಮಾಧವನೆ 1 ಆಪನ್ನ ಜನರನು ಪೊರೆದೆ ಸನ್ನುತಾಂಗನೆ ದೇವ ಸರ್ವವ್ಯಾಪಕನೆ ಪನ್ನ ಗಾರಿವಾಹನ ಪ್ರಸನ್ನ ಶ್ರೀಹರಿ ಶೌರಿ ಎನ್ನ ಕಡೆಹಾಯಿಸಯ್ಯ ಜೀಯ 2 ಅಕ್ಷಯ ಫಲಪ್ರದ ಪಕ್ಷಿವಾಹನ ಕೃಷ್ಣ ಕುಕ್ಷಿಯೊಳು ಜಗವನಿಂಬಿಟ್ಟ ಶ್ರೀ ಹರಿಯೆ ರಕ್ಷ ಶಿಕ್ಷಕ ಜಗದ್ರಕ್ಷ ಪಾಂಡವ ಪಕ್ಷ ಈಕ್ಷಿಸಿ ಎನ್ನನುದ್ಧರಿಸಿ ಸಲಹದಲೆ3 ಪರಿಪರಿಯ ಕಷ್ಟಗಳ ಪರಿಹರಿಸಿ ಭವದೊಳಗೆ ದುರಿತದೂರನೆ ಕಾಯೊ ಶರಣ ಜನರ ಪರಿಸರನೊಡೆಯ ನಳನಾಮ ಸಂವತ್ಸರದಿ ಕರೆಕರೆಯ ಕಷ್ಟಗಳ ಬಿಡಿಸಿ ಸಲಹದಲೆ4 ಕನಕಗರ್ಭನ ಪಿತನೆ ಕಮಲನಾಭ ವಿಠ್ಠಲ ಮಿನಗುತಿಹ ದಿವ್ಯ ಸೌಂದರ್ಯ ಮೂರುತಿಯೆ ಸನಕಾದಿ ಮುನಿವಂದ್ಯ ಕ್ಷಣ ಬಿಡದೆ ಸ್ಮರಿಸುವರ ಇನಕುಲೇಂದ್ರನೆ ದೇವ ಬಿಡದೆ ಸಲಹದಲೆ5
--------------
ನಿಡಗುರುಕಿ ಜೀವೂಬಾಯಿ
ಯಾಕೆ ನಿರ್ದಯವೋ ದೇವ ದೇವ ಸ್ವಭಾವ ಯಾಕೆ ಮರೆತೆ ದೇವಾ [ಎನ್ನನು] ಪ ಯಾಕೆಂಬುದರಿಯೆನಾ ಶ್ರೀಕರಾಂಬುಜನೇತ್ರ ಕಾಕುಮನುಜನೆಂದು ನೀಕರಿಸಿದೆಯೋ ಅ.ಪ ಉದರ ಪೋಷಣೆಗಾಗಿ ವಿಧ ವಿಧ ದೇಶದಿ ಬಧಿರ ಹೆಳವ ಮೂಗ ಅಧಿಕರೋಗಿಯು ಅಂಧಾ ವಿದಿತ ವೇಷಗಳಿಂದ ಅಧಿಕ ಬಳಲಿದೆನಯ್ಯ ಪದುಮಾಕ್ಷ ಪರಂಧಾಮ ಮುದದೆ ಪೋಷಿಸಲು1 ಪರರ ನಿಂದನೆ ಗೈದೆ ನೆರೆಯವರನು ಕೊಂದೆ ಪರರ ಸ್ವತ್ತನು ತಂದೆ ಪರರನ್ನವನು ತಿಂದೆ ದುರಿತಕಾರ್ಯವಗೈದೆ ನರಹರಿ ನಿನ್ನ ಮರೆದೆ ಪರರು ಕಾವವರಿಲ್ಲ ನೆರೆನಂಬಿದೇ ನಿನ್ನ 2 ಸಾವು ಜನ್ಮಂಗಳಿಂದ ನೋವು ಬಂಧನವಡೆದು ಬೇವಿನಂದದೆ ದುರ್ಗುಣಭಾವವ ತಳೆದೆನೋ ಕಾವರಿಲ್ಲವೋಯೆನ್ನ ಶ್ರೀವನಿತಾರನ್ನ ಸಾವುನೋವನು ಬಿಡಿಸೊ ಮಾವಿನಕೆರೆರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್