ಒಟ್ಟು 9830 ಕಡೆಗಳಲ್ಲಿ , 132 ದಾಸರು , 5659 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಜಯಂಗೈವುದು ಹಸೆಗೀಗಾ ಪ ಅಜಮುಖ ಸುರನುತೆ ಅಖಿಳಲೋಕೈಕ ಮಾತೆ ಅ.ಪ ಕೃಷ್ಣನ ಮೋಹದ ಪಟ್ಟದ ಜಾಯೆ ಅಷ್ಟ ಸೌಭಗ್ಯಗಳ ಅಮರರಿಗೀವಳೆ 1 ಶೃಂಗಾರ ಮಂಟಪದಿ ಅಂಗನೆಯರೆಲ್ಲರು ಸಂಗೀತವ ಪಾಡಿ ಸರಸದಲಿ ಮಂಗಳದೇವತೆ ಬಾರೆಂದು ಕರೆವರು 2 ಅರುಂಧತಿ ಶಚಿ ಮುಖರ್ನೆರದಿಹರು ಗುರುರಾಮವಿಠಲನ ತರುಣೀ ಮಣಿಯೆ ಬೇಗಾ 3
--------------
ಗುರುರಾಮವಿಠಲ
ಬಿಟ್ಟನ್ಯಭಜನೆಯ ಕಂಡು ಪ ಹೊಚ್ಚಿ ಸುಳಿದಟ್ಟಿ ಸುಡುವ ಅಡವಿಗಿಚ್ಚಿನ ಭಯಕೆ ಬೆಚ್ಚಿ ಅರಗಿನ ಮನೆಯ ಹೊಗುವವನಂತೆ ಅಚ್ಚರಿಯೆನಿಸೆ ದಹಿಪ ತಾಪತ್ರಯಕ್ಕಳುಕಿ ತುಚ್ಛ ದೈವಗಳ ಮರೆಯೊಗುವ ಮನುಜರಕಂಡು 1 ಉರಿಯ ಮಳೆಗರೆಯುತಿರೆ ತೃಣಗೇಹವನು ಹೊಕ್ಕು ಹರಣವನುಳುಹಿಕೊಂಬೆನೆಂಬಂತೇ ಉರುಬೆ ನಾನಾ ರೋಗಗಳುಳುಹಲು ಹಲವು ದೈವಗಳಿ ಗೆರಗಿ ಜೀವನಕೆ ಕಳಕಳಿಪ ಮನುಜರ ಕಂಡೂ 2 ಮುಗಿಲಗಲ ಧರೆ ಜರಿಯುತಿರೆ ಹುಲ್ಲಿನಣಬೆಯೊಡ್ಡಿ ಮಿಗೆ ಬಾಳ್ವೆನೆಂಬ ಮರುಳನಂದದೀ ಉಗಿದಸಿಯ ಮೃತ್ಯುವಿನ ಭಯಕೆ ನಾನಾದೇವ ತೆಗಳಮರೆಯೊಗುವ ಮನುಜರ ಕಂಡು 3 ಘುಡು ಘುಡಿಸಿ ಸಿಡಿಲೆರಗುತಿರೆ ತನ್ನ ಕೈ ವಿಡಿದ ಕೊಡೆಯ ಮರೆಗೊಂಡುಳಿವೆನೆಂಬಂತೇ ಮುಡಿವಿಡಿದೆಳೆವ ಕಾಲನ ಭಯಕೆ ನಾನಾದೈವ ದಡಿವಿಡಿದೆರಗಿ ಹಲು ಬಿಡುವ ಮನುಜರ ಕಂಡು 4 ಯಾತಮುಳಿದರೆ ಜಗದಲುಳಿದವರಾರು ಮ ತ್ತೀತನುಳುಹಿದನನು ಕೊಂದವನಾವ ಇ ದೇತಕರಿಯರೋ ನರರು ಅಕಟಕಟ ವೈಕುಂಠ ನಾಥ ಪರಿಪೂತನ ಪದಕಮಲವ ಭಜಿಸರೆಂದು 5 ನೀರಡಿಸಿ ಜಾಹ್ನವಿಯ ತೀರದಲಿ ಭಾವಿಯಾ ನೀರ ಕುಡಿವ ಮಾನವನ ತೆರದೀ ಹರಿಯ ಚರಣವಿರಲು ಭೂರಿದೈವಂಗಳಿನ್ನೇಕೆ ಭಜಿಸುವೆ ಮನುಜ ಹರಿ ಕಾರುಣ್ಯನಿಧಿ ವೈಕುಂಠವಲ್ಲಭ ಬೇಲೂರ ಚೆನ್ನಿಗರಾಯ ಕೃಪಾನಿಧಿಯಿರಲು 6
--------------
ಬೇಲೂರು ವೈಕುಂಠದಾಸರು
ಬಿಟ್ಟಿನ್ನಾರ ಕಾಡುವೆನೂ ಪ ಪಾರು ಮಾಳ್ವರ ಕಾಣೆನೂ | ಎನ್ನನೂ ಅ.ಪ ಇಂದುವದನ ನಿನ್ನಾಮರೆಯ ಸಾರ್ದೆ ತಂದೆಯಂತೆ ಎನ್ನಾ - ನಂದದಿ ತಪ್ಪುಗಳೊಂದೆಣಿಸದೆ ಪೊರೆ - ಯೆಂದು ನಾ ಬೇಡುವೆನೂ ಕಾಲ್ಪಿಡಿವೆನು 1 ಭಕ್ತೋದ್ಧಾರಿ ಸುಗುಣೆ ಪ್ರೇಮೀ | ಘೋರ ದುರಿತವೆಂಬಪಾರಮಡುವಿನೊಳು ಸೇರಿ ಮುಳುಗಿದೆನು ನಾನು | ಪಿಡಿದೆತ್ತು ನೀನು2 ಮಾಡುವೆನೂ ದಾಸನು ನಾನು 3
--------------
ಬೆಳ್ಳೆ ದಾಸಪ್ಪಯ್ಯ
ಬಿಟ್ಟೆಯಾ ಸ್ವಾಮಿ ಎನ್ನ ಬಿಟ್ಟೆಯಾ ಬಿಟ್ಟೆಯಾ ಎನ್ನ ಜೀಯ ವ್ಯರ್ಥ ಪ. ಕೊಟ್ಟೆಯಾ ದುರಿತದ ಕಯ್ಯ ಅಹ ಕಟ್ಟ ಕಡೆಗು ಕಾವ ನೀನೆಂದು ನಂಬಿಕೆ ಇಟ್ಟ ದಾಸನ ಇಂಥ ಬಟ್ಟೆಯೊಳಗೆ ದೂಡಿ ಅ.ಪ. ಅನ್ಯರಿಗಳುಕದ ಶೌರ್ಯ ಸ್ವಜನೋನ್ನತವಾದ ಗಾಂಭಿರ್ಯ ಜನ ಸನ್ನುತವಾಗಿಹುದಾರ್ಯ ನಿನ್ನ ಸನ್ನುತಿ ಗೃಹ ಚಾತುರ್ಯಗಳ ತನ್ನಂತೆ ಕರುಣಿಸಿ ತಾವಕನೆನಿಸಿರೆ ಕುನ್ನಿಯ ಮರಿಗಿಂತ ಕಡೆಮಾಡಿ ದಾರಿಯೊಳ್ 1 ತಲ್ಪದಿಂದೆದ್ದವಸರದಿ ಬೊಮ್ಮ- ಕಲ್ಪೇಶ ನೀನಿಟ್ಟ ಕ್ರಮದಿ ಸ್ವಲ್ಪ ಸ್ವಲ್ಪವಾದರು ಕವರ್i ನೆವದಿ ನಾನಾ ಕಲ್ಪ ಪೂಜೆಯಗೈದು ಮುದದಿ ಶೇಷ ಕಲ್ಪೇಶ ನಿನಗೆ ಸಮರ್ಪಿಸಿ ಬಾಳ್ದನ- ನಲ್ಪ ಜನರಿಗೆ ನಿತ್ಯಾಲ್ಪರಿವೊಲ್ಮಾಡಿ 2 ಬಂದ ಸಜ್ಜನರನು ನೋಡಿ ಮಾನ- ದಿಂದ ಕುಳ್ಳಿರಿಸಿ ಮಾತಾಡಿ ಮತ್ತೆ- ನ್ನಿಂದಾದ ಸತ್ಕಾರ ಮಾಡಿ ತಿಳಿ- ದಂದದಿ ನಿನ್ನನು ಪಾಡಿ ಇದೆ ಮುಂದೆ ತಾರಕವೆಂದಾ ನಂದಗೊಡಿರಲೆನ್ನ ಹಂದಿಯಂದದಿ ಮೂಲೆ ಹೊಂದಿಸಿ ಕೆಡ ಹಾಕಿ 3 ಸಂಧ್ಯಾದಿಗಳನೆಲ್ಲ ಬಿಟ್ಟು ಅನ್ನ ತಿಂದು ಬೀಳುವೆ ಲಜ್ಜೆಗೆಟ್ಟು ರೋಗ ಬಂಧಿತ ನರಗಳ ಕಟ್ಟು ಶೂಲ ದಂದದಿ ಬೀಳುವ ಪೆಟ್ಟು ಇನ್ನು ಮೋಚಿಸು ಹಾಗಾ- ದಂದ ಕಾಲಕೆ ಪದ ಹೊಂದಿಸಿಕೊಳದೆನ್ನ 4 ಮರೆಯಲಿಲ್ಲೆಂದಿಗೂ ನಿನ್ನವೆಂಬು- ದರಿಯೆಯ ಲೋಕಪಾವನ್ನ ಇನ್ನು ಕರುಣ ಬಾರದ್ಯಾಕೊ ರನ್ನ ಶೇಷ ನಿತ್ಯ ಪ್ರಸನ್ನ ಬಹು ಕರಗುತ ಕಣ್ಣೀರ ಸುರುವಿದ ಮಾತ ಮರೆವುದುಚಿತವಲ್ಲ ಪರಮ ದಯಾಂಬುಧಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಬಿಡದಿರೆನ್ನ ಕಡಲನಡುವೆ ಪ ತಡಬಡಿಪುದ ನೋಡಿ ನೋಡಿ ಅ.ಪ ಸರಸ ಕರುಣಾಭರಣ ಶರಣ ನಿರುತ ಸೇವಿತ ವರ ಸುಚರಣ ಮರೆಯದಿರು ದಾಸಾನುದಾಸನ ಲೋಕಕಾರಣ 1 ಕರಿ ಬಲಿ ಪಾಂಚಾಲಿಯರನು ಹರುಷದಿಂದ ಪೊರೆದೆಯಲ್ತೆ ಕರುಣದಿಂದ ಬಾರೊ ಹರಿಯೆ ಸರಸಿಜಾಕ್ಷನೇ 2 ದೇವ ದೇವ ಪಾವನಾತ್ಮ ಭಾವಜಾತಪಿತ ಪರಮಾತ್ಮ ದಿವಿಜ ಸನ್ನುತಾ 3 ಕಾವರನ್ಯರಿಲ್ಲವಯ್ಯ ಪಾವನಾತ್ಮ ಮಾರನಯ್ಯ ಸಾವಕಾಶವೇಕೋ ಜೀಯ ಮಾವಿನಕೆರೆಯರಸ ರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಿಡಬೇಡ ಕೈಯ ಪ ಕಡಲಶಯನ ನಿನ್ನಡಿಗೆರಗಿ ಬೇಡುವೆ ಅ.ಪ ಏನೊಂದನರಿಯದ ಮೂಢನಾಗಿರುವನ 1 ಮತಿಹೀನನಾದೆನು ಪತಿತ ಪಾವನ ಕಾಯೊ 2 ಮರೆಯಹೊಕ್ಕೆನು ಕಾಯೊ ಕರುಣಿಗಳರಸನೆ 3 ಮಕರಕುಂಡಲ ಧಾರಿ 4 ಕಾವ ಕರ್ತನೆ ಕುಲದೇವ ಸದಾನಂದ 5
--------------
ಸದಾನಂದರು
ಬಿಡಬೇಡೆಲೆ ಮನಸೆ ಶ್ರೀಹರಿಪಾದ ಹಿಡಿ ಬಿಗಿಯಲೆ ಮನಸೇ ಪ ಹಿಡಕೋ ಕಡಕಿಂ ಕಡಲಕಡಿದಮರರ ಪಾದ ಅ.ಪ ಅನುದಿನ ಸಿರಿಯರೊತ್ತುವ ಪಾದ ಪರತರ ಭಕುತಿಯಿಂ ಸುರರುಪೂಜಿಪ ಪಾದ ನೆರೆದು ಋಷಿಸ್ತೋಮರರಸಿನಲಿಯುವ ಪಾದ ಪರಮನಾರದ ತುಂಬುರರು ಪಾಡುವ ಪಾದ ಪಾದ 1 ನೀಲಬಣ್ಣದಪಾದ ಪಿಡಿದೆತ್ತಿ ಮೂಲೋಕಾಳುವ ಪಾದ ತಾಳಿ ವಿಲಸಿತರೂಪ ಖೂಳನ ಎದೆಮೆಟ್ಟಿ ಸೀಳಿ ಉದರಮಂ ಬಾಲನ್ನಪ್ಪಿಕೊಂಡು ಪಾಲಿಸಿದಂಥ ಮಹ ಮೇಲಾದಮಿತಪಾದ ಸುಜನ ತಲೆಮೇಲೆ ಹೊತ್ತಪಾದ 2 ಬಲಿಯತುಳಿದಪಾದ ಮುನಿಯಾಗ ಒಲಿದು ಕಾಯ್ದಪಾದ ಶಿಲೆಯನೊದೆದಪಾದ ವನಕೆ ಪೋದಪಾದ ಖಳರಥಳಿಸಿ ಮುನಿಕುಲವ ಸಲಹಿದಪಾದ ಜಲಧಿದಾಂಟಿ ಸ್ಥಿರಪಟ್ಟ ಭಕ್ತನಿಗೆ ಸುಲಭದೊದಗಿಕೊಟ್ಟ ಚೆಲುವ ಸುದಯಪಾದ 3 ಪಾದ ಬಹು ಜರಮರಣ ನಿವಾರ ಪಾದ ತರಳಗೆ ಸ್ಥಿರವರ ಕರುಣದಿತ್ತ ಪಾದ ಭರದಿಗರಡನೇರಿ ಸರಸಿಗಿಳಿದ ಪಾದ ತರುಣಿಮಣಿಯರವ್ರತ ಹರಣಗೈದ ಪಾದ ಸಿರಿ ಪಾದ 4 ಪಾದ ಭಕುತರ ಮೊರೆಯ ಕೇಳ್ವ ಪಾದ ದುರುಳ ಕುರುಪನ ಗರುವಕಂಡ ಬುವಿ ವಿಶ್ವ ಪಾದ ಪರಮ ತುರಗವೇರಿ ಮೆರೆವ ವಿಮಲ ಪಾದ ಪಾದ 5
--------------
ರಾಮದಾಸರು
ಬಿಡಬ್ಯಾಡೆನಗೆ ಹರಿಯೇ ತಡಮಾಡಲ್ಯಾಕೆ ದೊರೆಯೇ ಇಂದು ನಿವಾರನೇ ನೀ ಬಂದು ಪ ಗಜರಾಜ ಪಶುವ ಹಿಂದೆ ಭಜಿಪಾಗ ನೀನೆ ಬಂದೆ ನಿಜವಾಗಿ ನಕ್ರನೊದೆದು ಸುಜನನಾಥ ನೀ ಕರೆದೊಯ್ದು 1 ಪಾಂಚಾಳಿ ಸಭೆಯೊಳಂದು ವಂಚಕ ದುಶ್ಯಾಸನ ಬಂದು ಮುಂಚಿತದಿ ಸೀರೆ ಎಳೆಯೆ ವಾಂಛಿತದಿ ಕಾಯ್ದ ಆ ಪರಿಯೇ 2 ಅಂದಾಗಲೂ ಪುತ್ರನನು ಕರೆದಾಗಲಜಾಮಿಳನು ಭರ ದಿಂದ ಕಾಯ್ದೆ ಅವನಾ ಮರದ್ಯಾತಕೀಗಲೆನ್ನಾ 3 ಈ ಪರಿಯ ಕೀರ್ತಿ ಪಡದು ಕೋಪಿಸಲು ಬ್ಯಾಡ ಮರೆದು ಶ್ರೀ ಪತಿಯೆ ಪದವನೀಯೋ ಉಪರಮೆ ಶಾಂತಿ ಕಾಯೋ4
--------------
ಶಾಂತಿಬಾಯಿ
ಬಿಡಿ ಬಿಡಿ ಸಂದೇಹವನು ಪೊಡವಿ ಮನುಜರೆಲ್ಲಒಡೆಯನೊಬ್ಬನೆ ಜಗಕೆ ರಂಗವಿಠಲ ಪ ಹರಿಹರವಿರಿಂಚರೊಳು ಪರದೈವವಾರೆಂದುಪರಮ ಮುನಿಗಳು ವಿವಾದವನು ಮಾಡೆಸರಸಿಜಾತನ ಸುತನ ಭೃಗುವನಟ್ಟಲು ಪೋದಅರಿದು ಬಹೆನೆಂದು ಪದ್ಮಜನ ಸಭೆಗೆ1 ಮುನಿವರನು ಕಂಡು ಪದ್ಮಜಗೆ ವಂದಿಸದಿರಲುವನಜಭವ ಕೋಪವನು ಮಾಡಿ ಜರಿಯೆಮುನಿ ಪರಮ ತತ್ತ್ವ ಇವನಲ್ಲವೆಂದೆನೆ ಕನಲಿಮನಸಿಜವೈರಿಯ ಲೋಕಕೆ ಪೋದನು 2 ಹರ ಕಂಡು ಭೃಗುಮುನಿ ಬರಲು ತನ್ನನುಜನೆಂದುಭರವಸೆಯಲೆದ್ದು ತಕ್ಕೈಸ ಪÉÇೀಗೆ ಜರಿದು ಹರನನು ಮುಟ್ಟದಿರೆ ಶಂಕರನು ಕನಲಿಕರೆದ ಶೂಲವ ಜಡಿದು ಕೊಲಲುಬಗೆದ 3 ಹರನ ಕೋಪವ ಕಂಡು ಗಿರಿಜೆ ಚರಣವ ಪಿಡಿದುಕರುಣಿ ಮುನಿಯನು ಕಾಯಬÉೀಕೆಂದೆನಲುಮರಣ ಭಯದಿಂದ ನಿರ್ಮುಕ್ತನಾಗಿ ಮುನಿವರನು ಸರಸಿಜನಯ್ಯನಿಪ್ಪ ವೈಕುಂಠಕೆ ಪೋದನು 4 ಅಲ್ಲಿ ಮಹಲಕ್ಷುಮಿಯ ತೊಡೆಯಲ್ಲಿ ಪವಡಿಸಿ ಇರಲುಫುಲ್ಲನಾಭನ ಚರಣದಿಂದಲೊದೆಯೆಮೆಲ್ಲನೆ ಪಾದವ ಪಿಡಿದು ಮುನಿವರಗೆ ಪೊಡಮಟ್ಟುಇಲ್ಲಿ ಬಿಜಯಂಗೈಸಬೇಕೆಂದನು 5 ಪರಮ ಮುನಿ ನಿಮ್ಮ ಪದ ಸೋಂಕಲು ಪಾವನನಾದೆಚರಣರಜ ಪರಮ ಪಾವನ ಸುಲಭವೆಸಿರಿಗೆ ನೆಲೆವನೆಯಾದೆ ಪದಸಂಗದಿಂದಲೆನೆಪರಮ ಹರುಷದಲಿ ಮುನಿತನುವ ಮರೆದ 6 ಪರತತ್ವವನು ಕಂಡು ಬಂದು ಮುನಿವರನಂದುಒರೆಯೆ ಋಷಿವರರಿಗವರವರ ಪರಿಯಅರಿದರಾ ಮುನಿವರರು ಹರಿಯೆ ಪರದೈವವೆಂದುನೆರೆ ತಿಳಿದು ಭಜಿಸಿ ನರಹರಿಯ ಹರಿಯ 7 ಸುರರು ಕಡೆಯೆ ಕಡಲೊಳಗಿರ್ದಮಡದಿ ಮಹಾಲಕ್ಷುಮಿ ಅವತರಿಸಿ ಬರಲುಮೃಡ ಕಮಲಜ ಸುರಮುಖ್ಯರನು ಜರಿದು ಸಿಂಧುವಿನದಡದಲ್ಲಿ ಹರಿಯ ವರಿಸಿದಳು ವರನೆಂದು 8 ಕರಿಪತಿಯ ಸರಸಿಯೊಳು ಮೊಸಳೆ ಪಿಡಿಯಲು ಭರದಿಪರಮ ಪುರುಷ ಜಗತ್ಪತಿಯೆನಲುಗರುಡವಾಹನನಾಗಿ ಹರಿ ಬಂದವನ ಕಾಯ್ದಪರದೈವವಾರು ಜಗದೊಳಗೆ ಪೇಳಾ9 ರಾಜಸೂಯವ ಧರ್ಮಸುತ ಮಾಡೆ ಅವನಗ್ರ-ಪೂಜೆಗರುಹರು ಸುರರೊಳಾರೆಂದೆನಲುಭಾಜನನು ಸದ್ಗುಣನು ಕೃಷ್ಣನೊಬ್ಬನೆಯೆಂದುರಾಜಸಭೆಯಲಿ ದೇವವ್ರತ ನುಡಿದನು 10 ಗಂಗೆ ಈತನ ಪಾದಸಂಗದಿ ಪಾವನವೆನಲುಗಂಗಾಧರನು ಪರಮ ದಾಸನೆನಲುಮಂಗಳಾತ್ಮಕ ವಿಶ್ವಜನ್ಮಾದಿ ಕಾರಣನುರಂಗವಿಠಲರೇಯನ ನೆರೆನಂಬಿರೋ 11
--------------
ಶ್ರೀಪಾದರಾಜರು
ಬಿಡಿಸೊ ಕಡು ದಯಾನಿಧಿಯೆ ಕಡುಕಷ್ಟದುರುಲನ್ನು ಗಡನೆ ಎನ್ನಯ್ಯ ಪ ಕಡಿವಲ್ಲದೆನಗಿನ್ನು ಕಡುದು:ಖ ಜಡಮಯ ತೊಡರು ಸಂಸಾರಭಾದೆ ತಡಿಲಾರೆನಭವ 1 ತನುಬಾಧೆ ರಿಣಬಾಧೆ ವನಿತೆ ಮಕ್ಕಳ ಬಾಧೆ ಜನನಮರಣದ ಹೇಯ ಘನಬಾಧೆಯಕಟ 2 ಸೀಮೆಯಿಲ್ಲದೆ ಕಾಡ್ವ ಈ ಮಹಾಭವ ಕಳೆದು ಕ್ಷೇಮದಿಂ ಪೊರೆಯೈ ಶ್ರೀರಾಮ ಪ್ರಭು ತಂದೆ 3
--------------
ರಾಮದಾಸರು
ಬಿಡಿಸೊ ಬಂಧನ ಕ್ಲೇಶವ ಬಿಗಿಯುತಲಿದೆ ಪ ನಾನು ಬಿಟ್ಟರು ಎನ್ನ ಕಂಬಳಿ ಬಿಡದಿದೆ ಅ.ಪ ಎಲ್ಲವ ಬಿಟ್ಟು ನಾ ಬಂದೆನೆಂದರಿತೆನೊ ಎಲ್ಲವು ಎನ್ನನು ಬಿಡಲಿಲ್ಲವೊ ಕಲ್ಲು ಎದೆಯ ಪೊತ್ತ ಮಲ್ಲನೆಂದರಿತೆನೊ ಹುಲ್ಲೆಯ ಮರಿಯಂತೆ ನಡುಗುವಂತಾಯಿತೊ 1 ಮಿಕ್ಕ ವಿಷಯಗಳ ಬೇಡ ಬೇಡೆನ್ನುತ ಹೊಕ್ಕರು ಮೂಲೆ ಮೂಲೆಗಳನ್ನು ದಿಕ್ಕು ದಿಕ್ಕುಗಳಿಂದ ಸೆಳೆಯುತಲಿರುವುದು ಅಕ್ಕರೆ ತೊಲಗಿತು ಶುಷ್ಕವಾಯಿತು ಮನವು 2 ಲೋಕ ರಕ್ಷಕನು ನೀನೆಂಬುದನರಿತರು ವ್ಯಾಕುಲವೇತಕೆ ಪ್ರತಿ ಕ್ಷಣವು ತಾ ಕಾಣದ ನರ ವರವÀ ಕೊಡಲುಬಹುದೆ ಏಕಾಂತ ಭಕುತ ಪ್ರಸನ್ನನೆ ಕರುಣದಿ 3
--------------
ವಿದ್ಯಾಪ್ರಸನ್ನತೀರ್ಥರು
ಬಿಡು ಬಿಡು ಆತ್ಮ ಸ್ತುತಿಯನು ಪರನಿಂದೆಯನು ಪ ತನ್ನ ಗುಣವ ತಾನೇ ಹೊಗಳುತಲಿ | ಅನ್ಯರ ದೂಷಿಸಲೇನು 1 ತಾ ಕೋಡಗ ಮರಿ ಬನ ಹಳಿವಂತೆ | ವ್ಯಾಕುಳ ಹಿಡಿದರೆ ತಾನು 2 ಮಹಿಪತಿ ಸುತ ಪ್ರಭು ಬೋಧವ ಕೇಳುತ | ಸ್ವಹಿತವ ಪಡಿಯೋ ನೀನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಿಡು ಬಿಡು ಇನ್ನು ಸೋಗಾಚಾರ | ಒಡಿಯ ಬಲ್ಲನು ನಾನು ನಿನ್ನ ವಿಚಾರ ಪ ತುಡಗತನ ಕಲಿತು ನೆರೆಹೊರೆಯವರ ಮನೆಯಲ್ಲಿ | ಗಡಿಗೆ ತುಪ್ಪಾ ಬೆಣ್ಣೆ ಮೊಸರು | ಹಾಲು | ಕುಡಿದು ಛೀ ಹಳಿ ಕದ್ದ ಕಳ್ಳನೆನೆಸಿಕೊಂಡ | ಪಡಚುತನವಲ್ಲದೆ ಭಾರಕನು ನೀನಲ್ಲ 1 ಸೀರಯನು ಕದ್ದಂದು ಕಡವಿನ ಮರವನೇರಿ | ಊರ ನಾರಿಯರ ಮಾನಕ್ಕೆ ಸೋತು || ಜಾರತನದವನಾಗಿ ತಿರಗಿ ಜಗದಾ ಭಂಡ | ಪೋರರಿಗೆ ಪೋರನಲ್ಲದೆ ಹಿರಿಯನಲ್ಲ2 ಮುನಿಗಳೆಜ್ಞದಲ್ಲಿ ತಿರಿತಂದು ಗೊಲ್ಲತೆರ | ತನುಜರ ಸಂಗಡಲಿದ್ದು ಎಂಜಲುಂಡು | ಮನುಜದೇಹವ ತೆತ್ತು ಬಿನಗು ಲೀಲಾಕೃತಿ | ದನಗಾವಿ ಎಲ್ಲದೆ ದೊರೆ ಮಗನು ನೀನಲ್ಲ 3 ಯಾತಕ್ಕೆ ಬಾರದ ಕುನಪೆಣ್ಣಿಗೆ ಮೆಚ್ಚಿ | ಮಾತುಳನ ಕೊಂದು ಮುತ್ತೈಯಗೊಲಿದು | ಭೀತಿಯಲಿ ಪರರಾಯನ ಮಗಳ ಕೊಂಡು ಬಂದ | ಯಾತರ ಪೌರುಷದವನು ಲೋಕದೊಳಗೆಲ್ಲ 4 ತೊತ್ತಿನ ಮಗನಲ್ಲಿ ವುಂಡು ಬಿಗಿಸಿಕೊಂಡು | ಮಿತ್ರಭೇದವನಿಕ್ಕಿ ಬಂಧುಗಳಿಗೆ | ತೆತ್ತಿಗನು ನೀನಾಗಿ ವಾಜಿಗಳ ಪಿಡಿದು | ಹತ್ಯವ ಮಾಡಿಸಿದೆ ಉತ್ತಮನು ನೀನಲ್ಲ 5 ಅಣ್ಣ ತಮ್ಮಂದಿರನು ಅಗಲಿಸಿ ವೈರದಲಿ | ನುಣ್ಣಗೆ ಒಬ್ಬರೊಬ್ಬರ ಕೊಲ್ಲಿಸಿ | ಇನ್ನೇನು ಉಸರುವೆನು ಕಟ್ಟಕಡಿಗೆ ಎಲ್ಲ | ನಿನ್ನ ಕುಲವನು ಕೊಂದೆ ಇದು ಪುಶಿಯಲ್ಲ 6 ತಿಳಿಯಲಾರರು ನಿನ್ನ ಠಕ್ಕು ಠವಳಿಯ ಮಾಯ | ಜಲಜ ಸಂಭವ ಶಿವ ಇಂದ್ರಾದ್ಯರು | ಸುಲಭ ದೇವರದೇವ ವಿಜಯವಿಠ್ಠಲರೇಯ |ವೊಲಿದ ದಾಸರಿಗೆ ಸಂತಾನ ಕುಲದೀಪ7
--------------
ವಿಜಯದಾಸ
ಬಿಡು ಬಿಡು ಚಿಂತೆಯ ಮೂಢಾ ನ- ಮ್ಮೊಡೆಯನುಪೇಕ್ಷೆಯ ಮಾಡ ಬಡವರ ತಪ್ಪನು ನೋಡ ಸಂ- ಗಡಲಿಹ ಗರುಡಾರೂಢ ಪ. ನೆನೆವರ ಮನದಲ್ಲಿರುವ ನಿಜ ಜನಕೆ ದಯಾರಸ ಸುರಿವ ಕನವಿಕೆ ಎಂಬುದ ತರಿವ ಸ್ಮರ ಜನಕ ಸಿರಿಯ ಕರೆತರುವ 1 ಮಾಡುವ ಕರ್ಮಗಳೆಲ್ಲ ಫಲ ಕೊಡಿಸುವನು ಸಿರಿನಲ್ಲ ರೂಢಿಪರೊಳಗಿರಬಲ್ಲ ಬೇ- ರಾಡುವ ಮಾತೇನಿಲ್ಲ 2 ನೋಡಲು ಸಿಕ್ಕುವನಲ್ಲ ಬೇ- ಗೋಡಿ ಪಿಡಿಯಲೊಶನಲ್ಲ ದೂಡುವ ದೈತ್ಯರನೆಲ್ಲ ದಯ ಮಾಡಲಿವಗೆ ಸರಿಯಿಲ್ಲ 3 ಸರ್ವತ್ರದಲಿ ಸ್ಮರಿಸುವನು ರಿಪು ಪರ್ವತಗಣ ದುಶ್ಚ್ಯವನ ಗರ್ವಿ ದೈತ್ಯವನದವನ ಸುರ ಸಾರ್ವಭೌಮನೆಂಬುವನ 4 ಸತಿಸುತ ಗ್ರಹ ಭೂಧನಕೆ ಶ್ರೀ- ಪತಿಯೆ ಪಾಲಕನಿದಕೆ ವ್ಯಥೆಗೊಳದಿರು ದಿನದಿನಕೆ ಸ- ಮ್ಮತಿನಹಿಗಿರಿಪತಿ ಘನಕೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಬಿಡು ಬಿಡು ಮನುಜಾ ಜಡದಭಿಮಾನ ಪಡೆ ಗುರುವಿನಲಿ ಸ್ವಾತ್ಮದ ಜ್ಞಾನಾ ಪ ಈ ಸುಖದುಃಖದ ಬಡಿದಾಟದಲಿ ಗಾಸಿಯಾಗುತಲಿ ಸಾಯುವದೇ ದಿಟ ಕ್ಲೇಶವ ನೀಗುವಿ ನಿನ್ನ ನೀ ತಿಳಿವೊಡೆ 1 ಮರಳಿ ದೇಹ ಪಡೆಯದ ದಿವ್ಯ ಬೋಧ ಪರಮಶಾಂತಿ ದೊರಕಿಸುವ ಪ್ರಮೋದ ದುರುಳಸಂಸ್ಕøತಿಯ ಪಾಶದ ಛೇದ ಮರೆಯದೆ ಮಾಳ್ಪುದು ಸ್ವಾತ್ಮದ ಶೋಧ 2 ಘಟ ಮರಣಕೆ ಶಿಲುಕಿದಾದರೂ ಈ ಘಟದಲಿ ನೀ ಅಮರನೆ ಇರುವೀ ಬೇಗನೆ ಜೀವನ್ಮುಕುತಿಯ ಪಡೆಯೈ ಯೋಗಿ ಶಂಕರನ ಸದ್ಬೋಧದಲಿ 3
--------------
ಶಂಕರಭಟ್ಟ ಅಗ್ನಿಹೋತ್ರಿ