ಒಟ್ಟು 2252 ಕಡೆಗಳಲ್ಲಿ , 108 ದಾಸರು , 1517 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಮಾಯವೊ ಹರಿಯೆ ಶ್ರೀನಿವಾಸನೆ ನಿನ್ನ ಧ್ಯಾನಿಸುವವರನು ಪೊರೆವೆ ಸಾನುರಾಗದಲಿ ಪ ಜ್ಞಾನಿಗಳು ಹಗಲಿರುಳು ಮೌನದಿಂದಲಿ ಭಜಿಸಿ ದಾನವಾಂತಕ ನಿನ್ನ ಧ್ಯಾನ ಮಾಡುವರು ಅ.ಪ ಬಡತನದಿ ಬಹು ವ್ಯಥೆಯ ಪಡುತ ಸತಿಸುತರಿರಲು ನುಡಿಯೆ ಭಯ ಭಕ್ತಿಯಲಿ ಒಡೆಯರಿಲ್ಲೆಮಗೆ ಮೃಡಸಖನು ಇಹನೆನಲು ಹಿಡಿಯವಲಿಯ ಕೊಡಲು ಕೆಡದ ಸೌಭಾಗ್ಯವನು ಒಡನೆ ನೀಡಿದೆಯೊ 1 ಅಂದು ದುಶ್ಖಾಸನ ನೃಪನಂದನೆಯ ಬಾಧಿಸುತ ನಿಂದು ಸೀರೆಯ ಸೆಳೆಯೆನೊಂದು ದುಃಖಿಸುತ ಇಂದಿರಾಪತಿ ಕೃಷ್ಣ ಇಂದೆನಗೆ ನೀನೆ ಗತಿ ಎಂದೊಡಕ್ಷಯವಿತ್ತು ಅಂದು ಸಲಹಿದೆಯೊ 2 ಮಡುವಿನಲಿ ಗಜರಾಜ ಪಿಡಿದ ಮಕರಿಗೆ ಸಿಲುಕಿ ಮಡದಿ ಮಕ್ಕಳನಗಲಿ ಕಡೆಗೆ ಸೊಂಡಿಲಲಿ ಪಿಡಿದ ಕುಸುಮವನು ಜಗದೊಡೆಯಗರ್ಪಿತವೆನಲು ದಡದಡನೆ ಬಂದೆಯೊ ಮಡದಿಗ್ಹೇಳದಲೆ 3 ಅಂದು ದೂರ್ವಾಸಮುನಿ ಬಂದು ಶಿಷ್ಯರ ಸಹಿತ ಇಂದೆಮಗೆ ಹಸಿವೆನಲು ನೊಂದು ಶ್ರೀಹರಿಯೆ ತಂದೆ ನೀ ಸಲಹೆನಲು ಬಂದೆ ಬಹಳ್ಹಸಿವೆಯಲಿ ಒಂದು ಪತ್ರದ ಶಾಖ ಉಂಡು ಸಲಹಿದೆಯೊ 4 ಹಿಂದಜಾಮಿಳ ತನ್ನ ಬಂಧುಬಳಗವ ತ್ಯಜಿಸಿ ಅಂದು ಇಹಸುಖದಿ ಆನಂದ ಪಡುತಿರಲು ಬಂದರಾಗ ಯಮಭಟರು ನಿಂದು ಬಾಧಿಸುತಿರಲು ಕಂದನಾರಗನೆನಲು ಅಂದು ಸಲಹಿದೆಯೊ 5 ಚಿಕ್ಕವನು ಪ್ರಹ್ಲಾದ ಮಕ್ಕಳಾಟದ ಧ್ರುವನು ರಕ್ಕಸಾಂತಕನ ಮೊರೆ ಇಕ್ಕಿ ಪ್ರಾರ್ಥಿಸಲು ತಕ್ಕವರಗಳನಿತ್ತು ತಕ್ಕೈಸಿ ಅಣುಗನನು ಮಿಕ್ಕಭಕುತರ ಪೊರೆದೆ ಲಕ್ಕುಮಿಯ ರಮಣ 6 ಈ ಪರಿಯಲಿ ಬಹುಭಕುತರಾಪತ್ತುಗಳ ಹರಿಸಿ ಶ್ರೀಪತಿಯ ರಕ್ಷಿಸಿದಿ ಆಪನ್ನಜನರ ಗೋಪತಿ ಕೃಷ್ಣ ಜಗದ್ವ್ಯಾಪಕನೆ ನೀ ಸಲಹಿ ತಾಪಸರ ಒಡೆಯ ಹೃದ್ವ್ಯಾಕುಲವ ಕಳೆವೆ 7 ಕಾಳಿ ಮಡುವನೆ ಧುಮುಕಿ ಕಾಳಿಂಗನ್ಹೆಡೆ ತುಳಿದೆ ಕಾಳದೇವಿಯರಮಣ ಕಾಲಿಗೆರುಗುವೆನು ಕಾಳಯುಕ್ತಿನಾಮ ಸಂವತ್ಸರದಿ ಸುಜನರಿಗೆ ಭಾಳ ಸುಖಹರುಷಗಳ ಲೀಲೆ ತೋರಿಸುವ 8 ಭ್ರಮಿಸಿ ಇಹ ಸುಖದಿ ಮನ ಶ್ರಮ ಪಡುತಲಿರೆ ದೇವ ರಮೆಯ ರಮಣನೆ ಪೊರೆಯೊ ಮಮತೆಯನು ಬಿಡದೆ ಕಮಲಸಂಭವಜನಕ ಕಮಲನಾಭ ವಿಠ್ಠಲ ಸುಮನಸರ ಒಡೆಯ ಹೃತ್ಕಮಲದಲಿ ಪೊಳೆವ 9
--------------
ನಿಡಗುರುಕಿ ಜೀವೂಬಾಯಿ
ಏನು ಸುಕೃತವೋ ಮಧುರಾ ನಗರಕೆ ಪ ಗಾನಲೋಲ ಹರಿ ತಾ ನೆಲೆಸಿಹುದು ಅ.ಪ ವರ ವಿಭವಗಳುಳ್ಳ ಪುರಗಳಂತಿರಲು ಪರಮ ಪುರುಷ ಹರಿ ವಿರಾಜಿಸುತಿರಲು 1 ಭೂಪ ನಗರಗಳಿಗೀ ಪರಿಯುಂಟೆ ಗೋಪಾಲಕ ಹರಿ ಕಾಪಾಡುತಿಹುದು 2 ಸುಮನಸಪುರವಾದ ಅಮರಾವತಿಗುಂಟೆ ಕಮಲನಯನ ಹರಿ ಸಮಾಗಮವು ಸದಾ 3 ದಿವಿಜರೊಡೆಯ ಹರಿ ಭುವಿಯಲಿ ಅರಿಸಿ ಅವತರಿಸುತ ತನ್ನ ಪ್ರವಾಸಗೈದುದು 4 ನಿರುಪಮ ಆನಂದಪೂರ್ಣ ಪ್ರಸನ್ನನು ಪರಿಪರಿ ವಿಧದಲಿ ವಿರಾಜಿಸುತಿರಲು 5
--------------
ವಿದ್ಯಾಪ್ರಸನ್ನತೀರ್ಥರು
ಏನು ಹೇಳಲಿ ನಾ ಧೇನುಪಾಲಕನಆನನವ ತೋರಿ ಧ್ಯಾನ ಹಚ್ಚೆಹನು ಪ ಸುತ್ತ ತಿರುಗುವಾಗ ಹತ್ತಿರಕೆ ಬಂದುಚಿತ್ತ ಸುಖಿಸಿ ಪೋದ ಮುತ್ತಿನಂಥ ಬಾಲ 1 ಸಣ್ಣ ಕಂದನೆಂದು ಚಿನ್ನಾಭರಣನಿಟ್ಟುಬೆನ್ನಿನ್ಹಿಂದೇ ಬಂದು ತನ್ನ ತೋರಿದನು 2 ನಂದಬಾಲಕನ ಎಂದು ಕಾಂಬೆನೆಂದುನಂದು ಮನಸ್ಸು ಹರಿವುದು ಇಂದಿರೇಶ ಕೃಷ್ಣ3
--------------
ಇಂದಿರೇಶರು
ಏನು ಹೇಳಲಿ ನಿನಗಿನ್ನೂ ಗುರು ಧ್ಯಾನದ ಸುಖವನ್ನು ಪ ಚಿತ್ತದ ತಾಪವು ನೀಗಿ ಮಾಯಾವೃತ್ತಿಯ ಗುಣಗಳು ಪೋಗಿ | ಎತ್ತೆತ್ತ ನೋಡಲು ಅತ್ತತ್ತ ಪರಿಪೂರ್ಣ ಸಚ್ಚಿದಾನಂದ ಘನ ನಿಜವಾಗಿಹ 1 ದ್ವೈತಾದ್ವೈತಗಳೆಲ್ಲ ಪೋಗಿ ಶುದ್ಧ ಚೈತನ್ಯವೇ ತಾನಾಗಿ | ಮಾತು ಕಳೆದು ಮೌನವೆಂಬ ಏಕಾಂತದಿ | ಕೂತು ಲಕ್ಷಿಸುವ ಲಕ್ಷಣನೆ ತಾನಾಗಿಹ2 ಮನದ ಕಲ್ಪನೆಯನ್ನು ಮರೆದು ಹಮ್ಮು ತನುವಿನಮಮತೆಯ ಜರಿದು | ಅನುದಿನದಲಿ ಗುರು ರಾಮ ಪದಾಂಬುಜ ತಾನೆಂದು ಕಾಂಬುವ ಘನ ನಿಜವಾಗಿಹ 3
--------------
ಭೀಮಾಶಂಕರ
ಏನುಗತಿ ಏನುಗತಿ ಇನಕುಲೇಶ ಹೀನ ವಿಷಯದಿ ಮನ ಶ್ವಾನನಂತಿಟ್ಟ ಎನಗೇನು ಪ ಮೂರು ಗುಣಗಳಿಂದ ಮೂರು ತಾಪಗಳಿಂದ ಮೂರು ಈರೆರಡೊಂದು ಮದಗಳಿಂದ ಮೂರು ಐದಾರಿಂದ ಮರೆತು ತನು ಮೂಲಗಳ ಸ್ಮರಿಸದೇ ನರಹರಿಯ ನರಕಕ್ಕೆ ಗುರಿಯಾದ ಎನಗೆ 1 ಅತಿಥಿಗಳಿಗನ್ನ ಬಲು ಹಿತದಿ ಕೊಡದೆಲೆ ಪರ ಸತಿಯ ಸಂಗದಿ ನೆಲಸಿ ಹಿತವ ಮರೆದು ರತಿಪತಿಪಿತ ನಿನ್ನ ಸ್ತುತಿಸದೆ ಮತಿಗೆಟ್ಟು ಕ್ಷಿತಿಯೊಳಗೆ ನಾನೊಬ್ಬ ಯತಿಯಂತೆ ಚರಿಪ 2 ಇನ್ನಾದರೆನ್ನ ಪಾವನ್ನ ಮಾಡಲು ನಿನ್ನ ಘನ್ನ ಉಪಕೃತಿ ಮರಿಯೆ ಶ್ರೀ ನರಹರಿಯೆ ನಿನ್ನ ಪೊರತನ್ಯರನು ಮನ್ನಿಸುವರ ಕಾಣೆ ಬೆನ್ನ ಬಿದ್ದೆನೊ ದಯವನ್ನು ಮಾಡೆಲೋ ಬೇಗ3
--------------
ಪ್ರದ್ಯುಮ್ನತೀರ್ಥರು
ಏನುತ್ತೀರ್ಣಾಗುವೆನು | ಗುರುವಿಗೆ ಪ ಜನಿತು ಪನಿತನು ವಿದ್ಯದಾಯಕನು | ಉಣಲುಡಲೀವನು ಭಯವ ನಿವಾರಿಪನು 1 ತನ್ನ ತಾನೊಲಿದಾ ಕರುಣವಗರದಾ | ಚಿನುಮಯ ಸುಖದಾ ದಾರಿಯ ದೋರಿಸಿದಾ 2 ತಂದೆ ಮಹಿಪತಿ ಸ್ವಾನಂದ ಮೂರ್ತಿಕಂದನ ಸಾರ್ಥಿ ಆಗಿಹ ಘನಕೀರ್ತಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನೆಂದಳೇನೆಂದಳೋ ಪ ನಿನ್ನೊಳು ಸೀತೆ ಹನುಮಯ್ಯ ಅ ಜನಕನರಮನೆಯಲ್ಲಿ ಜನಿಸಿ ಸುಖದಲ್ಲಿರಲುಧನು ಮುರಿದು ಕೈಹಿಡಿದು ತನ್ನಘನ ಪದವಿಯನು ಬಿಟ್ಟು ವನವ ಸೇರಿದನೆಂದುವನಿತೆ ತಪಿಸುತೆ ಮನದಿ ನೊಂದು 1 ಕುರುಹಿನುಂಗುರವನು ತರಳಾಕ್ಷಿಗಿತ್ತಾಗತಿರುಳಿಗಿಂತಧಿಕವೇ ಕರಟವೆಂದುಬೆರಳಿಂದ ಚಿಮ್ಮಿದಳೆ ಅಶೋಕವನದಾಚೆಗೆನಿರುತ ಸಂತಾಪದಲಿ ಮನದಿ ನೊಂದು 2 ಸೇತುವೆಯ ಕಟ್ಟಿ ಸಿಂಧುಗೆ ವಿಭೀಷಣಾಗ್ರಜಾತ ಲಂಕಾಧಿಪನ ವಧಿಸಿಸೀತೆಯನು ಸೆರೆಯಿಂದ ಬಿಡಿಸಿದ್ದೆ ಆದರೆನಾಥಾದಿಕೇಶವಗೆ ಬಲು ಬಿರುದು ಎಂದು3
--------------
ಕನಕದಾಸ
ಏನೆಂದು ಬಣ್ಣಿಸಲಿ ಗುರುರಾಯನಾ | ತಾ ನೆನೆದವರ ಧನ್ಯಗೈಸುವನಾ ಮಹಿಮೆ ಪ ಧರಿಯೊಳಜ್ಞಾನ ತಮಹರಣ ಭಾಸ್ಕರ ನೆನಿಪ | ಕರ ಕಮಲದಲಿ ಜನಿಸೀ | ವರಮೂಲ ಮಂತ್ರವನೆ ಗುರು ಮಹಿಪತಿಯಂಬಾ | ನಿರುತ ಖ್ಯಾತಿಯ ನಾಮ ಧರಿಸಿ ಬಂದನ ಮಹಿಮೆ1 ಘನಸಾರ ವಿದ್ಯದಾಕಾರವೋ | ಶುದ್ಧಜ್ಞಾನ ಕಲ್ಪ ದ್ರುಮವಿನಾ | ಮುದ್ದು ಫಲವೋಯನಲು ಸಿದ್ಧ ಸಾಧಕರ ನಡು | ಗದ್ದುಗೆಯೊಳೆಸೆವ ಗುಣ ನದ್ವೀತಿಯನ ಮಹಿಮೆ 2 ಸ್ವಸ್ಥ ಮನದಿಂದ ಭಕುತಿ ಸ್ತವನ ಮಾಡಲಿಕೆ | ಮಸ್ತಕದ ಮ್ಯಾಲಭಯ ಹಸ್ತನೀಡೀ | ಅಸ್ತಿ ಭಾತಿ ಪ್ರಿಯಂ ವಸ್ತು ವಿದೇಶ ಸಕಲ ಹೃದ | ಯಸ್ಥನೆಂದನು ಭವವ ವಿಸ್ತರಿಸುವನ ಮಹಿಮೆ 3 ಆರಿಗಳವಡದಿಹ ನೈರಾಸ್ಯ ವೃತ್ತಿಯಾ | ತಾರದಲಿ ನಡೆದು ಮುನಿ ವೈರಾಗ್ಯದಾ | ಸಿರಿ ಸಂಪದವ ತೋರಿದನು ನೋಡಲಿಕೆ | ಸಾರ ಸಾಂಖ್ಯವು ಯೋಗ ದಾರಿ ಬಲ್ಲನ ಮಹಿಮೆ4 ಹೊಂದಿದ್ದವರ ಚಿದಾನಂದ ಸುಖಸಾಗರದಿ | ನಿಂದು ಲೋಲ್ಯಾಡಿಸಿದ ನಂದಿಗಿಂದು | ತಂದೆ ಮಹಿಪತಿ ತನ್ನ ದ್ವಂದ್ವಪಾದುಕೆಗಳನು | ನಂದನ ಸಿರದಲ್ಲಿಟ್ಟು ಛಂದ ನೋಡುವನ ಮಹಿಮೆ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನೆಂದುಸರಲಿ ನಾ ನೆರೆ ಸಂತರಾ | ಸ್ವಾನುಭವಗಳನುವಾಗೀ ಮಾನಿಸಿರೋಳುಸಲೆ ಮಾನಿಸ ಸ್ಥಿತಿಯಲಿ ತಾನಿಹ ಉನ್ಮನಿಯಾಗಿ ಪ ಕಾಮವು ಹರಿಪದ ತಾಮರಸವ ನಿ | ಷ್ಕಾಮದ ಭಕುತಿಗಳಲ್ಲಿ | ಆ ಮಹಾ ಕೋಪವು ಈ ಮನಸಿನ ಗುಣ | ನೇಮಿಸಿ ಶೀಕ್ಷಿಸುವಲ್ಲಿ | ಆ ಮೋಹ ಲೋಭವು ಯಾಮವಳಿಯದಾ | ನಾಮ ಕೀರ್ತನೆಯಲ್ಲಿ | ತಾ ಮರೆಯದ ಅತಿ ವ್ಯಾಮೋಹ ತನ್ನಯ | ಪ್ರೇಮದ ಕಿಂಕರರಲ್ಲಿ 1 ಮದವತಿ ಇಂದ್ರಾದಿ ಪದಗಳ ಸಿದ್ದಿಗೆ | ಳಿದಿರಡೆ ಕಣ್ಣೆತ್ತೆ ಲೆಕ್ಕಿಸರು | ವದಗಿಹ ಮತ್ಸರ ಕುದಿವಹಂಕಾರದ | ಮೊದಲಿಗೆ ತಲೆಯತ್ತಿಸಗುಡರು | ಇದರೊಳು ಸುಖದು:ಖ ಉದಿಸಲು ಹರಿಯಾ | ಜ್ಞದೆಗತಿಗಡ ಸಮಗಂಡಿಹರು | ಉದಕದಲಿ ಕಮಲದ ಎಲೆಯಂದದಿ | ಚದುರತೆಯಿಂದಲಿ ವರ್ತಿಪರು 2 ಜಲದೊಳು ಕಬ್ಬಿಣಸಲೆ ಮುದ್ದಿಯ ನೆರೆ | ನಿಲಿಸದೆ ನಿಲ್ಲದೆ ಮುಣಗುವದು | ಪರಿ | ನಳನಳಿಸುತ ತೇಲುತಲಿಹುದು | ಕಳೆವರ ವೃತ್ತಿಯ ಕಳೆ ಸುವೃತ್ತಿಯ ಮಾಡಿ | ಬೆಳಗಿನ ಘನದೊಳು ಮನ ಬೆರೆದು | ನಲವರು ಮಹಿಪತಿ ವಲುಮೆಯ ಪಡೆಯದ | ಹುಲು ಮನುಜರಿಗಿದು ಭೇದಿಸದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನೆಂದ್ಹೇಳಲಿರಂಗನಟ್ಟುಳಿ ಮಾನವರಂತಿವನಲ್ಲಾ ತಾನಾರಿಗೆ ತನ್ನೆಲೆಗುಡ ಗೋಪೀ ಮಾನಿನಿಮಗ ಬಲುಹೊಲ್ಲಾ ಪ ಕೆಳಗಿಲ್ಲದಲಿರೆ ಗೋರಸ ಭ್ಯಾಂಡ್ಯವು | ನೆಲವಿನ ಅಡಕಲ ನೋಡಿ ಅದು | ನಿಲಕದಲಿರೆ ಕೈಗೂಡಿ ಕಡ | ಗೋಲಿಲಿ ಯಜ್ಞ ಮಾಡೀ | ಗೆಳೆಯರ್ವೆರ ಸೈದ ಬಲುಸೂರ್ಯಾಡಿ | ಸಿಲುಕದ ಲ್ಹೋಗುವ ಪೋಡಿ | 1 ಇಕ್ಕಿದ ಕದಗಳು ಇಕ್ಕಿರಬೇಕು | ಫಕ್ಕನೆ ಮನೆಯೊಳು ಸುಳಿದು | ಚಿತ್ತಕ ಮೋಹಿನಿಂದು ಅವ | ರಕ್ಕರದಲಿ ನೆರೆದು ಚಿಕ್ಕ ಬಾರಕೆ | ಠಕ್ಕಿಸಿ ಹೊರುವ ಆ ಮಕ್ಕಳಾಟಿಕೇನಿದು2 ಖೂನಕೆ ಬಾರದೆ ತಾನಲ್ಲಿದಲಿಹ | ನಾನಾ ವೃತ್ತಿಗೆ ಬಂದು ಇದು | ಧೇನಿಸಿ ನೆಲೆ ತಿಳಿಯದ | ನಾನಾ ನೆಂಬವರಿಗೆ ಇದು | ಶ್ರೀನಿಧಿ ಗುರುಮಹಿಪತಿ ಪ್ರಭುವಿನ | ಅನುಮಾನದಲೇ ದೂರುವುದು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನೆಲವೊ ದೇವ ವೈಕುಂಠನಾಥಾ ನೀ ನಾರಿ ವೇಷವನು ಧರಿಸಿದ ಬಗೆ ಪೇಳೋಪ ದೈತ್ಯರುರುಬಿಗೆ ದೇವ ತತಿಗಳು ತಲ್ಲಣಿಸಿ ಮಿತ್ರ ಭಾವದ ಅವರ ಕೂಡಲಿಟ್ಟು ಇತ್ತಂಡದ ನಡುವೆ ಸುಧೆಯ ಬಡಿಸುವೆನೆಂದು ಮಿತ್ರವೇಷ ಧರಿಸಿ ಸುರರ ಸಲಹಿದಾ ಬಗೆಯೊ 1 ಶಿವಗೆ ವೃಕಾಸುರನು ಬೆಂಬಿಡದೆ ತನ್ನುರಿ ಕ ರವನಿಡುವೆನೆಂದು ಬರಲಾಗಲೂ ಅವನೀಶ ಭವಹರ ಕೇಶವ ನೀನೆ ಗತಿ ಎನಲೂ ಯುವತಿ ವೇಷವಧರಿಸಿ ಶಿವನ ಸಲುಹಿದ ಬಗೆಯೊ2 ಅಂದು ಮಾಡಿದ ಚರಿತೆ ಭಕ್ತಜನರು ಬಂದು ಒಂದು ದಿನ ನೋಡಿದವರಲ್ಲವೆಂದೂ ಸತಿ ವೇಷವನು ಧರಿಸಿ ತೋರಿಸಿದೆಯೊ ಪುರಂದರದಾಸರಿಗೆ ಒಲಿದ ವಿಜಯವಿಠ್ಠಲ ಚೆಲುವಾ 3
--------------
ವಿಜಯದಾಸ
ಏನೇನಿಲ್ಲದ ಧನಹೀನನಿಗೆ ಹರಿ ನಾಮವೆ ಭಾಗ್ಯಕರ ಸಾಧಿಸು ಮುಕ್ತೀಕರ ಪ ನೊಂದನು ಮಾಡದಿರೆ ಇಂದಿನ ಜನ್ಮದೊಳಗೆ ದಾರಿದ್ರ್ಯವು ಬಂದು ಪೀಡಿಸುತಲಿದೆ ಮುಂದೆ ಸಾಧಿಸಿ ಕೊಂಬೆನೆಂದರೆ ಕೈಯೊಳೊಂದರೆ ಕಾಸಿಲ್ಲವು ಪಾಲಿಸೋ ಹರಿಯೇ 1 ಕುಟ್ಟಿ ಕೊಂದರೆ ಪಣೆಯ ನಿನ್ನಿಷ್ಟವಮನ ದಣಿಯ ಪಡೆದಷ್ಟು ಉಣ್ಣಬೇಕಲ್ಲದೆ ಪೂಜಿಸೋ ಹರಿಯೆ 2 ಮಾತ್ರವು ಸುಖವಿಲ್ಲ ಜಗದೇಕ ವಂದ್ಯನ ನೆನೆಸು ಶ್ರೀ ಲಕ್ಷ್ಮೀಶನ ಭಜಿಸಿದರೆ ಬೇಕಾದನಿತುವನಿತ್ತು ಕಡೆಗೆ ತನ್ನ ಲೋಕವ ಪಾಲಿಪನು 3
--------------
ಕವಿ ಪರಮದೇವದಾಸರು
ಒದಗಿ ಬಂದಿತು ಯೋಗ ಒದಗಿ ಬಂದಿತು ಯೋಗ ಪ ಪದುಮೆಯರಸನು ರಥದೊಳಿರುವ ದರುಶನ ಭಾಗ್ಯ ಅ.ಪ ಭುಜಗಶಯನನು ದಿವ್ಯ ರಜತ ರಥದಲಿ ಬರಲು ಸುಜನರೆಲ್ಲರು ಸೇರಿ ಭಜನೆ ಮಾಡುವ ಭಾಗ್ಯ 1 ಅಂಗನಾಮಣಿಯರೆ ರಂಗವಲ್ಲಿಯೆ ಎತ್ತಿ ಮಂಗಳಾಂಗನು ದೀರ್ಘ ಮಾಂಗಲ್ಯವನೆ ಕೊಡುವ 2 ಬಾಲಕರ ಸಡಗರ ಬಾಲೆಯರ ವೈಯ್ಯಾರ ಬಾಲ ವೃದ್ಧರು ಸ್ವಾಮಿಯೋಲಗದಿ ಸಹಕಾರ 3 ಜಯಘೋಷಗಳ ಮಾಡೆ ಭಯಗಳನು ಬಿಡಿರಿ ಮನ ಬಯಕೆಗಳ ಆನಂದಮಯನು ನೀಡುವ ನಗುತ 4 ತನ್ನಿ ಫಲಕುಸುಮಗಳ ಧನ್ಯರಾಗಿರಿ ಕಣ್ಣಾರ ನೋಡಿ ಪ್ರಸನ್ನ ಶ್ರೀ ನಿಲಯನನು 5
--------------
ವಿದ್ಯಾಪ್ರಸನ್ನತೀರ್ಥರು
ಒಂದು ಕೊಟ್ಟರೆ ಶಿವ ಮತ್ತೊಂದು ಕೊಡನಯ್ಯ ಆನಂದ ವಸ್ತುವಿಗೊಂದು ಲೀಲೆ ಇದಯ್ಯ ಪ ರೊಕ್ಕವಿದ್ದವರಿಗೆ ಮಕ್ಕಳೆಂಬವರಿಲ್ಲ ಮಕ್ಕಳಿದ್ದರೆ ತಕ್ಕವನಿತೆಯಿಲ್ಲ ಚೊಕ್ಕಸತಿಯು ಸಿಕ್ಕಿತಾನುರೂಪದೊಳಿರೆ ಪಕ್ಕನೆ ಅಗಲಿ ಪೋಗುವರಯ್ಯ 1 ಚೆಲುವ ಹೆಣ್ಣೆಗೆ ತಕ್ಕ ಚೆಲುವ ಪುರುಷನಿಲ್ಲ ಚೆಲುವ ನಾದವ ಗೊಳ್ಳೆಲಲನೆಯಿಲ್ಲ ಹಲವು ಜನ್ಮದ ಪುಣ್ಯ ಫಲದಿಂದ ಸೇರಲು ಹೊಳೆದು ಹೋಗುವರಿದರೊಳಗೊಬ್ಬರಯ್ಯ 2 ಸತಿ ಸುತರು ಇರುತಿರಲು ದಾರಿದ್ರ ತಿಂಬುವುದಕಿಲ್ಲ ಗತಿಯಿಲ್ಲದವನಿಗೆ ನರಕವಿಲ್ಲ ಅತಿಶಯವಾಗಿ ತಿಂಬುದಕ್ಕಿದ್ದ ನರರಿಗೆ ಸತತ ಶಾರೀರ ಸುಖವಿಲ್ಲವಯ್ಯ 3 ಉಂಬಲೂಡಲು ಸರ್ವಸಕಲ ಸಂಪತ್ತೆಲ್ಲ ತುಂಬಿರಲು ತನ್ನ ಗೃಹದೊಳೆಲ್ಲ ಬೆಂಬಿಡದೆ ರೋಗವು ಪುಟ್ಟಿತನುವಿನೊಳ್ ತಿಂಬುದಕವಗೆ ಬಾಯಿಗಳಿಲ್ಲವಯ್ಯ 4 ಸಕಲ ಜೀವರಿಗು ಚಿಂತೆಗಳಿಲ್ಲದವರಿಲ್ಲ ಸುಖವು ಸ್ವಪ್ನದೊಳು ಕಾಣುವುದಿಲ್ಲವಯ್ಯ ಬಕನ ವೈರಿಯ ಕೋಣೆಯ ಲಕ್ಷ್ಮೀಪತಿ ಪ್ರಿಯ ಮಕರ ಕೇತನ ವೈರಿಯಾಟವಿದಯ್ಯ 5
--------------
ಕವಿ ಪರಮದೇವದಾಸರು
ಒಂದು ದಿನ ನಾರದಮುನಿ ಗೋಕುಲದಿ ಇಂದಿರೇಶನ ಲೀಲೆಯಾ ನಿಂದು ನಭದಲಿ ನೋಡುತಾ | ಮೈಯುಬ್ಬಿ ಬಂದನಾ ವೈಕುಂಠಕೆ 1 ಸಿರಿದೇವಿ ಸಖಿಯರೊಡನೆ | ವನದಲ್ಲಿ ಪರಿಪರಿಯ ಕ್ರೀಡೆಯೊಳಿರೇ ಅರವಿಂದ ನಯನೆಯನ್ನೂ | ಕಂಡನಾ ಸುರಮುನಿಯು ಸಂಭ್ರಮದಲೀ 2 ಜಗನ್ಮೋಹನಾಕಾರಳೂ | ಶ್ರೀ ಹರಿಯ ಜಗ ಸೃಷ್ಟಿಗನುಕೂಲಳೂ ಬಗೆ ಬಗೆಯವತಾರಳೂ | ಕ್ಷಣ ಹರಿಯ ಅಗಲದಂತಿರುತಿಪ್ಪಳೂ 3 ಹರಿಗೆ ಗುಣದಿಂ ಕಿರಿಯಳೂ | ಮತ್ತೆಲ್ಲ ಪರಿಯಲ್ಲಿ ಹರಿಗೆ ಸಮಳೂ ಶರಣೆಂದವರ ಕಾಯ್ವಳೂ | ಬೊಮ್ಮಾದಿ ಸುರರ ಸೃಜಿಸುವ ಶಕ್ತಳೂ 4 ನಾಕ ಸ್ತ್ರೀಯರನೆ ಕೂಡೀ | ವನದಲ್ಲಿ ಲೋಕನಾಯಕಿ ರಮಿಸುತಾ ಶ್ರೀಕಾಂತನಗಲದವಳೂ | ಮುನಿಗೆ ತ ನ್ನೇಕರೂಪವ ತೋರ್ದಳೂ 5 ನೊಡಿ ನಮಿಸಿದನು ಸಿರಿಯಾ | ಹರಿಗುಣವ ಹಾಡಿ ಪಾಡಿದನು ಮೈಯ್ಯಾ ಮೂಡೆ ರೋಮಾಂಚ ಕೈಯ್ಯಾ | ಮುಗಿಯುತಲಿ ನೋಡಿದನು ಸಿರಿಯ ದಣಿಯಾ 6 ಪಲ್ಲವಾಧರೆ ನಗುತಲಿ | ತನ್ನ ಕರ ಪಲ್ಲವದಿ ಕೃಪೆಯ ಮಾಡೀ ಎಲ್ಲಿಂದ ಬಂದೆ ಮುನಿಪಾ ವಿಷಯವೇ ನೆಲ್ಲ ಪೇಳೆಂದೆನ್ನಲೂ 7 ಏನ ಪೇಳುವೆನೆ ತಾಯೆ | ನಿನ ಪತಿಯ ನಾನಾ ವಿಧ ಚರ್ಯೆಗಳನೂ ನಾನರಿಯಲಾರೆ ನಮ್ಮಾ | ನವನೀತ ಚೋರನಾಗಿರುವನಮ್ಮಾ 8 ನಾಕ ಭೂಲೋಕ ತಿರುಗೀ | ಭುವಿಯೊಳಗೆ ನಾ ಕಂಡೆ ಗೋಕುಲವನೂ ಹೇ ಕಮಲೆ ಕೇಳು ಅಲ್ಲೀ | ನಿನ ಪತಿಯು ಆಕಳಾ ಕಾಯುತಿಹನೂ 9 ಬಿಟ್ಟು ವೈಕುಂಠವನ್ನೂ | ಪ್ರಾಯ ಸತಿ ದಿಟ್ಟೆ ನಿನ್ನನು ತೊರೆದನೂ ಹುಟ್ಟಿ ಗೊಲ್ಲರ ಕುಲದಲೀ | ಬೆರತನಾ ಕೆಟ್ಟ ಹೆಂಗಳೆಯರಲ್ಲಿ 10 ನಳಿನಜಾಂಡವ ಸಾಕುವಾ | ಜಗದೀಶÀ ಗೋಪಿ ಬೈ ಗಳನು ತಾ ಕೇಳುತಿಹನೂ 11 ಮದನಮೋಹನರೂಪನೂ | ಗೊಲ್ಲತೆರ ಅಧರಾಮೃತವ ಸವಿವನೂ ಎದೆ ಗಂಟು ಪಿಡಿಯುತಿಹನೂ | ಚಂಡೆಂದು ಗದರಿಸಲು ನುಡಿಯುತಿಹನೂ 12 ಸಂಪೂರ್ಣ ಕಾಮ ತಾನು | ವನದಲ್ಲಿ ಗುಂಪು ಸ್ತ್ರೀಯರ ಕೂಡ್ವನೂ ಸಂಪನ್ನ ಭೋಗಿಸುವನೂ | ಕೊಳಲ ಪಿಡಿ ದಿಂಪುಗಾನವ ಗೈವನೂ 13 ವನದ ಸೊಬಗೇನುಸುರುವೇ | ಶ್ರೀರಮಣಿ ದನಕರುವ ಕಾಯುತ್ಹರಿಯಾ ವನವನವ ತಿರುಗುತ್ತಿರೇ | ಕೊಳಲ ಧ್ವನಿ ವನವೆಲ್ಲ ತುಂಬಿರುತಿರೇ 14 ತಿಳಿಯುದಕ ಯಮುನೆ ಮಳಲು | ದಿಣ್ಣೆಯಲಿ ಕೊಳಲೂದೆ ಹರಿ ಕೇಳಲೂ ಮೊಳೆತವಾ ಬಂಜೆ ಮೋಟೂ | ಮೃಗಪಕ್ಷಿ ಕುಳಿತು ಮೈಮರೆತು ಕೇಳೇ 15 ಓಡಿ ಬರುತಲಿ ತುರುಗಳೂ | ಬಾಲವ ಲ್ಲಾಡಿಸದೆ ಕಣ್ಣುಮುಚ್ಚಿ ಮಾಡಿಟ್ಟ ಪ್ರತಿಮೆಯಂತೆ | ಕಾಣುತಿರೆ ಆಡಿಸದೆ ಸರ್ಪ ಹೆಡೆಯಾ 16 ಶೃಂಗಾರ ಕೊಳಲನೂದೆ | ಜಡ ಚೇತ ನಂಗಳಾಗುತ ಚಿಗುರಲೂ ಅಂಗ ಮರೆಯುತ ಜೀವಿಗಳ್ | ಜಡದಂತೆ ಕಂಗಳನುಮುಚ್ಚಿನಿಲ್ಲೆ 17 ಅಷ್ಟ ಐಶ್ವೈರ್ಯದಾತಾ | ನಾರಿಯರ ತುಷ್ಟಿಪಡಿಸುತಲಿ ಖ್ಯಾತಾ ಶಿಷ್ಟ ಜನರನು ಪೊರೆಯುತಾ | ರಕ್ಕಸರÀ ಹುಟ್ಟಡಗಿಸುವನು ವಿಹಿತಾ 18 ಪೇಳಲಳವಲ್ಲವಮ್ಮಾ | ಶ್ರೀ ಹರಿಯ ಲೀಲೆ ಜಾಲಗಳ ಬ್ರಹ್ಮಾ ನೀಲಗಳರರಿಯರಮ್ಮಾ | ಆನಂದ ತಾಳಿದೆನು ಕೇಳೆ ರಮ್ಮಾ 19 ಇಷ್ಟು ಗೋಕುಲದಿ ನೋಡೀ | ಕಾಣದಿ ನ್ನೆಷ್ಟೋ ಎನ್ನುತಲಿ ಪಾಡೀ ಗುಟ್ಟು ಪೇಳಲು ಬಂದೆನೂ | ಸಿರಿದೇವಿ ಸಿಟ್ಟಾಗಬೇಡವಿನ್ನೂ 20 ಪರನಾರಿಯರ ಬೆರೆಯುತಾ | ಶ್ರೀ ಕೃಷ್ಣ ಮರೆತು ನಿನ್ನನು ಸುಖಿಸುತಾ ಪರಿ ಯೊಚಿಸಮ್ಮಾ | ಆಜ್ಞೆ ಕೊಡು ತ್ವರಿತದಲಿ ಪೋಪೆನಮ್ಮಾ 21 ಹರಿಚÀರ್ಯವೆಲ್ಲ ಕೇಳಿ | ಶ್ರೀ ತರುಣಿ ಪರಮ ಆನಂದ ತಾಳೀ ಬೆರಗಾದ ಪರಿತೋರುತಾ | ಮುನಿವರಗೆ ಪರಿ ಏನು ಮುಂದೆ ಎನಲೂ 22 ಸನ್ನುತಾಂಗನ ಕೂಡಲೂ | ಭೂತಳದಿ ಇನ್ನೇನುಪಾಯವೆನಲೂ ಪನ್ನಂಗ ವೇಣಿ ಉದಿಸೂ | ಭೀಷ್ಮಕಗೆ ಇನ್ನು ನೀ ಕುವರಿ ಎನಿಸೂ 23 ಎಂತೆಂತು ಹರಿಯಚರ್ಯೆ | ಸಿರಿಕಾಂತೆ ಅಂತಂತು ನಿನ್ನ ಚರ್ಯೆ ಸಂತೋಷಪಡಿಸಿ ಎಮ್ಮಾ | ಸಲಹಮ್ಮ ಶಾಂತೆ ನಾ ಪೋಪೆನಮ್ಮಾ 24 ಮತ್ತೊಮ್ಮೆ ನೋಳ್ಪೆನೆಂದೂ | ಗೋಕುಲದ ಹತ್ತಿರದಿ ನಭದಿ ನಿಂದೂ ಸುತ್ತು ಮುತ್ತಲೂ ನೊಡಲೂ | ಸಿರಿದೇವಿ ವ್ಯಾಪ್ತಳಾಗಲ್ಲಿ ಇರಲೂ 25 ವನದಿ ಹರಿವಕ್ಷದಲ್ಲೀ | ಸಿರಿದೇವಿ ಘನ ವೇಣೂರೂಪದಲ್ಲೀ ವನಲಕ್ಷ್ಮೀರೂಪದಲ್ಲೀ | ಗೋಪಿಯರ ಪ್ರಣಯ ಪ್ರಕಾಶದಲ್ಲೀ 26 ಎಲ್ಲೆಲ್ಲಿ ಸೌಂದರ್ಯವೋ | ಉಲ್ಲಾಸ ಎಲ್ಲೆಲ್ಲಿ ವೈಭವಗಳೋ ಎಲ್ಲೆಲ್ಲಿ ಹರಿಲೀಲೆಯೋ | ಸಿರಿದೇವಿ ಅಲ್ಲಲ್ಲಿ ತಾನಿರುತಿರೆ 27 ಸಿರಿ ಹರಿಯ ಚರಿಯ ನೊಡಿದ ಪ್ರತಾಪಾ ಧರೆಗಿಳಿದು ನಮಿಸಿ ನಿಂದಾ | ಕ್ಷಮಿಸೆಂದು ಸಿರಿ ಹರಿಗೆ ಸ್ತೋತ್ರಗೈದಾ 28 ಸಿರಿಹರಿ ವಿಯೋಗವಿಲ್ಲಾ | ಆವಾವÀ ಕಾಲ ದೇಶದಲ್ಲೀ ಅರಿಯದಜ್ಞಾನ ನುಡಿಯಾ | ಮನ್ನಿಸೋ ಮಾಯಾ 29 ಜಯ ಜಯತು ಸುರವಂದ್ಯನೇ ಜಯ ಜಯತು ದುಷ್ಟಹರಣ | ಗುಣ ಪೂರ್ಣ ಜಯ ಜಯತು ಶಿಷ್ಟ ಶರಣಾ30 ಸ್ತುತಿಸುತಂಬರಕಡರಿದಾ | ಸುರಮುನಿಪ ಚ್ಯುತದೂರನತಿ ವಿನೋದಾ ಪತಿತರನು ಕಾಯ್ವ ಮೋದಾ | ಸುಖತೀರ್ಥ ಯತಿಗೊಲಿದು ಉಡುಪಿಲ್ನಿಂದಾ 31 ಆಪಾರ ಮಹಿಮ ಶೀಲಾ | ಸರ್ವೇಶ ಗೋಪಿಕಾ ಜನ ವಿಲೋಲಾ ಆಪನ್ನ ಜನರ ಪಾಲ | ಗುರುಬಿಂಬ ಗೋಪಾಲಕೃಷ್ಣವಿಠಲಾ 32
--------------
ಅಂಬಾಬಾಯಿ