ಒಟ್ಟು 375 ಕಡೆಗಳಲ್ಲಿ , 70 ದಾಸರು , 328 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಜನ ಪ್ರೇಮ ಸದ್ಗುರುರಾಯ ಪ ಕಾಮಿತದಾಯಕ ಕಡುಗಲಿ ಭೀಮ ಅ.ಪ ಆಶಾಶರಧಿಯನು ದಾಟಿದ ಮ ಹಾಶೂರನು ನೀನು ಮೋಸಗಾರರಿಗೆ ಮೃತ್ಯುದೇವತೆಯೆ ದಾಶರಥಿಯ ಕಾರ್ಯ ಧುರಂಧರನೆ 1 ಮರ್ಮವರಿತು ವುಳುಹಿ ಧರ್ಮೇತರ ನಿಲಯಗಳ ದಹಿಸಿದೈ 2 ಸುರ ಕಪಿ ಚಕ್ರವರ್ತಿ ಗುರುರಾಮ ವಿಠಲನ ದಾಸೋತ್ತಮ ಮ- ಧ್ವರಾಜ ನಿಜ ಶರಣರ ಕಲ್ಪತರುವೇ 3
--------------
ಗುರುರಾಮವಿಠಲ
ಸುಂದರ ಕಾಂಡ ರಾಮಾಯಣ ಸಿರಿ ಸಿರಿ ಹನುಮನಾ ||ಮೆರೆವ ಸಚ್ಚರಿತೆ ಮಮ | ಗುರುವೆ ನುಡಿಸೀದಷ್ಟುಒರೆವೆ ಕೇಳ್ಪುದು ಸಜ್ಜನಾ ಪ ಗೃಹ ಮೇಧಿ ಇರುವ ಬಗೆ | ಬಹು ಪರೀಯಲಿ ತೋರಿಗುಹ ವನಂಗಳನೆ ಚರಿಸೀ |ಗೃಹಿಣಿಯನು ಕಾಣದಲೆ | ಬಹು ನಟಸಿ ನರರಂತೆಮಹ ಮಹಿಮ ರಾಮ ಬರಲೂ 1 ಪತಿ ದಶರಥನ | ಸುತನ ಕಂಡೆರಗಿ ರವಿಸುತಗೆ ರಾಜ್ಯವನೆ ಕೊಡಿಸೀ 2 ರಾಮನಾಣತಿ ಪೊತ್ತು | ಭೂಮಿಜೆಯ ವಾರ್ತೆಯನುನೇಮದಲಿ ತರುವೆ ನೆನುತಾ ||ಆ ಮಹಾ ಶರಧಿಯನು | ಧೀಮಂತ ಲಂಘಿಸುತಭೂಮಿಜೆಯ ಕಂಡು ಎರಗೀ 3 ಪತಿ | ರಾಮನ್ನ ಕಂಡ ಪರಿಆಮೋದದಲ್ಲಿರುತಿರೇ 4 ಶ್ರೀ ಲೋಲ ರಾಮನಿಗೆ | ಆಳಾಗಿ ಇರಲೊಂದುವಾಲುಳ್ಳ ಕಪಿಯು ಬಂದೂ ||ಕೇಳುವರು ಇಲ್ಲದಲೆ | ಪೋಲಾಗಿ ಹೋಯ್ತೆಂಬಕೀಳು ನುಡಿಗವಕಾಶ ಕೊಡದೇ 5 ವಂದೆರಡು ಹಣ್ಣಾನು | ತಿಂದ್ಹೋಗುವೇನೆಂದುಇಂದೀವರಾಕ್ಷಿಯ ಬೇಡುತಾ ||ನಂದೀಸಿ ಅಶೋಕ | ನಂದನ ವನವ ಮದಸಿಂಧೂರ ನಂತೆಸಗಿದೇ 6 ಕೋಟ್ಯಶೀತಿಯು ನಿ | ಶಾಟ ಯೂಥಪ ಸಹಸಾಷ್ಟ ಕಾಯುತ ಮುಖ್ಯರಾ ||ಖೇಟ ರಾವಣ ಸೇನೆ | ಕೂಟ ಮೂರರಲೊಂದುರೋಟಿಸುತ ನೀ ಮೆರೆದೆಯೋ 7 ಅಕ್ಷೋಹ್ಣಿ ಬಲ ಸಹಿತ | ರಾಕ್ಷಸಾಧಿಪ ಸುತನುಅಕ್ಷಯ್ಯ ಕುವರ ಬರಲೂ ||ಪಕ್ಷೀಂದ್ರ ತೆರ ಪಿಡಿದು | ಈ ಕ್ಷಿತಿಗೆ ಅಪ್ಪಳಿಸೆತಕ್ಷಣದಲಸು ನೀಗಿದಾ 8 ಮಂದಜಾಸನ ವರದಿ | ಇಂದ್ರಜಿತು ಮದವೇರಿಬಂದೆಸೆಯೆ ಬ್ರಹ್ಮಾಸ್ತ್ರವಾ ||ಛಂದದಲ್ಯೋಚಿಸುತ | ಬಂಧನಕೆ ನೀನಾಗಿನಂದದ ಲ್ವೊಳಗಾದೆಯೋ 9 ತೆತ್ತೀಸ ಕೋಟಿ ದೇ | ವತ್ತೀಗಳಿಗೆಲ್ಲಾಉತ್ತೂಮನಾದ ನೀನೂ ||ಸುತ್ತೀಸಿ ಬಾಲವನು | ಹತ್ತೂತಲೆಯವನನೆತ್ತೀಯ ಮೇಲ್ ಕುಳಿತೆಯೋ 10 ನಾರೀಯ ಚೋರ ನಿ | ನ್ನಾರೆಂದು ಕೇಳಾಲುಮಾರುತ್ತರವಿತ್ತು ಜರಿದೇ ||ಮಾರೀಚ ಮೊದಲಾದ | ನೂರಾರು ರಕ್ಕಸರದೂರೋಡಿಸೀದವನ ದೂತಾ 11 ಕೋಟಲೆಗಳ ಕೊಟ್ಟ | ತಾಟಕಾದೀ ದೈತ್ಯಕೂಟಗಳ ಸಂಹರಿಸಿದಾ ||ಕೂಟಸ್ಥ ಲೋಕಗಳ | ನೋಟದಲಿ ದಹಿಪ ವೈರಾಟ ಪ್ರಭುವಿನಾಳೂ 12 ಕೇಳೆಲೋ ರಾವಣನೇ ತಿಳಿಯಯಾ ನೀನು ನಿನ್‍ಹುಳುವೆಂದು ನಿಜ ಬಾಲದೀ |ಸಿಲುಕಿಸಿ ಜಲನಿಧಿ | ನಾಲಕ್ಕು ಮುಳುಗಿದವಾಲಿ ಪೆಸರನು ಮರೆತೆಯಾ 13 ತಾಲಮರಗಳ ಶೀಳಿ | ವಾಲೀಯನೆ ಕೊಂದರ್ಕಬಾಲಗೇ ರಾಜ್ಯ ಕೊಡಿಸೀ ||ಕೋಲಿನಿಂ ನಿಮ್ಮೆಲ್ಲ | ಹೂಳುವ ರಾಮನಆಳು ನಾನೆಂದು ತಿಳಿಯೋ 14 ರಕ್ಕಸ ಪತಿಯಾಜ್ಞೆ | ಇಕ್ಕಿ ತಲೆಯಾ ಮೇಲೆರಕ್ಕಸರೆಲ್ಲ ತವ ಪುಚ್ಛ ||ಕಿಕ್ಕಲೂ ಉರಿ ಲಂಕೆ | ಪೊಕ್ಕು ಪುರವನೆ ದಹಿಸಿಅಕ್ಕರದಿ ವನದಿ ಹಾರೀ 15 ಕಾಯ ಸಹಿತರ ನೋಡಿಪ್ರೀಯ ದ್ವಾರ್ತೆಯ ನರುಹಲೂ ||ಗೇಯ ಹನುಮನ ತುತಿಸಿ || ರಾಯಗೆರಗುವ ವನದಿಕಾಯ ಕುಪ್ಪಳಿಸುತಿರಲೂ 16 ಕಾತುರತೆಯ ಕಪಿ | ಜಾತೆಗಳ ಸಂತೈಸಿಪ್ರೀತಿಯಿಂ ಮಧುವನವನಳಿದ ||ಸೀತೆಯನು ಕಂಡಂಥ | ವಾರ್ತೆಯನು ಪೇಳೆ ರಘುಜಾತ ನಿನ್ನನು | ಅಪ್ಪಿದಾ 17 ಎರಡೇಳು ಭುವನದೊಳು | ಇರುವರೇ ನಿನ್ಹೊರತುಹರಿಗೆ ಪ್ರೀತ್ಯಾಸ್ಪದನು ಎನಿಸೀ ||ಮೆರೆವ ಭಕ್ತಾಗ್ರಣಿಯೆ | ಎರಗುವೆನು ತ್ವತ್ವದಕೆಹರಿಭಕ್ತಿ ಕರುಣಿಸಯ್ಯಾ 18 ಉದಯಕಾಲದಲೆದ್ದು | ಮುದದಿಂದಲೀ ಪದವಸದಯ ಹೃದಯರು ಪಠಿಸಲೂ ||ಬದಿಗ ಗುರು ಗೋವಿಂದ | ವಿಠಲನೋಳ್ ಸದ್ಭಕ್ತಿವದಗಿ ಪಾಲಿಪ ಹನುಮನೂ 19
--------------
ಗುರುಗೋವಿಂದವಿಠಲರು
ಸುರಪನಾಲಯದಂತೆ ಮಂತ್ರಾಲಯ ಕರೆಸುವುದು ಕಂಗೊಳಿಸುವುದು ನೋಳ್ಪ ಜನಕೆ ಪ ಕಾಮಧೇನುವಿನಂತೆ ಇಪ್ಪ ಗುರುವರ ಸಾರ್ವ ಭೌಮ ಸುಧೀಯೀಂದ್ರಸುತ ರಾಘವೇಂದ್ರ ಆಮಯಾಧಿಪ ಖಳತಮಿಶ್ರ ಓಡಿಸುವ ಚಿಂ ತಾಮಣಿ ಪ್ರಕಾಶದಂತಿಪ್ಪ ವೃಂದಾವನದಿ 1 ಸುರತರುವಿನಂತಿಪ್ಪ ಕೀರ್ತಿ ಸಚ್ಚಾಯಾಶ್ರಿ ತರ ಮನೋರಥಗಳನು ಪೂರೈಸುವಾ ಧರಣಿಸುರಾಖ್ಯ ಷಟ್ಟದಗಳಿಗೆ ಸತ್ಯದಾ ಪರಿಮಳದಿ ತೃಪ್ತಿಬಡಿಸುವ ಮರುತನಂತೆ 2 ವಾರಾಹಿ ಎಂಬ ನಂದನ ವನದಿ ಜನರತಿ ವಿ ಹಾರ ಮಾಳ್ಪರು ಸ್ನಾನಪಾನದಿಂದಾ ಶ್ರೀ ರಾಘವೇಂದ್ರನಿಲ್ಲಿಪ್ಪ ಕಾರಣ ಪರಮ ಕಾರುಣ್ಯ ನಿಧಿ ಜಗನ್ನಾಥ ವಿಠಲನಿಹನು 3
--------------
ಜಗನ್ನಾಥದಾಸರು
ಸುಲಿದ ಬಾಳೆ ಹಣ್ಣು ಸುಟ್ಟು ತಿನ್ನಬೇಡಿರೊ ಹಳೆಯ ಜನರ ಅನುಭವಗಳ ಹಳಿಯಬೇಡಿರೊ ಬಿಳಿಯ ವಸ್ತುವೆಲ್ಲ ಕ್ಷೀರವಲ್ಲ ಕಾಣಿರೊ ಥಳಥಳಿಸುವುದೆಲ್ಲ ರಜತವಲ್ಲ ಕಾಣಿರೊ ಸಿರಿಯು ಬಂದ ಕಾಲದಲ್ಲಿ ಮೆರೆಯಬೇಡವೋ ಶಿರವು ಗಟ್ಟಿಯೆಂದು ಕಂಬ ಗುದ್ದಬೇಡವೊ ಮನಕೆ ತುಷ್ಟಿಕೊಡದ ಕಾರ್ಯಗಣನೆ ಬೇಡವೊ ಅನುವಿನಲ್ಲಿ ಪಿಡಿದ ಕಾರ್ಯ ಕೊನೆಯಗಾಣಿಸೊ ಹಾವು ಕೊಂದು ಹದ್ದುಗಳಿಗೆ ಹಾಕಬೇಡವೊ ಗೋವು ಕೊಂದು ಪಾದರಕ್ಷೆ ದಾನಬೇಡವೊ 10 ಅರಿಯದ ಜನರಲ್ಲಿ ಅಂತರಂಗಬೇಡವೊ ಪರರ ಗೋಪ್ಯ ತಿಳಿದರೆ ಬಹಿರಂಗಬೇಡವೊ ಜಂಭ ಕೊಚ್ಚಬೇಡವೊ ರಗಳೆ ರಂಪದಿಂದ ಪರರ ಒಲಿಸಬೇಡವೊ ಗೆದ್ದರಾ ಎತ್ತು ಬಾಲವನ್ನು ಹಿಡಿಯಬೇಡವೊ ಒದ್ದರೆ ಅದು ಹಲ್ಲುಗಳನು ಕಿರಿಯಬೇಡವೊ ಮೂರ್ಖ ಜನಗಳಲ್ಲಿ ವಾದ ಮಾಡಬೇಡವೊ ಮಕ್ಕಳೆದುರಿನಲ್ಲಿ ಗ್ರಾಮ್ಯವಚನ ಬೇಡವೊ ಬಳಿಕ ಮಾತನಾಡುವನು ಗೆಳೆಯನಲ್ಲಯ್ಯ ಕುಳಿತು ತಿನ್ನುವವನು ಸಾಹುಕಾರನಲ್ಲಯ್ಯ 20 ಗಂಟು ಜಗಳ ಕದನಗಳಲಿ ತಂಟೆಬೇಡಯ್ಯ ನಂಟರಿಷ್ಟರಲ್ಲಿ ಭಂಟನಾಗಬೇಡಯ್ಯ ನಾಕು ಜನರ ಮಾತ ಮೀರಿ ನಡೆಯಬೇಡÀಯ್ಯ ಪೋಕರಿ ಜನಗಳಲಿ ಮೂಕ ಬದಿರನಂತಿರೊ ಕಾಲದಲ್ಲಿ ಕೆಲಸಮಾಡಿ ಮುಗಿಸೆಲೊ ನಾಳೆ ನಾಳೆಯೆಂಬ ಕೆಲಸ ಹಾಳು ಕಾಣಿರೊ ಬಿಂಕದಿಂದ ಹರಿಗುರುಗಳ ಮರೆಯಬೇಡಯ್ಯ ಸಂಕಟ ಬಂದಾಗ ವೆಂಕಟೇಶ ಬರುವನೆ ಸಾಲ ಸೋಲ ಮಾಡಿ ದಾನ ಧರ್ಮ ಬೇಡಯ್ಯ ಕೇಳದಿರಲು ನೀತಿ ಹೇಳ ಹೋಗಬೇಡಯ್ಯ 31 ಪರರು ನೋಯುವಂಥ ಮಾತನಾಡಬೇಡಯ್ಯ ಉರಿವ ಒಲೆಗೆ ಉಪ್ಪುಕಾಳನೆರಚಬೇಡಯ್ಯ ನೆರೆಯು ಬಾಳುತಿರಲು ನೋಡಿ ಕರಗಬೇಡಯ್ಯ ಬರಿದೆ ಅಯ್ಯೊ ಪಾಪವೆನಲು ಮರುಕವಲ್ಲವೊ ದುರುಳ ಜನಗಳಲ್ಲಿ ಸರಳನಾಗಬೇಡಯ್ಯ ಹರಿಯ ಭಜನೆಯಲ್ಲಿ ಮನದಿ ನಾಚಬೇಡವೊ ತಿರುಕನಂತೆ ಜ್ಞಾನದ ಭಿಕ್ಷೆಯನು ಬೇಡೆಲೊ ತುರುಕನಂತೆ ಕಾಮದ ತಲೆ ಬಡಿದು ಜೀವಿಸೊ ಸಜ್ಜನಗಳು ಸಮ್ಮತಿಸುವ ಮಾರ್ಗದಲಿ ನಡಿ ದುರ್ಜನಗಳು ಪೇಳಿ ತೋರಿದೆಲ್ಲವನು ಬಿಡಿ40 ಫಲದ ಚಿಂತೆಯಿಲ್ಲದಂತೆ ಧರ್ಮಗಳಿಸಿರೊ ಫಲವು ಹರಿಯಧೀನ ಕೆಲಸ ಮಾತ್ರ ನಿನ್ನದೊ ಧ್ಯಾನ ಮಾಡದಿರಲೊ ಮನದಿ ದುಷ್ಟ ವಿಷಯದ ಧ್ಯಾನದಿಂದ ವಿಷಯದಲ್ಲಿ ಸಂಗ ಬರುವುದೊ ಸಂಗದಿಂದ ದುಷ್ಟಭೋಗ ಕಾಮ ಬರುವುದೊ ಭಂಗವಾದ ಕಾಮದಿಂದ ಕೋಪ ಬರುವುದೊ ಕೋಪದಿಂದ ಮನದಲಿ ವ್ಯಾಮೋಹ ಬರುವುದೊ ಈ ಪರಿಮೋಹದಲಿ ಸ್ಮರಣೆ ನಾಶಪಡುವುದು ಸ್ಮøತಿಯು ತಪ್ಪಿದವನ ಬುದ್ಧಿಮೃತಿಯು ಪೊಂದಲು ಕ್ಷಿತಿಯೊಳವಗೆ ಸರ್ವನಾಶವೆಂದು ನುಡಿಯಿದೆ 50 ಜ್ಞಾನಕೆ ಸಮ ಸಂಪತ್ತಿಲ್ಲ ಜನಕೆ ಲೋಕದಿ ಮೌನಕೆ ಸಮ ಗುಹ್ಯಕೆ ಪಾಲಕರಿಲ್ಲವೊ ಜ್ಞಾನ ಸರ್ವಕರ್ಮಗಳನು ದಹಿಸಿಬಿಡುವುದೊ ಜ್ಞಾನದಿಂದ ಪರಮಶಾಂತಿ ಪಡೆಯುಬಹುದೆಲೊ ಚಿರತನ ವರ್ಣಾಶ್ರಮಗಳ ಧರ್ಮ ಬಿಡದಿರೊ ಮಿತಿಯ ಮೀರಿ ಭೋಜನವನು ಮಾಡಬೇಡವೊ ಕಾಲ ಕಳೆಯಬೇಡವೊ ಲೋಕವ ಭಯಪಡಿಸಬೇಡ ನಡೆನುಡಿಗಳಲಿ ಲೋಕಕೆ ಭಯಪಡಲಿಬೇಡ ಧರ್ಮ ಪಥದಲಿ 60 ಶತುಮಿತ್ರರಲ್ಲಿ ಒಂದೆ ಭಾವ ಪಡೆಯೆಲೊ ಸ್ತೋತ್ರ ನಿಂದೆಗಳಿಗೆ ಹಿಗ್ಗಿ ಕುಂದಬೇಡವೊ ಭಕ್ತಜನರ ನಡೆನುಡಿಗಳ ನಿಂದಿಸದಿರೆಲೊ ಯುಕ್ತರವರು ಹಿರಿಯ ದಯಕೆ ಪಾತ್ರರಿವರೊ ಜಗವು ಸತ್ಯ ಬಗೆ ಬಗೆಯಲಿ ಸೊಗಸ ನೋಡೆಲೊ ಜಗಕೆ ಕರ್ತನೋರ್ವಗೆ ಕೈ ಮುಗಿದು ಬೇಡೆಲೊ ದೇಶಕಾಲ ಪಾತ್ರವರಿತು ದಾನ ಮಾಡೆಲೊ ಆಸೆ ಮೋಸಗಳಿಗೆ ಮನವ ಲೇಸು ಕೊಡದಿರೊ ಪರರ ಮನವು ಕೆದರದಂತೆ ನಿಜಹಿತ ನುಡಿಯು ಗುರುತರ ವಾಚನಿಕ ತಪವ ಮರೆಯಬೇಡವೊ 70 ಸರ್ವಕರ್ಮ ಫಲಗಳನ್ನು ಬಿಡುವನೆ ಯತಿಯು ಗರ್ವಮತ್ಸರಾದಿಗಳನು ಬಿಡುವುದೆ ಮತಿಯು ಶರಣು ಹೊಡೆಯೊ ಕರುಣಮಯನ ಚರಣಯುಗಳದಿ ಕರಗತವಾಗುವುದು ನಿನಗೆ ಇಹಪರ ಸುಖವು ಮಮತೆ ಬಿಟ್ಟು ಜಗದಿ ತಗಲಿ ತಗಲದೆ ಇರೆಲೊ ಕಮಲಪತ್ರಗಳಲಿ ಜಲದ ಕಣಗಳ ತೆರದಿ ಶುದ್ಧ ಧರ್ಮಲೇಶವು ತಲೆ ಕಾಯಬಲ್ಲದೊ ಪದ್ಮನಾಭ ಜನರ ಚಿತ್ತಶುದ್ಧಿ ನೋಡುವ ನಾನೆ ಬ್ರಹ್ಮನೆಂಬ ವಾದ ಬಾಳಬಲ್ಲದೆ ತಾನೆ ಬೀಳಲಿರುವ ಮರಕೆ ಕೊಡಲಿ ಏತಕೆ 80 ಜ್ಞಾನತೀರ್ಥಗಳಲಿ ಮುಳುಗಿ ಸ್ನಾನ ಮಾಡೆಲೊ ಜ್ಞಾನಕೆ ಜ್ಯೋತಿಗಳ ಬೆಳಕು ಕಾಣುತಿರುವುದೊ ದಾರುಣ ಸಂಸಾರ ಜಲದಿ ಪಾರುಗಾಣಲು ಧೀರನಾಗಿ ಈಜುವವಗೆ ತಾರಣ ಸುಲಭ ತಲೆಯ ಮೇಲೆ ಕೈಯನಿಟ್ಟು ಕೂಡ ಬೇಡವೊ ಬೆಳಸಿದಂತೆ ತರುಲತೆಗಳು ಫಲಕೊಡುವುದೊ ಮುಂದೆ ಇಟ್ಟ ಹೆಜ್ಜೆಗಳನು ಹಿಂದೆಗೆಯದಿರೊ ಮಂದಿಗಳಿಗೆ ಫಲದಲಿ ಸಂದೇಹ ಬೇಡವೊ ಹುಳಿಯ ರಕ್ತವಿರುವತನಕ ತಲೆಯು ಬಾಗದು ಕಾಲ ಸಾಲದೊ 90 ಪರರ ನುಡಿಗಳನ್ನು ಕದ್ದು ಕೇಳಬೇಡವೊ ಅರಿತು ನಿನ್ನ ಹರಿಯು ಗುದ್ದಿ ಬುದ್ಧಿ ಕಲಿಸುವ ಚಾಡಿಯಾಡ ಬೇಡ ಚಾಡಿ ಕೇಳಬೇಡವೊ ಸೇಡನು ತೀರಿಸುವ ಹೇಡಿಯಾಗಬೇಡವೊ ನಿನ್ನ ಮಾನದಂತೆ ಪರರ ಮಾನವೆಂದರಿಯೆಲೊ ಅನ್ನ ಹಾಕುವವರ ಹರಿಸಿ ಘನ್ನವೆನಿಸೆಲೊ ಕುಲವ ಶೋಧಿಸುತಲಿ ಕನ್ಯೆದಾನ ಮಾಡೆಲೊ ತಲೆಯ ಕ್ರಾಪು ಯೋಗ್ಯತೆಗೆ ಪ್ರಮಾಣವಲ್ಲವೊ ಕರವ ಪಿಡಿಯೆಲೊ ಥಳಕು ಬೆಳಕು ನೋಡಿ ಬಲೆಗೆ ಬೀಳ ಬೇಡವೊ 100 ಗಾಳಿಯು ಬಂದಾಗ ಬೇಗ ತೂರಿ ಕೊಳ್ಳಲೊ ಕಾಲದ ಸ್ಥಿತಿಯರಿತು ತಗ್ಗಿ ಬಗ್ಗಿ ನಡೆಯೆಲೊ ಮೇಲಿನ ದರ್ಜೆಯಲಿ ನಡೆದು ಕೇಳಬೇಡವೊ ನಾಲಗೆ ಚೆನ್ನಿರುವ ನರಗೆ ಜಗಳವಿಲ್ಲವೊ ಇರುಳು ಕಂಡ ಬಾವಿಗೆ ನೀ ಉರುಳಬೇಡವೊ ಶಕ್ತಿ ಇರುವ ಕಾಲದಲ್ಲಿ ಉತ್ತಮನೆನಿಸೊ ಶಕ್ತಿಯಲ್ಲಿದಾಗ ಇದ್ದು ಸತ್ತ ಪ್ರಾಯವೊ ಸ್ವೊತ್ತಮ ಜನರಲ್ಲಿ ನಿಯತ ಭಕ್ತಿ ಮಾಡೆಲೊ ಭಕ್ತಿಯಿಲ್ಲದವಗೆ ಮುಕ್ತಿಯಿಲ್ಲ ಕಾಣಿರೊ 110 ಪಾಪಿಯಾಗಬೇಡ ಇತರ ಜನರ ವಂಚಿಸಿ ಕೋಪ ಮಾಡಬೇಡ ಕೊಟ್ಟ ಋಣವ ಕೇಳಲು ಕೂಪ ಕೂರ್ಮದಂತೆ ಜಗವ ನೋಡಬೇಡವೊ ರೂಪುರಂಗುಗಳಿಗೆ ಮನವ ಸೋಲಬೇಡವೊ ಹಡೆದ ಮಕ್ಕಳುಗಳ ಕಾಲದಲ್ಲಿ ತಿದ್ದೆಲೊ ಗಿಡದಲಿ ಬಗ್ಗಿಸದ ಮರವು ಬಗ್ಗಲಾರದೊ ಕೊಡಲಿಯನ್ನು ಸೇರಿ ಮರದ ಕಾವಿನಂದದಿ ನಡತೆ ಕಲಿಸದಿದ್ದರವರು ಬುಡಕೆ ತರುವರೊ ಗಳಿಸಿದವನ ಧನವು ಬಳಸಿದವನಿಗೆಂದರಿಯೆಲೊ ಬಳಸಲು ನೀತಿಯಲಿ ಧನವ ಗಳಿಸಿ ಸುಖಿಸೆಲೊ 120 ತಿಳಿದು ಮರ್ಮ ಕಲಿ ಪುರುಷನ ನೆಲಕೆ ತುಳಿಯಿರಿ ಗುಹ್ಯ ತತ್ವ ಪೇಳಬೇಡವೊ ನಾಯಿಗಳಿಗೆ ಹವ್ಯದಾನ ಮಾಡಬೇಡವೊ ಕಾಯುವ ಗುರುಚರಣವೆ ಬಲುಶ್ರೇಯವೆನ್ನದೆ ಕರ್ಮ ಸುಡುವುದೆ ಉಣಲು ಬದುಕಬೇಡ ಜಗದಿ ಬದುಕಲು ಉಣೆಲೊ ಜನನ ಮರಣ ನಿಯತ ಕಾಲಗಳಲಿ ಬರುವವೊ ಕೊನೆ ಮೊದಲುಗಳಿಲ್ಲವು ಈ ಜಗಪ್ರವಾಹಕೆ ತನಗೆ ತಾನೆ ಬೀಳದು ಜಗದಾಖ್ಯ ವೃಕ್ಷವು 130 ತಾಳಿದವನು ಬಾಳುವನೆಂದರಿತು ನಡೆಯೆಲೊ ಗಾಳಿಗುದ್ದಿ ಕರಗಳನ್ನು ನೋಯಿಸದಿರೆಲೊ ಬಾಲನೆಂದು ಅರಿತು ಸತತ ಜ್ಞಾನವ ಗಳಿಸೆಲೊ ನಾಳೆಯ ದಿನ ನಂಬದಂತೆ ಧರ್ಮಗಳಿಸೆಲೊ ಹರಿಯುಕೊಟ್ಟ ಕಾಲದಲ್ಲಿ ಪರರ ರಕ್ಷಿಸೊ ಹರಿಯು ಕೊಡದ ಕಾಲದಲ್ಲಿ ಹರುಷ ಬಿಡದಿರೊ ದೂಷಕರನು ಎಂದಿಗು ನೀ ದ್ವೇಷಿಸದಿರೆಲೊ ಹೇಸಿಗೆಯನು ನಾಲಿಗೆಯಲಿ ತೆಗೆದುಬಿಡುವರೊ ಹಳ್ಳಕೆ ಬಿದ್ದವನಮೇಲೆ ಕಲ್ಲೆಸೆಯದಿರೊ ಟೊಳ್ಳು ಹರಟೆಗಾರನೆದರು ನಿಲ್ಲ ಬೇಡವೊ 140 ಒಳ್ಳೆಯ ಫಲಕೊಡುವ ಕಾರ್ಯಗಳು ಚಿಂತಿಸೊ ಜಳ್ಳು ಹುಲ್ಲಿಗಾಗಿ ಬೆವರು ಸುರಿಸಬೇಡವೊ ಬಿಂದು ಬಿಂದು ಸೇರಿ ಸಿಂಧುವಾಯಿತೊ ಹಿಂದಿನ ಮೊಳೆಯಿಂದ ದೊಡ್ಡ ವೃಕ್ಷವಾಯಿತೊ ಒಂದನು ಇನ್ನೊಂದು ಸೇರಿ ಕೋಟಿಯಾಯಿತೊ ಮಂದಿಗಳಿದನರಿತು ಪುಣ್ಯರಾಶಿ ಗಳಿಸಿರೊ ನೆರಳು ನೀರು ಕೊಟ್ಟ ಜನರ ಮರೆಯ ಬೇಡವೊ ಸರಿಯುತಿರುವ ಮಾರಿ ಮಸಣಿ ಕರೆಯಬೇಡವೊ ಅರಿಯದ ಅಜ್ಞಾನಿಯೊಡನೆ ಸರಸಬೇಡವೊ ತರುಗು ತಿನ್ನುವವನ ಕೇಳಬೇಡ ಹಪ್ಪಳ 150 ದೇಹಿಯೆಂದು ಬಂದವನಿಗೆ ನಾಸ್ತಿಯೆನದಿರೊ ಸಾಹಸವನು ಮಾಡದಿರೊ ಪ್ರಬಲ ಜನರಲಿ ಮೋಹಕೆ ತುತ್ತಾಗದಿರೆಲೊ ಪರಸತಿಯರಲಿ ದೇಹಕೆ ಬಲ ಶುದ್ಧಿ ಕೊಡುವ ನಿಯಮ ಬಿಡದಿರೊ ಭಾಗ್ಯಹೀನ ಬಡವನೆಂದು ಜರಿಯಬೇಡವೊ ಯೋಗ್ಯತೆಯನು ತಿಳಿಯಲು ಬಲು ಸುಲಭವಲ್ಲವೊ ಶ್ಲಾಘ್ಯವಾದ ಮೂಲಿಕೆಗಳನರಿಯೆ ಸುಲಭವೆ ಯೋಗ್ಯತೆಯನುಸರಿಸಿ ಬರುವ ಭಾಗ್ಯ ಬೇರಿದೆ ಖ್ಯಾತಿಗಾಗಿ ಆತ್ಮಸ್ತುತಿಯ ಮಾಡಬೇಡವೊ ಕೋತಿಯಂತೆ ಕುಣಿಯಬೇಡ ಸರಿಸಮರೊಳಗೆ 160 ಮೂತಿ ತಿರುಗಬೇಡ ಪರರ ಹಿತನುಡಿಗಳಿಗೆ ಸೋತ ಹಾಸ್ಯ ಮಾಡಬೇಡ ರಸಿಕ ಜನರಲಿ ಹಿರಿಯರು ಸಂದೇಹಪಡುವ ಮಾರ್ಗ ತ್ಯಜಿಸೆಲೊ ಬರಿಯ ಮಾತನಾಡಿ ಬೆನ್ನು ತಟ್ಟ ಬೇಡವೊ ಪರರ ಹಳ್ಳಕ್ಕಿಳಿಸಿ ಆಳ ನೋಡಬೇಡವೊ ಕರಕೆ ಸಿಕ್ಕಿದಾಗ ಹಲ್ಲು ಕಿರಿಯಬೇಡವೊ ಅರಳು ಹುಡುಕಬೇಡವೊ ಎದೆಯು ಒಡೆಯುವಂತೆ ಸುದ್ದಿ ಪೇಳಬೇಡವೊ ಬೀದಿಯಲಿರುವ ಜನಗಳ ಬೇಸರಿಸಬೇಡವೊ ಬೆದೆಯಲಿರುವ ದುರುಳನನ್ನು ಕೆಣಕಬೇಡವೊ 170 ಊರು ಕುರಿಯ ಕಾದು ಗೌಡನೆನಿಸಬೇಡವೊ ದೂರು ತರುವ ಜನರ ಕ್ಷಣದಿ ನಂಬಬೇಡವೊ ನಾರಿಯ ಸಾಹಸವ ನಂಬಿ ದುಡುಕಬೇಡವೊ ಎರಡು ಕರವು ಸೇರದೆ ಚಪ್ಪಾಳೆಯಾಗದು ಕುರುಡನು ತೋರಿಸುವುದೆಲ್ಲ ಮಾರ್ಗವಾಗದು ಕರಡಿಯು ಮೈಯಪರಚಲದು ಸೌಖ್ಯವಾಗದು ಗುರುಗಳ ಬಿಟ್ಟೋದಲು ಉಪದೇಶವಾಗದು ಹರಿಯಭಕುತಿ ಹರಿಯದಿರಲು ಗಾನವಾಗದು ಬರಿಯ ಸ್ವರಗಳುರುಳಿಸೆ ಕೀರ್ತನೆಯದಾಗದು 180 ಕರದಿ ತಟ್ಟೆ ಹೊಳೆಯುಂತಿರೆ ಪುರಾಣವಾಗದು ಕಿರಿಯ ಜನರ ಗುಣಗಾನವು ಭಜನೆಯಾಗದು ಅಕ್ಕಿಗಾಗಿ ಅಲೆವರೆಲ್ಲ ದಾಸರಾಗರು ಬೆಕ್ಕಿನಂತೆ ಕಣ್ಣು ಮುಚ್ಚಿ ಯತಿಗಳಾಗರು ಚಿಕ್ಕ ಜಿರಳೆ ಮೀಸೆಯಿರಲು ರಾಯರಾಗದು ಚಿಕ್ಕ ಕೊಳೆಯ ಚೌಕ ಧರಿಸೆ ಮಡಿಯದಾಗದು ಕದ್ದು ಅವಿತುಕೊಂಬರೆಲ್ಲ ಗರತಿಯಾಗರು ಮದ್ದು ಮಾಟ ಮಾಡುವವರು ಸುದತಿಯಾಗರು ಶುದ್ಧ ಧೈರ್ಯ ನಡತೆಯಿಂದ ನಿಂದ್ಯರಾಗರು ಬುದ್ಧಿ ಬದುಕು ಹೇಳುವವರು ದ್ವೇಷಿಯಾಗರು 190 ರೀತಿ ನೀತಿಗಳನು ಪರಗೆ ಹೇಳಲು ಸುಲಭ ಮಾತನಾಡಿದಂತೆ ಮಾಡಿ ತೋರುವರಿಹರೇ ತಾತನ ಕಾಲದಲ್ಲಿ ನುಡಿದ ಮಾತಿದಲ್ಲವು ಹೋತನ ಗಳಸ್ತನವಿದಲ್ಲ ಕೂತು ಕೇಳರಿ ಗಾದೆಗಳನು ವೇದವೆಂದು ಪೇಳಲುಚಿತವು ಮಾದರಿ ಅಣುಶಕ್ತಿಯಿಂದೆ ಗಾದೆ ಗಾದೆಗು ಪರಮ ಭಾಗವತರ ಚರಿತೆಯೋದಿ ನೋಡಿರಿ ಅರಿಯಬಹುದು ನುಡಿದ ನೀತಿಸಾರವೆಲ್ಲವ ನಾಡುನುಡಿಗಳೆಂದು ಮರೆಯಬೇಡವೆಂದಿಗು ಪಾಡಿದರೆ ಪ್ರಸನ್ನ ಹರಿಯು ನೀಡುವ ಫಲವ 200
--------------
ವಿದ್ಯಾಪ್ರಸನ್ನತೀರ್ಥರು
ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿ ಸುವ್ವಿ ಸುವ್ವಿ ನಮ್ಮ ಭೂರಮಣಗೆ ಸುವ್ವಿ ಸುವ್ವಿ ಎಂದು ಪಾಡಿ ಸಜ್ಜನರೆಲ್ಲ ಕೇಳಿ ಪ. ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆ ವರ ವಾಣಿರಮಣಗೆ ಶರಣೆಂಬೆ ಸುವ್ವಿ ವರ ವಾಣಿರಮಣಗೆ ಶರಣೆಂದು ಪೇಳಿದ ಗುರುವಾದಿರಾಜೇಂದ್ರನ ಕೃತಿಯೆಂದು ಸುವ್ವಿ 1 ¥ಕ್ಕಿವಾಹನ್ನ ಜಗಕ್ಕೆ ಮೋಹನ್ನ ರಕ್ಕಸದಾಹನ್ನನಿವ ಸುವ್ವಿ ರಕ್ಕಸದಾಹನ್ನನಿವ ತನ್ನ ಮರೆ- ಹೊಕ್ಕರ ಕಾಯ್ವ ಪ್ರಸನ್ನನಿವ ಸುವ್ವಿ 2 ಯಶೋದೆಯ ಕಂದ ತನ್ನ ವಿಷವನುಣ್ಣೆಂದ ಕರ್ಕಶದ ಪೂತನಿಯ ಶಿಶುವಾಗಿ ಸುವ್ವಿ ಕರ್ಕಶದ ಪೂತನಿಯ ಶಿಶುವಾಗಿ ಕೊಂದ ನಮ್ಮ ಎಸೆವ ಗೋವಿಂದ ಪಾಲಿಸ ಬಂದ ಸುವ್ವಿ 3 ಶಕಟಾಸುರನ್ನ ಮೆಟ್ಟಿ ಕೊಂದ ಬಲು ವಿಕಟ ದೈತ್ಯನ್ನ ಕೊರಲೆತ್ತಿ ಸುವ್ವಿ ವಿಕಟದೈತ್ಯನ್ನ ಕೊರಲೆತ್ತಿ ಕೊಂದು ಸರ್ಪನ ಮ- ಸ್ತಕದಮೇಲೆ ನಲಿವುತ ನಿಂದ ಸುವ್ವಿ4 ಕರುಗಳ ಕಣ್ಣಿಯ ಬಿಡುವಾಗ ನಾರಿಯರೆಲ್ಲರು ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುವ್ವಿ ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುರಿದು ಅವರ್ಬರಲು ಬೆಣ್ಣೆಯ ಕೊಂಡೋಡುವ ಸುವ್ವಿ 5 ಮತ್ತಿಯ ಮರಗಳ ಕಿತ್ತುವಾಗ ಅಲ್ಲಿ ಭೃತ್ಯರಿಗೊಲಿದು ವರವಿತ್ತ ಸುವ್ವಿ ಭೃತ್ಯರಿಗೊಲಿದು ವರವಿತ್ತ ತನ್ನ ಮಿತ್ರಜನಕಾಗಿ ಗಿರಿಯೆತ್ತಿದನೆ ಸುವ್ವಿ 6 ವೃಂದಾವನದಿ ನಿಂದು ಚಂದದಿ ನಲಿವಾಗ ತನ್ನ [ಕೊಂದಪೆ]ನೆಂದು ಬಂದ ಬಕನ ಸುವ್ವಿ [ಕೊಂದಪೆ]ನೆಂದು ಬಂದ ಬಕನ ಸೀಳಿ ಪುಲ್ಲಂದದಿ ಕೊಂದು ಬಿಸುಟಾನೆ ಸುವ್ವಿ 7 ಕಲ್ಪತರುವಂತೆ ನಮ್ಮ ತನ್ನಧರಿಂದ ಕೊಳಲನೂದುವ ಚೆಲುವಗೆ ಸುವ್ವಿ ಕೊಳಲನೂದುವ ಚೆಲುವ ಗಾನಲೋಲ ಗೋ- ಪಾಲಕೃಷ್ಣನಿಗೆ ಶರಣೆಂಬೆ ಸುವ್ವಿ 8 ರಂಗ ರಾಸಕ್ರೀಡೆಯೆಂಬ ಶೃಂಗಾರರಸ ಬಸಿವ ಮಂಗಳ ವಿಲಾಸವನು [ರಚಿಸಿದ]ಸುವ್ವಿ ಮಂಗಳ ವಿಲಾಸವನು ರಚಿಸಿದಾತನ ಕಂಡು ದೇ ವಾಂಗನೆಯರೆಲ್ಲರು ತನುವ ಮರೆತರು ಸುವ್ವಿ 9 ಮಧುರೆಗೆ ಪೋಗಿ ಮಲ್ಲರಸುವ ನೀಗಿ ಮದಾಂಧ ಮಾವನ್ನ ಮಡುಹಿದ ಸುವ್ವಿ ಮದಾಂಧ ಮಾವನ್ನ ಮಡುಹಿದ ಶ್ರೀಕೃಷ್ಣ ಮುದದಿ ತನ್ನವರ ಮುದ್ದಿಸಿದ ಸುವ್ವಿ 10 ಧರ್ಮವ ಬಿಡಬೇಡ ದುಷ್ಕರ್ಮ ಮಾಡಬೇಡ ದುರ್ಮನವ ಬಿಡದೆ ಹರಿಯಲಿಡು ಸುವ್ವಿ ದುರ್ಮನವ ಬಿಡದೆ ಹರಿಯಲಿಡು ಮನವ ಕಾಮಿನಿಯೊಳಾಡಿ ಕೆಡಬೇಡ ಸುವ್ವಿ 11 ದುರುಳರ ನೋಡಿ ದೂರಕ್ಕೋಡು ಹರಿ- ಶರಣಡಿಗೆ ಪೊಡಮಡು ಸುವ್ವಿ ಶರಣರಡಿಗೆ ಪೊಡಮಡು ಶ್ರೀಕೃಷ್ಣನ ಸು- ಚರಿತವ ಪಾಡುವರೊಳಗಾಡು ಸುವ್ವಿ 12 ಏರಲರಿಯದವ ಮರನೇರಿ ಬಿದ್ದು ಸಾವಂತೆ ನೀರ ಮೀನುಗಳು ಕರಗುವಂತೆ ಸುವ್ವಿ ನೀರ ಮೀನುಗಳು ಕರಗುವಂತೆ ಮನುಜ ನೀ ಬಾರದ ಭಾಗ್ಯಕ್ಕೆ ಹೋರಬೇಡ ಸುವ್ವಿ 13 ಹಿಂದೆ ಪುಣ್ಯದ ಬೀಜವ ಕುಂದದೆ ಬಿತ್ತಿದರೆ ಇಂದು[ಬಾಹದೈಶ್ವರ್ಯ ಮುಂದಿಪ್ಪೋದು] ಸುವ್ವಿ ಇಂದು [ಬಾಹದೈಶ್ವರ್ಯ ಮುಂದಿಪ್ಪೋದು] ಬರಿದೆ ನೀ ನೊಂದು ವಿಧಿಯ ಬೈದರೆ ಎಂದೆಂದು ಕೆಡುವೆ ಸುವ್ವಿ 14 ದುರುಳ ಕೀಚಕ ಕೆಟ್ಟ ಪರಧನಕೆ ಮರುಳಾಗಿ ಕುರುರಾಯ ಸುವ್ವಿ ಪರಧನಕೆ ಮರುಳಾಗಿ ಕುರುರಾಯ ಕೆಟ್ಟನೆಂದು ಒರೆವ ಭಾರತವ ನಿರುತ ಕೇಳು ಸುವ್ವಿ 15 ವಾದಿಯೂ ಹರಿಯಾದ ಪ್ರತಿವಾದಿಯೂ ಹರಿಯಾದ ಭೇದವಿಲ್ಲವೆಂಬ ಮತದಲ್ಲಿ ಸುವ್ವಿ ಭೇದವಿಲ್ಲವೆಂಬ ಮತದಲ್ಲಿ ತಾನೊಬ್ಬನೇ ಕಾದಿ ಗೆದ್ದಾನೆಂತು ಬಿದ್ದಾನೆಂತು ಸುವ್ವಿ 16 ಎಲ್ಲ ಒಂದಾಂದರೆ ಶಾಲ್ಯಾನ್ನನುಂಬುವರು ಪುಲ್ಲನ್ಯಾಕೆ ಮೆದ್ದು ಬದುಕರು ಸುವ್ವಿ ಪುಲ್ಲನ್ಯಾಕೆ ಮೆದ್ದು ಬದುಕರು ಸ್ಥಳಚರರು ಜಲದೊಳು ಚರಿಸೆ ಅಳುವದ್ಯಾಕೆ ಸುವ್ವಿ 17 ವರ್ತಿಯ ಸಂಸಾರ ವ್ಯವಹಾರಕ್ಕೀಗ ಸ- ರ್ವತ್ರ ಜೀವ ಭೇದವುಂಟೆಂಬುವಗೆ ಸುವ್ವಿ ಸ- ರ್ವತ್ರ ಜೀವ ಭೇದವುಂಟೆಂಬುವಗೆ ಭೇದ ಸತ್ಯವಾದರೈಕ್ಯ ಎತ್ತಿಹೋದು ಸುವ್ವಿ 18 ಅತ್ತೆ ಸೊಸೆಯರಿದ್ದಾಗ ಮನೆಯೊಳು ಮತ್ಸರವು ಕತ್ತೆನಾಯಿಗಳಂತೇಕೆ ಬೆರಸರು ಸುವ್ವಿ ಕತ್ತೆನಾಯಿಗಳಂತೇಕೆ ಬೆರಸರು ಅದರಿಂದ ಪ್ರತ್ಯೇಕ ಜೀವರ ಇರವು ಸುವ್ವಿ 19 ಮಿಥ್ಯಾ ಭೇದಾದರೆ ಅದು ಶುಕ್ತಿರೂಪದಂತೆ ತ- ನ್ನರ್ಥವ ತಾ ಕಾಣಲರಿಯನು ಸುವ್ವಿ ತ- ನ್ನರ್ಥವ ತಾ ಕಾಣಲರಿಯನು ಅದರಿಂದ ನಾ- ವೆತ್ತಿದ ದೂಷಣೆಗೆ ಉತ್ತರವಿಲ್ಲ ಸುವ್ವಿ 20 ಬೊಮ್ಮ ಮಿಥ್ಯವಲ್ಲವೋ ನಿನ್ನ ಮಿಥ್ಯ ಶಶಶೃಂಗ ಸತ್ಯವಲ್ಲ ಸುವ್ವಿ ಮಿಥ್ಯಶ ಶಶೃಂಗ ಸತ್ಯವಲ್ಲ ಶೃಂಗ್ಯೆರಡು ಜ- ಗತ್ತಿನೊಳು ಕೂಡವು ಕುಯುಕ್ತಿಯ ನಿನಗಾವ ಕಲಿಸಿದ ಸುವ್ವಿ 21 ಸತ್ತ ಪೆಣನುಂಟು ಸಾಯದ ವಸ್ತುಂಟು ಸತ್ತು ಸಾಯದ ಮತ್ರ್ಯರಿಲ್ಲ ಸುವ್ವಿ ಸತ್ತು ಸಾಯದ ಮತ್ರ್ಯರಿಲ್ಲ ಮತ್ರ್ಯನಾಗಿ ನಿನ್ನ [ಮಿಥ್ಯಾವಾದ]ವೆಂತು ನಿತ್ಯವಹುದು ಸುವ್ವಿ 22 ಸತ್ಯವೆಂದರುಂಟು ಮಿಥ್ಯವೆಂದರಿಲ್ಲ ಎಂ- ಬರ್ಥ ತಾ ಕೂಡಲರಿಯದು ಸುವ್ವಿ ಎಂ- ಬರ್ಥ ತಾ ಕೂಡಲರಿಯದು ಅದರಿಂದ ಅರ್ಥವಪೇಳೆ ಮಿಥ್ಯಕೆ ನಾಮಾಂತರ ಸುವ್ವಿ23 ಭರ್ತೃಯಿಲ್ಲದವಳ ಮುತ್ತೈದೆಯೆಂಬಂತೆ ನಿನ್ನ ಮಿಥ್ಯಜಗಕಿಟ್ಟ ಸತ್ಯನಾಮ ಸುವ್ವಿ ಮಿಥ್ಯಜಗಕಿಟ್ಟ ಸತ್ಯನಾಮ ನಿನ್ನ ಯುಕ್ತಿಶೂನ್ಯನೆಂದು ಸುತ್ತ ನಗುತಿಪ್ಪುದು ಸುವ್ವಿ 24 ಇಲ್ಲ ಜಗವೆಂಬುದನು ಈಗ ಕಂಡದ ಕಾರಣ ಇಲ್ಲವಾತನ ವಾದಕ್ಕೆ ಪೊಗಳಲರಿಯದು ಸುವ್ವಿ ಇಲ್ಲವಾತನ ವಾದಕ್ಕೆ ಪೊಗಳಲರಿಯದ ಹೊಲೆಯನ [ಎಲ್ಲರರಿಯದಿದ್ದರೆ] ಹೊಲೆಜಾತಿ ಹೋಕ ಸುವ್ವಿ 25 ಗಿರಿಯ ಪಿರಿಯ ಗುಹೆಯೊಳು ದಳ್ಳುರಿಯ ಬೇಗೆಗೆ ಬೆಂದ ಕರಿಯನರಿಯದ ಕಾರಣ ಮರನ ಮುರಿವುದೆ ಸುವ್ವಿ ಕರಿಯನರಿಯದ ಕಾರಣ ಮರನ ಮುರಿವುದೆ ವಾದಿಯೀ ಪರಿಯಲಿ ನಿನ್ನ ಮಿಥ್ಯದಿ ಕಾರ್ಯವಾಗದು ಸುವ್ವಿ 26 ಹಳೆಯ ಮಲವೆಲ್ಲವು ಮಲವೆ ಅಲ್ಲದೆ ಮತ್ತೆ ಜಲಜಾಕ್ಷಿಯರ ಸಂಗಕ್ಕೆ ಪರಿಮಳವೀವುದೆ ಸುವ್ವಿ ಜಲಜಾಕ್ಷಿ ್ಷಯರ ಸಂಗಕ್ಕೆ ಪರಿಮಳವೀವುದೆ ಶೂಲದಿ ಸತ್ತ[ಪೆಣನು] ಸುಳಿವುತಿಪ್ಪುದೆ ಸುವ್ವಿ 27 ನಾಸ್ತಿಯೆಂಬ ವಸ್ತುವ ನಾಸ್ತಿಯೆಂದರಿಯದೆ ಆಸ್ತಿಯೆಂದು ಕಂಡರೆ ಅತಿಮೂರ್ಖ ಸುವ್ವಿ ಆಸ್ತಿಯೆಂದು ಕಂಡರೆ ಅತಿಮೂರ್ಖ ಅಕಟಕಟ ಜ- ಗತ್ತಿನ ಮಹಂತರ ಉನ್ಮತ್ತರ ಮಾಡಿದ ಸುವ್ವಿ 28 ಏಕಾಕಿ ನ ರಮತೆಯೆಂಬ ವೇದವಾಕ್ಯ ವಿ- ವೇಕಿಗಳೆಲ್ಲ ಬಲ್ಲರು ಸುವ್ವಿ ವಿ- ವೇಕಿಗಳೆಲ್ಲ ಬಲ್ಲರು ಅದರಿಂದ ನಿನ್ನ ಮುಕ್ತಿ ಏಕಾಕಿಯಾದರೆ ಶೋಕಕ್ಕೊಳಗಾದೆ ಸುವ್ವಿ 29 ಲೋಕದೊಳು ಹಾಳೂರ ಹಂದಿಯ ಬೇಸರದೆ ನೋಡೊ ನಿ- ನ್ನ ಕೈವಲ್ಯದ ಘಸಣೆ ಸಾಕು ಸಾಕು ಸುವ್ವಿ ನಿ- ನ್ನ ಕೈವಲ್ಯದ ಘಸಣೆ ಸಾಕು ಸಾಕು ನಮ್ಮ ಶ್ರೀ ವೈಕುಂಠದ ವಾಸನೆ ಲೇಸು ಸುವ್ವಿ 30 ಅಲ್ಲಿ ಸಹಬ್ರಹ್ಮಣಾ ಸರ್ವಕ ಮಂಗಳೆಂಬಾರಂತೆ ಅಲ್ಲಿ ಸರ್ವೇನಂದತಿ ಎಂಬ ಶ್ರುತಿಯು ಸುವ್ವಿ ಅಲ್ಲಿ ಸರ್ವೇನಂದತಿ ಎಂಬ ಶ್ರುತಿಯು ನೀ ಕೇಳು ಎಲ್ಲ ಮತ್ರ್ಯರಲ್ಲಿ ಹರಿಯನುವ್ರತರಂತೆ ಸುವ್ವಿ 31 ಅಲ್ಲಿ ನರ ನಾರಿಯರು ಚಿನುಮಯ ಚೆಲುವರಂತೆ ಅಲ್ಲಿ ಚತುರ್ಬಾಹುಗಳಾಗಿಪ್ಪರಂತೆ ಸುವ್ವಿ ಅಲ್ಲಿ ಚತುರ್ಬಾಹುಗಳಾಗಿಪ್ಪರಂತೆ ಅವರ ಶ್ರೀ- ವಲ್ಲಭ ಲಾಲಿಸಿ ಪಾಲಿಸುವನಚಿಂತೆ ಸುವ್ವಿ 32 ನಗರ ಕೃಷ್ಣಗೆ ಘನೋದಕದ ಮೇಲೆ ಮಿಂಚುತಿಪ್ಪುದು ಸುವ್ವಿ ಘನೋದಕದ ಮೇಲೆ ಮಿಂಚುತಿಪ್ಪುದು ಅಲ್ಲಿ ಮನೆ ಮನೆಯಲಿ ಮುಕ್ತರ ಸಂದಣಿ ಸುವ್ವಿ34 ಇಂತು ಹಯವದನ ನಿಶ್ಚಿಂತ ಜಗತ್ಕಾಂತ ಸಂತರನು ಸದಾ ಸಲಹುವ ಸುವ್ವಿ ಸಂತರನು ಸದಾ ಸಲಹುವ ಮಾರಾಂತರ ಕೃ- ತಾಂತನ ಬಳಿಗೆ ಕಳುಹುವ ಸುವ್ವಿ 35
--------------
ವಾದಿರಾಜ
ಸೂರ್ಯಾಡುವ ಬನ್ನಿ ಹರಿಯ ನಾಮಾಮೃತವ ಪೂರ್ಣ ಧ್ರುವ ಸುರಿ ಸುರಿದು ಸಾರಾಯ ತರುತರುವಾಯ ಸೇವಿಸಿ ಥರಥರಲಿಡುವ ಬನ್ನಿ ಸುವಾಡವ ಕೊಂಡು 1 ಸಾರ್ಥಕ ಮಾಡುವದಿದೆ ಗುರ್ತಕ ಬಂದಿಹ ಜನಮ ತಾ ಕರ್ತು ಸದ್ಗುರು ಮಹಿಮೆ ಪ್ರಾರ್ಥಿಸಿ ಪರಿಪೂರ್ಣ 2 ಸವಿಸವಿ ಮಾಡಿಕೊಂಡು ಸೇವಿಸಿ ಮಹಿಪತಿ ನೋಡಿ ಪಾದ ನಿಜಗೂಡಿ ಭವಪಾಶೀಡ್ಯಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸೇರಿದೆ ನಿನ್ನ ವೆಂಕಟರನ್ನ ಪಾಲಿಸು ಎನ್ನ ಅ- | ಪಾರ ಜನುಮಕ್ಕೆ ನೀನೆ ದೈವವೆಂದು ಪ ಶೂನ್ಯಜ್ಞನು ನಾನು ಅನ್ಯಾಥಾ ಗತಿ ಅರಿಯೆ | ಅನ್ಯರಲ್ಲಿಗೆ ಕೊಡದೆ ಧನ್ಯನ ಮಾಡೊ ಬಿಡದೆ 1 ಕಲ್ಪತರುವೆ ಎಂದು ವಪ್ಪದಿಂದಲಿ ಬಂದೆ | ಆಲ್ಪರಿಯದಂತೆ ನಾಗತಲ್ಪನೆ ಫಲವೀಯೋ 2 ವರುಷಾವರುಷ ಹೀಗೆ ದರುಶನಕೊಡು ಎನಗೆ | ಹರುಷವಾಗಲಿ ಪರಮಪುರುಷ ವಿಜಯವಿಠ್ಠಲಾ 3
--------------
ವಿಜಯದಾಸ
ಸ್ಮರಿಸು ಮನವೆ ಸ್ಮರಿಸು ಮನವೆ ಹರಿಯ ಚರಣ ಕಮಲವ ಪೂರ್ಣ ಶರಣ ಜನರನಾ ಹೊರೆದು ರಕ್ಷಿಸುವ ಉರಗಶಯನನಾ 1 ಇರುಳ ಹಗಲ ಸೆರಗವಿಡಿದು ಅರಿತು ಸ್ಮರಿಸು ಬೆರಿಸಿ ಚಿತ್ತವ ಕರೆವ ಕಾಮಧೇನುವಾಗಿ ಹೊರೆವ ಕಪ್ಪುತರುವಿನ 2 ಬಿಡದೆ ಸ್ಮರಿಸು ಗೂಡಿನೊಳಗೆ ಪಾದ ಪೂರ್ಣ ಕುಡುವ ಭಕ್ತಿ ಮುಕ್ತಿದಾತ ಮಹಿಪತಿಯ ಒಡಿಯನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ನೀ ದಯಾಳುವಹುದೋ ವರಭಕ್ತೋದ್ಧಾರಕೃಷ್ಣ ಪ ಪ್ರೇಮಾಸ್ಪದವಾದ ಕೊಳಲಗಾನದಿ ಗೋಪಿಯರಿಗೊಲಿದ ಅ.ಪ ಸುರತರುವಿನ ಬಳಿಗೈದು ಬರಿಯ ಕೈಲಿಹೋಗುವರೆ ಹರಿಯ ಬೆರೆದು ಭೋಗಿಪಂತೆ ವರಿಸುಜಾಜಿಕೇಶವ 1
--------------
ಶಾಮಶರ್ಮರು
ಹನುಮಂತ ಬಲವಂತ ಅತಿ ದಯವಂತಾ | ಘನವಂತ ಕೀರ್ತಿವಂತ ಅತಿ ಜಯವಂತಾ || ಅನುದಿನದಲಿ ನಿನ್ನ ನೆನೆಸುವೆ ಎನ್ನ ಮನದಾಸೆ | ಯ ನೀಯೋ ದನುಜ ಕೃತಾಂತಾ ಪ ಪಾವಮಾನಿ ಸತತ ಪಾವನ್ನ ಚರಿತಾ | ಪಾವಕಾಂಬಕನುತಾ ಪ್ಲವಂಗನಾಥಾ || ದೇವ ಕರುಣಪಾಂಗಾ ಭಾವುಕತುಂಗಾ | ಗ್ರೀವಾ ಶತಶೃಂಗ ಗ್ರಾವವೆ ಭಂಗಾ || ಕಾವಾ ವರವೀವಾ ಭೋದೇವ ಸಂಭವಾ | ಸು | ಗ್ರೀವ ಸಹಾಯ ಸರ್ವ ದೇವನರಸಿ ಯತಿವರ ಹಾರಿದಾ | ಕೋವಿದಾ ಕಪಿವರ ದೇವಕಿ ತನುಜನಾ || ಮಾವನ ಮಾವನಾ | ಜೀವಕೆ ಮುನಿದನೆ | ಜೀವೇಶ ಮತವನ ಪಾವಕಾ ಜಯ ಜಯ 1 ಧರಣಿಜಾತಿಗೆ ಭದ್ರಕರವಾದ ಮುದ್ರಾದರದಿಂದ ಇತ್ತ ನಿದ್ರಾ | ಗರಳ ದುರುಳರ ವರವದ್ದಾ | ನೆರದಲ್ಲಿ ಶಲ್ಯ ಎದುರ ಬರಲಾಗಿ ಗೆದ್ದಾ | ಮರುತಾ ಸುಖ ಗುರುವೆ ಸುರತರುವೆ | ಫಲ | ನಿರ್ಜರ ಗಣದಲ್ಲಿ ಇಹ | ಪರದಲಿ ದೇವ | ಶರಧೀ ಬಾಗಿದ ಧೀರಾ | ಸೂನು ಆವಾಸ ಯೋಗಕೆ ಸಂ | ಸುರನದಿ ದಾಟಿದಾ ಪರಮಹಂಸ 2 ಕರಡಿ ವಾನರಬಲಾ ನೆರಹಿ ಮಹಾ ಪ್ರಬಲ | ಶಿರ ಹತ್ತುವುಳ್ಳವನ ಕುಲ ವರಿಸಿದಾ ಸುಬಲಾ | ಕುರುಪತಿ ನಿಜ ತಮ್ಮ ಬರಲವನ ಹಮ್ಮು | ಬೊಮ್ಮ ಪೊರೆವನೆ ನಮ್ಮ | ಮರುತಾ ಸುಖ ಭರಿತಾ ಸಂಹರಗೈಸುವ | ಸಂ | ಕರ ಗರ್ವಹರ ಸರಯು ತೀರದಲ್ಲಿದ್ದಾ | ಪುರದಲ್ಲಿ ಮೆರದನೆ | ಕರ ಕಮಲೋದ್ಭವ | ವರ ವೃಕೋದರನೆ ವಿಜಯವಿಠ್ಠಲನ |ಶರಣರ ಪಾಲಾ ಬದರಿವಾಸಾ ಯಂತ್ರೇಶಾ 3
--------------
ವಿಜಯದಾಸ
ಹರತನ್ನ ಕರದಲಿ ಪ್ರಾಣಲಿಂಗವನು ಧರಿಸಿಪ್ಪನೆಂಬುದ ಕೇಳಿ ರಾವಣನು ತರುವೆನೆನುತ ಪೋಗಿ ಭಜಿಸೆ ಶಂಕರನ ಕರುಣಿಸಲಾತನ ಮನದಭೀಷ್ಟವನು ದುರುಳ ಖಳತಾ ಕೊಂಡು ಲಿಂಗವ ಪುರಕೆ ಗಮಿಸುವ ವ್ಯಾಳ್ಯದಲಿ ವಿಧಿ ಸುರಪ ಮುಖ್ಯ ಅಮರರು ನಿಮ್ಮಯ ಸ್ಮರಿಸೆ ಮೆಚ್ಚಿದ ಪಾರ ಮಹಿಮನೆ ಮೊರೆ ಹೊಕ್ಕೆ ನಿಮ್ಮ ಪಾದವನು ವಿಘ್ನೇಶ 1 ಕರುಣಿಸೋ ಎನ್ನ ವಾಂಛಿತವ ಸರ್ವೇಶ ಪರಮ ಪಾವನ ವೇಷ ಮುನಿ ಜನರ ಪೋಷಾ ನಿರುತ ಭಕ್ತ ವಿಲಾಸ ನಿರೂಪ ಮಹೇಶ ಹರಿ ಮುಂತಾದವರೆಲ್ಲ ನುತಿ ಸುತ್ತಲಿಂದು ಕರಿವಕ್ತ್ರ ನೀ ಕೇಳು ಪರಮೇಶನಂದು ಕರದ ಲಿಂಗವ ನಿತ್ತನಾ ದಶಶಿರಗೆ ವರ ದೈವ ದ್ರೋಹಿ ರಕ್ಕಸನಾತನಿಂಗೆ ವರ ಮಹಾಲಿಂಗವದು ಸೇರಲು ತಿರುಗಿಡುವಯತ್ನವನು ಪೇಳಿಯೋ ಪೊರೆಯ ಬೇಕೆನಲ ಭಯನಿತ್ತ ನಾ ಮೊರೆಹೊಕ್ಕೆ 2 ಇವಗೆ ಚಕ್ರವನಾಗಹರಿ ಪಿಡಿದಿರಲು ಧನುಜೇಶ ಸಂಧ್ಯಾವಂದನೆಗೆ ಯೋಚಿಸಲು ಘನ ಮಹಿಮನೆ ನೀನು ವಟುರೂಪಿನಿಂದ ಮಣಗುತ್ತಿರಲು ಕಂಡು ಖಳ ಕರದಿಂದ ಅಣುಗನಿಮ್ಮಯ ಮಹಿಮೆಯರಿಯದೆ ಪೇಳೆ ವಿನಯದಿಂ ಲಿಂಗವನು ಖಳಬರುವ ತನಕ ಕರದಲಿ ಪಿಡಿದಂತಹ ಪರಮ ಮಹಿಮನೆ 3
--------------
ಕವಿ ಪರಮದೇವದಾಸರು
ಹರಿ ನಿನ್ನ ರೋಮ ಕೂಪದಲಿ ಜೀವಿಪಸರಸಿಜ ಭವಾಂಡ ಕೋಟಿಯಲಿ ಪ ತುರುಗಿಪ್ಪ ಬ್ರಹ್ಮರುದ್ರಾದಿ ಜೀವರುಗಳುಹರಿ ನಿನ್ನ ಮಹಿಮೆಯ ಪೇರ್ಮೆಯ ಬಲ್ಲರೆ ಅ.ಪ. ಅತ್ತಿಯ ಮರದಿಂದುದುರುವ ಫಲಂಗಳಮೊತ್ತದಲಿರುತಿಪ್ಪ ಮಶಕಂಗಳುಕತ್ತೆಯ ಬಳಗಗಳೆಲ್ಲವು ಕೂಡಿಕೊಂಡುಅತ್ತಿಯ ತರುವಿನಾದ್ಯಂತವ ಬಲ್ಲವÉ 1 ಐವತ್ತು ಕೋಟಿ ಯೋಜನ ವಿಸ್ತರವಾದಭೂವಲಯದ ತಮ್ಮ ಗೂಡಿನಲಿಆವಾಸವಾಗಿಪ್ಪ ಕ್ಷುದ್ರ ಪಿಪೀಲಿಕಜೀವರು ಧರಣಿಯ ಮೇರೆಯ ಬಲ್ಲರೆ 2 ನೊರಜು ಮೊದಲಾಗಿ ಗರುಡ ಪರಿಯಂತಪರಿಪರಿ ಜಾತಿಯ ಪಕ್ಷಿಗಳು ತೆರದಲಿ ಹಾರುವರಲ್ಲದೆ ಗಗನದ ಪರಿಣಾಮವೆಂತೆಂದು ಬಲ್ಲವೆ ಶ್ರೀ ಕೃಷ್ಣ3
--------------
ವ್ಯಾಸರಾಯರು
ಹರಿಪಾದ ತೀರ್ಥವನು ಕರದಿ ಪಿಡಿದವರೆಲ್ಲ ತಿರುನಾಮದವರೆನಲು ನಂಬಬಹುದೇ ಪ ಪರವಾಸುದೇವನನು ಮರೆತು ಸತಿಸುತರ ವರಾಭರಣವೇ ಹಿರಿದೆಂಬ ನರರಿಲ್ಲವೇ ಅ.ಪ ಹರಿನಿವೇದನಕಾಗಿ ಕರದಿ ಫಲಪುಷ್ಪಗಳ ತರುವವರು ದಕ್ಷಿಣೆಯ ಇರಿಸಿಹರೋ ಎಂದು ಪರಿಪರಿಯ ದೃಷ್ಟಿಯಲಿ ಪರಿಕಿಸುತ ಅಲ್ಲವೆಂ ದರಿತಾಗ ಕೋಪ ನಿಷ್ಠುರ ಗೈಯುವರು 1 ಈಶಾಯನಮಃ ಓಂ ಶ್ರೀಶಾಯ ನಮಃ ಪ ರೇಶಾಯ ನಮಃ ಎಂಬುದಕೆ ಬದಲು ಆಶೋತ್ತರವನಾಂತು ಕ್ಲೇಶಪೂರಿತರಾಗಿ ನಾಶವಾಗಲಿ ಕುಡದಜನರೆಂಬರಕಟಾ 2 ಮಾನವೋತ್ತಮ ಮಾತ್ರ ತಿರುನಾಮಧಾರಿ ಜ್ಞಾನಿ ಇಂಥವನಿಂದ ತೀರ್ಥವನು ಪಡೆದವರು ಶ್ರೀನಾಥ ಮಾಂಗಿರಿಯ ಭಕ್ತರೆನಿಸುವರು3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹರಿಪಾದಕಮಲಕ್ಕೆ ಮರೆಹೊಕ್ಕ ಬಳಿಕ ಮರಮರ ಮರುಗುವ ಪರಿಯು ಇನ್ನ್ಯಾಕೋ ಪ ಪರಮಪಾವನ ತನ್ನ ಚರಣದಾಸರ ಸ್ಥಿತಿ ಅರಿಯನೆನೆನ್ನುತ ಸ್ಥಿರವಾಗಿ ನಂಬಿ ಅ.ಪ ಕಂತುಪಿತನಧ್ಯಾನ ಚಿಂತಾಮಣಿಯೆಂದು ಚಿಂತಾದೂರನ ನಿಜಸ್ಮರಣೆಯೇ ಪರಷೆಂದು ಸಂತರೊಡೆಯ ಶ್ರೀಕಾಂತನ ಭಜನೆಯೇ ಭ್ರಾಂತಿನೀಗಿಸುವಂಥ ಕಲ್ಪತರುವಿದೆಂದು 1 ಸೃಷ್ಟಿಕರ್ತನ ಕಥನ ಕಷ್ಟನಿವಾರಣ ಅಷ್ಟಮೂರುತಿ ಕೀರ್ತನಷ್ಟಸಂಪದ ಪೂರ್ಣ ಎಷ್ಟು ಮಾತ್ರಕೆ ತನ್ನ ಇಷ್ಟ ಭಕ್ತರಿಗಿಹ್ಯ ಕಷ್ಟ ನಿವಾರಿಸಿದೆ ಬಿಡನೆಂದು ಗಟ್ಟ್ಯಾಗಿ 2 ಧ್ಯಾನಮೂರುತಿ ಎನ್ನ ಮಾನಾಪಮಾನವು ನಿನ್ನಗೆ ಕೂಡಿತು ಎನಗಿನ್ನೇನೆಂದು ಅನ್ಯಾಯವನು ತ್ಯಜಿಸಿ ಧ್ಯಾನವ ಬಲಿಸಿ ಜಾನಕೀಶನೆ ಭಕ್ತಧೇನು ಶ್ರೀರಾಮೆಂದು 3
--------------
ರಾಮದಾಸರು
ಹರಿಹರರು ಸರಿಯೆಂಬ ಮರುಳು ಜನರುಹರಿಹರರ ಚರಿತೆಯನು ತಿಳಿದು ಭಜಿಸುವುದು ಪ ಸುರರು ಮುನಿಗಳು ಕೂಡಿ ಪರದೈವವಾರೆಂದುಅರಿಯಬೇಕೆಂದೆರಡು ವರಧನುಗಳಹರಿಹರರಿಗಿತ್ತು ಸಂಗರವ ಮಾಡಿಸಿ ನೋಡೆಮುರಹರನು ಪುರಹರನ ಗೆಲಿದುದರಿಯಾ 1 ಕರವ ಶಿರದ ಮ್ಯಾಲಿರಿಸಿ ಖಳ-ನುರುಹಿ ಹರನನು ಕಾಯಿದ ಕಥೆಯ ನೀನರಿಯಾ 2 ದೂರ್ವಾಸರೂಪ ಹರನಂಬರೀಷನ ಮುಂದೆಗರ್ವವನು ಮೆರೆಸಿ ಜಡೆಯನು ಕಿತ್ತಿಡೆಸರ್ವಲೋಕದೊಳವನ ಚಕ್ರನಿಲಲೀಯದಿರೆಉರ್ವೀಶನನು ಸಾರಿ ಉಳಿದನರಿಯಾ 3 ಹರನಂಶ ದ್ರೋಣಸುತನು ಪಾಂಡವಾ ಎಂದುಉರವಣಿಸಿ ನಾರಾಯಣಾಸ್ತ್ತ್ರವನು ಬಿಡಲು ಹರಿ ಬಂದು ಬೇಗ ತನ್ನಸ್ತ್ರವನು ತಾ ಸೆಳೆದುಶರಣಾಗತರ ಕಾಯಿದ ಕಥೆಯನರಿಯಾ 4 ನರನಾರಾಯಣರು ಬದರಿಕಾಶ್ರಮದಲಿರೆಹರನು ಹರಿಯೊಡನೆ ಕದನವನು ಮಾಡೆಹರಿ ಹರನ ಕಂಠವನು ಕರದಲಿ ಪಿಡಿದು ನೂಕೆಕೊರಳ ಕಪ್ಪಾದ ಕಥೆ ಕೇಳಿ ಅರಿಯಾ 5 ಹರಿ ಸುರರಿಗಮೃತವನು ಎರೆದ ರೂಪವನೊಮ್ಮೆಹರ ನೋಡುವೆನೆಂದು ಸಂಪ್ರಾರ್ಥಿಸೆಪರಮ ಮೋಹನ ರೂಪಲಾವಣ್ಯವನು ಕಂಡುಹರ ಮರಳುಗೊಂಡ ಕಥೆ ಕೇಳಿ ಅರಿಯಾ 6 ಹರಿಯ ಮೊಮ್ಮನ ಬಾಣಾಸುರನು ಸೆರೆವಿಡಿಯೆಗರುಡವಾಹನನಾಗಿ ಕೃಷ್ಣ ಬಂದುಹರನ ಧುರದಲಿ ಜಯಿಸಿ ಅವನ ಕಿಂಕರನ ಸಾ-ವಿರ ತೋಳುಗಳ ತರಿದ ಕಥೆಯ ನೀನರಿಯಾ 7 ಸುರತರುವ ಕಿತ್ತು ಹರಿ ಸುರಲೋಕದಿಂದ ಬರೆಹರನು ಹರಿಯೊಡನೆ ಕದನವನು ಮಾಡೆತರಹರಿಸಲಾರದೋಡಿದ ಕಥೆಯ ನೀನೊಮ್ಮೆಹಿರಿಯರ ಮುಖದಿ ಕೇಳಿ ನಂಬು ಹರಿಯಾ 8 ಹರಸುತನು ತಪದಿಂದ ಹರಿಯ ಚಕ್ರವ ಬೇಡೆಪರಮ ಹರುಷದಲಿ ಚಕ್ರವನೀಯಲುಭರದಿಂದ ಧರಿಸಲಾರದೆ ಚಕ್ರವನಂದುಹರನು ಭಂಗಿತನಾದನೆಂದರಿಯಲಾ 9 ರಾವಣಾಸುರ ಕುಂಭಕರ್ಣ ನರಕಾದಿಗಳುಶೈವತಪವನು ಮಾಡಿ ವರವ ಪಡೆಯೆಅವರುಗಳನು ವಿಷ್ಣು ನರರೂಪಿನಿಂದರಿದುದೇವರ್ಕಳನು ಕಾಯಿದ ಕಥೆಯ ನೀನರಿಯಾ 10 ಗಂಗಾಜನಕನÀ ಸನ್ಮಂಗಲ ಚರಿತ್ರ್ರೆಗಳಹಿಂಗದಲೆ ಕೇಳಿ ಸುಖಿಸುವ ಜನರಿಗೆಭಂಗವಿಲ್ಲದ ಪದವನಿತ್ತು ಸಲಹುವ ನಮ್ಮರಂಗವಿಠ್ಠಲರಾಯನ ನೆರೆ ನಂಬಿರೋ11
--------------
ಶ್ರೀಪಾದರಾಜರು