ಒಟ್ಟು 976 ಕಡೆಗಳಲ್ಲಿ , 96 ದಾಸರು , 772 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಿನಗಳನು ಕಳೆವ ಜನರೆ ಸುಜನರು ವನಜನಾಭನ ದಾಸರ ಸಮಾಗಮದಿಂದ ಪ. ಅರುಣೋದಯದಲೆದ್ದು ಆಚಮನ ಕೃತಿಯಿಂದ ಪರಿಶುದ್ಧರಾಗಿ ಇಹಪರಗಳಿಂದ ಎರಡುವಿಧ ಸುಖವೀವ ಗುರುಮಧ್ವಮುನಿವರನ ಪರಮಮತವಿಡಿದು ಹರಿಕಥಾಮೃತ ಸವಿದು 1 ಸ್ನಾನವನು ಮಾಡಿ ಸಂಕಲ್ಪಪೂರ್ವಕದಿ ಸಂ- ಧ್ಯಾನ ಗಾಯಿತ್ರಿ ಗುರು ಮಂತ್ರ ಜಪವು ಭಾನುನಾಮಕನಾದ ಪರಮಾತ್ಮನಂಘ್ರಿಯನು ಧ್ಯಾನವನು ಮಾಡಿ ಅಧ್ಯಯನ ಪಾಠಗಳಿಂದ 2 ವಾಸುದೇವ ಅಡಿಗಡಿಗೆ ನೆನೆದು ಪಾವಕಗೆ ಪ್ರಾತರಾಹುತಿಯನಿತ್ತು ಭಾವಜ್ಞರಲಿ ಸಕಲಪುರಾಣಗಳ ಕೇಳಿ ಹೂವು ಶ್ರೀತುಲಸಿವನಗಳ ಸೇವೆಯನು ಮಾಡಿ 3 ನದನದಿಗಳಲಿ ಸ್ನಾನವನು ಮಾಡಿ ಕಂಠÀದಲಿ ಪದುಮಾಕ್ಷಿ ಶ್ರೀತುಲಸಿ ಮಾಲೆಗಳನು ಮುದದಿಂದ ಧರಿಸಿ ಮಧ್ಯಾಹ್ನ ಕಾಲದಿ ಬ್ರಹ್ಮ ಯ- ಜ್ಞ ದೇವ ಋಷಿ ಪಿತೃಗಳ ತೃಪ್ತಿಯನು ಬಡಿಸಿ4 ಸಾವಧಾನದಿ ತಂತ್ರಸಾರೋಕ್ತ ವಿಧಿಯಿಂದ ದೇವಪೂಜೆಯ ಮಾಡಿ ದೇವೇಶಗೆ ನೈವೇದ್ಯಗಳನಿಟ್ಟು ನಿತ್ಯತೃಪ್ತಗೆ ವೈಶ್ವ- ದೇವ ಬಲಿಹರಣ ಅತಿಥಿ ಪೂಜೆಗಳಿಂದ 5 ಪರಮ ಹರುಷದಿಂದ ದೇವ ಪ್ರಸಾದವನು ವರ ಮಾತೃ ಪಿತೃ ಸೋದರರು ಸಹಿತ ಪರಮ ಸಖರ ಪಂಙÂ್ತ ಪಾವನರೊಡಗೂಡಿ ನರಹರೆ ಎನುತ ಭೋಜನ ಮಾಡಿ ಮೋದಿಸುತ 6 ಸಾಯಾಹ್ನದಲಿ ಸಂಧ್ಯಾನ ಗಾಯಿತ್ರಿ ಜಪ ಶ್ರೀಯರಸನಂಘ್ರಿ ಸೇವೆಯನು ಮಾಡಿ ವಾಯುಸಖನೊಳಗಾಹುತಿಯನಿತ್ತು ಲಕ್ಷ್ಮೀನಾ- ರಾಯಣನ ಗುಣಗಳನು ಪೊಗಳುತಲಿ 7 ತನುಮನವÀ ಶ್ರೀಹರಿಯಾಧೀನವ ಮಾಡಿ ಅನುಸರಿಸಿ ಭಾಗ್ಯಬಡತನ ಎಣಿಸದೆ ಮನವರಿತು ಹರಿಕೊಟ್ಟುದು ತನ್ನದಲ್ಲದೆ ಅಧಿಕ ಅಣುಮಾತ್ರ ಬಾರದೆಂದು ಅಲ್ಪ ಸಂತುಷ್ಟನಾಗಿ8 ಈ ವಿಧದಿ ಅನುದಿನವಾಚರಿಸಿ ರಾತ್ರಿಯಲ್ಲೊಂದು ಜಾವ ಜಾವಕೆ ಎದ್ದು ನೆರೆಹೊರೆಯು ಕೇಳ್ವಂತೆ ಪಾವನ ಚರಿತ್ರ ಹಯವದನನ ನೆನೆದು 9
--------------
ವಾದಿರಾಜ
ದುರಿತ ಗಜಕೇಸರಿಯೆ ತ್ರಿಲೋಕದ ದೊರೆಯೆ ನಿನಗಾರು ಸರಿಯೆ ಭಾಗ್ಯದ ಸಿರಿಯೆ | ಕರುಣವ ಮಾಡಿ ಪರಿಯಲಿ ಸಾರಂಗ | ಧರನೆ ಧರಣಿಧರ ವರ ಪರಿಯಂತಾ ಪ ಭೂಮಿಯೊಳಗೆ ಉತ್ತಮ ನೆಲಾ ನೀಡೆಂದು | ಹೇಮ ಮುನೀಶ್ವರ ಕಾಮಿಸಿ ಹರಿಪಾದ | ನೀ ನೇಮ ನಿತ್ಯದಲ್ಲಿ | ತಾ ಮನೋರಥನಾಗಿ || ಸಾಮಜವರದನ ನಾಮವ ನೆನೆಯಲು | ಹೇಮ ತೀರಥದೊಳು | ತಾ ಮನಗೊಂಬ ನಾಮನೆ ಪಡೆದು 1 ಮಂಗಳಾಂಗಿಯೇ ಬರಲು ರಂಗರಾಯನು ಸಾ | ರಂಗಶರವೇಪಿಡಿದುಶೃಂಗಾರಮಯದಿಂದ | ಬಂಗಾರ ರಥ ತು | ರಂಗಗಳ ಸಮೇತ ಭುಜಂಗಶಯನನಾಗಿ ಕಂಗೊಳಿಸುತ್ತಲೂ | ತುಂಗ ಮಹಿಮ ವಿಹಂಗಾದಿಗಳಿಂದ ಕೈಕೊಳ್ಳುತ್ತಿಂಗಿತದಲಿ ನೀಲಾಂಗ ನಿರ್ದೋಷಾ 2 ಜಯ ಕುಂಭಘೋಣನಿಲಯಾನೆನೆಸುವ ಉ | ಭಯ ಕಾವೇರಿ ನಿವಾಸಾ | ಭಯ ಕೃದ್ಭಯನಾಶ | ತ್ರಯ ಗುಣವಿರಹಿತಾ ವಿಯದ್ಗಂಗಾನದಿ ತಾತಾ | ಜಯ ಜಯವೆನುತಿರೆ ಪ್ರಿಯನಾಗಿ ಕೇಳುತಾ | ನಯನ ಮೀತಾರ ಪಾಲಯಪಾವನದೇವಾ | ದಯಮುಖ ಹರಾ ವಿಜಯವಿಠ್ಠಲಪರಾ 3
--------------
ವಿಜಯದಾಸ
ದುರಿತ ತಿಮಿರಕೆ ಸೂರ್ಯ ಶರಣ ಜನ ಭಾಗ್ಯೋದಯ ಪ ನರಹರಿಯ ದಾಸಾರ್ಯ ಮರುತಮತ ಪರಿಚರ್ಯ ಶಿರಬಾಗಿ ಮುಗಿವೆ ಕೈಯ್ಯ ಅ.ಪ. ಘೋರತರ ಸಂಸಾರ ಸಾರತರವೆಂದರಿದು ಪಾರಮಾರ್ಥಿಕವ ತೊರೆದು ಭೂರಿ ನರಕದಿ ಬೆಂದು ಗಾರಾಗಿ ಪೋಪರಂದು ನಾರದರೆ ನೀವ್ ಬಂದು ನಾರಾಯಣಾ ಎಂದು ಚೀರಿದಾ ಧ್ವನಿಗೆ ಅಂದು ಘೋರ ಪಾತಕವೆಲ್ಲ ದೂರಾಗಿ ಸ್ವರ್ಗವನು ಸೇರಿ ಸುಖಿಸಿದರು ಎಂದು 1 ಸರಸಿಜಾಕ್ಷನ ಸ್ತುತಿಸಿ ವರ ಪಡೆದು ಧರಣಿಯೊಳು ಮೆರೆವ ಕನ್ನಡ ದೇಶದಿ ಸಿರಿಯಿಂದಲೊಪ್ಪುತಿಹ ಪುರಂದರಗಡದೊಳಗೆ ಇರುವ ಭೂಸುರ ವಂಶದಿ ವರಗರ್ಭದಲಿ ಜನಿಸಿದಿ ನರರಂತೆ ಚರಿಸುತ್ತ ಲೌಕಿಕೆ ಮರುಳಾಗಿ ಸರ್ವಭಾಗ್ಯವ ಗಳಿಸಿದಿ 2 ಚಿನಿವಾರ ವ್ಯಾಪಾರದನುವರಿತು ನವಕೋಟಿ ಧನಕಧಿಪನೆಂದೆನಿಸುತ ಧನಕನಕ ವಸ್ತು ವಾಹನನಿಚಯ ಸಂಗ್ರಹದಿ ತನುಮನಂಗಳ ಶ್ರಮಿಸುತ ಕನಸಿಲಾದರು ದಾನಧರ್ಮಗಳ ನೆನೆಯದೆಲೆ ದಿನಮಾನಗಳ ಕಳೆಯುತ ಇನಿತು ಮಾಯೆಗೆ ಸಿಲುಕಿ ತನ್ನ ಮರೆದಿರಲಾಗ ಘನ ಮಹಿಮ ಬಂದ ನಗುತ 3 ಅಂದು ತಾನೊಲಿದಿತ್ತ ಚೆಂದದಾ ವರಗಳನು ಇಂದು ಸಲಿಸುವೆನು ಎಂದು ಬಂದು ಬ್ರಾಹ್ಮಣ ರೂಪದಿಂದ ನಿಮ್ಮನು ಹರಿಸಿ ಕಂದನಿಗೆ ಮುಂಜಿಯೆಂದು ಮಂದ ಭಾಗ್ಯನ ತೆರದಿ ಪೊಂದಿ ಯಾಚಿಸಲು ನಿಂದು ಒಂದು ದುಡ್ಡನ್ನು ಲೋಭದಿಂ ದೆಸೆಯಲದನುಳಿದು ಸಿಂಧು 4 ಅತ್ತಣಿಂ ಶ್ರೀನಿಧಿಯು ಮತ್ತೆ ಮನೆಯೊಳು ನಿಮ್ಮ ಪತ್ನಿಯನು ಯಾಚಿಸಿದನು ಉತ್ತಮ ಪತಿವ್ರತೆಯೆ ಪುತ್ರನುಪನಯವೆಂದು ಇತ್ತ ಬಂದಿಹೆನೆಂದನು ಚಿತ್ತದೊಲ್ಲಭನ ಸಮ್ಮತಿಯಿಲ್ಲದೆಲೆ ನಾ ನಿತ್ತು ಕಳುಹೆನು ಏನನೂ ಅತ್ತ ಗಮಿಸಿರಿ ಎನಲು ಹೆತ್ತತಾಯ್ ನಿನಗಿತ್ತ ನತ್ತನ್ನು ಕೊಡು ಎಂದನು 5 ನಾಗಾರಿವಾಹನನ ನುಡಿಯು ಮನಸಿಗೆ ಹಿಡಿಯೆ ಮೂಗುತಿಯ ತೆಗೆದಿತ್ತಳು ಭಾಗ್ಯವಂತಳೆ ನಿನಗೆ ಲೇಸಾಗಲೆಂದ್ಹರಿಸಿ ಸಾಗಿ ಬಂದನು ಇತ್ತಲು ಹೋಗು ಹೋಗೆಲೊ ಮತ್ತೆ ನೀನೇಕೆ ಬಂದೆನಲು ಮೂಗುತಿಯ ಕ್ರಯಕೆ ಕೊಡಲು ಈಗ ಬಂದಿಹೆನೆಂದು ನಿಮಗದನು ತೋರಲು ಹೇಗೆ ಬಂದಿತು ಎನ್ನಲು 6 ಮನಕೆ ಸಂಶಯ ಮೂಡಿ ಚಿಂತಿಸುತಿರೆ ನೋಡಿ ವನಜನಾಭನು ಪೇಳ್ದನು ನನಗೀಗ ಧನಬೇಡ ನಿನ್ನಲ್ಲಿಯೇ ಇರಲಿ ಅನುವರಿತು ಬಹೆನೆಂದನು ಸಂತೈಸಿ ಪೊರಮಡಿಸಿ ನಿನಗೆ ನಾಮವನಿಡುವೆನು ಎನುತ ಹರುಷದಿ ನಗುತ ಮನೆಗೆ ಬರುತಲೆ ಕಂಡೆ ವನಿತೆಯಾ ಬರಿ ಮೂಗನು 7 ಮುತ್ತಿನಾ ಮೂಗುತಿಯು ಎತ್ತ ಹೋಯಿತು ಎನಲು ಮುತ್ತೈದೆ ಮನದಿ ನೊಂದು ಮತ್ತೆ ಮುರಿಯಿತು ಎಂದು ತತ್ತರಿಸುತಿರೆ ಕಂಡು ಇತ್ತ ತಾರೆನಲು ನಿಂದು ವಿಪ್ರ ಮತ್ತೇನು ಮಾಡುವರೊ ಕತ್ತಲೆಯು ಮುತ್ತಿ ತಿಂದು ಭಕ್ತವತ್ಸಲ ನಿಂಗೆ ತೆತ್ತರೀತನುವನ್ನು ಕುತ್ತು ಪಾರಾಹುದೆಂದು 8 ತರುವೆನೀಗಲೆ ಎಂದು ತೆರಳಿ ವಿಷವನೆ ಅರೆದು ಕರದಿ ಬಟ್ಟಲನು ಹಿಡಿದು ಹರಣದಾಸೆಯ ತೊರೆದು ಸಿರಿವರನ ಪದನೆನೆದು ಕುಡಿಯುವನಿತರೊಳು ತಿಳಿದು ಕರುಣದಿಂ ಮೂಗುತಿಯ ಗರಳದಲು ಕೆಡಹಲಾ ಮಣಿ ಹರುಷದಳೆದು ಪರಮ ಸಂಭ್ರಮದಿಂದ ಕೊಡಲದನು ನೀವ್ ಕೊಂಡು ಭರದಿ ಅಂಗಡಿಗೆ ಬಂದು 9 ಬೀಗ ಮುದ್ರೆಯ ತೆಗೆದು ನೋಡೆ ಭೂಸುರನಿತ್ತ ಮೂಗುತಿಯು ಕಾಣದಿರಲು ಹೇಗೆ ಹೋಯಿತು ಎಂದು ಮನದೊಳಚ್ಚರಿಗೊಂಡು ಬೇಗನೆ ಮನೆಗೆ ಬರಲು ಹೇಗೆಂದು ತಿಳಿಸದಿರಲು ನೀಗುವೆನು ತನುವನೆಂದು ಬೆದರಿಸಲು ಸಾಧ್ವಿಯಾ ಬಾಗಿ ವಂದಿಸಿ ನುಡಿದಳು 10 ವೃದ್ಧ ಬ್ರಾಹ್ಮಣನಾಗಿ ಹೆದ್ದೈವನೇ ಬಂದು ಪೊದ್ದಿಯಾಚಿಸಲು ಜರಿದೆ ಲುಬ್ಧನಾಗತಿಶಯದಿ ಬದ್ಧನಾದೆನು ದ್ರವ್ಯ ವೃದ್ಧಿಗೋಸುಗವೆ ಬರಿದೆ ಇದ್ದುದಕೆ ಫಲವೇನು ಸದ್ಧರ್ಮದಲಿ ಕೊಡದೆ ಉದ್ಧಾರವಿಲ್ಲೆಂದು ತಿಳಿದೆ ಶುದ್ಧ ಭಾವದಿ ಹರಿಯ ಪದ್ಮಪಾದವ ನೆನೆದು ಹೆದ್ದಾರಿ ಹಿಡಿದು ನಡೆದೆ 11 ಶಿಷ್ಟ ಬ್ರಾಹ್ಮಣರು ನೆಂಟರಿಷ್ಟ ಮಿತ್ರರಿಗೆ ವಿ- ಶಿಷ್ಟವನು ದಾನಗೈದು ನಿಷ್ಠೆಯಿಂ ಮಡದಿ ಮಕ್ಕಳನ್ನೊಡಗೊಂಡು ವಿಠ್ಠಲನ ಪುರಕೆ ನಡೆದು ಕಷ್ಟ ನಿಷ್ಠುರ ಸಹಿಸಿ ಕೃಷ್ಣನಂಘ್ರಿಯ ಭಜಿಸಿ ಇಷ್ಟಾರ್ಥ ಸಿದ್ಧಿಗೈದು ನೆಟ್ಟನೇ ಹಂಪೆ ಪಟ್ಟಣದಿ ವ್ಯಾಸಮುನಿ ಶ್ರೇಷ್ಠರಿಂದುಪದೇಶ ಪಡೆದು 12 ಮಧ್ವಮತ ಸಿದ್ಧಾಂತ ಪದ್ಧತಿಯನುದ್ಧರಿಸಿ ಗದ್ಯಪದ್ಯಗಳಿಂದಲಿ ಮಧ್ವಪತಿ ಪದಪದ್ಮ ಹೃದ್ಯದೊಳು ನೆನೆನೆನೆದು ಮುದ್ದಾಗಿ ವರ್ಣಿಸುತಲಿ ಮದ್ದಳೆಯ ತಾಳ ವೀಣೆಗಳ ಗತಿಹಿಡಿದು ಶುದ್ಧರಾಗಗಳಿಂದಲಿ ಉದ್ಧವನ ಸಖನೊಲಿದು ತದ್ಧಿಮಿತ ಧಿಮಿಕೆಂದು ಪೊದ್ದಿ ಕುಣಿಯುವ ತೆರದಲಿ 13 ಈರೆರೆಡು ಲಕ್ಷಗಳ ಮೇಲೆ ಎಪ್ಪತ್ತೈದು ಸಾ- ವಿರ ಗ್ರಂಥ ರಚಿಸಿ ಈರೆರೆಡು ದಿಕ್ಕಿನಲಿ ಚರಿಸಿ ತೀರ್ಥಕ್ಷೇತ್ರ ಸಾರ ಮಹಿಮೆಗಳ ತುತಿಸಿ ಶೌರಿದಿನದಲಿ ಮಾಳ್ಪ ವ್ರತನೇಮ ಉಪವಾಸ ಪಾರಣೆಯ ವಿಧಿಯ ತಿಳಿಸಿ ತಾರತಮ್ಯವು ಪಂಚ ಭೇದಗಳು ಸ್ಥಿರವೆಂದು ಸಾರಿ ಡಂಗುರವ ಹೊಯಿಸಿ 14 ತರುಣಿ ಮಕ್ಕಳು ಶಿಷ್ಯ ಪರಿವಾರಗಳ ಸಹಿತ ಧರೆಯನೆಲ್ಲವ ತಿರುಗುತ ಕರದಿ ಕಿನ್ನರಿ ಧರಿಸಿ ಸ್ವರವೆತ್ತಿ ಪಾಡುತಿರೆ ಕೊರಳುಬ್ಬಿ ಶಿರ ಬಿಗಿಯುತ ಎರಡು ಕಂಗಳು ಧಾರೆ ಸುರಿಯೆ ಬಾಷ್ಪೋದಕವ ಹರಿ ಮಹಿಮೆ ಕೊಂಡಾಡುತ ತಿರಿ ತಂದ ಧನದಿಂದ ವಿಪ್ರರಿಗೆ ಮೃಷ್ಟಾನ್ನ ಹರುಷದಿಂದಲಿ ಉಣಿಸುತ 15 ಗುಪ್ತವಾಗಿರೆ ಕಂಡು ವ್ಯಕ್ತ ಮಾಡುವೆನೆಂದು ಶಕ್ತನಹ ದೇವ ಬಂದ ಓಗರ ಉಂಡ ಸುತನಾಗಿ ನೀರ ತಂದ ಯತಿಯ ಪಂಕ್ತಿಗೆ ಭಾಗಿರಥಿಯನ್ನು ತರಿಸಿದ ಕ್ಷಿತಿಪತಿಗೆ ದೃಢ ತೋರಿದ ಸತಿಯೆಂದ ಮಾತಿಗೆ ಅತುಳ ಭಾಗ್ಯವನಿತ್ತು ಪಥದಲ್ಲಿ ತಲೆಗಾಯಿದ 16
--------------
ಲಕ್ಷ್ಮೀನಾರಯಣರಾಯರು
ದುರಿತ ಪರಿಹರಿಸೋ ಭಾರಕನು ನೀನು ಪಾದ ಹೊಂದಿದವರಿಗೆಯಿನ್ನು ಪ ಮಾನವ ನಾನು ಮನ ಖಚಿತವಿಲ್ಲದ ಕಂದರಕೆ ಬಿದ್ದು ಬಹುಕಷ್ಟ ಪಡುತಾ ಸಂದೇಹವಾನು ಬಿಡದೆ ಸಂಶಯಿಸಿ ನಿನ್ನೊಮ್ಮೆ ಎಂದು ಕೊನಿಮದ ದೋಷದಿಂದ ಅದರಿಂದಾ 1 ಕಷ್ಟವನು ಪಡುವಾಗ ಕೃಷ್ಣ ನೀನೆ ಗತಿಯೆಂದು ಅಷ್ಟು ಮಾತ್ರ ಸುಖಬರಲು ಅರಿತು ನಿನ್ನ ನಿಷ್ಠರಾದವರನಾಸಂಖ್ಯ ಅರಿಯೆನು ಮಾಡ್ದ ದುಷ್ಟ ಬುದ್ಧಿಗಳಿಂದ ದುರುದ್ದೇಷದಿಂದಾ 2 ನೀನೆ ಸೂತ್ರಧಾರನಾಗಿರುವೆ ಸಕಲಕ್ಕೂ ನಾನೊಂದೂ ಅರಿಯದಜ್ಞಾನಿ ಹರಿಯೆ ಏನಾದರಾಗಲಿ ಇನ್ನು ಎನ್ನನು ಬಿಡದೆ ನೀ ದಯಮಾಡಿ ರಕ್ಷಿಸೋ ನಿಜ 'ಹೊನ್ನ ವಿಠ್ಠಲಾ 3
--------------
ಹೆನ್ನೆರಂಗದಾಸರು
ದುರಿತ ವಿನಾಶನಾ ದುರಿತ ಇಂದು ಪುರಂದರನ ಪೊಂದುತಲಿ ಅತಿ ಭಕುತಿಯಿಂದ ಸ್ಮರಿಸುವ ಜನರ ಉದ್ಧಾರ ಸಂದೇಹ ಸಲ್ಲದಿದಕೆ ಪ ದ್ವಾರಕಾಪುರದಲ್ಲಿ ಶ್ರೀರಮಣ ಸಭೆಯೊಳಗೆ ಚಾರು ಮಂಡಿತನಾಗಿ ಇರುತಿರಲು ಯದು ಪರಿ ವಾಲಗ ಗೋಪಿಕಾ ನಾರಿಯರ ಖ್ಯಾಲದಲ್ಲಿ ವಾರ ಕಾಂತೆಯರು ಮದವೇರಿ ನೃತ್ಯವ ಮಾಡೆ ಭೋರೆಂಬ ವಾದ್ಯವಿಳೆಯೊಳು ಮೊಳಗೆ ದೇವತತಿ ನಾರದನು ಧರೆಗಿಳಿದನು 1 ಬರುತಲೇ ವೈಕುಂಠಪುರದರಸಗೆರಗಿದನು ಕರಗಳನು ಮುಗಿದು ಕಿನ್ನರಿಯನ್ನು ತಾ ಧರಿಸಿ ಮೂವತ್ತೆರಡು ರಾಗಗಳಲಿದಿರುನಿಂದು ಎರಡು ಕಂಗಳಧಾರೆ ಸುರಿಯೆ ಪುಳುಕೋತ್ಸಹದಿ ಕೊರುಳುಟ್ಟಿ ತೊದಲುನುಡಿ ಮೈಸ್ಮರಣೆ ಹಾರೆ ಶ್ರೀ ಸುರರು ಶಿರವನೆ ತೂಗಲು2 ಅಚ್ಚುತನು ಪರಮ ಭಾಗವತನ್ನ ಭಕುತಿಗೆ ಮೆಚ್ಚಿದನು ಬೇಡುವುದು ವರವಧಿಕವೆಂದೆನಲು ಗೀರ್ವಾಣಮುನಿ ಎಚ್ಚರಿಕೆಯನು ಪೇಳುತ ಅಚ್ಚಗನ್ನಿಕೆ ರಮಣ ದೀನನನು ಮನ್ನಿಪುದು ನಿಚ್ಚಟೆನ್ನಯ ಕೂಡೆ ಬಿಡದೆ ಆಡೆನಲು ಕಲಿ- ಕೀರ್ತಿಗಳು ಬಿಚ್ಚಿ ತೋರಿಸುವೆನೆಂದ 3 ವರ ಪಡೆದು ನಾರದನು ಇರುತಿರಲು ತಾವಿತ್ತ ಬರಲು ಕಲಿ ದೊರೆತನವು ಕೆಲವು ಕಾಲಾಂತರಕೆ ಪುರಂದರವೆಂಬ ನಗರಿಯಲ್ಲಿ ಚರಿಸಿದರು ಕೆಲವು ದಿನ ಸಂಸಾರ ವೃತ್ತಿಯಲಿ ಜರಿದು ವೈರಾಗ್ಯವನು ತೊಟ್ಟು ದೃಢಮನಸಿನಲಿ ಕಿಷ್ಕಿಂಧಗಿರಿ-ತುಂಗ ಪಂಪದಲ್ಲಿ 4 ಅಂದು ಭಕುತಗೆ ಇತ್ತ ಭಾಷೆ ತಪ್ಪಲಿಬಾರ- ದೆಂದು ಇಂದಿರೆಪತಿಯು ದಯದಿಂದ ವಲಿದವರ ಕುಣಿಕುಣಿದು ನಂದವನೆ ತೋರಿಕೊಳು ಮಂದಭಾಗ್ಯರಿಗೆ ಈ ಪರಿಯ ಸೊಬಗುಂಟೆ ನಾ ಪರ ಬೊಮ್ಮ ಬಂದು ಸಿಲುಕಿದನೆಂಬುವುದೆ ಇದಕೆ ಪ್ರಾಮಾಣ್ಯವೆಂದು ತಿಳಿದು ಸುಜನರು 5 ವಾಸವನೆ ಮಾಡಿದರು ಪ್ರಹ್ಲಾದನವತಾರ ವ್ಯಾಸರಾಯರ ಬಳಿಯ ಮುದ್ರೆ ಗುರುಮಂತ್ರ ಉಪ ಪುರಂದರ ದಾಸರೆಂಬುವ ಪೆಸರಲಿ ದೇಶಗಳ ತಿರುಗಿ ಪುಣ್ಯಕ್ಷೇತ್ರಗಳ ಮೆಟ್ಟಿ ಲೇಸಾಗಿ ಅಲ್ಲಲ್ಲಿ ಮಹಿಮೆಗಳ ಪೇಳುತ ದು ವಸಿಸಿದರು ಧರ್ಮಬಿಡದೆ 6 ಉಪಾದಾನವ ಬೇಡಿ ವಿಪ್ರರಿಗೆ ಮೃಷ್ಟಾನ್ನ ಅಪರಿಮಿತವಾಗಿ ಉಣಿಸುತ್ತಿರಲು ಅವರಲ್ಲಿ ತಟಿನಿಗಳು ತಪಸು ಫಲವಾಯಿತೆಂದು ತಪನ ಕಾಲದಲೆದ್ದು ದಾಸರಾ ಸದನದಲಿ ಜಪಿಸಿ ತಮ ತಮ ತಕ್ಕ ತಾರತಮ್ಯಗಳಿಂದ ಸುಪಥವನು ಇಚ್ಛಿಸುವರು 7 ಅವರೆಂದ ವಚನಗಳೆÀಲ್ಲ ವೇದಾರ್ಥವಾಗಿ ಅವನಿಯೊಳು ತುಂಬಿದುವು ಬಂದರೇ ಗ್ರಹಿಸಿದರ ಭುವನ ನಿಧಿಯೊಳಗೆ ಮುಳುಗಿ ಪವನ ಮತವಿಡಿದು ಪರಿಪೂರ್ಣಮಾಚಾರದಲಿ ತವಕದಿಂದಲಿ ಹರಿಯ ಪಾದವನೆ ಪಡಕೊಂಡು ನವರೂಪಿನಲಿ ಇಪ್ಪರು 8 ಏನು ಇದು ಎಂತೆಂದು ದೂಷಿಸದಿರಿ ದಾಸರ ಸೂನು ಪೇಳಿದನು ಗುರು ವ್ಯಾಸಮುನಿ ರಾಯರಿಗೆ ಪುರಂದರ ದಾಸರೆಂಬಂಥ ಸೂನೃತದ ಸಿದ್ಧಾಂತದ ಧ್ಯಾನದಲಿ ತಿಳಿದು ಸುಜ್ಞಾನಿಗಳ ವದನಖದ ರೇಣಿನವನಾಗಿ ಬಿನ್ನೈಸಿದನು ಜ್ಞಾನಮಯ ಕಾಣುವಾ ಜನ ಲಾಲಿಸೆ 9
--------------
ವಿಜಯದಾಸ
ದೃಢತರದ ಭಕುತಿಯಾ ತವದ್ವಾರದಿಂದಲಿ ದೊರಕುವುದು ನಿಶ್ಚಯಾ ತರಿ ಎನ್ನ ಮಾಯಾ ಪರಿಹರಿಸೋ ಈ ಭವತಾಪವ ಪರಿಹರಿಸದಲೇ ಭರದಿ ಬಂದೆನು ಪರಮ ಪಾವನ ಸತ್ಯಜ್ಞಾನ ಶ್ರೀ ಗುರುವರನೇ ತವ ಚರಣಕೆರಗುವೆ ಪ ಕರ್ಮಗಳೊಂದು ನಾನರಿಯೇ ನಿನ್ನಯ ಪಾಲಿಗೆ ಇಂದು ಚರಣಗಳ ದ್ವಂದ್ವಕೆ ಮಾಡದಲೆ ಸಲಹೋ ಆನಂದತೀರ್ಥರ ಪೀಠಪೂಜನೇ 1 ಭ್ರಷ್ಟನಾದವ ನಾನು ಸೃಷ್ಟಿಸಿದ ಹರಿಯನು ಮರೆತು ದಿನಗಳೆದನು ಪಡ್ಡೆರಧೊಟ್ಟಿ(ಪಡ್ಡೆರದು+ಹೊಟ್ಟಿ) ಹೊರಕೊಂಡೆನು ಪಾಪಿಷ್ಟ ನಾನು ಇಷ್ಟದಾಯಕ ಮುಟ್ಟಿ ಭಜಿಸುವೆ ಸುದೃಷ್ಟಿಯಲಿ ನೋಡಿ ಎನ್ನಯ ಕೆಟ್ಟ ಮನವನು ಕಳೆದು ಜ್ಞಾನದ ದೃಷ್ಟಿ ಕೊಡುವುದು ಶ್ರೇಷ್ಠ ಮಹಿಮನೆ 2 ದಾನಧರ್ಮಗಳನ್ನು ಈ ಕರಗಳಿಂದಲಿ ಮಾಡಲಿಲ್ಲವೊ ನಾನು ಹನುಮೇಶವಿಠಲನ ಸ್ಮರಣೆ ಎಂಬುವುದನ್ನು ಧನವನಿತೆಸುತರಾ ಮೋಹದೊಳು ಮರೆತೆನು ಗುರುವರನೆ ನೀನು ಜ್ಞಾನವಿಲ್ಲದ ದೀನದಾಸನ ಹೀನಗುಣ ಎಣಿಸದಲೆ ಪಾಲಿಸೊ ದೀನಜನ ಮಂದಾರನಿಲಯನೆ ಕಾಮಿತಾರ್ಥವನೀವ ದಾತನೇ 3
--------------
ಹನುಮೇಶವಿಠಲ
ದೃಷ್ಟಾಂತವಾಗಿದೆಯೈ ಪ ಕೃಷ್ಣಾ ನೀಮಾಡಿರ್ಪ ಸೃಷ್ಟ್ಯಾದಿಗಳೆಲ್ಲ ಅ.ಪ ಜನರು ನಡೆವದೀಗ ನೋಡಲ್ ಮನಕೇ ಬಂದಂತೆ ಕಾರ್ಯಂಗಳೊಡಗೂಡಲ್ 1 ಧೃಡವಾಗಿಯೇ ತೋರ್ಪುದು ನಡೆನುಡಿ ಮೊದಲಾದ ನರರು ಮಾಳ್ಪುದೆಲ್ಲ 2 ಚತುರಾವಸ್ಥೆಗಳಿಂದಲಿ ಹಿತವೇಬೇಕೆಂದರು ಅಹಿತವಾಗುತಿರುವುದು 3 ತನ್ನಿಂತಾನೆ ನಡೆವದು ಭಿನ್ನಾಭಿನ್ನವಾಗಿ ಭೇದ ಪ್ರಪಂಚವು 4 ಗುರುರಾಮವಿಠಲಾ ನೀ ಮಾಡಿರ್ಪ ಕಷ್ಟಗಳು 5
--------------
ಗುರುರಾಮವಿಠಲ
ದೇವನ ನೆರೆನಂಬಿರೊ ಶ್ರೀವರ ವೇಲಾಪುರಿಯ ಚೆನ್ನಿಗನ ಪ ಕರೆಯರಿಗೊರಳಭವನ ಕೃಪೆಯಿಂದ ದಶಗ್ರೀವ ನೆರೆಭಾಗ್ಯಪಡೆದು ಗರ್ವದೊಳಿರಲು ಅರೆಯಟ್ಟಿ ಶಿರಗಳ ಕುಟ್ಟಿಹಾಕಿ ತನ್ನ ಮೊರೆಹೊಕ್ಕ ವಿಭೀಷಣಗೆ ಪಟ್ಟಗಟ್ಟಿದ 1 ಭಾಗೀರಥಿಯ ತಾಳ್ದ ಮಹೇಶನ ತಲೆ ವಾಗಿಲ ಕಾಯಿಸಿಕೊಂಡಿಹ ಬಾಣನ ತಾಗಿ ತೋಳಕಡಿದ ಸುರನ ಕುಮಾರತಿಗೆ ಭೋಗಿಸುವಂತೆ ತಮ್ಮಗೆ ಕೈವರ್ತಿಸಿ ಕೊಟ್ಟ2 ಲೋಕದೊಳಜಭವಾದಿಗಳಿಂದ ಉಬ್ಬಿದ ಅ- ನೇಕ ರಕ್ಕಸರನೊಟ್ಟಿಗೆ ತಾಹೆನು- ತಾ ಕೊಟ್ಟ ವರವನೆ ಶಿರಮುಟ್ಟಿ ಕೊಂಡಾ ಕರು ಣಾಕರ ವರ ವೇಲಾಪುರಿಯ ಚೆನ್ನಿಗನ 3
--------------
ಬೇಲೂರು ವೈಕುಂಠದಾಸರು
ದೇವರ ದೇವ ನಿನ್ನ ಬಲವಲ್ಲದೆ ಮತ್ತೆ ಆವ ಗ್ರಹಗಳಿಂದಲಿ ಉಂಟು ಎನಗೆ ಪ ಇಂದು ಬಲವೊ ಅರ ಅರ್ಕ ಬಲವು ವಂದನ ಗೈದು ಮಂತ್ರಿ ಬಲವೋ ಎನಗೆ ನಿಂದು ಕೊಂಡಾಡುವದು ಕಾವ್ಯ ಬಲವೊ 1 ಆರಾಧನೆ ಮಾಡುವುದು ಅಂಗಾರಕನ ಬಲವೊ ಸಾರಿ ಪೇಳುವದೆನಗೆ ಸೌಮ್ಯ ಬಲವೊ ಕಾರುಣ್ಯ ಕಡುಸೋನೆ ಎನಗೆ ಶೌರಿಬಲವೊ ಹಾರೈಸಿ ಹಿಗ್ಗುವದು ರಾಹು ಬಲವೊ 2 ಕೇಳುವ ಕಥಾಶ್ರವಣ ಕೇತು ಬಲವೊ ಎನಗೆ ವಾಲಗ ಮಾಡುವದು ತಾರಾಬಲವೊ ಸಿರಿ ವಿಜಯವಿಠ್ಠಲ ನಿನ್ನ ಆಳಾಗಿ ಬಾಳುವದು ಸರ್ವಬಲವು 3
--------------
ವಿಜಯದಾಸ
ದೇವಾ ಬಾರಯ್ಯಾ ವೈಭವದಿ ರಥವನೇರಿ ಸೇವಿಸುವೆನು ಮಧ್ಭಾವದಿ ನೆಲಸೆಂದು ಪಾವನ ಮಣಿಪುರ ಠಾವಿನೊಳಿಹ ಭೂದೇವ ವರ್ಯ ಸಂಶೇವಿತ ಕೇಶವ ಪ ದೇವಗಂಗೆಯಪೆತ್ತ ಪಾವನಗಾತ್ರಧ್ರುವ ಭೂವರೋÀಪಾಸಿತನಾಗಿ ಈ ವಸುಧಿಗೆ ಬಂದು ಪಾವಮಾನ ಶಾಸ್ತ್ರದಿ ಕೋವಿದಯತಿ ವರ ಶ್ರೀ ವಿದ್ಯಾನಿಧಿ ತೀರ್ಥ ಸೇವಿತ ಸಂಸ್ಥಾಪಿತ ಸೇವಕ ಜನ ಸಂಭಾವಿತ ಕಾಮಿತ ವೀವ ಕಾವ ಸದಶಾವತಾರ ನಮೋ ಶ್ರಿವಿರಂಚಿಮುಖ ದೇವನ ಮಿತ ಕಂಚೀವರದನೆ ಪೊರೆ ಶ್ರೀ ವರಕೇಶವ 1 ಕಡು ಶೋಭಿಸುವ ಬಿಳಿಗೊಡೆ ಚಾಮರಾದಿಗಳ ಪಿಡಿದು ಶೇವಿಪ ಜನರೆಡಬಲದಿ ಬರೆ ಸುರರು ಪಂಥsÀವಿಡಿದು ವೇದಪಠಣ ಬಿಡದೆ ಮಾಡುತ ಬರೆ ನುಡಿವ ವಾದ್ಯಗಳಿಂದ ಸಡಗರದಲಿ ದ್ವಿಜಮಡದಿಯರಾರುತಿ ಪಿಡಿದು ಬೆಳಗುತಿರೆ ಕಡು ವೈಭವದಲಿ ಅಡಿಗೆರಗುವೆ ಪಾಲ್ಗಡಲ ಶಯನ ಮೂ- ರಡಿ ರೂಪನೆ ಜಗದೊಡೆಯ ಕೇಶವ 2 ನಂದ ತೀರ್ಥರ ಮತ ಸಿಂಧುವಿಗೆ ಪೂರ್ಣ ಚಂದ್ರರೆನಿಪಯತೀಂದ್ರ ಸತ್ಯ ಪ್ರಮೋದ ರಿಂದ ಪೂಜಿತ ಪದ ದ್ವಂದ್ವ ಮಧ್ಯದೊಳಿಹ ಮಂದಾಕಿನಿಗೆ ಪಿತನೆಂದು ತೋರಿಸಿದಂಥ ಇಂದಿರೆಯರಸನೆ ಮಂದರಧರ ಗೋ ವಿಂದ ಪಾಹಿ ಮುಕುಂದನೆ ಬಾಬಾ- ರೆಂದು ಕರೆವ ದ್ವಿಜ ವೃಂದಮಧ್ಯದಲಿ ಶ್ಯಂದನ ವೇರಿದ ಸುಂದರ ಕೇಶವ 3 ಅಂಬುಜನಾಭನೆ ನಿತಂಬದಿ ಪೊಳೆವ ಪೀ- ತಾಂಬರ ಧೃತ ಶಾತಕುಂಭ ಮಕುಟವದ- ನಾಂಬೋಜವನು ತೋರೋಕುಂಭೀನಸ ಪರಿಯಂಕ ಶಂಭ್ವಾದಿನಮಿತ ನೀಲಾಂಬುಧ ನಿಭಗಾತ್ರ ಕಂಬುಚಕ್ರಸುತ- ದಾಂಬುಜಧರ ಬಲು ಸಂಭ್ರಮದಲಿ ಮುನಿಕುಂಭಜ ಪೂಜಿತ ಕದಂಬ ದುರಿತ ಕಾದಂಬನಿ ಪವನ ಕೃ ಪಾಂಬುಧೆ ಕೇಶವ 4 ಗರುಡ ಮಾರುತರಿಂದ ಪರಶೇವಿತನೆ ಬಾರೊ ಶರಣು ಜನರ ಸುರತರುವೆ ಚನ್ನಕೇಶವ ಧರೆಯೊಳಧಿಕ ಮಣಿಪುರ ಪಂಡಿತಾಗ್ರಣಿ ಸನ್ನುತ ಸರಸಿಜಾಸನ ಪಿತ ಸಿರಿದೇವಿಯು ಈರೆರಡು ರೂಪದಲಿ ಕರದೊಳಗಾರುತಿ ವರಚಾಮರಗಳ ಧರಿಸಿ ಸಿರಿ ' ಕಾರ್ಪರ ನರಹರಿ ' ರೂಪನೆ ಮಾಂ ಪೊರೆವುದು ಕೇಶವ 5
--------------
ಕಾರ್ಪರ ನರಹರಿದಾಸರು
ದೇವಾದಿ ದೇವಗೆಭಕ್ತ ಸಂಜೀವಗೆಶ್ರೀ ವಿಘ್ನೇಶ್ವರಗೆ ಜಯವೆಂದುಜಯವೆಂದು ಪಾರ್ವತೀಪುತ್ರಗೆಪಾವನಗಾತ್ರಗೆಫಣಿಯಜ್ಞ ಸೂತ್ರಗೆಹೂವಿನಾರತಿಯ ಬೆಳಗಿರೆ 1 ಸಿಂಧುರಗಮನೆಯರುಕುಂದಾಭರದನೆಯರುಇಂದುಶೇಖರಗೆ ಜಯವೆಂದುಜಯವೆಂದು ಇಂದ್ರಾದಿವಂದ್ಯಗೆನಿರ್ಜಿತಚಂದ್ರಗೆ ಸದ್ಗುಣಸಾಂದ್ರಗೆಕುಂದಣದಾರತಿಯ ಬೆಳಗಿರೆ 2 ವಾರಣದವನೆಗೆಧೀರಹೇರಂಬಗೆರಾವಣಾಸುರನ ಜಯಿಸಿದಜಯಿಸಿದಶರಣ ಮಂದಾರಗೆಶರಧಿ ಗಂಭೀರಗೆಕೌಸ್ತುಭಹಾರಗೆಮೇರುವೆಯಾರತಿಯ ಬೆಳಗಿರೆ 3 ಸುರರು ಹೂಮಳೆಗರೆಯೆತರುಣಿಯರ್ಪಾಡಲುಸುರದುಂದುಭಿ ಮೊಳಗೆ ಜಯವೆಂದುಜಯವೆಂದುಸಿಂಧುರವರ್ನಗೆಶೂರ್ಪಸುಕರ್ನಗೆಸರ್ವತ್ರಪೂರ್ಣಗೆಕುರುಜಿನಾರತಿಯ ಬೆಳಗಿರೆ 4 ಪಂಕಜಾಂಬಿಕೆಯರುಭೋಂಕನೆ ಪಾಡಲುಶಂಕರನ ಪುತ್ರ ಜಯವೆಂದುಪಾವನವೇಷಗೆವರದ ಗಣೇಶಗೆಕುಂಕುಮದಾರತಿಯ ಬೆಳಗಿರೆ 5 ರಮ್ಯವಾದಲತಿಗೆಯರಸವ ಪಾದಕೆ ತೊಡೆದುಕಮ್ಮೆಣ್ಣೆಯನು ಕಂಠಕನುಲೇಪಿಸಿಸುಮ್ಮಾನದಿಂದ ಪಟವಾಸ ಚೂರ್ಣವತಳಿದುನಿಮ್ಮ ಪೂಜಿಸುವೆನು ಗೌರಿದೇವಿ 6 ವರಧೂಪದೀಪ ಪರಿಪರಿಯ ನೈವೇದ್ಯ ಭಾ-ಸುರ ಸುತಾಂಬೂಲ ಸೀಗುರಿದರ್ಪಣನಿರುಪಮ ಛತ್ರ ಚಮರಾದಿ ಸೇವೆಯನು ಸ್ವೀ-ಕರಿಸಿ ಪಾಲಿಸೆ ಎನ್ನ ಗೌರಿ ದೇವಿ ಜಯ 7 ಇಂತು ಪರಿಪರಿಯ ರಾಜೋಪಚಾರಗಳಿಂದಸಂತತವು ನಿಮ್ಮ ಪಾದವ ಪೂಜಿಸಿನಿಂತು ಕರವನೆ ಮುಗಿದು ಧ್ಯಾನಿಸುತ ನಲಿನಲಿದುಸಂತಸದಿ ನಿಮ್ಮ ಸ್ತುತಿಸುವೆನು ಗೌರಿ ಜಯ 8 ಮತ್ತೇಭಗಮನೆಗೆ ಮಾಹೇಂದ್ರಸನ್ನುತೆಗೆಅತ್ಯಂತ ಪರಮ ಪಾವನ ಚರಿತೆಗೆನಿತ್ಯ ಸೇವೆಯನು ಮಾಡುವರ ರಕ್ಷಿಸುವಂಥಪ್ರತ್ಯಕ್ಷಮೂರ್ತಿ ಶ್ರೀಗೌರಿ ನಿಮಗೆ ಜಯ9 ಕಲಕೀರವಾಣಿಗೆ ಕಾಳಾಹಿವೇಣಿಗೆಕಲಧೌತಕಮಲ ಶೋಭಿತಪಾಣಿಗೆನಳಿನದಳನೇತ್ರೆಗೆ ನಾರಾಯಣೆಗೆ ನಮ್ಮ-ನೊಲಿದು ರಕ್ಷಿಸುವಂಥಾ ಶ್ರೀಗೌರಿಗೆ ಜಯ 10 ಕುಂಭಸಂಭವನುತೆಗೆ ಜಂಭಾರಿಪೂಜಿತೆಗೆರಂಭಾಸುನರ್ತನಪ್ರಿಯೆಗೆ ಶಿವೆಗೆರಂಭೋರುಯುಗಳೆಗೆ ಬಿಂಬಾಧರೆಗೆ ನಮ್ಮಬೆಂಬಿಡದೆ ರಕ್ಷಿಸುವ ಗಿರಿಜಾತೆಗೆ ಜಯ 11 ಮುತ್ತೈದೆತನಗಳನು ನಿತ್ಯಸಂಪದಗಳನುಉತ್ತಮಾಂಬರ ಛತ್ರಚಾರಮವನುಅತ್ಯಂತ ಪ್ರೀತಿಯಿಂದಿತ್ತು ರಕ್ಷಿಸಿ ಭಕ್ತವತ್ಸಲೆ ಶ್ರೀ ಗೌರಿದೇವಿ ತಾಯೆ12 ಎಂದೆಂದು ಈ ಮನೆಗೆ ಕುಂದದೈಶ್ವರ್ಯವನುಚಂದವಾಗಿಹ ಪುತ್ರ ಪೌತ್ರರನ್ನುಸಾಂದ್ರಕೃಪೆಯಿಂದಿತ್ತು ಸಲಹೆ ಕೆಳದಿಯ ಪುರದಿನಿಂದ ಶ್ರೀ ಪಾರ್ವತಾದೇವಿ ತಾಯೆ ಜಯ 13
--------------
ಕೆಳದಿ ವೆಂಕಣ್ಣ ಕವಿ
ದೊರಕಿಸಬಹುದು ತಂದೆ ತಾಯಿಗಳ ಜನ್ಮ ಜನ್ಮದಲಿದೊರಕಿಸಲಾಗದು ಸದ್ಗುರುನಾಥನ ಆವ ಜನ್ಮದಲಿ ಪ ತಂದೆ ತಾಯ್ಗಳ ಋಣವ ಜನ್ಮಾಂತರದಲಿ ತೀರಿಸಬಹುದುಗುರು ಋಣವು ತೀರುವುದದೆಂತೋ 1 ತಂದೆತಾಯಿ ಋಣಗಳಿಂದ ಜಾತನಾಗುವೆಮುಂದೆ ಗುರು ಋಣಗಳಿಂದ ಅಜಾತನಾಗುವೆ 2 ಗುರುವಿನ ಋಣವನು ತೀರಿಸಲಾಗದುಗುರು ಚಿದಾನಂದನ ಕೃಪೆಯಿಂ ತೀರುವುದು 3
--------------
ಚಿದಾನಂದ ಅವಧೂತರು
ದೋಷ ದೂರ ಜನಾರ್ದನ ದೋಷ ದೂರಾ ಪ ದೋಷ ದೂರ ಎನ್ನ ಸಾಕುವುದು ಪರಾಶರವರದಾ ಅ ಬಲು ಕಾಲಗಳಿಂದ ನೆಲೆಯ ಕಾಣದೆ ನಿನ್ನ ಚೆಲುವ ಚರಣ ದ್ವಂದ್ವ ನೆಳಲನಾಶ್ರೈಸಿದೆ 1 ಪುಂಡರೀಕ ಪಾದ ತಿಮಿರ ಮಾರ್ತಾಂಡ ಮುರವೈರಿ 2 ಅಜಗೆ ಪ್ರಸನ್ನ ವಿರಜಭಾಗ್ಯ ಸಂಪನ್ನ ವಿಜಯಮೂರುತಿ ನಮ್ಮ ವಿಜಯವಿಠ್ಠಲರೇಯ 3
--------------
ವಿಜಯದಾಸ
ಧನ್ಯನಾದೆನೀದಿನ ನಿನ್ನ ಕಂಡ ಕಾರಣ ಪ. ಪನ್ನಗಾದ್ರಿವಾಸ ಸುಪ್ರಸನ್ನನಾದ್ದರಿಂದ ನಾ ಅ.ಪ. ವ್ರತನೇಮ ಜಪ ತಪ ಹಿತಮಾದುದೈ ಸುತಪ ಕೃತಿಪತಿ ತವ ಕೃಪಾಶತಧೃತಿಲೋಲುಪಾ 1 ವಿದಿಭವಾದಿಗಳಿಂದ ವಿನಮಿತ ವಿಶ್ವಾನಂದ ಪದುಮನಾಭ ಗೋವಿಂದ ಪವನನಯ್ಯ ಮುಕುಂದ 2 ಪ್ರೀಯ ತಪೋವಾಸನನೀಯುವ ದೇವರ ದಾನ ತೋಯಜಾಕ್ಷ ಲಕ್ಷ್ಮೀನಾರಾಯಣ ಪರಾಯಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ಧನ್ಯರಾದರು ಗುರುಗಳನು ಪೂಜಿಸುತ ಇನ್ನಿವರ ಪಾತಕವು ತೊಲಗಿತು ಜಗದಿ ಪ. ತಂದೆ ಮುದ್ದುಮೋಹನದಾಸ ರಾಯರನು ಚಂದದಿಂ ಸತಿಸಹಿತ ಕರೆತಂದು ಮನೆಗೆ ಮಂದರೋದ್ಧರನ ಪದಸೇವೆ ಇದು ಎಂದರಿತು ಮಂದಹಾಸದಲಿ ನಸುನಗುತ ಸದ್ಭಕ್ತರು 1 ಮಂಗಳೋದಕದಿಂದ ಮಜ್ಜನವಗೈಸುತಲಿ ಅಂಗಗಳನೊರೆಸುತಲಿ ನಾಮಗಳನ್ಹಚ್ಚಿ ರಂಗನಾಥನಿಗರ್ಪಿಸುತ ಪುಷ್ಪಹಾರವನ್ಹಾಕಿ ಶೃಂಗಾರವನೆಗೈದು ಶ್ರೀ ಗುರುಗಳನ್ನು 2 ಪಚ್ಚೆಕರ್ಪೂರ ಕೇಸರಿಯಿಂದ ಕೂಡಿದ ಅಚ್ಚ ಗಂಧವನ್ಹಚ್ಚಿ ಅಕ್ಷತೆಯನಿಟ್ಟು ಮಚ್ಛರೂಪಿಯ ನೆನೆದು ಪಾದಕಮಲವ ತೊಳೆದು ನಿಚ್ಚಳದ ಭಕ್ತಿಯಲಿ ನಿಜ ಭಕ್ತರೆಲ್ಲ 3 ಸತಿಸಹಿತ ಕುಳ್ಳಿರಿಸಿ ಗುರುಗಳನು ಪೀಠದಲ್ಲಿ ಅತಿಶಯದಿ ಕುಡಿಬಾಳೆ ಎಲೆಗಳನೆ ಹಾಕಿ ಮತಿಯಿಂದ ರಂಗೋಲೆಗಳನ್ಹಾಕಿ ಲವಣ ಸ- ಪರಿಯಂತ ಬಡಿಸುತಲಿ 4 ಅನ್ನಾದಿ ಸಕಲ ಷಡ್ರಸಗಳನೆ ಬಡಿಸುತ್ತ ಘನ್ನ ಮಹಿಮರಿಗೆ ಭಕ್ಷಾದಿಗಳ ಬಡಿಸಿ ಸನ್ನುತಿಸುತಲಿ ತೀರ್ಥ ಆಪೋಷನವನ್ಹಾಕಿ ಪನ್ನಗಶಯನನಿಗೆ ಅರ್ಪಿಸುತ ಮುದದಿ 5 ಘೃತಶರ್ಕರಾದಿಗಳನಡಿಗಡಿಗೆ ಬಡಿಸುತಲಿ ನುತಿಸಿ ಗಾನಗಳಿಂದ ಗುರುಮಹಿಮೆಯ ದಧಿ ಕ್ಷೀರದನ್ನಗಳನುಣಿಸುತಲಿ ಘೃತ ಕ್ಷೀರದಿಂದ ಕೈ ತೊಳೆದು ಸಂಭ್ರಮದಿ 6 ಯಾಲಕ್ಕಿ ಕರ್ಪೂರ ಮಿಳಿತ ವೀಳೆಯವನಿತ್ತು ವೇಳೆವೇಳೆಗೆ ತಪ್ಪು ಕ್ಷಮೆಯ ಬೇಡುತಲಿ ವ್ಯಾಳಶಯನಗರ್ಪಿಸುತ ಉಡಿಗೆ ತೊಡಿಗೆಗಳನಿತ್ತು ಮಾಲೆಹಾಕುತ ಆರತಿಯನೆತ್ತಿ ಮುದದಿ 7 ಹರಿಪ್ರೀತನಾಗುವನು ಗುರು ಹೃದಯದಲಿ ನಿಂತು ಕರ್ಮ ತೊಡಕುಗಳು ಸರಸಿಜಾಕ್ಷನು ತಾನು ಹರುಷಪಡುವನು ದಯದಿ ಕರಕರೆಯ ಸಂಸಾರ ಕಡಿದು ಗತಿ ಈವ 8 ಗುರುದ್ವಾರ ಒಲಿಯುವನು ಹರಿಯು ಮೋಕ್ಷಾರ್ಥಿಗಳ ಅರಘಳಿಗೆಯಗಲದಲೆ ಕಾಯುವನು ಸತತ ಗುರು ಅಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ ತ್ವರಿತದಿಂ ಹೃದಯದಲಿ ತೋರ್ವನು ತನ್ನ9
--------------
ಅಂಬಾಬಾಯಿ