ಒಟ್ಟು 11537 ಕಡೆಗಳಲ್ಲಿ , 136 ದಾಸರು , 5740 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮ ಪಾಪಿಷ್ಠ ನಾನು ಪ ನರಹರಿಯೆ ನಿಮ್ಮ ನಾಮ ಸ್ಮರಣ ಮಾಡದಲೆ ನರಕಕ್ಕೆ ಗುರಿಯಾದೆನೋ ಹರಿಯೆ ಅ.ಪ. ಹೊಸಮನೆಯ ಕಂಡು ಬಲು ಹಸಿದು ಭೂಸುರರು ಬರೆ ಕೊಸರಿ ಹಾಕುತ ದಬ್ಬುತ ಶಶಿಮುಖಿಯೆ ಬಾರೆಂದು ಅಸಮಸದಿ ಬಣ್ಣಿಸಿ ವಶವಾಗಿ ಅವಳೊಲಿಸುತ ದಶಮಿ ಏಕಾದಶಿ ದ್ವಾದಶೀ ದಿನತ್ರಯದಿ ಅಶನವೆರಡ್ಹೊತ್ತುಣ್ಣುತ ಘಸಘಸನೆ ತಾಂಬೂಲ ಪಶುವಿನಂದದಿ ಮೆದ್ದು ಕುಸುಮ ಗಂಧಿಯ ರಮಿಸುತ ಸತತ 1 ಕೆರೆ ಭಾವಿ ದೇವಾಲಯವ ಕೆಡಿಸಿ ದಿವ್ಯ ಹಿರಿದಾಗಿ ಮನೆ ಕಟ್ಟದೆ ನೆರೆ ನಡೆವ ಮಾರ್ಗದೊಳು ಅರವಟ್ಟಗೆಗಳನ್ನು ಧರಧರದಿ ಬಿಚ್ಚಿ ತೆಗೆದೆ ಪರಮ ಸಂಭ್ರಮದಿಂದ ಅರಳಿಯಾ ಮರ ಕಡಿಸಿ ಕೊರೆಸಿ ಬಾಗಿಲು ಮಾಡಿದೆ ಏಕ ಮಂದಿರವ ಮುಗಿಸಿ ಹರುಷ ಚಿತ್ರವ ಬರೆಸಿ ಪರಿಪರಿಯ ಸುಖ ಸಾರಿದೇ ಮೆರೆದೆ 2 ಸಾಕಲ್ಯದಿಂದ ಸಾಲಿಗ್ರಾಮದ ಅಭಿಷೇಕ ಆಕಳ ಹಾಲಲಿ ಮಾಡದೆ ನಾಕೆಂಟು ನಾಯಿಗಳ ಸಾಕಿ ಮನೆಯೊಳು ಬದುಕ ಬೇಕೆಂದು ಹಾಲು ಹೊಯ್ದೆ ಕಾಕು ಬುದ್ಧಿಗಳಿಂದ ಗುಡಿ ಗುಡಿ ನಸಿ ಪುಡಿ ಹಾಕಿ ಭಂಗಿಯಾ ಸೇದಿದೆ ಲೋಕ ನಿಂದಕ ನಾಗಿ ಪಾಪಕ್ಕೆ ಕೈ ಹಚ್ಚಿ ಅ ನೇಕ ಜೂಜುಗಳಾಡಿದೇ ಬಿಡದೆ 3 ಸ್ನಾನ ಸಂಧ್ಯಾನ ಅತಿಮೌನ ಗಾಯಿತ್ರಿ ಜಪ ಭಾನುಗಘ್ರ್ಯವನು ಕೊಡದೆ ಹೀನತ್ವ ವಹಿಸಿ ದಾನ ಧರ್ಮವ ಮಾಡದೆ ಶ್ವಾನನಂದದಿ ಚರಿಸಿದೇ ಶ್ರೀನಿವಾಸನೆ ನಿನ್ನ ಅನುಪೂರ್ವಕ ಪೂಜೆ ನಾನೊಂದು ಕ್ಷಣಮಾಡದೇ ಬೇನೆ ಬಂದಂತಾಗೆ ಹೀನ ಸಕೇಶಿಯ ಕೈಲೆ ನಾನ ವಿಧಾನ್ನ ತಿಂದೇ ನೊಂದೇ 4 ಭಾಗವತ ಕೇಳಲಿಕೆ ಆದರವೆ ಪುಟ್ಟಲಿಲ್ಲಾ ವಾದಿಗಳ ಮತವಳಿದ ಮಧ್ವ ಸಿದ್ಧಾಂತದ ಹಾದಿಗೆ ಹೋಗಲಿಲ್ಲ ಶೋಧಿಸಿದ ಚಿನ್ನಕೆ ಸಮರಾದ ವೈಷ್ಣವರ ಪಾದಕ್ಕೆ ಬೀಳಲಿಲ್ಲ ವೇದ ಬಾಹಿರನಾಗಿ ಅಪಸವ್ಯ ಮನನಾಗಿ ಓದಿಕೊಂಡೆನೋ ಇದೆಲ್ಲ ಸುಳ್ಳ 5 ಉತ್ತಮ ಬ್ರಾಹ್ಮಣರ ವೃತ್ತಿಗಳನೆ ತೆಗಸಿ ಬ್ರ ಹ್ಮಹತ್ಯಗಾರನು ಎನಿಸಿದೆ ಮತ್ತೆ ಮದುವೆ ಮುಂಜಿ ಸಮಯಕ್ಕೆ ನಾ ಪೋಗಿ ಸತ್ತ ಸುದ್ದಿಯ ಪೇಳಿದೆ ವಿತ್ತವಿದ್ದವರ ಬೆನ್ಹತ್ತಿ ದೂತರ ಕಳುಹಿ ಕುತ್ತಿಗೆಯ ನಾ ಕೊಯ್ಸಿದೆ ನಿತ್ಯ ಕಲ್ಲೊಡೆಯುತಿರೆ ಮೃತ್ಯು ದೇವತೆಯೆನಿಸಿದೆ ಬಿಡದೇ 6 ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವವರೆನಗೆ ಗತಿಯೇನು ಪೇಳೊ ಕೊನೆಗೆ ಸತತ ತವ ಧ್ಯಾನದಲಿ ರತನಾಗಿ ಇರುವ ಸ ನ್ಮತಿಯ ಪಾಲಿಸಯ್ಯ ಎನಗೆ ಪತಿತಪಾವನನೆಂಬ ಬಿರಿದು ಅವನಿಯ ಮೇಲೆ ಶ್ರುತಿ ಸಾರುತಿದೆಯೋ ಹೀಗೆ ಶಿತಕಂಠನುತ ಜಗನ್ನಾಥವಿಠ್ಠಲ ನಿನಗೆ ನುತಿಸದೆ ಬೆಂಡಾದೆ ಕಾಯೋ ಹರಿಯೆ 7
--------------
ಜಗನ್ನಾಥದಾಸರು
ಪರಮ ಪಾವನ ಮೂರುತಿಯೇ | ಶರಣ ರಕ್ಷಕ ಮಹೀಪತಿಯೇ ಪ ಸರ್ವಾಗಮ ಸನ್ಮತಾ ದೋರ್ವದು ನಿನ್ನ ಚರಿತಾ | ಉರ್ವಿಯೊಳಗೆ ಸುಖದಾತಾ | ಮೂರ್ವೀ ಜಗವಂದಿತಾ | ಸರ್ವಗುಣ ನಿಧಿಯೇ ನೀ | ಸರ್ವರೊಳು ವ್ಯಾಪ್ತನಾಗಿ | ಕಾಲ ಕೊಂಬೆ1 ಕಾಮನೆ ಪೂರೈಸುವಾ | ಕಾಮಧೇನುವೆ ಜಗಜೀವಾ | ಸುರತರು ದೇವಾ | ಸ್ವಾಮಿ ನೀ ಗತಿಯೆಂದು | ನಿಮ್ಮೊರೆ ಹೊಕ್ಕರೆ | ಪ್ರೇಮದಿ ಸಲಹುವೆ | ಈ ಮನುಜರನು2 ನಿನ್ನ ಮಹಿಮೆ ತಿಳಿಯಲು | ಎನ್ನಳವೇ ಧರಿಯೊಳು | ಚಿನ್ನ ಕೃಷ್ಣೊಡಿಯಾ ದಯಾಳು | ಉನ್ನತೋನ್ನತ ಕೃಪಾಳು | ಮುನ್ನ ಮಾಡಿದ ಘನ್ನಪರಾಧವ | ಇನ್ನು ಕ್ಷಮಿಸಿ ನೀ | ಚನ್ನಾಗಿ ಕಾಯೋ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪರಮ ಪಾವನಕಾಯ ಗುರುರಾಯ ಜೀಯ ವರ ಭಾಗವತರ ಪ್ರಿಯ ಸುರರ ಸಹಾಯ ಪ. ಶ್ರೀ ತಂದೆ ಮುದ್ದುಮೋಹನ ದಾಸರೆಂದೆನಿಸಿ ವಾತ ಜನಕನ ಒಲಿಸಿ ವೈರಾಗ್ಯ ಧರಿಸಿ ಖ್ಯಾತಿಯನು ಪಡೆದ ಅನಾಥ ರಕ್ಷಕ ಸ್ವಾಮಿ ನೀತ ಗುರು ನಿಮ್ಮ ಪದಕೆ ನಾ ತುತಿಸಿ ನಮಿಪೆ 1 ಘನ ಅಂಶದಲಿ ನೆಲಸಿ ಅನವರತ ಸಲಹುವೊ ಮನವ ಮಾಡಿರಬಲೆ ಅಂಜಿ ಬೆದರೆ ಘನ ಜ್ಯೋತಿ ಸ್ವೀಕರಿಸಿ ತನುವಿಗಭಯ ತೋರಿ ಮನದಿ ಪದವನೆ ನಂಬೆ ರಕ್ಷಿಸಿದ ಗುರುವೆ 2 ಅಪಮೃತ್ಯು ಬಂದು ಬಹು ಅಪರಿಮಿತ ಭಯಪಡಿಸಿ ಸುಪಥ ಕಾಣದೆ ನಿಮ್ಮ ಪದವ ನಂಬಿರಲು ಸ್ವಪ್ನದಲಿ ನಿಜರೂಪ ಗುಪ್ತದಿಂದಲಿ ತೋರಿ ಆಪತ್ತು ಪರಿಹರಿಪೆನೆಂದಭಯವಿತ್ತ 3 ಪರಿಪರಿ ಅಪಮೃತ್ಯು ಪರಿಹಾರವನೆಗೈದು ಪರಮ ಹರುಷದಿ ಕಾಯ್ದು ಆಯುವನೆ ಇತ್ತು ಕರಕರೆಯ ಬಿಡಿಸಿ ಕಾಯ್ದಂಥ ಘನ ಚರಿತೆಯನು ಅರಿತು ವರ್ಣಿಸಲರಿಯೆ ಪರಮ ಪ್ರಿಯ ದೊರೆಯೆ 4 ಆಪನ್ನ ರಕ್ಷಕರೆ ಶ್ರೀ ಪತಿಯ ತೋರುವ ಘನಶಕ್ತರೆ ಕಾಪಾಡುವೋ ಕರ್ತರೆಂದು ನಾ ನಂಬಿರುವೆ ಗೋಪಾಲಕೃಷ್ಣವಿಠ್ಠಲನ ನಿಜ ಪ್ರಿಯರೆ 5
--------------
ಅಂಬಾಬಾಯಿ
ಪರಮ ಪುರುಷನ ಮೊದಲು ನಮಿಸುತಚರವವೈದಿದ ದೈವತಂಗಳಿಗೆರಗುವೆನು ಕ್ರಮದಿಂದ ಕೂಡುತಧರಣಿ ತಳದಲ್ಲಿ 1 ದರ್ಭ ಮುಖ ವಿಸ್ತರದಿ ಹಾಕುತಪದ್ಮ ಮೊದಲಾಸನದಿ ಪ್ರಾಂಗ್ಮುಖಇದ್ದರಗ್ರ್ಯಾಳ ಸಮ್ಮುಖ ಶ್ರದ್ಧೆ ಮಾಡುವುದು 2 ಕೂರ್ಮ ಆಸನಈಸು ಚಿಂತಿಸಬೇಕು ಎಂಬೋಭಾಷೆ ರಾಜಿಪುದು 3 ಧಾರುಣಿ ಮಂತ್ರದಲಿ ಕೂಡುತನಾರಸಿಂಹ ಸುದರ್ಶನಾಸ್ತ್ರದಿಆರು ದಿಕ್ ದಿಗ್ಬಂಧನಾಡಿಯಸೂರಿ ಮಾಡುವುದು 4 ನಾಗಭೂಷಾಜ್ಞೆಯಲಿ ಭೂತಗಳ್‍ಹೋಗಲೆಂಬುವ ಮಂತ್ರ ಪಠಿಸುತಯೋಗಿಗಳ ಪ್ರಾರ್ಥಿಸುತ ಸಂತತಯಾಗ ಮಾಡುವದು 5 ಹರಿಯ ಗುರುಗಳ ನಮನಗೋಸುಗಕರವ ಮನವನು ಶೋಧಿಸೂವುದುಎರಡು ಬೀಜಾಕ್ಷರದಿ ನಾಂಕುಎರಡು ಸ್ಥಾನದಲಿ 6 ಬ್ರಹ್ಮಹತ್ಯಾ ಮಂತ್ರದಿಂದಲಿತಮ್ಮ ವಾಮಾಂಗವನೆ ಮುಟ್ಟುತಅಧರ್ಮ ಪುರುಷನ ಚಿಂತಿಸುವುದುಕರ್ಮ ಕರ್ತೃಕನು 7 ಶೋಕ್ಷ ನಾಭಿಲಿ ಪಾಪ ಪುರುಷನನಾಶ ಹೃದಯದಿ ಭಸ್ಮ ತ್ಯಜಿಸುತಲೇಸು ವರುಣದಿ ಸುಧೆಯ ವೃಷ್ಟಿಲಿಸೂಸುವುದು ತನುವ 8 ಹೀಗೆ ನಿತ್ಯದಿ ಕಾಮಿನೀಯರುಬಾಗಿ ಪತಿಯಲೆ ಕಾರ್ಯ ಮಾಡುತನಾಗಶಯನ ನಕ್ಷರದ ತತ್ಸುಖಭೋಗ ಬಯಸುವುದು9 ನಾರಿಯರು ಗುರು ಮಂತ್ರದೀಪರಿಪೂರ್ವದಲೆ ಮಾಡುತ ಕೃಷ್ಣನಆರು ವರ್ಣವ ಪಠಿಸುತಲೆ ಗೃಹಕಾರ್ಯ ಮಾಡುವುದು 10 ರಾಮ ಮೊದಲಾದನ್ಯ ಮಂತ್ರಗಳ್‍ಕಾಮಿನೀಯರು ಜಪಿಸುತಲೆ ನಿಜಕಾಮದಿಂದಲೆ ಯೋಗ್ಯತಾವನುನೇಮದಿಂದಿರಲು 11 ತಾರತಮ್ಯವು ಪಂಚಭೇದವುಭೂರಿ ಭಕುತಿಲಿ ಭಜಿಸಿ ಕೃಷ್ಣನಆರು ವರ್ಣವು ಪಠಿಸುತಲೆ ತನ್ನು -ದ್ಧಾರ ಮಾಡುವನು12 ವಾಸು ಮಾಡುತಲೆನ್ನ ಮನದೊಳುಆಶು ಭೇದಕ ಸ್ತ್ರೀಜನಂಗಳಿಗೀಶ ಮಾಡಿದ ಇದನ ಇಂದಿ-ರೇಶಗರ್ಪಿಸುವೆ 13
--------------
ಇಂದಿರೇಶರು
ಪರಮ ಮಂಗಳ ಮೂರುತಿ ದಿವ್ಯಕೀರುತಿ | ಧರೆಯೊಳಗಿದೆ ವಾರುಕಿ ಪ ಕರವ ಪಿಡಿದು ಎನ್ನ | ಕರವ ಮಸ್ತಕ ಬಾಗಿಪೆ 1 ಪಾದ ಲಾಘವ ಮರೆಯಲ್ಲಿ | ಶ್ಲಾಘನ ಮಾಡಿದ ಮಾಘಧರನ ಪ್ರಿಯ 2 ನಿರುತ ಮಂತ್ರಾಲಯ ಪುರವಾಸಾ ಅಘನಾಶಾ| ಸಿರಿ ವಿಜಯವಿಠ್ಠಲನ ಚರಣ ಭಜಿಪ ಗುರುವೆ 3
--------------
ವಿಜಯದಾಸ
ಪರಮಪರುಷನೆ ಕೃಷ್ಣ ಕಣ್ತೆರದು ನೋಡೊ ಪ ಶಿರಿ ಅರಸ ದಯಸಿಂಧು ಶ್ರಾವ್ಯಮಂಗಳ ಕೀರ್ತಿ ಅ.ಪ. ದ್ವಿಜಗಮನ ವೃಜಿನಹರ ಭುಜಗತಲ್ಪನೆ ದೇವ ಅಜತಾತ ಗಜವರದ ಕುಜ ನಿವಾರಣನೆ ಭಜನೆ ಪಾಲಿಸು ಎನ್ನ ವಿಮಲ ಮನದಲಿ ನಿಂತು ಋಜು ಪುಂಗವರ ದೈವ ನಿರ್ಜರರ ಬಾಂಧವನೆ 1 ಒದ್ದವಗೆ ಶಿಕ್ಷಿಸದೆ ಬೈದವಗೆ ಗತಿ ಇತ್ತೆ ನಿರ್ದೋಷ ಗುಣಪೂರ್ಣನೆಂದು ಶ್ರುತಿ ಸಾರುತಿದೆ ನಿದ್ದೆ ಮಾಡುವಗೊಲಿದಿ ಮುಕ್ತಿಯನಿತ್ತೆ ಯುದ್ಧದಲಿ ಶರದಿಂದ ಹೊಡೆದವಗೆ ನೀನೊಲಿದೆ 2 ಶುದ್ಧ ಆನಂದಾಬ್ಧಿ ಜಯೇಶವಿಠಲನೆ ಮಧ್ವ ಮುನಿದೈವ ಸಿದ್ಧರೊಡೆಯ ಉದ್ಧವನ ಗುರು ಸುಧಾಮ ಮಿತ್ರನೆ ಮನ ತಿದ್ದಯ್ಯ ಜ್ಞಾನ ನಿನ್ನಲ್ಲಿ ನಿಲುವಂತೆ 3
--------------
ಜಯೇಶವಿಠಲ
ಪರಮಪಾವನ್ನನಾಮ ಭಳಿರೆ ಸಂಗರ ಭೀಮ ಸರಸಗುಣಾಭಿರಾಮ ತರಣಿವಂಶ ಲಲಾಮ ತಾರಾನಂದನ ಪ್ರೇಮ ಪರಿಪೂರ್ಣಧಾಮ ಪಟ್ಟಾಭಿರಾಮ ಪ. ಚಿಕ್ಕಪ್ರಾಯದಲಿ ಬಲುರಕ್ಕಸಿಯನು ಸೀಳಿ ತಾಕಲದೆ ಕಾಲ್ಪೆಣ್ಗೈದು ರಾಜಮೌಳಿಯ ಬಿಲ್ಲ ಗಕ್ಕನೆ ಖಂಡ್ರಿಸಿ ಕೈವಿಡಿದು ಸೊಬಗನುಕ್ಕುವ ಜಾನಕಿಯ ಧಿಕ್ಕರಿಸುತ ಪೋಗಿ ದಿತಿಯ ಕೈಕೆಯ ಮಾತು ದಕ್ಕಲೆನುತ ಪೋಗಿ ದಂಡಕಾರಣ್ಯವ ಭೂರಿ ದಾನವಹಿಂಡ ಚಕ್ಕಂದದಲಿ ಕೊಂದ ಜಾಣ ನೀನಹುದೊ 1 ಭುವನೇಶ ಶಬರಿಯ ಪೂಜೆಯ ಕೈಕೊಂಡು ಪವನಾತ್ಮಜನ ಕಂಡು ಬರಹೇಳಿ ರವಿಯ ಸೂನನ ಕಾಣಿಸಿಕೊಂಡು ತವಕದಿಂ ವಾಲಿಯ ಹವಣರಿಯದಸುವ ಕೊಂದು ಪ್ಲವಗ ಬಲವನು ಕೂಡಿ ಬಲು ಸಮುದ್ರವ ಬಂಧ- ನವ ಮಾಡಿ ಕುಂಭಕರ್ಣ ರಾವಣನ ಸಂಹಾರ ಮಾಡಿ ಲಂಕಾರಾ ಜ್ಯ ವಿಭೀಷಣಗಿತ್ತು ಅವನಿಜೆಸಹ ಪುಷ್ಪಕವನೇರಿ ನಡೆದೆ 2 ಸುರರೆಲ್ಲ ಪೂಮಳೆಗರೆಯೆ ಸುಗ್ರೀವಾದಿ ವರರಾವಣರ ಸೇನೆ ಬೈಲಾಗಿ ನೀ ನಡೆಯೆ ಶೃಂ- ಗಾರವಾದ ಸಾಕೇತಪುರಕೆ ಭರದಿ ಬಂದು ನಿರುತ ಸೌಖ್ಯದಲಿ ನಿಂದು ಸಿರನೆಲೆವಿನಯದಿ ಚಿನ್ಮಯನಾ ಗಿರಿಯ ಶುಭಕರ್ಣವೊ(?) ಸೀತಾಲಕ್ಷ್ಮಣ ಭರತಶತ್ರುಘ್ನಯಿರೆ ಹನುಮನ ಸೇವೆ ದಿವ್ಯಸಿಂಹಾಸನವೇರಿ ಧರೆ ಆಳಿದ ಪರಿಣಾಮದಿ ಹಯವದನ ರಾಮ3
--------------
ವಾದಿರಾಜ
ಪರಮಪುರುಷ ಯದುಕುಲೇಶ ಶರಧಿ ಮಂದಿರವಾಸ ಶ್ರೀಶ ಪ ಪರಮ ಹರುಷದಿಂದಲೀಗ ಉರುಟನೆಯ ಮಾಡುವೆನು ಅ.ಪ. ನೀಲಮೇಘ ವರ್ಣ ನಿನ್ನ ಬಾಲಶಶಿಯ ಪೋಲುವಂಥ ಫಾಲವನ್ನು ತೋರುಬೇಗ ಕುಂಕುಮವ ಹಚ್ಚುವೆನು 1 ವಾರಿಜಾಕ್ಷ ಮಾರಜನಕ ವಾರಿನಿಧಿ ಗಂಭೀರ ಸುಗುಣ ತೋರು ನಿನ್ನ ಚರಣಗಳನು ಅರಿಸಿನವ ಹಚ್ಚುವೆನು 2 ಸುಂದರಾಂಗ ಮಂದಹಾಸ ಕುಂದರನೆ ಸಿಂಧುಶಯನ ಕಂಧರವ ತೋರು ಬೇಗ ಗಂಧವನು ಹಚ್ಚುವೆನು 3 ಕುಸುಮ ನೇತ್ರ ಕುಸುಮಪೀಠ ಸ್ತೋತ್ರ ಪಾದ ಕುಸುಮ ಮಾಲೆ ಹಾಕುವೆನು 4 ಚಾರು ಚರಿತ ಕರಿಗಿರೀಶ ಆರತಿಯ ಬೆಳಗುವೆನು ತೋರು ತವ ಮುಖಾರವಿಂದ 5
--------------
ವರಾವಾಣಿರಾಮರಾಯದಾಸರು
ಪರಮಾನುಗ್ರಹ ಮಾಡು -ಈ ತರಳನ ದಯದಿಂ ನೋಡು ಪ ನರಹರಿ ನೀನಲ್ಲವೆ ಕರುಣಾಳು ಅ.ಪ ಅನ್ನ ಸೇರಲಿಲ್ಲವಂತೆ -ಮಲಗಿ ನಿನ್ನಿಂದಲಿ ಹೀಗಿಹನಂತೆ ಘನ್ನಮಹಿಮ ನಿನ್ನವರಿಗೆಲ್ಲ -ಈ ಬನ್ನ ನ್ಯಾಯವೆ ಪ್ರಸನ್ನ ನೃಸಿಂಹ 1 ತುಡುಗಾಟಗಳಾಡಿ ಬಳಲಿ -ಈ ಹುಡುಗ ಮನೆ ಮನೆಯ ತೊಳಲಿ ಕಡುಭೀತಿಯ ಹೊಂದಿರುವ ನಾವು ನಿ- ನ್ನೊಡವೆಯಲ್ಲವೆ ಒಡೆಯ ನರಹರಿಯೆ 2 ಔಷಧ ಪಥ್ಯಗಳೇಕೆ -ನಿ ರ್ದೋಷ ನೀನೊಳಗಿರಲಿಕ್ಕೆ ಶೇಷಶಯನ ಗುರುರಾಮವಿಠಲ ಪÉೂೀಷಿಸುವನು ನೀನೆ ನೀನೆ ನಿಜ3
--------------
ಗುರುರಾಮವಿಠಲ
ಪರಮೇಶ್ವರ ಪೂರ್ಣ ತುಂಬ್ಯಾನ ಪರಾಮರಿಸಿ ನಿಮ್ಮೊಳಗೆ ಪರದೆ ಇಲ್ಲದೆ ಪರವಸ್ತುದೋರುವ ಕರುಣಿಸಿ ನಿಮಿಷದೊಳಗೆ ಸದ್ಗುರು ಜಗದೊಳಗೆ ಎರಡಿಲ್ಲದೆ ಗುರುಚರಣಕ ಮನಬೆರೆದನುಭವಿಸುವದಾವಾಗೆ ತ್ರಾಹಿ ತ್ರಾಹಿ 1 ನಿಜಮಾಡುವದೆಲ್ಲ ಡಾಂಭಿಕ ಮಾಡದು ತಾ ನಿಜಸುಖ ಕೂಡಲು ಪುಣ್ಯೊದಗ್ಯಾಗಲು ಗುರುಕೃಪೆ ನೋಡುದು ಕೌತುಕ ಗೂಡಿನೊಳನೇದಾ ತ್ರಾಹಿ ತ್ರಾಹಿ 2 ರಾಜಿಸುತಿಹ್ಯ ಶ್ರೀಪಾದ ಅನುದಿನ ತಾ ಸೇವಿಸಬೇಕು ಸುಬೋಧ ಮಾಜದೆ ಗುರುಚರಣಕ್ಕೆ ತನುಮನಧನ ಭಜಿಸಬೇಕು ಸರ್ವದಾ ರಾಜಯೋಗಪ್ರಸಾದ ತ್ರಾಹಿ ತ್ರಾಹಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪರಮೇಷ್ಠಿ ನಿರುತನಿಷ್ಠಿ ಮಾಣದೆ ಕೊಡು ಮನಮುಟ್ಟಿ ಪ ನಾನಾ ನಾಡಿನೊಳು ನೀನೆ ಪಿರಿಯನೆಂದು ಆನಂದ ಮತಿಯಿಂದ ಗಾನವ ಮಾಡುವೆ ಅ.ಪ. ಪುರುಷನಾಮಕ ವಿಧಾತ ಹಂಸವರೂಥ ಸರಸಿಜ ಗರ್ಭ ಶಿವತಾತ ಪರಮ ಗುರುವೆ ವಿಖ್ಯಾತ ಪೂರ್ವ ಮಾರುತ ತಾರತಮ್ಯದೊಳುನ್ನತ ಸಿರಿ ಪರಮಾಣು ಪ್ರದೇಶ ವರ ಶಬ್ದ ಪಿಡಿದು ಪರಿ ಪರಿಯಿಂದಲಿ ಶತಾನಂದ 1 ಜಗವÀ ಪುಟ್ಟಿಸುವ ಮಹಾಧೀರ ತತ್ವಶರೀರ ಮಗುಳೆ ಅನಿರುದ್ಧಕುಮಾರ ಝಗಿಝಗಿಪ ಮಕುಟಧರ ಜೀವನೋದ್ಧಾರ ನಿಗಭಿಮಾನಿ ಚತುರ-ಮೊಗನೆ ಪ್ರಬಲ ಅಹಿಗರುಡಾದ್ಯರಿಗೆಲ್ಲ ಅಗಣಿತ ವಾಕ್ಯನೆ ಹಗಲಿರುಳು ಮನಸಿಗೆ ಸುಖವಾಗುವ ಬಗೆ ಕರುಣಿಸು ನಮ್ಹಗೆಗಳ ಕಳೆದು 2 ವಾರಿಜಾಸನ ಲೋಕೇಶ ಭಕುತಿವಿಲಾಸ ಚಾರುಸತ್ಯ ಲೋಕಾಧೀಶ ಸಾರಹೃದಯ ವಿಶೇಷ ಮಹಿಮನೆ ದೋಷ ದೂರ ನಿರ್ಮಲ ಪ್ರಕಾಶ ಧಾರುಣಿಯೊಳಗವತಾರ ಮಾಡದ ದೇವ ಸಾರಿದೆ ನಿನ್ನಂಘ್ರಿವಾರಿಜಯುಗಳವ ಸಾರಿಸಾರಿ ವಿಜಯವಿಠ್ಠಲನ್ನ ಆರಾಧಿಪುದಕೆ ಚಾರುಮತಿಯ ಕೊಡು 3
--------------
ವಿಜಯದಾಸ
ಪರಲೋಕವಿಲ್ಲೆಂಬೊ ಪರಮ ಪಾಪಿಗಳಿಗೆ ನರಲೋಕವೇ ನರಕವಣ್ಣ ಪ ಪರಲೋಕವಿಹುದೆಂದು ಗುರುಕರುಣವನು ಪಡೆದ ಕುರುಬನದ ಅರಿತನಣ್ಣ ಅ.ಪ ಈಶ ಜಡ ಜೀವರೆಂಬುವ ಭಿನ್ನ ತತ್ವಗಳು ಈಶನೊಬ್ಬನೆ ಕರ್ತನಣ್ಣ ಸಾಸಿರದಿ ಆಸೆ ಭಂಗಗಳ ಪೊಂದುತಲಿರಲು ಮೀಸೆಯನೇತಕೆ ತಿರುವಬೇಕಣ್ಣ 1 ಹರಿಯು ಪರನಲ್ಲದಿದ್ದರೆ ಸರ್ವಭುವನಗಳು ಹರಿಯಧೀನದಲಿರುವುದೇಕೆ ಹರಿಯಧೀನಲಿಲ್ಲದಿದ್ದರೀ ಜಗದೊಳಗೆ ಕೊರತೆಯೇತಕೆ ಮಂದಿಗಳಿಗೆ 2 ದೇವದತ್ತನು ಧನಿಕ ಪ್ರೇತದತ್ತನು ಬಡವ ಯಾವ ಕಾರಣ ವಿಷಮಗತಿಗೆ ಸಾವು ನೋವುಗಳ ಪ್ರತಿಕ್ಷಣಗಳಲಿ ನೋಡಿ ದೊರೆ ಭಾವವಿರುವುದು ನ್ಯಾಯವೇ 3 ಈಶನಿಲ್ಲೆಂಬುವರು ಹೇಸಲಾರರು ಪಾಪ ರಾಶಿ ರಾಶಿಯ ಗಳಿಸಲು ಆಶೆಬಡುಕರ ಜಗವ ನಾಶಮಾಡಲು ರಾಜ ಶಾಸನಕೆ ಬುಡವೆಲ್ಲಿಯಣ್ಣ 4 ಇಂದು ಇದನು ಪಡೆಯುವೆ ಮುಂದೆ ಅಧಿಕ ಧನವನು ಗಳಿಸುವೆ ಸದೆ ಬಡಿಯುವೆನು ಪರರನೆಂಬ ನುಡಿ ತಮಗುಣದ ಬೆದೆಯಲಿರುವನು ನುಡಿವನು 5 ಎಲ್ಲಿಂದ ಬಂದೆ ಹೋಗುವುದೆಲ್ಲಿಗೆಂಬುದನು ಬಲ್ಲವಗೆ ಮುಕುತಿ ಇಲ್ಲೇ ಒಳ್ಳೆ ಮನವನು ಪಡೆದು ಬಲ್ಲವರ ಸೇವೆಯಿಂ ದೆಲ್ಲವನು ತಿಳಿಯಲಳವಣ್ಣ 6 ಕಾಯವಾಚಾಮನಸದಿ ತಪವಗೈಯುತ ಶುದ್ಧ ಭಾವವನು ಗಳಿಸಿರಣ್ಣ ದೇವಗುರು ಪ್ರಾಜ್ಞ ಪೂಜನ ಲಾಭವಿದು ವಿನಯ ಭಾವಕೆ ಪ್ರಸನ್ನರಿವರು 7
--------------
ವಿದ್ಯಾಪ್ರಸನ್ನತೀರ್ಥರು
ಪರಶುರಾಮ ದೇವರು ಬೆಳಗಿರಾರುತಿಯನು ಜಲಜ ನೇತ್ರರೆ ನೀವುಛಲವ ಸಾಧಿಸಿದಂಥ ಚೆಲುವರಾಯನಿಗೆ ಪ ರೇಣುಕಾಸುತ ಕ್ಷೋಣಿಪಾಲಕರ ಕೊಂದುಕಾಮಧೇನುವಿನ ಆಶ್ರಮ ಸ್ಥಾನದಿ ತಂದಾ 1 ಹತ್ತೇಳು ಒಂದು ಅಕ್ಷೋಹಿಣೀ ಸೈನ್ಯಹತ್ಯೆ ಮಾಡುತ್ತ ರಕ್ತದ ನದಿಯನು ಸುತ್ತಹರಿಸಿದವಗೆ 2 ವಂದ್ಯ ಮಹಿಮನೆ ಇಪ್ಪತ್ತೊಂದು ಬಾರಿಲೆ ಕ್ಷಾತ್ರವೃಂದವನಳುಹಿದ ಇಂದಿರೇಶನಿಗೆ 3
--------------
ಇಂದಿರೇಶರು
ಪರಸುಖಕರಾ ಗುರುಬೋಧಸಾರಾ ಮರಣಾ ಜರಾ ದುರಿತಾದಿ ದೂರಾ ಪ ಜೀವಭಾವವಾ ಸಟೆಯಾಗಿ ಗೈವ ದೇವಭಾವನಾ ಬಗೆಸಿನಿಲಿಸುವಾ ಸಾವಿನಂಜಿಕೆ ದೂರಾಗಿ ಮಾಳ್ಪ ಜೀವಂತಮುಕುತಿ ಕರದೀಯುವಾ 1 ದೃಶ್ಯವೆಂದು ತೋರ್ಪ ವಿಶ್ವತ್ಯಾಗ ಮಾಡಿ ದೃಶ್ಯವಸ್ತುವಿಂದ ಬೇರೆನಿಸುವಾ ಶಾಶ್ವತಾದ ಆ ಪದ ತೋರಿ ಮನದ ಕಶ್ಮಲವನು ಕಳೆವ ಭವತಾರಕಾ 2 ಭೇದಭಾವವಾ ಛೇದಿಸುತ ಮನದಿ ಬೋಧನಾರಾಯಣನ ಕೃಪೆ ಪೊಂದಿದಾ ಬೋಧರೂಪ ಗುರುವು ಪೇಳಿರ್ದ ಬೋಧ ಸಾಧು ಶಂಕರಾರ್ಯ ತಾನೆನ್ನುವಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಪರಸೌಖ್ಯ ಪ್ರದ ವಿಠಲ | ಪೊರೆಯ ಬೇಕಿವಳಾ ಪ ದುರಿತ ದುಷ್ಕøತವೆಲ್ಲ | ದೂರ ಓಡಿಸುತಾ ಅ.ಪ. ಅಚ್ಯುತ ಕ್ಷಿತಿ ರಮಣ ಸೇವಾ 1 ಸಾಧನಕೆ ಸಹಕಾರಿ | ಸಾಧು ಜನ ಸತ್ಸಂಗನೀ ದಯದಿ ಒದಗಿಸುತ | ಕಾಪಾಡೊ ಹರಿಯೇ |ಮೋದ ತೀರ್ಥರ ಮತವ | ಭೋಧಿಸುತ ಇವಳೀಗೆಮೋದ ಪಾಲಿಸಿ ಹರಿಯೆ ಉದ್ಧಾರ ಮಾಡೋ2 ಮಾತೃದತ್ತವು ಎನ್ನೆ | ವೆಂಕಟೇಶನ ಪೂಜೆಸಾರ್ಥಕೆನಿಪುದು ಹರಿಯೆ | ಪಾರ್ಥ ಸಾರಥಿಯೇಕಾರ್ತಸ್ವರ ಮೊದಲಾದ | ಅರ್ಥಗಳ ಯೋಚಿಸಳುವಾರ್ತೆ ಎನ್ನನು ಭವವು ಆರ್ತರುದ್ಧರಣಾ 3 ತಂದೆ ಮುದ್ದು ಮೋಹನ್ನ | ಗುರುವನುಗ್ರಹವಿಹುದುಇಂದು ನಿಮ್ಮದಿ ನಮಿಸಿ | ಅಂಕಿತದ ಪದವಾಛಂದದಲ್ಯುದ್ಧರಿಸಿ | ಉಪದೇಶಿಸುತ್ತಿಹೆನುಮಂದನುದ್ಧಟ ತನವ | ತಂದೆ ಮನ್ನಿಪುದೋ 4 ಇಂದು ಮುಖಿ ಹೃದಯದಾ | ಅಂಬರದಿ ಪ್ರಕಾಶಿಸೆನೆನಂದ ತೀರ್ಥಸುವಂದ್ಯ | ಪ್ರಾರ್ಥಿಸುವೆ ನಿನಗೇತಂದೆ ಮುದ್ದು ಮೋಹನ್ನ | ವಿಠ್ಠಲನೆ ಗುರು ಗೋ-ವಿಂದ ವಿಠ್ಠಲ ಎನ್ನ | ಭಿನ್ನಪವ ಸಲಿಸೋ 5
--------------
ಗುರುಗೋವಿಂದವಿಠಲರು