ಒಟ್ಟು 5714 ಕಡೆಗಳಲ್ಲಿ , 131 ದಾಸರು , 3405 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಕಲಕಾರ್ಯಾಂತರ್ಗತನಾಗಿ ಹರಿ ಭಕುತರ ಹೃದಯದಲಿ ನೆಲಸಿ ಭಕುತರ ಮನ ಬಂದಂತೆ ಕುಣಿಸೆ ಅವರನು ಹರಿ ಸಕಲಕಾಲದಲ್ಲೂ ಕಾದು ಕೊಂಡಿದ್ದು ಸಲಹುವ ಶ್ರೀ ಶ್ರೀನಿವಾಸ ಪ. ಯಾವಾಗ ಬರುವನೋ ಭಕ್ತರೆಡೆಗೆ ಹರಿ ಹರಿ ಆವಾಗಲಾಗಮಿಸುವುದೇ ಪರ್ವಕಾಲ ಹರಿಯ ಆವಾಗಲೇ ನೆನದು ಮಿಂದು ಧ್ಯಾನಿಸೆ ಆವಾಗಲೇ ಸಂಧ್ಯಾಸಕಲ ಕರ್ಮವ ನಡೆಸೆ ಯಾವಾಗಲೂ ಹರಿ ತಾ ತನ್ನ ಭಕ್ತರ ಕೈ ಬಿಡ ಯಾವ ಕಾಲದಲ್ಲೂ ಶ್ರೀ ಶ್ರೀನಿವಾಸ 1 ನಾನು ದೊಡ್ಡವ ನೀನು ದೊಡ್ಡವನೆಂದು ಹೊಡೆದಾಡದೇ ನಿಮಗೂ ನಮಗೂ ಮತ್ತೊಬ್ಬನಿಹನು ಹರಿ ನಿಮಗ್ಯಾತಕೀ ಛಲದ ವಾದ ಮನುಜರೇ ಅನುದಿನವೂ ನೆನೆಯಿರಿ ಶ್ರೀಹರಿ ಶ್ರೀ ಶ್ರೀನಿವಾಸನ್ನ ಸಕಲರಿಗೂ ದೊಡ್ಡವನವನೇ ಕೇಳಿ ಸಜ್ಜನರೇ 2 ಕಾಲ ಆ ಕಾಲವೆಂದಿಲ್ಲ ಹರಿಗೆ ತನ್ನ ಭಕ್ತರ ಸಾಕಲು ಈ ಸಮಯ ಆ ಸಮಯವೆಂದು ನೋಡನು ಹರಿ ಇಂಥಾ ಈ ಕರುಣದೊರೆಯೆಲ್ಲಾದರುಂಟೆ ಜಗದಿ ಈ ತನುವಿರುವ ತನಕ ಈ ಪರಮ ಪುರುಷನನು ಬೇಕಾದ ಕಾಲದಲಿ ಈ ಮನುಜ ಜಪಿಸುತಿರೆ ಕಮಲನಾಭ ಶ್ರೀ ಶ್ರೀನಿವಾಸ ಸಲಹದಿರನೇ ನಿನ್ನ ಆಪತ್ತಿಗಾಹ ಶ್ರೀಶ ಶ್ರೀ ವೆಂಕಟೇಶಾ 3 ಜಾಗರದಲೂ ಹರಿ ಕಾವ ನಿದ್ರೆಯಲೂ ಹರಿಕಾವ ಜಾಗರ ಸುಷುಪ್ತಿಯಲಿ ಹರಿ ಜಾಗರಮೂರುತಿ ನಿನ್ನ ಕಾವ ಜಾಗು ಮಾಡದೆ ಭಜಿಸು ಜಾನಕಿರಮಣ ಶ್ರೀ ರಾಮಚಂದ್ರನ್ನ ನಿತ್ಯ ಶ್ರೀ ಶ್ರೀನಿವಾಸನ್ನ ಮನವೆ 4 ಬುದ್ಧಿ ಬಂದಿದ್ದು ಅವನಿಂದ ಬುದ್ಧಿ ಅರಿವುದು ಅವನಿಂದ ಅಪ್ರಬುದ್ಧನಾಗದೇ ಬುದ್ಧಿ ಪೂರ್ವಕ ನೀ ನೆನೆದರೆ ಹರಿ ಬದ್ಧಕಂಕಣ ತೊಟ್ಟಿಹನು ಭಕ್ತರ ಕಾಯೆ ಆ ಶ್ರೀ ಶ್ರೀನಿವಾಸನ ಶುದ್ಧ ಮನದಿ ನೆನೆಮನವೆ 5 ವೈರಿ ಗೆಲ್ಲು ಮೊದಲು ನೀನವರ ವಶವಾಗದೆ ನಿನ್ನ ಮನ ಶುದ್ಧಮಾಡಿಕೊ ಮೊದಲು ನಿನ್ನ ಮನಸಿನಶ್ವಕ್ಕೆ ಬುದ್ಧಿಲಗಾಮು ಹಾಕು ನಿನ್ನ ಬುದ್ಧಿಯಲಿ ಮೊದಲನೆ ಕಾರ್ಯವಿದು ಎಂದರಿ ಈ ಮೊದಲು ನನಿಕಾರ್ಯ ನೋಡಿ ಶ್ರೀ ಶ್ರೀನಿವಾಸ ಒಲಿವ ನಿನಗೆಂದೆಂದು ಮನವೆ6 ಈ ತನವು ಈ ನುಡಿ ಈ ಕಾರ್ಯ ಈ ವಾರ್ತೆ ಈ ಕೃಪೆಯು ಶ್ರೀ ಶ್ರೀನಿವಾಸಗಲದೆ ಅನ್ಯತ್ರವಿಲ್ಲ ಹರಿ ಭಕ್ತರ ಸುಳಾದಿ ಭಕ್ತವತ್ಸಲ ಶ್ರೀ ಶ್ರೀನಿವಾಸಗರ್ಪಿತವೆಂದು ತಿಳಿ ಮನವೆ 7
--------------
ಸರಸ್ವತಿ ಬಾಯಿ
ಸಕಲಾರ್ಥಕಿದೆ ಸುಖ ಸಾಧಿಸಿನ್ನು ನೋಡಿ ಭಕುತಿ ಭಾವದಿಂದ ಸದ್ಗುರು ಸೇವೆಯ ಪೂರ್ಣಮಾಡಿ ಧ್ರುವ ಭಾವವಿಟ್ಟು ನೋಡಿ ಖೂನ ದೇವದೇವೇಶನ ಕಾವ ಕರುಣನೇ ತೋರುತಿಹ್ಯ ತಾ ನಿಧಾನ 1 ನೋಟ ನಿಜಮಾಡಿ ನೋಡಿ ನೀಟ ನಿಜ ಧ್ಯಾನ ಘಾಟ ತಿಳಿದವರಿಗಿದೆ ಗುರುಕೃಪೆಙÁ್ಞನ 2 ಸವಿದುಣ್ಣಬೇಕು ಇದೇ ಸವಿ ಸವಿಯಿಂದ ಆವಾಗ ಮಹಿಪತಿಗಿದೆ ನೋಡಿ ಬ್ರಹ್ಮಾನಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂಕೀರ್ಣ ಇದೇ ವೀಳ್ಯ ಅಡಕ್ಯೆಂಬುದು ನೋಡಿ ಹದನಿಸಿ ನಾಲ್ಕುಗುಣ ಚೂರ್ಣಮಾಡಿ ಧ್ರುವ ಅಡಕೆಂಬದನುಮಾನಪೂಟ ಒಡೆದ ಹೋಳು ಮಾಡಿ ಚೊಕಷ್ಟ ಮಡಿಚಿಮ್ಮನೆಂಬುದು ವೀಳ್ಯ ನೀಟ ತೊಡೆದು ಅಹಂ ಸುಣ್ಣ ಖಾರಟಾ 1 ಗುರುವರ್ಮ ಕಾಚೆಂಬುದು ಪೂರ್ಣ ಸುರಮುನಿ ಜನರ ನಿಧಾನ ತೋರುತಿಹ್ಯದೊಂದೆ ನಿಜ ಖೂನ ಕರಗಿಹೋಯಿತು ಮೂರೊಂದು ವರ್ಣ 2 ವೀಳ್ಯ ಮಾಡಲು ಮರ್ದನ ಕಳದ್ಹೋಯಿತು ಅದರವಗುಣ ಕಳೆ ಹೆಚ್ಚಿತು ರಂಗ ಸಗುಣ ಥಳಿಥಳಿಸುವ ಜ್ಞಾನ ಸುಬಣ್ಣ 3 ನುಂಗಿ ತಾಂಬೂಲ ರಸ ಹಲವಂಗ ಹಿಂಗಿ ಹೋಯಿತು ಭವಭಯಭಂಗ ಕಂಗಳದ್ಯರಿಯತು ಅಂತರಂಗ ರಂಗದೋರಿತ್ಯನ್ನೊಳು ಸತ್ಸಂಗ 4 ವೀಳ್ಯ ಅಡಕಿ ಮಹಿಪತಿಗೆ ನೋಡಿ ತಿಳದವರಿದೆ ನಿಜಪೂರ್ಣ ಮಾಡಿ ಕಳೆದು ಕಲ್ಪನಿ ಕೊನೆ ಆಗ್ಯೀಡ್ಯಾಡಿ ಇಳಿಯೊಳಗಿದೆ ಸವಿ ಸುಖಗೂಡಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂಕ್ಷಿಪ್ತ ವಿರಾಟಪರ್ವ ಕೇಳು ಜನಮೇಜಯರಾಜ ಭೂಮಿ- ಪಾಲ ಪಾಂಡವರ ಸತ್ಕಥೆಯಪ. ಭೂರಿ ವ- ನಾಳಿಯನು ಸಂಚರಿಸಿ ಸಜ್ಜನ ಕೇಳಿಯಲಿ ವನವಾಸದವಧಿಯ ಕಾಲವನು ಕಳೆಕಳೆದು ಬಂದರುಅ.ಪ. ದರ್ವೀಧರಹಸ್ತನಾಗಿ ಮಹಾ ಪರ್ವತದಂತುರೆ ಮಸಗಿ ನಿರ್ವಹಿಸಿ ಸೂದತ್ವವನು ಸಲೆ ಗರ್ವಿತಾಧಮ ಕೀಚಕನ ಕುಲ ಸರ್ವವನು ಸಂಹರಿಪ ಭೀಮ ಪೆ- ಸರ್ವಡೆದ ಗುರುವರ್ಯ ಬಂದನು 1 ಕಡುಗಲಿ ಕಲಿಮಲಧ್ವಂಸ ಎದ್ದು ನಡೆದು ಬಂದನು ಪರಮಹಂಸ ನಿಡುಕಿ ಮನದಿ ವಿರಾಟರಾಯನ ಪೊಡವಿಗಿಡೆ ಪದ ಕೀಚಕಾಖ್ಯನ ಎಡದ ಭುಜ ಕಂಪಿಸಿತು ಮೂಜಗ ದೊಡೆಯನುಡುಪತಿಕುಲಶಿಖಾಮಣಿ2 ಗಂಗಾದಿ ನದಿಗಳ ತೀರ ಪಟ್ಟ ಣಂಗಳ ಗೈದ ಸಂಚಾರ ತುಂಗಬಲ ಮಲ್ಲರುಗಳನು ಸಲೆ ಸಂಘಟಿಸಿ ಜೀಮೂತವೀರಪ್ಪ ಸಂಗದಲಿ ವೈರಾಟಪುರ ರಾ ಜಾಂಗಣಕೆ ಭದ್ರಾಂಗ ಬಂದನು3 ಇಂತು ಮಲ್ಲರನೆಲ್ಲ ಸದೆದು ಬಲ ವಂತರಿರಲು ನೃಪಗೊಲಿದು ಸಂತಸವ ಬಡಿಸುತ್ತಲಿರಲ್ವಾ ಕುಂತಿತನಯರು ಹರಿಯ ನಾಮವ ಚಿಂತಿಸುತ ದಶಮಾಸ ಕಳೆದಾ ನಂತರದ ವೃತ್ತಾಂತವೆಲ್ಲವ4 ಕಥೆಯಂತೆ ಹಿಂದೆ ರಾವಣನ ಕೆಟ್ಟ ಗತಿಗನುಚರ ಕೀಚಕನ ಸ್ಥಿತಿಯು ದ್ರುಪದಜೆಗಾದ ಮಾನ ಚ್ಯುತಿಗೆ ಕಾರಣನಾದ ಜಡ ದು- ರ್ಮತಿ ಖಳಾಧಮನೊಂದು ದಿನ ನೃಪ ಸತಿಸಭೆಗೆ ಅತಿ ಹಿತದಿ ಬಂದನು5 ಪಾಪಿ ಕೀಚಕನಿಗಿಂತುಸುರಿ ದ್ರುಪದ ಭೂಪಾಲಕನ ಕಿಶೋರಿ ಶ್ರೀಪತಿಯ ನಾಮವನು ಸ್ಮರಿಸುತ- ಲಾ ಪತಿವ್ರತೆ ತೊಲಗಲಂಗಜ ತಾಪತಪ್ತಾಂತಃಕರಣ ನಾ ಪರಿಯ ಮತಿ ವ್ಯಾಪಿಸಿದನು6 ಲಾಲಿಸಿ ಮಾಲಿನಿವಚನ ತೋಷ ತಾಳಿದ ದುರ್ಗುಣಸದನ ಕಾಲಪಾಶದಿ ಬಿಗಿವಡೆದು ಹೇ- ರಾಳ ಮುದಕೀಲಾಲ ಸಲೆ ಕ- ಲ್ಲೋಲಜಾಲದಿ ಮುಳುಗಿ ನರ್ತನ ಶಾಲೆಗಾಗಿ ಕರಾಳ ಬಂದನು7 ಮಥಿಸಿ ಕೀಚಕನ ಮಂಟಪದಿ ದ್ರುಪದ ಸುತೆಗೆ ತೋರಿಸಲತಿ ಮುದದಿ ಸತಿಶಿರೋಮಣಿ ಕಂಡು ಮನದೊಳ- ಗತುಳ ಹರುಷವನಾಂತು ಸರ್ವೋ ನ್ನತಭುಜನ ಚುಂಬಿಸಿದಳು ಪತಿ ವ್ರತೆಯರ ಶಿರೋರತುನೆ ಪಾವನೆ8 ಇತ್ತ ವಿರಾಟನಗರದ ಸರ್ವ ವೃತ್ತಾಂತವೆಲ್ಲವ ತಿಳಿದ ಧೂರ್ತ ದುರ್ಯೋಧನ ದುರಾಗ್ರಹ ಚಿತ್ತಗ್ರಹಿಸಿದ ಕಾರ್ಯಕಾರಣ ವೃತ್ತಿಯಲ್ಲಿ ಪಾಂಡವರು ನಿಜವೆಂ- ದಾಪ್ತಜನರೊಳು ವಿಸ್ತರಿಸಿದನು9 ಕರ್ಣ ದ್ರೋಣ ಕೃಪಾ ದ್ಯರು ಕೂಡಿ ಕುಜನಪ್ರವೀಣ ಪೊರಟ ಪರಮೋತ್ಸಾಹ ಸಾಹಸ ಭರತಿ ಕೌರವರಾಯ ಮತ್ಸ್ಯನ ಪುರವರ ಸಮೀಪದಿ ಸುಶರ್ಮನ ಕರೆದೊರೆದ ಭೂವರ ನಿರ್ಧರ10 ನುಡಿಯ ಕೇಳುತಲಿ ಸುಶರ್ಮ ನಿಜ ಪಡೆಯ ನೆರಹಿ ವೈರಿವರ್ಮ ದೃಢಕರಿಸಿ ದಿನಮಣಿಯು ಪಶ್ಚಿಮ- ಕಡಲ ಸಾರುವ ಸಮಯ ಗೋವ್ಗಳ ಪಿಡಿದು ಗೋಪರ ಕೆಡಹಿ ಬೊಬ್ಬಿ- ಟ್ಟೊಡನೊಡನೆ ಪಡಿಬಲವನರಸಿದ11 ಹಾರಿಸಿದನು ರಥ ಪಾರ್ಥ ನರ ನಾರಿವೇಷದ ಪುರುಷಾರ್ಥ ತೋರಿಸುವೆನೆಂಬುತ್ಸಾಹದೊಳು ಬ್ಬೇರಿ ಮನದೊಳು ಕೃಷ್ಣನಂಘ್ರಿಸ- ರೋರುಹಕೆ ಮಣಿದುತ್ತರನ ಸಹ ಸೇರಿ ನಗರದ್ವಾರ ದಾಟಿದ12 ಭೀತಿಯ ಬಿಡು ಬಾರೆಂದು ಪುರು ಹೂತಸುತನು ಎಳತಂದು ಘಾತಿಸುವೆ ರಿಪುಬಲವನೆಂದು ವ- ರೂಥದಲಿ ಕುಳ್ಳಿರಿಸಿ ನೃಪತನು ಜಾತಸಹ ಪಿತೃವನದ ಮಧ್ಯ ಶ- ಮೀತರುವಿನೆಡೆಗೋತು ಬಂದರು13 ಇಂತು ತಿಳಿಸುತಲರ್ಜುನನು ಬಲ ವಂತನು ಧನುಶರಗಳನು ತಾಂ ತವಕದಿಂ ಧರಿಸಿ ವಿಜಯ ಮ- ಹಾಂತ ವೀರಾವೇಶಭೂಷಣ ವಾಂತು ಶಂಖನಿನಾದದಿಂ ರಿಪು ತಿಂಥಿಣಿಯ ಭಯಭ್ರಾಂತಗೊಳಿಸಿದ 14 ಹೂಡಿ ಬಾಣವನುರ್ಜುನನು ಚೆಂ- ಡಾಡಿದ ರಿಪುಬಲವನ್ನು ಮೂಢ ದುರ್ಯೋಧನನ ಕಣೆಗಳ ಜೋಡಣೆಗಳಿಂ ಬಿಗಿದು ತನ್ನೋಶ ಮಾಡಿಕೊಂಡನು ಗೋಪಗೋವ್ಗಳ ನಾಡಲೇನದ ಪ್ರೌಢತನವನು15
--------------
ತುಪಾಕಿ ವೆಂಕಟರಮಣಾಚಾರ್ಯ
ಸಖಿ ನೋಡ ದ್ವಾಪರ ಯುಗವ ದ್ವಾಪರಯುಗವ ಅಪಾರ ಭಾಗ್ಯವ ಶ್ರೀಪತಿ ಇವರಿಗೊಲಿದಿರುವ ಸಖಿ ಪ. ಪಾದ ಬಲ್ಲಷ್ಟು ಬಲಗೊಂಡುಗೊಲ್ಲರ ಅರಸು ಜನಿಸಿದ ಗೊಲ್ಲರ ಅರಸು ಜನಿಸಿದ ಯುಗ ಧರ್ಮಎಲ್ಲವಿಸ್ತಾರ ರಚಿಸುವೆ ಸಖಿ 1 ಅಕ್ಕ ದ್ವಾಪರ ಧರ್ಮ ಶಕ್ಯವೆ ವರ್ಣಿಸಲುಲಕುಮಿದೇವಿಗೆ ವಶವಲ್ಲಲಕುಮಿದೇವಿಗೆ ವಶವಲ್ಲ ಯುಗಧರ್ಮತಕ್ಕಷ್ಟು ಹೇಳಿ ರಚಿಸುವೆ ಸಖಿ2 ಭೂಪ ದ್ವಾಪರದಲ್ಲೆ ಪಾಪಿ ಒಬ್ಬನಿಲ್ಲತಾಪಕೋಪಗಳು ಮೊದಲಿಲ್ಲತಾಪಕೋಪಗಳು ಮೊದಲಿಲ್ಲ ಧರೆ ಮ್ಯಾಲೆ ತಾಪಸ ಜನವೇ ಹರವಿತ್ತು ಸಖಿ 3 ಅಕ್ಷಯ ದ್ರವ್ಯವಲಕ್ಷ್ಯವಿಲ್ಲದಲೆ ಕೊಡುವೋರುಲಕ್ಷ್ಯವಿಲ್ಲದಲೆ ಕೊಡುವೋರು ರಂಗನ ರಕ್ಷೆಯ ಮಾಡಿಜೈಸೋರು ಸಖಿ 4 ಕೃಷ್ಣನ ಪಾದದಲೆ ನಿಷ್ಠೆಯುಳ್ಳವರನ್ನುದೃಷ್ಟಿಲೆ ನೋಡಿ ಸಹಿಸದೆದೃಷ್ಟಿಲೆ ನೋಡಿ ಸಹಿಸದೆ ಧರೆಮ್ಯಾಲೆ ಪುಟ್ಟಿದನಾಗ ಕಲಿಬಂದು ಸಖಿ5 ಸತ್ಯಶೌಚ ಆಚಾರ ಉತ್ತಮ ಧರ್ಮತತ್ವವಿಚಾರ ಮೊದಲಿಲ್ಲತತ್ವವಿಚಾರ ಮೊದಲಿಲ್ಲ ಧರೆ ಮ್ಯಾಲೆ ದೈತ್ಯಮಯವಾಗಿ ಜಡದಿತು ಸಖಿಯೆ 6 ಹರಿಗುರುಗಳರಿಯದ ಪರಮ ಪಾಮರಜನ ಧರೆಯ ಮೇಲಾಗ ಜನಿಸಿತುಧರೆಯ ಮೇಲಾಗ ಜನಿಸಿತು ರಾಮೇಶನಪರಮ ಭಕ್ತರನ ದಣಿಸಿತು ಸಖಿಯೆ 7
--------------
ಗಲಗಲಿಅವ್ವನವರು
ಸಂಗಬೇಡವೈ ಆಶಾ ಪ ಸಂಗದಿಂದ ನಿನಗೆ ಅಂಗವೇ ಭಂಗವಾಹುದೈ ಅ.ಪ ಇದ್ದ ಕಡೆ ಇರಲೀಸದು | ಅ ಶುದ್ಧ ಮನುಜನಾದರೆಯು ಅ - ವಿದ್ಯದಿ ಮುಳುಗಿಸುವುದು 1 ನೋಡಿದುದು ಬಯಸುವುದು | ಬಲು ಮೋಡಿಯಿಂ ತಿರುಗಿಸುವುದು ಮಾಡಿಸಿ ಮಾಡಿಸಿ ದಣಿಸುವುದು 2 ಹಣವಿದ್ದರು ಕಳೆವುದು | ದುರ್ ಮನದಿ ಸಾಲ ಮಾಡಿಸುವುದು ಗುಣಿಯಲಿ ದುರ್ಗುಣವೇ ಕಾಣಿಸಿ ಹೆಣಕೆ ಸಮವೆಂದೆನಿಸುವುದು 3 ಬೋಧೆಯ ಕೇಳಲೀಯದು | ಮನೋ ವ್ಯಾಧಿಯಲ್ಲಿ ಕೃಶಿಸುವುದು ಹಾದಿ ಹೋಕರ ಕಂಡವರಂತೆ ಸಾಧನವ ಮಾಡಿಸುವುದು 4 ಅನ್ನಬಾರದನ್ನಿಸುವುದು ತಿನ್ನಬಾರದ್ದು ತಿನ್ನಿಸುವುದು ನನ್ನದೂ ನಾನೆಂಬ ಗರ್ವದಿ ಇನ್ನೂ ಮುನ್ನೆ ಕೆಡಿಸುವುದು 5 ಆಗೋ ಕಾರ್ಯ ಮಾಡಲೀಯದು ಹೋಗದೂರಿಗೇ ಹೊರಡಿಸುವುದು ಭೋಗಗಳೊಳಪೇಕ್ಷೆ ಪುಟ್ಟಿಸಿ ರೋಗದಿ ಬಳಲಿಸುವುದು 6 ಕೋಪಾದಿಗಳು ಹೆಚ್ಚುವುದು ಪಾಪಬುದ್ದಿ ಪುಟ್ಟುವುದು ಶರಣರಿಗಿದು ಸಲ್ಲದು 7
--------------
ಗುರುರಾಮವಿಠಲ
ಸಂಗಸುಖವ ಬಯಸಿ ಬದುಕಿರೋ ರಂಗವಲಿದ ಭಾಗವತರ ಪ ಸಂಗಸುಖವ ಬಯಸಿ ಬದುಕಿ ಭಂಗಪಡಿಪ ಭವವ ನೂಕಿ ಹಿಂಗದೇ ನರಸಿಂಗನನ್ನು ಕಂಗಳಿಂದ ಕಾಣುತಿಹರ ಅ.ಪ. ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ ನಿತ್ಯ ಮುದ್ದು ಕೃಷ್ಣ ಕೀರ್ತನೆಯನು ಪಾಡುತ ಕಾವ್ಯಕರ್ಮ ಬಿಟ್ಟು ಭಕ್ತಿಯನೆ ಮಾಡುತ ಮಧ್ವಮತವ ಪುಷ್ಟಿಗೈಸಿ ಖಳರ ಕಾಡುತ ಬಂದ ಲಾಭ ನಷ್ಟ ತುಷ್ಟಿಗಳಿಗೆ ಒಡಂಬಟ್ಟ ಬಗೆಯ ಪೇಳಲೆಷ್ಟು 1 ಭೂತದಯಾಶೀಲರಾದ ನೀತ ಗುರು ಜಗ- ನ್ನಾಥ ವಿಠಲಾಂಕಿತವನು ಪಡೆದು ಸಂಗೀತ ವೃತ್ತ ಪದ ಸುಳಾದಿಯ ಪೇಳಿ ಪ್ರೇ- ಮಾತಿಶಯದಿ ಒಲಿಸಿಕೊಂಡು ಮಧುವಿರೋಧಿಯ ಒಲಿಸಿಕೊಂಡ ಜಾತರಾಗಿ ಜವನಬಾಧೆಯ ಬಯಲು ಮಾಡಿ ಖ್ಯಾತರಾಗಿಹರು ಪುಸಿಯ ಮಾತಿದಲ್ಲ ಮರೆಯಸಲ್ಲ 2 ಮೇದಿನಿಯೊಳಗುಳ್ಳ ಗಂಗಾದಿತೀರ್ಥ ಸತಿಗಳಿವರ ಕಾದುಕೊಂಡಿಹರು ಬಿಡದೆ ಸ್ವಾದಿರಾಜೇಂದ್ರರ ಪ್ರ- ಸಾದದಿಂದ ಹರಿಕಾಥಾಮೃತ ಸಾರತತ್ವ ಸಾಧುಜನರಿಗಾಗಿ ಪ್ರಾಕೃತ ಪದ್ಧತಿಯಲಿ ಸಾದರದಲಿ ಪೇಳಿ ದುಷ್ಕøತ ದೂರಮಾಡಿ ಮೋದಿಸುವರಿಗೆಣೆಗಾಣೆ ಶ್ರೀದವಿಠಲನಾಣೆ 3
--------------
ಶ್ರೀದವಿಠಲರು
ಸಂಚಿತ ಕರ್ಮವಂತೆ ಕಂತೆ ಮುಂಗಡ ಪ ಬರೆದ ಬರೆಹ ತೊಡೆದ ಮೇಲೆ ಕರೆದರಾಗ ಹೋಗಬೇಕುನೆರೆದು ಸುತ್ತಮುತ್ತ ಕುಳಿತ ಪರಮ ಬಂಧುವರ್ಗವೆಲ್ಲಇರಿಸಬೇಡಿ ಸುಡುಸುಡೆಂಬರು ಸುಟ್ಟಬಳಿಕಭರದಿ ಬಂದು ಮನೆಯೊಳೆಂಬರು ಪಾಪಿ ಸತ್ತತರುಣಿ ಕೆಟ್ಟಳೆಂದುಕೊಂಬರು ಆತ್ಮ1 ಸತಿಯು ಸುತರು ಪುತ್ರಿ ಮಿತ್ರರತಿಶಯದೊಳು ತಂದೆ ತಾಯಿಅತಿ ವಿನೋದಗೈಯುವ ಭಾವ ಜತನವೆಂಬೊ ಅತ್ತೆ ಮಾವಜೊತೆಗೆ ಹುಟ್ಟಿದಣ್ಣ ತಮ್ಮ ಈ ದೇಹ ತಾನುಸತ್ತ ಗಳಿಗೆ ಮುಟ್ಟಲಮ್ಮರು ಬರಿದೆ ನಾವುವ್ಯಥೆಗೆ ಸಿಕ್ಕಿದೆವೆಂಬರು ಆತ್ಮ 2 ಕಟ್ಟಿದರ್ಧ ಕರೆವ ಎಮ್ಮೆ ಕೊಂಡುಕೊಂಡ ಸಾಲಕದನುಪೋಟು ಮಾಡಿ ಮಕ್ಕಳೊಡನೆ ಅಷ್ಟು ಹೇಳಿ ಸಾವತನಕದುಷ್ಟ ಜನರು ಸುಮ್ಮನಿರುವರೆ ಕೈಯಲೊದಗಿದಷ್ಟು ಧರ್ಮವನ್ನು ಮರೆವರೆ ಆದಿಕೇಶವನ್ನಮುಟ್ಟಿ ಭಜಿಸಿ ಕಡೆಗೆ ಬಿಡುವರೆ ಆತ್ಮ 3
--------------
ಕನಕದಾಸ
ಸಚ್ಚಿದಾನಂದಾತ್ಮ ಪರಿಪಾಹಿ ಪಾಹಿ ಪರಮಾತ್ಮ ಪ ಸಚ್ಚಿದಾನಂದಾತ್ಮ ಮುಕುಂದ ಅಚ್ಯುತಾನಂತ ಗೋವಿಂದ ಆನಂದಾ ಅ.ಪ ಜನರುದ್ಧಾರ ನೀರಜಾಂಡ- ಚರ ಬಾಹಿರಾಂತರ ನಿರುತ ಚರಾಚರದೊಳಗೆ ಸಂಚಾರಾ ಗಂಭೀರ ಗಂಭೀರ ಗಂಭೀರ ವಾರಿವಿಹಾರ ಮಂದರೋದ್ಧಾರಾ ಧರಣಿಸೂಕರ ನರಮೃಗಾಕಾರ ಯಾಚಕ ಧೀರ ನರಪರ ಶಿರತರಿದೆತ್ತಿ ಬಿಲ್ಲನು ದಶಕತ್ತನು ಕ್ಷಣದೊಳು ಕ- ತ್ತರಿಸಿ ತುರುಗಳ ಕಾಯ್ದ ಬತ್ತಲೆ ನಿಂದ ತೊರೆಯುತ ಬಂದ ಗೋವಿಂದಾ ಈ ಭೂ- ಧರದೊಳು ನಲವಿಂದ ಕ್ರೀಡಿಪ ಪರಿಪರಿಯಿಂದ ಸುರಮುನಿಗಣ ಸಂಸ್ತುತಿಯಿಂದ ಗೋವಿಂದ ಗೋವಿಂದ 1 ಕಾಂತಾ ಕಾಂತಾ ಕಾಂತಾ ಕಾಂತಾ ಜಗದಾ- ದ್ಯಂತ ನಿರುತ ನಿಶ್ಚಿಂತ ಗುಣಗಣಭರಿತ ಸಂತತ ನಿನ್ನ ವಾಕ್ ತಂತಿನಾಮ ಧಾಮದಿ ಈ ಜಗ ಬಂಧಿಸಿಹುದು ಆದ್ಯಂತ ಶ್ರೀಕಾಂತ ಶ್ರೀಕಾಂತ ಶ್ರೀಕಾಂತ ಶ್ರೀಕಾಂತ ಶ್ರೀಕಾಂತಾ ಶ್ರೀಕರಾರ್ಚಿತತ್ರಿಗುಣವರ್ಜಿತ ಅನುಪಮಚರಿತ ಆದ್ಯಂತರಹಿತ ಸ್ವರಸಸುಭೋಕ್ತ ಸ್ವಗತಭೇದವಿವರ್ಜಿತ ಅಚ್ಯುತ ಮಚ್ಛಕಚ್ಛಪಾದ್ಯಜಿತಾದಿರೂಪನಿ- ನ್ನಿಚ್ಚೆಯಂತೆ ಸಿರಿಮೆಚ್ಚಿಸಿ ನಿನ್ನ ವಿಚಿತ್ರಕರ್ಮಗಳ ನಿಚ್ಚದಿ ನೋಡಿ ನಲವಿಂದ ಈ ಸೃಷ್ಟಿಲೀಲೆ- ಯ ಚಂದಾ ಚತುಷ್ಟಾತು ನಿನ್ನಯ ದಯದಿಂದ ಈ ಜಗಬಂಧಕ ಶಕುತಿ ನಿನ್ನಿಂದ ಗೋವಿಂದ 2 ದೇವ ದೇವ ದೇವ ದೇವಾದಿವಿಜಯವಂದ್ಯಸ್ವಭಾವ ದೇವ ನಿಜಸದ್ಭಾವ ಭಜಕರ ಕಾವ ಅಭಯವ- ನೀವ ವಿಶ್ವಾದಿ ರೂಪದಿಂದ ಜೀವರ ಭೋ- ಗಾವಸ್ಥಾತ್ರಯದಲಿ ನಡೆಸುತ್ತಿರುವ ಭೂ ದೇವ ಶ್ರೀ- ದೇವ ಭೂದೇವ ದುರ್ಗಾಧವ-ದುರ್ಗಾಧವಾ ನೀವ್ಯಾಪ್ತನು ಸರ್ವ-ತತುವರ ಕ್ರಿ- ಯವಾ ಪ್ರೇರಿಸಿ ನಡೆವ ದೇವ ವ್ಯಾಪಾ ರವ ಮಾಡಿ ಮಾಡಿಸಿ ಎತ್ತಲು ಚೇತನಚಿ- ತ್ತವಿತ್ತು ಪ್ರವೃತ್ತಿಗೈಸಿ ಫಲವಿತ್ತು ಜನು- ಮವ ಸುತ್ತಿಸುತ್ತಿಸಿತಂದಿತ್ತಪೆ ಶ್ರೀಪುರುಷೋತ್ತಮ ನೀನಿರ್ಲಿಪ್ತ ನೀನಂಚಿತ್ಯ ಅನಂತ ಶ್ರೀ ವೇಂಕಟೇಶ ನಿನ್ನಂಥ ಪೊರೆವರಕಾಣೆ ಉನ್ನಂತ ಉರಗಾದ್ರಿವಾಸವಿಠಲ ಶಾಂತ ಮಹಂತ3
--------------
ಉರಗಾದ್ರಿವಾಸವಿಠಲದಾಸರು
ಸಂಜೀವ ದೀಪ್ತಿಪೂರ್ಣ ಪ. ದೇವ ದೇವರದೇವ ನೀನಹುದೊದೇವಕಿಯೊಳವತರಿಸಿ ಗೋಕುಲವನ್ನುಪಾವನ ಮಾಡಿ ಮಡುಹಿಮಾವನ ಮಧುರಾವನಿಯ ಉಗ್ರಸೇನನಿಗಿತ್ತು ದೈ -ತ್ಯಾವಳಿಯ ಸವರಿಜೀವಸಖನಾಗಿ ಪಾಂಡವರೊಳ್ಪಾರ್ಥಸೇವೆ ಕೈಕೊಂಡು ತರಿದು ಕೌರವರ ದ್ವಾ-ರಾವತಿಯಿಂದ ಹಯಮೇಧಕ್ಕೆ ಬಂದದೇವ ನೀನಹುದೊ 1 ಧರ್ಮಾರ್ಜುನರೆಜ್ಞತುರಗರಕ್ಷಕ ಕೃತ-ವರ್ಮಾದ್ಯರುಗೂಡಿ ನಡೆದು ನಿಲ್ಲುತ್ತಮರ್ಮವರಿದು ಮುರಿದು ಹಂಸಧ್ವಜನಧರ್ಮವನು ತಡೆದುಕರ್ಮವಶದಿಂದ ಬಭ್ರುವಾಹನ ಕೈಯ್ಯಾದುರ್ಮರಣವಾದ ವಿಜಯ ಕರ್ಣಾತ್ಮಜಗೆಪೆರ್ಮೆಯಿಂದಸುವಿತ್ತು ಪೊರೆದ ನಿತ್ಯನಿರ್ಮಲಾತ್ಮನಹುದೊ2 ಪಿಂತೆಬಾಹರ್ಜುನರ ಕಂಡು ತಾಮ್ರಧ್ವ -ಜಂ ತಡೆಯೆ ಬಡದ್ವಿಜನಾಗಿ ಶಿಖಿಕೇತು-ವಂ ತಾನು ಬೇಡಿ ವೀರವರ್ಮನ ಗೆಲಿದುಕುಂತಳೇಂದ್ರಗೊಲಿದುದÀಂತಿಪುರಕ್ಕವರನು ತಂದು ಹಯಮೇಧವಂತು ಮಾಡಿಸಿ ಮೈದುನರ ಕಾಯ್ದಹೊಂತಕಾರಿ ಹಯವದನನೆ ಶ್ರೀ ಲಕ್ಷೀ -ಕಾಂತ ನೀನಹುದೊ 3
--------------
ವಾದಿರಾಜ
ಸಡಿಲ ಬಿಡದೆ ಕೈಯ ಪಿಡಿದು ಉದ್ಧರಿಸಯ್ಯ ಬಡವನು ನಾನೈಯ್ಯ - ಕೊಡು ನಿನ್ನ ಸೇವೆಯ ಪ ಒಡಲಿಗೋಸುಗ ಪರರಡಿಗಳ ಪಿಡಿಯುತೆ ಭವ ಕಡಲಿನೊಳಗೆ ಅ.ಪ. ಪಡೆದು ವರಗಳನು ಕಡು ಖೂಳ ರಾವಣ ನಡುಗಿಸಿ ಸುರನರ ಭುಜಗರೊಡೆಯರನ್ನು ಹಿಡಿದು ಮುನೀಶರ ಹೊಡೆದು ಬಡಿದು ಹಿಂಸೆ - ಪಡಿಸುತ್ತ ಯುವತೇರ ದುಡುಕು ಮಾಡುತ್ತಲಿರೆ ಗಡಣೆಗಾರದೆ ಪಾಲ ಕಡಲ ತಡಿಗೆ ಬಂದು ದೃಢ ಭಕ್ತಿಯಲಿ ನಿಂದು ಜಡಜ ಭವಾದ್ಯರು ಪೊಡಮಟ್ಟು ಬೇಡಲು ಕೊಡುತೆ ಅಭಯವನು ಮಡದಿಯನೊಡಗೂಡಿ ಪೊಡವಿಗಿಳಿದು ಬಂದೆ 1 ಸತಿ ಕೌಸಲ್ಯದೇವಿಯ ಬಸುರೊಳು ಸಂಜನಿಸಿ ದಶದಿಶದೊಳು ಯಶ ಪಸರಿಸಿ ಅಸುರೆಯ ಅಸುವನು ಹಾರಿಸಿ ಕುಶಿಕ ಸುತನ ಯಜ್ಞ ಹಸನಾಗಿ ಪಾಲಿಸಿ ನಸುನಗುತಲಿ ಪದಸರಸಿಜ ಸೋಕಿಸಿ ಅಶಮವಾಗಿದ್ದ ಮುನಿಸತಿಯನುದ್ಧರಿಸಿ ಪಶುಪತಿ ಧನುಭಂಗವೆಸಗಿ ಸೀತೆಯ ಕರ ಬಿಸಜವ ನೊಶಗೈದ ಅಸಮ ಸಮರ್ಥ 2 ಚಂದದಿಂ ಶಾಙ್ರ್ಞವನೊಂದಿ ಅಯೋಧ್ಯೆಗೆ ಬಂದು ಪತ್ನಿಯಗೂಡಿ ನಂದದಿಂದಿರುತಿರ್ದು ಬಂದ ಕಾರ್ಯಕೆ ನೆವ ತಂದು ವನಕೆ ಬಂದು ನಿಂದಿರೆ ಜಾನಕಿ ಲಕ್ಷ್ಮಣರೊಡಗೊಂಡು ನೊಂದು ನೃಪನು ದಿನವನ್ನು ಹೊಂದಲು ಕರೆ- ತಂದು ಭರತನಿಗೆ ಅಂದು ರಾಜ್ಯವನೀಯೆ ಬಂದೊಲ್ಲದೆ ಬೇಗ ಬಂದು ವಂದಿಸೆ ಪದ ದ್ವಂದ್ವದ ಪಾದುಕವಂದದಿಂದೊಲಿದಿತ್ತೆ 3 ಚಿತ್ರಕೂಟಾದ್ರಿಯಿಂದತ್ತ ನಡೆದು ನೆಲ ಕೊತ್ತಿ ವಿರಾಧನ್ನ ವತ್ಸ ಲಕ್ಷ್ಮಣ ಸೀತಾ ಯುಕ್ತನು ನೀನಾಗಿ ಪೊರೆಯಲು ಇತ್ತು ಅಭಯವನ್ನು ಉತ್ತಮ ದಂಡಕದಿ ಸ್ತುತ್ಯ ಕುಂಭಜ ಮುನಿಯಿತ್ತ ಧನುವನಾಂತು ಕುತ್ಸಿತ ದನುಜೆಯ ಶಿಕ್ಷಿಸಿ ಖರ ಬಲ ಕತ್ತರಿಸುತೆ ಬೆನ್ಹತ್ತಿ ಮಾರೀಚನ್ನ ತುತ್ತು ಮೂರಾಗಿಸಿದತ್ಯಂತ ಶಕ್ತ 4 ಮೈಥಿಲಿಯಾಡಿದ ಮಾತಿಗೆ ಸೌಮಿತ್ರಿ ಪಾತಕಿ ದಶಮುಖ ಸಾತ್ವೀಕ ವೇಷದಿ ಸೀತೆಯ ನೊಯ್ದೆನೆಂದು ಆರ್ತ ಸ್ವರದಿ ಪೇಳಿ ಮೃತಿಯೊಂದೆ ಖಗಪತಿ ಆತಗೆ ಸದ್ಗತಿಯಿತ್ತು ನಡೆದು ಖಳ ಪೋತಕ ಬಂಧನ ತೋಳ್ಗಳ ಖಂಡಿಸಿ ಪ್ರೀತಿಲಿ ಶಬರಿಗೆ ಮುಕ್ತಿಯ ಪಾಲಿಸಿ ವಾತಸುತನ ಮನ ಪ್ರಾರ್ಥನೆ ಸಲಿಸಿದೆ 5 ಚರಣದಿಂದೊಗೆದು ದುಂದುಭಿಯ ಶರೀರವನ್ನು ತರುಗಳೇಳನು ಒಂದೇ ಸರಳಿನಿಂದುರುಳಿಸಿ ತರಣಿಸುತನ ಭಯ ಹರಿಸಿ ವಾಲಿಯ ಗರ್ವ ಮುರಿಸಿ ವಾನರ ರಾಜ್ಯ ದೊರೆತನ ಸಖಗಿತ್ತೆ ತರುಚರ ತತಿಗಳ ಕೆರಳಿಸಿ ಹರುಷದಿ ಪರನು ಭಕುತನನ್ನು ಕರೆದು ಕುರುಹುಗಳ ನೊರೆದು ಮುದ್ರಿಕೆಯಿತ್ತೆ ಕರುಣವಾರಿಧಿಯೆ 6 ತಿಂಗಳು ಮೀರಿತೆಂದು ಅಂಗದ ಪ್ರಮುಖರು ಕಂಗೆಟ್ಟು ಕುಳಿತಿರೆ ಭಂಗನ ಕಳೆದು ತ - ರಂಗಿಣಿ ಪತಿಯನ್ನು ಲಂಘಿಸಿ ಹನುಮನು ಕಂಗೊಳಿಸುವ ಲಂಕಾ ಪ್ರಾಂಗಣದಲಿ ನಿಂದು ಭಂಗಿಸಿ ಲಂಕಿಣಿಯನು ಸೀತಾಂಗನೆ - ಗುಂಗುರವಿತ್ತುತ್ತಮಾಂಗದ ಮಣಿಯಾಂತು ಕಂಗೆಡಿಸ್ಯಸುರರ ಜಂಗುಳಿಯನು ಭಕ್ತ ಪುಂಗವ ಬರೆ ನಿನ್ನಂಗ ಸಂಗವನಿತ್ತೆ 7 ಹರಿವರರನು ಕೂಡಿ ಶರಧಿಗೆ ಪಯಣಮಾಡಿ ಶರಣ ವಿಭೀಷಣನಿಗೆ ಸ್ಥಿರ ಪಟ್ಟವನು ನೀಡಿ ಭರದಿ ಸೇತುವೆಗಟ್ಟಿ ಅರಿಯ ಪಟ್ಟಣ ಮುಟ್ಟಿ ಧುರಕೆ ದೂತನ್ನ ಅಟ್ಟಿ ಪರಬಲವನು ಕುಟ್ಟಿ ಪುರಕೆ ಉರಿಯನಿಕ್ಕಿ ಶರವರ್ಷಂಗಳ ಕರಿ ರಥಾ ತುರಗ ಪದಾತಿಗ- ಳುರುಳಿಸಿ ದಶಶಿರನುರವನು ಇರಿದು ಪರಮ ಸಾಧ್ವಿಯ ಕರಸರಸಿಜ ಪಿಡಿದೆ 8 ಭಕ್ತ ವಿಭೀಷಣಗೆ ದೈತ್ಯಾಧಿಪತ್ಯವಿತ್ತು ಕೃತ್ತಿವಾಸನ್ನ ಸೇತು ಹತ್ತಿರ ಸ್ಥಾಪಿಸಿ ಪತ್ನಿ ಸಹೋದರ ಮಿತ್ರ ಭೃತ್ಯರ ಕೂಡಿ ಉತ್ತಮ ಪುಷ್ಪಕದಿ ಚಿತ್ರಕೂಟಕೆ ಬಂದೆ ಭಕ್ತನ ಕಳುಹಿ ಸದ್ವøತ್ತವ ಭರತಗೆ ಬಿತ್ತರಿಸಿ ಮಹದುತ್ಸವದಿ ಪುರ ಮತ್ತೆ ಪ್ರವೇಶಿಸಿ ರತ್ನ ಸಿಂಹಾಸನ ಹತ್ತಿ ಶ್ರೀಕಾಂತನೆ ನಿತ್ಯದಿ ಸಲಹುವೆ 9
--------------
ಲಕ್ಷ್ಮೀನಾರಯಣರಾಯರು
ಸಣ್ಣವರುದ್ದುಸಕಾಗಿ ಬಿನ್ನಯಿಸುವೆನು ನಾನುಎನ್ನ ಆಳುವ ದೊರೆಯೆ ನಿನ್ನ ಸ್ವಾತಂತ್ರ್ಯ ಸಂಕಲ್ಪಅರಿತವರಲ್ಲ ಚೆನ್ನಾಗಿ ಸಾಕಬೇಕು ಹರಿಯೆ ಪ. ಸಾಧುಸಂಗಗಳಿಲ್ಲ ಓದಿ ಕೇಳಿದರಲ್ಲಭೇದಅಭೇದಗಳ ಅರಿದುಯಿಲ್ಲಕ್ರೋಧ ಬಿಟ್ಟವರಲ್ಲ ಸಾಧುಗಳು ಯೋಗ್ಯತೆಲಿಹಾದಿ ಏನೀಜೀವರುಗಳಿಗೆ ಹೇ ಸ್ವಾಮಿ 1 ವಸ್ತ್ರದ ಮೂಲವು ಹತ್ತಿಯ ಕಾಳಹುದುಬಿತ್ತಿ ಬೆಳೆಸಿ ಅದರ ವ್ಯಕ್ತಿ ಮಾಡಿವಿಸ್ತರಿಸಿ ನೋಡಿಸಿದರೆ ಪಟ್ಟುವು ಆಗುವುದುವಸ್ತುಗಳ ವ್ಯಕುತಿ ನಿನ್ನಿಂದಾಗಬೇಕು 2 ಮಾಡಲರಿಯರು ತುತಿಯ ನೋಡಲರಿಯರು ನಿನ್ನಬೇಡಲರಿಯರು ತಮ್ಮ ಹಿತದ ಕಾಮಮಾಡುವರು ನಿನ್ನವರ ಮಮತೆಯಾದರು ಮನಸು-ಗೊಡು ಈಪರಿ ಜೀವಗಳಿಗೆ ಗತಿಯೇನೊ 3 ನಿನ್ನಿಂದ ಸೃಷ್ಟಿಯಾದ ಜೀವರುಗಳಿಗಿನ್ನುಇನ್ನು ಮೂರು ಬಗೆಯ ಭಕುತರೊಳಗೆಎನ್ನಿಂದ ಉತ್ತಮ ಮಧ್ಯಮಾಧಮರುಗಳುಇನ್ನಾವ ಇವರ ವಿವೇಕ ನೀ ಬಲ್ಲೆ 4 ಎನಗಿಂದುತ್ತಮರು ಎನಗೆ ಪ್ರಾರ್ಥಿಸುವರುಎನಗೆಂದವರಲೆನಗೆ ಹಿತ ಪೇಳ್ವರುಘನ ಅವರ ಮಧ್ಯಸ್ಥರನು ಹುಡುಕ ತಿಳಿಯದುಅನುವರಿತು ಅವರವರ ಗತಿಗೆ ಅನುಕೂಲನಾಗು 5 ನೀತವನು ನೀ ಬಲ್ಲೆ ಅವರವರ ಸಾಧನವುಯಾತಕೆ ಅವರಗೊಡವೆ ನಿನಗೆ ಎಂಬ್ಯನೀತವಾಗಿದೆ ನೋಡೊ ಪರಸ್ಪರ ಜೀವರಿಗೆಪ್ರಾರ್ಥನೆಯು ಎಂಬುವುದು ಮಾತು ಪುಸಿಯಲ್ಲ 6 ನಿನ್ನವರು ಆಗಿ ಪಾಡನುಬಡುತ ಇಪ್ಪುವರಕಣ್ಣಲಿಕಂಡು ನಾ ಬಿಡುವನಲ್ಲಮನ್ನಿಸು ನಿನ್ನ ಚಿತ್ತ ಮನ್ನಿಸದಲೆ ಪೋಗುಎನ್ನ ಸ್ವಭಾವವಿದೆ ಗೋಪಾಲವಿಠಲ 7
--------------
ಗೋಪಾಲದಾಸರು
ಸಂತರನ ಸ್ಮರಿಸಿ ಜನರು ಸಂತರನ ಸ್ಮರಿಸಿ ಜನ ನಿಂತಲ್ಲಿ ಕುಳಿತಲ್ಲಿ ಇಂತೆಂತು ಸದ್ಧರ್ಮ ಚರಿಸುವ ಕಾಲಕ್ಕೆ ಅಂತರಂಗದಲಿದ್ದು ಚಿಂತೆಯನು ಬಿಟ್ಟು ಸಿರಿ ಕುಂತುಪಿತನೊಲಿಮೆಯಿಂದ ಪ ವ್ಯಾಸ ಶಿಷ್ಯರಾದ ಗುರುಮಧ್ವ ಮುನಿರಾಯ ಮಾಧವ ಮು ನೇಶ ಅಕ್ಷೋಭ್ಯ ಜಯರಾಯ ವಿದ್ಯಾಧಿರಾಜ ಪೋಷಿತ ಕವೇಂದ್ರತೀರ್ಥರಾ ನ್ಯಾಶಿ ವಾಗೀಶ ಯತಿ ರಾಮಚಂದ್ರ ನಂದ ವ್ಯಾಸ ವಿದ್ಯಾಧೀಶರೂ 1 ವೇದಮುನಿ ಸತ್ಯವ್ರತ ಸತ್ಯನಿಧಿ ರಾಯ ಬೋಧ ಮೂರುತಿ ಸತ್ಯನಾಥ ಸತ್ಯಾಭಿನವ ಕ್ರೋಧ ಜಯ ಸತ್ಯಪೂರ್ಣ ಸತ್ಯ ವಿಜಯ ವಿ ನೋದ ಸತ್ಯಪ್ರಿಯರೂ ಭೇದಾರ್ಥ ಬಲ್ಲ ವಿಭುಧೇಂದ್ರ ರಘುತನಯ ಸ ಮ್ಮೋದ ಜಿತಾಮಿತ್ರ ತೀರ್ಥ ಮುನಿಪ ಸುರೇಂದ್ರ ವಾದಿ ಎದೆ ಶೂಲ ವಿಜಯೀಂದ್ರ ಸುಧಿಯೀಂದ್ರ ಹ ಲ್ಲಾದ ರಾಘವೇಂದ್ರರು 2 ಯೋಗೆಂದ್ರ ಭೂಸುರೇಂದ್ರ ಸುಮತೀಂದ್ರ ಉಪೇಂದ್ರ ಯೋಗಿ ಶ್ರೀಪಾದರಾಯರ ಪೀ ಳಿಗೆಯ ಅತಿ ಸಾಧನವು ವ್ಯಾಸರಾಯರ ಪಾರಂಪರಿಯವ ಲೇ ಸಾಗಿ ಎಣಿಸಿ ಕೊಂಡಾಡಿ ಆಗಮನುಕೂಲ ಮಧ್ವ ಶಾಸ್ತ್ರವನುಸರಿಸಿ ವೇಗದಿಂದಲಿ ಮಹಸಂತರಿಗೆ ಶಿರ ನಿತ್ಯ 3 ಕ್ಷೇತ್ರ ಸರೋವರ ನದಿ ಮಿಗಿಲಾದ ದೇಶದಲಿ ಗಾತ್ರ್ರದಂಡಿಸಿ ಮಾಡಿ ಹರಿಯ ಮೆಚ್ಚಿಸುವ ಪಾ ರತ್ರಯವನೇ ಬಯಸುವ ಪುತ್ರ ಪೌತ್ರರ ಕೂಡಿ ಜ್ಞಾನದಲಿ ಇಪ್ಪ ಚ ರಿತ್ರಾರಾ ಮಹಿಮೆ ಕೊಂಡಾಡಿದವರ ವಿ ಚಿತ್ರವನು ಪೊಗಳುವ ದಾಸದಾಸಿಯರ ಪದ ಸ್ತೋತ್ರ ಮಾಡಿರೋ ಆವಾಗ 4 ಉದಯಕಾಲದಲೆದ್ದು ಸಂತನ ಮಾಲಿಕೆಯನ್ನು ಮೃದು ಪಂಚರತ್ನದಲಿ ನಿರ್ಮಿತವಾಗಿದೆ ಸದಮಲರು ಪೇಳಿ ಸಂತೋಷದಲಿ ಕೇಳಿ ಕೊರಲೊಳಗೆ ಪದರೂಪದಲ್ಲಿ ಧರಿಸಿ ಮದ ಮತ್ಸರವು ಪೋಗಿ ವೈರಾಗ್ಯದಲಿ ಸಾರ ಹೃದಯರ ಬಳಿ ಸೇರಿ ಜ್ಞಾನ ಸಂಪಾದಿಸಿ ಪದೋಪದಿಗೆ ವಿಜಯವಿಠ್ಠಲನ ನಾಮಾಮೃತವ ವದನದಿಂದಲಿ ಸವಿದುಂಬ 5
--------------
ವಿಜಯದಾಸ
ಸಂತರಾ ಕೂಡ ಬಾರದೇ | ಏ ಮನುಜಾ ಪ ಸಂತರಾ ಕೂಡಲಾಗೀ | ಭ್ರಾಂತತನವು ಹೋಗಿ | ಅಂತರ ಸುಖದೋರದೇ 1 ಭೃಂಗಿ ಕೀಟಕ ಕೂಡೀ | ಸಂಗದಿ ಧ್ಯಾನ ಮಾಡಿ | ಭೃಂಗಿ ತಾನಾಗಿ ಹಾರದೇ 2 ಗುರು ಮಹಿಪತಿ ಪ್ರೀಯಾ | ದೊರೆವನು ನಿನ್ನಕೈಯ್ಯಾ | ಮರಳುತನವ ಸೇರದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಂತರಾ ಪದವಿಡಿಯೋ ಪ ಸಂತರಾ ಪದವಿಡಿಯೋ | ಭ್ರಾಂತಿಗಳೆಲ್ಲಾ ಕಡಿಯೋ | ಅಂತಭಾವನೆಯಿಂದ ತಂತುವಿಡಿದು ನಿಜ | ಶಾಂತಿಸುಖವ ಪಡಿಯೋ ಮನುಜಾ | ಶಾಂ | 1 ಡಾಂಭಿಕಾತನಗಳೆದು | ಬೆಂಬಲಗುಣವಳಿದು | ಹಂಬಲಿಸದೇ ಮನ ಸ್ತಂಭಪರಿಯ ಮಾಡಿ | ನಂಬುಗೆ ದೃಢ ತಳೆದು ಮನುಜಾ | ನಂ | 2 ನಾನಾರೆಂಬುದು ಮರೆದೀ | ಜ್ಞಾನದೆಚ್ಚರ ತೊರೆದೀ | ಕಾನನ ಹೊಕ್ಕಂತೆ ನಾನಾ ಸಾಧನದಿಂದ | ಏನ ಸುಖವ ಪಡೆದೀ ಮನುಜಾ | ಏ | 3 ಸುಲಭವೇ ಮಾನುಷ ಜನ್ಮ | ಮ್ಯಾಲ ಅಗ್ರಜ ಧರ್ಮಾ | ಚಲಿಸಲಿ ಪರಿಮತ್ತೆ ಇಳೆಯೊಳು ದೊರಕುದೇ | ತಿಳಿನಿಜಗತಿ ವರ್ಮಾ ಮನುಜಾ | ತಿ| 4 ಕೋಟಿ ಮಾತಿಗೆ ವಂದೇ | ನೀಟ ಸುಪಥವಿದೇ | ಧಾಟಿಲಿ ಮಹಿಪತಿ ಸುತ ಪ್ರಿಯನೊಲುಮೆಯಿಂದ | ಕೋಟಿಳಗಳಿನಿಳದೇ ಮನುಜಾ | ಕೋ | 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು