ಒಟ್ಟು 1797 ಕಡೆಗಳಲ್ಲಿ , 110 ದಾಸರು , 1470 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಮಾಡಿದೆ ಮೂಢಮನುಜಾಮಾನವ ಜನುಮದಿ ಬಂದೀ ಜಗದೀ ಪ ದೇಶದ ಸೇವೆಗೆ ತನು ನೀಡಿದೆಯಾಭಾಷೆಯ ಏಳ್ಗೆಗೆ ಮನ ಮಾಡಿದೆಯಾಕಾಸಿಗಾಗಿ ವಂಚಿಸಿ ನಿನ್ನೊಡಲಿನಪೋಷಣೆಗಾಗಿ ದುಡಿದೆಯಲ್ಲದೆ 1 ಆರ್ತರ ದುಃಖವನೀಡಾಡಿದೆಯಾಸ್ವಾರ್ಥದ ಹಂಬಲ ಬಿಟ್ಟು ನಡೆದೆಯಾಪೂರ್ತಿಯಾಗಿ ಜನಹಿತ ನೋಡಿದೆಯಾಧೂರ್ತತನವ ಬರಿದೆ ತೋರಿದೆಯಲ್ಲದೆ 2 ಮದಮತ್ಸರಗಳ ನೆಲಕೆ ಬಡೆದೆಯಾಹೃದಯ ನಿರ್ಮಲಗೊಳಿಸಿ ನುಡಿದೆಯಾಮುದದಿ ಗದುಗಿನ ವೀರನಾರಾಯಣನಪದವನೊಮ್ಮೆಯಾದರೂ ಸ್ಮರಿಸಿದೆಯಾ 3
--------------
ವೀರನಾರಾಯಣ
ಏನು ಮಾಯವೊ ಹರಿಯೆ ಶ್ರೀನಿವಾಸನೆ ನಿನ್ನ ಧ್ಯಾನಿಸುವವರನು ಪೊರೆವೆ ಸಾನುರಾಗದಲಿ ಪ ಜ್ಞಾನಿಗಳು ಹಗಲಿರುಳು ಮೌನದಿಂದಲಿ ಭಜಿಸಿ ದಾನವಾಂತಕ ನಿನ್ನ ಧ್ಯಾನ ಮಾಡುವರು ಅ.ಪ ಬಡತನದಿ ಬಹು ವ್ಯಥೆಯ ಪಡುತ ಸತಿಸುತರಿರಲು ನುಡಿಯೆ ಭಯ ಭಕ್ತಿಯಲಿ ಒಡೆಯರಿಲ್ಲೆಮಗೆ ಮೃಡಸಖನು ಇಹನೆನಲು ಹಿಡಿಯವಲಿಯ ಕೊಡಲು ಕೆಡದ ಸೌಭಾಗ್ಯವನು ಒಡನೆ ನೀಡಿದೆಯೊ 1 ಅಂದು ದುಶ್ಖಾಸನ ನೃಪನಂದನೆಯ ಬಾಧಿಸುತ ನಿಂದು ಸೀರೆಯ ಸೆಳೆಯೆನೊಂದು ದುಃಖಿಸುತ ಇಂದಿರಾಪತಿ ಕೃಷ್ಣ ಇಂದೆನಗೆ ನೀನೆ ಗತಿ ಎಂದೊಡಕ್ಷಯವಿತ್ತು ಅಂದು ಸಲಹಿದೆಯೊ 2 ಮಡುವಿನಲಿ ಗಜರಾಜ ಪಿಡಿದ ಮಕರಿಗೆ ಸಿಲುಕಿ ಮಡದಿ ಮಕ್ಕಳನಗಲಿ ಕಡೆಗೆ ಸೊಂಡಿಲಲಿ ಪಿಡಿದ ಕುಸುಮವನು ಜಗದೊಡೆಯಗರ್ಪಿತವೆನಲು ದಡದಡನೆ ಬಂದೆಯೊ ಮಡದಿಗ್ಹೇಳದಲೆ 3 ಅಂದು ದೂರ್ವಾಸಮುನಿ ಬಂದು ಶಿಷ್ಯರ ಸಹಿತ ಇಂದೆಮಗೆ ಹಸಿವೆನಲು ನೊಂದು ಶ್ರೀಹರಿಯೆ ತಂದೆ ನೀ ಸಲಹೆನಲು ಬಂದೆ ಬಹಳ್ಹಸಿವೆಯಲಿ ಒಂದು ಪತ್ರದ ಶಾಖ ಉಂಡು ಸಲಹಿದೆಯೊ 4 ಹಿಂದಜಾಮಿಳ ತನ್ನ ಬಂಧುಬಳಗವ ತ್ಯಜಿಸಿ ಅಂದು ಇಹಸುಖದಿ ಆನಂದ ಪಡುತಿರಲು ಬಂದರಾಗ ಯಮಭಟರು ನಿಂದು ಬಾಧಿಸುತಿರಲು ಕಂದನಾರಗನೆನಲು ಅಂದು ಸಲಹಿದೆಯೊ 5 ಚಿಕ್ಕವನು ಪ್ರಹ್ಲಾದ ಮಕ್ಕಳಾಟದ ಧ್ರುವನು ರಕ್ಕಸಾಂತಕನ ಮೊರೆ ಇಕ್ಕಿ ಪ್ರಾರ್ಥಿಸಲು ತಕ್ಕವರಗಳನಿತ್ತು ತಕ್ಕೈಸಿ ಅಣುಗನನು ಮಿಕ್ಕಭಕುತರ ಪೊರೆದೆ ಲಕ್ಕುಮಿಯ ರಮಣ 6 ಈ ಪರಿಯಲಿ ಬಹುಭಕುತರಾಪತ್ತುಗಳ ಹರಿಸಿ ಶ್ರೀಪತಿಯ ರಕ್ಷಿಸಿದಿ ಆಪನ್ನಜನರ ಗೋಪತಿ ಕೃಷ್ಣ ಜಗದ್ವ್ಯಾಪಕನೆ ನೀ ಸಲಹಿ ತಾಪಸರ ಒಡೆಯ ಹೃದ್ವ್ಯಾಕುಲವ ಕಳೆವೆ 7 ಕಾಳಿ ಮಡುವನೆ ಧುಮುಕಿ ಕಾಳಿಂಗನ್ಹೆಡೆ ತುಳಿದೆ ಕಾಳದೇವಿಯರಮಣ ಕಾಲಿಗೆರುಗುವೆನು ಕಾಳಯುಕ್ತಿನಾಮ ಸಂವತ್ಸರದಿ ಸುಜನರಿಗೆ ಭಾಳ ಸುಖಹರುಷಗಳ ಲೀಲೆ ತೋರಿಸುವ 8 ಭ್ರಮಿಸಿ ಇಹ ಸುಖದಿ ಮನ ಶ್ರಮ ಪಡುತಲಿರೆ ದೇವ ರಮೆಯ ರಮಣನೆ ಪೊರೆಯೊ ಮಮತೆಯನು ಬಿಡದೆ ಕಮಲಸಂಭವಜನಕ ಕಮಲನಾಭ ವಿಠ್ಠಲ ಸುಮನಸರ ಒಡೆಯ ಹೃತ್ಕಮಲದಲಿ ಪೊಳೆವ 9
--------------
ನಿಡಗುರುಕಿ ಜೀವೂಬಾಯಿ
ಏನು ಸುಕೃತದ ಫಲವೋ ಶ್ರೀನಿವಾಸನೆ ಹೇಳು ಹಾನಿಯಾಗಿಯೆ ಅವಮಾನ ತೋರುತಿದೆ ಪ ವಾಸುದೇವನೆ ಎನ್ನ ಈಸು ದಿನ ಪರಿಯಂತ ಬೇಸರಿಲ್ಲದೆ ಕಾಯ್ದೆ ಲೇಸ ಕರುಣಿಸಿದೆ ಈಸಾಡಿದೆನು ನಾನು ಈ ಗೃಹದೊಳೀಗೇನು- ದಾಸಿನವು ನಿನಗಾಯಿತು ಮೋಸ ಯೋಚಿಪರೆ 1 ಹಗಲುಗತ್ತಲೆಯಾಗಿ ಮೊಗವು ಕಾಣದೆ ಎನಗೆ ಜಗದುದರ ನಿನ್ನಾಣೆ ನಗೆಯಾಯ್ತು ಜಗಕೆ ಹಗಯ ಮಧ್ಯದಿ ಸಿಲುಕಿ ಮೃಗವು ಬಾಯ್ಬಿಟ್ಟಂತೆ ಮಿಗ ಕ್ಲೇಶಬಟ್ಟು ನರಮೃಗವು ತಾನಾದೆ 2 ಆರು ಹಿತವರು ಇಲ್ಲ ಧಾರುಣಿಯ ಬಲವಿಲ್ಲ ಪಾರಾಗಿ ನಾಚಿಕೆಯು ಬೇರೂರಿತು ಘೋರ ಅಡವಿಯೊಳಗೆ ಗಾರುಗತ್ತಲೆ ಸುತ್ತಿ ಮಾರಿದೆಯ ಚೋರರಿಗೆ ದಾರಿಗಾಣಿಸದೆ 3 ದೊರೆಯು ಮನ್ನಿಸಿ ಕೊಡಲು ನೆರೆಹೊರೆಯ ಕರೆಕರೆಯು ಹರದಿಯೊಳು ನಂಬಿಗೆಯು ಕಿರಿದಾಯಿತು ನೆರವಾಗಿ ತೋರುತಿದೆ ಬರಿಯ ವೃಕ್ಷದ ತೆರದಿ ಮರುಳು ಕಣ್ಣಿಗೆ ಇರುವೆ ಕರಿಯ ತೆರನಂತೆ 4 ಇನ್ನು ಬಂಧಿಸಬೇಡ ಎನ್ನಿಂದ ಅಳವಲ್ಲ ಬನ್ನಬಡುವುದು ಎಲ್ಲ ನಿನ್ನ ಮನಕರುಹು ಕರ್ಮ ಬೆನ್ನು ಬಿಡುವಂದದಲಿ ಪನ್ನಗಾದ್ರಿನಿವಾಸ ಪಾಲಿಸೈ ಲೇಸ 5 ದಾಸ ಬಳಲಿದನೆಂಬ ಹೇಸಿಕೆಯ ಮಾತುಗಳ ಕಾಸಕೊಟ್ಟೇಕೆ ನಿರಾಸೆ ಮಾಡುವಿಯೊ ಬೇಸರಾಗದೆ ಪಂಥವಾಸಿಯಿಲ್ಲವೆ ನಿನಗೆ ಸಾಸಿರಾಕ್ಷನೆ ಎನಗೆ ಲೇಸಿತ್ತು ಸಲಹೊ 6 ಪಡೆದ ತಂದೆಯು ನೀನೆ ಕೊಡುವ ಒಡೆಯನು ನೀನೆ ಕಡೆಗೆ ಕೈವಿಡಿದು ಎನ್ನ ರಕ್ಷಿಪನು ನೀನೆ ಮಡದಿ ಮಕ್ಕಳನೆಲ್ಲ ಬಿಡದೆ ಸಲಹುವ ನೀನೆ ಪೊಡವಿಗಧಿಪತಿಯಾದ ವರಾಹತಿಮ್ಮಪ್ಪ 7
--------------
ವರಹತಿಮ್ಮಪ್ಪ
ಏನು ಹೇಳಿದರೇನು ಪಾಮರ ಜ್ಞಾನಿಯಾಗಬಲ್ಲನೇ | ನಡೆವ ಮನುಜಗೆ ಪ ಎತ್ತಿಗುತ್ತಮ ಲಿಂಗ ಮುದ್ರೆಯನ್ನೊತ್ತಿದ್ದರೆ ಬಸವನೆಂಬರು | ಕತ್ತೆಯನು ಹಿಡಿ ತಂದು ವತ್ತಲು ಕತ್ತೆಯಲ್ಲದೆ ಬಸವನಪ್ಪುದೆ 1 ಚಿನ್ನ ಬಿಳುಪಿರೆ ಪುಟವನಿಕ್ಕಲು ಬಣ್ಣ ಹೆಚ್ಚುತ ಬಾಹುದು | ಬಿಟ್ಟುದೋರುದೆ 2 ಸ್ವಾತಿ ಜಲಬಿಂದುದುರೆ ಸಿಂಪಿನೊಳಿಂತು ಮೌಕ್ತಿಕವಾಹುದು | ಅಂತ ಘಲ್ಲಿಯೊಳಹದೆ ಜಗದೋಳು ತಾತ ಮಹಿಪತಿ ಕಂದ ಸಾರಿದ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನೆಂದು ಬಣ್ಣಿಸುವೆನು ಗುರುವಿನ ನಾನು | ತಾನಂದವರಿಗಿನ್ನು ಸ್ವಾನಂದ ಸುಖವ ನೀಡುವಾ ಪ ತಾಯಿಯಂಬೆನೆ ಮೋಹದೀ | ಬಾಲಕ ಧೃವನಾ | ತಾಯಿಗಾಯ್ದಳೆ, ಸ್ನೇಹದಿ ಜನಕನೆಂಬೆÉನೆ | ನ್ಯಾಯದಿ ಪ್ರಲ್ಹಾದನ ಜನಕ ಕಾಯ್ದನೆ ನೋಡಮ್ಮಾ 1 ಬಂಧುಯಂಬೆನೆ ಜಗದೊಳು ವಿಭೀಷಣನ್ನಾ | ಬಂದು ಕಾಯ್ದನೆ, ಇಳೆಯೊಳು ಆಪ್ತನೆಂಬೆÉನೆ | ಸದು ವಿಗ್ರಹದಿ ಗಜೇಂದ್ರರ ನಾಪ್ತರು ಕಾಯ್ದರೇ 2 ಇಂತು ಸಂಬಂಧ ಸ್ನೇಹದಾ | ಸಾಸಿರ ಮಡಿಯಾ | ಸಂತತ ಕೃಪೆಯಾ ಬೀರಿದಾ | ಮಹಿಪತಿ ಕಾಯಾ | ಪಂಥವರಿಯದಾ ಪರಮ ಭ್ರಾಂತನಾನು | ದ್ಧರಿಸಿದ ನೆನ್ನಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನೆಂದ್ಹೇಳಲಿ ತಂಗಿ _ ಏನೆಂದ್ಹೇಳಲಿ ತಂಗಿ _ ಏನೆಂದ್ಹೇಳಲಿ ರಂಗನ ಮಹಿಮೆಯ ಏನೆಂದ್ಹೇಳಲಿ ಪ ಘನ್ನಸಿರಿವಿಧಿ ಧ್ಯಾನಕೆ ನಿಲುಕದ ಅಗಣಿತ ಮಹಿಮೆಯ ಅ ಎಲ್ಲವ ಬಲ್ಲನು ಎಲ್ಲವ ಮಾಡುವ ಎಲ್ಲರ ಒಡೆಯನು ಇಲ್ಲದ ಸ್ಥಳವಿಲ್ಲ ಬಲ್ಲವರಿಲ್ಲವೆ ಫುಲ್ಲನಾಭನ ನಲ್ಲನು ಲಕ್ಷ್ಮಿಗೆ ಗೊಲ್ಲನು ಆದನೆ 1 ಅಂಗನೆ ಲಕ್ಷ್ಮಿಯ ಸೊಗಸಿಗೆ ನಿಲುಕದ ಅಂಗನೆ ಇಲ್ಲದೆ ಮಗನನು ಪಡೆದವ ಹಿಂಗದ ತಾನೆ ಅಂಗನೆ ಯಾದವ ರಂಗನ ಗೋಕುಲ ಹೆಂಗಳ ಕೂಡಿದನೆ2 ತಂದೆಯ ಕೊಂದನು ಕಂದನ ಸಲಹಿದ ಕಂದನ ಕೊಂದನು ತಂದೆಯ ಸಲಹಿದ ಬಂಧುಗಳೆನ್ನದೆ ಕೊಂದನು ವಂಶವ ತಂದೆಯು ಇಲ್ಲದೆ ಕಂದನು ಆಗುವನೇ 3 ದಾನವ ನೀಡಿದ ದಾನಿಯ ತುಳಿದನು ಮಾನವ ತೆಗೆದಾ ಹೀನನ ಸಲಹಿದ ದೀನರ ಸಲಹುವ ದಾನವರಳಿವನು ಜ್ಞಾನಿಗಮ್ಯನು ಮಾನಸ ಹಂಸನ 4 ಹಸಿವೆಯ ಅರಿಯದ ಅಸಮದೇವನು ಸೊಸಿಯು ನೀಡಿದ ಶಾಖವ ತಿಂದನೆ ಪಶುಪತಿ ಋಷಿಯನು ವಶವಾಗಿ ಮಾಡಿದ ಮಾಸದಮಹಿಮನು 5 ನಾಲ್ಮೊಗನಯ್ಯನು ಸುಳ್ಳನು ಹೇಳುತ ಕಳ್ಳನು ಆದನು ಗೊಲ್ಲರ ಭಕ್ತರಿಗೆ ಮೆಲ್ಲನೆ ಕುರುಕುಲ ಎಲ್ಲವ ಸವರಿದ ಬಲ್ಲಿದ ಕೃಷ್ಣಗÉ ಇಲ್ಲವೆ ಸಮರಧಿಕ 6 ಜಗವನು ಮಾಡುವ ಜಗವನು ಪಾಲಿಪ ಜಗವನು ಅಳಿಸುವ ಮಗುವಾಗಿ ಬಂದನೆ ಜಗಜೀವ ಭಿನ್ನನು ಜಗದೊಳು ವ್ಯಾಪ್ತನು ನಗುತಲಿ ಬಾಯಲಿ ಜಗವನು ತೋರಿದನೆ7 ಯಾಗವ ನಡೆಸಿದ ಯಾಗವ ಕೆಡಿಸಿದ ಯೋಗವ ಚರಿಸುತ ಯೋಗವ ಬೋಧಿಪನೆ ಬಾಗುವ ಭಕ್ತರ ನೀಗುವ ಕಲುಷವ ಆಗಮವಂದಿತ ಸಾಗರಶಯನನೆ8 ಹತ್ತವತಾರವ ನೆತ್ತಿದ ಮಹಿಮನು ಉತ್ತಮ ಭಕುತರ ತೆತ್ತಿಗನಾದನೆ ಬತ್ತಲೆ ಶಿಶುವಾಗಿ ಬಿತ್ತಿದ ಮೋಹವ ಬೆಸ್ತರಕುವರಿಗೆ ಆತ್ಮಜನಾದವನೆ9 ಚಕ್ರವಪಿಡಿದವ ನಕ್ರನ ತರಿದವ ಶಕ್ರನಕಾಯ್ದವ ವಕ್ರೆಯ ಕೂಡಿದನೆ ರಕ್ಕಸಯವನನ ಠಕ್ಕಿಲಿ ಅಳಿಸುತ ಭಕ್ತನಪೊರೆದಾ ಯುಕ್ತಗಳೊಡೆಯನೆ 10 ನಾರೆಂದೊದರಿದ ಉರುತರ ಪಾಪಿಯ ಭರದಿಂಪೊರೆಯೊ ಕರುಣಾಸಾಗರನೆ ನರಹರಿದೇವನು ಪರಿಪರಿರೂಪನು ಪರಿಪರಿಲೀಲೆಗೆ ಮೇರೆಯೆ ಇಲ್ಲಾವೇ 11 ವಾರಿಯಲಾಡುವ ಭಾರವ ಹೊರುವಾ ಕೋರೆಯ ತೀಡುವ ಘೋರವ ತೋರುವನೇ ವೀರರತರಿಯುವ ಕ್ರೂರರಸವರುವ ಜಾರನು ಆಗುವ ವೈರಿಗಳ್ವಂಚಿಪ ಏರುವ ತೇಜಿಯನೆ 12 ಅದ್ಬುತ ರೂಪವ ಕದನದಿ ತೋರಿದ ಬದರಿಯನಿಲಯಗೆ ತುದಿಮೊದಲಿಲ್ಲಾವೆ ಉದರದಿ ಮಗುವನು ಮುದದಿಂಸಲಹಿದ ಮುದಮುನಿ ಪ್ರಿಯನು ಹೃದಯದಿ ವಾಸಿಪನೆ 13 ವಿಷವನು ಕುಡಿದಾ ವೃಷಭವಾಹನ ಅಸುರನ ಭಯದಿಂ ಘಾಸಿಲಿ ಓಡುತಿರೇ ಮೋಸದಿ ಯುವತಿಯ ವೇಷವ ಧರಿಸುತ ಪಶುಪತಿ ಸಲಹಿದನೇ 14 ಭರದಿಂ ರಥವೆತ್ತಿ ನರನಂ ಕಾಯ್ದನು ಧರಣಿಯ ಒತ್ತುತ ಕುರುಪನ ಕೆಡಹಿದನೇ ಮರೆಸುತ ರವಿಯನು ಪೊರೆದನು ಚೇಲನ ಸುರವರಪೋಷಕ ಸಿರಿಪತಿ ಚದುರನ 15 ಗಂಗೆಯಪಡೆದ ಮಂಗಳ ಮಹಿಮನು ಹಿಂಗದೆ ಗೋಪರ ಸಂಗಡ ಆಡಿದನೇ ತಿಂಗಳ ಬೆಳಕಲಿ ಶೃಂಗರ ಸೊಬಗನು ಹೆಂಗಳ ಕೂಡುತ ಸಂಗೀತ ಪಾಡಿದನೆ 16 ಕಾಳಿಯ ಫಣೆಯಲಿ ಕಾಳಿಂದೀಶನು ತಾಳಕೆ ಕುಣಿಯುತ ಕೊಳಲನ್ನೂದಿದನೆ ಘೂಳಿಗಳಳಿಯುತ ನೀಲಳತಂದವ ಊಳಿಗ ಮಾಡಿದನೇ 17 ನಾರಿಯು ಮೊರೆಯಿಡೆ ಸೀರೆಯನೀಡಿದ ವಾರಿಜಾಕ್ಷನು ಸೀರೆಯ ಚೋರನೆ ನೀರೊಳು ಮುಳುಗಿದ ಪೋರರಿಗೆಲ್ಲ ತೋರಿದ ಜಗವನು ಸೂರಿಗಳೊಡೆಯನೆ 18 ಗರುಡನ ಏರುವ ಧರಣಿಯ ರಮಣನು ಏರುತಹುಡುಗರ ತುರುಗಳ ಕಾಯ್ದನೆ ಮಾರನಪಡೆದ ಮುರಹರಕೃಷ್ಣನು ಗಿರಿಯನು ಎತ್ತುತ ಹರುಷವ ಬೀರಿದನೇ 19 ಶೃತಿಗಳು ಪೊಗಳುವ ವ್ಯಾಪ್ತನ ನಿತ್ಯನ ಪಾತಕ ಹೋಗುವುದೇ ಅಂತಕ ಗತಿ ಮತಿ ಪ್ರೇರಕ ದಾತನು ಎಂತೆನೆ ಪ್ರೀತಿಲಿ ಸಲಹುವನೆ 20 ಮಜ್ಜಿಗೆ ಕಡೆಯುವ ರಜ್ಜುವಿನಿಂದಲಿ ಮೂರ್ಜಗನಯ್ಯನು ಕಟ್ಟಿಸಿಕೊಂಡಾನೆ ಲಜ್ಜೆಯ ಬಿಡುತಲಿ ಗೆಜ್ಜೆಯ ಕಟ್ಟುತ ಘರ್ಜಿಸಿ ಪಾಡಲು ಹೆಜ್ಜೆಯ ತೋರುವನೆ 21 ದಾಸರ ಪೋಷಿಪ ಶೇಷಗಿರೀಶನ ವಿಶೇಷವೆ ಬಣ್ಣಿಸೆ ಶೇಷಗೆ ಆಗದೆ ದೋಷವು ಇಲ್ಲದ ವಾಸುದೇವನೆ ತೋಷವ ನೀಡುವ ಸಾಸಿರ ನಾಮಕನೆ22 ಜಯಮುನಿ ಅಂತರ ವಾಯುವಿನಲ್ಲಿಹ ಜಯಕೃಷ್ಣವಿಠಲನು ಜೀಯನೆ ಜಗಕೆಲ್ಲ ನಯಭಯದಿಂದಲಿ ಹಯಮುಖನೊಲಿಸಲು ಭಯವನು ಹರಿಸುತ ನ್ಯಾಯದಿ ಪಾಲಿಪನೇ 23
--------------
ಕೃಷ್ಣವಿಠಲದಾಸರು
ಏನೇನಿಲ್ಲದ ಧನಹೀನನಿಗೆ ಹರಿ ನಾಮವೆ ಭಾಗ್ಯಕರ ಸಾಧಿಸು ಮುಕ್ತೀಕರ ಪ ನೊಂದನು ಮಾಡದಿರೆ ಇಂದಿನ ಜನ್ಮದೊಳಗೆ ದಾರಿದ್ರ್ಯವು ಬಂದು ಪೀಡಿಸುತಲಿದೆ ಮುಂದೆ ಸಾಧಿಸಿ ಕೊಂಬೆನೆಂದರೆ ಕೈಯೊಳೊಂದರೆ ಕಾಸಿಲ್ಲವು ಪಾಲಿಸೋ ಹರಿಯೇ 1 ಕುಟ್ಟಿ ಕೊಂದರೆ ಪಣೆಯ ನಿನ್ನಿಷ್ಟವಮನ ದಣಿಯ ಪಡೆದಷ್ಟು ಉಣ್ಣಬೇಕಲ್ಲದೆ ಪೂಜಿಸೋ ಹರಿಯೆ 2 ಮಾತ್ರವು ಸುಖವಿಲ್ಲ ಜಗದೇಕ ವಂದ್ಯನ ನೆನೆಸು ಶ್ರೀ ಲಕ್ಷ್ಮೀಶನ ಭಜಿಸಿದರೆ ಬೇಕಾದನಿತುವನಿತ್ತು ಕಡೆಗೆ ತನ್ನ ಲೋಕವ ಪಾಲಿಪನು 3
--------------
ಕವಿ ಪರಮದೇವದಾಸರು
ಏಳಯ್ಯ ಮಹಾರಾಜ ಬೆಳಗಾಯಿತೇಳಯ್ಯ ರಂಗ ಬಾ ಪ ಬಾಗಿಲಲಿ ಕೂಗುವರು ಸನಕಾದಿ ಮುನಿವರರು ಜಾಗರವ ಮಾಡಿರ್ಪ ಸುರರೆಲ್ಲ ಬಂದಾಯ್ತು ಯೋಗಿಗಳು ಪೊಗಳುವರು ನಿನ್ನಂಘ್ರಿಯ 1 ಲಂಕೆಯನು ಬಿಟ್ಟು ವಿಭೀಷಣನು ನಿಂತಿರ್ದ ಗಂಗೆಯನು ಬಿಟ್ಟೇಳು ಜಗದೀಶನೆ | ತಂಗಿಯನು ಬೇಡುವರೆ ಭಾವ ಪಾರ್ಥನು ಬಂದ ಮಂಗಳದ ನುಡಿ ನಿನಗೆ ಕೇಳಲಿಲ್ಲವೊ ಹರಿಯೆ 2 ಥಟ್ಟನೆ ಏಳು ಯಾದವರಿಗರಸ | ಸೃಷ್ಟಿಗೊಡೆಯನೆ ಕೇಳು ಭೂಸುರನು ರುಕ್ಮಿಣಿಯ ಪುಟ್ಟ ವಾಲೆಯ ತಂದ ನೀ ನೋಡು ನೋಡು 3 ಕೋಪಿಗಳರಸಾದಿ ದುರ್ವಾಸ ಮುನಿ ಬಂದ | ಇಂಪಾಗಿ ಪಾಡುತಿಹ ಸುರಮುನಿಯು ಬಂದ | ಕೋಪದೊಳೊದೆದ ಮುನಿ ಬಂದ ಬೇಗೇಳು ಪುಷ್ಪಶರ ಮಗ ಬಂದ ಬೇಗೇಳು ರಂಗ 4 ಸಿರಿದೇವಿ ನಿನ್ನಂಘ್ರಿಗಳನೊತ್ತ ಬಿಡಳೇನೊ | ಮಾರುತಿಯ ಜಪವಿನ್ನು ಮುಗಿಯಲಿಲ್ಲೊ | ನರರೆಲ್ಲ ನಗುವಂತೆ ಮಾಡದಿರೊ ರಂಗ 5
--------------
ವಿಶ್ವೇಂದ್ರತೀರ್ಥ
ಏಳಯ್ಯಾ ಏಳು ಕಂದಾ | ಏಳು ಪರಮಾನಂದಾ | ಏಳು ಈರೇಳು ಜಗದೊಡೆಯ ಶ್ರೀಮುಕುಂದಾ ಪ ಮೊರೆವದೊಂದೇಗಾಲಿ | ಪರಿವಹರಿವೇಗಮಂ | ಜರಿದು ಯೇಳು ಕುದುರೆಂಗಳದರಾ | ಪೋರವರುಣನಿಂದ ಭೋರ್ಗರೆವ ಸ್ಯಂದನದೊಳಗ | ಮೆರೆವ ದಿನಕರ ಉದಯವಾದ ಪೂರ್ವಾದ್ರಿಯಲಿ 1 ಬಿರಿಯೆ ಕಮಲದ ಮೋಗ್ಗೆ ಕರಿಯೆ ಗೋವತ್ಸಗಳು | ಪರಿಯೆ ನಕ್ಷತ್ರಗಳು ಗಗನದೊಳಗ || ಸರಿಯೆ ಚೋರ್ವಿರಹಿಗಳು ವರಿಯದಂತಾಲಯಕೆ | ದೆರಿಯ ಕಣ್ಣೆವಿಯಗಳು ನಿದ್ರೆಗೈದಿದ ಜನರು 2 ಓಡುತಿದೆ ಕತ್ತಲೆಯು ಬಾಡುತಿದೆ ಕುಮುದ ಮುಖ | ಕೂಡುತಿವೆ ಚಕ್ರವಾಕಂಗಳೀಗ | ಆಡುತೆಳೆದುಂಬಿ ಚಲ್ಯಾಡುತಿದೆ ಮಧುರನವ | ಪಾಡುತಿದೆ ಮಹೀಪತಿ ಸುತನಾಮ ಕೀರ್ತಿಯನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಒಡಲೆರಡಂತೆ ಅಸುವೊಂದಂತೆ ನುಡಿಯಿದು ನಿಜವೇ ಪೇಳೇ ಗೋಪಮ್ಮ ಪ ನಡೆ ನುಡಿ ಭಾವಗಳೊಂದೇಯಂತೆ ಹುಡುಗನೇನೇ ಕೃಷ್ಣ ಪೇಳೇ ಗೋಪಮ್ಮ ಅ.ಪ ಸೋದರಿಯರು ಇದ ಹೇಳುವರಮ್ಮ ನಾದ ನರ್ತನ ದೇಹಕಾಂತಿಗಳಲ್ಲಿ ಭೇದವಿಲ್ಲೆಂಬರು ನಿಜವೇನಮ್ಮಾ 1 ಬಾಲೆಯು ತಾನೆ ಗೋಪಾಲನೆನುವಳಂತೆ ಬಾಲಕೃಷ್ಣನು ರಾಧೆ ತಾನೆಂಬನಂತೆ ಬಾಲನಾರಿದರಲ್ಲಿ ಬಾಲೆಯಾರಿವರಲ್ಲಿ ಮೂಲತತ್ವವ ನೀನೆ ಹೇಳೇ ಗೋಪಮ್ಮ 2 ಯುಗ ಯುಗದಲ್ಲಿ ತಾನವತರಿಸುವ ಕೃಷ್ಣ ಜಗದೀಶ್ವರನೆ ತಾದಿಟವಮ್ಮ [ಮಿಗೆ] ಭಾಗ್ಯವೆ ನಿನ್ನದಾಗಿಹುದಮ್ಮ 3 ನಿರುಪಮ ಭಕ್ತಿಯಮೂರ್ತಿಯು ರಾಧೆ ಮುರಳೀಧರನಲಿ ಒಂದಾಗಿಹಳು ಅರಿತುದ ಪೇಳ್ವೆನು ಮಾಂಗಿರಿರಂಗನ ಶರಣರಿಗೀತತ್ವ ಕರಗತವಮ್ಮಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಒಂದಾನೊಂದು ದಿವಸದಲ್ಲಿ ಗುರುವ್ಯಾಸರಾಯರು | ಪ ಅಂದದಿಂದ ಪುರಂದರದಾಸರಿ | ಗಿಂದು ಭೋಜನಕ್ಕೆ ಬನ್ನಿರೆಂದು ಕರೆದರೂ ಅ.ಪ ಪೇಳಿತೆಂದು ದಾಸರು ಪೋಗಿ ತಾವು ನಿರ್ಮಲ ಸ್ನಾನ ಜಪಮಂತ್ರ ಹರಿಪೂಜೆಯನೆ ಮಾಡಿ || ಧಳಥಳಿಸುವ ವಿಠಲನ ದಿವ್ಯ ಪಾದ ಗಳ ಧ್ಯಾನಿಸಿ ಕುಳಿತರು ಜನಗಳೆಲ್ಲ ಕೇಳಿ 1 ವಿಠಲನ ದಿವ್ಯ ಮೂರ್ತಿಯ ಪಾಡಿ ದೃಷ್ಟಿಯಿಂದಲಿ ನೋಡಿ | ಮುಟ್ಟಿ ಮುಂದೊಲಿದು ಕುಣಿಕುಣಿದಾಡಿ || ಥಟ್ಟನೆ ವೇದಕ್ಕೆ ಸಮನಾದ ಪದಗಳು | ನಿಷ್ಠೆಯಿಂದ್ಹೇಳಿ ಅಭೀಷ್ಟವ ಪಡೆದರು2 ಎಡೆಯೊಳು ಷಡ್ರಸದನ್ನವ ನೀಡೆ | ಕಡು ಮಮತೆಗಳಿಂದ | ಬಿಡದೆ ದಾಸರ ದಾರಿಯ ನೋಡಿ || ಯೆಡ ಬಲದಷ್ಟ ದಿವ್ಯದಿಂಡೆಯರೆಲ್ಲಾ | ಕಡೆಯದೆಶೆ ಧರಿಸಿದರು ದಾಸರಾ 3 ಹಗಲು ಒಂಭತ್ತು ತಾಸಾಗಿರಲು | ಆಗೆದ್ದು ಬೇಗ ಗುರುಗಳ ಸಮೀಪಕ್ಕೆ ಬರಲು || ಮುಗಿದು ಕರಯುಗ್ಮವ ಬಗೆ ಬಗೆ ಸ್ತುತಿಸುತಾ | ಜಗದೊಳು ನಾನಪರಾಧಿಯೆಂದರೂ 4 ಭೋಜನವ ಮಾಡಿ ಗುರುಗಳಂದು ಸಿಂಹಾಸನದಲ್ಲಿ | ರಾಜಿಸುತ್ತ ಬಂದು ಕುಳಿತಿರಲಂದೂ || ಆ ಜನದೊಡಗೀ ದಾಸರು ಕರೆಯಲು | ನೈಜಭಾವದಿಂದು ಬಂದು ಕುಳಿತರೂ 5 ಪದಗಳು ಬರದ ವಹಿಯಕೊಂಡು ಪೋಗಿ | ಮಧ್ವಶಾಸ್ತ್ರದ ಮೇಲೆ ಕುಳ್ಳಿರಲಾಗ || ಅದನರಿಯದೆ ದಿಂಡೆಯನೊಬ್ಬನು ಆ | ಪದವಹಿಯ ತೆಗೆದು ಬಿಸುಟನಾಗಾ 6 ಯೆರಡಾವರ್ತಿ ತೆಗೆಯಲು ಆಗ | ತಿರುತಿರುಗಿ ಬಂದು ವರಪುಸ್ತಕದ ಮ್ಯಾಲೆ ಕುಳ್ಳಿರಲಂದೂ || ಗುರು ವ್ಯಾಸರಾಯರು ನೋಡಿ ಹರುಷದಿಂದ | ಕರೆದು ಬೈದರವಗೆ ಕಡು ಮೂರ್ಖನೆಂದೂ 7 ಪದದೊಹಿ ತೆಗೆದು ಬಿಸಾಡಿದರೆ ತಿರುತಿರು ಗ್ಯದರಮ್ಯಾಲೆ ವರನಾಲ್ಕು ವೇದಾರ್ಥದರೊಳಗುಂಟು || ನರರುತ್ತಮರೆಲ್ಲ ನೋಡಿ ಹರುಷದಿಂದ | ಪುರಂದರ ಉಪನಿಷತ್ತೆಂದರೂ 8 ಗುರುರಾಯರು ದಾಸರ ನೋಡಲಾಗ ಭರದಿಂದ ಯೆದ್ದು | ಅರಿವೆಯ ಕೈಯಿಂದೊರಸಲು ಆಗ || ತ್ವರಿತದಿ ಕೇಳಲು ವಿಠಲನ ಗುಡಿಯೊಳು | ಪಡದಗುರಿ ಹತ್ತವು ವರಿಸಿದೆವೆಂದರು 9 ಹಾಗೆಂದು ನುಡಿದಾಕ್ಷಣದಲಿ ಬೇಗ ಶಿಷ್ಯರಿಗೆ | ಹೋಗಿ ನೋಡಿ ಬಾರೆಂದೆನಲಾಗಿ || ಬೇಗದಿಂದಲಿ ಬಂದು ಕೇಳಲು ಅವರು | ಈಗ ದಾಸರು ಬಂದು ಪರಿಹರಿಸಿದರೆಂದು 10 ಆ ಮಾತು ಕೇಳಿದಾಕ್ಷಣದಿ ಬೇಗ | ಪ್ರೇಮದಿ ಬಂದು ಸ್ವಾಮಿರಾಯರಿಗೆ ಪೇಳಲು ಆಗ || ನಾಮವ ಸ್ಮರಿಸುತ ಪ್ರೇಮಾಲಿಂಗನವಿತ್ತು | ಕಾಮಿತಾರ್ಥ ಫಲವೀವ ಕಲ್ಪತರುವೆಂದರೂ 11 ಇಂತು ಅನುಭವ ಮಾತುಗಳನಾಡಿ ಲಕ್ಷ್ಮೀಕಾಂತನ | ಅಂತರಂಗದಲಿ ಅತಿಮಾನವ ಮಾಡಿ || ಮೂರ್ತಿ | ಶಾಂತತ್ವದಿ ನೋಡುತ ಶರಣು ಮಾಡಿದರೂ 12 ಗಜಪುರದಲ್ಲಿ ಇರುವರು ಕೂಡಿ ವಿಜಯವಿಠ್ಠಲನ್ನ | ಭಜನೆಯಿಂದ ದಿನ ದಿನ ಪೊಗಳಿ || ತ್ರಿಜಗದೊಡೆಯ ಗುರು ಪುರಂದರವಿಠಲನ | ನಿಜ ವೈಕುಂಠದ ಮುಕ್ತಿಯೈದಿದರೂ 13
--------------
ವಿಜಯದಾಸ
ಒಂದು ದಿನ ನಾರದಮುನಿ ಗೋಕುಲದಿ ಇಂದಿರೇಶನ ಲೀಲೆಯಾ ನಿಂದು ನಭದಲಿ ನೋಡುತಾ | ಮೈಯುಬ್ಬಿ ಬಂದನಾ ವೈಕುಂಠಕೆ 1 ಸಿರಿದೇವಿ ಸಖಿಯರೊಡನೆ | ವನದಲ್ಲಿ ಪರಿಪರಿಯ ಕ್ರೀಡೆಯೊಳಿರೇ ಅರವಿಂದ ನಯನೆಯನ್ನೂ | ಕಂಡನಾ ಸುರಮುನಿಯು ಸಂಭ್ರಮದಲೀ 2 ಜಗನ್ಮೋಹನಾಕಾರಳೂ | ಶ್ರೀ ಹರಿಯ ಜಗ ಸೃಷ್ಟಿಗನುಕೂಲಳೂ ಬಗೆ ಬಗೆಯವತಾರಳೂ | ಕ್ಷಣ ಹರಿಯ ಅಗಲದಂತಿರುತಿಪ್ಪಳೂ 3 ಹರಿಗೆ ಗುಣದಿಂ ಕಿರಿಯಳೂ | ಮತ್ತೆಲ್ಲ ಪರಿಯಲ್ಲಿ ಹರಿಗೆ ಸಮಳೂ ಶರಣೆಂದವರ ಕಾಯ್ವಳೂ | ಬೊಮ್ಮಾದಿ ಸುರರ ಸೃಜಿಸುವ ಶಕ್ತಳೂ 4 ನಾಕ ಸ್ತ್ರೀಯರನೆ ಕೂಡೀ | ವನದಲ್ಲಿ ಲೋಕನಾಯಕಿ ರಮಿಸುತಾ ಶ್ರೀಕಾಂತನಗಲದವಳೂ | ಮುನಿಗೆ ತ ನ್ನೇಕರೂಪವ ತೋರ್ದಳೂ 5 ನೊಡಿ ನಮಿಸಿದನು ಸಿರಿಯಾ | ಹರಿಗುಣವ ಹಾಡಿ ಪಾಡಿದನು ಮೈಯ್ಯಾ ಮೂಡೆ ರೋಮಾಂಚ ಕೈಯ್ಯಾ | ಮುಗಿಯುತಲಿ ನೋಡಿದನು ಸಿರಿಯ ದಣಿಯಾ 6 ಪಲ್ಲವಾಧರೆ ನಗುತಲಿ | ತನ್ನ ಕರ ಪಲ್ಲವದಿ ಕೃಪೆಯ ಮಾಡೀ ಎಲ್ಲಿಂದ ಬಂದೆ ಮುನಿಪಾ ವಿಷಯವೇ ನೆಲ್ಲ ಪೇಳೆಂದೆನ್ನಲೂ 7 ಏನ ಪೇಳುವೆನೆ ತಾಯೆ | ನಿನ ಪತಿಯ ನಾನಾ ವಿಧ ಚರ್ಯೆಗಳನೂ ನಾನರಿಯಲಾರೆ ನಮ್ಮಾ | ನವನೀತ ಚೋರನಾಗಿರುವನಮ್ಮಾ 8 ನಾಕ ಭೂಲೋಕ ತಿರುಗೀ | ಭುವಿಯೊಳಗೆ ನಾ ಕಂಡೆ ಗೋಕುಲವನೂ ಹೇ ಕಮಲೆ ಕೇಳು ಅಲ್ಲೀ | ನಿನ ಪತಿಯು ಆಕಳಾ ಕಾಯುತಿಹನೂ 9 ಬಿಟ್ಟು ವೈಕುಂಠವನ್ನೂ | ಪ್ರಾಯ ಸತಿ ದಿಟ್ಟೆ ನಿನ್ನನು ತೊರೆದನೂ ಹುಟ್ಟಿ ಗೊಲ್ಲರ ಕುಲದಲೀ | ಬೆರತನಾ ಕೆಟ್ಟ ಹೆಂಗಳೆಯರಲ್ಲಿ 10 ನಳಿನಜಾಂಡವ ಸಾಕುವಾ | ಜಗದೀಶÀ ಗೋಪಿ ಬೈ ಗಳನು ತಾ ಕೇಳುತಿಹನೂ 11 ಮದನಮೋಹನರೂಪನೂ | ಗೊಲ್ಲತೆರ ಅಧರಾಮೃತವ ಸವಿವನೂ ಎದೆ ಗಂಟು ಪಿಡಿಯುತಿಹನೂ | ಚಂಡೆಂದು ಗದರಿಸಲು ನುಡಿಯುತಿಹನೂ 12 ಸಂಪೂರ್ಣ ಕಾಮ ತಾನು | ವನದಲ್ಲಿ ಗುಂಪು ಸ್ತ್ರೀಯರ ಕೂಡ್ವನೂ ಸಂಪನ್ನ ಭೋಗಿಸುವನೂ | ಕೊಳಲ ಪಿಡಿ ದಿಂಪುಗಾನವ ಗೈವನೂ 13 ವನದ ಸೊಬಗೇನುಸುರುವೇ | ಶ್ರೀರಮಣಿ ದನಕರುವ ಕಾಯುತ್ಹರಿಯಾ ವನವನವ ತಿರುಗುತ್ತಿರೇ | ಕೊಳಲ ಧ್ವನಿ ವನವೆಲ್ಲ ತುಂಬಿರುತಿರೇ 14 ತಿಳಿಯುದಕ ಯಮುನೆ ಮಳಲು | ದಿಣ್ಣೆಯಲಿ ಕೊಳಲೂದೆ ಹರಿ ಕೇಳಲೂ ಮೊಳೆತವಾ ಬಂಜೆ ಮೋಟೂ | ಮೃಗಪಕ್ಷಿ ಕುಳಿತು ಮೈಮರೆತು ಕೇಳೇ 15 ಓಡಿ ಬರುತಲಿ ತುರುಗಳೂ | ಬಾಲವ ಲ್ಲಾಡಿಸದೆ ಕಣ್ಣುಮುಚ್ಚಿ ಮಾಡಿಟ್ಟ ಪ್ರತಿಮೆಯಂತೆ | ಕಾಣುತಿರೆ ಆಡಿಸದೆ ಸರ್ಪ ಹೆಡೆಯಾ 16 ಶೃಂಗಾರ ಕೊಳಲನೂದೆ | ಜಡ ಚೇತ ನಂಗಳಾಗುತ ಚಿಗುರಲೂ ಅಂಗ ಮರೆಯುತ ಜೀವಿಗಳ್ | ಜಡದಂತೆ ಕಂಗಳನುಮುಚ್ಚಿನಿಲ್ಲೆ 17 ಅಷ್ಟ ಐಶ್ವೈರ್ಯದಾತಾ | ನಾರಿಯರ ತುಷ್ಟಿಪಡಿಸುತಲಿ ಖ್ಯಾತಾ ಶಿಷ್ಟ ಜನರನು ಪೊರೆಯುತಾ | ರಕ್ಕಸರÀ ಹುಟ್ಟಡಗಿಸುವನು ವಿಹಿತಾ 18 ಪೇಳಲಳವಲ್ಲವಮ್ಮಾ | ಶ್ರೀ ಹರಿಯ ಲೀಲೆ ಜಾಲಗಳ ಬ್ರಹ್ಮಾ ನೀಲಗಳರರಿಯರಮ್ಮಾ | ಆನಂದ ತಾಳಿದೆನು ಕೇಳೆ ರಮ್ಮಾ 19 ಇಷ್ಟು ಗೋಕುಲದಿ ನೋಡೀ | ಕಾಣದಿ ನ್ನೆಷ್ಟೋ ಎನ್ನುತಲಿ ಪಾಡೀ ಗುಟ್ಟು ಪೇಳಲು ಬಂದೆನೂ | ಸಿರಿದೇವಿ ಸಿಟ್ಟಾಗಬೇಡವಿನ್ನೂ 20 ಪರನಾರಿಯರ ಬೆರೆಯುತಾ | ಶ್ರೀ ಕೃಷ್ಣ ಮರೆತು ನಿನ್ನನು ಸುಖಿಸುತಾ ಪರಿ ಯೊಚಿಸಮ್ಮಾ | ಆಜ್ಞೆ ಕೊಡು ತ್ವರಿತದಲಿ ಪೋಪೆನಮ್ಮಾ 21 ಹರಿಚÀರ್ಯವೆಲ್ಲ ಕೇಳಿ | ಶ್ರೀ ತರುಣಿ ಪರಮ ಆನಂದ ತಾಳೀ ಬೆರಗಾದ ಪರಿತೋರುತಾ | ಮುನಿವರಗೆ ಪರಿ ಏನು ಮುಂದೆ ಎನಲೂ 22 ಸನ್ನುತಾಂಗನ ಕೂಡಲೂ | ಭೂತಳದಿ ಇನ್ನೇನುಪಾಯವೆನಲೂ ಪನ್ನಂಗ ವೇಣಿ ಉದಿಸೂ | ಭೀಷ್ಮಕಗೆ ಇನ್ನು ನೀ ಕುವರಿ ಎನಿಸೂ 23 ಎಂತೆಂತು ಹರಿಯಚರ್ಯೆ | ಸಿರಿಕಾಂತೆ ಅಂತಂತು ನಿನ್ನ ಚರ್ಯೆ ಸಂತೋಷಪಡಿಸಿ ಎಮ್ಮಾ | ಸಲಹಮ್ಮ ಶಾಂತೆ ನಾ ಪೋಪೆನಮ್ಮಾ 24 ಮತ್ತೊಮ್ಮೆ ನೋಳ್ಪೆನೆಂದೂ | ಗೋಕುಲದ ಹತ್ತಿರದಿ ನಭದಿ ನಿಂದೂ ಸುತ್ತು ಮುತ್ತಲೂ ನೊಡಲೂ | ಸಿರಿದೇವಿ ವ್ಯಾಪ್ತಳಾಗಲ್ಲಿ ಇರಲೂ 25 ವನದಿ ಹರಿವಕ್ಷದಲ್ಲೀ | ಸಿರಿದೇವಿ ಘನ ವೇಣೂರೂಪದಲ್ಲೀ ವನಲಕ್ಷ್ಮೀರೂಪದಲ್ಲೀ | ಗೋಪಿಯರ ಪ್ರಣಯ ಪ್ರಕಾಶದಲ್ಲೀ 26 ಎಲ್ಲೆಲ್ಲಿ ಸೌಂದರ್ಯವೋ | ಉಲ್ಲಾಸ ಎಲ್ಲೆಲ್ಲಿ ವೈಭವಗಳೋ ಎಲ್ಲೆಲ್ಲಿ ಹರಿಲೀಲೆಯೋ | ಸಿರಿದೇವಿ ಅಲ್ಲಲ್ಲಿ ತಾನಿರುತಿರೆ 27 ಸಿರಿ ಹರಿಯ ಚರಿಯ ನೊಡಿದ ಪ್ರತಾಪಾ ಧರೆಗಿಳಿದು ನಮಿಸಿ ನಿಂದಾ | ಕ್ಷಮಿಸೆಂದು ಸಿರಿ ಹರಿಗೆ ಸ್ತೋತ್ರಗೈದಾ 28 ಸಿರಿಹರಿ ವಿಯೋಗವಿಲ್ಲಾ | ಆವಾವÀ ಕಾಲ ದೇಶದಲ್ಲೀ ಅರಿಯದಜ್ಞಾನ ನುಡಿಯಾ | ಮನ್ನಿಸೋ ಮಾಯಾ 29 ಜಯ ಜಯತು ಸುರವಂದ್ಯನೇ ಜಯ ಜಯತು ದುಷ್ಟಹರಣ | ಗುಣ ಪೂರ್ಣ ಜಯ ಜಯತು ಶಿಷ್ಟ ಶರಣಾ30 ಸ್ತುತಿಸುತಂಬರಕಡರಿದಾ | ಸುರಮುನಿಪ ಚ್ಯುತದೂರನತಿ ವಿನೋದಾ ಪತಿತರನು ಕಾಯ್ವ ಮೋದಾ | ಸುಖತೀರ್ಥ ಯತಿಗೊಲಿದು ಉಡುಪಿಲ್ನಿಂದಾ 31 ಆಪಾರ ಮಹಿಮ ಶೀಲಾ | ಸರ್ವೇಶ ಗೋಪಿಕಾ ಜನ ವಿಲೋಲಾ ಆಪನ್ನ ಜನರ ಪಾಲ | ಗುರುಬಿಂಬ ಗೋಪಾಲಕೃಷ್ಣವಿಠಲಾ 32
--------------
ಅಂಬಾಬಾಯಿ
ಒಂದೇ ಮತ ಹರಿಯ ಮತ ಒಂದೇ ಭಾವ ಸಿರಿಯರಸನ ಭಾವ ಸಲಹಿದ ನರಹರಿ ಒಂದೇ ಮನದಂಬರೀಷನ ಕಾಯ್ದ ಹರಿ ಒಂದೇ ಮನದಿ ಧ್ರುವನ ಕಾಯ್ದ ಹರಿ ಒಂದೇ ಗಳಿಗೆಯಲಿ ತನ್ನುಂಗುಟದಿ ಸೋಕಿಸೆ ಕಲ್ಲಾಗಿದ್ದಹಲ್ಲೆಯ ಪೆಣ್ ಮಾಡಿದ ತಂದೆಯಂದದಿ ಭಕ್ತರ ಹಿಂದೆ ಕಾದಿದ್ದು ಕರುಣಾಸಿಂಧು ಭಕ್ತರ ಬಂಧು ಸುಂದರಿ ಸಿಂಧುಸುತೆಯರಸನ ನಿತ್ಯ ನೆನಯಿರಿ ಹರಿ ಭಕ್ತರು 1 ಸಾರ ನಾಲ್ಕು ಯುಗದಾಧಾರ ನಾಲ್ಕು ಮುಖದಲಿ ನೆಲಸಿ ಸೃಷ್ಟಿಕಾರ್ಯವ ನಡೆಸಿ ನಾಲ್ಕು ಮುಖ ಬೊಮ್ಮನಲಿ ನಾನಿಲ್ಲವೆನಿಸಿ ನಾಲ್ಕು ಯುಗದಲಿ ಜನಿಸಿದ ರಕ್ಕಸರಿಗೆ ತಿಳಿಸಿ ನಾಲ್ಕು ಲೋಕದಿ ಮೆರೆದ ನಾಕಚಾರ ವಂದ್ಯ ನಾಲ್ಕು ಹಸ್ತದಿ ನಾಲ್ಕು ವೇದತಂದಾ ಮೂರ್ತಿ ನಾಲ್ಕು ವೇದದ ಸಾರದಮೃತ ಭಕ್ತರಿಗಿತ್ತು ಹದಿನಾಲ್ಕು ಲೋಕಕೆ ನಾನೇ ಕರ್ತನೆಂದರಿಸಿ ನಾಲ್ಕು ವಿಧದಲಿ ಕಾವ ಶ್ರೀ ಶ್ರೀನಿವಾಸನ ಭಕ್ತರಾದರೆ ಈ ಕಲಿಯುಗದಿ ನಾಲ್ಕು ಜನರು ಮೆಚ್ಚುವರು ನಿಮ್ಮ ಹರಿ ಭಕ್ತರೆ ಕೇಳಿ2 ನಿನ್ನ ಸಹವಾಸ ಸೈ ನಿನ್ನ ಒಡನಾಟ ಸೈ ನಿನ್ನ ರೂಪ ಚತುರ ಬುದ್ಧಿ ಎನ್ನ ಸೈ ಎನ್ನಲಾಪರೆ ನಿನ್ನ ಕೈ ಚಳಕವಿಲ್ಲದಲೆ ಜೈಸುವದೆಂತೀ ಕಲಿಕಾಲದಿ ಸ್ವಾಮಿ ಜೈಲುವಾಸದಿ ಕೂತು ನಿನ್ನ ಕಲ್ಯಾಣವ ಕಟ್ಟಿದರೊ ನಿನ್ನ ಭಕ್ತರು ಜೈ ಕರುಣಾಕರ ನಿನ್ನ ಭಕ್ತರ ಮಹಿಮೆ ನಾ ಪೊಗಳುವದೆಂತೊ ಜೈ ಎನಿಸಿಕೊಳ್ಳಲು ನಿನ್ನೊಲುಮೆ ಕಾರಣವಲ್ಲವೆ ಜೈವೆಂಕಟ ಶ್ರೀಶಾ ಶ್ರೀ ಶ್ರೀನಿವಾಸ ನಿನ್ನ ಭಕ್ತರಿಗೆ ಜಯ ಅಪಜಯವೆಲ್ಲಿ ನಿನ್ನ ಭಕ್ತರಿಗೆ ಎಂದೆಂದಿಗೂ ಜೈ ಹರಿಭಕ್ತರ ನೆನೆಯಿರಿ ಹರಿಭಕ್ತರು 3 ಯನ್ನ ಯತ್ನವೇನಿಲ್ಲಿದರೋಳು ಪನ್ನಗಾದ್ರಿ ನಿವಾಸನಲ್ಲದೇ ಯನ್ನ ಯತ್ನ ಸಲ್ಲುವುದೇ ಎನ್ನ ಮನಸಿಲಿ ಬಂದು ನಿಂದು ತಾನೇ ನುಡಿಸಿದನಿಂದು ಚೆನ್ನಗಿರಿಯರಸ ಭಕ್ತ ಜನ ಬಂಧು ಬಂದು ನಿಂದು ಎನ್ನ ಮನದಭಿಲಾಷೆ ಸಲಿಸೆ ದೀನ ವತ್ಸಲನು ಎನ್ನ ಕರದಲಿ ಬರೆಸಿ ನಲಿದಾಡಿದ ತನ್ನ ವಾಣಿಯನಿತ್ತು ಎನ್ನ ಕುಲದೈವ ಶ್ರೀ ಶ್ರೀನಿವಾಸನ ಕೃಪೆ ಎನ್ನ ಮೇಲೆಂತುಟೊ ಕಾಣೆ ಇನ್ನು ಈ ವಾಣಿ ಹರಿಯದೆಂದು ನುಡಿವುದು ಹರಿಭಗವದ್ಭಕ್ತರು 4 ಪಾಮರರಿಗೆ ಕಲ್ಪತರು ಪಾಮರರಿಗೆ ಜಗದ್ಗುರು ವರವ ತೋರಿ ಪಾಮರರ ಪುನೀತರನು ಮಾಡೆ ಹರಿ ಪಾಮರೆಂದು ಲೆಕ್ಕಿಸದೇ ತಾವಲಿದು ನುಡಿಸಿದ ಪತಿತ ಪಾವನ್ನ ಶ್ರೀ ಶ್ರೀನಿವಾಸನದೇ ಈ ಉಕ್ತಿಯಲ್ಲರ ನೃತ್ರವಿಲ್ಲೆಂದು ತಿಳಿದು ಪಾಮರರನ್ನುದ್ಧರಿಸಲು ಹರಿಭಕ್ತರು ಪಠಿಸುವುದು ಈ ನುಡಿಯ 5 ಜತೆ ಶರಣು ಭಕ್ತರ ಪಾಲ ಶರಣು ಶ್ರೀಲೋಲಾ ಶರಣು ನಿನಗೆ ಸದಾ ಶ್ರೀ ಶ್ರೀನಿವಾಸ
--------------
ಸರಸ್ವತಿ ಬಾಯಿ
ಒಲಿದವಳ ಬಿಡುವುದು ಧರ್ಮವಲ್ಲ | ಚಲುವ ನಿನಗಾಗಿ ನಾ ಯೇಸು ಕಾಲಕೆ ತಪವಿದ್ದೆ ಪ ತಂದೆತಾಯಿಗಳಲ್ಲಿ ಪುಟ್ಟಿದಾಕ್ಷಣದಲ್ಲಿ | ಅಂದೆ ನೇಮಿಸಿದರು ಪೆಸರನಿಟ್ಟು | ಸಂದೇಹಗೊಳದಿರು ಮೈಲಿಗೆಯವಳೆಂದು | ಬಂದ ಪ್ರಾಣವÀ ನೋಡು ಬರಿದೆ ಪೇಳುವಳಲ್ಲ 1 ಕನ್ಯಾವಸ್ಥಿಯಲಿಂದ ನಿನ ನಿನ್ನ ಧ್ಯಾನವಲ್ಲವೇ | ಅನ್ಯಪುರುಷರಾಪೇಕ್ಷೆ ಮಾಡಲಿಲ್ಲ | ಅನ್ಯಾಯವೇನು ಆಗಲಿ ಪೋಗುವರೇನೊ | ಅನ್ಯಥಾ ಈ ನುಡಿಗೆ ನಿಜಕೆ ನಿಲ್ಲುವೆ ನಾನು 2 ಮಲದಲ್ಲಿ ಮೂರುದಿನ ಪೋಗಾಗಿ ಹೋಗಿದ್ದೆ | ಬಲು ಶುಚಿಯಾದೆನೊ ಶುದ್ಧ ಜಲದಿ | ಘಳಿಗೆ ಕಡೆದರೆ ಎನ್ನ ಪ್ರಾಣನಿಲ್ಲವೊ | ಎನ್ನನಗಲಿ ಮೈ ತಪ್ಪಿಸಿ | ದೂರ ಕರೆದೊಯ್ಯೊ ಕರುಣದಲಿ 3 ನಗೆಗೇಡಿ ಮಾಡದಿರು ಜಗದೊಳಗೆ ಇಪ್ಪವಳ | ಸೊಗಸಿಗನೆ ಸರಸವಾಡುವನೆ ಬಾರೊ | ಮಗುಳೆ ಮತ್ತೊಬ್ಬರು ಮೆಚ್ಚಿದರೆ ಇದೆ ಪಾಟು | ಮಗುಳೇನು ಹೊಸ ಪರಿಯು ತೋರುವುದು ನೋಡಿದರೆ 4 ಕಂಡ ಕಾಣದ ಹಾಗೆ ಮಾತನಾಡಿದಿರೆನ್ನ | ಅಂಡೊಲಿವ ಖ್ಯಾತಿ ಎಂದಿಗೆ ತೀರದೂ | ಕುಂಡಲಿಗಿರಿವಾಸ ವಿಜಯವಿಠ್ಠಲ ವೆಂಕಟ | ಹಿಂಡು ಬಂಧುಗಳಿದ್ದರೇನು ಮಾನವನು ತೊರೆದೆ 5
--------------
ವಿಜಯದಾಸ
ಒಲ್ಲೆನೀ ಕವಚ ಕುಂಡಲಗಳನ್ನು ಒಲ್ಲೆ ನಾನು ಕಿರೀಟ ಪಾದುಕೆಗಳನ್ನು ಪ ಹಗಲು ಹಾದರಗಿತ್ತಿಯಂತಿಪ್ಪ ಮನುಜನಿಗೆ ಸೊಗಸುವುದು ಸೊಗಸದೆಂಬರುಹಿಲ್ಲದೇ ಜಗದುದರ ನಿನ್ನಿಂದ ಶೋಭಿಸುವನಘ್ರ್ಯದ ವ ಸ್ತುಗಳ ಎನಗೀಯಲೇತಕೆ ಮೆಚ್ಚಿದೆಯೋ ದೇವ 1 ನೋಡಲೆವೆ ಸೀವುದಿದನಿಟ್ಟು ಕೈಕೊಂಡ ಪ್ರಾಣ ಗೂಡಿನೊಳಗಿಹುದೇ ಅಕಟಕಟ ಹರಿಯೇ ಬೇಡವೀ ಮಾಯ ಕೃಪೆಯಿಂದ ಸದ್ಭಕುತಿಯ ಜೋಡ ತೊಡಿಸಿದನೊಲ್ಲೆ ಕಾಡಬೇಡವೋ ದೇವ 2 ಶಿರಕೆ ಕರ್ಣಕೆ ಚರಣಗಳಿಗೆ ಕಥೆಯನ್ನು ಪೇ ಳ್ದೆರಗುವುದನೊಲಿದು ಕುಣಿದಾಡುವುದನು ಕುಂಡಲ ಕಿರೀಟಗಳನು ವರ ಪಾದುಕೆಗಳ ನಾನೊಲ್ಲೆ ಹರಿಯೇ 3 ನಿನ್ನ ದಾಸಾನುದಾಸ ದಾಸರ ಗುಣಾರ್ಣವದೊ ಳೆನ್ನೊಳೆಳ್ಳನಿತುಂಟೆ ಅಕಟಕಟ ಹರಿಯೇ ಬನ್ನಬಡಿಸಲು ಬೇಡ ದಕ್ಕದೀಯುಡುಗೊರೆಯು ಚುನ್ನವಾಡುವರು ಧಾತ್ರಿಯ ಮನುಜರೆಲೆ ದೇವ 4 ಇದನು ಕೊಡಬೇಕಾದಡೆಯು ಮುಕ್ತ್ಯಾಂಗನೆಯ ಮದುವೆಯನು ಮಾಡಿ ಯಾಬಳಿಕನಿತ ವೊದವಿಸುವುದುಚಿತ ಒಪ್ಪಂದವಾಗಿಹುದು ಚದುರ ವೈಕುಂಠ ವೇಲಾಪುರಾಧೀಶ 5
--------------
ಬೇಲೂರು ವೈಕುಂಠದಾಸರು