ಒಟ್ಟು 1263 ಕಡೆಗಳಲ್ಲಿ , 109 ದಾಸರು , 1093 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರೆದೆಡೆಗೆ ತಾ ಬರುವ ಕರೆದೆಡೆಗೆ ತಾ ಬರುವ ಪ ಬರುವೆ ತರುವ ಸುಖವ ಮುರುಳೀಧರನು ಅ.ಪ ತಿಳಿಯ ಭಕುತಿಯ ಪಡೆದ ಜನರಿಗೆ ಗೆಳೆಯನಿವ ಬಲು ಸುಲಭನು ಇಳೆಯಸುರರಾದರದಿ ಕರೆಯಲು ಹರುಷದಲಿ ನಲಿನಲಿಯುತಲಿ 1 ಸದನದಲಿ ಹದನಿಲ್ಲ ಈತನಿ ಗೊದಗಿಸುವುದತಿ ಸಾಹಸ ವಿಧಿಯ ಬರಹವು ಇಲ್ಲವೆನುತಲಿ ಹೆದರದಿರಿ ಮಧುಸೂಧನನು 2 ಇದು ನನದು ಇದು ನನದು ಎನುವ ಮದದ ವಚನಕೆ ನಗುತಲಿ ಇದು ನಿನದು ಎನ್ನಲು ಪ್ರಸನ್ನನು ವಿದುರನಾಲಯ ಪೊಕ್ಕಿಹ3
--------------
ವಿದ್ಯಾಪ್ರಸನ್ನತೀರ್ಥರು
ಕಲಭಯಾನೆ ಕಂಜಲೋಚನೆ ಕದವತೆಗೆಯೆಲೆ ಭಾಮಿನಿ ನಾಂ ಬಳಲಿ ಬಂದೆನು ಭಾಮಿನೀ ಪ. ಬಳಲಿ ಬಂದರೆ ಒಳ್ಳಿತಾಯಿತು ತಳರ್ವುದಿಲ್ಲಿಂ ನಿಲ್ಲದೆ ನಾಂ ಕದವ ತೆಗೆಯೆನು ಸಾರೆಲೆ ಅ.ಪ. ಭಾಪುಭಾಪೆಲೆ ಕೋಪಗೈವುದು ಚಾಪಲ್ಯಾಂಬಕಿ ಯೆನ್ನೊಳು ಓವನಲ್ಲೇ ಕೋಪಸಲ್ವುದೆ ಈ ಪರಿಯೊಳ್ ಪೇಳ್ವುದು ನೀ ನೀಪರಿಯೊಳ್ ಪೇಳ್ವುದು 1 ಪರಿ ಕಪಟನಾಟ್ಯವ ಮಾಳ್ಪರೇ ಓಪೆÀನೆಂದು ಕೂಗುತಿರುವ ಭೂಪನಾವನು ಸಾರೆಲೋ ನಾನೋಪೆ ಯಾರಿಗೆ ಸಾರೆಲೊ 2 ನೀರೆ ಮುಕ್ತಾಹಾರೆ ಸ್ಮರವೈಯ್ಯಾರೆಯಿಂತು ಪೇಳ್ವರೇ ಕೇಳ್ ನೀರನಾನೆಲೆ ಶ್ರೀಕರೆ 3 ನೀಂ ಜಾರನಂದದಿ ಕಾಣುವೆ ನೀನಾರು ಪೇಳು ನೋಡುವೆ 4 ದೇವಿಕೇಳು ವಸುದೇವ ದೇವಕಿಕುಮಾರ ನಾನೆಲೆ ಭಾಮಿನೀ ಸುಕುಮಾರನಾನೆಲೆ ಭಾಮಿನೀ ಭಾವಜಾತನ ಬಾಣಕೀಯದೆ ಕಾವುದೆನ್ನನು ಕಾಮಿನೀ ದಯೆತೋರು ಮನೋಮೋಹಿನೀ5 ದೇವಕೀಸುತನಾದರೊಳ್ಳಿತು ನಾವು ಬಲ್ಲೆವು ಸಾರುನೀಂ ಮಾವನನ್ನೆ ಮಥಿಸಿ ಬಂದ ಮಹಾಮಹಿಮನೆ ಸಾರು ನೀಂ, ಆಹ ಭಾವಿಸೀ ಭಯಪಡುವೆನೇಂ 6 ಭೀಷ್ಮಕಾತ್ಮಜೆ ಭೇಷಜಾಂಬಕಿ ಹಾಸ್ಯ ಮಾಡದೆ ಬೇಗನೆ ನಾಂ ಬೇಡಿಕೊಂಬೆನು ನಿನ್ನನು 7 ದೋಷವೆಣಿಸದೆ ಪೋಷಿಸೆನ್ನ ಮದೀಶ ಹಾಸ್ಯವ ಮಾಡಿದೆ ಶೇಷಶೈಲನಿ ವಾಸ ಎನ್ನನು ಪೋಷಿಸೆಂದಳು ವಿನಯದಿ ಕೈಪಿಡಿದ ದೇವನ ಮೋದದಿ 8 ಜಯಜಗನ್ನಾಥ ಭಕ್ತಾಭಯಪ್ರದ ಶ್ರೀಕರ ಜಯದೇವ ದಯಾಸಾಗರ ಶೇಷಗಿರೀಶ ಶ್ರೀಧರ 9
--------------
ನಂಜನಗೂಡು ತಿರುಮಲಾಂಬಾ
ಕಲಯಾಮಿ ಶ್ರೀನಿವಾಸಂ-ಕಲಭಾಷ ಮಿಂದುಹಾಸಂ ಪ ಕಮನೀಯಹೇಮ ಚೇಲಂ-ಕಮಲಾಲಯಾನುಕೂಲಂ ಕಮಲಾಭಿರಾಮ ಮಾಲಂ 1 ಸುಮಬಾಣ ಸುಂದರಾಂಗಂ-ಸುಮನನಾರ್ಪಿತಾಂತರಂಗಂ ನಮದಾರ್ತಿ ಸಂಗ ಭಂಗಂ 2 ಜಲಜಾಪ್ತ ಪತ್ರನೇತ್ರಂ-ಜಲದೋಪಮಾನ ಗಾತ್ರಂ ಜಲಜಾಪ್ತ ಪುತ್ರ ಮಿತ್ರಂ 3 ಕುಂದೋಪಮಾನ ರದನಂ-ಚಂದ್ರೋಪಮಾನ ವದನಂ ಬೃಂದಾರಕಾರಿ ದಮನಂ 4 ಅಜವಂದ್ಯ ಚರಣಕಮಲಂ-ನಿಜ ಸೌಖ್ಯ ಕರಣ ಕುಶಲಂ ಭಜನೀಯ ವರದ ವಿಠಲ-ಕಲಯಾಮಿ ಶ್ರೀನಿವಾಸ 5
--------------
ಸರಗೂರು ವೆಂಕಟವರದಾರ್ಯರು
ಕಲಿರಾಯ ಬಂದಿಹನು ಕಾಣಿಕೆಯ ಪಿಡಿದು ಚೆಲುವಿನಿಂದನುಸರಿಸಿ ಕುಲವನುದ್ಧರಿಸಿ ಪ ಮೂರು ಯುಗದೊಳು ತಾನು ಸೇರಿಕೊಂಡನು ವನವ ಚೋರರಾಯರ ಸಂಗ ಬೇಡವೆನುತ ವೀರನಾಗಿಯೆ ಬಂದ ನಾಲ್ಕನೆಯ ಯುಗದೊಳಗೆ ಸಾರಿ ಬನ್ನಿರೊ ನಮ್ಮ ದೊರೆಯ ಮನ್ನಿಸಲು 1 ಮದಮುಖರ ಕಾಣುತಲೆ ಮುದದಿಂದ ಮನ್ನಿಸುತ ಕದನಕರ್ಕಶರನ್ನು ಕಾಮಿಸುವನು ಒದಗಿದನ್ಯಾಯಗಳನೊಲಿಸಿಕೊಂಬನು ತಾನು ಬೆದರಿಕೆಯು ಬೇಡ ನೀವಿದಿರುಗೊಳ ಬನ್ನಿ 2 ಸತ್ಯವೆಂಬುದನೆಲ್ಲ ಹತ್ತಿಸಿದ ಬೆಟ್ಟವನು ಮಿಥ್ಯ ನಿರ್ಮಳಕೆಲ್ಲ ಕುತ್ತಿಗೆಗೆ ಬಂತು ಒತ್ತಿಯಾಳುವ ಧರ್ಮ ಸತ್ತು ಹೋದನು ಹಿಂದೆ ಮೃತ್ಯು ಭಯ ನಮಗಿಲ್ಲ ಹತ್ತಿರಕೆ ಬನ್ನಿ 3 ತಪ್ಪಿ ಹೋಯಿತು ಶಾಸ್ತ್ರ ತಪ್ಪಾಯ್ತು ಪೌರಾಣ ಮುಪ್ಪು ಬಂದುದು ವೇದ ಕಪ್ಪಾದನಗ್ನಿ ತುಪ್ಪನ್ನ ಬೇಡವಗೆ ಇಪ್ಪ ಭಯಗಳು ಹೋಯ್ತು ಒಪ್ಪಿ ಕಾಣಿಸಿಕೊಂಡು ಸುಖಿಯಪ್ಪ ಬನ್ನಿ 4 ಸ್ನಾನವೆಂಬುದು ಯೆಲ್ಲ ಮಾನಿನಿಯ ಅಡಿಗೆಯೊಳು ಮೌನ ಜಪಗಳನೆಲ್ಲ ಕೃಷಿಕೊಂಡನು ಹಾನಿಯಾದರು ಯಜ್ಞಹೀನರಾದರು ಪಿತೃಗ ಳೇನ ಮಾಡುವರಿವರು ಅನುಮಾನ ಬೇಡೆನುತ 5 ದಯಯೆನಿಪವನು ಹೋಗಿ ಕೊಯ್ಸಿಕೊಂಡನು ಕೊರಳ ಭಯವಿಲ್ಲ ಹಿರಿಯರೂ ವ್ಯಯವ ಸೇರಿದರು ನಯನೀತಿ ಹೇಳುತಿಹ ಗುರುವಿನೊಳು ಕಣ್ಣಿಲ ್ಲ ಜಯವಾಯ್ತು ದೇಶದೊಳು ಹೊಯ್ಸಿ ಡಂಗುರುವ 6 ಶಿವನು ದುರ್ಗವ ಬಲಿದ ಜವನು ದಂಡವನಿಟ್ಟ ಬವಣೆಬಡುವನು ಕಮಲಭವನು ತನ್ನೊಳಗೆ ಹವಣನರಿಯದೆ ವಿಷ್ಣು ತವಕಿಸುವ ಮನದೊಳಗೆ ಕವಲು ಮನ ಬೇಡಿರಲು ಬಹುದು ಇವನೊಳಗೆ 7 ಪತಿಯ ಮರೆತಳು ಸತಿಯು ಸುತ ಮತಿಯ ತಪ್ಪಿದನು ಯತಿ ಸತತ ಮನದೊಳಗೆ ಖತಿಗೊಂಬನು ಚತುರವರ್ಣಾಶ್ರಮವ ಜೊತೆಯಾಗಿ ನಡೆಸುತಿಹ ಮತಿಯುತನು ದೃಢವೆಂದು ಕಾಯವನುಸರಿಸಿ8 ತಾಯಿ ತಂದೆಯ ಕೊಂದು ಜೀವ ಹಾನಿಯ ಮಾಡಿ ಬಾಯ ಹೊಯ್ದರು ಕೇಳ ಬಡವರನ್ನು ಮಾಯವಾದಿಯ ಮಾತು ಕೂಡಿಸುವ ಜೀವವನು ರಾಯರಾಯರ ಮುಂದೆ ನಡೆಸುತ್ತಲಿಹರು 9 ಆಡಿಗಾರರ ತಂದು ನಾಡ ಊಳಿಗಕಿಡುವ ನೋಡಿದನ್ಯಾಯ ಮಾತುಗಳ ಹಿಡಿತರುವನು ಕೂಡಿಸುವ ಜೀವವನು ಎಳೆನೀರು ಸಕ್ಕರೆಯು ಬೇಡಿದಿಷ್ಟಾರ್ಥದೊಳು ನೋಡಿ ನಡೆಸುವನು 10 ಕೆಟ್ಟನೀತಿಯ ಒಳಗೆಯಿಟ್ಟುಕೊಂಡರೆ ನಿಮ್ಮ ಗಟ್ಟಿಬಡಿಸುವ ದೊರೆಯು ದೃಷ್ಟಿಯಲಿ ನೋಡ ಕಷ್ಟವಿಲ್ಲದೆ ಸುಖದಿ ಹೊಟ್ಟೆಯನು ಹೊರಕೊಂಡು ಸೃಷ್ಟಿಯೊಳು ವರಪತಿಯ ಮುಟ್ಟಿ ಸೇವಿಪುದು 11 ಕಾಲದರಸಿನ ನೋಡಿ ಮೂಲ ಪಡಕೊಂಬುವರು ಆಲಸ್ಯವನು ಬಿಟ್ಟು ಸೇವಿಸುವುದು ಶಾಲು ಸಕಲಾಭರಣ ತೋಲಾಗಿ ಬರುತಿಹುದು ಜಾಲರೂಪವದಾಗಿ ಮನಕೆ ತೋರುವುದು 12 ತಾಯಿ ತಂಗಿಯರನ್ನು ಮೋಹಿಸಲು ದೊರೆರಾಯ ಬಾಯಹೊಯಿಯೆಂದೆನುತ ನೋಯನುಡಿ ಪೇಳ ಆಯವಾಗಿಹ ಪುರುಷ ಸಾಯಲಾಕ್ಷಣ ಬಂದು ಕಾಯವನು ಬಳಸುವನು ಮೋಹವನು ತೋರಿ13 ಹೀಗೆಂದು ಚರನೋರ್ವ ಕೂಗಿ ಕರೆಯಲು ಬಂದು ಅಗಲೇ ಎದ್ದು ಇದಿರಾಗಿ ಪರಿಜನವು ಬೇಗದೊಳಗನುಸರಿಸಿ ಭೋಗವನು ಕೈಕೊಂಡು ರಾಗದೊಳಗಿದ್ದರಾ ಭವಜಲದ ನಡುವೆ 14 ಹೇಡಿಗಳು ಬರಬೇಡಿ ಮೂಡ ಗುಡ್ಡೆಯ ಸೇರಿ ಕಾಡಫಲವನು ಮೆದ್ದು ಕೋಡಗಲ್ಲಿನೊಳು ಆಡುತಿಹ ವರಾಹತಿಮ್ಮಪ್ಪನ್ಹತ್ತಿರದಿ ಬೇಡಿಕೊಳ್ಳಿರೊ ಎನುತ ನೋಡಿ ನಗುತಿಹರು 15
--------------
ವರಹತಿಮ್ಮಪ್ಪ
ಕವಿ ಕವಿದು ಪೊಳೆವ ಭುವನಪಾವನ ಚರಿತ ಇಂದೀವರಾಕ್ಷ ಪ ತವಪೂರ್ಣ ನಿಜ ಒಲಿಮೆ ಪ್ರಭುಪೂರ್ಣ ಕವನದಲಿ ಮೋದ ಕರಿವರದ ಭವಭಂಗ ಪರಿಹಾರ ಕವನ ವೋದಿದ ಮಾತ್ರ ಧವಳ ಕೀರುತಿ ಬೆಳುದಿಂಗಳನು ಮೀರಿಹುದೊ 1 ತವಪೂರ್ಣ ಗುಣ ಕ್ರಿಯೆ ರೂಪ ಘನ ಭಾವಗಳು ಲವಲವಿಕೆ ಎಮ್ಮ ಚೇತನಕೆ ಕೊಟ್ಟು ಭವಭೀತಿಗೆ ಭೀತಿ ತಂದೊಡ್ಡುವುದೊ ಕಮಲೇಶ ಸವಿದುಣ್ಣುವಾ ಜನಕೆ ಜಡದಲ್ಲೂ ನೀ ಬರುವೆ 2 ಶ್ರವಣ ಮಾತ್ರಕೆ ಮೈಮರೆಸುವುದು ಮಹಸಿರಿಯು ಶುಕ ಪಿತ ಸವಿದ ರುಚಿಯು ಇಹುದು ಪವಮಾನ ಕೃಷ್ಣಾರ್ಯ ರಾಮಾರ್ಯರತಿ ವಲುಮೆ | ಶ್ರವಿಸುವುದು ಪಠಿಪರನು ಭಕ್ತಿಮತ್ತರ ಮಾಡಿ 3 ಕವಲುಮತಿಯಲಿ ಮುಳುಗಿ ಚಲಿಸದಿರು ಇದರಿಂದ ಭವಮೂಲಕುನ್ಮೂಲ ಇದರ ಮಹಿವi ಅವಲಿಯನು ತಿಂದವನು ಅಗಲಿರದೆ ಒಡನಿಹನು ಜವನ ದೂತರು ತಲೆಮಣಿದು ಓಡುವರೊ 4 ತತ್ವಾಭಿಮಾನಿಗಳಿಗಾಹಾರವಿದು ಸತ್ಯ ತತ್ವಾರ್ಥ ಬಲು ಸುಲಭದಲ್ಲೆ ಮನಕವಗಾಹ್ಯ ಸತ್ಕøತಿಯ ಮಾಡಿ ಚಿತ್ಸುಖವ ಉಣು ನಿತ್ಯ ವಾತಾತ್ಮ ಗುರು ಶ್ರೀ ಜಯೇಶವಿಠಲನ ನೋಡು 5
--------------
ಜಯೇಶವಿಠಲ
ಕಷ್ಟಹರಿಸೊ ಪರಮೇಷ್ಟಿಪಿತನೆ ನೀ ಕೈ ಬಿಟ್ಟರೆ ಸೃಷ್ಟಿಯೊಳು ಪಾರುಗಾಣುವುದೆಂತೂ ಪ ಇಷ್ಟದಿಂದಲೋ ಅನಿಷ್ಟದಿಂದಲೋ ನಾನೇ ಹುಟ್ಟಿಬಂದೆನೆ ದೇವ-ನಿನ್ನಿಷ್ಟದಿಂದಲ್ಲವೇ ಅ.ಪ ಬಿಂಬನೆನಿಸಿದೆ ಎನಗೆ ಪ್ರತಿಬಿಂಬ ನಾ ನಿನಗೆ ಬಿಂಬ ಪ್ರತಿಬಿಂಬಕೆ ಉಪಾಧಿಯು ನಿತ್ಯ- ವೆಂಬನ್ವಯಕೆ ಗುಣತ್ರಯಬದ್ಧವೇ ಕಾರಣ- ವೆಂಬ ಗುಣಜೀವಸ್ವರೂಪೋಪಾಧಿಯು ಬೆಂಬಲನೀನಿದ್ದೂ ಗುಣಕಾರ್ಯಕನುವಾಗಿ ಇಂಬುಕೊಡುವೆ ಫಲಭೋಗಿಸಲೀವೇ ಎಂಬನುಡಿ ಶ್ರುತಿಶಾಸ್ತ್ರಸಿದ್ಧವು ನಂಬಿಹುದು ಜಗವೆಲ್ಲ ಸತ್ಯವು ಶಂಬರಾಂತಕ ಪಿತನೆ ಎನ್ನ ಹೃದ- ಯಾಂಬರದಿ ನಿನ್ನ ಬಿಂಬ ತೋರೈ 1 ಕಾಲಕರ್ಮಾದ್ಯಷ್ಟಗುಣಗಳೆಲ್ಲವು ನಿಜ- ವೆಲ್ಲಜಡಗಳು ಮತ್ತು ಅಚೇತನಂಗಳೈ ಶೀಲ ಮೂರುತಿ ನೀ ಪರಮ ಚೇತನನಾಗಿ ಎಲ್ಲ ಕಾಲದಿ ನಿನ್ನ ನಿಯಮನಂಗಳೈ ಕಾಲಕರ್ಮಗುಣಂಗಳೇನಿಹುದೆಲ್ಲ ಫಲಪ್ರದಾನವ ಮಾಡೆ ಶಕ್ತಿ ಜಡಕೆಂತಿಹುದಯ್ಯ ಕಾಲನಾಮಕ ನೀನೆ ಸರ್ವ ಕಾಲದಲಿ ಸ್ವಾತಂತ್ರ್ಯ ನಿನ್ನದೋ ಇಲ್ಲ ಘನ ಸಮರಿಲ್ಲ ಸರ್ವಕರ್ಮ ಫಲವೆಲ್ಲ ನೀನೆ ದಾತೃವೋ 2 ಮರ್ಮವರಿಯೆನೊ ದೇವ ಧರ್ಮಭ್ರಷ್ಟನಾದೆ ಕರ್ಮಫಲಾನುಭವಮಾಡಿ ಬೆಂಡಾದೆನು ಕರ್ಮ ತಾ ಶಿಕ್ಷಿಸಲರಿಯದು ನ್ಯಾಯ ಧರ್ಮಾಧಿಪತಿ ಭೀಕರ ಫಲಕೊಟ್ಟು ಶಿಕ್ಷಿಪಂತೆ ಧರ್ಮಮೂರುತಿ ಶುದ್ಧನಿಷಿದ್ಧಕರ್ಮಂಗಳಿಗೆ ಪೂರ್ಣಫಲವಿತ್ತು ಸಮನೆಂದೆನಿಸಿರುವೆ ಕರ್ಮಮೋಚಕ ನೀನೆ ಸಕಲ ಕರ್ಮಪ್ರದನೆಂದೆನಿಸಿ ಪೂರ್ವ- ಕರ್ಮಫಲ ಭೋಗಿಸಲು ಜನ್ಮವನಿತ್ತು ಕರ್ಮಪ್ರವಹದೊಳಿಡುವೇ 3 ವಿಮುಖನಾಗಿಹೆ ಶ್ರುತಿಸ್ಮøತಿಶಾಸ್ತ್ರಧರ್ಮಕೆ ಪ್ರಮುಖನಾಗಿಹೆ ದುಷ್ಕರ್ಮ ಮಾರ್ಗದಲ್ಲಿ ಕರ್ಮಕಲಾಪದ ಧರ್ಮ ಮರ್ಮವನರಿಯೆ ಹೆಮ್ಮೆಯಿಂದಲಿ ನಾನಾ ಕರ್ಮಕೂಪದಲಿರುವೆ ಪೆರ್ಮೆಗೋಸುಗ ಅಧರ್ಮವೆಷ್ಟೋ ಮಾಡ್ದೆ ಒಮ್ಮೆಗಾದರು ಸದ್ಧರ್ಮಾಚರಿಸಲಿಲ್ಲ ಕರ್ಮ ಅಕರ್ಮ ವಿಕರ್ಮ ಪರಿಚಯವಿಲ್ಲ ಜನ್ಮಕೆ ಧರ್ಮಪುತ್ರನೆ ದ್ವಂದ್ವಕರ್ಮಸಮರ್ಪಿಸಲು ಸನ್ಮತಿಯ ಕೊಟ್ಟಿನ್ನು 4 ಬೆಟ್ಟದೊಡೆಯನೆ ಶ್ರೀ ವೇಂಕಟೇಶ ನೀ ತುಷ್ಟಿಯಾದರೆ ನಿನ್ನಿಷ್ಟದಂತೆ ಫಲವು ಸೃಷ್ಟಿಯೊಳು ಪುಟ್ಟಿಸಿ ದುಷ್ಟಕರ್ಮದ ಪಾಶ ಕಟ್ಟಿನೊಳಿಟ್ಟೆನ್ನ ಕಷ್ಟಪಡಿಸುವರೇ ಸೃಷ್ಟೀಶ ಉರಗಾದ್ರಿವಾಸ ವಿಠಲ ಎನ್ನ ನೀನಿಟ್ಟಿರುವಷ್ಟುಕಾಲ ಧಿಟ್ಟಭಕುತಿಯ ಕೊಟ್ಟು ದಿಟ್ಟ ರಕ್ಷಿಸು ಇಷ್ಟಮೂರುತಿಯೆ ಇಷ್ಟದಾಯಕನೆಂದು ನಾನಿಷ್ಟು ನುಡಿದೆನೋ ನಿನ್ನ ಎನ್ನ ಮನೋಭೀಷ್ಟೆ ಸಲಿಸೆ ನಿನ್ನಿಷ್ಟವಯ್ಯ5
--------------
ಉರಗಾದ್ರಿವಾಸವಿಠಲದಾಸರು
ಕಂಸಾರಿ ನಿನ್ನ ಪದ ತೋಯಜಕೆರಗುವೆ | ಕಾಯಜ ಜನಕ ಪ ಪಾಥÀಜ ಭವವಿಧಾತ ಸುಮನಸ ಪ್ರಾತವಿನುತ ಮಾನಾಥನೆ ನಿರುತ 1 ಭದ್ರಮೂರುತಿ ಬಲಭದ್ರಾನುಜ ಮಂದ ರಾದ್ರಿಪಾಣಿ ಸಮುದ್ರ ಶಯನ2 ಖೇಟವರೂಧ ಕಿರೀಟಸೂತ ಶತ | ಕೋಟಿದಿನಪ ನಿಭ ಘೋಟಕವದನ 3 ಕಂತು ಜನಕ ಮಾವಾಂತಕ ಮಾನವ ದಂತಿವೈರಿ ಜಗದಂತರಿಯಾಮಿ 4 ಸಾಮಗಾನಪ್ರೀಯ ಶಾಮಸುಂದರ ವ್ಯೊಮ ನೃಪನ ಜಾಮಾತನೆ ಜವದಿ 5
--------------
ಶಾಮಸುಂದರ ವಿಠಲ
ಕಂಸಾರಿನಿಜಪಾದ ಮರೆಯದಿರೆಲೆ ಮನವೆ ಸಂಸಾರಸುಖ ನೆಚ್ಚಿ ಭ್ರಮೆಯೊಳಗೆ ಬಿದ್ದು ಪ ಜನನಿಜನಕರುವನಿತೆತನುಜನುಜರಿವರೆಲ್ಲ ನಿನಗ್ಹಿತದಶತ್ರೆಂದು ನೆನೆಸಿಕೊಳ್ಳದಲೆ ಅನುದಿನವು ದುಡಿದುಡಿದು ತನುಮನಧನವನಿತು ಬಿನುಗರಿಗೆ ಸಲಿಸಿ ನರಕಕುಣಿಯೊಳಗೆ ಬಿದ್ದು 1 ಹೊಲಸುಕಿಲ್ಬಿಷಮಾಂಸ ಮೇಲೆ ಚರ್ಮದ ಹೊದಿಕೆ ಬಲವಾಗಿ ಬಿಗಿದ ನರ ಎಲುವಿನ್ಹಂದರವು ತೊಳೆಯದಿರ್ದರೆ ನಿಮಿಷ ಹೊಲಸುನಾರುವ ಮಹ ಮಲಭಾಂಡಕ್ಕೊಲಿದು ಬಲು ಸಿಲುಕಿ ಬಂಧದೊಳು 2 ಜಡದಮೇಲಣ ಲಿಪಿಯು ಒಡನೆ ಮಾಯಪ್ಪಂತೆ ಪೊಡವಿಯ ಸುಖ ನಿಮಿಷದಡಗಿ ಪೋಗುವುದು ಅಡಿಗಡಿಗೆ ಎಡೆಬಿಡದೆ ಒಡೆಯ ಶ್ರೀರಾಮನಲಿ ದೃಢವಾಗಿ ನೆರೆನಂಬಿ ಪಡಕೋ ನಿಜಸುಖವ 3
--------------
ರಾಮದಾಸರು
ಕಾಣಲಿಲ್ಲವೆಂದೆನಬೇಡಿ ಪ ಜಾಣನವನು ನಿಮ್ಮ ಕೋಣೆಯೊಳಗಿರುವಾ ಗು ಡಾಣವ ತುಡುಕುವ ನೆರೆನೋಡಿ ಅ.ಪ ಸುಲಭನು ನಿಮಗವನೊಲಿವನು ನಿಮ್ಮೆಡೆ ನಿಲುವನು ನಲಿವನು ಕೈನೀಡೀ ಸಲಿಸಿರಿ ಬೆಣ್ಣೆಯ ಮೆಲುವನು ಕಿಲಕಿಲ ನುಲಿವನು ಚಲಿಸಲು ಬಿಡಬೇಡಿ 1 ಅಳುಕುತ ಬಳುಕತ ಬಳಲುತ ಸುಳಿಯುತೆ ಘಳಿಲನೆ ಪೋಪನೆಚ್ಚರವಿರಲಿ ಎಳನಗೆಯಿಂದ ಪಾಲೆರೆಯಿರಿ ಮನ ದೊಳಚ್ಚಳಿಯದ ಮೋದವು ನೆಲೆಸಿರಲಿ 2 ಮನವೆಂಬುವುದೇ ವನರುಹವಮ್ಮಾ ಕನಸುನೆನಸಿನೊಳಾ ವನಜವನರ್ಪಿಸೆ ನೀನೆಂಬುದನೇ ಮರೆಯುವಿರಮ್ಮಾ [ತನುಮನ ಅವನಡಿ ಸೇರುವುದಮ್ಮಾ] 3 ಪಡಸಾಲೆಯೊಳಿವ ನಿಲ್ಲುವನಲ್ಲಾ ಅಡಿಗೆಯ ಕೋಣೆಯ ಬಿಡುವನಲ್ಲ ಒಡೆಯ ಶ್ರೀಮಾಂಗಿರಿಪತಿಯನು ನೋಡದ ಮಡದಿಯಿಲ್ಲವೆಂಬುದು ಸಟೆಯಲ್ಲ 4 ನೀವಿರುವಾಯೆಡೆ ಪಾಲ್ಗಡಲಮ್ಮಾ ನೀವಡಿಯಿಡುವುದೇ ಕಡೆಗೋಲಮ್ಮಾ ದಧಿ ನವನೀತವು ನೀವಿರೆ ಮಾಂಗಿರಿರಂಗನುಂಟಮ್ಮಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಾಮಧೇನುಗರವುತಲ್ಯದೆ ನಮ್ಮ ಮನಿಯಲಿ ನೋಡಿ ಬ್ರಹ್ಮಾನಂದದೋರುತದೆ ಪರಮಾಮೃತ ಸೂರ್ಯಾಡಿಧ್ರುವ ಭೋರ್ಗರೆವುತಲ್ಯದೆ ಇರುಳ ಹಗಲಿ ತಾ ಕರಕೊಳ್ಳಲಿ ವಶವಲ್ಲ ಅಮೃತ ದುರುಳರಿಗಿದು ಅರಿಕಿಲ್ಲ ಸುರಿ ಸುರಿದು ಸಾರಾಯ ಚಪ್ಪರಿದನುಭವ ನಿಜಸುಖ ತಾ ಬಲ್ಲ ಸುರಮುನಿಜನರಾನಂದದಿ ಸೇವಿಸಿ ಅರಹುತರಾದರು ಎಲ್ಲ 1 ಕಾಸಿ ಕಡಿಯದೇ ಭಾಸುತಲ್ಯದೆ ಲೇಸಾಗಿ ನವನೀತ ಮೋಸಹೋಗದನುಸರಿಸಿಕೊಂಬುದು ವಸುಧಿಯೊಳಗೆ ತ್ವರಿತ ಋಷಿಮುನಿಗಳು ಸ್ವಹಿತ ತುಸುಕೊರತಿಲ್ಲದೆ ಪಸರಿಸಿ ತುಂಬೆದ ವಿಶ್ವದೊಳಗೆ ಸನ್ಮತ2 ಅನುದಿನ ಮಹಿಪತಿಗಿದು ನಿಜ ನೋಡಿ ಮಹಾಮಹಿಮೆಯ ಸವಿಗೂಡಿ ಶಿರದಲಭಯವ ನೀಡಿ ಇಹಪರದೊಳು ಗುರುನಾಮವೆ ಕಾಮಧೇನುವಿದೆ ಕೊಂಡಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯ ಪ ಗತಿ ನೀನೆ ಎನಗೆ ಸಂತತ ಪರಂಧಾಮಾ ಅ ಕೃಪಣ ವತ್ಸಲನೆ ಎಮ್ಮಪರಾಧಗಳ ನೋಡಿ ಕುಪಿತನಾಗುವರೇನೋ ಸುಫಲದಾಯೀ ನೃಪಗನಿರುದ್ಧ ಬಿನ್ನಪವ ಮಾಡುವೆ ನಿನಗೆ ಚಪಲ ಚಿತ್ತರಾದ ಕಾಶ್ಯಪಿಸುರರನ ಕಾಯೋ 1 ಮಾನ್ಯಮಾನದನೆ ಬ್ರಹ್ಮಣ್ಯದೇವ ನೀನೆಂದು ಉನ್ನತ ಶ್ರುತಿಗಳು ಬಣ್ಣಿಸುವುವು ಸನ್ನುತ ಮಹಿಮನೆ ನಿನ್ನ ಪೊಂದಿದವರ ಬನ್ನ ಬಡಿಸುವುದು ನಿನಗಿನ್ನು ಧರ್ಮವು ಅಲ್ಲ 2 ಹಲವು ಮಾತುಗಳಾಡಿ ಫಲವೇನು ಬ್ರಾಹ್ಮಣರ ಕುಲಕೆ ಮಂಗಳವೀಯೋ ಕಲುಷದೂರ ಸುಲಭ ದೇವೇಶ ನಿನ್ನುಳಿದು ಕಾವರ ಕಾಣೆ ಬಲಿಯ ಬಾಗಿಲ ಕಾಯ್ದ ಜಗನ್ನಾಥ ವಿಠಲಾ 3
--------------
ಜಗನ್ನಾಥದಾಸರು
ಕಾಯ ಬಲು ಹೇಯವೊ | ಸಾಕು ಸಾಕು ಸಂಸಾರ ನೆಚ್ಚದಿರು ಎಚ್ಚರಿಕೆ ಪ ಊಧ್ರ್ವಾಧೋ ಭಾಗದಿಂದ ಕೂಡಿದಾ ರಕ್ತಶುಕ್ಲ | ಅರ್ಧರ್ಧ ಪ್ರವೇಸಿಯಾಗಿ | ವರ್ಧನಾಗಿ ಮಾಂಸ ಪಿಂಡಿಕೆಯಲಿ ಬೆಳೆದು | ಅರ್ಧವದೊಳಗೆ ಬಳುಲುವುದೇನೊ ಮಹಾ ಕಠೀಣಾ 1 ಸನ್ನಿರೋಧವಾದ ಪ್ರಾದೇಶದಲಿ ನೀನು | ಬನ್ನ ಬಡುವದು ಜನಕೆ ಅರಿಯನಲ್ಲಾ | ಮುನ್ನೆ ಇಂದ್ರನಿಗಾಗಿ ವರವಿತ್ತ ಸಂಪತ್ತು | ಇನ್ನು ನಿನ್ನ ಸುತ್ತ ಬಂದದೆ ತಿಳಿದುಕೋ 2 ವಾತ ಶೈತ್ಯಜ್ವರ ಕೆಮ್ಮು | ಸಪುತ ಧಾತುಗಳಿಂದ ಬರುವ ರೋಗ | ಕ್ಲೇಶ ಮೋಹಗಳೊಡನೆ | ಮಾಯಾ 3 ಕಾಮ ಮದ ಗರ್ವದಲಿ ಪುಂಜನಾಗಿ ದುರಳ ನಿ | ಜ ಮಗಳ ಕೂಡ ಬೆರದಾಡಿ ಬೆರೆದು | ರೋಮರೋಮ ವಿಷಯ ಪೂರ್ತಿಯಾಗಿ ಚರಿಸಿ | ಪಾಮರನಾಗಿ ಬಳಲದಿರು ಬಹು ಜೋಕೆ 4 ಸತಿ ಸುತರು ಮಿಕ್ಕಾದ ಬಂಧುಗಳು ನೆರೆನೆರೆದು | ಪ್ರತಿದಿವಸದಲಿ ಅಟ್ಟುವುದು ನೋಡು| ಮತಿ ಚಂಚಲವಾಗಿ ಸತ್ಕರ್ಮ ವೃತ್ತಿಗೆ | ಪ್ರತಿಕೂಲವಾಗುವದು ಪ್ರೀತಿಯಾಗದು ಮುಂದೆ 5 ಎಂತು ನೋಡಲು ವಿಷಯ ಅನುಭವಿಸಿದರು ಅದರ | ಅಂತು ಕಂಡವರಾರು ವಲ್ಲೆನೆಂದು | ಭ್ರಾಂತಿಯಿಂದಲಿ ತಿರುಗಿ ಬಯಲಾಗೋದಲ್ಲದೆ | ಚಿಂತೆ ಇಷ್ಟಷ್ಟು ಏನೆಂದು ಪೇಳಲಿ 6 ಯಲೋ ಮನವೆ ಸಾರಿ ಪೇಳಿದೆನು ಚನ್ನಾಗಿ ನೀ | ನೆಲೆ ಮಾಡಿಕೋ ಜ್ಞಾನ ಭಕುತಿ ವಿತ್ತಾ | ಸುಲಭ ದೇವರ ದೇವ ವಿಜಯವಿಠ್ಠಲರೇಯ | ಕೆಲಕಾಲ ನೆನೆದು ಸುಖಿಯಾಗು ಸುಜನರಾ ಕೇಳು 7
--------------
ವಿಜಯದಾಸ
ಕಾಯೊ ಕರುಣಾಬ್ಧಿ ಗುರು ಎನಗೆ ದಯವುಳ್ಳ ಸ್ವಾಮಿ ನೀನಹುದೊ ಜಗದೊಳಗೆ ಧ್ರುವ ಶಿರದಲಭಯವ ನೀಡಿ ಕರುಣದಯದಲಿ ನೋಡಿ ಹರುಷ ಮನವನು ಮಾಡಿ ದುರಿತಭವ ಈಡ್ಯಾಡಿ ಗುರುತ ನಿಜ ಮಾಡರಹು ನೀಡಿ ಪರಮ ಗತಿ ಇದರಿಡಿ ವರಕೃಪೆಯ ಮಾಡಿ 1 ಒಂದು ಪಥವನು ತಿಳಿಸಿ ದ್ವಂದ್ವ ಭೇದವನಳಿಸಿ ಕುಂದ ದೋಷವ ತೊಳಿಸಿ ಒಂದರೊಳು ನಿಲಿಸಿ ನೆಲೆಗೊಳಿಸಿ ಸಂದು ಜನ್ಮಗಳಳಿಸ್ಯಾನಂದ ಸುಖ ಹೊಳಿಸಿ 2 ಕರುಣಿಸೊ ಗುರು ಎನಗೆ ಶರಣ ಹೊಕ್ಕಿದೆ ನಿಮಗೆ ದೋರುದನುಭವ ಈಗೆ ಕರಗಿ ಮನವೆರಗುವ್ಹಾಂಗೆ ಸ್ಮರಣ ಸುಖ ಎದುರಿಡು ಬ್ಯಾಗೆ ತರಣೋಪಾಯದಲೆನೆಗೆ ಪೊರೆಯೊ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾರ್ಕಳದ ವೆಂಕಟರಮಣದೇವರ ಲಕ್ಷದೀಪೋತ್ಸವ ಪೀಠಿಕೆ ಉತ್ತಮರು ಕೇಳಿರೈ ಉಲ್ಲಾಸದಿಂದ ವರ- ಪೃಥ್ವಿಯೊಳು ಮೂಲಕಾಪುರದೊಳಗಿಹ ವಿಶ್ವಾ ಪ್ರವರವೆತ್ತ ವೆಂಕಟಕೃಷ್ಣನ ಪುತ್ರ ಲಕ್ಷ್ಮೀನಾರಾಯಣನು ಹರಿಪದಕಮಲ ಚಿತ್ತದೊಳ್ ಧ್ಯಾನಿಸುತ ಪೇಳ್ದನೀ ಕಾವ್ಯಮಂ ಪ್ರವರ್ತಿಸುವುದೆಲ್ಲ ಜನರು 1 ಧರೆಯೊಳುತ್ತಮವೆನಿಪ ವರ ಕಾರ್ಕಳಾಖ್ಯ ಪುರ- ದರಸ ಶ್ರೀವೆಂಕಟೇಶ್ವರನ ಲೀಲಾಭಿವಿ ಸ್ತರದ ದೀಪೋತ್ಸವದ ಪರಿವಿಲಾಸಕ ಕಾವ್ಯರಚನಾಗುಣಗಳಿಂದ ಸುರನಾರಿಯರು ಪೇಳ್ದ ಸಂವಾದ ತೆರನಂತೆ ವಿರಚಿಸಿದೆನೀ ಕೃತಿಯ ದೋಷವಿದ್ದರೆ ತಿದ್ದಿ ಸರ್ವ ಜನರು 2 ಶ್ರೀ ವಿಷ್ಣುನಿಗಮಾರ್ಗಮಾರ್ಚಿತ ಪದಂ ಪೀತಾಂಬರಾಲಂಕೃತಂ ಸೇವ್ಯಂ ಸದಾ ತತ್‍ಪದಂ ದೂರ್ವಾದಲಶ್ಯಾಮಲಂ ಶ್ರೀವತ್ಸಾಂಕಮುದಾರ ಮಂಗಲಕರಂ ಶ್ರೀ ಶ್ರೀನಿವಾಸಂ ಭಜೇ 3 ಆದಿಗುರು ವೇದವ್ಯಾಸರನು ವಂದಿಸುತ ಸಾದರದಿ ಮಧ್ವಯತಿವರರರ ನುತಿಸುತ ಭೂದಿವಿಜರಿಂಗೆರಗಿ ಬಳಿಕ ಕೂರ್ಮೆಯೊಳು ಮಾಧವನ ರಾಣಿ ಲಕ್ಷ್ಮಿಯನು ಮನಸಿನೊಳು 1 ಧ್ಯಾನಿಸುತ ಏಕದಂತನ ಪದವ ಭಜಿಸಿ ಮಾನದಿಂ ಶಾರದೆಯನೊಲವ ಸಂಗ್ರಹಿಸಿ ಶ್ರೀನಿವಾಸನ ಪುಣ್ಯಚರಿತೆಯನನುಸರಿಸಿ ನಾನಾ ಲೀಲೆಗಳನು ಕಾವ್ಯರಚನೆಯಲಿ ನಾನೊರೆವೆ 2 ಪರಮ ಪುರುಷನು ಪ್ರಥಮ ದಿನದಿ ಕಟ್ಟೆಯಲಿ ವರಪೂಜೆಗೊಂಡು ಮಂಟಪದಿ ವಿನಯದಲಿ ಚರಣವನು ತೋರಿ ಹನುಮ ಗರುಡನಲಿ ಪರಿವಿಲಾಸಕರ ಸೇವೆಗೊಂಡು ಕರುಣದಲಿ 3 ಭೋಗಿಪತಿಯಲಿ ಮಂಡಿಸಿದ ಲೀಲೆಗಳನು ನಾಗತೀರ್ಥದ ಗಂಭೀರೊತ್ಸಾಹಗಳನು ಭಾಗವತ ಯೋಗವನು ಭೋಜನಾಧಿಕವ ಭಾಗ್ಯೋದಯದ ಚೂರ್ಣೋತ್ಸವದ ವಿಲಾಸಕವನು 4 ಶ್ರೀ ನಾರಾಯಣನ ಕರುಣದಲಿ ವೇಣುಮತಿ ಪ್ರಾಸಯತಿಗಳ ಯುಕ್ತಿಯೆಲ್ಲ ನಾನರಿಯೆ ದೋಷವಿದ್ದರೂ ತಿದ್ದಿ ಬಲ್ಲಭಿ ಮಾನನಿಧಿಗಳನು ಮೆರೆಸುವದು ಭೂತಳದೊಳು ಶ್ರೀನಿವಾಸನು ಪಾಲಿಸುವನು ನಿತ್ಯದೊಳು5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕಾರ್ಕಳದ ವೆಂಕಟರಮಣದೇವರ ಲಕ್ಷದೀಪೋತ್ಸವ ಪೀಠಿಕೆ ಉತ್ತಮರು ಕೇಳಿರೈ ಉಲ್ಲಾಸದಿಂದ ವರ- ಪೃಥ್ವಿಯೊಳು ಮೂಲಕಾಪುರದೊಳಗಿಹ ವಿಶ್ವಾ ಪ್ರವರವೆತ್ತ ವೆಂಕಟಕೃಷ್ಣನ ಪುತ್ರ ಲಕ್ಷ್ಮೀನಾರಾಯಣನು ಹರಿಪದಕಮಲ ಚಿತ್ತದೊಳ್ ಧ್ಯಾನಿಸುತ ಪೇಳ್ದನೀ ಕಾವ್ಯಮಂ ಪ್ರವರ್ತಿಸುವುದೆಲ್ಲ ಜನರು 1 ಧರೆಯೊಳುತ್ತಮವೆನಿಪ ವರ ಕಾರ್ಕಳಾಖ್ಯ ಪುರ- ದರಸ ಶ್ರೀವೆಂಕಟೇಶ್ವರನ ಲೀಲಾಭಿವಿ ಸ್ತರದ ದೀಪೋತ್ಸವದ ಪರಿವಿಲಾಸಕ ಕಾವ್ಯರಚನಾಗುಣಗಳಿಂದ ಸುರನಾರಿಯರು ಪೇಳ್ದ ಸಂವಾದ ತೆರನಂತೆ ವಿರಚಿಸಿದೆನೀ ಕೃತಿಯ ದೋಷವಿದ್ದರೆ ತಿದ್ದಿ ಸರ್ವ ಜನರು 2 ಶ್ರೀ ವಿಷ್ಣುನಿಗಮಾರ್ಗಮಾರ್ಚಿತ ಪದಂ ಪೀತಾಂಬರಾಲಂಕೃತಂ ಸೇವ್ಯಂ ಸದಾ ತತ್‍ಪದಂ ದೂರ್ವಾದಲಶ್ಯಾಮಲಂ ಶ್ರೀವತ್ಸಾಂಕಮುದಾರ ಮಂಗಲಕರಂ ಶ್ರೀ ಶ್ರೀನಿವಾಸಂ ಭಜೇ 3 ಆದಿಗುರು ವೇದವ್ಯಾಸರನು ವಂದಿಸುತ ಸಾದರದಿ ಮಧ್ವಯತಿವರರರ ನುತಿಸುತ ಭೂದಿವಿಜರಿಂಗೆರಗಿ ಬಳಿಕ ಕೂರ್ಮೆಯೊಳು ಮಾಧವನ ರಾಣಿ ಲಕ್ಷ್ಮಿಯನು ಮನಸಿನೊಳು 1 ಧ್ಯಾನಿಸುತ ಏಕದಂತನ ಪದವ ಭಜಿಸಿ ಮಾನದಿಂ ಶಾರದೆಯನೊಲವ ಸಂಗ್ರಹಿಸಿ ಶ್ರೀನಿವಾಸನ ಪುಣ್ಯಚರಿತೆಯನನುಸರಿಸಿ ನಾನಾ ಲೀಲೆಗಳನು ಕಾವ್ಯರಚನೆಯಲಿ ನಾನೊರೆವೆ2 ಪರಮ ಪುರುಷನು ಪ್ರಥಮ ದಿನದಿ ಕಟ್ಟೆಯಲಿ ವರಪೂಜೆಗೊಂಡು ಮಂಟಪದಿ ವಿನಯದಲಿ ಚರಣವನು ತೋರಿ ಹನುಮ ಗರುಡನಲಿ ಪರಿವಿಲಾಸಕರ ಸೇವೆಗೊಂಡು ಕರುಣದಲಿ3 ಭೋಗಿಪತಿಯಲಿ ಮಂಡಿಸಿದ ಲೀಲೆಗಳನು ನಾಗತೀರ್ಥದ ಗಂಭೀರೊತ್ಸಾಹಗಳನು ಭಾಗವತ ಯೋಗವನು ಭೋಜನಾಧಿಕವ ಭಾಗ್ಯೋದಯದ ಚೂರ್ಣೋತ್ಸವದ ವಿಲಾಸಕವನು 4 ಶ್ರೀ ನಾರಾಯಣನ ಕರುಣದಲಿ ವೇಣುಮತಿ ಪ್ರಾಸಯತಿಗಳ ಯುಕ್ತಿಯೆಲ್ಲ ನಾನರಿಯೆ ದೋಷವಿದ್ದರೂ ತಿದ್ದಿ ಬಲ್ಲಭಿ ಮಾನನಿಧಿಗಳನು ಮೆರೆಸುವದು ಭೂತಳದೊಳುಶ್ರೀನಿವಾಸನು ಪಾಲಿಸುವನು ನಿತ್ಯದೊಳು 5
--------------
ತುಪಾಕಿ ವೆಂಕಟರಮಣಾಚಾರ್ಯ