ಒಟ್ಟು 1924 ಕಡೆಗಳಲ್ಲಿ , 108 ದಾಸರು , 1460 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏತಕೆ ಒಣಭ್ರಾಂತಿ ತಿಳಿಯದು ಮೂರುದಿನದ ಸಂತಿ ನೀತಿಗೆಟ್ಟು ಸತಿಮೋಹದಿ ಕುಳಿತೆಮದೂತರೆಳೆಯುವಾಗೇನಂತಿ ಪ ಬರುವಾಗೊರ್ವಬಂದಿ ಬರುತಲೆ ಮಂದಿ ಮಕ್ಕಳೆಂದಿ ಇರು ಇರುತೆಲ್ಲ ನನ್ನದೆಂದಿ ಮರೆವಿನ ಆಲಯದೊಳು ನಿಂದಿ ಕರುಣವಿಲ್ಲದೆತುಸು ಹೆಡತಲೆಮೃತ್ಯು ಮುರಿದು ತಿನ್ನುವಾಗ್ಯಾರಿಲ್ಲ ಹಿಂದೆ 1 ತನುಜನರು ಇವರು ಧನಕನಕಿರುವತನಕ ಹಿತರು ಜನಕಜನನಿಯರು ಕೊನೆಗೆ ಸಂಗಡ ಬರರ್ಯಾರು ಕನಿಕರವಿಲ್ಲದೆ ಕಾಲದೂತರು ಘನಬಾಧೆಪಡಿಸಲು ಬಿಡಿಸರೋರ್ವರು 2 ಭೂಮಿ ಸೀಮೆಯೆಲ್ಲ ಈ ಮಹರಾಜ್ಯ ಭಂಡಾರ ಸುಳ್ಳು ಪಾಮರ ಸಂಸಾರ ಕಾಮಿಸಿ ಕೆಡಬೇಡೇಲೆ ಮಳ್ಳ ಕಾಮಜನಕ ನಮ್ಮ ಸ್ವಾಮಿ ಶ್ರೀರಾಮನ ನಾಮಭಜಿಸಿ ಭವಗೆಲಿದು ನೀ ಬಾಳೋ3
--------------
ರಾಮದಾಸರು
ಏತಕೆ ಮರುಳಾದೆಯೋ ಆ ಹೆಣ್ಣಿನಿ-ನ್ನೇತಕೆ ಭ್ರಮಿಸಿದೆಯೋಜಾತಿನಾಯಕಿಯರೊಳ್ಕತೆಯೆನುತಲಿ ಬಿ-ಟ್ಟ ತರುಣೀ ಸುಮ್ಮನೇತಕೆ ಮನಸೋತಿನ್ ಏತಕೆ ಪ ರೂಪಿನೊಳಗೆ ಚಂದವೆ ಕಾಮಶಾಸ್ತ್ರ ಕ-ಲಾಪ ಬಲ್ಲವಳೇತಾ ಪತಿವ್ರತೆ ಪರರೆಲ್ಲಾ ಜಾರೆಯರೆನು-ತೀಪತಿ ಬೊಗಳುವ ಪಾಪಿ ಕುರೂಪನೀಂ 1 ಬಣಗು ಭಿಕಾರಿ ನೀಂ 2 ಬರಲಿದಿರೇಳುವಳೆ ಪದವ ತೊಳೆದುಸೆರಗಿನಿಂದೊರಸುವಳೇತರುಣಿಯರುಗಳ ಮನಸ ಕಂಡವರುಂಟೆದುರುಳೆಯೆಂಬುದನೆಲ್ಲಾ ರಾಮೇಶ ಒಲ್ಲ 3
--------------
ಕೆಳದಿ ವೆಂಕಣ್ಣ ಕವಿ
ಏನಿದು ಎಲೆ ಮನ ಏನು ಇದು ನೆನೆಸಿದರೆದೆ ಝಲ್ಲೆನುವುದು ಪ ನಾನು ಯಾರೆಂಬುವ ಖೂನವ ತಿಳಿಯದೆ ಶ್ವಾನನಂದದಿ ಕೆಟ್ಟ ಹೀನಭವಕೆ ಬಿದ್ದು ಅ.ಪ ಏತಕ ಬಂದದ್ದೀ ಜನುಮಕ್ಕೆ ತಲೆಯೆತ್ತಿ ನೋಡದೆ ಕೂತಿಮುಂದಕೆ ನೀತಿಗೇಡಿ ಮಹಪಾತಕನು ಯಮ ದೂತರು ನಿಂತಾರೊ ಎಳಿಲಿಕ್ಕೆ 1 ಬೀಳಬೇಡೋ ಮಾಯದ ಜಾಲಕ್ಕೆ ಘಳಿಲನೆ ತಿಳಿತಿಳಿ ಸುಲಭದಿ ಸಮಯವು ಬಲಿಸಿ ಹರಿಯ ಧ್ಯಾನ ಕಾಲನ ನೂಕೋ 2 ಹುಟ್ಟಿಬಂದಿ ಶಿಷ್ಟಪದ ಪಡಿಲಿಕ್ಕೆ ಮರ್ತುಬಿಟ್ಟಿ ನಿಂತಿ ಬಿಟ್ಟಗಂಟ್ಹೊರಲಿಕ್ಕೆ ಭ್ರಷ್ಟಗುಣವ ಬಿಟ್ಟು ದಿಟ್ಟರಾಮನ ಗಟ್ಟ್ಯಾಗಿ ನಂಬಿ ಮುಟ್ಟು ಮುಕ್ತಿಪದಕೆ3
--------------
ರಾಮದಾಸರು
ಏನಿದು ಚಂದ ಹರಿಯೆ ಮುಕುಂದ ಪ ಒದಗಿದ ಬಾಧೆಯ ಬಿಡಿಸಲು ಬೇಡಲುತುದಿಕೆಳಸುವ ತನಕ ಹಾನಿಯ ಕಾಯ್ವುದು 1 ಕುರು ಸಭೆಯೊಳು ಮಾನವನುಳಿಸೆಂದುತರುಣಿ ಬಾಯ್ದೆರೆ ಬೇಗ ಬಾರೆಂದು 2 ಮಕರಿಯ ಹಿಡಿತವ ಬಿಡಿಸಲು ಕರಿನೃಪಮುಖವೆತ್ತಿ ಮೊರೆಯುತೆ ಜವದಿ ಪೊರೆಯುವುದು 3 ತಡಮಾಡದೆ ಶರಣರ ರಕ್ಷಿಸದೆಚಡಪಡಿಸುವುದನು ನೋಡುತಲಿರುವುದು 4 ಮೊರೆಯಿಡೆ ಭಕುತರ ಪೊರೆಯಯ್ಯ ಜವದಲಿಕರುಣಿಸು ಗದುಗಿನ ವೀರನಾರಾಯಣ 5
--------------
ವೀರನಾರಾಯಣ
ಏನಿದೆತ್ತಣ ಬಯಕೆ ಎಲೊ ಮಂಕು ಜೀವನೀನು ಅರಿತರೆ ಪೇಳು ನಿಜವನೆನಗೆ ಪ ಎಂಟೆರಡು ಮಾರುತರು ಎಡೆಎಡೆಗೆ ಬರುತಿರಲುನಂಟರೈವರು ಕೂಡಿ ಆಕ್ರಮಿಸುತಿಹರುದಾಂಟುವುದು ಅಸದಳವೊ ಎರಡೊಂದು ಬಲೆಗಳಲಿಕಂಟಕದಿ ಬಲು ತಾಪದಿಂದ ಬಳಲುವರು 1 ಆರೆರಡು ದಂತಿಗಳು ದಾರಿಯೊಳು ನಿಂತಿಹವುಆರು ಮೂರು ತುರುಗಗಳು ದಾರಿಯನು ಕೊಡವುಮೂರೆರಡನೀಡಾಡಿ ತೋರುವುದು ಎನ್ನಾಣೆಸಾರಿ ಏನೇನಹುದು ಎಂಬುದನು ನೋಡು 2 ಪರರನು ನಿಂದಿಸದೆ ಪರಯೋಗ್ಯ ನೀನಾಗಿಪರರ ಪಾಪಗಳ ನೀ ಕಟ್ಟಿಕೊಳದೆಪರಮಾತ್ಮ ಕಾಗಿನೆಲೆಯಾದಿಕೇಶವರಾಯಪರಹಿತಕೆ ಸಖನೆಂದು ಭಜಿಸೆಲೊ ಮನುಜ 3
--------------
ಕನಕದಾಸ
ಏನು ಕಾರಣ ಕೃಷ್ಣಾ ಏನು ಕಾರಣ ಪ ಏನು ಕಾರಣ ಎನ್ನ ಕಣ್ಣಿಗೆ ನೀನು ತೋರದಿರುವುದು ಇದು ಅ.ಪ ಖಗ ಮೃಗಾದಿಗಳಿಗೆ ನೀನು ರಘು ಕುಲೇಶ ದರ್ಶನವಿತ್ತೆಸೊಗಸು ಮೋಕ್ಷವಿತ್ತೆ ಅದಕುಖಗವರೂಢ ಕಡಿಮೆಯೇನು 1 ಶಬರಿ ಎಂಜಲುಂಡು ವನದಿಅಬುಜ ಶಯನ ದರುಶವಿತ್ತೆಕುಬುಜೆ ಕೂಡಿದೆಲ್ಲೊ ಅದಕುವಿಬುಧ ವಂದ್ಯ ಕಡಮೆನೋವಾ 2 ಮುರಲಿನೂದಿ ವನದಿ ಹರಿಯುತರುಲತಾದಿಗಳಿಗೆ ದರ್ಶನವಿತ್ತು ಕಾಯ್ದುಅದಕು ಪರಮ ಪುರುಷ ಕಡಿಮೆ ನೋವಾ3 ಹಾದಿಲ್ಹೋಗೋ ಕೀಟನಿಗೆವೇದನಾಥ ದರುಶನಿತ್ತಿಆದಿ ವರ್ಣದವನು ಅದಕುಬಾದರಾಯಣ ಕಡಿಮೆ ಏನೋ 4 ಎಷ್ಟು ಎಷ್ಟು ಜನರಿಗೀಗಭೆಟ್ಟಿ ನೀಡಿ ಸುಖವನಿತ್ತೆಶ್ರೇಷ್ಠನೆಂದು ಸ್ತುತಿಪೆ ನಿನ್ನ ಕೃಷ್ಣ ಕರುಣಿ ಬೇಗನೆ ಬಾ 5 ಇಂಥಾ ಜನುಮದಲ್ಲಿ ನಿನ್ನಕಂತು ಪಿತನೆ ಕಾಣದಿರಲುಪಂಥಗಾಣೆ ಮುಂದಿನ ತನುಎಂಥದಾಗುವುದೋ ತಿಳಿಯೆ 6 ಇಂದಿರೇಶ ಮುರಲಿ ಶೋಭಿತಇಂದು ಬಿಂಬ ವಿಜಯ ವದನತಂದು ತೋರಿಸೆನ್ನ ಮನಕಾ-ನಂದಿಸೀಗ ನಂದನಸುತ 7
--------------
ಇಂದಿರೇಶರು
ಏನು ತಿಳಿವುದೋ ಮೂರ್ಖರಿಗೇನು ತಿಳುವುದೋತಾನೇ ತಾನಾದ ತತ್ವವ ಹೇಳಲು ತನ್ನ ತಲೆಯನು ತೂಗುತಿರುವಗೆ ಪ ಮಂಕರಿ ಹೊರುವ ಕೋಣನ ಮುಂದೇ ಮಹಾವೀಣೆಯನು ಹಿಡಿದುಕಿಂಕಿಣಿ ಕಿಣಿ ಕಿಣಿ ಎಂದು ಬಾರಿಸೆ ತಿಳಿಯುವುದೇಓಂಕಾರದ ಮಹಿಮೆಯನು ಒಲಿದು ಹಿರಿಯರು ಹೇಳುತಿರಲುತಂಕದಿ ಕೇಳುತ ಹೋ ಹೋ ಎಂದು ತಲೆಯನು ತೂಗುವರಿಗೆ1 ಮೂಟೆಯ ಹೊರುವ ಕತ್ತೆಯ ಮೂಗಿಗೆ ಮಘ ಮಘಿಪ ಕಸ್ತೂರಿಯ ಹಚ್ಚಲುಗಾಳಿಯ ಪರಿಮಳ ಸುಗಂಧಗಳ ಅದು ತಿಳಿಯುವದೇಲಾಲಿಪ ಬ್ರಹ್ಮಾನಂದದ ಲಕ್ಷಣ ಲಕ್ಷ್ಯವ ಹಿರಿಯರು ಹೇಳುತಿರಲು ಕೇಳಿದಾಗಲೇಹೋ ಹೋ ಎನ್ನುತ ತಲೆಯ ತೂಗುವವರಿಗೆ 2 ಸತ್ಯಾನಂದರೆ ಅವರೇ ಗುರುಗಳು ಸತ್ಯ ಸಂಧರು ಅವರೇ ಭಕ್ತರುಸತ್ಯ ಜ್ಞಾನವ ತಿಳಿಯಲಿಕೆ ಅವರೇ ಯೋಗ್ಯರುಸತ್ಯವಸ್ತು ಚಿದಾನಂದ ಸಾಕ್ಷಾತ್ ರೂಪವೇ ಹೇಳುತಿರಲುಚಿತ್ತದಿ ಕೇಳು ಹೋ ಹೋ ಎಂದು ತಲೆಯ ತೂಗುವರಿಗೆ 3
--------------
ಚಿದಾನಂದ ಅವಧೂತರು
ಏನು ಧನ್ಯರೋ ಜಗದಿ ಎಂಥ ಮಾನ್ಯರೋ | ಮೌನಿ ಶ್ರಿ ರಘುಪ್ರೇಮತೀರ್ಥರು ಪ ಕಲಿಯುಗದಿ ಕÀ್ರತುಗೈದ ಇಳಿಯ ಜನಕ ಸಾಧ್ಯವೆಂದು ಕುಲಿಶಪಾಣಿಯಂತೆ ತೋರ್ಪರು 1 ಧೂರ್ತರಿಂದ ದೂರವಿದ್ದು | ಸ್ವಾರ್ಥರಹಿತರಾಗಿ | ಸಕಲ ತೀರ್ಥಕ್ಷೇತ್ರ ಚರಿಸಿ ಜನ್ಮ ಸಾರ್ಥಕೆನಿಸಿದ ಯತಿಯು 2 ಸದನ ತೃಣಸಮಾನವೆನಿಸಿ ಮುದದಿ | ವಿನಯಶೀಲ ದ್ವಿಜರಿಗಿತ್ತು ಮುನಿಯೆನಿಸಿ ವಿರುಕ್ತರು 3 ಚತುರಾಶ್ರಮ ವ್ರತದಿ ನೇಮ ಸತತಾ ಚರಿಸುತಲಿ | ಶಿಷ್ಯರಾದಿಗೆ ವ್ರತಬೋಧವೃಷ್ಟಿ ಹಿತದಿಗರೆದು ಪೊರೆವ ಯತಿಯು 4 ಶ್ರೀಮಧ್ವಸುಮತವಾರಿಧಿ ಸೋಮನೆಂದೆನಿಸಿ | ಜಿತ ಕಾಮರಾಗಿ ಕಠಿಣ ತಪದಿ | ಶ್ರೀ | ಶಾಮಸುಂದರನ ವಲಿಸಿದವರು 5
--------------
ಶಾಮಸುಂದರ ವಿಠಲ
ಏನು ಪವಮಾನಿ | ಏನು ಪವಮಾನಿ | ಈ ನಿಧಿಯಲಿ ಬಂದು ನಿಂದ ಕಾರಣ | ಮಾಣದೆ ಪೇಳು ನಿ | ದಾನದಿಂದಲಿ | ಮಾನಸದಲಿ | ದಾನವಾರಿಯ | ಧ್ಯಾನ ಮಾಡುವ ಜಾಣ ಜಗದ ಪ್ರಾಣ ಸುಂದರಾ | ನಾನಾ ಮಹಿಮಾ ಗುರುವೆ ಪ ಕೇಸರಿನಂದನ ಪಾಶವಿನಾಶ ನಿರ್ದೋಷ | ಭಾರತೀಶ ಈಶಾ | ಶೇಷಾದ್ಯರಿಗುಪದೇಶದ ಕರ್ತಾ | ಲೇಸು ಸದ್ಗುಣಗಣ ಕೋಶ ಸರಸಿಜಾಸನ ಪದವಿಗೆ ಸೇರುವಾತಾ || ದೇಶದೊಳು ಬಲುಭೂಷಣ ಪಾಕಶಾಸನ ಶರದ ಶರೀರ | ದಾಶರಥಿ ಪಾದಾಸರವಿಡಿ | ದೇಸು ಬಗೆಯಲಿ | ಮೋಸ ಪೋಗದಾಯಾಸಬಡದಲೆ | ಮೀಸಲ ಮನ ಸೂಸು ವನರಾಸಿ ಲಂಘಿಸಿ 1 ಪರಿಸರ ಪೋಗಲಾಸಮಯದಲ್ಲಿ | ಭಾಸುರ ಲಂಕೆ | ಯ ಶೋಧಿಸಿದನಾ ಗೋ | ಸಾಸಿರವಿತ್ತು ಕೂಸಿನಂದದಲಿ || ಭಾಷಿಯನಾಡಿ ಪದ್ಮಾಸನಿಗೆ ಸಂ | ಸವರಿ ಫಲ ಸವಿದು ಖಳನ ನಗುತ | ನಾಶಗೊಳಿಸಿದ ಸಮರ್ಥನೆ 2 ಹಿಂದೆ ಪ್ರಳಯದಲ್ಲಿಂದಿರೇಶನು ಸುರ್ವೃಂದ ಉದರದೊಳು | ಪೊಂದಿಟ್ಟುಕೊಂಡು ಆಗ | ಅಂದು ನೀನೊಬ್ಬನೇ ಮಂದನಾಗದೆ ನಯದಿಂದಲಿ ಎಚ್ಚತ್ತು | ಪೊಂದಿಕೊಂಡು ಇದ್ದೆ | ಇಂದು ಕದನದೊಳು ಇಂದ್ರಜಿತನು ಕರದಿಂದ ಸೆಳೆದÀ ಶರ | ದಿಂದಲಿ ಸಿಗಿಬಿದ್ದು | ಬಂಧಿಸಿಕೊಂಡಂಜಿನಿಂದಂತೆ ಮೈದೆಂದಿಗಿಲ್ಲದಂತೆ ನಂದವ ತೋರಿದೆ ಇಂದು ಮೌಳಿಯ ಪೊಂದಿದದಶ | ಕಂಧರನ ಮೊಗ ಮುಂದೆ ಭಂಗಿಸಿ | ಬಂದು ಗುದ್ದಿಲಿನೊದ್ದನು ಅವನಿರೆ | ಮಂದಹಾಸದಲಿಂದ ನಗುತ 3 ಪುರವನುರುಹಿ ಅಸುರರ ಸದೆದು ತೀ | ವರದಿಂದ ಶರಧಿಯ ಮರುಳೆ ಹಾರಿ ಬಂ | ದುರವಣಿಯಿಂದ ಶ್ರೀ | ಹರಿ ಚರಣಕ್ಕೆರಗಿ ಪೊಡಮಟ್ಟು | ಕರವನೆ ಮುಗಿದು | ಚೂಡಾಮಣಿ ಇಡೆ ಮುಂದೆ ವಿವರಿಸಿದೆ | ರಿಪುಗಳಾ | ಗರದ ವಿಸ್ತಾರ | ಸುರರು ಭಾಪುರೆ ಎಂದಂಬರದಲಿವಾದ್ಯ | ಬೆರೆದಲ್ಲಿ ಮೊರೆಯಾಗಿ ಅರಮರೆಯಿಲ್ಲದೆ | ತರಿಸಿ ಮಾರ್ಗವಸರದಲಿ ವಿಸ್ತರಿಸಿ | ಧುರದೊಳಗರಿಗಳಿಂದಲಿ ಮರಣವಾದವರನ ಎಬ್ಬಿಸಿ 4 ಪಾತಾಳದೊಳು ಹತ್ತು ತಲೆಯವನಿರಲು ಕಾತುರದಿಂದ ಹೋ ಮಾತುರಕಾರ್ಚಿಸೆ | ಮಾತು ಮುಂಚದ ಮುನ್ನ ಭೀತಿ ಇಲ್ಲದೆ ಪೋಗಿ | ಪಾತಕನವಧಾನ | ದಾತಗೆ ದಿವ್ಯವರೂಥವೆಂದೆನಿಸಿ ವಿ| ಧೂತ ರಾವಣನ ವಿ | ಪಾತನ ಗೈಸಿದೆ | ಪ್ರೀತಿ ಬಡಿಸಿ ನಿಜಾರಾತಿ ವಿಭೀಷಣಗೆ ತಪ್ಪದೆ ಲಂಕಾ | ನಾಥನ ಮಾಡಿ ನೀ | ರಘುನಾಥನ ಯಡೆ ನೀ ತೆಗೆದುಂಡೆ | ಶ್ರೀ ತರುಣೇಶ ವಿಜಯವಿಠ್ಠಲನ ದೂತಾ ಹನುಮಾ 5
--------------
ವಿಜಯದಾಸ
ಏನು ಪುಣ್ಯವ ಮಾಡಿ ನಾನಿಂದು ನಿನ್ನ ಕಂಡೆ ದೀನ ವತ್ಸಲ ಸ್ವಾಮಿ ಕೃಷ್ಣ ಪ ಜ್ಞಾನಗಮ್ಯನೆ ನಿನ್ನ ಕಾಣಲು ಮನದಲ್ಲಿ ನಿತ್ಯ ಧ್ಯಾನವ ಮಾಡುವರಯ್ಯ ಅ.ಪ. ಶ್ರುತಿ ಶಾಸ್ತ್ರಗಳನೋದಿ ಮಥನವ ಮಾಡುವ ಮತಿಸಾಧನದಿಂದ ನಿನ್ನರಸುವರೊ ಪತಿತಪಾವನ ನಿನ್ನ ಕರುಣವೊಂದಿಲ್ಲದಿರೆ ಇತರ ಸಾಧನವೆಲ್ಲ ಗತಿದೋರದೋ ಸ್ವಾಮಿ 1 ನಿನ್ನ ಭಕ್ತರು ಮಾಳ್ಪ ಸಾಧನಂಗಳಿಗೆಲ್ಲ ನಿನ್ನ ಕಾರುಣ್ಯವೇ ಕಾರಣವಲ್ಲವೆ ನಿನ್ನ ನುತಿಸ ಬಂದ ನರರ ಕ್ಷೇಮದ ಭಾರ ನಿನ್ನದೆಂದು ತಿಳಿದು ನೀನಾಗಿ ಪೊರೆಯುವೆ 2 ಏನೊಂದು ಸಾಧನವರಿಯದ ಎನಗೀಗ ನೀನಾಗಿ ದಯಮಾಡಿ ಮೈದೋರಿದೆ ಏನು ಧನ್ಯನೊ ನಾನು ಆನಂದಕೆಣೆಗಾಣೆ ದಾನವಾಂತಕ ಸ್ವಾಮಿ ಕರಿಗಿರೀಶನೆ ಕೃಷ್ಣ 3
--------------
ವರಾವಾಣಿರಾಮರಾಯದಾಸರು
ಏನು ಭಯ ನನಗೆ ಏನು ಭಯತಾನೆಯಾದ ಪರಬ್ರಹ್ಮ ತಾನೆಯಾಗಿ ತಾನಿಹಗೆ ಪ ಕಾಮಿಸಿ ಸುತರು ಸೊಸೆಯು ಕೊನೆಯಿಲ್ಲದ ಬಯಕೆಯಾಗೆಕಾಮನನ್ನು ಕಾಲಲೊದ್ದು ಕಸಕೆ ಮಾಡಿದವಗೆ 1 ಇಹಪರ ವಾಸನೆಯನೆಲ್ಲ ಲೋಕ ವಾಸನೆಯದಹಿಸಿ ಬೂದಿಯನ್ನೆ ಮಾಡಿ ಧೂಳಿಪಟ ಮಾಡಿದವಗೆ 2 ಬಣ್ಣ ಬಣ್ಣದ ಕ್ರೋಧಮದಗಳ ಬಳಿದು ಶೋಕ ಮೋಹವನುಣ್ಣಗೆ ಮಾಡಿ ಎಲ್ಲವ ನುಂಗಿ ನೀರು ಕುಡಿದವಗೆ 3 ಕ್ಲೇಶ ದುಷ್ಟಗುಣ ವೆಂಬುದೆಲ್ಲವಹೊಟ್ಟು ಮಾಡಿ ಹಾರಲೊದ್ದಿಹ ದಿಟ್ಟ ಮಾನವಗೆ4 ಕಪಟ ಮೋಹ ಮೊಳೆಯ ಕಿತ್ತುಬಯಲು ಚಿದಾನಂದ ಸದ್ಗುರು ಬ್ರಹ್ಮವಾಗಿ ತೂಗುವಗೆ 5
--------------
ಚಿದಾನಂದ ಅವಧೂತರು
ಏನು ಮಾಡಲಿ ವಿಠಲ ಏನು ತಿಳಿಯದು ವಿಠಲ ಏನಿತ್ತು ಮೆಚ್ಚಿಸಲಿ ವಿಠಲಾ ಪ. ಜ್ಞಾನ ಮೊದಲೇ ಇಲ್ಲ ಧ್ಯಾನ ಮಾಡುವುದರಿಯೆ ನೀನಾಗೆ ವಲಿದೆನ್ನ ಸಲಹಯ್ಯ ವಿಠಲಯ್ಯ ಅ.ಪ. ತಂದೆತಾಯಿಯು ನೀನೆ ಬಂಧು ಬಳಗವು ನೀನೆ ತಂದವನುಭವದಲ್ಲಿ ಎನ್ನ ನೀನೆ ಮುಂದೆ ಪೊರೆವವ ನೀನೆ ಹಿಂದೆ ಪೊರೆದವ ನೀನೆ ಇಂದು ಪೊರೆಯುವನು ನೀನೇ ಒಂದರಿಯೆ ತವ ಪದದ್ವಂದ್ವವೆ ಗತಿ ಎಂದು ಇಂದು ಚರಣದಿ ಬಿದ್ದೆ ಪೊರೆಯಯ್ಯ ವಿಠಲಯ್ಯ 1 ಹಿಂದಿನಾ ಭಕ್ತರನು ಪೊರೆದ ಕೀರುತಿ ನೋಡೆ ಒಂದು ನಿಜವೆಂದರಿಯೆ ವಿಠಲಾ ಇಂದೆನ್ನ ಕರಪಿಡಿದ ಮುಂದಕ್ಕೆ ಕರೆದು ನೀ ಒಂದು ಮಾತನಾಡೆ ವಿಠಲಾ ಅಂದಿನಾ ಭಕ್ತವತ್ಸಲನೆಂಬ ಕೀರ್ತಿ ನಿಜ ವೆಂದು ತಿಳಿಯುತಲಿ ಆನಂದಿಸುವೆ ವಿಠಲಯ್ಯ 2 ಸಿರಿವಂತರಿಗೆ ವಲಿವ ಬಿರುದೊಂದು ಘನವೆ ಕೇಳ್ ಪರಿ ವಿಠಲಾ ಪರಿಪರಿಯಲಿ ನಿನ್ನ ಚರಣ ಪಿಡಿದಾಲ್ಪರಿಯೆ ಥರವೆ ಗರುವಿಕೆ ಪೇಳು ವಿಠಲಾ ತೆರದು ನೋಡದೆ ನೇತ್ರ ಕರದಭಯ ಪೇಳದಲೆ ಪರಿ ಕರುಣೆಗೆ ಸರಿಯೆ ಪೇಳ್ ವಿಠಲಯ್ಯ3 ಹಿಂದೆ ಕೆಲವರ ಕಾಯ್ದುದೊಂದೆ ಕೀರ್ತಿಯು ಜಗದಿ ಮಂದಿ ಹೊಗಳುವರದನೆ ಮತ್ತೆ ಮತ್ತೆ ಇಂದು ಮುಂದೆ ಅಂಥ ಬಂದ ಭಕ್ತರು ಇಲ್ಲೆ ಇಂದಿಲ್ಲವೇ ನಿನಗೆ ಆ ಶಕ್ತೀ ಇಂದಿನವರಲಿ ಅಂಥ ಭಕುತಿ ಇಲ್ಲವೆ ಪೇಳು ಇಂದಿರೇಶನೆ ಎನಗೆ ವಲಿಯದಿಹೆ ವಿಠಲಯ್ಯ 4 ಅಂತರಂಗದಿ ನಿಂತು ಶಾಂತತ್ವ ಕೊಡುವುದಕೆ ಚಿಂತೆ ಏತಕೆ ಪೇಳು ವಿಠಲಾ ಸಂತತದಿ ನಿನಧ್ಯಾನ ಚಿಂತನೆಯ ಕೊಡು ಎನಗೆ ಚಿಂತಿತಾರ್ಥಪ್ರದನೆ ವಿಠಲಾ ಕಂತುಪಿತ ಗೋಪಾಲಕೃಷ್ಣವಿಠ್ಠಲ ಗುರುಗ ಕರ ಪಿಡಿದು 5
--------------
ಅಂಬಾಬಾಯಿ
ಏನು ವೈಭವವೊ ಶ್ರೀನಿವಾಸ ಧೊರೆಯೆನಿನ್ನದೇನು ವೈಭವವೊ ಪ ಸಿರಿಯು ತಾನೆ ನಿಂತು ನಿನ್ನನಿರುತ ಸೇವೆ ಗೈಯ್ಯುತಿಹಳೊಸರಸಿಜಾಸನಾದಿ ಸುರರುಕರವ ಮುಗಿದು ತುತಿಸುತಿಹರೂ 1 ನಾಗರಾಯ ದಿವ್ಯಾಸನನಾಗಿ ಹೆಡೆಯ ಛತ್ರ ಪಿಡಿವಯೋಗಿ ನಾರದ ತುಂಬುರಾರುರಾಗ ಮಾಡಿ ಹಾಡುತಿಹರೊ 2 ಗರುಡ ವಾಯು ಸುತರು ನಿನ್ನಪರಮ ವಾಹನರಾಗಿ ಬಹರುಸುರಮುನಿಗಳು ಸಕಲ ನರರುನಿರುತನಾಮ ಜಪಿಸುತಿಹರು 3 ಮಂಗಳ ವಾದ್ಯಗಳು ಮೊಳಗಿಮಂಗಳಾರುತಿಯಾಗಿ ಬೆಳಗಿತಿಂಗಳು ನೇಸರರು ದಿವ್ಯಮಂಗಳ ದೀವಟಿಗರಾಗಿ 4 ಅಮೃತ ನಿನ್ನ ಪಾನತೋರ ಭಕುತರಾಳೆ ಗದಗುವೀರನಾರಾಯಣನೆ ನಿನ್ನದೇನು ವೈಭವವೊ 5
--------------
ವೀರನಾರಾಯಣ
ಏನು ಹಾವಳಿ ಮಾಡುತಿಹನಮ್ಮ ಗೋಪಮ್ಮ ಕೇಳೆಏನು ಹಾವಳಿ ಮಾಡುತಿಹನಮ್ಮ ಪ ಏನು ಹಾವಳಿ ಮಾಡುತಿಹಮನೆ ಓಣಿಯಲಿ ಕ್ರೀಡಿಸುವ ಮಕ್ಕಳನುತಾನು ಅಳಿಸುವ ಹಿಡಿಯ ಪೋಗಲುವೇಣುನೂದುತ ಮೋಹಿಸುವನು ಅ.ಪ. ಮನಿಯೊಳು ತಾ ಪೊಕ್ಕು ನೋಡುವನೆ ಪಾಲ್ಮೊಸರ ಕೊಡಗಳಮನಸಿನಂದದಿ ತಿಂದು ಒಡೆಯುವನೆತಿನಿಸಿ ಬೆಕ್ಕಿಗೆ ಕ್ಷಣವು ತಡೆಯದೆ ವನಿತೆರೆಲ್ಲರು ಹಿಡಿಯ ಕೂಸಿನತನುವು ಧರಿಸಿ ನಿಂತ ಕಟಿಯಲಿ ಸ್ತನವ ತಿಂಬುವ ವನರುದೇಕ್ಷಣ1 ತರುಗಳಾಲಯದಲ್ಲಿ ತಾ ಬರುವಕರೆಸದಲೆ ಮುಂಚಿತ ತೊರಿಸಿ ಮೊಲೆಗಳ ಪಾಲ ತಾ ಕುಡಿದಕರಸಿಕೊಳ್ಳದೇ ಸುರಭಿ ತಿರುಗಲು ಸರಣಿಯೊಳು ತಾ ನಿಂತು ನಗುತಲಿ ತರುಣಿಯರ ಹೆರಳ್ಹಿಡಿದುಜಗ್ಗುತ ಕರದಿ ಸಿಗದಲೆ ಭರದಿ ಓಡುವ 2 ಕೂಸಿನಂದದಿ ತೊಡೆಯೊಳಾಡುವನೆ ಕ್ಷಣದೊಳಗೆ ಪತಿಗಳವೇಷಧರಿಸಿ ಮೋಸ ಮಾಡುವನೆತಾಸು ಘಳಿಗೆ ಬಿಡದೆ ನಮ್ಮ ನಿವಾಸ ಮಾಡುತ ಕಾಡುತಿಹಇಂದಿರೇಶವಚ್ಛವ ಸಾಕು ಮಾಡು ಹೇ ಶುಭಾಂಗಿ3
--------------
ಇಂದಿರೇಶರು
ಏನೆಂದು ಬಣ್ಣಿಸುವೆನು ಗುರುವಿನ ನಾನು | ತಾನಂದವರಿಗಿನ್ನು ಸ್ವಾನಂದ ಸುಖವ ನೀಡುವಾ ಪ ತಾಯಿಯಂಬೆನೆ ಮೋಹದೀ | ಬಾಲಕ ಧೃವನಾ | ತಾಯಿಗಾಯ್ದಳೆ, ಸ್ನೇಹದಿ ಜನಕನೆಂಬೆÉನೆ | ನ್ಯಾಯದಿ ಪ್ರಲ್ಹಾದನ ಜನಕ ಕಾಯ್ದನೆ ನೋಡಮ್ಮಾ 1 ಬಂಧುಯಂಬೆನೆ ಜಗದೊಳು ವಿಭೀಷಣನ್ನಾ | ಬಂದು ಕಾಯ್ದನೆ, ಇಳೆಯೊಳು ಆಪ್ತನೆಂಬೆÉನೆ | ಸದು ವಿಗ್ರಹದಿ ಗಜೇಂದ್ರರ ನಾಪ್ತರು ಕಾಯ್ದರೇ 2 ಇಂತು ಸಂಬಂಧ ಸ್ನೇಹದಾ | ಸಾಸಿರ ಮಡಿಯಾ | ಸಂತತ ಕೃಪೆಯಾ ಬೀರಿದಾ | ಮಹಿಪತಿ ಕಾಯಾ | ಪಂಥವರಿಯದಾ ಪರಮ ಭ್ರಾಂತನಾನು | ದ್ಧರಿಸಿದ ನೆನ್ನಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು