ಒಟ್ಟು 9830 ಕಡೆಗಳಲ್ಲಿ , 132 ದಾಸರು , 5659 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಳಿಗಿಲ್ಲವೆಂದು ವ್ಯರ್ಥ ಬಳಲ ಬೇಡಿರೋ |ಕಾಲ ಬೆಳಗು ನೆಚ್ಚಿ ಕೇಡು | ತಿಳಿದು ನೋಡಿರೋ ಪ ಅಂದಿಗಿದ್ದವರಿಗೆ ಸಾವು | ಇಂದಿಗಿದ್ದವರಿಗೆ ಸಾವು |ಇಂದಿರೇಶನ ಭಕುತರೆಂದೆಂದಿಗೆ ಸಾಯರೋ 1 ಆರಿಗಾರು ಕೊಡುವರಲ್ಲ | ಮೋರೆ ನೋಡಿ ನಗುವರಲ್ಲ |ಹರಿಗೆ ನಂಬಿದವರೇ ಪರಮ ಧೀರ ಧೂರ್ತರೋ 2 ಹೆತ್ತ ತಾಯಿ ಗರ್ಭದಲ್ಲಿ | ಹತ್ತು ತಿಂಗಳನ್ನಪಾನ- |ವಿತ್ತ ರುಕ್ಮಭೂಷಗೇತಕ್ಕೆ ಮರೆತಿರೋ 3
--------------
ರುಕ್ಮಾಂಗದರು
ನಿಖಿಳ ಯಾದವರೊಳಗೆಮಾನಾಭಿಮಾನವೆಳ್ಳನಿತಿಲ್ಲ ಕೃಷ್ಣ ಪ ದೇವಕೀದೇವಿಯುದರದಿ ಜನಿಸಿ ಬಾಲ್ಯದಲಿಓವಿ ಮೊಲೆ ಕುಡಿಸಿದಳ ಅಸುವ ಸೆಳೆದುಮಾವ ಕಂಸನ ಕೊಂದು ಮನುಜ ವೇಷದಲಿ ಗಾಂ-ಡೀವಿಯ ಮನೆಯ ಬಂಡಿ ಬೋವನಾದೆ1 ಸುರನದಿಯ ಸುತನು ಪಾಂಡವರಿಗಾಪ್ತನು ನಿನಗೆಪರಮಭಕ್ತನು ಸ್ವಯಿಚ್ಛಾ ಮರಣಿಯುಧುರದೊಳಗೆ ಪೂರ್ವ ವೈರದ ಶಿಖಂಡಿಯ ತೋರಿಶರಮಂಚದೊಳುಪಾಯದಲಿ ಮಲಗಿಸಿದೆ 2 ಸೋದರತ್ತೆಯ ಸೊಸೆಯ ಮಗ ನಿನಗೆ ಭಾವಿಸಲುಸೋದರಳಿಯನು ಮೂರು ಲೋಕವರಿಯೆಸಾಧಿಸಿಯೆ ಅಸಮ ಚಕ್ರವ್ಯೂಹವನು ರಚಿಸಿಸೋದರನ ಷಡುರಥರ ಕೈಲಿ ಕೊಲ್ಲಿಸಿದೆ 3 ಕುರುಪತಿಯ ಮೈದುನನ ಕೊಲ್ಲ ಬಗೆದವನ ಸಂ-ಗರದೊಳೇರಿಸಿ ನುಡಿದ ನುಡಿಯ ಕೇಳಿ ಮೈ-ಗರೆಯೆ, ರವಿ ಮಂಡಲಕೆ ಚಕ್ರದಿ ಮರೆಯ ಮಾಡಿನರನ ಕೈಯಿಂದ ಸೈಂಧವನ ಕೊಲ್ಲಿಸಿದೆ 4 ಶಪಥದಲಿ ರಣದೊಳರಸನ ಹಿಡಿವೆನೆಂಬವಗೆತಪಸಿಗಳ ತಂದು ತತ್ತ್ವವ ಬೋಧಿಸಿಕಪಟವರಿಯದ ನೃಪನ ಕೈಯೊಳನೃತವ ನುಡಿಸಿಉಪಮೆಯಲಿ ಶಸ್ತ್ರ ಪಂಡಿತನ ಕೊಲ್ಲಿಸಿದೆ 5 ಯಮಳರನು ಪಡೆದ ತಾಯಿಗೆ ಸಹೋದರನ ಭೂರಮಣರೊಳಗಗ್ಗಳೆಯನತಿ ಧೈರ್ಯನುಸಮರದಲಿ ರವಿಸುತನ ರಥಕೆ ಸೂತನ ಮಾಡಿಯಮಸುತನ ಕೈಲಿ ಮಾವನ ಕೊಲ್ಲಿಸಿದೆ 6 ಜನವರಿಯದಂತೆ ಜೀವನದೊಳಡಗಿರ್ದವಗೆಮನಕೆ ಖತಿಗೊಳಿಸಿ ಬರ ಸೆಳೆದು ನಗುತಅನುವರದೊಳಾಯತದ ತೊಡೆಯ ಸನ್ನೆಯ ತೋರಿಅನಿಲಜನ ಕೈಲಿ ಕೌರವನ ಕೊಲ್ಲಿಸಿದೆ7 ಉರಿಯೊಳಗೆ ಜನಿಸಿದಂಗನೆಯ ನಿಜಸುತರು ಮಂ-ದಿರದೊಳೈವರು ನಿದ್ರೆಗೈಯುತಿರಲುನರವೃಕೋದರ ಧರ್ಮನಂದನರನಗಲಸಿಯೆಗುರು ಸುತನ ಕೈಲಿ ಬಾಲಕರ ಕೊಲ್ಲಿಸಿದೆ 8 ಈ ವಿಧದೊಳವರ ಸುರಲೋಕದಲಿ ನೆಲೆಗೊಳಿಸಿಭಾವ ಮೈದುನರೈವರನು ರಕ್ಷಿಸಿಭೂವಲಯದೊಳು ಕೀರ್ತಿಯನು ಪಡೆದೆಸೆವ ನಮ್ಮದೇವ ನೆಲೆಯಾದಿಕೇಶವ ವೆಂಕಟೇಶ 9
--------------
ಕನಕದಾಸ
ನಿಗಮ ಸನ್ನುತ ಪ ವೀತ ಶೋಕ ಭಯ ವಿದೂರ ಮದನ ಜನಕ ಅ.ಪ. ಆದಿಮಧ್ಯಾಂತರಹಿತ - ವೇದ ಪೀಠನ ಜನಕನೀತ ಅಚ್ಯುತ ಅಪ್ರಮೇಯ ಅಮರವಂದಿತ 1 ನಿತ್ಯತೃಪ್ತ ನಿಖಿಲವ್ಯಾಪ್ತ ಸತ್ಯಸಂಕಲ್ಪ ಸ್ವರತ ಹಸ್ತಿವರದನಾದಪರ ವಸ್ತುವೆನಿಸಿದ ಖ್ಯಾತ 2 ಸೃಷ್ಟಿಸ್ಥಿತಿಲಯಾದಿಕರ್ತ, ದುಷ್ಟದಮನ ಗೈಯುತಲೀತ ಕೃಷ್ಣರೂಪದಿಂದಲೆಸೆವ ಶ್ರೇಷ್ಠದೈವ ಶ್ರೀ ಕರಿಗಿರೀಶ 3
--------------
ವರಾವಾಣಿರಾಮರಾಯದಾಸರು
ನಿಗಮನುಳುಹಿಸಿ ನಗನೆಗದಿಹಗೆ ಜಗದೋದ್ದಾರ ಸುಭಗತ ಪ್ರಿಯಗೆ ಸುಗಮ ಧರಿ ಮೂರಡಿಯ ಮಾಡಿ ಸುಗೊಡಲ ಪಿಡಿದಿಹಗೆ ಬಗೆದು ಜಲಿಧಿಲಿ ಸೇತು ಗಟ್ಟಿದ ಖಗವಾಹನ ಯದುಕುಲ ಲಲಾಮಗೆ ಜಗಮೋಹಿಸುವ ಬೌದ್ಯಕಲ್ಕಿಗೆ ಶರಣು ಸುಶರಣು 1 ಸಿರಿಯನಾಳುವ ದೊರಿಯೆ ನಿನ್ನ ಮರೆಯ ಹೊಕ್ಕಿಹ ಚರಣಕಮಲ ಸರಿಯ ಬಂದ್ಹಾಂಗೆನ್ನ ಹೊರವದು ನಿನ್ನ ದಯ ಘನವು ಬಿರುದು ನಿನ್ನದು ಸಾರುತಿಹುದು ಕರಿಯ ವರದಾನಂದ ಮೂರುತಿ ಸುರಿಸಿ ಕರುಣಾಮೃತವುಗರೆವುದು ತರಳ ಮಹಿಪತಿಗೆ 2 ಮೂರ್ತಿ ಸದ್ಗುರು ನೆನೆವರನುದಿನ ಸಾರ್ಥ ಸದ್ಗುರು ಜನವನದೊಳನುಕೂಲ ಸದ್ಗುರು ತಾನು ತಾಂ ಎನಗೆ ಸಾರ ನೀಡುತ ತನುಮನದೊಳನುವಾಗಿ ಸಲಹುವ ದೀನಮಹಿಪತಿ ಸ್ವಾಮಿ ಭಾನುಕೋಟಿ ತೇಜನಿಗೆ 3 ಶರಣಜನಾರಾಭರಣವಾಗಿಹ ಮೂರ್ತಿ ಸದ್ಗುರು ತರಣೋಪಾಯದ ಸಾರಸುಖವಿರುವ ನಿಜದಾತ ಪರಮಪಾವನ ಗೈಸುತಿಹ ವರ ಶಿರೋಮಣಿ ಭಕ್ತವತ್ಸಲ ಚರಣ ಸ್ಮರಣಿಲೆ ಪೊರೆವದನುದಿನ ತರಳ ಮಹಿಪತಿಗೆ 4 ನೋಡದೆನ್ನವಗುಣದ ದೋಷವ ಮಾಡುವದು ಸದ್ಗುರು ದಯ ಘನ ನೀಡುವುದು ನಿಜ ಸಾರಸುಖವನು ಕರುಣದೊಲವಿಂದ ಬೇಡುವÀದು ನಿನ್ನಲ್ಲಿ ಪೂರಣ ಪ್ರೌಢ ಘನಗುರುಸಾರ್ವಭೌಮನೆ ಮೂಢ ಮಹಿಪತಿ ರಕ್ಷಿಸನುದಿನ ಸರ್ವಕಾಲದಲಿ 5 ಸ್ವಾಮಿ ಸದ್ಗುರು ಸಾರ್ವಭೌಮನೆ ಕಾಮ ಪೂರಿತ ಕಂಜನಾಭನೆ ಸಾಮ ಗಾಯನ ಪ್ರಿಯ ಸಲವ್ಹೆನ್ನಯ ಶ್ರೀ ನಿಧಿಯೆ ಮಾಮನೋಹರ ಮನ್ನಿಸೆನ್ನ ನೀ ನೇಮದಿಂದಲಿ ಹೊರೆವದನುದಿನ ಕಾಮಧೇನಾಗಿಹ ಕರುಣದಿ ದೀನಮಹಿಪತಿಗೆ 6 ಕುಂದ ನೋಡದೆ ಬಂದು ಸಲಹೆನ್ನಯ್ಯ ಪೂರ್ಣನೆ ಇಂದಿರಾವಲ್ಲಭನೆ ತಂದಿ ತಾಯಿ ನೀ ಎನಗೆ ಬಂಧು ಬಳಗೆಂದೆಂದು ನಿನ್ನನೆ ಹೊಂದಿ ಕೊಂಡಾಡುವ ಮೂಢ ನಾ ಬಂದ ಜನ್ಮವು ಚಂದಮಾಡು ನೀ ಕಂದ ಮಹಿಪತಿಗೆ 7 ದೀನಬಂದು ದಯಾಬ್ಧಿ ಸದ್ಗುರು ಭಾನುಕೋಟಿ ತೇಜಪೂರ್ಣನೆ ನ್ಯೂನ ನೋಡದೆ ಪಾಲಿಸೆನ್ನ ನೀ ಘನಕರುಣದಲಿ ನೀನೆ ತಾಯಿತಂದೆಗೆ ನೀನೆ ಬಂಧುಬಳಗ ಪೂರಣ ನೀನೆ ನೀನಾಗ್ಹೊರೆವದನುದಿನ ದೀನಮಹಿಪತಿಗೆ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿಚ್ಚಳಾಗಲಿ ಬೇಕು ತಿಳಿದು ನಿಚ್ಚಳಾಗಲಿ ಬೇಕು ಪ ನಿಚ್ಚಮಾಡುವ ದೋಷರಾಶಿಗಳಳಿದು ನಿಚ್ಚಳಾಗಲಿ ಬೇಕು ಅ.ಪ ಪಾಪವೆಂಬುದು ಹೊರಗಿಹುದೆ ತನ್ನ ಅಪವರ್ಗಕೆ ಮಾರ್ಗವಹುದೆ ಬಲು ತಾಪಸಿಗಾದರು ಅದು ಸಾಧನವಹುದೆ 1 ಪುಣ್ಯವೆಂಬದು ಬೇರೆಯಿಲ್ಲಾ ನಾನಾ ರಣ್ಯ ಚರಿಸಿದರು ದೊರಕುವದಲ್ಲಾ ಮನ್ಯು ಬಿಡದೆ ಮತ್ತೊಂದಲ್ಲಾ ನಿರುತ ಅನ್ಯರಾಶಿ ಬದಲು ಗತಿಗವಸಲ್ಲಾ 2 ವೈಕುಂಠವೆಂಬೋದು ಅಲ್ಲೆ ಬರಿದೆ ಲೌಕೀಕ ತೊರದರೆ ಇಪ್ಪದು ಇಲ್ಲೆ ಈ ಕಲಿಯೊಳಗೆ ಈ ಸೊಲ್ಲೆವೊಲಿಸ ಬೇಕೆನೆ ಮಾರಿ ಓಡುವುದು ನಾ ಬಲ್ಲೆ 3 ಹರಿಸ್ಮರಣೆಗೆ ಪೋಪ ದೋಷ ಬಲು ಪರಿ ಧರ್ಮವ ಮಾಡಲು ಲೇಶ ಸರಿಯಾವು ತರುವಾಯ ಮೋಸದಿಂದ ತಿರುಗಿ ತಿರುಗಿ ಪುಟ್ಟಿ ಬಡವನು ಕ್ಲೇಶಾ4 ಒಬ್ಬರ ಸರಿಗಟ್ಟದಿರೊ ನಿನ ಕರ್ಮ ಸುಖವೆಂದು ಸಾರೊ ಉಬ್ಬಲ ದಾಡಿಪರಾರೊ ಎಲೆ ಲ್ಹಬ್ಬಿದ ವಿಜಯವಿಠ್ಠಲನೆಂದು ಸಾರೋ 5
--------------
ವಿಜಯದಾಸ
ನಿಜವೆಂದು ತಿಳಿದು ಪೂಜಿಸೋ ಗುರುಚರಣ ಮಾಯಾ ಪ್ರಪಂಚದ ಸ್ಮರಣಾ ಪ ರಮಣೀಯರ್ಮೋಹವೆಂಬುದು ದೊಡ್ಡಶರಧಿ ಭ್ರಮಿಸಿ ನೀ ಮುಳುಗುತ್ತೇಳುವೆ ವ್ಯರ್ಥಭರದಿ ನಿಜ ಸತ್ತು ಹುಟ್ಟುವ ದೇಹ ಸಾಧ್ಯವ ಮಾಡಾ ಅ ನಿತ್ಯ ಪ್ರಪಂಚ ದೊಳ್ಕೆಡಬೇಡ ಮೂಢಾನಿಜ ನೀರ ಮೇಲಣ ಗುಳ್ಳೆಯಂತೆ ಶರೀರಾ ಬಾರಿಬಾರಿಗೆ ಸತ್ತು ಜನಿಪ ವಿಚಾರ ನಿಜ ಎಂದಿಗೂ ಮರಣತಪ್ಪದು ಕೇಳುಮರುಳೆ ಚಂದ್ರಶೇಖರನಾ ಧ್ಯಾನಿಸು ಹಗಲಿರುಳೆ ನಿಜ ಗುರುವಿಮಲಾನಂದ ಸ್ಮರಣೆಯ ಮಾಡೋ ಜನನ ಮರಣದ ಭಯವ ನೀಗಾಡೋ ನಿಜ
--------------
ಭಟಕಳ ಅಪ್ಪಯ್ಯ
ನಿಂತ ಕಾರಣ ಪೇಳು ಹಣುಮಂತರಾಯಾ ಪ ಶಾಂತನಾಗಿ ವಿಶ್ರಾಂತಿಯಗೋಸುಗಕಂತುಪಿತನ ಮಹಮಂತ್ರವ ಜಪಿಸುತಅ.ಪ. ದಾಶರಥಿಯ ದೂತಾ ದಶಮುಖಪುರವಸ್ವಾಹೇಶಗೆ ದಾತಾ ಗುರುತು ಕೊಟ್ಟು ದಾತನ ಎದುರಿಗೆ ಬಂದು1 ಶಂಖ ಕುಲದಲಿ ಜನಿಸಿ ನಿಃಶಂಖದಿ ಖಳರನು ವರಿಸಿ ಶಂಕರಾದಿನುತ ಪದ ಶಂಬಧರನ ಕಾಜಲ್ಕದಿ ಸ್ಮರಿಸುತ 2 ಮೂರನೇ ರೂಪವ ಧರಿಸಿ ಧರೆಯೊಳು ಬಂದು ಅವತರಿಸಿ ಬೋಧಿಸಿ ಮಾರ್ಗವ ತೋರಿಸಿ ತಂದೆವರದಗೋಪಾಲವಿಠ್ಠಲನಸೇವಿಸಿ 3
--------------
ತಂದೆವರದಗೋಪಾಲವಿಠಲರು
ನಿಂತು ಫುಗಡಿ ಹಾಕ ಭ್ರಾಂತತನವ್ಯಾಕ ಸಂತ ಜನನಿಯರು ನೋಡಿ ತಲೆಯ ದೂಗಬೇಕ ಪ ಆಶೆಯಲಿ ತಾನು ಕುಳಿತು ಹಾಕುದೇನು | ಘಾಸಿಯಾಗುವ ಆರುಮಂದಿಯಾ ಕೂಡಿದರೇ ನೀನು 1 ಗರುವ ತನ ಬಿಟ್ಟು ತಿರುಗಣೆಯಾ ನುಟ್ಟು | ಆರಹು ಶರಗಿನಿಂದ ಬಿಗಿದು ಹಾಕ ಮಲಕ ಗಂಟು 2 ಲಜ್ಜೆ ವಳಿದು ನೋಡೇ ಹರಿಯಸ್ತುತಿ ಮಾಡಿ | ಘಜ್ಜಿಗೆ ಬಂಡಮ್ಯಾಲ ಯಚ್ಚರ ಮೈಯ್ಯ ಮರೆಯಿಬ್ಯಾಡೇ 3 ಎರಡು ಸವೆ ನಿನೆಹಾ ಜ್ಞಾನ ಸಖೀ ಕೈಯ್ಯಾ | ಜರಿಯದಂತೆ ಹಿಡಿದು ತಿರುಗು ನಡವಿಧ ಪರಿಯಾ 4 ಫುಗಡಿ ಇದೇ ಆಡೀ ಪ್ರೇಮಭಾವ ಕೂಡೀ | ಮುಗುತಿ ಕೊಡುವ ತಂದೆ ಮಹಿಪತಿ ಸ್ವಾಮಿ ದಯಮಾಡಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿಂತು ಲಾಲಿಸಲಿ ರಾಧಾ ಕಂತುಪಿತನ ಪದನಾದ ಪ ಬಲದ ಕಾಲೆಡದೊಳಿಟ್ಟು ಇಳೆಗೆ ಎಡದ ಪದ ಕೊಟ್ಟು ಒಲಿದು ಮುರಲಿ ಮುಖವಿಟ್ಟು ಉಲಿಯೆ ಮಧುರ ರವ ಪುಟ್ಟಿ ಬಲಬಾಲರೆಲ್ಲ ನಲಿಯುತಲಿಗೋ ಪೂರ್ವ ಮಳೆಗರೆವುತಲಿ ನಾನೆಂತು ಬಣ್ಣಿಸಲಿ ಹರಿಯ ಲೀಲೆಗಳ ಉಲಿಯುವ ಶ್ರುತಿನಾದ ಬಲದ ಸಿಂಹದ ನಾದ ಸಲೆ ವಟುವಿನ ನಾದ ಬಲವಾದ ಪರಶುವಿನತಿನಾದವು ಯಶೋಜಿತ ನಾದವು ಬಲು ವಾಜಿನಾದಗಳ್ ಕೊಳಲಲಿ ಕೇಳುತ ನಿಂದು 1 ಪಾಲು ಮೊಸರುಗಳನುಂಡು ಲೀಲೆಯಾಡುತಿರೆ ಕಂಡು ಬಾಲೆಯರತಿ ಖತಿಗೊಂಡು ಗೋಳಿಡುತಲೆ ಹಿಂಡಿಂಡು ಎಮ್ಮಾಲಯದೊಳು ಬೆಣ್ಣೆ ಮೆಲುತಲಿ ಸಣ್ಣ ಬಾಲೆರಿಟ್ಟ ಪಾಲ್ ಕುಡಿವುತಲಿ ಕೆಳಮೇಲಾಗಿ ಧದಿಯನು ಸುರಿವುತಲಿ ಜಲದೊಳು ಧುಮುಕಿದ ಕಲಕದ ಚಲವಿಡಿದ ಬಲುಬೇರ ಕೋರೆಯಿಂದಗಿದು ತಿಂದಾ ಒಲಿದು ಕಂಬವ ನೋಡಿದಾ ಬಲಿಗೆ ಬಾಯಿ ತೆರೆದಾ ಮೊಲೆ ಕೊಟ್ಟ ಜನನಿಯ ಶಿರಕಡಿದಾ ಕುಲಹೀನೆಂಜಲ ತಿಂದಾ ಖಳಪೂತನಿಯಳಿದಾ ತಿಳಿಗೆಟ್ಟು ಮೈಬಟ್ಟೆ ಕಳೆದೊಗೆದಾ ಬಲು ಮಿಂದೇರಿ ವಾಜಿ ಭಟರ ಬೆನ್ನಟ್ಟಿದಾ ನಿಂತು 2 ಸುರಿವುತಿರಲು ಮಳೆ ಭಾರಿ ಚರಿವಾವ್ಗಳು ಹೌಹಾರಿ ಮರೆಯ ಕಾಣದೆಲೆ ಹೋರಿ ಕರವುತಿರಲು ಮುರವೈರಿ ಕಿರಿಬೆರಳಲಿ ಕೊಡೆವಿಡಿವುತಲಿ ಸಣ್ಣ ಕರಗಳಾವುಗಳ್ ಸಲಹುತಲಿ ಮುದ ಗೋವುಗಳ ನೋಡುತಲಿ ನಾನೆಂತು ಬಣ್ಣಿಸಲಿ ಶಿರಿವರನಾನಂದ ಭರದಿ ವೇದವ ತಂದ ನೆರೆಶೈಲನೆಗಹಿದ ಧರಾಲಲನೀಯ ನಾಸದಿ ಪಿಡಿದ ಸುರನದಿ ದ್ವಿಜರಿಗೆ ದಾನವ ಮಾಡಿದಾ ಹರಿಗೆ ಯಜಪದ ನೀಡ್ದಾ ಗುರುಪುತ್ರರನೆ ಪಡಿದಾ ಹರಿಯೇರಿ ಮೆರೆವುದು ನಿಂತು 3
--------------
ನರಸಿಂಹವಿಠಲರು
ನಿತ್ಯ ಚರಣ ಕಮಲವನ್ನು ಭವ ಹರಣ ನಾರಾಯಣ ಪ ಕನಸಿನ ಸಂಸಾರ ನೆನಸದಂತೆ ಎನ್ನಾ ಮನಸ್ಸು ಶ್ರೀಹರಿನಿಜ ಬರಿವಿನೊಳ್ ನಿಲಿಸಯ್ಯಾ 1 ಮಂದ ಬುದ್ಧಿಲಿ ನಿಜಾನಂದವನರಿಯದೇ ಬಂಧನೆಗೊಳಗಾದೆ ತಂದೆ ನೀ ರಕ್ಷಿಸೊ2 ದುರಿತಗಳೆಲ್ಲವ ಹರಣಗೊಳಿಸಿ ನಿಜ ಸ್ಮರಣೆಯೊಳಿರುವಂತೆ ಕರುಣದಿ ನೋಡೆನ್ನಾ 3 ಶಬರಿಯ ಕಾಯ್ದೆಯಾ ಬದರಿಯ ಫಲವುಂಡು ವಿಭು ಪರಮಾನಂದಾ ಪ್ರಭೆಯೊಳಗಿರಿಸೆನ್ನಾ 4 ನೆನೆವರ ಮನದಾ ಕೊನೆಯಲಿ ಮಿನುಗುವ ಸನಕಸನಂದನ ವಂದಿತನೀದೇವಾ 5 ವಾಸುದೇವನೇ ನಿನ್ನ ದಾಸಿ ಶಾಂತಿಘನ ವಾಸ ಸ್ವಸುಖವೀವ ಕೇಶವಾಶ್ರಮಗುರು 6
--------------
ಶಾಂತಿಬಾಯಿ
ನಿತ್ಯ ತೃಪ್ತಾ ಅನ್ಯರಿಂದಲಿ ಎನಗೆ ಏನು ಪ್ರಯೋಜನವೊ ಪ ದರುಶನಕೆ ಬಂದವ ನಾನಲ್ಲವೆಂದು ನಾನಂದು ಹರಿ ನಿನಗೆ ನುಡಿದದ್ದು ಮನಸ್ಸಿನೊಳಗೆ ಇರುತಿಪ್ಪದೇನಯ್ಯಾ ಬಿನ್ನಪವೆ ಲಾಲಿಸು ಶರಣ ಜನರ ಅಭಿಪ್ರಾಯವೊಂದು ಬಗೆ ಇಪ್ಪದೊ1 ನಿರುತ ವ್ಯಾಪ್ತತ್ವ ಕರುಣತ್ವ ಅಣುಮಹತ್ತು ಸರುವ ಚೇತನ ಜಡ ಮತ್ತೆ ಮತ್ತೆ ಪರಿ ಪರಿಯಿಂದಲಿ ನಿನ್ನಲಿ ಉಂಟು ನಿನ್ನ ವರ ಮೂರ್ತಿಗಳ ಪೇಳದೆ ಇದಷ್ಟು ವಿನಯದಲಿ 2 ಧ್ಯಾನಕ್ಕೆ ನೀನು ಪ್ರಧಾನನೆಂದು ನುಡಿದೆ ಅಪ್ರಮೇಯ ಕ್ಷೋಣಿಜನಕಿಂತ ದ್ವಾರದವರು ವೆಗ್ಗಳವಾಗೆ ಏನೆಂಬೆ ತಿರುವೇಂಗಳೇಶ ನಿನ್ನಾಟಕ್ಕೆ 3 ಮಿಕ್ಕ ಮಂದಜನಕೆ ನಿನ್ನ ಭಕುತರ ಮೇಲೆ ಭಕುತಿ ಪುಟ್ಟುವುದಕ್ಕೆ ನಾ ಪೇಳಿದದ್ದು ಅಕಟಕಟ ನಿನ್ನ ದೊರೆತನಕೆ ಏನೆಂಬೆ ತಕ್ಕ ಮಾತುಗಳೇನೊ ಆಲೋಚಿಸಿ ನೋಡೆ 4 ಹೊನ್ನು ಹಣ ತೂಗಬೇಕಾದರೆ ಮೊದಲಿಗೆ ಚಿನ್ನ ಹಾಕುವರೇನೊ ಚಿನ್ಮಯರೂಪ ಮುನ್ನೆ ನಿನ್ನವರ ದರುಶನವಾದ ಮೇಲೆ ಪಾ ವನ್ನ ಶಾರೀರನೆ ನಿನ್ನ ಕಾಂಬುವದುಚಿತ 5 ಜರೆಮರಣರಹಿತ ಸುಜನರ ಪರಿಪಾಲಾ ನಿ ನಿತ್ಯ ವಜ್ರಪಂಜರಾ ಜರಗೆ ವರವಿತ್ತ ದನುಜರ ವಂಶನಾಶಾ ನಿ ರ್ಜರ ನದಿ ಜನಕಾಂಬುಜ ರವಿ ನಯನ ದೇವಾ 6 ಸ್ಥೂಲಮತಿಯಿಂದ ಪೇಳಿದೆನೆಂದು ಚನ್ನಾಗಿ ಲಾಲಿಸು ಲಲಿತಾಂಗಿ ಲಕುಮಿ ರಮಣಾ ನೀಲಗಿರಿ ನಿವಾಸ ವಿಜಯವಿಠ್ಠಲ ವೆಂಕಟವಾಲಗವ ಕೈಗೊಳ್ಳು ಎನ್ನ ಯೋಗ್ಗಿತವರಿತು7
--------------
ವಿಜಯದಾಸ
ನಿತ್ಯ ನಿಜಾನಂದನಿರ್ಲೇಪ ನಿಗಮಾಂತವೇದ್ಯ ನರಸಿಂಹ 1ವಿಶ್ವನಿರ್ಮಾಣಾದಿ ವಿವಿಧ ಶಕ್ತ್ಯಾತ್ಮಕವಿಧಿಹರ ರೂಪ ಶ್ರೀ ವೀರನರಸಿಂಹ 2ಪರಿಭ್ರಾಜಮಾನಾರ್ಕ ಪಾವಕ ಶಶಿಯುಕ್ತಪದ್ಮ ಮಹಾಯೋಗಪೀಠ ನರಸಿಂಹ 3ಸಮ ಕಾಲೋದಿತ ಸೂರ್ಯಶಶಿಕೋಟಿಸಂಕಾಶಸರಸಿಜಜಾತಾಯುತೋತ್ಸಂಗ ಸಿಂಹ 4ಬ್ರಹ್ಮಾಮರೇಂದ್ರಾದಿ ಬೃಂದ ಕಿರೀಟಾಗ್ರಮಣಿ ನೀರಾಜಿತ ಪಾದಪದ್ಮ ನರಸಿಂಹ 5ಧೃತ ಶಂಖ ಚಕ್ರಾಬ್ಜ ದಿವ್ಯ ಚತುರ್ಭುಜಧರಣೀಧರಾಚ್ಯುತ ದೇವ ನರಸಿಂಹ 6ಪ್ರಹ್ಲಾದಖೇದಾಪಹಾರಕ ಪರಿಪೂರ್ಣಆಹ್ಲಾದ ಸುಕೃತಾಟ್ಟಹಾಸ ನರಸಿಂಹ 7ಆಂತ್ರಮಾಲಿಕಾಕಂಠ ಅಮಿತ ನಖಾಯುಧಅಂಕಾರೋಪತ ದೈತ್ಯಕಾಯ ನರಸಿಂಹ 8ಮಕುಟಮಂಡಿತ ಶುಭ ಮಕರಕುಂಡಲ ಧರಪ್ರಕಟಿತಕರುಣಾಕಟಾಕ್ಷ ನರಸಿಂಹ 9ಕೇಯೂರ ಹಾರ ಕೌಸ್ತುಭಮಣಿ ಭೂತಕಾಂಚನಚೇಲ ಕಲುಷಹರ ಸಿಂಹ 10ಸಕಲ ಲೋಕಾಧೀಶ ಸಾಧು ಸಂರಕ್ಷಕಸುರ ಸಿದ್ಧ ಮುನಿ ವಂದ್ಯ ಶ್ರೀ ನರಸಿಂಹ 11ತೂಲನಾಮಕ ಗ್ರಾಮ ನಿಕಟಾದ್ರಿ ಸ್ಥಿರವಾಸಪಾಲಿತಬಹುಭುವನೇಶ ನರಸಿಂಹ 12ದ್ವಿತೀಯ ಶ್ರೀ ತಿರುಪತಿ ಕ್ಷೇತ್ರಸಮಾನಾದ್ರಿ ವೆಂಕಟಪತಿ ಪ್ರತಿವೇಷ ನರಸಿಂಹ 13ಓಂ ಅನಾದಿ ಬ್ರಹ್ಮಚಾರಿಣೇ ನಮಃ
--------------
ತಿಮ್ಮಪ್ಪದಾಸರು
ನಿತ್ಯ ನಿರುಪಮ ನಿತ್ಯ ಎನ್ನ ಚಿತ್ತದಿ ನಿಲಿಸು ಪ ಮರವೆ ಮಾಯದೆ ಕೆಟ್ಟ ಪರದೆಯೋಳ್ಸದಾ ಬೆರೆದು ಶ್ವಾನಸೂಕರನಂತೆ ಚರಿಸಿದೆ ಧರೆಭೋಗ ನೆಚ್ಚಿ ನರಜನ್ಮ ವಿವರಿಸಿ ನೋಡದೆ ಮರುಳತನದಿ ನರಕಿಯಾದೆ 1 ಮೃತ್ಯುಗೀಡಾದೆ ತವಭೃತ್ಯನೆನಿಸದೆ ಸುತ್ತಿ ಸುತ್ತಿ ಇಹ್ಯಕೆ ಪರಕೆ ಕತ್ತೆಯಂತೆ ತಿರುಗಿ ತಿರುಗಿ ಮರ್ತು ನಿನ್ನ ಚರಣ ಮತ್ರ್ಯದಿ ನಿತ್ಯಸುಖವ ಪಡೆಯದ್ಹೋದೆ 2 ಆದದ್ಹಾಗಿಹೋಯಿತಭವ ವೇದಾಗಮ್ಯ ಪದುಮನಾಭ ಪಾದನಂಬಿದೆ ಪಾಲಿಸಿನ್ನು ಮೋದದೆನ್ನನೆತ್ತಿ ಶ್ರೀರಾಮ 3
--------------
ರಾಮದಾಸರು
ನಿತ್ಯ ನಿರುಪಮ ಚಿದಾನಂದ ಕರುಣಾಬ್ಧಿ ನೀನೆ ದೊರಕೆ ನಿಲುಕೆ ಅಪಮಂಗಳನೆ ಮಂಗಳವನಿತ್ತೆ ಮನಸಿಗೆ ನೀನು ಅಂಗ ಮಂಗಳವಾುತುಹಿಂಗಿದವು ದುರಿತಗಳು ಸಂಗವಿದ್ದರು ಜಡದ ತೊಂಗವವ ಮನ ಮೀರಿತುನುಂಗುತಿದೆ ದೋಷಗಳ ಬಂದಡೊಡಬನ ತೆರದಿ ಭಂಗವೆಂಬುದು ಹೋುತುಅಂಗ ಲಿಂಗದ ಕಾಂತಿ ಹೊಂಗಿ ಹೊರಹೊಮ್ಮುತಿದೆ ರಂಗ ನಿನ್ನೊಲವಾುತು ುನಿತು 1ಹೊನ್ನಿನೊಳಗಿದ್ದ ಮಲಿನವನಗ್ನಿ ಕಳಚಿದರೆ ಮುನ್ನಿನಂದದಿ ಮಲಿನವೆಹೊನ್ನಾದ ಕಬ್ಬಿನವು ಕಬ್ಬಿನದ ಸಂಗದಲಿುನ್ನು ಕಬ್ಬಿನ ಭಾವವೆಬೆಣ್ಣೆ ಕ್ಷೀರದಿ ಬಂದು ಘೃತವಾದ ಬಳಿಕ ತಾ ಬೆಣ್ಣೆಯಲ್ಲದೆ ಕ್ಷೀರವೆನಿನ್ನ ಕೃಪೆುಂದ ಮಂಗಳನಾಮವನು ಸ್ಮರಿಸೆ ನಿನ್ನವಗೆ ದೋಷ ಬಹವೆ ಇಹವೆ 2ಬಾಳೆಯನು ಬಿತ್ತಿ ಪ್ರತಿ ದಿವಸ ನೋಡಿದಡಲ್ಲಿ ನೀಳವಾಗಿಹುದು ಸುಳಿಯುಕಾಲ ಬಂದರೆ ಗೊನೆಯು ಹಾಯ್ದು ಫಲವಾಗಿರಲು ಮೇಲೊಮ್ಮೆಯುಂಟೆ ಯೆಲೆಯುಕಾಲ ಕರ್ಮಾಧೀನವಾಗಿರುವ ಸಂಸಾರ ಲೋಲ ಮನಸಿನ ವೃತ್ತಿಯುಜಾಲದಿಂದಿರಲಲ್ಲಿ ನಿನ್ನಂಘ್ರಿ ಸ್ಮರಣೆುಂಮೇಲುಂಟೆ ಕರ್ಮಗತಿಯು ಸ್ಥಿತಿಯು 3ವೃತ್ತಿ ಮಾಯಾಕಾರ್ಯ ಮಾಯೆ ನಿನ್ನಾಧೀನ ವೃತ್ತಿ ಮಾಯೆಯು ಕಲ್ಪಿತಸುತ್ತಿ ಸುಳಿಸುಳಿದಾಡಿ ಸತ್ಯದಂದದಿ ತೋರಿ ಮತ್ತೆ ನಿನ್ನೊಳಗರ್ಪಿತಚಿತ್ತು ತಾನೆ ನಾಮರೂಪಾದ ಬಗೆುಂದ ಚಿತ್ತು ಚಿತ್ತಾಹುದುಚಿತಸತ್ಯಸಂಧನು ನೀನು ಚಿತ್ತವನು ಬಿತ್ತರಿಸಿ ವೃತ್ತಿಯಾುತು ಬೆಳೆಯುತಾ ಇರುತಾ 4ಮನದ ಸಂಶಯ ಬಿಡದು ಶ್ರವಣಮನನಾದಿಗಳನನುದಿನವು ಮಾಡುತಿರಲುಮನಕೆ ಸಾಕ್ಷಿಕನಾದ ನೀನು ಘನಮಾಯೆಯನು ಮನಕೆ ಮರೆಮಾಡುತಿರಲುಚಿನುಮಯನೆ ಮಾಯೆಯನು ಕಡೆಗೆ ತೆಗೆಯಲು ಜ್ಞಾನ ಜನಿಸುವುದು ನೀನು ಕೊಡಲುಇನಕೋಟಿಸಂಕಾಶ ಇಭರಾಜದುರಿತಹರ ಎನಲು ನಿಜವಾಗುತಿರಲು ನಿಲಲು 5ತರಣಿಕಿರಣಗಳಿಂದ ಜನಿಸಿದಾ ಮೇಘಗಳು ತರಣಿಯನು ಮುಚ್ಚಲಳವೆತರಣಿ ತಾನೆನದಿವನು ಹರಹಿ ಹಿಂದಕೆ ತೆಗೆಯೆ ನೆರೆ ಹಿಂಗಿ ಹೋಗದಿಹವೆಪರಮಪುರುಷನು ನೀನು ಸ್ಮರಿಸಿ ಮಾಯೆಯ ಬೀಸಿ ತಿರುಗಿಸಲು ಮಾಯೆಗಿರವೆದುರಿತವಾಗಿರೆ ಜನಕೆ ನೆರೆ ಭಕ್ತಿಯನು ನೀನು ಕರುಣಿಸಲು ಮತ್ತೆ ಭವವೆ ಧ್ರುವವೆ 6ಅರಣಿುಂದುದುಭವಿಸಿದನಲ ಮುನ್ನಿನ ತೆರದ ಅರಣಿಯಾಗಿಯೆ ತೋರ್ಪನೆಅರೆದು ತಿಲವನು ತೆಗೆಯೆ ತೈಲವನು ತಿಲ ಬಳಿಕ ಇರುವದೆ ತೈಲದೊಡನೆಬೆರೆದು ಕರ್ಪುರವಗ್ನಿಯೊಡನಾಡಿ ಬೇರ್ಪಟ್ಟು ಮೆರೆವುದೆಂತಗ್ನಿಯೊಡನೆತಿರುಪತಿಯ ವೆಂಕಟನೆ ನಿನ್ನ ಚರಣದೊಳಿಟ್ಟ ಶರಣ ಮುನ್ನಿನ ಮನುಜನೆಯಹನೆ 7ಓಂ ಪುಣ್ಯ ಶ್ಲೋಕಾಯ ನಮಃ
--------------
ತಿಮ್ಮಪ್ಪದಾಸರು
ನಿತ್ಯ ಪ ಸಂಸಾರವೆ ಸುಖವೆಂದು ಹಾರಯಿಸಿ ಬಾಳುವಾ | ನರನ ಉದ್ಧಾರ ಮಾಡುವುದು ಅ.ಪ ಕಂಗಳಿಂದಲಿ ಪರರ ಮನೆಯ ಅಂಗನೆಯರ ನೋಡಿ ಅಂಗಸಂಗವ ಬಯಸಿ ಪಾಪಕ್ಕೆ ಹಿಂಗದೆ ಗುರಿಯಾದೆ 1 ಸಂಹ್ವತಿಯ ಮೆದ್ದು ಪುಣ್ಯದಾ ಗಹ್ವರವು ಮರಿಯದೆ 2 ನಾಸಿಕಕೊನೆಯಿಂದ ಅನರ್ಪಿತÀ ವಾಸನೆ ಕೈಕೊಂಡು ಲೇಸಾಗಿ ಮನವುಬ್ಬಿ ನಲಿವುತ ದೇಶದೊಳಗೆ ಮೆರೆದೆ 3 ಮುಪ್ಪಾಗುವತನಕ ಸುಖದಲ್ಲಿ ಅಪ್ಪಿದೆ ನಾರಿಯರ ಒಪ್ಪಿದ ಧರ್ಮಗಳ ಖಳರಿಗೆ ಒಪ್ಪಿಸಿದೆನೊ ಹರಿಯೇ 4 ಕೆಟ್ಟು ಪೋಗುವೆನೆಯ್ಯಾ ವಿಜಯವಿಠ್ಠಲ ನೀನೆ 5
--------------
ವಿಜಯದಾಸ