ಒಟ್ಟು 1200 ಕಡೆಗಳಲ್ಲಿ , 102 ದಾಸರು , 1063 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಣಿ ಕುಣಿಯಲೋ ಬಾಲಗೋಪಾಲ ಪ ಗೋಪಾಲ ನೀರದ ನೀರ ಅ.ಪ ಯಮುನಾ ತೀರದಿ ಹಿಮಕಿರಣನು ತಾ ಮಮತೆಯ ತೋರಲು ಬೆಳಗುತಿಹ ಘಮಘಮಿಸುವ ಈ ಸುಮಗಳು ಸೂಸಿರೆ ಪ್ರಮದೆಯರೆಲ್ಲರ ಪ್ರೇಮಾಂಗಣದಲಿ 1 ಗಂಧವ ಮಾರುತ ಬೀರುತಲಿರುವನು ಇಂದಿರೆ ಕೊಳಲಿನ ರೂಪದಲಿ ಚಂದದಿ ನಾದವ ತುಂಬಲು ಪರಮಾ ನಂದವು ಮಾನಸ ಮಂದಿರದಲಿ ನೀ 2 ಕಾಯವು ರೋಮಾಂಚಿತವಾಯ್ತೊ ಮಾಯಾವಾದವೊ ಮೋಹಗಳು ತಾಯಿ ಮಡಿಲು ಸೇರಿದ ಶಿಶುವಂದದಿ ಹಾಯವೆನಿಸಿತೊ ಜೀವನ ಯಾತ್ರೆಯು 3 ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಬಿಡಿಸೊ ಸ್ವಾಮಿ ನಿನ್ನಯ ಪಾದಯುಗಳವೆ ಕ್ಷೇಮವೆನ್ನಿಸೊ ಸಾರಾಸಾರ ವಿವೇಕದಿ ಮೋಕ್ಷದ ಕೋರಿಕೆ ಪುಟ್ಟಿಸೊ ಭವ ಪಾರ ಸೇರಿಸೋ 4 ಸಾರದ ಕರುಣಕೆ ಕಾರಣ ಬಿಂಬದ ಮೂರುತಿ ದರುಶನವು ಭಾರತಿ ರಮಣನ ಮಂಗಳಶಾಸ್ತ್ರ ವಿಚಾರವೆ ಕಾರಣವು ಭಕುತ ಜನ ಪ್ರಸನ್ನ ಲಕುಮಿರಮಣ ಎನ್ನು ತಕಿಟ ತಕಿಟ ಎಂದು 5
--------------
ವಿದ್ಯಾಪ್ರಸನ್ನತೀರ್ಥರು
ಕೂಸನು ಕಂಡೀರ್ಯಾ ಸುಪ್ರ-ಹ್ಲಾದನ ಕಂಡೀರ್ಯಾ ನಮ್ಮಕೂಸನು ಕಂಡೀರ್ಯಾ ಪ ರಾಕ್ಷಸ ಕುಲದಲಿ ಜನಿಸಿತು ಕೂಸುರಾಧಾಕೃಷ್ಣನ ಭಜಿಸಿತು ಕೂಸುರಾಗ ದ್ವೇಷಗಳ ಬಿಟ್ಟಿತು ಕೂಸುರಾಮ ಪಾದವ ನೆನೆಯುವ ಕೂಸು 1 ಘನ ಹರಿ ಕಂಬದಿ ತೋರಿತು ಕೂಸುಗಳಿಸಿತು ಕೃಷ್ಣನ ಪ್ರೇಮವ ಕೂಸುಘನ ಪಂಪಾಲಯದಿ ವಾಸಿಪ ಕೂಸುಗಣೆ ಗೋಪಾಲನ ಪ್ರೀತಿಯ ಕೂಸು2 ಪ್ರಸಿದ್ಧ ವ್ಯಾಸರಾಯರೆಂಬ ಕೂಸುಪ್ರವೀಣ ವಿದ್ಯೆಯೊಳೆನಿಸಿದ ಕೂಸುಪ್ರಹ್ಲಾದನೆಂಬುವ ಆಹ್ಲಾದ ಕೂಸುಪ್ರಸನ್ನ ಕಾಗಿನೆಲೆಯಾದಿಕೇಶವನ ಕೂಸು3
--------------
ಕನಕದಾಸ
ಕೃಪಾಳೊ ಗುರುವರ ಶ್ರೀಪವಮಾನ ಭವಹಾರಿ ಸ್ಮರಹರನುತ ದೀನಜನಮಂದಾರ ಅ.ಪ ಕಾವಕರುಣಿ ಜೀವವರೇಣ್ಯ ವಿನುತ ಜಯಶೀಲಾ ವಿಧಿ ದುರಿತೌಷ ಹಾರಿ 1 ಆದಿಪುರದಿ ಮೆರೆವನಾಥಾ ಸದಯ ಭಕ್ತ ಜನಕೆ ಶುಭದಾತ ಬುಧರಾರಿ ಸಜಾತ ಭ್ರಾತಾ ಸದಯ ಧರ್ಮಾನು ಜಾತಾ 2 ಪ್ರೇಮಶರಧಿ ವಾನರೇಶಾ ಅಮಿತ ಸತ್ವಯತಿ ಮಹಿಮಯತಿರಾಜಾ ರೋರೋಮ ವ್ಯೋಮಕೇಶಾ ಶಾಮಸುಂದರನ ಮೋಹದ ದಾಸಾ 3
--------------
ಶಾಮಸುಂದರ ವಿಠಲ
ಕೃಪೆಯಿಟ್ಟು ಸಲಹೆನ್ನ ಹರಿಯೆ ನರಹರಿಯೆ ದ್ವಿಪÀವರವರದನೇ ಬಾರಯ್ಯ ದೊರೆಯೆ ಪ ದುರಿತಹರÀ ವರ ಚರಣಕಮಲನೆ ಧರಣಿಧರವನು ಕರಸರೋಜದಿ ಧರಿಸಿ ಸುಜನರ ಪೊರೆದ ಮುರಳೀ- ಧರನೇ ಮೋದವಪಡಿಸಿದಂತೆ ಅ.ಪ ನಂದನಂದನ ನಿನ್ನ ಚರಣ ಒಂದೇ ಶರಣ ಎನಗೆಂದು ನಂಬಿರುವುದೇ ಒಳ್ಳೇ ಆಭರಣ ಇಂದಿರೇಶನೆ ಮಾಡೋ ಕರುಣ ಸಿಂಧುಶಯನ ಸುಂದರೀಮಣಿ ಸಹಿತದಲಿ ನೀ ಬಂದು ಎನ್ನಯ ಮಂದಿರದಲಿ ನಿಂದು ಎನ್ನವನೆಂದು ಭಾವಿಸಿ ನಂದಪಡಿಸೈ ನಂದಬಾಲನೆ 1 ದೀನಪಾಲನೆ ಭೂಮಿಭಾರ ಹಾನಿಕಾರ ಪಂಚ ಸೂನಶರನಪಿತ ವಿಗತವಿಕಾರ ಶ್ರೀನಾಥ ಸುಜನಮಂದಾರ ಮೀನಾಕಾರ ನಾನು ನಿನ್ನವನಯ್ಯ ಎನ್ನಯ ಮಾನ ಮತ್ತಪಮಾನ ನಿನ್ನದು ಹೀನಮತಿ ಇವನೆಂದು ತಿಳಿದುದಾ- ಸೀನಮಾಡದೆ ಸಾನುರಾಗದಿ 2 ಸೋಮ ಕುಲಾಂಬುಧಿಸೋಮರಾರಾಮ ಬಲರಾಮ ಸಹಜನೇ ಸುರರಿಪು ಭೀಮ ವಾಮಲೋಚನೇರಿಗೆ ಕಾಮ ಪ್ರೇಮಧಾಮ ಕಾಮಜನಕನೆ ಸಾಮಗಪ್ರಿಯ ನಾಮಗಿರಿ ಶ್ರೀ ರಾಮ ನರಹರೆ ಕಾಮಿತಾರ್ಥವನೀವ ಸುರತರುಕಾಮಧೇನು ಚಿಂತಾಮಣಿಯೆ ನೀ 3
--------------
ವಿದ್ಯಾರತ್ನಾಕರತೀರ್ಥರು
ಕೃಷ್ಣ ಕಲಿಯ ಕಾಯ್ದ ಕರುಣಿ ಜಿಷ್ಣುಸಖನೆ ಕೃಷ್ಣನೆ ಪ. ಕೃಷ್ಣ ಪೊರೆಯೊ ಎನ್ನ ವಿಷಯತೃಷ್ಣೆಯಿಂ ಸಾಯಲೆ ದಮ್ಮಯ್ಯ ಅ.ಪ. ಹಿಂದೆ ಮಾಡಿದ ಕರ್ಮದಡವಿಯೊಂದಿಗೆ ಸವರುವೆನೊ ಗೋ-ವಿಂದ ನಿನ್ನ ಕರುಣಸುಧೆ ಇನ್ನೆಂದು ಪಡೆದು ಸುಖಿಪೆನೊಇಂದು ಮಾಡಿದ ಅಘಗಳು ಬಲು ದಂದುಗಕೊಳಗಾದೆ ನೀನುಕುಂದು ಕುಜನದೂರ ನಿನ್ನ ಕಂದನೆಂದು ಸಲಹೊ ತಂದೆ1 ಕಾಮವೆನ್ನ ಕಮಲನಾಭ ಸೀಮೆಗಾಣಲಿಯ್ಯದೊ ನಿ-ಸ್ಸೀಮಮಹಿಮ ಕ್ರೋಧ ಎನ್ನ ಸಾಮವ ನಡುಗಿಸುತಿದೆಭ್ರಮಿತನಾದೆ ಬಲುಪ್ರೇಮವ ತಪ್ಪಿಸಿ ಸುರಕ್ತಾನು ಹೆ ದೈವ ಎನ್ನಆ ಮಹಾಭಯವ ನಿವಾರಿಸೊ2 ಅನುದಿನ 3
--------------
ವಾದಿರಾಜ
ಕೃಷ್ಣ ದ್ವೈ ಪಾಯನ ಕೃಪಣವತ್ಸಲ ಪರ ಮೇಷ್ಠಿ ಜನಕನ ತೋರೊ ಪ ಅನಿಮಿಷ ಕುಲಗುರು ಆನಂದತೀರ್ಥ ಸ ನ್ಮುನಿಮತ ವಿಮಲಾಂಬುಜಾ ಅ.ಪ. ದಿನಕರ ದಯದಿ ನೋಡೆನ್ನನು ಬಾದರಾ ಯಣ ನಾಮಧೇಯರ ತನಯ ಸಂಯಮಿ ವರ 1 ಭೀಮ ತರಂಗಿಣಿ ಬದಿಗನೆನಿಸಿ ಸೀತಾ ಕರ್ಮ ಗುಣಕೀರ್ತನಗೈವ ನಿರ್ಮಲಾತ್ಮಕನ ಸತ್ಪ್ರೇಮದಿ ಸಲಹುವ ಸುಜನ ಶಿರೋಮಣಿ 2 ವಿಗತದೇಹಾಭಿಮಾನಿಯೆ ನಿಮ್ಮೊಡನೆ ನಿತ್ಯ ಹಗೆಗೊಂಬ ಪಾಪಿಗಳ ವಿಗಡಕರ್ಮಗಳೆಲ್ಲ ಮರೆದು ವಿಶ್ವವ್ಯಾಪಿ ಜಗನ್ನಾಥ ವಿಠಲ ಸ್ವತಂತ್ರ ಕರ್ತಯೆಂಬಾ 3
--------------
ಜಗನ್ನಾಥದಾಸರು
ಕೃಷ್ಣಾ - ಶ್ರೀಕೃಷ್ಣಾ ಪ ಕೃಷ್ಣ ಕೃಷ್ಣ ಹರಿವೃಷ್ಟಿ ಕುಲೋದ್ಭವಸೃಷ್ಟಿ ಕರ್ತ ಹೃತ್ಪುಷ್ಕರ ನಿಲಯ ಅ.ಪ. ವಲಲ ಸಂರಕ್ಷಕ | ಅಲವ ಭೋದನುತಕಲಿಮಲ ಕಲುಷಹ | ನಳಿನೇಕ್ಷಣಪಾಹಿ 1 ನಂದನ ಕಂದ ಮು | ಕುಂದನೆ ಮಾಧವಸಿಂಧು ಶಯನ ಕೃಷ್ಣ | ಮಂದರೋದ್ಧಾರಿ 2 ಕರ | ಪರಿಗ್ರಹಿಸಿದನೇ 3 ಚಿತ್ತಜಾರಿ ಸಖ | ವಿತ್ತವನೊಲ್ಲೆನೊಭೃತ್ಯನ ಗೈ ಸ | ರ್ವೋತ್ತಮ ದೇವ 4 ಪಾಪಿಯು ಎನೆ ನಾ | ಶ್ರೀಪತಿ ನಿನ್ನನುನಾಪೊಂದಲು ಆ | ಪಾಪೆಲ್ಲಿ ಹುದೋ 5 ಕಾಮಪಿತನೆ ಸ | ದ್ಭೂಮ ಗುಣಾರ್ಣವಪಾಮರ ಮನುಜನ | ಪ್ರೇಮದಿ ಸಲಹೋ6 ಶಿರಿ ಸಹ ಗುರು ಗೋ | ವಿಂದ ವಿಠಲ ಹೃತ್‍ಸರಸಿಜ ಪೀಠದಿ | ದರುಶನ ವೀಯೋ7
--------------
ಗುರುಗೋವಿಂದವಿಠಲರು
ಕೆರೆಯನು ದಾಟಲು ಅರಿಯದ ಜನ ಭವ ಶರಧಿಯ ದಾಟುವರೇ ಶ್ರೀ ನರಹರೆ ಪ ಕರವ ಪಿಡಿಯದಿರೆ ತೊರೆಯ ಸೇರಲಳವೆ ಈ ಧರೆಯೊಳು ಅ.ಪ ಹಲವು ಜನ್ಮಗಳಲಿ ಗಳಿಸಿದ ಅಘಗಳ ಅಲೆಗಳೊಳಗೆ ಸಿಲುಕಿ ಸಂತತ ಮುಳುಗಿ ಮುಳುಗುತ ಕಟುಜಲಗಳ ಕುಡಿಯುತ ನಳಿನನಾಭ ನಿನ್ನೊಲಮೆಯಿಂದಲ್ಲದೆ1 ಕಾಮ ಕ್ರೋಧ ಮದ ಲೋಭ ಮೋಹ ಮತ್ಸರಗಳೆಂಬ ವಿವಿಧ ಜಲಚರ ನಕ್ರ ತಿಮಿಂಗಿಲವಿರಲಾಗಿ ಕಾಮಜನಕ ನಿನ್ನ ಪ್ರೇಮವÀ ಪೊಂದದೆ 2 ಚೂರ್ಣಗಳಾದುವು ವಿವಿಧ ನಾವೆಗಳೀ ಅರ್ಣವದಲಿ ಸಿಲುಕಿ ಸುಲಭದಿ ಪೂರ್ಣ ಪ್ರಮತಿಗಳ ಮತವನರಿತು ಇನ್ನ ಪೂರ್ಣ ಪ್ರಸನ್ನತೆ ನಾವೆಯಿಂದಲ್ಲವೆ 3
--------------
ವಿದ್ಯಾಪ್ರಸನ್ನತೀರ್ಥರು
ಕೆಳದಿ ಕೇಳುವ ಬಾರೆ ನಳಿನಾಕ್ಷ ವನದಲ್ಲಿ ಕೊಳಲನೂದುವ ಬಗೆಯ ನಳಿನಜಾಂಡವು ತಾನೆ ತಲೆದೂಗುತಲಿದೆ ಕುಳಿತಿರೆ ವಶವಲ್ಲವೆ ಪ ಸರಸಿಜ ನಯನಾಳೆ ಧರೆಯ ಭಾಗ್ಯವ ನೋಡೆ ತರುಗುಲ್ಮಾಲತೆ ನೆವದಿ ಭರದಿ ಪುಲಕಿತಳಾಗೆ ಪರಿಪರಿ ಸುಮದಿಂದ ನೆರೆ ನಸುನಗುತಿಪ್ಪ ಮರುಳೆ ಕಣ್ಣಿಲಿ ನೋಡೆ ವರ ವಿಮಾನಗಳು ಸಂ- ಚರಿಸಿ ಮೆರೆವ ವೈಭವ ಧರೆಯೆಲ್ಲಾ ತಿಳಿಯದು ಲೋಲ್ಯಾಡದೆ ಬಿಡರು 1 ವಾಮಾಲೋಚನೆ ಸುರರ ಧಾಮಾವೆಂಬಿಯಾ ಇದು ಕಾಮತನಯ ಕಾಮದೇವ ಸೋಮಶೇಖರ ತಾನು ತಾಮರಸಾಸನ ಪ್ರೇಮಾದಿ ನಲಿಯುವ ಆ ಮಹರಾದಿ ಲೋಕವೆ ಸಾಮಜಗಮನೆ ಕೇಳೆ ನೀ ಮರುಳಾಗ ಬ್ಯಾಡಾ ಆ ಮುಕುತಿ ಸ್ಥಾನವೆ ಸೇವೆ ಮಾಡುವರು 2 ದೂರ ಜನರಿಗೆ ಸಾಲೋಕ್ಯ ಊರಲಿಪ್ಪರಿಗೆ ಸಾಮೀಪ್ಯ ಗೋರಕ್ಷಕರಿಗೆ ಸಾರೂಪ್ಯ ಸೇರಿದ ಯುವತಿಗೆ ಭರದಿ ಸಾಯುಜ್ಯವೆ ಮೀರಿದೆ ಮುಕುತಿಗಿದು ಭಾರಿ ಭಾರಿಗೆ ಸಾಮಾ ಪೂರೈಸಿ ಮುಕುತರು ತೋರುವರಿಲ್ಲಿ ಆನಂದ ಈ ರಭಸದಿ ವೇಣು ಪೂರೈಸಿ ಸುಖವೀವ ಧೀರ ವಾಸುದೇವವಿಠಲ 3
--------------
ವ್ಯಾಸತತ್ವಜ್ಞದಾಸರು
ಕೇಶವಾಚ್ಯುತ ಮಾಧವಾನಂತ|ಶ್ರೀ ಶಕಮಲದಳೇಕ್ಷಣಾ| ವಾಸುದೇವ ಮುಕುಂದ ಮುರಹರ ಕ್ಲೇಶಹರಣ ಜನಾರ್ಧನಾ|| ವಾಸುಕಿಯ ಪರಿಯಂಕನೆನುತಲಿ|ನೆನೆವನಾವ ನರೋತ್ತಮಾ| ಮೋಸಹೋಗದಿರವರೊಳೆಂದು|ಚರರಿಗ್ಹೇಳಿದನೈಯಮಾ 1 ರಾಮರಾಘವ ರಾಜಶೇಖರ|ರಾವಣಾಸುರಮರ್ದನಾ| ಶಾಮಸುಂದರ ಸಕಲ ಗುಣನಿಧಿ|ಶಬರಿಪೂರಿತ ವಾಸನಾ ಭೂಮಿಜಾಪತಿ ಭೂತನಾಥ|ಪ್ರಿಯನೆಂಬ ನರೋತ್ತಮಾ| ಪ್ರೇಮಿಕನ ನುಡಿಸದಿರಿಯೆಂದು|ಚರರಿಗ್ಹೇಳಿದನೈಯಮಾ 2 ಬಾಲಲೀಲವಿನೋದ ಶ್ರೀ ಗೋಪಾಲ ಗೋಕುಲ ಲಾಲನಾ| ಕಾಲಜಲಧರ ನೀಲಮುರಲೀ ಲೋಲಸುರವರ ಪಾಲನಾ| ಕಾಲಕಾಲನೆ ಕಂಸಹರನನು ತಾವ ನೆನೆವ ನರೋತ್ತುಮಾ| ಕಾಲಿಗೆರಗಿರಿ ಅವರಿಗೆಂದು|ಚರರಿಗ್ಹೇಳಿದನೈಯಮಾ 3 ಮಕರಕುಂಡಲ ಕಿರೀಟ ಕೌಸ್ತುಭ|ಕಟಕಕೇಯೂರ ಭೂಷಣಾ| ಅಖಿಲ ಜಗನುತ ಚರಣಪೀತಾಂಬರನೆ ಶ್ರೀವತ್ಸಲಾಂಭನಾ| ಪ್ರಕಟಿತಾಯುಧ ಶಂಖಚಕ್ರಗದಾಬ್ಜ ನೆನೆವನರೋತ್ತಮಾ| ಸುಖಿಸುವವರನು ತ್ಯಜಿಸಿರೆಂದು ಚರರಿಗ್ಹೇಳಿದನೈಯಮಾ 4 ಶ್ರವಣಪೂಜನೆ ಸ್ಮರಣಕೀರ್ತನೆ ವಂದನೆದಾಸ್ಯದಿ ಸಖ್ಯವಾ| ಬಿಡದನಾವನರೋತ್ತುಮಾ| ಅವನ ಸೀಮೆಯ ಹೋಗದಿರೆಂದು ಚರರಿಗ್ಹೇಳಿದನೈಯಮಾ 5 ಯಾರಮನೆಯಲಿ ತುಲಸಿವೃಂದಾವನದಿ ಶಾಲಿಗ್ರಾಮವು| ಚಾರುದ್ವಾದಶನಾಮ ಹರಿಚಕ್ರಾಂಕಿತದ ಶುಭಕಾಯವು| ಮೀರದಲೆ ಹರಿದಿನದ ವ್ರತದಲಿ ನಡೆವನಾವನರೋತ್ತಮಾ| ದಾರಿ ಮೆಟ್ಟದಿರೆಂದು ತನ್ನಯ ಚರರಿಗ್ಹೇಳಿದನೈಯಮಾ 6 ಸಾಧುಸಂತರು ಬಂದರೆರಗುತ ಪಾದೋದಕದಲಿ ಮೀವನು| ಆದಿನವಯುಗ ವಾದಿಚತುರ್ದಶ ಪರ್ವಕಾಲಗಳೆಂಬನು| ಸಾದರದಿ ಹರಿಪೂಜೆಯಿಂದರ್ಚಿಸುವ ನಾವನರೋತ್ತಮಾ| ಮೋದದಿಂದಲಿ ಬಾಗಿರೆಂದು ಚರರಿಗ್ಹೇಳಿದನೈಯಮಾ 7 ಅಂದು ಹೇಳಿದ ಕಥೆ ರಹಸ್ಯದ ಹರಿಯನಾಮದ ಮಾಲಿಕಾ| ತಂದೆ ಮಹೀಪತಿ ಎನ್ನ ಮುಖದಲಿ ನುಡಿಸಿದನು ಭೋಧಾಷ್ಟಕ| ತಂದು ಮನದಲಿ ಭಕುತಿಯಿಂದಲಿ ನೆನೆವನಾವನರೋತ್ತಮಾ| ಇಂದು ಜೀವನ್ಮುಕ್ತನಮಗಿನ್ನೇನು ಮಾಡುವನೈಯಮಾ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೇಳಮ್ಮ ತಂಗಿ ಕೇಳಮ್ಮ ಪ ಕೇಳಿ ಪುರಾಣದಿ ಪೇಳಿದ ಕೃಷ್ಣನ ಲೀಲೆಯ ಪಾಡುತ ``ಬಾಳಮ್ಮ'' ಅ.ಪ ನಿಷ್ಟೆಯಿಂದಲಿ ಬಲು ಶಿಷ್ಟಳಾಗುತ ದುಷ್ಟರಿಂದ ದೂ``ರಾಗಮ್ಮ'' 1 ಹರಿದಾಸರಪದ ಹರುಷದಿ ಹಾಡುತ ಗುರು ಹಿರಿಯರ ಮನ ``ಕೊಪ್ಪಮ್ಮ'' 2 ಕಾಲ ಕಳೆಯದೆ ಶೀಲಮತಿ ನೀ “ನಾಗಮ್ಮ'' 3 ವಿದ್ಯೆಯ ಕಲಿತು ಬದ್ಧಿವಂತ | ಳಾ | ಗಿದ್ದರೆ ಸುಖ ಶತ “ಸಿದ್ಧಮ್ಮ'' 4 ವಂದಿಸಿ ತುಲಸಿ ವೃಂದಾವನ ಪೂಜಿಸು ಮುಂದೆ ನಿನಗೆ ``ಆನಂದಮ್ಮ'' 5 ಹೀನರ ಬೆರೆಯದೆ ಮೌನವ್ರತದಲಿ | ಜ್ಞಾನಿ ಜನರ ನೀ ``ನರಸಮ್ಮ'' 6 ಮೂಢ ಜನರ ಒಡನಾಡದೆ ಭಕ್ತಿಲಿ ಮಾಡುವ ಸಜ್ಜನರ ``ಸಂಗಮ್ಮ'' 7 ಧರ್ಮದಿಂದ ಸತ್ಕರ್ಮ ಮಾಡುತ ನಿರ್ಮಲಗೊಳಿಸಿ ಸಂತ ``ರಂಗಮ್ಮ'' 8 ಪವನ ಪಿತನ ಕಥಾಶ್ರವಣವೆ ಪುಣ್ಯವು ಭವ ವಿದು ಕತ್ತಲು ``ಕಾಳಮ್ಮಾ'' 9 ಸದನಕೆ ಬಂದಿಹ ಬುಧರಾವರಿಸಲು ಮಂದಬಲು ನಿನಗದ ``ರಿಂದಮ್ಮ'' 10 ಎಂದೆಂದಿಗು ಪರನಿಂದೆಯ ಮಾಡದೆ ಮಂದಿರದಿರುವದೆ ``ಚಂದಮ್ಮ'' 11 ಸಾರಿದ ಜನರಘದೂರಗೈದು ಹರಿ ತೋರುವ ನುಜಗುರು ``ಈರಮ್ಮ'' 12 ಅತ್ತಿಯ ಮನಿಗೆ ಹೆತ್ತವರಿಗೆ ಉತ್ತಮ ಕೀರ್ತಿ ``ತಾರಮ್ಮ'' 13 ಗೋವಿಪ್ರಾಳಿ ಸೇವಿಸುತಿರುವದೆ ಕೋವಿದರಿಗೆ ಬಲು ``ಜೀವಮ್ಮ'' 14 ಭಾವದೊಳಗೆ ಪರದೇವನೆ ಪತಿಯೆಂದು ಪಡಿ ``ಭೋಗಮ್ಮ'' 15 ಭೇದಜ್ಞಾನ ಸಂಪಾದಿಸು ಕ್ಷಮಿಸುವ ಶ್ರೀಧರ ನಿನ್ನಾಪ ``ರಾಧಮ್ಮ'' 16 ಕೋಪದಿ ಪರರಿಗೆ ತಾಪವ ಬಡಿಸಲು ಲೇಪವಾಗುವದು ``ಪಾಪಮ್ಮ'' 17 ಇಂಗಡಲಾತ್ಮಜನಂಘ್ರಿ ಸರೋಜಕೆ ಸತಿ ``ತುಂಗಮ್ಮ'' 18 ದಾಸಜನರ ಸಹವಾಸದೊಳಿರುವದೆ ಕಾಶಿಗಿಂತ ವಿ``ಶೇಷಮ್ಮ'' 19 ಕಲಿಯುಗದಲಿ ಸಿರಿನಿಲಯನ ನೆನೆದರೆ ಸುಲಭ ಮುಕ್ತಿ ತಿಳಿ ``ಕಂದಮ್ಮ'' 20 ಪತಿಯು ಸದ್ಗತಿಗೆ ಗತಿ ಎಂದರಿತಹ ಮತಿಯುತ ಸತಿಯೆ ``ಯವನಮ್ಮ'' 21 ಮಧ್ವಸಿದ್ಧಾಂತದ ಪದ್ಧತಿ ತಪ್ಪದೆ ಇದ್ದರೆ ಹರಿಗತಿ ``ಮುದ್ದಮ್ಮ'' 22 ಸೋಗಿಗೆ ನೀ ಮರುಳಾಗಿ ನಡೆದರೆ ಯೋಗಿ ಜನರ ಮನ ``ಕಲ್ಲಮ್ಮ'' 23 ಶೀಲೆ ಗುಣದಿ ಪಾಂಚಾಲೆಯು ಎಲ್ಲ ಬಾಲೆಯರೊಳು ``ಮೇಲಮ್ಮ'' 24 ನೇಮದಿ ನಡೆದರೆ ಪ್ರೇಮದಿ ಸಲಹುವ ಶಾಮಸುಂದರನು ``ಸತ್ಯಮ್ಮ'' 25
--------------
ಶಾಮಸುಂದರ ವಿಠಲ
ಕೇಳು ಒಳ್ಳೆವರ ಕೂಡಾ ನಿನ್ನ ಹಿತವ ಪ್ರಾಣೀ | ತಾಳಿ ನರದೇಹದಿಂದ ಮಾಡುವರೇ ಹಾನಿ ಪ ಮುತ್ತಿನಂಥಾ ದಿನವಿದು | ಸಿಕ್ಕದಣ್ಣಾ ಮುಂದ | ಚಿತ್ತ ಸ್ಥಿರವಾ ಮಾಡಿ ಹರಿಯ ನೆನೆಯಬೇಕು ಇಂದ 1 ಬಾಲನಾಗಿ ಕೆಲವು | ದಿನದಿಂದ ಯೌವನದಿ | ಮ್ಯಾಲ ಯೆಚ್ಚರವ ಬಿಟ್ಟು | ಹರಿಗೆ ವಿಮುಖನಾದಿ 2 ಜರೆಯು ಬಂದ ಕಾಲದಲ್ಲಿ | ತನುವು ತನ್ನದಲ್ಲಾ | ಸರಕು ಮನೆಯೊಳಿಲ್ಲಾ 3 ಈಗಳವೆ ಯಚ್ಚರಿತು | ಹರಿಯಾ ಬಲಗೊಂಡು | ಹಿಂಡು 4 ಶರಣು ಹೋಗುವಾ | ಭಾವಭಕ್ತಿಯಲ್ಲಿ ದಾವಪ್ರೇಮಿ | ತಾರಿಸುವಾ ಗುರು ಮಹಿಪತಿಸುತ ಸ್ವಾಮಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೇಳು ಕಂಡ್ಯಾ ಒಂದು ಮನವೇ | ಕೇಳು ಕಂಡ್ಯಾ ಪ ಕೇಳು ಕಂಡ್ಯಾ ವಂದ | ಪ್ರೇಮ ಭಾವದಿಂದ ಬಾಳು ದೀಪರಿಂದ ನಿನಗೆ ಬಂದಕೀದೆ ಛಂದ 1 ವಿಡಿದು ಗುರುಪಾದಾ ಪಡಿಯೋ ನಿಜಬೋಧಾ | ಕಡಿದು ಕಾಮ ಕ್ರೋಧ | ನೀಗು ವ್ಯವಾಧಾ 2 ಅನ್ಯ ಮಾರ್ಗ ನೋಡಾದಿರುವ ಬಲಿದೃಢಾ | ಘನಗುರು ಗೂಢಾ | ವಿದ್ಯೆ ಸಾಧಿಸೆಲೋ ಮೂಢ 3 ದೊಡ್ಡವ ನಾನೆಂಬ ದೋರದೆÉ ನೀಡಂಭ | ಜಡ್ಡಾಗದೇ ಗುಂಭಿ | ನಿಜ ನೋಡಿ ನಿರಾಲಂಬ 4 ಮಹಿಪತಿ ಜನಸೊಲ್ಲ ಹಾದಿಯಂತಿದಲ್ಲ ಮಹಿಮನೇ ಬಲ್ಲನಿದರ ಸವಿಸುಖವೆಲ್ಲ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೈಲಾಸನಾಥ ಮಹೇಶ ಈಶ ಶೈಲೇಶ ತನಯೇಶ ಬಾಲಾರ್ಕ ಸಮಭಾಸ ಪ ಶೂಲಾಕ್ಷ ಡಮರುಗಳಿಂದ ಶೋಭಿಪ ಹಸ್ತ ತಾಲಾಂಕನನುಜನೊಳ್ಸಮರಗೈದೀರ್ಪ ಫಾಲಾಕ್ಷದಿಂದಲಿ ಕಾಮನ ದಹಿಸಿರ್ಪ ಶೂಲಿಯ ಮಹಿಮೆಯನೇನು ಬಣ್ಣಿಸಲಿ 1 ವಿಷ್ಣುಭಕ್ತರೊಳಗತಿ ಪ್ರೇಮವಿರುವ ಕೃಷ್ಣ ದ್ವೈಪಾಯನರ ಸುತರಾಗಿ ಶೋಭಿಪ ಸನಕಾದಿಗಳ ಶಿಷ್ಯ ದುರ್ವಾಸರೆನಿಪ 2 ನಂಜುಂಡನೆನಿಸಿರ್ಪ ಪ್ರಖ್ಯಾತ ಮಹಾದೇವ ಕಂಜಜಾತನ ಸುತನೆನಿಸಿರ್ದ ದೇವ ರಾಜೇಶ ಹಯಮುಖ ಭಕ್ತಪುಂಗವ ನೀನು ಅಂಜಲಿ ಬಂಧದಿಂ ನಮಿಪೆ ನಿನ್ನಡಿಗೆ 3
--------------
ವಿಶ್ವೇಂದ್ರತೀರ್ಥ
ಕೊಟ್ಟು ಕೊಂಡಾಡ ಬೇಕು ಘಟ್ಟಿಕೊಂಡು ಗುರುಭಕ್ತಿ ಗುಟ್ಟಿನೊಳು ನೋಡ ಬೇಕು ಇಟ್ಟು ದೋರುತದ ಮುಕ್ತಿ ಧ್ರುವ ಕೊಟ್ಟು ಗುರುವಿಗೆ ಮನಕೊಳ್ಳಬೇಕು ನಿಜಘನ ಇಟ್ಟಾದೆ ನಿಜಧನ ಪಡಿಬೇಕು ಸಾಧನ ಕೊಟ್ಟಾಂಗ ಕೊಂಬು ಖೂನ ಹೇಳಿ ಕೊಡುವ ಗುರು ಜ್ಞಾನ ಮುಟ್ಟಿ ಭಜಿಸುದು ಪೂರ್ಣ ಸ್ವಾಮಿ ಶ್ರೀನಾಥಾರ್ಪಣ 1 ಕೊಟ್ಟು ಕೊಂಡು ನೋಡಿ ನೇಮ ಸೃಷ್ಟಿಯೊಳು ಸುಧಾಮ ಕೊಂಡ ದಿವ್ಯಗ್ರಾಮ ಕೊಟ್ಟು ಶ್ಯಾಖದಳವಮ್ಮ ದ್ರೋಪದ್ಯಾದಳು ಸಂಭ್ರಮ ಕೃಷ್ಣಗಿದೆ ಅತಿ ಪ್ರೇಮ ಶಿಷ್ಟ ಜನರ ಸುಕ್ರಮ 2 ಮುಕ್ತಿಗಿದೇ ಮೇಲು ಭಕ್ತಿನೋಡಿ ಸಜ್ಜನರ ಯುಕ್ತಿ ಭೋಕ್ತ ಬಲ್ಲ ಗುರುಮೂರ್ತಿ ಮಾಡಬೇಕು ಭಾವ ಭಕ್ತಿ ಮುಕ್ತ ಜನರಿಗಿದೇ ಗತಿ ಕೊಟ್ಟು ಕೊಂಡಾಡುವ ಶಕ್ತಿ ಅರ್ತು ಇದೇ ಮಹಿಪತಿ ಕೊಂಡಾಡೋ ಗುರುಸ್ತುತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು