ಒಟ್ಟು 1020 ಕಡೆಗಳಲ್ಲಿ , 99 ದಾಸರು , 850 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸುವುದು ಎನ್ನಾ ಕರಿವರದ ಕೇಶವ ಕರಪಿಡಿದು ಸುಖಪೂರ್ಣಾ ನಿನ್ನಡಿಗಳಂಬುಜ ಸ್ಮರಿಪರಲ್ಲಿಡ ಮುನ್ನಾ ಪರಿಹರಿಸು ಬನ್ನಾ ಪ ಸರಸಿಜಾಪತಿ ಸರಸಿಜೋದ್ಭವ ಹರಸುರಾಧಿಪ ವಂದ್ಯ ನಿನ್ನಯ ಎರವು ಮಾಡದೆ ತ್ವರ್ಯ ಸೌಖ್ಯವುಗರದು ಕರುಣದಿ ಅ.ಪ. ಜನನಿ ಜಠರದಿಂದ ನಿನ್ನಾಜ್ಞದಲಿ ನಾ ಜನಸಿದೆನೊ ಗೋವಿಂದಾ ಬಾಲತ್ವ ಕೆಲದಿನ ಕಳೆದೆನೊ ಮುಕುಂದಾ ಯೌವ್ವನವು ಬರುತಲೆ ವನಿತೆ ಮುಖ ಅರವಿಂದಾ ನೋಡುತಲೆ ಬಲು ಛಂದಾ ಮನವು ನಿಲ್ಲದು ಮಮತೆ ವಿಷಯದಿ ಮುನಿದು ಸಜ್ಜನರ ಸೇವಿಸಿ ಕೊನೆಯಗಾಣದೆ ಮಣಿವೆ ಅಂಘ್ರಿಗೆ ವನದಿಗಳ ವಮ್ಮನೆ (?) ನಡಿಸು ವೆಂಕಟಾ ಘನತೆ ನಿನಗಿದು ತಿಳಿದು ವೇಗದಿ ಅನುದಿನದಲಿ ಸಲಹುತಿಪ್ಪನೆ ಅನಿಮಿಷರ ಆಧಾರ ಮೂರುತಿ 1 ಮೊರೆಯ ಲಾಲಿಸು ಜೀಯಾ ಅರೆ- ಮೊರೆಯ ಮಾಡಲು ಪೊರೆವರ್ಯಾರೆಲೊ ಕಾಯಾ ಅ- ನ್ಯರನು ಕಾಣದೆಯರಗಿದೆನು ಸುರ ಸಹಾಯ ಸುರಧೇನು ಮನೆಯೊಳಗಿರಲು ವಿಠ್ಠಲರೇಯಾ ಮಾಯಾ ಬಲ ತಡದು ನಿಕ್ರವ ತರಲು ಜನರೊಳು (?) ಯರಗಿರಲು ನಿನಗೆಂದಿಗಾದರು ಅರಿದು ಅಗ್ಗಕೆ ಪೊರೆದು ಮಾನವ ಕರಿಯು ಕರೆಯಲು ಬರುವುದುಂಟೇ ಕರುಣಾಸಾಗರನೆಂಬೊ ನಿನ್ನಯ ಬಿರುದು ಉಳ್ಳದಕೊಂಡು ಸಾಧನೆ ಧರೆಯ ದುಷ್ಟರ ಬಾಧೆ ತಪ್ಪಿಸಿ ಹರುಷವನು ಅತಿಗರೆದು ನಿರುತದಿ 2 ಬಿಡೆನೊ ಕಡಲೊಡಗಾಡಿ ಬಿಂಕದಲಿ ಅದ್ರಿಯ ನಿಡಲಿ ಬೆನ್ನಲಿ ನÉೂೀಡಿ ಪಾದಗಳ ಎಳೆಯುತ ನಡೆದು ಕೋಪವ ಮಾಡಿಬಿಡು ದೈನ್ಯದಲಿ ಪೊಡವಿ ದಾನವ ಬೇಡಿ ಬಿಡೆ ನೋಡಡವಿಯೊಳ್ ಕಾಡಿನ ಮಡುವಿನೊಳು ಗಿಡವೇರಿ ಧುಮುಕಲು ಅಂಬರ ಬಿಟ್ಟು ಖಡ್ಗವ ಪಿಡಿದು ವಾಜಿಯನೇರಿದನು ಜರ ಕಡಿಯಪೋಗಲು ಕಂಡು ನಿನ್ನನು ಬಿಡೆನೊ ನಿನಗೆಂದಿಗಾದರು ಪೊಡವಿಪತಿ ಶ್ರೀದವಿಠ್ಠಲ ವಡಿಯ ನೀನೆಂತೆಂದು ನಂಬಿದೆ 3 (ಈ ನುಡಿಯ ಅರ್ಥ ಸ್ಪಷ್ಟವಾಗುತ್ತಿಲ್ಲ-ಅಶುದ್ಧ ಪ್ರತಿಯ ಕಾರಣದಿಂದ.)
--------------
ಶ್ರೀದವಿಠಲರು
ಕರುಣಿಸೆ ಕೋಮಲ ಗಾತ್ರೆ ಕಂಜಜಮಾತೆ ಪ ಸುರರು ನಲಿಯುತ ಶಿರವ ಬಾಗಿ ಕರವ ಮುಗಿಯಲು ಪರಮ ಹರುಷದಿ ವರವ ಕೊಡುತಿಹ ಹರಿಯ ಮಡದಿಯೆ ಅ.ಪ. ಕ್ಷೀರವಾರಿಧಿ ತನಯೆ ನಿನ್ನಯ ದೇಹ ಬೀರುತಿದೆ ವಿದ್ಯುಛ್ಛವಿಯೆ ಶ್ರೀ ಹರಿಜಾಯೆ ವರ ಸುದರ್ಶನ ಶಂಖಹಸ್ತದಿ ಮೆರೆಯುತಿರೆ ಭಕುತರನು ಸಲಹಲು ಕರವೀರಪುರ ನಿಲಯದಿ ನೆಲಸಿ ವರದಭಯ ಹಸ್ತವ ತೋರುತಿರ್ಪೆ 1 ಮನಸಿಜಕೋಟಿ ಸುರೂಪಿಣಿ ಮೃದುಮಧುರ ವಾಣಿ ಧನಕನಕಾದಿಗಳಭಿಮಾನಿ ಕೈವಲ್ಯದಾಯಿನಿ ವನಜಸಂಭವೆ ನಿನ್ನ ಒಂದರೆ- ಕ್ಷಣವು ಬಿಡದಲೆ ತನ್ನ ಉರದೊಳು ದನುಜಮರ್ಧನ ಧರಿಸಿಕೊಂಡು ತನುವು ಮನವನು ನಿನಗೆ ತೆತ್ತಿಹ 2 ರಂಗೇಶವಿಠಲನ ರಾಣಿ ಪಂಕಜಪಾಣಿ ಡಿಂಗರೀಕರ ಪೊರೆವ ಕರುಣಿ ಕಾಳಾಹಿವೇಣಿ ಮಂಗಳಾಂಗಿಯೆ ಖೂಳ ಕುಜನರ ಸಂಗಬಿಡಿಸುತ ತವ ಪದ ಸರೋ ಜಂಗಳಲಿ ನಾ ನಲಿದು ವಿಹರಿಪಭೃಂಗನಾಗುವ ಪರಿಯ ತೋರೆ 3
--------------
ರಂಗೇಶವಿಠಲದಾಸರು
ಕರುಣಿಸೆನ್ನನು ಕರುಣಾನಿಧಿಯೆ ಪ ಹರಿ ಭಜಕರಾಗ್ರಣಿಯೆ ವರಕಪಿಶಿರೋಮಣಿಯೆ ಅ.ಪ ಧರಣಿತಳದಲ್ಲಿ ಪರಿಪೂರ್ಣವಾಗೀ ಇರುವ ವಾರ್ತೆಯ ಕೇಳಿ ಹರುಷ ಮನದಲಿ ನಿನ್ನ ಚರಣ ಪಂಕಜಯುಗ್ಮ ಭರದಿ ಭಜಿಪ ಎನ್ನ 1 ದುರುಳ ದೈತ್ಯನ ಶೀಳಿ ಧರಣಿಸುರಸುತನ ನೀ ಪೊರೆದ ಕೀರುತಿ ಕೇಳಿ ತ್ವರದೀ ಪಾದ ಸರಸಿಜ್ವದಯವನ್ನು ದುರುಳ ಮಾನವ ನಾ 2 ಜನಕ ಮಾಡಿದ ಋಣವ ಹುಣಿಸೆ ಬೀಜಗಳಿಂದ ಋಣಗಳೆದ ಘನ ಮಹಿಮೆ ಕೇಳಿ ಮನದಿ ಯೋಚಿಸಿ ಚರಣವನಜ ಭಜಿಸುವ ಎನ್ನ ಋಣ ಬಿಡಿಸೊ ಗುರುಜಗನ್ನಾಥ ವಿಠಲ ಪ್ರಿಯಾ 3
--------------
ಗುರುಜಗನ್ನಾಥದಾಸರು
ಕರುಣೆ ತೋರೋ ಕಣ್ಣ ತೆರೆದು ಗುರುವು ನೀನೆ ಗತಿಯು ನೀನೆ ಪ ತ್ವರದಿ ಜಪವ ಪೂರ್ಣ ಮಾಡಿ ಕರವ ಶಿರದಲಿಡುತ ಅ.ಪ. ಸಿರಿಯ ವರನ ಪರಮ ಭಕುತ ಸಿರಿದಮಣಿಗಳಲ್ಲಿ ನೀನು ಹಿರಿಯ ಅಹುದೊ ಜಗದ ಗುರುವೆ ಪರಮ ಕರುಣಾಕರನೆ ದೇವ 1 ಹರಿಯ ಆಜ್ಞದಂತೆ ನೀನು ಸರುವ ಪ್ರಾಣಿಗಳಲಿ ನಿಂದು ಹಿರಿದು ಜಪವನಾಚರಿಸಿ ಅವರು ಅರಿಯದಂತೆ ನಿರುತ ಪೊರೆವೆ 2 ಶರಧಿ ಮಥನದಿಂದ ಬಂದ ಗರಳನಂದು ಭುವನಗಳನು ಉರುಹುತಿರಲು ಹರಿಯ ಮನವ ಅರಿತು ನೀನು ಭರದಿ ಕುಡಿದೆ 3 ಪೊಗಳಲವೆ ನಿನ್ನ ಮಹಿಮೆ ಸುಗುಣಮಣಿ ಭಾರತಿಯ ಪತಿಯೆ ಅಗಜೆಯರಸನನ್ನು ಪೆತ್ತ ನಗಧರನ ಪ್ರೀತಿ ಪಾತ್ರ 4 ಅಜನಪದಕೆ ಅರುಹನಾದೆ ದ್ವಿಜ ಫಣೀಶಾದಿಗಳ ಗುರುವೆ ಭಜನೆಗೈವೆನೆಂತು ನಿನ್ನ ತ್ರಿಜಗವಂದ್ಯ ತ್ರಿಜಗಪೂಜ್ಯ 5 ತ್ರೇತೆಯಲಿ ಅಂಜನಿಯಳ ಪೂತ ಗರ್ಭದಿಂದ ಬಂದು ಪೋತನಾದ ರವಿಜನನ್ನು ಪ್ರೀತಿಯಿಂದ ಸಲಹಿದೆಯ್ಯ 6 ಅಂದು ಕಪಿಯ ವೃಂದವೆಲ್ಲ ಬಂದು ಶರಿಧಿ ತಟದಿ ನಿಂದು ಮುಂದೆ ದಾರಿ ಕಾಣದಿರಲು ಸಿಂಧುವನ್ನು ದಾಟಿ ಬಂದೆ 7 ಮಂಗಳಾಂಗಿ ಸೀತೆಯನ್ನು ಕಂಗಳಿಂದ ನೋಡಿ ಹಿಗ್ಗಿ ಅಂಗನೆಯ ಪಾದಕೆರಗಿ ಉಂಗುರವನಿತ್ತ ಧೀರ 8 ಫಲವ ಸವಿವ ನೆವದಿ ನೀನು ನಲಿದು ವನವ ಮುರಿದು ತುಳಿದೆ ಕಲಹಕಿಳಿದು ಬಂದ ಅಕ್ಷನ ಬಲಿಯಹಾಕಿ ಕುಣಿಯುತಿರ್ದೆ9 ಕುಲಿಶಧರನ ಗೆಲಿದ ವೀರ ಜಲಜಭವನ ಶರವ ಬಿಡಲು ಛಲದಿ ನೀನು ಅದನು ತಡೆದು ಮಲೆತು ನಿಂತ ಮಹಿಮಯುತನೆ 10 ವನಜಭವ ನಾಮನ ಕೇಳಿ ಕನಲಿ ಬಂದಾ ಶರಕೆ ಸಿಲುಕಿ ದನುಜ ಸಭೆಗೆ ಬಿಜಯಮಾಡಿ ಅನುವ ತಿಳಿದು ಬಂದ ದೇವ 11 ರಕ್ಕಸನ ಲೆಕ್ಕಿಸದೆ ಧಿಕ್ಕರಿಸಿ ಮಾತನಾಡಿ ಪಕ್ಕಿರಥನ ಬಲುಮೆಯನ್ನು ಹೆಕ್ಕಳಿಸಿ ನೀ ಪೊಗಳಿ ನಿಂದೆ 12 ಉಕ್ಕಿ ಬಂದ ರೋಷದಿಂದ ರಕ್ಕಸನು ಚರರ ಕರೆದು ಇಕ್ಕಿರಿವನ ಬಾಲಕುರಿಯ ತಕ್ಕ ಶಿಕ್ಷೆ ಮಾಡಿರೆನಲು 13 ಸುಟ್ಟಬಾಲ ನೆಗಹಿಕೊಂಡು ದಿಟ್ಟ ನೀನು ಪುರವನೆಲ್ಲ ಅಟ್ಟಹಾಸದಿಂದ ಮೆರೆದೆ 14 ಶರಧಿ ಹಾರಿ ಬಂದು ಸತ್ಯಸಂಧ ರಾಮಗೆರಗಿ ಇತ್ತು ಚೂಡಾಮಣಿಯನವನಾ ಚಿತ್ತ ಹರುಷಗೈದ ಧೀರ 15 ಹರಿಯು ತನ್ನ ಬೆರಳಿನಲ್ಲಿ ಗಿರಿಯನೆತ್ತಿ ನಿಂತನೆಂದು ಸರುವ ಗಿರಿಗಳನ್ನು ನೆಗಹಿ ಶರಧಿಗೊಡ್ಡಿ ಸೇತುಗೈದೆ 16 ಸುರರಿಗಮೃತವಿತ್ತನೆಂದು ಅರಸಿ ಸಂಜಿವನವ ನೀನು ಭರದಿ ತಂದು ಒರಗಿ ಬಿದ್ದ ಹರಿಯ ವೃಂದಕೆರೆದು ಮೆರೆದೆ 17 ಮಂದರಾದ್ರಿಯನ್ನು ಒಡೆಯ ಅಂದು ಬೆನ್ನಲಿ ಪೊತ್ತು ನಿಂದು ಸಿಂಧುವನ್ನು ಗೆಲಿದನೆಂದು ಬಂದೆ ಹಾರಿ ಲಂಕಪುರಿಗೆ 18 ಧರಣಿಧವಗೆ ನೆರಳಿನಂತೆ ಕಾಲ ಚರಿಸಿ ನೀನು ಅರಸಿನಂತೆ ಬಂಟನೆಂಬ ಕರೆಯವಾರ್ತೆ ಖರೆಯಗೈದೆ 19 ಕಾಲನೇಮಿ ಯತಿಯ ರೂಪ ಜಾಲದಿಂದ ವೇಳೆ ಕಳೆಯೆ ಶೀಲವಂತ ಅವನ ಸೀಳಿ ಬಾಲದಿಂದ ನಗವ ತಂದೆ 20 ವ್ಯಾಸಮುನಿಯ ಯಂತ್ರದಲ್ಲಿ ವಾಸವೆಂದು ತೂರಿಕೊಳುತ ದಾಸ ಜನರ ಆಸೆಗಳನು ಬೇಸರಾದೆ ನೀ ಸಲಿಸುವೆ 21 ನೀನು ಒಲಿಯೆ ರಾಮನೊಲಿವ ನೀನು ಮುನಿಯೆ ರಾಮ ಮುನಿವ ನಾನು ನಿನಗೆ ಅನ್ಯನಲ್ಲ ಸೂನುವಲ್ಲೇ ತಿಳಿದು ನೋಡೊ 22 ನಿನ್ನ ನಂಬಿ ಸರಮೆಯರಸ ಪನ್ನಗಾರಿರಥನ ಒಲುಮೆ- ಯನ್ನು ಪಡೆದು ಹರುಷವಾಂತು ಧನ್ಯನಾದ ಧರೆಯೆ ಮೇಲೆ 23 ನಿನ್ನ ಜರೆದ ಅವನ ಅಣ್ಣ ತನ್ನ ಬಂಧು ದೇಶ ಕೋಶ- ವನ್ನು ನೀಗಿಕೊಂಡು ಕೊನೆಗೆ ಮಣ್ಣುಗೂಡಿ ಪೋದನಯ್ಯ 24 ದಂತಿಪುರದ ದೊರೆಯೆ ಮಡದಿ ಕುಂತಿದೇವಿ ಕುವರನಾಗಿ ಕಂತುಪಿತನ ಮತವ ತಿಳಿದು ನಿಂತು ಖಳರ ಸದೆದ ಶೂರ 25 ಏಕಚಕ್ರ ನಗರದಲ್ಲಿ ಶೋಕ ಪಡುತಲಿರ್ದ ಜನರ ಕಾಕು ಬಕನ ಏಕಮುಷ್ಠಿಯಿಂದ ಕೊಂದೆ 26 ಕೀಚಕಾರಿ ನಿನ್ನ ಮಹಿಮೆ ಯೋಚನೆಗೆ ನಿಲುಕದಯ್ಯ ಯಾಚಿಸೂತಿ ದೀನನಾಗಿ ಮಾಚದಂತೆ ಸಲಹೊ ಸ್ವಾಮಿ 27 ಜರೆಯ ಸುತನ ಗರುವ ಮುರಿದು ಭರದಿ ಅವನ ತನುವ ಸೀಳಿ ಧರಣಿಧವರ ಸೆರೆಯ ಬಿಡಿಸಿ ಪರಮ ಹರುಷಗರೆದ ಧೀರ 28 ದುರುಳ ದುಶ್ಶಾಸನನ ಅಂದು ಧುರದಿ ಕೆಡಹಿ ಉರವ ಬಗೆದು ತಿರೆಯ ಹೊರೆಯ ಹರಿಸಿದಂಥ ಸರುವ ಪುಣ್ಯ ಹರಿಗೆ ಇತ್ತೆ 29 ಮಲ್ಲಯುದ್ಧದಲ್ಲಿ ನೀನು ಖುಲ್ಲ ದುರ್ಯೋಧನನ ತೊಡೆಗ ಸುರರು ನೋಡಿ ಫುಲ್ಲ ಮಳೆಯಗರೆದರಾಗ 30 ಸೃಷ್ಟಿಕರ್ತ ಕೃಷ್ಣ ನಿನ್ನ ಇಷ್ಟದೈವವೆಂದು ಅವನ ನಿಷ್ಠೆಯಿಂದ ಭಜಿಸಿ ಇಳೆಯ ಶಿಷ್ಟ ಜನರ ಕಷ್ಟ ಕಳೆದೆ 31 ಖಲರು ನಿನ್ನ ಬಲುಮೆ ನೋಡಿ ಗೆಲುವು ತಮಗೆ ಆಗದೆಂದು ಕಲಿಯುಗದಿ ವಿಪ್ರರಾಗಿ ಇಳೆಯ ಧವನ ಹಳಿಯುತಿರಲು 32 ಜಡಜನೇತ್ರ ನಿನ್ನ ಕರೆದು ಅಡಗಿಸಿವರವಾದವೆನಲು ನಡುವೆ ಮನೆಯು ಎಂಬ ದ್ವಿಜನ ಮಡದಿ ಗರ್ಭದಿಂದ ಬಂದೆ 33 ಯತಿಯು ನೀನೆಂದೆನಿಸಿಕೊಂಡು ಚ್ಯುತಿ ರಹಿತ ಪ್ರೇಕ್ಷರಿಂದ ಶ್ರುತಿಪುರಾಣ ವೇದಮಂತ್ರ ತತಿಗಳನು ಪಠಣಗೈದೆ 34 ಹರಿಯೆ ಹರನು ಹರನೆ ಹರಿಯೆಂ- ದುರುಳ ಖಳರ ಕರೆದು ಕರೆದು ಜರೆದು ಭರದಿ ಹರಿಯೆ ಶರಣೆಂದರುಹಿ ಮೆರೆದೆ 35 ಮಾಯ ಮತವ ಧಿಕ್ಕರಿಸಿ ನ್ಯಾಯ ಶಾಸ್ತ್ರವನ್ನು ರಚಿಸಿ ಕಾಯಭವನ ಪಿತನ ಹಳಿದ ನಾಯಿಗಳನು ಬಡಿದು ನಿಂದೆ 36 ಕೃತಕಭಾಷ್ಯ ರಚಿಸಿದಂಥ ದಿತಿಜರನ್ನಾನತರ ಮಾಡಿ ಗತಿಯ ತೋರಿ ಜನಕೆ ಸತ್ಯಾ- ವತಿಯ ಸುತನ ಒಲುಮೆ ಪಡೆದೆ 37 ಮಧ್ವಮತವ ಉದ್ಧರಿಸಿ ಶುದ್ಧವಾದ ಬುದ್ಧಿಗಲಿಸಿ ಹದ್ದುವಾಹನ ಮುದ್ದುಕೃಷ್ಣನ ಶ್ರದ್ಧೆಯಿಂದ ಬದ್ಧಗೈದೆ 38 ಅಷ್ಟಮಠವ ರಚನೆ ಮಾಡಿ ಶಿಷ್ಟಜನರ ಬಾಧೆ ಕಳದೆ ತುಷ್ಟರಾದ ದ್ವಿಜರು ನಿನ್ನ ಎಷ್ಟು ಪೊಗಳಿ ತೀರದಯ್ಯ 39 ದಾನಧರ್ಮವ ಮಾಡಲಿಲ್ಲ ಜ್ಞಾನಮಾರ್ಗ ಹಿಡಿಯಲಿಲ್ಲ ದೀನತನದ ಭವಣೆಯಿಂದ ನಾನು ಮರುಗಿ ಬಂದೆನೀಗ 40 ವಚನ ಮಾರ್ಗದಲ್ಲಿ ನಿನ್ನ ಪ್ರಚನೆ ಮಾಳ್ಪೆ ಕೇಳೊ ದೇವ ರಚಿಸಲಾರೆ ನಿಯಮಗಳನು ಉಚಿತ ತೋರಿದಂತೆ ಮಾಡೊ 41 ನಾರಸಿಂಹ ರಾಮಕೃಷ್ಣ ನಾರಿ ಸತ್ಯವತಿಯ ಮಗನ ಮೂರುತಿಗಳ ಹೃದಯದಲ್ಲಿ ಸೇರಿ ಭಜಿಪ ಭಾವಿ ಬ್ರಹ್ಮ 42 ವಾಯು ಹನುಮ ಭೀಮ ಮಧ್ವ ರಾಯ ನಿನ್ನ ನಂಬಿ ಬಂದೆ ಮಾಯ ಪಾಶದಿಂದ ಬಿಡಿಸಿ ಕೃಪಣ ಬಂಧು 43 ಜನುಮ ಜನುಮದಲ್ಲಿ ನೀನೆ ಎನಗಿ ಜನನಿ ಜನಕನಾಗಿ ಕನಸು ಮನಸುನಲ್ಲಿ ನಿನ್ನ ನೆನೆಸುವಂತೆ ಮತಿಯ ನೀಡೊ 44 ತುಂಗಭದ್ರ ತೀರ ವಾಸ ಭಂಗಬಾಳನು ಹೊರೆಯಲಾರೆ ಮಂಗಳಾಂಗ ಕಳುಹೊ ಎನ್ನ ರಂಗಈಶವಿಠಲ ಪುರಿಗೆ 45
--------------
ರಂಗೇಶವಿಠಲದಾಸರು
ಕರೆದೆಡೆಗೆ ತಾ ಬರುವ ಕರೆದೆಡೆಗೆ ತಾ ಬರುವ ಪ ಬರುವೆ ತರುವ ಸುಖವ ಮುರುಳೀಧರನು ಅ.ಪ ತಿಳಿಯ ಭಕುತಿಯ ಪಡೆದ ಜನರಿಗೆ ಗೆಳೆಯನಿವ ಬಲು ಸುಲಭನು ಇಳೆಯಸುರರಾದರದಿ ಕರೆಯಲು ಹರುಷದಲಿ ನಲಿನಲಿಯುತಲಿ 1 ಸದನದಲಿ ಹದನಿಲ್ಲ ಈತನಿ ಗೊದಗಿಸುವುದತಿ ಸಾಹಸ ವಿಧಿಯ ಬರಹವು ಇಲ್ಲವೆನುತಲಿ ಹೆದರದಿರಿ ಮಧುಸೂಧನನು 2 ಇದು ನನದು ಇದು ನನದು ಎನುವ ಮದದ ವಚನಕೆ ನಗುತಲಿ ಇದು ನಿನದು ಎನ್ನಲು ಪ್ರಸನ್ನನು ವಿದುರನಾಲಯ ಪೊಕ್ಕಿಹ3
--------------
ವಿದ್ಯಾಪ್ರಸನ್ನತೀರ್ಥರು
ಕಲಿಪುರುಷನಿಗತಿಹರುಷ ಬಲುಸಜ್ಜನಗಳುಬಾಯ್ಬಾಯ್ಬಿಡುವುದು ಪ ಅಲಕ್ಷ್ಮೀರಮಣ ಅಖಿಲ ದುರ್ಗುಣಂ ಗಳಕೊಟ್ಟೆಲ್ಲರ ಗಾಳಿಗೆ ತೂರುವೆ ಅ.ಪ ರಾವಣಾಸುರಗೆ ಮಗನೆನಿಸಿ ದೇವತೆಗಳ ಸೆರೆಯಲ್ಲಿಡಿಸಿ ಭಾವಜ್ಞರನು ನಿರಾಕರಿಸಿ ಸಭಾಸ್ಥಾನಗಳ ಭಂಗಪಡಿಸಿ ಬಹುದುಃಖ ಪಡಿಸಿ ಪಾಂಡುಕುಮಾರರ ಪಾವನಿಯಿಂತೊಡೆಯೊಡೆದು ಬೀಳುತ ಬಗೆಯ ನೆನದುಯೀಗೆಮ್ಮ ಬಾಧಿಸುವೆ 1 ಆಗಮಗಳು ಸುಳ್ಳೆಂಬುವದು | ನಾ ಯೋಗಿಯೆಂದು ಹಿಗ್ಗುತಲಿಹುದು ಭಾಗವರತ ನಿಂದನೆಗೈದು | ನಿರ್ ಭಾಗ್ಯತನ್ನತಾನೆ ಪೊಗಳುವದು ಸಾಗರದಂತಿಹ ದುರಾಸೆಯೊಳಗಾ ವಾಗಲು ಜನ ಮುಳುಗುತ ತಿಳಿಯದೆ ಹಾಗರ್ವದಿ ನಿಷ್ಫಲವ ಪೊಂದುವರಿದು 2 ನೀತಿ ತಪ್ಪಿತಾವ್ನಡೆಯುವುದು | ದು ರ್ಜಾತಿಗಳುತ್ತಮರೆಂಬುವದು ಆತುರದಲಿಮನವಳುಕುವುದು | ಬಲು ಘಾತಕತನದಲಿತಿರುಗುವದು ಗಾತುರಸುಖವೇ ಮೊಕ್ಷವೆಂದು ವಿಷ ಯಾತಿಶಯದಿಯರಿಷಡ್ವರ್ಗಗಳೊಳು ರಾತಿರಿಪಗಲೆನ್ನದೆ ಬೀಳ್ವುದುನಿ ನ್ನಾತಗಳಿಂಗೆ ಸ್ವಭಾವಗುಣಂಗಳು 3 ಕ್ಷಾಮಡಾಂಬರಗಳ್ಹೆಚ್ಚುವದು | ನಿ- ಷ್ಕಾಮರ ಹಾಸ್ಯವಮಾಡುವದು ಕಾಮದಿಜನಗಳ ಬಾಧಿಪದು ನಿಷ್ಕಾರಣರೋಗದಿ ಸಾಯುವದು ಪಾಮರರೆಲ್ಲರು ಪಂಡಿತರಾವೆಂ- ದೀಮಹಿಯೊಳುಮನಬಂದಂತೆಸದಾ ತಾಮಸಗಳಬೋಧಿಸುತಲಿಜಗದೊಳು ದ್ರವ್ಯಾರ್ಜನೆಮುಖ್ಯಸಾಧನವೆಂಬುದು 4 ವಿಪರೀತ ಫಲಗಳಾಗುವುದು ಚಪಲಹೊಂದಿಚಿಂತಿಸುತಿಹುದು ಜಪಹೋಮಗಳನು ತ್ಯಜಿಸುವದು ಬಲುಜಾಡ್ಯಂಗಳನನುಭವಿಸುವದು ಉಪಕಾರಗಳನುಮಾಳ್ಪರಲ್ಲಿ ಪ್ರ ತ್ಯಪಕಾರಗಳೆಣಿಸುತಲಾವಾಗಲು ಕಾಲಕಳೆಯುತ ವೃಥಾನೋಯುವದು 5 ಶೂದ್ರರುವೇದವ ಪಠಿಸುವದು | ನಿರು ಪದ್ರವನುದಂಡಿಸುತಿಹುದು | ಹರಿ ರುದ್ರವಿಧಿಗಳದೂಷಿಪದು | ಅ- ಬದ್ಧವೆಬಲುರುಚಿಯೆಂಬುವದು ಕ್ಷುದ್ರಕುನಾಸ್ತಿಕಮತವನಂಬಿ ದೇ- ವದ್ರೋಹಗಳನುಮಾಡುತ ಬಾಯಲಿ ಇದ್ದದ್ದಾದರುಯಿಲ್ಲೆಂಬುವದು6 ಪರರೊಡವೆಗಳಪಹರಿಸುವದು | ನೆರೆ- ಹೊರೆಯಂತಿರಬೇಕೆಂಬುವದು ಗುರುವಿನಲ್ಲಿ ದ್ವೇಷವೆಣಿಸುವದು | ಸತಿ- ಯರುಪತಿಯಲಿದ್ವೇಷಿಸುತಿಹುದು ನಿರತವುಜೀವನಕಿಲ್ಲೆಂದುಬಳಲಿ ದುರ್ವಿದ್ಯಗಳಭ್ಯಾಸಿಸಿಕಡೆಯಲಿ ನರಕಂಗಳಿಗೆ ಪ್ರಯಾಣಮಾಡುವದು7
--------------
ಗುರುರಾಮವಿಠಲ
ಕವಿಗಳು ಪೊಗಳುವ ವಿವರವ ಪೇಳುವೆ ಪ ಅವನಿಯೊಳ್ ಕೃಷ್ಣನು ಅವತರಿಸುವ ಕಥೆ ಅ.ಪ ಸುರರೊಡೆಯನ ದಿವ್ಯ ತರುವನು ಬಲದಲಿ ಸರಸಿಜನಾಭನು ಧರೆಗೆ ತರುವನೆಂದು ಅರಿಯುತ ವರ ಸುಮನಸರೆಲ್ಲ ಕರಗಳಿಂದಲಿ ಸುಮ ಸುರಿದರೆಂದೆನುತಲಿ 1 ಅಂಬುಜನಾಭನು ಶಿಶುವಾಗಿರಲವನ ಸಂಭ್ರಮದಲಿ ತನ್ನ ವಶಗೊಳುವುದಕೆ ತುಂಬುರು ಗಂಧರ್ವರು ಪಾಡಿದರು ರಂಭೆ ಊರ್ವಶಿಯರು ನೃತ್ಯ ಮಾಡಿದರೆಂದು2 ವಾಸುದೇವನು ತನ್ನ ಶಿಶುವೆಂದರಿಯುತ ವಸುದೇವನ ಬಲು ಆಸೆಗೆ ನಗುತಲಿ ವಸುಗಳು ದೇವರು ವಾಸುದೇವನು ತಮ್ಮ ಕೂಸು ಏಕಲ್ಲವೆಂದು ಹರುಷ ಪೊಂದಿದರೆಂದು 3 ಇಂದುವದನನ ಅಂದವ ನೋಡುತ ಚಂದ್ರಕಲೆಯರ್ಧ ಕುಂದಿದನೆನ್ನುತ ಸುಂದರಕೃಷ್ಣನು ಅಂದು ತನ್ನಯ ಕುಲ ದಿಂದ ಬಂದಿರೆ ಬಲು ನಂದ ಪೊಂದಿದನೆಂದು 4 ಪನ್ನಗಶಯನನು ಸಣ್ಣ ಕೂಸಾಗಿರೆ ತನ್ನ ವಿಭುತನಕೆ ಇನ್ನು ಕುಂದಿಲ್ಲವೆಂದು ಉನ್ನತ ಗಗನ ಪ್ರಸನ್ನನಾಗಿ ದಿವ್ಯ ಸಣ್ಣ ತಾರೆಗಳಿಂದ ಬೆಡಗು ತೋರಿದ ಕಥೆ 5
--------------
ವಿದ್ಯಾಪ್ರಸನ್ನತೀರ್ಥರು
ಕಾಂತೆಯರುತುಂಬಿದ ನಗರಿಯಲಿ ಎಂಥ ಸೊಗಸಮ್ಮ ಬಾಹೋದೆಂಥ ಸೊಗಸಮ್ಮ ಪ. ಗಂಧ ಕಸ್ತೂರಿ ಧರಿಸಿರಾಯರು ಪರಿಮಳ ತುಂಬಿದ ನಗರಿಯಲಿ ಎನುತ 1 ರಾಶಿ ಮಲ್ಲಿಗೆ ಸಂಪಿಗೆ ಮುಡಿದು ಸೂಸಿದ ನಗರಿಯಲಿ ಎನುತ 2 ಮಿತಿ ಇಲ್ಲದೆ ಹಗಲು ಬತ್ತಿ ಶತ ಕೋಟಿ ದೀವಟಿಗಿ ದೀಪ ಪ್ರತಿಯಿಲ್ಲ ತಾಯಿ 3 ಹಾದಿ ಬೀದಿ ದ್ವಾರ ಜಗಲಿ ಸಾದಿನಥಳಿ ಕೊಟ್ಟಾವಮ್ಮ ಮಾಧವ ಬರಲಿಕ್ಕೆ ಎನುತ 4 ವಿಸ್ತರಿಸಿದ ರಂಗವಲ್ಲಿ ಜತ್ತಾಗಿ ತೋರುವವು ಎನುತ 5 ಕೇರಿ ಕೇರಿ ನಾರಿಯರೆಲ್ಲ ಸೀರೆ ಕುಪ್ಪಸ ವಸ್ತಗಳಿಟ್ಟು ವೀರರ ನೋಡಲು ಎನುತ 6 ಎತ್ತೆತ್ತ ನೋಡಿದರೂ ಜನರು ಮುತ್ತುರತ್ನದ ವಸ್ತಗಳಿಟ್ಟು ಹತ್ತಿಗೋಪುರ ಅಟ್ಟಾಲಗಳ ಧಿಟ್ಟೆಯರು ನಿಂತಾರೆ ಎನುತ 7 ಝಲ್ಲೆ ಮುತ್ತಿನ ವಸ್ತಗಳಿಟ್ಟು ಅಲ್ಲೆಲ್ಲೆ ಉಪ್ಪರಿಗೆ ಏರಿ ಚಲ್ವರ ನೋಡಲು ಎನುತ 8 ಮಲ್ಲಿಗೆ ಸಂಪಿಗೆ ಫಲಗಳ ಹಿಡಿದು ಅಲ್ಲೇ ನಿಂತಾರೆ ಎನುತ 9 ಭೆಟ್ಟಿಯ ಸೌಭಾಗ್ಯ ನೋಡಿ ಎಷ್ಟು ಹರುಷ ಬಟ್ಟೇವೆಂದು ಧಿಟ್ಟೆಯರು ನಿಂತಾರೆ ಬೀದಿಲಿ10 ಶ್ರೀ ಲೋಲ ರಾಮೇಶನ ಭಕ್ತರು ವಾಲಗೈಸೋರಮ್ಮ ಎನುತ 11
--------------
ಗಲಗಲಿಅವ್ವನವರು
ಕಾಮಿನಿಯರು ನೆರದೊಂದಾಗಿಪ್ರೇಮದಿ ಧವಳಾರವ ಪಾಡಲುಶ್ರೀ ಮಹಾಲಕ್ಷ್ಮಿ ಜಯವೆಂದುಜಯವೆಂದುಶ್ರೀಕೃಷ್ಣರಾಯಗೆಹೇಮದಾರತಿಯ ಬೆಳಗಿರೆ 1 ಸಿಂಧುರಗಮನೆಯರತಿ ಹರುಷದಲಿಚಂದದಿ ನಲಿದಾಡುತ ಪಾಡುತಇಂದಿರಾರಮಣ ಜಯವೆಂದುಜಯವೆಂದುಶ್ರೀ ಮಹಾಲಕ್ಷ್ಮಿಗೆಕುಂದಣದಾರತಿಯ ಬೆಳಗಿರೆ 2 ಕರದ ಕಂಕಣ ಝಣಝಣರೆನಲುಗುರುತು ಚವಲುಗಾಡಲು ಮುತ್ತಿನಕೊರಳಹಾರಗಳು ಹೊಳೆಯಲುಹೊಳೆಯಲುಶ್ರೀಕೃಷ್ಣರಾಯಗೆಕುರುಜಿನಾರತಿಯ ಬೆಳಗಿರಿ3 ಹಾರಪದಕ ಕಂಕಣದವರು ವೈ-ಯ್ಯಾರದ ಹೊಸ ಹರೆಯದಂಗನೆಯರುರಾರಾಜಿಪ ಚಂದ್ರಮುಖಿಯರುಮುಖಿಯರುಶ್ರೀ ಮಹಾಲಕ್ಷ್ಮಿಗೆಕುರುಜಿನಾರತಿಯ ಬೆಳಗಿರೆ 4 ಕಸ್ತೂರಿ ತಿಲಕದ ಸೊಬಗಿಯರು ಸು-ವೃತ್ತಸ್ತನತಟದ ಜವ್ವನೆಯರುಆರ್ತಿಯಿಂ ಪಾಡಿ ಪೊಗಳುತಪೊಗಳುತಶ್ರೀ ಕೃಷ್ಣರಾಯಗೆಮುತ್ತಿನಾರತಿಯ ಬೆಳಗಿರೆ5 ಬೆರಳುಂಗುರ ಥಳ ಥಳಥಳಿಸಿಸಿರಿಮೊಗದೊಳು ಕಿರಿಬೆಮರೊಗೆಯಲುಹರುಷದಿ ಪಾಡಿ ಪೊಗಳುತಪೊಗಳುತಲಿಶ್ರೀ ಮಹಾಲಕ್ಷ್ಮಿಗೇಸರಸಿಜದಾರರತಿಯ ಬೆಳಗಿರೆ 6 ಕನ್ನಡಿಗದಪಿನ ಚದುರೆಯರು ಚೊಕ್ಕಚಿನ್ನದ ಸರಪಣಿಯಿಟ್ಟಂಗನೆಯರುಚೆನ್ನಾಗಿ ಪಾಡಿ ಪೊಗಳುತಪೊಗಳುತಕೆಳದಿಯ ಶ್ರೀ ಕೃಷ್ಣಗೆರನ್ನದಾರತಿಯ ಬೆಳಗಿರೆ 7
--------------
ಕೆಳದಿ ವೆಂಕಣ್ಣ ಕವಿ
ಕಾಯ ಸುತ್ತಿ ಬಾಯ ಹೊಯ್ವುದು ಆಯ ತಪ್ಪಿ ಆಯ ಕೆಟ್ಟ ನ್ಯಾಯಬಪ್ಪುದು ಪ ಹೆತ್ತ ತಾಯಿ ತಂದೆಯನ್ನು ಒತ್ತಿ ಬಯ್ವುದು ಅತ್ತೆಯನ್ನು ಕಂಡು ಹರುಷವಿತ್ತು ನಗುವುದು ಮೃತ್ಯುವನ್ನು ತಂದು ತನ್ನ ಹತ್ತಿರಿಡುವುದು ಒತ್ತಿನವನ ಹೊರಗೆ ಸಾರೆನುತ್ತ ನುಡಿವುದು 1 ಗುರುಗಳನ್ನು ಜರೆದು ಕರೆಕರೆಯ ತಪ್ಪುದು ಕೊರಳು ಕೊಯ್ಕರನ್ನು ತಾನು ಸೆರಗ ಪಿಡಿವುದು ಮರವೆ ತೋರ್ಪುದು ಗರುವತನದಿ ಪರರ ಒಡವೆ ಇರುಳು ಸುಲಿವುದು 2 ದಾನದತ್ತವಾದುದನ್ನು ತಾನು ಸೆಳೆಯುವುದು ಮಾನವನ್ನು ಹಿಡಿದು ಮೇಲೆ ಮಾನಯಿಡುವುದು ಜ್ಞಾನಿಯನ್ನು ಕಂಡು ಮನದಿ ಬೇನೆ ತೋರ್ಪುದು ಅನಾಥರನ್ನು ಕಂಡು ಬಹು ಹೀನ ನುಡಿವುದು 3 ಅನ್ನವನ್ನು ಇತ್ತವರ ಮುನ್ನ ಬೈಯ್ವುದು ಭಿನ್ನ ಭೇದ ತೋರಿ ಮನವ ಕನ್ನ ಕೊರೆವುದು ತನ್ನವರ ಮರೆತು ಪರರ ಕನ್ಯೆಗಳುವುದು ಹೊನ್ನ ಬೊಂಬೆಯಂತೆ ಮಾಯೆ ಬೆನ್ನ ಸುಳಿವುದು 4 ತಪ್ಪಿ ನಡೆಯೆ ಈ ಪರಿಯೊಳಿಪ್ಪೆಯೆಂಬುದು ಅಪ್ಪ ವರಾಹತಿಮ್ಮಪ್ಪನ ಸೇರಿಕೊಂಬುದು ಒಪ್ಪಿ ತೋರ್ಪ ಮಾಯೆಯೆಲ್ಲ ತಪ್ಪಿ ಪೋಪುದು ಉಪ್ಪರದ ದಾಸ ಪೇಳ್ದ ಒಪ್ಪಿಕೊಂಬುದು 5
--------------
ವರಹತಿಮ್ಮಪ್ಪ
ಕಾಯ ಕರವ ಪಿಡಿಯೊ ಗೋಪಾಲ ಪ ಜಾಳು ಜೀವನದ ಗೋಳಿಗೆ ಸಿಲುಕಿದೆ ಕೇಳುವರುಂಟೆ ದಯಾಳು ನೀನಲ್ಲದೆ ಅ.ಪ ತನುಬಲ ಧನಬಲ ಜನಬಲವೆಲ್ಲವು ಅನುಸರಿಸುವುವೇ ಕೊನೆತನಕ ಧನವು ತಪ್ಪಿದರೆ ಜನರು ತ್ಯಜಿಸುವರು ಜನಕ ನೀನಲ್ಲದೆ ಪೊರೆವರ ಕಾಣೆನೊ 1 ಸಟೆಯನಾಡುವುದು ದಿಟವ ತೊರೆಯುವುದು ಕಟುತರ ವಚನಕೆ ನಗುತಿಹುದು ಕಪಟ ಜೀವನವು ತುಟಿಯ ಮೀರಿದ ದಂತಗಳಂತಿರುವುದು 2 ನಿಮಿಷದ ಸೌಖ್ಯಕೆ ವರುಷದ ಕ್ಲೇಶವು ಪುರುಷ ಜೀವನವಿದು ಧರೆಯೊಳಗೆ ಪುರುಷೋತ್ತಮನೆ ಪ್ರಸನ್ನ ಹೃದಯನಾಗಿ ಕಲುಷರಹಿತವಾದ ಹರುಷವÀ ನೀಡೆಲೋ 3
--------------
ವಿದ್ಯಾಪ್ರಸನ್ನತೀರ್ಥರು
ಕಾಯೆ ಕಾಯೆ ಕಾಯೆ ಶ್ರೀ ಮಾರುತಿ ಜಾಯೆ ಪ. ಸುರಸತಿಯರುಗಳಿಂ ಪರಿಪರ ಓಲಗ ಹರುಷದಿ ಕೈಗೊಂಬ ಮರುತನ ಮಡದಿಯೆ 1 ಇಂದಿರೆ ಪತಿಯನು ತಂದು ತೋರಿಸೆ ಹೃನ್- ಮಂದಿರದಲಿ ಬೇಗ ಸಿಂಧುರಗಮನೆ 2 ಕಾಲ ಕಾಲಕೆ ಮತಿ ಪಾಲಿಸು ಶ್ರೀಗೋ ಪಾಲಕೃಷ್ಣವಿ ಠ್ಠಲನ ಸೊಸೆಯೆ ನೀ 3
--------------
ಅಂಬಾಬಾಯಿ
ಕಾಯೊ ಕರುಣ ಕೃಪಾಳ ಸದ್ಗುರು ಘನಲೋಲ ದ್ರುವ ಎನ್ನಹೊಯಿಲ ನಿಮಗೆಂತು ಮುಟ್ಟುವದಾನಂತಗುಣಮಹಿಮೆ ಚಿಣ್ಣ ಕಿಂಕರನಾದ ಅಣುಗಿಂದತ್ತಲಿ ಹೀನ ದೀನ ನಾ ಪರಮ ಖೂನತಿಳಿಯಲು ನಿಮ್ಮ ಕೃಪಾಸಿಂಧು ನಿಮ್ಮ 1 ಅನಂತಕೋಟಿ ಬ್ರಹ್ಮಾಂಡನಾಯಕನೆಂದೊದರುತಿಹಾನಂತ ವೇದ ಅನಂತಾನಂತಾನಂತ ಮಹಿಮರು ಸ್ತುತಿಸುತಿಹರು ಸರ್ವದ ಗುಹ್ಯ ಅಗಾಧ ತಿಳಿಯದು ಮಹಿಮ್ಯಂಗುಷ್ಠದ 2 ಮಾಡುವರಾನಂದ ಘೋಷ ದೋರುವ ಹರುಷ ತಾ ಶೇಷ ಸುರಮುನಿ ಜನರೆಲ್ಲ ಚರಣಕಮಲಕೆ ಹಚ್ಚಿದರು ನಿಜಧ್ಯಾಸ ಸಿರಿಲೋಲ ನೀ ಸರ್ವೇಶ 3 ಸಕಲಾಗಮ ಪೂಜಿತ ಸದ್ಗುರು ಶ್ರೀನಾಥ ಕಾಮಪೂರಿತ ಕರುಣಾನಂದಮೂರುತಿ ಯೋಗಿಜನ ವಂದಿತ ಜನರಿಗೆ ಸಾಕ್ಷಾತ 4 ಸಲಹುವದೋ ನೀ ಶ್ರೀಹರಿಯೆ ನೀ ಎನ್ನ ಧೊರೆಯೆ ಮುರ ಅರಿಯೆ ಸಕಲಪೂರ್ಣಸಿರಿಯೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕರುಣಾನಂದ ಶ್ರೀಗುರು ಕೃಪಾನಿಧೆ ಕಾಯೊ ಕರುಣಿಸಿ ಎನ್ನ ಪೂರ್ಣ ನೀ ಕಾಯೊ ಪರಮದಯಾನಿಧೆ ಧ್ರುವ ತೊಡಿಸಿ ಕರುಣಾನಂದ ಕವಚವ ಇಡಿಸೊ ಭಗುತಿ ವೈರಾಗ್ಯವ ದೃಢಗೊಳಿಸುವ ಙÁ್ಞನಪೂರ್ಣ ನೀ ಕಡಿಸೊ ಕಾಮಕ್ರೋಧವ ನಡೆಸಿ ನಿತ್ಯವಿವೇಕ ಪಥದಲಿ ಕೂಡಿಸೊ ನಿಜಸುಬೋಧವ ಬಿಡಿಸೊ ಭವಭವ ಮೂಲದಿಂದಲಿ ಬಡಿಸೊ ಹರುಷಾನಂದವ 1 ಬಟ್ಟೆ ಕೊಟ್ಟು ಕಾಯೊ ಸತ್ಸಂಗವ ಮುಟ್ಟಿಮುದ್ರಿಸೊದೃಷ್ಟಾಂತವ ಸಟೆಯ ಮಾಡೊ ಅವಿದ್ಯವ ನಿಷ್ಠತನ ನೆಲೆಗೊಳಿಸಿ ಕಾಯೊ ನೀ ಇಟ್ಟು ಶಿರದಲಿ ಅಭಯವ 2 ಭಿನ್ನವಿಲ್ಲದೆ ನೋಡಿ ಎನ್ನನು ಧನ್ಯಗೈಸೊ ನೀ ಪ್ರಾಣವ ಕಣ್ದೆರಿಸಿ ಅಣುರೇಣುದಲಿ ಪೂರ್ಣಖೂನದೋರೊ ಸಾಕ್ಷಾತವ ಎನ್ನೊಳಗೆ ನಿಜಾನಂದ ಸುಖದೋರಿ ಪುಣ್ಯಗೈಸೊ ನೀ ಜೀವನ ಚಿಣ್ಣಕಿಂಕರ ದಾಸ ಮಹಿಪತಿ ರಕ್ಷಿಸೊ ಸಂತತವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕರುಣಾಬ್ಧಿ ಗುರು ಎನಗೆ ದಯವುಳ್ಳ ಸ್ವಾಮಿ ನೀನಹುದೊ ಜಗದೊಳಗೆ ಧ್ರುವ ಶಿರದಲಭಯವ ನೀಡಿ ಕರುಣದಯದಲಿ ನೋಡಿ ಹರುಷ ಮನವನು ಮಾಡಿ ದುರಿತಭವ ಈಡ್ಯಾಡಿ ಗುರುತ ನಿಜ ಮಾಡರಹು ನೀಡಿ ಪರಮ ಗತಿ ಇದರಿಡಿ ವರಕೃಪೆಯ ಮಾಡಿ 1 ಒಂದು ಪಥವನು ತಿಳಿಸಿ ದ್ವಂದ್ವ ಭೇದವನಳಿಸಿ ಕುಂದ ದೋಷವ ತೊಳಿಸಿ ಒಂದರೊಳು ನಿಲಿಸಿ ನೆಲೆಗೊಳಿಸಿ ಸಂದು ಜನ್ಮಗಳಳಿಸ್ಯಾನಂದ ಸುಖ ಹೊಳಿಸಿ 2 ಕರುಣಿಸೊ ಗುರು ಎನಗೆ ಶರಣ ಹೊಕ್ಕಿದೆ ನಿಮಗೆ ದೋರುದನುಭವ ಈಗೆ ಕರಗಿ ಮನವೆರಗುವ್ಹಾಂಗೆ ಸ್ಮರಣ ಸುಖ ಎದುರಿಡು ಬ್ಯಾಗೆ ತರಣೋಪಾಯದಲೆನೆಗೆ ಪೊರೆಯೊ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು