ಒಟ್ಟು 1263 ಕಡೆಗಳಲ್ಲಿ , 109 ದಾಸರು , 1093 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಂ ನಮೋ ನಾರಾಯಣಾಯ ತೇ ನಮೋ ನಮೋ ನಮೋ ಪ ಓಂ ನಮೋ ಓಂಕಾರಾದಿ ನೀ ಘನ್ನ ಮಹಿಮ ಅಷ್ಟಾಕ್ಷರಾತ್ಮಕನೆ ಅ.ಪ ಪ್ರಣವ ಪ್ರತಿಪಾದ್ಯ ನೀ ಅಷ್ಟಾಕ್ಷರದೊಳು ವಿಶ್ವತÉೈಜಸ ಪ್ರಾಜ್ಞ ತುರ್ಯಾತ್ಮ ಅಂತರಾತ್ಮ ಪರಮಾತ್ಮ ಜ್ಞಾನಾತ್ಮ ವರ್ಣಾತ್ಮಕ ನೀ ಓಂಕಾರದೊಳು ಅಉ ಮನಾದಬಿಂದು ಘೋಷ ಶಾಂತ ಅತಿಶಾಂತದೊಳು ಪ್ರತಿಪಾದ್ಯಮೂರುತಿ ಹರೆ1 ಪ್ರಣವದೊಳು ಆದಿವರ್ಣದಿಂದಭಿವ್ಮಕ್ತಿ ಕಾಲಗಳ್‍ವ್ಯಕ್ತವೊ ಪ್ರಾಣ ಲಕುಮಿಯಭಿಮಾನಿಗಳನಂತ ವೇದಗಳಿಂ ವಿಶ್ವಮೂರುತೀ ಹರೆ2 ವಯ್ಯ ಕವರ್ಗ ವರ್ಗವೈದು ಪಂಚಭೂತಗಳಂ ವರ್ಣದೊಳಭಿಮಾನಿಗಳ್ ಭೂತಕ ಗಣಪ ಪ್ರಹವವಾಯು ತೈಜಸ ಮೂರುತೇ3 ಪ್ರತಿಪಾದ್ಯನೆ ಮಕಾರ ವಾಚ್ಯ ಶ್ರೀ ಪ್ರಾಜ್ಞ ನಿನ್ನಿಂದಭಿ- ವ್ಯಕ್ತಿ ಚವರ್ಗ ಪಂಚಕ ಜ್ಞಾನೇಂದ್ರಿಯ ವೈದು ಸೂರ್ಯ ಪ್ರಾಣ ದಿಗ್ದೇ- ವತೆಗಳಿಹರು ಪ್ರತಿಗಾಣಿನೊ ಶ್ರೀ ಪ್ರಾಜ್ಞಮೂರುತಿ ಹರೆ4 ನಾದವಾಚ್ಯಪ್ರತಿಪಾದ್ಯ ತುರ್ಯನೆ ಅಭಿವ್ಯಕ್ತ ಪಂಚವರ್ಣ ಟವರ್ಗ ಕರ್ಮೇಂದ್ರಿಯಗಳ್ ಶ್ರೀ ತುರ್ಯ ಮೂರುತೆ 5 ಬಿಂದುವಾಚ್ಯ ಪ್ರತಿಪಾದ್ಯ ನೀನಾತ್ಮ ಬಿಂದುವಿಂದ ತವರ್ಗ ಪೊಂದಿಕೊಂಡಿಹುದು ತನ್ಮಾತ್ರಪಂಚಕ ಪಂಚವಾಯುಗಳಿಹರಯ್ಯ ಬಂಧ ಮೋಚಕ ನೀ ಕಾರಣ ಹರೆ 6 ಘೋಷದಿಂದಲಭಿವ್ಯಕ್ತಿ ಪಂಚಮನೋ ವೃತ್ತಿಗಳದರಭಿಮಾನಿ ಓಷಧೀಧರ ಖಗಪ ಶೇಷೇಂದ್ರ ಕಾಮರು ಪಕಾರ ಪಂಚವರ್ಣ ದೋಷರಹಿತ ಮನೋಧಾಮದಿ ನೀ ದೊರೆ 7 ಕಾರಾದಿ ಸಪ್ತವರ್ಣ ಸಪ್ತಧಾತುಗಳಲ್ಲಿ ಪರಿ ಅರಿಯೆನೊ ಹರಿಯೆ 8 ಅತಿ ಶಾಂತದೊಳು ಪ್ರತಿಪಾದ್ಯನಾಗಿಹೆ ಜ್ಞಾನಾತ್ಮ ಹಕಾರಾದಿ ತ್ರೈವರ್ಣ ಅದರಿಂದ ಗುಣಕ್ರಿಯವೊ ತತುಕ್ರಿಯ ಜಾಗೃತ ಸ್ವಪ್ನ ಸುಷುಪ್ತಿ ವಿಶ್ವಾದಿರೂಪದಿಂದ ಉರಗಾದ್ರಿವಾಸವಿಠಲ ಮೂರುತೇ 9
--------------
ಉರಗಾದ್ರಿವಾಸವಿಠಲದಾಸರು
ಓಹೋ ಸುಮ್ಮನೆ ಮರುಳಾದೆ ಮಹಿಮೆಯನರಿಯದೆ ಪ. ದೇವಾಧಿ ದೇವ ಬಂದು ಮನೆಯಲಿಂದು ಕಾವಲಾಗಿರುವನೆಂದು ತಾ ತಿಳಿದಿರಲಿಂದು ನಾ ವನಿತೆಯ ಒಡಗೂಡುತ ಪೊರಟರೆ ಕಾವರಿದಾರೆಂಬುದ ಭ್ರಮೆಗೊಂಡು 1 ನೀರಿನ ಮೇಲೆ ಧರೆಯ ನಿಲ್ಲಿಸಿದಂಥ ಈರೇಳು ಲೋಕದ ದೊರೆಯ ವಕ್ಷಸ್ಥಿತ ಸಿರಿಯ ಸೇರಿದ ದಾಸರಿಗಾರಿಂದಲು ಭಯ ಬಾರದೆಂಬ ಶ್ರುತಿಸಾರವ ಗ್ರಹಿಸದೆ 2 ಎಲ್ಲಿ ನೋಡಿದರಲ್ಲಿಪ್ಪ ಶ್ರೀವನಿತೆಯ ನಲ್ಲ ಭೂಪತಿ ನಮ್ಮಪ್ಪ ನೆನೆದಲ್ಲಿಗೆ ಬಪ್ಪ ಅಲ್ಲಿ ಇಲ್ಲಿ ಭಯವೆಲ್ಲವು ಬಿಡಿಸಲು ಬಲ್ಲ ಶೇಷಗಿರಿವಲ್ಲಭನಿರುತಿರೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಂಗಳಿಗೆ ಹಬ್ಬವಾಯಿತಯ್ಯಮಂಗಳಾತ್ಮಕ ಪುರಂದರದಾಸರನು ಕಂಡು ಪ ಸಕಲ ತೀರ್ಥಕ್ಷೇತ್ರ ಯಾತ್ರೆ ಮಾಡಿದ ಫಲವುಸಕಲ ಸತ್ಕರ್ಮ ಸಾಧಿಸಿದ ಫಲವುಭಕುತಿಯಿಂ ಭಾಗೀರಥೀ ಮಜ್ಜನದ ಫಲವುರುಕುಮಿಣಿ ಪತಿಯ ಪದ ಭಕುತರನು ಕಂಡು 1 ಇವರ ನರರೆಂದವರು ನರಕದಲಿ ಬೀಳುವರುಕವಿಜನರು ಒಪ್ಪಿ ಕೈಹೊಡೆದು ಹೇಳಿರಲುಅವನಿಯೊಳಗತಿ ದುರ್ಲಭವು ನಂದಗೋಪನ್ನಕುವರನಿದ್ದೆಡೆಯ ವೈಕುಂಠವೆಂಬುವರ ಕಂಡು 2 ಧನ್ಯನಾದೆನು ನಾನು ಮನುಜನ್ಮದಿ ಪುಟ್ಟಿಮಾನ್ಯನಾದೆನು ಇನ್ನು ಈ ಜಗದೊಳಗೆಪನ್ನಂಗಶಯನ ಶ್ರೀಕೃಷ್ಣನ ದಾಸರನುಚೆನ್ನಾಗಿ ಸ್ಮರಿಸಿ ಪಾವನ್ನನಾದೆನಿಂದು 3
--------------
ವ್ಯಾಸರಾಯರು
ಕಂಜ ಬಿಂಬಾನನೆ ಕಂಜ ಸತ್ಕೂಲಪರ ಕಂಜ ಸಾಸಿರ ಶಿರನಾ | ತಂದು ತೋರೇ ಪ ಕೂಡಾ ನಿತ್ಯದಿ ಕ್ರೀಡಿಪನಾ | ನೆತ್ತಿಯೊಳನುಹಾನೆ ಇಪ್ಪಳ ಸಂಗಡ ಅತ್ತಿತ್ತಗಲ ದವನಾ | ಚಿತ್ತೆದೊಲ್ಲಭ ನೈಯನಾ | ಬಂದ ಸತ್ಯ ಶಾಶ್ವತನ ತೋರೆ 1 ಚಿನಿಗಡಿದ ಕುವರನಾ | ಹಿರಿಯಳಿಯನಾ ತಂದೆಯಾ ಪಿತನಾ | ವನವ ಶರಭಿ ಧಾನ | ಶ್ರೀ ವನಜನಾಭನಾ ತಂದು ತೋರೆ 2 ಸರಸಿಜ ಸಖ ಸುತನಾ | ಅಸುರನ ಮಾತೆಯರಸನಾ | ಕರದಿಂದ ಸಂದಿದ್ದ ದೇಹಿಯ ಕೊಳೆ ಭಕ್ತರ ದುರಿತರ್ಹಿಸಿದನಾ | ಗುರುವರ ಮಹಿಪತಿ ಸುತನ ಅಭಯವಿತ್ತು ಪೊರೆವನ ತಂದು ತೋರೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಂಜಾಕ್ಷ ಕಾಯಯ್ಯ ಕರುಣಾನಿಧಿಯೆ ಬಲಭಂಜನನನುಜನೆ ನೋಡೆನ್ನ ಪ . ಅಂಜದೆ ನಾ ನಿನ್ನ ಅಡಿಳಿಗೆರಗುವೆಕುಂಜರವರದನೆ ಕೂಡೆನ್ನ ಅ.ಪ. ನಿಖಿಳ ಸಂಪದ ತನ್ನಿಂ-ತಾನೆ ಬಹುದು ತಡವಿಲ್ಲಆ ನಳಿನಭವಾದ್ಯಮರರಿದಕೆ ಸಾಕ್ಷಿಭಾನುಸನ್ನಿಭ ಬಾರೊ ನಲ್ಲ1 ಬೋವ ನೀನಾದಂದು 2 ವೃಂದಾರಕೇಂದ್ರ ಶ್ರೀ ಹಯವದನ ಮುಕುಂದಮಂದರೋದ್ಧಾರ ಮತ್ತೊಂದರಿಯೆಇಂದಿರೆಯರಸ ಬಾ ಇಂದುವದನ ದೀನ-ಬಂಧುವೆ ಭಕ್ತರ ಸಿರಿಯೆ 3
--------------
ವಾದಿರಾಜ
ಕಂಜಾಕ್ಷ ಹರಿಯ ಕಂಡಲ್ಲದೆ ಈಪಂಜರದಿ ಈ ಗಿಣಿ ನಿಲ್ಲದೆ ಪ. ಬಾಲತÀನದಲ್ಲಿ ಮನೆಮನೆಯ ಪೊಕ್ಕುಪಾಲಕುಡಿದನು ಮನದಣಿಯಲಾಲಿಸಿದವನು ಇನ್ನು ಮುನಿಯಲೋಲಾಕ್ಷಿ ಬಿಡನ್ಯಾಕೀ ಗÀಸಣೆಯ 1 ಏಳುವರುಷದ ಶಿಶು ಪೋಗಿಆಲಸ್ಯ ಹಸುತೃಷೆÉಯ ನೀಗಿಶೈಲವಾಗಿ ನಿಂತಿದ್ದ ನಮಗಾಗಿಕಾಲಮ್ಯಾಲೆ ಬಿದ್ದನಿಂದ್ರ ಬಾಗಿ 2 ಕಾಳಿಂದಿಯ ಮಡುವಿನೊಳಾಡಿಕಾಳಿಯಾ ನಾಗಗೆÉ ಮದ ಹುಡಿಮೇಲೆ ಅವರೊಳು ಕೃಪೆಮಾಡಿಪಾಲಿಸಿದ ಕರುಣದಿ ನೋಡಿ3 ಪಾರಿಜಾತದ ಪೂಗಳ ತಂದುನಾರದ ಮುನೇಂದ್ರ ತಾನೆ ಬಂದುಸಾರಿದನಲ್ಲೆ ಗತಿ ನೀನೆಂದುನರ ಸುರರುಗಳಿಗೆ ಬಂಧು 4 ವೃಂದಾವನದೊಳಿವನ ಲೀಲೆ ಆ-ನಂದವನುಣಿಸಿತೆಲೆ ಬಾಲೆಎಂದವನ ಕತೆ ಕರ್ಣದೋಲೆ ಹಾ-ಗೆಂದು ಭಾವಿಸೆ ಪುಣ್ಯಶೀಲೆ 5 ಸಕಲ ಸುರರ ಶಿರೋರನ್ನಮುಕುತಿದಾಯಕ ಸುಪ್ರಸನ್ನಶ್ರೀಕೃಷ್ಣ ಅಟ್ಟಿದ ಉದ್ಧÀ್ದವನ್ನ ಬಂದುವಾಕು ಕೇಳಿ ಮನ್ನಿಸಿಯವನ6 ಚೆಲ್ವ ಹಯವದನನ್ನ ನೀರೆ ನಮ್ಮನಲ್ಲನವನಿಲ್ಲಿ ಬಾರದಿರೆಸುಲಭನ್ನ ಬೇಗ ಕರೆತಾರೆ ನಾ-ವೆಲ್ಲರವನಲ್ಲಿ ಹೋಹ ಬಾರೆ 7
--------------
ವಾದಿರಾಜ
ಕಟ್ಟಿದಳು ಕಂಕಣವ ನಾರಿ ಲಕುಮಿವಿಷ್ಣು ಮೂರುತಿ ಕರಕೆ ವೈಕುಂಠರಾಣಿ ಪ.ಅವಿಯೋಗಿಯಾದ ಶ್ರೀ ಸತಿಯ ಸೇವೆಗೆ ಒಲಿದುಪವಮಾನನೊಡೆಯ ವರ ಬೇಡೆನ್ನಲುಭುವನೇಶ ನಿನ್ನ ಕೃಪೆ ಪೂರ್ಣಳಾನೆಂದೆನುತಹವಣೆಯಿಂ ಕೇಳ್ದಳೆರಡೊರವ ಲೋಕೋದ್ಧಾರಿ 1 ಶರಣಾಗತ ರಕ್ಷಕನು ಎಂಬ ಬಿರುದೊಂದುಶರಣಾಗತ ವತ್ಸಲನು ಎಂಬುದೊಂದುಧರಿಸು ಈ ಬಿರುದು ಹರಿ ವರವು ಅದೆ ಎನಗೆನಲುಕಿರುನಗೆಯ ನಗುತ ಒಲಿದನು ಸತಿಯ ನುಡಿಗೆ 2 ನಾರಿರನ್ನಳೆ ನಿನ್ನ ಕೋರಿಕೆಯ ತೆರನಂತೆಆರಾಧನೆಯ ಮಾಳ್ಪ ಶರಣರಿಗೆ ಒಲಿವೆತೋರಲೀ ಬಿರುದುಗಳು ನಿನ್ನ ಕರಗಳಲೆಂದುಶ್ರೀ ರಮೆಯ ಕರಕೆ ಕಂಕಣಗಳನೆ ತೊಡಿಸಿದನು 3 ನಾರಿ ಈ ಕಂಕಣವ ನಿನಗ್ಯಾಕೆ ಅರ್ಪಿಸಲುತೋರದೆನ್ನುತ ನಟನೆಗೈವನಿತರೊಳ್‍ಕ್ಷೀರಸಾಗರ ಮಥನ ಕಾಲದಲಿ ಜನಿಸುತಲಿಶ್ರೀ ರಮೇಶಗೆ ಒಲಿದು ಮಾಲೆ ಹಾಕಿದಳು 4 ಭಕ್ತಿ ಪ್ರೇಮಕೆ ಒಲಿದು ಭಕ್ತವತ್ಸಲ ಅಭಯಹಸ್ತವನು ಶಿರದಲ್ಲಿ ಇಡಲು ನಾರಿಚಿತ್ತದಲಿ ಆನಂದಪುಳಕಾಂಕುರಿತಳಾಗಿಚಿತ್ತದೊಲ್ಲಭನ ಮುಖಕಮಲ ವೀಕ್ಷಿಸುತ 5ಈಕ್ಷಿಸಲು ಶ್ರೀ ಹರಿಯ ಕರಕಮಲ ಲಕ್ಷಣವಲಕ್ಷ್ಮಿ ಬೆರಗಾಗಿ ಮುನ್ನಿನಕಿಂತ ಅಧಿಕಅಕ್ಷಯದ ಸಾಮುದ್ರಿ ಲಕ್ಷಣವ ಕಾಣುತಲಿಪಕ್ಷಿವಾಹನನ ಮೊಗ ಈಕ್ಷಿಸುತ ನಗುತ 6 ನೀನಿತ್ತ ವರದಾನ ಕಂಕಣದ ಬಂಧನವನಿನಗರ್ಪಿಸುತ ಧನ್ಯಳಾಗ್ವೆನೆಂದುಆನಂದದಲಿ ಮಾಡಿ ಕಂಕಣವ ಕಟ್ಟಿದಳು 7 ಜಗವನಾಡಿಸುವಂಥ ಸೂತ್ರವನೆ ಹದಿನಾರುಬಗೆ ಕಲೆಗಳೆಂಬ ಎಳೆ ಮಾಡಿ ಹಳದಿಮಿಗೆ ಕಾಂತಿ ಬಣ್ಣದಲಿ ಮಂಗಳಾಕಾರದಜಗಕೆ ವಿೂರಿಸಿದಂಥ ಕಂಕಣವ ಕಟ್ಟಿದಳು 8 ಕರಿ ಕೆಂಪು ಬಿಳುಪು ವರ್ಣವು ಪ್ರಳಯ ಕಾಲದಲಿಇರಲಾರದೆಂದು ತ್ಯಜಿಸುತ ಹಳದಿಯವರಕಾಂತಿ ಬಣ್ಣವನು ಪೂಸಿ ಮಂಗಳವದನೆಸರದಿಂ ಮೂರು ಗ್ರಂಥಿಯ ಬಿಗಿದಳಾಗ 9 ಪರಿ ಏನು ಪೇಳೆಂದು ಸರಸದಲಿ ಹರಿ ಕೇಳೆ ಹರಿಣಾಕ್ಷಿಯು ಪರಮ ಪುರುಷನೆ ನೀನು ಅರಿಯದಿನ್ನುಂಟೆ ಕೇಳ್ ಸರಸವಾಣಿಯಲಿ ಪೇಳ್ಪೆನು ದೇವ ದೇವ 10 ಒಂದು ಮುಕ್ತಿಯ ಗ್ರಂಥಿ ಒಂದು ಕರ್ಮದ ಗ್ರಂಥಿ ಒಂದು ಅಜ್ಞಾನ ನಿನ್ನ ಬಂಧಕರ ಗ್ರಂಥಿ ಇಂದಿರೇಶನೆ ಇದರ ಗುಟ್ಟು ಅರುಹುವÉ ಕೇಳು ಒಂದೊಂದು ವಿವರಗಳ ವಂದ್ಯ ಬ್ರಹ್ಮಾದಿ 11 ಕರ್ಮಗ್ರಂಥಿಯು ಬ್ರಾಹ್ಮಣರ ಯಜ್ಞದುಪವೀತ ಕರ್ಮ ಬಿಡುಗಡೆ ಇದು ಯತಿರತ್ನಗಳಿಗೆ ನಿಮ್ಮ ಬಂಧಕರ ಗ್ರಂಥಿ ಅಜ್ಞಾನಿ ಹೃದಯಕ್ಕೆ ನಿಮ್ಮ ಕೃಪೆಯಿಂದ ಬಿಡುಗಡೆ ಕೇಳು ಜೀವರಿಗೆ 12 ಮುಕ್ತರಿಗೆ ಸಂಸಾರ ಮತ್ತೆ ಬರದಂದದಲಿ ಕತ್ತರಿಸಿ ಲಿಂಗವನು ಕಾಯ್ದು ನಾನು ಚಿತ್ತಜಾಪಿತನೆ ನಿನ್ನಸ್ತಕೊಪ್ಪಿಸಿ ಬಿಗಿದು ಸುತ್ತಿ ಕಗ್ಗಂಟು ಹಾಕಿರುವೆ ನೀ ಗ್ರಂಥಿ 13 ಬಿಚ್ಚಲಾರೆಯೊ ನೀನು ಬಿಚ್ಚಲಾರೆನೊ ನಾನು ಬಿಚ್ಚಿಕೊಳಲಾರರೊ ಮುಕ್ತ ಜನರು ಅಚ್ಯುತನೆ ಇದೆ ನಿನಗೆ ಹೆಚ್ಚಿನಾ ಬಿರುದು ನಾ ಮೆಚ್ಚಿ ಕಟ್ಟಿರುವೆ ನೀ ಗ್ರಂಥಿ ಕಂಕಣವ 14 ಎರಡು ಗ್ರಂಥಿಯ ತೊಡಕು ಹರಿದು ಭಕ್ತರ ಕಾಯ್ದು ಪರಮ ಆನಂದ ಮುಕ್ತರಿಗೆ ಶರೆ ಮಾಡಿ ಮೆರೆಯೊ ಶರಣಾಗತರ ರಕ್ಷಕನೆ ಎಂದೆನುತ ಸಿರಿ ಮುತ್ತಿನಾರತಿಯನೆತ್ತಿದಳು 15 ಸಿರಿಹರಿಯ ಏಕಾಂತ ಸರಸ ವಚನಗಳಿದನು ಅರಿತವರು ಯಾರೆಂಬ ಅನುಮಾನ ಬೇಡಿ ಹರಿಶಯನನಾದವನು ಅರಿತು ಧೈರ್ಯದಿ ಜಗದಿ ಹರಹಿದುದ ಸಜ್ಜನರು ಅರಿತು ಆನಂದಿಸಲಿ 16 ಸಿರಿ ಒಲಿಯೆ ಶ್ರೀಹರಿಯು ತ್ವರಿತದಲಿ ಒಲಿಯುವನು ಮರುತ ಒಲಿಯಲು ಸಿರಿಯು ತಾ ಒಲಿವಳು ಗುರುವು ಒಲಿಯಲು ಮರುತ ಮರುಕ್ಷಣದಿ ಒಲಿಯುವನು ಅರಿವುದಿದರಿಂ ಗುರುವ ಒಲಿಮೆ ಅಧಿಕೆಂದು 17 ಪರಮ ಸುಜ್ಞಾನದಿಂದರಿತು ತತ್ವಾರ್ಥಗಳ ಶರಣ ನಾ ನಿನಗೆನಲು ವಾತ್ಸಲ್ಯದಿ ಸಿರಿಯರಸ ತನ್ನಭಯ ಹಸ್ತ ಶಿರದಲಿಟ್ಟು ಶರಣರನು ಪಾಲಿಸುವ ಮುಕ್ತಿ ಪದವಿಯನಿತ್ತು 18 ಹರಿಸಿರಿಯ ಲೀಲೆಗಳ ಗುರುಕರುಣ ಬಲದಿಂದ ಅರುಹಿದ ಮಹಿಮೆ ಧರೆಯಲ್ಲಿ ಮೆರೆದು ಪರಮ ಮಂಗಳ ಕೊಡಲಿ ನಿರುತ ಸದ್ಭಕ್ತರಿಗೆ ಕರುಣಾಳು ಗೋಪಾಲಕೃಷ್ಣವಿಠ್ಠಲನ ದಯದಿ 19
--------------
ಅಂಬಾಬಾಯಿ
ಕಡಲಶಯನ ಹರಿಯ ತೊಡೆಯಲ್ಲಿ ಮಡದ್ಯೇರಿಬ್ಬರು ಕುಳಿತು ಪ ಪನ್ನಂಗಶಯನ ಕೇಳೆ ಸ್ವಾಮಿ ನೀ ಎನ್ನ ಮನೆಗೆ ಏಳೊ ನಿನ್ನ ಪಾದಕ್ಕೆ ಎರಗುವೆನೆಂದು ಭಾಮೆ ಕೈ- ಯನ್ನು ಮುಗಿದಳಾಗ 1 ಎನ್ನ ಮನೆಯಲ್ಲಿದ್ದ ಶ್ರೀಹರಿ- ಯನ್ನು ಕರೆಯಲವರ ಕಣ್ಣೇಸೆನುತಲಿ ಕರ್ಣಿ(ನ್ಯೆ?) ರುಕ್ಮಿಣಿ ಕೋಪ- ವನ್ನು ಧರಿಸಲಾಗ 2 ಎಷ್ಟು ಹಣವ ನೀನು ಕೃಷ್ಣಗೆ ಕೊಟ್ಟು ಕೊಂಡಿ ಹೇಳೆ ದಿಟ್ಟತನದ ಮಾತಾಡೋ ರುಕ್ಮಿಣಿ ನಿನ್ನ ಶ್ರೇಷ್ಠತನವೇನ್ಹೇಳೆ 3 ಹತ್ತು ಆರು ಸಾವಿರದಷ್ಟ ಭಾರ್ಯೇರವೊಳಗೆ ಸತ್ಯಭಾಮೆ ಉತ್ಕøಷ್ಟ ಚೆಲುವೆಯೆಂದು ಕೃಷ್ಣ ನಿನ್ನಲ್ಲಿಹನೆ4 ಹದಿನಾಲ್ಕು ಲೋಕದಲಿ ಹರಿ ಪಾದಾಂಬುಜವ ಕಾಂಬುವೋರಿಲ್ಲೆ ಯದುನಾಥನ ಎದೆ ಮ್ಯಾಲ್ಹತ್ತಿರುವೋದು ಇದು ಸೋಜಿಗವಲ್ಲೆ 5 ಇಷ್ಟೆ ಸೋಜಿಗವೆಂದು ಆಡಲು ದಿಟ್ಟೆ ನಿನಗೆ ಅರಿದೆ ಅಷ್ಟದಿಕ್ಪಾಲಕರನೆ ಓಡಿಸಿ ವೃಕ್ಷ ಕಿತ್ತು ಒದರು(ರುವು?) ದಲ್ಲೆ 6 ಜಲಪ್ರಳಯ ಕಾಲದಲಿ ಜನರಿಲ್ಲದ ಅಂಧಕಾರದಲಿ ಎಲೆಯಾಗಾ ಪರಮಾತ್ಮನ ಮನವ ನೀ ಮೊ- ದಲೆ ಒಲಿಸಿಕೊಂಡೆ 7 ಕಾದು ಸೇವಿಸೆ ಹರಿಯ ಪಾದದ- ಲ್ಲಾದರವಿಲ್ಲದಲೆ ದಾನ ಮಾಡುತ ಮುನಿಹಿಂದಟ್ಟಿದರ್ಹರಿ ಹ್ಯಾಗೆ ಬರುವನ್ಹೇಳೆ 8 ಮೂರು ಲೋಕದ ದೊರೆಯ ಮೂರೆಲೆ ತುಳಸಿ- ಸರಿಯ ಮಾಡಿ ಮುಕುತಿದಾಯಕ ಕೈವಶವಾ- ಗಿರಲು ನೀ ಸಕಲ ಮಾಯವ ಬಲ್ಲೆ 9 ಪಟ್ಟದ್ವೊಲ್ಲಭೆ ನಾನು ಕೃಷ್ಣಗೆ ಮೆಚ್ಚಿ ಬಂದೆಯೆ ನೀನು ಅಚ್ಚುತ ತಾ ಪರಮಾನುಗ್ರ(ಹ)ವ ಮಾಡಿ ಬಂ- ದಿಚ್ಛೆಲಿರುವ ತಾನು10 ಮಾತಾಪಿತರು ಅನುಜನನ್ವಂಚಿಸಿ ಈತಗ್ವಾಲೆಯ ಬರೆದು ಯಾತಕಂಜಿಕೆ ವಲಿಸ್ಯೋಡಿ ಬಂದವಳೆಂದು ಕೀರ್ಹೊಗಳುವುದಲ್ಲೆ 11 ತಂದು ಕೊಡಲು ಮಣಿಯ ಸಭೆಯೊಳು ಅಂದು ತಗ್ಗಿಸಿ ತಲೆಯ ನಿಂದ್ಯದ ಮಾತಿಗೆ ತಂದು ನಿಮ್ಮಯ್ಯ ಮುಂದಿಟ್ಟು ಪೋದನೆ ನಿನ್ನ 12 ಕೇಳೊ ಕೇಳೊ ನುಡಿಯ ನೀನೀ- ರೇಳು ಲೋಕದ ಒಡೆಯ ಹೇಳೋ ಬುದ್ಧಿ ನಿನ್ನಯ ವಲ್ಲಭೆ ಮಾತಾ- ಡೋಳೊ ನಿರ್ಭಿಡೆಯ 13 ರಕ್ಕಸಾಂತಕ ಕೇಳೊ ನಿನ್ನ ಚಿಕ್ಕವಲ್ಲಭೆ ಮ(ಹಿ)ಮೆ ಉಕ್ಕಿ ಉಕ್ಕಿ ಎನ್ನ ಮ್ಯಾಲೆ ಬರಲು ನಿನ- ಗಕ್ಕರ ತೋರುವುದೆ 14 ಆರ್ಯಳೆಂದು ನಾನು ತಾಳಿದೆ- ನಕ್ಕ ರುಕ್ಮಿಣಿ ಮಾತ ಏರಿ ಏರಿ ಏನ್ನಮ್ಯಾಲೆ ಬರಲು ಇದು ನ್ಯಾಯವೇನೊ ನಿನಗೆ 15 ನಾಲ್ಕು ತೋಳಿನಿಂದ ಆಲಿಂಗಿಸಿ ಕಾಂತೆಯರಿಬ್ಬರನು ಯಾತಕಿಂಥ ಕದನವು ಘನವಾಯಿತು ಸಾಕು ಸಾಕುಯೆನುತ16 ವಾರಿಜಾಕ್ಷ ಕೇಳೋ ನಾರದ- ರ್ಹೂಡಿದರೀ ಜಗಳ ಪಾರಿಜಾತ ಸರಿಸವತಿಗೆ ಕೊಟ್ಟ- ರಿನ್ಯಾರು ಸೈರಿಸೋರ್ಹೇಳೊ 17 ನಂದನವನ ತರುವ ನಾ ತಂದಿಟ್ಟೆನಂಗಳದಲ್ಲೆ ಅಂದಿಬ್ಬರನಾನಂದವ ಬಡಿಸಿದ ಚೆಂದದಿಂದಲಿ ನಗುತ 18 ಭಾಮೆ ರುಕ್ಮಿಣಿ ಸಹಿತ ನಡುವೆ ಭೀಮೇಶ ಕೃಷ್ಣನು ಕುಳಿತ ಕಾಮನಯ್ಯನ ಚರಿತ್ರೆಯ ಪಾಡ- ಲಮೃತ ಪಾನವು ನಿರುತ 19
--------------
ಹರಪನಹಳ್ಳಿಭೀಮವ್ವ
ಕಂಡಿರ ಮಧುರ ನಾಥನ ಕಂಡವರು ಪೇಳಿ ದಮ್ಮಯ್ಯ ಪ ದುಂಡು ಮುಖದ ಮೋಹನಾಂಗನು ಕೊಂಡು ಪೋದನೆಮ್ಮ ಮನವ ಅ.ಪ ಮಲ್ಲಿಗೆ ತುಳಸಿ ಮಾಲತಿ ಎಲ್ಲಿ ಪೋದನು ಪೇಳಿ ಕೃಷ್ಣನು ವಲ್ಲಭನ ಚರಣಗಳಲಿ ನಿಮ್ಮನು ಸಲ್ಲಿಸಿದ ಹಂಗೆಮ್ಮೊಳಿದ್ದರೆ 1 ತೋರಿದೆರೆ ನಯನಾಭಿರಾಮನ ಸೇರುವೆ ಅವನಂಘ್ರಿಯುಗಳಕೆ ಭೂರಿ ತರದುಪಕಾರ ನಿಮಗೆ ಸ ತ್ಕಾರ ಬರುವುದು ವಿಧಿಭವರಿಂದ 2 ಪದ್ಮೆಯರಸನು ನಿಮ್ಮೊಳಿರುವ ಸುದ್ದಿ ಬಲ್ಲೆವು ತೋರದಿದ್ದರೆ ಪದ್ಮಸಂಭವ ಪಣೆಯ ಬರಹವ ತಿದ್ದಿ ಪೇಳಿರಿ ಪದ್ಮಗಳಿರ 3 ಪಾರಿಜಾತ ಸುಜಾತ ನಂದಕು ಮಾರ ಮಣಿಯೊಂದನು ಕೊಡಲಾರೆಯ ಹೇರು ವಿಧ ವಿಧ ರತ್ನ ಮಣಿಗಳ ಸೂರೆಗೈವ ಅಭೀಷ್ಠಪ್ರದಾತ 4 ಕೇಳಲೇನುಪಯೋಗವಿವರು ಪೇಳಲಾರರು ಸುದ್ದಿ ಎಮಗೆ ತಾಳಲೆಂತು ಪ್ರಸನ್ನ ಕೃಷ್ಣನೆ ಕೇಳೆಲೆಮ್ಮಯ ಮೊರೆಯ ದಯದಿ 5
--------------
ವಿದ್ಯಾಪ್ರಸನ್ನತೀರ್ಥರು
ಕಂಡು ನಮಿಸಿದೆ ನಿನ್ನ | ಕಡಗೋಲ ಪಿಡಿ- ದುದ್ದಂಡ ದೇವವರೇಣ್ಯ ತಾಪತ್ರಯಗಳಘ ಹಿಂಡು ಓಡಿಸು ರನ್ನ ಪೊರೆ ಸುಪ್ರಸನ್ನ ಪ. ಕಂಡೆ ನಿನ್ನಯ ಬಾಲರೂಪವ ಪುಂಡರೀಕದಳಾಯತಾಕ್ಷನೆ ಕುಂಡಲೀಶಯ ನಿನ್ನ ಚರಣದಿ ದಂಡವಿಕ್ಕುವೆ ಗೋಪಿಬಾಲ ಅ.ಪ. ಜನನ ಮರಣದಿ ನೊಂದೆ | ಶ್ರೀ ಜಾನಕೀಪತೆ ಪ್ರಣತ ಜನರಿಗೆ ತಂದೆ | ನೀ ಕಾಯದಿದ್ದರೆ ಘನವೆ ನಿನಗಿದು ಎಂದೆ | ಪಾಲಿಪುದು ಮುಂದೆ ಜನಮ ಜನುಮದ ಕರ್ಮಗಳ ನಾ ಅನುಭವಿಸಿ ಪೂರೈಸಲಾಪೆನೆ ಘನಮಹಿಮ ದಯ ಮಾಡಿದಲ್ಲದೆ ಕೊನೆಯ ಕಾಣೆನು ವಿಷಯ ವಾಸನೆ ವನಜ ಸಂಭವ ಪವನ ರುದ್ರಾ ದ್ಯನಿಮಿಷಿರಿಗಿನಿತಿಲ್ಲ ಮಹಿಮೆಯು ನಿನಗೆ ವಿೂರಿದರುಂಟೆ ದನುಜದಲ್ಲಣ ದಯದಿ ಸಲಹೊ 1 ಕಾಮಪಿತ ಮಧ್ವೇಶ | ಸೌಂದರ್ಯ ಸಾರ ತಾಮಸರ ವಿಧ್ವಂಸ | ಸಜ್ಜನರ ಕಾಯುವ ಕೋಮಲಾಂಗನೆ ಶ್ರೀಶ | ಲಕ್ಷ್ಮೀ ನಿವಾಸ ಹೋಮಕುಂಡದಿ ಪುಟ್ಟಿದಾ ಸತಿ ಕಾಮಿಗಳ ಉಪಟಳಕೆ ಸಹಿಸದೆ ಶ್ರೀ ಮನೋಹರ ಕಾಯೊ ದ್ವಾರಕೆ ಧಾಮ ನೀ ಗತಿ ಎನುತವರಲೆ ಪ್ರೇಮದಿಂದಕ್ಷಯವನಿತ್ತ ನಾಮ ಮಂಗಳ ನಿರ್ಮಲಾತ್ಮಕ ಸೋಮಶತಪ್ರಭ ಸೌಮ್ಯರೂಪ ತ್ರಿ- ಧಾಮ ಭಕ್ತರ ಕಾಮಿತಾರ್ಥನೆ 2 ಆದಿಮಧ್ಯವಿದೂರ | ಆನಂದ ಪೂರ್ಣ ಸಾಧು ಮನದಿ ವಿಹಾರ | ಸರ್ವಜ್ಞರಾಯರ ಹಾದಿ ತೋರಿಸೊ ಧೀರ | ಸುಜ್ಞಾನಸಾರ ವೇದ ಶಾಸ್ತ್ರಗಳರ್ಥವರಿಯೆನು ಮಾಧವನೆ ಮಮಕಾರದಲಿ ನಾ ಹಾದಿ ತಿಳಿಯದೆ ನೊಂದೆ ಅಜ್ಞತೆ ಹೋದಡಲ್ಲದೆ ನಿನ್ನ ಕಾಣುವ ಮೋದ ಬರುವುದೆ ಮಧ್ವವಲ್ಲಭ ಭೇದ ಮತಿ ಕೊಡು ತಾರತಮ್ಯದಿ ನೀ ದಯದಿ ಒಲಿದೆನ್ನ ಮನದಲಿ ಆದರದಿ ನೆಲೆಸಿನ್ನು ಪೊಳೆಯೊ 3 ಕಡಲಶಯನನೆ ಶ್ರೀಶ | ಕಡಗೋಲ ಕೈ ಪಡುಗಡಲ ತೀರದಿ ವಾಸ | ಕಮಲೇಶ ನಾ ನಿ- ನ್ನಡಿಯ ಕಂಡೆನು ನಾಶ | ರಹಿತನೆ ಪ್ರಕಾಶ ಎಡೆಬಿಡದೆ ನಿನ್ನಸ್ಮರಿಪ ಧ್ಯಾನವ ಕೊಡುತ ಮಧ್ಯದಿ ತಡೆವ ಸಂಸೃತಿ ತಡೆದು ಸಂತ ಚಿಂತನೆಯ ದೃಢ ಒಡಲೊಳಗೆ ನೆಲೆಸಯ್ಯ ಬಿಡದೆ ಪತಿ ಸತಿ ಪಿತ ಕಡಲವಾಸನೆ ಕಡಲ ಬಂಧನ ಕಡಲ ಮಧ್ಯದಿ ಪುರವ ರಚಿಸಿದೆ ಕಡು ದಯಾಂಬಯಧೆ ಕಾಯೊ ಸತತ 4 ಅಷ್ಟಯತಿ ನುತಪಾದ | ಸುಖ ತೀರ್ಥ ಹೃದಯ ದೀಷ್ಟಿತನೆ ಸನ್ಮೋದ | ಸಜ್ಜನರ ಮನದಾ ಭೀಷ್ಟವೀವ ಪ್ರಮೋದ | ಕರುಣಿ ಸುಪ್ರಸೀದ ಕೊಟ್ಟೆ ಮನು ಮುನಿಗಳಿಗೆ ಜ್ಞಾನವ ತುಷ್ಟಿಪಡಿಸುತÀ ಸುರರ ಸುಧೆಯಲಿ ಕುಟ್ಟಿ ಅಸುರನ ಕೋರೆದಾಡಿಲಿ ಕುಟ್ಟಿ ಅರಸರ ಕಟ್ಟಿ ಜಟೆಯನು ಮಟ್ಟಿ ಕಂಸನ ಬಿಟ್ಟು ವಸನವ ದಿಟ್ಟ ಕಲ್ಕಿ ಗೋಪಾಲಕೃಷ್ಣ ವಿಠ್ಠಲನೆÀ ಶ್ರೀ ಉಡುಪಿಲೋಲ5
--------------
ಅಂಬಾಬಾಯಿ
ಕಂಡುಕೊಳ್ಳಿರೋ ಸುಖ ಸ್ವಾತ್ಮವ ಕಂಡುಕೊಳ್ಳಿರೋ ಧ್ರುವ ಕಣ್ಣಿಟ್ಟರ ತಾಂ ಕಾಣಿಸುತದೆ ಚೆನ್ನಾಗನುಭವಕಿದಿರಿಡುತದೆ 1 ಮನವಿಟ್ಟರಲನುಗೂಡುತಲ್ಯದೆ ನೆನೆದರೆ ನಿಜಘನ ನೀಡುತಲ್ಯದೆ 2 ಲಯವಿಟ್ಟರ ದಯಬೀರುತಲ್ಯದೆ ಶ್ರಯ ಸುಖ ಸುರಮಳೆಗರೆಯತಲ್ಯದೆ 3 ಭಾವಕ ಅತಿಸುಲಭವಾಗ್ಯದೆ ಆವಾಗ ತಾನೆಲೆ ನಿಭವಾಗ್ಯದೆ 4 ಮಹಿಪತಿ ಮನೋಹರ ಮಾಡುತಲ್ಯದೆ ಬಾಹ್ಯಾಂತ್ರವು ತಾನೆವೆ ಆಗ್ಯದೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಡುಮುದ್ದು ಮೋಹನನಾದ ಈ ಸೊಬಗ ನ-ಮ್ಮುಡುಪಿನ ಕೃಷúರಾಯನ ನೋಡು ನೋಡುಪ. ಬೊಮ್ಮರುದ್ರಾದಿಗಳ ಕಣ್ಗೆಗೋಚರಿಸದನಿರ್ಮಲ ಚಿನ್ಮಯ ಬೊಮ್ಮವೆÉನಮ್ಮ ಚರ್ಮದೃಷ್ಟಿಗಳಿಗೆ ಗಮ್ಯವಾಯಿತ-ಮ್ಮಮ್ಮ ಇನ್ಯಾರ ಪುಣ್ಯವೊ ನೋಡು ನೋಡು 1 ಶುದ್ಧ ಸಿದ್ಧಾಂತವ ಜಗಕೆ ತೋರಿಸಿದಮಧ್ವಮುನಿಗೊಲಿದು ಬಂದಅಬ್ಧಿಜೆಯರಸನೀತನು ತನ್ನಹೊದ್ದಿದರಿಗರ್ಧ ಶರೀರವನೀವನೆ ನೋಡು ನೋಡು 2 ಪಾದ ಕಟಿ ವಕ್ತ್ರ ನೇತ್ರ ಮೌಳೀಯ ನಲ್ಲಗೊಲ್ಲಪಳ್ಳಿಯ ನೊಲ್ಲದೆ ಬಂದÀನೆ 3 - - - - - - - - - - ಅಲ್ಲಿ ಬೆಣ್ಣೆಗಳ್ಳನೆಂಬೊರಿವನೆಲ್ಲಇಲ್ಲದಿದ್ದರೆಲ್ಲಿಂದೆಲ್ಲಿಗಿಲ್ಲಿಯ ವಾಸ ನೋಡು ನೋಡು 4 ಶ್ರುತಿಗಗೋಚರನೆನಿಪ ಯತಿತತಿಮತಿಗೆ ಮೈಗೊಡದ ಬೊಮ್ಮಪತಿತ ಪಾತಕಿಗಳಿಗೆ ಕ್ಷಿತಿಯೊಳ-ಗತಿ ಸುಲಭವಾಯಿತಿನ್ನು ನೋಡು ನೋಡು 5 ಬಲ್ಲವರೆ ಬಲ್ಲರಿವನ ಈ ಮಹಿಮೆಯದುರ್ಲಭಕ್ಕೆ ದುರ್ಲಭನವಚೆಲ್ವ ಹಯವದನನಾದ ಭಕುತ ಯತಿ-ವಲ್ಲಭನಿಂದಿಲ್ಲಿ ಸುಲಭ ನೋಡು ನೋಡು 6
--------------
ವಾದಿರಾಜ
ಕಂಡೆ ಕಮಲನಾಭನ ಕಣ್ಣಾರೆ ಪುಂಡರೀಕನ ಪಾಲಿನ ಪಂಡರಿವಾಸನ ಸಕಲ - ಬೊ ಮ್ಮಾಂಡವ ಧರಿಸಿದನಾ ಪ ಸುಲಭ ದೇವರ ದೇವ ನಾನಾ - ಪರಿ ಮಳ ತುಲಸಿಗೆ ವಲಿವನ ಕಲಿಕಾಲ ಸಲಹುವನ ಭವದ - ಸಂ ಕಲೆ ಪರಿಹರಿಸುವನ 1 ಲಿಂಗ ಸಂಗವನೀವನ ಜಗದಂತರಂಗ ಮೋಹನರಾಯನ ಮಂಗಳ ದೇವೇಶನ ಸಿರಿಪಾಂಡು ರಂಗ ನೆನಸಿಕೊಂಬನ2 ಜಗದ ಸದ್ಭರಿತ ನಾನಾ ವನದಿ ಬಿಗಿದ ಪರಾಕ್ರಮನಾ ನಗವನೆತ್ತಿದ ಧೀರನಾ ತನ್ನನು ಪೊಗಳಲು ಹಿಗ್ಗುವನಾ 3 ಯಾದÀವ ಶಿರೋರನ್ನನ ಕೊಳಲು ಊದುವ ಚೆನ್ನಿಗನಾ ವೇದ ನಿಕರಮಯನಾ 4 ಇಟ್ಟಿಗೆಯಲಿ ನಿಂದನ ವರಂಗಳ ಕೊಟ್ಟರೆ ತಪ್ಪದವನ ಅಟ್ಟಿ ಖಳನ ಕೊಂದನಾ ವಿಜಯ ವಿಠ್ಠಲ ಜಗದೀಶನಾ 5
--------------
ವಿಜಯದಾಸ
ಕಂಡೆನಮ್ಮಾ ಕೌತುಕದಾ ಗಾರುಡಿಗನಾ | ಕೊಂಡಾಡಲಳವಲ್ಲ ಹೇಳಲೇ ನಾ ಪ ಬೋಧದನಾಗರ ನೂದುವನಾ 1 ಭಕ್ತರುದ್ದೇಶಕ ಬಂದ ಜವದಿ 2 ಸಕಲ ತೇಜದ ಬಬ್ಬುಳಿಯೋ ರೂಪ ನೆಲಿಯಾ | ಪ್ರಕಟ ತಿಳಿಯದು ನಿಜ ಕಳಿಯನಾ 3 ಅರಿಶಿಕ್ಷಾ ಭಕುತರ ಪಕ್ಷಾವೆಂಬ ನಾನಾ | ಬಿರುದು ಕಟ್ಟಿಹ ಮಹಿಮನಾ 4 ಕಾಳ ಸರ್ಪದ ನಿಜ ಮುಖ ಬಂಧವನ ಮಾಡಿ | ಜಾಳಿಸಿದನು ಭಯ ಈಡ್ಯಾಡಿ 5 ಹಮ್ಮಿನ ಗಾವ ಗುಂಡ ಗಜದಂತ ಶರಣರಿಗೆ | ವಮ್ಮಿಲೆ ಕಲೆಗಳ ದೋರುದೀಗನಾ 6 ತಂದೆ ಮಹಿಪತಿ ಸುತ ಸ್ವಾಂಮಿ ದುರ್ಲಭದಾ | ನಂದವ ತೋರಿದಾ ದಯದಿಂದಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಂಡೆನು ನಾನೊಂದು ಕೌತುಕ ಕಲಿಯುಗದೊಳಗೊಂದು ಧ್ರುವ ಮೈಯೊಳಗಿಹುದು ಕೈಯೊಳಗೆಂದಿಗೆ ಸಿಲುಕದು ಇಂದು 1 ವೇದಕ ನಿಲುಕದು ಸಾಧಕರಿಗೆ ತಾ ಸಿಲ್ಕುವದು ಭೇದಿಸಿದರೆ ಹೊಳೆವುದು ಸಾಧು ಜನರಿಗೆ ತಿಳಿವುದು 2 ಭಾವಕ ಸುಲಭದೇವಾದಿಗಳಿಗೆ ದುರ್ಲಭ ಜೀವರ ನೆಲೆನಿಭü ಮಹಿಪತಿ ಪ್ರಾಣದೊಲ್ಲಭ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು