ಒಟ್ಟು 2836 ಕಡೆಗಳಲ್ಲಿ , 118 ದಾಸರು , 2078 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವ ಸಂತನಲ್ಲಾ ಸಂತರ ವೇಷದಿ ತಿರುಗಲೇನು ಪ ಸಂತರಲ್ಲಿ ಹೋಗು | ಅಂತರ ಸುಖವರಿಲಿಲ್ಲಾ | ತಂತುವಿಡಿಯದೇ ಸ್ಥಿತಿ | ಭ್ರಾಂತತನಲ್ಯಾಡುವವ 1 ಮಂಜುಜ್ಞಾನದಿಂದ ಬಹು | ರಂಜನೆಯಾ ಮಾಡಿ | ಬಂಜೆ ಹೂವಿನಂತೆ ಒಣ | ಭಂಜನೆಯಾ ದೋರುವವ 2 ನಿಷ್ಠೆಯಿಂದ ಪರವಸ್ತು | ಮುಟ್ಟಿಗಾಣಲಿಲ್ಲಾ | ಭ್ರಷ್ಟ ಬೂಟಿಕೆಯ ಮಾಡಿ | ಹೊಟ್ಟೆಯನೇ ಹೊರೆವನವ 3 ಮ್ಯಾಲ ಸಾಧುವೇಷ | ಒಳಗೆ ಖಳದೋಷ | ಕುಂದ ನೀಡುವವ 4 ಗುರು ಮಹಿಪತಿಸುತ | ಸಾರಿದ ನೋಡಾ | ಶರಣರಿಗೇ ಬಾಗಿ ಅವರ ಚರಿತೆಯ ಕೊಂಡಾಡದವ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅಶ್ವಧಾಟೀ ಕೃಷ್ಣನೆ ಎಮ್ಮನು ಪ ಕಾಯ ನಂಬಿದೆ ನಿನ್ನನುಅ.ಪ ಸಾರ ಮಾರ್ಗದ ದಾರಿ ಕಾಣದೆ ಸಾರಿ ಬೇಡುವೆ ನಿನ್ನನು ನೀರಜಾಕ್ಷನೆ ಘೋರಭವದಿ ಪಾರುಗಾಣಿಸೊ ಎಮ್ಮನು 1 ದುಷ್ಟನಾಶಕ ಶಿಷ್ಟಪಾಲಕ ಶ್ರೇಷ್ಠಮೂರುತಿದೇವನೆ ಕಷ್ಟಓಡಿಸಿ ಇಷ್ಟಪಾಲಿಸೊ ಅಷ್ಟಕರ್ತನೆ ಬೇಗನೆ 2 ವೇದಗೋಚರ ಯಾದವೇಂದ್ರ ಸುಧಾಮ ರಕ್ಷಕ ಕೃಷ್ಣನೆ ನಂದಗೋಪ ಸುಕಂದ ನಾಮಕ ರಾಧೆವಂದಿತ ಚರಣನೆ 3 ಗೋಪಿ ಮೋಹಕ ಪಾಪಮೋಚಕ ತಾಪಸ ಪ್ರಿಯರೂಪನೆ ಕೋಪಮಾಡದೆ ಪಾಪಿ ಎನಗೆ ರೂಪ ತೋರಿಸೊ ಬೇಗನೆ 4 ದೋಷದೂರ ವಿನಾಶವರ್ಜಿತ ಕೇಶಿ ಸೂದನ ಶೂರನೆ ಕ್ಲೇಶ ಓಡಿಸಿ ದಾಸನೆನಿಸೊ ಬಿಂಬನೆ 5 ವೇಣುನಾದ ವಿನೋದ ಸುಂದರ ಜಾಣೆ ರುಕ್ಮಿಣಿ ಅರಸನೆ ಸಾನುರಾಗದಿ ಜ್ಞಾನದಂಬಕ ದಾನ ಮಾಡೊ ದಾನಿಯೆ6 ಶ್ಯಾಮಸುಂದರ ಮಾಮನೋಹರ ಭೀಮ ವಿಕ್ರಮ ಭೂತಿಯೆ ಸಾಮಸನ್ನುತ ರಾಮಚಂದಿರ ಕಾಮಜನಕನೆ ಕಲ್ಕಿಯೆ 7 ಸಿಂಧು ಶಯನನೇ ಬಂಧಮೋಚಕ ಮಂದರಾದ್ರಿಧಾರನೇ ಬಿಂಧುಮಾಧವ ಮಂದಹಾಸದ ಸುಂದರಾಂಗ ರೂಪನೆ8 ಲಕ್ಷ್ಮಣಾಗ್ರಜ ಪಕ್ಷಿವಾಹನ ಅಕ್ಷರೇಡ್ಯ ಸುಲಕ್ಷಣ ಮೋಕ್ಷದಾಯಕ ಲಕ್ಷ್ಮಿರಮಣನೆ ರಕ್ಷಿಸಯ್ಯ ಸರ್ವದಾ 9 ವಾರಿಜನೇತ್ರ ವಾರಿಜನಾಭ ವಾರಿಜಾಸನ ವಂದ್ಯನೆ ಸೂರಿ ಶೇಖರ ಮೇರೆಗಾಣದ ಮಹಿಮನೆ 10 ಸರ್ವವ್ಯಾಪ್ತನೆ ಸರ್ವವಂದ್ಯನೆ ಸರ್ವವಾಚ್ಯದ ಈಶನೆ 11 ಪೂರ್ಣಗುಣನೆ ಪೂರ್ಣಶಕ್ತನೆ ಪೂರ್ಣಭೋಧರ ಪ್ರಿಯನೆ ಪೂರ್ಣರೂಪನೆ ಪೂರ್ಣಪೂರ್ಣನೆ ಪೂರ್ಣ ತಂತ್ರ ಸ್ವತಂತ್ರನೆ12 ಬಾಲ ಲೀಲ ಕಲಾವಿಭೂಷಿತ ಲೀಲ ಮಾನುಷ ವಿಗ್ರಹ ಲೋಲ ಸುಂದರ ಜಾಲ ಮೋಹಕ ಕಾಲನಾಮಕ ಪುರುಷ 13 ಕಾಳಿಮರ್ಧನ ಕಾಳಿವರದ ಕಾಳಿಯನುಜ ಕೇವಲ ಮೌಳಿಯಿಂದಲಿ ಕಾಲಿಗೆರಗುವೆ ಪಾಲಿಸಯ್ಯ ಈಗಲೇ 14 ಭಂಜನ ನಿಕಟ ಸರ್ವರ ಕುಟಿಲ ವರ್ಜಿತ ಶ್ರೇಷ್ಟನೆ ನಕ್ರತರಿದ ಚಕ್ರಪಾಣಿಯೆ ಫಕ್ಕನೊಲಿಯೊ ಶುಕ್ರನೇ 15 ವಿಪ್ರಸತಿಯರ ಕ್ಷಿಪ್ರದಿಂದಲಿ ತಪ್ಪದೆ ಪೊರೆದಾತನೆ ತಪ್ಪುನೋಡದೆ ಒಪ್ಪಿಕೊಂಡು ಅಪ್ಪ ಒಲಿಯೊ ವೆಂಕಟ 16 ಪಾಂಡವ ಪ್ರಿಯ ಪುಂಡಮರ್ದನ ಅಂಡಜಾಧಿಪ ಅಂಡಗ ಭಂಡನೆನಿಸದೆ ತೊಂಡನೆನಿಸೊ ಪಾಂಡುರಂಗ ವಿಠ್ಠಲಾ 17 ಸೋಮಶೇಖರ ಭಾಮೆ ಪೂಜಿತ ಕಾಮಿತ ಪ್ರದಸಾಮನೆ ತಾಮಸಾರಿಯ ನೇಮದಿಂದಲಿ ನಾಮನುಡಿಸೊ ಶೀಲನೆ 18 ಸೋಮಕಾಂತಕ ಭಾಮ ರೂಪದಿ ಸೋಮಹಂಚಿದ ಜಾಣನೆ ವಾಮದೇವಗೆ ಭ್ರಮೆಯ ಮಾಡಿದ ಶ್ರೀಮನೋಹರವಾಮನ 19 ಇಂದ್ರಗೊಲಿದ ವೀಂದ್ರವಾಹನ ನಂದಗೋಕುಲ ಚಂದ್ರನೆ ಬಂಧನಪ್ರದ ಬಂಧು ಸರ್ವರ ತಂದೆ ಕಾಯೋ ಬೇಗನೆ 20 ವಿಜಯಸಾರಥಿ ವೃಜಿಜನಾರ್ದನ ಅಜಭವಾದಿ ಪೂಜಿತ ತ್ರಿಜಗವಂದಿತ ಭುಜಗಶಯನನೆ ಅಜಿತ ಶಾಶ್ವತ ವಿಷ್ಣುವೆ 21 ಕಳತ್ರ ಅನೀಕನೆ ವಾಕು ಲಾಲಿಸು ನೂಕುಭವವನು ಏಕರೀತಿಲಿಮೆರೆವನೆ 22 ಜೀವ ಪ್ರೇರಕ ಜೀವಭಾಸರ ಜೀವರಾಶ್ರಯ ಭಿನ್ನನೇ ದೇವದೇವನೆ ಕಾವುದೆಮ್ಮನು ಕೋವಿದಪ್ರಿಯ ಕಪಿಲನೆ 23 ಅನ್ನನಾಮಕ ಅನ್ನದಾಯಕ ಅನ್ನುಉಂಬುವ ಅತಿಥಿಯೆ ಮಾನ್ಯಮಾನದ ಜ್ಞಾನಿಗಮ್ಯನೆ ಬೆನ್ನುಬಿದ್ದೆ ಅನಂತನೆ 24 ಸಾರ ಉಣ್ಣುವ ಗಾರು ಉಣ್ಣದ ಮಾರುತೀಶನೆ ಸ್ವರತನೆ ಧೀರ ಜಯಮುನಿ ವಾಯು ಅಂತರ ಮೆರೆವ ಸಿರಿಪತಿ ಕೃಷ್ಣವಿಠಲನೆ ಬಿಂಬನೆ 25
--------------
ಕೃಷ್ಣವಿಠಲದಾಸರು
ಅಷ್ಟಮಠದ ಯತಿಗಳು ನೋಡಿ ದಣಿದವೆನ್ನ ಕಂಗಳು ಉಡುಪಿಯಲ್ಲಿರುವ ಅಷ್ಟಮಠದ ಶ್ರೀಪಾದಂಗಳವರ ಪ. ಸುಧಿಂದ್ರತೀರ್ಥ ಗುರುವರ್ಯರು ಬಂದ ಭಕ್ತರಿಗೆ ಕರುಣಾಮೃತ ಮಳೆಗರೆವರು ಶ್ರೀಹರಿಯ ತೋರುವರು ನೇಮದಿಂದಲಿ ಇವರ ನಾಮ ನೆನೆದರೆ ಸ್ವಾಮಿ ಶ್ರೀರಾಮನು ಪ್ರಸನ್ನನಾಗುವನು 1 ವಿಭುದಪ್ರಿಯತೀರ್ಥ ಗುರುವರ್ಯರು ಬಂದಾ ದುರ್ಜನರ ಮನವನು ಜಯಿಸುವರು ಮಹಾನುಭಾವರು ತರ್ಕನ್ಯಾಯ ವೇದಾಂತ ನಿಪುಣರು ಮಹಾಗುಣವಂತರು 2 ವಿದ್ಯಾಪುಣ್ಯತೀರ್ಥ ಶ್ರೀಪಾದಂಗಳವರು ಬಂದ ಸೇವಕರಿಗೆ ಬ್ರಹ್ಮವಿದ್ಯಾ ಪಾಲಿಸುವರು ರ್ದುಜನರ ದುರ್ಬುದ್ಧಿ ಒದ್ದಿ ಕೆಡಹುವವರು 3 ವಿಶ್ವೇಂದ್ರತೀರ್ಥರು ಈ ಗುರುವರ್ಯರು ವಾದಿರಾಜರ ಪೂಜಿಸುವರು ಜಗಕೆ ಸುಖವ ಸುರಿಸುವರು ಭೂತಪ್ರೇತಪಿಶಾಚಾದಿ ಮಾಡುವರು ಭಕ್ತರಘ ಕಡಿವರು4 ಇವರು ಭವಸಮುದ್ರವ ನೀಗಿಸುವರು ಶಿಷ್ಯರಿಗ್ಹರುಷ ಪಡಿಸುವುದು ಆನಂದದಿಂದಲ್ಲಿ ಹೃನ್ಮಂದಿರದಲಿ ಇಂದಿರೇಶನ ನೋಡುವರು 5 ರಘುಮಾನ್ವತೀರ್ಥ ಗುರುವರ್ಯರು ಲೋಕಮಾನ್ಯರು ಭಕ್ತರಿಗತಿಪ್ರಿಯರು ಮಹಾನುಭಾವರು ಅನ್ನದಾನದಲಿ ದೈನ್ಯರು ಆನಂದ ಭರಿತರು ಸುರರಿವರು 6 ಲಕ್ಷ್ಮೀಂದ್ರತೀರ್ಥ ಶ್ರೀಗಳವರು ಇವರು ತಮ್ಮ ತುಷೆಯೊಳಗಿಟ್ಟುಕೊಂಡು ರಕ್ಷಿಸುವರು ಲಕ್ಷ್ಮೀರಮಣನ್ನ ಪಾದಾ ಅಪೇಕ್ಷೆಯ ಮಾಡುಸುವರು ಹರಿಯ ಭಜಿಸುವರು 7 ವಿಶ್ವಮಾನ್ಯತೀರ್ಥ ಈ ಗುರುವರ್ಯರು ಬಂದ ಭೂಸುರರಿಂದ ಅನುವಾದ ಮಾಡುವರು ನೋಡುವರಿಗಾನಂದ ಪಡಿಸುವರು ಸುಜ್ಞಾನ ಯತಿವರ್ಯರು 8 ಅಷ್ಟಮಠದ ಯತಿಗಳ ಮಹಿಮೆಯನ್ನು ನಿಷ್ಠೆಯಿಂದಲಿ ಪೇಳುವನು ಅವನು ಸುರನು ಇವರ ದೋಷಿ ಎಂದವರನೇ ನರಕಾಧಿ ಬಾಧಿಸುವುದು ಕೃಷ್ಣನ ಪೂಜಿಸುವರು 9
--------------
ಕಳಸದ ಸುಂದರಮ್ಮ
ಅಹುದಹುದನಾಥ ಬಂಧು ಅಹುದಹುದನಾಥ ಬಂಧು|ಅನುಪಮ್ಯ| ಮಹಿಮೆ ಕಾರುಣ್ಯಸಿಂಧು| ಏನೆಂದು ಪೇಳೆಲೆಮ್ಮಾ|ಈ ದಯಕ| ತಾನು ಪಮೆ ಇಲ್ಲವಮ್ಮಾ| ನ್ಯೂನಾರಿಸದೆ ಬಂದನು,ಕ್ಷಮೆಯಿಂದ| ತಾನಾಗಿ ಸಲಹುತಿಹನು| ಜ್ಞಾನವಿಲ್ಲದೆ ತರಳನೆಂದಪೇಕ್ಷಿಸದೆನ್ನ| ಮನ ನೆನೆವಿನೊಳಗಿಟ್ಟು ತನ್ನ ಅಂಘ್ರಿಯದಾ 1 ಪತಿತರೊಳು ಪತಿತ ಅಧಮಾ|ಅಮೂಲ್ಯ| ಪತಿಹೀನ ಮೂಢ ಪರಮಾ| ಸುತ್ತ-ಭಕುತಿ ಮಾಡಲರಿಯೆ|ಚತೆರ ಸಂ| ಸ್ಕøತ ಮಾತನಾಡಲರಿಯೇ| ಗತಿಗೈದರೊಂದೊಂದು ವೃತದಿ ಮೊದಲಾದವರು| ಕ್ಷಿತಿಯೊಳಗೆ ಎನ್ನಂಥ ಶೂನ್ನರಾರಮ್ಮ 2 ನೆಲಿಗೆ ಮುಯ್ಯಕ ಮುಯ್ಯವು|ಈ ತೆರದಿ| ಸಲೆ ನಡೆತಿ ಉಂಟು ಕೆಲವು| ಕೊಳದೆ ಕೊಡುವವರಿಂದಿಗೆ|ಆರಿಲ್ಲಾ| ನಳಿನಜೇಂದ್ರಾದ್ಯರೊಳಗೇ ಒಲಿದು ಮಹೀಪತಿ ಸುತನ ಕರವಿಡಿದು ತನ್ನ| ದಾಸರ ದಾಸ ದಾಸನೆನಿಸಿದ ಬಿರದಿಗಿಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆ ನಮಿಪೆ ವಿಷ್ಣು ಶ್ರೀ ಬ್ರಹ್ಮ ವಾಯು ವಾಣಿ ಭಾರತಿ ಮುಖ್ಯರವತಾರ ಆವೇಶಕಾನಮಿಪೆ ಪ ಮತ್ಸ್ಯ ಕೂರ್ಮ ಭೂವರಹ ನರಸಿಂಹ ದಧಿ ವಾಮನ ತ್ರಿವಿಕ್ರಮ ಭೃಗುಕುಲೋದ್ಭವ ಬುದ್ಧ ಕಲ್ಕಿ ಹಯಾಸ್ಯ ನಾಮ ತಾಪಸ ಮನು ಉಪೇಂದ್ರ ಅಜಿತಾದಿಗಳಿಗಾ ನಮಿಪೆ 1 ದಾಸ ಧನ್ವಂತ್ರಿ ಹರಿ ಹಂಸ ದತ್ತಾ ವ್ಯಾಸ ಕಪಿಲಾತ್ಮಂತರಾತ್ಮ ಪರಮಾತ್ಮ ಯ ಜ್ಞೇಶ ವೈಕುಂಠ ನಾರಾಯಣಾಧ್ಯವತಾರಕಾನಮಿಪೆ 2 ನಾರಾಯಣೀ ಋಷಭ ಐತರೇಯ ಶಿಂಶು ಮಾರ ಯಜ್ಞ ಪ್ರಾಜ್ಞ ಸಂಕರುಷಣಾ ಕ್ಷಿರಾಬ್ದಿ ನಿಲಯ ಯಮನಂದನಾ ಕೃಷ್ಣ ಹರಿ ನಾರಾಯಣ ಧರ್ಮಸೇತು ರೂಪಾದಿಗಳಿಗಾನಮಿಪೆ 3 ಗುಣಗಳಭಿಮಾನಿ ಶ್ರೀ ಭೂ ದುರ್ಗ ದಕ್ಷಿಣಾಂ ಭೃಣಿ ಮಹಾಲಕ್ಷ್ಮೀ ಶ್ರೀ ವಿಷ್ಣುಪತ್ನೀ ಮಾಯಾ ಕೃತಿ ಶಾಂತಿ ಶುದ್ಧ ರು ಕ್ಮಿಣಿ ಸತ್ಯ ಸೀತಾದ್ಯಮಿತ ರೂಪಗಳಿಗಾನಮಿಪೆ 4 ಹೀನಳೆನಿಸುವಳನಂತಾಂಶದಲಿ ಸುಖ ಬಲ ಜ್ಞಾನಾದಿ ಗುಣದಿ ಮಹಾಲಕ್ಷ್ಮಿ ಹರಿಗೆ ಆನಂದ ವಿಜ್ಞಾನ ಮಯನ ವಕ್ಷಸ್ಥಳವೆ ಸ್ಥಾನವಾಗಿಹುದು ಇಂದಿರೆಗೆ ಆವಾಗ 5 ವಿಧಿ ವಿರಿಂಚಿ ಮಹನ್ ಬ್ರಹ್ಮ ಸೂತ್ರ ಗುರು ಮಹಾಪ್ರಭು ಋಜ ಸಮಾನ ವಿಜ್ಞ ಪ್ರಾಜ್ಞ ಹರಿಭಕ್ತಿ ಮೇಧಾವಿ ಮುಕ್ತಿ ಧೃತಿ ಅಮೃತನಿಗೆ 6 ಸ್ಥಿತಿ ಯೋಗ ವೈರಾಗ್ಯ ಚಿಂತ್ಯ ಬಲಸುಖ ಬುದ್ಧಿ ವಿತತಾದಿ ಗೋಪ ಹನುಮ ಭೀಮ ವೃಷಿವರಾನಂದ ಮುನಿ ಮೊದಲಾದ ರೂಪಶ್ರೀ ಪತಿಗಧಿಷ್ಟಾನ ಕೋಟಿಗುಣಾಧಮರು ರಮೆಗೆ ಆ ನಮಿಪ 7 ಸರಸ್ವತಿ ಗಾಯತ್ರಿ ಬುದ್ಧಿ ವಿದ್ಯಾ ಪ್ರೀತಿ ಗುರುಭಕ್ತಿ ಸರ್ವ ವೇದಾತ್ಮಿಕ ಭುಜಿ ಪರಮಾನು ಭೂತಿ ಸಾವಿತ್ರಿ ಸು ಸುಖಾತ್ಮಿಕಾ ಪತಿ ನಾಮಗಳಿವೆಂದರಿದು 8 ಶಿವಕನ್ಯ ಇಂದ್ರಸೇನಾ ಕಾಶಿಜಾ ಚಂದ್ರ ಯುವತಿ ದ್ರೌಪದಿಯು ಭಾರತಿ ರೂಪವು ಪವಮಾನ ಬ್ರಹ್ಮರಿಗೆ ಶತಗುಣಾಧಮ ಸದಾ ಶಿವನ ರೂಪಗಳ ಈ ಪರಿಯ ಚಿಂತಿಸುತ 9 ತತ್ಪುಮಾನ್ನೂಧ್ರ್ವಪಟ ದುರ್ವಾಸ ವ್ಯಾಧ ಅ ಶ್ವತ್ಥಾಮ ಜೈಗೀಷವ್ಯ ತಪ ಅಹಂಕ್ರತು ಶುಕ ವಾಮದೇವ ಗುರು ಮೃತ್ಯುಂಜಯೋರ್ವ ಸದ್ಯೋಜಾತ ತತ್ಪುರುಷಗಾನಮಿಪೆ 10 ನರ ವಯು ಶುಕಕೇಶವೇಶ ಬಲಗೆ ಸಂ ಕರುಷಗಾವೇಶ ಲಕ್ಷ್ಮಣದೇವಗೆ ಗರುಡ ಶೇಷಾಘೋರ ಸಮರು ಶತಗುಣದಿಂದ ಕೊರತೆಯೆನಿಸುವರು ಮೂವರು ವಾಣಿ ದೇವಿಗೆ 11 ಶೇಷಗೆ ಸಮಾನನೆನಿಪಳು ಜಾಂಬವತಿ ರಮಾ ವೇಶ ಕಾಲದಿ ಷಣ್ಮಹಿಷಿಯರ ಒಳಗೆ ಹ್ರಾಸಕಾಲದಿ ಸಮಳು ಐವರಿಗೆ ಜಾಂಬವತಿ ವೀಶಾದ್ಯರಿಗೆ ಹರಿ ಸ್ತ್ರೀಯರ ಸಮರೈದುಗುಣ12 ರೇವತಿ ಶ್ರೀಯುತ ಶ್ರೀ ಪೇಯ ರೂಪತ್ರ ಯಾವಕಾಲದಿ ವಾರುಣಿಗೆ ಪಾರ್ವತೀ ದೇವಿ ಸೌಪರಣಿಗೆ ಸಮ ಷಣ್ಮಹಿಷಿಯರಿಗೆರಡು ಮೂವರೀರೈದು ಗುಣ ಕಡಿಮೆ ಪತಿಗಳಿಗೆ 13 ಕುಶ ವಾಲಿ ಗಾಧಿ ಮಂದ್ರದ್ಯುಮ್ನನು ವಿಕುಕ್ಷಿ ಶ್ವಸನ ಹರಿ ಶೇಷ ಸಂಯುಕ್ತಾರ್ಜುನಾ ಅಶನೀಧರನ ಸುರೂಪಂಗಳಿವು ಮನ್ಮಥನ ನಿತ್ಯ 14 ಪ್ರದ್ಯುಮ್ನ ಸಂಯುಕ್ತ ರುಕ್ಮಿಣೀ ದೇವಿ ಸುತ ಪ್ರದ್ಯುಮ್ನ ಭರತನು ಸನತ್ಕು ಮಾರಾ ಸಾಂಬ ಸ್ಕಂಧ ಸುದರುಶನ ರುದ್ರ ನಾರ್ಧಾಂಗಿನಿಗೆ ದಶಗುಣಾಧಮರೆಂದು15 ಭವ ಪ್ರಾಣ ನಾಮರಗೆ ರೂಪ ಸರ್ಮೋತ್ತುಂಗನು ಕಾಮ ಪುತ್ರಾನಿರುದ್ದಾದಿಗಳು ದಶ ಹೀನ ಈ ಮಹಾತ್ಮರ ದಿವ್ಯ ಅವತಾರರೂಪಗಳಿಗಾನಮಿಪೆ 16 ಪ್ಲವಗ ಬ್ರಹ್ಮಾಂಶಯುಗ್ದೋಣ ಮಾರುತಾವೇಶ ಸಂಯುತ ವುದ್ಧವಾ ಮುರು ರೂಪವು ಬೃಹಸ್ಪತಿಗೆ ಪ್ರದ್ಯುಮ್ನನ ಕು ಮಾರಾನಿರುದ್ಧ ಶತೃಘ್ನ ಅನಿರುದ್ಧನಿಗೆ 17 ತಾರ ಚಿತ್ರಾಂಗದ ಶಚಿ ರೂಪ ಲಕ್ಷುಣ ಈ ರುಗ್ಮವತ್ರಿ ಎರಡು ರತಿರೂಪವು ಆರುಜನ ದಕ್ಷ ಸ್ವಯಂಭುವ ಮನು ಪ್ರಾಣ ಗಿರೈದು ಗುಣಗಳಿಂದಧಮರೆಂದರಿದು 18 ಭೂತಾಭಿಮಾನಿ ಪ್ರವಹ ಪಂಚಗುಣದಿ ಪುರು ಹೊತ ಪತ್ನ್ಯಾದಿಗಳಿಗಧಮನೆನಿಪ ಈತಗವತಾರವಿಲ್ಲವನಿಯೊಳು ಚಂದ್ರ ಪ್ರ ದ್ಯೋತನಾಂತಕ ಸ್ವಯಂಭುವ ಪತ್ನಿ ಶತರೂಪಿ 19 ಸತ್ಯಜಿತ ಜಾಂಬವಾನ್ ವಿದುರ ಗುರು ವಾಯು ಸಂ ಯುಕ್ತ ಧರ್ಮಜ ಯಮಗೆ ರೂಪ ನಾಲ್ಕು ರಾತ್ರಿ ಚರನವತಾರ ಯಿಂದ್ರ ಯುಕ್ತಾಂಗದಾ ದಿತ್ಯ ನವತಾರ ಬ್ರಹ್ಮ ವಿಷ್ಟ ಸುಗ್ರೀವ 20 ಹರಿಯುಕ್ತ ಕರ್ನ ಮನು ಪತ್ನಿ ಶತರೂಪ ನಾ ಲ್ವರು ಸಮರು ಪ್ರವಹಗಿಂದೆರಡು ಗುಣದೀ ಕೊರತಿ ಮಹ ಭಿಷಕು ಮಂಡೂಕ ಶಂತನು ಸುಶೇ ಪಾದ ಪಾದಾರ್ಧಿಕಾನಮಿಪೆ21 ನಾರದಾಧಮ ವರುಣಗಿಂತಗ್ನಿ ಅವ ತಾರ ದೃಷ್ಟದ್ಯುಮ್ನ ಲವ ನೀಲರೂ ಪಾದ ಗುಣದಾಧಮರು ಎಂದು22 ಅಂಗೀರ ಪುಲಸ್ತ್ಯಾತ್ರಿ ಪುಲಹನು ಮರೀಚಿ ಮುನಿ ಪುಂಗವ ದಶಿಷ್ಠ ಕೃತು ಬ್ರಹ್ಮ ಸುತರೂ ತುಂಗ ವಿಶ್ವಾಮಿತ್ರ ವೈವಸ್ವತರು ಸದಾ ಕೆಂಗದಿರಗಧಮರೊಂಭತ್ತು ಜನರೆಂದು 23 ಸಪ್ತ ಋಷಿಗಳಿಗೆ ಸಮನೆನಿಪ ವೈವಸ್ವತನು ಲುಪ್ತವಾಗಲು ಕಡಿಮೆಯೆನಿಪ ಪ್ರಾವಹ ತಾರ ಕ್ಲುಪ್ತ ಒಂದೇ ರೂಪ ಕೃಪೆಯೆಂದು ಕರೆಸುವಳಿಗಾನಮಿಪೆ24 ಹರನಾವೇಶಯುತ ಘಟೋತ್ಕಚ ದುರ್ಮಖನು ನಿಋಋತಿ ಕರೆಸುವನು ರಾಹು ಯುಗ್ಭೀಷ್ಟಕ ನೃಪಾ ನರೆ ಮಿತ್ರ ನಾಮಕನ ರೂಪ ನಾಲ್ವರು ಅಗ್ನಿ ಗೆರಡು ಗುಣದಿಂಧಮರೆನಿಪರೆಂದೆಂದು 25 ಮಾರಾರಿಯುಕ್ತ ಭಗದತ್ತ ತತ್ತನÀಯ ಕು ಬೇರಗೆರಡವತಾರ ವಿಘ್ನೇಶಗೆ ಚಾರುದೇಷ್ಣನು ಒಂದೆ ಇಂದ್ರನಾವೇಶಯುತ ಆರುರೂಪಗಳುಳ್ಳ ನಾಸತ್ಯ ದಸ್ರರಿಗೆ 26 ವಿವಿಧÀ ಮೈಂದ ತ್ರಿಸಿಖ ನಕುಲ ಸಹದೇವ ವಿಭು ಅವತಾರ ಅಶ್ವಿನೀ ದೇವತೆಗಳ ಲವಣಾದಿ ಷಡ್ರಸಗಳೊಳಗಿದ್ದು ಜೀವರಿಗೆ ವಿವಿಧ ಭೋಗಗಳಿತ್ತು ಸಂತೈಪರೆಂದೆಂದು 27 ದ್ರೋಣಾರ್ಕ ದೋಷಾಗ್ನಿ ಧ್ರುವ ವಿಭಾವಸು ವಸ್ತು ಪ್ರಾಣಾಷ್ಟ ವಸುಗಳೊಳಗೆ ದ್ಯುನಾಮಕ ವಾಣೀಶಯುಕ್ತ ಭೀಷ್ಮನು ನಂದಗೋಪಾಲ ದ್ರೋಣನಾಮಕ ಪ್ರಧಾನಾಗ್ನಿಗಿಂದಧಮರೆಂದಾ ನಮಿಪೆ 28 ಭೀಮರೈವತ ವೋಜಜ್ಯೆಕಪಾದ ಹಿರ್ಬದ್ನಿ ಭವ ವಾಮ ಬಹುರೂಪೋಗ್ರಜ ವೃಷಾಕಪಿ ಈ ಮಹನ್ನೆಂಬ ಹನ್ನೊಂದು ರುದ್ರರು ಭೂರಿ ನಾಮಕ ಜೈಕ ಪಾದಹಿರ್ಬದ್ನಿ ಭೂರಿಶ್ರವಗಾನಮಿಪೆ29 ತ್ರ್ಯಕ್ಷನುಳಿಧತ್ತು ರುದ್ರರು ಸಮರು ಶಲ್ಯ ವಿರು ಪಾಕ್ಷನವತಾರ ಕೃಪ ವಿಷ್ಕಂಭುನೂ ಅಕ್ಷೀಣಬಲ ಪತ್ರತಾಪಕ ಸಹದೇವ ರಕ್ಷಘ್ನ ಸೋಮದತ್ತನು ಎನಿಸುತಿಹಗೆ 30 ವಿರೂಪಾಕ್ಷ ವಿಷ್ಕಂಭ ಪತ್ರತಾಪಕ ಮೂರು ಹರನ ರೂಪಾಂತರಗಳಿವು ವಿವಸ್ವಾನ್ ಅರಿಯಮ ಪೂಷ ಭಗ ಸವಿತು ತೃಷ್ಟಾಧಾತ ವರುಣ ಶಕ್ರೋರುಕ್ರಮನು ಮಿತ್ರ ಪರ್ಜನ್ಯಗಾನಮಿಪೆ 31 ಶೌರಿನಂದನ ಭಾನು ಸವಿತ್ರ ನಾಮಕ ಸೂರ್ಯ ವೀರಸೇನನು ಯಮಾವಿಷ್ಟ ತ್ವಷ್ಟಾ ಆರುಜನ ರುಕ್ತರೆನಿಪರು ವುರುಕ್ರ್ರಮ ಶಕ್ರ ವಾರಿಧಿ ವಿವಸ್ವಾನ್ ಮಿತ್ರ ಪರ್ಜನ್ಯರಿಗೆ 32 ಪ್ರಾಣ ನಾಗ ಪಂಚಕ ಅಹಂಕಾರಿಕ ಪ್ರಾಣ ಪ್ರವಹ ನಿವಹ ಸಂವಹ ಸ್ವಹಾ ಕಾಲ ಶ್ವಾಸ ಏ ಕೋನ ಪಂಚಾಶನ್ ಮರುದ್ಗಣಸ್ಥರು ಎಂದು 33 ಶ್ವೇತ ಶಂ ಹನುಮ ಭೀಮ ಯತಿವುದಿತ ಕಾಮ ಜಡಪಿಂಗ ಕಂ ಪನ ವೃದ್ವಹ ಧನಂಜಯ ದೇವದತ್ತರಿಗೆ 34 ಶುಕ್ರ ಶಂಕು ಗುರು ಕಾಂತ ಪ್ರತಿಭ ಸಂವರ್ತಕನು ಪಿಕ ಕಪಿಗಳಿವರು ಮುರುತರು ಸಮೀರಾ ಯುಕುತ ಪಾಂಡು ವರಾಹನು ಎನಿಪ ಸಂಪಾತಿ ಕೇಸರಿ ಶ್ವೇತ ಮರುತನವತಾರ ವೆಂದಾನಮಿಪೆ35 ಪ್ರತಿಭವಂಶನು ಚೇಕಿತಾನೆಂದೆನಿಪ ವಿ ಪ್ರಥು ಸೌಮ್ಯ ಕುಂತೀಭೋಜನೆ ಕೂರ್ಮನು ಕ್ಷಿತಿ ಯೊಳಗೆ ಪ್ರಾಣಪಂಚಕರೊಳು ಪ್ರಾಣ ಗಜ ಅಥ ಗವಾಕ್ಷಾಪಾನ ವ್ಯಾನ ಗವಯನು ಎಂದು 36 ವೃಷನು ಸರ್ವತ್ರಾತನು ವುದಾನಗಂಧ ಮಾ ದ ಸಮಾನನರಿವರು ವಿತ್ತಪನ ಸುತರು ಶ್ವಸನಗಣದೊಳು ಕಿಂಚಿದುತ್ತ ಮರಹಂ ಪ್ರವಹ ಗಸಮರೆನಿಪರು ಪ್ರಾಣ ಪಂಚಕರು ಎಂದೂ 37 ಪ್ರತಿ ವಿಂಧ್ಯ ಧರ್ಮಜನ ಭೀಮಸೇನನ ಪುತ್ರ ಶೃತಸೋಮ ಅರ್ಜುನಜ ಶೃತಕೀರ್ತಿಸಾ ಶತಾನೀಕÀನ ಕುಲಜ ಸಹದೇವಾತ್ಮಜನು ಶೃತಕರ್ಮರಿವರು ದ್ರೌಪದಿ ದೇವಿಗಾತ್ಮಜರಿಗಾನಮಿಪೆ38 ಚಿತ್ರರಥ ಅಭಿಪೌಮ್ರಬಲ ಕಿಶೋರ ಗೋಪಾಲ ರುತ್ತಮರು ಗಂಧರ್ವರೈವರಿಂದ ಯುಕ್ತರಾಗಿಹರು ಕೈಕೇಯರೈವರು ಪಾಂಡು ಪುತ್ರಜರು ವಿಶ್ವದೇವತೆಗಳಿವರೆಂದು39 ಕಾಲ ಕಾಮಲೋಚನದಕ್ಷ ಕೃತು ಪುರೂ ರವ ಸತ್ಯ ವಸು ಧುರಿಗಳಿವರು ವಿಶ್ವೇ ಋಭು ಗುಣ ಪಿತೃತ್ರಯ ದ್ಯಾವ ಅವನಿಪರು ಗಣಪಾದ್ಯರಧಮ ಮಿತ್ರನಿಗೆಂದು 40 ವಸುಗಳೆಂಟಾದಿತ್ಯರೀರಾರು ಒಂದಧಿಕ ದಶರುದ್ರಗಣ ಪಿತೃತ್ರಯ ಬೃಹಸ್ಪತೀ ವಿಶ್ವ ದೇವ ಅಶ್ವಿನಿಗಳೆರಡೈವತ್ತು ಶ್ವಸನಗಣರು ಋಭುವೊಂದು ಎರಡು ದ್ಯಾವಾಪೃಥವಿ 41 ಒಂಭತ್ತು ಕೋಟಿ ದೇವತೆಗಳೊಳು ನೂರು ಜನ ಅಂಬುಜಾಪ್ತರ ಒಳಗುರುರುಕ್ರಮನುಳಿದು ಪದ್ಮ ಸಂಭವನ ಸಹರಾಗಿಹರು ಶತಸ್ಥರಿಗೆ 42 ಮರುತತ್ರಯರು ವನಿಯಮ ಸೋಮ ಶಿವದಿವಾ ಕರರಾರು ರುದ್ರ ಗುರು ಇವರುಕ್ತರೂ ಉರವರಿತ ಎಂಭತ್ತೈದು ಸಮರು ತಮ್ಮೊಳಗೆ ಸರಸಿಜೋದ್ಭವನ ಸುತರೆನಿಪ ಸನÀಕಾದಿಗಳಿಗಾನಮಿಪೆ43 ಸನಕಾದಿಗಳೊಳುತ್ತಮ ಸತತ್ಕುಮಾರ ಶಿಖಿ ತನುಜ ಪಾವಕನು ಪರ್ಜನ್ಯನು ಮೇಘಪ ಎನಿಸುವನು ಶರಭವೊಂದೇರೂಪ ಧರ್ಮರಾ ಜನ ಪತ್ನಿ ದೇವಕಿಯು ಶಾಮಲೆಯ ರೂಪವೆಂದಾ ನಮಿಪೆ44 ಯಮ ಭಾರ್ಯ ಶಾಮಲಾ ರೋಹಿಣಿದೇವಿ ಚಂ ದ್ರಮನ ಸ್ತ್ರೀ ಅನಿರುದ್ಧದೇಹಿ ಉಷಾ ದ್ಯುಮಣಿ ಭಾರ್ಯಾ ಸಂಜ್ಞ ಗಂಗಾ ವರುಣ ಭಾರ್ಯ ಸುಮರಾರು ಜನರು ಪಾವಕಗೆ ಕಿಂಚಿದಧಮರೆಂದಾ ನಮಿಪೆ45 ಪರ್ಜನ್ಯ ಈ ರೆರಡು ವನ್ಹಿಗೆ ಕಡಿಮೆ ಪಾದಮಾನೀ ಸುರಪನಂದನ ಜಯಂತನು ಪ್ರಹಲ್ಲಾದ ಈ ರ್ವರು ಮುಖ್ಯರಧಮ ಪರ್ಜನ್ಯಗೆಂದೆಂದು 46 ಎರಡು ಗುಣ ಪರ್ಜನ್ಯಗಿಂದಧಮಳು ಸ್ವಹಾ ರೆರಡಧಿಕ ಗುಣದಿ ಸ್ವಪತಿಗೆ ನೀಚಳೂ ಹರಿ ಶಕ್ರಸತಿ ಅಶ್ವಿ ಯುಕ್ತಾಭಿಮನ್ಯು ಚಂ ದಿರಜ ಬುಧನವತಾರ ಸ್ವಾಹಾ ದೇವಿಗಧಮಳೆಂದಾ ನಮಿಪೆ 47 ಎನಿಸುವಳು ಶಲ್ಯ ಜರಾಸಂಧನಾತ್ಮಜಾ ಶ್ವಿನಿ ಭಾರ್ಯಾನಾಮಾಭಿಮಾನಿ ಉಷಾ ಘನರಸಾಧಿಪ ಬುಧಗೆ ಕಿಂಚಿದ್ಗುಣ ಕಡಿಮೆ ಅವಳ ಪತ್ನಿಗೆ ದಶಗುಣಾಧಮಳುಯೆಂದು 48 ಧರಣಿಗಭಿಮಾನಿ ಎನಿಸುವ ಸೂರ್ಯಸುತ ಶನೇ ಶ್ವರ ಉಷಾದೇವಿಗೆರಡು ಗುಣಾಧಮ ತರಣಿ ನಂದನಗೆ ಸತ್ಕರ್ಮಾಭಿಮಾನಿ ಪು ಷ್ಕರ ಕಡಿಮೆ ಪಂಚಗುಣದಿಂದ ಎಂದೆಂದು 49 ನಾರದನ ಶಿಷ್ಯ ಪ್ರಹ್ಲಾದ ಬಾಲ್ಹೀಕ ಸ ಮೀರ ಸಂಯುಕ್ತ ಸಹ್ಲಾದ ಶಲ್ಯಾ ಮೂರನೆಯನುಹ್ಲಾದ ಸವಿತ್ರನಾವೇಶದಲಿ ತೋರಿದನು ದೃಷ್ಟಕೇತು ಎನಿಸಿ ಧರೆಯೊಳಗೆ 50 ತಾಮಾಂಶಯುಗ್ ಜಯಂತನು ಬಭ್ರುವಹ ವರು <ಈ
--------------
ಜಗನ್ನಾಥದಾಸರು
ಆ ವೆಂಕಟಗಿರಿನಿಲಯನಂಘ್ರಿ ರಾ ಜೀವಯುಗಳಗಾನಮಿಸುವೆನು ಪ ಸೇವಿಪ ಜನರಿಗಮರ ತರುವೆನಿಸಿ ಧ ರಾವಲಯಾಖ್ಯ ದಿವಿಯೊಳೆಸವ ಅ.ಪ. ನಿಖಿಳ ಜಗತ್ತಿಗೆ ಪಾವನತರವೆಂದೆನಿಸುವುದು ಶ್ರೀ ವಿಧಿಭವ ಶಕ್ರಾದ್ಯರು ಆವನ ಸೇವಕ ಸೇವಕರೆನಿಸುವರು ತಾ ಉತ್ತಮ ಪುರುಷನೆನಿಸಿ ಜಗವ ಸ ದಾವಕಾಲ ಸಂತೈಸುವನು ಜೀವಾಂತರ್ಗತನಾಗಿ ವಿವಿಧ ವೇ ದಾವಳಿಯಿಂದ ತುತಿಸಿ ಕೊಂಬಾ 1 ಪಾತನೊಳಹಿಪ ವಿರೋಧಿಸೆ ತವಸ ತ್ವಾತಿಶಯನ ತೋರೆಂದೆನುತಾ ಜಾತರೂಪ ಶೈಲಾತ್ಮಜನಪ್ಪಿರೆ ವೀತಿ ಹೋತ್ರ ಸಖ ಕಿತ್ತೊಗೆಯೆ ವೀತ ಕರ್ನನಳವಳಿದು ವೇಗ ಧಾತ ಮಹಿಳೆ ತೀರ್ಥದಿ ಭೂ ಲಕ್ಷ್ಮೀಸ ಮೇತನಾಗಿ ಮೋದಿಸುತಿಪ್ಪೆ 2 ಭೂಸುರನೊರ್ವನು ತೊಂಡಮಾನ ಧರ ಣೀಶÀನ ನಿಲಯದೊಳುಳುಹಿ ಸತಿಯ ನೃಪತಿ ಮರೆಯೆ ನಿ ಶ್ವಾಸ ವನೈದಿದಳಾ ಸತಿಯು ಆ ಸಮಯದಿ ದ್ವಿಜವರ್ಯನು ಬೆಸಗೊಳೆ ಕ್ಲೇಶದಿ ಭೂಮಿಪ ಸಂಸ್ತುತಿಸೆ ಕೇಶವ ತಾನಸ್ಥಿಗಳ ತರಿಸಿ ಸು ವಾಸಿನಿ ಶಿಶು ಸಹ ಒಲಿದಿತ್ತಾ 3 ವೃದ್ಧ ಬ್ರಾಹ್ಮಣನು ತುತಿಸೆ ಸಲಿಲದೊಳ ಗದ್ದಿ ಕುಮಾರತ್ವವನಿತ್ತ ಅಧ್ವರವೆಸಗಿದ ಋಷಿಗಳ ಮಂತ್ರದ ಪದ್ದತಿ ತಿದ್ದಿಯಜ್ಞವ ಮಾಡ್ದ ಮಧ್ಯರಾತ್ರಿಯೊಳು ಬೆಸಗೊಂಡ ನೃಪನು ಪದ್ರವ ಕಳೆದಾಯುಧವಿತ್ತು ಮೃದ್ಭಾಂಡವ ರಚಿಸುವನಿಗೊಲಿದವನ ಚೋದ್ಯ ತೋಂಡಮಾನಗೆ ತೋರ್ದ 4 ಸಂಚಿತ ಕುಕರ್ಮಗಳ ಮನೆಯ ಮುರಿದು ಆಗಾಮಿ ಫಲಂಗಳ ಅನುಭವಕೀಯದೆ ಪ್ರಾರಬ್ದಾ ಮೂರ್ತಿ ಚಿಂ ತನೆ ಇತ್ತು ಸ್ವರೂಪಸುಖಾ ಅನುದಿನದಲಿ ವ್ಯಕ್ತಮಾಡಿಸಿ ಕೊ ಟ್ಟನಿಮಿತ್ತಾಪ್ತನೆನಿಸುತಿಪ್ಪ 5 ಏಕಮೇವ ರತ್ನಾಕರ ಮಂದಿರ ಆಕೂತಿಜ ಯಜ್ಞಾಕರನೇ ಲೊಕವಿಲಕ್ಷಣ ಸೂಕರಾತ್ಮ ಪಿ ವಿನುತ ಲಕ್ಷ್ಮೀ ಕಾಂತಾ ಗೋಕುಲ ಮಂದಿರ ಏಕಾಂತಿಗಳ ನಿ ರಾಕರಿಸಿದೆ ಲೋಕೈಕ ಸುಖ ಶೋಕ ರಹಿತ ನಿಜಲೋಕವಿತ್ತು ನಿ ರಾಕುಲ ಸುಖಗಳ ತಾ ಕೊಡುವಾ 6 ದಿನಪನೊಳಗೆ ವೃಜಿನಿ ವಸು ತಾ ಎಂ ದೆನಿಸಿ ಜಯಾಪತಿ ಪ್ರದ್ಯುಮ್ನ ಅನಿರುದ್ಧಾದಿ ಚತುರ್ಮೂತ್ರ್ಯಾತ್ಮಕ ತನಗೆ ತಾನೆ ಪೂಜಕ ಪೂಜ್ಯ ಅನುಪಮ ನಾಮದಿ ಕರೆಸುತಲಿಹ ತ ನ್ನನು ಈ ಪರಿಧೇನಿಸುತಿಪ್ಪ ಮನುಜರಿಗೊಲಿದು ಜಗನ್ನಾಥವಿಠ್ಠಲ ಜನನ ಮರಣಗಳ ಪರಿಹರಿಪಾ 7
--------------
ಜಗನ್ನಾಥದಾಸರು
ಆಗಿದ್ದ ಹರಿ ಈಗಿಲ್ಲವೇನು ಸಾಗರಶಾಯಿ ಭಕ್ತರಭಿಮಾನ್ಯಲ್ಲೇನು ಪ ಖುಲ್ಲರ್ಹಾವಳಿಯಿಂದ ಝಲ್ಲು ಬಿಡಿಸಿ ಮುನಿಯ ಕಲ್ಲನ್ನು ಸತಿಮಾಡ್ದ ಬಿಲ್ಲು ಇಕ್ಕಡಿಗೈದ ಕೊಲ್ಲಿ ದಶಮುಖನನ್ನು ನಲ್ಲೆಯಳ ಕರೆತಂದ ಒಲ್ಲಿದು ರಾಜ್ಯವನಿತ್ತ ಸುಲಭದ್ವಿಭೀಷಣಗೆ1 ಅರಮನೆಕಂಬದಿ ಅರಿಯದಂತಡಗಿ ತಾ ದುರುಳನ ಸದೆಬಡಿದು ತರಳ ಸಲಹಿದ ಬರುವ ಮುನಿಶಾಪವಂ ವರಚಕ್ರದಿಂ ತಡೆದು ಕರುಣದಿ ನೃಪನನ್ನು ಪೊರೆದ ಪರಮಾತ್ಮ 2 ಕರುಣಾಳು ಶ್ರೀರಾಮ ಚರಣದಾಸರ ಮನಕೆ ಕೊರತೆಯ ತರದಂತಿರುವ ಬೆಂಬಿಡದೆ ಮರುಗಿ ಸೊರುಗುವುದ್ಯಾಕೊ ಸರುವ ಭಾರವನ ಮೇ ಲ್ಹೊರೆಸಿ ಮೊರೆಯಿಟ್ಟ ಬಳಿಕರಿಯನೇನೀಶ 3
--------------
ರಾಮದಾಸರು
ಆಡಿನ ಮರಿಯೆತ್ತಂಬುಧಿಯೊಳಾಡುವ ಕರಿಯೆತ್ತ ಮಾನವ ಮಾಡದಿರಚ್ಚುತ ನಾನೆಂಬ ಮನವಪ. ಯಾಡಮೂಢನೊಬ್ಬ ಎಲ್ಲಾ ಜಗದೊಳು ಗೂಢನಾಗಿ ನೋಡುತಿಹ ಸುಖಿಯೊಬ್ಬ ಗಡ ನಾಡರಿಯೆ ದುಃಖಿಯೊಬ್ಬ ಸುಖದಲ್ಲಿ ಲೋ- ಲಾಡುತಿಹ ನಿರನಿಷ್ಟನೊಬ್ಬ ಗಡ1 ಕಡಲ ಕಡೆದು ಸುಧೆಯ ನೋಡಿ ತ- ನ್ನೊಡಲ ಧಣಿಯಉಂಡವನೊಬ್ಬ ಹೆ- ಣ್ಣುಡಿಗೆಯನ್ನುಟ್ಟು ಅಸುರರ ಬಾಯ ಹೊಡೆದು ಬಡಿಸಿದವನೊಬ್ಬ ಗಡ 2 ಆಡುತಲಬ್ಧಿಯೊಳಡಗಿದದ್ರಿಯ ಕೋಡುಗಲ್ಲನೆತ್ತಿ ಹೂಡಲು ಬಲ್ಲೆಯ ಓಡುತಲೊಬ್ಬನೊರಗಿದ್ದನ ಕಣ್ಣೊಳೊಡದು ಮೂಡಿದÀಗ್ನಿಯಿಂದ ಸುಡುವೆಯ3 ಮಂದ ನೀನೊಬ್ಬನೆ ಮಾಡುವೆಯ ಲೆಕ್ಕವಿಲ್ಲದೆ ಮಕ್ಕಳ ಕೂಡಿದನ ಬಹಳ ಕೋಟಿಧನಂಗಳ ಕೂಡಿರ್ದಗೆ ಕೊಟ್ಟು ನೋಡಿ ಸುಖಿಪೆಯ 4 ದೃಢವಾಗಿ ನಿನ್ನುಂಗುಟ ನಖದಿಂ ದೊಡಲನಾದರು ಒಡೆಯಲಾಪೆಯ ಮೃಡಪ್ರಿಯ ಹಯವದನನಂತೆ ಮೂಢಜಾತಿಯಾಗಿ ವೇದ ಓದುವೆಯ 5
--------------
ವಾದಿರಾಜ
ಆಡುವ ಬನ್ನಿರಿ ಬಾಲಕರೆ ಪ ರೂಢಿಗಚ್ಚರಿಯಾಗಿ ಬಲುಲೀಲೆಗಳಿಂ ಅ.ಪ ಜನನ ಮರಣವÉಂಬ ಚೆಂಡು ಬುಗುರಿಯಿಂ ಮನದ ವೃತ್ತಿಗಳೆಂಬ ಗೋಲಿಗಜ್ಜುಗದಿಂ ಜನಸಂಘವೆಂಬುವ ಚಿಳ್ಳೆಕೋಲುಗಳಿಂ ಅನುದಿನ ಭ್ರಾಂತಿಯೆಂಬ ಕವಣೆ ಕಲ್ಲುಗಳಿಂ 1 ಏಳುತಲೀ ಮುಖ ತೊಳೆದು ನೀವೆಲ್ಲ ಕರ್ಮ ಭಕ್ಷಗಳೆಲ್ಲ ಲೀಲೆಯಿಂ ಮೆಲ್ಲುತಲಿದರೊಳು ಬಲ್ಲ ಶೀಲ ಸದ್ಗುಣವುಳ್ಳ ಬಾಲಕರೆಲ್ಲ 2 ಶ್ರವಣ ಮನನವೆಂಬ ಸಾಧನೆಯಿಂದ ಭವಹರ ಗುರುರಾಮ ವಿಠಲ ಮುಕುಂದ 3
--------------
ಗುರುರಾಮವಿಠಲ
ಆಡುವರೇಚಕ ಪೂರಕ ನಂದಿಯ | ಜೋಡಿಸಿ ಎರಡನು ಮೆರೆವಸುಷಮ್ನಿಯ | ನಾಡಿಯ ರಥಿಕರ ಹೂಡುತ ಮೆಲ್ಲನೆ | ನಿಜಮನ ಸಾರಥಿಯಾ | ಕೂಡಿಸಿ ಹರುಷಲೇರಿ ನಡೆಸುತ ಸ | ವಾಡಿಕಿಯಿಂದಲಿ ಮೇಲ್ಗುರಿಯಾತ್ರೆಯ | ಮಾಡಿ ವಿಲಾಸದಲಾಡಿದ ಮಹಿಪತಿ | ಗುರುಮೂರ್ತಿಗೆ ಶರಣು
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆತನ ಪಾಡುವೆ ಅನವರತಪ್ರೀತಿಯಿಂದ ಭಾಗವತರ ಸಲಹುವ ದೇವನೆಂದು ಪ ಆವಾತನ ಕೀರ್ತಿಯ ಕಳೆ ಪೆರೆಯು..........ಯಿಂದ ಶುಕನಾರ ಪೊಗಳಿದನು ?ಆವಗೆ ಬಲೀಂದ್ರನು ಆರ......................................ವಿದನಯ್ಯಾ ? 1 ಕಲು ತರುಣಿಯ ಮಾಡಿದ ಪಾದವಾರದುಜಲಜ ಸಂಭವನ ಪೆತ್ತವನಾರು ?ಕಲಿಯುಗದ ಜನರಿಗೆ ಆರ ನಾಮವು ಗತಿಇಳೆಯ ಭಾರವನುಳುಹಿದನಾರಯ್ಯ2 ದ್ರುಪದನ ಮಗಳ ಅಭಿಮಾನ ರಕ್ಷಕನಾರುನೃಪ ಧರ್ಮನೆನೆಸಿಕೊಂಡವನಾರು ?ಕೃಪೆಯೊಳು ವಿದುರನ ಮನೆಯಲುಂಡವನಾರುಆಪತ್ಕಾಲದಿ ಗಜೇಂದ್ರನ ಸಲಹಿದರಾರು ? 3 ಅತಿ ಸ್ನೇಹದಿಂದ ಅರ್ಜುನಗೆ ಸಾರಥಿಯಾಗಿರಥವ ನಡೆಸಿದವನಾರು ?ಪೃಥಿವಿಯಲಿ....................................................................................................4
--------------
ಕನಕದಾಸ
ಆತ್ಮಚರಿತ್ರೆ ಆರಿಗಾರಿಲ್ಲ ಆಪತ್ಕಾಲದೊಳಗೆ ಪ ವಾರಿಜಾಕ್ಷನ ನಾಮ ನೆನೆ ಕಂಡ್ಯ ಮನವೆ ಅ ಹಗೆ ಕೈಗೆ ಸಿಲುಕಿದಾಗದೆಸೆಗೆಟ್ಟು ಅಧಿಕ ವ್ಯಾಧಿಯಲಿ ಇರುವಾಗಅಸಮಾನನಾದಾಗ ಅತಿ ಭೀತಿಗೊಂಡಾಗಬಿಸಜನಾಭನ ನಾಮ ನೆನೆಕಂಡ್ಯ ಮನವೆ 1 ಸಾಲದವರೆಳೆವಾಗ ಚಾಡಿ ಮಾತಿಗೆ ಭೂಪಘಳುಘುಳಿಸುತ ಕೋಪವನು ತೋರಿದಾಗಮೇಲು ತಾನರಿಯದಯೆ ನಿಂದೆ ಹೊಂದಿರುವಾಗನೀಲಮೇಘಶ್ಯಾಮನ ನೆನೆಕಂಡ್ಯ ಮನವೆ 2 ಪಂಥದಲಿರುವಾಗ ಪದವಿ ತಪ್ಪಿರುವಾಗದಂತಿಮದವೇರಿ ಬೆನ್ನತ್ತಿದಾಗಕಂತುಪಿತ ಕಾಗಿನೆಲೆಯಾದಿಕೇಶವನ ನಿ-ಶ್ಚಿಂತೆಯಿಂದಲಿ ನೀನು ನೆನೆಕಂಡ್ಯ ಮನವೆ 3
--------------
ಕನಕದಾಸ
ಆತ್ಮನಿವೇದನೆ ಅಚಿಂತ್ಯಾದ್ಭುತ ಮಹಿಮ ಈ ಸಚರಾಚರದೊಳು ಪ್ರಚುರನಾಗಿಹೆ ದೇವಾ ಮುಚುಕುಂದವರದಾ ಪ ಅಚಲಭಕುತಿಯು ನಿನ್ನ ಚರಣದಿ ಕಿಂಚಿತಾದರೂ ಪ್ರಚುರಮಾಡಿಸು ಅತಿಚಂಚಲನು ಬಲು ವಂಚಕನು ನಾ ಅನು- ಚಿತೋಚಿತ ಕರ್ಮವರಿಯೆನೋ ಅ.ಪ ವಿಪಿನವಾಸದಿ ಎನಗೆ ವಿಪರೀತವನು ತೋರಿ ಅಪರಾಧವೆಣಿಸದೆ ಪಾಲಿಸಿದೇ ಕೃಪಣವತ್ಸಲ ನೀನೇ ಕೃಪೆಮಾಡಿ ಸ್ವಪನದಿ ಅಪರಿಮಿತದ ವಿಶ್ವರೂಪವ ನೀ ತೋರ್ದೆ ಅಪರಾಧಿ ನಾನಹುದೋ ಸ್ವಾಮಿ ಅಪವರ್ಗಪ್ರದನು ನೀನು ಸಫಲಗೊಳಿಸಿದೆ ಎನ್ನ ಮನದನು- ತಾಪವನು ಪರಿಹರಿಸಿ ಕಾಯ್ದೆ ನಿನ್ನಡಿದಾವರೆಯ ನಂಬಿದೆನೋ ಶ್ರೀ ಪರಮಹಂಸರಿಂದ ನುಡಿಸಿದ ರಹಸ್ಯಗಳು ಅದುಏನೋ ಶ್ರೀ ಪುರುಷೋತ್ತಮನೆ ನೀನೆನ್ನಭಯಹಸ್ತದಿ ಕರೆದ ಪರಿಯೇನೋ ಅದನೊಂದನರಿಯೆನೊ ಈಪರಿಯ ಕರಚರಣದಲಿ ಚರಿಸಿದ ಅನುಪಮ ಕ್ರಿಯೆಯ ನೋಡಿ ಮನದೊಳು ಸುಪುತಕಾಲದಿ ತೈಜಸನೆ ನೀನೆನ್ನ ಪುಳುಕಾಂಕಿತನ ಮಾಡಿದೇ 1 ಅಮಿತ ಕಾರ್ಯವನೆಸಗೀ ಬಲು ಯಾತನೆಗೊಂಡು ಇಳೆಯೊಳು ಬಾಳೀ ದು- ರ್ಬಲನಾಗಿದ್ದರು ಎನ್ನ ಛಲವು ತೊಲಗಲಿಲ್ಲ ಜಲಜನಾಭನೆ ನೀನೆ ಕರುಣಿಸಿ ಸಲಹದಿರ್ದೊಡೆ ಪ್ರ- ಬಲರೆನ್ನನು ಕವಿದು ಮನಚಂಚಲವ ಪುಟ್ಟಿಸೀ ವಲೀಮುಖನಂತಾಡಿಸುವರೋ ಕಲಿಮಲವನ್ನೆ ಪರಿಹರಿಸುವುದೋ ಮನದಿ ಎಡೆಯು ದುರ್ಲಭವೋ ಒಲುಮೆಯಿಂದಲಿ ಸಾಧಿಸಲು ಎಲ್ಲೆಡೆಯ ಸರ್ವತಂತ್ರ ಸ್ವಾತಂತ್ರ್ಯ ನಿನ್ನದೋ ಭೋ ಜಗತ್ಪತೇ ಕಾಲನಾಮಕ ನೀನೆ ಆಪತ್ಕಾಲಬಾಂಧವವೆಂದು ನಂಬಿದೆ ಜಾಲಮಾಡದೆ ಎನ್ನ ಜೀವಿತದಲ್ಪಕಾಲದಿ ಕರುಣೆ ತೋರೈ2 ತುಷ್ಟನೆಂತಾಗುವೆಯೊ ಭ್ರಷ್ಟಪಾತಕಿ ನಾನು ಕಷ್ಟವಲ್ಲವೋ ನಿನಗೆ ಶ್ರೇಷ್ಟಮೂರುತಿಯೆ ಇಷ್ಟಮೂರುತಿಯೆಂದು ಇಷ್ಟು ನುಡಿದೆನೊ ಸಾಷ್ಟಾಂಗ ನಿನ್ನೊಳು ಇರಲೋ ಇಷ್ಟೇ ಎನ್ನದೊ ದೇವಾ ಕಷ್ಟಕಷ್ಟವೊ ಬೆಟ್ಟದೊಡೆಯ ಕೊಟ್ಟುದಷ್ಟು ನಿನ್ನದಯ್ಯಾ ಇಷ್ಟೆಬೇಡುವೆ ಎನಗೆ ಎ- ಳ್ಳಷ್ಟು ಭಕುತಿಯ ಕೊಡದಿರುವೆಯಾ ಸೃಷ್ಟಿಸ್ಥಿತಿಲಯನಿಯಮನಾದ್ಯಷ್ಟ ಕತೃತ್ವವು ನಿನ್ನದೊ ಅಷ್ಟಾಂಗಯೋಗದಿ ತುಷ್ಟಪಡಿಸೆ ತನುಮನೋಧಿಷ್ಟಾನವು ನಿನ್ನದೊ ಶ್ರೇಷ್ಠಮೂರುತಿ ಸುಲಭದಲಿ ನೀ ದೃಷ್ಟಿಗೋಚರವಾಗುವುದು ಇನ್ನೆಂತೋ ಹಾ ಕಷ್ಟಕಷ್ಟವೋ ಸೃಷ್ಟಿಯೊಳು ನಾನೆಷ್ಟರವ ನಿನ್ನಿಷ್ಟಬಂದಂತಾಗಲಿ ಭವ- ಶ್ರೀ ವೇಂಕಟೇಶ ಉರಗಾದ್ರಿವಾಸವಿಠಲ 3
--------------
ಉರಗಾದ್ರಿವಾಸವಿಠಲದಾಸರು
ಆತ್ಮನಿವೇದನೆ ಆತನೇ ದಾತನು ಯೆತ್ತಿಕೊಡುವವನು ಭೂತದಯೆಯುಳ್ಳಂಥ ಪುಣ್ಯಾತ್ಮನು ಪ ನಿಂದು ಕೀರ್ತಿಯೆ ಪಾಡೆ ದೇಹಿಯನ್ನುತ ಬೇಡೆ ಸಿಂಧು ಜಲದಲಿ ಮಿಂದು ಭಜಿಸಲಾಗ ಬಂಧನವ ಪರಿಹರಿಸಿ ಬಹು ಪ್ರೀತಿಯಿಂದೆನಗೆ ಬಂದಿರುವ ಕಷ್ಟಗಳ ನೀಗುವರು ಯಾರೋ 1 ನಿತ್ತು ಶ್ರೀ ಹರಿಭಜಿಸೆ ಕೂತು ಶ್ರೀ ಹರಿಸ್ಮರಿಸೆ ತಾತನೇ ಗತಿಯೆಂದು ಪಾದದಲಿ ಬೀಳೇ ಹೊತ್ತು ನೋಡದೆ ಮುದದಿ ಭಿನ್ನವೆಣಿಸದೆಯನಗೆ ಯೆತ್ತಿ ಮೋಕ್ಷವ ಬೇಗನೀವ ನಾರೋ 2 ನಾನು ಬಡವನು ಜಗದಿ ದೀನಹೀನನು ಹರಿಯೆ ಏನು ಗತಿಯೆಂದೆನುತ ಚರಣ ಮರೆ ಹೊಕ್ಕೇ ಪಾನ ಮಾಡುತಲೆನ್ನ ಅವಗುಣವ ನೀಗೆನಗೆ ತಾನೆ ಭಿಕ್ಷವು ಬೇಗನೀವ ನಾರೋ 3 ಭಜನೆ ಸ್ತೋತ್ರಗಳರಿಯೆ ಪೂಜೆ ವಿಧಿಯನು ತಿಳಿಯೇ ಅಜನ ಪಿತ ಶ್ರೀಹರಿಯ ಮೆಚ್ಚಿಸಲು ಅರಿಯೇ ಸುಜನರನು ಪೊರೆವಂತೆ ಸಲಹುವನು ಯಾರೋ 4 ನಾನು ಪಾಪಿಯು ಋಣಿಯು ಕ್ಲೇಶವನು ತೊರೆದೀಗ ಇನ್ನು ಮರೆಯದೆ ನಿನ್ನ ದಾಸನಾಗುವೆನು ಚನ್ನಕೇಶವ ಸ್ವಾಮಿ ರಕ್ಷಿಸೆಂದೊದರುತಿರೆ ಪ್ರಾಣವನು ಯತ್ತೆನ್ನ ಸಲಹುವನು ಯಾರೋ 5
--------------
ಕರ್ಕಿ ಕೇಶವದಾಸ
ಆತ್ಮನಿವೇದನೆ ಏನು ಕಾರಣವೆನಗೆ ತಿಳಿಯಲಿಲ್ಲದೀನ ರಕ್ಷಕನಾದ ಹರಿಯೆ ತಾ ಬಲ್ಲ ಪ ಕಾನನದೊಳಗೆ ಕಡುತಪಿಸಿ ತೃಷಿಯಾದವಂಗೆತಾನಾಗೆ ಮೋಡೊಡ್ಡಿ ಮೇಘ ಕವಿದುನಾನು ಧನ್ಯನೆಂದು ನರ್ತಿಸುವ ಸಮಯದಲಿಕಾಣದೇ ಪೋಯಿತು ಬಿಂದು ಮಾತ್ರ 1 ಪಾದ ಭಜನೆಯನ್ನುಹರುಷದಲಿ ಪಾಡಿ ಹಗಲಿರುಳು ಪ್ರಾರ್ಥಿಸುವಂಗೆಪುರುಷಾರ್ಥ ಪೂರೈಸಿ ಬಾರದಿಪ್ಪ ಬಗಿಯು 2 ಅನ್ನಾದಿಯಿಂದ ಅನ್ನಂತ ಜನ್ಮದಿ ಬಂದುಉನ್ನಂತ ಮಾಡಿದ ಪಾಪರಾಶಿ-ಯನ್ನು ಉಣದನಕ ಭೂವನ್ನದೊಳು ಮತ್ತೆ ಪಾ-ವನ್ನರಾ ಪಾದಗಳು ಪಡೆಯಲರಿಯದೊಯೇನೊ 3 ಅನ್ನಾಥ ಬಂಧು ಹರೆಯೆನ್ನುವಾ ಬಿರುದಿಗೆನಿನ್ನಂಥ ಮಹಿಮನಾ ಕರೆದು ವೊಂದೂಎನ್ನಂಥ ಪರಮ ಪಾತಕಿಯನುದ್ಧರಿಸಿತಾ-ಸನ್ನಗೊಳಿಸಿ ಸತತ ಸಲಹದಿಹುದು ಏನು 4 ಅರಸಿನಾಲೋಚನಿಯು ಸತತ ಸನ್ನಿಧಿಯೊಳನು- ಸರಿಸಿದ ಆಳುಗಳು ಬಲ್ಲ ತೆರದಿಸರಸಿಜ ನಯನ ವೆಂಕಟ ವಿಠಲನ ಪಾದಸರಸಿಜದಿ ಸರಸರೊಳು ನಲಿದು ನೀ ಬಾರದಿಹುದು 5
--------------
ವೆಂಕಟೇಶವಿಟ್ಠಲ