ಒಟ್ಟು 7932 ಕಡೆಗಳಲ್ಲಿ , 127 ದಾಸರು , 4530 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಲ್ಲು ನಿಲ್ಲು ಕೃಷ್ಣ ನಿನ್ನ ಸೊಲ್ಲ ಮುರಿಯ ಬಂದೆವು ಸೊಲ್ಲ ಮುರಿಯ ಬಂದೆವು ಈ ಕಳ್ಳತನವ ಸಹಿಸೆವು 1 ದಿಕ್ಕು ರಕ್ಷಿಪರಿಗೆ ದಿಕ್ಕು ಕಾಣದಂತೆ ಇರುವುದು ಸೊಕ್ಕು ಮುರಿದು ನಿಮ್ಮ ಕಾರ್ಯ ಧಿಕ್ಕರಿಸುವೆ ಕ್ಷಣದಲಿ 2 ಈಡುಮಾಡಲೇಕೆ ಇಂಥ ಕೇಡಿಗೆ ಈ ಅಬಲೆಯ ನೋಡಿ ಎಮ್ಮ ಅವಿತುಕೊಂಡ ಹೇಡಿ ಇವನ ಬಿಡುವೆನೆ 3 ಎಂಟು ಜನ ದಿಕ್ಪಾಲಕರು ಸೊಂಟ ಮುರಿವ ರಾಣಿಯ ಶೌರಿ ತಂಟೆಗಾರು ಬರುವರು 4 (ಸತ್ಯಭಾಮೆ ಮತ್ತು ದೇವೇಂದ್ರನ ವನಪಾಲಕರ ಸಂವಾದ)
--------------
ವಿದ್ಯಾಪ್ರಸನ್ನತೀರ್ಥರು
ನಿಲ್ಲು ನಿಲ್ಲೆಲೋ ನಿನ್ನ ಚಲ್ವಮೋರೆಯ ನೋಡಿ ಕಳ್ಳ ನಿನ್ನಯ ಬಿಡೆನೋ ಶ್ರೀ ಕೃಷ್ಣ ಪ ಬೆಣ್ಣೆ ಪಾತ್ರೆಯೊಳೇಕೆ ನಿನ್ನ ಕರವನಿಟ್ಟೆ ಸಣ್ಣತನವಿದಲ್ಲವೇ ನಂದಕುಮಾರ ಅ.ಪ ಕೋಮಲಾಂಗಿಯೇ ಇಂಥ ಸಾಮಾನ್ಯ ವಿಷಯದ ನೀ ಮರೆತುದು ತರವೇ ಯೋಚಿಸಿ ನೋಡು ಈ ಮೃದುವಸ್ತುವು ಕಲ್ಲು ಎದೆಯ ನಿನ್ನ ಧಾಮದಲ್ಲಿರಬಹುದೇ ಯೋಚಿಸಿ ನೋಡು 1 ನಾ ಕರುಣಾಮಯ ಲೋಕ ಸುಂದರನೆಂದು ಏಕೆ ಹೆಮ್ಮೆಯ ತೋರುವೆ ಗೋಕುಲನಾಥ ಆ ಶಕಟನ ಪುಡಿ ಮಾಡಿ ಪಾದಗಳಿಂದ ನೀ ಕೋಮಲನೆಂಬುದ ನಾ ಕಾಣೆನೇ 2 ಕೇಳಿ ಕೋಪಿಸಬೇಡ ಬಾಲನೆನ್ನನು ಎತ್ತಿ ಲಾಲನೆಯನು ಮಾಡಿದಿ ಪ್ರಸನ್ನಳು ಬಾಲೆ ನಿನ್ನಯ ಇಷ್ಟು ಸ್ಥೂಲ ಕುಚವು ತಗಲಿ ಕಾಲು ಕಠಿಣವಾಯಿತೇ ಪೇಳುವೆ ನಿಜ 3
--------------
ವಿದ್ಯಾಪ್ರಸನ್ನತೀರ್ಥರು
ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ ಇಲ್ಲೆ ಬಾರೆ ಗೆಜ್ಜೆ ಘಿಲ್ಲೆನುತÀ ಪ ಕರುಣಸಾಗರ ಹರಿತರುಣಿಯೆ ನೀ ಕೋಟಿ ತರುಣ ಕಿರಣ ರತ್ನಾಭರಣನಿಟ್ಟು ಮಣಿಕೌಂಸ್ತುಭ ವಕ್ಷ ಸ್ಥಳದಲ್ಲಿದ್ದೊ ್ಹಳೆಯುವ ಸುಪರಣವಾಹನಾ ಲಕ್ಷ್ಮಿ ಶರಣು ವಂದಿತಳೆ1 ಪಂಕಜಾಕ್ಷಿ ಪಂಕಜೋದ್ಭವನ ಜನನಿ ಪಂಕಜಮುಖಿ ಪಾಲಿಸೆ ಎನ್ನ ಪಂಕಜನಾಭನ ಅಂಕದಲ್ಲೊಪ್ಪುವ ಪಂಕಜೆ ನಿನ್ನ ಪಾದಪಂಕಜಕೆರಗುವೆ 2 ಮುಗುಳುನಗೆಯ ಮುತ್ತುಗಳು ಜಡಿತ ಕ- ರ್ಣಗಲ ವಾಲೆಯು ಕದಪಿನಲ್ಲೊ ್ಹಳೆಯೆ ಬಗೆ ಬಗೆ ಸರ ಬಂಗಾರವನಿಟ್ಟು ಮೂ- ರ್ಜಗವ ಮೋಹಿಸೊ ಜಗದಾಧಿಪತಿಯ ರಾಣಿ3 ಸಾಗರದೊಳಗ್ಹುಟ್ಟಿ ಆಗ ಶ್ರೀನಾಥನ ಬ್ಯಾಗ ನೋಡಿ ಪರಮೋತ್ಸವದಿ ನಾಗಶಯನ ನಾಗಾರಿವಾಹನನ- ರ್ಧಾಂಗಿ ಎನಿಸಿದಾನಂತ ಮಹಿಮಳೆ 4 ಶೇಷಗಿರಿಯ ಶ್ರೀನಿವಾಸನ ಎದೆಯಲ್ಲ್ಯಾ ವಾಸವಾಗಿರಲ್ಯತಿ ಪ್ರೇಮದಲಿ ಈಶ ನಾರದ ಬ್ರಹ್ಮಾಸುರರೊಡೆಯ ಭೀ- ಮೇಶಕೃಷ್ಣನ ನಿಜ ದಾಸರಿಗ್ವರನೀಹೊ 5
--------------
ಹರಪನಹಳ್ಳಿಭೀಮವ್ವ
ನಿಷ್ಠೆಯಿಂದ ನಿಂತ ಈ ಪುಟ್ಟ ಕಪಿಯ ನೋಡೆ ಪ. ಎಷ್ಟು ಮೌನ ಧರಿಸಿದಂಥ ಪುಟ್ಟ ಕಪಿಯ ನೋಡೆ ಅ.ಪ. ವಾರಿಧಿಯ ದಾಟಿದಂಥ ಪುಟ್ಟ ಕಪಿಯ ನೋಡೆ ಹೀರಿದ ಕುರುಪರ ರಕ್ತ ಪುಟ್ಟ ಕಪಿಯ ನೋಡೆ 1 ತೂರಿದ ಅನ್ಯರ ಮತ ಪುಟ್ಟ ಕಪಿಯ ನೋಡೆ ಸಾರಿ ಹರಿ ಸರ್ವೋತ್ತಮನೆಂದ ಪುಟ್ಟ ಕಪಿಯ ನೋಡೆ2 ಶೌರ್ಯವೆಲ್ಲ ಉಡುಗಿದಂಥ ಪುಟ್ಟ ಕಪಿಯ ನೋಡೆ ಹಾರಿ ಯಂತ್ರದಲ್ಲಿ ಶಿಲ್ಕಿದ ಪುಟ್ಟ ಕಪಿಯ ನೋಡೆ 3 ಮಾನ ಉಳಿಸಿಕೊಳ್ಳಲು ಮೌನದ ಪುಟ್ಟ ಕಪಿಯ ನೋಡೆ ಧ್ಯಾನ ಮುದ್ರಾಂಕಿತದಿ ಶೋಭಿಪ ಪುಟ್ಟ ಕಪಿಯ ನೋಡೆ 4 ಯೋಗಾಸನದಿ ಪದ್ಮಾಸನವು ಪುಟ್ಟ ಕಪಿಯ ನೋಡೆ ವಾಗೀಶನ ಪದಕ್ಹೋಗುವ ತಪದ ಪುಟ್ಟ ಕಪಿಯ ನೋಡೆ 5 ವ್ಯಾಸರಿಗೊಲಿದ ವೇಷಧಾರಕ ಪುಟ್ಟ ಕಪಿಯ ನೋಡೆ ಮೋಸವೊ ಧ್ಯಾನವೊ ಅರಿಯೆ ಪುಟ್ಟ ಕಪಿಯ ನೋಡೆ 6 ಕಷ್ಟದ ಭವಕಟ್ಟು ಬಿಡಿಸುವ ಪುಟ್ಟ ಕಪಿಯ ನೋಡೆ ಕಟ್ಟಿನೊಳ ಸಿಲ್ಕಿ ಗುಟ್ಟು ತಿಳಿಸದ ಪುಟ್ಟ ಕಪಿಯ ನೋಡೆ 7 ಸಿದ್ಧ ಸಾಧನ ಬುದ್ಧಿ ಬಲಿದ ಪುಟ್ಟ ಕಪಿಯ ನೋಡೆ ಉದ್ಧಾರಕ ಪ್ರಸಿದ್ಧ ಪುರುಷ ಪುಟ್ಟ ಕಪಿಯ ನೋಡೆ 8 ಸ್ವಾಪರೋಕ್ಷಿ ಜಗದ್ವ್ಯಾಪಕನಾದ ಪುಟ್ಟ ಕಪಿಯ ನೋಡೆ ಗೋಪಾಲಕೃಷ್ಣವಿಠ್ಠಲನ ದಾಸನೀ ಪುಟ್ಟ ಕಪಿಯ ನೋಡೆ 9
--------------
ಅಂಬಾಬಾಯಿ
ನೀ ಎನ್ನ ಕಾಯಲಿ ಬೇಕೊ - ಘನ್ನ ಮಹಿಮಾ ಪ ಬನ್ನ ಬಡಿಸುವದು ಅನ್ಯಾಯ ನಿನಗಿದಾಪನ್ನಪಾಲ ಅ.ಪ ಘನ್ನ ಮಹಿಮೆಯತೋರಿ - ಎನ್ನ ಕಾಯಲಿ ಬೇಕು ನಿನ್ಹೊರತು ಗತಿ ಎನಗೆ - ಮುನ್ನಾರು ಗುರುವೆ 1 ಎನ್ನ ಮಾತನು ನೀನು - ಚನ್ನಾಗಿ ಚಿತ್ತೈಸಿ ಅನ್ಯಜನರಾಬಾಧೆ - ಮುನ್ನ ಕಳೆಯ ಬೇಕೊ 2 ಘನ್ನ ಶಿರಿ ಕೃಷ್ಣನು ತನ್ನ ಸಖನಿಗೆ ಮಹಾ ಉನ್ನ ತೈಶ್ವರ್ಯವಿತ್ತವ - ನನ್ನ ಕಾಯ್ದ ತೆರದಿ 3 ಇನ್ನು ಪೇಳುವುದೇನೊ ಗುರು - ರನ್ನ ಭವದಾಶ್ರಮವು ಇನ್ನು ತಿಳಿಯದೆ ನಿನಗೆ -ಘನ್ನ ಸರ್ವಙ್ಞರಾಯಾ 4 ಸನ್ನುತಜನಪ್ರೀಯ - ನಿನಗೆ ಮೊರೆಯಿಡುವೆ ಘನ್ನ ಗುರು ಜಗನ್ನಾಥ ವಿಠಲ ದೂತಾ ದಾತಾ 5
--------------
ಗುರುಜಗನ್ನಾಥದಾಸರು
ನೀ ಕರುಣದಿ ಕಾಯಬೇಕೀ ವಾಕು ಪ. ಭವ ಮಡುವಿನೊಳಗಿರುವೆನು ದಡಕೆ ಸೇರಿಸು ನೀನು ಅ.ಪ. ಆರು ಕಾಯುವರಿಲ್ಲಾ ಸೇರಿದೆ ನಿನಗಲ್ಲಾದೆ ಸಂಸಾರ ಶರಧಿಯೊಳು ಈಸಲಾರೆನು ಘಾಸಿಪಡಿಸಲಾಗದು ನೀನು ಆಶಾ ತೋರಿಸಿ ಮೋಸ ಮಾಡುವದು ಇದು ತರವೇ ಗುರುವೇ 1 ಯಂದಿಗೆ ಬರುತೀಯೋ ಸುಂದರ ಮೂರುತಿಯೆ ಪಂಚ ವೃಂದಾವನ ಛಂದಾನೋಳ್ಪರಿಗೆ ಸಂದರುಶನ ಕೊಡು ಇಲ್ಲಿ 2 ಅನಾಥನು ನಾನು ಯನ್ನ ಪೊರೆವ ದಾತನು ನೀನು ಋಜುಗಣಧ್ವರಿಯೇ ಕಾಳಿಮರ್ದನಕೃಷ್ಣನ ಮರಿಯೆ 3
--------------
ಕಳಸದ ಸುಂದರಮ್ಮ
ನೀ ಕೃಪೆ ಮಾಡೋ ಹರಿಯೇ ಲೋಕವಿನುತ ಸಿರಿಯೇ ಪ ಶ್ರೀಕರ ಭಾಸ್ವರಾ ಭಕ್ತಸುಧಾಕರ ಶೋಕಹರಣಾ ನೀ ಶೂರಾ ಅ.ಪ ನಡು ನೀರೋಳೆನ್ನ ಕೈಯ ಬಿಡಬೇಡ ಮಾರನಯ್ಯ ಅಡಿಗೆರಗುವೆನಯ್ಯ ಕೊಡು ನಿನ್ನ ನಾಮಾವಳಿಯ ದೃಢದೆ ಭಜಿಪೆನಯ್ಯ ಮೃಡನುತಾನೇ ಗೋವಿಂದಯ್ಯ 1 ಕಳೆದ ದುರಿತಾವೃತ ಉಳಿದುದು ವೋವರಾ ಅಳಿವ ಕಾಲವಿದಿನ್ನು ಬಳಲಿಸೋಲುವೆ[ನಯ್ಯ] ಘಳಿಲನೆ ನಿನ್ನ ನಾಮಾವಳಿಯ ಸ್ಮರಣೆಯ 2 ಅನ್ಯರ ಭಜಿಸೆನು ಅನ್ಯರ ನುತಿಸೆನು ಅನ್ಯರಿಗೆರಗೆನು ಅನ್ಯರ [ಪೂಜಿ]ಸೆನು [ಅ ನನ್ಯ ಶರಣನೆ ಮನ್ನಿಸೊ ಶರಣುಬಂದಿಹೆನು] 3 ಕಾವಧೀರನು ಇನ್ನು ಅವನೇ ಶ್ರೀಹರಿ ಸೇವಕರಿಗೆ ನಾನು ಸೇವಕನೆನ್ನುತಾ ಭಾವಿಸೋ ದೇವದೇವಾ ಮಾವಿನಾಕೆರೆರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀ ಕೈಯ ಬಿಟ್ಟರಿನ್ಯಾತಕೆನಗೀ ಸುಖ ಗೋಕುಲಗಣನಾಯಕ ಪ ಲೋಕೈಕ ನಾಥನೆಂದಾ ರೈಉಸುರಿದ ಮುನಿಯ ಯಾಕೀ ಪರಿಯೊಳೆನ್ನ ಕಾಕುಮಾಡುವೆರಂಗಾ ನೂಕಿ ನಿಮ್ಮಾಶ್ರಯವ ಮಾಡೈ ಎಂದಿಹ ವ್ಯಾಕುಲಾಂತ ಪರಾತ್ಮ ಸತ್ಯ ಸ ಲೊಕ ಸರ್ವಸಯೇಕ ಭೀಮಾ 1 ಸಮಾಜದೀ ಭೀತಿಯಿಂದ ಮಿತ ದು:ಖವನುಂಡೆ ಸುಮನ ಸತ್ಯ ಸಮಾಜ ಭೌಮನೆ ಅಮರಗುಣ ಕಟಕಾಮಣಿಯೆ ಸ ದ್ವಿಮಲ ಚರಿತ ವಿಶಾಲ ಭೂಪಾ2 ಕಿಂತುಭವದ್ಧರ್ಶನೇನಆಹಂಬೆಲ್ಲ ಕಥಯಾಮಿಕಾಲಾಂತಕೋ ಚಕ್ರಸುಧಾರ ತ್ವರಿತದಿ ಕಂತು ಜನಕನೆ ಪಾಲಿಸೆನ್ನು ಪಂಥವೇತಕೊ ಪರಮಜೀಯಾ 3 ಭ್ರಷ್ಟಸಂಗವ ಬಿಡಿಸಿ ಪಾಲಿಸೊ ವಿ ಶಿಷ್ಟಾದ್ವೈತನೆ ಕೃಷ್ಣನಾಮನೆ ಸೃಷ್ಟಿ ಶ್ರೀಗುರು[ತುಳಸಿ]ಕುಲ ಶ್ರೀರಾಮಾ 4
--------------
ಚನ್ನಪಟ್ಟಣದ ಅಹೋಬಲದಾಸರು
ನೀ ಕೈಯ ಬಿಡಬೇಡವೋ ನರಹರಿ ಪ ನೀ ಕೈಯ ಬಿಡಬೇಡ ನಾಕೆಟ್ಟರೂ ಬೇಡ ನೀ ಕೊಟ್ಟ ಫಲವಿನ್ನು ಸಾಕೋ ಮಾಂಗಿರಿರಂಗ ಅ.ಪ ನನ್ನ ಕಾಯುವ ಭಾಗ ನಿನ್ನದಾಗಿರಲಯ್ಯ ಇನ್ನಾವುದನು ಕೇಳ್ವುದೆನ್ನ ಭಾವದೊಳಿಲ್ಲ ಸನ್ನುತಾಂಗ ಕೃಷ್ಣ ಪನ್ನಗಶಯನ [ಉನ್ನತದಿ ಸದಾ ಭಜಿಸುವೆನು ನಿನ್ನ] 1 ಆಡುವಾ ನುಡಿಗಳು ನೋಡುವಾ ನೋಟವು ಮಾಡುವ ಕಾರ್ಯವು ನಿನ್ನದಾಗಿರಲು ಮೂಡಿಸು ಮನದಲ್ಲಿ ತವಪಾದಭಕ್ತಿಯ ಜೋಡಿಸಿ ಕೈಗಳ ಮುಗಿವೆನೋ ರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀ ಪಾಲಿಸದಿರಲು ನಾ ಪೋಗುವುದು ಎತ್ತ ನೀ ಪೇಳೊ ಪರಮ ಪುರುಷಾ ಅಗಣಿತ ನಾಮ ಸುರ ಪ್ರೇಮ ಸ್ವರ್ಣ ಗಿರಿವಾಸ ನರಕೇಶ ಭೂಷಾ ಪ ಉದರ ಚಿಂತಿಯಲಿ ಉದಯದಲಿ ಯೆದ್ದು ಅವರಿವರ ಸದನದಲ್ಲಿಗೆ ಹೋಗದೆ ಮೃದು ವಾಕ್ಯವಾಡದಲೆ ಮದ ಗರ್ವ ಬಲದಿಂದ ಎದುರಾದವರ ಜರಿದೆ ಮನಸಿನ ಕ್ಲೇಶದ ಪರಸುದತಿಯರನೀಕ್ಷಿಸಿ ವಿದಿತ ಕರ್ಮಗಳ ತೊರೆದೆ ಒದಗಿ ಬಂದ ಪುಣ್ಯ ಬರಿಗೈದು ಪಾಪದ ಹುದಲೊಳಗೆ ಬಿದ್ದು ಸಂಪದವಿಗೆ ದೂರದವನಾ1 ಉತ್ತಮರ ನಿಂದಿಸಿದೆ ಉಚಿತಾರ್ಥ ತಿಳಿಯದಲೆ ಹೆತ್ತವರನ್ನ ಜರಿದೆ ಹತ್ತೆಗರೆದು ಪರಿಪಾಲಿಸಿದ ದಾತರನು ಹೊತ್ತಾಕೆ ಪ್ರೀತಿ ಪೇಳುವೆ ಮತ್ತೆ ಧರ್ಮವೆಯಿಲ್ಲಾ ಮಹಾಕೃಪಣನಾಗಿ ಪರ ವಿತ್ತಾಶೆ ಪೋಗಿ ಮುಳವೆ ಚಿತ್ತಪಲ್ಲಟವಾಗಿ ವಿಷವೆಂಬ ಹಾವಿನ ಹುತ್ತಿನೊಳು ಬಿದ್ದು ಪುನಿತನಾಗದವನಾ 2 ಗುರು ನಿಂದಕರ ನೋಡಿ ಸರವಾಗಿ ಪೋಗಳುವೆನೊ ವೇದ ಸಮ್ಮತವೆ ಬಿಟ್ಟು ಮರೆವೆ ನಿನ್ನಯ ಸ್ಮರಣೆ ಗತಿಗೆ ಸಾಧನವೆಂದು ಅರಿದರಿದು ಬುದ್ಧಿಗೆಟ್ಟು ಹರಿವಾಸರದುಪವಾಸ ಮಾಡುವ ಜನರಿಗೆ ಮುರಳಾಡಿ ಮುಟ್ಟಿಯಲಿಟ್ಟು ಜಾಗರ ತೊರೆದು ಹಿರಿ ಪಾಮರನಾಗಿ ಹರಣ ಸ್ಥಿರವೆಂದು ಮದುಕರಿಯಂತೆ ತಿರುಗುವೆ ನಾ3 ಕಾಸಿಗೆ ಕಾಸು ಘರ್ತಿಸಿ ಗಳಿಸಿ ಬಿಡದೆ ಮೀಸಲಾ ಪದಾರ್ಥವೆಂಬೆ ದೋಷಕ್ಕೆ ಗುರಿಯಾಗಿ ದುರ್ಜನರ ಒಡಗೂಡಿ ರಾಸಿ ದುರನ್ನ ಉಂಬೆ ಆಶೆಯನು ತೊರಿಯದಲೆ ಉಪರಾಗ ಪರ್ವದಲಿ ಕಾಸು ದಾನವನು ಕೊಂಬೆ ಲೇಸಾದರೆ ಹಿಗ್ಗಿ ಹಾರೈಸುವೆನು ಇಷ್ಟು ಕ್ಲೇಶ ಬಂದರೆ ದೈವವೆಂದು ದೂಷಿಸುವೆನಾ4 ಒಂದೇ ಎರಡೇ ಎನ್ನ ಅಪರಾಧ ಪೇಳಿದರೆ ಎಂದೆಗೆಂದಿಗೆ ಸವಿಯದು ನೊಂದು ದುಶ್ಚಿತ್ತದಲಿ ನೀನೆ ಗತಿ ಎಂದು ಬಾಗಿಲ ಕಾಯಿದುದು ಬಂದು ಮಾತುರದಲ್ಲಿ ಬಲು ದಯಾಳು ಎನ್ನ ಸಂದೇಹವನು ತೊಡೆದು ಮುಂದಾದರೂ ಭವದ ಅಂಧ ಕೂಪದೊಳಿಡದೆ ಪೊಂದಿಸುವ ನಿನ್ನವರೊಳಗೆ ವಿಜಯವಿಠ್ಠಲ ಎನಗೆ 5
--------------
ವಿಜಯದಾಸ
ನೀ ಬಾರದಿರೆ ಬಾರನು ಶ್ರೀ ನರಹರಿ ಪ ನೀ ಬಾರದಿರೆ ಬಾರ ನೀರಜಾಕ್ಷನು ಹರಿನಾನು ನಂಬಿದೆ ನಿಮ್ಮ ನೀವು ಪಾಲಿಸಬೇಕು ಅ.ಪ. ನೀನು ಆತನ ಕಾಯ್ದಿ ತಾನು ಆತನ ಕಾಯ್ದನೀನು ಬಿಡಲು ಬಿಟ್ಟ ಭಾನುಸುತನ ಕೃಷ್ಣ 1 ನಿಮ್ಮ ಮಾತುಗಳನ್ನು ಒಮ್ಮೆ ಮೀರನು ಹರಿನಮ್ಮ ಬಿಡುವುದ್ಯಾಕೊ ಬ್ರಹ್ಮ ಪದಾರ್ಹನೆ 2 ಇಂದು ನಾಳೆನ್ನದೆ ಆನಂದತೀರ್ಥರೆ ನಮ-ಗಿಂದು ತೋರಿಸು ಹರಿಯ ಇಂದಿರೇಶನ ಪ್ರೀಯ 3
--------------
ಇಂದಿರೇಶರು
ನೀ ಬಿಟ್ಟ ಬಳಿಕೆನ್ನ ಸಾಧ್ಯವೇನಿಹ್ಯದು ನೀ ಕರುಣಗೈದರೆ ಸಕಲ ಸಾಧ್ಯ್ಹರಿಯೆ ಪ ಯಂತ್ರವಾಹನೆ ಯಂತ್ರ ನಡೆಸದೆಯಿರಲು ಯಂತ್ರ ನಡೆಯುವುದೆಂತು ಸ್ವಂತ ತಾನೇ ಮಂತ್ರಗಾರಿಲ್ಲದೆ ತಂತ್ರ ತೋರ್ವುದೆ ಸ್ವ ತಂತ್ರ ನೀನಲ್ಲದೆ ಅತಂತ್ರನಿಂದೇನಹುದು 1 ಪಡೆದ ಮಾತೆಯು ಕೂಸಿನೊಡಲು ತಾ ನೋಡದಿರೆ ಒಡಲೊಳಿಟ್ಟ್ಹದಿನಾಲ್ಕುಪೊಡವಿಗಳನಾಳುವ ಒಡೆಯ ಕೊಡದಿರೆ ಕೀರ್ತಿ ಪಡೆಯುವುದೆ ಜೀವಿ 2 ನಿನ್ನಿಂದೆ ಬೆಳಗುವುದು ನಿನ್ನಿಂದೆ ಮುಳುಗುವುದು ನಿನ್ನಿಂದಳಿಯುವುದು ನಿನ್ನಿಂದಲುಳಿಯುವುದು ನಿನ್ನಿಬಿಟ್ಟಿನ್ನಿಲ್ಲ ಎನ್ನಯ್ಯ ಶ್ರೀರಾಮ ಮನ್ನಿಸಿ ಕೃಪೆಮಾಡು ಎನ್ನ ನೀ ಬಿಡದೆ3
--------------
ರಾಮದಾಸರು
ನೀಚಕೃತ್ಯದ ಮನಸೇ ನಿನಗೆ ತುಸು ನಾಚಿಕಿಲ್ಲಲೆ ಹೊಲಸೆ ಪ ಪ್ರಾಚೀನಹಿರಿಯರ ಯೋಚಿಸಿನೋಡದೆ ನೀಚತನದ ಆಲೋಚನೆಯೊಳು ಬಿದ್ದು ಅ.ಪ ಕುಂತಿಸುತನ ರಥವ ನಡೆಸಿದನು ಅ ತ್ಯಂತ ಕೃಪೆಯಿಂದ ಹರಿಯು ಕಂತುಜನಕ ಭಕ್ತ ಚಿಂತಾಯಕನೆಂದು ಅಂತರಂಗದಿ ಭಜಿಸಿ ಸಂತಸ ಪಡುವಲ್ಲಿ 1 ಅಂಬರೀಷನೆಂಬುವ ನೃಪಗೆ ಮುನಿ ಡೊಂಬೆಯಿಂಬ (?) ಶಾಪಿಸಲು ಅಂಬುಜಾಸನ ಬಂದು ಬೆಂಬಲಿಸಿ ನೃಪನನ್ನು ಇಂಬಿಟ್ಟು ಪೊರೆದದ್ದು ನಂಬಿ ಭಜಿಸವಲ್ಲಿ 2 ಭೂಮಿಪ ಬಲಿಚಕ್ರನ ಬಾಗಿಲ ಕಾಯ್ದ ಪ್ರೇಮದಿಂ ರಮೆಯರಸನು ಪ್ರೇಮದಿಂ ಭಕುತರ ಕಾಮಿತವೀಯಲು ಕಾಮಧೇನೀತನೆಂದು ನೇಮದಿಂದರವಲ್ಲಿ 3 ಗೌತಮ ಮುನಿಸತಿಯು ಪಾಷಾಣವಾಗಿ ಕ್ಷಿತಿಮೇಲೆ ಎರಗಿರಲು ಕ್ಷಿತಿಜಾತೆಪತಿ ತಾನು ಅತಿಹಿತದ ಕೃಪೆಯಿಂದ ಪತಿತಗೈದವನೆಂದು ಸ್ತುತಿಸಿ ಒಲಿಸವಲ್ಲಿ 4 ಹನುಮಂತನೊಡೆಯನಾದ ಜನಕಜೆಪತಿ ವನಜಾಕ್ಷ ಶ್ರೀರಾಮನ ಘನತರಮಹಿಮೆಯ ಅನುದಿನಕೊಂಡಾಡು ಘನಮುಕ್ತಿ ಸಾಮ್ರಾಜ್ಯ ಕನಿಕರದಿಂ ಕೊಡುವ 5
--------------
ರಾಮದಾಸರು
ನೀಡುತಲಿ ಕೃಪೆ ಮಾಡೊ ಸಿರಿವರನೆ ಪ ಹೇಡಿ ಜನ್ಮದೊಳಿಡದೆ ರಕ್ಷಿಸೊ ಅ.ಪ ನ್ನಿಷ್ಟ ಪಾಲಿಸೋ ಲಕ್ಷ್ಮಿಯೊಲ್ಲಭ 1 ನಾಗಶಯನ ಯೆನ್ನಾಗಮನವ ಬಲ್ಲೆ | ಸರ್ವಾತ್ಮ ಶಾಸ್ತ್ರ ನಿ- ಬಿಗಿದು ಪಿಡಿದೆನು ನಿನ್ನ ಪಾದವ 2 ಭವ ಕರುಣಾಸಾಗರ ಗುರು ಸದಾನಂದ3
--------------
ಸದಾನಂದರು
ನೀನಲ್ಲದಲೆ ಇನ್ನು ನಾನಾರ ಕೂಗಲೊ ಮಾನನಿಧಿ ಗೋಪಾಲ ಶ್ರೀನಿಧಿಯೇ ಪ. ಶ್ರೀನಿವಾಸನೆ ಎನ್ನ ನಾನಾ ಪರಿಯ ಕಷ್ಟ ನೀನೆ ಬಿಡಿಸಿ ಸಲಹೊ ಮಾನಾಭಿಮಾನದೊಡೆಯ ಅ.ಪ. ಕಡುಕೋಪದಿಂ ಖಳನು ಹುಡುಗನ ಬಾಧಿಸೆ ದೃಢ ಭಕ್ತಿಯಿಂದ ನಿನ್ನಡಿಯ ಭಜಿಸೆ ಕೆಡಹಿ ಅಸುರನ ಕೊಂದು ಒಡನೆ ಭಕ್ತನ ಕಾಯ್ದೆ 1 ತೊಡೆಯನೇರಲು ಬರೆ ಜಡಿದು ನೂಕಲು ತಾಯಿ ಒಡನೆ ಮನದಿ ನೊಂದು ಪೊಡಮಡುತ ಅಡವಿ ಅಡವಿ ತಿರುಗಿ ದೃಢದಿ ಭಜಿಸೆ ಧ್ರುವ ಒಡನೆ ಓಡಿ ಬಂದು ದೃಢಪಟ್ಟ ಕೊಡಲಿಲ್ಲೆ 2 ಕರಿ ಕರೆಯೆ ತಡೆಯದೆ ಸಲಹಿದ ಪೊಡವೀಶ ನೀನಲ್ಲೆ ಕಡುಕರುಣಿ ಬಡವಗೆ ಸಿರಿಯಿತ್ತೆ ಮಡದಿಗಕ್ಷಯವಿತ್ತೆ ಕಡುದ್ರೋಹಿಗಳ ಕೊಲಿಸಿ ಒಡನೆ ಐವರ ಕಾಯ್ದೆ3 ಚಿನುಮಯ ಗುಣಪೂರ್ಣ ಅಣು ಮಹತ್ ಅಂತರಾತ್ಮ ಎಣಿಸಲಾಹೊದೆ ನಿನ್ನ ಘನ ಮಹಿಮೆ ಮನಸಿಜಪಿತ ಸರ್ವ ಮನನಿಯಾಮಕ ಹರಿ ಮನದಲ್ಲಿ ನೀ ನಿಲ್ಲೊ 4 ಶ್ರೀಪದ್ಮಭವನುತ ನಾ ಪಾಮರಾಳಿಹೆ ಗೋಪಾಲಕೃಷ್ಣವಿಠಲ ಶ್ರೀಪತಿಯೆ ನೀ ಪಾರು ಮಾಡದೆ ಕಾಪಾಡುವವರ್ಯಾರೊ ತಾಪ ಬಿಡಿಸಿ ಸಲಹೋ5
--------------
ಅಂಬಾಬಾಯಿ