ಒಟ್ಟು 563 ಕಡೆಗಳಲ್ಲಿ , 78 ದಾಸರು , 484 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆ ನಾನಿನ್ನ ಚರಣವನಂಬಿಗ ಅಂಬೆಗಳ ಸುತನೆ ಕೋ ಬ್ಯಾಗಂಬಿಗ ಪ ಇಂಬಾಗಿ ದಡ ಸೇರಿಸೆನ್ನನೇನಂಬಿಗ ತುಂಬಿ ನದಿ ಸೂಸುತಲಿದೆ ನೋಡಂಬಿಗ ಅ.ಪ. ಕರ್ಮವೆಂಬ ಪ್ರವಾಹವ ನೀ ನೋಡಂಬಿಗ ಚರ್ಮದಿಂದೇಳು ಹೊದ್ದಿಕಿ ಅಂಬಿಗ ಮರ್ಮ ಒಂಭತ್ತು ರಂಧ್ರ ಉಂಟಂಬಿಗ ಶರ್ಮವಿದಕೆ ಕಾಯದ್ಹರಿಗೋಲಂಬಿಗ 1 ಆಳ ಬಹಳ ಗೊತ್ತಾಗದಂಬಿಗ ಶೆಳವು ಘನ ಉಳ್ಳುಹುದು ನೋಡಂಬಿಗ ಸುಳಿಗಾಳಿಗೆ ಸಿಗಿಸದಿರೊ ಅಂಬಿಗ ಬಳಸಿ ಕೊಂಡೊಯ್ಯೋದು ಒಳ್ಳೇದೆ ಅಂಬಿಗ 2 ಸಂಚಿತಾಪ್ತಿ ಇವರೊಳುಂಟಂಬಿಗ ಭಾರ ಜಡಿಯೋದು ನೀ ನೋಡಂಬಿಗ ವಂಚಕ ಮಾತು ರಾಗವು ಹೆಚ್ಚಂಬಿಗ ಚಂಚಲಗೊಂಡು ಭ್ರಮಿಸೋದು ಕಾಣಂಬಿಗ 3 ಆಶಾಜಲ ಮೇಲೆ ಮೇಲೆ ಬರುವುದಂಬಿಗ ಮೋಸ ಮಾಡುವುದೇನೊ ಕೊನೆಗೆ ಅಂಬಿಗ ಪೊಸ ಪೊಸ ಕಾಮತೆರೆ ತುಂಬಾಯಿತಂಬಿಗ ಲೇಶವಾದರು ಬತ್ತದು ನೋಡಂಬಿಗ4 ಅಷ್ಟ ಆನೇ ಒಳಗಿಟ್ಟುಕೊಂಡಿಹುದಂಬಿಗ ಹುಟ್ಟು ಹಾಕೋದು ಬಿಟ್ಟು ಜಲ್ಲೆ ಕೊಳ್ಳಂಬಿಗ ಬೆಟ್ಟ ಆರಕ್ಕೆ ಸಿಕ್ಕಿಸದೆ ನೋಡಂಬಿಗ ನೆಟ್ಟ ನಡುವಿನ ಪಥದಿ ಒಯ್ಯೋ ಅಂಬಿಗ 5 ಸುತ್ತ ಕಾರ್ಮುಗಿಲು ಬಂತಲ್ಲೊ ಅಂಬಿಗ ಹತ್ತು ಹನಿಗಳು ಬಿತ್ತು ನೋಡಂಬಿಗ ಎತ್ತಿ ನಡೆಸೋದು ಶಕ್ತಿ ನಿನ್ನದು ಕಾಣಂಬಿಗ ಹತ್ತಿಸೊ ಭಕ್ತಿದಡಕಿನ್ನಂಬಿಗ 6 ಮರಕಟಿ ಸೇರಿಹದಿದರೊಳಗಂಬಿಗ ಕರೆಕರೆಗೆ ಗುರಿ ಮಾಡೊದಿದೆ ಅಂಬಿಗ ಸರಿಯಾಗಿ ನಡೆಸೊ ಇನ್ನಾದರಂಬಿಗ ವರದವಿಜಯ ರಾಮಚಂದ್ರವಿಠಲ ನೀನಂಬಿಗ 7
--------------
ವಿಜಯ ರಾಮಚಂದ್ರವಿಠಲ
ನಂಬಿದ್ಯಾ ಮನವೇ ನಂಬಿದ್ಯಾ ಪ ನಂಬಿದ್ಯ ಮನವೆ ಕೊಂಡಾಡಿದ್ಯ ಆನಂದ ತೀರ್ಥರ ಮತವೆಸತ್ಯವೆಂದು ಅ.ಪ ಇಂದಿರೆ ರಮಣನೆ ಪರದೈವವೆಂದು ಬಂಧನಾದಿ ಅಷ್ಟಕರ್ತೃತ್ವ ಆತನದೆಂದು ಕುಂದುಕೊರತೆಗಳಿಲ್ಲದ ಸರ್ವೇಶ ಶಾಶ್ವತನೆಂದು ನಂದ ಕಂದನು ಸಾನಂದ ಗುಣ ಪೂರ್ಣ ಸ್ವರತನೆಂದು 1 ನಾರಾಯಣನೆ ಸರ್ವೋತ್ತುಮನು ಎಂದು ಸಿರಿ ಅಜಶಿವರೆಲ್ಲ ಹರಿಯಕಿಂಕರರೆಂದು ಮುರವೈರಿ ಅಂತಃ ಬಹಿರ್ವ್ಯಾಪ್ತನು ಎಂದು ಶಾರಂಗ ಪಾಣಿಯೆ ಸರ್ವಾಂತರ್ಯಾಮಿಯೆಂದು 2 ಸಾಕಾರಸರ್ವೇಶ ನಿರ್ವಿಕಾರ ನೆಂದು ಓಂಕಾರ ವಾಚ್ಯನೆ ಸರ್ವಾಧಾರ ಸರ್ವಗನೆಂದು ಅಕಾರಾದಿ ಸರ್ವವರ್ಣಸ್ವರ ಶಬ್ದ ವಾಚ್ಯನುಎಂದು ಅಜ ಅಪ್ರಮೇಯನೆಂದೂ3 ವೇದಗೋಚರ ತಾವೇದಾತೀತನೆಂದು ವಿಧಿಸಿರಿ ವಂದಿತ ಸಾಕಲ್ಯದಿ ಅವಾಚ್ಯನೆಂದು ಮಧುಸೂಧನನು ಚಿನ್ಮಯ ವಪುಷನೆಂದು ಭೇದವಿಲ್ಲದ ರೂಪ ಗುಣಕ್ರಿಯ ಅವಯವನೆಂದು4 ನಾಶರಹಿತ ಕೇಶವನೊಬ್ಬ ಆರ್ತಿವರ್ಜಿತ ನೆಂದು ಕ್ಲೇಶರಹಿತ ವಾಸುದೇವನು ವಿಧಿನಿಷೇಧ ವರ್ಜಿತನೆಂದು ವಿಶ್ವೇಶ ಸರ್ವತಂತ್ರ ಸ್ವತಂತ್ರನು ಸಾರ್ವಭೌಮನು ಎಂದೂ ವಾಸುಕಿ ಶಯನನು ಲೀಲೆ ಗೋಸುಗ ವಿಹಾರಮಾಳ್ಪಾನೆಂದು5 ಪುರುಷ ಸೂಕ್ತ ಪ್ರತಿಪಾದ್ಯ ಅಪ್ರಾಕೃತನೆಂದು ವರಗಾಯತ್ರ್ಯಾದಿ ಸರ್ವಮಂತ್ರ ಪ್ರತಿಪಾದ್ಯನೆಂದು ಅಪವರ್ಗ ಗತಿದಾಯಕನೆಂದೂ ಪಾದ ಭಜನೆಯೆ ಸಾರವೆಂದೂ 6 ವಿರಂಚಿ ಜನಕನೆ ಸರ್ವತ್ರ ಸರ್ವರಲಿದ್ದು ಸರ್ವಕಾರ್ಯ ಕಾರ್ಯಗಳನು ಮಾಡಿ ಮಾಡಿಸುವನೆಂದು ಸರ್ವಜೀವರಿಗೆ ಕರ್ಮಗಳುಣಿಸಿ ತಾ ನಿರ್ಲೇಪನೆಂದೂ ಖರಾರಿರೂಪಗಳೆಲ್ಲ ಅನಾದಿ ಶುಕ್ಲಶೋಣಿತವರ್ಜಿತವೆಂದು7 ಲಕ್ಷ್ಮಿರಮಣನು ಪಕ್ಷಪಾತ ರಹಿತನೆಂದು ಪಕ್ಷಿವಾಹನನು ಕ್ಷರಾಕ್ಷರ ವಿಲಕ್ಷಣನೆಂದು ಲಕ್ಷ್ಮಣಾಗ್ರಜನು ಕುಕ್ಷಿಯೊಳಗೆ ಬ್ರಹ್ಮಾಂಡ ರಕ್ಷಿಪನೆಂದು ಇಕ್ಷು ಚಾಪನ ಪಿತನಚಿಂತಾದ್ಭುತನೆಂದು 8 ಹಂಸಾದಿ ಹದಿನೆಂಟು ರೂಪಗಳ ಧರಿಸಿ ಹೊರಗೆ ವ್ಯಾಪಿಸಿ ಕಂಸಾರಿಸಕಲವ ನಡಿಸೀನಡಿಸುತ ಸುಖದುಃಖಗಳ ಲೇಶಯೋಗ್ಯತೆ ಮೀರಗೊಡದಲೆ ಉಣಿಸುವನೆಂದು 9 ಪತಿತ ಪಾವನ ಪರಾವರೇಶ ತ್ರಿಗುಣವರ್ಜಿತನೆಂದು ಸತತ ಸ್ವಪ್ನ ಸುಷಪ್ತಿ ಜಾಗ್ರತೆ ಮೋಕ್ಷಾ ವಸ್ಥೆಗಳಲಿ ವಿಶ್ವ ತ್ವೆಜಸ ಪ್ರಾಜ್ಞ ತುರ್ಯರೂಪಾದಿಂದ ಮತಿ ಪ್ರೇರಕನಾಗಿ ಕಾದುಕೊಂಡು ಪೊರೆಯುವ ನೆಂದು10 ಸತ್ಯವತಿ ಸುತನು ಸತ್ಯ ಸಂಕಲ್ಪನೆಂದು ಆತನೆ ನಿತ್ಯಾನಿತ್ಯ ಜಗದೀಶನಂತರ್ಯಾಮೀಯೆಂದು ಮುಕ್ತಾ ಮುಕ್ತರ ನಾಥ ಮುಖ್ಯ ಬಿಂಬನು ಚತುರಾನನಾದಿಗಳಿಗೆಲ್ಲಾ ಎಂದು11 ಅನಿಲ ಜೀವೋತ್ತಮ ಹರಿಯ ಪ್ರಥಮಾಂಗ ಅಪರೋಕ್ಷ ಪ್ರಭುವು ಅಣು ಮಹದ್ಘನ ರೂಪ ಚರಿತ ಭಾರತೀಶ ವಾಣೀ ಪತಿಯ ಪದಾರ್ಹ ವಾತದೇವನು ಎಂದು 12 ಹನುಮ ಭೀಮ ಮಧ್ವ ಮೂರಾವತಾರದ ದೇವ ಅನುಪಮ ಬಲನಿಸ್ಸೀಮ ಪುರುಷತೇಜ ತೃಣ ಮೊದಲಾದ ಸರ್ವಜೀವರಲ್ಲಿದ್ದು ಅವರ ಹರಿಯಾಜ್ಞೆಯಂತೀವನೆಂದೂ 13 ದ್ವಾತ್ರಿಂಶಲ್ಲಕ್ಷಣ ಸಂಪನ್ನ ಗುರು ಮಧ್ವನೆಂದು ಆತನೇಲೋಕಕ್ಕೆಲ್ಲ ಗುರವು ಎಂದು ಈತ ಸಕಲಪೇಳಿದ ಮಾತಿಗೆ ಸರಿಯಿಲ್ಲವು ಎಂದು ಪ್ರೀತಿಯಿಂದಲಿ ಭಜಿಪ ಭಕ್ತಗೇನೆ ಮುಕ್ತಿಯೆಂದು 14 ಹರಿಯ ಮತವೆ ಹನುಮನ ಮತವು ಎಂದು ಸಿರಿ, ವಿರಂಚಿ ಪವನ ವಾಣಿ ಭಾರತೀಯರಲ್ಲಿ ಗರುಡ ಶೇಷ ಶಿವ ಶಕ್ರಾದಿಸರ್ವರೊಳಗೆ ತಾರತಮ್ಯ ಪಂಚ ಭೇದವು ಸತ್ಯವೆಂದು 15 ಭಾರತಿ ಪತಿಯದ್ವಾರವೆ ಹರಿಯು ಸ್ವೀಕರಿಪ ನೆಂದು ಮುರಾರಿಯ ಒಲುಮೆಗೆ ಜ್ಞಾನಯುತಭಕ್ತಿಯೆ ಸಾಧನವೆಂದು ಧರೆಯೊಳಗೆ ಹರಿನಾಮ ಸ್ಮರಣೆಗೆ ಸರಿಯಿಲ್ಲವು ಎಂದು ಮಾರಮಣನ ಅನುಗ್ರಹವೆ ಮೋಕ್ಷದಾಯಕ ವೆಂದು 16 ಅರಿಷಡ್ವರ್ಗಗಳಳಿಯುವುದೆ ವೈರಾಗ್ಯ ಮಾರ್ಗವೆಂದು ಗುರುವಿನ ಕರುಣವೆ ಜ್ಞಾನಕ್ಕೆ ಕಾರಣವೆಂದು ಸಾರಮಾರ್ಗಕ್ಕೆ ಸಾಧುಗಳ ಸಂಗವೆ ಮುಖ್ಯವೆಂದು ನೀರಜಾಕ್ಷಗೆ ಸರಿ ಮಿಗಿಲು ಇಲ್ಲವೆಂದು 17 ಜೀವ ಈಶಗೆ ಭೇದ ಈಶ ಜಡಕೆ ಭೇದ ವೆಂದು ಜೀವ ಜೀವಕೆ ಭೇದ ಜಡ ಜಡಕೆ ಭೇದವೆಂದು ಪರಿ ಪಂಚ ಭೇದವೆಂದು ಸಾವಧಾನದಿ ತಿಳಿದು ಜಗತ್ಸತ್ಯವೆಂದು ಧೃಡದಿ 18 ಸುರರೊಳುನರರೊಳು ಅಸುರರೊಳು ಎಲ್ಲೆಲ್ಲು ತಾರತಮ್ಯವು ಅನಾದಿಯಿಂದಲಿ ಇರುತಿಹುದೆಂದು ಸ್ವರೂಪಾನಂದಾವಿರ್ಭಾವವೆ ಮುಕ್ತಿಯೆಂದು ಅರವಿಂದನಾಭಗೆ ಸರ್ವರು ಸದಾದಾಸರೆಂದು 19 ಧನಕನಕ ವನಿತಾದಿಗಳೆಲ್ಲ ಹರಿಗೆ ಅರ್ಪಿತ ವೆಂದು ಏನೇನು ಮಾಡುವುದೆಲ್ಲ ಶ್ರೀ ಕೃಷ್ಣನ ಸೇವೆಯೆಂದು ದೀನ ಜನ ಮಂದಾರನಾಧೀನ ಸುಖದುಃಖಾಗಳೆಂದು ಏನು ಬೇಡದೆ ಹರಿಯ ಸತತನೆನೆವೋದೆ ಸಾಧನ ವೆಂದು20 ನಾಕೇಶ ಜಯತೀರ್ಥ ವಾಯ್ವೂಂತರ್ಗತನಾದ ಶ್ರೀಕೃಷ್ಣ ವಿಠಲಾನೆ ಮಮಸ್ವಾಮಿ ಸರ್ವಸ್ವವೆಂದು ಸಕಲ ಕರ್ಮಗಳರ್ಪಿಸುತ ತ್ರಿಕರಣ ಶುದ್ಧಿಯಿಂದಲಿ ಮಾಕಳತ್ರನ ಸತತ ಭಜಿಸುತ್ತಿರಬೇಕು ಎಂದು 21
--------------
ಕೃಷ್ಣವಿಠಲದಾಸರು
ನಮಿಸುವೆನು ನಮಿಸುವೆನು | ವಿಜಯದಾಸರಿಗೇ ಪ ಅಮಮ ಮಹಿಮೆಗಳ್ನಿಮ್ಮ | ವರ್ಣಿಸಲು ಅಳವೇ ಅ.ಪ. ಕವಚ ವಿಜಯವ ಪಠಿಸಿ | ಅವನಿಯೊಳು ಸಜ್ಜನರುಬವಣೆಗಳ ಕಳಕೊಂಡು | ಸುಖದಿಂದ ಜೀವಿಪರೋ |ಅವರನುಗ್ರಹದಿಂದ | ಭವಣೆ ಎನೆ ಮದ್ಭಯವುಸವೆದು ಪೋಗುತ ಗ್ರಂಥ | ಮುದ್ರಣವ ಮುಂಬರಿಸಿದೆ 1 ಹಯಾಸ್ಯ ನಂಘ್ರಿಯಲಿಕಾರ್ಯಮುಂಬರಿಸಿರುವ | ಮಹ ಕಾರುಣ್ಯ ಮೂರ್ತೇ 2 ಹರಿಗುರು ಗೋವಿಂದ | ವಿಠಲ ಚರಣಬ್ಜವನುಪರಿಪರಿಯಲಿಂದತುತಿಸಿ | ಮರಳಿ ಕಾಂಬುವ ಸುಹವನಾವರ ವಿಜಯ ದಾಸಾರ್ಯಾ | ಕರುಣಿಸೆನೆ ಬಿನ್ನಪವಕರಗತವ ಮಾಡುವುದು | ಉರುಕರುಣ ಸಂಪನ್ನಾ 3
--------------
ಗುರುಗೋವಿಂದವಿಠಲರು
ನಮೋ ನಮೋ ಶ್ರೀ ಮಧ್ವಾಚಾರ್ಯ ಆರ್ಯಾ ಪ ಭೃಗು ಕುಲೋತ್ತಮ ರಾಮ ಭೂಸುರರಿಗೆ ಸರ್ವ ಜಗವೆಲ್ಲ ಧಾರಿಯನು ಯೆರದು ಸಂಹ್ಯಾ ನಗದಲ್ಲಿ ನಿಂದು ಸಮುದ್ರನ್ನ ಹಿಂದಕ್ಕೆ ತೆಗಿಸಿ ಈ ಭೂಮಿಯನು ಸಾಧಿಸಿದನು1 ಮೂರ್ತಿ ಅಲ್ಲಿಗಲ್ಲಿಗೆ ಕ್ಷೇತ್ರ ಗತಿ ತಪ್ಪಿದಂತೆ ನಿರ್ಮಾಣ ಮಾಡಿ ಸತಿಪತಿಯ ಉದ್ಧರಿಸಿ ಬರುತ ಕಂಡನು ಉ ನ್ನತವಾದ ಪರ್ವತವು ಯೋಜನವಿರೆ 2 ಬೆರಗಾಗಿ ಪರಶುರಾಮನು ಬಂದು ಈ ಗಿರಿಯಲ್ಲಿ ನಿಂದು ಅಗ್ರಭಾಗವೈದೆ ತರಹರಿಸಲಾರದೇ ಭೂಮಿಗಿಳಿಯಿತು ಅದ್ರಿ ನಿರೀಕ್ಷಿಸಿ ಸುಜನರು ಇದ್ದನಿತು3 ಸಿರಿರೂಪ ದುರ್ಗಾನಾಮಕಳಾದ ದೇವಿಯನು ಕರದು ಈ ಸ್ಥಾನದಲಿ ಇರ ಹೇಳಿದಾ ಅರವು ಮಾಡದೆ ಮುಂದೆ ಕಲಿಯುಗದಲಿ ನೆರದು ದುರುಳರಾತಿಯರ ಸಂಹರಿಸುಯೆಂದು 4 ಅನಿತರೊಳಾಕಾಶದಲಿ ಜಯ ಜಯವೆಂದು ಅನಿಮಿಷರು ಕೊಂಡಾಡಿ ನಗುತ ದಿವ್ಯ ಮಣಿಮಯ ವಿಮಾನದಿಂದಾ ಗಿರಿಗೆ ವೇಗದಿ ಸು ಮ್ಮನರಾಗಿ ಬಂದು ತುತಿಸಿದರು ಹರಿಯಾ 5 ಅಂದಿನಾರಭ್ಯವಾಗಿ ಇದೇ ವಿಮಾನಗಿರಿ ಯೆಂದು ಕರೆಸಿತು ಶ್ರುತಿ ಯುಕ್ತಿಯಲ್ಲಿ ಎಂದೆಂದಿಗೆ ಇದನೆ ನೋಡಿದವರಿಗೆ ದೋಷ ಗಂಧವಾದರು ಇಲ್ಲಾ ಇಲ್ಲ ಇಲ್ಲಾ6 ಈ ಮಹಿಮೆಯನು ಕೇಳಿ ಧರ್ಮ ತಪವನು ಮಾಡಿ ಸೋಮಾರ್ಕ ಪ್ರಭಯಂತೆ ಕೀರ್ತಿಯನು ಪಸರಿಸಿ ಪಾಮರರ ಉದ್ಧರಿಸಬೇಕು ಯೆಂದು7 ಪರಿ ಶ್ರೀಹರಿಯ ಧ್ಯಾನವನು ಮಾಡಲು ಶ್ರೀಪತಿ ವರವಿತ್ತ ಮುಂದೆ ಮಹ ಪಾಪಿ ಪುಟ್ಟುವನು ಅವನಗೋಸುಗ ವಾಯು ತಾ ಪರಮ ಪ್ರೀತಿಯಲಿ ಜನಿಸುವನು 8 ಅಂದ ಮಾತಿಗೆ ಯಮನು ಬಹುಕಾಲದಲಿದ್ದ ಛಂದದಿಂದದಿ ಪೋದ ತನ್ನ ಪುರಕೆ ಇಂದಿರಾಪತಿ ನೇಮಿಸಿದ ಪರಿಯಂತೆ ಆ ನಂದತೀರ್ಥರಾಗಿ ಜನಿಸಿದರು 9 ಏನು ಪೇಳಲಿ ಪುಣ್ಯ ಚರಿತಯನು ಚನ್ನಾಗಿ ಜ್ಞಾನದಲಿ ಅಧಿಕಾರಾಗಿ ಇಷ್ಟಾನಿಷ್ಟ ಪುಣ್ಯ ಮಾನದಲಿ ಕೊಂಡಾಡಿ ಸುಖಿಪರಲ್ಲಿ10 ಹುರಳಿ ಗುಗ್ಗರಿ ಮೆದ್ದ ಅದ್ಧುತವ ಕೇಳಿದರೆ ಉರಳಿ ಹೋಗುವದು ಜನ್ಮಾಂತರದ ದುಷ್ಕರ್ಮ ಮರಳಿ ಬಲಿ ಬಾಲವನು ಪಿಡಿದದು ನೆನಸಿದರೆ ಸುರರು ಮುಕ್ತಿಯಿನಿತ್ತು 11 ಧರಣಿಧರದಿಂದ ಧುಮುಕಿದ ಪಾದಯುಗ ನೋಡೆ ಎರಡೊಂದು ಏಳು ಕುಲತೃಪ್ತರಹರೊ ಅರೆ ಮ್ಯಾಲೆ ಸಾಲವನು ತಿದ್ದಿದಾ ವಾರ್ತಿ ಕೇಳಿ ಎರಡೊಂದು ಋಣದಿಂದ ಕಡೆಗಾಗುವ 12 ತಲೆಕೆಳಕಾಗಿ ಬೆಳೆದಾ ವೃಕ್ಷವನು ನೋಡಿ ಬಲಿವನು ಸುರದ್ರುಮದಂತೆ ರಂಗ ಛಲದಿಂದ ಸರ್ಪನ ವರಸಿದ ಸ್ಥಳ ಕಾಣೆ ಬಲು ವಿಷಗಳು ಪೋಗಿ ನಿರ್ಮಲಹರೋ 13 ಧೂಳಿ ಅಕ್ಷರ ಬರೆದ ಪ್ರದೇಶ ನೋಡಲು ವಾಲಯಾ ಶುಭವಿದ್ಯ ಫಲಿಸುವದು ಲೀಲೆಯಿಂದ ಗ್ರಂಥ ಅಭ್ಯಾಸಕೆ ಪೋಗಿ ಬರುವ ಶೀಲತೆಯು ಕೇಳೆ ಮನೋ ವಾಯುವೇಗ 14 ಬುತ್ತಿಯ ಉಂಡ ಸ್ಥಳವನ್ನು ಕೊಂಡಾಡಲು ತೃಪ್ತನಾಗುವ ಮನುಜ ಮೃಷ್ಟಾನ್ನದಿ ನಿತ್ಯ ಬಾಲಕ್ರೀಡೆ ಆಡಿದ್ದು ಪಾಡಲು ಪುತ್ರೋತ್ಸವಗಳಿಂದ ಬಾಳುತಿಪ್ಪ15 ಚಾಪ ಗದ ಪದುಮ ಎರಡೊಂದು ತೀರ್ಥಗಳು ಇರುತಿಪ್ಪ ವಾಸುದೇವನೆಂಬೊ ನಾಮಾ ಸರೋವರದಲಿ ಮಿಂದು ಸ್ತೋತ್ರ ಮಾಡಿದ ನರಗೆ ವಿರಜೆಯಲಿ ಸ್ನಾನ ಸಂದೇಹವಿಲ್ಲ 16 ಜನಿಸಿ ಮೊದಲು ಮಹಾ ಬದರಿಗೆ ಪೋದಾರಭ್ಯ ಎಣಿಕೆ ಇಲ್ಲದೆ ಚರಿತೆ ಅನುದಿನದಲಿ ಗುಣಿಸಿ ಗುಣದಲಿ ತಿಳಿದು ಕೀರ್ತನೆಯನೆಸಗಿದಾ ಮನುಜರಿಗೆ ಸತ್ಕೀರ್ತಿ ಬರುವುದಯ್ಯಾ 17 ಮಧ್ವ ಮಧ್ವ ಎಂಬೋ ನಾಮವನು ನುಡಿದರೆ ಬದ್ಧವಾಗಿದ್ದ ಭವಾಬ್ಧಿಯಿಂದ ಎದ್ದು ಕಡಿಗೆ ಬಿದ್ದು ಸಂಚಿತಾಗಾಮಿಯಿಂದ ಗೆದ್ದು ಚರ್ಮ ದೇಹದಿಂದ ನಲಿವ 18 ಶ್ರೀ ಪೂರ್ಣಬೋಧ ಗುರುಶೇಖರ ಸುಗುಣಧಾಮ ಆಪನ್ನ ಪರಿಪಾಲ ಅಮೃತಫಲದ ವ್ಯಾಪುತ ನಾನಾ ಸ್ಥಾನ ಹನುಮ ಭೀಮ ಸರ್ವ ರೂಪಾತ್ಮಕ ಪ್ರಾಣ ಭಾರತೀಶ19 ಕೇಳಿ ಹರುಷಿತನಾಗಿ ಬಂದ ವೈಭವದಂತೆ ಕಾಲ ಹಿಂಗಳಿಯದೇ ನಿತ್ಯದಲ್ಲಿ ಲೀಲೆಯಲಿ ವಾಸವಾಗಿರಲೆಂದು ಅಂದು ಪೇಳಲಾ ಮೌಳಿಯನು ತೂಗಿ ಸರ್ವರು ನಿಂತರು20 ಪುಂಜಕಾಸ್ಥಳ ಬಂದು ತಪವು ಮಾಡಲು ಕ್ಷೇತ್ರ ರಂಜನವಾಯಿತು ಇದೇ ನಾಮದಲ್ಲಿ ಕುಂಜರ ವರದ ನಮ್ಮ ವಿಜಯವಿಠ್ಠಲನಂಘ್ರಿ ಕಂಜವನು ಭಜಿತ ಗುರುರಾಜ ಜಯತು 21
--------------
ವಿಜಯದಾಸ
ನವನೀತ ಜೋರನ ಅವನ ಕಂಡರದೇಳಿ ಹವಣಿಸಿ ಹಿಡಿದುಕೊಂಬಾ ಧ್ರುವ ನಾಕು ಬೀದಿಯೊಳಗೆ ಸಾಕು ಸಾಕು ಮಾಡಿದ ಸೋಂಕದೆ ಕೈಯ್ಯಗೊಡಾ ಬೇಕೆಂದಾರುಮಂದಿಗೆ 1 ಹದಿನೆಂಟು ಸಂಧಿಯೂಳು ಶೋಧಿಸಿನೋಡಿದರೆ ಮದನ ಮೋಹನ ನೋಡಿ 2 ತಾನೆ ಸಿಕ್ಕುವ್ಹಾಗೊಂದು ಮನಗೂಡಬೇಕು ತಂದು ದೀನ ಮಹಿಪತಿ ಸ್ವಾಮಿ ಅನಕಾ ದೋರತಾ ಬಂದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಾ ಧನ್ಯ ನಾ ಧನ್ಯ ನಾ ಧನ್ಯನಿಂದು ಪ ಹೇ ದಯಾನಿಧೇ ನಿನ್ನ ಪಾದಾನುಗ್ರಹದಿಂದ ಅ.ಪ. ಏತರವ ನಾನೆಂದುದಾಸೀನ ಮಾಡದೆಲೆ ಲೇಸು ಮಮತೆಯ ಕೋರಿ ಈ ಸ್ಥಳಕೆ ಬಂದಿ ಆಸುರೀ ಭಾವವನು ನಾಶಗೊಳಿಸಿ ಎನ್ನ ನೀ ಸಲಹಿದೆಯೋ ಜಗದೀಶ ನಿರುಪಮ ಕರುಣಿ 1 ಸತ್ವಗುಣ ಪ್ರಚುರರಲಿ ನೀ ತೋರುವುದಕ್ಕಿಂತ ಅತ್ಯಧಿಕ ವಾತ್ಸಲ್ಯವೆನ್ನೊಳಗೆ ತೋರ್ಪೆ ಕರ್ತೃ ನೀನೆಂಬ ತತ್ವ ಮನಸಿಗೆ ತಂದೆ ಭಕ್ತವಾತ್ಸಲ್ಯಕ್ಕಿದು ಕುರುಹಲ್ಲವೇ ದೇವ 2 ಸುರಲೋಕಕ್ಕಿಂತಧಿಕ ಪದವಿ ಎನಗಿತ್ತೆ ನಿರುತಲೆನ್ನಯ ಬೆನ್ನು ಕಾಯುತಲಿರುವೆ ಕರುಣಿಗೆಣೆಗಾಣೆ ಕರಿಗಿರೀಶನೇ ನಿನ್ನ ಸ್ಮರಣೆಯನನವರತ ಇರುವಂತೆ ಕೃಪೆಮಾಡೋ 3
--------------
ವರಾವಾಣಿರಾಮರಾಯದಾಸರು
ನಾಗಶಯನನು ನಿನಗಾಗಿಯೆ ಬಂದಿಹೆÉ ಬಾಗಿಲ ತೆಗೆಯೆ ಭಾಮೆ ನೀ ಬಾಗಿಲ ತೆಗೆಯೆ ಭಾಮೆ ಪ. ಕೂಗುವ ನೀನ್ಯಾರೊ ಈಗ ಹೊತ್ತಲ್ಲ ಕೂಗಬೇಡ ಪೋಗೋ ನೀ ಕೂಗಬೇಡ ಪೋಗೋಅ.ಪ. ನಿಗಮ ಚೋರನ ಗೆದ್ದ ನೀರಜಾಕ್ಷನೆ ಭಾಮೆ ನಾ ನೀರಜಾಕ್ಷನೆ ಭಾಮೆ ನಾರುವ ಮೈಯನ್ನು ಎನ್ನಲ್ಲಿ ತೋರದೆ ಸಾರು ಸಾರು ನೀ ದೂರ ರಂಗ ಸಾರು ಸಾರು ನೀ ದೂರ 1 ಮಂದರ ಗಿರಿಯನು ಬೆನ್ನಲಿ ಪೊತ್ತ ಇಂದಿರೆಯರಸನೆ ಭಾಮೆ ನಾ- ನಿಂದಿರೆಯರಸನೆ ಭಾಮೆ ಇಂದು ನಿನಗೆ ತಕ್ಕ ಭಾರಗಳಿಲ್ಲವು ಸಿಂಧುವಿನೊಳು ನೀ ಪೋಗೈ ಕೃಷ್ಣ ಸಿಂಧುವಿನೊಳು ನೀ ಪೋಗೈ 2 ಧರಣಿಗೆ ಸುಖವನು ತೋರಿದ ಸೂಕರ ಪರಮಪುರುಷನೆ ಭಾಮೆ ನಾ ಪರಮ ಪುರುಷನೆ ಭಾಮೆ ವರಾಹರೂಪದ ನಿನ್ನ ಗುರುಗುರು ಶಬ್ದವ ಅರಿವಳಲ್ಲವೊ ನೀ ಪೋಗೈ ರಂಗ ಅರಿವಳಲ್ಲವೊ ನೀ ಪೋಗೈ 3 ಬಾಲನ ತಾಪವ ಕೋಪದಿ ತರಿದ ನಾರಸಿಂಹನೆ ಭಾಮೆ ನಾ ನಾರÀಸಿಂಹನೆ ಭಾಮೆ ಜ್ವಾಲೆಯ ವದನ ಕ್ರೂರ ಕಾರ್ಯಂಗಳ ಕೇಳಿ ಅಂಜುವಳಲ್ಲ ಪೋಗೈ ರಂಗ ಕೇಳಿ ಅಂಜುವಳಲ್ಲ ಪೋಗೈ 4 ವಾಸವನನುಜನೆ ವಾಮನರೂಪನೆ ನಾಶರಹಿತನೆ ಭಾಮೆ ನಾ ನಾಶರಹಿತನೆ ಭಾಮೆ ಕೂಸಿನ ರೂಪದಿ ಮೋಸವ ಮಾಡಿದಗೆ ದಾಸಿ[ಯೊ]ಬ್ಬಳು ಬೇಕೇ ರಂಗ ದಾಸಿ[ಯೊ]ಬ್ಬಳು ಬೇಕೇ 5 ತಾತನ ಮಾತಿಗೆ ತಾಯಿಯನಳಿದ ಖ್ಯಾತ ಭಾರ್ಗವನೆ ಭಾಮೆ ನಾ ಖ್ಯಾತ ಭಾರ್ಗವನೆ ಭಾಮೆ ಮಾತೆಯನಳಿದ ಘಾತಕ ನಿನಗೆ ದೂತಿಯೊಬ್ಬಳು ಬೇಕೇ ರಂಗ ದೂತಿಯೊಬ್ಬಳು ಬೇಕೇ 6 ದಶರಥನಂದನ ದಶಮುಖಭಂಜನ ಪಶುಪತಿವಂದ್ಯನೆ ಭಾಮೆ ನಾ ಪಶುಪತಿ ವಂದ್ಯನೆ ಭಾಮೆ ಹಸನಾದ ಏಕಪತ್ನೀವ್ರತದವಗೆ ಸುದತಿಯೊಬ್ಬಳು ಬೇಕೇ ರಂಗ ಸುದತಿಯೊಬ್ಬಳು ಬೇಕೇ 7 ಹದಿನಾರು ಸಾಸಿರ ನೂರೆಂಟು ಸುದತೇರ ಬದಿಯಲಿಟ್ಟವನೆ ಭಾಮೆ ನಾ ಬದಿಯಲಿಟ್ಟವನೆ ಭಾಮೆ ಹದನಕ್ಕೆ ಬಾರದ ಮಾರ್ಗಂಗಳ್ಯಾತಕ್ಕೆ ವದನ ಮುಚ್ಚಿಕೊಂಡು ಪೋಗೈ 8 ಬೌದ್ಧರಕುಲದಲ್ಲಿ ಹುಟ್ಟಿ ಅವರಂತೆ ಮುಗ್ಧರ ಮಾಡಿದೆ ಭಾಮೆ ನಾ ಮುಗ್ಧರ ಮಾಡಿದೆ ಭಾಮೆ ಶುದ್ಧಗುಣಗಳೆಲ್ಲ ಇದ್ದಲ್ಲಿಗೆಪೇಳೆ ವೃದ್ಧಳು ನಾನಲ್ಲ ಪೋಗೈ ರಂಗ ವೃದ್ಧಳು ನಾನಲ್ಲ ಪೋಗೈ 9 ವರ ತುರಗವನೇರಿ ಧರೆಯೆಲ್ಲ ಚರಿಸಿದ ದೊರೆವರ ನಾನೆ ಭಾಮೆ ಚರಿಸಿದ ದೊರೆವರ ನಾನೆ ತÀುರಗದ ಚಾಕರಿಯೊ[ಳಗಿರುವವನಿಗೆ] ತರುಣಿಯ ಭೋಗವು ಬೇಕೇ ರಂಗ ತರುಣಿಯ ಭೋಗವು ಬೇಕೇ 10 ಸರುವ ಪ್ರಾಣಿಗಳ ಉದರದೊಳಿಂಬಿಟ್ಟು ಶರಧಿಯೊಳ್ಮಲಗಿದವ ಭಾಮೆ ನಾ ಶರಧಿಯೊಳ್ಮಲಗಿದವ ಭಾಮೆ ದೊರೆ ಹಯವದನ ಚರಣಕ್ಕೆರಗುತ ತೆರೆದಳು ಬಾಗಿಲ ಭಾಮೆ ಆಗ ತೆರೆದಳು ಬಾಗಿಲ ಭಾಮೆ 11
--------------
ವಾದಿರಾಜ
ನಾಥಾ ನಮಿಪೆ ನಿನಗೇ | ಶ್ರೀ ಬದರೀನಾಥಾ ನಮಿಪೆ ನಮಿಪೆ ನಿನಗೆ ಪ ನಾಥಾ ಜಗಕೆ ಸರ್ವಾ | ನಾಥ ಜನರ ಪಾಲಭೀತಿ ರಹಿತ ಬದರಿ | ನಾಥ ವಿಚಿತ್ರ ಶಕ್ತಾ ಅ.ಪ. ಸರ್ವ ಪ್ರಾಭವ ಶಕುತೀ | ರಕ್ಷಣ ಲಯಸರ್ವ ವಿಚಿತ್ರ ಶಕುತೀ ||ಪರ್ವ ಪರ್ವಗಳಲ್ಲಿ | ಸರ್ವಾಸ್ಥಿ ಮಜ್ಜದಲಿಸರ್ವ ದೇಹದಿ ನಿಂತು | ಸರ್ವ ಕಾರ್ಯವ ಮಾಳ್ಪೇ ||ದ್ರುತ :- ಪರ್ವತ ಸುತೆ ಪ್ರಿಯ | ಶರ್ವನೊಡೆಯಪವಮಾನನಾದಿ ಸುರ | ಸರ್ವವಂದ್ಯ ಹರಿಉರ್ವಿಲಧಿಕ ಮ | ತ್ತೋರ್ವರ ಕಾಣೆನೊದುರ್ವಿಭಾವ್ಯ ಸಮ | ಸರ್ವೋತ್ತಮನೆ 1 ಏಕಮೇವನೆ ತಪವ | ಆಚರಿಸುತ್ತಲೋಕರಕ್ಷಕ ಕಾರ್ಯಮ ||ಅನೇಕಾ | ವಿಚಿತ್ರರೂಪ | ಸಾಕಾರಿ ಪ್ರಭು ನಿ-ರ್ವಿಕಾರಿಯಾಗಿ ಆ | ನೇಕಾ ಬಗೇಲಿ ಮಾಳ್ಪೆದ್ರುತ :ನಾಕ ಜಪಿತಭುವ | ನೈಕಾರಾಧ್ಯನೆಏಕ ಗುಣದಲಿ | ಏಕದೇಶ ರಮೆಲೋಕೇಶಾದಿ ಪಿ | ನಾಕಿಗಳ್ಬಲ್ಲರೆಪ್ರಾಗ್ದೇವತೆ ಹರ | ಸಾಕುವುದೆಮ್ಮ 2 ಚಿತ್ಸುಖಮಯ ವಪುಷ | ಧೇನುಕ ಮತ್ತೆವತ್ಸಾರಿ ಗೋಪ ಹರುಷ ||ವತ್ಸರದವಗುಣ | ಕುತ್ಸಿತ ಜನ ಹರಮತ್ಸ್ಯಾದಿರೂಪ ಶಿರಿ | ವತ್ಸ ಲಾಂಛನನೇ ||ದ್ರುತ :ಮತ್ಸ್ಯ ಧ್ವಜಪ ಪುರು | ಕುತ್ಸ ಭೋಜಪ ಗೋವತ್ಸ ಧ್ವನಿಗೆ ಬಹ | ಉತ್ಸಹ ಉಳ್ಳನೆಚಿತ್ಸುಖ ಪ್ರದ ಶರ | ಣ್ವೋತ್ಸಲ ಗುರು ಗೋ-ವಿಂದ ವಿಠಲ | ಮಾಂ ಪಾಹಿ ಪಾಹೀ 3
--------------
ಗುರುಗೋವಿಂದವಿಠಲರು
ನಾನ್ಯಾರೋ | ಶ್ರೀಹರಿ ಪೇಳೋ ನಾನ್ಯಾರೋ ಪ ನಾನ್ಯಾರೆಂಬುದ ಪೇಳಿ ನೀನ್ಯಾರೆಂಬುದ ತಿಳುಹಿ ಸಾನುರಾಗದಿ ಪೊರೆವ ಪ್ರಭು ನೀನೆ ಬೇರಿಲ್ಲಅ.ಪ. ಎಲ್ಲಿಂದ ಬಂದೆ ನಾನಿಲ್ಲಿಗೆ ಮುಂದೆಲ್ಲಿಗೆ ಪಯಣ ಕೊಂಡೊಯ್ಯುವುದೇನೆಂಬುದರಿಯೆ1 ಜನನಗೊಂಡು ಮಾನುಷ ದೇಹ ತಳೆದನಾ ನೆನಗೆ ಹಿತವಹ ಕಾರ್ಯವನೇನನೆಸಗಿದೆ 2 ದೇಹವೆ ಮನಸೆ ಬುದ್ಧಿಯೇ ನಾನೆಂಬುದನಾರೆಂದರಿಯೆ ನೇಹದಿಂದಿರುವಂತರಾತ್ಮ ತೊಲಗಲು ಮುಂದೀ ದೇಹವು ಕಸಕಿಂತ ಕಡೆಯೆನಿಪುದ ಬಲ್ಲೆ 3 ಕರ್ಮಿ ಜೀವನು ನೀ ಸಾಕ್ಷಿ ನಿರ್ಲಿಪ್ತನು 4 ಏನರಿಯದಲ್ಪನ ಕೈಬಿಡದಿರು ನೀನೆ ಗತಿ ರಘುರಾಮವಿಠಲ ತಂದೆ 5
--------------
ರಘುರಾಮವಿಠಲದಾಸರು
ನಾರಾಯಣ ಉದಿಸುವನೆಂದು ಆ ಪೂರ್ವಾಂತರ್ಯಾಮಿ ಅವರ ಸಲಹಲು ಸರ್ವದಾ ಅಪೂರ್ವ ತೇಜೋವಂತನಾಗಿ ಅವರ ಹೃದಯದಿ ಸೂರ್ಯತೇಜದಿ ಮೆರೆಯುತಿರುವ ಸರ್ವದಾ ಎಂದು ಅಪೂರ್ವ ಜ್ಞಾನದಿ ನೆನಯುತಿರಿ ಹರಿಭಕ್ತರು 1 ಎದ್ದು ಮುಖ ತೊಳೆದು ನಿಮ್ಮಲ್ಲಿದ್ದ ಕಲ್ಮಷ ತೊಳೆದು ನಿಮ್ಮ ಶುದ್ಧ ಮನದಲಿ ನೆನೆದು ನಿಲಿಸಿ ಹರಿ ಧ್ಯಾನದಿ ಸ್ನಾನಾನ್ಹೀಕಬದ್ಧಕಂಕಣರಾಗಿ ಬ್ರಾಹ್ಮೀಮುಹೂರ್ತದಲಿ ಗೈಯೆ ನಿಮ್ಮಲ್ಲಿದ್ದ ಕಲ್ಮಶವೆಲ್ಲ ಕಳೆದತಿ ಹರ್ಷವೀವ ನಿಮ್ಮ ಶುದ್ಧಾಚರಣೆಗೆ ಮೆಚ್ಚಿ ನಿಮ್ಮ ಭಕ್ತಿಗೆ ನಿತ್ಯ ಬದ್ಧ ಕಂಕಣರಾಗಿ ಸ್ತುತಿಸೆ ನಿತ್ಯ ಹರಿ ಭಕ್ತರು 2 ಮಾಧ್ಯಾನ್ಹಿಕಾದಿಗಳಾಚರಿಸುತ ಹರಿಯ ಮಧ್ಯವರ್ತಿಯನೆನಿಸಿ ಆ ಸೂರ್ಯನಂತರ್ಯಾಮಿ ನಾರಾಯಣನಿ- - ಗಘ್ರ್ಯಪಾದ್ಯವನಿತ್ತು ಸುಭೋಜನವ ಮಾಡಿ ನಿಮ್ಮ ಪೂರ್ವಜರನುಗ್ರಹದಿ ಮಜ್ಜನ್ಮಸಾರ್ಥಕವೆಂದಾವನರಿವನೋ ಅವನ ಹೃದಯ ಮಧ್ಯವರ್ತಿಯಾಗಿದ್ದು ಕಾವ ಸದ್ಗುಣೋಪೇತ ಭಕ್ತರ ಕೈ ಬಿಡ ಮಧ್ವಾಂತರ್ಗತ ಶ್ರೀ ಶ್ರೀನಿವಾಸ ಅವನ ಮನದಿ ನೆನೆಯಿರಿ ಹರಿ ಭಕ್ತರು 3 ಜವÀನ ಬಾಧೆಯು ಇಲ್ಲ ಹರಿ ಭಕ್ತರಿಗೆ ಯವನ ರೂಪದ ಕಲ್ಕಿ ಹರಿಯ ನೆನೆವರಿಗೆ ಜವದಿ ಯಮನಾಳ್ಗಳು ಮುಟ್ಟಲಂಜುವರು ಹರಿಭಕ್ತರನು ಕವಿ ನಾರಾಯಣನ ಧ್ಯಾನಿಪರಿಗೆ ಅವನಿಯೊಳು ಭಯವಿಲ್ಲ ಅವರಿಗೆ ಸಮನಿಲ್ಲ ಅವರಲ್ಲಿ ಹರಿಯಿದ್ದ ಕಾರಣದಿ ಜವದಿ ಹರಿ ದಾಸರೆಲ್ಲ ಶ್ರೀ ಶ್ರೀನಿವಾಸನ ಭಕ್ತರ ಸಂಗದೊಳಿರಿ ಹರಿಭಕ್ತರು 4 ಯಾರ ಭಯವಿಲ್ಲ ಹರಿ ನಾಮಕೆ ದಾರಿ ಹೋಕರು ಬಾರರಿದಕೆ ಭಾರವಿಲ್ಲವು ಮನಕೆ ಸಂಸಾರಭಯವಿಲ್ಲವರಿಗೆ ಹರಿ ಎಂಬುದನೆ ಸಕಲ ಕಾರ್ಯವ ನಿರ್ವಹಿಸುವನೆಂದರಿತವರಿಗೆ ಯುಕುತಿ ಬುದ್ಧಿಯು ಯಾತಕೆ ಯಾರ ಭಯವೇಕೆ ಹರಿಸಖರಾಗಿರಲವರಿಗೆ ಅಂಜಿಕೆಯಾಕೆ ಯಾರನಾಶ್ರಯಿಸುವ ಶ್ರಮವಿಲ್ಲ ಇದನರಿತು ಹರಿಭಕ್ತರು ಶಕುನ ಅಪಶಕುನವೆನ್ನರು ಮನದಿ ಯುಕುತಿಯ ಮಾಡರು ಪರರ ಬೇಡೆ ಶ್ರೀ ಶ್ರೀನಿವಾಸ ಭಕ್ತರು ಅವರ ಮತ ಹಿಡಿದು ಬದುಕಿ ಹರಿಭಕ್ತರು 5 ಜತೆ ಕರುಣಾಕರ ಹರಿಭಕ್ತರಭಿಮಾನಿ ವರದಭಯ ಹಸ್ತವ ಕೊಡುವ ಶ್ರೀ ಶ್ರೀನಿವಾಸ
--------------
ಸರಸ್ವತಿ ಬಾಯಿ
ನಾರಾಯಣ ನಿಮ್ಮ ನಾಮ ನಾಲಿಗೆಲಿರಲಿ ನಾರಾಯಣ ಘೋರಪಾತಕವೆಲ್ಲ ಹಾರಿ ಹೋಗುವುದಯ್ಯ ನಾರಾಯಣ 1 ಸಾರ್ಯವಾಗುವುದು ಶ್ರೀಹರಿಯ ಪುರ ಅವರಿಗೆ ನಾರಾಯಣ ಮಾರಜನಕನÀ ಮೊದಲೆ ಮರೆಯದಿರೊ ಮನವೆ ನಾರಾಯಣ 2 ಎಷ್ಟೆಷ್ಟು ದುರಿತಗಳು ನಷ್ಟವಾಗಿ ಹೋಗುವುವು ನಾರಾಯಣ ಎಷ್ಟು ನಾಮವ ಬಿಡದೆ ನೆನೆಕಂಡ್ಯ ಮನವೆ ನಾರಾಯಣ 3 ಅಂತ್ಯಜಸ್ತ್ರೀ ಕೂಡಿ ಭ್ರಾಂತನಾಗ್ಯಜಮಿಳನು ನಾರಾಯಣ ಕಂತುನಯ್ಯನ ಮರೆತು ಕಾಲವನು ಕಳೆಯಲು ನಾರಾಯಣ 4 ಅಂತ್ಯಕಾಲಕೆ ಹರಿಯ ಸ್ಮರಣೆ ಜಿಹ್ವೆಗೆ ಬರಲು ನಾರಾಯಣ ಲಕ್ಷ್ಮೀ- ಕಾಂತ ಕರುಣಿಸಿ ಅವಗೆ ಕರೆದÀು ಮುಕ್ತಿಯ ಕೊಟ್ಟ ನಾರಾಯಣ5 ಲಕ್ಕುಮೀರಮಣನೆ ಸಕಲಗುಣಪರಿಪೂರ್ಣ ನಾರಾಯಣ ಮುಖ್ಯ ನೀ ಎನ ಮನದಿ ಹೊಕ್ಕರ್ಹೊಗಳುವೆನಯ್ಯ ನಾರಾಯಣ 6 ಘೋರ ವೇದವ ಕದ್ದು ನೀರೊಳಗಡಗಲು ನಾರಾಯಣ ಭೇದಿಸವನಕೊಂದು ವೇದವನು ತಂದಿಟ್ಟ ನಾರಾಯಣ 7 ಶ್ರುತಿಯ ಸುತಗೆ ಕೊಟ್ಟಿ ಸ್ತುತ್ಯನಾಗಜನಿಂದ ನಾರಾಯಣ ಮಚ್ಛರೂಪವ ಧರಿಸಿದಚ್ಯುತಗೆ ಶರಣೆಂಬೆ ನಾರಾಯಣ 8 ದೇವದೈತ್ಯರು ಕೂಡಿ ಸಾಗರವ ಕಡೆಯಲು ನಾರಾಯಣ ವಾಸುಕಿ ಸುತ್ತೆ ನಾರಾಯಣ 9 ಆಗ ಸುರರಸುರರಿಬ್ಭಾಗವಾಗಿ ನಿಂತು ನಾರಾಯಣ ಭಾಳ ತುಚ್ಛದಿ ಬಲಬಿಟ್ಟು ಬಾಯಿಂದೆಳೆಯೆ ನಾರಾಯಣ 10 ವಾಸುಕಿ ಬಿಡಲು ಅಸುರಜನ ಮಡಿದ್ಹೋಗೆ ನಾರಾಯಣ ಕುಸಿದು ಹೋಗಲು ಗಿರಿ ಕೂರ್ಮರೂಪಾದಿ ನಾರಾಯಣ11 ಅಮೃತ ದೈತ್ಯರು ಕೊಂಡೋಡಲು ನಾರಾಯಣ ಸೃಷ್ಟಿ ಆದಿಕರ್ತ ಶ್ರೀ (ಸ್ತ್ರೀ?) ರೂಪವನು ಧರಿಸಿದ ನಾರಾಯಣ 12 ಮುಂಚೆ ಮೋಹವ ಮಾಡಿ ವಂಚಿಸಿ ದೈತ್ಯರನೆ ನಾರಾಯಣ ಹಂಚಿ ಸುರರಿಗೆ ಅಮೃತಪಾನ ಮಾಡಿಸಿದಯ್ಯ ನಾರಾಯಣ 13 ದಿತಿಯ ಸುತನು ಬಂದು ಪೃಥಿವಿಯನೆ ಸುತ್ತೊಯ್ಯೆ ನಾರಾಯಣ ಅತಿಬ್ಯಾಗದಿಂದ ರಸಾತಳ ಭೇದಿಸಿ ನಾರಾಯಣ 14 ಕ್ರೂರ ಹಿರಣ್ಯಾಕ್ಷನ್ನ ಕೋರೆದಾಡೆಲಿ ಸೀಳಿ ನಾರಾಯಣ ವರಾಹ ನಾರಾಯಣ 15 ಬ್ರಹ್ಮನಿಂದ್ವರ ಪಡೆದು ಹಮ್ಮಿಂದ ಕÉೂಬ್ಬ್ಯಸುರ ನಾರಾಯಣ ದುರ್ಮತಿಯಿಂದ್ಹರಿಯ ದೂಷಿಸುತಲಿದ್ದ ನಾರಾಯಣ16 ಮತಿಹೀನ ತನ ಸುತಗೆ ಮತಿಯ ಹಿಡಿಸುವೆನೆಂದ ನಾರಾಯಣ ಪಾರ್ವತೀಪತಿ ನಾಮವನು ಹಿತದಿಂದ ಬರೆಯೆಂದ ನಾರಾಯಣ 17 ಹರಿ ಹರಿ ಹರಿಯೆಂದು ಬರೆಯಾ(ಯಲಾ?) ಬಾಲಕನೋಡಿ ನಾರಾಯಣ ಉರಿಯ ಹೊಗಿಸುವೆನೆಂದ ಉಗ್ರಕೋಪಗಳಿಂದ ನಾರಾಯಣ18 ಮೆಟ್ಟಿ ಸಾಗೀಯಿಂದೆ ಬೆಟ್ಟದಿಂದಲಿ ಕೆಡೆವೆ ನಾರಾಯಣ ಕಟ್ಟಿ ಶರಧಿಯಲ್ಲÁ್ಹಕಿ ವಿಷ್ಣುಭಕ್ತನು ಬರಲು ನಾರಾಯಣ19 ಪ್ರಹ್ಲಾದ ನಿನ್ನೊಡೆಯ ಎಲ್ಹಾನೆ ತೋರೆನಗೆ ನಾರಾಯಣ ಮಲ್ಲಮರ್ದನ ಸ್ವಾಮಿ ಇಲ್ಲದೇ ಸ್ಥಳವುಂಟೆ ನಾರಾಯಣ20 ಪೃಥ್ವಿಪರ್ವತದಲ್ಲಿ ಸಪ್ತದ್ವೀಪಗಳಲ್ಲಿ ನಾರಾಯಣ ಸುತ್ತೇಳು ಸಾಗರದಿ ವ್ಯಾಪ್ತನಾಗ್ಹರಿಯಿರುವ ನಾರಾಯಣ21 ಅಣುರೇಣು ತೃಣದಲ್ಲಿ ಇರುವ ಆಕಾಶದಲಿ ನಾರಾಯಣ ರವಿ ಸೋಮ ತಾರಾಮಂಡಲದಲ್ಲಿ ತಾನಿರುವ ನಾರಾಯಣ 22 ಹದಿನಾಲ್ಕು ಲೋಕದಲಿ ಹರಿ ವಿಶ್ವವ್ಯಾಪಕನು ನಾರಾಯಣ ಸರ್ವದಿಕ್ಕುಗಳಲ್ಲಿ ಸನ್ನಿಹಿತನಾಗಿರುವ ನಾರಾಯಣ 23 ಆರಣಿಯೊಳಗಗ್ನಿಯಂದದಿ ಜನಕೆ ತೋರದಿರೆ ನಾರಾಯಣ ಜನನ ಮರಣಿಲ್ಲ ಜಗಜನ್ಮಾದಿಕಾರಣಗೆ ನಾರಾಯಣ 24 ನೀನರಿಯೆ ನಿನ್ನಲ್ಲೆ ಜೀವರಾಶಿಗಳಲ್ಲೆ ನಾರಾಯಣ ಈ ಜಗತ್ತಿಗೊಬ್ಬ ಇದ್ದಾನೆ ಎನ್ನೊಡೆಯ ನಾರಾಯಣ25 ಮಂದಭಾಗ್ಯನೆಯೆನ್ನ ಮಾತು ನಿಜವೆಂದು ತಿಳಿ ನಾರಾಯಣ ಈ ಸ್ತಂಭದಲ್ಲಿದ್ದಾನೆ ಮಂದರೋದ್ಧರ ಸ್ವಾಮಿ ನಾರಾಯಣ26 ಬಂದು ಭರದಿಂದಸುರ ಕಂಬ ಕಾಲಿಂದೊದೆಯೆ ನಾರಾಯಣ ತುಂಬಿತಾ ಘನಘೋಷದಿಂದ ಘುಡಿಘುಡಿಸುತಲಿ ನಾರಾಯಣ27 ಸಿಡಿಲು ಗರ್ಜಿಸಿದಂತೆ ಖಡಿ ಖಡಿ ಕೋಪದಲಿ ನಾರಾಯಣ ಕಿಡಿಗಳ್ಹಾರುತ ಕಂಬವೊಡೆದು ರೋಷದಿ ಬಂದ ನಾರಾಯಣ 28 ಖಳನ ಸೆಳೆದಪ್ಪಳಿಸಿ ದುರುಳನುದರವ ಬಗೆದÀು ನಾರಾಯಣ ಕರುಳ ವನಮಾಲೆ ತನ ಕೊರಳಲ್ಲಿ ಧರಿಸಿದ ನಾರಾಯಣ29 ತಲ್ಲಣಿಸಿ ಸುರರಾಗ ಮಲ್ಲಿಗೆಮಳೆ ಕರೆಯೆ ನಾರಾಯಣ ಪ್ರಹ್ಲಾದಸಹಿತ ಶ್ರೀದೇವಿ ಮುಂದಕೆ ಬರಲು ನಾರಾಯಣ30 ಕರದಿ ಕಂಗಳ ಮುಚ್ಚಿ ಸಿರಿಯ ತೋಳಿಂದಪ್ಪಿ ನಾರಾಯಣ ತೊಡೆಯನÉೀರಿಸಿ ತನ್ನ ತರುಣಿಗಭಯವನಿಟ್ಟ ನಾರಾಯಣ 31 ಸ್ತೋತ್ರವನು ಮಾಡಲಜ ಬಿಟ್ಟುಗ್ರಕÉೂೀಪವನು ನಾರಾಯಣ ಕೊಟ್ಟ ಪ್ರಹ್ಲಾದ(ಗ್ವ)ರಗಳ ಲಕ್ಷ್ಮೀನರಸಿಂಹ ನಾರಾಯಣ32 ಅಜ್ಞಾನದಿಂದ ತಾ ಯಜ್ಞ ಮಾಡುತಲಿರಲು ನಾರಾಯಣ33 ಅದಿತಿಯಲ್ಲವತರಿಸೆ ಅತಿಬ್ಯಾಗ ಕಶ್ಯಪರು ನಾರಾಯಣ ಸುತಗೆ ಉಪನಯನ ಭಾಳ್ಹಿತದಿಂದ ಮಾಡಲು ನಾರಾಯಣ 34 ಯಜÉೂೀಪವೀತ ಕೈಪು ಕೃಷ್ಣಾಂಜಿನ ಧರಿಸಿ ನಾರಾಯಣ ಶೀಘ್ರದಿಂದ ವಟು ವಾಮನ್ಯಜಶಾಲೆಗೆ ಬರಲು ನಾರಾಯಣ35 ಬಲಿಯ ಯಜ್ಞದಿ ಬಂದು ಭಾಳ ಪೂಜಿತನಾಗಿ ನಾರಾಯಣ ಛಲವಿಟ್ಟು ಮನದೊಳಗೆ ಬಲಿಯ ಯಾಚನೆ ಮಾಡೆ ನಾರಾಯಣ 36 ನಾ ಕೊಡುವೆ ಬೇಡು ಬೇಕಾದಷ್ಟು ಅರ್ಥವನು ನಾರಾಯಣ ಸಾಕಾಗದೇನಯ್ಯ ಸಲ್ಲ ಧನದಾಸ್ಯೆನಗೆ ನಾರಾಯಣ 37 ದೃಢಮನಸಿನಲಿ ಭೂಮಿ ಕೊಡು ಮೂರು ಪಾದವನು ನಾರಾಯಣ ಕೊಡುವೆನೆಂದಾಕ್ಷಣದಿ ಎರಡು ಚರಣವ ತೊಳೆದ ನಾರಾಯಣ38 ಒಂದು ಪಾದದಲಿ ಭೂಮಂಡಲವ ವ್ಯಾಪಿಸಿ ನಾರಾಯಣ ಪಾದ ನಾರಾಯಣ 39 ಕಂಡು ಕಮಲಜನು ಕಮಂಡಲೋದಕ(ದಿ) ತೊಳೆಯ ನಾರಾಯಣ ಉಂಗುಷ್ಠ ನಖದಿ ಉತ್ಪನ್ನಳಾದಳು ಗಂಗೆ ನಾರಾಯಣ40 ರಕ್ಕಸಾಂತಕನು ತ್ರಿವಿಕ್ರಮ ರೂಪಾಗಿ ನಾರಾಯಣ ಆಕ್ರಮಿಸಿಕೊಂಡ ಹದಿನಾಲ್ಕು ಲೋಕವ ಸ್ವಾಮಿ ನಾರಾಯಣ41 ಕೊಟ್ಟ ವಚನವ ತಪ್ಪಿ ಭ್ರಷ್ಟÀನಾಗದೆ ಭೂಮಿ ನಾರಾಯಣ ಕೊಟ್ಟರಿನ್ನೀಪಾದಯಿಟ್ಟು ಬಿಡುವೇನೆಂದ ನಾರಾಯಣ 42 ಕಟ್ಟಿ ಪಾಶದಲಿ ಕಂಗೆಟ್ಟಾಗ ಬಲಿರಾಯ ನಾರಾಯಣ ಕೆಟ್ಟೆನೆನ್ನದಲೆ ಮನಮುಟ್ಟಿ ಸ್ತೋತ್ರವ ಮಾಡೆ ನಾರಾಯಣ43 ದುಷ್ಟಜನ ಮರ್ದಕನು ಸೃಷ್ಟಿಸ್ಥಿತಿಲಯ ಕರ್ತೃ ನಾರಾಯಣ ಸೃಷ್ಟಿಗೊಡೆಯಗೆ ದಾನಕೊಟ್ಟರೆಂಬುವರುಂಟೆ ನಾರಾಯಣ 44 ಬಂಧನ ಬಿಡಿಸಿ ಬಲಿರಾಯಗ್ವರಗ¼
--------------
ಹರಪನಹಳ್ಳಿಭೀಮವ್ವ
ನಾರಾಯಣ ಪರಿಪಾಹಿ-ನರಹರಿಯೆ ಪ ನಿನ್ನೊಳು ನಿರುತನಾನಪರಾಧಿ ನಾರಾಯಣ ಅ.ಪ ಹೇಸಿಕೆಯಿಂದ ಮನಕಾಸುವೀಸಕೆ ಸೋತು ಮೋಸಹೋದೆ ನಿನ್ನ ನೆನೆಯದೆ ಕೇಶವ 1 ನಿರುತ ನಿನ್ನಯ ನಾಮಸ್ಮರಣೆಯ ಬಿಟ್ಟು ಘೋರನರಕಕ್ಕೆ ಗುರಿಯಾದೆ ಪೊರೆಯೊ ನಾರಾಯಣ2 ಮುದದಿಂದ ನಾ ಹದಿಬದೆಯರ ಮುಖನೋಡಿ ಮದದಿಂದ ನಿನ್ನನು ಮರೆದೆನೊ ಮಾಧವಾ3 ಸವನತ್ರಯದಿ ಅವ್ಯವಹಿತ ಕಾರ್ಯವ ಲವಲೇಶ ಬಿಡದೆ ನಾನೆಸಗಿದೆನೋ ಗೋವಿಂದ 4 ಕ್ಷಣ ಬಿಡದಲೆ ದುಷ್ಕರ್ಮದಿಂದಲಿ ದಣಿದು ತೃಣಕೆಣೆಯಾಗಿ ನಿರ್ವಿಣ್ಣನಾದೆ ಹೇವಿಷ್ಣು 5 ಹೃದಯದೊಳಿಲ್ಲದ ಮಧುರ ನುಡಿಗಳ ಮುದದಿ ನುಡಿದೆನೋ ಮಧುಸೂದನನೇ 6 ಅವನಿಯೊಳಗೆ ಎನಗೆಣೆಯಿಲ್ಲವೆನುತ ಅವಗುಣಪ್ರತಿಮೆ ನಾನಾದೆ ತ್ರಿವಿಕ್ರಮ 7 ಅನುದಿನ ನಿಂದಿಸಿ ಯಮನ ಮಂದಿರದಿ ನಾ ನಿಂದೆನೊ ವಾಮನ8 ಬುಧನೆಂದು ಮೆರೆದು ನಾ ಆಧಮರಸೇವಿಸಿ ಅಂಧತಮಕೆ ಗುರಿಯಾದೆನೋ ಶ್ರೀಧರ 9 ವಿಷಯವೆ ಜೀವನದ ಕೃಷಿಯಾಯಿತೆನಗೆ ತೃಷೆಯ ಮೀರದೆ ನಿನ್ನ ಮರೆದೆನೊ ಹೃಷಿಕೇಶನೆ 10 ಉದುಭವಿಸಿದೆ ಈ ವಸುಧೆ ಭಾರಕ್ಕಾಗಿ ಬಾಧಕನಾದೆನೊ ಪದುಮನಾಭನೆ 11 ತಾಮಸಕೃತ್ಯದಿಂದುದರ ಪೋಷಣೆಗಾಗಿ ಪ್ರೇಮದಿ ತಿರುಗಿದೆ ದಾಮೋದರ ದೇವ 12 ಶಂಕೆಯಿಲ್ಲದ ದುರುಳಕಿಂಕರಸೇವೆಯಿಂದ ಸಂಕಟಪಟ್ಟೆನೊ ಸಂಕುರುಷಣ ದೇವ 13 ಕಾಸಿನಾಶೆಗೆ ನಾ ಹೇಸಿಕಿಲ್ಲದೆ ಮನ ಹೇಸದೆ ಯಾಚಿಸಿದೆ ವಾಸುದೇವನೇ 14 ಸದ್ಯಫಲವೆ ಮುಖ್ಯವು ಉದ್ಯೋಗವೆಂದು ಉಬ್ಬಿ ಒದ್ಯಾಡುತಿಹೆ ಪ್ರದ್ಯುಮ್ನದೇವನೆ15 ಸತಿ ಅನುಗಾಲ ಬಂಧು ಎಂದು ಅನವರತ ನಂಬಿದೆನು ಅನಿರುದ್ಧದೇವನೆ 16 ಪರಿಪರಿ ಕ್ರೀಡೆಯಿಂ ಪರಪೀಡಕನಾಗಿ ಪರರನು ಸ್ತುತಿಸಿ ಬೆಳೆದೆ ಪುರುಷೋತ್ತಮ17 ಸಾಧು ಸಜ್ಜನರೊಳು ಭೇದ ವಂಚನೆ ಮಾಡಿ ಅಧೋಕ್ಷಜ ಮೂರ್ತೇ 18 ಬಾರಿಬಾರಿಗೆ ಪರಾನ್ನವನುಂಡು ಘೊರ ದುರಿತಕ್ಕೆ ಗುರಿಯಾದೆ ಶ್ರೀ ನರಸಿಂಹನೇ19 ಕೆಚ್ಚೆದೆಯಿಂದ ನಾನು ಸ್ವೇಚ್ಛೆಯಿಂದಲಿ ಚರಿಸಿ ಹುಚ್ಚು ಹಿಡಿದಂತಾದೆ ಅಚ್ಯುತಮೂರ್ತೇ20 ಮಾನಿಗಳಿಗೆ ಅವಮಾನ ಮಾಡಿ ನಾ ಜ್ಞಾನಿ ಎಂದೆನಿಸಿದೇ ಜನಾರ್ದನನೇ ಕಾಯೊ 21 ಕೋಪತಾಪಗಳಿಂ ಪಾಪಕೃತ್ಯವೆಸಗಿ ತಾಪ ಪಡುತಲಿಪ್ಪೆನಯ್ಯ ಉಪೇಂದ್ರನೆ 22 ಕರಚರಣಗಳಿಂದ ಕಳ್ಳನಾಗಿಹೆನು ತೊರೆದೆನೊ ಹರಿಗುರು ಯಾತ್ರೆಯ ಶ್ರೀಹರೇ 23 ಶಿಷ್ಟರನ್ನೆಲ್ಲ ನಿಕೃಷ್ಟತನದಿ ನೋಡಿ ಭ್ರಷ್ಟನಾಗೀಜಗದಿ ಮೆರೆದೆ ಶ್ರೀಕೃಷ್ಣನೇ 24 ಸಂಕಟಪಡುತಿಹ ಕಿಂಕರನೊಳಿಹ ಮಂಕು ಹರಿಸಿ ಕಾಯೋ ಶ್ರೀ ವೇಂಕಟೇಶನೇ25
--------------
ಉರಗಾದ್ರಿವಾಸವಿಠಲದಾಸರು
ನಾರಾಯಣ ರಕ್ಷಿಸೋ ನಮ್ಮನು ಲಕ್ಷ್ಮೀ ನಾರಾಯಣ ರಕ್ಷಿಸೋ ಪ ಪಾರರಹಿತ ಭವಪಾರಾವಾರದಿ ಬಲು ಘೋರತಾಪವು ಮೀರಿತೋ ಭವದೂರ ನಿತ್ಯೋದಾರ ಕರುಣದಿ ಅ.ಪ ಶ್ರೀಶ ನಿನ್ನರ್ಚಿಸದೆ ಶ್ರೇಯಸ್ಸುಖ ಕಳತ್ರ ನಿವೇಶ ತನುಜ ಮಾಯಾ ಪಾಶದೊಳಗೆ ಶಿಲ್ಕಿ ಗಾಸಿಯಾದೆನು ಜಗದೀಶ ನಿಖಿಲಸು ರೇಶ ಕಮಲಫಲಾಶನಯನ ದಿ ನೇಶಶತ ಸಂಕಾಶ ವ್ಯಾಘ್ರಗಿರೀಶ ಭವಭಯ ಪಾಶ ಹರಪರಮೇಶ ವಂದಿತ 1 ದೇಹಾಭಿಮಾನದಲ್ಲಿ ತೀವಿದ ಭೂತ ಸೋಹಮೆಂಬುವ ಬಲು ಮೋಹದಿ ಸಿಲುಕಿ ದಾ ಸೋಹಮೆನ್ನದೆ ದೈವ ದ್ರೋಹಿಯಾದೆನು ವಿದೇಹಜಾವರಿ ಗೂಹ ನೋಚಿತದೇಹ ವಿಜಿತ ವಿ ದೇಹ ಖಗವರವಾರಶುಭಪರಿವಾಹ ನಿಖಿಲ ನಿ ರೀಹ ಲೋಕವಿಮೋಹನಾಚ್ಯುತ 2 ಗುರುಹಿರಿಯರ ಮರೆದು ಗರ್ವದಿ ಧರ್ಮಾವ ಚರಣೆಯ ನೆರೆತೊರೆದು ಜರಿದು ದುರ್ಗತಿಗೆ ನಾ ಗುರಿಯಾದೆನು ಹರಿ ಪರಮಪುರುಷ ಪಾವನ ಚರಣ ಸುಗುಣಾ ಭರಣ ದೀನೋ ಭವ ಸಂಹರಣವಿಶ್ವಂ ಭರಣ ಪುಲಿಗಿರಿ ವರದವಿಠಲ 3
--------------
ವೆಂಕಟವರದಾರ್ಯರು
ನಾರಾಯಣನು ನಾರಿಯಾದನು ನಾರಾಯಣನು ನಾರಿಯಾಗಲು ಉಗರು ಕಾಂತಿ ಪೋಗಿ ಸಾರಸುಂದರವ ತಿರಸ್ಕರಿಸೆ ಶೃಂಗಾರಸ ನಿಧೆ ಪ ಸುರರಸುರ ಕರೆಸಿ ವೈರೆವ ಮರೆಸಿ ಸ್ನೇಹದಿಂದಿರಿಸಿ ಈ ಕುಲ ವರಿಸಿ ನಿಮ್ಮೊಳು ಬೆರಸಿ ಸುಖವಂಕುರಿಸುವಂತೆ ಸಂಚರಿಸೆಂದು ಸರಸದಿಂದಲಾದರಿಸೆ ಸುರರ ಧರಿಸಿ ಬಿಡದುದ್ಧರಿಸುವೆ ನಿದ್ರಿ ತರಿಸಿ ದೈತ್ಯರ ವರಿಸೆಂದು ಸಿರಿ 1 ದಿತಿಜಾದಿತಿ ಜ್ಯಾತ ತತಿಗಳನು ಸ ಅಮೃತ ಬಪ್ಪದಕ್ಕೆ ಹಿತವ ಪೇಳುವೆನೆಂದತಿಶಯದಿಂದ ಚತುರಾತುಮ ಮಾರುತ ಪಿತಾ ಕ್ಷಿತಿಯೊಳು ನೂರು ಶತ ಯೋಜನ ಪರ್ವತ ಮಂದಾರುಂಟು ಜತೆಯಲಿ ಏಕಮತರಾಗಿ ಪೊಲ್ ಜಾತವ ಕಿತ್ತೆತ್ತಿಸಿತಾಬ್ಧಿಯೊಳು ಮಥಿüಸೆಂದು 2 ಹರಿ ನಿರೂಪವÀ ಧರಿಸಿ ಎಲ್ಲರು ಗಿರಿಯ ಬಳಿಗೆ ಹರಿದರಾಗಲೆ ಕಿರಿ ಬೆರಳ ಅಬ್ಬರದಾಟವು ಬೊಬ್ಬಿರುವ ಧ್ವನಿ ಭೀಕರ ಕರಿ ಶರಧಿ ಮಿಕ್ಕ ಗೋತುರ ಸಪ್ತದ್ವೀಪ ತರು ಮೃಗಾದಿ ಜೀವರು ತಲ್ಲಣಿಸೆ ಗಿರಿ ವೆಗ್ಗಳಿಪ ಭರಕಂದು3 ಸುತ್ತ ಈ ಪರಿಯಾಗುತ್ತಿರೆ ಇತ್ತ ಪ ರ್ವತವಲ್ಲಾಡಿಸಿ ಕಿತ್ತಿ ತೆಗೆದೆತ್ತಿ ಹೊತ್ತರಿತ್ತಂಡದಿ ಚಿತ್ತ ಮಾರ್ಗವನು ಹತ್ತಿ ಬರಲು ದೇವತೆಗಳು ಹೊತ್ತರದ್ರಿಮೂಲ ಎತ್ತಲಾರದಲೆ ತತ್ತಳಗೊಂಡು ಮಾರುತ್ತ ಅಡಿಗಡಿ ಎತ್ತಿಡಲರಿದು ದೈತ್ಯರ ವಂಚಿಸಿ ಆ ದಿತ್ಯರಿಗಿರಿಸಿದುತ್ತಮನೊ4 ವನಧಿsಯೊಳದ್ರಿ ದನುಜ ಮರರ ಗುಣವಿಳಹಿ ಸ ರ್ಪನ ತಂದೀಗ ನೇಣನೆ ಮಾಡಿದರು ಸುರರು ಬಾಲನು ದೈತ್ಯಯರು ಹೂಣಿಕೆಲಿ ವಿನಯದಿಂದ ಮಥಿüಸುವಾಗ ವದನದನಿಲಕೆ ಅನಿಮಿಷರು ತಲ್ಲಣಿಸೆ ಹರಿ ತನ್ನನು ನಂಬಿದವರ ಕಾಯಿದ ವಂಚನೆಯಿಂದ5 ಉಭಯ ಜನರು ಗಂಭೀರವಾದ ಕ್ಷೀರಾಂಬುಧಿ ಕಟವ ರಭಸಗೈದು ಕಕುಭದಲಿ ಪ್ರತಿ ಶಬ್ದಪುಟ್ಟಿ ಉ ದುಭವಿಸಿದವು ಶುಭಾ ಶುಭ ಪ್ರಭು ಧನ್ವಂತ್ರಿ ಸುಲುಭ ರಸ ತಾರೆ ವಿಭುದರೊಳಗೆ ಗಲಭೆಯ ಬೀಸಿ ಅ ನಿಬರು ಒಯ್ಯಲು ಋಭುಜಾದ್ಯರು ಅಬುಜಾಪ್ತ ಪೋದನಭವಾಗೆ6 ಹರಿ ತಿಳಿದ ಭಕ್ತರ ಮನೋಕ್ಲೇಶ ಸಿರಿ ಸ್ತುತಿಗಗೋಚರನೆನ್ನಲು ಧರಿಸಿ ಬಂದನು ಮಿರುಗುತಿಪ್ಪ ಸುಂ ದರ ನಾರೀ ರೂಪ ಪರದೈವ ಕುಸುಮ ಪೊಂಗೆಜ್ಜೆಯ ಸರಪಳಿಯ ಮೇಲೊಲಿವ ಕಾಂಚಿದಾಮ ಶರತ್ಕಾಲದ ಚಂದಿರನಂತೆ7 ಸಣ್ಣವನಾರಾ ಮೋಹನ್ನಕರವು ಪಾ ಕೌಸ್ತುಭ ರನ್ನ ವನಮಾಲೆ ಚಿನ್ನದ ಸರ ಶೋಭನ ಕರಡಿಗೆ ಚನ್ನಗೋಡಿ ಸರ ಬಣ್ಣ ಸರ ರನ್ನದಪದಕ ಕನ್ನಡಿ ಮಲಕು ಚನ್ನಪ ನ್ಯಾವಳ ಮುನ್ನೆ ಸರ್ವಹಾರ ಮೂರ್ತಿ 8 ಮುತ್ತಿನ ಚಿಂತಾಕ ಮುತ್ತಿನೋಲೆ ಜಾತ ಮುತ್ತಿನ ಮೂಗುತಿ ಮುತ್ತಿನಕ್ಷತಿಯು ಮುತ್ತಿನ ಸೂಸುಕಾ ಮುತ್ತಿನ ಜಡೆಯು ಮುತ್ತಿನ ಗೊಂಚಲು ಮತ್ತೆ ತೋಳು ಮುತ್ತು ಮೇಲಗೊಪ್ಪು ಕತ್ತಲೆ ಸೋಲಿಪ ಕಸ್ತೂರಿ ತಿಲಕಾ ನೆತ್ತಿಯ ಬೈತಲು ಸುತ್ತ ತಳಪು ಸುರೋತ್ತಮ ಚಂದ್ರಮಾ ನಿತ್ಯಾನಂದ ಪರುಷೋತ್ತಮನು 9 ನೀಲಗೂದಲು ಸುಫಲಾದಿ ಶ್ರವಣ ಭ್ರೂಲಾದಿಕÀವು ಚಂ ಕಪೋಲ ನಾಸಿಕ ತಾಂಬುಲದ ವದನ ನಾಲಿಗೆತಳ ವಿಶಾಲ ಭುಜ ಕಂದರ ಸುಂಡಾಲಾಕಾರವಾದ ತೋಳು ಕರತಳ ಪಾಲು ಬಪ್ಪ ಸ್ತನ ಸ್ಥೂಲೋದರ ನಾಭಿ ಲೀಲಾ ನಡವು ಪಂ ಚಳ ಊರು ಜಾನು ಲೋಲಾಡುತಾ 10 ಹರಡಿ ಕೈಕಟ್ಟು ಬೆರಳುಂಗುರವ ವರ ಕಂಕಣಾದಿ ಸರಿಗೆ ತಾಯಿತ ಸರ ಹುಲೆಯುಗರು ಎಣ್ಣೆ ನೂಲು ತರುಳಹಾರ ಚೌರಿಯಿಂದ ಪರಿಪರಿ ಚಿತ್ರ ಬರೆದ ಕಂಚುಕಾ ಸರಿಸರಿ ಬಂದಾಭರಣ ಧರಿಸಿ ಅರೆ ಶರಗು ಗಹ್ವರದಿ ಮಾಡುತ್ತ ಮರಿಯಾನೆ ಬಪ್ಪ ತೆರದಂತೆ 11 ಗಂಧ ಪಚ್ಚಿಕೊಂಡು ಒಂದು ಕರದೊಳು ಗಂಧ ವಿಳ್ಯವು ಮತ್ತೊಂದು ಕರದೊಳು ಕಂದುಕ ಪುಟಿಸುತ್ತೊಂದೊಂದು ಹೆಜ್ಚೆಯನು ನಿಂದಲ್ಲಿ ನಿಲ್ಲದೆ ಚಂದದಿಂದ ಬಂದಬಂದಂತೆ ಪೂ ಮಂದರಾದಿ ಮುಡಿಯಿಂದ ಉದರಲು ಮಂದಹಾಸದಿಂದ ವೇಗ ನಡೆ ತಂದು ಸಮೀಪದಿ ನಿಂದನು ಖಳರಿಗೊಂಡಿ ಮಾರಿ12 ದುರುಳ ಸಮೂಹ ಪರವಶನಾಗಿ ಬೆರಗಾಗಿ ನಿಲ್ಲೆ ಪರಿ ಏನೆನಲು ಇರದೆ ಪೇಳಲು ಶಿರವದೂಗುತ್ತಾತಾರವೆಂದ ಭರ ಯೌವ್ವನ ಸ್ತ್ರೀ ಪರಪುರಷರ ಸರಿತದಲ್ಲಿಗೆ ಚರಿಸಬಾರದು ಎರಡು ಬಲದವರು ಕರದಿ ಲೋಚನವ ಮುಚ್ಚಿ ಸಾಗಿರೆ ಪಂಙÂ್ತ 13 ಬಡಿಸೂವೆನೆ ಒಡನೆ ತಮ್ಮಯ ಪಡೆ ಸಮ್ಮತ ಸಾಲ್ಹಿಡಿದು ಕುಳ್ಳಿರೆ ನಡುವೆ ಪಿಯೂಷ ಪಿಡಿದು ದುಷ್ಟರ ಕಡಿಗೊಂದು ಬಿಂದು ಬಡಿಸದೆ ದೃಢ ಭಕ್ತರಿಗೆ ಕುಡಿಸುತ್ತಿರಲು ಬಡ ರಾಹು ತಾನು ದುಡುಗಿ ಸುರರಾ ಎಡೆಯೊಳಿರಲು ಕುಡಿತಿಯೊಳು ತಾ ಬಡಿಸಿ ಚಕ್ರವಾ ತುಡುಕಿದ14 ಓರ್ವನ ತರಿದು ಈರ್ವಗೆ ಮಾಡಿದ ಊರ್ವಿಗೆ ಕೆಡಹಿ ಗರ್ವ ಮುರಿದು ಸರ್ವಬಗೆಯಿಂದ ನಿರ್ವಾಹ ಕರ್ತನು ಓರ್ವನಲ್ಲದೆ ಮತ್ತೋರ್ವನಾರೊ ಗೀರ್ವಾಣ ಜನರ ನಿರ್ವಾಧಿಕವೊಹಿಸಿ ಪರ್ವತೆಡೆಯಿದ್ದ ದು ರ್ವಿಷಯಾಬ್ಧಿಗೆ ಚೀರ್ವನಾಗಿದ್ದ ವಿಜಯವಿಠ್ಠಲ ನಿರ್ವಾಣೇಶ15
--------------
ವಿಜಯದಾಸ
ನಾರಾಯಣನೆಂಬ ನಾಮವೇ ಮೂಲಮಂತ್ರಓರಂತೆ ಜಪಿಸುವೆನು ಶ್ರೀಹರಿ ಹರಿ ಪ. ಆರ ಬಿಡುವೆನು ಮತ್ತಾರ ಕೂಡುವೆನುಆರಾರಿಗೊಡಲನೀವೆಆರಂಘ್ರಿಗೆರಗುವೆ ಆರಾರ ಮನ್ನಿಸುವೆಆರಿಂದ ಉದರ ಪೂರ್ತಿ 1 ಆರಿದ್ದರೇನುಫಲ ಆರು ಬಗೆಯನರಿತುಆರುಸಾವಿರವನೋದಿನೂರ ನೀರೊಳಗಿಟ್ಟು ಆರೆಂಟ ನೆನೆದು ಹದಿ-ನಾರನಾದರು ಕೊಟ್ಟನೆ 2 ಇಬ್ಬರೊಳಗೆ ಎನಗೊಬ್ಬನೆ ಸಾಕು ಕಣ್ಗೆಹಬ್ಬವಾವನ ಕಂಡರೆಒಬ್ಬನಿಗೋಸುಗ ಮತ್ತೊಬ್ಬನ ಭಜಿಸುವೆಅಬ್ಜಾಕ್ಷ ಹಯವದನ3
--------------
ವಾದಿರಾಜ