ಒಟ್ಟು 318 ಕಡೆಗಳಲ್ಲಿ , 52 ದಾಸರು , 254 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಲಾಟದಲ್ಲಿ ಇಡುವನೋ ಕಾವನು ಅವನನು ನಮ್ಮ ಪವಮಾನನೊಡೆಯನು ವಾಮ ಉದರದಲ್ಲಿ ಯಾವಾನಲೂ ಇಟ್ಟು ಮೆರೆಯುವನೋ ಅವನ ಗೊವತ್ಸ ನ್ಯಾಯದಿ ಕರವನು ಪಿಡಿವನು ಗಧಾಧರನು ಹಾವನ್ನೆ ಹಾಸಿಗೆ ಮಾಡಿಕೊಂಡ ಶ್ರೀಧರನ ಸ್ಥಾನದ ಕೆಳೆಗೆ ಪವಮಾನಿಗುವ ಮತಾ ಎರಡು ಗಧಾಯುಧ ಧರಿಸಲು ಪಾವನನಂತಾದವನು ಅವರ ದುರಿತಕಾನನಕೆ ಸಾವು ಹುಟ್ಟಿಲ್ಲದ ಪರಮಪುರುಷನ ಈ ಆಯುಧವ ಅವನು ವಾಮಸ್ತನದಿ ತಾನೊಮ್ಮೆ ಇಕ್ಕುವನೋ ಸಾನು ಹುಟ್ಟುಗಳಿಂದ ದೂರಗೈಸುವ ಗುರು ಕಾಳೀಮರ್ಧನಕೃಷ್ಣ 4 ಪದ್ಮ ಮುದ್ರೆಯನ್ನು ಭಕುತಿ ಪೂರ್ವಕವಾಗಿ ಹೃತ್ ಪದ್ಮದಿ ಬಂದು ಧರಿಸಲುಬೇಕು ದಕ್ಷ ಭುಜದ ಕೆಳೆಗೆ ಪದ್ಮಂಗಳೆರಡನ್ನು ದಕ್ಷ ಉದರಕೆಳೆಗೆ ಪದ್ಮವೆ ಒಂದನ್ನು ವಕ್ಷಸ್ಥಾನದಿ ಒಂದು ಪದ್ಮವ ಧರಿಸಲು ಭಕ್ತವತ್ಸಲನಾದ ಪದ್ಮ ರಮಣಗುರು ಕಾಳಿಮರ್ಧನಕೃಷ್ಣ ಪೊಳೆವಾ 5
--------------
ಕಳಸದ ಸುಂದರಮ್ಮ
ಲೇಸುಲೇಸಾಯಿತು ಸದ್ಗುರು ಕೃಪೆ ಲೇಸುಲೇಸಾಯಿತು ಧ್ರುವ ಆದಿತತ್ವದ ಙÁ್ಞನ ಇದಿರಿಟ್ಟಿತು ಘನ ಲೇಸುಲೇಸಾಯಿತು ಭೇದಿಸಲು ಮನೆ ಅದೆ ಆಯಿತುನ್ಮನ 1 ಲೇಸುಲೇಸಾಯಿತು ಙÁ್ಞನಾಗಮ್ಯದ ಸ್ಥಾನ ಎನಗಿದೆ ನಿಜ ಧ್ಯಾನ 2 ಭಾವದ ಬಯಲಾಟ ಠಾವದೋರಿತು ನೀಟ ಲೇಸುಲೇಸಾಯಿತು ಸುವಿದ್ಯ ಗುರುನೋಟ ಸರಿಮಾಡಿತೀ ಮಾಟ 3 ನೀಡಿದಭಯ ಹಸ್ತ ಮಾಡಿತು ಮನಸ್ವಸ್ಥ ಗೂಢವಾಗಿಹ್ಯ ವಸ್ತಗೂಡಿತು ಸಾಭ್ಯಸ್ತ 4 ಇಹಪರಕ ಸ್ವಾದ ಮಹಾಗುರುಪ್ರಸಾದ ಸಾಹ್ಯಮಾಡುದೆ ಸದಾ ಮಹಿಪತಿ ಗುರುಬೋಧ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಲೋಕನೀತಿ ಅಧಿಕಾರಿಯಾಗಬೇಕು ಅದಕಾಗಿ ದುಡಿಯಬೇಕು ಪ ಅಧಿಕಾರಿಯಾಗುವುದು ಸುಲಭವಲ್ಲ ಎದೆಚಾಚಿ ಜಗದಿ ಹೆಮ್ಮೆಯ ತೋರುವ ಅ.ಪ ಶಾಶ್ವತವಿರಬೇಕು ಅದನೀಶ್ವರ ಕೊಡಬೇಕು ವಿಶ್ವವಿದ್ಯಾನಿಲಯವ ಸೇರುತಲಿ ಶಶ್ವದಿ ಪರವಿದ್ಯಾಶಾಖೆಯಲಿ 1 ಭೂಷಣವೆನಗೆಂದು ನೀ ಮೋಸ ಹೋಗಬೇಡ ಸಾಸಿರ ಸಾಸಿರ ಸ್ಥಾನಗಳಿಗೆ ನೀ ಆಸೆ ಪಡದೆ ಹರಿಶಾಸನ ಸಭೆಯ 2 ಕಮ್ಮಿಯ ಪ್ರತಿಫಲಕೆ ನೀ ಸಮ್ಮತಿ ಕೊಡದಿರೆಲೊ ಮರ್ಮವರಿತು ಪರಲೋಕವ ಪಡೆಯಲು ಹಮ್ಮನು ಮುರಿಯುವ ಕಾರ್ಮಿಕ ಸಭೆಯ 3 ಕಾಲವರಿತು ಸತತ ನೀ ಮೇಲಕೇಳಬೇಕು ಬಾಲಗೋಪಾಲನು ನೆಲೆಸುವುದಕೆ ಹೃದ ಯಾಲಯ ರಚನೆಯ ಚತುರ ಶಿಲ್ಪಿಯ 4 ಶ್ರವಣ ಮಾಡಬೇಕು ಶಾಸ್ತ್ರವ ಮನನ ಮಾಡಬೇಕು ಶ್ರವಣ ಮನನ ನಿಧಿ ಧ್ಯಾಸನದಿಂದ ಪ್ರ ಸನ್ನ ಹರಿದಯದಿ ಸಿಗುವ ಮುಕುತಿಗೆ 5
--------------
ವಿದ್ಯಾಪ್ರಸನ್ನತೀರ್ಥರು
ವಿತ್ತ ಅಸಾರ್ಥಕತೆಯ ತಿಳಿದು ಪುರುಷಾರ್ಥ ಪ್ರದನು ಶ್ರೀ | ಹರಿಯ ಪ್ರಾರ್ಥಿಸೋ ಪ ಮಡದಿ ಮನೆ ಮಕ್ಕಳೆಲ್ಲ | ಬಿಡದೆ ನಿನ್ನ ಸೇವಿಸೋರುಹಿಡಿಯ ತುಂಬ ಹೊನ್ನು ಹಣವು | ಬಿಡದೆ ಬರುತಿರೇ 1 ಪ್ರಾಣ ಉತ್ಕ್ರಮಣ ಸಮಯ | ಮಾನಿನೀಯು ರೋದಿಪಾಳುಪ್ರಾಣ ಪೋದ ತನುವ ಸೋಕೆ | ತಾನೆ ಒಲ್ಲಳು 2 ಮಂದ ಮಾನವ 3 ಬಿಂಬ ಚಲಿಸೆ ತಾನು ಪ್ರತಿ | ಬಿಂಬ ಚಲಿಪ ಮತಿಯೆ ನಿಜವುಉಂಬು ಕೊಂಬ ಕೊಡುವುದೆಲ್ಲ | ಬಿಂಬದೆನ್ನೆಲೋ 4 ಇಂದಿರೇಶನರ್ಚಿಸೂತ | ಇಂದೆ ಗಳಿಸೊ ಪುಣ್ಯ ದ್ರವ್ಯನಂದ ಕಂದಗರ್ಪಿಸೋದು | ದ್ವಂದ್ವ ಕರ್ಮವ 5 ತನುವು ಮನವು ನಿನ್ನದಲ್ಲ | ಗುಣದ ಕಾರ್ಯ ನಿನ್ನದಲ್ಲನಾನು ನನ್ನದೆಂಬ ಮತಿಯು | ಹೀನ ತಿಳಿಯೆಲೋ 6 ನಿತ್ಯ ಬದ್ಧ ಜೀವಿ ನೀನು | ಸತ್ಯ ಸ್ವಾತಂತ್ರ ಹರಿಯುದತ್ತ ಕರ್ತೃತ್ವವಿಹುದು | ಕೃತ್ಯ ಉಂಬಲು 7 ಹರಿಯ ರೂಪ ಹೃದಯದಲ್ಲಿ | ಪರಿಕಿಸಾದೆ ಗತಿಯು ಇಲ್ಲಕರುಣಿಸಿಹನು ಮನುಜ ದೇಹ | ಹರಿಯ ಕಾಣಲು 8 ಮಧ್ವ ಮತದಿ ಜನ್ಮವಿರಲ | ಅವಿದ್ಯೆಗಳನ ನೀಗಿಕೊಂಡುಮಧ್ವಮುನಿಯ ಕರುಣ ಪಡೆದು | ಸಿದ್ಧನಾಗೆಲೋ 9 ಕಮಲ | ಭಾವದಿಂದ ಪೂಜಿಸಾದೆಸಾವು ಹುಟ್ಟು ತಪ್ಪೊದಿಲ್ಲ | ಕೋವಿದನಾದರು10 ಅಂಶದಿಂದ ಇರುತ ತಾವು | ಹಂಸ ಮಂತ್ರ ಸರ್ವರಲ್ಲಿವಿಂಶತ್ಯೇಕ ಸಾಸಿರಾವು | ಅಂತೆ ಷಟ್ಯತ 11 ದಿನಕೆ ಇಂತು ಜಪವ ಚರಿಸಿ | ವಿನಯದಿಂದನಿರುದ್ದನೀಗೆಎಣಿಕೆ ಮಾಡಿ ಅನಿಲ ಸಹಿತ | ತಾನೆ ಅರ್ಪಿಪ 12 ಪರ್ವಕಾಲದಿದನು ತಿಳಿದು | ಶರ್ವ ವಂದ್ಯ ಶೇಷಶಾಯಿಸರ್ವ ಕಾರ್ಯಗಳನು ಲಾ | ತವ್ಯ ಗಿತ್ತಿಹ 13 ದೈತ್ಯ ಜನರು ಅರಿಯದಂತೆ | ಯುಕ್ತನಾಗಿ ಬ್ರಹ್ಮ ವಾಯುಆಪ್ತ ವಾಕ್ಯ ಮೀರದಂತೆ | ಗುಪ್ತ ಚರಿಸುವ 14 ತತ್ವಕಿದು ವಿರುದ್ಧವಲ್ಲ | ವ್ಯಕ್ತ ವಿಹುದು ಲೋಕದಲ್ಲಿಮತ್ತೆ ಕ್ಷಣಕೆ ಒಪ್ಪೆನೆಂದು | ಇತ್ತು ಸ್ಥಾನವ 15 ಗೊತ್ತು ಮಾಡಿ ಪೋಗುವಂತೆ | ಭ್ರಾತೃ ವಾದಿರಾಜರೀಗೆಇತ್ತು ಪದವಿಗಳನು ತಾವು | ಸೂಕ್ತ ಪೇಳ್ವರು 16 ಭಾರತೀಶ ಕರ್ಮ ವೀಯೆ ಗುರುಗೋವಿಂದ ವಿಠಲ ಗತಿ ಇತ್ತು | ಕಾವ ಬಿಡದಲೆ 17
--------------
ಗುರುಗೋವಿಂದವಿಠಲರು
ವಿದ್ಯಾ ಪ್ರಸನ್ನ ಶ್ರೀ ಯತಿಕುಲ ಗುರುರನ್ನ ಸದ್ವ್ಯೆಷ್ಣವ ಘನ್ನ ಪ. ಸಿದ್ಧಸಾಧನ ಮಧ್ವಮುನಿಯ ಚಿನ್ಹ ಧರಿಸಿದ ಬಹುಮಾನ್ಯ ಅ.ಪ. ವಿದ್ಯಾರತ್ನಾಕರ ಯತಿ ಕರಕಮಲದಿ ಜಾತ ಮುದ್ದು ಕುವರನೀತ ವಿದ್ಯಾವಾರಿಧಿ ಮುನಿಕರ ಸಂಜಾತ ಯತಿವರನಾದಾತ ಮಧ್ವಗ್ರಂಥಗಳ ಮನನ ಮಾಡಿದಾತ ಬಹುಮತಿಯುತನೀತ ಬುದ್ಧಿಕುಶಲದಿ ಬುಧರನು ಪೊರೆವಾತ ಸುಜನರ ಮನದಾತ 1 ವ್ಯಾಸತೀರ್ಥನ ಆಸ್ಥಾನಕೊಡೆಯರಾಗಿ ದುರ್ಗುಣಗಳ ನೀಗಿ ಆಸೆಯಿಂದ ಶ್ರೀ ಕೃಷ್ಣನ ಚನ್ನಾಗಿ ಪೂಜಿಸುತಲಿ ಬಾಗಿ ದಾಸತ್ವದ ಲಕ್ಷಣ ತಿಳಿದವರಾಗಿ ವಿಷಯ ಸಂಗ ತ್ಯಾಗಿ ಪಸನ್ನ ಕೃಷ್ಣನೆಂಬಂಕಿತವನೆ ಇಟ್ಟು ಪದರಚಿಸಿದ ಗುಟ್ಟು 2 `ವಿ' ಎನ್ನಲು ನರವಿಷಯ ಸಂಗದೂರ `ಧ್ಯಾ' ಎನೆ ಧ್ಯಾನವರ `ಪ್ರ' ಎನಲು ಸದ್ಗುಣನು `ನ್ನ' ಎನ್ನಲು ಶ್ರೀ ನರಹರಿ ತಾನೊಲಿವ `ತೀ' ಎನೆ ತೀರ್ವ ಭವ `ರ್ಥಾ' ಎನ್ನಲು ಪುರುಷಾರ್ಥ ಪಡೆದ ಭೋಗಿ `ರು' ಎನೆ ರುಜುಮಾರ್ಗಿ 3 ವಿದ್ಯಾಪ್ರಸನ್ನತೀರ್ಥರು ಎಂದೆನ್ನುತಲಿ ಸ್ಮರಿಪರ ಸಲಹುತಲಿ ಮುದ್ದುಕೃಷ್ಣ ಪಟ್ಟಾಭಿರಾಮನಂಘ್ರಿ ಸಚ್ಚರಿತ ಪ್ರಸಂಗಿ ಸದ್ವಿದ್ಯಗಳಿಗೆ ಗರ್ವರಹಿತ ಭಾವ ಬಹು ಸರಳ ಸ್ವಭಾವ ಹೃದ್ವನಜಸÀ್ಥನ ಕಾಂಬ ಮುನಿವರೇಣ್ಯ ಸದ್ಭಕ್ತ ಶರಣ್ಯ 4 ಮಂದ ಮತಿಯು ನಾನು ಕ್ಷಮಿಸು ತಂದೆ ನೀನು ಕುಂದನೆಣಿಸದೆ ಗುಣಗ್ರಹಿಸುತಲಿನ್ನು ಶ್ರೀ ಹರಿ ನುಡಿಸಿದನು ತಂದೆ ಮುದ್ದುಮೋಹನರ ಕೃಪೆಯಿಂದ ರಚಿತ ಪದದಂದ ಮಂದರಧರ ಗೋಪಾಲಕೃಷ್ಣವಿಠ್ಠಲ ಗರ್ಪಿತ ಗುಣಮಾಲ 5
--------------
ಅಂಬಾಬಾಯಿ
ವೃಂದಾವನ ಪ್ರವೇಶಿಸಿದಂದವ ಚಂದದಿ ಪೇಳುವೆ ಪಾಲಿಪುದು ಪ ಇಂದಿರೆಯರಸನ ಪ್ರೇರಣೆಯಿಂದ ಯತಿ ವೃಂದ ತಿಲಕ ರಾಘವೇಂದ್ರರಾನಂದದಿ ಅ.ಪ ಒಂದು ದಿನವು ಶ್ರೀ ರಾಯರು ಶಿಷ್ಯರ ವೃಂದಕೆ ಪಾಠವ ಹೇಳುತಿರೆ ಅಂದು ವಿಮಾನದಿ ಕೃಷ್ಣದ್ವೈಪಾಯನ ಪ ರಂಧಾಮಕೈದಲು ನೋಡಿ ಕೈ ಮುಗಿದು 1 ಎಷ್ಟು ದಿನವು ನಾವಿಲ್ಲಿರಬೇಕೆಂದು ಶಿಷ್ಟ ಗುರುವರರು ಕೇಳಿದೊಡೆ ಕೃಷ್ಣದ್ವೈಪಾಯನರೆರಡು ಬೆಳಗುಳ ಗಟ್ಟಿಯಾಗಿ ಬೀಸಿ ತೋರಿಸಿ ಪೊರಟರು 2 ನೆರೆದ ಶಿಷ್ಯರದರರ್ಥವೇನೆನುತ ಗುರುಗಳನ್ನು ತಾವ್ ಕೇಳಿದೊಡೆ ಎರೆಡು ವರ್ಷ ತಿಂಗಳು ದಿನವೆರಡೆರಡು ಇರುವುದು ಧರೆಯೊಳಗೆಂದರು ರಾಯರು 3 ಆದವಾನಿಗೆ ಗುರು ಸಂಚಾರ ಪೋಗಿರೆ ಆ ದಿವಾನ ವೆಂಕಣ್ಣ ಬಲು ಆದರಿಸಿದ ಬಳಿ ತಾ ನವಾಬನಿಂದ ಮೋದದಿ ಕೊಡಿಸಿದ ಮಂಚಾಲೆಯನು 4 ಹಿಂದೆ ಪ್ರಹ್ಲಾದರು ಯಾಗವ ರಚಿಸಿದ ಸುಂದರ ಕ್ಷೇತ್ರವಿದೆಂಬುದನು ತಂದು ಮನಕೆ ಗುರುರಾಯರೀ ಕ್ಷೇತ್ರವ ನಂದು ಪಡೆದು ತಾವಿಲ್ಲಿಯೇ ನಿಂತರು 5 ಉತ್ತಮ ನೀಲವರ್ಣದ ಶಿಲೆಯಪಳಿರಿಸಿ ಕೆತ್ತಿಸಿ ವೃಂದಾವನತರಿಸಿ ಕ್ಷೇತ್ರರಕ್ಷಣೆಯಗಷ್ಟ ದಿಕ್ಕುಗಳಲಿ ದೇವ ಮೂರ್ತಿಗಳನು ಸ್ಥಾಪಿಸಿ ನಿಲಿಸಿದರು 6 ವೃಂದಾವನದಲಿ ಸ್ಥಾಪಿಸಲೇಳ್ನೂರು ಚಂದದ ಸಾಲಿಗಾಮಗಳ ತಂದಿಟ್ಟರೆ ಸಿದ್ಧತೆಗಳು ಸಕಲವು ಕುಂದಿಲ್ಲದಂದೆ ನಡೆದಿರಲಾಗಲೆ 7 ಮುಂದಕೆ ತಮ್ಮ ಸಂಸ್ಥಾನವ ವಹಿಸಿ ಯೋ ಗೀಂದ್ರರೆಂಬ ಪ್ರಿಯ ಶಿಷ್ಯರಿಗೆ ಸಂದಿಪ ವಿರಹದಿ ನೊಂದಿದ ಶಿಷ್ಯರ ವೃಂದವ ಬಲು ಸಂತೈಸಿದರಾಗಲೇ8 ನಲವತ್ತೇಳು ಸಂವತ್ಸರ ನಾಲ್ಕು ತಿಂ ಗಳು ಇಪ್ಪತ್ತೊಂಭತ್ತು ದಿನಕಾಲ ನಲವಿನಿಂದ ವೇದಾಂತ ಸಾಮ್ರಾಜ್ಯವ ಸಲಹಿ ಸುಕೀರ್ತಿಯ ಗಳಿಸಿದ ಬಳಿಕ 9 ಸಾವಿರದೈನೂರು ತೊಂಭತ್ಮೂರನೆ ಕ್ರತು ಸಂವತ್ಸರದ ಶ್ರಾವಣ ಕೃಷ್ಣ ದ್ವಿತೀಯದ ಗುರುವಾರ ವಾಸರ ಮುಹೂರ್ತದಿ ಗುರುವರ 10 ಹಸ್ತದಿ ಜಪಮಾಲೆ ಪಿಡಿದು ಯೋಗೀಂದ್ರರ ಹಸ್ತಲಾಘವವ ಸ್ವೀಕರಿಸಿ ಸ್ವಸ್ತಿವಾಚನಗಳ್ ವಿಪ್ರರು ಪೇಳುತಿರೆ ಅರ್ಥಿಯಲಿ ವೃಂದಾವನವ ಪ್ರವೇಶಿಸಿ 11 ಪದ್ಮಾಸನದಲಿ ಮಂಡಿಸಿ ಎದುರಲಿ ಮುದ್ದುಪ್ರಾಣೇಶನ ನೋಡುತಲಿ ಪದ್ಮನಾಭನ ಧ್ಯಾನದೊಳಿರೆ ಜಪಸರ ಬಿದ್ದು ಬಿಡಲು ಮುಚ್ಚಳಿಕೆಯನಿಡಲು 12 ನೆರೆದಿಹ ವಿಪ್ರರು ಜಯ ಜಯವೆನ್ನುತ ಪರಿಪರಿ ರಾಯರ ಪೊಗಳಿದರು ಕರಿಗಿರೀಶನ ಕರುಣ ಪಡೆದ ನಮ್ಮ ಗುರುಸಾರ್ವಭೌಮನ ಸರಿಯಾರಿಹರು 13
--------------
ವರಾವಾಣಿರಾಮರಾಯದಾಸರು
ವೆಂಕಟೇಶ ಜಗದೀಶ | ವೆಂಕಟೇಶ || ವೆಂಕಟೇಶ ಜಗದೀಶ ಸದರುಶನ | ಶಂಖಪಾಣಿ ಅಕಳಂಕ ಚರಿತಾ ಪ ನಭಾಸ್ಥಾನನರಸಿಜನಾಭ ಭಜಕರ ಸು | ಲಭಾ ವಸುಧಾ ಶ್ರೀ ದುರ್ಗಾವ | ಭೂಷಣನ ಪಾಲಿಸಿದ ಪಾವನಕಾಯ | ದಾಸರುಗಳ ಕಾಹುವ ಶೇಷಭೂಷಾ 1 ದತ್ತ ವೈಕುಂಠ ಮಹಿದಾಸ ಹಯಗ್ರೀವ ಹಂಸಾ | ಸೂನು ತಾಪಸಾ | ಚಿತ್ತಜಪಿತ ದೇವೋತ್ತಮ ಆಗಮಾ | ಸ್ತೋತ್ರವಿನುತ ಜಗವ ಸುತ್ತಿಪ್ಪ ಸುರಗಂಗೆ | ಪೆತ್ತೆ ಮಂದರಗಿರಿ | ವಿತ್ತ ಸಂಪತ್ತು ಇತ್ತಾ 2 ಅಜಿತ ನಾರಾಯಣಾ ವಿಷ್ವಕ್ಸೇನ | ಗಜವರದ ಹರಿವಿದ್ಭಾನು | ಸುಜನಪಾಲ ಪಂಕಜದಳ ಲೋಚನ | ತ್ರಿಜಗದೈವವೆ ದನುಜಕುಲ ಮದರ್Àನ | ಅಜಕಾನನ ವಾಸ ವಿಜಯವಿಠ್ಠಲ ರವಿತೇಜ ವಿದ್ವದ್ ರಾಜಾ 3
--------------
ವಿಜಯದಾಸ
ಶರ್ವೇಡ್ಯ ಮೋಹನ ವಿಠಲ ಪೊರೆ ಇವನ ಪ ಸರ್ವತ್ರ ಸರ್ವದಾ | ಸರ್ವ ಮಂಗಳನೇ ಅ.ಪ. ಸುಕೃತ | ರಾಶಿ ಫಲಿಸಿತೋ ಇವಗೆದಾಸ ದೀಕ್ಷೆಯಲಿ ಮನ | ಲೇಸುಗೈದಿಹನೋ |ವಾಸವಾದೀ ವಂದ್ಯ | ಭಾಸುರಾಂಗನೆ ದೇವದೋಷಾಗಳನಳಿದು ಸಂ | ತೋಷವನೆ ಪಡಿಸೋ1 ಹರಿದಾಸ ರೊಲಿದಿವಗೆ | ದರುಶನವನಿತ್ತಿಹರುಗುರು ರಘೋತ್ತಮರಂತೆ | ಬೃಂದಾವನಸ್ಥಾನರಹರಿಯು ಸ್ವಪ್ನದಲಿ | ಹರಿಹಯಾಸ್ಯವ ತೆರದಿದರುಶನಕೆ ಕಾರಣವು | ಪರಮ ಪ್ರಿಯರ್ದಯವೂ 2 ಅದ್ವೈತ ತ್ರಯಜ್ಞಾನ | ಸಿದ್ಧಿಸುತ ಸಂಸಾರಅಬ್ಧಿಯನೆ ಉತ್ತರಿಸೊ | ಮಧ್ವಾಂತರಾತ್ಮಾ 3 ಕಿಂಕಿಣಿಯ ಶೋಭಿತನೆ | ಶಂಕರೇಡ್ಯನೆ ನಿನ್ನಅಂಕಿತವ ನಿತ್ತಿಹೆನೊ | ಲೆಂಕತನದವಗೇವೆಂಕಟ ಕೃಷ್ಣ ಹೃತ್ | ಪಂಕಜದಿ ತವರೂಪಕಿಂಕರಗೆ ತೋರೆಂದು | ಶಂಕಿಸದೆ ಬೇಡ್ವೇ 4 ಸರ್ವಜ್ಞ ಸರ್ವೇಶ | ದುರ್ವಿಭಾವ್ಯನೆ ಹರಿಯೆದರ್ವಿಜೀವನ ಕಾವ | ಹವಣೆ ನಿನದಲ್ಲೇ |ಪರ್ವ ಪರ್ವದಿ ಇವಗೆ | ನಿರ್ವಿಘ್ನ ನೀಡಯ್ಯಗುರ್ವಂತರಾತ್ಮ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರೀ ಅಕ್ಷೋಭ್ಯ ತೀರ್ಥರ ಚರಿತ್ರೆ ಅಕ್ಷೋಭ್ಯ ತೀರ್ಥಗುರು ಸಾರ್ವಭೌಮರು ಎಮ್ಮ ರಕ್ಷಿಪ ಕೃಪಾನಿಧಿಗೆ ಶರಣು ಶರಣೆಂಬೆ ಪಕ್ಷೀಶ ವಾಹನ್ನ ಲಕ್ಷ್ಮೀಶ ಕಮಲಾಕ್ಷ ವಿಷ್ಣು ಆತ್ಮಗೆ ಪ್ರಿಯ ಸತ್ತತ್ವವಾದಿ ಪ ಅಖಿಳಗುಣ ಆಧಾರ ನಿರ್ದೋಷ ಶ್ರೀರಮಣ ಜಗದಾದಿ ಮೂಲಗುರು ಅಗುರು ಶ್ರೀ ಹಂಸ ವಾಗೀಶ ಸನಕಾದಿ ದೂರ್ವಾಸಾದಿಗಳ ಪೀಳಿಗೆ ಗುರುಗಳಿಗೆ ಶರಣು ಶರಣೆಂಬೆ 1 ಅಚ್ಯುತ ಪ್ರೇಕ್ಷಾಖ್ಯ ಪುರುಷೋತ್ತಮತೀರ್ಥ ಅಚ್ಯುತ ಪ್ರೇಕ್ಷರ ಶಿಷ್ಯರೆಂದೆನಿಪ ಅಚ್ಯುತನ ಮುಖ್ಯಾಧಿಷ್ಠಾನ ಶ್ರೀಮಧ್ವ ಖಚರೇಂದ್ರ ಫಣಿಪಮೃಡ ಅಮರೇಂದ್ರವಂದ್ಯ 2 ಕರ ಅಬ್ಜಜರು ಪದ್ಮನಾಭನೃಹರಿ ಮಾಧವಾಕ್ಷೋಭ್ಯ ಈ ಮಹಾಗುರುಗಳು ಸರ್ವರಿಗು ಆನಮಿಪೆ ಸುಮನಸ ಶ್ರೇಷ್ಠರು ಮಹಿಯಲಿ ಪುಟ್ಟಿಹರು 3 ಸಾಧು ವೈದಿಕ ವೇದಾಂತ ಸತ್ತತ್ವ ಮತ ಮಧ್ವ ಮತವೇ ಅನ್ಯ ಯಾವುವೂ ಅಲ್ಲ ಎಂದು ನಿಶ್ಚೈಸಿ ಶೋಭನಭಟ್ಟಸ್ವಾಮಿ ಶಾಸ್ತ್ರಿ ಮೊದಲಾದವರು ಮಧ್ವಗೆರಗಿದರು 4 ಸೂರಿವರ ಶೋಭನ ಭಟ್ಟಾದಿಗಳಂತೆ ಸಾರಾಸಾರ ವಿವೇಕಿ ಗೋವಿಂದ ಶಾಸ್ತ್ರಿಯು ಮಹಾ ದೊಡ್ಡ ಪಂಡಿತರು ತಾನೂ ಎರಗಿ ಶರಣಾದರು ಮಧ್ವರಾಯರಲಿ 5 ಇಂಥಾ ಮಹಾತ್ಮರ ಇನ್ನೂ ಬಹು ಸಜ್ಜರನ ಉದ್ಧರಿಸಲಿಕ್ಕೇವೆ ಹರಿ ಅಜ್ಞೆಯಿಂದ ಈ ಧರೆಯಲ್ಲಿ ತೋರಿಹ ಮಧ್ವರಾಯರ ಶಾಸ್ತ್ರಿ ಬೇಡಿದರು ಸಂನ್ಯಾಸ ಕೊಡು ಎಂದು 6 ಸಚ್ಚಾಸ್ತ್ರ ಪ್ರವಚನ ಪಟು ವಿದ್ವನ್ಮಣಿಯು ನಿಶ್ಚಲ ಭಕ್ತಿಮಾನ್ ಸವೈರಾಗ್ಯ ವಿಪ್ರ ಅಚಲ ಸತ್ತತ್ವನಿಶ್ಚಯ ಜ್ಞಾನಿ ಶಾಸ್ತ್ರಿಗೆ ಅಕ್ಷೋಭ್ಯ ನಾಮನ ಇತ್ತರಾಚಾರ್ಯ 7 ಪ್ರಣವ ಮೂಲಾದಿ ಸುಮಂತ್ರ ಉಪದೇಶಿಸಿ ತನ್ನ ಮಠದಲ್ಲಿ ಅಕ್ಷೋಭ್ಯತೀರ್ಥರಿಗೆ ವನರುಹನಾಭರಿಂದ ನಾಲ್ಕನೇ ಸ್ಥಾನವ ಘನದಯದಿ ಇತ್ತರು ಆನಂದಮುನಿಯು 8 ಬದರಿಗೆ ಮೂರನೇ ಬಾರಿ ತೆರಳುವ ಪೂರ್ವ ಮಧ್ವ ಮುನಿ ನೇಮಿಸಿದ ಕ್ರಮದಿಂದಲೇವೆ ಮಾಧವ ತೀರ್ಥರು ವೇದಾಂತ ಪೀಠದಲಿ ಕುಳಿತುಜ್ವಲಿಸಿದರು 9 ಪದ್ಮನಾಭತೀರ್ಥರ ಪಾದಪದ್ಮಗಳಿಗೆ ಸದಾ ನಮೋ ನಮೋ ಎಂಬೆ ಇವರ ಪೀಳಿಗೆಯ ವಿದ್ಯಾಕುಶಲರು ಸೂರಿಗಳ ಚರಣಕ್ಕೆ ಸಂತೈಪರೆಮ್ಮ ಸದಾ ನಮೋ ಸರ್ವದಾ 10 ನರಹರಿತೀರ್ಥರು ಚರಣ ಸರಸೀರುಹದಿ ಶರಣಾದೆ ಕಾಯ್ವರು ಈ ಮಹಾನ್ ಇಹರು ವರಾಹ ತನಯಾ ಸರಿದ್ವರಾಕ್ಷೇತ್ರದಲಿ ಶ್ರೀ ವೃಂದಾವನದೊಳು ಹರಿಯ ಧ್ಯಾನಿಸುತ 11 ಮಾಧವತೀರ್ಥರ ಪಾದಪದ್ಮಗಳಿಗೆ ಸದಾನಮೋ ನಮೋ ಎಂಬೆ ಇವರ ಪೀಳಿಗೆಯ ಯತಿಗಳೂ ಭಕ್ತಿಮಾನ್ ಜ್ಞಾನಿಗಳ ಚರಣಕ್ಕೆ ಆದರದಿ ನಮಿಸುವೆ ಸದಾ ಪೊರೆವರೆಮ್ಮ 12 ಸುಲಭರು ಸುಜನರಿಗೆ ಶರಣರ ಸಲಹುವರು ಮಾಲೋಲನೊಲಿದಿಹ ಅಕ್ಷೋಭ್ಯತೀರ್ಥ ಬಲು ಖಿನ್ನ ಬ್ರಾಹ್ಮಣನು ಬ್ರಹ್ಮ ಹತ್ಯ ಮಾಡಿದವ ಕಾಲಲ್ಲಿ ಬಿದ್ದು ಶರಣಾದ ಗುರುಗಳಲಿ 13 ಗುರು ದಯಾನಿಧಿ ಅಕ್ಷೋಭ್ಯತೀರ್ಥರು ಆಗ ಶರಣಾದ ಪುರುಷನ ಪಶ್ಚಾತ್ತಾಪ ಖರೆಯೇ ಎಂಬುವುದನ್ನು ಜನರಿಗೆ ತಿಳಿಸಲು ಏರಿ ಮರ ನದಿಯಲಿ ಬೀಳೆ ಹೇಳಿದರು 14 ತನ್ನಯ ಮಹಾಪಾಪ ಕಳೆಯುವ ಗುರುಗಳು ಏನು ಹೇಳಿದರೂ ಮಾಡುವೆ ತಾನೆಂದು ಸನ್ನಮಿಸಿ ಗುರುಗಳಿಗೆ ನದಿ ಬದಿ ಮರಹತ್ತೆ ದೀನ ರಕ್ಷಕ ಗುರು ಇಳಿಯೆ ಹೇಳಿದರು 15 ವೃಕ್ಷದಿಂದಿಳಿದ ಆ ವಿಪ್ರಘಾತುಕನ ಮೇಲೆ ಅಕ್ಷೋಭ್ಯತೀರ್ಥರು ಶಂಖತೀರ್ಥವನ್ನ ಪ್ರೋಕ್ಷಿಸಿ ಆತನ ಮಹಾ ಬ್ರಹ್ಮಹತ್ಯಾ ದೋಷ ಕಳೆದರು ಪಂಕ್ತಿಯಲಿ ಸೇರಿಸಿದರು 16 ಶಂಖತೀರ್ಥದ ಮಹಿಮೆ ಅಲ್ಲಿದ್ದ ಜನರಿಗೆ ಶಂಕೆಯಲ್ಲದೆ ತಿಳಿಸಿ ಬಂದು ಬೇಡುವವರ ಡೊಂಕು ಕೊರತೆಗಳೆಲ್ಲ ನೀಗಿಸಿ ಯೋಗ್ಯದಿ ಶ್ರೀಕಾಂತನಲಿ ಭಕ್ತಿ ಪುಟ್ಟಿಸಿಹರು 17 ತಮ್ಮಲ್ಲಿ ಬೇಡುವ ಅಧಿಕಾರಿಯೋಗ್ಯರಿಗೆ ಶ್ರೀಮಧ್ವಶಾಸ್ತ್ರದ ದಾಢ್ರ್ಯ ಜ್ಞಾನ ಶ್ರೀ ಮನೋಹರನನ್ನ ಅಪರೋಕ್ಷಿಕರಿಸುವ ಸುಮಹಾ ಉಪಾಯವ ಅರುಹಿಹರು ದಯದಿ 18 ಮಧ್ವಸಿದ್ಧಾಂತ ಸ್ಥಾಪನ ಮಾತ್ರವಲ್ಲದೇ ವೇದ ವಂಚಕ ದುರ್ಮತಗಳ ಖಂಡನವ ಪೋದಕಡೆ ಮಾಡುತ್ತಾ ದಿಗ್ವಿಜಯ ಜಯಶೀಲ - ರೆಂದು ಮರ್ಯಾದೆಗಳ ಕೊಂಡಿಹರು ಜಗದಿ 19 ಅದ್ವೈತವಾದಿಯು ಶಾಂಕರ ಮಠಾಧೀಶ ವಿದ್ಯಾರಣ್ಯರು ಪ್ರಸಿದ್ಧ ಪಂಡಿತರು ಎದುರು ನಿಂತರು ಅಕ್ಷೋಭ್ಯ ತೀರ್ಥರ ಮುಂದೆ ವಾದಿಸಿದರು ಮುಳುಬಾಗಿಲು ಸಮೀಪ 20 ಶ್ವೇತಕೇತು ಉದ್ದಾಲಕರ ಸಂವಾದ ತತ್ವ ಮಸಿ ವಾಕ್ಯವೇ ವಾದದ ವಿಷಯ ವೇದಾಂತ ದೇಶಿಕರು ರಾಮಾನುಜೀಯತಿಯ ಅಧ್ಯಕ್ಷತೆಯಲ್ಲಿ ಸಭೆಯು ಕೂಡಿತ್ತು 21 ಛಾಂದೋಗ್ಯ ಉಪನಿಷತ್ತಲ್ಲಿರುವ ವಾಕ್ಯವು ಸಆತ್ಮಾ ತತ್ವಮಸಿ ಎಂಬುವಂಥಾದ್ದು ಭೇದ ಬೋಧಕವೋ ಅಭೇದ ಬೋಧಕವೋ ಎಂದು ವಾದವು ಆ ಈರ್ವರಲ್ಲಿ 22 ಆತ್ಮ ಶಬ್ದಿತ ನಿಯಾಮಕಗು ನಿಯಮ್ಯ ಜೀವನಿಗೂ ಭೇದವೇ ಬೋಧಿಸುವುದು ಆ ವಾಕ್ಯವೆಂದು ಸಿದ್ಧಾಂತ ಬಹುರೀತಿ ಸ್ಥಾಪಿಸಿದರು ಅಕ್ಷೋಭ್ಯರು ಸೋತಿತು ವಿದ್ಯಾರಣ್ಯರ ಐಕ್ಯವಾದ 23 ಅಸಿನಾತತ್ವ ಮಸಿನಾ ಪರಜೀವಪ್ರಭೇದಿನಾ ವಿದ್ಯಾರಣ್ಯ ಮಹಾರಣ್ಯಂ ಅಕ್ಷೋಭ್ಯ ಮುನಿರಚ್ಛಿನತ್ ಎಂದು ಬರೆದರು ತಮ್ಮಯ ಗ್ರಂಥದಲ್ಲಿ ಮಧ್ಯಸ್ತ ವೇದಾಂತದೇಶಿಕ ಸ್ವಾಮಿಗಳು 24 ಇಳೆಯ ಸಜ್ಜನರಿಗೆ ಜಯತೀರ್ಥರನಿತ್ತ ಮಾಲೋಲಪ್ರಿಯ ಅಕ್ಷೋಭ್ಯರ ಮಹಿಮೆ ಅಲ್ಪಮತಿ ನಾನರಿಯೆ ಇಲ್ಲಿ ಒಂದೋ ಎರಡೋ ಸ್ಥಾಲಿ ಪುಲೀಕ ನ್ಯಾಯದಲಿ ಪೇಳಿಹುದು 25 ನದಿ ದಡದಿ ಕುಳಿತಿದ್ದ ಅಕ್ಷೋಭ್ಯತೀರ್ಥರು ಎದುರಾಗಿ ನದಿಯಲ್ಲಿ ಆಚೆ ದಡದಿಂದ ಕುದುರೆ ಸವಾರನು ವರ್ಚಸ್ವಿ ಯುವಕನು ಬೆದರದೆ ಪ್ರವಾಹದಲಿ ಬರುವುದು ಕಂಡರು 26 ಕುದುರೆ ಮೇಲ್ ಆಸೀನನಾಗಿದ್ದ ಯುವಕನು ಕ್ಷುತ್‍ತೃಷಿ ಶಮನಕ್ಕೆ ಯತ್ನ ಮಾಡುತ್ತಾ ಉದಕವ ಕೈಯಿಂದ ತುಂಬಿಕೊಳ್ಳದಲೇ ಎತ್ತುಗಳು ಕುಡಿವಂತೆ ಬಾಯಿ ಹಚ್ಚಿದನು 27 ಮಾಧವ ಮಧ್ವರು ಮೊದಲೇ ಸೂಚಿಸಿದಂತೆ ಇಂದು ಆ ಕುರುಹರಿತು ಅಕ್ಷೋಭ್ಯರು ಇದು ಏನು ಪಶುವಂತೆ ಎಂದು ಧ್ವನಿಗೂಡಲು ಹಿಂದಿನ ಜನ್ಮ ಯುವಕಗೆ ನೆನಪು ಬಂತು 28 ಪಶು ಶಬ್ದ ಗುರುಮುಖದಿಂಬಂದಲಾಕ್ಷಣ ಪೂರ್ವ ಸಂಸ್ಕಾರ ಪ್ರತಿಭೆಯು ಉದಯವಾಯ್ತು ದಶಪ್ರಮತಿಗಳ ತಾನು ಎತ್ತಾಗಿ ಸೇವಿಸಿದ್ದು ಹಸನಾಗಿ ಟೀಕೆ ಬರೆಯಲಾಜÉ್ಞ ಕೊಂಡದ್ದು 29 ನಗಾರಿಸಮ ಬಲಿಯುವಕನು ಪ್ರವಾಹದ ವೇಗ ಲೆಕ್ಕಿಸದಲೇ ದಡಕೆ ತಾ ಬಂದು ಮುಗಿದುಕರ ಬಾಗಿಶಿರ ನಮಿಸಿ ಅಕ್ಷೋಭ್ಯರ ಆಗಲೇ ಸಂನ್ಯಾಸ ಕೊಡಲು ಬೇಡಿದನು 30 ಗಾಧಿ ಅರ್ಜುನ ಸಮ ಬಲರೂಪದಲಿ ತೋರ್ಪ ಈತ ರಾಯರ ಸುತನಾದರೂ ವೈರಾಗ್ಯ ಯುತ ಭಕ್ತಿಮಾನ್ ಸುಶುಭಲಕ್ಷಣನು ಎಂದು ಹರಿ ಮಧ್ವನಿಯಮಿತ ಅವಗೆ ಕೊಟ್ಟರು ಸಂನ್ಯಾಸ 31 ಶ್ರೀಯಃಪತಿಗೆ ಪ್ರಿಯತರ ಜಯತೀರ್ಥನಾಮವ ದಯಾಶೀಲ ಹೊಸಯತಿಗೆ ಇತ್ತು ಅಭಿಷೇಕ ಅಕ್ಷೋಭ್ಯ ಗುರುಮಾಡೆ ಗಗನದಿಂ ಪೂವರ್ಷ ಜಯ ಘೊಷ ಹರಡಿತು ಪರಿಮಳ ಸುಗಂಧ 32 ಶ್ರೀಮಧ್ವಾಚಾರ್ಯರು ಬೋಧಿಸಿ ತೋರಿಸಿದ ರಮಾಪತಿ ಪೂಜಾಸತ್ತತ್ವವಾದ ದುರ್ಮತ ಖಂಡನದ ರೀತಿಯ ಜಯಾರ್ಯರಿಗೆ ಸುಮ್ಮುದದಿ ಅರುಹಿದರು ಗುರುಸಾರ್ವಭೌಮ 33 ಶೀಲತಮ ಗುರುವರ್ಯ ಅಕ್ಷೋಭ್ಯತೀರ್ಥರು ಇಳೆಯಲ್ಲಿ ಮಧ್ವಮತ ಹರಿಭಕ್ತಿಯನ್ನ ಬೆಳೆಸಲು ಪ್ರತ್ಯೇಕ ಮಠವ ಸ್ಥಾಪಿಸಿದರು ತ್ರೈಲೋಕ ಭೂಷಣ ತೀರ್ಥರ ಮೊದಲ್ಮಾಡಿ34 ಆದಿ ಮಠ ಹರಿನೈದು ಸಮೀಪ ಪಟ್ಟವ ಆಳಿ ಹನ್ನೊಂದು ನೂರು ಅರವತ್ತೇಳ ಶಕವರುಷ ವದ್ಯ ಪಂಚಮಿ ಮಾರ್ಗಶಿರ ವಿಶ್ವಾವಸುವಲ್ಲಿ ಮಧ್ವ ಹೃದಯಾಬ್ಜಗನ ಪುರವ ಐದಿದರು 35 ಮತ್ತೊಂದು ಅಂಶದಲಿ ಮಳಖೇಡ ಗ್ರಾಮದಲಿ ನದಿ ತೀರದಲಿ ಹರಿಯ ಧ್ಯಾನ ಮಾಡುತ್ತಾ ಬಂದು ಬೇಡುವವರಿಷ್ಟಾರ್ಥ ಪೂರೈಸುತ ವೃಂದಾವನದಲ್ಲಿ ಕುಳಿತಿಹರು ಕರುಣಿ 36 ಶಾಶ್ವತ ಸರ್ವಾಶ್ರಯ ಗುಣಗಣಾರ್ಣವ ಅನಘ ಜೀವ ಜಡ ಭಿನ್ನ ಪರಮಾತ್ಮ ವಿಧಿತಾತ ಮಧ್ವಹೃತ್ಪದ್ಮಗ ಶ್ರೀ ಪ್ರಸನ್ನ ಶ್ರೀನಿವಾಸಗೆ ಸರ್ವದಾಪ್ರಿಯ ಅಕ್ಷೋಭ್ಯ ಗುರೋ ಶರಣು 37 ಪ || ಶ್ರೀ ಅಕ್ಷೋಭ್ಯ ತೀರ್ಥಚರಿತೆ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಜಗನ್ನಾಥತೀರ್ಥರ ದಿವ್ಯ ಮಹಿಮೆಯನು ರಾಜಿಸುವ ಹೈಮಲಿಪಿಯಲ್ಲಿ ಬರೆಯಲಿ ಬೇಕು ಪ ಸುಜನ ಸುರಭೂಜರಾಗಿಹ ಮಹಾ ಕರ ಸಂಜಾತ ಅ.ಪ ಉದ್ಭವಿಸಿದರು ಗಾಲವರು ಜಗದೊಳೆಂಬಂಶ ವೇದ್ಯವಾಯಿತು ಆಪ್ತಜನವೃಂದಕೆ ಮಧ್ವಮತ ತತ್ವಗಳನುದ್ಧಾರವನೆಗೈದ ದಿಗ್ಧಂತಿಗಳತಿ ಪ್ರಸಿದ್ಧ ಸ್ಥಾನವ ಪಡೆದ 1 ಸಕಲ ಶಾಸ್ತ್ರಾರ್ಥ ನಿರ್ಣಯಗೈವ ಪರಸೂತ್ರ ನಿಕರಗಳಿಗಲವಬೋಧರ ಭಾಷ್ಯವ ಸುಖದಿಂದಲರಿಯಲುಪಕೃತಿಗೈದ ಯತಿಕುಲ ತಿಲಕ ಭಾಷ್ಯಾದೀಪಿಕಾಚಾರ್ಯರೆಂದತಿ ಖ್ಯಾತ 2 ಸರ್ವಗುಣ ಗುಣಪೂರ್ಣ ಸರ್ವತ್ರ ವ್ಯಾಪ್ತ ಹರಿ ಸರ್ವಭಕ್ತ ಪ್ರಸನ್ನನೆಂದರುಹಲು ಉರ್ವನುಗ್ರಹ ಪಡೆದ ಸರ್ವತಂತ್ರ ಸ್ವತಂತ್ರ 3
--------------
ವಿದ್ಯಾಪ್ರಸನ್ನತೀರ್ಥರು
ಶ್ರೀ ಪ್ರಾಣದೇವರು ಹನುಮಂತ ಹನುಮಂತ ಮುನಿವ್ಯಾಸ ಕರಕಮಲಾರ್ಚಿತ ಜಯವಂತ ಪ ಭೂಲೋಲ ಕೋಲಜ | ಕೂಲ ಸುಮಂದಿರ ಪತಿ ವಂದಿತ ಕಾಲ ಕಾಲದಿ ನಿನ್ನ ವಾಲೈಸುವರ ಸಂಗ ಪಾಲಿಸು ಕರುಣದಿ | ಕಾಳಿಮನೋಹರ 1 ಬಾಣರೂಪನೆ ಪಂಚಬಾಣ ವಿವರ್ಜಿತನೆ | ಷ ಟ್ಕೋಣ ಮಧ್ಯದಿ ಬಂದು ನೀನೆಲಸಿ ಕ್ಷೋಣಿಗೀರ್ವಾಣ ಸುಶ್ರೇಣಿಯಿಂದರ್ಚನೆ ಮಾಣದೆ ಕೈಗೊಂಬ \ ವಾಣೀಶ ಸ್ಥಾನಾರ್ಹ 2 ಸಿಂಧು ಬಂಧನ ಶಾಮಸುಂದರ ವಿಠಲನಾ ದ್ವಂದ್ವಪಾದಾರವಿಂದಕ ಮಧುಪನೆಂದೆನಿಸಿದ ಗುರು ಭವಬಂಧನ ಬಿಡಿಸೋ ಕಾಯೋ 3
--------------
ಶಾಮಸುಂದರ ವಿಠಲ
ಶ್ರೀ ಬ್ರಹ್ಮಣ್ಯ ತೀರ್ಥರು ಪಾಲಿಸೊ ಗುರುವೆ ಬ್ರಹ್ಮಣ್ಯ | ತೀರ್ಥಕೇಳುವೆ ವರ ಸುರ ಮಾನ್ಯ ಪ ಕಾಳೀಯ ರಮಣನ | ಲೀಲ ವಿನೋದವಕಾಲ ಕಾಲಕೆ ಸ್ಮರಿಪ | ಶೀಲಸನ್ಮನವ ಅ.ಪ. ಜ್ಞಾನ ದಾಯಕನಾಗಿ ಮೆರೆವಾ | ಸ್ಥಾನಜ್ಞಾನ ಮಂಟಪದೊಳು ಇರುವಾ |ಮೌನಿ ವರೇಣ್ಯರೆ ಆನತ ಸುರತರುದಾನವಾರಣ್ಯ ಕೃ | ಶಾನುವೆ ಪಾಲಿಸೊ 1 ಇಷ್ಟ ಜನರ ಪರಿಪಾಲಾ | ದಯದೃಷ್ಟಿಲಿ ಜನರಘ ಜಾಲಾ |ಸುಟ್ಟು ಭಸ್ಮೀ ಭೂತ | ಅಷ್ಟ ಸೌಭಾಗ್ಯದವಿಠ್ಠಲ ಚರಣೇಷ್ಟ | ಹೃಷ್ಟನ್ನ ಮಾಡೆನ್ನ 2 ರವ್ಯಂಶ ಸಂಭೂತ ನೆನಿಸೀ | ಸರಿತ್ಕಣ್ವ ತಟದಿ ನೀನು ನೆಲೆಸೀ |ಪವನಾಂತಸ್ಥ ಗುರು | ಗೋವಿಂದ ವಿಠಲನಸ್ತವನ ಮಾಳ್ಪರ ಕಾವ | ಭುವನ ಪಾವನ ದೇವ 3
--------------
ಗುರುಗೋವಿಂದವಿಠಲರು
ಶ್ರೀ ಲಕ್ಷ್ಮೀನೃಸಿಂಹ ಪ್ರಾದುರ್ಭಾವ ದಂಡಕ ಶ್ರೀರಮಾ ಮಾನಿನೀ ಮಾನಸೇಂದೀವರೋತ್ಫುಲ್ಲ ಸಂಫುಲ್ಲ ಚಂದ್ರಾ ಚಿದಾನಂದ ಸಾಂದ್ರಾ ಸದಾ ಸನ್ನುತೇಂದ್ರಾ ನಮೋಪೇಂದ್ರ ನಿಸ್ತಂದ್ರ ನೀ ಕೇಳು, ಆ ರೀತಿ ಪ್ರಹ್ಲಾದನಲ್‍ಸಜ್ಜನಾಹ್ಲಾದನಲ್ ದೈತ್ಯ ಸತ್ಪುತ್ರರಾವೇಳೆ ಶ್ರೀಕಾಂತನ ಜ್ಞಾನ ಭಕ್ತಿ ಕ್ರಿಯಾಗಾಧೆಗಳ್ ಬೋಧೆಗಳ್ ಕೇಳಿ ತಾವೆಲ್ಲರಾಮಾರ್ಗದಲ್ಲೇ ಸುನಿರ್ದಿಷ್ಟ ಸನ್ಮಾರ್ಗದಲ್ಲೇ ಪರಾಭೂತ ಷಡ್ವರ್ಗದಲ್ಲೇ ಮನಸ್ಸಿತ್ತು ಧರ್ಮಾರ್ಥ ಕಾಮಸ್ಪøಹ ಗ್ರಂಥಗಳ್ 10 ಸಿದ್ಧ ಸಂಸಾರ ಸಂಬಂಧಗಳ ಹತ್ತುವೂದಾಗದೇ ದಾನವಾಚಾರ್ಯರಾಶ್ಚರ್ಯದಿಂದಾಗ ತಾವೇಸುರೀತಿಂದಲಾಯಾಸುರೀವಿದ್ಯೆಗಳ ಗದ್ಯಗಳ್ ಪದ್ಯಗಳ್ ಪಾಠ ಪೇಳ್ತಿದ್ದರಾ ಪಾಠಗಳ್ ಒಪ್ಪದೇ ತಪ್ಪದೇನಿಂತು ಮಾರಾಟಗಳ್ ಮಾಡುತಾ ವಿಷ್ಣುಭಕ್ತಿ ಕ್ರಿಯಾಪಾಠಗಳ್ ಪಾಡುತಾ ಎಲ್ಲರೊಂದಾಗೆ ತಾವ್‍ನೋಡಿ ಅಂಜ್ಯಾಡಿ ಇನ್ನೇನು ಈಸೂನುಗಳ ದೈತ್ಯರಾಟ್ ಸೂನನಲ್ ಬುದ್ಧಿ ಭೇದೈಸಿ ದುರ್ಬೋಧಗಳ್ ಕೇಳಿ ದುಸ್ಸಾಧ್ಯರಂ 20 ಕರ್ಣ ಕಾಠೋರ್ಯ ಬಾಣಾಳಿಗಳ್ ರೀತಿ ಅಪ್ರೀತಿಯಾಸೂತಿ ದುರ್ನೀತಿ ತಾ ಸೈಸದೇ ಕೋಪಸಂದೀಪನಾವೇಶದಿಂದಲ್ ಚಲದ್ಗಾತ್ರನಾಗೆದ್ದು ಪ್ರೋದ್ಯದ್ದಯಾಪಾತ್ರನಂತಿಪ್ಪ ತತ್ಪುತ್ರ ಸಂಹಾರದಲ್ ಚಿತ್ತವಂ ಪೆತ್ತವಂ ಪಾಪÀಸಂವೃತ್ತನೇತ್ರ ಪ್ರಮಾಕ್ಷೇಕ್ಷನಾಗಲ್ ಸಮ 30 ಕ್ಷೈಸಿ ದುಷ್ಟೋಕ್ತಿಗಳ್ ಬಾಗುತಾ ಕೂಗುತಾಸಾಧು ಸಧ್ಭಕ್ತಿಯಿಂದಲ್ ಮಹದ್ಭಕ್ತಿಯಿಂದಲ್ಲಿ ತನ್ನಲ್ಲಿ ಚೆನ್ನಲ್ಲಿ ಬದ್ಧಾಂಜಲಿಯಾಗಿ ಸಿದ್ಧಾಂತ ಸದ್ಭಕ್ತಿಯಿಂದಲ್ಲಿ ನಿಂದಿದ್ದ ಪ್ರಹ್ಲಾದ ಧೀಮಂತಗೇ ನಿರ್ಮಲಸ್ವಾಂತಗಾವೇಳೆ ಪಾದಾಹತವ್ಯಾಳಿಯಂತೇ ಭುಜಶ್ವಾಸಗಳ್ ಬೇಸಿಗಳ್ ಬೀಸುತಾಕಂದಗಾ ತಂದೆ ಸುಭಾಷಿಪಂ. ಹೋಯೆಲೋ ದುರ್ವಿನೀತಾಯೆಲೋ ಮಂದಬುದ್ಧೇಯೆಲೋಇಂತು ನೀ ಸ್ತಬ್ಧನಾದೇತಕೋ ವಂಶಘಾ40 ತೀಯೆಲೋ ಪಾಪಜಾತೀಯೆ ನೀ ಹೀಗೆ ಮಚ್ಛಾಸನಾತೀನಾಗಪ್ಪೊಡೇ ನಿನ್ನ ನಿನ್ನಾ ಯಮದ್ವಾರಕೇ ಕಳುಹುವೆಂ ನೋಡೆಲಾನಾನು ಕೋಪಿಷ್ಠನಾಗಿಪ್ಪೊಡೇ ಅಂಜಿ ಮೂರ್ಲೋಕಗಳ್ ಲೋಕಪಾನೀಕಗಳ್ ಕಂಪ ಕಾಣುತ್ತವಿಂಥಾ ಬಲಿಷ್ಠನ್ನ ನೀನೆನ್ನ ಸಂಪದ್ಬಲ ಶ್ರೀಯನಾಶ್ರೈಸದೇ ಬಿಟ್ಟರಿನ್ನಾವನಲ್ ನೀಂ ಬಲಶ್ರೀಯನಾಶ್ರೈಸುವೇಯೋ ಎಲಾ ಏಕೆ ಮಚ್ಛಾಸನಾತೀತನಾಗೂವಿಯೋ ಕಂದ ಪೇಳೆಂದರೇ, ತಂದೆಗಾ 50 ತಂದೆ ಕೇಳಯ್ಯ ಬ್ರಹ್ಮಾದಿ ಆಸ್ತಂಭಪರ್ಯಂತವುಂ ಜಂಗಮಸ್ಥಾವರಾತ್ಮ ಪ್ರಪಂಚೋಚ್ಚ ನೀಚ ಪ್ರಜಾನೀಕ ಯಾವತ್ತದಾವಾತನಾಧೀನದಲ್ಲಿಪ್ಪುದೋ ಆತನೇ ಎನ್ನಗೇ ನಿನ್ನಗೇಇನ್ನು ಮಿಕ್ಕಾದ ಚೈತನ್ಯಕೆಲ್ಲಾ ಬಲಶ್ರೀಯು ತಾನಾದನೇ ಕಾದನೇ ಕಾಲರೂಪೀಶ್ವರೋರುಕ್ರಮಾಕಾರನೆಂಬಾತನೇಆತನೇ ಆತನೇ ತೇಜ ಓಜಸ್ಸಹಾಸತ್ವ ಸಂಪದ್ಬಲ ಶ್ರೀಂದ್ರಿಯಾತ್ಮನ್ ಸ್ವಯಂ60 ಸ್ವಾಂತ ನೀನಿತ್ತು ಸರ್ವತ್ರ ಸಮಚಿತ್ತನಾಗಯ್ಯ ಎನ್ನಯ್ಯನೇ ನಿನ್ನಗಾಮೇಲೆ ವಿದ್ವೇಷ ಮಾಡೂವರಾರಿಲ್ಲವಂತಸ್ಸಿನಲ್ಲಿಪ್ಪ ಕಾಮಾದಿ ಷಡ್ವರ್ಗವೆಂಬಾ ಮಹಾವೈರಿಗಳ್ ಕಳ್ಳರಂತೆಲ್ಲರುಂ 70 ದೇಹವೆಂಬೋ ಮಹಾರಾಜಧಾನೀ ವೃಥಾಹಾನಿ ಮಾಡೂವರಂಥಾವರಂ ಗೆಲ್ಲದೇಕೆಲ್ವರೀ ದಿಕ್ಕುಗಳ್ ಸರ್ವವಂ ಗೆದ್ದವೆಂತೆಂದು ಹಿಗ್ಗೂವರಂತಸ್ಸಿನಲ್ಲಿಪ್ಪ ಕಾಮಾದಿ ಷಡ್ವರ್ಗ ಗೆದ್ದಾತಗೇ ಜ್ಞಾನಸಂಪೂತಗೇ ಸಾಧು ಸಂಭೂತ ಸರ್ವಂಸಮಂಚೇತಗಾಮೇಲೆ ತನ್ಮೋಹ ಸಂಜಾತವೆಂತಪ್ಪುದೋ ಶಾತ್ರವವ್ರಾತವೆಲ್ಲಿಪ್ಪುದಯ್ಯಾ ಸದಯ್ಯಾತ್ಮನೇ ತಿಳಿದು ನೋಡೆಂದು ತಾನಿಂದು ಮಾತಾಡಲು, ಶತ್ರುವಂತಿಪ್ಪ ಪು 80 ಇಂದು ನಾವೊಂದು ಪೇಳುತ್ತಿರುತ್ತಿದ್ದರೊಂದಕ್ಕೆ ಹತ್ತಾಗಿ ನೀನೇವನೋ ವಿಷ್ಣುವೆಂಬಾತ ಬೇರೊಬ್ಬ ತಾನಿಪ್ಪನೆಂದೂಹಿಸೂವೇಯ ಹೋ ಹೋಯೆಲಾಸಾವಿಗೀ ಬುದ್ಧಿ ನೀ ಸಿದ್ಧ ಮಾಡೀದಿ ಎಂಬೋದಿದಂ ವ್ಯಕ್ತವಂತೆಲ್ಲ ನಾಂ ಬಲ್ಲೆ ಇಂ 90 ತಲ್ಲದೇ ನಿನ್ನಗೀರೀತಿ ದುರ್ಬುದ್ಧಿ ಪುಟ್ಟೂವುದೇ ಮೃತ್ಯುಸಿದ್ಧರ್ಗೆ ವಿಷ್ಣುತ್ವ ಸಂಭಾಷೆಯಲ್ಲಿಚ್ಛೆ ಬೇಕಾಗಿ ಹೋದಲ್ಲದೇಬಲ್ಲೆನೆಲ್ಲಾ ಎಲೋ ಮಂದನೇ ಮಂದಭಾಗ್ಯೋಕ್ತಿಗಳ್ ಏಕೆ ನೀನಾಡುವೇ ಅಕ್ಕಟಾಎನ್ನಗಿನ್ನಾ ಜಗನ್ನಾಥನಿನ್ನಾವನೋಆತನೆಲ್ಲಿಪ್ಪ, ಸರ್ವತ್ರದಲ್ಲಿಪ್ಪ ನೀನೆಂದಡೇ ಡಿಂಭಕಾಡಂಭಕಾಡೋಣಗಳ್‍ಸಾಕು ಮಾಡಿನ್ನು ಮೇಲೀ ಸಭಾಸ್ತಂಭದಲ್‍ಶೀಘ್ರ ಸಂರಂಭದಲ್ ತೋರು ನೀ ತೋರದೇ 100 ಪೋದೆಯಾ ಇನ್ನು ನೀ ಮಾರುಮಾತಾಡದ್ಹಾಗೇ ಶಿರಚ್ಛೇದ ಮಾಡೂವೆನೋ ನಿನ್ನಗೀವೇಳೆಯಲ್ ವಿಷ್ಣುವೆಂತೆಂದದಾವಾತ ತಾನಡ್ಡ ಬಂದಾನೋ ನಾ ನೋಡುವೆಂ ವಿಷ್ಣುವೇಬೇಡಬೇಕಾದ ದಿಕ್ಕಾಗಿ ನಿನಗಿಪ್ಪಡೇಬೇಡಿಕೋ ಮೂರ್ಖನೇ ಎಂದು ಕ್ರೋಧಾಗ್ನಿಯಿಂದುರ್ಪಿ ದುರ್ಭಾಷೆಯಲ್ ತನ್ನ ಪುತ್ರನ್ನ ತಾದೂರುತಾ ಹಾರುತಾ ಕೈಲಿ ಖಟ್ ಪೆಟ್ಕವಂಖಡ್ಗವಂ ಕೊಂಡು ದುಷ್ಟಂ ಮಹಾದೋರ್ಬಲಿಷ್ಠಂ ಸ್ವಯಂ ಮುಷ್ಟಿಯಿಂದಲ್ಲಿ ಪೆಟ್ಟಿತ್ತನು. 110 ಆ ಭೀಕರಧ್ವಾನ ಸಂಭಿನ್ನ ದುಷ್ಟಾಸುರೀಗರ್ಭಸಂರಂಭವುಂ ಶುಂಭದಂಭೋದ ವೀಥೀ ಸಮಾರಂಭಿತೋ ಜೃಂಭವುಂ ವೈಷ್ಣವೋತ್ಕøಷ್ಟ ವಿಶ್ರಂಭವುಂ ಶಾತಕುಂಭೊಲ್ಲಸದ್ರತ್ನಚಿತ್ರಪ್ರಭಾಗುಂಭವುಂ ತತ್ಸಭಾಸ್ತಂಭವಂ ಆಗಲೇ ಬೇಗಲೇ ಘಳಾಘಳಾರಾವ ಉದ್ಭೂತವಾಗೆದ್ದು ಬ್ರಹ್ಮಾಂಡವೆಲ್ಲಾ ಪರಿಸ್ಫೋಟವಂ ಮಾಡುವಂತೊಪ್ಪೆ ಬ್ರಹ್ಮಾದಿಗಳ್ ತಮ್ಮ ಧಾಮಕ್ಕೆ ವ್ಯಾಘಾತವೇನಾದರುಂ ಬಾಹೋದೇನೋ ಇದೇನೆಂದು ವಿ 120 ಭ್ರಾಂತ ಚೇತಸ್ಕರಾಗಿಪ್ಪರಂತೇ ದುರಂತೇಕ್ಷಣಂಗಳ ಕುವರಾಗ್ರನಲ್ ತುಂಬುತಾಕತ್ತಿ ಕೈಹತ್ತಿ ಪುತ್ರನ್ನ ತಾ ಚಿತ್ರಹಿಂಸಿತ್ತು ಕೊಲ್ಲೂವೆನೆಂದಾಗ್ರಹೋಗ್ರ ಗ್ರಹಗ್ರಸ್ತನಾಗೇನು ಮೈತಿಳಿಯದೇ ಕೂಡಿಓಡ್ಯಾಡಿ ಬಾಹೋ ಹಿರಣ್ಯಾಖ್ಯಗಾ ವೇಳೆ ಕಾಲಾಡದದ್ಹಾಗೇ ಸಭಾಸ್ತಂಭದಲ್ ತನ್ಮಹಾರಾವ ತಾನಡ್ಡಕಟ್ಟಿಪ್ಪದಂತಾ ಮಹಾಧ್ವಾನ ಕೇಳುತ್ತಲೇ ನಿಂತನಾ ಹೇತುವಂ ಕಾಣದೇ ಆಗ ಆಯಾಸುರೀ ಹಿಂಡುಗಳ್ 130 ತುಂಬಿ ಕಾಳ್ಗಿಚ್ಚುಗಳ್ ಚೆಂದದಿಂಜಂತು ಸಂಘಕ್ಕೆ ಸಂತಾಪಗೈಸೇ ಛಿಟಾಛಿಟ್ ಛಿಟಾಂಗಾರಗಳ್ ಬೀಸೆ ಇದೇವುದೋಭೂತ ಉದ್ಭೂತವಾಗೊಪ್ಪಿತೆಂದಾಗ ಮೂರ್ಲೋಕವೆಲ್ಲಾ ಸಮುಲ್ಲೋಕವಾಗಿಪ್ಪುದಾವೇಳೆ ತದ್ಭøತ್ಯವಾಕ್ ಸತ್ಯವಂ ಮಾಡಬೇ 140 ಕಾಗಿ ಸರ್ವತ್ರ ತಾನ್ ತನ್ನ ವ್ಯಾಪ್ತತ್ವವಂಪಥ್ಯವಾಗಿಪ್ಪವೋಲ್ ಅದ್ಭುತಾಕಾರ ಪೊತ್ತಂ ಜಗದ್ಭರ್ತ ತಾನೊಂದೆ ಸಿಂಹಾಕೃತೀಯಾಗದೇ ಮತ್ರ್ಯಮೂತ್ರ್ಯಲ್ಲದೇ ತತ್ಸಭಾಸ್ತಂಭದಲ್ ಡಿಂಬ ಸಂಭಾವನಕ್ಕಾಗಿ ಸಂಭೂತನಾದಂ.ದಿತೀಪುತ್ರನಾ ರೂಪವಂಕಂಡಿದೇನೋ ಮಹಾ ಚಿತ್ರವಾಗಿಪ್ಪುದೇಸಿಂಹದಂತಲ್ಲದೇ ಮತ್ರ್ಯನಂತಲ್ಲದೇಯಾವುದೀ ಭೂತವೆಂತೆಂದು ಮೀಮಾಂಸಮಾನಾತ್ಮನಾದಂ.ಜಗತ್ಸ್ಯಾಮಿ ತಾನಾಗಲೇ 150 ತಪ್ತಭಾಂಗಾರ ಶೃಂಗಾರವಲ್ಯಂತೆ ಕಂಗಳ್ ಸಮುದ್ಯತ್ಸಟಾ ಕೇಸರಂಗಳ್‍ವಿಜೃಂಭತ್ಕರಾಳಾಸ್ಪದಂ ಉಗ್ರನಾಸಾಸಮುಚ್ಚಾಸ್ವ ನಿಶ್ವಾಸಗಳ್ ಸಂಚಲದ್ವಸ್ತವ್ಯಾಳ ಕ್ಷುರಾಂತೋಗ್ರ ಜಿಹ್ವಾಗ್ರ ಲೇಲೀಹನಂಗಳ್ ಭ್ರಮದ್ಭ್ರೂಲ್ಪಲಂಗಳ್ ಹನೊರೋಷಭೀಷ್ಣಂಗಳುಂ ಊಧ್ರ್ವಕರ್ಣಂಗಳುಂ ಭೂಮಿ ಭೃ ತ್ಕಂದರಾಶ್ಚರ್ಯವವ್ಯಾತ ಘೋರಾಸ್ಯನಾಸಾಪುಟಂಗಳ್ ಅದೀರ್ಘೊನ್ನತಗ್ರೀವವುಂದೀರ್ಘದಂತೊಪ್ಪುವೋ ದೇಹವಂ ವಿಸ್ತøತೋ160 ಶುಂಡಾಲ ಶುಂಡಪ್ರಕಾಂ170 ಡ ಪ್ರಚಂಡೋಲ್ಲಸದ್ದೋಹ ಸಾಹಸ್ರ ದೀಪ್ತಾಯುಧಾಭೋ ನಖಾನೀಕವುಂ ಚಕ್ರ ಶಂಖಾದಿ ನಾನಾಯುಧ ಶ್ರೇಷ್ಠ ವಿದ್ರಾವಿತಾsಭದ್ರ ರಕ್ಷಃ ಪಿಶಾಚಾಸುರೋದ್ರೇಕವುಂಪ್ರೋನ್ನಿತಂಬೋರು ಸತ್ಸಾನು ಜಂಘಪ್ರದೇಶಾವೃತ ಪ್ರೋಲ್ಲಸತ್ಪೀತ ಕೌಶೇಯವುಂಬದ್ಧಕಾಂಚೀಕಟಿಸ್ಥಾನವುಂ ಮಂಜುಮಂಜೀರ ಸಂಚಿನ್ನನಾದಾಂಘ್ರಿಕಂಜಾತ ವಿನ್ಯಾಸವುಂ ಕೋಟಿ ಮಾರ್ತಾಂಡ ಸಂಕಾಶವುಂಪೋಲ್ವುದಂಥಾ ದುರಾಲೋಕವಂತಿಪ್ಪ ಜ್ವಾ180 ಲಾ ನೃಸಿಂಹಾಕೃತಿ ಸ್ವಾಮಿನಂ ನೋಡುತಾದೃಷ್ಟಿಗಳ್ ಬಾಗೆ ತಾ ನಿಂತು ನನ್ನ ವರಜಾರಾತಿಯಾದ ಸ್ವಯಂ ಜ್ಯೋತಿ ಈ ರೀತಿ ತಾನಿಂದಿಗೇ ನಾರಸಿಂಹಾಕೃತೀಯಾಗಿ ನಾಂಪುತ್ರಂ ಸಂಹಾರಕುದ್ಯುಕ್ತನಾಗಿಪ್ಪೊಡೇಎನ್ನ ಸಂಹಾರಕಾಗಿಲ್ಲಿಗೇ ಬಂದನೋಇನ್ನು ಮೇಲೀತನಿಂದೆನ್ನಗೇ ಮೃತ್ಯು ತಾಸಿದ್ಧವಾಂತಿಪ್ಪುದೇನೋ ಪುರಾಣ ಪ್ರಸಿದ್ಧೋಕ್ತ್ಯಭಿವ್ಯಕ್ತಿಗೈತೇನಹೋ ಎಂದು ಮಾತಾಡುತಾ ನಿಂತು ಉದ್ಯದ್ಗದಾಧಾರಿ ತ 190 ಪೂರ್ವದಲ್‍ಅಸ್ಯತೇಜೋಂಶದಿಂದಲ್ ಜಗಧ್ವಾಂತ ಯಾವತ್ತುಮಿಂ ತಾ ಸ್ವಯಂ ಪಾನಮಾಡಿಪ್ಪ ಸತ್ಯಾತ್ಮಗೀ ನಾರಸಿಂಹಾತ್ಮಗೇ ಈ ಹಿರಣ್ಯಾಸುರ ಶ್ರೇಷ್ಠ ಸಂಹಾರ ಹೆಚ್ಚಲ್ಲವಂತಾದರುಂ ಲೋಕದೃಷ್ಟ್ಯಾನುಸಾರ ಕ್ರಿಯಾಕಾರಿಯಾಗಿಪ್ಪ ನೃಸಿಂಹನುದ್ಯದ್ಗದಾಧಾರಿ ತಾನಾಗಿ ಸದ್ವಿದ್ಯುದಾಭ್ಯೋದ್ಯದು 200 ದ್ವೇಗವೇಗೋರು ಸಂಪದ್ಗದಾ ದಂಡವಂಕೊಂಡು ಯುದ್ಧಕ್ಕೆ ಬಾಹೋ ಮಹಾದೈತ್ಯವರ್ಯನ್ನ ತಾ ನೋಡಿ ರೋಷೋಜ್ವಲ ಜ್ವಾಲೆಗಳ್‍ಲೇಲಿಹಾನೋಲ್ಲ್ಲಸಜ್ಜಿಹ್ವೆಯಿಂದಲ್ ಪ್ರಕಾಶೈಸುತಾ ಚೀರುತಾಗಾಟ್ಟಹಾಸಕ್ರಮನ್ಯಾಸದಿ ಹಾರುತಾ ಕೋಟಿ ಸೂರ್ಯಪ್ರಭಾಬೀರುತಾ ಆ ಗರುತ್ಮಂತ ಕಾಳಾಹಿಂಪಿಡಿವನಂತೊಪ್ಪಿ ತಾನಾ ದಿತೀಪುತ್ರನಲ್‍ನೂಕಿದಂ ಶೀಘ್ರದಲ್ ಪಿಡಿದನಾ ದೈತ್ಯರಾಜೇಂದ್ರನಾವೇಳೆ ತದ್ಧಸ್ತದೋಳ್ ಸಿಕ್ಕದೇ 210 ಸುಕ್ಕದೇ ಘಕ್ಕನೇ ಬಿಡಿಸಿಕೊಂಡಾ ಗದಾದಂಡವಂ ಕೊಂಡು ಸನ್ನದ್ಧ ಸದ್ಯುದ್ಧವಂಮಾಡುವೋನಂತೆ ಯಾವಾಗ ನೃಸಿಂಹನಲ್‍ಸಿಕ್ಕಿ ಮತ್ತೇಬಿಡೂವಾದನಾ ವೇಳೆಯಲ್‍ಶರ್ವ ಶಕ್ರಾದಿ ದಿಕ್ಪಾಲಕಾನೀಕವುಂಸೂರ್ಯಚಂದ್ರಾದಿ ಸರ್ವಗ್ರಹಕ್ರ್ಷಾವಳೀಲೋಕವುಂ ಮೇಘಸಂತಾನದೋಳ್ ಲೀನವಾಗಿದ್ದು ಇನ್ನೇನು ಈ ದೇವತಾರಾತಿ ಈನಾರಸಿಂಹಾತ್ಮನಲ್ ಸಿಕ್ಕದೇ ದಕ್ಕದಂತಿಪ್ಪನೇ ಈತನೀ ದುಷ್ಟ ದೈತ್ಯನ್ನ ಗೆ 220 ಲ್ಲಾರನೋ ಗೆಲ್ವನೋ ಎಂದು ತದ್ವೀರ್ಯವಂತಿಳಿಯದೇ ಭ್ರಾಂತಚಿಂತಾಂತರಂಗೋದ್ಯದುದ್ವೇಗದಿಂ ಕಾಂಬಂತಿಪ್ಪುದು.ಆಮೇಲೆ ಢಾಲ್ ಕತ್ತಿ ಕೈಗೊಂಡು ಆಯಾಸದಿಂದಲ್ಲಿ ಆ ದೈತ್ಯನಾನಾರಸಿಂಹಾತ್ಮನಲ್ ಸಂಗರ ಶ್ರಾಂತಿ ಮತ್ತೇನು ತಾ ಕಾಣದೇ ದೂಕಿದಂ ತಾಕಿದಂಸೋಕಿದಂ ಅಂಘ್ರಿವಿನ್ಯಾಸಗಳ್ ಕೂಡಿ ತಾಮೇಲೆಯುಂ ಕೆಳಗೆಯುಂ ಶ್ಯೇನಪಕ್ಷಂತೆ ಸುತ್ತಾಡುತಾ ಛಿದ್ರವಂ ಕಾಣದೇ ತನ್ನನೇಪಿಡಿವುದಕ್ಕಾತನಂತೋಡುತಾ ಬಾಹೊ ಬ 230 ಲ್ಲಿಷ್ಠನಾ ಅಟ್ಟಹಾಸೈಸಿಯುಕ್ಕೇಸರಂಗಳ್ ಪ್ರಸಾದೈಸಿ ಕ್ರೂರಾಹಿತಾನಂದಘಗ್ರಾಹಿಯಂತೇ ಸ್ವಭಾ ಸಾಸಿರಂ ಸೂಸಿ ಜಂಘಾಲ ಲೀಲಾ ಸಮುಲ್ಲಂಘನಾ ಗೋಪದಿಂಹಾರಿಯಾ ನಾರಹರ್ಯಕ್ಷನಾ ದೈತ್ಯದಕ್ಷನ್ಪಿಡಿರ್ದಂ ಫಟಾಫಟ್ ತಲಾಘಾತವಂಗೈಲ್ಬಡಿರ್ದಂ ಥಟಾಥಟ್ ಪದಾಘಾತದಿಂ ದಲ್ ಹೊಡೆರ್ದಂ ಗದಾಘಾತದಿಂದಲ್ ಮಹೋರಸ್ಕಿಡಿರ್ದಂ ಸಭಾದ್ವಾರದಲ್ ಹಾಕಿ ಭಾಸ್ವನ್ನಖ ಶ್ರೇಣಿಯಿಂದಲ್ ಫಟಾಫಟ್ ಗುರು240 ತ್ಮಂತಕಾಲಾಹಿನಂ ಸೀಳುವೋ ರೀತಿ ಜಂಭಾರಿದಂಭೋಳಿಯಂತಾಗಲುಂ ಸೀಳುತಿರ್ದಾಮಹಾದೇವನ್ನಾ ಹಗಲ್ ರಾತ್ರಿಯೊಂದಲ್ಲದ್ಹಾಗೇ ದಿವಾಸಂಧಿಯಲ್ ಸೀಳಿದಂ.ಘೋರ ಸಂರಂಭ ದಂಷ್ಟ್ರೇಕ್ಷವ್ಯಾವೃತ್ಕರಾಳಾಕ್ಷನಾಗಿ ಸ್ವಜಿಹ್ಪಾಗ್ರದಿಂದಲ್ ಲಸದ್ವ್ಯಾತ್ತ ವಕ್ತ್ರಾಂತ ಶೋಣಿಯ ಮಾನಾಧರಾದ್ಯಂತವಂ ಲೇಲಿಹಾನೋಗ್ರವಂ ತೋರುತಾರಾಕ್ಷಸ ಶ್ರೇಷ್ಠನಂ ಪಿಡಿದು ವಕ್ಷೋನ್ನತಸ್ಥಾನವಂ ತೋಡಿ ಕಾಸಾರವಂ ಮಾಡುತಾ 250 ತುಂಬಿ ಶುಂಡಾಲ ಸಂಹಾರದಲ್ ಮುಂಚುವೋ ಘೋರ ಪಂಚಾನನೋದಾರ ಲೀಲೆಂಗಳಂ ಬೀರುತಾ ರಾಕ್ಷಸಾಧ್ಯಕ್ಷ ವಕ್ಷಸ್ಸಿನೋಳ್ ಕಿತ್ತುತಾ ಹಾರಗಳ್‍ಮಾಡಿಕೊಂಡೊಪ್ಪಿ ತದ್ರಕ್ತ ಸಿಕ್ತಾನನೋದ್ಯಚ್ಛಟಾ ಕೇಸರಂಗಳ್ ಪ್ರಕಾಶೈಸುತಾ 260 ದೈತ್ಯರಾಜೇಂದ್ರನಾ ಪ್ರಾಣಗಳ್‍ಗೊಂಡನಾಮೇಲೆ ಸುತ್ತಿದ್ದ ತದ್ಭಂಧು ಸಂದೋಹದಲ್ಲಿದ್ದನೇಕಾಸುರೀನೀಕವಂ ಸಾಯುಧೋದ್ರೇಕವಂ ಅಲ್ಲಕಲ್ಲೋಲವಂ ಮಾಡಿ ಚಂಚನ್ನಖಶ್ರೇಣಿಯಿಂ ಸಂಹರಂ ಮಾಡಿದಂ.ಆಗ ತದ್ಭೀಕರಾಕಾರವಂ ಕಾಂಬ ಶಕ್ತ್ಯಾವುದಂ ಕಾಣದೇ ತತ್ಸಟಾ ಕೇಸರೋದ್ಭೂತ ಸಂಘಾತಗಳ್ ಘೋರ ಜೀಮೂತಗಳ್‍ಸರ್ವವಂ ನೋಡುತಾ ಮತ್ರ್ಯಸಿಂಹೋಗ್ರದೃಷ್ಟಿಜ್ವಲಜ್ವಾಲೆಗಳ್ ಸೈಸದೇ ಸೂರ್ಯಚಂ270 ಪಾದ ಸಂಘಟ್ಟದಿಂದಲ್ ಧರಾಚಕ್ರವಲ್ಲಾಡಿತಾಘೋರ ತೇಜಸ್ಸಿಗವಕಾಶಂಗಳಾಕಾಶವೂಬಾಡಿತಾ ಶಾಕಿನೀ ಡಾಕಿನೀ ಮುಖ್ಯ ದು 280 ಷ್ಟಗ್ರಹಾನೀಕವುಂ ಭೀತಿಗೊಂಡೋಡಿತಾಮೇಲೆ ಉದ್ಯತ್ಸಭಾ ಮಧ್ಯೆ ದೈತ್ಯೇಂದ್ರ ಸಿಂಹಾಸನಸ್ಥಾನದಲ್ ನಾರಸಿಂಹಂ ಸಮಾಸೀನನಾಗಿಪ್ಪನಾ ತೇಜ ಓಜ ಪ್ರಭಾಪುಂಜರಂಜನ್ನ ಭಾಸ್ವತ್ಕರಾಳೋಗ್ರ ಜಿಹ್ವ ಸ್ಫುರದ್ದಂಷ್ಟ್ರ ವಕ್ತ್ರನ್ನ ಬಿಭ್ರಲ್ಲಸದ್ಭ್ರೂತನಂ ಆ ಮಹಾಕೋಪ ಸಂರಂಭ ಗಂಭೀರ ನೇತ್ರನ್ನ ಕಣ್ಣೆತ್ತಿ ಕಾಂಬೋದರಲ್‍ಬ್ರಹ್ಮ ರುದ್ರಾದಿಗಳ ಶಕ್ತಿಯುಂ ಸಾಲದೇದೂರದಲ್ ಪಾಶ್ರ್ವ ಭಾಗಸ್ಥರಾಗಿಪ್ಪರಂತೇ.290 ಆಗ ಮೂರ್ಲೋಕ ಸಂತಾಪಿಯಾಗಿಪ್ಪ ದೈತ್ಯನ್ನ ನಾರಾಯಣಂ ನಾರಸಿಂಹಾಕೃತೀಯಾಗಿ ಸಂಹಾರವಂ ಮಾಡಿದಂ ಎಂಬುದಾವಾರ್ತೆ ಕೇಳುತ್ತಲೇ ದೇವನಾರೀಜನಂಗಳ್ ಪ್ರಹರ್ಷಾನನೋತ್ಪುಲ್ಲರುಲ್ಲಾಸದಿಂವಾಸಿತಾಮೋದ ಮಂದಾರ ಕುಂದಾರವಿಂದಾದಿ ಸತ್ಪುಷ್ಟ ಸಂತಾನ ವರ್ಷÀಂಗಳಂವರ್ಷಿಸುತ್ತಿಪ್ಪರಾಕಾಲಾವಾಕಾಶದಲ್‍ನಿಂತು ಕಾಣೂವರಾ ದೇವದೇವೀ ಸಮೂಹಂಗಳಾಯಾವಿಮಾನಂಗಳೆಲ್ಲಾ ಮಹಾ 300 ಸಂಕುಲೀ ಭೂತವಾಗಿಪ್ಪವಾ ದೇವತಾದುಂದುಭಿಧ್ವಾನ ಇಂಬಾಗಿ ತಾ ದೇವಗಂಧರ್ವ ಸಂಗೀತ ನಾಟ್ಯಂಗಳಿಂದಪ್ಸರಾಕಾಮಿನೀ ತಾನ ಗಾನಂಗಳಿಂದಾಗ ಆಕಾಶವುಂ ತುಂಬಿತಾ ಬ್ರಹ್ಮರುದ್ರೇಂದ್ರ ಮುಖ್ಯಾಮರ ಶ್ರೇಣೀಗಳ್ ಪಿತೃಗಳ ಮನ್ವುಗಳ್‍ಸಿದ್ಧ ವಿದ್ಯಾಧರಾನೀಕಗಳ್À ಅಪ್ಸರಾ ಕಾಮಿನೇರಾ ಪ್ರಜಾಪಾಲ ಗಂಧರ್ವರಾಯಕ್ಷ ಕಿಂಪುರುಷರಾ ಚಾರಣಾನೀಕವಾಕಿನ್ನರಸ್ತೋಮ ನಂದಾ ಸುನಂದಾದಿ ತ 310 ತ್ಪಾರ್ಷದಾನೀಕವೆಲ್ಲಾ ಶಿರೋಭಾಗದಲ್‍ಪಾಣಿಗಳ್ ಜೋಡಿಸೀತೆಲ್ಲ ಮುನ್ನಾತಿ ದೂರಸ್ಥರಾಗಿದ್ದು ನಿಂತಾಮೃಗೇಂದ್ರಾಸನಾಸೀನನಾಗಿಪ್ಪ ಅತ್ಯುಗ್ರ ತೇಜಸ್ವಿನಂಮೆಲ್ಲನೇ ಬೇರೆ ಬೇರಾಗಿ ಕೊಂಡಾಡುತಾನಿಂತರಾವೇಳೆಯಲ್ ಬ್ರಹ್ಮ ತಾ ಭಾಷಿಪಂನಿನಗೆ ವಂದೀಸುವೆಂ ತಂದೆ ನೀನೆ ಅನಂತಂ ದುರಂತ್ಯೋರು ಶಕ್ತ್ಯುಳ್ಳವಂ ಲೋಕಪಾವಿತ್ರ್ಯ ಕಮ್ರ್ಯಂ ಮಹಾಶ್ಚರ್ಯ ವೀರ್ಯ ಜಗತ್ಸøಷ್ಟಿ ಸಂರಕ್ಷ ಸಂಹಾರಗಳ್ ಲೀಲೆಯಿಂ320 ದಲ್ ಸದಾ ಮಾಳ್ಪೆಯೋ ಅವ್ಯಯಾತ್ಮನ್ನೆ ನೀ ನೆಂದನು.ಈಶ ತಾ ಬಂದೆಲೋ ತಾತನೇನಿನ್ನಗೀ ಕೋಪ ಬಾಹೋದಕಿಂದಾ ಯುಗಾಂತಾಖ್ಯ ವೇಳ್ಯಲ್ಲವೋ ಕ್ಷುಲ್ಲನೀ ದೈತ್ಯನೀವೇಳೆ ನಿನ್ನಿಂದ ತಾನ್ ಮೃತ್ಯುಪಾಲಾದನಂತಿನ್ನುಮೇಲ್ ಕೋಪ ಸಂಕ್ಷೇಪ ಮಾಡಯ್ಯ ಈದೈತ್ಯ ಪುತ್ರನ್ನ ಪ್ರಹ್ಲಾದನಂ ಸರ್ವದಾನಿನ್ನ ಭಕ್ತನ್ನ ಸಂರಕ್ಷಿಸೋ ಭಕ್ತವಾತ್ಸಲ್ಯದಿಂದೆಂದನು.ಇಂದ್ರ ತಾ ನಿಂತೆಲೋ ಸ್ವಾಮಿಯೇ ಅಣ್ಣತಮ್ಮಂದ್ರ ದೀಟಾಗಿ ನೀನೇ ಸದಾ ನಮ್ಮ ಸಂ330 ರಕ್ಷಿಸೂವೇಯೊ ನಿನ್ನಿಂದಲಾ ಯಜ್ಞ ಭಾಗಂಗಳುಂ ನಮ್ಮಗೇ ಮತ್ತೆ ಉಂಟಾದವಯ್ಯಾ ಹಿರಣ್ಯಾಸುರಂಗಾದುದೀಗೆಮ್ಮ ಸುಸ್ವಾಂತಗಳ್ ನಿನ್ನಗಾವಾಸಯೋಗ್ಯತ್ವ ಪೊಂದಿಪ್ಪುವಂತೆ ವಿಕಾಸ್ಯೆಸಿತೋ ನಿನ್ನ ಶುಶ್ರೂಷೆ ಬೇಕೆಂಬ ಲೋಕಾಳಿಗೇ ಕಾಲಸಂಗ್ರಸ್ತವಂತಿಪ್ಪ ಲೋಕಾಳಿಯಲ್ ಯಾವದೂಲಕ್ಷ್ಯವಿಲ್ಲಂತೆ ಮುಕ್ತ್ಯಾದರುಂ ಹೆಚ್ಚು ನಿಶ್ಬೈಸುವಂತೇ ನೃಹರ್ಯಾತ್ಮನೇ ಮಿಕ್ಕ ಸಂಭೂತಿಯಿಂದಾಗಬೇಕಾದುದೇ ನಿಪ್ಪುದೆಂದಂ.340 ಬೊಮ್ಮ ನೀನೆಮ್ಮ ಶ್ರೇಯಸ್ಸಿಗೆ ಮುನ್ನ ನಿನ್ನ ಸ್ವತೇಜಾಂಶವನ್ನೇ ತಪೋಯೋಗವಂ ನಮ್ಮಗೇಕೊಟ್ಟೆಯೊ ಆ ತಪಸ್ಸಿಂದ ನಿನ್ನಲ್ಲಿಹೋವಿಶ್ವವೆಲ್ಲಾ ಬಹೀರಂಗ ಮಾಡೀದೆಯೋನಮ್ಮದಂಥಾ ತಪಸ್ಸಂ ಹಿರಣ್ಯಾಸುರಶ್ರೇಷ್ಠತಾ ಕದ್ದನಂತಿದ್ದನೇ ಈಗ ನೀನೀ ಜಗದ್ರಕ್ಷಣಕ್ಕಾಗಿಯೇ ಭಕ್ತ ಸಂರಕ್ಷನೇ ನಾರಹರ್ಯಕ್ಷನಾಗಿನ್ನು ರಕ್ಷೋಗಣಾಧ್ಯಕ್ಷ ವಕ್ಷಸ್ಕವಂ ಸೀಳಿ ನೀ 350 ನಮ್ಮಗೆಲ್ಲಾ ತಪೋಯೋಗವಂ ಮತ್ತೆ ತಂದಿತ್ತೆಯಂತೆಂದರು.ಪಿತೃಗಳ್ ನಿಂತೆಲೋಧರ್ಮರೂಪೀಯೆ ಇಂಥಾ ಕ್ರಿಯಾಲಾಪಗಳ್‍ಪುತ್ರರಿಂದಲ್ ತಿಲೋದಂಗಳಿಂದಲ್ ಮಹಾಪುಣ್ಯ ತೀರ್ಥಂಗಳಲ್ ಕ್ಷೇತ್ರ ಪಾತ್ರಂಗಳಲ್‍ನಮ್ಮ ನಮ್ಮಲ್ಲಿ ಇಂತಿತ್ತ ಶ್ರಾದ್ಧಂಗಳಂತನ್ನ ಪ್ರೀತ್ಯರ್ಥವೆಂತಿರ್ದನೈ ನಾಥ ಸಂಪೂರ್ಣ ಸೌಭಾಗ್ಯ ಸಂಸ್ಥಾನಿಯೋ ನೀನು ಭಾಸ್ವನ್ನಖ ಶ್ರೇಣಿಯಿಂದಲ್ ಮಹಾ ದೈತ್ಯವಕ್ಷಸ್ಕವಂ ಸೀಳಿ ಇತ್ತಾವ ಪಾಂತ್ರಾತ್ಮಿಕಾ 360 ಶ್ರಾದ್ಧ ನಮ್ಮಲ್ಲಿ ತಾ ಸೇರಿತೈ ನಾರಹರ್ಯಾತ್ಮನೇ ನಿನ್ನಗೇ ನಾವು ಸಾಷ್ಟಾಂಗ ಪ್ರಣಾಮಗಳ ಮಾಡುವೇವೆಂದರು.ಸಿದ್ದರೆಲ್ಲಾಂಜಲೀಬದ್ಧರಾಗೆದ್ದೆಲೋಅಷ್ಟಸಿದ್ಧಾತ್ಮನೇ ನಮ್ಮಲಿದ್ದಾ ಮಹಾಯೋಗ ಸಿದ್ಧಿಂಗಳೆಲ್ಲಾ ತಪೋಯೋಗಸಾಮರ್ಥ್ಯದಿಂ ಕದ್ದನೇ ಗೆದ್ದೆನೆಂತಿದ್ದ ದೈತ್ಯ ಪ್ರಬುದ್ಧನ್ನ ವಕ್ಷಸ್ಕ ಸಂಭಿನ್ನವಂಮಾಡಿಯಾ ನಮ್ಮಗಾಧಾರವಾಗಿದ್ದ ಸದ್ಯೋಗ ಸಿದ್ಧಿಂಗಳಂ ಮತ್ತೆ ನೀನಿತ್ತೆಯೋ 370 ನಾರಸಿಂಹಾತ್ಮ ನಾವೆಲ್ಲರುಂ ನಿನ್ನಗೇವಂದನಂಗಳ್À ಸಮರ್ಪೀಂಸುವೇವೆಂದರು.ಆಮೇಲೆ ವಿದ್ಯಾಧರಾನೀಕಗಳ್ ನಿಂತೆಲೋಸರ್ವ ವಿದ್ಯಾತ್ಮನೇ ನಮ್ಮಲಿದ್ದಾ ಪೃಥಕ್‍ಧಾರಣಾಯೋಗ ಸಂಪಾದ್ಯಗಳ್ ವಿದ್ಯೆಗಳ್‍ನಷ್ಟಗೈಸಿದ್ದನತ್ಯಂತ ದರ್ಪಿಷ್ಠನೀಅಜ್ಞ ದೈತ್ಯೇಂದ್ರನಾ ಯಜ್ಞದೋಳ್‍ಬದ್ಧ ಪಶ್ವಂತೆ ತಾನಿಂದು ನಿನ್ನಿಂದಲಾ ಮೃತ್ಯುಪಾಲಾದನೇ ನಮ್ಮ ಸದ್ವಿದ್ಯೆಗಳ ಮತ್ತೆ ನಮ್ಮಲ್ಲೆ ಬಂದಿಪ್ಪುದಯ್ಯಾ ನೃಹರ್ಯಾತ್ಮ ತು 380 ನಾಗರಾವೇಳೆಲೋsನಂತನೇ ನಮ್ಮಲಿದ್ದಾ ಮಹಾರತ್ನಗಳ್‍ಮಾನಿನೀ ರತ್ನಗಳ್ ತಾ ಬಲಾತ್ಕಾರದಿಂಗೊಂಡನೀ ಪಾಪಿ ದೈತ್ಯನ್ನ ವಕ್ಷಸ್ಕವಂಸೇದಿ ಈ ರತ್ನಗಳ್ ಮತ್ತೆ ನೀ ನಮ್ಮಗೇಸೇರುವಂತೇ ದಯಾಮಾಡಿದೀಯೈ ನಮಸ್ತೇ ನಮೋ ಎಂದರು.ಮನ್ವುಗಳ್‍ನಿಂತೆಲೋಧರ್ಮ ಸಂರಕ್ಷನೇ ನಾವು ನಿನ್ನಾಜ್ಞೆಯಿಂದೀ ಪ್ರಜಾನೀಕಕೇರ್ಪಾಟು ಮಾಡಿದ್ದ ಮರ್ಯಾದೆಗಳ್ ಸರ್ವವೀ ದೈತ್ಯ ತಾ ಕೆಡಿಸಿ ಕ390 ಲ್ಲೋಲವಂ ಮಾಡಿ ನಿನ್ನಿಂದಲೀ ಈಗ ಸಂಹಾರಿಸಲ್ಪಟ್ಟನೇ ಇನ್ನು ಮೇಲ್ ನಾವು ನಿಮ್ಮುಟ್ಟಕ್ತಿಗಳ್ ನಡೆಸುವೇವೆಮ್ಮಗಾಜ್ಞಾಪಿಸೋನಾವು ತ್ವದ್ದಾಸ್ಯವಂ ಬಯಸಿದೇವೆಂದರು.ಆ ಪ್ರಜೇಶ್ಯಾಳಿಗಳ್À ನಿಂತು ಕೇಳೋ ``ಪ್ರಜೇಶಾ ವಯಂ ತೇ ಪರೇಶಾಭಿಸೃಷ್ಟಾ ನ ಯೇನ ಪ್ರಜಾ ವೈ ಸೃಜಾಮೋ ನಿಷಿದ್ಧಾಃ ಸ ಯೇಷ ತ್ವಯಾ ಭಿನ್ನವÀಕ್ಷಾನು ಶೇತೇ ಜಗನ್ಮಂಗಲಂ ಸತ್ವಮೂರ್ತೇವತಾರಃ’’ ಪ್ರಭೋಎಂದರು. ಆಗ ಗಂಧರ್ವರೆಲ್ಲಾ ಎಲೋ 400 ಸ್ವಾಮಿಯೇ ನಾವು ನಿಮ್ಮ ಪ್ರಸನ್ನಾವತಾರೈಕ ಲೀಲಾ ಕಥಾಸೂಕ್ತಿಗಳ್ ನಾಟ್ಯ ಶೃಂಗಾರ ಚೇಷ್ಟಾ ಕಳಾದರ್ಶನಾದ್ಯಭಿನಯಾವ್ಯಕ್ತಿಗಳ್ ತಾನ ಗಾನಾನುಸಂಧಾನ ಸಮ್ಮೋಹಿನೀ ಶಕ್ತಿಗಳ್ ಕೂಡಿ ಆಶ್ರಾಂತವುಂನಿನ್ನ ಕೊಂಡಾಡುತಾ ಗಾಯಕಶ್ರೇಷ್ಠರಂತಿಪ್ಪೆವೇ ತನ್ನ ಸದ್ವೀರ್ಯ ತೇಜೋಬಲೋಜಸ್ಕದಿಂದಲ್ ಪ್ರಭೋ ನಮ್ಮ ಸಾಮಥ್ರ್ಯಗಳ್‍ತನ್ನಗಾಧೀನ ಮಾಡಿಟ್ಟುಕೊಂಡಿದ್ದನೀದೈತ್ಯನೀ ವೇಳೆ ನಿನ್ನಿಂದ ಪಂಚತ್ವವಂ 410 ಆ ಯಕ್ಷರೆಲ್ಲಾ ಎಲೋ- 420 ಧ್ಯಕ್ಷನೇ ತ್ವನ್ಮನೋಭಿಜ್ಞ ಕರ್ಮಂಗಳಿಂದಲ್ ಸದಾ ನಿನ್ನಗೇ ಭೃತ್ಯರಾಗಿಪ್ಪ ನಾವೆಲ್ಲರುಂ ದೈತ್ಯಗೇ ಪಾಲಕೀ ಹೊರ್ವರಂತಾದೆವೇ ನಮ್ಮ ಸಂತಾಪಗಳ್ ಬಲ್ಲ ನಿನ್ನಿಂದಲೀ ದೈತ್ಯನೀ ವೇಳೆ ಪಂಚತ್ವವಂಹೊಂದಿದಂ ನಾವು ಸಂತೋಷವಂ ಕಂಡೆವಯ್ಯಾ ನೃಪಂಚಾಸ್ಯನೇ ಪಂಚವಿಂಶಾಖ್ಯ ನೀ ನೆಂದರು. ಆಮೇಲೆ ಕಿಂಪೂರುಷಾನೀಕವುಂಬಂದೆಲೋ ಪುರುಷನೇ ನಾವು ಕಿಂಪೂರುಷರ್‍ನೀಂ ಮಹಾಪೂರುಷಂ ಈಶ್ವರಂ ನಿನ್ನ ಕೈ 430 ನಿತ್ಯ ಕೊಂಡಾಡುತಾಭೂರಿಯೂಟಂಗಳಂ ಉಣ್ಣುತಾಲಿದ್ದೆವೇತಾನಿವೆಲ್ಲಾ ಪರಿಗ್ರಾಹಿಸೀ ದೈತ್ಯ ನಿನ್ನಿಂದ ಪೆಟ್ಟಾಂತು ತಾ ಪೋದನೇ ದೈವದಿಂ440 ಕಿನ್ನರ ಪ್ರಾಣಿಗಳ್‍ಪೂರ್ವದಲ್ ನಿನ್ನ ದಾಸಾನುದಾಸರ್ಗಳಾಗಿಪ್ಪೆವೀ ದೈತ್ಯ ನಮ್ಮಿಂದ ತಾ ಬಿಟ್ಟಿಕಾರ್ಯಂಗಳೆಲ್ಲಾ ಸದಾ ಮಾಡಿಸೂವಂ ವiಹಾದು:ಖಗೋಣಿಸುವಂ ಇಂಥ ಪಾಪಿಷ್ಠ ದೈತ್ಯನ್ನ ಸಂಹಾರ ವಂ ಮಾಡಿದೀ ಇನ್ನು ನೀನಮ್ಮಗೆಲ್ಲಾ ಸಮುಲ್ಲಾಸಗಳ ಶ್ರೇಯಗಳಕೊಟ್ಟು ಸಂರಕ್ಷಿಸೋ ನಾರಹರ್ಯಕ್ಷನೇ ಎಂದರು. 450 ಅಚ್ಯುತದ್ವಾರಪಾಲಾಳುಗಳ್‍ನಿಂತೆಲೋ ಭೂಮನೇ ಕಂಡೆವೋ ಇಂದಿಗೇನಾರಹರ್ಯದ್ಭುತಾಕಾರವಂ ಲೋಕಕೆಲ್ಲಾ ಸುಖಾನಂದವಂ ನಮ್ಮಗಾಧಾರ ನೀನಲ್ಲದಿನ್ನಿಲ್ಲವೋ ಈಗ ವೈಕುಂಠದಲ್‍ನಿನ್ನ ದ್ವಾರಸ್ಥನಾಗಿಪ್ಪನಾ ವಿಪ್ರರಿಂದಲ್ ಮಹಾದೈತ್ಯಜನ್ಮಕ್ಕೆ ತಾ ಬಂದನೇ ಬಂದನಂತಿಂದಿಗೇ ವೈರಮಾರ್ಗಕ್ಕೆ ನೀನಿಂದು ಗೈದಂಥ ಈ ದೈತ್ಯಸಂಹಾರ ವ್ಯಾಪಾರವೆಮ್ಮಲ್ ಮಹಾನುಗ್ರಹಕ್ಕಾಗಿ ನೀ ಬಂದೆ ನಾವ್ 460 ಸ್ವಾಂತ ಸಂತೋಷ ಮಾಡೆಂದು ಬಿನ್ನಾಹಗಳ ಮಾಳ್ಪರು.ಆಮೇಲೆ ಆ ಬಾಲೆ ಸಾಕ್ಷಾಜ್ಜಗನ್ಮೋಹಿನೀ ಲೀಲೆಗಳ್ ಮಿಂಚುತಾ 470 ಪೂಂಚುತಾ ಬಂದು ಸಿಂಹಾಸನಸ್ಥಾನದಲ್‍ಉಗ್ರನಂತಿಪ್ಪನೃಸಿಂಹ ಮೂತ್ರ್ಯುಗ್ರವಂಕಂಡತಿವ್ಯಗ್ರಳಂತಾಗಿ ಆ ತಾಯಿ ಹಿಂದಕ್ಕೆ ತಾ ಬಂದಳಮ್ಮಮ್ಮ ಏಂ ಗುಮ್ಮನಂತಪ್ಪÀನೇ ಸ್ವಾಮಿ ಮುನ್ನಿಂತು ಆಶ್ಚರ್ಯವಂಈಸು ವಿಕ್ರಮ್ಯವಂ ಎಂದಿಗಾನೆಲ್ಲಿ ಕಂಡಿಲ್ಲವಲ್ಲಾ ಕಿವಿಲ್ಯಾದರುಂ ಕೇಳಲೇ ಇಲ್ಲವಲ್ಲಾ ಇದೇನೋ ವಿಚಿತ್ರಾಕÀೃತೀಯಂತೆ ತೋರೂವನೆಂದಂಜಿಕೇಗೊಂಡ ರೀತಿಂದ ತಾ ಹೆಜ್ಜೆ ಕಾಲ್ಗೆಜ್ಜೆಗಳ್ ಸಪ್ಪುಳಂ480 ಮಾಡದೇ ಮೆಲ್ಲನೇ ಪಾಶ್ರ್ವದಲ್ ನಿಂತಳುಆಮೇಲೆ ಪ್ರಹ್ಲಾದನಂ ಕಂಡು ಸಂಭಾಷಿಪಂಬ್ರಹ್ಮ ಬಾರೈ ಎಲೋ ವತ್ಸ ನೀನೀ ನೃಸಿಂಹಾತ್ಮನಲ್ ಮೆಲ್ಲನೇ ಸೇರಿ ನಿಮ್ಮಪ್ಪಗಾ ಗಿಂದು ನಮ್ಮಪ್ಪನಲ್ಲಿಪ್ಪ ತತ್ಕೋಪ ಸಂಕ್ಷೇಪ ಗೈಸೆನ್ನೆ ತದ್ವಾಣಿಗಳ ಕೇಳುತಾಮೆಲ್ಲನೇ ಪಿಲ್ಲೆ ಪ್ರಹ್ಲಾದನಾಹ್ಲಾದದಲ್‍ವೈಷ್ಣವಶ್ರೇಷ್ಠ ತಾನಾಗ ಬಂದಂ ಮಹಾಭಕ್ತಿಯಿಂದಲ್ ಮಹೀಮಂಡಲೀ ಮೇಲೆ ಸಾಷ್ಟಾಂಗ ಬಿದ್ದಂ ನಮೋ ಎಂದು ದಂಡಪ್ರಣಾ 490 ಮಂಗಳಂ ಮಾಡುವೋ ವೇಳೆ ತನ್ನಂಘ್ರಿಕಂಜಾತದಲ್ ಬಿದ್ದ ಬಾಲನ್ನ ಬಾಳಾ ಸುಶೀಲನ್ನ ಕಂದನ್ನ ದೃಷ್ಟಿಂದ ತಾ ಕಾಣುತಾಚಕ್ರ ಶಂಖಾಂಕಿತಾ ಶ್ರೀಲಸದ್ಬಾಹುಗಳ್‍ಚಾಚಿ ಭಕ್ತನ್ನ ತಾನೆತ್ತಿ ತನ್ಮಸ್ತಕಸ್ಥಾನದಲ್ ಪೋಕಲಾಗಿನ್ನು ಸಂಸ್ರಸ್ತ ಚೇತೋಭಯಧ್ವಸ್ಥವಂ ಸ್ವಸ್ತಿದಾನ ಕ್ರಿಯಾಭ್ಯಸ್ತವಂ ಶ್ರೀ ಸತೀ ಸ್ತಂಬಕವಿನ್ಯಸ್ತವಂಹಸ್ತವನ್ನಿತ್ತನವ್ಯಾಹತ ಸ್ಪರ್ಶದಿಂದಲ್ ವಿಧೂತಾ ಶುಭವ್ರಾತನಾಗೀಯಭಿ 500 ವ್ಯಕ್ತ ಲಕ್ಷ್ಮೀವಿಲಾಸಾತ್ಮ ಸಂದರ್ಶನೈಶ್ವರ್ಯವಂ ಕೂಡಿ ತತ್ಪಾದ ಪದ್ಮಂಗಳಂಚಿತ್ತದಿಂದಿತ್ತನಾನಂದದಿಂದಲ್ ಪ್ರಹೃಷ್ಯತ್ತನು ಕ್ಲಿನ್ನ ಚಿತ್ತಾಶ್ರುನೇತ್ರಾಬ್ಜನಾಗಿದ್ದು ಪ್ರಹ್ಲಾದನುಂ ನಾರಸಿಂಹಾತ್ಮನಲ್‍ನಿಂತು ಸಂಸ್ತೋತ್ರಗಾರಂಭಿಪಂ. ಶ್ರೀರಮಾದೇವಿ ತಾನಾಗ ಸಮ್ಮೋಹಿನೀ ಸಂಪುಗಳ್‍ಕೂಡಿ ಬಂದಾ ನೃಸಿಂಹಾಂಕದಲ್ ನಿಂತಳಾಬ್ರಹ್ಮನಾವೇಳೆಯಲ್ ನಾರಸಿಂಹಾತ್ಮನಲ್‍ಸೇರಿ ಸುಕ್ಷೀರ ನೀರಾಭಿಷೇಕಂಗಳಂ 510 ಚೀನಿ ಚೀನಾಂಬರಂಗಳ್ ಮಹಾನಘ್ರ್ಯ ರತ್ನಾವಳೀ ಭೂಷಣಂಗಳ್ ಲಸನ್ಮೌಕ್ತಿಕಾಹೀರ ಹಾರಂಗಳಂ ಗಂಧ ಕಸ್ತೂರಿಕಾಲೇಪಗಳ್ ಶ್ರೀ ತುಳಸ್ಯಾಪ್ತ ಶಾಮಂತಿಕಾ
--------------
ಶ್ರೀಪಾದರಾಜರು
ಶ್ರೀ ಸತ್ಯ ವಿಜಯತೀರ್ಥ ಚರಿತ್ರೆ ನಮೋ ಸತ್ಯ ವಿಜಯಾರ್ಯ ತೀರ್ಥರೇ ಸುಮಹ ಕಾರುಣ್ಯದಿಂ ಎನ್ನ ಪಾಪಗಳ ಮನ್ನಿಸಿ ವಿಮಲ ವಾಙ್ಮನೋಕಾಯದಲಿ ಶ್ರೀ ರಾಮ ಯದುಪತಿ ಸ್ಮರಣೆ ಇತ್ತು ಪಾಲಿಪುದು ಪ ಅಶೇಷ ಗುಣಗಣಾಧಾರ ವಿಭು ನಿರ್ದೋಷ ಹಂಸ ಶ್ರೀಪತಿಯಿಂದುದಿತ ಗುರುಪರಂಪರೆಗೆ ಬಿಸಜಭವ ಸನಕಾದಿ ದೂರ್ವಾಸ ಮೊದಲಾದ ವಂಶಜರು ಸರ್ವರಿಗೂ ಶರಣು ಶರಣೆಂಬೆ 1 ಅಚ್ಯುತ ಪ್ರೇಕ್ಷರಿಗೂ ಪರವಾಯು ಅವತಾರಾನಂದ ತೀರ್ಥರಿಗೂ ಉತ್ಕøಷ್ಠ ಗುರುತಮ ಮಧ್ವ ಆನಂದ ಮುನಿಗಳ ಕರಕಂಜಭವ ಸರ್ವ ಯತಿಗಳಿಗು ಶರಣು 2 ಮಾಧವ ಅಕ್ಷೋಭ್ಯ ಅದ್ವಿತೀಯ ಸುಸ್ಪಷ್ಟ ಟೀಕಾಗಳಿತ್ತ ಮೇಧಾಪ್ರವೀಣ ಜಯತೀರ್ಥಾರ್ಯರಿಗೂ ವಿದ್ಯಾಧಿರಾಜರಿಗೂ ನಮೋ ನಮೋ ಶರಣು 3 ವಿದ್ಯಾಧಿರಾಜರ ಶಿಷ್ಯರು ಈರ್ವರಲಿ ಮೊದಲನೆಯವರು ರಾಜೇಂದ್ರ ತೀರ್ಥರಿಗು ನಂತರ ಕೋವಿದೋತ್ತಮ ಕವೀಂದ್ರರಿಗೂ ತತ್ವಜ್ಞ ಶಿಷ್ಯವಾಗೀಶ ತೀರ್ಥರಿಗು ಶರಣು 4 ವಾಗೀಶ ತೀರ್ಥರು ಕವೀಂದ್ರ ಕರಜರು ವಾಗೀಶ ಕರಜರು ರಾಮಚಂದ್ರಾರಾರ್ಯರು ಈ ಗುರುಗಳಿಗೆ ಈರ್ವರು ಶಿಪ್ಯರು ಇಹರು ಬಾಗಿ ಶರಣಾದೆ ಈ ಈರ್ವರಿಗೂ 5 ಮೊದಲನೆಯವರು ವಿಭುದೇಂದ್ರತೀರ್ಥಾರ್ಯರು ವಿದ್ಯಾನಿಧಿ ತೀರ್ಥಾರ್ಯರ ಅನಂತರವು ವಿದ್ಯಾನಿಧಿ ಸುತರು ರಘುನಾಥತೀರ್ಥರು ವಂದಿಸಿ ಶರಣೆಂಬೆ ಇವರಿಗು ಇವರ ವಂಶಕ್ಕು 6 ರಘುನಾಥ ಕರಕಮಲಜಾತರಘುವರ್ಯರಿಗೆ ರಘೂತ್ತಮ ವೇದವ್ಯಾಸ ವಿದ್ಯಾಧೀಶ ವೇದನಿಧಿ ಸತ್ಯವ್ರತ ಸತ್ಯನಿಧಿ ಸತ್ಯನಾಥ ಸತ್ಯಭಿನವ ಸತ್ಯಪೂರ್ಣರಿಗೆ ನಮಿಪೆ 7 ಸತ್ಯಾಭಿನವತೀರ್ಥರ ಮಹಿಮೆ ಬಹುಬಹುವು ಸುತಪೋನಿಧಿಯು ಶ್ರೀನಿವಾಸನ್ನೊಲಿಸಿಕೊಂಡಿಹರು ಸತ್ಯಪೂರ್ಣರಿಗೆ ಶಿಷ್ಯರು ಈರ್ವರು ಸತ್ಯವರ್ಯರು ಸತ್ಯವಿಜಯರು ಎಂದು 8 ಸತ್ಯ ಪೂರ್ಣಾರ್ಯರು ತಮ್ಮ ಗುರು ಸತ್ಯಾಭಿನವರ ಪದ್ಧತಿ ಅನುಸರಿಸಿ ಶ್ರೀಮಠ ಆಳುತ್ತ ಸತ್ಯವರ್ಯರನ್ನು ಗೋದಾವರಿ ಕ್ಷೇತ್ರ ವಿಜಯ ಮಾಡೆಂದು ಸತ್ಯವಿಜಯರನ್ನ ಕಳುಹಿದರು ಪೂರ್ವದಿಸೆಗೆ 9 ಸತ್ಯವರ್ಯರು ಗೋದಾವರಿ ಪಂಚವಟಿ ನಾಸಿಕ ತ್ರಿಯಂಬಕಾದಿ ಕ್ಷೇತ್ರ ಸಮೀಪ ವಿಜಯಮಾಡೆ ಸತ್ಯವಿಜಯರು ತೋಂಡದೇಶ ಚÉೂೀಳ ಪಾಂಡ್ಯಾದಿ ನಾಡಲ್ಲಿ ವಿಜಯ ಮಾಡಿದರು 10 ಜಯಶೀಲರಾಗಿ ದಿಗ್ವಿಜಯಮಾಡಿ ತೋಯಜಾಕ್ಷನಪಾದಐದಿದರು ನಿಯಮೇನ ಸತ್ಯವಿಜಯರು ಅಲಂಕರಿಸಿದರು ಪೀಠ 11 ಸತ್ಯಾಭಿನವ ಆರ್ಯರ ಸತ್ಯಪೂರ್ಣ ಗುರುಗಳ ಪದ್ಧತಿಯಲಿ ಸತ್ಯವಿಜಯಾರ್ಯರು ವೇದಾಂತವಾಖ್ಯಾರ್ಥ ದುರ್ವಾದ ಖಂಡನ ಅಧಿಕಾರಿಗಳಿಗು ಉಪದೇಶ ಮಾಡಿದರು 12 ಸೇತುಯಾತ್ರೆ ಮಾಡಲು ದಿಗ್ವಿಜಯ ಕ್ರಮದಲಿ ಬಂದರು ಆರಣಿಗೆ ತೋಂಡದೇಶದಲಿ ವಿಪ್ರ ಆರಣಿ ರಾಜನು ಸಂತಾನ ವೃದ್ಧಿಗೆ ಕೊರಗುತ್ತಿದ್ದ 13 ಯುಕ್ತಮರ್ಯಾದೆಗಳ ವೈಭವದಿಂದಲಿ ಸತ್ಯವಿಜಯರಿಗೆ ಮಾಡಿ ದೇವಾರ್ಚನೆ ಭೂದೇವರಿಗೆ ಭೋಜನಮಾಡಿಸಿದ ರಾಜನು ವೇದ್ಯವಾಯಿತು ಗುರುಗಳಿಗೆ ರಾಜನ ಕೊರತೆ 14 ಸತ್ಯವಿಜಯತೀರ್ಥಾರ್ಯರ ಗುರುವರ್ಯರು ಸಪ್ತದಶ ಅಕ್ಷರ ಮಂತ್ರ ಪ್ರತಿಪಾದ್ಯಹರಿದಯೆಯಿಂದ ಒದಗಿಸುವ ವಂಶವೃದ್ಧಿ ಎಂದು ಅನುಗ್ರಹಿಸಿ ಪೋದರು ದಿಗ್ವಿಜಯಕೆ ವರವು ಪೂರ್ಣವಾಯಿತು 15 ಸೇತುಯಾತ್ರೆ ದಿಗ್ವಿಜಯ ಪೂರಯಿಸಿ ಆ ಗುರುಗಳು ಮತ್ತು ಬಂದರು ಆರಣಿ ಕ್ಷೇತ್ರಕ್ಕೆ ಕೃತಜ್ಞ ಆ ರಾಜನು ಎದುರುಗೊಂಡು ಗುರುಗಳ ಪಾದದಲಿ ಶಿರವಿಟ್ಟು ಸ್ವಾಗತವನಿತ್ತ 16 ಸಂಸ್ಥಾನ ಮೂರ್ತಿಸ್ಥ ಹರಿಪೂಜಾ ವೈಭವವು ನಿತ್ಯ ಪ್ರವಚನ ಪಾಠಕೀರ್ತನೆ ಏನೆಂಬೆ ಸತ್ಯವಿಜಯರನ್ನ ರಾಜ ಅಲ್ಲಿಯೇ ಇರಬೇಕು ಎಂದು ಕೋರಿ ಒದಗಿಸಿದ ತಕ್ಕ ಸೌಕರ್ಯ 17 ಸತ್ಯವಿಜಯಾರ್ಯರಿಗೆ ದೇಹ ಅಧಾರೂಢ್ಯ ವೇದ್ಯವಾಯಿತು ಆರಣಿರಾಜನಿಗೆ ಭಕ್ತಿಶ್ರದ್ಧೆಯಿಂದಲಿ ಉಪಚಾರ ಮಾಡಿದನು ಮಾಧವಗೆ ಅರ್ಪಿಸುತಕೊಂಡರು ಗುರುಗಳು 18 ಶ್ರೀ ಸತ್ಯವಿಜಯತೀರ್ಥರ ಮಹಿಮೆ ಬಹು ಉಂಟು ಒಂದು ಮಾತ್ರ ಸ್ಥಾಲಿಪುಲಿಕನ್ಯಾಯದಲಿ ಈ ದಿವ್ಯ ಸಣ್ಣ ನುಡಿಗಳಲಿ ಪೇಳಿಹುದು ಮಾಧ್ವಯತಿ ಹರಿದಾಸ ಮಹಿಮೆಗಳಿಗೆ ಅಳವುಂಟೆ 19 ತಮ್ಮ ತರುವಾಯ ಸಂಸ್ಥಾನ ಆಡಳಿತವ ಶ್ರೀ ಮನೋಹರ ಹರಿ ಪ್ರಿಯರು ಸತ್ಯವರ್ಯ ಸುಮನೋಹರ ಸತ್ಯಪ್ರಿಯ ತೀರ್ಥನಾಮದಲಿ ರಮಾರಮಣಸೇವೆಗೆ ವಹಿಸಬೇಕೆಂದು 20 ಭಕ್ತಿಮಾನ್ ಆರಣಿ ರಾಜನಿಗೆ ಹೇಳಿ ಹಿತದಿ ಅನುಗ್ರಹಿಸಿ ಗುರುವರ್ಯ ಸತ್ಯವಿಜಯರು ಧ್ಯಾನದಿಂ ಐದಿದರು ಹರಿಪುರ ಚೈತ್ರ ಕೃಷ್ಣಪುಣ್ಯದಿನ ಏಕಾದಶಿ ದ್ವಾದಶಿಲಿ 21 ಮತ್ತೊಂದು ಅಂಶದಲಿ ಸತ್ಯವಿಜಯ ನಗರಾಖ್ಯ ಕ್ಷೇತ್ರ ಆರಣಿ ಸಮೀಪ ವೃಂದಾವನದೀ ಇದ್ದು ಸೇವಿಸುವ ಸುಜನರಿಗೆ ವಾಂಛಿತ ಒದಗಿಸುತ ಕುಳಿತಿಹರು ಹರಿಧ್ಯಾನ ಪರರು 22 ಸತ್ಯಲೋಕೇಶಪಿತ ಶ್ರೀಪ್ರಸನ್ನ ಶ್ರೀನಿವಾಸ ಪ್ರಿಯ ಸತ್ಯಾಭಿನವತೀರ್ಥ ಕರಕಂಜ ಜಾತ ಕರ ಕಾಯವಾಙ್ಮನದಿ ನಮೋ ಶರಣು ಮಾಂಪಾಹಿ 23
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಹಯಮುಖ ಲಕ್ಷ್ಮೀನಾರಾಯಣ ಶ್ರೀಹರಿಕೇಶವ ನಮೊ ನಮೊಮ'ಸೂರ್ಪುರ ಪ್ರಭುಗುರು ಪರಕಾಲಮಠಸ್ಥಿತಿಧಾಮ ನಮೋ ನಮೋ ಪಮಧುಕೈಟಭದೈತುಲ್ಯ ದೃಂಚನುಹಯ ವದನುಡವೈತಿ' ನಮೋ ನಮೋ'ಧಿಸತಿಶಾರದ ಚಿರಕಾಲಾರ್ಚನ ಕ್ರತಯಾಮೊದಿತ ನಮೋ ನಮೋ 1ಅರಿದರಕರಧರ ಅಬ್ಜ ಸುರವರ ಪುರಹರಾದಿನುತ ನಮೋ ನಮೋಮುರಹರಭವಹರಮುಚುಕುಂದಾವನ ಧರಾಧರಾಧರ ನಮೋ ನಮೋ 2ಶರಸ್ಮರಕುಶಲವ ಶರಕಮಲಜಪಿತ ಸರಸಿಜನಯನ ನಮೋ ನಮೋಪರಮಪುರುಷಸಿರಿಯುರಕೌಸ್ತುಭಮಣಿ ಹಾರಾಲಂಕೃತ ನಮೋ ನಮೋ 4ಘನಗಿರಿಸಂಸ್ಥಾನಾಧಿಪಗುರು ಯಾಗಮಭೂ'ುಜಯುತ ನಮೋ ನಮೋದನರಗ ಶ್ರೀಮದ್ವೇದಾಂತಾರ್ಯಾರ್ಚನಲೊನೈತಿ' ನಮೋ ನಮೋ5ಹಲಕುಲಿಶಾಂಕುಶ ನಳಿನಧ್ವಜಪದ ಜಲರುಹನಾಭಾ ನಮೋ ನಮೋಶ್ರದ್ಧಗಪರಂಪರ ಸೇವಾರ್ಚನ ಗೊನಿ ತದ್ದಾಮೊದಿತ ನಮೋ ನಮೋ 6ಲರೊಧೃವಹಲ್ಯಾಕರ್ವುರಸುತ ಭೂ ಸುರಾದಿದಯಪಾಲ ನಮೋ ನಮೋಶರಣಾಗತಬಿರುದಾಂಕಿತ ಮದ್ಭಯದುರಿತ'ದೂರ ನಮೋ ನಮೋ 7ದೊಡ್ಡಕೃಷ್ಣರಾಜೇಂದ್ರ ಪ್ರಭೃತಿತೀ ಧರಪತಿವಂದಿತ ನಮೋ ನಮೋಸಡ್ಡಗತವಪದ ಸೇವಾರ್ಹುಲು ುೀಶದ್ವಂಶಜಪ ನಮೋ ನಮೋ 8ಸಿರಿಯಭಿನವರಂಗನಾಥ ಯತೀಂದ್ರಸೇವಕಸೇ'ತ ನಮೋ ನಮೋಸರಿತುಲಸೀಗುರುಚರಣಾಶ್ರಿತ ರಂಗಸ್ವಾ'ುದಾಸೊದ್ಧರ ನಮೋ ನಮೋ9
--------------
ಮಳಿಗೆ ರಂಗಸ್ವಾಮಿದಾಸರು