ಒಟ್ಟು 4153 ಕಡೆಗಳಲ್ಲಿ , 125 ದಾಸರು , 2858 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಡಿದಫಲವನುಭವಿಸಣ್ಣ ನೀ ಒಲ್ಲೆಂದರೆ ಬೆನ್ನ ಬಿಡದಣ್ಣ ದೊರಕುವುದ್ಹ್ಯಾಗಣ್ಣ ಪ ಜತೆಯಿಲ್ಲದೆ ನೀ ಮೊದಲ್ಹುಟ್ಟಿ ಮತ್ತು ಜತೆಯಿಲ್ಲದ್ಹೋಗ್ವುದು ಮರೆತುಬಿಟ್ಟಿ ಸತಿಸುತರ್ಹಿತರೆಂದು ಮತಿಗೆಟ್ಟ ಮಂದ ಮತಿಯಾಗಿ ಸಂಸಾರ ತಿಳಿದಿ ಗಟ್ಟಿ ಗತಿಸುವ ದೇಹದ ಸ್ಥಿತಿ ವಿಚಾರಿಸದೆ ಸತತ ಒದ್ದಾಡಿದಸತ್ಯದೊಳಗೆ ಭ್ರಷ್ಟ 1 ಗಳಿಸಲು ತುಸು ಬೇಸರಲ್ಲದ್ಹೋಗಿ ಕೇಳಿದಳುಕಿ ಅಳುಕಿ ಜನರಿಗೆ ಬಾಗಿ ಅಳಿದುಪೋಗುವ ಕಾಸು ಹಣಕಾಗಿ ಕೆಟ್ಟು ಬಳಲಿಬಳಲಿ ದುಡಿದೆಲೆ ಗೂಗಿ ನಳಿನಾಕ್ಷನ ಪೂಜೆ ಒಮ್ಮೆ ಮಾಡೆನ್ನಲು ಅಳುಮೋರೆ ಮಾಡಿದಿ ತಲೆಬಾಗಿ 2 ಕೆಟ್ಟ ಕೃತ್ಯದಿ ನಿನ್ನ ವಯ ಕಳೆದಿ ಮನೆ ಗಿಷ್ಟಮಿತ್ರರು ಬರಲತಿ ನೊಂದಿ ಕೊಟ್ಟದ್ದು ಕೊಡಲಿಕ್ಕೆ ಸಿಟ್ಟಿಗೆದ್ದಿ ನೀ ಶಿಷ್ಟರ ಸಂಗಕೆ ದೂರಾದಿ ಇಷ್ಟದಾಯಕ ನಮ್ಮ ಶಿಷ್ಟ ಶ್ರೀರಾಮನಡಿ ಗಟ್ಟ್ಯಾಗಿ ಭಜಿಸದೆ ಕೆಟ್ಟ್ಹೋದಿ 3
--------------
ರಾಮದಾಸರು
ಮಾಡಿರೊ ಪಾಡಿರೊ | ಲೋಕದೊಳಗೆ ಇದೆ ಬೀರುತಾ ಸಾರುತಾ ಶ್ರೀಕಾಂತನ ವೊಲಿಸಿ ಪ ದಶಮಿ ಏಕಾದಶಿ ದ್ವಾದಶಿ ದಿನತ್ರಯ | ವಸುಧಿಯೊಳಗೆ ಮಹಾವ್ರತವೆಂದು ತಿಳಿದು ತ್ರಿ | ದಶರೆಲ್ಲ ಕೈ ಕೊಂಡು ಮಾಡಿದರಂದು ರಂ | ಜಿಸುವ ಸತ್ಕರ್ಮದಲ್ಲಿ | ಬಿಸಜನಾಭನು ಲಕುಮಿಗೆ ಪೇಳಿದ ವ್ರತ | ಹಸನಾಗಿ ಬೊಮ್ಮಗೆ ಅರಹು ಮಾಡಲು ದೇವ | ಋಷಿಗೆ ಅಜನು ಪೇಳಲಾ ಮುನಿ ಬೀರಿದಾ ದಶ ದಿಕ್ಕಿನೊಳಗೊಂದು 1 ಉದಯಕಾಲದೆಲೆದ್ದು ಸಂಸಾರಯಾತ್ರೆ ಎಂದು | ಬದಿಯಲ್ಲಿದ್ದವರೆಲ್ಲ ಹರಿದಾಸ ದಾಸಿಯರು ಹೃದಯದೊಳೀಪರಿ ಯೋಚಿಸಿ ಅಜ್ಞಾನ ಒಂದು ಕಡೆಗೆ ನೂಕಿ | ಸದಮಲನಾಗಿ ಸ್ನಾನಾದಿಯ ಮಾಡಿ ಮ ವಿಧಿ ಮುಗಿಸಿ ಶ್ರವಣ ಸಾರಾ ಹೃದಯರಿಂದಲಿ ಕೇಳಿ2 ಗೋವಿಂದನ ಚರಣಕೆ ಎತ್ತಿ ನಿರ್ಮಲ ಚಿತ್ತ | ದಿಂದಲಿ ನಲಿವುತ ಹಿಗ್ಗಿ ಹಾರೈಸಿ ಆನಂದ ವಾರಿಧಿಯಲ್ಲಿ | ಕುಂದದೆ ಸೂಸುತ ಗೆಳೆಯರ ಒಡಗೂಡಿ | ತಂದು ಪುಷ್ಪಗಳಿಂದ ಮಂಟಪವ ವಿರಚಿಸಿ | ಇಂದು ಸ್ಥಾಪಿಸಿ ತುತಿಸಿ 3 ಜ್ಞಾನಿಗಳೊಡನೆ ಕುಳ್ಳಿದ್ದು ಸುಜ್ಞಾನಿಗಳು ಶುದ್ಧ ಗಾ| ಆನನ ಕೂಗುತ ಹಾಡುತ ಪಾಡುತ | ಧ್ಯಾನವ ಗೈವುತಲಿ | ಕಾಣಬಾರದಂತೆ ಪ್ರಜೆದೊಳಗೆ ತೋರಿ | ಮಗುವಿನಂತೆ ಶ್ರೀನಿವಾಸನ ನೆನಸಿ 4 ಕೂಡಿ ಸೋಗು ವೈಯಾರದಿ | ಕಾಲಲಿ ಗೆಜ್ಜೆಯ ಕಟ್ಟಿ | ವಲಯಾಕಾರ | ಮೇಲು ಚಪ್ಪಳೆಯಿಂದ | ಬಾಲವೃದ್ಧರು ನಿಂದು ಕುಣಿಕುಣಿದಾಡಿ ಹಿ | ಯಾಲಲಿ ಹರಿಯ ಸಂಕೀರ್ತನೆ ಕೀರ್ತಿಸಿ | ಸೋಲದೆ ಘನಸ್ವರ ಸ್ವರದಿಂದಲಿ ಕೂಗಿ ವಿ | ಶಾಲ ಭಕುತಿ ಒಲಿಸಿ 5 ಕಿರಿಬೆವರೊದಕ ಮೊಗದಿಂದಿಳಿಯಲು | ಉರದಲಿ ಇದ್ದ ದೇವಗೆ ಅಭಿಷೇಚನೆ | ಪರವಶವಾಗಿ ಮೈಮರೆದು ತಮ್ಮೊಳು ತಾವು | ಕರದು ತರ್ಕೈಸುತಲಿ | ಕಿರಿನಗೆಯಿಂದ ತೋಳುಗಳು ಅಲ್ಲಾಡಿಸಿ | ಎರಡು ಭುಜವ ಚಪ್ಪರಿಸಿ ಏಕಾದಶಿ | ದುರಿತ ರಾಸಿಗೆ ಪಾವಕನೆಂದು ಕೂಗಿ ಬೊಬ್ಬಿರಿದು ಬಿರಿದು ಸಾರಿ6 ಮಧ್ಯ ಮಧ್ಯದಲಿ ಮಂಗಳಾರುತಿ ಎತ್ತಿ | ಮಧ್ವರಾಯರೆ ಮೂರು ಲೋಕಕೆ ಗುರುಗಳು | ಸಿದ್ಧಾಂತ ಮುನಿ ಸಮ್ಮತಾ | ಮಲ ಮೂತ್ರವನು ಕ್ರಿಮಿವ ಮನವು | ಮೆದ್ದಾ ಸದ್ದೋಷಿ ಚಂಡಾಲ ವೀರ್ಯಕ್ಕೆ ಬಿದ್ದವ ನಿಜವೆನ್ನಿ 7 ಸಾಗರ ಮೊದಲಾದ ತೀರ್ಥಯಾತ್ರೆಯ ಫಲ | ಭೂಗೋಳದೊಳಗುಳ್ಳ ದಾನ ಧರ್ಮದ ಫಲ | ಆಗಮ ವೇದಾರ್ಥ ಓದಿ ಒಲಿಸಿದ ಫಲ | ಯೋಗ ಮಾರ್ಗದ ಫಲವೊ | ಜಾಗರ ಮಾಡಿದ ಮನುಜನ ಚರಣಕ್ಕೆ ಬಾಗಿದವಗೆ ಇಂಥ ಫಲಪ್ರಾಪ್ತಿ ನಿರ್ದೋಷನಾಗುವ ವೈರಾಗ್ಯದಿ 8 ನಿತ್ಯಾ ನೈಮಿತ್ಯಕ ಮಾಡು ಮಾಡದಲಿರು | ಪೋಗಾಡದೆ ಸದಾಚಾರ ಸ್ಮøತಿಯಂತೆ ಅತ್ಯಂತ ಪಂಡಿತ ಪಾವನ್ನ | ಉತ್ತಮರೊಡಗೂಡಿ ಮೃಷ್ಟಾನ್ನ ಭುಂಜಿಸಿ | ಮೃತ್ಯು ಜೈಸಿ ಸದ್ಗತಿಗೆ ಸತ್ಪಥಮಾಡು | ಸತ್ಯ ಮೂರುತಿ ನಮ್ಮ ವಿಜಯವಿಠ್ಠಲರೇಯ | ನಿತ್ಯ ಬಿಡದೆ ಕಾವಾ 9
--------------
ವಿಜಯದಾಸ
ಮಾಡು ನೀ ಹರಿಯ ಭಜನಿ ಪ ಹರಿಯ ಭಜನಿ ಮಾಡು ಹಲವು ಯೋಚನೆಯ ಬಿಡು ಶರಣರೊಳಗೆ ಕೂಡು ಸಿರಿಧರನ ನೋಡು 1 ಹರಿಜನರನ್ನೇ ನೋಡಿ ಅವರ ಪಾದವು ಪಿಡಿ ಶರೀರ ಸಾಧ್ಯನಿಕೆ ಮಾಡಿ ಶರಣ ತತ್ವವುಪಡಿ 2 ಸಿಂಧುಶಯನ ಹರಿ ಎಂದು ಸ್ತುತಿಸೂತೇರಿ ದಂದಗಳನೆ ಮರಿ ದೇವರೆಯೆಂದು ಇರಿ 3 ಸುರಮುನಿ ವಂದ್ಯನಾ ಸುಗುಣ ವಿಲಾಸ ನಾ ಅನುದಿನ ಭಜಿಸಿ 4 ದೇಹ-----ವೆಂದೂ ದಿನಮಾನ ತಿಳಿದಂದೂ ಮಹ ಹೊನ್ನ ವಿಠ್ಠಲ ಎಂದೂ ----- 5
--------------
ಹೆನ್ನೆರಂಗದಾಸರು
ಮಾಡು ಮನವೆ ಸದ್ಭಕ್ತಿ ನೋಡು ನಿನ್ನೊಳು ಸುಮುಕ್ತಿ ಧ್ರುವ ನೀಡಿ ತನುಮನ ಧನ ಕೂಡು ನೀ ಸದ್ಗುರುವಿನ ನೋಡು ನಿನ್ನೊಳಗೆ ಖೂನ ಗೂಢ ನಿಜಧನ 1 ಪಿಡಿದು ಸದ್ಗುರು ಪಾದ ಬಿಡದೆ ನೋಡು ನೀ ಸದಾ ತಡೆದು ಕಾಮಕ್ರೋಧ ಪಡಿಯೋ ಸುಬೋಧ 2 ಕೂಡಿ ಸದ್ಗುರು ಸುಪಥ ನೋಡು ನೀ ಸದೋದಿತ ಮೂಢ ಮಹಿಪತಿ ಮನವೆ ನಿನ್ನ ಸ್ವಹಿತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾಡೋ ಪರಮೇಶ್ವರ ಗುರುಧ್ಯಾನಾ ಬಿಡದಿರುವದು ಭಜನಾ ||ನೋಡೋ ನಿನ್ನೊಳು ನಿಜ ಖೂನಾ | ಪೂರ್ಣೈಕ್ಯದ ಜ್ಞಾನಾ ಪ ಅಪರೂಪದ ನಿಜ ತನುವಿದು ನೋಡೋ ಸೆಡಗರದೀ ಪಾಡೋ ||ಅಪಹಾಸ್ಯವ ಮಾಡದೆ ನೀ ಕೂಡೋ ಘನ ಚಿನ್ಮಯ ಗೂಡೋ 1 ಆಜ್ಞಾ ಚಕ್ರದ ಬಳಿಯಲ್ಲೀ | ಎರಡೂ ಕಮಲದಲ್ಲೀ |ಪ್ರಾಜ್ಞಾ ಝಗ ಝಗಿಸುವ ಬೆಳಕಲ್ಲೀ | ತಿಳಿ ನಿನ್ನೊಳಗಿಲ್ಲೀ 2 ಮೇಲಿನ ಸ್ಥಾನದ ಸಹಸ್ರಾರ | ಗುರುತತ್ತ್ವದ ಸಾರಾ ||ಪೇಳಲಳವಲ್ಲವು ಸುಖ ಪೂರಾ | ಶಂಕರ ಪದವಿವರಾ | ಭೀಮಾ ಶಂಕರ ಪದವಿವರಾ 3
--------------
ಭೀಮಾಶಂಕರ
ಮಾಡೋ ಹರಿಭಜನೆ ಮನುಜ ನೀ ಪ ಮಾಡೋ ಹರಿಭಜನೆ ಕೂಡಿ ಸುಸಂಗದಿ ಕಡುದೃಢದೊಡನೆ ನೀ ಅ,ಪ ವನಜನಾಭಧಿಕೆಂಬ ಘನಸ್ಮøತಿ ವಚನವ ನೆನವಿಡಿದನುದಿನ ಮನದೃಢ ಬಲಿಸಿ 1 ಮನುಮುನಿಗಳ ಕುಣಿಕುಣಿದ್ಹೊಗಳುವ ಮಾರ ಜನಕಗೆ ತನುಮನ ಘನ ದೃಢದರ್ಪಿಸಿ 2 ಪಿಡಿದು ಬಿಡದೆ ನೇಮ ಪಿಡಿದಡಿಗೆ ನೀ ಒಡೆಯ ಶ್ರೀರಾಮನಾಮ ದೃಢವಿಟ್ಟು ಮರೆಯದೆ 3
--------------
ರಾಮದಾಸರು
ಮಾತಿನ ಸುಖವೇನೋ ಸುಖವೇನೋ | ರೀತಿಯನರಿಯದೆ ತಾನು ಪ ಸಂತರ ವೇಷವ ಹಿಡಿವೀ | ಮನದಲಿ | ಶಾಂತಿಯ ಮನಗುಣ ಬಿಡುವೀ 1 ಪಡಿಯದೆ ಆತ್ಮ ವಿಚಾರಾ | ದೋರುವಿ | ನುಡಿಯಂಗಡಿಯ ಪಸಾರಾ 2 ಇಂದು | ಹೇಳುವಿ | ಸರ್ವಂ ವಾಸುದೇವೆಂದು ಮ 3 ತರಂಗವಿಲ್ಲದ ಶರಧಿಯಂತೆ | ಇರುವುದು ಪರಮ ಸಮಾಧಿ 4 ತಂದೆ ಮಹಿಪತಿ ಬೋಧಾ | ಮನನಕೆ | ತಂದವನೇ ಸುಖಿಯಾದಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾತಿನೋಳ್ಮಾತಿಲ್ಲದ ಪಾತಕಜನಜತೆ ಜನ್ಮಕೆ ಮಾಡಬೇಡಿರಪ್ಪ ಪ ನೀತಿಗಡಕ ಮಹಕೋಟಿ ಕುಹಕರ ಸಂಗ ಕೊಂಡ ಕಾಣಿರಪ್ಪ ಅ.ಪ ಬಣಗು ಬಿನುಗರ ತಳ್ಳಿ ಫಣಿಪನ ಸಹವಾಸ ಕೇಳಿರಪ್ಪ ಅಣಕವಾಡುತ ಅನ್ಯಜನಸುದ್ದ್ಯೋಳ್ದಿನಗಳೆವ ಶುನಕ ಜನಮಿಗಳನೊದೆಯಿರಪ್ಪ1 ಚಲನಚಿತ್ತದ ಬಲುಹೊಲೆಮತಿಗಳ ಸಲಿಗೇಳೇಳು ಜನ್ಮಕೆ ಬೇಡಿರಪ್ಪ ವಿಲಸಿತ ನಡೆನುಡಿ ತಿಳಿಯದದುರುಳರ ಗೆಳೆತನ ಕಡೆತನಕ ಬಿಡಿರಪ್ಪ 2 ಧರ್ಮಗೆಟ್ಟು ದುಷ್ಕರ್ಮದುರುಳವ ದುರ್ಮದ ಬಿಟ್ಟು ದೂರಾಗಿರಪ್ಪ ನಿರ್ಮಲಸುಖ ನಿಜ ಮರ್ಮನವರಿಯದ ಧರ್ಮಿಗಳೆದೆಯನು ತುಳಿಯಿರಪ್ಪ 3 ಸತ್ಯಸನ್ಮಾರ್ಗವ ಮರ್ತ ಅಸತ್ಯರ ನೆತ್ತಿಮೇಲೆ ಹೆಜ್ಜಿಡಿರಪ್ಪ ನಿತ್ಯಮುಕ್ತಿ ಸುಖ ಗುರ್ತರಿಯದೆ ಯಮ ಮೃತ್ಯುವಶವ ಗೋಷ್ಠಿ ಬಿಡಿರೆಪ್ಪ 4 ಮರವೆ ಮಾಯಿಗಳ ಚರಣದಿ ಮುಟ್ಟಿದಿರಪ್ಪ ಪರಮ ಶ್ರೀರಾಮಪಾದ ಮರೆದ ದುರಾತ್ಮರ ದರುಶನ ಕನಸಿನೋಳ್ಬೇಡಿರಪ್ಪ 5
--------------
ರಾಮದಾಸರು
ಮಾತು ಆಡುವೆ ಯಾತಕೆ ಮನವೆ ನೀ ಸೋತು ಸುಮ್ಮನಿರು ಜೋಕೆ ಪ ಮಾತು ಆಡುವೆ ಯಾಕೆ ಮಮತಾ ಅಹಂಕಾರದಿ ಶ್ರೀತರುಣಿವರನ ಸಿರಿನಾಮವಿಲ್ಲದೆ ಅ.ಪ ಕಾಯ ಅಸ್ಥಿರವೆನ್ನದೆ | ಇಹ ಪರಕೆ ಸ- ಮಾಯವಾದಗಳಾಡೆ ಬಾಯಿ ನೋವಲ್ಲದೆ 1 ವೇದ ಪುರಾಣವಿಲ್ಲ | ಶಾಸ್ತ್ರವೆ ಬ್ರಹ್ಮ- ವಾದವೇ ಮೊದಲೇಯಿಲ್ಲಾ ಸಾಧನೆಯೆಂಬುವದು ಲೇಶಯಿದರೊಳಿಲ್ಲಾ ಹಾದಿಹೋಕರ ಕೂಡಿ ಪ್ರೌಢನು ನಾನೆಂದು 2 ಹರಟೆ ಹರಟೆ ಮೋದಿಸಿ ಪರಗತಿ ಚಿಂತೆ ಬಿಂದು ಮಾತ್ರವು ಕಾಣೆ ಹರಿವ ನೀರೊಳು ಬೂದಿಹಾಕುವಂದದಿ ವ್ಯರ್ಥ 3 ಒಂದಕ್ಕೊಂದ್ಹೆಚ್ಚಿಸುತ | ಶುಷ್ಕವಾದ- ದಿಂದ ಕಾಲವ ಕಳೆಯುತ ನಿಂದಿಸಿ ಪರರ ಸ್ವಯೋಗ್ಯತೆ ತಿಳಿಯದೆ 4 ಬಲ್ಲೆನಾ ಬಿಡು ಎಂಬುವೆ | ಸದಾ ಒಬ್ಬ- ಪುಲ್ಲಲೋಚನ ಗುರುರಾಮವಿಠಲನ ಕಾಣ- ಲಿಲ್ಲ ಶೋಧಿಸಿ ತಿಳಿಯಲಿಲ್ಲ ಬರಿದೆ ಬಾಯಿ 5
--------------
ಗುರುರಾಮವಿಠಲ
ಮಾತು ಬಿಡಬೇಕು ನೀತಿ ಹಿಡಿಬೇಕು ಪ್ರೀತಿಯಿಂದಧ್ಯಾತ್ಮ ನಿಜಸ್ಥಿತಿಗೂಡಬೇಕು ಧ್ರುವ ಕೋಟಿ ಮಾತಾದೇನು ಕೋಟಿಲಿದ್ದಾವೇನು ನೋಟ ನೆಲೆಗೊಳದ ಶಾಸ್ತ್ರಪಾಠ ಮಾಡಿನ್ನೇನು 1 ಸಂಜೀವ ಗಿಡಮೂಲವ್ಯಾತಕೆ ಸರ್ವ ನಡಿಯು ಙÁ್ಞನವರಿಯದಿಹ ನುಡಿಯಾತಕೆ ಬೀರ್ವ 2 ನಡೆನುಡಿ ಒಂದೇ ಮಾಡಿ ದೃಢ ಭಾವನೆ ಕೂಡಿ ಒಡನೆ ಬಾಹ್ವ ಮಹಿಪತಿ ಒಡಿಯ ಕೈಗೂಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾತು ಮನ್ನಿಸೊ ಪರಮಾತಮಾ ಮುದದಿಂದ ಮಾತು ವೈದವನಲವ ಮಾತುರದೊಳು ಗೆದ್ದು ಮಾತಿಯ ಸೆರೆ ಪ್ರೇಮಾತುರ ಭೇದಿಸಿದ ಮಾತುರಪತಿ ಚಿನ್ಮಾತುರ ತೋರೋ ಪ ಸೂಕರ ಘೂಕಾ ಮನಕಾಶಾ ಕಾಕಕಂಕಾ ದನ ಕತ್ತೆ ಮೊದಲಾದ ಜನ ಕಲಿಯುಗದೀ ತನಕೆ ಆದzಕಿನ್ನು ಮನಕಾನಂದವ ಕಾಣೆ ದಿನ ದಿನ ಕಾಂಚನಾಶಿಯಿಂದ ಘನಕಾಮ ಬದ್ಧನಾದೆ ಕನಕಾಂಬುಜ ಭವಜನಕ ಜಗತ್ಪತಿ ಜನ ಕಥೆಯಿಂದ ಭ ವನಕತಿ ಮೋಹಿಸಿ ಧನಕವಿಯೆನಿಸಿದೆ ಎನ್ನ ಕಡೆ ಮೊಗವಾಗು 1 ಸನಕಾದಿ ವಂದ್ಯ ತ್ರಿಭುವನಕಾದಿ ಮೂಲವೆನಿಸಿ ವನಕಾಯಿದ ಕಾರುಣ್ಯರತುನಕಾರ ಪೂರ್ಣನೀತಾ ಘನಕಾಯ ಒಂದಾರೆ ಸಾಧನಕಾಧಾರವಾದೊ ಪಾ ವನ ಕಾಲಾ ತೊರೆದು ಜೀವನ ಕಾದುಕೊಂಡೆನಯ್ಯಾ ಇನಕರ ತೇಜಾ ತುಹಿನಕರ ಚರಣನೆ ಚನ ಕತ್ತಲೆ ನಾಶನ ಕರಿವರದಾ 2 ಜನಕಾ ವನಿಕಾ ನಾಭಾ ಕಾಣಿಸಿದೆ ಮುನಿ ಜನಕಾಶ್ಚರ್ಯರಾಗೆ ವಾಗೆ ಅನನಕಾಮರಿ ತೂಗೆ ವಂ ಚನೆ ಕಾಠಿಣ್ಯ ಪಾಪಕಾನನಕಾನಳನೆ ಜಾ ವನ ಕಾಟ ಬಿಡಿಸಿ ಈಮ್ಮನ ಕಾದಂತಯ್ಯಾ ನನಕೂಡ ಹಾಕು ದುಷ್ಟನದೊಟ್ಟಿ ಸ ಜ್ಜನ ಕರ್ಮದಲಿ ಸೋಭನ ಕಡೆಯಲಿ ಇಡು ಕವನಕೆ ದಾಸನ ಕರವಿಡಿಯೊ 3
--------------
ವಿಜಯದಾಸ
ಮಾತೆ ಸರಸ್ವತಿ ಮಂಜುಳ ಮೂರುತಿ ಚೇತನಾತ್ಮಕಿ ಭಾರತಿ ಪ. ಪ್ರೀತಿಯಿಂದೀವುದು ಪೀತಾಂಬರಧರನ ಸಾತಿಶಯದ ಭಕುತಿ ಅ.ಪ. ಗುರುಹಿರಿಯರ ಕಂಡು ಬಿರುನುಡಿ ನುಡಿಸದೆ ಕರುಣಿಸೆನಗೆ ಸನ್ಮತಿ ಪರಮಪಾವನ ವೈಷ್ಣವರ ಪಾದಾಂಬುಜ ಮಧು- ಕರದಂತಿರಲಿ ಮದ್ರತಿ 1 ಮೂರ್ತಿ ತಾರೇಶನಂದದಿ ಹೃದಯಾ- ಕಾಶದೊಳು ಕಾಣುತಿ ದೂಷಣ ಕಾಮಾದಿ ಕ್ಲೇಶವ ಬಿಡಿಸುತ್ತ ಗೈಸಮ್ಮ ಹರಿಯ ಸ್ತುತಿ 2 ಮನುಜರ ರೂಪದಿ ದನುಜರು ಭೂಮಿಯೊಳ್ ಜನಿಸಿದರ್ಜಲಜನೇತ್ರಿ ಅನಘ ಲಕ್ಷುಮಿನಾರಾಯಣನ ದಾಸರಿಗೆಲ್ಲ ಜನನಿಯೆ ನೀನೆ ಗತಿ 3 ಭಾರತಿದೇವಿಯ ಸ್ತುತಿ
--------------
ತುಪಾಕಿ ವೆಂಕಟರಮಣಾಚಾರ್ಯ
ಮಾಧವ ಗೋವಿಂದ ಪ ಪಾದಭಕುತಿ ನೀಡೋ ದೇವ ಅ.ಪ ಅನವರತವು ಮನದಿ ನಿನ್ನಯ ಘನಮಹಿಮೆಗಳನ್ನು ಮೋದದಿ ನೆನೆಯುವಂತೆ ಮಾಡೋ ದೇವ 1 ಅಭಿಮಾನವ ಬಿಡಿಸೋ ವಿಷಯದ ಅಭಿಮಾನವ ಬಿಡಿಸೋ ನಿನ್ನಯ ಅಭಯಕರ ನೀಡೋ ದೇವ 2 ಎಂದಿಗು ಹೃದಯದಲಿ ರಾಗದ ಗಂಧವು ಬರದಂತೆ ದೇವ ಸುಂದರ ಗೋಪಾಲ ಎನ್ನ ಹೃ ನ್ಮಂದಿರದಲಿ ನಿಲ್ಲೋ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಮಾಧವ ದೇವಾದಿ ದೇವಾ ಪ ಪ್ರೇಮದಿಂದ ಕಾವ ಶ್ರೀ ಮಹಾನುಭಾವ ಅ.ಪ. ಯಾರು ಇಲ್ಲದೆ ಘೋರಾಂಧಕಾರದೆ ಸೇರಿ ಸಾಗರ ಧೀರನಾಗಿದ್ದವ 1 ಸೃಷ್ಟಿ ಸ್ಥಿತ್ಯಾದಿ ಅಷ್ಟಕರ್ತನಾದಿ ಇಷ್ಟದಾತನೀತ ಶಿಷ್ಟ ಕೃಪಾನ್ವಿತ 2 ಅಚ್ಯುತಾನಂದ ಸ್ವಚ್ಛಮೂರ್ತಿನಾಥ ನೆಚ್ಚಿದವರ ಬಿಡ ಲಕ್ಷ್ಮೀಕಾಂತ ದೃಢ 3
--------------
ಲಕ್ಷ್ಮೀನಾರಯಣರಾಯರು
ಮಾಧವ ಗೀತೆ ಶರಣು ಹರಿಗೆ ಶರಣು ಸಿರಿಗೆ ಶರಣು ಬ್ರಹ್ಮವಾಣಿಯರಿಗೆ ಶರುಣು ಭವಗೆ ಶರಣು ಶಿವೆಗೆ ಶರಣು ಬೆನಕಗೆ ಶರಣು ತತ್ವಮಾನಿಗಳಿಗೆ ಶರಣು ಮುನಿ ಸಮೂಹಗಳಿಗೆ ಮಾಧವ 1 ಪರಮಭಕ್ತರಾಗಿ ಮೆರೆದ ಗುರು ಪುರಂದರಾದಿ ಸಾಧು ವರರ ವಚನ ಮಣಿಗಳನ್ನು ಮನದೊಳಾರಿಸಿ ಸರವ ಮಾಡಿ ಶರಣ ಜನರ ಕರುಣದೆಳೆಯೊಳಿದನು ಬಿಗಿಸಿ ಮಾಧವ 2 ಶ್ರೀಯೆ ಸತಿಯು ನಿನಗೆ ಬ್ರಹ್ಮರಾಯ ಹಿರಿಯ ಮಗನು ವೈನ- ತೇಯ ರಥವು ಖಾದ್ರವೇಯೆ ಶಯ್ಯೆ ಛತ್ರವು ಮನೆಯ ದಾಸಿ ಸುರನಿ ಮಾಧವ 3 ಪರ್ವತೇಶನಣುಗಿ ತಂಗಿ ಶರ್ವದೇವ ನರ್ಮ ಸಖಳು ಸರ್ವದುರಿತವಳಿವ ಗಂಗೆ ನಿನ್ನ ಪುತ್ರಿಯು ಸರ್ವಕರ್ತ ಸರ್ವಶಕ್ತ ಸರ್ವಕಾಲ ದೇಶ ವ್ಯಾಪ್ತ ಭೋಕ್ತ ಮಾಧವ 4 ನೀನೆ ತಾಯಿ ನೀನೆ ತಂದೆ ನೀನೆ ಬಂಧು ನೀನೆ ಬಳಗ ನೀನೆ ಸಖಳು ನೀನೆ ಗುರುವು ನೀನೆ ದ್ರವ್ಯವು ನೀನೆ ಧೃತಿಯು ನೀನೆ ಸ್ಮøತಿಯು ನೀನೆ ಮತಿಯು ಮಾಧವ 5 ನಿನ್ನ ನಾಮ ಪುಣ್ಯನಾಮ ನಿನ್ನ ರೂಪ ಮಾನ್ಯರೂಪ ಅನ್ಯ ದೈವರನ್ನು ಕಾಣೆ ಘನ್ನ ಭಕ್ತವರ್ಯರಾಣೆ ಮಾಧವ 6 ದೀನ ನಾನು ದಾನಿ ನೀನು ಹೀನ ನಾನು ಮಾನಿ ನೀನು ಏನ ಬಲ್ಲೆನೈಯ ನಾನು ಜ್ಞಾನಪೂರ್ಣನೈಯ ನೀನು ಮಾಧವ 7 ಹೃದಯದಲ್ಲಿ ನಿನ್ನ ರೂಪ ವದನದಲ್ಲಿ ನಿನ್ನ ನಾಮ ಉದರದಲ್ಲಿ ಅರ್ಪಿತಾನ್ನವಿತ್ತು ಅನುದಿನ ಒದಗಿ ಬಂದು ಬದಿಯಲಿದ್ದು ಮದಡ ಬುದ್ಧಿಯನ್ನು ಬಿಡಿಸಿ ಮಾಧವ 8 ಸ್ನಾನ ಮೌನ ಧ್ಯಾನ ತಪಗಳೇನು ಮಾಡಲೇನು ದೇವ ನೀನೆ ಕೃಪೆಯಿನೊಲಿಯದಿರಲು ಜ್ಞಾನ ಬಾರದು ಏನು ಹೀನ ಹಾನಿ ಬರಲು ನೀನು ಮಾತ್ರ ಬಿಡದಿರೆನ್ನ ಮಾಧವ 9 ನಿತ್ಯವಲ್ಲ ದೇಹವಿನ್ನು ವ್ಯರ್ಥವಾಗಿ ಪೋಪುದಾಯು ಮತ್ತೆ ಬರುವುದೇನು ನಿಜವು ಮತ್ರ್ಯಕಾಯವು ನಿತ್ಯ ನಿನ್ನ ಭಜಿಸುತಿಪ್ಪ ಮಾಧವ 10 ಅಂಬುಗುಳ್ಳೆಯಂತೆ ಇರುವ ಡಿಂಬವನ್ನು ನಂಬಿ ಕೆಟ್ಟು ಹಂಬಲಿಸುತ ವಿಷಯಗಳಿಗೆ ಡೊಂಬನಾದೆನು ಕಂಬಳಿಯೊಳು ಕಟ್ಟಿದನ್ನ ತಿಂಬುವನಿಗೆ ದೊರೆವ ಸುಖವು ಮಾಧವ 11 ಹೊಟ್ಟು ತಂದು ಕುಟ್ಟಿ ಕೇರಿ ಕಷ್ಟಪಟ್ಟು ತುಕ್ಕಿ ಬೀಸಿ ಅಟ್ಟಹಾಸದಿಂದ ರೊಟ್ಟಿ ಸುಟ್ಟು ತಿನ್ನಲು ಎಷ್ಟು ಸುಖವೊ ಅಷ್ಟೆಯಿನ್ನು ಭ್ರಷ್ಟ ಭವದಿ ಮಮತೆಯಿಡಲ ಮಾಧವ 12 ಹೊಟ್ಟೆಕಿಚ್ಚು ಪಡುವೆ ದೈವಕೆಷ್ಟು ಪೂಜೆ ಮಾಡೆ ಕರುಣ ಪುಟ್ಟಲೊಲ್ಲದದಕೆ ಬೆಟ್ಟದಷ್ಟು ಕೊಟ್ಟರು ಬೆಟ್ಟು ನೀರೊಳದ್ದಿ ಬಾಯೊಳಿಟ್ಟು ಚಪ್ಪರಿಸಲು ರುಚಿಯ ಮಾಧವ 13 ತಪ್ಪು ಸಾಸಿರಂಗಳನ್ನು ಒಪ್ಪಿಕೊಂಡು ಕಾವದೇವ ಮುಪ್ಪುರಂಗಳನ್ನು ಗೆಲಿಸಿದಪ್ರಮೇಯನೆ ಕಪ್ಪು ಮೇಘಕಾಂತಿಯಿಂದಲೊಪ್ಪುತಿಪ್ಪ ತಿರುಮಲೇಶ ಮಾಧವ 14 ಒರಳ ನೆಕ್ಕಿ ವ್ರತವ ಕೆಟ್ಟ ಮರುಳನಂದವಾಯ್ತು ದೇಹ ಧರಿಸಿದುದಕೆ ನಿನ್ನ ಬಿಟ್ಟು ನರರ ಸ್ತುತಿಸಲು ಹರಕು ಚಿಂದಿ ಬಿಡಿಸಲಿಲ್ಲ ಕರಕು ಅನ್ನ ಹೋಗಲಿಲ್ಲ ಮಾಧವ 15 ಮೊರಡು ತುರುವ ಹಿಡಿದು ಕಟ್ಟಿ ಕರೆದು ಕಷ್ಟ ಪಟ್ಟು ಪಾಲ ನುರಗಗಳಿಗೆ ಎರೆದ ತೆರದಲಾಯ್ತು ನಿನ್ನನು ತರಣಿ ಮುಣಗ ದುಡಿದು ಬಡಿದು ಮಾಧವ 16 ಕೆರವ ತಿಂಬ ನಾಯಿಗಿನ್ನು ಸುರುಚಿಯನ್ನ ಸೊಗಯಿಸುವುದೆ ನರಕ ಭಾಗಿ ಪಾಮರಂಗೆ ನಿನ್ನ ನಾಮವು ಗರಳದಂತೆ ತೋರ್ಪುದೈಯ ಗುರುಗಳಿಲ್ಲ ಹಿರಿಯರಿಲ್ಲ ಮಾಧವ 17 ಕ್ರೂರ ಮಾನವರೊಳುದಾರ ಧೀರ ಶೂರರೆಂದು ಸಾರಿ ಬಾರಿ ಬಾರಿಗಿನ್ನು ಪೊಗಳಿ ಬೊಬ್ಬೆಯಿಟ್ಟರು ಬಾರದವರಿಗೆಂದು ಕರುಣ ಘೋರತನದ ದನುಜರವರು ಶೌರಿ ಮಾಧವ 18 ಹಾಳು ಹೊಲಕೆ ನೀರನೆತ್ತಿ ತೋಳು ಬೀಳು ಹೋದವೋಲು ಖೂಳ ಜನಕೆ ಪೇಳಿಕೊಳ್ಳುತಿಹನು ಬಾಳ್ವೆಯು ದಾಳಿ ಮಾಳ್ಪ ವಿಷಯಗಳನು ಹೂಳಿ ಜ್ಞಾನ ಭಕ್ತಿಯನ್ನು ಮಾಧವ 19 ಎಷ್ಟು ನೀಲಿಯನ್ನು ತೊಳೆಯೆ ಬಿಟ್ಟು ಹೋಗದವರ ಬಣ್ಣ ದುಷ್ಟ ಮಾನವರಿಗೆ ಕರುಣ ಪುಟ್ಟದೆಂದಿಗು ಕಷ್ಟಪಟ್ಟು ಸೇವಿಸುವರ ಹೊಟ್ಟೆಯನ್ನು ಹೊಡೆದು ತಮ್ಮ ಮಾಧವ 20 ನಿರುತ ನಿನ್ನ ಕಥೆಯ ಬಿಟ್ಟು ನರರ ಕಥೆಗಳನ್ನು ಕೇಳಿ ಗುರುಗಳನ್ನು ಹಿರಿಯರನ್ನು ಜರೆಯುತಿಪ್ಪರು ಪೊರೆದ ತಂದೆ ತಾಯ ಮಾತ ಪರಿಕಿಸದಲೆ ತೊರೆದು ತಮ್ಮ ಮಾಧವ 21 ಪಟ್ಟದರಸಿಯನ್ನು ತೊರೆದು ಬಿಟ್ಟು ಪರರ ಸತಿಯ ಕೂಡಿ ಕೊಟ್ಟ ಸಾಲವನ್ನು ಕೊಡದೆ ನುಂಗುತಿಪ್ಪರು ಕರವ ಭಾಷೆಯನ್ನು ಕೊಟ್ಟು ಮೋಸ ಮಾಡುತಿಹರು ಮಾಧವ 22 ಉಂಡ ಮನೆಗೆ ಬಗೆವರೆರಡನವರು ಭಂಡರು ಕಂಡು ನುತಿಸಿ ಬೇಡಿಕೊಂಡರು ದಂಡಿಸುವರ ಕಂಡು ನಡುಗಿ ಮಾಧವ 23 ಕೊಳ್ಳರೊಳಗೆ ಸ್ನೇಹ ಬಹಳ ಸುಳ್ಳರೊಳಗೆ ಸೋಲುತಿಹರು ಒಳ್ಳೆಯವರ ಕಂಡವರ ಟೊಳ್ಳು ಮಾಳ್ಪರು ಬಳ್ಳೆಸುರಿದು ಬಲ್ಲಿದವರಿಗಳ್ಳೆ ಬಿರಿಯಲುಣಿಸಿ ದಣಿಸಿ ಮಾಧವ 24 ಮಾಡಿದಂಥ ಕೃತಿಯು ಮರೆತು ಕೇಡು ಬಗೆದು ಕಾಡುತಿಹನು ನೋಡರೊಮ್ಮೆಗಾದರವರು ಬಡವರೆಂಬುದ ಜಾಡೆಯರಿತು ನಿನ್ನ ನಾಮ ಪಾಡಿ ಪೊಗಳುತಿಹರಿಗೆಂದು ಮಾಧವ 25 ಶಾಕವ್ರತದೊಳೆಲ್ಲ ಶಾಕಂಗಳನ್ನು ಬಿಡುವ ತೆರದಿ ಬೇಕು ಬೇಕು ಎಂಬ ಬಯಕೆ ಬಿಡಲು ಬಾರದು ಸಾಕೆನಿಸದೆ ರತಿಯ ಸುಖದೊಳೇಕ ಚಿತ್ತನಾಗುವಂತೆ ಮಾಧವ 26 ನೇಮ ನಿಷ್ಠೆಯೆಂದು ಪರರ ಧಾಮದನ್ನ ಬಿಡುವವೋಲು ಕಾಮಲೋಭ ಮೋಹಗಳನು ಬಿಡಲು ಬಾರದು ನಿತ್ಯ ಪರರ ಮಾಧವ 27 ಹೇಸಿಗೆಯನು ಕಂಡು ಕರದಿ ನಾಸಿಕವನು ಹಿಡಿಯುವಂತೆ ಹೇಸಿ ವಿಷಯ ವಾಸನೆಯನು ಬಿಡಲು ಸಲ್ಲದು ಘಾಸಿಬಟ್ಟು ಪರರ ಸೇವೆಯಾಸೆಬಟ್ಟು ಮಾಡುವಂತೆ ಮಾಧವ 28 ವಿತ್ತ ಪದವಿ ಕಂಡು ಹರುಷ ಕ್ಲೇಶಗಳಿಗೆ ಸಿಲುಕು- ತಿರುಳು ಹಗಲು ಬಿಡದೆ ಕುದಿದು ತೊಳಲುತಿರುವೆನು ದುರುಳ ವಿಷಯಗಳಿಗೆ ಮನವ ಮಾಧವ 29 ಹೇಸಿ ವಿಷಯ ಸುಖವ ನಾನು ಲೇಸೆನುತ್ತೆ ತಿಳಿದು ಮಮತೆ ಯಾಸೆಯಲ್ಲಿ ಕಟ್ಟುಬಿದ್ದು ಕ್ಲೇಶಪಡುತಿಹೆ ಪಾಶಬಿಡಿಸಿ ದಾಸ ದಾಸ ದಾಸನಾಗಿಸೆನ್ನ ದೋಷ ಮಾಧವ 30 ಆಗದೆನಗೆ ಅಬುಜನಾಭ ಭಾಗವತವ ಕೇಳೆ ಮನಸು ಬೈಗು ಬೆಳಗು ಪೋಗುತಿಹುದು ಸಾಗಿ ಬಾರದು ಭೋಗ ಭಾಗ್ಯಗಳನು ಬಯಸಿ ರಾಗ ಲೋಭಗಳಲಿ ನೆಲಸಿ ಮಾಧವ 31 ಬಂದ ಕಾರ್ಯವಾಗಲಿಲ್ಲ ಎಂದು ಬ್ರಹ್ಮ ದೇಹ ಧರಿಸಿ ಮುಂದ ನೊಂದನರಿಯೆ ಮಾಧವ 32 ದಾಸ ವೇಷವನ್ನು ಹಾಕಿ ದೇಶ ದೇಶವನ್ನು ತುಕ್ಕಿ ಮೋಸಮಾಡಿ ಸುಜನರನ್ನು ಘಾಸಿಗೊಳಿಸಿದೆ
--------------
ಲಕ್ಷ್ಮೀನಾರಯಣರಾಯರು