ಒಟ್ಟು 574 ಕಡೆಗಳಲ್ಲಿ , 92 ದಾಸರು , 471 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸನಾಗುವೆ ಭಜಿಪ ಭಕ್ತಿಯನು ನೀಡೆನ್ನ ನಾನೇನೂ ಮಾಡಲಾರೆ ರಂಗಯ್ಯ ನೀನೆನ್ನ ಸಲಹ ಬೇಕು ಪ ಗಾನಲೋಲನ ನಾಮ ಭಜನೆಯೊಂದುಳಿದು ನಾ ನನ್ಯರೀತಿಯ ಕಾಣೆ ಸಲಹಯ್ಯ ಹರಿಯೇ ಅ.ಪ. ತರಳಾ ಧ್ರವನಂತೆ ತಪನ ನಾನರಿಯನು ಸರಳೆ ದ್ರೌಪದಿಯಂತೆ ಸ್ತೋತ್ರವನರಿಯೇ ಹರಿದಾಸರಂತೆ ದಾಸತ್ವ ನಾನರಿಯೆನು ಪರಮ ಸೇವಕರಂತೆ ಸೇವೆಯ ನರಿಯೇ 1 ಅಸುರನಂದನನಂತೆ ಕೀರ್ತನೆಯರಿಯೆನು ವಸುಧೀಶನಂತೆ ನಾ ವ್ರತಗಳನರಿಯೇ ವಸುಮತಿಯಂತೆ ನಾ ಯಾಚನೆಯರಿಯೆನು ಋಷಿ ವೃಂದದಂತೆ ನಾ ಭಕ್ತಿಯನರಿಯೇ 2 ಸಿರಿಯಂತೆ ನಿನ್ನನು ಸೇವಿಸಲರಿಯನು ಕರಿಯಂತೆ ಸ್ಮರಣೆಯ ಮೊದಲು ನಾನರಿಯೆ ಸುರಮುನಿಯಂತೆ ನಾ ಗಾಯನವರಿಯೆನು ಸಿರಿ ಚನ್ನಕೇಶವ ಭಜನೆಯನರಿವೇ 3
--------------
ಕರ್ಕಿ ಕೇಶವದಾಸ
ದೀನ ಪರಿವಾರ ಪಾಹಿ ದಾತಾರ ಮಾಂ ದೇಹಿಮೇ ಚರಣಸೇವಾಂ ಪ ಬೃಂದಾವನಶೈಲವಾಸ ಪರಮಕೃಪಾಕರ ಪಾಪನಾಶ ಸುಧೀಂದ್ರ ವಿಭೂಷ ಹೃದಯೋಲ್ಲಾಸ ಅ.ಪ ಸರ್ವೇಶ ವೆಂಕಟೇಶ ಗುರುವರ ಸುಖಧಾಮ ಸುರರಂಜನ ಅಖಿಲ ಬೃಂದಾಳಿಭೀಮ ಶ್ರೀರಾಮ ಪರಿಭಾಷಾ ಮನಿವೇಶ ಜಿತಸೋಮ 1 ಪ್ರಾಣೇಶಸುತ ಭಜನ ಸತತ ವಿರಾಜ ಪರಿ ಪೂರ್ಣದರ್ಶನ ನಿರಂತರದಾಯಕ ಮುನಿಪುಂಗವ ಹರಿಣ ಸಾರಾಂಗ 2 ಮಂಗಳ ಚರಣ ತುರಂಗ ಗಂಗಾಮೃತ ಪೂರ್ಣತೀರ್ಥ [ತುಂಗಾತೀರ ನಿವಾಸಿನೀಂ] ಮಾಂಗಿರಿರಂಗ ಸಂಪ್ರೀತ ಮಾಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೀಪ ಬೆಳಗುವಾಗಾ ಉಣ್ಣುವರುಣ್ಣಿರೋ ಬೇಗ ಬೇಗಾ ದೀಪ ಲೋಪವಾದಮೇಲೆ ಬರಿದಪ್ಪುದು ಭೋಜನಶಾಲೆ ಪ ಚಿತ್ತಶುದ್ಧಿಎಂಬ ಎಳೆಬಾಳೆಎಲೆ ಎಡೆಮಾಡಿ ನಿತ್ಯನಿರ್ಮಲವೆಂಬ ರಾಜಾನ್ಹವ ನೀಡಿ ಸತ್ಯಸಾಧುಸಂಗವೆಂಬ ಘೃತಸಾರಾನ್ಹವ ನೀಡಿ ಪ್ರತ್ಯುಗಾತಮ ಆತ್ಮನ ನಿರಂತರ ತೃಪ್ತಿಬಡಿಸಿ ನೋಡಿ ದೀಪ 1 ಗುರುಕೃಪೆಯೆಂದೆಂಬ ಪರಡಿಯ ಪಾಯಸದಾಹಾರಾ ನಿರುತಾನ್ಹ ಉದಾನಮಾಡಲು ಷಡುರಸದುಪಚಾರಾ ಹರಿಹರ ಭೇದಗಳಡಗಿದನು ಭವಾಮೃತ ಸಾರಾ ಪೊಸದುಪ್ಪದಭಾರಾ ದೀಪ 2 ಕೆಂದ ಆಕಳÀ ಕರೆದು ಕಾಸಿದ ಕ್ಷೀರವ ಕೈಕೊಂಡು ತಂದೆ ತಾಯ್ಗಳ ಭಕುತಿ ಮಾಡಿದ ಮಸುರೋಗರ ಉಂಡು ವಂದಿಸಿ ಶ್ರೀ ಗುರು ವಿಮಲಾನಂದನ ಸೈಂದವನೊಳಗೊಂಡು ತೇಗುತ ಮೆರದುಂಡು 3
--------------
ಭಟಕಳ ಅಪ್ಪಯ್ಯ
ದುರಿತ ತಿಮಿರಕೆ ಸೂರ್ಯ ಶರಣ ಜನ ಭಾಗ್ಯೋದಯ ಪ ನರಹರಿಯ ದಾಸಾರ್ಯ ಮರುತಮತ ಪರಿಚರ್ಯ ಶಿರಬಾಗಿ ಮುಗಿವೆ ಕೈಯ್ಯ ಅ.ಪ. ಘೋರತರ ಸಂಸಾರ ಸಾರತರವೆಂದರಿದು ಪಾರಮಾರ್ಥಿಕವ ತೊರೆದು ಭೂರಿ ನರಕದಿ ಬೆಂದು ಗಾರಾಗಿ ಪೋಪರಂದು ನಾರದರೆ ನೀವ್ ಬಂದು ನಾರಾಯಣಾ ಎಂದು ಚೀರಿದಾ ಧ್ವನಿಗೆ ಅಂದು ಘೋರ ಪಾತಕವೆಲ್ಲ ದೂರಾಗಿ ಸ್ವರ್ಗವನು ಸೇರಿ ಸುಖಿಸಿದರು ಎಂದು 1 ಸರಸಿಜಾಕ್ಷನ ಸ್ತುತಿಸಿ ವರ ಪಡೆದು ಧರಣಿಯೊಳು ಮೆರೆವ ಕನ್ನಡ ದೇಶದಿ ಸಿರಿಯಿಂದಲೊಪ್ಪುತಿಹ ಪುರಂದರಗಡದೊಳಗೆ ಇರುವ ಭೂಸುರ ವಂಶದಿ ವರಗರ್ಭದಲಿ ಜನಿಸಿದಿ ನರರಂತೆ ಚರಿಸುತ್ತ ಲೌಕಿಕೆ ಮರುಳಾಗಿ ಸರ್ವಭಾಗ್ಯವ ಗಳಿಸಿದಿ 2 ಚಿನಿವಾರ ವ್ಯಾಪಾರದನುವರಿತು ನವಕೋಟಿ ಧನಕಧಿಪನೆಂದೆನಿಸುತ ಧನಕನಕ ವಸ್ತು ವಾಹನನಿಚಯ ಸಂಗ್ರಹದಿ ತನುಮನಂಗಳ ಶ್ರಮಿಸುತ ಕನಸಿಲಾದರು ದಾನಧರ್ಮಗಳ ನೆನೆಯದೆಲೆ ದಿನಮಾನಗಳ ಕಳೆಯುತ ಇನಿತು ಮಾಯೆಗೆ ಸಿಲುಕಿ ತನ್ನ ಮರೆದಿರಲಾಗ ಘನ ಮಹಿಮ ಬಂದ ನಗುತ 3 ಅಂದು ತಾನೊಲಿದಿತ್ತ ಚೆಂದದಾ ವರಗಳನು ಇಂದು ಸಲಿಸುವೆನು ಎಂದು ಬಂದು ಬ್ರಾಹ್ಮಣ ರೂಪದಿಂದ ನಿಮ್ಮನು ಹರಿಸಿ ಕಂದನಿಗೆ ಮುಂಜಿಯೆಂದು ಮಂದ ಭಾಗ್ಯನ ತೆರದಿ ಪೊಂದಿ ಯಾಚಿಸಲು ನಿಂದು ಒಂದು ದುಡ್ಡನ್ನು ಲೋಭದಿಂ ದೆಸೆಯಲದನುಳಿದು ಸಿಂಧು 4 ಅತ್ತಣಿಂ ಶ್ರೀನಿಧಿಯು ಮತ್ತೆ ಮನೆಯೊಳು ನಿಮ್ಮ ಪತ್ನಿಯನು ಯಾಚಿಸಿದನು ಉತ್ತಮ ಪತಿವ್ರತೆಯೆ ಪುತ್ರನುಪನಯವೆಂದು ಇತ್ತ ಬಂದಿಹೆನೆಂದನು ಚಿತ್ತದೊಲ್ಲಭನ ಸಮ್ಮತಿಯಿಲ್ಲದೆಲೆ ನಾ ನಿತ್ತು ಕಳುಹೆನು ಏನನೂ ಅತ್ತ ಗಮಿಸಿರಿ ಎನಲು ಹೆತ್ತತಾಯ್ ನಿನಗಿತ್ತ ನತ್ತನ್ನು ಕೊಡು ಎಂದನು 5 ನಾಗಾರಿವಾಹನನ ನುಡಿಯು ಮನಸಿಗೆ ಹಿಡಿಯೆ ಮೂಗುತಿಯ ತೆಗೆದಿತ್ತಳು ಭಾಗ್ಯವಂತಳೆ ನಿನಗೆ ಲೇಸಾಗಲೆಂದ್ಹರಿಸಿ ಸಾಗಿ ಬಂದನು ಇತ್ತಲು ಹೋಗು ಹೋಗೆಲೊ ಮತ್ತೆ ನೀನೇಕೆ ಬಂದೆನಲು ಮೂಗುತಿಯ ಕ್ರಯಕೆ ಕೊಡಲು ಈಗ ಬಂದಿಹೆನೆಂದು ನಿಮಗದನು ತೋರಲು ಹೇಗೆ ಬಂದಿತು ಎನ್ನಲು 6 ಮನಕೆ ಸಂಶಯ ಮೂಡಿ ಚಿಂತಿಸುತಿರೆ ನೋಡಿ ವನಜನಾಭನು ಪೇಳ್ದನು ನನಗೀಗ ಧನಬೇಡ ನಿನ್ನಲ್ಲಿಯೇ ಇರಲಿ ಅನುವರಿತು ಬಹೆನೆಂದನು ಸಂತೈಸಿ ಪೊರಮಡಿಸಿ ನಿನಗೆ ನಾಮವನಿಡುವೆನು ಎನುತ ಹರುಷದಿ ನಗುತ ಮನೆಗೆ ಬರುತಲೆ ಕಂಡೆ ವನಿತೆಯಾ ಬರಿ ಮೂಗನು 7 ಮುತ್ತಿನಾ ಮೂಗುತಿಯು ಎತ್ತ ಹೋಯಿತು ಎನಲು ಮುತ್ತೈದೆ ಮನದಿ ನೊಂದು ಮತ್ತೆ ಮುರಿಯಿತು ಎಂದು ತತ್ತರಿಸುತಿರೆ ಕಂಡು ಇತ್ತ ತಾರೆನಲು ನಿಂದು ವಿಪ್ರ ಮತ್ತೇನು ಮಾಡುವರೊ ಕತ್ತಲೆಯು ಮುತ್ತಿ ತಿಂದು ಭಕ್ತವತ್ಸಲ ನಿಂಗೆ ತೆತ್ತರೀತನುವನ್ನು ಕುತ್ತು ಪಾರಾಹುದೆಂದು 8 ತರುವೆನೀಗಲೆ ಎಂದು ತೆರಳಿ ವಿಷವನೆ ಅರೆದು ಕರದಿ ಬಟ್ಟಲನು ಹಿಡಿದು ಹರಣದಾಸೆಯ ತೊರೆದು ಸಿರಿವರನ ಪದನೆನೆದು ಕುಡಿಯುವನಿತರೊಳು ತಿಳಿದು ಕರುಣದಿಂ ಮೂಗುತಿಯ ಗರಳದಲು ಕೆಡಹಲಾ ಮಣಿ ಹರುಷದಳೆದು ಪರಮ ಸಂಭ್ರಮದಿಂದ ಕೊಡಲದನು ನೀವ್ ಕೊಂಡು ಭರದಿ ಅಂಗಡಿಗೆ ಬಂದು 9 ಬೀಗ ಮುದ್ರೆಯ ತೆಗೆದು ನೋಡೆ ಭೂಸುರನಿತ್ತ ಮೂಗುತಿಯು ಕಾಣದಿರಲು ಹೇಗೆ ಹೋಯಿತು ಎಂದು ಮನದೊಳಚ್ಚರಿಗೊಂಡು ಬೇಗನೆ ಮನೆಗೆ ಬರಲು ಹೇಗೆಂದು ತಿಳಿಸದಿರಲು ನೀಗುವೆನು ತನುವನೆಂದು ಬೆದರಿಸಲು ಸಾಧ್ವಿಯಾ ಬಾಗಿ ವಂದಿಸಿ ನುಡಿದಳು 10 ವೃದ್ಧ ಬ್ರಾಹ್ಮಣನಾಗಿ ಹೆದ್ದೈವನೇ ಬಂದು ಪೊದ್ದಿಯಾಚಿಸಲು ಜರಿದೆ ಲುಬ್ಧನಾಗತಿಶಯದಿ ಬದ್ಧನಾದೆನು ದ್ರವ್ಯ ವೃದ್ಧಿಗೋಸುಗವೆ ಬರಿದೆ ಇದ್ದುದಕೆ ಫಲವೇನು ಸದ್ಧರ್ಮದಲಿ ಕೊಡದೆ ಉದ್ಧಾರವಿಲ್ಲೆಂದು ತಿಳಿದೆ ಶುದ್ಧ ಭಾವದಿ ಹರಿಯ ಪದ್ಮಪಾದವ ನೆನೆದು ಹೆದ್ದಾರಿ ಹಿಡಿದು ನಡೆದೆ 11 ಶಿಷ್ಟ ಬ್ರಾಹ್ಮಣರು ನೆಂಟರಿಷ್ಟ ಮಿತ್ರರಿಗೆ ವಿ- ಶಿಷ್ಟವನು ದಾನಗೈದು ನಿಷ್ಠೆಯಿಂ ಮಡದಿ ಮಕ್ಕಳನ್ನೊಡಗೊಂಡು ವಿಠ್ಠಲನ ಪುರಕೆ ನಡೆದು ಕಷ್ಟ ನಿಷ್ಠುರ ಸಹಿಸಿ ಕೃಷ್ಣನಂಘ್ರಿಯ ಭಜಿಸಿ ಇಷ್ಟಾರ್ಥ ಸಿದ್ಧಿಗೈದು ನೆಟ್ಟನೇ ಹಂಪೆ ಪಟ್ಟಣದಿ ವ್ಯಾಸಮುನಿ ಶ್ರೇಷ್ಠರಿಂದುಪದೇಶ ಪಡೆದು 12 ಮಧ್ವಮತ ಸಿದ್ಧಾಂತ ಪದ್ಧತಿಯನುದ್ಧರಿಸಿ ಗದ್ಯಪದ್ಯಗಳಿಂದಲಿ ಮಧ್ವಪತಿ ಪದಪದ್ಮ ಹೃದ್ಯದೊಳು ನೆನೆನೆನೆದು ಮುದ್ದಾಗಿ ವರ್ಣಿಸುತಲಿ ಮದ್ದಳೆಯ ತಾಳ ವೀಣೆಗಳ ಗತಿಹಿಡಿದು ಶುದ್ಧರಾಗಗಳಿಂದಲಿ ಉದ್ಧವನ ಸಖನೊಲಿದು ತದ್ಧಿಮಿತ ಧಿಮಿಕೆಂದು ಪೊದ್ದಿ ಕುಣಿಯುವ ತೆರದಲಿ 13 ಈರೆರೆಡು ಲಕ್ಷಗಳ ಮೇಲೆ ಎಪ್ಪತ್ತೈದು ಸಾ- ವಿರ ಗ್ರಂಥ ರಚಿಸಿ ಈರೆರೆಡು ದಿಕ್ಕಿನಲಿ ಚರಿಸಿ ತೀರ್ಥಕ್ಷೇತ್ರ ಸಾರ ಮಹಿಮೆಗಳ ತುತಿಸಿ ಶೌರಿದಿನದಲಿ ಮಾಳ್ಪ ವ್ರತನೇಮ ಉಪವಾಸ ಪಾರಣೆಯ ವಿಧಿಯ ತಿಳಿಸಿ ತಾರತಮ್ಯವು ಪಂಚ ಭೇದಗಳು ಸ್ಥಿರವೆಂದು ಸಾರಿ ಡಂಗುರವ ಹೊಯಿಸಿ 14 ತರುಣಿ ಮಕ್ಕಳು ಶಿಷ್ಯ ಪರಿವಾರಗಳ ಸಹಿತ ಧರೆಯನೆಲ್ಲವ ತಿರುಗುತ ಕರದಿ ಕಿನ್ನರಿ ಧರಿಸಿ ಸ್ವರವೆತ್ತಿ ಪಾಡುತಿರೆ ಕೊರಳುಬ್ಬಿ ಶಿರ ಬಿಗಿಯುತ ಎರಡು ಕಂಗಳು ಧಾರೆ ಸುರಿಯೆ ಬಾಷ್ಪೋದಕವ ಹರಿ ಮಹಿಮೆ ಕೊಂಡಾಡುತ ತಿರಿ ತಂದ ಧನದಿಂದ ವಿಪ್ರರಿಗೆ ಮೃಷ್ಟಾನ್ನ ಹರುಷದಿಂದಲಿ ಉಣಿಸುತ 15 ಗುಪ್ತವಾಗಿರೆ ಕಂಡು ವ್ಯಕ್ತ ಮಾಡುವೆನೆಂದು ಶಕ್ತನಹ ದೇವ ಬಂದ ಓಗರ ಉಂಡ ಸುತನಾಗಿ ನೀರ ತಂದ ಯತಿಯ ಪಂಕ್ತಿಗೆ ಭಾಗಿರಥಿಯನ್ನು ತರಿಸಿದ ಕ್ಷಿತಿಪತಿಗೆ ದೃಢ ತೋರಿದ ಸತಿಯೆಂದ ಮಾತಿಗೆ ಅತುಳ ಭಾಗ್ಯವನಿತ್ತು ಪಥದಲ್ಲಿ ತಲೆಗಾಯಿದ 16
--------------
ಲಕ್ಷ್ಮೀನಾರಯಣರಾಯರು
ದುರಿತ ಅಪ್ರಮೇಯ ವಿನುತ ಎನ್ನ 1 ಕಾಲಕರ್ಮಂಗಳ ಜಾಲಕೆ ಸಿಲುಕಿದಕೀಲುಮುರಿದ ತೇರಂತೆ ನಾ ಬಳಲಿಮೂಲಮಂತ್ರವ ಬಿಟ್ಟು ಲೋಲಮಾನವ ನಾನುಪಾಲಿಸುವರು ಬೇರಿಲ್ಲ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೇವನೀತ ಅವಧೂತ ಜೀವ ಜೀವ ಭಾವಭೋಕ್ತ ಕಾವ ದೈವ ಪ್ರಾಣನಾಥ ದೇವಾಧಿದೇವನೆ ಈತ 1 ಶ್ರೀದೇವ ದೇವ ನಿರ್ವಿಕಲ್ಪ ನಿರಾಕಾರ ನಿರ್ವಿಶೇಹ ನಿರಂತರ ಸರ್ವಸಾಕ್ಷಿ ಸರ್ವಾಧಾರ ಸರ್ವಾತೀತ ಸರ್ವೇಶ್ವರ 2 ಸಾಧುಜನರ ಹೃದಯ ಸದೋದಿತಾನಂದೋದಯ ಆದಿ ಅನಾದಿ ನಿಶ್ಚಯ ಇದೆ ಇದೆ ವಸ್ತುಮಯ 3 ಪತಿತಪಾವನ ಪೂರ್ಣ ಅತಿಶಯಾನಂದಗುಣ ಭಕ್ತಜನರುದ್ಧರÀಣ ಸತತ ಸುಖನಿಧಾನ 4 ಙÁ್ಞನಗಮ್ಯ ಗುಣಾತೀತ ಅನಾಥಬಂಧು ಗುರುನಾಥ ದಾತ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವರಾಗಬಾರದೇನೆಲೇ ದೆವ್ವಿನಂಥ....... ದೇವರಾಗಬಾರದೇನೆಲೇ ಪ ದೇವರಾಗಬಾರದೇಕೋದೇವನ ಪಾದವನಂಬಿ ಕಾವುಮೀರಿ ಹೋದಮೇಲೆ ಬಾಯಬಿಟ್ಟರೆ ಬರುವುದೇನೆಲೆ ಅ.ಪ ತಂದ ಬುತ್ತಿ ಚೆನ್ನಾಗುಣ್ಣೆಲೆ ನೀನದನು ಒಲ್ಲೆ ನೆಂದರೆ ಬಿಟ್ಟ್ಹೋಗ್ವುದೇನೆಲೆ ಹೇ ಪಾಪಿ ನೀನು ಬಂದಹಾದಿ ನೋಡಿಕೊಳ್ಳೆಲೆ ಮುಂದಿದರಿಯೆಲೆ ಬಿಂದುಮಾತ್ರಸುಖಕೆ ಮೋಹಿಸಿ ಪರ್ವತಾಕಾರ ಪಾಪಹೊತ್ತು ಬಂಧಕ್ಕೀಡಾಗುವುದಿದೇನೆಲೆ 1 ನಾಶನಾಗಿ ಹೋಗುತಾದೆಲೇ ಈ ಜಗವು ಒಂದಿನ ಆಸೆಯೆಂಬ ಕುಳಿ ಧುಮುಕ ಬೇಡೆಲೆ ಮಹನೀತಿವಿಡಿದು ನಾಶವಾಗದಪದವಿ ಗಳಿಸೆಲೇ ಸೋಸಿನೋಡೆಲೆ ಮೋಸಮರವೆಯಿಂ ನಾಶವಾಗದೆ ಹೇಸಿಸಂಸಾರ ನಾಮ ಭಜಿಸಿ 2 ಉಟ್ಟ ಸೀರೆಬಿಟ್ಟು ಹೋಗಿದ್ದ್ಯಂತೆ ಹೇ ಹುಚ್ಚು....... ಎಷ್ಟೋಸಾರಿ ಹುಟ್ಟ್ಹುಟ್ಟಿದರಂತೆ ಈ ಕಾಯಧರಿಸಿ ಬಿಟ್ಟುಹೋಗೇದಸ್ತಿ ಪರ್ವತ್ಹೋಲ್ವಂತೆ ಕೆಟ್ಟು ಬಿದ್ದೈತೆ ದುಷ್ಟಭ್ರಷ್ಟತೆಗಳನ್ನು ಬಿಟ್ಟು ಶಿಷ್ಟಸಂಗಕೆ ಮನವಗೊಟ್ಟು ಸೃಷ್ಟಿ ಗೀರೇಳು ಸೂತ್ರನಾದ ದಿಟ್ಟ ಶ್ರೀರಾಮನಡಿಗೆ ಪೊಂದಿ 3
--------------
ರಾಮದಾಸರು
ದೇವಿ ಪಾಲಿಸು| ಅಂಬ| ದೇವಿ ಪಾಲಿಸು ಪ ದೇವಿ ಪರಮಪಾವನೆ ಶಂಕರಿ ಅ.ಪ ಸುರರ ಮೊರೆಯನಾಲಿಸುತಲಿ| ದುರುಳನಾದ ಅರುಣಾಸುರನ ಹರಣ ಹೀರಿ ಮೆರೆವನುಪಮ| ಚರಿತೆ ಎನ್ನಿಷ್ಟಾರ್ಥವೀಯುತ 1 ನಂದಿನಿನದಿಯ ಮಧ್ಯದಿ ನೆಲೆಸಿ | ಬಂಧುಭಾವದಿಂದ ಶರಣ|| ವೃಂದವನ್ನಾನಂದದಿಂದ | ಕಂದರಂತೆ ಸಲಹುತಿರುವೆ 2 ವಿಮಲಚರಿತೆ ಸುಗುಣಭರಿತೆ| ಅಮರವಿನುತೆ ಲೋಕಮಾತೆ|| ಕ್ಷಮಿಸುತೆನ್ನಪರಾಧಗಳನು| ಕಮಲನೇತ್ರೆ ಪರಮಮಂಗಳೆ3 ನಿನ್ನ ಹೊರತು ಪೊರೆವರಿಲ್ಲ| ನಿನ್ನ ಭಜಿಸುತಿರುವೆನಲ್ಲ|| ಎನ್ನನು ಪೊರೆವ ಭಾರವೆಲ್ಲ| ನಿನ್ನ ಪದಕೊಪ್ಪಿಸಿದೆನಲ್ಲ 4 ಪಂಕಜಾಕ್ಷಿ ಪಾಪರಹಿತೆ| ಕಿಂಕರಜನನಿ ಶಂಕರಪ್ರಿಯೆ|| ಶಂಖಚಕ್ರಧಾರಿಣಿ ದೇವಿ| ವೆಂಕಟರಮಣನ ಸೋದರಿ ಶಂಕರಿ5
--------------
ವೆಂಕಟ್‍ರಾವ್
ಧನ್ಯನಾದೆನು ನಾಂ ಪ ಘನ್ನಮಹಿಮ ಶ್ರೀನಿವಾಸ ಕರುಣದಿಂದ ಒಲಿದನಿನ್ನು ಅ.ಪ ದೇಶದೇಶದಿಂದ ಸಕಲ ದಾಸಜನರು ಬಂದು ಸದಾ ಶ್ರೀಶ ಸಲಹೆಂದು ಕೂಗುವ ಘೋಷ ಕೇಳಿ ಕರ್ಣಗಳಿಂ 1 ವೈರಿ ವಿನುತ ಅರ್ಥ ಗಳಿಸುವವನ ಕಂಡು2 ಸತಿಯರೆಲ್ಲ ಮುತ್ತಿನಾ- ರತಿಯ ಬೆಳಗುವುದು ಕಂಡು 3 ಸಂತಸದಿ ಮಹಂತರು ಶ್ರೀ- ಕಾಂತನ ಗುಣರಾಸಿ ಪೊಗಳಿ ಸ್ವಾಂತನಿರ್ಮಲರಾಗಿ ಭಜಿಪ- ರಂತರಾತ್ಮನ ಕಂಡು 4 ಭೂಮಿಗಧಿಕ ಶೇಷಗಿರಿ ಧಾಮಪೂರ್ಣಕಾಮ ಭಕ್ತ- ಸ್ತೋಮವನ್ನು ಪಾಲಿಪ ಗುರು- ರಾಮವಿಠಲನ್ನ ಕಂಡು 5
--------------
ಗುರುರಾಮವಿಠಲ
ಧನ್ವಂತ್ರಿ ನಿನ್ನ ಸ್ಮರಿಸಿ ಧನ್ಯರಾಗಿಹರ ಪಾದ ಧ್ಯಾನದೊಳಿರೆಸೆನ್ನ ಧನ್ಯನೆಂದೆನಿಸೊ ಪ ನಿನ್ನ ದಾಸರ ಕೀರ್ತಿ ನಿನ್ನ ದಾಸರ ವಾರ್ತೆ ನಿನ್ನ ನಾಮಾಮೃತವು ಎನ್ನ ಕಿವಿ ತುಂಬಿರಲಿ ಅ.ಪ ನಿನ್ನ ಪಾದದ ಸ್ಮರಣೆಯನ್ನು ಮಾಳ್ಪರ ಸಂಗ ಇನ್ನು ಪಾಲಿಸು ದೇವನೆ ಘನ್ನ ಮಹಿಮನೆ ಪರಮ ಪುಣ್ಯಶೀಲರ ಸೇವೆ ಇನ್ನು ಕರುಣಿಸೊ ಕೇಶವಾ ಸನ್ನುತಾಂಗನೆ ಭವಭಯವನ್ನು ಬಿಡಿಸೆಂದು ನಾ ನಿನ್ನ ಮೊರೆಯಿಡುವೆ ಹರಿಯೇ ಚನ್ನ ಶ್ರೀಗೋಪಾಲ ಗೋವಿಂದ ಕೇಶವ ನಿನ್ನ ನಾಮನಿರಂತರವು ಪಾ- ವನ್ನ ಮಾಡಲಿ ಎನ್ನ ಜಿಹ್ವೆಯಾ 1 ಆದರದಿ ನಿನ್ನ ಸ್ಮರಿಪ ಸಾಧುಜನರ ಸಂಗ ಭೇದವಿಲ್ಲದೆ ಕರುಣಿಸೊ ಆದಿ ಮೂರುತಿ ನಿನ್ನ ಆದರದಿ ಸ್ಮರಿಪ ಪರ- ಮಾದರವ ನಿತ್ತು ಸಲಹೊ ಮೋದ ಪಡುವ ಭಾಗ್ಯ ಮಾಧವನೆ ದಯಪಾಲಿಸೋ ಮಾಧವ ಜನಾರ್ದನ ಕ್ರೋಧಿ ಸಂವತ್ಸರವು ಭಕುತರ ಕ್ರೋಧಗಳ ಕಳೆಯುತ್ತ ಸಲಹಲಿ2 ಶರಣೆಂದು ಬೇಡುವೆ ಪರಿಪರಿ ಅಘಗಳ ಪರಿಹರಿಸೆಂದು ನಾ ಸ್ಮರಿಸಿಬೇಡುವೆನು ಸರಸಿ ಜೋದ್ಭವÀಪಿತನೆ ಸರಸಿಜಾಕ್ಷಿಯ ಕೂಡಿ ಹರುಷದಿ ನೆಲಸೆನ್ನ ಹೃದಯದಲಿ ದೇವ ಸರಸಿಜನೇತ್ರನೆ ಬಿಡದೆ ನಿನ್ನನು ಸ್ಮರಿಪ ಕಡುಭಾಗವತರ ಸಂಗವನೆ ನೀಡೈ ಮೃಡನ ಸಖನೆ ನಿನ್ನಂಘ್ರಿ ಸ್ಮರಿಸುವ ಭಾಗ್ಯ ತಡೆಯದಲೆ ಪಾಲಿಸುತ ಪೊರೆ ಶ್ರೀ ಕಮಲನಾಭ ವಿಠ್ಠಲನೆ ದಯದಲಿ 3
--------------
ನಿಡಗುರುಕಿ ಜೀವೂಬಾಯಿ
ಧೇನಿಸೂ ಶ್ರೀಹರಿಯ ಮಹಿಮೆ ನೀ ಧೇನಿಸೊ ಪ ಧೇನಿಸು ಶ್ರೀಹರಿಯ ಲೀಲಾ ಸೃಷ್ಟಿ ಮಾನಸದಲಿ ನೆನೆಯೋ ಪರಿಯಾ ||ಆಹಾ|| ತಾನೆ ತನ್ನಯ ಲೀಲಾಜಾಲತನದಿ ತನ್ನ ಆನಂದದೊಳಿಪ್ಪ ಶ್ರೀ ಮುಕುಂದ ನನ್ನ ಅ.ಪ ಮೂಲ ನಾರಾಯಣ ದೇವ ತಾನು ಆಲದೆಲೆಯೊಳು ಲೀಲಾ ತೋರಿ ಬಾಲತನದಿ ತಾ ನಲಿವಾ ಅನೇಕ ಕಾಲ ಪರ್ಯಂತರದಿ ಸರ್ವ ||ಆಹಾ|| ಎಲ್ಲ ಜಗವ ತನ್ನ ಒಡಲೊಳಡಗಿಸಿ ಲೋಲನಾಗಿ ಬಾಲಕ್ರೀಡೆಯಾಡುವಪರಿಯಾ 1 ಇಂತು ಶಯನಗೈದ ಹರಿಯ ಅ- ನಂತ ವೇದಗಳಿಂದ ತ್ವರಿಯಾ ದುರ್ಗ ಸಂತಸದಿಂದ ಸಂಸ್ತುತಿಯ ಮಾಡೆ ಕಂತುಪಿತÀನು ತಾನೆಚ್ಚರಿಯ ||ಆಹಾ|| ಅಂತೆ ತÉೂೀರ್ದ ವಾಸುದೇವಾದಿ ಚತುರಾ- ಸಿರಿ ರೂಪಗಳ ಸಹಿತ 2 ಸಕಲ ರೂಪಗಳ ತನ್ನೊಳೈಕ್ಯಾ ಮಾಡಿ ಸಕಲ ಲಕುಮಿ ರೂಪಗಳಲಿ ಐಕ್ಯಾ ಇಟ್ಟು ಸಕಲ ಮರುತರ್ಗೆ ತನುಮುಖ್ಯಾ ಇತ್ತು ಸಕಲ ಕ್ರೀಡೆಯೊಳು ಸೌಖ್ಯಾ ||ಆಹಾ|| ಲಕುಮಿಯ ಸ್ತುತಿಗೆ ಒಲಿದು ತಾನೇತ- ನ್ನ ಕಡೆಗಣ್ಣಿಂದ ಪಂಚಜೀವರ ನೋಡಿದಾ 3 ಶುದ್ಧಸೃಷ್ಟಿಯೆಂಬುದೊಂದು ಪರಾ- ಧೀನ ವಿಶೇಷವು ಎಂದು ಮತ್ತೆ ಒಂದು ಮಿಶ್ರ ಸೃಷ್ಟಿಯೆಂದು-ಒಂದು ಕೇವಲ ಸೃಷ್ಟಿಯೆಂದೂ ||ಆಹಾ|| ತಮಾಂಧಕಾರವ ಪ್ರಾಶಿಸಿದ ವಿವರಾ 4 ತನ್ನೊಳೈಕ್ಯವಾಗಿದ್ದ ಮಹ ತಾನೆ ಪ್ರಕಟನಾಗಿ ನಿಂದ ಆಗ ಉನ್ನಂತ ಚತುರ ನಾಮದಿಂದ ||ಆಹಾ|| ಜನುಮ ಸ್ಥಿತಿ ಮೃತಿ ಮೋಕ್ಷದನಾಗಿರ್ಪ ಅನಿರುದ್ಧಾದಿ ಚತುರಮೂರ್ತಿಗಳ ವ್ಯಾಪಾರ5 ಪುರುಷನಾಮಕ ಪರಮಾತ್ಮ ತಾ ತರವರಿತು ಘನಮಾಡ್ದ ಮಹಿಮಾ ಸೃಷ್ಟಿ ತರತರ ಮಾಡ್ದ ಮಾಹಾತ್ಮ ||ಆಹಾ|| ಪ್ರಾಕೃತ ವೈಕೃತ ದೇವತೆ ಸುಮಾನ ಈ ಮೂರುವಿಧ ಸೃಷ್ಟಿಯಾನೆಸಗಿದ ಪರಿಯ ನೀ 6 ಮಹದಹಂಕಾರ ತತ್ವ ಪಂಚ ಮಹಭೂತಗಳು ಮನಸ್ತತ್ವ ಇನ್ನು ಮಹದಶೇಂದ್ರಯಗಳ ತತ್ವ ಮತ್ತೆ ಮಹತಾಮಿಶ್ರಾಂಧ ತಾಮಸ ತತ್ವ ||ಆಹಾ|| ಇಹುದು ಈ ಪರಿಯಲ್ಲಿ ಪ್ರಾಕೃತ ಸೃಷ್ಟಿಯು ಮುಹುರ್ಮುಹು ಇದನೆ ಆಲಿಸಿ ನಿನ್ನೊಳು 7 ವೈಕೃತದೋಳು ಸಕಲ ವೃಕ್ಷಾ ತಿರ್ಯಕ್ ಸಕಲ ಪ್ರಾಣಿಗಳ್ ಮನುಜ ಕಕ್ಷಾ ಎಲ್ಲ ವಿಕೃತ ಸೃಷ್ಟಿಯ ಮಾಡ್ದ ಅಧ್ಯಕ್ಷಾ ಇನ್ನು ಸುರಸಮಾನ ಸೃಷ್ಟಿಯ ಅಪೇಕ್ಷಾ ||ಆಹಾ|| ಸಕಲ ಸುರಾಸುರಪ್ಸರ ಗಂಧರ್ವರು ಪಿತೃಗಳು ಯಕ್ಷರಾಕ್ಷಸರ ಪರಿಯವರಾ 8 ಪುನ್ನಾಮ ವಿರಂಚಿ ಬ್ರಹ್ಮಾನು ಅಂದು ಘನ್ನವಾಸುದೇವ ತಾನು ಸೃಷ್ಟಿ ಯನ್ನ ಪ್ರಕಟಮಾಡಿದನು ಮುಂದೆ ಅನಿಲದೇವನು ಸಂಕರುಷಣನ ||ಆಹಾ|| ಅನಿಲನೆ ಸೂತ್ರನಾಮಕವಾಯುವಾಗಿಹ ಭಾವೀ ಬ್ರಹ್ಮನೀತನೆ ನಿತ್ಯಗುರುವೆಂದು 9 ಪ್ರದ್ಯುಮ್ನನಿಂದ ಸರಸ್ವತಿ ಇನ್ನು ಶ್ರಧ್ದಾನಾಮಕಳು ಭಾರತಿ ಸೃಷ್ಟಿ- ಯಾದ ವಿವರ ತಿಳಿಯೊ ಪೂರ್ತೀ ಇದೇ ಪ್ರದ್ಯುಮ್ನನ ಸೃಷ್ಟಿಯ ಕೀರ್ತಿ ||ಆಹಾ|| ಶ್ರದ್ಧಾದೇವಿಯೊಳು ಸೂತ್ರನ ವೀರ್ಯದಿಂ- ದುದ್ಭವಿಸಿದ ಜೀವ ಕಾಲನಾಮಕನು 10 ಈರ ಬ್ರಹ್ಮರಸೃಷ್ಟಿ ಚರಿತ್ರೆ ಚಿತ್ರ ಗಾತ್ರ ತರವೆಲ್ಲ ವಿಚಿತ್ರ ||ಆಹಾ|| ವಿರಂಚಿ ಬ್ರಹ್ಮ ಸರಸ್ವತಿಯಿಂದ ವೈ- ಕಾರಿಕ ರುದ್ರ ಶೇಷಗರುಡರ ನೀ 11 ಸೂತ್ರ ಶ್ರದ್ಧಾ ದೇವೇರಿಂದ ಪವಿ ತ್ರತೈಜಸ ರುದ್ರ ಬಂದಾ ಪ- ಪುತ್ರರಾಗಿಹರತಿ ಚೆಂದಾ ||ಆಹಾ|| ಪುತ್ರನಾದ ತಾಮಸ ರುದ್ರ ಶೇಷಗೆ12 ಪ್ರದ್ಯುಮ್ನ ಸೂಕ್ಷಶರೀರ ಕೊಟ್ಟು ಉದ್ಧಾರ ಮಾಡಿದ ಜೀವರ ಅನಿ ರುದ್ಧನ ಕೈಲಿ ಕೂಡಲವರಾ ಅನಿ ರುಧ್ದನು ಮಾಡ್ದ ವಿಸ್ತಾರಾ ||ಆಹಾ|| ತದಪೇಕ್ಷ ಮೂಲಪ್ರಕೃತಿಯಿಂದ ಗುಣತ್ರಿ- ವಿಧ ಕೊಂಡು ಮಹತ್ತತ್ವ ನಿರ್ಮಿಸಿದಾ 13 ಮಹತ್ತತ್ವದಿಂದಹಂಕಾರ ತತÀ್ತ ್ವ ಮಹದಹಂಕಾರವು ಮೂರುತರ ಇದ- ರೊಳು ಬ್ರಹ್ಮವೈಕಾರಿಕ ಶರೀರವಾಗಿ ಪರಿ ಈ ರೂಪ ವಿವರಾ ||ಆಹಾ|| ಅಹುದು ತೈಜಸದಿಂದ ಶೇಷನ ದೇಹವು ತಾಮಸದಿಂದಲಿ ರುದ್ರ ತಾನಾದನು 14 ಎರಡನೆಯ ಸಾರಿ ಪ್ರದ್ಯುಮ್ನ ಅರ್ಧ ನಾರೀ ರೂಪನಾಗಿ ಇನ್ನು ಎಡದಿ ಸ್ರೀರೂಪ ಜೀವರುಗಳನ್ನು ಬಲದಿ ಪುರುಷ ಜೀವರೆಲ್ಲರನ್ನು ||ಆಹಾ|| ಧರಿಸಿ ಅವರ ದೇಹಗಳನಿತ್ತು ಅ ನಿರುದ್ಧನ ಕೈಯೊಳಿತ್ತ ಪರಿಯನ್ನು 15 ಅದರಂತೆ ಅನಿರುಧ್ದದೇವ ತಾ ನದಕಿಂತ ಸ್ಥೂಲದೇಹವ ಮೂಲ ಪ್ರಕೃತಿಯಿಂದ ಗುಣವಾ ಕೊಂಡು ಅದುಭುತ ಮಹತ್ತತ್ವತೋರ್ವ ||ಆಹಾ|| ಅದುಭುತ ಮಹತ್ತತ್ವದಿಂದಹಂಕಾರ ಉದಿಸಿದ ಪರಿಯನು ಮುದದಿಂದಲಿ ಅರಿತು 16 ಪರಮ ಕರುಣೆಯಲೀ ರುದ್ರನು ಅರ್ಧ ನಾರೀರೂಪ ತಾಳಿ ಇನ್ನೂ ಎಡದಿ ಸುರರಸ್ತ್ರೀಗಳನ್ನು ಬಲದೀ ಸುರಪುರಷರನ್ನೂ ||ಆಹಾ|| ಭರದಿ ಪುಟ್ಟಿಸಿ ಪ್ರದ್ಯುಮ್ನನ ಕೈಲಿತ್ತ ಪರಿಪರಿ ಸೃಷ್ಟಿಯ ಕ್ರಮವರಿತು ನೀನೀಗ 17 ಅನಿರುಧ್ದ ದೇವನು ಜೀವರ ಸ್ಥೂಲ ತನುವ ಕೊಟ್ಟು ಪಾಲಿಪ ತದಭಿ- ಮಾನಿ ಶ್ರೀ ಭೂ ದುರ್ಗಾ ಮಾಡಿ ತಾನೆಲ್ಲರ ಸತತ ಪೊರೆವಾ ||ಆಹಾ|| ಮಹತ್ತತ್ತಾ ್ವಭಿಮಾನಿಗಳೆನಿಸಿದ ದೇವನ18 ಅಹಂಕಾರ ತತ್ತಾ ್ವಭಿಮಾನಿ ಅದಕೆ ಅಹಿಗರುಡರು ಅಭಿಮಾನಿ ಇನ್ನು ಅನಿರುದ್ಧಾದಿ ರೂಪತ್ರಯವು ಇದಕೆ ಇನ್ನು ನಿಯಾಮಕನು ಎನ್ನು ||ಆಹಾ|| ಮಹತ್ತತ್ವಾ ನಿಯಾಮಕ ವಾಸುದೇವನಿಂದ- ನವರತ ಈ ಸೂಕ್ಷ್ಮಪ್ರಮೇಯ ಗ್ರಹಿಸಿ ನೀನು 19 ಮನಸ್ತತ್ವಾಭಿಮಾನಿ ಸುರರಾ ಸೃಷ್ಟಿ ಯನ್ನೆ ವೈಕಾರಿಕದಿಂದಲವರಾ ಮಾಡಿ ಘನ್ನ ತೈಜಸದಿಂದಲಿಂದ್ರಿಯ ತತ್ಪವೆ- ಲ್ಲನೆಸಗಿದಂಥ ವಿವರಾ ||ಆಹಾ|| ಉನ್ನಂತ ತನ್ಮಾತ್ರ ಭೂತಪಂಚಕಗಳ ತಾಮಸದಿಂದಲಿ ಉದಿಸಿದ ಪರಿಯನು 20 ಯುಕ್ತಸ್ಥಾನಾದಿಗಳನ್ನು ಕೊಡೆ ಉತ್ತಮೋತ್ತಮನನ್ನು ತಾವು ಸುತ್ತಿ ಸ್ತುತಿಸಲು ಇನ್ನೂ ||ಆಹಾ|| ತತ್ವದೇವತೆಗಳ ಭಕ್ತಿಗೆ ಒಲಿದು ತತ್ವರೆಲ್ಲರ ತೋರೆ ರೂಪದಿ ಧರಿಸಿಟ್ಟನು21 ರಜಸುವರ್ಣಾತ್ಮಕವಾದ ಘನ ನಿಜ ಐವತ್ತು ಕೋಟಿ ಗಾವುದ ಉಳ್ಳ ಅಜಾಂಡವನ್ನು ತಾ ತೋರ್ದ ತನ್ನ ನಿಜಪತ್ನಿ ಉದರದಿ ಮಾಡ್ದ ||ಆಹಾ|| ಸೃಜಿಸಿ ಬ್ರಹ್ಮಾಂಡದಿ ತತ್ವಗಳೊಡಗೂಡಿ ನಿಜವಾಗಿ ತಾನೊಳ ಪೊಕ್ಕ ವಿರಾಟನ್ನ 22 ಪಾತಾಳಾದಿ ಸಪ್ತಲೋಕ ಕಡೆ ಪರಿಯಂತ ರೂಪ ತಾ ತಾಳಿದ ಆದ್ಯಂತ ಇಂತು ನಿರತನು ಸಚ್ಚಿದಾನಂದ ||ಆಹಾ|| ಇಂತು ವಿರಾಟ ತನ್ನಂತರದೊಳು ತತ್ವರೆಲ್ಲರ ತತ್‍ಸ್ಥಳದೊಳಿಟ್ಟು ಪೊರೆದನ್ನ23 ಸಕಲ ಉದಕ ಶುಷ್ಕದಿಂದ ಇರಲು ತಕ್ಕ ಮುಕ್ತಾಮುಕ್ತರ ಭೇದದಿಂದ ತಕ್ಕ ಸ್ಥಾನವೆ ಕಲ್ಪಿಸಿದ ಚೆಂದಾ ||ಆಹಾ|| ಅಕಳಂಕ ಪುನ್ನಾಮಕನು ಧಾಮತ್ರಯ ಮೊದಲಾದ ನರಕ ಪಂಚಕಗಳ ಮಾಡಿದ 24 ಉದಕ ಶೋಷಣೆಯನ್ನು ಮಾಡಿ ಇನ್ನುಮ- ಹದಹಂಕಾರವ ಕೂಡಿ ಭೂತ ಪಂಚಕವ ಮಿಳನ ಮಾಡಿ ಆಗ ಹದಿನಾಲ್ಕೂದಳಾತ್ಮಕ ಪದ್ಮತೋರಿ ||ಆಹಾ|| ಅದುಭುತ ಪದುಮದಿ ಉದಿಸಿದ ಬ್ರಹ್ಮನು ಚತುರ ನಾಲ್ಕುದಿಕ್ಕು ಮುದದಿಂದ ನೋಡಿದ 25 ಪದುಮದಲಿ ಚತುರಾಸ್ಯನಾಗಿ ಅದು ಭುತÀ ಮಹಿಮೆ ನೋಡುತ ತಾನೆ ಮುದದಿಂದ ಮೊಗತಿರುಗಿಸುತಾ ಅದ ಅದುಭುತ ಶಬ್ದಕೇಳುತ್ತಾ ||ಆಹಾ|| ತದಪೇಕ್ಷ ತಪವನಾಚರಿಸಿ ನಾಳದಿ ಬಂದು ಪದುಮನಾಭನು ತಾನು ಮುದದಿಂದ ನೋಡಿದ 26 ಪರಮಪುರುಷ ಉಕ್ತಿ ಲಾಲಿಸಿ ಮೆಚ್ಚಿ ವರವ ಕೊಟ್ಟು ಪಾಲಿಸಿ ಸೃಷ್ಟಿ ನಿರುತ ಮಾಡಲು ತಾ ಬೆಸಸೀ ತಾನು ಅವನಂತರದೊಳು ನೆಲೆಸೀ ||ಆಹಾ|| ಹೊರಗೂ ಒಳಗೂ ನಿಂತು ಸೃಷ್ಟಿಲೀಲೆಯ ತೋರ್ವ ಉರಗಾದ್ರಿವಾಸವಿಠಲ ವೇಂಕಟೇಶನ್ನ 27
--------------
ಉರಗಾದ್ರಿವಾಸವಿಠಲದಾಸರು
ಧ್ಯಾನ ಮಾಳ್ಪುದು ಮನಸಾ | ಹೃದಯಾರವಿಂದದಿಸಾನು ಕೂಲಿಪ ಅರಸ | ವಿಸ್ತರಿಸಿ ಗುಣಗಳಮೌನಿಯಾಗುತ ಸಹಸ | ಚಿಂತಿಸೆಲೊ ಅನಿಶಾ ಪ ಸಾನು ರಾಗದಿ ರೂಪಗುಣಗಳ | ಮಾನಮೇಯ ಜ್ಞಾನ ಸಹಿತದಿಏನು ಫಲದನು ರಾಗವಿಲ್ಲದೆ | ಶ್ರೀನಿವಾಸನ ಭಕುತಿಯಿಂದಲಿ ಅ.ಪ. ನತ ನಾ | ಸಾಗ್ರದಲಿ ದೃಷ್ಟಿಯನೆ ಇಡುತ 1 ಮಾನವ ಪ್ರಾಣ ನಿಯಮನ ವಾರ್ತಿ | ತಿಳಿಯುತ ಮನದಲಿಪ್ರಾಣ ರೇಚಕ ನೀತಿ | ಪೂರಕವು ಕುಂಭಕಜಾಣ ತನದಲಿ ಪೂರ್ತಿ | ಗೈದೋಂಕಾರ ಕೀರ್ತಿ ||ಪ್ರಾಣ ನಿರುತದಿ ಮಾಳ್ಪ ಅನು ಸಂಧಾನ ತಿಳಿದಾ ಚರಿಸೆ ವಿಹಿತದಿಪ್ರಾಣ ಸಂಯವ ಭಕ್ತಿ ಪೂರ್ವ ವಿ | ಧಾನ ಮಾಡಲು ವೇಗ ವಲಿದನು|2| ಹತ್ತು ಸಲ ಪ್ರತಿಸವನ | ಪ್ರಾಣನ್ನ ಸಂಯವ ಕರ್ತೃ ಹೀಗೆ ತ್ರಿಸದನ ಮಾಸಕ್ಕೆ ಮುಂಚೆಯೆಭರ್ತೃವಾಗಿಹ ಪ್ರಾಣ | ವಶನ ಹನು ಅವಗೆಂದುಉಕ್ತವಿದು ಸನ್ಮಾನ | ತಿಳಿದಾ ಚರಿಸು ಧ್ಯಾನ ||ಪೊತ್ತು ಕದಳಿಯ ಮೊಗ್ಗಿನಾಕೃತಿ | ಮತ್ತೆ ನಡು ಸತ್ಕರ್ಣಿಕವು ಇಹಹೃತ್ಸ ಅಷ್ಟದಳಾಖ್ಯ ಕಮಲವ | ಎತ್ತುವುದು - ಉದಯಾರ್ಕ ಮಂತ್ರದಿ |3| ಚಿಂತೆ ಕರ್ಣಕೆಯಲ್ಲಿ | ಮಾರ್ತಾಂಡ ಮಂಡಲಅಂತೆ ಅದರುಪರೀಲಿ | ತಾರೇಶ ಮಂಡಲಚಿಂತೆ ತದ್ದುಪರೀಲಿ | ಮಂಡಲ ವಿಭಾವಸುಅಂತೆ ತನ್ನಡುವೀಲಿ | ಹರಿಪದಾಜ್ಜಾಳಿ ||ಯಂತೆ ಚಿತ್ತ ಸ್ಥೈರ್ಯದಿಂದಲಿ | ಚಿಂತಿಸುತ ಗುಣರೂಪ ಕ್ರಿಯೆಗಳಕ್ರಾಂತನಾಗುವ ಹರಿಯ ಚರಣದಿ | ಶಾಂತ ಸತ್ಸಮಾಧಿಯನು ಪಡೆ 4 ಕಂಬು ಕುಂಡಲ ಮಕರ | ಶೋಭಿ ಕರ್ಣಾಪಾರ ||ಮಾರಪಿತ ಶಿರಿವತ್ಸ ಲಾಂಛನ | ಶ್ರೀ ರಮಾಪತೆ ಶ್ಯಾಮಸುಂದರಕಾರಣಿಕ ಕನಕಾಂಬರಾಧರ | ಹಾರ ಸುಮನ ವಿಶಾಲ ವಕ್ಷನ 5 ಕಂಬು ಕಟಿ ಸೂತ್ರಾಂಗದೈರ್ಯುತ | ವಸ್ತು ಸರ್ವಾಧಾರ ಹೃದ್ಯನ 6 ಧ್ಯಾನ ಬಹು ದುರ್ಭಾವ್ಯ | ಶ್ರೀಹರಿ ವಿಭೂತಿಯುಮನಕೆ ದುರ್ವಿಜ್ಞೇಯ | ಪೆಸರಿಹುದು ಕಾರಣಅನಘನಂಗವು ದೇಹ | ಒಂದೊಂದು ಸ್ಥಿರ ಪಡೆಪುನಹ ಸರ್ವಾವಯದ ಸ್ಥಿರ ತೆರದಿ ಧೇಯ ||ಎಣಿಸು ಪ್ರತ್ಯಾಹರಣ ಕಾರ್ಯವ | ವಿನಹವಿದು ಮನಸ್ಥೈರ್ಯವಾಗದುಅನಿಲದಯ ಸಂಪಾದಿಸುತ್ತಲಿ | ಗುಣಿಸು ನೈರಂತರ್ಯವೀತೆರ 7 ಶಿಷ್ಟನಾಗುತಲಿನ್ನು | ಅನ್ಯತ್ರ ಮನವನುಸುಷ್ಠು ಸೆಳೆಯುತಲಿನ್ನು | ಹರಿಪಾದ ವನಜದಿಘಟ್ಟ ಇಡುತಲಿ ಮುನ್ನ | ಸುಸ್ಥಿರದ ಚಿತ್ತದಿ ||ಪ್ರೇಷ್ಟ ತಮ ಅವನೆನ್ನು | ಸರ್ವಕಧಿಕೆನುನಷ್ಟವಾಗುತ ಭ್ರಾಮಕ ತ್ರಯ | ಶ್ರೇಷ್ಠ ಧ್ಯಾನಾಸಕ್ತನಾಗಲು ದೃಷ್ಟಿಸುತಲಿ ತತ್ವಪತಿಗಳ | ಇಷ್ಟ ಮೂರ್ತಿಯ ಕಾಂಬೆ ಕೊನೆಗೆ8 ಯೋಗವಿಹುದು ಸಮಾಧಿ | ಅಭ್ಯಾಸ ಸಾಧ್ಯ ನಿಯೋಗಿಸಿದನ ನಿರುತದಿ | ಸುಸ್ಥಿರದಿ ಚಿತ್ತವಯೋಗಿಸ್ಹರಿ ಚರಣದಿ | ಏನೊಂದು ಬೇಡದೆವೇಗ ಹರಿ ರೂಪದಿ | ನೋಡವನ ದಯದಿ ||ಆಗಮೈಕ ಸುವೇದ್ಯ ಭಕ್ತಿಯ | ಯೋಗ ಕೊಲಿಯುತ ಸಾಧಕಂಗೆಯೋಗಿ ಗುರು ಗೋವಿಂದ ವಿಠ್ಠಲ | ವೇಗತನ ದರ್ಶನವ ಪಾಲಿಪ 9
--------------
ಗುರುಗೋವಿಂದವಿಠಲರು
ಧ್ಯಾನವ ಕೊಡು ಹರಿಯೆ | ನಿರಂತರ ಧ್ಯಾನವ ಕೊಡು ಹರಿಯೆ ಪ ನೀನೆ ಗತಿಯೆಂದಾನುಪೂರ್ವಕ ಧ್ಯಾನ ಮಾಳ್ವರ ಜನ್ಮಕರ್ಮಗ ಳೇನು ನೋಡದೆ ಪೊರೆವೆ ನಿನ್ನ ಸುನಾಮವೆ ಸುರಧೇನುವೆಂದು ಅ.ಪ. ನಿನ್ನ ನಾಮವ ನೆನೆದು | ಅಜಾಮಿಳನು ಧನ್ಯನು ತಾನಾದನು ಈ ಭುವನದಿ ತನ್ನ ದೇಹಾತುರದೊಳನ್ಯರ ಬನ್ನ ಬಿಡಿಸುತಲಿದ್ದ ಖಳನು ನಿನ್ನ ನಾಮಸ್ಮರಣೆ ಮಾತ್ರದಿ ಘನ್ನ ಮುನಿಪತಿ ಎನ್ನಿಸಿದನು 1 ದುರುಳ ದುಶ್ಯಾಸನನು | ಸಭೆಯೊಳಗಂದು ತರಳೆ ದ್ರೌಪದಿದೇವಿಯ ಸೆರಗನ್ನು ಸೆಳೆಯೆ ಮುರಹರನೆ ಹಾ ಕೃಷ್ಣ ದ್ವಾರಕಾ- ಪುರನಿಲಯ ಪರಮಾತ್ಮ ಭಕ್ತರ ಸುರತರುವೆ ಎಲ್ಲಿರುವೆ ಏತಕೆ ಮರೆವೆ ಎನ್ನುತ ಮೊರೆಯೆ ಪೊರೆದೆಯೊ 2 ನರಕ ಕೂಪದೊಳು ಬಿದ್ದು | ಏಳುತ್ತ ಮುಳುಗುತ ಪರಿಪರಿ ಭಾಷೆಯಲಿ ಮುಂದೋರದೆ ಹೊರಳುತ್ಹೊರಳುತ ಮರುಕಗೊಳುತ ಹರಿಹರಿ ನಾರಾಯಣೆನ್ನಲು ಸುರಲೋಕವನ್ನಿತ್ತು ಸಲಹಿದೆ ವರದ ಲಕ್ಷ್ಮೀಕಾಂತ ಶಾಶ್ವತ 3
--------------
ಲಕ್ಷ್ಮೀನಾರಯಣರಾಯರು
ಧ್ಯಾನಿಸು ಮನವೆ ನೀ ಧ್ಯಾನಿಸು ಪ. ಧ್ಯಾನಿಸು ಮನವೆ ಶ್ರೀಹರಿಯ ಪಾದಧ್ಯಾನನಿರುತ ಈ ಪರಿಯ ಆಹಾಪ್ರಾಣಾಪಾನವ್ಯಾನೋದಾನಸಮಾನರ್ಗೆ ಪ್ರಾಣನಾಗಿಪ್ಪ ಮುಖ್ಯ ಪ್ರಾಣಾಂತರ್ಗತನ ನೀ ಅ.ಪ. ಪರಮಾಣು ಪ್ರದೇಶದಲ್ಲಿ ಪ್ರಾಣರಾಶಿ ಅನಂತುಂಟಲ್ಲಿ ಹೀಗೆಒರಲುತಿದೆ ವೇದದಲ್ಲಿ ದೃಷ್ಟಾಂತವ ಪೇಳ್ವೆ ಕೇಳು ದೃಢದಲ್ಲಿ ಆಹಾಪರಮಸೂಕ್ಷ್ಮ ವಟಮರನಾಗಿ ಅದರಲ್ಲಿಪರಿಮಿತಿಲ್ಲದರ ಫಲದಬೀಜವನರಿತು ನೀ 1 ನಿರುತ ಸುವರ್ಣಬ್ರಹ್ಮಾಂಡದಲ್ಲಿ ಹರಿ ಪೂರ್ಣವ್ಯಾಪ್ತ ಅಖಂಡನಾಗಿಮಿರುವುತಲಿಪ್ಪ ಮಾರ್ತಾಂಡ ತೇಜೋಕಿರಣದಂತಿರುವ ಪ್ರಚಂಡ ಆಹಾಹೊರಗೆ ಒಳಗೆ ಸರ್ವತ್ತರದಲ್ಲಿ ಹರಿಮಯ-ವರಿತು ನಿನಗೆ ಎಲ್ಲಿ ದೊರಕಿದ ಸ್ಥಳದಿಂದ 2 ಸಲಿಲಭೂಗಿರಿಲತೆ ನಾನಾವೃಕ್ಷಫಲಖಗಮೃಗ ಕಾನನತೃಣ ಪೊಳೆವಪಾವಕತರುಪವನ ಮುಕ್ತಸ್ಥಳ ಅವ್ಯಾಕೃತ ಗಗನ ಆಹಾಒಳಗೆ ಹೊರಗೆ ಹರಿ ಚಲಿಸದೆ ಇರುತಿಪ್ಪಸ್ಥಳದ ನಿಲುವಿನಂತೆ ತಿಳಿದು ನೀ ಅದರಂತೆ 3 ತೈಜಸ ನಿತ್ಯ 4 ಸಪ್ತಾವರಣ ಶರೀರದಿ ದಶಸಪ್ತದ್ವಿಸಹಸ್ರ ನಾಡಿಯಲಿ ದಶ-ಸಪ್ತದ್ವಿಸಹಸ್ರ ರೂಪದಲ್ಲಿ ಹರಿವ್ಯಾಪ್ತ ನಿರ್ಲಿಪ್ತಸ್ಥಾನದಲ್ಲಿ ಆಹಾಆಪ್ತನಂತಿರುವ ಸುಷುಪ್ತಿ ಸ್ವಪ್ನ ಜಾಗ್ರದಿತಪ್ತಕಾಂಚನದಂತೆ ದೀಪ್ತಿಸುತಿಪ್ಪನ 5 ಜೀವರಿಂದತ್ಯಂತ ಭೇದ ಪ್ರತಿಜೀವಾಂತರದಲಿ ಪ್ರಮೋದನಾಗಿಆವಾಗ ಚರಿಸುವ ವೇದ ಪೇಳುವುದು ಸತ್ಯಂಭಿದಾ ಆಹಾಈ ವೇದಾರ್ಥವು ಸಾವಧಾನದಿ ತಿಳಿದುಶ್ರೀವಾಯುಮತವ ಕೋವಿದರೊಡಗೂಡಿ6 ಶ್ರೀ ಕೇಶವನೆ ಮೂಲಾಸಿ ಶ್ರುತಿ ಏಕೋನಾರಾಯಣಾಸಿ ನಾನಾಲೋಕ ಸೃಷ್ಟಿಪದ ತಾನಾಸಿ ತಾರಕಮಂತ್ರ ಉಪದೇಶಿ ಆಹಾನೀ ಕೇಳು ನಿಗಮಾರ್ಥ ನೀಕರಿಸು ಸಂಶಯಏಕಮೇವಾದ್ವಿತೀಯನೆಂಬೊ ಕೃಷ್ಣನಂಘ್ರಿಯ 7 ಗಂಗಾಜನಕ ಸಿರಿರಂಗ ಉತ್ತುಂಗಗುಣಗಣತರಂಗ ಕಾ-ಳಿಂಗಸರ್ಪನ ಮದಭಂಗ ಭುಜಂಗಶಯನ ಅಮಲಾಂಗ ಆಹಾಪಿಂಗಳ ಇಡಾ ಮಂಗಳ ಸುಷುಮ್ನ ಸುಸಂಗಮ ಮಧ್ಯದಿ ತಿಮಿಂಗಿಲಂತಿಪ್ಪನ 8 ಮೂರ್ತಿ ಬಲು ಅದುಭುತದಿವ್ಯಕೀರ್ತಿಅದೆ ಪದುಮಜಾಂಡದಿ ಪರಿಪೂರ್ತಿ ದೊರೆವುದಕೆ ಬೇಕು ವಾಯುಸಾರ್ಥಿ ಆಹಾಅದೆ ಬಿಂಬಮೂರ್ತಿ ಜೀವದಾಕಾರವಾಗಿ ತಾಪದುಮಜಾಂಡದಲಿಪ್ಪ ಸದಮಲಾತ್ಮಕನ 9 ಧರೆಯನಳೆದ ದಿವ್ಯಚರಣ ಅದು ಮೆರವುತಿಪ್ಪುದು ಕೋಟಿ ಅರುಣನಂತೆಪರಿಪೂರ್ಣಭರಿತವು ಕಿರಣ ತನ್ನ ಸ್ಮರಿಸುವರಿಗೆ ಮಾಳ್ಪ ಕರುಣ ಆಹಾತರುಣಿಯಂದದಿ ನಖದಿ ಸುರನದಿಯ ಪೆತ್ತ ನೂ-ಪುರ ಗೆಜ್ಜೆಪೆಂಡೆಯ ಎರಡೈದು ಬೆರಳನು 10 ಹರಡು ಜಂಘೆಯುಗಜಘನ ಸುರುಚಿರ ರೇಖಧ್ವಜವಜ್ರ ನಾನಾ ದಿವ್ಯ ವರರೇಖೆಯಿಂದಲೊಪ್ಪುವನ ಜಾನು ಪರಮಶೋಭಿಸುವ ಸುಂದರನ ಆಹಾಉರುಟುಕದಳಿಸ್ತಂಭದಂತಿರುವೊ ಊರುದ್ವಯಸರಿಗಾಣೆ ಹರಿ ಉಟ್ಟ ವರಪೀತಾಂಬರವನು 11 ಕುಕ್ಷಿ ನಿಜ ಸುಖಪೂರ್ಣನ 12 ವೈಜಯಂತಿ ಮಂದಾರವನ್ನು ಮುದದಿಂದ ಧರಿಸಿದ ಧೀರ ಆಹಾಪದುಮಜಭವರಿಂದ ತ್ರಿದಶರು ತಿಳಿದಿನ್ನುಸದಾಕಾಲ ಧೇನಿಪರು ಹೃದಯಾಂಬರದಲ್ಲಿ 13 ಕಂಬುಕಂಧರ ಅತಿಗುರುತರ ಭುಜವು ಚತುರ ಆಹಾಮರಿ ಆನೆ ಸೊಂಡಿಲಂತಿರುವ ಬಾಹುಕೀರ್ತಿ ಕೇತಕಿಬೆರಳು ನಕ್ಷತ್ರದರಸಿನಂದದಿ ನಖ14 ಸಿರಿ ಭುಜಕೀರುತಿ15 ಕಂಬು ಅಗಣಿತ ಮಹಿಮನ16 ಮುಗುಳು ಮಲ್ಲಿಗೆ ಮೊಗ್ಗೆ ದಂತಪಂಕ್ತಿ ಜಗವಮೋಹಿಸುವ ಸುಶಾಂತ ಜಿಹ್ವೆನಿಗಮಕ್ಕೆ ವೇದ್ಯವಾದಂಥ ಬಹು ಬಗೆಯಲ್ಲಿ ಮೆರೆವ ಸುಪಂಥ ಆಹಾನಗುವ ವದನ ಝಗಝಗಿಸುವ ಕುಂಡಲಕರ್ಣಮಿಗೆ ಕೂರ್ಮಕದಪು ಸಂಪಿಗೆನಾಸಿಕವನ್ನು 17 ಕರುಣಶಾಂತಶುಭನೋಟ ಕಂಗಳೆರಡರ ಚೆಲ್ವಿಕೆ ಮಾಟ ಇನ್ನುಅರವಿಂದದಳವೆನ್ನು ದಿಟ ಇನ್ನು ತರಣಿಚಂದ್ರಮರ ಕೂಟ ಆಹಾಶರಣಜನರ ಮನೋಹರ್ಷವಾರ್ಧಿಗೆ ಚಂದ್ರದುರುಳ ದಿತಿಜತಿಮಿರಕ್ಕೆ ಭಾಸ್ಕರನ 18 ಚಾಪ ತಲೆಯ ತಗ್ಗಿಸುವಂಥಾ ರಚನಾಫಾಲದಲಿಟ್ಟ ತಿಲಕ ಸುಂದರ ಲೋಕ ಕಳವಳಗೊಳಿಸುವ ಸುಗುಣ ಆಹಾನಳಿನವದನದಲ್ಲಿ ಅಳಿಗಳಂತೊಪ್ಪುವಸುಳಿಗುರುಳಿನ ಮ್ಯಾಲೆ ಒಲೆವ ಅರಳೆಲೆಯನ್ನು 19 ನಿತ್ಯ ನಖ ಲಲಾಟ ಪರಿಯಂತ್ರನೋಟದಿಂದಲಿ ಈಶಕೋಟಿ ಸಹಿತನ 20 ನಿತ್ಯ 21
--------------
ಗೋಪಾಲದಾಸರು
ನಂಬಬೇಡ ನಂಬಬೇಡ ನಂಬಲೊಜ್ರ ಕಂಬವಲ್ಲ ಪ ತುಂಬಿದ ಅಸ್ಥಿ ಮಾಂಸ ರಕ್ತ ಜಂಬುಕನ ಬಾಯ ತುತ್ತ ಅ.ಪ ಎಂಬತ್ತನಾಲ್ಕು ಲಕ್ಷ ಕುಂಭದೊಳು ಹೊಕ್ಕು ಬಳಲಿ ನಂಬಲಾರದೊಂದು ಕ್ಷಣಕೆ ಅಂಬರಕ್ಕೆ ಹಾರುವದ 1 ಮಲವು ಬದ್ಧವಾದ ತನು ಮಲೆತು ಇರುವುದೇನು ಬಲುಹುಗುಂದಿದ ಮೇಲೆ ಫಲವಿಲ್ಲವಿದರಿಂದ 2 ಮಾಳಿಗೆ ಮನೆಯ ಬಿಟ್ಟು ಓಗರ ಬಿಟ್ಟು ಜಾಳಿಗೆ ಹೊನ್ನನು ಬಿಟ್ಟು ಜಾರುವುದು ತನುವ ಬಿಟ್ಟು 3 ಆಸೆಯನ್ನು ನೋಡಿ ಮೃತ್ಯು ಮೋಸವನ್ನು ಯೋಚಿಸುವುದು ಸಾಸಿರನಾಮನ ಭಜಿಸಿ ಅನುದಿನ 4 ಮಡದಿ ಮಕ್ಕಳು ಇದನ ಕಡೆಯ ಬಾಗಿಲೊಳಗಿಟ್ಟು ಒಡವೆ ವಸ್ತುಗಳನು ನೋಡಿ ಅಡಗಿಸಿ ಇಡುವರಂತೆ 5 ಈಗಲೋ ಇನ್ನಾವಾಗಲೊ ಭೋಗದಾಸೆ ತೀರಲೊಂದು ಹಾಗಗಳಿಗೆ ನಿಲ್ಲದಯ್ಯ ಈ ಗರುವ ಪರಮಾತ್ಮ 6 ವಾರಕದಾಭರಣವನ್ನು ಕೇರಿಯೊಳು ಕೊಂಬುವರಿಲ್ಲ ವರಾಹತಿಮ್ಮಪ್ಪಗಿಟ್ಟು ವಂದಿಸಿ ಕೈಗಳ ತಟ್ಟು 7
--------------
ವರಹತಿಮ್ಮಪ್ಪ