ದೇಹವ ದಂಡಿಸಲೇಕೆ ಮನುಜ ಪ
ಶ್ರೀ ಹರಿನಾಮವ ಸ್ನೇಹದಿ ಭಜಿಸೆಲೊ ಅ.ಪ
ಭಕುತಿಯೆ ಸಾಧನ ಹರಿಯ ಪ್ರಸಾದಕೆ
ಮುಕುತಿಗೆ ಹರಿಯ ಪ್ರಸಾದವೆ ಸಾಧನ
ರುಕುಮಿಣೀರಮಣನು ಪೂರ್ಣ ಸ್ವರಮಣನು
ಭಕುತಿಗೆ ಸಜ್ಜನ ಸಂಘವೆ ಸಾಧನ 1
ವಾದÀ ವಿವಾದವು ಆಗಿ ಮುಗಿಯಿತೊ
ಮೋದತೀರ್ಥರ ಮತ ಸಾಧನ ಕೈಪಿಡಿ
ಓದಿ ನೀ ಸುಲಭದಿ ತತ್ವಗಳರಿಯುತ
ಮಾಧವನಂಫ್ರಿಯ ಹರುಷದಿ ಭಜಿಸೆಲೊ 2
ಹೃದಯವು ನಿರ್ಮಲವಾಗುವ ತನಕ
ಮದ ಮತ್ಸರಗಳ ಸದೆ ಬಡಿಯುತಲಿ
ಎದೆಯಗೆಡದೆ ಸದಾ ಹರಿಯ ಭಜಿಸೆಲೊ
ಸದಮಲಗುಣನು ಪ್ರಸನ್ನನಾಗುವನು 3