ಒಟ್ಟು 301 ಕಡೆಗಳಲ್ಲಿ , 69 ದಾಸರು , 276 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಟ್ಟುದೊರಿತು-ನಿನ್ನ ಗುಟ್ಟು ಹಾರಿತು ಪ ಸಿಟ್ಟುಗೊಳ್ಳಬೇಡವೆನ್ನ ದೃಷ್ಟಿಯಿಂದ ನೋಡಿ ಕಂಡೆ ಅಷ್ಟಸಿದ್ಧಿಗಳಿದ್ದರೂ ವೊಂದಿಷ್ಟುಕೊರತೆ ಕೃಷ್ಣನೆಂಬ 1 ಹೇಯ ಗುಣವಿಲ್ಲ ಮುನಿ-ಗೇಯ ನಿನ್ನೊಳೆಂಬ ಜನರ ಬಾಯ ಮುಚ್ಚಿಸುವೆನೆಂದತ್ಯಾಯಸಪಡುವನೆಂಬ ||ಮಟ್ಟು|| 2 ಸತ್ಯಕಾಮನಹುದು ನೀನು ಸತ್ಯಸಂಕಲ್ಪನು ನಿನಗೆ ದತ್ಯಧಿಕ-ಕೊರತೆಯೆಂಬ ||ಮಟ್ಟು|| 3 ಜ್ಞಾನವಂತನೆಂದು ಬಹುಮಾನವಂತನಾದರೂ ಅ ಜ್ಞಾನ ಶೂನ್ಯನೆಂಬ ದೊಡ್ಡ ಹಾನಿಯೊಂದಿರುವದೆಂಬ4 ಎಲ್ಲ ವಸ್ತುಗಳುಂಟು ನಿನಗೆ ಪುಲ್ಲನಾಭ ನಿನ್ನ ಬಳಿಯೋ ಳಿಲ್ಲವೆಂಬ ಶಬ್ದಮಾತ್ರವಿಲ್ಲವೆಂಬ ಮಾತು ಬಂದಿಹ5 ಪಾಪವೆಂಬ ಕತ್ತಲೆಗೆ ದೀಪನಾಗಿದ್ದರು ಜನರ ಪಾಪಗಳ ನಪಹರಿಪ ದೀಪನಾ ಬಿಡದು ಎಂಬ ||ಮಟ್ಟು||6 ಜ್ಯೋತಿಗಳಿಗೆಲ್ಲ ಪರಂಜ್ಯೋತಿಯಾಗಿರುವ ನಿನಗೆ ಆ ಜ್ಯೋತಿಗಳೆತ್ತಿದಾರತೀ ಪ್ರೀತಿಯೆಂದು ಜನರು ಪೇಳ್ವ ||ಮಟ್ಟು||7 ಹಾನಿವೃದ್ಧಿ ಶೋಕಮೋಹ ಜ್ಞಾನ ನಿನ್ನೊಳಿಲ್ಲವೆಂಬ ಹೀನವಾಕ್ಯವ ಪೇಳ್ವರೆಲ್ಲ ಮಾನನಿಧಿಗಳೆಂತೆಂಬ ||ಮಟ್ಟು||8 ನಿತ್ಯ ತೃಪ್ತನಾದರೂ ನಿಜ-ಭೃತ್ಯರನ್ನು ಪಾಲಿಸುವ ನಿತ್ಯ ಕರ್ಮದಲ್ಲಿ ಕೃತಕೃತ್ಯನು ನೀನಲ್ಲವೆಂಬ 9 ಕಷ್ಟಪಡಬೇಡವೆನ್ನೊ-ಳೆಷ್ಟು ದುರ್ಗುಣಂಗಳಿಹ ವಷ್ಟನು ವೊಪ್ಪಿಸಿ ನಿನಗಿಷ್ಟನಾಗಬೇಕೆಂಬ ||ಮಟ್ಟು|| 10 ಕ್ಷೀರದಧಿನವನೀತ-ಚೋರನಾಗಿರಲಿ ಗೋಪೀ ಜಾರನಾಗಿರಲಿ ಸಂಸಾರವೈರಿಯು ನೀನೆಂಬ ||ಮಟ್ಟು||11 ಕೊರತೆಯೆಂಬಾಜನರಿಗೆಲ್ಲ-ವರವನಿತ್ತು ಪೊರೆವೆನೆಂಬ ವರದವಿಠಲನೆಂಬ ||ಮಟ್ಟು|| 12
--------------
ಸರಗೂರು ವೆಂಕಟವರದಾರ್ಯರು
ಮದನ ಮೋಹನ ಕೃಷ್ಣ ಉದಧಿ ಶಯನ ಹರಿ ಮಾಧವನ ಪ ಮದಗಜಗಮನೆ ಶ್ರೀ ಪದುಮಲೋಚನೆ ಪ್ರಿಯ ಅದ್ಭುತ ಮಹಿಮ ಶ್ರೀ ಅಚ್ಚುತನ ಅ.ಪ ಇಂದಿರೆ ರಮಣ ಗೋವಿಂದನ ಮಹಿಮೆಯ ಒಂದೆ ಮನದಿ ಸ್ತುತಿಸುವ ಜನರ ಕುಂದೆಣಿಸದೆ ಮುಚುಕುಂದ ವರದ ಹೃನ್ಮಂದಿರದಲಿ ನಲಿದಾಡುವನು 1 ಗೋಕುಲಪತಿ ಜಗದ್ವ್ಯಾಪಕ ಹರಿ ಎಂದ- ನೇಕ ವಿಧದಿ ಸ್ತುತಿಸುವ ಜನರ ಶೋಕಗಳಳಿದು ಏಕಾಂತ ಭಕ್ತರೊಳಿಟ್ಟು ತೋಕನಂದದಿ ಪರಿಪಾಲಿಸುವ 2 ಪದ್ಮನಾಭನ ಪಾದಪದ್ಮವ ಸ್ಮರಿಸುತ ಶುದ್ಧಮನದಿ ಪಾಡಿ ಪೊಗಳುವರಾ ಸಿದ್ಧಾರ್ಥನಾಮ ವತ್ಸರದಲಿ ಸುಜನರ ಹೃದ್ರೋಗವಳಿಯುತ ಸಲಹುವನೂ 3 ಚಿಂತೆ ಎಲ್ಲವ ಬಿಟ್ಟೀ ವತ್ಸರದಲಿ ಲಕ್ಷ್ಮೀ- ಕಾಂತನನೇಕ ವಿಧದಿ ಸ್ಮರಿಸೆ ದಂತಿವರದ ಅನಂತ ಮಹಿಮ ತನ್ನ ಕಾಂತೆ ಸಹಿತ ಒಲಯುವನವರ್ಗೆ4 ಕಮಲಸಂಭವಪಿತ ನಮಿಸಿ ಸ್ತುತಿಸುವೆನು ಕಮಲ ಪತ್ರಾಕ್ಷಹರಿ ಕರುಣಾನಿಧೆ ಕಮಲನಾಭ ವಿಠ್ಠಲ ವಿಠ್ಠಲ ರಕ್ಷಿಸೆನೆ ಹೃ- ತ್ಕಮಲದಿ ಪೊಳೆಯುವ ಸುಜನರಿಗೆ5
--------------
ನಿಡಗುರುಕಿ ಜೀವೂಬಾಯಿ
ಮಧುರವು ಮಧುರನಾಥನ ನಾಮವು ಪ ದಧಿ ಮಧು ದ್ರಾಕ್ಷಾ ಸುಧೆರಸಗಳಿಗಿಂತ ಅ.ಪ ನಂದಕುಮಾರನ ಚಂದದ ನಾಮವು 1 ಯದುಕುಲ ತಿಲಕನ ಸದÀಮಲ ಚರಿತನ ಮದನ ಪಿತನ ನಾಮ ಮುದದಲಿ ಪಾಡಲು2 ಗಾನವಿಲೋಲನ ದಾನವ ಕಾಲನ ಲೀಲೆಗಳನು ಸದಾ ಲಾಲಿಸಿ ಪೊಗಳಲು3 ಹೇಮವಸನನ ಕೋಮಲ ರೂಪನ ಭಾಮಾಕಾಂತನ ಪ್ರೇಮದ ನಾಮವು 4 ಪನ್ನಗಶಯನನ ಚಿನ್ಮಯ ರೂಪನ ಸನ್ನುತಿಸಲಿಕೆ ಪ್ರಸನ್ನನ ನಾಮವು 5
--------------
ವಿದ್ಯಾಪ್ರಸನ್ನತೀರ್ಥರು
ಮನದಧಿಪ ಮರೆಹೊಕ್ಕೆ ಮಹದೇವ ಪಾಹಿ ಪ ತೃಣ ಮೊದಲು ಘನದಲ್ಲಿ ಬಿಡದೆ ಹರಿಯನು ಭಜಿಪ ಅ.ಪ. ಕರುಣಾಬ್ಧಿ ನೀಡೆನಗೆ ವೈರಾಗ್ಯ ಮಹಭಾಗ್ಯ ಭಾಗವತ ಪದ ನಿನ್ನದಯ್ಯ ಕಮಲ ಮಧು ಮತ್ತ ಷಟ್ಪದ ದೊರೆಯೇ ಸರ್ವತ್ರ ನಿನ್ನಲ್ಲಿ ಹರಿಯ ತೋರಿಸಿ ಸಲಹೊ 1 ಆಪ್ತತಮ ನಿನ್ನಂಘ್ರಿ ಧ್ಯಾನದಲಿ ಇಡು ಎನ್ನ ತೃಪ್ತಿ ಅನ್ಯದಿ ಬ್ಯಾಡ ಸುಪ್ತಿರಹಿತ ಸಪ್ತೆರಡು ಭಕ್ತಿಯಲಿ ಬೆಳೆಸೆನ್ನ ಉದ್ಧರಿಸು ಮೂರ್ತಿ ದರುಶನ ಭೋಗ 2 ಮೂರುತಿಯ ಕೈಗಿತ್ತುದಾರ ಸಾಗರ ಶಂಭು ಘೋರ ಭವಹರ ಹರಿಯ ದಾಸವರ್ಯ ಮಾರಮಣ ಜಯೇಶವಿಠಲನ ಭಜನೆಯಲಿ ಸಾರ ಸುಖ ನೀಡೆನಗೆ 3
--------------
ಜಯೇಶವಿಠಲ
ಮನದಧಿಪ ಮಹದೇವ ಮೊರೆಯೆ ಕೇಳೊ ಪ ತಿಮಿರ ಸ್ಥಿತಿಯಲ್ಲಿ ಎದೆ ಒಡೆದು ನಿಂದಿಹೆನು ಅ.ಪ. ಮನಕರಣಗಳು ಎನ್ನ ತಮ್ಮ ಸೆರೆಯಲಿ ಇಟ್ಟು ಘನ ಯಾತನೆಯ ಪಡಿಸಿ ಮೂರ್ಛೆಗೊಳಿಸಿ ಕ್ಷಣ ಬಿಡದೆ ದಣಿಸುವುವು ಮೊರೆ ಇಡಲು ಮುಖವಿಲ್ಲ ಪ್ರಣಿತ ಪಾಲಕರಲ್ಲಿ ಸರಿ ಇಲ್ಲ ನಿನಗೆಂದು 1 ಪವಮಾನ ಪದಕಮಲ ಮಧು ಮತ್ತ ಮಹಭೃಂಗ ಹರಿದಾಸ ಶಿರೋರತ್ನ ಅಭಯದಾಯಿ ಶಿವತಮನೆ ನಿನ್ನಂಘ್ರಿ ರಜಲಕ್ಷ್ಮಿಯನ್ನು ಶಿರ ನಿತ್ಯ ಮಾಡೆನ್ನ ಕೃತಕೃತ್ಯ 2 ಗೌರೀಶ ಗುಣನಿಧಿಯೆ ಗುಪ್ತ ಮಂಗಳ ಮಹಿಮ ಶೌರಿ ಜಯೇಶವಿಠಲ ಧ್ಯಾನಲೋಲ ತಾರಕನೆ ಭವಸಿಂಧು ದಾಟಿಸುವ ಅಂಬಿಗನೆ ಕಾರುಣ್ಯಗರೆದೆನ್ನ ಹರಿಪಾದ ದಡಕೊಯ್ಯೊ 3
--------------
ಜಯೇಶವಿಠಲ
ಮನಮರಿಯಲಿದ್ದವಗೆಲ್ಲಿಹುದು ಆತ್ಮದ ಖೂನ ತನುವನಾಗಿದ್ದವಗೆಲ್ಲಿಹುದು ಙÁ್ಞನ ಧ್ರುವ ನಿಗಮ ಓದಿದರೇನು ಅಗಮ ಹೇಳಿದರೇನು ಬಗೆ ಬಗೆ ವೇಷ ಜಗದೊಳುದೋರಿದರೇನು 1 ಮಠವು ಮಾಡಿದರೇನು ಅಡವಿ ಸಾರಿದರೇನು ಸಠೆ ಮಾಡಿ ಸಂಸಾರ ಹಟವಿಡಿದರೇನು 2 ನಿಗದಿ ಹಾಕಿದರೇನು ಗಗನಕ್ಹಾರಿದರೇನು ಮಿಗಿಲಾಗಿದೋರಿ ಬಗವಿಯ ಪೊದ್ದರೇನು 3 ಗುಹ್ಯ ಸೇರಿದರೇನು ಬಾಹ್ಯ ಮೆರೆದರೇನು ದೇಹ ದಂಡಿಸಿ ಹರವ ತೊರೆದರೇನು 4 ಮನಕೆ ಮೀರಿಹ್ಯ ಸ್ಥಾನ ಘನಸುಖದಧಿಷ್ಠಾನ ದೀನಮಹಿಪತಿ ನೀ ಸಾಧಿಸೊ ಗುರುಜ್ಞಾನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನ್ನಿಸು ಮಾರಾರಿ ಮುದದಿಂದಲಿ ಎನ್ನ | ಯಿನ್ನು ದುರಿತಗಳನ್ನ ಹಾರಿಸಿ | ಎನ್ನನನುದಿನ ಪ ಅಮಿಶ್ರ ತತ್ವದಲಿ ಕಲಿ ವಿರಹಿತ ರುದ್ರ | ಹಮ್ಮಿನಿಂದಿತ್ತ ಸರ್ವವ ನೋಳ್ಪನೆ | ಬೊಮ್ಮನಾ ತತ್ವದಲಿ ಹೋಗಿಬರುವ ಪ್ರಬಲ್ಯ | ಉಮ್ಮೆಯರಸಾ ತಾಮಸ ಕಾರ್ಯದಧಿಪತಿ | ಒಮ್ಮೆ ಬಿಡದಲೆ ನರಹರಿಯ ನಾ | ಮಾಮ್ಮರತ ಮನದಲಿ ನೆನಸುವ ಸುಖದಿಂದಲಿ | ಅಮ್ಮಹಾ ವೈರಾಗ್ಯ ಭಾಗ್ಯವ | ಕಮ್ಮರದಿ ಕೊಡು ಕರುಣದಿಂದಲಿ 1 ನಂದಿವಾಹನ ನಾಗತಲ್ಪ ಕಲ್ಪಾಂತರ | ಚಂದಿರಮವ್ಯಾಳಿ ಚರ್ಚಕನಾಯಕ | ಕುಂದುಗೊರಳ ನೀಲಕಂಠಾಗಮನೈಯ್ಯ | ವಂದೀರೈದು ಸ್ಥಾನ ವಾಸವಾದ್ಯ || ಇಂದು ನಿನ್ನ ಪಾದದ್ವಂದ್ವ ನಂಬಿದೆ | ನಿಂದಕರ ಸಂಗತಿ ಸಂಗತಿಯಲಿಡದಲೇ | ಪೊಂದಿಸೋಮ ಜನರೊಳಗೆ ಎರ | ಡೊಂದುಪುರ ವಿನಾಶಾ ಈಶಾ 2 ನಿಖಿಳ ಶಾಂತ | ನಿಟಿಲನೇತ್ರ | ಮಂಗಳಾಂಗ ಶ್ರೀ ವಿಜಯವಿಠ್ಠಲನ | ಹಿಂಗದೆ ಮನದಲ್ಲಿ ನೆನೆಸುವರ | ಸಂಗಸುಖ ಸರ್ವದಾ ಸುಜನಪಾಲಕ | ಪೊಂಗರ್ಭಸುತ ಪತಿತ ಪಾವನ 3
--------------
ವಿಜಯದಾಸ
ಮಲಗು ಮಲಗೆಲೊ ಸುಮ್ಮನೆ ಸುಕುಮಾರ ಚೆಲುವ ಜೋಗುಳವ ಪಾಡುವೆ ಗೋಪಾಲ ಪ ಲಲನಾಮಣಿಯರು ಸುಲಭದಿ ನಿನ್ನನು ಕಲಭಾಷಣದಿಂದ ಸೆಳೆಯ ಬಯಸುತಿಹರೋ ಅ.ಪ ಭೋಗಿಶಯನ ಹರಿ ಈ ಜಗದೊಳಗೆ ಈಗ ಬಂದಿರುವ ಜಾಗವನರಿಯದೆ ಯೋಗಿ ಜನರು ಅನುರಾಗದಿಂದ ನಿನ್ನ ಸಾಗಿಸಲಿರುವರೊ ಕೂಗದೆ ಸುಖದಲಿ 1 ದುರುಳ ಶಕಟನನು ಮುರಿದ ಕೋಮಲದ ಚರಣ ಕಮಲಗಳು ಉರಿಯುತಲಿದ್ದರು ಮರೆಯಲದನು ಸುವಿನೋದವೀಯುವ ಸರಸಪದಗಳನು ಪರಿಪರಿಯರುಹುವೆನೊ 2 ಎನ್ನಯ ಕರಗಳು ನೋಯುತಲಿರುವುವು ಚಿನ್ಮಯ ರೂಪನೆ ನಿದ್ರೆಯ ಮಾಡೊ ದಧಿ ಪಯ ಬೆಣ್ಣೆಯ ಕೊಡುವೆ ಪ್ರಸನ್ನ ಸುಹೃದಯದಲಿ 3
--------------
ವಿದ್ಯಾಪ್ರಸನ್ನತೀರ್ಥರು
ಮಹಿಷಿ ಎನಿಸಿಹಳೇ ಪ ವಸುದೇವ ಭಗಿನಿ ಕೈಕೆಯೀ ಉದರದಲಿಅಸುವ ನೀಧರಿಸುತ್ತ ಅವತರಿಸುತಾ |ವಸುಧೆಯೊಳು ಸುಗುಣ ಗಣಯುತೆಯು ನೀನಾಗಿಪೆಸರಾಂತೆ `ಭದ್ರೆ` ಎಂದೆನುತ ಅವನಿಯಲೀ 1 ಪಿತನು ನಳನೆಂಬನಿಗೆ ಪ್ರೀತಿಯಲಿ ನೀ ಪೇಳ್ದೆಹಿತವು ಶ್ರೀ ಹರಿಗೆಂದು ನುತಿಸುವ ಸುಕರ್ಮ |ಅತಿಶಯದೆ ಪೂಜೆಯಿಂದಧಿಕದಲಿ ಶ್ರೀ ಹರಿಯುನುತಿಗೆ ಪ್ರೀತಿಸುವನೆಂದೊರೆದೆ ಭಕುತಿಯಲೀ2 ಹರಿನಾಮ ಸ್ಮರಿಸುತ್ತ ಹರಿ ಚರಣ ನಮಿಸುವರದುರಿತರಾಶಿಗಳಿರದೆ ಪರಿಹಾರವೆನುತಾ |ಒರೆಯುತೀಪರಿ ನಮನ ಭಕ್ತಿಗೇ ಪ್ರಾಶಸ್ತ್ಯಪರಿಪರಿಯ ಪೇಳಿಹಳೆ ನಮಿಪೆ ನಿನ್ನಡಿಗೇ3 ಈ ಪರಿಯ ತಪಗೈದು ದ್ವಾಪರದ ಯುಗದಲ್ಲಿಶ್ರೀ ಪತಿಯ ದರ್ಶನದಿ ತಾಪತ್ರಯ ಕಳೆದೂ |ಆ ಪರಮ ಪುರುಷನ್ನ ಕೈ ಪಿಡಿದ ಮಹ ಭದ್ರೆಕಾಪುರುಷನಾದೆನ್ನ ಪಾಪ ಪರಿಹರಿಸೇ 4 ಭದ್ರಾಣಿ ಪತಿಗಿನ್ನು ಕಾದ್ರವೇಯನು ಮತ್ತೆಆದ್ರಿ ಮಂದಿರ ತಂದ ಅವಿಕಾರಿ ವಿಪಗೇ |ಸಿದ್ಧೈದು ಗುಣದಿಂದ ಹೀನಳೆಂದೆನಿಸುತ್ತಭದ್ರ ಗುರು ಗೋವಿಂದ ವಿಠಲ ಪ್ರಿಯೆ ಪಾಹೀ 5
--------------
ಗುರುಗೋವಿಂದವಿಠಲರು
ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ ಪ ದಾತನು ನೀನೆಂದು ಬಯಸಿ ಬಂದೆನು ಮಾತನಾಡೈಅ.ಪ. ಸಿರಿ ಪೊಂಗೊಳಲೊ ಜಗ-| ದಾಧಾರದ ನಿಜ ಹೊಳೆಯೋ || ಪಾದದ ಪೊಂಗೆಜ್ಜೆ ಥಳಿಲೊ ಸರ್ವ | ವೇದಗಳರಸುವ ಕಲ್ಪಕ ಸೆಳಲೊ 1 ಕಸ್ತೂರಿ ತಿಲಕದ ಮದವೊ ಮ- ಕುಟ ಮಸ್ತಕದಿ ಝಗಝಗವೊ || ವಿಸ್ತರದಿ ಪೊತ್ತ ಜಗವೊ ಪರ- | ವಸ್ತುವು ನಂದ ಯಶೋದೆಯ ಮಗುವೊ 2 ನವನೀತವ ಪಿಡಿದ ಕರವೊ ನವ-| ನವ ಮೋಹನ ಶೃಂಗಾರವೊ || ಅವತರಿಸಿದ ಸುರತರುವೊ ಶತ- ರವಿಯಂದದಿ ಉಂಗುರವಿಟ್ಟ ಭರವೊ 3 ಆನಂದ ಜ್ಞಾನದ ಹೃದವೊ ಶುಭ-| ಮಾನವರಿಗೆ ಬಲು ಮೃದುವೊ || ಆನನ ಛವಿಯೊಳು ಮಿದುವೊ ಪಾಪ-| ಪಾವಕ ಪದವೊ 4 ತ್ರಿಜಗದಧಿಕ ಪಾವನನೊ ಪಂ-| ಕಜ ನೇತ್ರೆಯ ನಾಯಕನೊ || ಅಜಭವಾದಿಗಳ ಜನಕನೊ ನಮ್ಮ |ವಿಜಯವಿಠ್ಠಲ ಯದುಕುಮಾರಕನೊ 5
--------------
ವಿಜಯದಾಸ
ಮಾಸ ನಿಯಾಮಕ ದೇವತೆಗಳ ವರ್ಣಿಸುವೆನು ಪ ಶ್ರೀಶನಾಜ್ಞೆಯಲಿ ಸಕಲ ಸುಜನರಿದ ಕೇಳಿ ಅ.ಪ. ಸಹವೆಂಬ ಮಾರ್ಗ ಶಿರದಿ ಪುತ್ರ ನಾಮಕ ಸವಿತೃ ಮಹಾ ವಿಶಾಲಾಕ್ಷಿರಮಣ ಕೇಶವ ನಿಯಾಮಕನು ಸಹಸ್ಯವೆನಿಪ ಪುಷ್ಯದೊಳು ವಿಷ್ಣುವೆನಿಪನು ಮಹಲಕುಮಿರಮಣ ನಾರಾಯಣನಿದಕೆ ಕರ್ತೃ 1 ತಪವೆನಿಪ ಮಾಘದೊಳು ಅರುಣನಾಮಕ ಸವಿತೃ ಚಪಲಾಕ್ಷಿ ರುಕ್ಮಿಣೀರಮಣ ಮಾಧವನು ದೊರೆಯು ತಪಸ್ಯವೆನಿಪ ಫಾಲ್ಗುಣದಿ ಸೂರ್ಯನೆನಿಪನು ಸುಪವಿತ್ರೆ ಧಾತ್ರೀಪತಿ ಗೋವಿಂದನಧಿದೇವತೆ2 ಮಧುಮಾಸವಾದ ಚೈತ್ರದೊಳು ವೇದಾಂಗನು ಪದುಮಾಕ್ಷ ಮಾ ರಮಾರಮಣ ವಿಷ್ಣು ನಿಯಾಮಕನು ಮಾಧವನೆನಿಪ ವೈಶಾಖದಿ ಭಾನುವೆಂದೆನಿಸುವನು ಮಧುಸೂದನ ನಾಮಕ ಮೋಹಿನೀ ಪತಿಯು 3 ಶುಕ್ರವೆನಿಪ ಜ್ಯೇಷ್ಠದೊಳು ಇಂದ್ರನೆನಿಪ ಸವಿತೃ ತ್ರಿ ವಿಕ್ರಮನಿದಕಧಿಪತಿಯು ಪದುಮಾಕ್ಷಿರಮಣ ಅಕ್ಕರದಿ ಶುಚಿಯೆನಿಪಾಷಾಡದಿ ರವಿಯೆನಿಪನು ಚಕ್ರಧರ ವಾಮನನಿದರಧಿಪತಿ ಕಮಲಾರಮಣ 4 ನಭವಾದ ಶ್ರಾವಣದಿ ಗಭಸ್ತಿಯೆನಿಸುವನು ತ್ರಿಭುವನದಧಿಪತಿ ಶ್ರೀಧರನು ಕಾಂತಿಮತಿರಮಣ ನಭಸ್ಯವೆನಿಪ ಭಾದ್ರಪದದಿ ಯಮನೆನಿಸುವನು ಇಭವರದ ಹೃಷಿಕೇಶ ಅಪರಾಜಿತಾ ರಮಣ 5 ಒದಗಿಹ ಇಷವೆನಿಪಾಶ್ವೀಜದೊಳು ಸ್ವರ್ಣರೇತಾ ಇದಕಭಿಮಾನಿ ಪದಮಾವತಿಪತಿ ಪದುಮನಾಭ ಉದಯಿಸುತಿಹ ಊರ್ಜಿಯೆನಿಪ ಕಾರ್ತಿಕದಿ ದಿವಾಕರ ರಾಧಾರಮಣ ದಾಮೋದರನಿದರಭಿಮಾನಿ 6 ಆಯಾಯ ಮಾಸದಲಿ ಮಾಳ್ಪ ಸಕಲ ಕರ್ಮಗಳನು ಆಯಾಯಭಿಮಾನಿ ದೇವರುಗಳಿಗರ್ಪಿಸಿ ಮಾಯಾರಮಣ ಶ್ರೀ ರಂಗೇಶವಿಠಲನ ನೆನೆಯುತ ಆಯಾಸವಿಲ್ಲದೆ ಪರಮಪದವನು ಪಡೆಯಿರೊ 7
--------------
ರಂಗೇಶವಿಠಲದಾಸರು
ಮುಕ್ತನಲ್ಲವೇ ಭವದಿ ಮುಕ್ತನಲ್ಲವೇ ಪ ಶಕ್ತನಾದ ಹರಿಯ ಪರಮ ಭಕ್ತಿಯಿಂದ ಭಜಿಪ ನರನು ಅ.ಪ. ಮಧುವಿರೋಧಿಯಮಲ ಗುಣವ ನಲಿದು ಪಾಡುವವನು 1 ಕೇಶವಗೆ ರಮಾಬ್ಜಭವ ಸದಾಶಿವ ಶಕ್ರಾದಿ ಸುರರು ದಾಸರು ಎವೆ ಇಡುವ ಶಕ್ತಿ ಲೇಶವಿಲ್ಲವೆಂಬ ನರನು 2 ಒಂದಧಿಕ ದಶೇಂದ್ರಿಯಗಳಿಗಿಂದಿರೇಶ ವಿಷಯವ ಸಮ ಬಂಧಗೈಸಿ ವೈಷಯಿಕ ಸುಖ ತಂದು ಕೊಡುವನೆಂಬ ನರನು 3 ಈ ಪರಿಯಲಿ ತಿಳಿದು ಪುಣ್ಯ ಪಾಪಕರ್ಮ ದುಃಖಸುಖ ಜ ಯಾಪಜಯ ಮಾನಾಪಮಾನ ಶ್ರೀಪ ಕೊಡುವನೆಂಬ ನರನು 4 ವೇದ ಶಾಸ್ತ್ರಗಳಲಿ ಇಹ ವಿರೋಧವಾಕ್ಯಗಳನು ಶ್ರೀ ಪ್ರ ಮೋದ ತೀರ್ಥರುಕ್ತಿಯಿಂದ ಶೋಧಿಸುತಲಿ ಸುಖಿಪ ನರನು 5 ಕರ್ಮ ವಿಹಿತ ಅಸಜ್ಜನರು ಮಾಳ್ಪ ವಿಹಿತವಾದ ಕಾಲಕದು ಅವಿಹಿತವೆಂದು ತಿಳಿಯುವವನು6 ಸ್ವರ್ಗ ಭೂಮಿ ಕರ್ಮ ಹರಿಸುವ ಹರಿಯೆಂಬ ನರನು7 ಪರಮ ಪುರುಷಗರ್ಪಿಸುತಲಿ ಹರುಷ ಬಡುತಲಿಪ್ಪ ನರನು 8 ಈ ಶರೀರದರಸು ಶ್ರೀನಿವಾಸಾ ಮಾತೆ ಪ್ರಾಣ ಪಾರ್ವ ತೀಶರಿಹರು ಎಂದೀ ದೇಹ ಪೋಷಿಸುತಲಿ ತೋಷಿಸುವನು 9 ಪ್ರಿಯ ವಸ್ತುಗಳೊಳಗೆ ಅನ್ನಮಯನೆ ಪ್ರೀಯನೆಂದು ಅನ್ಯ ಬಯಕೆಗಳನು ಜರಿದು ಹರಿಯ ದಯವ ಬಯಸುತಿಪ್ಪ ನರನ 10 ಶತ್ರುತಾಪಕನುಳಿದು ಅನ್ಯ ಮಿತ್ರರಿಲ್ಲವೆಂದು ಅಹೋ ರಾತ್ರಿಯಲ್ಲಿ ಬಿಡದೆ ಜಗದ್ಧಾತ್ರನ ಗುಣ ತುತಿಪ ನರನು11 ಬಿಂಬನೆನಿಸಿ ಸರ್ವರ ಹೃದಯಾಂಬರದೊಳಗಿದ್ದು ಜನವಿ ಡಂಬನಾರ್ಥ ಕರ್ಮಗಳ ಆರಂಭ ಮಾಳ್ಪೆನೆಂಬ ನರನು 12 ಅಕ್ಷರೇಢ್ಯ ಬ್ರಹ್ಮ ವಾಯು ತ್ರ್ಯಕ್ಷಸುರಪ ಸುರರೊಳಗ ಧ್ಯಕ್ಷ ಸರ್ವ ಕರ್ಮಗಳಿಗೆ ಸಾಕ್ಷಿಯೆಂದು ಸ್ಮರಿಸುವವನು 13 ಅಂಬುಜ ಭವಾಂಡದೊಳು ಮಹಾಂಬರವಿಪ್ಪಂತೆ ಶ್ರೀ ನಿ ತಂಬಿನಿ ಸಹ ಸರ್ವರೊಳಗೆ ತುಂಬಿಹನೆಂದರಿತ ನರನು 14 ಅದ್ವಿತೀಯನಪೇಕ್ಷ ಭಕ್ತ ಹೃದ್ವನಜ ನಿವಾಸಿಯೆನಿಸಿ ಕದ್ದೊಯ್ದವರಘವನುಣಿಪನದ್ವಯತನೆಂಬ ನರನು 15 ಜಾಂಬವತೀರಮಣ ವಿಷಯ ಹಂಬಲವನು ಬಿಡಿಸಿ ತನ್ನ ಕಾಂಬ ಸುಖವನಿತ್ತು ನಿಜ ಕುಟುಂಬದಿಡುವನೆಂಬ ನರನು 16 ಅಣು ಮಹತ್ಪದಾರ್ಥ ವಿಲಕ್ಷಣ ವಿಶೋಕ ಜೀವರೊಡನೆ ಜನಿಸಿ ಪುಣ್ಯ ಪಾಪ ಫಲಗುಳುಣದೆ ಉಣಿಪನೆಂಬ ನರನು 17 ಕರ್ಮ ಸುದತಿಯರೊಡಗೂಡಿ ಸಮಾ ಶೂನ್ಯ ಮಾಳ್ಪನೆಂದು ಪದೇ ಪದೆಗೆ ಸ್ಮರಿಸುವವನು18 ಸ್ವಾತಿವರುಷ ವಾರಿಕಣವ ಚಾತಕ ಹಾರೈಸುವಂತೆ ಶ್ವೇತವಾಹನ ಸಖನ ಕಥೆಯ ಪ್ರೀತಿಯಿಂದ ಕೇಳ್ಪ ನರನು 19 ಲೋಕಬಂಧು ಲೋಕನಾಥ ಲೋಕಮಿತ್ರ ಲೋಕರೂಪ ಲೋಕರಂತೆ ಲೋಕದೊಳು ವಿಶೋಕ ಮಾಳ್ಪನೆಂಬ ನರನು20 ಶಾತಕುಂಭವರ್ಣ ಜಗನ್ನಾಥ ವಿಠಲನೆಂಬ ಮಹ ದ್ಭೂತ ಬಡಕರಾವು ಇವನ ಭೀತಿ ಬಿಡದು ಎಂಬನರನು 21
--------------
ಜಗನ್ನಾಥದಾಸರು
ಮುಕ್ತನಾವನೋ ಜೀವನ್ಮುಕ್ತನಾವನೋ ಪ ಮುಕ್ತನಾವನಿವರ ಪಾದಾಸಕ್ತನಾಗಿ ಸರ್ವಕರ್ಮ ಭಕ್ತಿಯಿಂದ ನೀಡಿ ವಿಷಯಾಸಕ್ತನಾಗದವನಿಗಿನ್ನ ಅ.ಪ ಉದಯಕಾಲದಲ್ಲಿ ಎದ್ದು ನದಿಯಸ್ನಾನಮಾಡಿ ಇವರ ಪದುಮಸಮಪಾದಯುಗಳ ಹೃದಯದಲ್ಲಿ ಭಜಿಪಗಿನ್ನ 1 ವನಿತೆ ಧಾನ್ಯ ಧನುವು ತನಯ ಪ್ರಾಣ ಇವರ ಪಾದವನಜಕರ್ಪಿಸಿರುವಗಿನ್ನ 2 ಊಟ ಕೂಟ ನೋಟಮಾಟ ಪಾಠ ಆಟ ಕಾಟ ಇವರ ಉದಧಿ ದಾಟುವಾವಗಿನ್ನಮತ್ತೆ 3 ಉಕ್ತ ಕರ್ಮದಲ್ಲಿ ಮನ ಸಕ್ತನಾಗಿ ಹರಿಯ ಪಾದ ಭಕ್ತಿಯಿಂದ ಭಜಿಸಿ ಪಾಪಮುಕ್ತನಾಗುವವಗಿನ್ನ 4 ಶಕ್ತಿ ಇದ್ದರೊಳಗೆ ಹರಿಯ ಭಕ್ತಜನರ ಭಜಿಸಿ ಸರ್ವೋ ವಿಭೂತಿ ಮನದಿ ವ್ಯಕ್ತಮಾಡಿದವಗಿನ್ನ 5 ಮೋದತೀರ್ಥ ಶಾಸ್ತ್ರಸಾರ ಸ್ವಾದ ಮನದಿ ತಿಳಿದು ಅವರ ಹಾದಿಹಿಡಿದು ಬುಧರ ದಿವ್ಯ ಪಾದಯುಗಳ ಭಜಿಪಗಿನ್ನ 6 ಶಿರದಿ ಇದ್ದ ಹರಿಯ ರೂಪ ಅರಿದು ಮನಸಿನಿಂದ ನಿತ್ಯ ಶಿರದಿ ಕಾರ್ಯಮಾಡಿ ತಾನು ಹಿರಿದು ಹಿಗ್ಗುವಗಿನ್ನ 7 ನೇತ್ರಮೊದಲಾದ ಸರ್ವಗಾತ್ರದಲ್ಲಿ ಇರುವ ತೀರ್ಥ ಕ್ಷೇತ್ರಮೂರ್ತಿ ತಿಳಿದು ತನ್ನ ಗಾತ್ರನಿರ್ಮಲ ಮಾಳ್ಪಗಿನ್ನ 8 ಈಶ ಹರಿಯು ಸರ್ವ ಜೀವ ದಾಸರೆಂದು ತನ್ನ ಹೃದಯೋ ಪಾಸನಾವ ಮಾಡಿ ವಿಷಯ ಆಶೆಬಿಟ್ಟು ಇರುವಗಿನ್ನ 9 ಎನು ಮಾಳ್ಪ ಕರ್ಮವೆಲ್ಲ ಶ್ರೀನಿವಾಸ ಮಾಳ್ಪನೆಂದು ಜ್ಞಾನದಿಂದ ಸರ್ವರಲ್ಲಿ ಧ್ಯಾನಮಾಳ್ಪ ಮನುಜಗಿನ್ನ 10 ಶ್ವಾನ ಗೋವು ದ್ವಿಜ ಮತ್ತೆ ಅನಿ ಮೊದಲು ಸರ್ವರಲ್ಲಿ ಜ್ಞಾನಗಮ್ಯ ತಾನು (ತಾನೆ) ಸಮಾನನೆಂದವಗಿನ್ನ 11 ಅಮೃತ ವಿಷವು ಎಲ್ಲ ಸ್ವಾದು ಸಮವೆಂದು ಅಲ್ಲಿ ಇಚ್ಚೇ ಮಾಡದವಗಿನ್ನ 12 ವೃತ್ರಸೂದನನುಜ ಸರ್ವಕರ್ತೃ ಎಂಬವಗಿನ್ನ 13 ಪಾದ ದೂತ ನಾನು ಎಂದು ನಿತ್ಯ ಪಾತಕಾರ್ಯ ಮಾಡಿದಾಗ್ಯು ಪೂತನೆನಿಪನವನಗಿನ್ನ 14 ಸಿಟ್ಟು ಶೋಕ ಹರ್ಷ ಮೋಹ ಸುಟ್ಟು ಗುರುಜಗನ್ನಾಥ ವಿಠಲನ್ನ ಭಜಿಸಿ ಜಗದಿ ಶಿಷ್ಟ ನಾಗಿರುವಗಿನ್ನ 15
--------------
ಗುರುಜಗನ್ನಾಥದಾಸರು
ಮುಟ್ಟು ದೋರಿತು ನಿನ್ನ ಗುಟ್ಟು ಹಾರಿತು ಪ ಸಿಟ್ಟುಗೊಳ್ಳಬೇಡವೆನ್ನ ದೃಷ್ಟಿಯಿಂದ ನೋಡಿ ಕಂಡೆ ಅಷ್ಟಸಿದ್ಧಿಗಳಿದ್ದರೂ ಒಂದಿಷ್ಟು ಕೊರತೆ ಕೃಷ್ಣನೆಂಬ ಅ.ಪ ಹೇಯಗುಣವಿಲ್ಲ ಮುನಿಗೇಯ ನಿನ್ನೊಳೆಂಬ ಜನರ ಬಾಯ ಮುಚ್ಚಿಸುವೆನೆಂದತ್ಯಾಯಸಪಡುವನೆಂಬ 1 ಸತ್ಯಕಾಮನಹುದು ನೀನು ಸತ್ಯಸಂಕಲ್ಪನು ನಿನಗೆ ಮಿಥ್ಯಾವಚನಿಲ್ಲವೆಂಬೊಂದಿತ್ಯಧಿಕ ಕೊರತೆಯೆಂಬ 2 ಜ್ಷಾನವಂತನೆಯ ಬಹುಮಾನವಂತನಾದರೂ ಅ ಜ್ಞಾನಶೂನ್ಯನೆಂಬ ದೊಡ್ಡ ಹಾನಿಯೊಂದಿರುವುದೆಂಬ3 ಎಲ್ಲ ವಸ್ತುಗಳುಂಟು ನಿನಗೆ ಪುಲ್ಲನಾಭ ನಿನ್ನ ಬಳಿಯೋ ಳಿಲ್ಲವೆಂಬ ಶಬ್ದಮಾತ್ರವಿಲ್ಲವೆಂಬ ಮಾತು ಬಂದಿಹ 4 ಪಾಪವೆಂಬ ಕತ್ತಲೆಗೆ ದೀಪನಾಗಿದ್ದರು ಜನರ ಪಾಪಗಳನಪಹರಿಪ ದೀಪನಾ ಬಿಡದು ಎಂಬ 5 ಜ್ಯೋತಿಗಳಿಗೆಲ್ಲ ಪರಂಜ್ಯೋತಿಯಾಗಿರಿವ ನಿನಗೆ ಆ ಜ್ಯೋತಿಗಳೆತ್ತಿದಾರತೀ ಪ್ರೀತಿಯೆಂದು ಜನರು ಪೇಳ್ವ 6 ಹಾನಿವೃದ್ಧಿ ಶೋಕಮೋಹ ಜ್ಞಾನ ನಿನ್ನೊಳಿಲ್ಲವೆಂಬ ಹೀನವಾಕ್ಯವ ಪೇಳ್ವರೆಲ್ಲ ಮಾನನಿಧಿಗಳೆಂತೆಂಬ 7 ನಿತ್ಯತೃಪ್ತನಾದರೂ ನಿಜ ಭೃತ್ಯರನು ಪಾಲಿಸುವ ನಿತ್ಯ ಕರ್ಮದಲ್ಲಿ ಕೃತಕೃತ್ಯನುನೀನಲ್ಲವೆಂಬ 8 ಕಷ್ಟಪಡಬೇಡವೆನ್ನೊಳೆಷ್ಟು ದುರ್ಗುಣಂಗಳಿಹ ವಷ್ಟನು ಒಪ್ಪಿಸಿ ನಿನಗಿಷ್ಟ ನಾಗಬೇಕೆಂಬ 9 ಕ್ಷೀರದಧಿನವನೀತ ಚೋರನಾಗಿರಲಿ ಗೋಪೀ ಜಾರನಾಗಿರಲಿ ಸಂಸಾರವೈರಿಯು ನೀನೆಂಬ 10 ಕೊರತೆಯೆಂಬಾ ಜನರಿಗೆಲ್ಲಾ ವರವನಿತ್ತು ಪೊರೆವೆನೆಂಬ ಸ್ಥಿರವಾಗಿ ಶ್ರೀ ವ್ಯಾಘ್ರಗಿರಿಯೊಳಿರುವ ವರದ ವಿಠಲನೆಂಬ11
--------------
ವೆಂಕಟವರದಾರ್ಯರು
ಮುರಳೀ ಮನೋಹರ ವಿಠಲ | ಪೊರೆ ಇವಳಾ ಪ ಗುರು ರಾಘವೇಂದ್ರರ್ಗೆ | ತೋರ್ದ ಶಿರಿಕೃಷ್ಣಾ ಅ.ಪ. ಸಿರಿ | ನರಸಿಂಹ ಮೂರುತಿಯೆಚಂದದಲಿ ಸುಜ್ಞಾನ | ದೊಂದು ಅಂಕುರವಾ |ಸಂದೇಹ ವಿಲ್ಲದಲೆ | ಅಂದು ಸ್ವಪ್ನದಿ ತೋರಿಮಂದಳನ ಉದ್ಧಾರ | ವೆಂದು ಸೂಚಿಸಿದೇ 1 ಭಯ ಕೃತುವು ಭಯನಾಶ | ವಿಯದಧಿಪ ಗೊಲಿದವನೆನಯ ವಿನಯದಿಂ ಬೇಡ್ವ | ಹಯಮೊಗನ ದಾಸ್ಯದಯದಿ ಕೊಟ್ಟವಳೀಗೇ | ಭಾಗ್ಯ ವೈರಾಗ್ಯವನುದಯೆಗೈದು ಹೇಯೊ ಸಾ | ದೇಯಗಳ ತಿಳಿಸೋ 2 ಹರಿಯು ನೀ ನಿತ್ತುದಕೆ | ಉರುತರದ ತೃಪ್ತಿಯನುಅರಿತಿಹಳು ಈ ಗೃಹಿಣಿ | ಪರಿಸರೇಡ್ಯಾ |ದುರಿತ ರಾಶಿಗಳಳಿದು | ಹರುಷವನೆ ಸುಡಿಸುವುದುಶರಣ ಜನ ಮಂದಾರ | ಕರುಣಾಬ್ಧಿ ಹರಿಯೇ 3 ಮಧ್ವಮತ ಪದ್ಧತಿಗ | ಳುದ್ಧರಿಸ ಇವಳಲ್ಲಿಶ್ರದ್ಧೆ ಭಕುತಿಯು ಜ್ಞಾನ | ಮಧ್ವಮತದೀಕ್ಷಾವೃದ್ಧಿಗೈಸಿವಳಲ್ಲಿ | ಶುದ್ಧ ಆನಂದಾತ್ಮಅಧ್ವರೇಡ್ಯನೆ ಅನಿ | ರುದ್ಧ ಮೂರುತಿಯೇ 4 ಮೋದ ಮೋದ ಬಡಿಸಿವಳಾ 5
--------------
ಗುರುಗೋವಿಂದವಿಠಲರು