ಒಟ್ಟು 252 ಕಡೆಗಳಲ್ಲಿ , 56 ದಾಸರು , 240 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೆಯದೆ ಸಲಹೊ ಮಾರುತೀಶ ಎನ್ನ ಶರಣೆಂಬೆನು ನಿನ್ನ ಪ ಶರಣಾಗತರನು ಬಿಡದೆ ಪೊರೆವ ಫನ್ನ- ಗಿರಿ ಅಂಜನೆತನಯಅ.ಪ ವನನದಿಗಿರಿಗುಹೆಗಳಲಿ ನಿನ್ನ ರೂಪ ತೋರುವುದೈ ಭೂಪ ಶರಧಿ ಲಂಘಿಸಿ ರಾವಣನಿಗೆ ತಾಪ ಪುಟ್ಟಿಸಿದೆಯೊ ರಘುಪ- ನಡಿಗಳ ಬಿಡದೆ ಸೇವಿಸುವರ ಪಾಪ ಮಾಡುವಿ ನಿರ್ಲೇಪ ಸಡಗರದಲಿ ನಿನ್ನೊಡೆಯನ ತೋರಪ್ಪ ಘನಗಿರಿ ಹನುಮಪ್ಪ 1 ಊರಿನಲಿ ಊರ್ಹೊರಗು ನಿನ್ನ ಮೂರ್ತಿ ಎಷ್ಟ್ಹೇಳಲಿ ಕೀರ್ತಿ ಪಾಡುತ ಪೊಗಳ್ವರು ನಿನ್ನಯ ಸತ್ಕೀರ್ತಿ ವರ್ಣಿಸುವುದೆ ಅರ್ಥಿ ಪಾಮರನೊಮ್ಮೆ ಪಾಡಲು ನಿನ್ನ ವಾರ್ತೆ ಪರಿಹಾರವೋ ಭೀತಿ ನಾಡೊಳು ನಿನ್ನ ಭಜಿಸುವವರ ಸಂಗ ನೀಡು ಕೃಪಾಪಾಂಗ2 ಕಡಲ ಶಯನನ ಅಡಿಗಳ ಸೇವಿಸುತ ಕಡುಹರುಷವ ಪಡುತ ಬಿಡದೆ ನಿನ್ನಯ ಸೇವಕರಿವರೆನುತ ಶ್ರೀಶಗೆ ಪೇಳುತ್ತ ಕೊಡಿಸುವಿ ಮುಕ್ತಿಯ ಧೃಡಭಕ್ತರಿಗೆ ಸತತ ರಾಮರ ಸ್ಮರಿಸುತ್ತ ಕಮಲನಾಭ ವಿಠ್ಠಲನನು ಸೇವಿಸುತಭಕ್ತರ ಸಲಹುತ್ತ3
--------------
ನಿಡಗುರುಕಿ ಜೀವೂಬಾಯಿ
ಮೋದ ಪ್ರದ ನರಹರಿ | ವಿಠಲ ಪೊರೆ ಇವಳಾ ಪ ಪಾದ್ಯ ಪ್ರ | ಹ್ಲಾದ ರಕ್ಷಕನೇ ಅ.ಪ. ನೀನೇವೆ ಗತಿಯೆಂದು | ಆನೇಕ ವಿಧ ನಿನ್ನಸಾನುರಾಗದಿ ಪೊಗಳ್ವ | ಮಾನುನೀ ಮಣಿಗೇಜ್ಞಾನೋದಯವ ಗೈದು | ಕಾಣಿಸೋ ಸದ್ಗತಿಯಮಾನ ಮಾನ್ಯದ ಹರಿಯೆ | ಆನತೇಷ್ಟದನೇ 1 ಜೀವ ಅಸ್ವಾಂತಂತ್ರ | ದೇವ ನಿಜ ಸ್ವಾತಂತ್ರಈ ವಿಧದ ಸುಜ್ಞಾನ | ಓದಿ ಪಾಲಿಸುತಾ |ಕೇವಲಾನಂದ ಮಯ | ದೇವ ತವ ಸೇವೆಯನುಭಾವ ಭಕ್ತಿಯಲಿಂದ | ಗೈದ ಮನನೀಯೋ2 ನೆರೆಹೊರೆಯ ಜನರೇನು | ಮರಳಿ ಬಹು ಬಾಂಧವರುಹರಿ ನಿನ್ನ ಪರಿವಾರ | ಸರಿಯೆಂಬ ಮತಿಯಾಕರುಣಿಸುತ ತರಳೆಗೇ | ಪರುಷಾರ್ಥ ಸಾಧನದಪರಿಯನರುಹುತ ಪೊರೆಯೊ | ವರಲಕ್ಷ್ಮಿ ಪತಿಯೇ 3 ಸಾಧನ ಸುಜೀವಿಗಳ | ಕಾದು ಬಾಯ್ದೆರೆಯುತಿರೆಮೋದ ಬಡಿಸುವುದು ಚಿತ್ | ಸಾಧು ಜನವಂದ್ಯಾಮೋದ ಮುನಿ ಪಾದಾಬ್ಜ | ಆದರದಿ ವಂದಿಪಳೋಹೇ ದಯಾಂಬುಧೆ ಮನದಿ | ಮೈದೊರೊ ಹರಿಯೇ 4 ಬೋವ ನೀನಾದೇನೀ ವೊಲಿಯಲಿನ್ನೇನು | ಆವುದಾಸಾಧ್ಯವೋಪೂವಿಲ್ಲನಯ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಮೋಸಗೊಳ್ಳದಿರು ಮನವೆ ಹೇಸಿಕೆಯಲಿ ದೋಷವನ್ನು ತಿಳಿಯದೆ ಕೀಳಾಸೆ ಕೆಲಸ ಮಡುವಿನಲ್ಲಿ ಪ. ಫುಲ್ಲ ಪದ್ಮದಂತೆ ಪೊಳೆವ ಚೆಲ್ವ ಮುಖವೆಂಬೀ ಸುರಿವ ಜೊಲ್ವಿ ಶೀಗೆಬೀಜ ಪೋಲ್ವ ಹಲ್ಲ ಸಾಲನೆಲ್ಲಿ ಮರತಿ 1 ಗೆಜ್ಜೆ ಕಾಲುಂಗುರಗಳಿಟ್ಟು ಲಜ್ಜೆ ತೋರಿ ನಗುತ ಬರಲು ಹೆಜ್ಜೆಯನ್ನೆ ನೋಳ್ಪೆ ಹೊಲಸು ಖಜ್ಜಿಯ ಕಲೆಯ ಮರೆತಿ 2 ವಿಟರ ನೋಡುತ ಘಟ ಘಟನೆ ಬರುವಾಕೆಯ ಘಟನೆ ಬಯಸಿ ದುಸ್ಸಂ- ಕಟಗೊಂಬದ್ಯಾಕೆ ಮರೆತಿ 3 ಅಕ್ಷಿಯನ್ನು ತಿರುಹುತ್ತ ಸೂಕ್ಷ್ಮ ವಸ್ತ್ರ ಸುತ್ತಿ ವೇಶ್ಯಾ ಲಕ್ಷಣವ ಕಂಡು ಶುಂಭ ಮಕ್ಷಿಕಾ ವಿಹಾರ ಬಲದಿ 4 ವರನಾರಿಯೆಂಬುದೊಂದೆ ಮರುಳು ಭಾವನೆ ಮೋಹ ಕರವಲ್ಲದೆ ಬೇರೊಂದು ಸರಸತನವಿಲ್ಲಿಂದು 5 ಈಶನಿತ್ತದುಂಡು ನಿತ್ಯ ತೋಷಗೊಳ್ಳದಹೋರಾತ್ರಿ ಘಾಸಿ ಮಾಡದಿರು ಭಾರ- ತೀಶನ ಪದವ ಸೇರು 6 ಬೇಡ ಬೇಡವಿನ್ನು ಭ್ರಾಂತಿ ಮಾಡು ಮೋಹಾಗ್ನಿಗೆ ಶಾಂತಿ ಬೇಡು ಶೇಷಾದ್ರೀಶನಡಿಯ ಕೊಡುವಾಭೀಷ್ಟ ನಮ್ಮೊಡೆಯ7
--------------
ತುಪಾಕಿ ವೆಂಕಟರಮಣಾಚಾರ್ಯ
ಯಜನವಾಗಲಿ ನಾನು ಭುಜಿಸುವುದು ಎಲ್ಲ ಪ ಅಜಪಿತನೆ ಅದರ ಅನುಸಂಧಾನವನು ಅರಿಯೆ ಅ.ಪ ದೇಹವೆಂಬುದೆ ಯಜ್ಞಶಾಲೆಯಾಗಿ ಮಹಯಜ್ಞಕುಂಡವು ಎನ್ನ ವದನವಾಗಿ ಆವಹನೀಯಾಗ್ನಿಯು ಮುಖದಲ್ಲಿ ಹೃದಯದೊಳು ಗಾರ್ಹಸ್ಪತೀ ದಕ್ಷಿಣಾಗ್ನಿಯು ಸುನಾಭಿಯಲ್ಲಿ 1 ಅರಿ ಪಂಚಾಗ್ನಿಯೊಳು ಆಕ್ಷಣದಿ ಪ್ರಾಣಾದಿ ಪಂಚರೂಪಗಳು ಹೋತಾಉದ್ಗಾತಾದಿ ಋತ್ವಿಕ್ಕುಗಳಾಗಿ ನಿಂತಿಹರೆಂದು2 ಆಹುತಿಯ ಕೊಡತಕ್ಕ ಶೃಕಶೃಕ್‍ಶೃವಗಳು ಬಾಹುಗಳು ಇಹಭೋಜ್ಯವಸ್ತುವೆಲ್ಲ ಆಹುತಿಯು ದೇಹಗತ ತತ್ವರು ಪರಮಾತ್ಮ ಬ್ರಾಹ್ಮಣರು ಜೀವ ದೀಕ್ಷಿತನು ಬುದ್ಧಿತತ್ಪತ್ನಿ 3 ಅಹಂಮಮತಾದಿ ಅರಿಷಡ್ವರ್ಗಗಳು ವುಹಯಜ್ಞದ ಯೂಪಸ್ಥಂಭದ ಪಶುಗಳು ಅಹರಹ ಬಹ ನೀರಡಿಕೆಯು ಕುಡಿವನೀರೆಲ್ಲವು ಯಜನಕಾರ್ಯದ ಮಧ್ಯ ಪರಿಷಂಚಾಮಿ4 ಇಷ್ಟಾದರನುಸಂಧಾನವನೆ ಕೊಡುಕಂಡ್ಯ ಶ್ರೇಷ್ಠಮೂರುತಿ ಶ್ರೀ ವೇಂಕಟೇಶ ನಿಷ್ಠೆಯೆನ್ನೊಳಗಿಲ್ಲ ಉರಗಾದ್ರಿವಾಸವಿಠಲ ಹೊಟ್ಟೆಹೊರೆವುದು ನಿನಗೆ ತುಷ್ಟವಾಗಲಿ ದೇವ 5
--------------
ಉರಗಾದ್ರಿವಾಸವಿಠಲದಾಸರು
ಯತಿಗಳ ಸ್ತುತಿ ಮಧ್ವಮುನಿಯೆ ಎನ್ನ ಉದ್ಧರಿಸಿನ್ನ ಪ. ಸದ್ಗುರುವೆ ನಿನ್ನ ಪದ್ಮಪಾದಗಳಿಗೆ ಕರ ಮಣಿ ಅ.ಪ. ವರಕಲ್ಪ ಕಲ್ಪದಲಿ ಹರಿಯ ಮೆಚ್ಚಿಸಿ ಸಿರಿವರನಲಿ ಜನಿಸಿ ವಾಯುವೆಂದೆನಿಸಿ ಸುರರೆಲ್ಲ ಮೊರೆಯಿಡೆ ಹರಿಯವತರಿಸಿ ಹರಿಯ ಸೇವೆಗೆ ನೀ ಮಾರುತಿ ಎನಿಸಿ ಶರಧಿ ಲಂಘಿಸಿ ಉಂಗುರ ಸೀತೆಗೆ ಇತ್ತು ದುರುಳನ ಪುರ ಸುರಮುಖನಿಗರ್ಪಿಸಿದೆ 1 ಚಂದ್ರವಂಶದಲಿ ಬಂದ್ಯೊ ಬಲಶಾಲಿ ನಂದಕಂದನ ಲೀಲೆ ಅಂದ ಪಾಡುತಲಿ ಬಂದಿತು ಕಲಹ ಅಲ್ಲಿ ದ್ವಂದ್ವ ಭಾಗದಲಿ ಅಂದು ಕೌರವರಲಿ ನಿಂದ್ಯೊ ದ್ವೇಷದಲಿ ಇಂದುಮುಖಿಗೆ ಸೌಗಂಧಿಕ ಇತ್ತು ಕುರು ನಂದನ ವಂಶವನಂದು ಛೇದಿಸಿದೆ 2 ದುರುಳರೆಲ್ಲರು ಬಂದು ಕಲಿಯುಗದಿ ನಿಂದು ಹರಿಯು ನರನು ಒಂದು ಅರುಹಲಿಂತೆಂದು ಸುರರೆಲ್ಲ ಬಲುನೊಂದು ಕ್ಷೀರಾಬ್ಧಿಗೆ ಬಂದು ಸಿರಿವರ ಪೊರೆಯೆಂದು ಮೊರೆಯಿಡಲಂದು ಹರಿ ನಿನಗರುಹಲು ಧರೆಯಲ್ಲಿಗೆ ಬಂದು ಸುರ ಭೂ ಶ್ರೇಷ್ಠನುದರದಲಿ ಜನಿಸಿದೆ 3 ಪರಮಾಯಿಗಳ ಮತ ತರಿದು ಕೆಡಹುತ್ತ ಹರಿ ಸರ್ವೋತ್ತಮೆನುತ ಧರೆಯೊಳ್ ಸಾರುತ್ತ ತರತಮ್ಯ ಸತ್ಯವೆನುತ ಪಂಚಭೇದೆನುತ ಸಿರಿರಮಣಗೆ ನರಭೃತ್ಯನೆನ್ನುತ್ತ ಪರಿ ಬೋಧಿüಸಿ ದುರುಳರ ಛೇಡಿಸಿ ಸರಸಿಜಾಕ್ಷಗೆ ಬಲು ಸಮ್ಮತನೆನಿಸಿ 4 ವೈಷ್ಣವಾಗ್ರಣೀ ಲೀಲೆ ಪೇಳಲಳವಲ್ಲ ಜಿಷ್ಣುಸಖನ ಲೀಲೆ ನುಡಿಸೆನಗೆ ಸೊಲ್ಲ ಕಷ್ಟಪಡುತಿಹೆನಲ್ಲ ಕರುಣವೇಕಿಲ್ಲ ಶ್ರೇಷ್ಠನೆ ಗೋಪಾಲಕೃಷ್ಣವಿಠಲ ಇಷ್ಟು ತಿಳಿಸುತ ಅಷ್ಟದಳದಲಿ ಶ್ರೇಷ್ಠದಿ ಪೂಜಿಪ ಗುಟ್ಟು ತೋರೆನಗೆ 5
--------------
ಅಂಬಾಬಾಯಿ
ಯತಿಗಳು ಇರುವರ್ಯತಿಗಳ್ಹನ್ನೆರಡು ಮಂದಿ ರಘುವ(ರ) ಅಕ್ಷೋಭ್ಯತೀರ್ಥರ ನಡುವೆ ಕುಳಿತಿದ್ದಂಥ ಟೀಕೆ ಬರೆದ ಜಯ ಮಹರಾಯರಿವರು ಪಾಲಿಸೆನ್ನನು ಜಯರಾಯ ಪ ಎತ್ತಿನ ಜನ್ಮದಿ ಬಂದು ಶ್ರೀಮದಾನಂದತೀರ್ಥರಲ್ಲಿದ್ದು ಶಿಷ್ಯತ್ವ ವಹಿಸಿಕೊಂಡು ಬಿಟ್ಟು ಹರಿದಿನ ಮೇವು ನೀರನೆ ಪುಸ್ತಕದ ಗಂಟ್ಹೊತ್ತು ತಿರುಗುತ ತತ್ವಜ್ಞಾನವ ತಿಳಿದು ದ್ವಾದಶ ಸ್ತೋತ್ರ ಹೇ ಳುತ ಪ್ರಕಟವಾದರು 1 ಗೋವುಸುತನ ಜನ್ಮ ನೀಗಿ ಮಂಗಳವೇಡಿ ಸಾಹುಕಾರನ ಸುತನಾಗಿ ತೇಜಿಯನೇರಿ ಮಾ(ಮಹಾ?) ನದಿ ಮಧ್ಯದಲಿ ಮಂಡಿಬಾಗಿ ನೀರನು ಕುಡಿಯ- ಲಾಕ್ಷಣ ನೋಡಿ ಕರೆತರಲವರ ಗುರುಗಳ ಪಾದಕÀ್ವಂದನೆ ಮಾಡಿ ನಿಂತರು 2 ಅಕ್ಷೋಭ್ಯತೀರ್ಥರು ಆ ಮಹಿಮರ ನೋಡಿ ಕೊಟ್ಟು ಕಾಯ್ಕರದಲಿ ಜುಟ್ಟು ಜನಿವಾರವನು ಕಿತ್ತೆ ಕಾವಿಶಾಟಿಗಳನು ಉಟ್ಟು ದಂಡ ಕಾಷ್ಠವ್ಹಿಡಿದು ಶ್ರೇಷ್ಠಯತಿ ಆಶ್ರಮದಿ ಕುಳಿತಿರೆ ಹೆತ್ತವರು ಹುಡುಕುತ್ತ ಬಂದರು 3 ಕಂಡಕಂಡಂತೆ ಮಾತುಗಳಾಡಿ ಗುರುಗಳಿಗೆ ಧೋಂಡು ರಘುನಾಥನ ಕರಕೊಂಡು ಹಿಂದಕೆ ಹೋಗಿ ಹೆಂಡತಿ ಸಹಿತೆರೆದು ಪ್ರಸ್ತ ಮಂಡಿಗಿ ಮೃಷ್ಟಾನ್ನ ಉಣಿಸಿ ಚೆಂದದ್ವಸ್ತ್ರಾಭರಣ ಕೊಟ್ಟುರುಟಣೆಯ ಮಾಡಿಸ್ಯಾರತಿಯ ಬೆಳಗೋರು 4 ಸುಪ್ಪತ್ತಿಗೆಯು ಮಂಚ ಕುತ್ತಣಿ ಹಾಸಿಕೆಯಲ್ಲಿ ಇಟ್ಟು ತಾಂಬೂಲ ಬು- ಕ್ಕಿ ್ಹಟ್ಟು ಪರಿಮಳ ಗಂಧ ಸಕ್ಕರೆ ಕ್ಷೀರಗಳು ಲಡ್ಡಿಗೆ ಅಚ್ಚಮಲ್ಲಿಗೆ ಮಾಲೆ ಫಲಗಳು ರತ್ನ ಜ್ಯೋತಿ ಪ್ರಕಾಶದೊಳಗುತ್ತಮರು ಕುಳಿತಿರಲರ್ಥಿಯಿಂದಲಿ 5 ಮಡದಿ ಮಂಚಕೆ ಬಂದ ಸಡಗರವನು ನೋಡಿ ಹೆಡೆಯ ತೆಗೆದು ಕಣ್ಣು ಬಿಡುತ ವಿಷನಾಲಿಗೆಯ ಚಾಚುತಾರ್ಭಟಿಸಿ ಬರುತಿರಲ- ಸಾಧ್ಯಸರ್ಪವು ಕಡಿವುದೆನುತೆದೆ ಒಡೆದು ಕೂಗಲು ಹಡೆದವರು ಬಾಯ್ಬಿಡುತ ಬಂದರು 6 ಹಾವಾಗ್ಹರಿದು ಹುತ್ತವ ಸೇರಿಕೊಂಬುವೋದೀಗ ನಾವು ಮಾಡಿದಪರಾಧ ಕ್ಷಮಿಸಬೇಕೆನುತಲಿ ಬೇಡಿಕೊಂಡಾಕ್ಷಣದಿ ಮಗನ ನೋಡಿ ಕರೆತಂದಾಗ ಅಕ್ಷೋಭ್ಯರಾಯರಂಘ್ರಿಚರಣಕೊಪ್ಪಿಸಿ ನಾವು ಧನ್ಯರಾದೆವೆಂದರು 7 ಅತಿ ಬ್ಯಾಗದಿಂದವರಿಗ್ಯತಿ ಆಶ್ರಮವಕೊಟ್ಟು ದೇ- ವತಾ ಪೂಜೆಗಧಿಕಾರ ಮಾಡಲು ಗುರುಗಳು ಪಾಂಡಿತ್ಯದಿ (ಇ)ವರಿಗೆ ಪ್ರತಿಯು ಇಲ್ಲ- ವೆಂದೆನಿಸಿ ಮೆರೆವರು ಪತಿತರನೆ ಪಾವನವ ಮಾಡಿ ಸದ್ಗತಿಯ ಕೊಡುವ ಸಜ್ಜನ ಶಿರೋಮಣಿ 8 ಮಧ್ವರಾಯರು ಮಾಡಿದಂಥ ಗ್ರಂಥಗಳಿಗೆ ತಿದ್ದಿ ಟೀಕೆ ಟಿಪ್ಪಣಿ ಮಾಡಿ ಪದ್ಮನಾಭ ಭೀಮೇಶಕೃಷ್ಣಗೆ ಪರಮ ಭಕ್ತರೆನಿಸಿ ಮೆರೆವರು ವಿದ್ಯಾರಣ್ಯನ ಗರುವ ಮುರಿದು ಪ್ರಸಿದ್ಧರೆನಿಸೋರು ಸರುವ ಲೋಕದಿ 9
--------------
ಹರಪನಹಳ್ಳಿಭೀಮವ್ವ
ಯಂತ್ರೋದ್ಧಾರಕ ರಾಯರ ಸ್ಮರಣೆಯ ಮಾಡಿ ಅಂತರಾತ್ಮನ ದಾಸರ ಪ ಸಂತತ ಮನದಿ ನಿಶ್ಚಿಂತೆಯೊಳ್ ಸ್ಮರಿಸಲು ಸಂತಾಪಗಳ ಕಳೆದು ಚಿಂತಿತಾರ್ಥವನೀವ ಅ.ಪ ಶರಧಿಯ ನೆರೆದಾಟಿದ ಕಾಲುವೆಯಂತೆ ನಲಿದು ಲಂಕೆಯ ಸಾರಿದ ಬಲಶಾಲಿ ಲಂಕಿಣಿಯು ಪುರವ ಕಾಯುವ ಶ್ರಮ ಹರಿಸಿ ಸೂಕ್ಷ್ಮದ ರೂಪ ಧರಿಸಿ ಪುರವ ಪೊಕ್ಕು ಪರಿಪರಿ ಕೋಟೆಗಳಿರವನೆ ಕಾಣುತ ಕರಿ ಹಯ ರಥ ಶಾಲೆಗಳ ಪರಿಕಿಸುತ ಖಳನರಮನೆ ಪೊಕ್ಕರು ಫಲವಿಲ್ಲದೆ ಕಡೆಗೆ ಅಶೋಕ ವನದೊಳು ಚರಿಸಿದ1 ವನದ ಮಧ್ಯದೊಳಿರಲು ರಕ್ಕಸ ಬಹು ಘನತೆಯಿಂದಲಿ ಬರಲು ಬಣಗು ದೈತ್ಯನ ತೃಣಕೆಣೆಮಾಡಿ ನುಡಿಯಲು ಪವನ ತನಯ ನೋಡಿ ಮನದಿ ಸ್ತೋತ್ರವ ಮಾಡಿ ಮನದೊಳು ಶ್ರೀ ರಘುವರನನು ಧ್ಯಾನಿಸಿ ಘನ ಮುದ್ರಿಕೆ ಮುಂದಿಡಲಾ ಜಾನಕಿ ನಯನಂಗಳ ಕಂಬನಿಗರೆಯುತ ಮುಂದಿಹ ಹನುಮನೊಳಿಂತೆನೆ ಲಾಲಿಸಿದ 2 ಯಾವ ರಾಯರ ದೂತನೋ ಪೇಳಯ್ಯ ಬಲು ಸಾವಧಾನದಿ ಮಾತನು ಶ್ರೀರಾಮಚಂದ್ರ ನಿನ್ನ ಸೇರಿ ಮಿತ್ರತ್ವಮಾಡೆ ಕಾರಣವೇನುಂಟು ಸಾವಧಾನದಿ ಪೇಳು ಯಾರನುಮತಿಯಿಂದೀ ಪುರ ಪೊಕ್ಕೆಯೊ ಯಾರಿಗಾಗಿ ಈ ವಾನರ ರೂಪವು ಪೋರನಂತೆ ಕಾಣುವಿ ನಿನ್ನ ವಚನವು ಬಾರದು ಮನಕೆಂದೆನಲು ಮಾತಾಡಿದ 3 ಜನಕ ಜಾತೆಯೆ ಲಾಲಿಸು ದೈತ್ಯರ ಸದೆ ಬಡಿಯುವನೆಂದು ಭಾವಿಸು ಇನಕುಲ ತಿಲಕನ ಚರಣಸೇವೆಯು ಮಾಡೆ ಜಲಜಾಕ್ಷನಾಜ್ಞದಿಂದ ಭುವಿಯೊಳು ವಾನರ- ಕುಲದೊಳಗವತರಿಸುವ ಶತ ಸಂಖ್ಯೆಯೊಳಿರುತಿರೆ ಗಿರಿವನಚರಿಸುವ ಸಮಯದಿ ಜಲಜಾಕ್ಷಿಯನರಸುತ ರಾಘವಬರೆ ಚರಣಾಂಬುಜಗಳಿಗೆರಗಿದೆವೆಂದೆನಲು 4 ಜಲಜಾಕ್ಷಿ ನಿಮ್ಮ ಕಾಣದೆ ಮನದೊಳಗೊಂದು ಘನವಾದ ಚಿಂತೆ ತಾಳಿದೆ ಜನಕ ಜಾತೆಯ ಪಾದಾಂಬುಜವ ಕಾಣದೆ ಮರಳಿ ಪುರವ ಸಾರುವದೆಂತು ರವಿಸುತನಾಜ್ಞೆ ಮೀರ- ಲರಿಯದೆ ಈ ಉಪವನದೊಳಗರಸುವ ಸಮಯದಿ ಶ್ರೀವರನಿಯಮಿಸಿ ಪೇಳಿದ ಪರಿಯನು ತಿಳಿಯುತ ಪರಮಾನಂದದಿ ರಘುವರನ್ವಾರ್ತೆಯ ಲಗುಬಗೆ ಪೇಳಿದ 5 ಕುರುಹು ಕೊಡಮ್ಮ ಜಾನಕಿ ಮನಸಿನ ಚಿಂತೆ ಬಿಡುಬೇಗ ಭದ್ರದಾಯಕಿ ಕ್ಷಣದೊಳ್ ಶ್ರೀರಾಮನೊಳು ಇನಿತೆಲ್ಲವನು ಪೇಳಿ ಕ್ಷಣದಿ ರಕ್ಕಸರನೆಲ್ಲ ನೆಲಸಮ ಮಾಳ್ಪೆನೆಂಬೀ ಅಣುಗನಿಗಪ್ಪಣೆಯನು ಪಾಲಿಸೆನಲು ಅನುಮತಿನೀಡಿದ ಅವನಿಜೆಗೊಂದಿಸಿ ಕ್ಷಣದೊಳು ವನಭಂಗವ ಮಾಡಿದ ನುಡಿ ಕೇ- ಳಿದ ರಾವಣನ ಪುರವ ಅನಲನಿಗಾಹುತಿ ಇತ್ತ 6 ಜಯ ಜಯ ಜಯ ಹನುಮಂತ ಜಯ ಜಯ ಬಲವಂತ ಜಯ ಶ್ರೀರಾಮರ ಪ್ರಿಯದೂತ ಜಯ ಜಯ ಜಯವೆಂದು ಸನಕಾದಿಗಳು ಪೊಗಳೆ ಅನಲ ಸಖನ ಸೂನುವನು ಸ್ತೋತ್ರದಿಂದ ಪಾಡೆ ಕಮಲಜಾದಿ ಸುರಗಣ ತಲೆದೂಗೆ ಶ್ರೀ ಕಮಲನಾಭ ವಿಠ್ಠಲನನು ಪಾಡುತ ಅಮಿತ ಪರಾಕ್ರಮವಂತನ ಪೊಗಳುತ ನಮಿಸಿ ಶ್ರೀರಾಮರ ಗುಣಗಳ ಪೊಗಳುವ 7
--------------
ನಿಡಗುರುಕಿ ಜೀವೂಬಾಯಿ
ಯಾಕೆ ಪುಟ್ಟಿಸಿದಿ ಇನ್ನು ಎಲೊ ಹರಿಯೆ | ಲೋಕ ದೊಳಗನುಗಾಲ ತಿರಿದು ತಿಂಬುವಂತೆ ಮಾಡಿ ಪ ಒಡಲಿಗಾಗಿ ಒಬ್ಬನ ಸಂಗಡ ಹೋಗಲು | ಕೊಡುವವನು ಇಲ್ಲೆಂದು ಪರಿಹರಿಸುವ || ಸುಡು ಈ ಶರೀರವ ಬಳಲಲಾರೆನೊ ವಿಷದ, ಮಡುವನಾದರು ಧುಮುಕಿ ಮರಣವಾಗುವೆ ರಂಗಾ 1 ಪ್ರತಿದಿನವೂ ಅನ್ನ ಕೊಡುವವನ ಬಾಗಿಲಿಗ್ಹೋಗೆ | ಹುತವಾಗುವನು ಎನ್ನ ನೋಡುತಲಿ || ಪರಿ ಬದುಕಿ ಇಹೋದಕಿಂತ | ಹತವಾಗಬಹುದಂಬಿನ ಮೊನೆಗೆ ಬಿದ್ದು ರಂಗಾ 2 ಎಲ್ಲಿ ಬೇಡಿದಲ್ಲವೆಂಬೋ ಸೊಲ್ಲಿಲ್ಲಿದೇ | ಒಲ್ಲೆನೋ ಸಾಕು ಈ ನರ ಜನ್ಮವು ಸಿರಿ ವಿಜಯವಿಠ್ಠಲ ನಿ- | ನ್ನಲ್ಲಿ ದೂತರ ಸಂಗದಲ್ಲಿ ಸುಖಬಡಿಸೊ 3
--------------
ವಿಜಯದಾಸ
ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ ಏಕಾಕಾರದಲೆನ್ನ ಹೊರಿಯಲಾರೇನಯ್ಯ ಧ್ರುವ ನೀರ ಥೆರಿಯ ಕಡಿದು ಹೃದಯದಕರ ಚರಣದಿ ಭರದಿ ಮುಣಗಿ ನೀರ ನಡಿಗಿ ದಣದೇನಯ್ಯ 1 ವಾರಿಧಿಮಥನದಿ ಮೇರುಪರ್ವತವನ್ನು ಭಾರ ಬೆನ್ನಲಿ ಪೊತ್ತು ಬೆವರಿ ದಣಿದೇನಯ್ಯ2 ಧರಿಯ ಕದ್ದಸುರನ ಕೋರೆದಾಡಿಂದ ಸೀಳಿ ಭರದಿಂದ ಹೊಯಿದಾಡಿ ಹೋರಿ ದಣಿದೇನಯ್ಯ 3 ತರಳಗೊಲಿದು ಪ್ರಕಟಿಸಿ ದೈತ್ಯನ ಸೀಳಿ ಕರಳೊನಮಾಲಿಯ ಧರಿಸಿ ದಣಿದೇನಯ್ಯ 4 ಧರಿಯು ಮೂರಡಿ ಮಾಡಿ ಎರೆದು ದಾನವ ಬೇಡಿ ನರನ ಪಾತಾಳಕೊತ್ತಿ ಬಳೆದು ದಣಿದೇಯನಯ್ಯ 5 ಹಿರಿಯಳ ಶಿರವನು ಹರಿದು ಕತ್ತರಿಸಿನ್ನು ಕರದಲ್ಲಿ ಪರಶುವ ಪಿಡದು ದಣಿದೇನಯ್ಯ 6 ಶಿರಗಳ ಚೆಂಡಾಡಿ ರಾವಣೀಂದ್ರ ಜಿತನ ಶರದಿ ಕುಂಭಕರ್ಣನ ಎಚ್ಚದು ದಣಿದೇನಯ್ಯ 7 ಷತುರುಗಳ ಕಾಯಿದು ಉರುಗನ ತುಳದಿನ್ನು ಗಿರಿಯ ಬೆರಳಲೆತ್ತಿ ತೋರಿ ದಣಿದೇನಯ್ಯ 8 ಬರಿಯ ಬತ್ತಲೆ ಅಗಿ ಅರಿಯದೆ ತ್ರಿಪುರವ ಸೇರಿ ನಾರೇರ ವ್ರತವಳಿದು ದಣಿದೇನಯ್ಯ 9 ಏರಿ ಕುದುರಿಯ ತಿರುಹು ರಾಹುತನಾಗಿ ಪರಿ ರೂಪವ ತಾಳಿ ದಣಿದೇನಯ್ಯ 10 ಸರ್ವಾಪರಧವು ಕ್ಷಮೆಯಿಂದ ಮಹಿಪತಿಯ ಮನದೊಳು ಬಂದು ನಿಂದು ಹೊರೆದು ರಕ್ಷಿಸಯ್ಯ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಯಾದವರಾಯ ಬೃಂದಾವನದೊಳು ವೇಣುನಾದವ ಮಾಡುತಿರೆ ಪ ರಾಧೆ ಮುಂತಾದ ಗೋಪಿಯರೆಲ್ಲಮಧುಸೂದನ ನಿಮ್ಮನು ಸೇವಿಸುತ್ತಿರೆ ಅ ಸುರರು ಅಂಬರದಿ ಸಂದಣಿಸಿರೆ ಅ-ಪ್ಸರ ಸ್ತ್ರೀಯರು ಮೈಮರೆದಿರೆಕರದಲಿ ಕೊಳಲನೂದುತ ಪಾಡುತಸರಿಗಮ ಪದನಿ ಸ್ವರಗಳ ನುಡಿಸುತ 1 ಹರಬ್ರಹ್ಮರು ನಲಿದಾಡುತಿರೆ ತುಂ-ಬುರು ನಾರದರು ಪಾಡುತಿರೆಪರಿಪರಿ ವಿಧದಲಿ ರಾಗವ ನುಡಿಸುತತುರು ಹಿಂಡುಗಳ ಕೂಡುತ ಪಾಡುತ2 ತುರು ಹಿಂಡುಗಳ ತರತರದಲಿ ತನ್ನಕರದಿಂ ಬೋಳೈಸಿ ಸಂತೈಸುತಅರವಿಂದ ನಯನ ಆದಿಕೇಶವರಾಯಕರುಗಳ ಸಹಿತ ಗೋವ್ಗಳ ತಿರುಹುತ3
--------------
ಕನಕದಾಸ
ಯಾರು ಮೀರಲರಿದು ಬ್ರಹ್ಮ ಬರೆದಲಿಖಿತವ ಪುರಾರಿ ಮಿತ್ರನೊಬ್ಬ ಬಲ್ಲನಿದರ ಕೆಲಸವ ಪ ಎಲ್ಲಿ ದಂಡು ಎಲ್ಲಿ ಗೂಳ್ಯವೆಲ್ಲಿಗಮನವಲ್ಲಿ ವಾಸ ವೆಲ್ಲಿ ಊಟವೆಲ್ಲಿ ಶಯನವು ಎಲ್ಲಿ ನಿದ್ದೆ ಎಲ್ಲಿ ಸುಲಿಗೆ ಎಲ್ಲಿ ಕಡಿತ ವೆಲ್ಲಿ ಮರಣ ವೆಲ್ಲಿ ರುದ್ರಭೂಮಿ ಮೆತ್ತೆಲ್ಲಿ ಜನನವು 1 ಊರದೆಲ್ಲಿ ಮನೆಗಳೆಲ್ಲಿ ನಾರಿ ನೆಂಟರಿಷ್ಟರೆಲ್ಲಿ ಸೇರಿಸಿಟ್ಟ ವಸ್ತು ವಡವೆ ಒಂದು ಕಾಣವು ಭೂರಿ ಪಶುಗಳೆಲ್ಲಿ ಭಯವು ಏರಿ ನೋಳ್ವಗುಡ್ಡ ಸಂ ಚಾರವೆಲ್ಲಿ ಹಸಿವು ತೃಷೆಯು ಹರುಷ ದುಃಖವು 2 ಹಿಂದುಯಿಲ್ಲ ಮುಂದುಯಿಲ್ಲ ಸಿಂಧುತನಕ ತಪರರಿಂದ ಕೆಟ್ಟ ದಿಂದ ಸಲಹುತಿರುವ ಮರುತ ನಂದನ ಕೋಣೆವಾಸ ಲಕ್ಷ್ಮೀರಮಣ ಬಲ್ಲನೋ 3
--------------
ಕವಿ ಪರಮದೇವದಾಸರು
ಯುಕ್ತಿ ಯುಕ್ತದಮಾತ ಕೇಳಬೇಕುಶಕ್ತಿಯನು ಮಾಡದಿರು ಮುಕ್ತಿಗನುವಾಗು ಪಚಿತ್ತಶುದ್ಧಿಯಲಿದ್ದು ಭಾವ ವಿಷಯದಿಕೂಡೆಮತ್ತೆ ಬಂಧಿಸಿ ಬಲಿದು ಮುಳುಗುತಿಹುದುಕಿತ್ತದನು ನಿಜದಲ್ಲಿ ನಿಲಿಸಿಯನುಸಂಧಾನವತ್ಯಧಿಕವಾದಡೆಯು ಮಿತನುಡಿ ಹಿತವೂ 1ಕಾರ್ಯಕಾರಣರೂಪನಾಗಿ ಜಗದೀಶ್ವರನುಧೈರ್ಯಗಳು ಬರುವಂತೆ ಪ್ರೇರಿಸುತ್ತಾಆರ್ಯರೊಳಗೆಣಿಕೆಯನು ಮಾಡಿಸುತಲಜ್ಞಾನಸೂರ್ಯನಾಗಿಯೆ ತಾನು ತೋರುತಿರ್ದಡೆಯೂ 2ಕರಣೇಂದ್ರಿಯಂಗಳಿವು ಜಡವಾಗಿ ವಿಷಯಗಳಬೆರೆಸಲರಿಯವು ತಾವು ಇಚ್ಛೆುಂದಾತಿರುಪತಿಯ ವೆಂಕಟನು ಸೂತ್ರಧಾರಕನಾಗಿಗುರುವಾಸುದೇವ ರೂಪದಿ ಸಲಹುತಿರಲು 3ತನುವನುಕೂಲಕೆ ಬಂದುದ ನೆನೆದುಸುರಿದ ಜೀವನಭಿಮಾನವ ಸಡಿಲಿಸುತಲಿ ವಿನಯದಿ ಗುರುವನು ಸೇರ್ವರೆ ನಿನಗೆರವಿಲ್ಲೆನ್ನುತಅನುಸರಿಸಿದ ಕಾರ್ಯವಾಸಿಗೋಸುಗ ಬಿಡದೆ 4
--------------
ತಿಮ್ಮಪ್ಪದಾಸರು
ರಾಘವೇಂದ್ರ ಗುರು ನಮೋ ನಮೋ ಯೋಗಿಜನೇಡಿತ ನಮೋ ನಮೋ ಪ ವಾದಿಜಯಪ್ರದ ನಮೋ ಸಾಧುಜವಾವ ನಮೋ ನಮೋಶ್ರೀಧರ ಬೋಧಕ ನಮೋ ಅಗಾಧತವ ಮಹಿಮ ನಮೋ 1 ಎಷ್ಟು ದಿನವಾಯಿತು ನಮೋ ಶ್ರೀ ಕೃಷ್ಣನ ಕಾಣದೆ ನಮೋಭೆಟ್ಟಿಯ ಮಾಡಿಸು ನಮೋ ವಿಷ್ಣು ದಾಸರೇಣ್ಯನೆ ನಮೋ 2 ತುಷ್ಟ ಮುಖಾಯ ನಮೋ ಶಿಷ್ಯರು ಸೇವಿಸೆ ನಮೋದೃಷ್ಟಿಲಿ ಕಳೆಯುವಿ ನಮೋ ಸರ್ವೇಷ್ಯವರಪ್ರದ ನಮೋ 3 ಚೂತರಸದಿ ಹರಿ ನಮೋ ಪೋತನು ಬೀಳಲು ನಮೋಆ ತನು ತ್ಯಜಿಸಿದ ನಮೋ ಜೀವಾತು ನೀನಾದೆ ನಮೋ 4 ವರಜಯತೀರ್ಥರ ನಮೋ ಸುರಸ ಸುಗ್ರಂಥಕೆ ನಮೋಪರಿಮಳ ಟೀಕೆಯ ನಮೋ ವಿರಚಿಸಿ ರಾಜಿಪೆ ನಮೋ 5 ರತುನಮಾಲಿಯ ನಮೋ ಹುತವಹಗಿತ್ತೆಯೋ ನಮೋಅತಿಶಯ ಪ್ರಾರ್ಥಿಸೆ ನಮೋ ಪ್ರಥಮ ತೆಗೆದುಕೊಟ್ಟೆ ನಮೋ 6 ನಾರದ ಶಿಷ್ಯನೆ ನಮೋ ನಾರಸಿಂಹಾರ್ಚಕ ನಮೋಸೇರಿ ಭಜಿಸಿ ನಿಮ್ಮ ನಮೋ ಎನ್ನ ಚಾರುದೃಷ್ಟಿಲಿನೋಡು ನಮೋ 7 ನಾಕವತಾರನೆ ನಮೋ ಲೋಕನಾಥಾಶ್ರಯ ನಮೋಕಾಕು ದರ್ಮತ ಹರ ನಮೋ ಶ್ರೀಕರ ಸೇವಕ ನಮೋ 8 ವೃಂದಾವನದಲಿ ನಮೋ ನಮೋ ಭಕ್ತ ವೃಂದರಲಿಂದು ನೀ ನಮೋಬಂದು ಮಾತಾಡುವಿ ನಮೋ ಇಂದಿರೇಶನ ಪ್ರಿಯನಮೋ ನಮೋ 9
--------------
ಇಂದಿರೇಶರು
ರಾಘವೇಂದ್ರ ರಾಯರಡಿಗೆ ಬಾಗಿ ನಮಿಸಿರೊ ನೀಗಿ ಭವದ ಬಂಧದಿಂದ ಮುಕ್ತರಾಗಿರೊ ಪ ಶಂಕೆಯಿಲ್ಲದೆ ವರಗಳ ಕೊಟ್ಟು ಚಿಂತೆ ಹರಿಸುವರ ಕಂತುಪಿತನ ಭಕ್ತರಿಗೆ ನಿರಂತರ ಸಂತಸ ನೀಡುವರ ಪಂಕಜನಾಭನ ಕಿಂಕರರ ಭಯ ಚಿಂತೆಯ ನೀಗುವರ ಶಂಖು ಕರ್ನರಿವರೆನ್ನುತ ಅಭಯದ ಕಂಕಣ ಕಟ್ಟಿಹರ 1 ಹಾಟಕಶ್ಯಪುತ್ರನು ವಿನಯದಿ ಪ್ರಾರ್ಥಿಸಿ ಪೂಜಿಸಿದ ಮಾಟಮುಖದ ದೇವನ ಪಾದಾಂಬುಜ ಧ್ಯಾನಿಸಿ ಸೇವಿಸಿದ ಕೋಟಲೆ ಭವದೊಳು ತಾಪವ ಪಡುವರ ಆಪದ ಪರಿಹರಿಸಿ ಭ- ವಾಟವಿದಾಟಿಸಿ ಪೊರೆದ ಪ್ರಹ್ಲಾದರ ಉಲ್ಲಾಸದಿ ಭಜಿಸಿರಿ2 ವ್ಯಾಸರಾಯರೆಂದು ಜಗದಿ ಪ್ರಖ್ಯಾತಿ ಪಡೆದವರ ದೇಶ ದೇಶದ ಭಕುತರ ಉಲ್ಲಾಸ ಕೊಡುವರ ಶ್ರೀ ಸುಧೀಂದ್ರಾರ್ಯರ ಪುತ್ರರೆನಿಸಿಕೊಂಬರ ಕ್ಲೇಶಗಳನೆ ಕಳೆವರೆಂಬ ಕೀರ್ತಿಪಡೆದರ3 ಕಂಗೊಳಿಪ ಕೋರೆಯಿಂದ ಬಂದ ಭದ್ರೆಯ ತೀರದಿ ಚಂದದಿಂದ ಮೆರೆವ ರಾಘ- ವೇಂದ್ರ ರಾಯರ ಕೊಂಡಾಡಿ ಪಾಡಿರೊ ಮನಕೆ ಸಂಭ್ರಮ ನೀಡುವರು ಪೊಂದಿದ ಪಾಪಗಳೆಲ್ಲವ ನೀಗಿಸಿ ಚಂದದಿ ಸಲಹುವರು 4 ಕರುಣದಿಂದ ಭಕ್ತರನೆಲ್ಲ ಸಲಹುತಿರ್ಪರ ಕಮಲನಾಭ ವಿಠ್ಠಲನಂಘ್ರಿ ಭಜನೆ ಮಾಳ್ಪರ ಕನಕಮಯದ ಮಂಟಪದಲಿ ಮರೆಯುತಿರ್ಪರ ಕರೆದು ಪ್ರಾರ್ಥಿಸುವವರ ಮನಕೆಹರುಷ ತೋರ್ಪರ 5
--------------
ನಿಡಗುರುಕಿ ಜೀವೂಬಾಯಿ
ರಾಮ ರಾಮ ರಾಮ ಶ್ರೀರಾಮನೆನ್ನಿರೊ ಪ್ರೇಮದಿಂದ ಶ್ರೀ ಜಾನಕಿ ಪ್ರೇಮನನೆನೆಯಿರೊ ಪ ಅಂದದಿಂದ ಈ ದಶರಥನಂದನೆಂದು ---- ಚಂದದಿಂದ ಚಲನೆಯಿಲ್ಲದೆ ಚಿತ್ತಸ್ವಸ್ಥದಿ ಕಾಲ ಕಳೆಯ ಹೊಂದಿ ದೇವರ ಚರಣ ಕಮಲಾ ನಂದ ಅರ್ಚಿಸುವ ಮಂದಿರದಿ ಭಜಿಸಿರೊ 1 ಕಾಮನಯ್ಯನ ಕಡಲೊಳಾಳ್ದÀ್ದನ ಕೂರ್ಮರೂಪ ವರಾಹನಾದನ ಸ್ವಾಮಿ ನರಹರಿ ವಾಮನ ಪರಶುರಾಮನಾದನಾ ರಾಮಕೃಷ್ನ ಬೌದ್ಧಕಲ್ಕಿ ನಾಮವುಳ್ಳ ನಾರಾಯಣನ ನೇಮದಿಂದ ನಿತ್ಯದಲ್ಲಿ ನಾಮ ಸ್ಮರಿಸಿರೊ 2 ಪಿತೃವಾಕ್ಯ ಪಾಲಿಸಿದವನು ಸತತ ಭಕ್ತರ ಸಲಹುತಿಹನು ಕ್ಷಿತಿಗೆ ಒಡೆಯನಾದ ದೇವನು 'ಶ್ರೀ ಹೊನ್ನ ವಿಠ್ಠಲಾ’ ನತಿಶಯದಿಂದಲಿ ಹೃದಯನಂಬಿ ಇರುವ ನರರಿಗೆ--------ಸದ್ಗತಿಯ ತೋರುವನಧಿಕ ಸಂಪನ್ನ 3
--------------
ಹೆನ್ನೆರಂಗದಾಸರು