ಒಟ್ಟು 496 ಕಡೆಗಳಲ್ಲಿ , 74 ದಾಸರು , 404 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತತ್ವ ಚಿಂತನೆ ಮಧ್ಯಮತವೇ ದೊಡ್ಡದೆಂದು ತಿಳಿದು ಮನ ಶುದ್ಧಿಯಿಂದ ಮತವನನುಸರಿಸೋ ಪ ಶ್ರೀ ಮಧ್ವಮತದಲ್ಲಿ ಹರಿಯೇ ಸವೋತ್ತಮ ಭೇದಪಂಚ ಜಗತೆರಡು ಸತ್ಯ ಶ್ರೀ ಬ್ರಹ್ಮಾದಿಗಳೆಲ್ಲ ಹರಿಪರಿವಾರರು ತಾರತಮ್ಯವೇ ಸದಾ ಇವರಲ್ಲಿ 1 ಮುಕ್ತಿ ಎಂಬುದು ನಿಜಾನಂದದ ಅನುಭವ ಭಕ್ತಿಯೆಂಬುದೇ ದೊಡ್ಡ ಸಾಧನವು ಅಕ್ಷಾನುಮಾಗಮ ಮೂರು ಪ್ರಮಾಣ ಶ್ರೀ ಲಕ್ಷ್ಮೀಶನೇ ಸರ್ವಶ್ರುತಿವೇದ್ಯನು 2 ಸ್ವತಂತ್ರ ಪರತಂತ್ರ ಎರಡು ತತ್ವಗಳು ಸ್ವತಂತ್ರ ತತ್ವವು ಹರಿಯೊಬ್ಬನೇ ಪ ರತಂತ್ರ ಮಿಕ್ಕಿದ್ದಲ್ಲಾ ಇದಕೆ ಪ್ರಮಾಣವು `ಏಷ ಸರ್ವೇಶ್ವರ ' ವೆನ್ನುತ ಶ್ರುತಿಯು 3 ಹರಿಯೇ ಸರ್ವೋತ್ತಮ ತದನು ರಮಾದೇವಿ ವಿಧಿ ಪ್ರಾಣರಿವರಿಬ್ಬರು ತದನು ಸರಸ್ವತಿ ಭಾರತೇರಿಬ್ಬರು ಶಿವ ಶೇಷ ಗರುಡ ಶ್ರೀ ಹರಿನಾರೇರು 4 ಸೌಪರ್ಣಿ ಪಾರ್ವತಿಯರು ಸಮ ಶಕ್ರ ಕಾಮರು ಸಮ ಸ್ಮರರಮಣಿ ಗುರು ಶಚಿ ಮನು ದಕ್ಷ ಸಮರು ಆ ಮಾನವಿ ಪ್ರವಹ ಯಮೇಂದ್ವರ್ಕ ಸಮರೈವರು 5 ನಿಖಿಲ ದಿವಿಜರಲ್ಲಿ ಈ ವಿಧ ತಾರತಮ್ಯ ನಿಖಿಲ ಸುರೋತ್ತಮ ಹರಿಯೊಬ್ಬನೇ ಮಿಕ್ಕವರಲವೆಂದು ಇಂದ್ರಿಯೇಭ್ಯಃ ಪರಃ ದ್ವಾವಿಮಾ ಇತ್ಯಾದಿ ಶ್ರುತಿವಚನ 6 ಈಶ್ವರ ಜಡ ಭೇದ ಜೀವ ಜಡಕೆ ಭೇದ ಜೀವ ಜೀವಕೆ ಭೇದ ಜಡ ಜಡಕೆ ಜೀವೇಶರಿಗೆ ಭೇದ ಈಶ ಲಕ್ಷ್ಮೀ ಭೇದ ಪರತಂತ್ರ ಚಿತ್ಪರ ಜೀವ ಶಬ್ದ 7 ಬ್ರಹ್ಮವಿಚಾರ ತತ್ಜ್ಞಾನಕೆ ಸಾಧನ ಜ್ಞಾನಪ್ರಸಾದಕೆ ಇದು ಮುಕ್ತಿಗೆ ಆದ ಕಾರಣದಿಂದ ಶಮದಮಯುತನಿಗೆ ಬ್ರಹ್ಮ ಜಿಜ್ಞಾಸವು ಕರ್ತವ್ಯವು 8 ಜಿಜ್ಞಾಸ್ಯಬ್ರಹ್ಮನು ಜೀವನಲ್ಲವೊ ಜಗ ತ್ಕಾರಣತ್ವವು ಜೀವಗೆಲ್ಲಿಹುದೊ ರುದ್ರಾದಿಗಳು ಜಗತ್ಕಾರಣರಲ್ಲವೊ ಶಾಸ್ತ್ರವೇದ್ಯನೆ ಜಗತ್ಕಾರಣನು 9 ಉಪಕ್ರಮಾದಿಗಳ ವಿಚಾರ ಮಾಡಲು ಸರ್ವ ಶಾಸ್ತ್ರ ತಾತ್ಪರ್ಯಗೋಚರ ಹರಿಯೆ ಅಕ್ಷಾದ್ಯವೇದ್ಯನ ಜ್ಞೇಯನಾಗುವ ಹರ್ಯ ವಾಚ್ಯನೆಂಬುವುದದು ಸರಿಯಲ್ಲವೊ10 ಆನಂದಮಯ ಮೊದಲಾದ ವಾಚ್ಯನು ಮತ್ತೆ ಸರ್ವಗತತ್ವಾದಿ ಲಿಂಗಯುತ ದ್ಯುಭ್ವಾದಿಗಳಿಗಾಧಾರನು ಅವ್ಯಕ್ತ ಜ್ಯೋತಿರಾದಿ ಶಬ್ದ ಮುಖ್ಯಾರ್ಥನು 11 ದೋಷವರ್ಜಿತ ಹರಿ ವಿಷಯವಿರಕ್ತಿ ಭಕ್ತ್ಯು ಪಾಸನದಿಂದಲೆ ಅಪರೋಕ್ಷನೊ ಇಂತು ಪ್ರಸನ್ನನು ಮುಕ್ತಿಯನೀವನು ಎಂಬುವುದೆ ಸರ್ವ ಶಾಸ್ತ್ರಾರ್ಥವೊ 12 ವರನಾಮಗಿರಿ ನರಹರಿಯ ಪಾದಾಂಬುಜ ನಿರತ ಹೃದಯನಾಗಿ ಅನುದಿನದಿ ಧರಣಿ ಸುರನು ಇದ ಪೇಳಲು ನರಹರಿ ಚರಣಕಮಲ ಭಕ್ತಿ ಪೊಂದುವನು 13
--------------
ವಿದ್ಯಾರತ್ನಾಕರತೀರ್ಥರು
ತನ್ನೊಳಗಿಹುದು ತನಗೆ ತಿಳಿಯದು | ತನ್ನಂಥ ಮಹಿಮಗೆತೋರುವದು | ಇನ್ನೊಬ್ಬ ಮೂಢಗೆ ತೋರಿಸೆನೆಂದರೆಸಕ್ಕರಿಯೊಳಗಿನ ಸವಿ ಇದ್ಧಾಂಗೆ | ಹಾಂಗೆ ನಿಜವಸ್ತು 1 ನೂಕದು ಪೀಕದು ದೇಹಕ್ಕೆ ತಾಕದು | ಏಕಾಗಿ ಇಹುದುಮಾತಾಡದು ಪ್ರಾಕೃತ ಜನರಿಗೆ | ಮುಸುಕು ಹಾಕಿಹುದು ಕಾಷ್ಠದ ಒಳಗಿನ ಅಗ್ನಿ ಇದ್ಧಾಂಗೆ | ಹಾಂಗೆ ನಿಜವಸ್ತು 2 ಕಣ್ಣಿಗೆ ತೋರದು ಬೈಲಾಗಿ ಹೋಗದು | ಕಣ್ಣಿಗೆ ಕಣ್ಣಾಗಿ ನಿಂತಿಹುದು | ಹೆಣ್ಣಿಗೆ ಗಂಡಿಗೆ ಕುಣಿಸ್ಯಾಡುತಿಹುದು | ಕುಸುಮದ ಒಳಗಿನ ಪರಿಮಳದ್ಹಾಂಗೆ | ಹಾಂಗೆ ನಿಜವಸ್ತು 3 ಕೆಳಗದ ಮೇಲದ ಎಡಕದ ಬಲಕದ ಹಿಂದದ ಮುಂದದ ಜಡವದ | ಒಳ ಹೊರಗೆ ತುಂಬೇದ ಬ್ರಹ್ಮಾಂಡ ಮೀರೇದ | ಚಂದ್ರನ ಒಳಗಿನ ಬೆಳದಿಂಗಳ್ಹಾಂಗ ಹಾಂಗೆ ನಿಜವಸ್ತು 4 ನರಸಿಂಹ ಸದ್ಗುರು ರಾಮನ ದಯದಿಂದ ಪರವಸ್ತು ಎನಗೆ ಪ್ರಕಟಾಯಿತೊ ಪರರ ಮುಖದಿಂದಹೇಳುವದಲ್ಲ | ಪರವಸ್ತು ತಿಳಿದಂಥ ಯೋಗಿಯೆಬಲ್ಲಾ || ಹಾಂಗೆ ನಿಜವಸ್ತು 5
--------------
ನರಸಿಂಹ
ತಪ್ಪು ಮಾಡುವದು ಮನುಜ ಧರ್ಮ | ನಮ್ಮದು ಬೇಡುವದು ಕಾಡುವದು ಪ ನಡೆ ನುಡಿಗೆ ತಪ್ಪು ನೋಡುವದು ನ್ಯಾಯವೇ ನಿನಗೆ ||ಬಡವರಾಟಗಳೆಂದು ಸಲುಹಯ್ಯ | ಮಾಡಲಬೇಡ ತಡವ |ಕಡಿದ್ಹಾಕು ಕಮಳಲೋಚನಾ | ಎನ್ನ ನಿನ್ನಡಿಗೆಸೇರಿಸು | ಕಡಲಶಯನ ಮೋಹನ್ನಾ 1 ಮಡಹಿ ಮಲ್ಲನ ಕೆಡವಿ | ಜೋಡು ಮತ್ತಿಯ ಮರವ ತಡವಿ | ಮಧು ಮೊದಲಾದವರನ್ನು | ಅಡವಿ ಕಿಚ್ಚವ ನುಂಗಿ | ಕಡುವಿ ಮಡುವ ಧುಮುಕಿ | ಬಡವಿ ಕುಬ್ಜಿಯ ಕೈಪಿಡಿದು ಯಶವ ಪಡೆದಿ 2 ನಡೆವವನು ಎಡವುವನೆಂದು | ಅಪರಾಧಗಳನುಬಡಿದಾಡದೆ ಒಡಲೊಳಗೆ ಹಿಡಿವ | ಮಡದಿಯನುನಿಮ್ಮ ಜಡೆಯಲಿರಿಸಿದ ಮನೆಯಲಿ ಎನ್ನ |ಸಡಗರದ ರುಕ್ಮದಿಂದಿಡಿದು ಲಾಲಿಸು 3
--------------
ರುಕ್ಮಾಂಗದರು
ತಪ್ಪುಗಳೆಲ್ಲವು ಒಪ್ಪುಗೊಳ್ಳಯ್ಯ ಶ್ರೀ ಚಪ್ಪರ ಶ್ರೀನಿವಾಸಪ. ಸರ್ಪರಾಜಗಿರಿಯಪ್ಪ ತಿಮ್ಮಪ್ಪನೆ ದರ್ಪಕತಾತನೆ ತಾ ಸಜ್ಜನಪ್ರೀತಅ.ಪ. ಮಾಧವ ನಿನ್ನಯ ಮಹಿಮೆ ತಿಳಿಯದಪ- ರಾಧವ ಮಾಡಿದೆ ದಾರಿದ್ರ್ಯದ ಪಾದ ದರುಶನದ ಗಾದಿಯ ಕಾಣದಾದೆ ನಾ ದ್ರೋಹಿಯಾದೆ1 ತ್ರಾಣವಿರುವಾಗ ಕಾಣಿಕೆ ಹಾಕಿದೆ ದೀನದಾರಿದ್ರ್ಯದ ಹೊತ್ತಿನಲಿ ಮೇಣದರಿಂದಲಿ ತೆಗೆದು ತೆಗೆದು ಪಂಚ ಪ್ರಾಣಕ್ಕಾಹುತಿಯ ಕೊಟ್ಟೆ ಅಪರಾಧ ಪಟ್ಟೆ2 ಮಂದವಾರದಿಕ್ಕೊಂದೂಟವ ಸತ್ತ್ವ ದಿಂದಿರುವಾಗ ನಾ ನೇಮಗೈದೆ ಮಂದಭಾಗ್ಯ ಜ್ವರದಿಂದ ಪೀಡಿತನಾದ- ರಿಂದೆರಡೂಟವನೂ ಮಾಡಿದೆ ನಾನು3 ಶನಿವಾರಕ್ಕೊಂದಾಣೆ ಕಾಣಿಕೆ ಹಾಕುತ್ತ ಮಿನುಗುವ ಡಬ್ಬಿಯ ನಾ ಮಾಡಿದೆ ಎನಗೆ ದಾರಿದ್ರ್ಯವ ಕೊಟ್ಟ ಕಾರಣದಿಂದ ಹಣವೆಲ್ಲ ಗುಣ ನುಂಗಿತು ಪಾದಕೆ ಗೊತ್ತು4 ದೊಡ್ಡದಾರಿದ್ರ್ಯದ ಗುಡ್ಡೆ ಬಿದ್ದುದರಿಂದ ದುಡ್ಡೆಲ್ಲ ತೆಗೆದೆ ನಾ ದಡ್ಡನಾಗಿ ಅಡ್ಡಬಿದ್ದು ಕೈಯೊಡ್ಡಿ ಬೇಡುವೆ ಸ್ವರ್ಣ ಗುಡ್ಡೆಯ ಮೇಲಿರುವ ಮಹಾನುಭಾವ5 ಭಂಡಾರದ್ರೋಹ ಬ್ರಹ್ಮಾಂಡಪಾಪಾಗ್ನಿಯು ಮಂಡೆಯೊಳುರಿವುದು ಖಂಡಿತದಿ ಪುಂಡರೀಕಾಕ್ಷನೆ ಕರುಣಾಮೃತರಸ ಕುಂಡದೊಳ್ ಮೀಯಿಸಯ್ಯ ವೆಂಕಟರಾಯ6 ದೃಢಭಕ್ತಿಯನು ಕೊಟ್ಟು ಸಲಹಬೇಕಲ್ಲದೆ ಕೆಡುಕು ಮಾಡುವುದೇನು ಜಡಜನಾಭ ಕಡಲಶಯನ ಲಕ್ಷ್ಮೀನಾರಾಯಣ ನ- ಮ್ಮೊಡೆಯ ಪಡುತಿರುಪತೀಶ ರವಿಕೋಟಿಭಾಸ7
--------------
ತುಪಾಕಿ ವೆಂಕಟರಮಣಾಚಾರ್ಯ
ತಾತ್ವಿಕವಿವೇಚನೆ ಏರಿಸಿ ಏರಿಸಿ ಮಾರುತ ಮ್ವತಧ್ವಜ ಸಾರ ಸುಖಂಗಳ ನಿತ್ಯದಲುಂಬುವ ಯೋಗ್ಯತೆ ಯುಳ್ಳವರೂ ಪ ಈರನ ಮತವೇ ಸಾರವು ಶ್ರುತಿಗಳ ಶೌರಿಯ ಮತವೇ ಈರನ ಮತ ಖರೆ ದೂಡಿರಿ ಸಂದೇಹ ಅ.ಪ ಇಲ್ಲವು ಜಗವಿದು ಭ್ರಾಂತಿಯ ಕಲ್ಪನೆ ಸುಳ್ಳೇ ಎಲ್ಲವು ಬ್ರಹ್ಮನ ಬಿಟ್ಟರೆ ಬ್ರಹ್ಮನೆ ಸತ್ಯವೆನೆ ಅಲ್ಲವು ನುಡಿಯಿದು ಬ್ರಹ್ಮನು ಕಾರಣ ಸುಳ್ಳಾಯಿತು ನುಡಿ ಅಲ್ಲವೆ ಯೋಚಿಸಿ ಕೊಡದು ಈ ಮನವು 1 ಉಂಬುದು ಉಡುವುದು ಕಾಂತೆಯ ಸಂಗವು ನಂಬಲು ಬೇಡಿರಿ ಸುಳ್ಳೇಯೆಂತೆಂನೆ ಸಾಕ್ಷಿಯು ಒಪ್ಪುವುದೇ ನಂಬಲನರ್ಹವೆ ಕಾರ್ಯಸುಕಾರಿಯ ಖರೆ 2 ಒಂದೇ ತೆರವಿಹ ವಸ್ತು ದ್ವಯವಿರೆ ಒಂದನು ಮತ್ತೊಂದೆಂಬುವ ಭ್ರಾಂತಿಯು ಕೊಡುವದೂ ಪೊಂದಿಹ ಹೇಗೆನೆ ಉತ್ತರ ಸಿಕ್ಕದು ಯೋಚಿಸಿ ಕೋವಿದರೆ 3 ಭ್ರಾಂತಿಯ ಪೆಣ್ಣನು ಕೊಡುತ ತಾಸ್ವಾ ತಂತ್ರ ವಿಹೀನನು ಆಗುತ ಮಿಡುಕುವ ದೇವನು ಎನಿಸುವನೆ ಮಂತ್ರಿಸೆ ಬ್ರಹ್ಮನ ನಾನಿಹೆ ನೆಂಬುದ ಭ್ರಾಂತಿಯ ತೊಲಗುತ ಬ್ರಹ್ಮನು ಆಹನೆ ಮನವ ವಿಚಾರಿಸಿರಿ4 ನಾನೇ ಬ್ರಹ್ಮನು ಎಂಬೀ ಜ್ಞಾನವು ತಾನೇ ಬಾರದು ಸಹಜ ವಿದಲವು ಅನುಭವ ವಿರುದ್ಧಾ ತಾನೇ ಬ್ರಹ್ಮನು ಆಗಿರೆ ಭವದೊಳು ನಾನಾ ದುಃಖವ ನುಣ್ಣಲು ಬಂದರೆ ಹುಚ್ಚನೆ ಅವಸರಿಯು5 ಬ್ರಹ್ಮ ದ್ವಯವಿದೆ ಸತ್ಯ ದ್ವಯವಿದೆ ಬ್ರಹ್ಮನು ಆಹುದು ಕೊನೆ ಮಾತೆಂದರೆ ಬ್ರಹ್ಮನು ಶೂನ್ಯನಿಹ ಬ್ರಹ್ಮನು ನಿರ್ಗುಣ ನಂದವಿಹೀನನು ಬ್ರಹ್ಮನ ಗತಿಯೆನೆ ಸರ್ವವಿನಾಶವೆ ಯಾರಿದ ಬಯಸುವರೂ6 ವ್ಯಕ್ತಿತ್ವವು ತಾನಾಶವು ಆಹುದೆ ಮುಕ್ತಿಯು ಯೆಂತೆನೆ ಸರ್ವವಿನಾಶಕೆ ಸಾಧನೆಯೇ ಬತವು ಮುಕ್ತಿಯು ದುಃಖವಿವರ್ಜಿತ ಬರಿಸುಖ ರಿಕ್ತವು ಬರಿಯೆನೆ ಭವವಿದು ವರವೈ ಬೇಡವು ಆ ಮುಕ್ತಿ7 ಸತ್ಯವ ನುಡಿವುದು ವೇದವು ಒಂದೆಡೆ ಮಿಥ್ಯವ ನುಡಿವುದು ಮತ್ತೊಂದೆಡೆಯೆನೆ ಯಾವುದು ಸಿದ್ಧಾಂತ ಮೊತ್ತವ ನೂಕುತ ಕಿಚ್ಚಡಿ ವೇದಕೆ ಮೊತ್ತವ ಕೊಳ್ಳುತ ಒಂದೇ ಅರ್ಥವ ಜೋಡಿಸಿ ಇದು ನೀತಿ8 ಬೌದ್ಧರು ಒಪ್ಪನು ಶ್ರುತಿಗಳ ದೇವನ ವೇದವ ಒಪ್ಪುವ ಮಾಯಾವಾದಿಯ ಬ್ರಹ್ಮನು ಸೊನ್ನೆಯಿಹ ವೈದಿಕ ವೇಷದ ಬೌದ್ಧನ ವಾದವೆ ಶೋಧಿಸಿ ನೋಡಲು ಮತ್ತೇನಿಲ್ಲವು ಚಿಂತಿಸೆ ಸರಿಯಿಷ್ಠೆ9 ತರತಮ ಬಹುವಿಧ ಭೋಗವ ಮುಕ್ತಿಲಿ ಇರುವುದು ಸಿದ್ಧವು ಶೃತಿಗಳ ನಂಬಲು ಜೀವರ ಭಿನ್ನತೆಯು ಸ್ಥಿರವೇ ಆಯಿತು ಇದರಿಂ ಮುಕ್ತಲಿ ಪರಿ ಬಗೆತಾ ವಿದಿತವೆ ಜಗದಲಿ ಭೇದವೆ ಸರ್ವತ್ರ10 ನಾಸ್ತಿಕ ವಾದವ ತಳ್ಳಿರಿ ಆಚೆಗೆ ನಾಸ್ತಿಕ ಬಂದನೆ ತಂದೆಯು ಇಲ್ಲದೆ ಕಾರ್ಯವು ಜಗವಿರಲು ಆತನು ನೊಡಿಹ ಜ್ಞಾನಿಗಳಿಲ್ಲವೆ ಪೊಗಳವೆ ಗೋತತಿಯು11 ಪ್ರಕೃತಿ ವಿಕಾರದ ಜಗವಿದು ವಿದಿತವೆ ವಿಕಲ ವಿಶೇಷದ ಜೀವನು ಹಾಗೆಯೆ ಉಭಯರ ಆಳುವನು ವಿಕಲ ವಿವರ್ಜಿತ ಸಕಲ ಗುಣಾರ್ಣವ ಸಕಲ ನಿಯಾಮಕ ಸರ್ವ ಸಮರ್ಥನು ಇರಲೇ ಬೇಕಷ್ಟೆ12 ನಿತ್ಯವು ಈತ್ರಯ ಸಿದ್ಧವು ಆದರೆ ನಿತ್ಯ ಪರಸ್ಪರ ಸಂಬಂಧ ತ್ರಯ ಜ್ಞಾನವೆ ಪುರುಷಾರ್ಥ ಉತ್ತಮ ನೊಬ್ಬನು ಅಧಮರು ಇಬ್ಬರು ಮತ್ತಿವರಲಿ ಹಾಗಧಮನು ಜೀವನು ಚೇತನ ಪ್ರಕೃತಿ ವರ13 ಸರ್ವ ಸ್ವತಂತನು ಒಬ್ಬನೆ ಇರದಿರೆ ಸರ್ವಾ ಭಾಸವೆ ಜಗವಿದು ಆಹುದು ಪ್ರಭು ದ್ವಯ ಕೂಡುವುದೆ ಸರ್ವಗ ಶಾಶ್ವತ ಪೂರ್ಣಾ ನಂದನು ಸರ್ವ ವಿಚಿತ್ರನು ಮುಕ್ತಿದನಿರದಿರೆ ಪ್ರಭು ಅವನೆಂತಾಹ14 ಶುರುಕೊನೆ ಮಧ್ಯವು ಇದ್ದ ದೇವಗೆ ಬರುವನೆ ಹೊಸ ಹೊಸ ದೇವನು ಪ್ರತಿಪ್ರತಿ ಕಲ್ಪದಿ ಯೋಚಿಸಿರಿ ಇರದಿರೆ ಸಕಲೈಶ್ವರ್ಯವು ಆತಗೆ ತರುವನು ನಂದದ ಸೃಷ್ಠಿಯ ಹೇಗವ ವರಸಮರಿಲ್ಲವಗೆ15 ಸುಳ್ಳಿರೆ ಜಗವಿದು ಪಾಲಿಪ ದೊರೆಯದ ಕಳ್ಳನೆ ಅಲ್ಲವೆ ಅಷ್ಠಕರ್ತುತ್ವವು ಕೂಡುವ ದ್ಹೇಗಿನ್ನು ಎಲ್ಲಾ ಜಗವಿದು ನಿತ್ಯಾ ನಿತ್ಯವು ಎಲ್ಲಾ ಸತ್ಯವೆ ಶ್ರುತಿಗಳ ನುಡಿಗಳು ಭೃತ್ಯರು ಜೀವಗಣ16 ನಿತ್ಯವು ಪ್ರಕೃತಿಯು ಜೀವರು ಈಶನು ಸತ್ಯವು ಇದುಯೆನೆ ಪಂಚಸುಭೇದವು ನಿತ್ಯವೆ ಎಲ್ಲೆಲ್ಲು ನಿತ್ಯ ಸುಖಂಗಳ ಬಯಸುವ ನಮಗವು ಹತ್ತವು ಕಾರಣ ಸರ್ವಸ್ವತಂತ್ರನು ದೇವನೆ ಸತ್ಯವಿದು17 ಚೇತನ ಪ್ರಕೃತಿಯೆ ಲಕ್ಷ್ಮಿಯು ತಿಳಿವುದು ಆತನ ರಾಣಿಯು ನಿತ್ಯಸುಮುಕ್ತಳು ನಿತ್ಯಾವಿಯೋಗಿನಿಯು ಚೇತನ ನಿಚಯದ ಚೇತನ ಹರಿ ಇಹ ಆತನೆ ದೊರೆ ಜಗ ಜಂಗಮ ಸ್ಥಾವರ ಸತ್ತಾದಾಯಕನು 18 ದೋಷ ವಿದೂರ ಅಶೇಷ ಗುಣಾರ್ಣವ ದಾಸ ಪೋಷನಿಜ ಮುಕ್ತಿದ ನಿರದಿರೆ ಭಜಿಸುವದೇಕವನ ಶ್ರೀಶನು ಬಿಡೆ ಜಡ ಚೇತನ ಚೇಷ್ಠೆಯು ನಿಹ ಉಲ್ಲಾಸದಿ ಭಜಿಸುವುದು 19 ಪರಿಮಿತ ಶಕ್ತನು ದೇವನು ಇದ್ದರೆ ಪರಿಮಿತ ಜೀವರ ತೆರವೇ ಆಹನು ಕಾರಣ ನಿಸ್ಸೀಮ ಹರಿಗುಣವಗಣಿತ ಸಿಗ ಸಾಕಲ್ಯದಿ ನಿರುಪಮ ಸುಖಜ್ಞಾನಾತ್ಮಕ ವಿಭುವರ ಅನಾದಿ ಸಿದ್ಧವಿದು 20 ಪ್ರಾಕೃತ ಗುಣಗಣ ವರ್ಜಿತ ದೇವನ ಜ್ಞಾನ ಸುದೃಷ್ಠಿಗೆ ಗೋಚರನು ಸ್ವೀಕೃತ ನಾದರೆ ಜೀವನು ಹರಿಯಿಂ ತಾಕಿಸಿ ದೃಷ್ಠಿಗೆ ತನ್ನನೆ ತೋರುವ ಭಕ್ತರ ಬಾಂಧವನು 21 ತರತಮ ಜ್ಞಾನದಿ ಗುಣ ಉತ್ಕರ್ಷವು ಬರುವುದು ಕಾರಣ ತಿಳಿಯುತ ಹರಿಪರ ಮೋಚ್ಛನು ಹೌದೆನ್ನಿ ಅರಿವುದು ಅತಿಪರಿ ಪಕ್ವದ ಭಕ್ತಿಯ ಮಾಧವ ಮೆಚ್ಚುವನು22 ವೇದಗಳಿಂದಲೆ ದೇವನು ವ್ಯಕ್ತನು ವೇದಗಳಿಂದಲೆ ಧರ್ಮಾಧರ್ಮವಿ ವೇಕವು ಸರಿಯಷÉ್ಠ ವೇದ ನಿಜಾರ್ಥವೆ ಸಚ್ಛಾಸ್ತ್ರಂಗಳು ಮೋದವೆ ದೊರಕದು ಬಿಟ್ಟರೆ ಇವುಗಳ ಸಾದರ ಭಜಿಸುವುದು23 ಬಿಂಬನು ಹರಿ ಪ್ರತಿ ಬಿಂಬನು ಜೀವನು ಬಿಂಬಾಧೀನವು ಪ್ರತಿ ಬಿಂಬನ ಚೇಷ್ಠೆಗಳೆಂತರಿತು ಉಂಬುತ ಮುದದಿಂ ಸುಖದುಃಖಂಗಳ ಬಿಂಬಕ್ರಿಯೆಯೆನುಸಂಧಾನವ ಗುರುವಿಂದರಿತು ಸಮರ್ಪಿಸಿ24 ಮೆಚ್ಚುಲು ಮಾಧವದಾವುದಸಾಧ್ಯವು ಅಚ್ಚುತನೊಲಿಮೆಗೆ ಹೆಚ್ಚಿದುದೇನಿದೆ ಕೊಚ್ಚುತಕಲಿ ಸೊಂಕು ತಚ್ಛಭಿಮಾನ ಫಲೇಚ್ಛೆಯ ತ್ಯಜಿಸುತ ಕಚ್ಛಪ ನೊಲಿಮೆಗೆ ವಿಧಿಯ ನಿಷೇಧವ ಮರೆಯದೆ ಗೈಯುತಲಿ25 ಪರ ಮೋಚ್ಚನು ವರಸಮರಿಲ್ಲವು ಸಿರಿ ವರ ವಿಧಿಪಿತ ಸೃಷ್ಠ್ಯಾದ್ಯಷ್ಠಸು ಕರ್ತನು ವಿಭುವೆಂದು ನಿರುಪಮ ನಿಖಿಳಾಗಮ ಪ್ರತಿ ಪಾದ್ಯನು ಸ್ವರತ ಸ್ವತಂತ್ರನು ಪೂರ್ಣಾನಂದನು ಎನ್ನುತ ಸಾರುತಲಿ26 ಸಾಮನು ಸರ್ವರ ಬಿಂಬನು ಸರ್ವಸು ನಾಮನು ಸರ್ವಾಧಾರನು ಜಡಜಂಗಮ ವಿಲಕ್ಷಣನು ಭೂಮನು ಭಕ್ತ ಪ್ರೇಮಿಯು ಸದ್ಗುಣ ಧಾಮನು ಪೂರ್ಣನು ನಿಜ ಸುಖ ಮುಕ್ತಿದನೆನ್ನುತ ಸಾರುತಲಿ27 ವಿಧಿ ಪರಿಸರ ವಿಪಶಿವ ಪ್ರಮುಖರು ಪರಿವಾರವು ನಿರವದ್ಯನು ಮುಕ್ತಾ ಮುಕ್ತರ ನಾಯಕನು ಉರುಗಾಯನ ಜಗದೊಳ ಹೊರವ್ಯಾಪ್ತನು ಪರಿಮರ ಸ್ವಗತ ಭೇದ ವಿವರ್ಜಿತನೆಂಬುದ ಸಾರುತಲಿ28 ತರತಮ ಪಂಚಸುಭೇದವು ನಿತ್ಯವು ನಿರುತದಲುಂಬುವ ಸಾರವೆ ದುಃಖ ನಿರ್ಲೇಪನು ಅದ್ಭುತನು ಅರಿಯರು ಯಾರೂ ಇವನೇ ವಲಿಯದೆ ಪುರುಷೋತ್ತುಮ ಸಾಕಲ್ಯದವಾಚ್ಯನು ಎಂದು ಡಂಗುರ ಹೊಡೆಯುತ 29 ಗುರುವಿನ ದ್ವಾರವೆ ಹರಿತಾ ವಲಿಯುವ ಗುರುವೆನೆ ಮುಖ್ಯದಿ ಮುಖ್ಯ ಪ್ರಾಣನೆ ಸರಿಸಿರಿ ಯೆಂತೆಂದು ಗುರುಗಳು ಹಿರಿಯರು ಎಲ್ಲಾ ಕ್ರಮದಲಿ ಮಧ್ವರಿಗೊಂದಿಸಿ ಮುದದಿ 30 ಅನುಭವವಿಲ್ಲದ ಜ್ಞಾನವು ವಣವಣ ಸಾಧನೆ ಇದು ಖರೆಯ ಚಿನುಮಯ ನೊಲಿಸಲ್ ಮನೆಧನ ಬೇಡವು ತನುಮನೆ ವಿಷಯಗಳಿಂದಲೆ ಪೂಜಿಪ ಕ್ರಮದಿಂಯಜಿಸುತ 31 ಕಲಿಯುಗವಿದು ವರ ಸುಲಭದಿ ಸಾಧನೆ ವಲಿಯುವ ಬೇಗನೆ ನಾಮ ಸ್ಮರಣೆಗೆ ಭಜಿಸಿರಿ ಹರಿನಾಮ ವಳದಾರಿಯು ಸರಿ ಕ್ರಮದಿಂ ಪಾಡಲು ಮುಳುಗುತ ಭಕ್ತಿಯ ಕಡಲೊಳ್ ನಿಜಹರಿ ದಾಸರು ದೀಕ್ಷೆಯಲಿ32 ಕವಿಗುರು ರಾಜರ ಚರಣದಿ ಬಾಗುತ ಪವನ ಮತಾಂಬುಧಿ ಸೋಮನು ಜಯಮುನಿ ಹೃದಯಗ ವಾಯುವಲಿ ಅವಿರತ ನಲಿಯುವ ಶ್ರೀ ಕೃಷ್ಣವಿಠಲನು ತವಕದಿ ವಲಿಯುವ ಗ್ರಹಿಸಲ್ ಈ ಪದ ಜಯ ಜಯವೆನ್ನುತ33
--------------
ಕೃಷ್ಣವಿಠಲದಾಸರು
ತಾನಾರು ತನುವು ಆರು ತಿಳಿದು ನೋಡಿ ಧ್ರುವ ತಾನಾರು ತನುವಾರು ತನ್ನೊಳೂ ತಾನೆ ತಿಳಿದು ನೋಡಿ ಘನ ಬ್ರಹ್ಮದೊಳು ಮನ ಬೆರೆದಾತ ಶರಣನು 1 ಕಾಯದೊಳಿಹ್ಯ ಕಳವಳಗಳೆದು ಮಾಯ ಮೋಹದ ಮಲಗಳ ತೊಳೆದು ದೇಹ ವಿದೇಹವಾದಾತ ಶರಣನು 2 ಭ್ರಾಂತಿಯ ಅಭಾವಗಡಿದು ನೀತಿ ಸುಪಥದ ಮಾರ್ಗವ ಹಿಡಿದು ಜ್ಯೋತಿ ಸ್ವರೂಪವ ಕಂಡಾತ ಶರಣನು 3 ಭಾವ ಭಕ್ತಿಯ ಕೀಲವ ತಿಳಿದು ಹ್ಯಾವ ಹೆಮ್ಮೆಯ ಮೂಲವನಳಿದು ಜೀವ ಶಿಶುವು ತಿಳಿದಾತ ಶರಣನು4 ಜಾತಿಯ ಕುಲಗಳ ಭೇದವ ತಿಳಿದು ಯಾತನೆ ದೇಹದ ಸಂಗವನಳಿದು ಮಾತಿನ ಮೂಲವ ತಿಳಿದಾತ ಶರಣನು 5 ಸೋಹ್ಯ ಸೊನ್ನೆಯ ಸೂತ್ರವಿಡಿದು ಲಯ ಲಕ್ಷಿಯ ಮುದ್ರೆಯ ಜಡಿದು ದ್ಯೇಯ ಧ್ಯಾತವ ತಿಳಿದಾತ ಶರಣನು 6 ನಾದದಿಂದ ಕಳೆಯ ಮುಟ್ಟಿ ಸಾಧಿಸಿ ಉನ್ಮನ ಮುದ್ರೆಯ ಮೆಟ್ಟಿ ಆದಿತತ್ವದ ಗತಿ ತಿಳಿದಾತ ಶರಣನು 7 ಆಧಾರ ದೃಢದಿಂದ ಅರಹುತನಾಗಿ ಮಧ್ಯ ಮುಪ್ಪರದಲಿ ಸ್ಥಿತಿವಾಗಿ ಊಧ್ರ್ವ ಮಂಡಲಗತಿ ಬೆರೆದಾತ ಶರಣನು 8 ಬಾಹ್ಯಾಂತ್ರ ಪರಿಪೂರ್ಣ ಘನಮಯಗಂಡು ಸಾಯೋಜ್ಯ ಸದ್ಗತಿ ಸವಿಸುಖನುಂಡು ಮಹಿಪತಿ ಗುರುಮನಗಂಡಾತ ಶರಣನು 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಾಮರಸ ನೆರೆನಂಬಿದೆ ಪೊರೆಯೆನ್ನನು ಪ ಜನನ ಮರಣವಿದೂರ ನೀನಾಜನಪತಿಯ ತನುಜಾತನೆ ಅನಿಮಿಷೇಶರಿಗೊಡೆಯನೆನಿಸಿದೆ 1 ಶ್ರೀರಮಣಿಯನಾದಿಕಾಲದಿ ನಾರಿಯನಿಪಳು ನಿನ್ನಗೆ ಮಾರಹರಶರಮುರಿದು ಹರುಷದಿ ವಾರಿಜಾಕ್ಷೆಯ ವರಿಸಿದೆ 2 ಮೂಜಗತ್ಪತಿಯಂದಿಗೆಂದಿಗು ರಾಜ್ಯತೊಲಗಿದನೆನಿಸಿದೆ ಈ ಜಗದೊಳಿಹ ಅಜ್ಞ್ಞಜನರಿಗೆ ಸೋಜಿಗವ ನೀತೋರಿದೆ 3 ಶ್ರೀಲಕುಮಿ ಪತೆ ನಿನ್ನ ಮಹಿಮಾ ಜಾಲದಿವಿಜರು ತಿಳಿಯರು ನೀಲಮೇಘಶ್ಯಾಮ ಶಿಲೆಬಾಲೆ ಮಾಡಿದು ಚೋದ್ಯವೆ 4 ಮುತ್ತುರತ್ನ ಕಿರೀಟ ಶಿರದಲಿ ಇತ್ತಿಹ್ಯರ್ಕಶತÀಪ್ರಭಾ ನೆತ್ತಿಯಲಿ ಜಡೆಧರಿಸಿ ವಲ್ಕಲ ಪೊತ್ತು ತಿರುಗುವುದುಚಿತವೇ 5 ಕುಜಭವ ಭವರರ್ಪಿಸಿದ ಎಡೆ ಭುಂಜಿಪುದು ನೀವಿರÀಲವೋ ಅಂಜಿಕಿಲ್ಲದೆ ಭಿಲ್ಲಹೆಂಗಳೆಯಂಜಲವ ನೀ ಮೆದ್ದಿಯಾ 6 ಮಂಗಳಾಂಘ್ರಿಯ ಭಜಿಪಯೋಗಿ ಜನಂಗಳಿಗೆ ನೀನಿಲುಕದೆ ಮಂಗಗಳಿಗೆ ನೀನೊಲಿದಿಯಾ 7 ಹಾಟಕಾಂಬರ ತಾಟಕಾರಿ ವಿರಾಟ ಮೂರುತಿ ಎನ್ನಯ ಕೋಟಲೆಯ ಕಡುತಾಪದಿಂಕಡೆದಾಟಿಸೆನ್ನನು ಜವದಲಿ 8 ಭಾರವಿಲ್ಲದೆ ಅಖಿಲಜಗಸಂಹಾರ ಮಾಡುವಿಯನುದಿನ ಕ್ರೂರರಾವಣ ಮುಖ್ಯದನುಜರಹೀರಿ ಬಿಸುಟಿದು ಜೋದ್ಯವೆ 9 ಶಾಂತಿಯ ಪೆÇಂದಿದ ಹರನ ಪೂಜಿಯಗೈದಿಯಾ 10 ವಾರಿಜಾಭವ ಮುಖ್ಯದಿವಿಜರು ಪಾರುಗಾಣದೆ ಮಹಿಮನೆ ಸಾರಿ ಭಜಿಸುವ ಭಕ್ತರಿಗೆ ಕೈವಾರಿಯಂದದಿ ತೋರುವಿ 11 ತಾಮಸರ ಸಂಗದಲಿ ನೊಂದೆನು ಕಾಮಕ್ರೋಧದಿ ಬೆಂದೆನು ಈ ಮಹಿಗೆ ನಾಭಾರವಾದೆನು ಪ್ರೇಮದಿಂದಲಿ ಪಾಲಿಸು 12 ನಿನ್ನಧ್ಯಾನವ ತೊರೆದು ನಾಬಲು ಅನ್ಯವಿಷಯದಿ ರಮಿಸಿದೆ ಎನ್ನ ದೋಷಗಳೆಣಿಸದಲೆ ಕಾರುಣ್ಯಸಾಗರ ಕರುಣಿಸು 13 ಹೀನ ವಿಷಯಾಪೇಕ್ಷೆ ಬಿಡಿಸಜ್ಞಾನತಿಮಿರವ ನೋಡಿಸು ಮೌನಿ ಮಧ್ವಾರ್ಯರ ಮತದ ವಿಜ್ಞಾನ ತತ್ವವ ಬೋಧಿಸು 14 ಸಾಮಗಾನವಿಲೋಲ ರಘುಜನೆ ನೇಮದಿಂದಲಿನೀಯನ್ನ ನಾಮವನೆ ಪಾಲಿಪುದು ಸಚಿದ್ಧಾಮ ವರದೇಶ ವಿಠಲನೆ15
--------------
ವರದೇಶವಿಠಲ
ತಿರುಪತಿಯ ಶ್ರೀ ವೆಂಕಟೇಶ ಕಮಲ ಪ ಹೇಮಮುಖದೀ ನದಿಯ ಕಂಡೇ ಗೋಮಿನೀ ಪದ್ಮಾವತಿ ಕಂಡೆಭೂಮಿಸುರರ ಮೇಳವ ಕಂಡೆ ಆ ಮಹಾ ಗಾಳಿಗೋಪುರ ಕಂಡೆ 1 ಸ್ವಾಮಿ ಪುಷ್ಕರಿಣೀಯ ಕಂಡೆ ಭೂಮಿ ವರಹಾ ದೇವರ ಕಂಡೆರಾಮದೂತನ ಪಾದವ ಕಂಡೆ ಸ್ವಾಮಿಯ ಮಹಾದ್ವಾರವ ಕಂಡೆ 2 ಹರಿಯು ಅಡಗಿದ ಹುತ್ತನು ಕಂಡೆ ಹರಿಯಧ್ವಜದ ಸ್ತಂಭವ ಕಂಡೆಪರಿಪರಿ ವೈಭವವನು ಕಂಡೆ ಪರಮಪುರುಷನಾ ಮೂರ್ತಿಯ ಕಂಡೆ 3 ಹರಿಹರಿ ಎನ್ನುವರನು ಕಂಡೆ ಹರಿದು ಒಳ ಪೋಗುವರನು ಕಂಡೆಹರಿಣಾಂಜನದ ತಾಡನ ಕಂಡೆ ಮಣಿಮಯಿಮುಕುಟವನು ಕಂಡೆ 4 ಹಣೆಯಲ್ಲಿಯ ನಾಮವ ಕಂಡೆ ಅನುಪಮಾದಂಗವನೂ ಕಂಡೆಕೊರಳ ಸರಗೀ ಸರಗಳ ಕಂಡೆ ಹರಳು ರತ್ನದಾಭರಣಗಳನು ಕಂಡೆ 5 ಉರದಿ ಶ್ರೀ ಭೂದೇವಿಯರ ಕಂಡೆ ಕರದಿ ಶುಭಶಂಖ ಚಕ್ರಗಳ ಕಂಡೆಗುರು ಶ್ರೀವಾದಿರಾಜರ್ಪಿಸಿದ ವರ ಶಾಲಿಗ್ರಾಮ ಹಾರವ ಕಂಡೆ 6 ಉದಗಿ ಪೀತಾಂಬರವ ಕಂಡೆ ನಡುವಿನೊಡ್ಯಾಣವನು ಕಂಡೆಜಡಿದ ಮಣಿಗಣ ಭೂಷಣನ ಕಂಡೆ ಜಡಜನಾಭನ ಮೂರ್ತಿಯ ಕಂಡೆ 7 ಅಂದದೀ ಕಾಲ್ಗಡಗವ ಕಂಡೆ ಸುಂದರ ಪಾದಗಳ ಕಂಡೆಮಂದಹಾಸ ಮುಖಾಬ್ಜ ಕಂಡೆ ಇಂದಿರೆಯ ರಮಣನ ಕಂಡೆ 8 ಆಗಮ ಶೃತಿ ಘೋಷವ ಕಂಡೆ ಭಾಗವತರಾ ಮೇಳವ ಕಂಡೆಬಾಗಿಲಾ ಬಲ ಹಸ್ತವ ಕಂಡೆ ಭಾಗೀರಥಿಯಾ ಪಿತನವ ಕಂಡೆ 9 ಚಿನ್ನದ ಕೂಪವನೂ ಕಂಡೆ ಅನ್ನಪೂರ್ಣಾದೇವಿಯ ಕಂಡೆರನ್ನದ ಹರಿವಾಣವ ಕಂಡೆ ಉಂಬುವ ವೈಭವವನು ಕಂಡೆ 10 ಕಪ್ಪದ ಕಣಜವನೂ ಕಂಡೆ ತಪ್ಪದೇಹಾರುವವರನು ಕಂಡೆಇಪ್ಪತ್ತು ದುಡ್ಡಿಗೆ ತೀರ್ಥ ಒಪ್ಪಿಲೇಮಾರುದನುರನು ಕಂಡೆ 11 ಸಾಸಿರ ನಾಮಗಳ ಒಡೆಯಾ ವಾಸುದೇವಾಚ್ಯುತನ ಕಂಡೆಕಾಸಿಗೆ ಕೈಚಾಚುವಂಥ ಕೇಸಕ್ಕ ತಿಮ್ಮಪ್ಪನ ಕಂಡೆ 12 ಆವ ಜನುಮದ ಸುಕೃತವೋ ಎನಗೆ ಭೂವೈಕುಂಠವನ್ನೇ ಕಂಡೆಶ್ರೀವಿಧಿಭವಾದಿ ವಂದ್ಯ ಐಹೊಳಿ ವೆಂಕಟೇಶನ ಕಂಡೆ 13 ಶುಭ ಮಂಗಲಂ ಸಿರಿಗೆಜಯ ಪುದವೀ ಪದ ಕೇಳಿ ಪೇಳಿದರೆ ಒಲಿದು ಫಲವೀವ ಕುಲಸ್ವಾಮಿ ಅವರೀಗೆ 14
--------------
ಐಹೊಳೆ ವೆಂಕಟೇಶ
ತಿಳಿಯಲೋ ರನ್ನಾ ನಿನ್ನೊಳು ನಿನ್ನ ಪ ಅನ್ನವ ನೀಡು ತುಪ್ಪವ ಕೊಡುಚೆನ್ನಾಗಿ ಉಣ್ಣುವವನಾರೋ ಅವನಾರೋ 1 ಹೋಳಿಗೆ ಹಿಸುಕಿ ಹಾಲೊಳು ಕುಸುಕಿಹೋಳಿಗೆ ಉಂಬವನ್ಹೆಸರೇನೋ ಹೆಸರೇನೋ2 ಜಡಕೆಯು ಇಲ್ಲಾ ಇದೆಲ್ಲಾಮೃಢ ಚಿದಾನಂದ ನೀನೆನ್ನು ನೀನೆನ್ನು 3
--------------
ಚಿದಾನಂದ ಅವಧೂತರು
ತುಂಗೆ ಬಂದಳು ದೇವೋತ್ತುಂಗ ವರಹನಾ ಮುಂಗೋರಿಯಲ್ಲಿ ಪುಟ್ಟಿ ಭಕ್ತ ನಿಕರನಾ ಹಿಂಗದೆ ಪೊರೆದು ಸುಖಂಗಳನೀವು ತಾ ಮಂಗಳಾಂಗೆ ಮಾತಂಗೆ ಸುಗಮನೆ ಪ ಕಾಳ ಪನ್ನಗವೇಣಿ ಕೋಕಿಲವಾಣಿ ಫಾಲ ಕಸ್ತುರಿ ಜಾಣೆ ಪಲ್ಲವಪಾಣಿ ವಾಲೆ ಮೂಗುತಿ ಅಣಿ ಮುತ್ತು ಕಠಾಣಿ ತೋಳು ಮಂದಾರಮಣಿ ಅರಿಗುಣಶ್ರೇಣಿ ಮೌಳಿಯಾ ಮೇಲಿನ ಜಾಳಿಗೆ ಸೂಸುಕಾ ವಾಲಲು ಕದಿಪಿನ ನೀಲಗೂದಲು ಭ್ರಮ ರಾಳಿಗಳಂತಿರೆ ಬಾಲ ಸುಧಾಕರ ಪೋಲುವ ವದನೇ1 ಕುಡುತೆಗಂಗಳ ನೀರೆ ಕಂಬುಕಂಧರೆ ಕಡಗ ಕಂಕಣದ್ವಾರೆ ಕೈಯ ಶೃಂಗಾರೇ ಜಡಿವ ಪದಕಹಾರೆ ಕಂಚಕಸೀರೆ ಮುಡಿದ ಪುಷ್ಪಂಗಳು ಮರೆ ಕುಚಗಳು ಅದರೆ ಬಡನಡುವಿನ ಕಡು ಉಡುವಿನ ಕಿಂಕಣಿ ಒಡನುಡಿಸುವ ಗೆಜ್ಜೆ ಕಾಲಂದಿಗೆ ಪೆಂಡೇ ಅ ಡಿಗಡಿಗೊಪ್ಪಲು ಕಡಲನ ಮಡದಿ 2 ತೀಡಿದ ಪರಿಮಳ ಗಂಧದ ಭೋಗಿ ಕೂಡಲಿಪುರದಲಿ ಭದ್ರಿವಂದಾಗಿ ಕೂಡಿ ಸೂಸಿದಳಂದು ಮುಂದಕ್ಕೆ ಸಾಗಿ ಆಡುತ ಪಾಡುತ ಬಲು ಲೇಸಾಗಿ ಬೇಡಿದ ಜನರಿಗೆ ಈಡಿಲ್ಲದ ವರವ ನೀಡುತ ನಿರುತರ ಮಾಡುತ ದಯವನು ನೋಡುತ ತಡವಿಲ್ಲದಲೆ 3 ಶೃಂಗಾರ ಮಾರ್ತಾಂಡೆ ಹರಿಹರ ಮಾತಾ ಅಂಗಾಧಿ ಪರ್ವತ ಪಂಚ ಪ್ರಖ್ಯಾತ ಹಿಂಗದೆ ಬಲಗೊಂಡು ಕೊಡ್ಲೀಗೆ ಬರುತ ಸಂಗೀತ ಗಾಯನದಿಂದ ವಾಲಗಗೊಳುತ ಸಂಗಮೆಯಾಗಿ ತಂಗಿಯ ಬೆರತೀಗ ಮಂಗಳ ಕ್ರೀಡೆಯಲ್ಲಿ ಪ್ರವೇಶಿಸಿ ಗಂಗೆ ಎನಿಸಿಳ್ಯಮನನಾದೇಳಗೆ 4 ಲೋಕದೊಳಗೆ ಪ್ರತಿರಹಿತ ಪೆಸರಾದ ಚೀಕನ ಬರವಿಯ ಅಶ್ವಥಮರದ ನೃಕಂಠೀರವನ ಪಾದದಿ ವ್ಯಾಧಿಷ್ಟರಾದ ಸೋಕಿ ಮೈಮರೆದಂಥ ನಮಿತರು ಕರದಾ ಪಾಕ ಪದಾರ್ಥಕೆ ಒಲಿದೊಲಿದಾಡುತ ಶ್ರೀಕರ ವಿಜಯವಿಠ್ಠಲಗೆರಗುತ ನಾಕಕನ್ನಿಕೆಯಂತೆ ಹೊಳೆದಳುಯಿಂದು5
--------------
ವಿಜಯದಾಸ
ತುಪಾಕಿ ಬಾರೊ ಮಾಡೊ ಮನುಜ ತುಪಾಕಿ ಬಾರೊ ಮಾಡೊ ಪ ತುಪಾಕಿ ಬಾರೊ ಮಾಡೊ ಸೊಬಗಿನಿಂದ ನೀ ಭುಜಗಶಯನ ಶ್ರೀಹರಿಯ ಧ್ಯಾನವೆಂಬ ಅ.ಪ ಚಿತ್ತಶುದ್ಧಿಯೆಂಬ ಮದ್ದು ತುಂಬಿ ಭರ್ತಿಮಾಡಿಕೊಳವೆಯ ಸತ್ಯಗುಣವೆಂಬ ಛಡಿ ಪಿಡಿ ದೊತ್ತಿ ಜಡಿಯೊ ಭಕ್ತಿ ಬಾಹ್ವಿನಿಂದ ಎತ್ತಿ ಸಾಮಥ್ರ್ಯದಿ ಮಿಥ್ಯದೇಹವನು ಹತ್ತಿ ಬೇಂಟೆನಾಡೊ 1 ಅಂಟಿಕೊಂಡು ಬರುವ ಬೇಗ ತಿಳಿ ಎಂಟು ಕೋಣನ ಸುಳಿವ ಗಂಟಲಕ್ಕೆ ಹಾರುತಿರುವ ಆರುಹುಲಿ ಬಂಟನಾಗಿ ತರಿಯೆಲವೊ ವೈ ಕುಂಠನ ಕೃಪೆಯೆಂಬ ಬಂಟಬಲವು ಕೂಡಿ ಬೇಂಟೆನಾಡೆಲೊ 2 ಮೂರುಮಂದಿರವ ಕಟ್ಟಿಕೊಂಡು ಧೀರನಾಗಿ ನಲಿಯೊ ಸಾರಿಬರುವ ಏಳು ಕೊಳ್ಳಗಳ ಹಾರಿ ಮುಂದಕೆ ನಡೆಯೊ ಘೋರ ದುರ್ಗುಣ ಮೃಗ ಸೂರೆಮಾಡಿ ಮಹಧೀರ ಶ್ರೀರಾಮನ ಚಾರುಚರಣ ಸೇರು 3
--------------
ರಾಮದಾಸರು
ತುಪಾಕಿ ಸಾಧನವನು ತ್ವರಿಯ ಬಿದ್ದು ಮಾಡುತಿರುವೆಶಾಬಾಸು ಶಿವನೇ ನೀನಣ್ಣ ಪೇಳುವೆನಣ್ಣ ಪ ಮೌನವೆಂದೆನಿಪ ಮುಸೈದೆ ಸಹಿತಾಗಿಜ್ಞಾನ ಪಡೆದಳವ ಬಗಿಯಣ್ಣಾ ಸಾಧಿಸು ಅಣ್ಣಧ್ಯಾನವೆಂದೆನಿಪ ತಲೆಕಟ್ಟನೆ ಕಟ್ಟಿಆನಂದವನೆ ಆಡಣ್ಣ ಸಾಧಿಸು ಅಣ್ಣ 1 ಆರು ಚಕ್ರವೆಂಬ ಆರು ಕಟ್ಟಿನ ತುಪಾಕಿಧೀರತನದಿಂದ ಪಿಡಿಯಣ್ಣಾ ಸಾಧಿಸು ಅಣ್ಣಮೂರಾವಸ್ಥೆಯೆಂಬ ಮೂವೆರಳ ಮದ್ದ ಹೊಯ್ದಪೂರಾಯದವನ ಮಾಡಣ್ಣ ಸಾಧಿಸು ಅಣ್ಣ2 ಇಡಾಪಿಂಗಳವೆಂಬ ಎರಡು ಗುಂಡನೆ ಹಾಕಿರೂಢಿ ಎಂಬ ಗಜವ ಜಡಿಯಣ್ಣ ಸಾಧಿಸು ಅಣ್ಣಕೂಡಿಹ ಸತ್ವನೆಂಬ ಕೂರಿ ರಂಜಕವರೆದುಗೂಡು ಗುರು ಜಾವಿಗೆ ಒತ್ತಣ್ಣ ಸಾಧಿಸು ಅಣ್ಣ 3 ಆಸನ ನಳಿಕೆಯೆಂಬ ಆಧಾರವನೆ ಆಂತುವಾಸರ ಹೊಗ್ಗೊಡಬೇಡಣ್ಣ ಸಾಧಿಸು ಅಣ್ಣನಾಸಿಕಾಗ್ರವು ಎಂಬ ನೊಣನ ದಿಟ್ಟಿಸಿ ನೋಡಿಸೂಸದೆ ಏರಿಸಿ ನಿಲ್ಲಣ್ಣ ಸಾಧಿಸು ಅಣ್ಣ4 ಬರಿಯ ಪ್ರಣವವೆ ಎಂಬ ಬೆರಳ ಬೊಬ್ಬೆಯನಿಟ್ಟುಭರದಿ ಭೀತಿಯನಳಿಯಣ್ಣಾ ಸಾಧಿಸು ಅಣ್ಣಗುರು ಚಿದಾನಂದನು ಎಂಬ ಗುರಿ ಭ್ರೂಮಧ್ಯವೆ ಇರೆಗುರಿಯ ತಾಗುವಂತೆ ಇಡಣ್ಣ ಸಾಧಿಸು ಅಣ್ಣ5
--------------
ಚಿದಾನಂದ ಅವಧೂತರು
ಥಳ ಗುಟ್ಟೊಳುತೊಬ್ಬಳೆವಾಗೆದ ತಾ ವಳಗುಟ್ಟಲೆ ದಟ್ಟದ ಬೆಳಗು ತಾಂ ತಿಳಿಗೊಟ್ಟರೆ ಸದ್ಗುರು ಭಾಸುದು ತಾ ಕಳೆಮುಟ್ಟಿದು ನೋಡಲು ಶಾಶ್ವತ 1 ಅರಿಯೊ ಸುರಿಯೊ ಪರಮಾಮೃತ ಬೆರಿಯೊ ಗುರುವೆಂದು ನೀ ಸುಗುರುತಾ ಜರಿಯೊ ಮರಿಯೊ ಮದಗರ್ವನೆ ತಾ ನೆರಿಯೊ ಗುರುಪಾದಕೆ ನೀ ತ್ವರಿತ 2 ತಿಳಿ ಸರ್ಕನೆ ನಿನ್ನೊಳು ಬ್ಯಾಗ ತಾ ಅಳಿ ತರ್ಕದ ಮಾತಿನ ಗರ್ವನೆ ತಾ ತೊಳಿ ನರ್ಕಕೆ ಬೀಳುವ ತಾಮಸ ತಾ ಸುಳಿ ಗರ್ಕನೆ ಸದ್ಗುರು ಪಾದÀದಿ ತಾ 3 ಬಿಡು ಮರ್ಕಟ ಬುದ್ಧಿಯ ಭಾವನೆ ತಾ ಕೂಡು ಸರ್ಕನೆ ಸುಮ್ಮನೆ ಗುರುವಿಗೆ ತಾ ಸುಡು ನರ್ಕಕೆ ಬೀಳುವ ಪಾಶÀವ ತಾ ತೊಡು ಮರ್ಕಟವಾದ ಸದ್ಗುಣ ತಾ 4 ಹಿಡಿಯೊ ಪಡಿಯೊ ದೃಢಭಾವನೆ ತಾ ಜಡಿಯೊ ಒಡನೆ ಗುರುಪಾದನಿ ತಾ ಕಡಿಯೊ ಬಿಡದೆ ಭವಬಂಧನ ತಾ ಅಮೃತ 5 ನಡಿಯೊ ನುಡಿದಂತೆನೆ ಸನ್ನಮತ ಹಿಡಿಯೊ ಪಡೆದಂತೆನೆ ಪಾದವ ತಾ ಇಡದಂತೆನೆ ತುಂಬೆದ ಸದ್ಘನ ತಾ ಕಡೆಗಾಂಬುದು ನೋಡಿದು ಶಾಶ್ವತಾ 6 ತಿಳಿಯೊ ಬಳಿಯೊ ಒಳಗುಟ್ಟನೆ ತಾ ಹೊಳಿಯೊ ಸುಳಿಯೊ ನೆಲಿಗೊಂಡಿದು ತಾ ಕಳಿಯೊ ಅಳಿಯೊ ಅನುಮಾನವ ತಾ ಕಳೆಕಾಂತಿಯ ನಿನ್ನೊಳು ತುಂಬ್ಯದ ತಾ 7 ಒಳಗುಟ್ಟನೆ ಸಾಧಿಸಿ ನೋಡುವು ದೆಲ್ಲಾ ಥಳಗುಟ್ಟುದು ಸಾಸಿರ ಪದ್ಮ ದಳ ನೆಲೆಗೊಂಡರೆ ವಾಗುವ ತಾ ಸಫಲಾ ತಿಳಕೊಂಬುದು ಸದ್ಗುರು ಸ್ವಾಮಿ ಬಲ 8 ಬಿಡಬಾರದು ಸಂಗತಿ ಸಜ್ಜನರ ಹಿಡಿಬೇಕಿದು ಒಂದೇ ನೋಡಿ ಸ್ಥರ ಅಡಿ ಇಟ್ಟನೆ ಬಾಹುದು ಪುಣ್ಣಿದರಾ ಪಡಕೊಂಡರೆ ಅಹುದು ಇಹಪರ 9 ತಡಮಾಡದೆ ನೋಡುವುದೀ ಸುಪಥ ಪಡಿಬೇಕಿದು ಒಂದೇ ಸುಸ್ವಹಿತ ಒಡಗೂಡದೆ ಬಾರದು ಕೈಗೂಡಿ ತಾ ಎಡಬಲಕೆ ತುಂಬಿದೆ ತುಳುಕುತ 10 ಜಾಗರ ತಾ ಎಡಿಎಡಿಗೆ ಸಂದಿಸಿ ತುಂಬಿದೆ ತಾ ಬಡಿಸಿಟ್ಟೆದ ಭಾಗ್ಯದ ನಿಧಿಯು ತಾ ಪಡಕೊಳ್ಳೆಲೊ ಮಹಿಪತಿ ಪೂರ್ಣಹಿತ11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಡಿಗ ಮಾನವನೆ ಪ ಸೂನು ಹೆಡತಲೆಯಲಿ ನಗುವ ಅ.ಪ. ಬಾಲನು ನಾನು ಭಾಗ್ಯಶಾಲಿಯೆನುತ ನಿತ್ಯ ಲೀಲ ವಿನೋದವೆಂಬ ಜಾಲದೊಳು ಸಿಲುಕಿ ಕಾಲವ ಕಳೆದು ಮಾಲೋಲನ ಮರೆತಂಥ ಮಾನವ ಪಶುಪಾಲನಾದವ ನಿನಗೆ 1 ತಾಸು ತಾಸಿಗೆ ನೀನು ಲೇಸಾಗಿ ಭುಂಜಿಪೆ ಬೇಸರಿಲ್ಲವೊ ನಿನಗೆ ರಾಸಿ ಭೋಗಗಳಲಿ ಕಾಸುವೀಸವ ಕೊಡೆ ಹರಿದಾಸರಾದವರಿಗೆ ದೋಷಕಾರಿಯೆನಿಸಿದ ಹೇಸಿಕೆ ಮನದವನೆ 2 ಕಡುಪ್ರಿಯರೆಂದೆನಿಸುವ ಮಡದಿ ಮಕ್ಕಳು ಎಂಬ ಬೆಡಗು ತೋರುವ ಮೋಹ ಮಡುವಿನೋಳ್ಬಿದ್ದು ಒಡೆಯ ಶ್ರೀ ರಂಗೇಶವಿಠಲರೇಯನ ಪಾದ ಜಡಜವ ನಂಬದೆ ನೀ ಕೆಡಬೇಡ ಮನುಜ 3
--------------
ರಂಗೇಶವಿಠಲದಾಸರು
ದಂತಿಗಮನೆಯರು ಹರುಷದಲಿ ನೀಲಕುಂತಳೆಯ ರತಿರೂಪ ವಂತೆಯರು ಸೊಬಗು ಶ್ರೀ ಕುಂಕುಮವ ಸಂತವಾಡಿದರೂ ಪ ಕಳಹಂಸ ಗಿಳಿವಿಂಡುಗಳ ತಂಡ ಮಧುರದಿಂ ಕೆಲವ ಕೋಗಿಲೆಯ ವಿಹಗಾಳಿಗಳ್ ಪೊಳೆವ ಚೆಂದಳಿರ ವನದೊಳು ಮಂಟಪವ ರಚಿಸಿ ಲಲನೆಯರು ಚೆಲುವಿನಲಿ ಕೊಳವ ಸಿಂಗರಿಸಿ ಜಲಜ ನೈದಿಲೆಯ ಪೂವಲಿಯದೊಲ್ಘೇಂಕರಿಪ ಬಳಸಿನಲಿ ಕೊಳಗುತಿಪ್ಪಳಿಗಳಿಂ ಶೋಭಿಸುವ ಸಲಿಲದೊಳು ಮಲಯಜ ಸುಲಲಿತ ಕುಂಕುಮವೆರಸಿ ಸಲೆ ಪ್ರಹುಡೆ ಕೆಳನಲಿದು ಸಂತಸದೀ 1 ಮಂದಗಮನೆಯರು ಪೂರ್ಣೇಂದುವದನೆಯರು ಶುಭ್ರ ಕುಂದರದನೆಯರು ಅರವಿಂದ ನೇತ್ರೆಯರು ಗೋ ವಿಂದನೈತರಲು ಪೊನ್ನಂದಣದಲಿದಿರುಗೊಳ್ಳೆ ಕುಂದಣದ ರತ್ನಗಳಲಿ | ಬಂದಿಸಲು ದಂಡೆಗಳ ಚೆಂದದಿಂ ಪಿಡಿದು ಮಕರಂದಮಂ ಪೂರಯಿಸಿ ಕಂದರ್ಪಜನಕನನು ಸಂದಣಿಸಿ ತಮತಮಗೆ ಮುಂದುವರಿದು ಲೋವಿಡಿದು ಆನಂದದಿ ಸೂಸಿದರೂ 2 ಪದುಮಗಂಧಿಯರು ಸನ್ಮøದು ಕೀರವಾಣಿಯರು ಚದುರೆಯರ್ತೊಂಡೆವಣ್ಣಧರೆಯರು ಪೇರ್ಮೈಯ ಮದದ ಮದ್ದಾನೆಯರು ಸುದತಿಯರು ಸೌಂದರ್ಯ ಪದಪು ಗಾತಿಯರು ಬಂದೊದಗಿ ಮೂದಲಿಸಿ ಮಧುಸೂದನನ ಬಿಡದಿದಕೋ ಪಿಡಿಪಿ ಮೋಹ ನದ ಬಲೆಯನು ಬೀಸೆನುತ ಯುವತಿಯರುಗಳು ಮುದದಿಂದ ಬೆಂಗೊತ್ತಿ ಪ್ರಣಯ ಕದನದಿಂ ಸೋಲಿಸುತ ಎದೆಗೆಡಿಸಿ ನವಪರಿಮಳದಿ ಮುಸುಕಿದರೂ 3 ಅಡಿಗಡಿಗೆ ಬಟ್ಟ ಪೊಂಗೊಡ ಮೊಲೆಗಳಲುಗುತ್ತ ಕಾ ರಡಿಗಳಂ ಪೋಲ್ವ ಪೇರ್ಮುಡಿ ಸಡಿಲೆ ಹಾರಗಳ ಜಡೆಯಲೊಯ್ಯನೆ ಸಣ್ಣ ನಡು ಬಳುಕೆ ಲಾವಣ್ಯ ವೆಡೆಬಿಡದೆ ಕೋಮಲೆಯರೊಡನೆ ತವದಕಲೀ ಸಡಗರದಿ ಕುಸುಮಗಳ ಎಡೆಬಿಡದೆ ಬೀರೆ ಸೊಂ ಪಡರ್ದಂಗಲತೆಗಳಿಗೆ ತೊಡದ ಮನ್ಮಥಶರವ ಪತಿ ವಿಡಿದು ಮಡದಿಯರು ಅಲರ್ದೊಡೆಯದೊಡಿಸಿದರೂ 4 ತೊರೆದು ಮುಂಬರಿಯೆ ಯೌವನದ ಪೀತಾಂ ಬರದ ನೆರಿಗಳೋಸರಿಸೆ ಮುಂಜೆರಗನೆಳೆವುತ ವಾಮ ಕರದಂಗುಳಿಗಳಿಂದ ಕುರುಳ ನೇವರಿಸುತಾ ತುರದ ತರುಣಿಯರು ಶ್ರೀಹರಿಯ ತರುಬಿದರೂ ಸರಸಿ ಜಾಂಬಕನ ಪೇರುರವ ಕುಚಗಳ ಕೊನೆಯ ಲಿರಿದು ನಿಲ್ಲಿಸಿ ನಿಲ್ಲು ಹೋಗಬೇಡೆನುತ ಯುವತಿಯರು ಧರೆಯೊಳತ್ಯಧಿಕ ಸುರಪುರದ ಲಕ್ಷ್ಮೀಪತಿಯ ಸರಸನೆ ವವಿಡಿದು ಮೇಲ್ವರಿಯೆ ವೊಲಿಸಿದರೂ 5
--------------
ಕವಿ ಲಕ್ಷ್ಮೀಶ