ಒಟ್ಟು 693 ಕಡೆಗಳಲ್ಲಿ , 94 ದಾಸರು , 583 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣಿಕೆಯನು ತಂದೆ ನಿನ್ನಡಿಗೆ ಪ ಹಾರಿಸಿಕೊಂಬುವ ಶೂರನೆಂದು ತಂದೆ ಮುರಾರಿ ವಿಚಾರಿಸಿ 1 ಇಲ್ಲದ ವಸ್ತುವಿಗಲ್ಲವೆ ಲೋಕದೊಳೆಲ್ಲರ ಮಾನಸರುಲ್ಲಾಸವೂ ನಿಲ್ಲದೆ ದುರಿತಗಳೆಲ್ಲ ಸೇರಿಸಿಕೊಂಡು 2 ಬರಿಕೈಯೊಳೆಂದಿಗು ಬರಲಾಗದೆಂದು ತಂದೆನೈ ವರದ ವಿಠಲ ಹರಿ3
--------------
ಸರಗೂರು ವೆಂಕಟವರದಾರ್ಯರು
ಕಾಮಾನ ಜನನಿಯೆ ಸೋಮಾನ ಸೋದರಿ ಸಾಮಾಜ ವರದನ ಪ್ರೇಮವ ಕೊಡಿಸಮ್ಮ ಪ ನೇಮಾದಿಂದಲಿ ಹರಿ ನಾಮಾವ ನುಡಿಸುತ ತಾಮಾಸ ಓಡುವಂತೆ ನೀಮಾಡಬೇಕಮ್ಮ ಅ.ಪ ನಿತ್ಯ ತೃಪ್ತಳೆನಿನ್ನ ನಿತ್ಯದಿ ಬೇಡಿಕೊಂಬೆ ಭೃತ್ಯರೊಳಗೆ ಎನ್ನ ಎತ್ತಿ ಸೇರಿಸೆ ತಾಯೆ || ಮತ್ತನಾಗದೆ ಭವದಿ ಉತ್ತುಮನೆನಿಸುತ ಆತ್ಮದಿ ಹರಿ ತೋರಿ ಕೃತಕೃತ್ಯನೆನಿಸಮ್ಮ 1 ದೇಶಕಾಲದಿನೀನು ಶ್ರೀಶಗೆ ಸಮಳಮ್ಮ ನಾಶಮಾಡುತ ದೋಷ ದಾಸಾನು ಎನಿಸಮ್ಮ || ಶ್ವಾಸಾಶೇಷರನೆಲ್ಲ ಲೇಸಾಗಿ ಆಳುವಳೆ ವಾಸುದೇವನಲ್ಲಿ ಆಸೇಯ ನೀಡಮ್ಮ 2 ಶೃತಿಯಲ್ಲಿ ನೀನಿದ್ದು ಸ್ತುತಿಸೀ ಶ್ರೀಹರಿಯನ್ನ ಮತ್ತೆಸೃಜಿಸುವಂತೆ ಎತ್ತಿಗಾನವ ಮಾಳ್ವೆ || ಎತ್ತ ನೋಡಲು ಬಲು ಕತ್ತಲೆಕಣಿ ತಾಯೆ ಸತ್ಯವ ಬಿಡದಂತೆ ಹತ್ತೀಸೆ ಹರಿದಾರಿ3 ಹರಿಯಂತೆ ಅವತಾರ ನಿರುತನೀ ಮಾಡುತ ಪರಿ ರೂಪದಿಂದ ಪರಿಚರಿಯ ನೀಮಾಳ್ವೆ || ಸರ್ವೇಶ ಹರಿಯಿಂದ ಸರ್ವಕಾಲದಿ ಕೂಡಿ ಸರ್ವಕಾರ್ಯವ ಮಾಳ್ವೆ ಸರಿಯಾರೆ ನಿನಗಮ್ಮಾ 4 ಅಕ್ಷರ ರೂಪಳೆ ಈಕ್ಷಿಸುಕರುಣದಿಂದ ತ್ರ್ಯಕ್ಷೇಶ ವಿಧಿಮಾತೆ ಅಕ್ಷರನರ್ಧಾಂಗಿ || ಕುಕ್ಷೀಲಿ ಬ್ರಹ್ಮಾಂಡ ಲಕ್ಷ್ಯವಿಲ್ಲದೆ ಪಡೆದಿ ಅಕ್ಷಯ ಮಾಡಿ ಜ್ಞಾನ ಮೋಕ್ಷಾವ ಕೊಡಿಸಮ್ಮಾ5 ವಿಕಾರ ಶೂನ್ಯಳೆ ಪ್ರಕೃತಿಗೆ ಮಾನಿಯೆ ನೀಕಾರ್ಯ ಕಾರಣಕ್ಕೆ ಮುಖ್ಯ ಹೇತುವೆ ತಾಯೆ || ಪ್ರಕೃತಿ ಬಂಧವ ಬಿಡಿಸಿ ಸಾಕಾರ ಮೂರುತಿ ಲೋಕನಾಯಕ ಹರಿಯ ಏಕಾಂತದಲಿ ತೋರೆ6 ತ್ರಿಗುಣ ಕಾರ್ಯಗಳೆಲ್ಲ ಸುಗುಣಿ ನೀ ಮಾಡುತ ನಿತ್ಯ ಪೊಗಳಿ ಹಿಗ್ಗುವೆ ಮಾತೆ || ಜಗವೆಲ್ಲ ಕುಣಿಸುತ ನಗುತಲೀಲೆಯಿಂದ ನಿಗಮಾದಿಗಳ ಮೀರಿ ಬಗೆ ಬಗೆ ಲೀಲೆ ಕಾಂಬೆ 7 ನಿತ್ಯಾ ಮುಕ್ತಳು ನೀನು ಪ್ರೀತಿಲಿ ನಮಿಪೆನೆ ಮಾತುಲಾಲಿಸಿ ಎನ್ನ ನಿತ್ಯದಿ ಸಲಹೆಮ್ಮ || ಹೆತ್ತ ತಾಯಿಯು ನೀನು ಎತ್ತಿ ಪೊರೆಯದಿರೆ ಎತ್ತ ಪೋಗಲಿ ನಾನು ಉತ್ತುಮರಮೆ ಹೇಳೆ 8 ಸಾಗರನ ಮಗಳೆ ಆಗಮರೂಪಳೆ ಹೋಗೀಸುಲಿಂಗವ ಸಾಗಿಸಿಗುಣಕಾರ್ಯ || ಭಾಗ್ಯ ಸ್ವರೂಪಳೆ ಬಾಗಿ ನಮಿಸುವೆ ಆಗು ಮಾಡಿಸು ಹರಿ ಗೀತೆಗಳೆನ್ನಿಂದ 9 ಮರುತ ದೇವನ ಪಿತನ ಉರದಲಿ ವಾಸಿಪಳೆ ಹರಿಗುರು ಚರಣದಿ ನಿರುತ ಭಕ್ತಿಯ ಕೊಟ್ಟು || ವಾರಿಜನಾಭನಲ್ಲಿ ಧಾರೆ ಧಾರೆಯ ಭಕ್ತಿ ಸಾರಸ ದಳನಯನೇ 10 ಮಾತು ಮಾತಿಗೆ ನಮ್ಮ ಖ್ಯಾತಾಜಯತೀರ್ಥ ನವನೀತ ಧರಿಸೀಹ || ಶ್ರೀ ತಾಂಡವ ಕೃಷ್ಣ ವಿಠಲರಾಯನ ಸ್ಮರಣೆ ಆತ್ಮಾದೊಳಗೆ ನಿಂತು ಖ್ಯಾತೀಲಿನಡಿಸಮ್ಮಾ 11
--------------
ಕೃಷ್ಣವಿಠಲದಾಸರು
ಕಾರಣನೇ ಇವನು ಎಲ್ಲಕ್ಕೂ ಕಾರಣನೇ ಇವನು ಪ ಕಾರಣನಿವನು ಸಾಧಾರಣನಲ್ಲನು ಮಾರಮಣನು ಕರುಣಾರಸಮಯನು ಅ.ಪ ಇಚ್ಛೆಯಿಂದಲಿ ತಾನು ಅಖಿಲ ಜಗ ತ್ಸøಷ್ಟಿಯ ಮಾಡುವನು ಸ್ವಚ್ಛನಾದರು ತನ್ನ ಮೆಚ್ಚಿಗೆಯಿಂದಲಿ ತುಚ್ಛನೆಂಬೊ ಶಬ್ದ ವಾಚ್ಯನಾಗಿರುವನು 1 ಎಲ್ಲವ ಬಲ್ಲವನು ಈಶನು ಇಲ್ಲದ ಸ್ಥಳವಿಲ್ಲ ಚಿಲ್ಲರೆ ದೈವಗಳೆಲ್ಲರು ಈತನ ಚೆಲ್ಲಾಟಗಳಿಗೆ ಉಲ್ಲಾಸಿಸುವರು 2 ಭಿನ್ನರೂಪಗಳಿಂದ ಜಗದೊಳು ತನ್ನ ಲೀಲೆಯ ತೋರ್ಪ ಸನ್ನುತ ಭಕುತಗೆ ಮನ್ನಣೆಯಿಂದ ಪ್ರ ಸನ್ನನಾಗಿ ಉನ್ನತ ಪದವೀಯಲು 3
--------------
ವಿದ್ಯಾಪ್ರಸನ್ನತೀರ್ಥರು
ಕಾಲ ಬಂತು ಪ್ರಜೆಗೆ ಎಷ್ಟು ಪೇಳ್ವರೇನು ಕೆಲಸ ದಿಟ್ಟ ಅರಿಗಳನು ಕುಟ್ಟಿ ತೆಗೆಯದಿದ್ದಮೇಲೆ ಪ ದಂಡು ಬಂತು ಎಂದು ಜನರು ಗಂಡು ಹೆಣ್ಣು ಮಕ್ಕಳೆಲ್ಲ ಕಂದುಗಳನು ಕಟ್ಟಿ ಗೋವಿನ ಹಿಂಡ ನೆಲ್ಲ ದಾರಿಗೊಳಿಸಿ ಕಂಡ ಕಡೆಗೆ ಹೋಗಿ ಸೇರಿಕೊಂಡುಯಿರಲು ಸೋವಿನಿಂದ ದಂಡಿನವರು ದಾರಿಗಟ್ಟಿಕೊಂಡು ಸುಲಿದು ಕಡಿದ ಮೇಲೆ 1 ಅಲ್ಲಿ ಬಂತು ಇಲ್ಲಿ ಬಂತು ಎಂದು ಬೆದರಿಕೊಂಡು ಕುಣಿಗಳಲ್ಲಿ ಭತ್ತಭಾಂಡವಿಕ್ಕಿ ನಿಲ್ಲದೆಲ್ಲ ಊರಬಿಟ್ಟು ಕಲ್ಲು ಮುಳ್ಳು ಗುಡ್ಡಕಾನಿನಲ್ಲಿ ಸೇರಿಕೊಂಡು ಬಚ್ಚಿಯಿಟ್ಟ ವಸ್ತು ವಡವೆ ಅಲ್ಲಿ ನಷ್ಟವಾದ ಮೇಲೆ 2 ಮತ್ತೆ ಕುದುರೆಯಿಲ್ಲ ಮಂದಿಹೊತ್ತು ಪ್ರಜೆಗಳನ್ನು ಮಾರ್ಗ ದೊತ್ತಿನಲ್ಲಿ ತರುಬಿ ನಿಂದು ಕತ್ತಿಯನ್ನು ಕಿತ್ತು ಗೋಣ ಬರಿಸಿ ಯಾವತ್ತು ವಡವೆ ವಸ್ತುಗಳನು ಮತ್ತು ಮತ್ತು ಸುಲಿದಮೇಲೆ 3 ಮುಟ್ಟು ಪಟ್ಲೆ ಸಹಿತವರಡಿಯೆತ್ತ ಕೊಟ್ಟು ಬೀಳ ಭೂಮಿ ನಷ್ಟ ತೆತ್ತು ಹಳೆಯ ಅರಿವೆ ಬಟ್ಟೆಗಟ್ಟಿ ಬೀದಿ ಬದಿಗೆ ಹಿಂಡು ಗುರಿಯ ಕೆಟ್ಟ ಗೌಡಿ ದ್ವಿಗುಣಿಸಂಕ ತೆತ್ತು ಕೊಟ್ಟು ಪ್ರಜೆಗೆ ಘಟ್ಟ ಬೆಟ್ಟ ವಾಸ ವಾದಮೇಲೆ 4 ಇಕ್ಕಿ ಕದವ ರಾಜ್ಯವನ್ನು ಹೊಕ್ಕು ಅರಿಗಳೆಲ್ಲ ಸುಲಿದು ಸೊಕ್ಕಿನಿಂದ ಪಾಳ್ಯವನ್ನು ಹೊಕ್ಕರಯ್ಯ ನಮ್ಮ ಕಡೆಗೆ ದಿಕ್ಕಕಾಣೆ ಪ್ರಜೆಗಳನ್ನು ರಕ್ಷಿಸುವರು ಬೇರೆಉಂಟು ನಂಬಿ ಜನರು 5
--------------
ಕವಿ ಪರಮದೇವದಾಸರು
ಕಾಲು ತೊಳೆದವನೊಬ್ಬ ತೊಳೆಸಿಕೊಂಡವನೊಬ್ಬ ಮೌಳಿ ಮೇಲಾಜಲವ ಸತತ ಧರಿಸಿದನೊಬ್ಬ ಪಾಲಿಸುವ ಪ್ರಭುವೊಬ್ಬ ಕೊಲುವ ತಳವಾರನೊಬ್ಬ ಮೂರ್ಲೋಕವರಿಯೆ ಪುಟ್ಟಿಸಿದ ಪಿತನೊಬ್ಬ ಆಲೋಚನೆಯ ಬಲ್ಲವಗೆ ಸಂಶಯ ಸಲ್ಲ ಮಾಲೆಯನು ಮಹಲಕ್ಷುಮಿ ಹಯವದನಗಿತ್ತಳಾಗಿ 1 ರಾವಣನ ಕೊಂದ ಪಾಪವ ಕಳೆಯಬೇಕೆಂದು ದೇವ ರಘುಪತಿ ಸದಾಶಿವನ ಪೂಜಿಸಿದ ಗಡಾ ಆ ವಿಧಿಯ ಒಂದು ತಲೆಯನು ಕಡಿದ ಮಾತ್ರದಿಂದ ಆವಾಗ ಕರದಲ್ಲಿ ಇಹ ಕಪಾಲವ ಕಾಣನೆ ದಾವಘದೊಳು ಪೊರಳುವನ ದಾವಾತ ಭಜಿಸುವನು ಜೀವರಿಗೆ ಉಳ್ಳಷ್ಟು ವಿವೇಕ ಹಯವದನಗಿಲ್ಲವೆ 2 ರಾಮಾಯಣದ ಕತೆಯು ಮಹಾಪುಣ್ಯ ಕಥೆಯು ಗಡಾ ರಾಮ ರಾವಣನ ಕೊಂದದ್ದು ಮಹಾಪಾಪ ಗಡಾ ಆ ಮನುಮುನಿಗಳೆಲ್ಲ ಪಾಪಕಂಗೀಕರಿಸಿದರೆ ಸ್ವಾಮಿಯು ಲಯದಿ ಬೊಮ್ಮನ ಮೊದಲು ಕೊಲಿಸದೆ ಧೀಮಂತ ಹಯವದನ ಕೊಂದ ಹಿರಣ್ಯಕ ಮುಖ್ಯ ತಾಮಸ ದಿತಿಜರು ಕಶ್ಯಪ ಋಷಿ ಸುತರಲ್ಲವೆ3 ಶ್ರುತಿಯಿವ ಕರ್ಮಣಾನೋಕನೀಯ ಎಂದು ತುತಿಸುತಿರೆ ನಿಮ್ಮ ನಿರ್ಗುಣ ಬೊಮ್ಮಗೆ ಕರ್ಮವುಂಟೆ ಕ್ಷಿತಿಯೊಳಗೆ ರಾವಣನ ವಧೆಯ ಮಾಡಿದ ಸೇತುಪತಿಯ ಪಾವನನೆನಲು ಅವನ ಕೊಂದವನ ಪತಿತಪಾವನನೆಂಬುದೆ ಕುಚಿತ್ತಯುಕುತಿಯು ಸತತ ಹಯವದನನೊಬ್ಬನೆ ಶುದ್ಧ ಕಾಣಿರೊ 4 ಒಂದು ಕಡೆಯಲಿ ವಿಭೀಷಣನ ಪ್ರತಿಷ್ಠಿಸಿದನು ಮ- ತ್ತೊಂದು ಕಡೆಯಲಿ ಸದಾಶಿವನ ಪೂಜಿಸಿದ ಇಂ- ತೆಂದು ಪುರಾಣಗಳು ಕೂಗುತಿವೆ ತ್ರಾಸಿನೊಳು ಹೊಂದಿಸಿ ಸಮನೆಂದು ತೂಗಿ ತೋರು ಮದದಲಿ ಸಂದೇಹ ಸಲ್ಲ ಹಯವದನ ರಘುಪತಿಗಿಬ್ಬರು ಸಂದ ಭಕುತರೆಂಬುದು ಸಲೆ ಸುಪ್ರಸಿದ್ಧ 5 ಸೇತುವೆಯ ಕಂಡ ನರರಿಗೆ ಬ್ರಹ್ಮಹತ್ಯಾದಿ ಪಾತಕವು ಬಿಡುವುದೆಂಬ ಶ್ರುತಿಯ ಮನ್ನಿಸಲು ಖ್ಯಾತ ಬೊಮ್ಮನ ತಲೆಯ ಕಡಿಯೆ ಕರದಲಿಕೊಟ್ಟ ತಾ- ಸುಕೃತ ಸೇತುಮುಖದಿಂದ ಸೀತೆಯರಸನು ಶಿವನ ನಿಲ್ಲಿಸಿ ಪ್ರತಿಷ್ಠಾಪಿಸಿದ ಜಗನ್ನಾಥ ಹಯವದನ ಭಕ್ತರಬಂಧು ಕಾಣಿರೊ 6 ರಾಮ ಶ್ರೀರಾಮರಾಮೇತಿ ರಮೆಯೆಂಬ ಆ ಮಹಾದೇವ ಭಗವದ್ಭಕ್ತನಲ್ಲವೆ ಸ್ವಾಮಿ ತನ್ನ ಭಕ್ತರÀನು ಪ್ರತಿಷ್ಠಿಸಿದ ನಿ- ಸ್ಸೀಮ ಕರುಣಾಂಬುಧಿ ಮಹಾಮಹಿಮನೆಂಬರು ಭ್ರಾಮಕದ ನುಡಿಗೆ ಮರುಳಾಗದಿರು ಹಯವದನ ರಾಮಚಂದ್ರನೆ ಕಾಶಿಯ ತಾರಕಬೊಮ್ಮ ಕಾಣಿರೊ 7 ಕಾಶಿಯಲಿ ರಾಮಮಂತ್ರೋಪದೇಶವ ಮಾಳ್ಪ ಈಶ ಜಾಣರ ಮತದಿ ಜಗಕೆ ಗುರುವೆಂತೆಂಬ ಆ ಶಿವನ ಮಂತ್ರದೇವತೆ ತಾರಕಬೊಮ್ಮಯೆನಿಪ ವಾಸುದೇವನೆ ಜಗಕೆ ಪರದೈವ ಕಾಣಿರೊ ಈ ಸುತತ್ವÀವ ಪೇಳ್ವ ಹರಗೆ ನಮ್ಮ ಹಯವದನ ಏಸುಮನ್ನಣೆ ಮಾಡಿದರುಚಿತ ಕಾಣಿರೊ 8 ಕರವ ಶಿರದ ಮೇಲೆ ಇರಿಸಬಂದ ಖಳಗಂಜಿ ಹರ ಸಕಲ ಸುರೇಶ್ವರರ ಅರಮನೆಗಳಿಗೆ ಪೋಗಿ ಪರಿಹರವ ಕಾಣದೆ ನಮ್ಮ ಸಿರಿವರನ ಮರೆಹೊಗಲು ಪÀರಿಣಾಮವನು ಪೊರೆದ ಗಡಾ ಶರಣರಕ್ಷಕನೆಂಬ ಬಿರುದುಳ್ಳ ಹಯವದನ ಹರಿಯಲ್ಲದೆ ಪಿರಿದೊಂದು ಪರದೈವವಿಲ್ಲವಯ್ಯ 9 ರೋಮಕೋಟಿಲಿಂಗನೆನಿಸಿದ ಹನುಮನೊಂದು ರೋಮಕೆ ಕೋಟಿ ಶಿವರ ಮಾಡುವ ಶಕ್ತ ಕಾಣಿರೊ ಆ ಮಹಾತ್ಮನ ತನ್ನ ಆಳುಮಾಡಿ ನಡೆಸಿಕೊಂಡ ರಾಮಚಂದ್ರನೆ ಜಗಕ್ಕೆ ಪರದೈವ ಕಾಣಿರೊ ಸ್ವಾಮಿ ಹಯವದನ ವೇದವ ತಂದು ಕಮಲಜನ ಕಾಮಿತವನಿತ್ತನಾಗಿ ಅವನೆ ಜಗದೊಡೆಯ 10 ನೂರು ರುದ್ರರು ಪೇಳೆ ಕಾರ್ಯವಾದರೇನವರು ಈರೇಳು ಜಗವ ಸಂಹರಿಸಲರಿಯರು ಗಡಾ ಕಾರ್ಯವಿಲ್ಲದ ಶಿವರ ಪೇಳಲದ್ವೈತಮತ ಹಾರಿಹೋಗದೆ ಬರಿದೆ ಹಲವು ಹಂಬಲಿಸದೆ ಶ್ರೀರಮಣ ಹಯವದನನೊಡಂಬಟ್ಟನಿ ಬರನು ದೂರ ಕಳಚಿದನೆಂದು ಪೂರ್ವದವರನೆ ನಂಬು 11 ಯಾತ್ರೆಯ ಮಾಡಿಸಿಕೊಂಡು ಹರ ಹಿರಿಯ ತಾನಾಗಿ ಯುಕ್ತಿ ಬಾಧಕವಾಯಿತ್ತು ಹರಿಹರರೊಳೈಕ್ಯ ಚಿತ್ರ ನಿನ್ನ ಮತಕೆ ನೀನೆ ಶತ್ರುವಾದೆ ಪ್ರತ್ಯುತ್ತರವ ಪೇಳೆ ಪರಾಜಯ ಬಾರದಿಹುದೆ ಮತ್ತೆ ನೆನೆಯೊ ಶ್ರೀಹಯವದನಗಿದು ಲೀಲೆಯಾದರೆ ಸತ್ವ ಹೆಚ್ಚಿತು ಸರ್ವೋತ್ತಮನೆಂಬ ಶ್ರುತಿಗೆ 12 ವಂದ್ಯಮಾನಂ ಪಿತಾನಾಂ ಪ್ರತಿ ಪ್ರಮಾಣಂ ಎಂದು ರುದ್ರನ ಕೂಡೆ ಶ್ರುತಿ ಪೇಳಿತಾಗಿ ತಂದೆ ಮಕ್ಕಳ ಮನೆಗೆ ಪೋದಂತೆ ಪೋಗಿ ಮು- ಕುಂದ ಮೊಮ್ಮಗನಿಗೆ ಹಿರಿತನವ ಕೊಡಲೆಂದು ಮುಂದೆ ಜನಿಸುವ ಕಿರಿಯ ಕುವರರೊಳು ತನ್ನ ಕಂದನ ಸೃಜಿಸಿದ ಹಯವದನ ಚತುರನಲ್ಲವೆ 13 ಸುರರು ದ್ವಾರಕಾಪುರ ಯಾತ್ರೆಯಲಿ ಪಾಲಸಾಗರಯಾತ್ರೆ ಗರ್ಭಯಾತ್ರೆ ಕಳೆಯೆ ಶೂಲಧರ ಖಳಗಂಜಿ ಭುವನವೆಲ್ಲವ ಸುತ್ತಿ ಶ್ರೀ- ಲೋಲನಿಹ ವೈಕುಂಠಯಾತ್ರೆಯಿಂದ ಬದುಕನೆ ಭೂಲೋಕದಲಿ ಪುಟ್ಟಿ ಹಯವದನ ಕೃಷ್ಣ ಮಾಡಿದ ಕೈಲಾಸಯಾತ್ರೆ ಕೈವಲ್ಯಪತಿಗೆ ಲೀಲೆ 14 ಹರನಾರು ಪುರಾಣಗಳು ವಿರಿಂಚನಾರು ಪುರಾಣಗಳು ಹರ ವಿರಿಂಚರವಲ್ಲವೆಂದು ಹಿರಿಯರೆ ಮನ್ನಿಸಲಾಗಿ ಪರಮ ಸಿದ್ಧಾಂತಕೋವಿದರೆನಿಪ ಬುಧರಿಗೆ ಪುರಾಣಗಳ ಮ್ಯಾಲೆ ಮಾಡುವ ಪರಮಾದÀರ ಸಲ್ಲದಯ್ಯ ದುರಾಗ್ರಹವ ಮಾಡಬ್ಯಾಡ ಗುರುಮತವ ಬಿಡಬ್ಯಾಡ ಸಿರಿ ಹಯವದನನಾರುಪುರಾಣಗಳ ನೋಡಿರೊ 15 ಒಂದು ಬೊಮ್ಮಚಿತ್ತು ಒಂದು ಜೀವಚಿತ್ತು ಇಂ- ತೆಂದು ಶ್ರುತಿಸ್ಕಂಧÀ ಚೇತವೆಲ್ಲ ಗ್ರಂಥ[ಆ]ಸ್ಯ ದಿಂದ [ಒರೆಯೆ] ಹರಿಜಡನೋ ಹರಜಡನೋ ಮಂದಹಾಸದಿಂದ ಜಡರು ಮನುಮುನಿಗಳೆಲ್ಲ ಇಂಥ ಶಿವನ ವಹಿಸಿಕೊಂಡು ವಾದಿಸುವರು ಹಿಂದು ಮುಂದರಿಯರೆಂದು ಹಯವದನ ನಗನೆ 16 ಯಂ ಬ್ರಹ್ಮವೇದಾಹಂ ಬ್ರಹ್ಮ ವೇದಶ್ರುತಿಶಬ್ದ ಬ್ರಹ್ಮ- ವೆಂಬ ವೇದ ಬೋಧಿಸಿತಾಗಿ ಇಂಥ ಮನುಜರಿಗೆಲ್ಲ ಭಾವಾಭಾವ ಪೇಳ್ವ ಹೊಂದಿಬದುಕು ಹಯವದನನ ಚರಣವ ಹೊಂದಿಬದುಕೊ ಜೀವ ಹರಿಯೆ ನಾನೆನ್ನಬ್ಯಾಡ 17
--------------
ವಾದಿರಾಜ
ಕಾವೇರಿ ಕಲುಪಾಪಹಾರಿ ಪಾವನ ಶರೀರೆ ಶುಭತೋಷಕಾರಿ ಪ ವಾಸುದೇವ ರಂಗೇಶನಾಲಯಕೆ ನೀ ನಾವರಣಳಾಗಿಪ್ಪೆ ವಿರಜೆಯಂತೇ ದೇವ ಋಷಿ ಗಂಧರ್ವ ಪಿತೃಪ ನರವರರಿಂದ ಸೇವನೀಯಳಾಗಿ ಸರ್ವಾರ್ಥ ಪೂರೈಪೆ 1 ಜಲಚರಾನ್ವೇಷಣ ಲುಬ್ಧ ಸಾಲಿಗ್ರಾಮ ತುಲಸಿ ವೃಕ್ಷವನೆ ಕೊಡಿಸಿದ ಮಾತ್ರದೀ ಕಲುಷರಾಶಿಗಳೆಲ್ಲ ಕಳೆದು ಮುಕ್ತಿಯನಿತ್ತೆ ಸಲಿಲಮಂದಿರೆ ನಿನ್ನ ಕರುಣಕೇನೆಂಬೆ 2 ರವಿ ತುಲಾರಾಶಿಗೈದಿದ ಸಮಯದೊಳಗೊಂದು ಮಜ್ಜನ ಗೈವ ಮಾನವರಿಗೆ ಪವನಾಂತರಾತ್ಮಕನ ಪಾದಕಮಲವ ತೋರಿ ಭವಜ ರೋಗವ ಕಳೆದು ಭಾಗ್ಯವಂತರ ಮಾಳ್ಪೆ 3 ಶ್ರೀ ಪವನ ಶಿವರಿಂದ ತಾ ಪೂಜೆಗೊಳುತ ಬಹು ಪರ ಮನು ವ್ಯಾಪಿಸಿಹ ನಿನ್ನೊಳದ್ಯಾಪಿ ಸ್ವರ್ಗಸ್ಥ ಜನ ರೀ ಪೊಡವಿಯೊಳು ತವ ಸಮೀಪದಲಿ ಜನಿಸುವರು 4 ಮೂಢಮತಿ ನಾನು ಕೊಂಡಾಡ ಬಲ್ಲೆನೆ ನಿನ್ನ ಬೇಡಿಕೊಂಡೆನು ಹೃದಯ ನೀಡದೊಳಗೇ ಗೂಡ ಪದ ಶಯನ ಜಗನ್ನಾಥ ವಿಠ್ಠಲನಂಘ್ರಿ ನೋಡುವ ಸೌಭಾಗ್ಯ ದಯ ಮಾಡು ಪ್ರತಿದಿನದಲ್ಲಿ ಬ 5
--------------
ಜಗನ್ನಾಥದಾಸರು
ಕಾಳಿಂಗನಾ ಮೆಟ್ಟೆ ನಾಟ್ಯವಾಡಿದ ಕಂಜನಾಭ ಕೃಷ್ಣನು ಪ ಕಾಳಿಂಗನಾ ಮೆಟ್ಟಿ ಆಡಿದ ಭರದಲ್ಲಿಶ್ರೀವತ್ಸ ಉರದಲ್ಲಿ ಕೊರಳಲ್ಲಿ ವನಮಾಲೆತರಳತನದಲ್ಲಿ ಯಮುನೆಯ ಮಡುವಿನಲ್ಲಿಆಡುತ್ತ ಪಾಡುತ್ತ ಅ.ಪ. ಕಾಲಲಿ ಗೆಜ್ಜೆ ಘಲುಘಲು ಘಲುಕೆನ್ನೆಫಾಲದಿ ತಿಲಕವು ಹೊಳೆ ಹೊಳೆಯುತ್ತಜ್ವಲಿತ ಮಣಿಮಯ ಲಲಿತ ಪದಕಹಾರಜ್ವಲಿತ ಕಾಂತಿ ಬೆಳಗುತ ದಿಕ್ಕುಗಳಲ್ಲಿ 1 ಸುರರು ತಥ್ಥೈತಥ್ಥೈಯೆನ್ನಲುನಾರದ ತುಂಬುರ ಸಿದ್ಧರು ವಿದ್ಯಾ-ಧರರು ಅಂಬರದಲ್ಲಿ ಆಡುತ್ತ ಪಾಡಲು 2 ಯೋಗಿಗಳೆಲ್ಲ ಜಯ ಜಯ ಜಯಯೆನ್ನೆಭೋಗಿಗಳೆಲ್ಲ ಭಯಭಯ ಭಯವೆನ್ನೆನಾಗಕನ್ಯೆಯರು ಅಭಯ ಅಭಯವೆನ್ನೆನಾಗಶಯನ ಸಿರಿಕೃಷ್ಣ ಜನನಿಯ ಕಂಡುಬೇಗನೆ ಬಿಗಿದಪ್ಪಿ ಮುದ್ದನು ತೋರಿದ3
--------------
ವ್ಯಾಸರಾಯರು
ಕೃಷ್ಣ ದ್ವೈ ಪಾಯನ ಕೃಪಣವತ್ಸಲ ಪರ ಮೇಷ್ಠಿ ಜನಕನ ತೋರೊ ಪ ಅನಿಮಿಷ ಕುಲಗುರು ಆನಂದತೀರ್ಥ ಸ ನ್ಮುನಿಮತ ವಿಮಲಾಂಬುಜಾ ಅ.ಪ. ದಿನಕರ ದಯದಿ ನೋಡೆನ್ನನು ಬಾದರಾ ಯಣ ನಾಮಧೇಯರ ತನಯ ಸಂಯಮಿ ವರ 1 ಭೀಮ ತರಂಗಿಣಿ ಬದಿಗನೆನಿಸಿ ಸೀತಾ ಕರ್ಮ ಗುಣಕೀರ್ತನಗೈವ ನಿರ್ಮಲಾತ್ಮಕನ ಸತ್ಪ್ರೇಮದಿ ಸಲಹುವ ಸುಜನ ಶಿರೋಮಣಿ 2 ವಿಗತದೇಹಾಭಿಮಾನಿಯೆ ನಿಮ್ಮೊಡನೆ ನಿತ್ಯ ಹಗೆಗೊಂಬ ಪಾಪಿಗಳ ವಿಗಡಕರ್ಮಗಳೆಲ್ಲ ಮರೆದು ವಿಶ್ವವ್ಯಾಪಿ ಜಗನ್ನಾಥ ವಿಠಲ ಸ್ವತಂತ್ರ ಕರ್ತಯೆಂಬಾ 3
--------------
ಜಗನ್ನಾಥದಾಸರು
ಕೃಷ್ಣಚಿತ್ತ ಕೃಷ್ಣಚಿತ್ತ ಕೃಷ್ಣಚಿತ್ತ ಎನ್ನಿರೊ ಪ. ಕೃಷ್ಣಧ್ಯಾನದಿಂದ ಪರಮ ತುಷ್ಟರಾಗಿ ಸುಖದುಃಖ ಕಷ್ಟ ಕರ್ಮಂಗಳು ಎಲ್ಲ ಅಷ್ಟು ಹರಿಯಾಧೀನವೆಂದು ಅ.ಪ. ಜನನವಾದ ಕಾಲದಿಂದ ಇನಿತು ಪರ್ಯಂಕಾರದಲ್ಲಿ ಅನುಭವಿಸಿದಂಥ ಕರ್ಮ ಗುಣನಿಧಿಯಾಧೀನವೆಂದು1 ಕಷ್ಟದಲ್ಲಿ ಕಳೆದ ಕಾಲ ಅಷ್ಟರಲ್ಲೆ ಪಟ್ಟ ಸುಖ ಕೊಟ್ಟ ಹರಿಯು ಎನಗೆ ಎನುತ ಕೆಟ್ಟ ವಿಷಯ ಮನಕೆ ತರದೆ 2 ಕಾಮ ಕ್ರೊಧ ಲೋಭ ಮೋಹ ಆ ಮಹಾ ಮದ ಮತ್ಸರಗಳು ಕಾಮಿಸಿ ಮನ ಕೆಡಿಸುತಿರಲು ಶ್ರೀ ಮನೋಹರನಾಟವೆಂದು 3 ಪೊಂದಿದಂಥ ಮನುಜರಿಂದ ಕುಂದು ನಿಂದೆ ಒದಗುತಿರಲು ಇಂದಿರೇಶನ ಕರುಣವೆಂದು ಒಂದು ಮನಕೆ ತಾರದಂತೆ 4 ಮಾನ ಅಪಮಾನಗಳು ದೀನನಾಥನಧೀನವೆಂದು ಜ್ಞಾನಿಗಳ ವಾಕ್ಯ ನೆನೆದು ಮಾನಸದ ದುಃಖ ಕಳೆದು 5 ಹೊಟ್ಟೆ ಬಟ್ಟೆಗೊದಗುವಂಥ ಅಷ್ಟು ಕಷ್ಟ ಸುಖಗಳೆಲ್ಲ ವಿಷ್ಣುಮೂರ್ತಿ ಕೊಟ್ಟನೆಂದು ಮುಟ್ಟಿ ಮನದಿ ಹರಿಯ ಪದವ 6 ಹರಿಯ ಧ್ಯಾನ ಮಾಡುವುದು ಹರಿಯ ಧ್ಯಾನ ಅರಿಯುವುದು ಮೂರ್ತಿ ಕಾಣುವುದು ಹರಿಯಧೀನವೆಂದು ತಿಳಿದು 7 ಗುರುಕೃಪೆಯಿಂ ದತ್ತವಾದ ವರ ಸುಜ್ಞಾನವರೆಯ ತಿಳಿದು ಹರುಷ ಕ್ಲೇಶಾ ಮನಕೆ ತರದೆ ಮೂರ್ತಿ ಮನಕೆ ತಂದು 8 ನಿಷ್ಟೆಯಿಂ ಗೋಪಾಲ ಕೃಷ್ಣವಿಠ್ಠಲಾಧೀನ ಜಗವು ಇಟ್ಟ ಹಾಗೆ ಇರುವೆನೆಂದು ಗಟ್ಟಿಮನದಿ ಹರಿಯ ಪೊಂದಿ 9
--------------
ಅಂಬಾಬಾಯಿ
ಕೃಷ್ಣರಾಯನೆ ನಿನ್ನ ಕೃತ್ಯಗಳೆಲ್ಲ ಸೃಷ್ಟಿಯೊಳಗೆ ನಾ ಬೀರಲ್ಯಾ ಪ ಕಷ್ಟ ಬಿಡಿಸದೆ ಸುಮ್ಮನಿದ್ದೆಯಾ ಸ್ವಾಮಿ ಅ.ಪ. ಜನನ ಮರಣ ಶೂನ್ಯನೆನಿಸಿಕೊಂಡು ಗೋಪಿ ತನಯನಗಿದ್ದುದ ಹೇಳಲ್ಯಾ ಸನಕಾದಿಸೇವ್ಯ ಪೂಜ್ಯನೆ ತುರುಗಳ ಹಿಂಡು ವನದಲ್ಲಿ ಕಾಯ್ದದ್ದು ಹೇಳಲ್ಯಾ ನಾನು 1 ದನುಜ ಭಂಜನನಾದ ‌ಘನ ಮಹಿಮನೆ ಮಾಗ ಧನಿಗಂಜಿ ಓಡಿದ್ದು ಹೇಳಲ್ಯಾ ಎಣೆಯಿಲ್ಲದಾ ಶೂರ ರಣದೊಳು ಪಾರ್ಥಗೆ ಅನುಗನಾಗಿದ್ದದ್ದು ಹೇಳಲ್ಯಾ ನಾನು 2 ಸತತ ತೃಪ್ತನಾಗಿ ಕ್ಷಿತಿಯೊಳು ಬೆಣ್ಣೆಯ ಮಿತವಾಗಿ ಕದ್ದದ್ದು ಹೇಳಲ್ಯಾ ಕೃತಿದೇವಿರಮಣನೆ ಅತಿ ಪ್ರೀತಿಯಲಿ ಗೋಪ ಸತಿಯರ ಕೂಡಿದ್ದು ಹೇಳಲ್ಯಾ ನಾನು 3 ಶ್ರುತಿತತಿಗಳಿಗಭೇದ್ಯ ಪ್ರತಿಯಿಲ್ಲದೆ ದೇವ ಸತಿಗೊಶನಾದದ್ದು ಹೇಳಲ್ಯಾ ಶತಕೃತು ವಿಧಿವಂದ್ಯ ಸುತರಾಪೇಕ್ಷಿಸಿ ಭೂತ ಪತಿಯನ್ನು ಬೇಡಿದ್ದು ಹೇಳಲ್ಯಾ ನಾನು 4 ಭೂತಳದೊಳು ದೇವತೆಗಳೊಡÀನೆ ಇಂಥ ರೀತಿಲಿ ಚರಿಸಿದ್ದು ಹೇಳಲ್ಯಾ ಭೀತಿರಹಿತ ಜಗನ್ನಾಥವಿಠ್ಠಲನೆ ಅ ದ್ಭುತ ಮಹಿಮನೆಂದು ಹೇಳಲ್ಯಾ ನಾನು 5
--------------
ಜಗನ್ನಾಥದಾಸರು
ಕೇಶವ ಕೇಶವನೆಂದು ನುಡಿಯಲು ಕ್ಲೇಶ ತೊಲಗುವುದು ಮಾಧವ ಮಾಧವನೆಂದು ನುಡಿಯಲು ಮಾದರಿಯಲ್ಲಿದ ಮೋದವ ಪೊಂದುವಿ 1 ಗೋವಿಂದ ಗೋವಿಂದನೆಂದು ನುಡಿಯಲು ಎಂದಿಗೂ ತೋರದ ನಂದವ ಪೊಂದುವಿ ವಾಮನ ವಾಮನನೆಂದು ಪೊಗಳಲು ತಾಮಸವಿಲ್ಲದೆ ಕಾಮಿತ ಪೊಂದುವಿ 2 ಶ್ರೀಧರ ಶ್ರೀಧರನೆಂದು ನುಡಿಯಲು ಈ ಧರೆಯೊಳು ನಿನಗೆ ಖೇದವೆಲ್ಲಿಯದು ಅಚ್ಚುತ ಅಚ್ಚುತನೆಂದು ಪೊಗಳಲು ಉಚ್ಚ ಕುಲದಿ ನೀ ಮೆಚ್ಚಿಗೆ ಪೊಂದುವೆ 3 ನರಹರಿ ನರಹರಿಯೆಂದು ನುಡಿಯಲು ಪರತರ ಸುಖವನು ನಿರುತವು ಪೊಂದುವಿ ಶ್ರೀ ಕೃಷ್ಣನೆಂದು ಪೊಗಳಲು ಕಷ್ಟವಿಲ್ಲದೆ ನೀ ಇಷ್ಟವ ಪೊಂದುವಿ 4 ರಾಘವ ರಾಘವನೆಂದು ಪೊಗಳಲು ನೀಗುವೆ ಸುಲಭದಿ ಅಘಗಳೆಲ್ಲವನು ಭಾರ್ಗವನೆನಲು ಪ್ರಸನ್ನನಾಗಿ ಹರಿ ದುರ್ಗಮ ಮೋಕ್ಷಕೆ ಮಾರ್ಗವ ತೋರುವ 5
--------------
ವಿದ್ಯಾಪ್ರಸನ್ನತೀರ್ಥರು
ಕೇಶವ ಜಗದೀಶ ಸಾಸಿರಭಾಸುರಕೋಟಿಸಂಕಾಶ ವಾಸವಾದಿಗಳ ವಂದ್ಯ ಸೀತಾಪತೆ 1 ನಾರಾಯಣ ಸಕಲವೇದಪಾರಾಯಣ ಕೃಷ್ಣ ನಾರದಾದಿಗಳ ವಂದ್ಯ ಸೀತಾಪತೆ 2 ಮಾಧವ ಮಂಗಳಗಾತ್ರ ವೇದವನ್ನೆ ಕದ್ದು ಒಯ್ದ ಆ ಖಳನ ಕೊಂದೆ ಸೀತಾಪತೆ 3 ಗೋವಿಂದ ಗೋಕುಲಬಾಲ ಗೋಪಿಯರ ಮನೋಹರ ಆದಿ ಕೂರ್ಮಾವತಾರ ಸೀತಾಪತೆ 4 ವಿಷ್ಣುವೆ ಯತಿಗಳ ವಂದ್ಯ ಅಷ್ಟಲಕ್ಷ್ಮಿಯರ ನಾಥ ದಿಟ್ಟ ವÀರಾಹರೂಪನಾದ ಸೀತಾಪತೆ 5 ವೈರಿ ಯದುಕುಲಕ್ಕೆ ತಿಲಕನಾದ ಚೆಲುವನಾದ ಹರಿ ನೀನೆ ಸೀತಾಪತೆ 6 ತ್ರಿವಿಕ್ರಮರೂಪನಾಗಿ ತ್ರಿಜಗವನ್ನೆ ಪಾಲಿಸಿದ ವಾಮನರೂಪಿ ನೀನೆ ಸೀತಾಪತೆ7 ವಾಮನರೂಪವ ತಾಳಿ ಆ ಮಹಾಬಲಿಯನ್ನೆ ತುಳಿದು ನೇಮದಿ ಕ್ಷತ್ರೇರ ಕೊಂದ ಸೀತಾಪತೆ 8 ಶ್ರೀಧರ ನೀನೆಂದೆನಿಸಿ ಶೋಷಿಸಿ ಖಳg Àನೆಲ್ಲ ಜಾನಕಿಯ ತÀಂದ ರಾಮ ಸೀತಾಪತೆ 9 ಹೃಷೀಕೇಶ ನೀನೆಂದು ಋಷಿಗಳು ಸ್ತುತಿಯ ಮಾಡಿ ವಸುದೇವಸುತ ಕೃಷ್ಣ ಸೀತಾಪತೆ 10 ಬುದ್ಧಾವತಾರ ಕೃಷ್ಣ ಸೀತಾಪತೆ 11 ದಾಮೋದರನೆಂದು ನಿಮ್ಮ ದೇವತೆಗಳೆಲ್ಲ ಕರೆಯೆ ಆ ಮಹಾ ಕಲ್ಕ್ಯ್ಕನಾದ ಸೀತಾಪತೆ 12 ಸಂಕರುಷಣ ದೇವ ನಿಮ್ಮ ಕಿಂಕರರು ನಾವೆಲ್ಲರಯ್ಯ ಪಂಕಜಾಸನವಂದ್ಯ ರಾಮ ಸೀತಾಪತೆ 1 3 ವಾಸುದೇವ ನಿಮ್ಮ ಪಾದಕ್ಕೆ ವಂದನೆಯ ಮಾಡುವೆನಯ್ಯ ದೋಷರಾಶಿ ನಾಶಮಾಡು ಸೀತಾಪತೆ 1 4 ಸುರರು ಎದ್ದು ನಿನ್ನೆ ಪೊಗಳುತ್ತಿರೆ ಉದ್ಧಾರ ಮಾಡಿದ ದೇವ ಸೀತಾಪತೆ 15 ಅನುದಿನ ನಿನ್ನ ಕರೆಯೆ ಅನಿಮಿತ್ತಬಂಧು ಕೃಷ್ಣ ಸೀತಾಪತೆ 16 ಮನೋಹರುಷ ನೀಡಿದ ರಾಮ ಸೀತಾಪತೆ 17 ಅಧೋಕ್ಷಜ ಲೋಕಗಳಿಗೆ ಆಧಾರಭೂತನಾ ಗಿರುವೆ ವೇದವೇದ್ಯರಾಮ ಸೀತಾಪತೆ 18 ಬೋಧನೆಯನ್ನು ಮಾಡಿದ ಸೀತಾಪತೆ 19 ಅಚ್ಯುತ ವಿಶ್ವಾಮಿತ್ರ ಅತಿಶಯ ಯಾಗವ ಕಾಯ್ದ ಭಕ್ತವತ್ಸಲ ರಾಮ ಸೀತಾಪತೆ 20 ಜನಾರ್ದನರೂಪನಾಗಿ ಜಾನಕಿಯ ತಂದ ಜಾಹ್ನವೀಜನಕ ರಾಮ ಸೀತಾಪತೆ 21 ಉಪೇಂದ್ರನೆ ಉದ್ಧÀವಗೆ ಉಪದೇಶವನೆ ಮಾಡಿ ಅಪರಿಮಿತಪದವಿ ಕೊಟ್ಟ ಸೀತಾಪತೆ 22 ಕಾಲ ತಪವ ಮಾಡಿ ಚರಿಸುವರಿಗೆ ಮೋಕ್ಷವಿತ್ತೆ ಸೀತಾಪತೆ 2 3 ರÀಕ್ಷಿಸಯ್ಯ ಕೃಷ್ಣ ರಾಮ ರಕ್ಷಿಸಯ್ಯ ಹಯವದನ ಪಕ್ಷಿವಾಹನ ರಾಮ ಸೀತಾಪತೆ 24
--------------
ವಾದಿರಾಜ
ಕೇಸರಿ ಪಕರುಣತೊರಿಸು ಕೇಶವಾ ದುರಿತಪಾಶ ಬಿಡಿಸುವಾಸಿರಿರಾಮಕೋಟಿ ನಾಮವಾ ಸ್ಮರಣೆಕೊಟ್ಟೆ ಮಾಧವಾ 1ಭಯನಿವಾರಣಮಾಡಿಸಿ ಪ್ರಜಗಳೆಲ್ಲರಪೋಸಿಜಯಪ್ರದವಹೊಂದಿಸಿ ಜಗತ್ಕೀರ್ತಿನಿಲ್ಲಿಸಿ2ಸಂಘದಿಂದಧ್ಯಾನವಾ ಸಮರಸಸುಜ್ಞಾನವಾಇಂಗಿತಾರ್ಥಾಚರಣವಾ 'ೀಗೆ ನಿಲ್ಲಿಸು ರಾಘವಾ 3ರಾಮಕೋಟಿಸೇವೆಗೆ ರಮ್ಯಜನರು ಕೂಡಿಕೆ ಸಂಭ್ರÀಮದಿಭಜನ ಮಾಡಲಿಕೆ ಸತ್ಯಾಮೃತವನು ಕೊಡಲಿಕೆ 4ಗುರುವು ತುಲಸಿರಾಮನಾ ಪರಮಕೃಪಾಪಾತ್ರನಾಗಿರುವ ರಂಗಸ್ವಾ'ುದಾಸಾರ್ಚಿತ ಶ್ರೀನಾರಾಯಣ 5
--------------
ಮಳಿಗೆ ರಂಗಸ್ವಾಮಿದಾಸರು
ಕೇಳಿಸಲೊಲ್ಲದೇನೋ ಕೃಷ್ಣಾ ಕೇಳಿಕೇಳದಂತಿರುವಿಯೇನೋ ಪ ಬಾಳುವೆಯೊಲು ಕೀಳಾದೆನಾನಿಂತುಏಳಿಸೆನ್ನನು ಎಂದು ಕೇಳಿಕೊಳ್ಳುವದಿನ್ನು ಅ.ಪ ಯಾವತ್ತೂ ತಿಳಿದವನು ಎಂಬರು ಎನ್ನನೋವು ತಿಳಿಯದಾಯ್ತೇನುಸಾವಿರ ವಿಥಿಗಳಿದ್ದೆನ್ನಯ ಪಾಲಿಗೆದೇವಾ ಅವಲ್ಲವು ಕಿವುಡಾದವೇನೋ 1 ತುಂಬಿ ನಿಂತಿಹನೆಂಬೀಭಾವಕೆ ನೀನೆಂಬಿ ಆವಾವಜೀವರ ಭಾವವರಿತು ನೀಕಾವುದೆಂತೆಂಬೊ ಈ ವಚನವು ನಿನಗೆ 2 ಭೇದಭಾವವು ಇಲ್ಲೆಂದೂ ಸಾಧಿಸುವವುವೇದಗಳೆಲ್ಲ ಎಂದುಬಾಧೆಯ ಬಿಡಿಸೆಂದು ಬೇಡಿಕೊಳ್ಳುವೆಗದುಗಿನ ಆಧಾರಿ ದೇವನೆ ವೀರನಾರಾಯಣ 3
--------------
ವೀರನಾರಾಯಣ
ಕೇಳೆ ಯಶೋದೆ ನಿನ್ನ ಮಗನ ಲೂಟಿಯಪ ತಾಳಲಾರೆವೆ ನಾವು ತರಳನ ದುಡುಕುಪೇಳಬಾರದೆ ಗೋಪಾಲಕೃಷ್ಣಗೆ ಬುದ್ಧಿಅಮ್ಮಾ-ಇದು ಚೆನ್ನಾಯಿತು ತಿಳಿದವನಲ್ಲವೆನೀ ಕೇಳೆ ಯಶೋದೆ ನಿನ್ನ ಮಗನ ಲೂಟಿಯ ಅ.ಪ. ಬಾಲಕನೆಂದು ಲಾಲಿಸಿ ಕರೆದರೆಮೂಲೆ ಮನೆಯೊಳಗೆ ಪೊಕ್ಕುಪಾಲು ಮೊಸರು ಬೆಣ್ಣೆಗಳ ಮೆದ್ದುಕೋಲಲಿ ನೀರ ಕೊಡಗಳೊಡೆದನೀಲವರ್ಣದ ದಿಟ್ಟ ನಿತ್ಯವೀ ಹೋರಾಟಬಾಲೆಯರಲ್ಲಿ ನೋಟ ಬಹಳ ಬಗೆಯಲ್ಲಿತಿಳಿದೆವೆಂದರೆ ಮೇಲೆ ಎಂಜಲುಗುಳಿ ಪೋದಅಮ್ಮಾ ಇದು ಚೆನ್ನಾಯ್ತು ತಿಳಿದವನಲ್ಲವೆನೀ ಕೇಳೆ ಯಶೋದೆ ನಿನ್ನ ಮಗನ ಲೂಟಿಯ 1 ಮತ್ತೆ ಭಾಮಿನಿಯರೆಲ್ಲರು ಕೂಡಿಮಡುವಿನೊಳು ಜಲಕ್ರೀಡೆಯನಾಡಲುಚಿತ್ತಚೋರ ನಮ್ಮ ಸೀರೆಗಳೆಲ್ಲವಹೊತ್ತು ಕೊಂಡು ಮರವನೇರಿದಬತ್ತಲೆ ಭಾಮೆಯರೆಲ್ಲ ಬೇಡಿದರೆ ಕೊಡನಲ್ಲಯುಕ್ತಿ ಬಹುಬಲ್ಲ ಹತ್ತಿಲಿ ಬಂದು ಕರವೆತ್ತಿ ಮುಗಿದರೆ ವಸ್ತ್ರ ಕೊಡುವೆನೆಂದಅಮ್ಮಾ ಇದು ಚೆನ್ನಾಯ್ತು ತಿಳಿದವನಲ್ಲವೆನೀ ಕೇಳೆ ಯಶೋದೆ ನಿನ್ನ ಮಗನ ಲೂಟಿಯ 2 ಸದ್ದು ಮಾಡದೆ ಸರಿ ಹೊತ್ತಿಲಿನಿದ್ದೆಗಣ್ಣಿಲಿ ನಾನಿರಲುಮುದ್ದು ಕೃಷ್ಣ ನಮ್ಮ ಮನೆಯವರಂತೆಮುದದಿಂದಲೆನ್ನನು ತಾ ಕೂಡಿದಎದ್ದು ನೋಡುವೆನಲ್ಲ ಆಹ ಏನೆಂಬುವರೆಲ್ಲಬುದ್ಧಿ ಮೋಸ ಬಂತಲ್ಲ ಪೊದ್ದಿ ಸಲ್ಲಿಸಿದೆಬುದ್ಧಿವಂತನೆಂದರೆ ಪರಿಹಾಸ್ಯ ಮಾಡಿ ನಗುವಅಮ್ಮಾ ಇದು ಚೆನ್ನಾಯ್ತು ತಿಳಿದವನಲ್ಲವೆನೀ ಕೇಳೆ ಯಶೋದೆ ನಿನ್ನ ಮಗನ ಲೂಟಿಯ 3
--------------
ವ್ಯಾಸರಾಯರು