ಒಟ್ಟು 32 ಕಡೆಗಳಲ್ಲಿ , 17 ದಾಸರು , 32 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಘವೇಂದ್ರ ಯತಿಸಾರ್ವಭೌಮ ದುರಿ ತೌಗಘದೂರ ತೇ ನಮೋ ನಮೋ ಪ ಮಾಗಧರಿಪು ಮತಸಾಗರ ಮೀನ ಮ ಮಾಘ ವಿನಾಶಕ ನಮೋ ನಮೋ ಅ.ಪ. ಶ್ಲಾಘಿತ ಗುಣಗಣ ಸೂರಿಪ್ರಸಂಗ ಸ ದಾಗಮಜ್ಞ ತೇ ನಮೋ ನಮೋ ಮೇಘ ಶ್ಯಾಮಲ ರಾಮಾರಾಧಕ ಮೋಘ ಬೋಧತೇ ನಮೋ ನಮೋ 1 ತುಂಗಭದ್ರ ಸುತರಂಗಿಣಿ ತೀರಗ ಮಂಗಳಚರಿತ ಶುಭಾಂಗ ನಮೋ ಇಂಗಿತಜ್ಞ ಕಾಳಿಂಗ ಮರ್ದ ಯದು ಪುಂಗವ ಹೃದಯ ಸುಸಂಗ ನಮೋ ಸಂಗಿರ ಚಿಹ್ನಿತ ಶೃಂಗಾರಾನನ ತಿಂಗಳ ಕರುಣಾಪಾಂಗ ನಮೋ ಗಾಂಗೇಯ ಸಮಾಭಾಂಗ ಕುಮತ ಮಾ ತಂಗ ಸಿಂಗ ಶಿತ ಪಿಂಗ ನಮೋ 2 ಶ್ರೀ ಸುಧೀಂದ್ರ ಕರಜಾತ ನಮೋ ನಮೋ ಭೂಸುರ ನುತ ವಿಖ್ಯಾತ ನಮೋ ದೇಶಿಕ ವರ ಸಂಸೇವ್ಯ ನಮೋ ನಮೋ ದೋಷವಿವರ್ಜಿತ ಕಾವ್ಯ ನಮೋ ಕ್ಲೇಶಿತಜನ ಪರಿಪಾಲ ನಮೋ ನಮೋ ಭಾಸಿತ ಕರುಣಾಶೀಲ ನಮೋ ವ್ಯಾಸ ರಾಮ ಪದ ಭಕ್ತ ನಮೋ ನಮೋ ಶಾಶ್ವತ ಕರುಣಾಸಕ್ತ ನಮೋ 3 ಮಣಿ ಸಂ ಭಾವಿತ ಮಹಿಮ ಪಾಲಯ ಮಾಂ ಸೇವಾಪರ ಸರ್ವಾರ್ಥಪ್ರದ ವೃಂ ದಾವನ ಮಂದಿರ ಪಾಲಯ ಮಾಂ ಮಾರ್ಗಣ ಭುಜಗ ವಿನಾಯಕ ಭಾವಜ್ಞ ಪ್ರಿಯ ಪಾಲಯ ಮಾಂ ಕೇವಲ ನತಜನ ಪಾವನರೂಪ ಸ ದಾ ವಿನೋದಿ ಹೇ ಪಾಲಯ ಮಾಂ 4 ಸನ್ನುತ ಮಹಿಮ ಜಗನ್ನಾಥ ವಿಠಲ ಸನ್ಹಿತ ಮಾನಸ ಜಯ ಜಯ ಭೋ ಚಿಹ್ನಿತ ದಂಡಕಮಂಡಲ ಪುಂಡ್ರ ಪ್ರ ಪನ್ನೆ ಭಯಾಪಹ ಜಯ ಜಯ ಭೋ ಮಾನ್ಯ ಮಹಾತ್ಮ ಪ್ರಸನ್ನ ವದನ ಕಾ ರುಣ್ಯ ಪ್ರಯೋದಧೆ ಜಯ ಜಯ ಭೋ ಧನ್ಯ ಕ್ಷಮಾಸಂಪನ್ನ ಬುಧಜನ ಶ ರಣ್ಯ ಸದಾರ್ಚಿತ ಜಯ ಜಯ ಭೋ 5
--------------
ಜಗನ್ನಾಥದಾಸರು
ಇಂಥಾ ಪ್ರಭುವ ಕಾಣೆನೋ ಈಜಗದೊಳ- ಗಿಂಥಾ ಪ್ರಭುವ ಕಾಣೆನೋ ಪ ಇಂಥಾ ಪ್ರಭುವ ಕಾಣೆ ಶಾಂತ ಮೂರುತಿ ಜಗ- ದಂತರಂಗನು ಲಕ್ಷ್ಮೀಕಾಂತ ಸರ್ವಾಂತರ್ಯಾಮಿ ಅ.ಪ. ಬೇಡಿದಿಷ್ಟವ ಕೊಡುವ-ಭಕ್ತರ ತಪ್ಪು ನೋಡದೆ ಬಂದು ಪೊರೆವ ಗಾಡಿಕಾರನು ಗರುಡಾ - ರೂಢ್ಯ ಗುಣವಂತ ಮಹಾ ಪ್ರೌಢ ಪ್ರತಾಪಿ ಜಗದಿ ಪಾಡಿ ಪೊಗಳಿ ಕೊಂಡಾಡುವವರ ಮುಂ- ಕೇಡಿಗನೇ ನಾಡಾಡಿಗಳಂದದಿ ಈಡುಂಟೇನೋ ಈ ವೆಂಕಟಗೆ-ಇಂಥಾ 1 ನಿಗಮ ತತಿಗಳರಿಯದ- ನೀರಜಭವಾ- ಸುರರು ಕಾಣದ ಜಗದೊಡೆಯನು ಭಕ್ತ- ರುಗಳಿಗೊಲಿದು ತ್ರಿಸ್ಥಾ- ನಗಳತ್ಯಜಿಸಿ ಕಲಿ ಅಗಣಿತ ಸುಗುಣಾರ್ಣವ- ಶ್ರೀ ಹರಿಯೇ ಜಗದೊಳು ಸೇವಾದಿಗಳನು ಕೊಳುತಿಹ ಅಘಹರ ಮೋಕ್ಷಾದಿಗಳನೆ ನೀಡುತ ನಗೆಮೊಗದಲಿ ಚನ್ನಿಗನಿಂತಹನೊ - ಇಂಥಾ 2 ಭಾರ್ಗವಿ ಭೂಮಿವಲ್ಲಭ - ಭವದೂರ ಭಕ್ತ ವರ್ಗಕೆ ಇವಸುಲಭ ನಿರ್ಗುಣ ನಿರ್ವಿಕಾರ- ಸ್ವರ್ಗದೈಶ್ವರ್ಯದಿಂದಾ- ನಘ್ರ್ಯದ ಪದವನೀವ ದೀರ್ಘಾಯುವಂತನೀತ ಭಾರ್ಗವರಾಮ ನೃಪರ್ಗಳನೆಲ್ಲರ - ಣಾಗ್ರದಿ ಜಯಿಸಿದ ಉಗ್ರಪ್ರತಾಪಿ ಅಗ್ರಗಣ್ಯ ಸದ್ವಿಗ್ರಹ ಶ್ರೀಮದ - ನುಗ್ರಹ ಮಾಡುತ ದುರ್ಗುಣ ಕಳೆವ 3 ನಿರ್ದುಃಖಾನಂದ ಭರಿತಾ - ನಿರ್ವಾಣ ಸುಖಕೆ ಆದ್ರ್ರಹೃದಯ ತೋರುತ ನಿದ್ರೆಯೊಳಿದ್ದವಗು - ಪದ್ರಬಡಿಸಿ ದೈತ್ಯ ಕ್ಷುದ್ರನಂಕೊಲಿಸಿ ಸು ಭದ್ರ ಜಗಕೆ ಇತ್ತ ನಿರ್ದಯನಲ್ಲ ಸಮುದ್ರಶಯನ ಗೋ- ವರ್ಧನ ಗಿರಿಯನು ಉದ್ಧರಿಸಿದ ಯದು ವರ್ಧನ ದನುಜ ವಿಮರ್ದನ ಲಕ್ಷ್ಮೀ ಜ - ನಾರ್ದನ ವರ ಶೇಷಾದ್ರಿ ನಿವಾಸ - ಇಂಥಾ 4 ವಾರಿಜಾಸನ ಮನೋಜಾ ಈರ್ವರು ಸುತರು ಸುರತರಂಗಿಣಿ ತನುಜಾ ಪುರವೇ ವೈಕುಂಠ ಇಂದ್ರಾದ್ಯ ಮರರು ಕಿಂಕರರು ಗರುಡವಾಹನ ಉರಗ ಪರಿಯಂಕ ನಿಷ್ಕಳಂಕ ಸರಿದೊರೆಗಳ ನಾನರಿಯೆನು ವೆಂಕಟ ಗಿರಿಯಲಿ ಇರುತಿಹ ಕರುಣೆಗಳರಸನೆ ಮರೆಯದೆ ಸಲಹೋ ಶರಣಾಗತರನು ಸಿರಿ ವಿಜಯವಿಠ್ಠಲಾ - ಇಂಥಾ 5
--------------
ವಿಜಯದಾಸ
ಇಂದು ಸಾರ್ಥಕವಾಯ್ತು ಹಿಂದೆ ಮಾಡಿದ ಪೂಜೆ ಪ ಬಂದು ಗುರುವರ್ಯರ ಬೃಂದಾವನವ ನೋಡಿ ಅ.ಪ ಮಂಗಳತರಂಗಿಣಿಯ ತಂಗಾಳಿ ಸೇವಿಸುತ ತುಂಗ ಫಣಿಶಾಯಿಯ ಅಪಾಂಗಪಾತ್ರರ ಕಂಡು1 ಜ್ಞಾನ ವೈರಾಗ್ಯ ಭಕ್ತಿಗಳ ಮೂರ್ತಿಗಳಂತೆ ನಾನಾಭರಣ ಸೇವೆ ಅರ್ಪಿಸಿದವರ ಕಂಡು 2 ಸ್ವಾಂತವನು ಗೆಲಿದು ಪ್ರಸನ್ನ ಮಾನಸರಾಗಿ ಶಾಂತಿಯನು ಪಡೆದ ಏಕಾಂತ ಭಕುತರ ನೋಡಿ 3
--------------
ವಿದ್ಯಾಪ್ರಸನ್ನತೀರ್ಥರು
ಕಾಯೋ ಜಿತಾಮಿತ್ರ | ಯಮಿಕುಲ ನಾಯಕ ಸುಚರಿತ್ರ ಪ ಕಾಯೊ ಕಾಯೊ ಜಿತಕಾಯಜಾತ ಶಿತ ಕಾಯೊ ನಿನ್ನ ಪದ ತೋಯಜಕೆರಗುವೆ ಅ.ಪ ಅಭಯದಾತನೆಂದು ತ್ವತ್ಪದ | ಕಭಿನಮಿಸುವೆ ಬಂದು ಶುಭ ಗುಣನಿಧಿ ಗುರು | ವಿಭುದೇಂದ್ರಕರ ಅಬುಜ ಸಂಭೂತ 1 ಮೌನಿ ಕುಲಾಧೀಶ | ಪ್ರಾರ್ಥಿಪೆ ಭಾನಪ್ರಕಾಶ ದೀನಜ ನಾಮಕರ ಧೇನು ಪುರಾತನ ಗೋನದ ತರು ನಿಜ ತಾಣಗೈದ ಗುರು 2 ತುಂಗಮಹಿಮ ಭರತ | ಕುಮತ ದ್ವಿಜಂಗಮ ದ್ವಿಜನಾಥ ಮಂಗಳ ಕೃಷ್ಣ ತರಂಗಿಣಿ ಭೀಮಾ ಸಂಗಮದಲಿ ಸಲೆ | ಕಂಗೊಳಿಸುವ ಗುರು 3 ಶರಧಿ ದುರಿತ ಕದಳಿದ್ವಿರದಿ ದಿವಿಜ ಪರಿವಾರ ನಮಿತ ನಿಜ ಕರುಣಿ ನಂಬಿದೆನು ಮರಿಯದೆ ನಿರುತ4 ವಿನುತ | ಶಾಮಸುಂದರಾಂಘ್ರಿ ದೂತ ಪೊಂದಿದ ಜನರಘ ವೃಂದ ಕಳಿವ ರಘು ನಂದನ ಮುನಿಮನ ಮಂದಿರವಾಸ 5
--------------
ಶಾಮಸುಂದರ ವಿಠಲ
ಕೃಷ್ಣ ದ್ವೈ ಪಾಯನ ಕೃಪಣವತ್ಸಲ ಪರ ಮೇಷ್ಠಿ ಜನಕನ ತೋರೊ ಪ ಅನಿಮಿಷ ಕುಲಗುರು ಆನಂದತೀರ್ಥ ಸ ನ್ಮುನಿಮತ ವಿಮಲಾಂಬುಜಾ ಅ.ಪ. ದಿನಕರ ದಯದಿ ನೋಡೆನ್ನನು ಬಾದರಾ ಯಣ ನಾಮಧೇಯರ ತನಯ ಸಂಯಮಿ ವರ 1 ಭೀಮ ತರಂಗಿಣಿ ಬದಿಗನೆನಿಸಿ ಸೀತಾ ಕರ್ಮ ಗುಣಕೀರ್ತನಗೈವ ನಿರ್ಮಲಾತ್ಮಕನ ಸತ್ಪ್ರೇಮದಿ ಸಲಹುವ ಸುಜನ ಶಿರೋಮಣಿ 2 ವಿಗತದೇಹಾಭಿಮಾನಿಯೆ ನಿಮ್ಮೊಡನೆ ನಿತ್ಯ ಹಗೆಗೊಂಬ ಪಾಪಿಗಳ ವಿಗಡಕರ್ಮಗಳೆಲ್ಲ ಮರೆದು ವಿಶ್ವವ್ಯಾಪಿ ಜಗನ್ನಾಥ ವಿಠಲ ಸ್ವತಂತ್ರ ಕರ್ತಯೆಂಬಾ 3
--------------
ಜಗನ್ನಾಥದಾಸರು
ಕೃಷ್ಣವೇಣಿ ಕಲ್ಯಾಣಿ ನಿತ್ಯ ಸಾಗರನ ರಾಣಿ ಪ ಅಜನ ನಿರೂಪದಲಿ ಜಾಬಾಲಿಮುನಿ ಬಂದು ಭಜಿಸಿದನು ನಿನ್ನ ಬಲುದಿವಸಂಗಳು ನಿಜವಾಗಿ ಹರನ ಜಡೆಯಲ್ಲಿ ಉದ್ಭವಿಸಿದೆ ತ್ರಿಜಗದೊಳಗೆ ಮೆರೆದೆ ತ್ರಿದಶಾಮರವಂದಿತೆ 1 ಕನ್ಯಾರಾಶಿಗೆ ಜೀವ ಬಂದು ಪ್ರಾಪುತನಾಗೆ ಹನ್ನೆರಡು ವರುಷಕೆ ಒಮ್ಮೆ ಬಿಡದೇ ಮನ್ನಿಸಿ ಭಕುತಿಯಿಂದ ಒಂದು ಮಜ್ಜನಮಾಡೆ ಧನ್ಯನ ಮಾಳ್ಪೆ ಬಲು ಘನ್ನ ತರಂಗಿಣಿ 2 ಎತ್ತ ನೋಡಿದರತ್ತ ನಾಲ್ಕುವರೆ ಯೋಜನವು ಕ್ಷೇತ್ರ ಪುಣ್ಯದೇವಿಯೆನಿಸಿಕೊಂಬೆ ಸ್ತುತಿಸಲಳವೇ ನಿನ್ನ ಮಹಿಮೆಯ ಅನುಗಾಲ ಮತ್ತಗಜಗಮನೆ ಮಲದೂರೆ ಮುಕ್ತಿಧಾರೆ 3 ಪೋಗದ ಪಾಪಗಳಿರಲು ನಿನ್ನ ದರುಶನವು ಬಾಗಿಲ ಕಾಯ್ವ ಭಾಗ್ಯವ ಕೊಡು ಕರುಣದಲಿ 4 ಕಲಿಯುಗಕೆ ನೀನೇ ವೆಗ್ಗಳವೆಂದು ಬುಧಜನರು ಒಲಿದು ಕೊಂಡಾಡುವರು ಸತತದಲ್ಲಿ ಜಲನಿಧಿಯ ಎರಡು ಮೊಗದಲಿ ಮೆರೆದೆ ಮಹತಟಿನಿನೆಲೆಗೊಳಿಸು ವಿಜಯವಿಠ್ಠಲ ಚರಣದಲ್ಲಿ 5
--------------
ವಿಜಯದಾಸ
ಗಂಗಾ ಭಾಗೀರಥೀ ಮಂಗಳಾಂಗಿ ಅಳಕನಂದನ ನೀ ಮಹಾ ಸುಂದರಾಂಗಿ ಸಿಂಧುರಾಜನ ರಾಣಿ ಸಿರಿಯು ಸಂಪತ್ತು ಕೊಡು ಕಂಗಳಿಂದಲಿ ನೋಡಿ ಕರುಣಿಸೆನ್ನ ಪ ಕಾಶಿ ಪಟ್ಟಣದಲಿ ವಾಸವಾಗಿ ಸರಸ್ವತಿಯನು ಕೂಡಿ ನೀ ಸರಸವಾಗಿ ಸೋಸಿಲಿಂದಲಿ ಸೂರ್ಯಪುತ್ರಿ ಯಮುನೆಯನು ಕೂಡಿ ಉ- ಲ್ಲಾಸದಿದ್ಹರಿದು ವಾರ್ಣಾಸಿಗ್ಹೋಗಿ 1 ಹಾಲಿನಂತೆ ಹರಿವೊ ಗಂಗೆ ನೀನು ನೀಲದಂತಿದ್ದ ಯಮುನೆಯನು ಕೂಡಿ ಲೀಲೆಯಿಂದಲಿ ಸರಸ್ವತಿಯನು ಕೂಡಿ ಓಲ್ಯಾಡುತ ಬಂದೆ ಒಯ್ಯಾರದಿಂದ 2 ಭಗೀರಥನ ಹಿಂದೆ ನೀ ಬಂದೆ ಓಡಿ ಸಗರನ ಸುತರ ಉದ್ಧಾರ ಮಾಡಿ ಜಗವ ಪಾವನ ಮಾಡೋ ಜಾಹ್ನವಿಯೆ ನೀ ಎನ್ನ ಮಗುವೆಂದು ಮುಂದಕೆ ಕರೆಯೆ ತಾಯಿ 3 ಬಿಂದುಮಾಧವ ವೇಣುಮಾಧವನ್ನ ಆ- ನಂದ ಭೈರವ ಕಾಳ ಭೈರವನ್ನ ಚಂದದಿಂದ್ವಿಶ್ವನಾಥನ್ನ ಗುಡಿಮುಂದೆ ಹೊಂದಿ ಹರಿದ್ಹನುಮಂತ ಘಾಟಿನ್ಹಿಂದೆ 4 ಪೊಡವಿ ಮ್ಯಾಲಿಂಥ ಸಡಗರದಿ ಹರಿದು ಕಡಲಶಯನನ್ನ ಕಾಲುಂಗುಷ್ಠದ ಮಗಳು ಕಡಲರಾಣಿಯೆ ಕಯ್ಯ ಪಿಡಿಯೆ ನೀನು 5 ಮರದ ಬಾಗಿಣ ಕುಂಕುಮರಿಷಿಣವು ಗಂಧ ಪರಿಪರಿಯಿಂದ ಪೂಜೆಯಗೊಂಬುವಿ ಸ್ಥಿರವಾದ ಮುತ್ತೈದೆತನ ಜನುಮ ಜನುಮಕ್ಕು ವರವ ಕೊಟ್ಟು ವೈಕುಂಠವನು ತೋರಿಸೆ 6 ಮಧ್ಯಾಹ್ನದಲಿ ಮಲಕರ್ಣಿಕೆಯ ಸ್ನಾನ ಶುದ್ಧವಾಗಿ ಪಂಚಗಂಗೆಯಲಿ ಭವ ಸ- ಮುದ್ರವನು ದಾಟಿಸೆ ಭಾಗೀರಥಿ 7 ಸುಕೃತ ಒದಗಿತೆಂದು ಗಂಗ ಭೆÀಟ್ಟಿಯಾಗೊ ಪುಣ್ಯ ಬಂದಿತಿಂದು ಚಕ್ರತೀರ್ಥದ ಸ್ನಾನ ಸಂಕಲ್ಪದ ಫಲವ ಕೊಟ್ಟು ರಕ್ಷಿಸು ತಾಯಿ ತರಂಗಿಣಿ 8 ಸಾಸಿರ ಮುಖದಿ ಶರಧಿಯನು ಕೂಡಿ ಹೋಗಿ ಬಾ ಊರಿಗೆ ಭಕ್ತಿಮುಕ್ತಿ ನೀಡಿ ನೀನು ಭೀಮೇಶ ಕೃಷ್ಣನಲಿ ಹುಟ್ಟಿದ್ದು ಪಾದವನು ತೋರೆನ್ನ ಪೊರೆಯಬೇಕೆ 9
--------------
ಹರಪನಹಳ್ಳಿಭೀಮವ್ವ
ಗಂಗೆಗೆ ಸ್ವರ್ಗ ತರಂಗಿಗೆ ರನ್ನದ ಕೋಲ ಕೋಲೆನ್ನಿರಿವಿಮಲ ತರಂಗಿಣಿ ಹರಿಪಾದ ಸಂಗಿಗೆ ಕೋಲ ಕೋಲೆನ್ನಿರೆ ಪ. ಗೋದಾ ನಿನ್ನಯ ಪಾದಾ ಆದರದಿ ಬಲಗೊಂಬೆಸಾಧು ಸಜ್ಜನರ ಸಲಹುವಿಸಾಧು ಸಜ್ಜನರ ಸಲಹುವಿ ನಮಗಿನ್ನುಮೋದದಿ ಮುಯ್ಯವ ಗೆಲಿಸೆಂಬೆ1 ಕೃಷ್ಣ ನಿನ್ನಯ ಪಾದಮುಟ್ಟಿ ಭಜಿಸುವೆನುಇಷ್ಟವ ಕೊಟ್ಟು ಕಾಲಕಾಲಕ್ಕೆಇಷ್ಟವ ಕೊಟ್ಟು ಕಾಲಕಾಲಕ್ಕೆ ಸಲಹುವಿಶ್ರೀ ಕೃಷ್ಣನ ಮಗಳ ಬಲಗೊಂಬೆ 2 ಚಾರು ಚರಣವ ಬಲಗೊಂಬೆ 3
--------------
ಗಲಗಲಿಅವ್ವನವರು
ತುಂಗಭದ್ರೆ ಸುತರಂಗಿಣಿ ತೀರಗನ್ಯಾರೇ ಪೇಳಮ್ಮಯ್ಯ ಪ ಮಂಗಳ ಮಹಿಮ ಶುಭಾಂಗ ಮೂರುತಿ | ಶ್ರೀ ಹರಿಹರ ಇವ ಕಾಣಮ್ಮ ಅ.ಪ. ಬಹು ಕಂಟಕಿ ಆ ಗುಹನ ತಪಸಿಗೆ | ಮೆಚ್ಚಿದ ಹರ ನೋಡಮ್ಮಮ್ಮ |ಅಹಿ ಭೂಷಣ ತಾ ವರವನು ಕೊಟ್ಟನು | ಬಹು ಬೇಗನೆ ನೋಡಮ್ಮಮ್ಮ|ವಿಹಗವಾಹ ಹರಿ ಮತ್ತೆ ರುದ್ರನಿಂ | ಇವನ ಜೇಯ ನೋಡಮ್ಮಮ್ಮ |ಮಹಿಯೊಳು ಸುರರಾಹವ ಕೆಡಸುತ | ಬಹು ಹಿಂಸಕ ನೋಡಮ್ಮಮ್ಮ 1 ಸುರಲೋಕಕು ಈ ಅಸುರನ ಬಾಧೆಯು | ತಟ್ಟಿತು ನೋಡಮ್ಮಮ್ಮ |ಸುರ ಭೂಸುರರೆಲ್ಲರು ಮೊರೆಯಿಟ್ಟರು | ಹರಿಯಲಿ ನೋಡಮ್ಮಮ್ಮ |ಸಿರಿಯರಸನು ತಾನಭಯವನಿತ್ತವರನು | ಕಳುಹಿದ ನೋಡಮ್ಮಮ್ಮ | ಕರುಣಾಕರ ತಾ ಹರಿಹರ ರೂಪದಿ | ದುರುಳನ ತರೆದ ನೋಡಮ್ಮಮ್ಮ 2 ಕೃತ್ತಿವಾಸ ತಾ ನಿತ್ತ ವರವ ಹರಿ | ಪಾಲಿಸಿದನು ನೋಡಮ್ಮಮ್ಮ | ದಿತಿಸುತನಾಯುವು ದಶಶತಕಳೆಯಲು | ವತ್ತಿದ ಕೆಳಗವನಮ್ಮಮ್ಮ |ಹಿತದಿಂದಲಿ ತಾ ಭಕುತರ ಪೊರೆಯುವ | ಹರಿಹರನ ನೋಡಮ್ಮಮ್ಮ | ದೈತ್ಯನ ಪೆಸರಿಲಿ ಪಾವನವಾಯಿತು | ಈ ಕ್ಷೇತ್ರವು ಕಾಣಮ್ಮಮ್ಮ 3 ದಕ್ಷಿಣ ಪಾಶ್ರ್ವದಿ ಅಭಯ ಹಸ್ತ | ತ್ರಿಶೂಲ ಧರನ ನೋಡಮ್ಮಮ್ಮ | ಅಕ್ಷಿಯ ಮಾನಿಯು ದಕ್ಷಿಣ ಶಿರದಲಿ | ಮೆರೆಯುವನು ನೋಡಮ್ಮಮ್ಮ | ದಕ್ಷಸುತೆಯು ತಾ ವಿರೂಪಾಕ್ಷನ | ಸೇವಿಪಳೂ ನೋಡಮ್ಮಮ್ಮ |ಪಕ್ಷಿವಾಹಗೆ ತಾನರ ಮೈಯ್ಯಾದನು | ತ್ರ್ಯಕ್ಷನು ಕಾಣಮ್ಮಮ್ಮ 4 ಕಂಬು | ಧರನಾ ನೋಡಮ್ಮಮ್ಮ ಲಕ್ಷ್ಮೀವನಿತೆಯು ಕಾಮನ ಜನಕನ | ಸೇವಿಪಳೂ ನೋಡಮ್ಮಮ್ಮ ಶುಮಲಾಂಗ ವನಮಾಲೆಗಳನು | ಧರಿಸಿಹ ನೋಡಮ್ಮಮ್ಮ |ಸಾಮಸನ್ಮುತ ಗುಣಧಾಮನ ಲೀಲೆ | ಇದೆಲ್ಲವು ಕಾಣಮ್ಮಮ್ಮ 5 ಕ್ರೋಶ ಪಂಚ ನಾಲ್ಕಾರದಿ ಮೀಸಲು | ಸುಕ್ಷೇತ್ರವ ನೋಡಮ್ಮಮ್ಮ | ಭಾಸಿಸುವವು ಇಲ್ಲೆಕಾದಶ ವರ | ತೀರ್ಥಂಗಳು ನೋಡಮ್ಮಮ್ಮ | ಈ ಸುಕ್ಷೇತ್ರವು ಆ ಮಹಕಾಶಿಗೆ | ಸಮವೆನಿಸಿದೆ ನೋಡಮ್ಮಮ್ಮ |ಅಸಮ ಮಹಿಮ ಹರಿ ಅಸುರಗೆ ಕೊಟ್ಟನು | ಈ ಪರಿವರ ಕಾಣಮ್ಮಮ |6| ಕೃತಿ ವಿಧಿ ಜನಕನಿಗೂ | ಭೇದವೆ ಸರಿ ಕೇಳಮ್ಮಮ್ಮ ಮೋದಮಯ ಗುರು ಗೋವಿಂದ ವಿಠಲನ | ಲೀಲೆಗಳಿವು ಕಾಣಮ್ಮಮ್ಮ 7
--------------
ಗುರುಗೋವಿಂದವಿಠಲರು
ತ್ರಾಣಿ ಶ್ರೀ ಕೃಷ್ಣವೇಣಿ ಪ್ರಾಣಪತಿ ಪದಕಮಲ ಕಾಣಿಸು ಹೃದಯದಿ ತ್ರಾಣಿ ಶ್ರೀ ಕೃಷ್ಣ ವೇಣಿ ಪ ಯಮಧರ್ಮತನಯೆ ಶ್ರೀ ಕೃಷ್ಣ ಸಂಗದಿ ಜನಿಸಿ ಕಮಲ ಸಂಭವನ ಲೋಕದಲಿ ಮೆರೆದೆ ಸುಮನಸರ ನುಡಿಗೇಳಿ ಲೋಕಗಳ ದುರಿತೋಪ ಶಮನ ಗೊಳಿಸಲು ಬಂದೆ ತುಮಲ ಹರುಷದಲಿ 1 ಭೂತನಾಥನ ಜಟಾಜೂಟದಿಂದುದ್ಭವಿಸಿ ಶ್ವೇತಪಿಂಗಳ ಶೈಲಶಿಖರಕಿಳಿದೇ ಭೂತಳಕೆ ಭೂಷಣಳೆನಿಸಿ ಪೂರ್ವವನಧಿ ನಿ ಕೇತನವನೈದಿ ಸುಖಿಸಿದಿ ನಿನ್ನ ಪತಿಯೊಡನೇ 2 ಪ್ರಾಣಿಗಳು ನಿನ್ನ ಜಲಪಾನವನು ಗೈಯೆ ನಿ ತ್ರಾಣ ಸಂಹಾರ ವ್ಯಾಧಿಗೆ ಭೇಷಜಾ ಪ್ರಾಣ ಪ್ರಯಾಣ ಪಾಥೇಯವೆಂದರಿಯೆ ನಿ ರ್ವಾಣಪದವಿತ್ತು ಕಲ್ಯಾಣವಂತರ ಮಾಳ್ಪೆ 3 ಜನಪದಗಳಾಗಿ ಕಾನನವಾಗಿ ಮನ್ವಾದಿ ದಿನಗಳಲ್ಲಾಗಿ ಮತ್ತೇನಾಗಲೀ ಮನುಜ ಮಜನಗೈಯೆ ವಾಜಪೇಯಾದಿ ಮಖ ವನುಸರಿಸಿದಕೆ ಫಲವೇನು ತತ್ಪಲವೀವೆ 4 ಅರವತ್ತು ಸಹಸ್ರ ವರುಷಂಗಳಲ್ಲಿ ನಿ ರ್ಜರ ತರಂಗಿಣಿಯ ಮಜ್ಜನದ ಫಲವು ಗುರುವು ಕನ್ಯಸ್ಥನಾಗಿರಲು ಒಂದಿನ ಮಿಂದ ನರರಿಗಾ ಪುಣ್ಯಸಮನೆನಿಸಿ ತತ್ಫಲವೀವೇ 5 ಮನನಶೀಲ ಸುಯೋಗಿಗಳಿಗಾವ ಗತಿಯು ಇಹ ವನುದಿನದಿ ನಿನ್ನ ತೀರದಲಿ ಇಪ್ಪಾ ಮನುಜೋತ್ತಮರಿಗೆ ಆ ಗತಿಯಿತ್ತು ಪಾಲಿಸುವೆ ಅನುಪಮ ಸುಕಾರುಣ್ಯಕೆಣೆಗಾಣಿ ಜಗದೊಳಗೆ 6 ತಾಯೆ ಎನ್ನನುದಿನದಿ ಹೇಯ ಸಂಸಾರದೊಳ ಗಾಯಾಸ ಗೊಳಿಸದಲೆ ಕಾಯಬೇಕೊ ವಾಯುಪಿತ ಶ್ರೀ ಜಗನ್ನಾಥ ವಿಠ್ಠಲ ಹೃ ತ್ತೋಯಜದೊಳಗೆ ಕಾಂಬುಪಾಯ ಮಾರ್ಗವ ತೋರೆ 7
--------------
ಜಗನ್ನಾಥದಾಸರು
ನದಿಗಳು ಗಂಗಾದೇವಿ ನಮೋ ನಮೋ ಗಂಗಾದೇವಿ ತರಂಗಿಣಿ ನೀ ಮುದ್ದು ಮಂಗಳಾಂಗನ ಮುಖ ತೋರಿಸೆ ಗಂಗಾದೇವಿ ಪ ವಾಮನನಖದಿಂದ ಒಡೆದÀು ಬ್ರಹ್ಮಾಂಡ ಬಹಿರಾವರಣದಿಂದಿಳಿದೆಯೆ ಬಹಿರಾವರಣದಿ ಇಳಿದು ನಿರಂಜನ ಆಲಯದೊಳು ಬಂದೆ ಭರದಿಂದ1 ಹರಿಪಾದೋದಕವಾಗಿ ಹರಿದು ಬಂದೆಯೆ ನೀನು ಹರನ ಜಟೆಯಲ್ವಾಸವ ಮಾಡಿ ಹರನ ಜಟೆಯಲ್ವಾಸವ ಮಾಡಿ ನೀ ಮೇರುಗಿರಿಯಲ್ಲಿ ನಾಲ್ಕು ಸೀಳಾದೆಯೆ 2 ಜಕ್ಷು ಭದ್ರಾ ಸೀತಾ ಎಂಬ ಮೂವರ ಬಿಟ್ಟು ಭರತಖಂಡಕೆ ಬಂದೆ ಬಹುದೂರ ಭಾಗಮ್ಮ ಪ್ರತ್ಯಕ್ಷ ಅಳಕನಂದನ ತಾಯಿ 3 ಸಾಗರನರಸಿ ಪ್ರಯಾಗದಿ ಮರದ ಬಾಗಿಣವನು ಕೊಂಬೆ ವೇಣಿಯ ದಾನ ಕೊಂಬೆ ವೇಣಿಯ ದಾನ ಮುತ್ತೈದೇ- ರಾಗಿರೆಂದ್ಹರಸಿ ಪೂಜೆಯಗೊಂಬೆ 4 ಸಗರನ ಮಕ್ಕಳ ಅಗಿವೆ ಕಡಿವೆನೆಂದು ಭಗೀರಥನ್ಹಿಂದೆ ಬಂದೆಯೆ ನೀನು ಭಗೀರಥನ್ಹಿಂದೆ ಬಂದೆಯೆ ಹಿಮಾಲಯ ದಾಟಿ ಜಾಹ್ನವಿ 5 ಗಮನ ಮಾಡುವ ಗಂಗಾ ಸಮನಾಗಿ ಹರಿದೆ ಸಂಗಮಳಾಗಿ ಸಮನಾಗಿ ಹರಿದೆ ಸಂಗಮಳಾಗಿ ತ್ರಿವೇಣಿ ಯುಗಳ ಪಾದಗಳಾರು ತೋರಿಸೆ 6 ಭೀಷ್ಮನ ಜನನಿ ಭೀಮೇಶ ಕೃಷ್ಣನ ಪುತ್ರನ(ತ್ರಿ ನೀ?) ದೋಷವ ಕಳೆದÀು ಸಂತೋಷದಿ ದೋಷವ ಕಳೆದÀು ಸಂತೋಷದಿ ಸಾಯುಜ್ಯ ಬ್ಯಾಸರದಲೆ ಕೊಟ್ಟು ಸಲಹಮ್ಮ 7
--------------
ಹರಪನಹಳ್ಳಿಭೀಮವ್ವ
ನದಿಗಳು ಭಾಗೀರಥ್ಯಾದಿ ನದಿಗಳ ತಾರತಮ್ಯ ನಿಜ ಭಾಗವತ ತಿಲಕ ನಿಮಿರಾಜಗೊಲಿದು ವಸಿಷ್ಠ ರಾಗದಲಿ ಕೇಳಿ ಜನರಯ್ಯಾ ಪ ಒಂದು ದಿನ ಗೋದಾವರಿಯ ತಟದಿ ನಿಮಿರಾಜ ಸಂದು ಯಜ್ಞವ ಮಾಡುತಿರಲಾಗ ಪರಮೇಷ್ಠಿ ನಂದನೆನಿಪ ವಶಿಷ್ಠ ಮಹಮುನಿ ನಡೆತಂದ ಮೇಧಾಗಾರಕೆ ಬಂದ ಯತಿವರನ ಮಣಿಪೀಠದಲಿ ಕುಳ್ಳಿರಿಸಿ ಸುಂದರಾಧಿಪ ಬೆಸಸಿದಾ 1 ವ್ರತಿಪತಿ ವಶಿಷ್ಠ ವೈಷ್ಣವಕುಲ ಶಿರೋರತುನ ಶ್ರುತಿಶಾಸ್ತ್ರ ಸರ್ವಜ್ಞ ಗಂಗಾದಿ ಪುಣ್ಯತೀ ಮತ್ಪಿತನೆನುತ ಪದಕೆರಗುವಾ ಕ್ಷಿತಿಪನೋಕ್ತಿಯ ಕೇಳುತಾನಂದ ಶರಧಿಯೊಳು ಗತನಾಗಿ ರೋಮ ಲಕ್ಷಣ ಕಳೇವರದಿ ಪುಳ ನೃಪತಿಗಿಂತೆಂದನು 2 ಕೇಳು ಜನನಾಥ ಮಹಭಾಗ ನಿನ್ನಯ ಪ್ರಶ್ನ ದೇಳಿಗೆಗೆ ಎನ್ನ ಸಂತೋಷ ಕಲ್ಪತರು ತ ಶಿಷ್ಯರೊಳು ಮೌಳಿಮಣಿ ನೀನಹುದು ನಿಖಿಳ ನದಿಗೊಳಿಪ್ಪ ಶ್ರೀಲೋಲನ ಸುಮೂರ್ತಿಗಳು ತಾರÀತಮ್ಯ ಸುವಿ ಮಾನವ ಇದನಾಲಿಪುದು ನೀನೆಂದನು 3 ಹರಿಪಾದನಖದ ಸಂಸ್ಪರ್ಶ ಮಾತ್ರದಿಂದಲಿ ಸುರತರಂಗಿಣಿ ಶ್ರೇಷ್ಠಳೆನಿಸುವಳು ನದಿಗಳೊಳು ದೊರೆಮೆನಿಪನಾ ತೀರ್ಥಕೆ ಸರಿತಾಗಗಣ್ಯ ಗೋದಾವರಿ ನಳಿನಿಗಿಂ ಕೊರತೆಯೆನಿಪಳೈ ವತ್ತು ಗುಣದಲಿ ಶಂಖ ಚರಣ ಸುಗದಾಬ್ಜ ಶೋಭಿತ ವೀರನಾರಾಯಣ- ರಸೆನಿಪನಾ ಸಲಿಲಕೆ 4 ಹರಜಟೋದ್ಭವ ಕುಶಾವರ್ತಿಗೆ ಸಹಸ್ರಗುಣ ಚಾರು ಕಂ ಬುರಲಿ ವಾರುಚಿ ಧನುರ್ಧಾರಿ ಯಮನಂದನಲಿ ವಿಹರಿಸುತಿಹನಾಜಲದೊಳು ತುರುಗಾಯ್ದ ದೇವನಂಗಜ ನದಿಗೆ ಈರೈದು ವಾಗ್ದೇವಿ ಶರಧಿಯೊಳು ಪು ಗೋದ ರಂಗನಾಥನೆನಿಪ 5 ಆ ಯಮಳನದಿಗಳಿಗೆರಡು ಗುಣಾಧಮ ಸರಯು ತೋಯಾಧಿಪತಿ ರಾಮ ಸರಯು ನೀರೆಂದು ಗುಣ ವಿಹಾಯ ಸಮಮಣಿತನಯಳೆ ಸ್ಥಾಯಕೆ ಚತುರ್ಬಾಹು ವಿಷ್ಣು ಕಾವೇರಿಗೆ ನಾಯಕ ವರಾಹದೇವಾ6 ಸಿಂಧು ಭವನಾಶಿಗೀರ್ವರು ಸಮರು ಕ್ಷೀರಾಬ್ಧಿ ಮಂದಿರ ನೃಸಿಂಹರಲ್ಲಿಹರು ಭವನಾಶನಿಗೆ ತಂದೆಯೆನಿಪ ತ್ರಿವಿಕ್ರಮ ಒಂದೆನಿಸುವುವು ನಾಲ್ಕು ನದಿಗಳು ಗುಣಗಳಿಂದ ಮುಂದಿಹ ಪದದಿ ಪೇಳ್ವೆ ಪೆಸರು ಹರಿರೂಪ ನೆಲ ತಮ್ಮಿಂದೀರಗಿಂತೆಂದನೂ 7 ವಾಜಿವದನು ಮಂಝರಾನದಿಯೊಳಿಹನು ನವ ರಾಜೀವನಯನ ಶ್ರೀಧರ ಭೀಮರಥಿಯೊಳಿಹ ವಿರಾಜಿಪ ಮಲಾಪಹಾರಿ ಭಾಜನದೊಳಿಪ್ಪ ದುಷ್ಟ ಜನರನು ಮರ್ದಿಸುವ ಶ್ರೀ ಜನಾರ್ದನ ನಾಲ್ಕು ನದಿಗಳು ದ್ವಿಗುಣದಿಂದಾ ನಿತ್ಯ ನೈಜಭಕ್ತಿ ಜ್ಞಾನದಿ 8 ಭೀಮರಥಿ ಸಮ ಪಿನಾಕಿನಿಯೊಳಗೆ ಕೇಶವನು ಭೂಮಿಯೊಳು ಪೃಥಕು ಪೃಥಕು ಸುಖ ಜ್ಞಾನದಿ ಶ್ರೀ ಮನೋರಮ ಕೇಶವಾದಿ ರೂಪಗಳಿಂದ ಸ್ವಾಮಿಯೆನಿಸುವನಲ್ಲ ಸ್ನಾನಾದಿ ಸತ್ಕರ್ಮ ಮೋಕ್ಷ ಗಳೀವನೊ 9 ಈ ನದಿಗಳೆರಡು ಗುಣ ಪುಷ್ಕರಣಿನಿಚಯ ನ್ಯೂನವೆನಿಪವು ಮುಕ್ತಿ ದತ್ತಾತ್ರಯನು ಕೃಷ್ಣ ಮಾನಸ ಸರೋವರದೊಳು ಜ್ಞಾನಾತ್ಮ ವಾಮನನ ಶ್ರೀ ಭೂ ಸಹಿತ ಪ್ರಸ ನ್ನಾನನಾಬ್ಜದಿದರೆ ಜಘನಸ್ಥಿತಾಭಯ ಸು ಧೇನಿಪುದು ಎಂದಾ 10 ದೇವಖಾತಗಳು ಶತಗುಣಕಡಿಮೆ ಮಾನಸ ಸ ರೋವರಕೆ ಇತರ ಪುಷ್ಕರಣಿಗಳಿಗಲ್ಪಗುಣ ಪಾವನವಗೈವ ಕ್ಷುದ್ರಾ ಪ್ರಾವಹಿಗಳೀರೈದು ಗುಣದಿ ಕಡಿಮೆ ಲಕ್ಷ್ಮೀ ದೇವಿಪತಿ ನಾರಾಯಣನ ಚಿಂತಿಸೆಂದು ನೃಪ ಭವನೋವ ಪರಿಹರಿಪುದೆಂದು 11 ಈ ಸಲಿಲತೀರ್ಥಂಗಳೆರಡು ಗುಣದಿ ತಟಾಕ ಶೇಷಪರ್ಯಂಕ ಅಚ್ಯುತನಿಹನು ಸಜ್ಜನರ ವಾಸವಾಗಿಹನು ಚಕ್ರಿ ಘೋಷಗೈವ ಧರಾಂತಕೂಪಗಳೊಳಿರುತಿಹ ನಾ ಕೇಶನದಿಗಳ ತಾರÀತಮ್ಯ ರೂಪಗಳನುಪ ಪಾಸನಗೈವುದೆದೆಂದು 12 ಈ ತೆರದಿ ನಿಮಿರಾಜಗೋಸುಗ ವಶಿಷ್ಠಮುನಿ ತಾ ತಿಳಿದ ಕಥಾತಿಶಯ ಪರಮ ವಿಬುಧರು ಧ ಪ್ರೀತಿಯಿಂದಾಚರಿಸಲು ಶೀತಾಂಶು ಕಮಲಾಪ್ತರುಳ್ಳನಕ ಸುರಪತಿ ನಿ ಕೇತನದಿ ವಿವಿಧ ಭೋಗಗಳಿತ್ತು ಶ್ರೀ ಜಗ ಸಂಪ್ರೀತಿಯಿಂದನುರಾಗದೀ 13
--------------
ಜಗನ್ನಾಥದಾಸರು
ನಮೋ ನಮೋ ನಾರಾಯಣ ಸನ್ನುತ ಸುಗುಣ ಗುಣಾರ್ಣವ ಸುಮನಪತಿ ಶ್ರೀ ಭೂದುರ್ಗಾರಮಣ ಮಾಂಪಾಹಿ ಪ ಲೋಕೇಶ ವಿಧಾತಜನಕ ರ ತ್ನಾಕರಮಥನ ಜಗದಾಘಪಹ ಶ್ರೀಕಂಠ ಪಿತಾಮಹ ಮದನನೇಕ ಸುಲಾವಣ್ಯ ಆಕಾಶ ತರಂಗಿಣಿ ಪಿತ ಕರುಣಾಕರ ಕೌಮೋದಕಿಧರ ಧರಣಿ ಕುವರಾಂತಕ ಕರುಣದಿ ಚಿತ್ತೈಸು ನೀ ಹಸಿಗೆ ಶೋಭಾನೆ 1 ಅರದೂರಾಬ್ಜ ಭವಾಂಡೋದರ ಶರಣಾಗತ ಸವಿ ಪಂಜರ ಅಂ ಬರ ಭೂ ಪಾತಾಳದಿ ವ್ಯಾಪ್ತಾ ಜರಮೃತ್ಯು ವಿದೂರ ಕರಿವರ ಪ್ರಭಂಜನ ಪೀತಾಂ ಬರಧರ ಖಳಕುಲವನ ವೈಶ್ವಾ ನರ ನಾರದನುತ ಮಹಿಮನೆ ಚಿತ್ತೈಸು [ಹಸೆಗೆ] 2 ಸತ್ವರಜಸ್ತಮ ಜೀವರ ತತ್ ಸಾಧನವರಿತವರಗತಿ ಗ ಳಿತ್ತು ಪೊರೆವ ವಿಬುಧವರದ ವರಸತ್ಯವತಿ ಸೂನು ಉತ್ತಮ ಪುರುಷನೆ ಚೇತನ ಜಡದ ತ್ಯಂತವಿಭಿನ್ನ ವಿಜಯ ಸಖ ಸತ್ಯಸುಕಾಮ ಕಮಲನಯನನೆÉ ಚಿತ್ತೈಸೊ [ಹಸೆಗೆ]3 ವಾಸವತನುಸಂಭವ ಸಾರಥಿ ವೀಶುದ್ಭುಜ ವಿಧೃತ ಸುದರ್ಶನ ದಶಾರ್ಹ ದಿವಕರನಿಭ ಸಂಕಾಶÀ ಸುಭದ್ರಾತ್ಮಾ ವಾಸುಕಿ ಪರ್ಯಂಕಶಯನ ಹರಿ ವ್ಯಾಸಕಪಿಲ ದತ್ತಾತ್ರಯ ಮಹಿದಾಸ ವೃಷಭರೂಪ ರಮೆಯರಸ ಚಿತ್ತೈಸು [ಹಸೆಗೆ]4 ಪಾಂಡವ ಸಖ ಪತಿತ ಸುಪಾವನ ಚಂಡಾಂಶು ನಿಶಾಕರ ಪಾವಕ ಮಂಡಲದೊಳಗತಿ ಬೆಳಗುವ ಕೋದಂಡ ಧೃತ ಕರಾಬ್ಜ ಕುಂಡಲ ಮಂಡಿತ ಗಂಡಸ್ಥಳ ಖಂಡಮಹಿಮ ಖೇಚರ ಪುರಹರ ಗಂಡುಗಲಿ ಜಗನ್ನಾಥ ವಿಠಲ ಚಿತ್ತೈಸೋ [ಹಸೆಗೆ]5
--------------
ಜಗನ್ನಾಥದಾಸರು
ನಮೋ ನಮೋ ಸುಶೀಲೇಂದ್ರ | ಗುರುವರಿಯ ವೈಷ್ಣವ ಸುಮತವಾರಿಧಿ ಚಂದ್ರ | ಸಕುವಿ ಸಂಸ್ತುತ | ಅಮಿತ ಸದ್ಗುಣ ಸಾಂದ್ರ || ಸುಮತಾಹಿವೀಂದ್ರ ಪ ನಮಿಪ ಜನರಿಗೆ ಅಮರ ಭೂರುಹ ಸಮಸುಖಪ್ರದ ವಿಮಲ ಚರಿತನೆ ಯಮಿವರ್ಯ ಸುವೃತೀಂದ್ರ ಮಾನಸ ಕಮಲರವಿ ಮಹಿ ಸುಮನಸಾಗ್ರಣಿ ಅ.ಪ ಅಸಮ ಮಹಿಮೋದರ | ತವಸುಪ್ರಭಾವವ ಸುಜನ ವಂದಿತ ಸ್ವಶನ ಸುಮತೋದ್ಧಾರ || ದಯ ಪಾರವಾರ || ವಸುಧೆಯೊಳು ಮೊರೆಹೊಕ್ಕ ಜನರಿಗೆ ಕುಶಲಪ್ರದ ನೀನೆಂದು ಬುಧ ಜನ ಉಸುರುವದು ನಾ ಕೇಳಿ ನಿನ್ನ ಪದ ಬಿಸಜ ನಂಬಿದೆ ಪೋಷಿಸನುದಿನ 1 ದೀನಜನ ಸುಖದಾತ | ಸುಕೃತೀಂದ್ರ ಕೋಮಲ ಬಾಣಲೋಕ ವಿಖ್ಯಾತÀ || ದ್ವಿಜಕುಲಕೆ ನಾಥ || ಕ್ಷೋಣಿಯೊಳು ನೀ ಒಲಿದ ಮಾತ್ರದಿ ಮೌನಿವರ್ಯ ಶ್ರೀ ರಾಘವೇಂದ್ರರು ಸಾನುರಾಗದಿ ಸಲಹುವರು ಪವ ಮಾನ ಶಾಸ್ತ್ರ ಪ್ರವೀಣ ಜಾಣ 2 ಪಿಂಗಲೇಂದ್ರ ಪ್ರಕಾಶ | ಸುಪವಿತ್ರ ವರದತ ರಂಗಿಣಿ ತಟವಾಸ | ಸದ್ಧರ್ಮ ಸ್ಥಾಪಕ ಮಂಗಳಾಂಗ ಯತೀಶ | ಪಾಪೌಘನಾಶ || ತುಂಗವಿಕ್ರಮ ಶಾಮಸುಂದರನಂಘ್ರಿ ಕಮಲಕೆ ಭೃಂಗ ಭವಗಜಸಿಂಗ ಕರುಣಾ ಪಾಂಗದೀಕ್ಷಿಸೆ ಇಂಗಿತಜ್ಞರ ಸಂಗಪಾಲಿಸು 3
--------------
ಶಾಮಸುಂದರ ವಿಠಲ
ನಿನ್ನ ನಂಬಿದೆ ಓ ಶಾರದೇ ಪ ಸನ್ನುತಾಂಗಿ ಇನ್ನೂ ಕರುಣ ಬಾರದೆ ಅ.ಪ ಸಕಲಕಳಾಧರೆ ಸಕಲಕಲಾಧರೆ ವಿಕಸಿತ ಸುಮಹಾರೆ ಜ್ಞಾನಸಮೀರೆ ಪ್ರಕಟಿತ ಮಧುರ ಜಪಮಾಲಾಕರೆ ಶಿಖಿ ವೀಣಾಧರೆ ಮೃದುತನುರುಚಿರೆ 1 ಧಾತಾ ಮನೋನ್ಮಣಿ ಧ್ವಾಂತ ಸಂಹಾರಿಣಿ ಪಾತಕವಾರಿಣಿ ಮಾತೆ ಕಲ್ಯಾಣಿ ಭೂತಲ ಕಣ್ಮಣಿ ರಾಗತರಂಗಿಣಿ ಖ್ಯಾತಚರಿತ ಮಾಂಗಿರಿವರತೋಷಿಣಿ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್