ಒಟ್ಟು 330 ಕಡೆಗಳಲ್ಲಿ , 67 ದಾಸರು , 310 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನಾನು ಕರುಣಿಸೊ ಎನ್ನೊಡೆಯನೆ ಪ. ಕೌಸ್ತುಭ ಭೂಷಣಮೆಟ್ಟಿದ ನವರತ್ನದ್ಹಾವಿಗೆಇಟ್ಟ ಕಸ್ತೂರಿ ತಿಲಕವ 1 ಮಂದಹಾಸವು ದಂತಪಂಙÉ್ತಯುಉಂದದ ಕಡೆಗಣ್ಣ ನೋಟವುಅಂದವಾದ ಕುರುಳುಗೂದಲುಮುದ್ದು ಸುರಿವೋ ಮುಖವ ನಾ 2 ಮೊಲ್ಲೆ ಮಲ್ಲಿಗೆ ದಂಡೆ ಕೊರಳಲಿಚೆಲ್ವ ಕಂಕಣ ಕೈಯಲಿಗೊಲ್ಲಸತಿಯರ ಕುಚಗಳಲ್ಲಿ[ಅಲ್ಲಳಿ] ಮಾಡಿ ನಗುವನ3 ವೃಷ್ಟಿ ಕರೆಯಲು ಅ-ಸುರರೆಲ್ಲರು ಓಡಲುಕ್ರೂರ ಕಾಳಿಯ ಫಣಗಳಲ್ಲಿಧೀರ ಕುಣಿಕುಣಿದಾಡಿದ 4 ಎನ್ನ ಬಂಧನ ತರಿಸಿದನೆಎನ್ನ ಪಾಪವು ಓಡಿತುಅನ್ಯದೈವವ ಭಜಿಸಲ್ಯಾತಕೆಮನ್ನಿಸೊ ಹಯವದನನೆ5
--------------
ವಾದಿರಾಜ
ಇದು ಏನು ಚರಿಯಾ ವೆಂಕಟರಾಯ ಇದು ಏನು ಚರಿಯಾ ಪ ಇದು ಏನು ಚರಿಯಾ ಶ್ರೀಯದುಕುಲ ತಿಲಕನೆ ಸದನತ್ರಯವ ಬಿಟ್ಟು ಹುದುಗಿಕೊಂಡಿರುವುದು ಅ.ಪ ಕನಕಪರ್ವತದಲ್ಲಿ ದಿನದಿನ ಮಾಡುವ ಘನ ಪೂಜೆಯನೆ ನೀನೆನಿಸದಿರುವುದು 1 ಪೊಂಬಣ್ಣಾಂಬರವುಟ್ಟು ಹೊಂಬಣ್ಣಾಂಬರವಿಟ್ಟು ಕಂಬೆಣ್ಣೆಯನೆ ಬಿಟ್ಟು ದಿಗಂಬರನಾಗಿದ್ದು 2 ಬುತ್ತಿ ಮೊದಲಾದ ಉತ್ತಮನೈವೇದ್ಯ ಹೊತ್ತಿಗುಂಬೋದು ಬಿಟ್ಟು ತುತ್ತುಗಾಣದಿರುವೋದು 3 ಭಾಗ್ಯವಂತನು ನೀನು ಭಾಗ್ಯರೂಪಳು ರಾಣಿ ಭಾಗ್ಯತನವ ಬಿಟ್ಟು ನಿರ್ಭಾಗ್ಯನಾಗಿರುವೋದು 4 ದಾತಗುರುಜಗನ್ನಾಥ ವಿಠಲ ಜಗದಿ ನಾಥನಾಗದೆ ಅನಾಥನಾಗಿರುವೋದು 5
--------------
ಗುರುಜಗನ್ನಾಥದಾಸರು
ನಂದಕುಮಾರ ಸಕಲಾಧಾರಾ ಪ ಇಂದೀವರಯುಗಚರಣ ಮನೋಹರ ಕುಂದವದನ ನಿಗಮಾಂತ ಸಂಚಾರಾ ಅ.ಪ ಉಡಿಗೆ ತೊಡಿಗೆಗಳ ಉಡಿಸುವೆ ತೊಡಿಸುವೆ ಮುಡಿಗೆ ಮಲ್ಲಿಗೆ ಮಲ್ಲೆಯಳವಡಿಪೆ | ರಂಗ ಉಡುಪತಿ ಫಾಲಕೆ ತಿಲಕವನಿಡುವೆ ಅಡಿಗಂದುಗೆ ಗೆಜ್ಜೆ ಪಾಡಗವಿಡುವೆ | ರಂಗ 1 ಕಿವಿಗಳಿಗೆ ಮುತ್ತು ಹವಳದಾಭರಣವ ಹವಣಿಸಿ ಸಿಂಗಾರಗೈವೆನೋ | ರಂಗ ನವಮಣಿಮಾಲೆಯ ಕೊರಳಿಗೆ ಧರಿಸುವೆ ದಿವಿಯ ಪೀತಾಂಬರವಳವಡಿಪೇ | ರಂಗಾ 2 ಬೆರಳಿಗುಂಗುರಗಳ ಹರುಷದೊಳಿಡುವೆ ಕರದೊಳಿಡುವೆ ನಿನ್ನ ಮುರಳಿಯನು | ರಂಗ ಚರಣಯುಗಕೆ ನಿನ್ನ ಸಕಲವನರ್ಪಿಪೆ ಕರುಣದಿ ಬಾರೊ ಮಾಂಗಿರಿಯೊಡೆಯಾ | ರಂಗ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಗಣಪತಿಯ ಪದಾಬ್ಜಕೆ ನಮಿಸಿರಾಗದಿಂದಲಿ ಶಾರದೆಯ ಸ್ಮರಿಸಿನಾಗಭೂಷಣ ಪದಾಬ್ಜಯುಗಕೆ ತಲೆವಾಗಿ ಬಾಲೆಯರಾಶೀರ್ವಾದದ ಪದಗಳರಾಗದಿ ಪಾಡಿ ಪೊಗಳುವೆ 1 ಸಾಲಿ ಸೀರೆಯನುಟ್ಟು ಸರಮುತ್ತ ಕಟ್ಟುಬಾಲಕಿಯರೊಳು ಕಟ್ಟಾಣಿ ನೀನಾಗುಮೇಲೆನೀ ಅಷ್ಟಪುತ್ರರನು ಪಡೆದು ಸುಖಿಬಾಳು ಸ್ತ್ರೀಯರಿಗೆಲ್ಲಾ ದೊರೆಯಾಗಿರುಶ್ರೀ ಮೈಲಾರಲಿಂಗನ ಕೃಪೆಯಿಂದಾ2 ಪಲ್ಲಕ್ಕಿಯ ಸಾನಂದದೊಳೇರುಹಲ್ಲಣಿಸಿದ ಕರಿತುರಗವನೇರುಎಲ್ಲಾಭರಣವನಿಟ್ಟು ಸುಖದಿ ಪ್ರಾಣದೊಲ್ಲಭಸಹಿತ ಸಂತೋಷದೊಳಿರು ಶ್ರೀಕೊಲ್ಲೂರ ಮೂಕಾಂಬೆಯ ಕೃಪೆಯಿಂದಾ 3 ಚಂದ್ರಕಸ್ತುರಿಯ ತಿಲಕಗಳನಿಟ್ಟುಚಂದದಿ ಕುಂಕುಮ ರೇಖೆಯನಿಟ್ಟುಇಂದೀವರನೇತ್ರಕೆ ಕಪ್ಪಿಟ್ಟು ಆಚಂದ್ರಾರ್ಕವು ಸುಖಬಾಳು ಶೃಂಗೇರಿಯಚಂದ್ರಮೌಳೀಶನ ಕೃಪೆಯಿಂದಾ4 ಅರಿಶಿನ ಚೂರ್ಣವನು ಲೇಪಿಸುತಪರಿಮಳಗಂಧವ ಪಸರಿಸಿಕೊಳುತಕರಿಯಮಣಿಯ ಮುತ್ತಿನ ಸರಗಳನಿಟ್ಟುಪರಮಸಂತೋಷದೊಳಿರು ಶ್ರೀ ಹಂಪೆಯವಿರೂಪಾಕ್ಷನ ಕೃಪೆಯಿಂದ 5 ಪರಿಮಳಿಸುವ ಪುಷ್ಪಸರಗಳ ಮುಡಿದುಗುರುಹಿರಿಯರ ಆಶೀರ್ವಾದವ ಪಡೆದುಹರುಷದಿ ಪುತ್ರಪೌತ್ರರ ಸಲಹುತ ಪತಿಚರಣಸೇವೆಯ ಮಾಡಿ ಸುಖಮಿರು ಕುಕ್ಕೆಯವರ ಸುಬ್ರಹ್ಮಣ್ಯನ ಕೃಪೆಯಿಂದ 6 ಸರಸ್ವತಿಯಂತೆ ವಿದ್ಯಾವಂತೆಯಾಗುಸಿರಿಯಂತೆ ಸೌಭಾಗ್ಯವಂತೆ ನೀನಾಗುಅರುಂಧತಿಯಂತೆ ಪತಿವ್ರತೆಯಾಗುತಪರಮಾನಂದದೊಳಿರು ಶ್ರೀ ಕೆಳದಿಯಪುರದ ರಾಮೇಶನ ಕೃಪೆಯಿಂದ 7
--------------
ಕೆಳದಿ ವೆಂಕಣ್ಣ ಕವಿ
* ಎಂಥಾದ್ದೊ ಶ್ರೀ ತಿರುಪತಿ | ಎಂಥಾದ್ದೊ ಪ. ಎಂಥಾದ್ದೊ ತಿರುಪತಿ ಕ್ಷೇತ್ರ | ಸ ತ್ಪಾಂಥರಿಗಿಲ್ಲಿ ಸುಗಾತ್ರ | ಆಹ ಕಂತುಪಿತನು ಇಲ್ಲಿ ನಿಂತು ಭಕ್ತರಿಗೆಲ್ಲ ಸಂತಸಪಡಿಸುವನಂತಾದ್ರಿನಿಲಯ ನಿನ್ನೆಂದಾದ್ದೊ ಅ.ಪ. ನಾಗಾದ್ರಿಗಿರಿಯ ಮೆಟ್ಟುಗಳು | ಅ ಯೊಗ್ಯರಿಗಿದು ದುರ್ಲಭಗಳು | ಅಲ್ಲಿ ಭಾಗವತರ ಸಮ್ಮೇಳಗಳು | ಶಿರ ಬಾಗಿ ವಂದಿಪರು ಜನರುಗಳು | ಆಹ ಪೋಗುತ ಗಾಳಿಗೋಪುರವ ಕಂಡೆರಗಿ ಮುಂ ದ್ಯಾಗುತ ಸಜ್ಜನ ನೀಗುವರು ದುಃಖ1 ಹರಿಮಂದಿರ ಮಹಾದ್ವಾರ | ಬಹು ಜ ನರು ಕೂಡಿಹರು ವಿಸ್ತಾರ | ಬೀದಿ ನಡೆದು ಪದ್ರಕ್ಷಿಣಾಕಾರ | ಭೂ ವರಹನ ಸ್ವಾಮಿ ಕಾಸಾರ | ಆಹ ಹರುಷದಿಂದಶ್ವತ್ಥ ತರುವ ಕಂಡೆರಗಿ ಹರಿ ದರುಶನಕಾಗಿ ಹಾರೈಸುವ ಜನತತಿ 2 ಸ್ವಾಮಿಪುಷ್ಕರಣಿಯ ಸ್ನಾನ | ಮನ ಕಾನಂದಪ್ರದ ಸುಜ್ಞಾನ | ಭಾನು ತಾನುದಿಸುವನು ಮುಂದಿನ | ಸುಖ ಕೇನೆಂಬೆ ಹರಿಯ ದರ್ಶನ | ಆಹ ನೀನೆ ಗತಿಯೆಂದು ನಂಬಿದವರ ಪೊರೆವ ಭಾನುಪ್ರಕಾಶ ಹಣ ಕಾಣೀಕೆ ಕೈಕೊಂಬ 3 ಗರುಡ ಸ್ಥಂಭವನೆ ಕಾಣುತ್ತ | ಬಾಗಿ ಕರಮುಗಿದು ಒಳದ್ವಾರ ಪೊಗುತ | ವಿಮಾನ ಗಿರಿ ಶ್ರೀನಿವಾಸಗೆರಗುತ್ತ | ಬಂದು ವರ ತೊಟ್ಟಿ ತೀರ್ಥ ಕೊಳ್ಳುತ್ತ | ಆಹಾ ತರತರದ ಕಾಣಿಕೆ ಕೊಪ್ಪರಿಗೆಗೆ ಸುರಿಯುತ್ತ ನಿರುತ ನೀ ಸಲಹೆಂದು ಮೊರೆಯಿಡೆ ಭಕ್ತರು 4 ಗರುಡನ ಎದುರೊಳು ನಿಂದು | ಸ್ವಾಮಿ ಗರುವ ರಹಿತ ತಾ ಬಂದು | ಬಂದ ವರಭಕ್ತರನೆ ಕಾಯ್ವ ಬಿರುದು | ಇಂಥ ಹರಿಗೆ ಅಮೃತೋದಕವೆರೆದು | ಆಹಾ ಜರಿಯ ಪೀತಾಂಬರ ಉಡಿಸಿ ಸರ್ವಾಭರಣ ಹರಿಗೆ ಶೃಂಗರಿಸಿಪ್ಪ ಪರಿಯ ವರ್ಣಿಸಲಳವೆ 5 ಶಿರದಲಿ ಪೊಳೆವ ಕಿರೀಟ | ಕ ಸ್ತೂರಿ ತಿಲಕವು ಸುಲಲಾಟ | ಸುರ ನರರ ಪಾಲಿಪ ವಾರೆ ನೋಟ | ಕರ್ಣದಿ ಕುಂಡಲ ಮಾಟ | ಆಹ ವರ ಸಂಪಿಗೆಯ ಪೋಲ್ವ ನಾಸಿಕದ ಕದಪುಗಳ್ ಮೆರೆಯೆ ಕನ್ನಡಿಯಂತೆ ಮುಗುಳು ನಗೆಯ ಚೆಲ್ವ 6 ಸಿರಿವತ್ಸ ಕೌಸ್ತುಭಹಾರ | ಕಂಠ ಕರಶಂಖ ಚಕ್ರವಪಾರ | ಸುರ ನರರಿಗಭಯ ತೋರ್ಪಧೀರ | ಕರ ದ್ವರವ ಕೊಡುವಂಥ ಉದಾರ | ಆಹ ತರತರದ ಪುಷ್ಪಗಳ್ ನವರತ್ನ ತುಳಸಿಯ ಮೆರೆವೊ ಹಾರಗಳನು ಧರಿಸಿರ್ಪ ಗಂಭೀರ 7 ವಕ್ಷಸ್ಥಳದಲ್ಲಿ ಲಕುಮಿ | ಹರಿ ಅವನಿ | ಜಗ ರಕ್ಷಿಪ ಮಮಕುಲಸ್ವಾಮಿ | ಸರ್ವ ಸಾಕ್ಷಿಯಾಗಿದ್ದು ತಾ ಪ್ರೇಮಿ | ಆಹ ಪಕ್ಷಿವಾಹನ ಸುರಾಧ್ಯಕ್ಷ ಖಳ ಶಿಕ್ಷ ಪಕ್ಷವಹಿಸಿ ಸುರರ ರಕ್ಷಿಪ ಸರ್ವದ 8 ನಡುವಿನ ನಾಭಿ ವಡ್ಯಾಣ | ಮೇಲೆ ಕುಂದಣ | ನೆರೆ ಪಿಡಿದುಟ್ಟ ಪೀತಾಂಬ್ರವರ್ಣ | ಕಾ ಲ್ಕಡಗ ರುಳಿಯು ಗೆಜ್ಜೆ ಪೂರ್ಣ | ಆಹ ಮಡದಿಯರುಭಯದಿ ಪರಿಶೋಭಿಸುತಿರೆ ಪಾದ ದೃಢಭಕ್ತರನೆ ಪೊರೆವ 9 ನೋಟಕತಿ ಚಲುವ ಗಂಭೀರ | ಭಕ್ತ ಕೂಟದಿ ಮೆರೆಯುತಪಾರ | ಉತ್ಸ ಸಾರ | ಭೋಕ್ತ ಸಾಟಿರಹಿತ ಬರುವ ಧೀರ | ಆಹ ಕೋಟಿದೇವತೆಗಳ ನೋಟದಿಂ ಪೊರೆಯುವ ದಾಟಿಸುವ ಭವನಾಟಕಧರದೇವ 10 ಮಚ್ಛಾದ್ಯನೇಕ ಅವತಾರ | ಬಹು ಇಚ್ಛೆಯಿಂದಲಿ ಭಜಿಸುವರ | ಕಾಯ್ವ ಮೆಚ್ಚುತ ಮನದಲಿ ನಾರ | ಸಿಂಹ ಸ್ವೇಚ್ಛೆÉ್ಛಯಿಂ ಮೆರೆವ ಜಗತ್ಸಾರ | ಆಹ ತುಚ್ಛಕರು ವಸನ ಬಿಚ್ಚಿ ಸೆಳೆಯುತಿರೆ ಇಚ್ಛೆಯರಿತು ಲಲನೆ ರಕ್ಷಿಸೆನಲು ಪೊರೆದ 11 ಎಲ್ಲೆಲ್ಲಿ ನೋಡಲು ಭಕ್ತ | ಜನ ರಲ್ಲಲ್ಲಿ ನೆರೆಯುತ ಮುಕ್ತಾ | ಧೀಶ ನಲ್ಲದಿನ್ನಿಲ್ಲೆಂದು ಸ್ತುತಿಸುತ್ತ | ಶ್ರೀಶ ಇಲ್ಲೆ ಬಾರೆಂದು ಕರೆಯುತ್ತ | ಆಹ ಸೊಲ್ಲು ಲಾಲಿಸೊ ಎನಲು ಬಲ್ಲಿದ ಭಕ್ತರ ಸೊಲ್ಲಿಗೆ ಒಲಿಯುವ 12 ಬುತ್ತಿ ಪೊಂಗಲು ಮಾರುವರು | ಜನ ರರ್ಥಿಯಿಂದದನು ಕೊಂಬುವರು | ಗೀತ ನೃತ್ಯ ವಾದ್ಯಗಳಿಂ ಕುಣಿಯುವರು | ಅನ್ನ ಅರ್ಥಿಯಿಂ ದಾನ ಮಾಡುವರು | ಆಹ ಎತ್ತ ನೋಡಲು ಮನಕತ್ಯಂತ ಆನಂದ ನಿತ್ಯ ಉತ್ಸವಗಳು ಸತ್ಯಾತ್ಮ ಕೈಗೊಂಬ 13 ಇಂತು ಮೆರೆವೊ ಕ್ಷೇತ್ರ ಘನವು | ನೋಡಿ ನಿಂತು ವರ್ಣಿಸಲಸದಲವು | ಜಗ ದಂತರಾತ್ಮಕನ ವೈಭವವು | ಗುರು ಅಂತರ್ಯಾಮಿ ಶ್ರೀನಿಧಿಯು | ಆಹ ಇಂತು ಬ್ರಹ್ಮೋತ್ಸವ ನಿಂತು ರಥದಿ ಬರುವ ಕಂತುಪಿತ ಶ್ರೀ ಭೂಮಿಕಾಂತೇರ ಒಡಗೂಡಿ14 ಶ್ರೀಪತಿ ಜಲದೊಳಾಡೀದ | ಕೂರ್ಮ ರೂಪದಿಂ ಗಿರಿಯನೆತ್ತಿದ | ಬಹು ಪಾಪಿ ಕನಕಾಕ್ಷನ ಕೊಂದ | ನೃಹರಿ ರೂಪ ವಾಮನ ಭೃಗುಜನಾದ | ಆಹ ಚಾಪಖಂಡನ ಕೃಷ್ಣಚರಿಸಿ ಬತ್ತಲೆ ಕಲ್ಕಿ ಗೋಪಾಲಕೃಷ್ಣವಿಠ್ಠಲನ ಮಹಾಕ್ಷೇತ್ರ15
--------------
ಅಂಬಾಬಾಯಿ
* ನರಹರಿಯೆ ಸುಕ್ಷೇಮವ ಪ. ಪರಮಪ್ರಿಯರಿಗೆ ಇತ್ತು ವರ ಸೇವೆ ಕೈಕೊಂಡು ನಿರುತದಿ ಪಾಲಿಸೆನ್ನ ಘನ್ನ ಅ.ಪ. ದಾಸ ಗುರುಕುಲತಿಲಕರಿವರಿಗೆ ನೀನೀಗ ಘಾಸಿಗೊಳಿಸುವುದುಚಿತವೆ ದೋಷದೂರನೆ ಎಮ್ಮ ಮನವನರಿತವ ಜನರ ದೂಷಣೆಗೆ ಗುರಿ ಮಾಳ್ಪರೆ ಘಾಸಿಪಡುತಿಹರ ಆಯಾಸಪಡಿಸುವುದು ಬಹು ಲೇಸಲ್ಲ ನಿನಗೆ ಥರವೆ ಶೇಷಶಯನನೆ ಎಮ್ಮ ಮಾತು ಲಾಲಿಸಿ ಈಗ ಪೋಷಿಸಲಿ ಬೇಕೊ ಸ್ವಾಮಿ ಪ್ರೇಮಿ 1 ಕಲ್ಪತರುವಂತಿಹರು ಶಿಷ್ಯವೃಂದಕೆ ಇವರು ಇಪ್ಪರೋ ಚಂದ ಜಗದಿ ತಪ್ಪದಲೆ ಆಯುರಾರೊಗ್ಯ ಕೊಟ್ಟು ನೀ ಸರ್ಪಶಯನನೆ ರಕ್ಷಿಸೊ ಒಪ್ಪದಿಂದಲಿ ಎಮ್ಮ ಸೇವೆ ಸಫಲವಗೊಳಿಸಿ ಅಪ್ಪ ಸಂತಸವಪಡಿಸೊ ಬಪ್ಪ ಪೋಪ ಕೀರ್ತಿ ಅಪಕೀರ್ತಿ ನಿನ್ನಡಿಗೆ ಪುಷ್ಪದಂತರ್ಪಿಸುವೆನೊ ನೃಹರಿ 2 ಮನವಚನ ಕಾಯದಲಿ ಅನ್ಯ ಬಗೆಯದೆ ಎಮ್ಮ ಗುರುಗಳನು ಸೇವಿಸುವೆವೊ ಚಿನುಮಯನೆ ನೀ ಸಾಕ್ಷಿಯೋ ಮನುಜರಿದನೇನ ಬಲ್ಲರು ಕೇಳು ತಂತಮ್ಮ ಮನ ಬಂದ ತೆರ ನುಡಿವರೊ ಎನಗದರ ಗೊಡವೇನು ನೀನಿರಲು ಭಯವೇನು ಘನ ಮಹಿಮ ಪೊರೆಯೊ ಬೇಗ ಸ್ವಾಮಿ 3 ಪಂಚಪ್ರಾಣರು ಇವರು ವಂಚನಿಲ್ಲದೆ ಪೇಳ್ವೆ ಮುಂಚೆ ನೀ ಕಾಪಾಡೆಲೊ ಸಂಚಿತಾಗಾಮಿ ಪ್ರಾರಬ್ಧ ದುಷ್ಕರ್ಮಗಳು ಮಿಂಚಿನಂದದಿ ಮಾಡೆಲೊ ಸಂಚಿತಾಗಾಮಿಗಳ ಶಿಷ್ಯರಿಗೆ ಕಳೆವರಿಗೆ ಕೊಂಚ ಬಾಧೆಯ ಕೊಡದೆಲೊ ಸಂಚಿತಿತ ಪ್ರದನೆ ಎನ್ನ ಮೊರೆ ಲಾಲಿಸು ಅಚಂಚಲದ ಕ್ಷೇಮವೀಯೋ ದೇವ 4 ಪರಿ ಪ್ರಾರ್ಥಿಸುವೆ ಶ್ರೀ ಪತಿಯೆ ದಯವ ಮಾಡೊ ನಾ ಪೇಳ್ವುದಿನ್ನೇನು ನಿನ್ನ ಸೇವಾದಿಗಳು ಕೃಪೆಯಿಂದ ಗುರುಗಳಿಂದ ಪಾಪ ಪರಿಹರನೆ ನೀ ಕೈಕೊಂಡು ಕೀರ್ತಿಯನು ಈ ಪೃಥ್ವಿಯಲ್ಲಿ ನೆಲಸೊ ಗೋಪಾಲಕೃಷ್ಣವಿಠ್ಠಲನೆ ನೀ ಕಾಪಾಡು ಕಾಪಾಡು ಜಗದ್ರಕ್ಷಕ ಹರಿಯೆ 5
--------------
ಅಂಬಾಬಾಯಿ
1. ಗಜೇಂದ್ರಮೋಕ್ಷ ನಾರಾಯಣ ಎನ್ನಿರೊ ನಾರಾಯಣ ಎನ್ನಿ ನಾರದಾದ್ಯಖಿಳ ಮುನಿವಿನುತಾಯ ಪಾಹಿಮಾಂ ಘೋರ ಭವದುಃಖ ಸಂಹಾರಾಯ ಪ ಪಾಂಡುದೇಶದೊಳು ಇಂದ್ರದ್ಯುಮ್ನನೆಂಬ ಭೂ ಮಂಡಲಾಧಿಪನು ವೈರಾಗ್ಯದಲಿ ಹರಿಪಾದ ಪುಂಡರೀಕಧ್ಯಾನಪರನಾಗಿತಪಸಿಲಿರೆಚಂಡತಾಪಸನಗಸ್ತ್ಯಾ ಹಿಂಡು ಶಿಷ್ಯರ ಬೆರೆಸಿ ಬರಲು ಸತ್ಕರಿಸದಿರೆ ಕಂಡು ಗಜಯೋನಿಯೊಳು ಜನಿಸು ಪೋಗೆಂದು ಉ- ತಾ ಶುಂಡಾಲನಾದನರಸ 1 ಕ್ಷೀರಸಾಗರ ತಡದೊಳೈವತ್ತು ಯೋಜನ ವಿ- ಸ್ತಾರದಿಂದಿರುವ ತ್ರಿಕೂಟಾದ್ರಿ ಶೃಂಗತ್ರಯದಿ ರಾರಾಜಿತ ತಾಮ್ರರಚಿತ ಕಾಂಚನದಿಂದ ಮೇರುಸಮ ಗಂಭೀರದಿ ಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿ ಸೌರಭಗಳಶ್ವತ್ಥ ಚೂತ ಪುನ್ನಾಗ ಜಂ ವಾರಣೀಂದ್ರನು ಮೆರೆದನು 2 ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲಾ ಕಾನನವು ತೊಳಲುತ್ತ ಬೇಸಿಗೆಯ ಬಿಸಲಿನಲಿ ಕಂಡಿತು ಪಾನಾಭಿಲಾಷೆಯಿಂದ ನಾನಾ ಪ್ರಕಾರದಿಂ ಜಲಕ್ರೀಡೆಯಾಡುತಿರೆ ಏನಿದೆತ್ತಣ ರಭಸವೆಂದುಗ್ರಕೋಪದಿಂ ನೆಗಳು ಏನೆಂಬೆನಾಕ್ಷಣದೊಳು 3 ಒತ್ತಿ ಹಿಡಿದೆಳೆವುತಿರೆ ಇದೆತ್ತಣಯದೆನುತ ಮತ್ತೆ ಇಭರಾಜನೌಡೆತ್ತಿ ಫೀಳಿಡುತ ಎಳೆ ಸೆಳೆದುದು ಬಿಡದೆ ನೆಗಳವು ಇತ್ತಂಡವಿತ್ತು ಕಾದಿತ್ತು ಸಾವಿರ ವರುಷ ಪೊತ್ತರಿಸಿತ್ತೇನೆಂಬೆ ಮತ್ತಾ ಗಜೇಂದ್ರಂಗೆ ಚಿಂತಿಸುತ ಮತ್ತ್ಯಾರು ತನಗೆನುತಲಿ 4 ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ ದಿಂ ದಿವ್ಯಜ್ಞಾನದಿಂ ಕಣ್ತೆರೆದು ಕೈಮುಗಿದು ಮುಕುಂದ ಮುನಿವೃಂದವಂದ್ಯಾ ಇಂದಿರಾರಮಣ ಗೋವಿಂದ ಕೃಷ್ಣ ಭಕ್ತರ ಬಂಧು ಕರುಣಾಸಿಂಧು ತಂದೆ ಸಲಹೆನ್ನ ನಾ ಮಾಯಾಪ್ರಬಂಧದಿ ನೆಗಳಿನಿಂ 5 ಪರಮಾತ್ಮ ಪರಮೇಶ ಪರಿಪೂರ್ಣ ಪರಾತ್ಪರ ಉರುತರ ಪರಂಜ್ಯೋತಿ ಪರಮಪಾವನ ಮೂರ್ತಿ ಪರಮೇಷ್ಠಿ ಪರಮಪುರುಷಾ ನಿರುಪಮ ನಿಜಾನಂದ ನಿರ್ಭಯ ನಿರಾವರಣ ನಿರಂಜನ ನಿರಾಧಾರ ನಿರವೇದ್ಯ ನಿಶ್ಯಂಕ ನಿತ್ಯನೈಮಿತ್ಯಕಾ ನೀ ಸಲಹೆನ್ನನೆಂದಾನೆ 6 ಗುಪಿತ ಕಂಠಧ್ವನಿಯೊ ಳಂತರಾತ್ಮಕನ ನೆನೆವುತ್ತಳುತ್ತಿರಲಿತ್ತ ಕರುಣದಿಂದಾಕ್ಷಣದೊಳನಂತಶಯನದೊಳೆದ್ದನು ಸಂತವಿಸಿ ಸಿರಿಮುಡಿಯ ಗರುಡವಾಹನನಾಗಿ ಚಿಂತೆಬೇಡವೆನುತ ಅಭಯ ಹಸ್ತ ಕೊಡುತ ಶ್ರೀ ದಂತಿವದನನ ನೆಗಹಿದಾ 7 ನೆಗಳ ಬಾಯನು ಚಕ್ರದಲಿ ಸೀಳಿ ಕರಿವರನ ಉಗುವ ಕರುಣದಿಂ ಮೈದಡಹಲ್ಕೆ ಗಜಜನ್ಮ ಕುಂಡಲದಿಂದ ಮಿಗೆ ಶೋಭಿಸುತಲೆಸೆದನು ವಿಗಡ ದೇವಲ ಋಷಿಯ ಶಾಪದಲಿ ಬಿದ್ದಿಳೆಗೆ ಮಿಗೆನಕ್ರನಾಗಿ ಹೂಹೂ ಎಂಬ ಗಂಧರ್ವ ಅಮರರೊಲುಮೆಗೆ ನೆರೆದನೋಲೈಸುತ 8 ಮಣಿಮಯ ಕಿರೀಟಕುಂಡಲ ಹಾರ ಪದಕ ಕಂ ಕಣ ಕೌಸ್ತುಭೋಜ್ವಲ ಸುಗಂಧ ಭೂಷಣ ಹಸ್ತ ಪಾಣಿಯಾ ಶಂಖಚಕ್ರಾಬ್ಜಧ್ವಜ ಕಸ್ತೂರಿ ತಿಲಕ ಪ್ರಣವ ತಾಕಿದನು [ಝಣ ಝಣಿತನೂ]ಪುರ[ದ] ದಂತ ಪಂಕ್ತಿಯ ಕೃಪೆ ಸಿರಿ ಮೊಗದ ಪೀತಾಂಬರದಾಲಂಕೃತದ ಸುರಸಿದ್ಧ ಸಾಧ್ಯ ಸಂದಣಿಯೊಳಗೆ ಮೆರೆದನು 9 ಹರಿಯನುತಿಗೈದಂಘ್ರಿಗೆರಗಲಾಕ್ಷಣದಲಿ ಭರದಿಂದಲೆತ್ತಿ ಕೇಳ್ಮಗನೆನ್ನನೀ ಶರಧಿ ಗಿರಿಶೃಂಗತ್ರಯ ಸಪ್ತದ್ವೀಪದಲಿ [ಧರಣಿದೇವಿ] ವರಲಕ್ಷ್ಮಿಯೊಳು ಗರುಡ ಶೇಷ ನಾರದ ಪ್ರಹ್ಲಾದ ಧ್ರುವ ರೊಲು ಸಿರಿವತ್ಸ ಶಂಖ ಚಕ್ರಾವತಾರದಲಿ ಸ್ಮರಿಸುವವರ ಕಾಯ್ವೆನೆಂದಾ 10 ಆವನಿದನುದಯ ಕಾಲದೊಳೆದ್ದು ಭಕ್ತಿಯಿಂ ಭಾವಶುದ್ಧಿಯಲಿ ಭಜನೆಯ ಮಾಳ್ಪ ಜನರಿಗ ಫಾವಳಿಯ ಪರಿಹರಿಸಿ ನರಜನ್ಮವನು ಕಳೆದು ಪರಿಶುದ್ಧರಾದಹರೆಂ- ದಾ ವಾಸುದೇವನಾಜ್ಞಾಪಿಸಿದ ಗಜೇಂದ್ರ ಸಹಿ ತಾ ವಿಹಂಗಾಧಿಪನನೇರಿ ಬಿಜಯಂಗೈದ ಆ ವೈಕುಂಠಪತಿಯ ನಂಬಿದ ಸೇವಕರಿಗೇನಿದು ಚೋದ್ಯವೇ11
--------------
ಬೇಲೂರು ವೈಕುಂಠದಾಸರು
ಅಂಕಿತ-ತಾತ ಮಹಿಪತಿ ದಯಾಕರಾ | ಶ್ರೀಕರಾ | ಭಯ ಪರಿಹಾರಾ | ಜಗದೋದ್ಧಾರಾ ಪ ವನಜನಯನ ಪಾವನ ಕೃತಲೀಲಾ | ವನ ನಿಧಿ ಶಯನ ಸುವನ ಜಾಲೋಲಾ | ವನಜ ಸುಚರಣಾ ವನನರಪಾಲಾ | ವನಜ ಭವಾರ್ಚಿತ ವನಶುಭ ಮಾಲಾ1 ಹರಿಕೇಶವ ನರಹರಿ ಸರ್ವೇಶಾ | ಕರಿ ಹರಮುನಿ ಪೋಷಾ | ಹರಿಕುಲ ತಿಲಕ ವಿಹರಿಜಿತ ಭಾಸಾ | ಹರಿಚರರಿಪು ಸಂಹರ ಜಗದೀಶಾ2 ಗಿರಿಧರ ವಾಮನ ಗಿರಿರಿಪು ತಾತಾ | ಗಿರಿಧರ ಪರಿಶತ ಗಿರಿವರ ಪ್ರೀತಾ | ಗಿರಿಧರ ತನುಭವ ಗುರುವಿಖ್ಯಾತಾ | ಗಿರಿಮಾ ವೆಂಕಟ ಗಿರಿಧರ ದಾತಾ 3 ಅಂಕಿತ-ವೆಂಕಟ ಗಿರಿಧರ (?)
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಮಧ್ವನಾಮ ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣಅಖಿಳ ಗುಣ ಸದ್ಧಾಮ ಮಧ್ವನಾಮ ಪ ಆವ ಕಚ್ಚಪ ರೂಪದಿಂದ ಲಂಡೋದಕವಓವಿ ಧರಿಸಿದ ಶೇಷಮೂರುತಿಯನುಆವವನ ಬಳಿವಿಡಿದು ಹರಿಯ ಸುರರೆಯ್ದುವರುಆ ವಾಯು ನಮ್ಮ ಕುಲಗುರುರಾಯನು 1 ಆವವನು ದೇಹದೊಳಗಿರಲು ಹರಿ ನೆಲಸಿಹನುಆವವನು ತೊಲಗೆ ಹರಿ ತಾ ತೊಲಗುವಆವವನು ದೇಹದ ಒಳ ಹೊರಗೆ ನಿಯಾಮಕನುಆ ವಾಯು ನಮ್ಮ ಕುಲಗುರುರಾಯನು 2 ಸುರರು ಮುಖ್ಯಪ್ರಾಣ ತೊಲಗಲಾ ದೇಹವನುಅರಿತು ಪೆಣವೆಂದು ಪೇಳುವರು ಬುಧಜನ 3 ಸುರರೊಳಗೆ ನರರೊಳಗೆ ಸರ್ವ ಭೂತಗಳೊಳಗೆಪರತರನೆನಿಸಿ ನಿಯಾಮಿಸಿ ನೆಲಸಿಹಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳುಗುರು ಕುಲತಿಲಕ ಮುಖ್ಯ ಪವಮಾನನು 4 ತರಣಿ ಬಿಂಬಕ್ಕೆ ಲಂಘಿಸಿದಈತಗೆಣೆಯಾರು ಮೂರ್ಲೋಕದೊಳಗೆ 5 ತರಣಿಗಭಿಮುಖನಾಗಿ ಶಬ್ದ ಶಾಸ್ತ್ರವ ರಚಿಸಿಉರವಣಿಸಿ ಹಿಂದು ಮುಂದಾಗಿ ನಡೆದಪರಮ ಪವಮಾನಸುತ ಉದಯಾಸ್ತ ಶೈಲಗಳಭರದಿಯೈದಿದಗೀತಗುಪಮೆ ಉಂಟೇ 6 ಅಖಿಳ ವೇದಗಳ ಸಾರಪಠಿಸಿದನು ಮುನ್ನಲ್ಲಿನಿಖಿಳ ವ್ಯಾಕರಣಗಳ ಇವ ಪಠಿಸಿದಮುಖದಲ್ಲಿ ಕಿಂಚಿದಪಶಬ್ದ ಇವಗಿಲ್ಲೆಂದುಮುಖ್ಯಪ್ರಾಣನನು ರಾಮನನುಕರಿಸಿದ 7 ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿಧರಣಿಸುತೆಯಳ ಕಂಡು ದನುಜರೊಡನೆಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳಉರುಹಿ ಲಂಕೆಯ ಬಂದ ಹನುಮಂತನು 8 ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿಶರಧಿಯನು ಕಟ್ಟಿ ಬಲು ರಕ್ಕಸರನುಒರಸಿ ರಣದಲಿ ದಶಶಿರನ ಹುಡಿಗುಟ್ಟಿದಮೆರೆದ ಹನುಮಂತ ಬಲವಂತ ಧೀರ 9 ಉರಗ ಬಂಧಕೆ ಸಿಲುಕಿ ಕಪಿವರರು ಮೈಮರೆಯೆತರಣಿ ಕುಲತಿಲಕನಾಜ್ಞೆಯ ತಾಳಿದಗಿರಿಸಹಿತ ಸಂಜೀವನವ ಕಿತ್ತು ತಂದಿತ್ತಹರಿವರಗೆ ಸರಿಯುಂಟೆ ಹನುಮಂತಗೆ 10 ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆಭಜಿಸಿ ಮೌಕ್ತಿಕದ ಹಾರವನು ಪಡೆದಅಜಪದವಿಯನು ರಾಮ ಕೊಡುವೆನೆನೆ ಹನುಮಂತನಿಜಭಕುತಿಯನೆ ಬೇಡಿ ವರವ ಪಡೆದ 11 ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ ಸೋಮಕುಲದಲಿ ಜನಿಸಿ ಪಾರ್ಥನೊಡನೆ ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದಆ ಮಹಿಮನಮ್ಮ ಕುಲಗುರು ರಾಯನು 12 ಕರದಿಂದಶಿಶುಭಾವನಾದ ಭೀಮನ ಬಿಡಲುಗಿರಿವಡೆದುಶತಶೃಂಗವೆಂದೆನಿಸಿತುಹರಿಗಳ ಹರಿಗಳಿಂ ಕರಿಗಳ ಕರಿಗಳಿಂಅರೆವ ವೀರನಿಗೆ ಸುರ ನರರು ಸರಿಯೇ 13 ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿಹಸಿದುರಗಗಳ ಮ್ಯಾಲೆ ಬಿಡಲದನೊರಸಿದಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರಧರಿಸಿ ಜಾಹ್ನವಿಗೊಯ್ದ ತನ್ನನುಜರ14 ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರನಿಲ್ಲದೊರಸಿದ ಲೋಕಕಂಟಕರನುಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದುಎಲ್ಲ ಸುಜನರಿಗೆ ಹರುಷವ ತೋರಿದ 15 ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿರಾಜಸೂಯ ಯಾಗವನು ಮಾಡಿಸಿದನುಆಜಿಯೊಳು ಕೌರವರ ಬಲವ ಸವರುವೆನೆಂದುಮೂಜಗವರಿಯೆ ಕಂಕಣ ಕಟ್ಟಿದ 16 ಮಾನನಿಧಿ ದ್ರೌಪದಿಯ ಮನದಿಂಗಿತವನರಿತುದಾನವರ ಸವರಬೇಕೆಂದು ಬ್ಯಾಗಕಾನನವ ಪೊಕ್ಕು ಕಿಮ್ಮೀರಾದಿಗಳ ತರಿದುಮಾನಿನಿಗೆ ಸೌಗಂಧಿಕವನೆ ತಂದ 17 ದುರುಳ ಕೀಚಕನು ತಾಂ ದ್ರೌಪದಿಯ ಚಲುವಿಕೆಗೆಮರುಳಾಗಿ ಕರೆÀಕರೆಯ ಮಾಡಲವನಾಗರಡಿ ಮನೆಯಲ್ಲಿ ವರೆಸಿ ಅವನನ್ವಯದಕುರುಪನಟ್ಟಿದ ಮಲ್ಲಕುಲವ ಸದೆದ 18 ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿಓರಂತೆ ಕೌರವನ ಮುರಿದು ಮೆರೆದವೈರಿ ದುಶ್ಯಾಸನ್ನ ರಣದಲ್ಲಿ ಎಡೆಗೆಡಹಿವೀರ ನರಹರಿಯ ಲೀಲೆಯ ತೋರಿದ 19 ಗುರುಸುತನು ಸಂಗರದಿ ನಾರಾಯಣಾಸ್ತ್ರವನುಉರವಣಿಸಿ ಬಿಡಲು ಶಸ್ತ್ರವ ಬಿಸುಟರುಹರಿಕೃಪೆಯ ಪಡೆದಿರ್ದ ಭೀಮ ಹುಂಕಾರದಲಿಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ 20 ಚಂಡ ವಿಕ್ರಮನು ಗದೆಗೊಂಡು ರಣದಿ ಭೂಮಂಡಲದೊಳಿದಿರಾಂತ ಖಳರನೆಲ್ಲಾಹಿಂಡಿ ಬಿಸುಟಿಹ ವೃಕೋದರನ ಪ್ರತಾಪವನುಕಂಡುನಿಲ್ಲುವರಾರು ತ್ರಿಭುವನದೊಳು21 ದಾನವರು ಕಲಿಯುಗದೊಳವತರಿಸಿ ವಿಬುಧರೊಳುವೇನನ ಮತವನರುಹಲದನರಿತುಜ್ಞಾನಿ ತಾ ಪವÀಮಾನ ಭೂತಳದೊಳವತರಿಸಿಮಾನನಿಧಿ ಮಧ್ವಾಖ್ಯನೆಂದೆನಿಸಿದ 22 ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿನಿರ್ಭಯದಿ ಸಕಳ ಶಾಸ್ತ್ರವ ಪಠಿಸಿದಉರ್ವಿಯೊಳು ಮಾಯೆ ಬೀರಲು ತತ್ವಮಾರ್ಗವನುಓರ್ವ ಮಧ್ವಮುನಿ ತೋರ್ದ ಸುಜನರ್ಗೆ23 ವಿಶ್ವ ವಿಶ್ವ ಗೀರ್ವಾಣ ಸಂತತಿಯಲಿ 24 ಅಖಿಳ ವೇದಾರ್ಥಗಳನುಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವಯ್ಯೆದಿದ ಮಧ್ವಮುನಿರಾಯಗಭಿವಂದಿಪೆ 25 ಜಯಜಯತು ದುರ್ವಾದಿಮತತಿಮಿರ ಮಾರ್ತಾಂಡಜಯಜಯತು ವಾದಿಗಜ ಪಂಚಾನನಜಯಜಯತು ಚಾರ್ವಾಕಗರ್ವಪರ್ವತ ಕುಲಿಶಜಯ ಜಯ ಜಗನ್ನಾಥ ಮಧ್ವನಾಥ26 ತುಂಗಕುಲ ಗುರುವರನ ಹೃತ್ಕಮಲದಲಿ ನಿಲಿಸಿಭಂಗವಿಲ್ಲದೆ ಸುಖದ ಸುಜನಕೆಲ್ಲಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕರಂಗವಿಠಲನೆಂದು ನೆರೆ ಸಾರಿರೈ 27 “ಮಧ್ವನಾಮ” ಕೃತಿಗೆ ಶ್ರೀ ಜಗನ್ನಾಥದಾಸರ ಫಲಶ್ರುತಿ ಸೋಮ ಸೂರ್ಯೋಪರಾಗದಿ ಗೋಸಹಸ್ರಗಳಭೂಮಿದೇವರಿಗೆ ಸುರನದಿಯ ತೀರದಿಶ್ರೀಮುಕುಂದಾರ್ಪಣವೆನುತ ಕೊಟ್ಟ ಫಲಮಕ್ಕುಈ ಮಧ್ವನಾಮ ಬರೆದೋದಿದರ್ಗೆ 1 ಪುತ್ರರಿಲ್ಲದವರು ಸತ್ಪುತ್ರರೈದುವರುಸರ್ವತ್ರದಲಿ ದಿಗ್ವಿಜಯವಹುದು ಸಕಲಶತ್ರುಗಳು ಕೆಡುವರಪಮೃತ್ಯು ಬರಲಂಜವುದುಸೂತ್ರನಾಮಕನ ಸಂಸ್ತುತಿ ಮಾತ್ರದಿ 2 ಶ್ರೀಪಾದರಾಯ ಪೇಳಿದ ಮಧ್ವನಾಮ ಸಂತಾಪಕಳೆದಖಿಳ ಸೌಖ್ಯವನೀವುದುಶ್ರೀಪತಿ ಜಗನ್ನಾಥವಿಠಲನ ತೋರಿ ಭವಕೂಪಾರದಿಂದ ಕಡೆ ಹಾಯಿಸುವುದು 3
--------------
ಶ್ರೀಪಾದರಾಜರು
(ಅಂ) ಪಾರ್ವತೀದೇವಿ ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ | ಹಿಮವಂತ ಗಿರಿಯ ಕುಮಾರಿ ಪ ನಿತ್ಯ | ಅಮರವಂದಿತೆ ಗಜಗಮನೆ ಭವಾನಿ ಅ. ಪ. ಪನ್ನಗಧರನ ರಾಣಿ ಪರಮಪಾವನಿ | ಪುಣ್ಯಫಲ ಪ್ರದಾಯಿನಿ || ಪನ್ನಗವೇಣಿ ಶರ್ವಾಣಿ ಕೋಕಿಲವಾಣಿ | ಉನ್ನತ ಗುಣಗಣ ಶ್ರೇಣಿ | ಎನ್ನ ಮನದ ಅಭಿಮಾನ ದೇವತೆಯೆ | ಸ್ವರ್ಣಗಿರಿ ಸಂಪನ್ನೆ ಭಾಗ್ಯ ನಿಧಿ || ನಿನ್ನ ಮಹಿಮೆಯನು ಬಿನ್ನಾಣದಲಿ ನಾ | ಬಣ್ಣಿಸಲಳವೆ ಪ್ರಸನ್ನ ವದನಳೆ 1 ಮುತ್ತಿನ ಪದಕ ಹಾರ ಮೋಹನ ಸರ | ಉತ್ತಮಾಂಗದಲಂಕಾರ || ಜೊತ್ಯಾಗಿ ಇಟ್ಟ ಪಂಜರದೋಲೆ ವಯ್ಯಾರ | ರತ್ನಕಂಕಣದುಂಗುರ || ತೆತ್ತೀಸ ಕೋಟಿ ದೇವತೆಗಳ್ ಪೊಗಳುತ | ಸತ್ತಿಗೆ ಚಾಮರವೆತ್ತಿ ಪಿಡಿಯುತಿರೆ || ಸುತ್ತಲು ಆಡುವ ನರ್ತನ ಸಂದಣಿ | ಎತ್ತ ನೋಡಿದರತ್ತ ಕಥ್ಥೈ ವಾದ್ಯ2 ಕಂಚುಕ ತಿಲಕ | ನಾಸಿಕ || ಕಳಿತ ಮಲ್ಲಿಗೆ ಗಂಧಿಕ ಮುಡಿದ ಸೂಸುಕ | ಸಲೆ ಭುಜ ಕೀರ್ತಿಪಾಠಿಕ || ಇಳೆಯೊಳು ಮಧುರಾ ಪೊಳಲೊಳು ವಾಸಳೆ | ಅಳಿಗಿರಿ ವಿಜಯವಿಠ್ಠಲ ಕೊಂಡಾಡುವ || ಸುಲಭ ಜನರಿಗೆಲ್ಲ ಒಲಿದು ಮತಿಯನೀವ | ಗಳಿಕರ ಶೋಭಿತೆ ಪರಮಮಂಗಳ ಹೇ 3
--------------
ವಿಜಯದಾಸ
(ಈ) ಯತಿವರ್ಯರು ಶ್ರೀ ವ್ಯಾಸರಾಯರ ಸ್ತುತಿ ಇದಿರ್ಯಾರೊ ಗುರುವೆ ಸರಿಯಾರೊ ಯತಿಗೆ ಸಮರ್ಯಾರೊ ಪ ದುರುಳ ವಾದಿಗಳನ್ನು ಮರುಳು ಮಾಡೋರನ್ನ ತರಿದಟ್ಟಿ ಚಂದ್ರಿಕೆ ಗ್ರಂಥವ ರಚಿಸಿ ಧರಣಿ ಸುರರ ಪರಿವೃಢರ ಸುನಿಕರಕೆ ಪರಿಪರಿಯಲಿ ಉಪದೇಶಿಸುತಿಪ್ಪಗೆ 1 ಕನಕ ಕಶಿಪುತನಯನ ಘನ ಅಂಶದಿ ಫಣಿಗಣ ರಮಣನಾವೇಶದಿ ಪೊಳೆಯುತ ದಿನದಿನದಲಿ ಹರಿಮನ ತಣಿಸುತಲಿಹ ಘನ ಮಹಿಮನೆ ಶ್ರೀ ಯತಿಕುಲತಿಲಕಾ 2 ಉದ್ದಂಡ ವಿತಂಡಕೆ ಗಂಡುಸಿಂಹ ತರ್ಕದೆ ತಾಂಡವ ಯುಕ್ತಿಯ ದಂಡುಗಳನೆ ಕಟ್ಟಿಕೊಂಡು ತಾರ್ಕಿಕರ ಷಂಡಗಳನೆ ಖಂಡಿಸುತಿಹ ಯತಿಯೆ 3 ಬ್ರಹ್ಮಣ್ಯತೀರ್ಥರ ಕರಕಮಲದಿ ಪುಟ್ಟಿ ಬ್ರಹ್ಮಜನಕ ನರಸಿಂಹ ಮೂರುತಿಯ ಹೃ- ದ್ಗಂಹ್ವರದಲಿ ಧ್ಯಾನಿಸುತಿಹ ವ್ಯಾಸರಾ ಹೃದಯಾಂಬುಧಿಯೊಳು ಮೆರೆವಗೆ 4 ದಶದಿಶೆಯಲಿ ದಶರಥಸುತ ಮಹಿಮೆಯ ಕುಶಲದಿಂದಲಿ ಸಭೆಯೊಳಗೆ ಸ್ಥಾಪಿಸುತ ಹೊಸ ಹೊಸ ಬಿರುದು ಸಂದ್ಹೆಸರುವೆತ್ತಿರುವಂಥ ವಸುಧಿಯೊಳಗೆ ಸುಕರ ಸುಚರಿತೆಗೆ 5 ಹೊಳೆಯುತಲಿರುವ ರುಕ್ಮಿಣಿಪತಿ ಕೃಷ್ಣನು ನಲಿಯುತ ಕುಣಿಕುಣಿದಾಡುತಲಿಪ್ಪನು ಥಳಥಳಿಸುವ ರಾಮ ವೇದವ್ಯಾಸರು ನಿಮ- ಗಿಳೆಯೊಳಮೂಲ್ಯ ಪ್ರಸಾದವನೀವರು 6 ಅಡಿಗಡಿಗತಿ ದೃಢತರ ಯುಕ್ತಿಗಳಿಂದ ಸಡಗರದಿಂದಲಿ ಬಿಡದೆ ನುಡಿಯುತ ನಡದದ್ವೈತದಡವಿಯೊಳಗೆ ಪೊಕ್ಕು ಕೆಡಗುತಿಹ ನ್ಯಾಯಾಮೃತಾಚಾರ್ಯರಿಗೆ 7 ಶ್ರೀದವಿಠಲಗತಿ ಪ್ರೀಯರಾದ ಶ್ರೀ- ಪಾದರಾಯರಲಿ ಓದಿ ಗ್ರಂಥಗಳ ವಾದಿರಾಜ ವಿಜಯೀಂದ್ರ ಪ್ರಮುಖರಿಗೆ ಆದರದಲಿ ಪಾಠ ಹೇಳುತಲಿಪ್ಪಗೆ 8
--------------
ಶ್ರೀದವಿಠಲರು
(ಏ) ಸಂಪ್ರದಾಯದ ಹಾಡುಗಳು ಆರತಿ ಬೆಳಗುವೆ ನಿನಗೆ ಶ್ರೀರಾಮ ಸಾರಸಾಕ್ಷ ಹರಿ ಮೇಘಶ್ಯಾಮ ಪ ಪೀತಾಂಬರಧರ ತುಲಸೀಮಾಲ ಪಾತಕ ವಿದಳನ ಸೀತಾಲೋಲ 1 ಕುಂಡಲ ಮೃಗಮದತಿಲಕ ನಿರುಪಮ ಸುಂದರ ಮನ್ಮಥ ಜನಕ 2 ಭರತ ಶತ್ರುಘ್ನರ ಚಾಮರ ಸೇವ ಹರುಷದಿ ತೋರುವ ಪರಮಪ್ರಭಾವ 3 ಸೋದರ ಲಕ್ಷ್ಮಣ ಹನುಮ ಸಮೇತ ಮೋದದಿ ಮಾತೆಯರನು ಪೊರೆದಾತ 4 ಶುಕ ಮುನಿನುತ ಶುಭನಾಮ ಪತಿ ಪೂರ್ಣಸುಕಾಮ 5 ಶರಣಾಗತ ಪರಿಪಾಲಕ ಶೌರಿ ಕರುಣಾಕರ ಕಲಿವೈರಿ ಮುರಾರಿ 6 ಜಾಜೀಶ ಚನ್ನಕೇಶವ ಮೂರ್ತಿ ಅಗಣಿತ ಕೀರ್ತಿ 7
--------------
ಶಾಮಶರ್ಮರು
(ಕೇಶವಾಯ ನಮಃ ದಿಂದ ಆರಂಭವಾಗುವ ಆಚಮನ ಸ್ತುತಿ) ಶ್ರೀನಿವಾಸಾಯ ನಮೋ ಪ. ಶ್ರೀನಿವಾಸಾಯ ಶತಭಾನುಪ್ರಕಾಶಾಯ ಶ್ರೀನಿವಾಸಾಯ ನಿಜ ಭಕ್ತಜನಪೋಷಾಯ ಶ್ರೀನಿವಾಸಾಯ ಪರಮಾನಂದಘೋಷಾಯ ಅ.ಪ. ದೋಷಗಂಧವಿದೂರ ಕೇಶಿಮುಖದಾನವ ವಿ- ನಾಶವಿಧಿಭವಸುಖನಿವಾಸ ವಾಸುಕಿಶಯನ ವಾಸವಾದ್ಯಮರಗಣಪೋಷ ಪಾವನವೇಷ ಶ್ರೀಶ ನಿರ್ಗತವಿಶೇಷ ದಾಸಜನಹೃದಯಾಬ್ಧಿಭೇಶ ಕೌಸ್ತುಭಮಣಿವಿ- ಭೂಷ ಭೂತಾತ್ಮ ಭವಪಾಶಹರ ಪರತರ ದ- ಕೇಶವಾಯ ನಮೋನಮಃ 1 ಕ್ಷೀರಸಾಗರವಾಸ ಶ್ರೀರಮಾಪ್ರಾಣೇಶ ಸಾರಭೋಕ್ತøಸ್ವತಂತ್ರ ಚಾರುಷಡ್ಗುಣಭರಿತ ಸನ್ನುತ ಪಾದನೀರರುಹದ್ವಂದ್ವನೆ ಸುರರು ತಿಳಿಯರು ನಿನ್ನ ಭೂರಿಮಹಿಮೆಗಳ ಸಾಕಾರವನು ಬಣ್ಣಿಸುವ ನಾರಾಯಣಾಯ ನಮೋ 2 ವೇದವೇದ್ಯನೆ ದುರಿತಶೋಧನೆ ದೈತ್ಯಗಣ- ಛೇದಕನೆ ಸುರಸುಪ್ರಸಾದಕನೆ ಭಕ್ತಜನ- ಸಮಾನಾಧಿಕ್ಯರಹಿತ ಸತತ ಆದಿತ್ಯ ಶತಕೋಟಿತೇಜೋವಿರಾಜ ಮಹ- ದಾದಿಕಾರಣ ಮಧುವಿರೋಧಿ ಮಂಗಲಸುಖಾಂ- ಮಾಧವಾಯ ನಮೋನಮಃ 3 ಇಂದಿರಾಹೃದಯಾಬ್ಧಿ ಚಂದ್ರ ಚಾರ್ವಂಗ ಮುಚು- ಕುಂದಾಪ್ತ ಸರ್ವಶ್ರುತಿವೃಂದಪ್ರತಿಪಾದ್ಯ ಸಾ- ಸನ್ನುತ ಮಹೇಂದ್ರ ವಂದಾರುಜನತ್ರಿದಶಮಂದಾರ ಕೋಮಲಿತ ವೃಂದಾವನವಿಹಾರ ಕಂದರ್ಪಜನಕ ಬಾ- ತುಭ್ಯಂ ನಮಃ 4 ಜಿಷ್ಣುರಥಸಾರಥಿ ತ್ರಿವಿಷ್ಟಪಸಭಾಧ್ಯಕ್ಷ ಮುಷ್ಟಿಕಾಸುರವೈರಿ ಮುನಿಜನಮನೋಹಾರಿ ಮುಟ್ಟಿ ಭಜಿಪರ ಮನೋಭೀಷ್ಟವ ಸಲ್ಲಿಸುವ ಶ್ರೇಷ್ಠ ಪೂರ್ಣಬ್ರಹ್ಮನೇ ಭ್ರಷ್ಟಸಂಸಾರದೊಳು ನಷ್ಟ ಬುದ್ಧಿಗಳಿಂಗೆ ತುಷ್ಟಿಯನು ನೀನಿತ್ತು ಸಲಹೊ ಸಾಮಜವರದ ತುಭ್ಯಂ ನಮೋ 5 ವಿಧಿಭವಾದಿ ಸಮಸ್ತ ತ್ರಿದಶಜನಸುಖದಾತ ಬುಧಜನಪ್ರಿಯ ಭೂತಭಾವನ ಜಗನ್ನಾಥ ಮದನಕೋಟಿಸ್ವರೂಪ ವಿದುರನಾಲಯದಲ್ಲಿ ಪಾಲುಂಡ ಬ್ರಹ್ಮಾಂಡ- ಕಧಿಪತಿ ಕಲಿಮಲನಾಶ ಕವಿಜನಮನೋಲ್ಲಾಸ ಮಧುಸೂದನಾಯ ನಮೋ 6 ಅಕ್ರೂರವರದ ಸದತಿಕ್ರಮರ ಗೆಲಿದ ಹಯ- ವಕ್ತ್ರ ವೈಕುಂಠಾಖ್ಯ ಪುರವಾಸ ಜಗದೀಶ ಶುಕ್ರ ಶಿಷ್ಯರನೆಲ್ಲ ಪರಿಹರಿಸಿ ಪಾಲಿಸಿದೆ ಶಕ್ರಾದಿಸುರಗಣವನು ಚಕ್ರ ಶಂಖ ಗದಾಬ್ಜಧರ ಚತುರ್ಭುಜ ದೇವ- ಚಕ್ರವರ್ತಿಯನಂತಕೀರ್ತಿ ಪಾವನಮೂರ್ತಿ ತ್ರಿವಿಕ್ರಮಾಯ ನಮೋನಮಃ 7 ರಾಮಣೀಯಕ ವಪು ನಿರಾಮಯ ನಿರಾಶ್ರಯ ಸು- ದಾಮಸಖ ಪರಿಪೂರ್ಣಕಾಮ ಕೈರವದಳ- ಸುಜನಸ್ತೋಮಸುರಕಾಮಧೇನು ಗೋಮಿನೀಪತಿ ಗೋಗಣಾನ್ವಿತನೆ ಗೋಪೀಲ- ಲಾಮ ಗೋವರ್ಧನೋದ್ಧಾರ ಗೋವಿದಾಂಪತಿ ವಿ- ಪ್ರಾಜ್ಞ ವಾಮನಾಯ ನಮೋನಮಃ 8 ಆದಿಮಧ್ಯಾಂತವಿರಹಿತ ನಿಖಿಲಸಾರ್ಚಿತ ವಿ- ರಾಧಭಂಜನ ಭವಾಂಬೋಧಿಕುಂಭಜ ಭಜಕ- ಚತುಷ್ಟಾದ ಪಾವನಚರಿತನೆ ಗಾಧಿಜಾಧ್ವರಪಾಲ ಗರುಡಧ್ವಜ ದಯಾಳು ನಾದಬಿಂದು ಕಲಾತೀತ ರುಕ್ಮಿಣಿನಾಥ ಶ್ರೀಧರಾಯ ನಮೋನಮಃ 9 ಪಾಶಧರನುತ ವೆಂಕಟೇಶ ಸರ್ವೇಂದ್ರಿಯಪ್ರ- ಕಾಶ ಪಾಲಿತನಿಖಿಳಭೂಸುರವ್ರಜ ಮಂದ- ದೂಷಣಾದ್ಯ ಸುರಹರನೆ ಈಶಪತಿಸೇವ್ಯಾಂಬರೀಶನೃಪವರದ ಪರ- ಮೇಶ ಕೋವಳಪೀತವಾಸ ಕರ್ದಮಶುಕಪ- ಹೃಷೀಕೇಶಾಯ ತುಭ್ಯಂ ನಮೋ 10 ಶುದ್ಧ ತ್ರಿಗುಣಾತೀತ ತ್ರಿವ್ರತ ತ್ರಿಜಗತ್ಪಾಲ ಪ್ರದ್ಯುಮ್ನ ಪ್ರಥಮಾಂಗದೊಡೆಯ ಪರಮಾತ್ಮ ಸುರ- ಬುದ್ಧ ಬುಧಜನಸುಲಭ ಮಧ್ವವಲ್ಲಭ ಮಂತ್ರಮೂರ್ತಿ ಕ್ಷೀರಾಬ್ಧಿ ಶ್ವೇ ತದ್ವೀಪವೈಕುಂಠಮಂದಿರತ್ರಯ ಸಾಧು- ಹೃದ್ಯ ಭಕ್ತದ್ವೇಷಭಿದ್ಯ ನಿತ್ಯಾತ್ಮ ಶ್ರೀಪದ್ಮನಾಭಾಯ ನಮಃ11 ಸಾಮಗಾನವಿನೋದ ಸಾಧುಜನಸುಖಬೋಧ ಕಾಮಿತಾರ್ಥಪ್ರದಾತ ಕಪಿಲಋಷಿ ಪ್ರಖ್ಯಾತ ಸಮರಂಗ ಭೀಮ ನಾಮಧಾರಕರ ಪರಿಣಾಮರೂಪಕ ಸುಜನ- ಕ್ಷೇಮಪ್ರಾಪಕ ನೀಲಜೀಮೂತನಿಭವರ್ಣ ದಾಮೋದರಾಯ ನಮೋ 12 ಶಂಕರಾಂತರ್ಯಾಮಿ ಶಾಙ್ರ್ಗಪಾಣಿ ಶರಣ್ಯ ವೆಂಕಟಾಚಲಸದಾಲಂಕಾರ ಶೇಷಪರಿ- ಯಂಕ ಪ್ರವಿತತನಿಷ್ಕಳಂಕಚಾರಿತ್ರ ಸುಸಂಕುಲಾರ್ಚಿತ ಪದಯುಗ ಲಂಕಾಧಿಪತ್ಯವ ವಿಭೀಷಣನಿಗೊಲಿದಿತ್ತ ಓಂಕಾರನಿಧನ ಸಾಮಕಭಕ್ತರಾನೇಕ ಸಂಕಟವ ಪರಿಹರಿಪ ಸತ್ಯ ಸಂಕಲ್ಪ ಶ್ರೀಸಂಕರ್ಷಣಾಯ ನಮೋ 13 ಈ ಸಮಸ್ತ ಜಗತ್ತು ನಿನ್ನುದರದೊಳಗಿಹುದು ಈ ಸಕಲಜೀವರೊಳಗಿಹ ನಿತ್ಯನಿರ್ಮುಖ್ಯ ನೀ ಸಲಹೊ ದೇವದೇವ ಭೂ ಸಲಿಲ ಪಾವಕಾಕಾಶಾದಿ ಭೂತಾಧಿ- ವಾಸ ರಾಕ್ಷಸವನಹುತಾಶ ನಾನಾ ರೂಪ- ವಾಸುದೇವಾಯ ನಮೋ 14 ಅದ್ವಿತೀಯನೆಯಮಿತವಿಕ್ರಮನೆ ಗುಣಕಾಲ ವಿದ್ಯಾಪ್ರವರ್ತಕನೆ ವಿಶ್ವಾದಿ ಸಾಹಸ್ರ ಸಿದ್ಧನಾಮ ನರನಾರಾಯಣಪರಾಯಣನೆ ಬುದ್ಧಿಪ್ರೇರಕಪ್ರೇರ್ಯನ ರುದ್ರರೂಪಪ್ರತಾಪ ಋಗ್ಯಜುಸ್ಸಾಮಶ್ರುತಿ- ವೇದ್ಯ ಬ್ರಹ್ಮಾಂಡಕೋಟಿಗಳ ಸಲೆ- ಪ್ರದ್ಯುಮ್ನಾಯ ತುಭ್ಯಂ ನಮಃ 15 ಉದ್ಧವಾದಿ ಸಮಸ್ತ ಭಾಗವತಜನಕಮಲ- ಮಧ್ಯಚರರಾಜಹಂಸಾಯ ಮಾನಸದ ಶ್ರೀಹರಿಯೆ ವೈದ್ಯನಾಥವಿಧಾತನೆ ಬದ್ಧನಾದೆನು ಕರ್ಮಪಾಶದಿಂದ ದೊರೆ ಸಿಕ್ಕಿ- ಬಿದ್ದೆ ಕೈಪಿಡಿದೆಬ್ಬಿಸೆನ್ನನೆಲೆದೇವ ಮರೆ ಅನಿರುದ್ಧಾಯ ತುಭ್ಯಂ ನಮಃ 16 ಕ್ಷರ ಪುರುಷರೆಲ್ಲ ಬ್ರಹ್ಮಾದಿ ಜೀವರು ರಮಾ ಕ್ಷರಪುರುಷಳೆನಿಸುವಳು ನೀನೆ ಉತ್ತಮ ಪರುಷ ಮಂಗಲರಿತ ಗುರುತಮ ಗುಣಧ್ಯಕ್ಷನೆ ಶರಧಿಸೇತುನಿಬದ್ಧ ಶಬರಿ ಹಣ್ಣನು ಮೆದ್ದ ಶರಭಂಗ ಮುನಿಪಾಲ ಶಮಿತದಾನವಜಾಲ ಪುರುಷೋತ್ತಮಾಯನ್ನಮೋ 17 ಅಕ್ಷಯಾತ್ಮನೆ ವಿಶ್ವರಕ್ಷಕನೆ ವಿಶ್ವಭುಗ್- ವಿಶ್ವತೋಮುಖ ವಿಶ್ವತೋಬಾಹು ಕರುಣಾಕ- ದಯಮಾಡು ಶ್ರೀವಕ್ಷಸ್ಥಲನಿವಾಸನೆ ಲಕ್ಷ್ಮಣಾಗ್ರಜನೆ ಸುವಿಲಕ್ಷಣನೆ ಸುಜ್ಞಾನ- ಮೋಕ್ಷದಾಯಕ ಯಜ್ಞಮೂರ್ತಿ ರೂಪತ್ರಯ ಮ- ಅಧೋಕ್ಷಜಾಯ ನಮೋನಮಃ 18 ಕ್ರೂರಕರ್ಮಿ ಹಿರಣ್ಯಕಶಿಪುವಂ ಕೊಂದ ದು- ರ್ವಾರದುರಿತಾಬ್ಧಿಬಾಡಬ ಭಕ್ತವತ್ಸಲ ಮ- ಶಿರಪ್ರಕರಧೀರ ಪ್ರಹ್ಲಾದಾಭಿವರದ ಭೂರೀಕರರೂಪ ಭೂಮಕೀರ್ತಿಕಲಾಪ ಸಾರವಜ್ರಸ್ತಂಭದಿಂ ಬಂದ ನಂದ ಸುಕು- ನಾರಸಿಂಹಾಯ ನಮೋ 19 ನಿಶ್ಚಲಾತ್ಮ ನಿರೀಹ ನಿರ್ವಿಕಾರಾನಂತ ಪ್ರೋಚ್ಛ ಸರ್ವಗ ಸದಾನಂದ ಪರಿಪೂರ್ಣ ತ- ನಿರ್ಮಿಸುವ ಆಶ್ಚರ್ಯಕೃತ ಸಲೀಲ ಮುಚ್ಚುಮರೆ ಯಾಕಿನ್ನು ಮುಗಿದು ಬೇಡುವೆ ಕೈಯ ಸ್ವಚ್ಛತರ ಭಕ್ತಿಭಾಗ್ಯವನಿತ್ತು ಸಲಹೊ ಮಹ- ಶ್ರೀಮದಚ್ಯುತಾಯ ನಮೋನಮಃ 20 ಚೈದ್ಯಮಥನ ಮನೋಜ್ಞಶುದ್ಧಾತ್ಮ ಸರ್ವಜ್ಞ ಹೊದ್ದಿಸಿದ ಪಾರ್ಥನಿಂಗೆ ಇದ್ದು ನೀ ಹೃದಯದೊಳು ತಿದ್ದೆನ್ನ ಮತಿಯ ಸ್ಮರ- ವಿದ್ದ ಮಾನಸವ ಪಾದದ್ವಯದೊಳಿರಿಸೈ ದ- ಜನಾರ್ದನಾಯ ನಮೋನಮಃ 21 ಮಂದಾಕಿನಿಯ ಪಡೆದ ಮಾತೆಯ ಶಿರವ ಕಡಿದ ನಂದಗೋಪನ ಕಂದನೆನಿಸಿ ಬಾಲಕತನದ ಸುಂದರೀರಮಣ ಜಯತು ತಂದೆತಾಯಿಯು ಸರ್ವ ಜೀವರ್ಗೆ ನೀನೆ ನಿಜ- ವೆಂದು ತಿಳಿಯದೆ ಮಾಯೆಯಿಂದ ಮಮಕರಿಸಿ ಪರ- ಉಪೇಂದ್ರಾಯ ತುಭ್ಯಂ ನಮಃ 22 ಸ್ಥಿರಚರಾತ್ಮಕ ಧೇನುಚರ ದೇವಕೀಜಠರ- ಶರಧಿಗುರುರಾಜ ಭಾಸ್ಕರಮಂಡಲಾಂತಸ್ಥ ದುರಿತದೂರ ಗಭೀರನೆ ನಿರತಿಶಯ ನಿಜನಿರ್ವಿಕಲ್ಪ ಕಲ್ಪಾಂತಸಾ- ಗರದಿ ವಟಪತ್ರಪುಟಶಯನ ಪುಣ್ಯಶ್ರವಣ ಹರಯೇ ನಮೋನಮಸ್ತೇ 23 ವೃಷ್ಟಿಕುಲತಿಲಕ ಸರ್ವೇಷ್ಟದಾಯಕ ನಿಮಿತ- ಶಿಷ್ಟಜನಪರಿಪಾಲ ಶಿವಗೌರೀ ಗಣಪಗುಹ- ಸೃಷ್ಟಿಶಕ್ತಿಯನೀವ ಗೋವರ್ಧನಾಚಲವ ಬೆಟ್ಟಿನಿಂದೆತ್ತಿದ ಮಹಾ ದುಷ್ಟ ನರಕಾದಿದಾನವರ ಮರ್ದಿಸಿದ ಜಗ- ಜಟ್ಟಿ ಜನಿಮೃತಿಭಯವಿದೂರ ವಿಷಮಯಸರ್ಪ- ಹರೇ ಕೃಷ್ಣಾಯ ತುಭ್ಯಂ ನಮಃ 24 ಅಕ್ಷೀಣ ಬಲಶಾಲಿಯಾಂಜನೇಯನಿಗಿತ್ತೆ ಅಕ್ಷಯದ ಬ್ರಹ್ಮಪದವಿಯ ಲೋಕದೊಳಗ್ಯಾವ- ದಕ್ಷಮರ್ದನ ನಿನಗೆ ಸರ್ವತಂತ್ರಸ್ವತಂತ್ರ ಪಕ್ಷೀಂದ್ರಭುಜವಿರಾಜ ಸಾಕ್ಷಿಚೈತನ್ಯರೂಪನೆ ಕಮಲನಾಭನೆ ಮು- ಮುಕ್ಷುಜನಧ್ಯಾನಗಮ್ಯನೆ ಗದಾಧರ ದನುಜ- ಲಕ್ಷ್ಮೀನಾರಾಯಣಾಯ ನಮೋ 25
--------------
ತುಪಾಕಿ ವೆಂಕಟರಮಣಾಚಾರ್ಯ
(ಕೋಲ ಹಾಡು) ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲು ಶ್ರೀ ರಾಮನ ಬಲಗೊಂಬೆ ರನ್ನದ ಪ. ಭೂಮಿಯೊಳಗೆ ಸೀತಾರಾಮನು ಜನಿಸಲು ಸೀಮೆಯ ನಾರಿ ಜನರೆಲ್ಲ ರನ್ನದಾ ಸೀಮೆಯ ನಾರಿ ಜನರೆಲ್ಲ ನೆರೆದು ಸು ಪ್ರೇಮದಿ ಪಾಡಿ ನಲಿದರು ರನ್ನದಾ 1 ಕುಂಡಲ ಕಂಠ ಮಾಲೆಯ ನೊಸಲಾ ತಿಲಕವು ರನ್ನದ ಮಾಲೆಯ ತಿಲಕನೊಸಲೊಳಗಿರಿಸಿದ ಬಾಲೇರು ಕೂಡಿ ನಲಿವುದ ರನ್ನದ 2 ಸಾರಸಂಭವ ಕ್ಷೀರ ವಾರುಧಿ ತಡಿಯಲ್ಲಿ ಭೋರನೆ ಬಂದು ಸ್ತುತಿಸಲು ರನ್ನದ ಭೋರನೆ ಬಂದು ಸ್ತುತಿಸಲು ರಾಮವ ತಾರನಾಗುವೆನೆಂದು ನುಡಿದನು ರನ್ನದ 3 ಪೃಥಿವಿ ನಾಯಕ ದಶರಥನಲ್ಲಿ ಜನಿಸಿದ ಕಥನೀಯ ಸುಗುಣ ಸಂಭೃತ ರಾಮರನ್ನದ ಕಥನೀಯ ಸುಗುಣ ಸಂಭೃತ ರಾಮ ಕೌಸಲ್ಯ ಸುತನೆಂದು ನಗುತ ಮನ್ಮಥನ ಜನಕನಿಗೆ 4 ಕೌಶಿಕ ಮುನಿಯ ಮಹಾಶೆ ಪೂರಿಸಿ ಯಜ್ಞ ಘಾಸಿ ಮಾಡಿದ ರಾಮ ಘಾಸಿ ಮಾಡಿದ ಜಗ ದೀಶನು ಸಕಲಾಭಿಲಾಷಾ ಪೂರಿಪೆನೆಂದು 5 ಪಾದ ಪಲ್ಲವವಿರಿಸುತ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ರಾಮ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ಸಿರಿ ನಲ್ಲ ಶಿವನ ಮಹ ಬಿಲ್ಲ ಮುರಿದನು 6 ಭೂತಳಾಧಿಪಜನವ್ರಾತಮಂಡಲದೊಳು ಸೀತೆಯನೊಲಿಸಿ ಶುಭದಿಂದ ರನ್ನದಾ ಸೀತೆಯನೊಲಿಸಿ ಶುಭದಿಂದ ಸ್ವಜನ ಸ- ಮೇತಾಯೋಧ್ಯಗೆ ಬಂದ ಖ್ಯಾತ ರಾಘವನಿಗೆ 7 ಜನಕನ ವಾಕ್ಯದಿಂದ ಜನಕಾತ್ಮಜೆಯ ಕೂಡಿ ವನಕಾಗಿ ನಡೆತಂದ ವನಜಾಕ್ಷ ರನ್ನದಾ ವನಕಾಗಿ ನಡೆ ತಂದ ವನಜಾಕ್ಷನಲ್ಲಿ ಶೂ- ರ್ಪನಖಿಯ ಮಾನಭಂಗವನು ಗೈದ ರನ್ನದಾ 8 ಖರದೂಷಣಾದಿ ದೈತ್ಯರ ಕೊಂದು ಮಾರೀಚ ದುರುಳನ ಸದೆದಾ ಧುರಧೀರ ರನ್ನದ ದುರುಳನ ಸದೆದಾ ಧುರಧೀರ ಶ್ರೀ ರಾಮ ಪರಿಪಾಲಿಸೆಮ್ಮನು ಕರುಣಾಳು ರನ್ನದ 9 ಪಾತಕಿ ದಶಕಂಠ ಸೀತೆಯನೊಯ್ದನೆಂದು ಕಾತರಗೊಂಡಂತೆ ಜನಕೆಲ್ಲ ರನ್ನದಾ ಕಾತರಗೊಂಡಂತೆ ಜನಕೆಲ್ಲ ತೋರ್ದ ರಘು ನಾಥನ ಮೊಖಲೀಲೆ ಖ್ಯಾತಿಯ ಪೊಗಳುತ10 ಮಂದರಾವಣ ಮೋಸದಿಂದ ಕೆಡಹಿದಂಥ ತಂದೆಯ ಸಖನಿಗಾನಂದ ಪದವನಿತ್ತ ತಂದೆಯ ಸಖನಿಗಾನಂದವ ಸಲಿಸಿ ಕ- ಬಂಧನ ದೈತ್ಯಯೋನಿ ಇಂದ ಬಿಡಿಸಿದಗೆ 11 ಬೇಡತಿ ಶಬರಿಯನ್ನು ನೋಡಿ ರಕ್ಷಣೆ ಮಾಡಿ ಪ್ರೌಢ ಮಾರುತಿಯಿಂದ ಕೂಡಿದ ರನ್ನದಾ ಪ್ರೌಢ ಮಾರುತಿಯನ್ನು ಕೂಡಿ ರವಿಜನ ಕಾ ಪಾಡಿ ವಾಲಿಯ ವಧೆ ಮಾಡಿದ ರನ್ನದಾ 12 ಪ್ರಾಣಾತ್ಮಜನು ನಾಗವೇಣಿಯ ವಾರ್ತೆಯ ತಾರೆ ಜಾಣತನದಲಿದ ಕ್ಷೀಣಾಂಬುಧಿಯೊಳಂದು ಜಾಣತನದಲಿದ ಕ್ಷೀಣಾಂಬುಧಿಯೊಳು- ಪ್ರ ವೀಣತನದಿ ಸೇತು ಕಾಣಿಸಿದವನಿಗೆ 13 ದೋಷಿ ರಾವಣನನು ನಾಶಗೈದಸುರಾರಿ ನೀಶ ನೀನೆನುತ ವಿಭೀಷಣಗೊರವಿತ್ತಾ ಈಶ ನೀನೆನುತಲಿವಿಭೀಷಣಗೊರವಿತ್ತ ವೈರಿ ಜಗದೀಶ ರಾಮನಿಗೆ 14 ಸೃಷ್ಟಿಜಾತೆಯ ಕೂಡಿ ಪಟ್ಟಾಭಿಷೇಕಗೊಂಡು ಶಿಷ್ಟ ರಕ್ಷಕನಾದ ಸಿರಿನಾಥ ರನ್ನದಾ ಶಿಷ್ಟ ರಕ್ಷಕನಾದ ಸಿರಿನಾಥ ವೆಂಕಟ ಬೆಟ್ಟದೊಡೆಯ ನಮ್ಮಭೀಷ್ಟವ ಕೊಡುವನ 15
--------------
ತುಪಾಕಿ ವೆಂಕಟರಮಣಾಚಾರ್ಯ
(ನಾರದ ಪ್ರಾರ್ಥನೆ) ನಾರದ ಮುನಿಯ ನಂಬಿರೋ ಸಜ್ಜನರೆಲ್ಲ ಪ. ನಾರದ ಮುನಿಯ ನಂಬಿ ಸೇರಿ ರಮೇಶನ ಘೋರದುರಿತ ಪರಿಹಾರಗೊಳಿಸುವಂಥ ಅ.ಪ. ಫಾಲದಿ ತಿಲಕ ನಾಮವು ಕಂಠದ ಮೇಲೆ ಜೋಲುವ ತುಳಸಿ ಮಾಲೆಯು ತಾಳ ವೀಣೆಗಳಿಂದ ಕಾಲಾನುಗುಣಸ್ವರ ಮಾಲೆ ತೋರುತ ಲಕ್ಷ್ಮೀಲೋಲನ ವಲಿಸಿದ 1 ವೇದೋಪನಿಷತ್ತುಗಳಗಾಂಧರ್ವ ವಿದ್ಯ ಹಾದಿಲಿ ತರಲು ಬಲ್ಲ ಬೋಧಿಪ ಪರತತ್ವ ವಾದವ ಸುರಕಾರ್ಯ ಸಾಧಿಸಿ ಹರಿಯ ಪ್ರಸಾದಕೆ ಪಾತ್ರನಾದ 2 ಪ್ರಲ್ಹಾದ ಧ್ರುವ ದ್ರೌಪದಿ ಮುಖ್ಯ ವೈಷ್ಣವ ರೆಲ್ಲರೀತನ ದಯದಿ ಎಲ್ಲ ಠಾವಲಿ ಲಕ್ಷ್ಮೀವಲ್ಲಭನಿಹನೆಂಬ ಸೊಲ್ಲ ತಿಳಿದು ಪರಮೋಲ್ಲಾಸ ಪಡೆದರು 3 ದೇವಾಸುರರ ಬಳಿಗೆ ಪೋಗುವ ತನ್ನ ಭಾವಾ ತೋರನು ಕಡೆಗೆ ಆವಾವ ಜನಕನುವೀವ ಮಾತುಗಳಾಡಿ ಪಾವನಾತ್ಮಕ ಹರಿ ಸೇವಾಫಲವ ಕೊಂಬ 4 ಬಂದನು ಕಲಿಯುಗದಿ ದಾಸರೊಳು ಪುರಂದರ ನಾಮದಲೀ ಮಂದಮತಿಯ ಕಳೆವಂದದಿ ಪ್ರಾಕೃತ ದಿಂದ ವೆಂಕಟಪತಿಯಂದವ ತಿಳಿಸಿದ 5
--------------
ತುಪಾಕಿ ವೆಂಕಟರಮಣಾಚಾರ್ಯ